ಭಾಷೆಯೊಂದು ಇಲ್ಲವೇ ಇಲ್ಲ ಎನ್ನುವಷ್ಟು ಜನಬಳಕೆಯಿಂದ ದೂರವಾದಾಗ ಅದು ಮತ್ತೆ ಜನರ ನಡುವೆ ಉಪಸ್ಥಾಪಿಸಲ್ಪಡಬಹುದು ಎಂಬ ಭರವಸೆಗೆ ಎರಡು ಭಾಷಾ ಆಂದೋಲನಗಳು ನಮ್ಮ ಮುಂದೆ ಜೀವಂತಸಾಕ್ಷಿಗಳಾಗಿ ನಿಂತಿವೆ. ಅಂದಮೇಲೆ ಕನ್ನಡದ ಬಗೆಗೆ ಆತಂಕಪಡಬೇಕಾದ ಅನಿವಾರ್ಯತೆ ಇಲ್ಲ. ಸವಾಲು ಇದ್ದೇ ಇದೆ. ಅದನ್ನು ಭರವಸೆಯ ನೆಲೆಯಲ್ಲಿ ಹೇಗೆ ನಿರ್ವಹಿಸಬೇಕೆಂಬುದನ್ನು ಯೋಚಿಸಬೇಕಷ್ಟೆ.
ಕನ್ನಡದ ಸ್ಥಿತಿ ಅತೀವ ನಿರಾಶಾದಾಯಕ ಎಂಬ ಮಾತು ಎಲ್ಲರ ಅಭಿಪ್ರಾಯವಾಗಿ ಅಭಿವ್ಯಕ್ತಿಯನ್ನು ಪಡೆದುಕೊಳ್ಳುತ್ತಿರುವ ಸನ್ನಿವೇಶದಲ್ಲಿ ಆ ಕುರಿತು ಯೋಚಿಸುವುದು ಸಂಗತವೆನಿಸುತ್ತದೆ.
ಭಾಷೆಯು ಒಂದು ಕಾಲದ ಅನಿವಾರ್ಯತೆಯಾಗಿ ಹುಟ್ಟುಪಡೆಯುತ್ತದೋ ಸಾಂದರ್ಭಿಕ ಪ್ರಕ್ರಿಯೆಯಲ್ಲಿ ರೂಪಗೊಳ್ಳುತ್ತದೋ ಇತ್ಯಾದಿ ವಿವರಗಳ ಚರ್ಚೆಗೆ ಕೊನೆಮೊದಲಿರಲಾರದು. ಆದರೆ ಭಾಷೆಗೆ ಸಂವಹನದ ಸಾಧ್ಯತೆಯ ಜೊತೆಜೊತೆಗೆ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಕಲೆ, ಜ್ಞಾನ, ವಿಜ್ಞಾನ ಇತ್ಯಾದಿ ಹತ್ತುಹಲವು ಆಯಾಮಗಳ ಸಂಪನ್ನಸಾಧ್ಯತೆಯೂ ಇರುತ್ತದೆ. ಆಯಾ ಭಾಷೆಯ ಮಂದಿ ಅದನ್ನು ಈ ನಿಟ್ಟಿನಲ್ಲಿ ಎಷ್ಟೆಷ್ಟು ದುಡಿಸಿಕೊಂಡರು ಎನ್ನುವುದರ ಮೇಲೆ ಭಾಷೆಯ ಸಾಧ್ಯತೆ ಎಷ್ಟು ಶಕ್ತಿಯುತವಾಗಿ ಬೆಳೆದಿದೆ ಎಂಬುದನ್ನು ಕಂಡುಕೊಳ್ಳಬಹುದು.
ಸಾಹಿತ್ಯಕವಾಗಿ ಕನ್ನಡವು ಅತ್ಯಂತ ಸಂಪನ್ನ ಭಾಷೆ. ಭಾರತದ ಸಾಹಿತ್ಯಸಂಪನ್ನ ಭಾಷೆಗಳ ಪೈಕಿ ಕನ್ನಡವು ಮೊದಲ ಐದು ಸ್ಥಾನಗಳಲ್ಲಿ ಜಾಗ ಪಡೆದುಕೊಳ್ಳುತ್ತದೆ. ಕಲೆಯ ನಿಟ್ಟಿನಲ್ಲಿಯೂ ಅದು ಗೈದ ಸಾಧನೆ ಹಿರಿದೇ ಇದೆ. ಯಕ್ಷಗಾನದಂಥ ಸಾಹಿತ್ಯಪ್ರಧಾನ ಕಲೆಯು ವಿಶ್ವಮಾನ್ಯತೆಯನ್ನು ಗಳಿಸಿದೆ. ಕಲಾಕ್ಷೇತ್ರದ ಹಲವರ ಬೆರಗುಗಣ್ಣಿಗೂ ಕಾರಣವಾಗಿದೆ. ವಿಜ್ಞಾನ-ತಂತ್ರಜ್ಞಾನದ ಯಾವುದೇ ನೂತನ ಪದಗಳಿಗೆ ಸ್ವತಂತ್ರವಾಗಿ ಇಲ್ಲವೇ ಸಂಸ್ಕೃತದ ಸಹಾಯದಿಂದ ತನ್ನದೇ ಆದ ಪಾರಿಭಾಷಿಕ ಪದಗಳನ್ನು ಹುಟ್ಟುಹಾಕುವಷ್ಟು ಅದು ಸಾಮರ್ಥ್ಯಶಾಲಿಯಾಗಿದೆ. ದ್ವೈತ-ಅದ್ವೈತ-ವಿಶಿಷ್ಟಾದ್ವೈತ ಎಂಬ ತತ್ತ್ವಜ್ಞಾನದ ಮೂರು ಮುಖ್ಯ ಕವಲುಗಳ ಸ್ಥಾಪನಾಚಾರ್ಯರು ಕನ್ನಡದ ನೆಲದಲ್ಲೇ ಓಡಾಡಿದವರಾಗಿ ಜ್ಞಾನಪರಂಪರೆಯ ನಂಟು ಕೂಡ ಕನ್ನಡಕ್ಕೆ ಅತಿಸಹಜವಾಗಿ ದಕ್ಕಿದೆ.
ಇಂಥ ಕನ್ನಡದ ಕುರಿತು ಇಂದು ಆತಂಕದ ಸನ್ನಿವೇಶ ನಿರ್ಮಾಣವಾಗಿರುವುದು ಕಾಲದ ವ್ಯಂಗ್ಯವಲ್ಲದೆ ಮತ್ತೇನು? ಉಳಿದವರಲ್ಲಿ ಅಲ್ಲ, ಕನ್ನಡಿಗರಲ್ಲಿಯೇ ಕನ್ನಡದ ಕುರಿತು ಜಾಗೃತಿಯನ್ನೂ ಅಭಿರುಚಿಯನ್ನೂ ಹುಟ್ಟಿಸಬೇಕಾದ ತುರ್ತಿರುವುದು ಕಾಲದ ಚೋದ್ಯವಲ್ಲದೆ ಬೇರೇನು!
ಆಂಗ್ಲೋದಯ
ಕನ್ನಡದ ಬಗ್ಗೆ ಕನ್ನಡಿಗರಲ್ಲಿಯೇ ಮನೆಮಾಡಿರುವ ದುರ್ಲಕ್ಷ್ಯವನ್ನು ಕಂಡಾಗ ಆಂಗ್ಲಭಾಷೆಯು ಅಭಿವ್ಯಕ್ತಿಯನ್ನು ಪಡೆದ ಸಂದರ್ಭವೊಂದು ನೆನಪಾಗುತ್ತದೆ.
ಹದಿನಾಲ್ಕನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಭಾಷೆಗೆ ಸಂಬಂಧಿಸಿದಂತೆ ನಡೆದ ಬೆಳವಣಿಗೆಗಳು ಮಹತ್ತ್ವದವು. ಇಂಗ್ಲೆಂಡಿನಲ್ಲಿ ನಾರ್ಮನ್ನರು ಜಯಿಸಿ ಆಡಳಿತಸೂತ್ರವನ್ನು ತಮ್ಮ ಕೈಗೆತ್ತಿಕೊಂಡ ಬಳಿಕ ಅಲ್ಲಿಯ ಎಲೀಟ್ ವರ್ಗದ ಮಂದಿ ಫ್ರೆಂಚ್ಭಾಷೆಯನ್ನೇ ಬಳಸುತ್ತಿದ್ದರು, ಅದೊಂದು ಗೌರವದ ಸಂಗತಿಯೆಂಬಂತೆ. ಕೆಳವರ್ಗದ ಮಂದಿ ಮಾತ್ರ ಆಂಗ್ಲೋಸಾಕ್ಸನ್ ಭಾಷೆಯ ವಿವಿಧ ಉಪಭಾಷೆಗಳನ್ನು ಬಳಸುತ್ತಿದ್ದರು. ಈಗಿನ ಇಂಗ್ಲಿಷ್ ಆಗಿನ್ನೂ ರೂಪಗೊಂಡಿರಲಿಲ್ಲ. ಇಂಗ್ಲೆಂಡಿನ ಮೊದಲನೆಯ ಮತ್ತು ಮೂರನೆಯ ಎಡ್ವರ್ಡ್ನಂಥ ಪ್ರಸಿದ್ಧ ರಾಜರೂ ಬಳಸುತ್ತಿದ್ದುದು ಫ್ರೆಂಚ್ಭಾಷೆಯನ್ನೇ. ಹೆಚ್ಚೇಕೆ, ಸಂಸತ್ತಿನ ಕಲಾಪಗಳೂ ದಾಖಲಿಸಲ್ಪಡುತ್ತಿದ್ದುದು ಫ್ರೆಂಚ್ಭಾಷೆಯಲ್ಲೇ ಆಗಿತ್ತು. ೧೩೪೬ರಲ್ಲಿ ಇಂಗ್ಲಿಷರಿಗೂ ಫ್ರೆಂಚರಿಗೂ ಕ್ರೆಸಿ (Crecy) ಎಂಬ ಯುದ್ಧ ನಡೆಯಿತು. ಅವರಿಬ್ಬರ ನಡುವಿನ ನೂರು ವರ್ಷಗಳ ಯುದ್ಧದ ಒಂದು ಪುಟ್ಟ ಭಾಗ ಈ ಕ್ರೆಸಿ ಯುದ್ಧ. ಆಂಗ್ಲರು ಗೆದ್ದರು.
ಯುದ್ಧಕಾಲದಲ್ಲಿ ಪಾಲ್ಗೊಂಡ ಶ್ರೀಮಂತರದು ಫ್ರೆಂಚ್ಭಾಷೆ, ಬಡವರದು ಸ್ಥಾನೀಯ ಆಂಗ್ಲೋಸಾಕ್ಸನ್ ಸಂಬಂಧಿತ ಉಪಭಾಷೆ. ಯುದ್ಧದಲ್ಲಿ ಒಂದೇ ದೇಶವನ್ನು ಪ್ರತಿನಿಧಿಸುತ್ತ ಭಿನ್ನ ಭಾಷೆಗಳಲ್ಲಿ ವ್ಯವಹರಿಸುತ್ತಿದ್ದುದು ತೀರಾ ಅಸಹಜವಷ್ಟೆ ಅಲ್ಲ, ತೀವ್ರ ತೊಡಕಾಗಿ ಕಂಡಿತು. ಮತ್ತು ಇಂಥ ಸಂದರ್ಭಗಳಲ್ಲಿಯೇ ‘ಸ್ವ’ತ್ವದ ಜಾಗೃತಿ ಸಾಧ್ಯವಾಗುವುದಿರಬೇಕು! ಶ್ರೀಮಂತ ಆಂಗ್ಲರಿಗೂ ಅನಿಸಿತು; ‘ಅರೆ! ನಾವು ಶತ್ರುಗಳ ಭಾಷೆಯನ್ನು ನಮ್ಮದನ್ನಾಗಿಸಿ ಹೆಮ್ಮೆಯಿಂದ ವ್ಯವಹರಿಸುತ್ತಿದ್ದೇವಲ್ಲ!’ – ಎಂದು. ಇಂಗ್ಲೆಂಡಿನ ಶ್ರೀಮಂತರೂ ಬಡವರೂ ಎಲ್ಲರೂ ಉಪಯೋಗಿಸುವ ಒಂದು ಭಾಷೆಯ ಅನಿವಾರ್ಯತೆ ಇದೆಯೆಂದು ಅವರಿಗೆ ಮನದಟ್ಟಾಯಿತು. ತಾವೇ ಬಳಸುವ ಭಾಷೆಯಾದರೂ ಅದು ಫ್ರೆಂಚ್ಭಾಷೆ ಆಗಕೂಡದೆಂಬುದು ಆಂಗ್ಲರಲ್ಲಿಯ ಶ್ರೀಮಂತರಿಗೆ ಮನದಟ್ಟಾಯಿತೆಂಬುದು ಇನ್ನೊಂದು ಮುಖ್ಯ ಅಂಶ. ಹೇಗೂ ಸ್ವಕೀಯವಾದ ಆಂಗ್ಲೋಸಾಕ್ಸನ್ ಭಾಷೆ ಇತ್ತು. ಅದರಿಂದಲೇ ಒಂದು ಹೊಸ ಭಾಷೆಯ ಉದಯವಾಯಿತು. ಅದು ಆಂಗ್ಲೋಸಾಕ್ಸನ್ ಮತ್ತು ಅಷ್ಟಿಷ್ಟು ಫ್ರೆಂಚ್ಭಾಷೆಯ ಪದಗಳನ್ನು ಉಳ್ಳ ಹೊಸ ಭಾಷೆಯಾಯಿತು. ಆಂಗ್ಲಭಾಷೆಯ ಉದಯದ ಹಿಂದೆ ಹೀಗೆ ‘ಸ್ವ’ತ್ವೋದ್ದೀಪನದ ಒಂದು ಪ್ರೇರಕದ್ರವ್ಯವಿದೆ.
ಕನ್ನಡದ ಕುರಿತ ನಿರ್ಲಕ್ಷ್ಯಕ್ಕೆ ಮುಖ್ಯ ಕಾರಣವೇ ಇಲ್ಲಿಗೆ ಪರಕೀಯವಾಗಿರುವ ಮತ್ತು ಗುಲಾಮತನವನ್ನು ಹೇರಿದವರ ಭಾಷೆಯೂ ಆಗಿರುವ ಆಂಗ್ಲಭಾಷೆಯ ಕುರಿತು ಇರುವ ಸಲ್ಲದ ಅಭಿಮಾನ. ಈ ಸಲ್ಲದ ಅಭಿಮಾನದಿಂದ ಹೊರತಾಗುವುದು ಎಂತೆಂದು ಅದೇ ಆಂಗ್ಲಮೂಲದಿಂದ ಅರಿತುಕೊಳ್ಳುವುದು ಒಳಿತು.
ಮತ್ತೆ ಎದ್ದ ಹೀಬ್ರೂ
ಹೀಬ್ರೂ ಭಾಷೆ ಒಂದು ಕಾಲದಲ್ಲಿ ಅಕ್ಷರಶಃ ಸತ್ತೇಹೋಗಿತ್ತು. ಅಂದರೆ ಅದನ್ನು ಮಾತನಾಡುವವರೂ ಇರಲಿಲ್ಲ, ಓದುವವರೂ ಇರಲಿಲ್ಲ. ಆ ಭಾಷೆಯಲ್ಲಿರುವ ಸಾಹಿತ್ಯದ ಕುರಿತು ಅಧ್ಯಯನವಾಗಲಿ ಭಾಷೆಯ ಕುರಿತು ಅಧ್ಯಯನವಾಗಲಿ ಕಲ್ಪಿಸಿಕೊಳ್ಳುವುದೂ ಶಕ್ಯವಿಲ್ಲದ ಸ್ಥಿತಿಯಿತ್ತು. ಈ ದುಃಸ್ಥಿತಿ ಅದಕ್ಕೊದಗಿಬಂದಿದ್ದು ಆ ಭಾಷೆಯ ಕುರಿತಾದ ಅಗೌರವದಿಂದಾಗಲಿ ದುರ್ಲಕ್ಷ್ಯದಿಂದಾಗಲಿ ಅಲ್ಲ; ದೇವರ ಭಾಷೆ ಎಂಬ ಶ್ರದ್ಧೆಯಿಂದ! ಹೌದು. ಹೀಬ್ರೂ ಭಾಷೆ ತಮ್ಮ ಪವಿತ್ರಗ್ರಂಥದ ಭಾಷೆ, ಮತೀಯ ಆಚರಣೆಗಳಿಗೆ ಸಂಬಂಧಪಟ್ಟಂತೆ ಮಾತ್ರ ಬಳಸಬೇಕಾದ ಭಾಷೆ, ಅದರ ಹೊರತಾಗಿ ಯಾವುದೇ ಅನ್ಯ ಉದ್ದೇಶಕ್ಕೆ ಅದನ್ನು ಬಳಸುವುದೇ ಪಾಪ ಎಂಬ ನಂಬಿಕೆ ಯಹೂದಿಗಳಲ್ಲಿ ಬಲವಾಗಿ ಕೆಲಸಮಾಡುತ್ತಿತ್ತು. ಕೇವಲ ಮತೀಯ ಆಚರಣೆಗಳಿಗೆ ಸೀಮಿತಗೊಂಡಿದ್ದ ಈ ಭಾಷೆಯಲ್ಲಿ ಮಾತನಾಡಬಹುದು, ಸಾಹಿತ್ಯ ರಚಿಸಬಹುದು, ಓದಬಹುದು ಎಂಬಿತ್ಯಾದಿ ಕಲ್ಪನೆಗಳೇ ಅನ್ಯಾಯದಿಂದ ಕೂಡಿದ್ದು ಎಂಬ ಭಾವ ಒಂದು ಜನಾಂಗವನ್ನಿಡೀ ಆವರಿಸಿದ್ದ ಕಾಲಘಟ್ಟವಿತ್ತು. ಹೇಳಿಕೇಳಿ ಅದು ಯಹೂದಿ ಜನಾಂಗ. ಆ ಜನಾಂಗಕ್ಕೆ ಸಂಬಂಧಪಟ್ಟಂತೆ ಒಂದು ದೇಶ ಇತ್ತಾದರೂ ಅದು ಪರಕೀಯರ ದಾಳಿಗೆ ತುತ್ತಾಗಿ ಅಲ್ಲಿಯ ಸ್ವಕೀಯ ಜನಾಂಗವೇ ಪೂರ್ಣಪ್ರಮಾಣದಲ್ಲಿ ದೇಶಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೇರೆಬೇರೆ ದೇಶಗಳಲ್ಲಿ ಬದುಕನ್ನು ಕಂಡುಕೊಳ್ಳಬೇಕಾಯಿತು. ಅಪಮಾನ, ನೋವು ಎಲ್ಲವನ್ನೂ ಸಹಿಸಿಕೊಂಡು ಬದುಕನ್ನು ಸಾಗಿಸುವುದಾಯಿತು.
ಅಂಥ ಸಂದರ್ಭದಲ್ಲಿ ತಮ್ಮದೇ ಪವಿತ್ರ ಭಾಷೆಯಲ್ಲಿ ವ್ಯವಹರಿಸುವುದು, ಸಾಹಿತ್ಯ, ಕಲೆ ಇತ್ಯಾದಿ ಸರ್ಜಿಸುವುದು ಸವಾಲಾಗಿತ್ತು. ಕ್ರಮೇಣ ತಮ್ಮ ಮತೀಯ ನಂಬಿಕೆಗಳ ಕುರಿತ ಮೂಲಸ್ಫೂರ್ತಿ ಹೊರಟುಹೋಗಿ ಪವಿತ್ರಭಾಷೆಯನ್ನು ಮತೀಯ ಆಚರಣೆಗಳಿಗೆ ಬಿಟ್ಟು ಉಳಿದ ಸಂದರ್ಭದಲ್ಲಿ ಬಳಸುವುದೇ ಅಪರಾಧವೆಂಬ ನಿರ್ಣಯ ಹುಟ್ಟಿಬಿಟ್ಟಿತ್ತು. ಪರಿಣಾಮವಾಗಿ ಹೀಬ್ರೂ ಭಾಷೆ ಸತ್ತಭಾಷೆಯಂತೆ ಆಗಿಬಿಟ್ಟಿತು. ಎಷ್ಟೋ ವರ್ಷಗಳ ಕಾಲ ಈ ಸ್ಥಿತಿ ಮುಂದುವರಿಯಿತು.
ಸುಮಾರು ಎರಡು ಸಾವಿರ ವರ್ಷಗಳ ಕಾಲ ವಿಸ್ಥಾಪಿತಗೊಂಡಿದ್ದ ಯಹೂದಿಗಳಿಗೆ ೧೯೪೮ರಲ್ಲಿ ಅವರದೇ ದೇಶದ ಭೂಭಾಗ ಸಿಕ್ಕಿಬಿಟ್ಟಿತು. ಕಳಕೊಂಡಿದ್ದದ್ದು ಭೂಭಾಗವಷ್ಟೇ ಅಲ್ಲ, ಭಾಷೆಯನ್ನು ಕೂಡಾ. ಆದರೆ ಬಹುತೇಕ ಎಲ್ಲರ ಮನಸ್ಸಿನಲ್ಲಿ ಇದ್ದುದು ಭೂಭಾಗದ ಕುರಿತ ಚಿಂತೆ ಮಾತ್ರ. ಭಾಷೆಯನ್ನು ಕಳೆದುಕೊಂಡಿದ್ದೇವೆಂಬ ಭಾವವೇ ಇರಲಿಲ್ಲ. ಕಳಕೊಂಡ ಭಾವ ಇಲ್ಲದೆ ಪಡಕೊಳ್ಳಲು ಸಾಧ್ಯವಿಲ್ಲ. ಅಂಥ ಭಾವವನ್ನು ಜೀವಂತವಿರಿಸಿಕೊಂಡವನೊಬ್ಬ ಸ್ವಾತಂತ್ರ್ಯಪೂರ್ವದಲ್ಲೇ ಆಗಿಹೋಗಿದ್ದ. ಆತ ಎಲಿಸರ್ ಬೆನ್ ಯಹೂದ. ಹೀಬ್ರೂ ಭಾಷೆಯ ಒಂದೊಂದು ಪದದ ಹಿಂದೆ ಹೋದ. ಕಲಿತ. ಅದರ ಕಲಿಕೆಯ ಮಹತ್ತ್ವವನ್ನು ತನ್ನ ಜನಾಂಗದ ಇತರರಿಗೂ ಮನವರಿಕೆ ಮಾಡಿಸಿದ. ಭಾಷೆಯೆಂದರೆ ಸಂವಹನದ ಮಾಧ್ಯಮವಷ್ಟೆ ಅಲ್ಲ, ಸಂಸ್ಕೃತಿಯ ವಾಹಕವೂ ಹೌದು. ಜೀರ್ಣಗೊಂಡಿದ್ದ ಯಹೂದಿ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಹೀಬ್ರೂ ಭಾಷೆಯನ್ನು ಮತ್ತೆ ಸಾಮಾನ್ಯರ ಬಳಕೆಯಲ್ಲಿ ತರುವಂತೆ ಮಾಡುವುದು ಒಂದು ಉತ್ತಮ ದಾರಿ ಎಂಬುದನ್ನಾತ ಕಂಡುಕೊಂಡ. ಆ ನಿಟ್ಟಿನಲ್ಲಿ ಮುಂದುವರಿದು ಯಶವನ್ನು ಪಡೆದ.
ಭಾಷಾಕ್ಷೇತ್ರದಲ್ಲಿ ಪುನರುಜ್ಜೀವನದ ಮೂಲಕ ಕಾರ್ಯಮಾಡುವ ಯಾರಿಗೇ ಆದರೂ ಆತ ಪಡೆದ ಯಶಸ್ಸು ಒಂದು ದಾರಿದೀಪವೇ ಸೈ.
ಸಂಸ್ಕೃತಾಂದೋಲನ
ಬೆನ್ ಯಹೂದನ ದಾರಿ ಸುಲಭವಿರಲಿಲ್ಲ. ಆತ ಎದುರಿಸಿದ ಕಷ್ಟಕೋಟಲೆಗಳು ಸಾಮಾನ್ಯದ್ದಲ್ಲ. ಬಳಕೆಯಲ್ಲಿಲ್ಲದ ಭಾಷೆಯನ್ನು ಕಲಿತು ಸುಲಭದಲ್ಲಿ ಕಲಿಸುವ ವಿಧಾನವನ್ನು ಕಂಡುಹಿಡಿಯಬೇಕಿತ್ತು. ಕಲಿತುಕೊಳ್ಳುವ ತನ್ನವರು ಒಂದೇ ಕಡೆ ಇರಲಿಲ್ಲ. ಒಂದೇ ಕಡೆ ಬಿಡಿ, ಒಂದೇ ದೇಶದಲ್ಲಿಯೂ ಇರಲಿಲ್ಲ. ಹಲವಾರು ದೇಶಗಳಲ್ಲಿ ಹಂಚಿಹೋಗಿದ್ದರು. ಆದರೆ ‘ಹರಿದಿ’ರಲಿಲ್ಲ, ಅಂದರೆ ಒಡೆದುಹೋಗಿರಲಿಲ್ಲ. ಒಂದೇ ಆಗಿ ಅಂದರೆ ವಿವಿಧೆಡೆಗಳಲ್ಲಿ ಏಕಭಾವದಲ್ಲಿ ಬದುಕನ್ನು ಕಟ್ಟಿಕೊಂಡಿದ್ದರು. ಇದೇ ಅವನಿಗಿದ್ದ ಒಂದು ಭರವಸೆ. ಆದರೂ ಹೀಬ್ರೂ ಭಾಷೆಯ ಬಗ್ಗೆ ಆಗ ಯಹೂದಿಗಳಿಗಿದ್ದ ‘ಪವಿತ್ರಭಾವನೆ’ಯೇ ಆತನಿಗಿದ್ದ ದೊಡ್ಡ ತೊಡಕಾಗಿತ್ತು. ಆತನ ಕಾರ್ಯವನ್ನು ಈ ನೆಲೆಯಲ್ಲಿ ವಿರೋಧಿಸಿದವರು ಸ್ವತಃ ಯಹೂದಿಗಳೇ. ಇಷ್ಟೆಲ್ಲ ಸಂಕಷ್ಟಗಳ ನಡುವೆ ಆತ ಗೆಲವನ್ನು ಸಾಧಿಸಿದ.
ಆತನ ಗೆಲವಿನ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲವಾಗಿದ್ದರೂ ಅದೇ ಬಗೆಯಲ್ಲಿ ಭಾಷಾಸಾಧ್ಯತೆಯನ್ನು ಆಗುಮಾಡಿದ ಜಗತ್ತಿನ ಮತ್ತೊಂದು ಭಾಷಾ ಆಂದೋಲನವೆಂದರೆ ‘ಸಂಸ್ಕೃತ ಭಾರತಿ’ಯದ್ದು. ಯಹೂದಿಗಳಿಗೆ ಹೀಬ್ರೂ ಇದ್ದಂತೆ ಸಮಸ್ತ ಭಾರತೀಯರಿಗೆ ಸಂಸ್ಕೃತ. ಹೀಬ್ರೂವಿಗಿರುವ ಮತೀಯ ಆಯಾಮ ಸಂಸ್ಕೃತಕ್ಕಿದ್ದರೂ ಅದೊಂದೇ ಅದರ ಗುರುತಲ್ಲ. ಅಥವಾ ಅದು ಅದರ ಗುರುತೇ ಅಲ್ಲ. ದೇವಭಾಷೆಯೆಂಬ ನಾಮಧೇಯವೇನೋ ಅದಕ್ಕಿದೆ. ಅದು ಬಂದಿದ್ದು ಮತೀಯಗ್ರಂಥಗಳ ಹಿನ್ನೆಲೆಯಿಂದಲ್ಲ, ದೇವರಿಂದಲೇ ಭಾಷೆಯು ಹುಟ್ಟುಪಡೆಯಿತು ಎಂಬ ನೆಲೆಯಲ್ಲಿ. ಹಾಗೆ ನೋಡಿದರೆ ಹಿಂದೂಗಳಿಗೆ ಎಲ್ಲ ಭಾಷೆಗಳೂ ದೇವರಭಾಷೆಗಳೇ. ಇನ್ನೂ ಮುಂಬರಿದು ಸ್ಪಷ್ಟಪಡಿಸುವುದಾದರೆ; ಮನುಷ್ಯರ ಭಾಷೆಯಷ್ಟೆ ಅಲ್ಲ, ಪಶುಪಕ್ಷಿಗಳ ಗಿಡಮರಗಳ ಸಕಲ ಚರಾಚರವಸ್ತುಗಳ ಭಾಷೆಗಳೂ ದೇವರನ್ನು ಅರ್ಥೈಸಬಹುದಾದ ಮತ್ತು ದೇವರಿಗೆ ಅರ್ಥವಾಗುವ ಭಾಷೆಗಳೇ ಆಗಿವೆ. ದೇವರು ಮತ್ತು ಭಾಷೆಯ ನಡುವೆ ಇರುವ ಸಂಬಂಧವನ್ನು ಇದಕ್ಕಿಂತ ಹೆಚ್ಚಿನ ಬಗೆಯಲ್ಲಿ ಹಿಗ್ಗಿಸಲು ಸಾಧ್ಯವಿಲ್ಲ. ಹಾಗೆ ಒಂದೊಮ್ಮೆ ಹಿಗ್ಗಿಸಲು ಸಾಧ್ಯವಾದರೂ ಅದೂ ಹಿಂದೂಗಳಿಗೆ ಸಮ್ಮತವೇ ಆಗಿದೆ. ಸೆಮೆಟಿಕ್ ಬಗೆಯಲ್ಲಿ ಯೋಚಿಸುವ ಯಾರಿಗೂ ಇದು ಸಮ್ಮತವಲ್ಲ ಎನ್ನುವುದೂ ಪರಮವೇದ್ಯವೇ ಆಗಿದೆ.
ಹೀಗಿದ್ದೂ ಕೂಡಾ ಸಂಸ್ಕೃತಕ್ಕೆ ಪರಕೀಯರು ಕರುಣಿಸಿದ ಮೃತಭಾಷೆಯ ಪಟ್ಟವನ್ನು ಹಿಂದೂಗಳೇ ಒಪ್ಪಿಕೊಂಡಿದ್ದರು! ಅದರ ಪುನರುಜ್ಜೀವನ ಅಸಾಧ್ಯ ಎಂದು ನಿರ್ಣಯ ಕೊಟ್ಟುಕೊಂಡಿದ್ದರು. ಅಂಥ ಪುನರುಜ್ಜೀವನ ಬೇಕಾಗಿಲ್ಲ ಎಂದು ಷರಾ ಬರೆದಿದ್ದರು ಕೂಡಾ. ಹಾಗಿದ್ದೂ ಮೌನವಾಗಿ ತಲೆಯೆತ್ತಿದ ‘ಸಂಸ್ಕöÈತಭಾರತೀ’ ಸಂಸ್ಕೃತವನ್ನು ಜನಸಾಮಾನ್ಯರಿಗೂ ಮಾತನಾಡುವಂತೆ ಕಲಿಸುವಲ್ಲಿ ಅಸಾಧಾರಣ ಯಶಸ್ಸನ್ನು ಪಡೆಯಿತು. ಈ ಪಯಣದ ನಡುವೆ ಬೆನ್ ಯಹೂದನ ಪರಿಶ್ರಮವೂ ‘ಮತ್ತೆ ಹೊತ್ತಿತು ಹೀಬ್ರೂ ಹಣತೆ’ ಎಂಬ ಶೀರ್ಷಿಕೆಯ ಪುಸ್ತಕದ ಮೂಲಕ ಸಂಸ್ಕöÈತಭಾರತಿಯ ಪೂರ್ಣಾವಧಿ ಕಾರ್ಯಕರ್ತರಾದ ವಿಶ್ವಾಸರಿಂದ ಪರಿಚಯಿಸಲ್ಪಟ್ಟಿತು.
ಭಾಷೆಯೊಂದು ಇಲ್ಲವೇ ಇಲ್ಲ ಎನ್ನುವಷ್ಟು ಜನಬಳಕೆಯಿಂದ ದೂರವಾದಾಗ ಅದು ಮತ್ತೆ ಜನರ ನಡುವೆ ಉಪಸ್ಥಾಪಿಸಲ್ಪಡಬಹುದು ಎಂಬ ಭರವಸೆಗೆ ಈ ಎರಡು ಭಾಷಾ ಆಂದೋಲನಗಳು ನಮ್ಮ ಮುಂದೆ ಜೀವಂತಸಾಕ್ಷಿಗಳಾಗಿ ನಿಂತಿವೆ. ಅಂದಮೇಲೆ ಕನ್ನಡದ ಬಗೆಗೆ ಆತಂಕಪಡಬೇಕಾದ ಅನಿವಾರ್ಯತೆ ಇಲ್ಲ. ಸವಾಲು ಇದ್ದೇ ಇದೆ. ಅದನ್ನು ಭರವಸೆಯ ನೆಲೆಯಲ್ಲಿ ಹೇಗೆ ನಿರ್ವಹಿಸಬೇಕೆಂಬುದನ್ನು ಯೋಚಿಸಬೇಕಷ್ಟೆ.
ಕಾಲಾನುಕೂಲಿ
ಈಗ, ಕನ್ನಡದ ಸ್ಥಿತಿ ಭೂತಕಾಲದಷ್ಟು ಆಶಾದಾಯಕವಾಗಿಲ್ಲ ಎನ್ನುವುದೂ ಸರಿಯೇ. ಪರಕೀಯ ಭಾಷೆಯ ಸವಾಲು ಭೀಕರವೇ ಇದೆ ಎನ್ನುವುದೂ ಸರಿಯೇ. ಅದೇ ವೇಳೆ ಕಾಲದ ಓಟಕ್ಕೆ ತಕ್ಕಂತೆ ಅದೂ ಒಂದಷ್ಟು ಬೆಳವಣಿಗೆಯನ್ನು ಕಾಣುತ್ತಲೇ ಇದೆ ಎನ್ನುವುದೂ ಅಷ್ಟೇ ಸರಿಯಾದುದು.
ನೋಡಿ, ವಿಜ್ಞಾನ-ತಂತ್ರಜ್ಞಾನ ಕಾಣುತ್ತಿರುವ ನಿಬ್ಬೆರಗಿನ ವಿಕಾಸದಲ್ಲಿ ಕಾಲಕಾಲಕ್ಕೆ ಹೊಸಹೊಸ ಪಾರಿಭಾಷಿಕ ಪದಗಳು ತಡೆಯಿಲ್ಲದಂತೆ ವಿಜ್ಞಾನಪದಕೋಶವನ್ನು ಸೇರುತ್ತಲೇ ಇವೆ. ಅಂತಾರಾಷ್ಟ್ರೀಯವಾಗಿ ಘಟಿಸುತ್ತಿರುವ ಈ ವಿದ್ಯಮಾನಕ್ಕೆ ಸ್ಥಾನೀಯ ಭಾಷೆಗಳೂ ಸ್ಪಂದಿಸಲೇಬೇಕಷ್ಟೆ. ಹೆಚ್ಚಿನ ಭಾಷೆಗಳು ಮೂಲದಲ್ಲಿ ಟಂಕಿಸಲ್ಪಟ್ಟ ಪದಗಳನ್ನು ತಮ್ಮದಾಗಿಸಿಕೊಳ್ಳುತ್ತಿವೆ, ಇಲ್ಲವೆ ಆ ಪದಗಳನ್ನು ತಮ್ಮ ಭಾಷೆಯ ರೀತಿರಿವಾಜಿಗೆ ಅಷ್ಟಿಷ್ಟು ಬದಲಾವಣೆ ಮಾಡಿಕೊಂಡು ಹೊಂದಿಸಿಕೊಳ್ಳುತ್ತಿವೆ. ಇದು ತಪ್ಪೇನೂ ಅಲ್ಲ ಬಿಡಿ. ಆಧುನಿಕವಾದ ಯಾವುದೇ ಹೊಸ ಪದಕ್ಕೆ ತಕ್ಕುದಾದ ತನ್ನದೇ ಭಾಷಾ ಹಿನ್ನೆಲೆಯ ಪದವನ್ನು ಟಂಕಿಸಬಲ್ಲ ಸಾಮರ್ಥ್ಯ ಇರುವುದು ಸಂಸ್ಕೃತಕ್ಕೆ. ಈ ಸಾಮರ್ಥ್ಯವು ಎಲ್ಲರೂ ಮೇಲರಿಮೆಯಿಂದ ಕಾಣುವ ಆಂಗ್ಲಭಾಷೆಗೂ ಇಲ್ಲ ಮಾತ್ರವಲ್ಲ, ತನ್ನದೇ ಮಾಧ್ಯಮದ ಮೂಲಕ ಶೋಧಸಂಗತಿಗಳು ಸಾಗಿದರೂ ನೂತನ ಪಾರಿಭಾಷಿಕ ಪದಗಳಿಗಾಗಿ ಅದು ಮೊರೆಹೊಗುವುದು ಪ್ರಾಚೀನ ಲ್ಯಾಟಿನ್ಭಾಷೆಗೆ. ಸಂಸ್ಕೃತ, ಲ್ಯಾಟಿನ್ ಮತ್ತು ಗ್ರೀಕ್ಭಾಷೆಗಳಿಗೆ ಇಂಥ ಸಾಮರ್ಥ್ಯ ಇದೆಯೆನ್ನುವುದು ವಿಶೇಷ. ಭಾರತದ ಭಾಷೆಗಳು ಸಂಸ್ಕೃತಮೂಲದಿಂದಲೇ ಬಂದವು ಎಂಬ ನೆಲೆಯಲ್ಲಿ ಅವುಗಳಿಗೂ ಇಂಥ ಪಾರಿಭಾಷಿಕ ಪದಗಳನ್ನು ಟಂಕಿಸುವ ಸಾಮರ್ಥ್ಯ ಅಷ್ಟಿಷ್ಟು ಇದೆ. ಈ ಸಾಮರ್ಥ್ಯವನ್ನು ಚೆನ್ನಾಗಿ ದುಡಿಸಿಕೊಂಡ ಭಾಷೆಗಳಲ್ಲಿ ಕನ್ನಡವೂ ಒಂದು.
ಕನ್ನಡದ ಪಾರಿಭಾಷಿಕ ಪದಗಳಲ್ಲಿ ಹೆಚ್ಚಿನವು ಸಂಸ್ಕೃತಮೂಲದಿಂದ ಬಂದಿದ್ದರೆ ಕೆಲವು ಆಂಗ್ಲ, ಪಾರ್ಸಿ ಇತ್ಯಾದಿ ಪರಕೀಯ ಭಾಷೆಗಳಿಂದ ಬಂದಿವೆ. ಜೊತೆಗೆ ತನ್ನದೇ ಭಾಷಾ ನೆಲೆಯಿಂದಲೂ ಅನೇಕ ಪದಗಳನ್ನು ಹೊಸದಾಗಿ ಟಂಕಿಸಿದೆ. ಒಂದೆರಡು ದೃಷ್ಟಾಂತಗಳನ್ನು ಮುಂದಿಡುವುದಾದರೆ; ಆಕಾಶವಾಣಿ, ದೂರವಾಣಿ, ಚಲವಾಣಿ ಇತ್ಯಾದಿ ಪದಗಳು ಸಂಸ್ಕೃತದಿಂದ ಬಂದಿವೆಯಾದರೆ ಕೈಗಾರಿಕೆ, ಕಾಲ್ಚೆಂಡು, ಬೆರಳಚ್ಚು ಇತ್ಯಾದಿ ಪದಗಳು ಅಚ್ಚಗನ್ನಡದವು.
ಭಾಷೆಯೊಂದು ಕಾಲಕ್ಕೆ ತಕ್ಕಂತೆ ಬೆಳವಣಿಗೆಯನ್ನು ಕಾಣಲು ಅದರ ಪಾರಿಭಾಷಿಕ ಪದಸಾಮರ್ಥ್ಯವೂ ಒಂದು ಮುಖ್ಯ ಆಧಾರವಾಗುತ್ತದೆ. ಇಂಥ ಸಾಮರ್ಥ್ಯವಿರುವ ಒಂದು ಭಾಷೆ ಕನ್ನಡ.
ಕನ್ನಡದ ಶಕ್ತಿ
ಪ್ರಪಂಚದ ಪ್ರಾಚೀನ ಭಾಷೆಗಳಲ್ಲಿ ಕನ್ನಡಕ್ಕೂ ಒಂದು ಸ್ಥಾನವಿದೆ. ಅದಕ್ಕಿರುವ ಇತಿಹಾಸ ಸುಮಾರು ಎರಡು ಸಾವಿರ ವರ್ಷಗಳದು. ಬರೆದಂತೆ ನುಡಿಯುವ, ವೈಜ್ಞಾನಿಕವೂ ತಾರ್ಕಿಕವೂ ಆದ ಭಾಷೆ ಅದು. ಜೊತೆಗೆ ತನ್ನದೇ ಆದ ಲಿಪಿ ಮತ್ತು ಅಂಕೆಗಳಿರುವ ಕೆಲವೇ ಭಾಷೆಗಳಲ್ಲಿ ಕನ್ನಡವೂ ಒಂದು.
ವಿನೋಬಾ ಭಾವೆಯವರು ಕನ್ನಡದ ಲಿಪಿಯ ಬಗ್ಗೆ ಮಾರುಹೋಗಿದ್ದರು. “ಕನ್ನಡದ ಲಿಪಿ ಜಗತ್ತಿನ ಲಿಪಿಗಳ ರಾಣಿ” ಎಂದು ಹೇಳಿದ್ದರು. ದುಂಡಗೆ ಇರುವ ಕನ್ನಡದ ಲಿಪಿ ನೋಡಲು ಸುಂದರ ಎನ್ನುವುದು ಕನ್ನಡೇತರರದೂ ಅಭಿಮತ. ಲಿಪಿಯೇ ಭಾಷೆ ಅಲ್ಲವಾದರೂ ಭಾಷೆಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ಲಿಪಿ ಇರುವುದು ಮತ್ತದು ಪರಭಾಷಿಗರಿಗೆ ಸುಂದರವಾಗಿ ಕಾಣುವುದು ಒಂದು ಹೆಚ್ಚುಗಾರಿಕೆಯಾಗಿ ಕೆಲಸಮಾಡುತ್ತದೆ. ಏನಿದ್ದರೂ ಲಿಪಿಯೊಂದು ಸಂಕೇತವಷ್ಟೆ. ಸಂಕೇತವೂ ಅಕ್ಷರವನ್ನು ತರ್ಕಬದ್ಧವಾಗಿ ಪ್ರತಿನಿಧಿಸಿದಾಗ ಭಾಷೆಯ ಉಚ್ಚಾರ, ಪದಗಳನ್ನು ನಿರ್ದಿಷ್ಟವಾಗಿ ಗುರುತಿಸುವ ಕಾರ್ಯ ಇತ್ಯಾದಿಗಳು ನಿಖರತೆಯನ್ನು ಪಡೆದುಕೊಳ್ಳುತ್ತವೆ. ಈ ನೆಲೆಯಲ್ಲಿ ಬರೆದಂತೆ ಓದುವ ನಿಖರತೆಯುಳ್ಳ ಭಾಷೆ ಕನ್ನಡ.
ಕನ್ನಡದ ಪ್ರಾಚೀನತೆಯನ್ನು ಕ್ರಿಸ್ತಪೂರ್ವಕ್ಕೆ ಕೊಂಡೊಯ್ದ ಭಾಷಾ ವಿದ್ವಾಂಸರಿದ್ದಾರೆ. ಐದನೆಯ ಶತಮಾನದ ಹಲ್ಮಿಡಿ ಶಾಸನವಂತೂ ಅಧಿಕೃತವಾಗಿ ಇದ್ದೇ ಇದೆ. ಕಾವೇರಿಯಿಂದ ಗೋದಾವರಿಯವರೆಗೆ ಎಂದು ಅದು ಬಳಕೆಯಲ್ಲಿದ್ದ ಭೂವ್ಯಾಪ್ತಿಯನ್ನು ‘ಕವಿರಾಜಮಾರ್ಗ’ ಹೇಳಿದೆ. ಏನನ್ನೂ ಓದದೆಯೇ ಕಾವ್ಯಪ್ರಯೋಗಗೈಯಬಲ್ಲ ಪ್ರತಿಭಾವಂತ ಕವಿಗಳು ಕನ್ನಡಿಗರಲ್ಲಿ ಇದ್ದರು ಎಂದೂ ಅದೇ ಕೃತಿ ಹೇಳಿರುವುದು ಕನ್ನಡಭಾಷಿಗರ ಸ್ವೋಪಜ್ಞತೆಗೆ ಹಿಡಿದ ಕೈಗನ್ನಡಿಯೇ ಆಗಿದೆ.
ರಗಳೆಯಂಥ ಅಪರೂಪದ ಸಾಹಿತ್ಯಪ್ರಕಾರ, ಷಟ್ಪದಿಯಂಥ ವಾಚನಾನುಕೂಲಿಯಾದ ಛಂದಸ್ಸು, ಕಿಟ್ಟೆಲ್ ಎಂಬ ವಿದೇಶೀಯನೊಬ್ಬನಿಂದ ರಚಿತವಾದ ಶೋಧಿತ ಶಬ್ದಕೋಶ. ಇವುಗಳೆಲ್ಲ ಕನ್ನಡವನ್ನು ಸಾಹಿತ್ಯಕ ಭಾಷೆಯಾಗಿ ವಿಶಿಷ್ಟವಾಗಿಸಿವೆ.
ತಾರ್ಕಿಕತೆ, ವೈಜ್ಞಾನಿಕತೆ, ನಿಖರತೆ, ಪ್ರಾಚೀನತೆ, ವಿಶಿಷ್ಟತೆ – ಕನ್ನಡದ ಈ ಎಲ್ಲ ಗುಣಲಕ್ಷಣಗಳು ಒಟ್ಟಾರೆ ಸಂಪನ್ನವಾಗಿಸಿದ್ದು ಭಾರತೀಯ ಭಾಷಾಕ್ಷೇತ್ರವನ್ನು.
ಭಾರತೀಯ ಭಾಷಾಕ್ಷೇತ್ರವನ್ನು ಸಂಪನ್ನಗೊಳಿಸಿದ ಕನ್ನಡವನ್ನು ಕುರಿತಾಗಿ ಎಲ್ಲ ನಿಟ್ಟಿನಲ್ಲಿ ತೊಡಗಬೇಕಾದುದು ರಾಷ್ಟ್ರೀಯರಾಗಿ ನಮ್ಮೆಲ್ಲರ ಕರ್ತವ್ಯವೇ ಆಗಿದೆ.
ಪರಭಾಷಾ ಪ್ರಭಾವ
ಬೆಳವಣಿಗೆ ಸಾಧಿಸಬಲ್ಲ ಭಾಷೆಗೆ ಭವಿಷ್ಯದ ಆತಂಕ ಕಾಡಕೂಡದು. ಆದರೆ ಕನ್ನಡಕ್ಕೆ ಬೆಳವಣಿಗೆಯ ಸಾಧ್ಯತೆ ಸಂಪನ್ನವಿದ್ದೂ ಆ ಆತಂಕ ಕಾಡುತ್ತಿದೆಯೆಂದರೆ ಅದು ಭಾಷೆಯ ಸಮಸ್ಯೆಯಲ್ಲ, ಭಾಷಿಗರ ಸಮಸ್ಯೆ.
ಹತ್ತಾರು ಭಾಷೆಗಳ ನಡುವೆ ಭಾಷೆಯೊಂದು ಬೆಳಗಿ ನಿಲ್ಲಲೂ ಸಾಧ್ಯವಿದೆ, ಮುರುಟಿಹೋಗಲೂ ಸಾಧ್ಯವಿದೆ. ತನ್ನ ಜೊತೆಗಿನ ಭಾಷೆಗಳ ಪದಗಳನ್ನು, ಪರಿಕಲ್ಪನೆಗಳನ್ನು, ನುಡಿಗಟ್ಟುಗಳನ್ನು ಸಾಹಿತ್ಯಸಂಪತ್ತನ್ನು ಇತ್ಯಾದಿ ಹತ್ತುಹಲವು ಸಂಗತಿಗಳನ್ನು ಕೊಳ್ಳುವಿಕೆಯ ಇಲ್ಲವೇ ಕೊಡುಕೊಳ್ಳುವಿಕೆಯ ಮೂಲಕ ಭಾಷೆಯ ಬೆಳಗುವಿಕೆ ಸಾಧ್ಯ. ಹೀಗೆ ಮಾಡುವಾಗ ತನ್ನತನವನ್ನು ಬಿಟ್ಟುಕೊಡದೆ ತನ್ನ ಸ್ವ-ರೂಪಕ್ಕೆ ತಕ್ಕಂತೆ ಬೇರೆಡೆಯಿಂದ ಸ್ವೀಕರಿಸಿದ್ದನ್ನು ಒಗ್ಗಿಸಿಕೊಳ್ಳಲು ಬರುತ್ತದೆ. ತನ್ನತನದ ಕುರಿತು ಇನಿತೂ ಚಿಂತಿಸದೆ ಇತರ ಭಾಷೆಗಳಿಂದ ಆಮದುಮಾಡಿಕೊಂಡದ್ದನ್ನು ಯಥಾವತ್ತಾಗಿ ಬಟ್ಟಿ ಇಳಿಸಿಕೊಂಡರೆ ಭಾಷೆ ಮುರುಟಿಹೋಗುವುದಕ್ಕೆ ಹೆಚ್ಚು ಕಾಲ ಬೇಕಾಗುವುದಿಲ್ಲ. ಇಂಥ ಆಮದಿನ ಶೈಲಿಯನ್ನು ಆಧುನಿಕತೆಯ ಹೆಮ್ಮೆಯಲ್ಲಿ ಮೈಮರೆತು ಸಂಭ್ರಮಿಸುವ ಭಾಷಿಗಮಂದಿ ತಮ್ಮ ಭಾಷೆಯ ಅವನತಿಗೆ ತಾವೇ ಅಡಿಗಲ್ಲು ಹಾಕಿಟ್ಟು ಹೋಗುತ್ತಾರೆ. ಬರಿಯ ಪದಗಳನ್ನಷ್ಟೆ ಇಲ್ಲವೇ ಸಾಹಿತ್ಯಸಂಪತ್ತನ್ನಷ್ಟೆ ಏಕೆ, ಪರಭಾಷೆಯನ್ನು ಆಪೂರ್ತಿಯಾಗಿ ಆಮದು ಮಾಡಿಕೊಳ್ಳೋಣವಂತೆ ಎಂಬ ಭಾವ ಹುಟ್ಟಿಕೊಳ್ಳಲು ಇಂಥ ಆಮದು ಮಾನಸಿಕತೆ ಪ್ರೇರಕವಾಗುತ್ತದೆ. ಆಗ ಶಿಕ್ಷಣ, ಅಧ್ಯಯನ, ಮಾತು, ವ್ಯವಹಾರ ಇತ್ಯಾದಿ ಎಲ್ಲವುಗಳ ಮಾಧ್ಯಮ ಪರಭಾಷೆಯೇ ಆಗಿಬಿಡುವ ಸನ್ನಿವೇಶ ಒದಗೀತು. ತಮಗೊಂದು ಪ್ರತ್ಯೇಕ ಭಾಷೆ ಇತ್ತೆಂಬ ಸಂಗತಿಯೇ ಮರೆತುಹೋಗುವ ಕಾಲ ಬಂದೀತು. ಆಗ ಅದನ್ನು ನೆನಪಿಸಿಕೊಡುವ ಸಂದರ್ಭ ಬಂದರೆ ಅದೇ ಒಂದು ಭರವಸೆಯಾದೀತು.
ಹೆಚ್ಚು ಮಂದಿ ಮಾತನಾಡುವ, ಉದ್ಯೋಗವಲಯದಲ್ಲಿ ಹೆಚ್ಚು ಬಳಕೆಯಾಗುವ, ವ್ಯವಹಾರಕ್ಕೆ ಅನುಕೂಲವಾಗುವ, ಶೋಧ ಮತ್ತಿತರ ಸಂಗತಿಗಳಿಗೆ ಮಾಧ್ಯಮವಾಗಿರುವ – ಹೀಗೆ ನಾನಾ ಕಾರಣಗಳಿಗಾಗಿ ಭಾಷೆಯೊಂದು ಎಲ್ಲರ ಮೇಲೆ ಪ್ರಭಾವ ಬೀರಬಲ್ಲುದು. ಭಾಷೆಯ ಸತ್ತ್ವ ಮತ್ತು ಸ್ವಾಭಿಮಾನ ಇರುವ ಸಮಾಜ ಇವೆಲ್ಲವನ್ನೂ ತನ್ನದೇ ಭಾಷೆಯಲ್ಲಿ ಪೂರೈಸಿಕೊಳ್ಳಬಲ್ಲುದು. ಸತ್ತ್ವವಿದ್ದರೂ ಸ್ವಾಭಿಮಾನವಿಲ್ಲದೆಹೋದರೆ ಆಗ ಪರಭಾಷಾ ತೆಕ್ಕೆಗೆ ತನ್ನನ್ನು ಒಡ್ಡಿಕೊಳ್ಳುವುದಾಗುತ್ತದೆ. ತನ್ನನ್ನು ಗುಲಾಮಿಯನ್ನಾಗಿ ಮಾಡಿದ ಜನಾಂಗದ ಬಗ್ಗೆ ಮೇಲರಿಮೆ ಮತ್ತು ತನ್ನ ಬಗ್ಗೆ ಕೀಳರಿಮೆ ಇದ್ದಾಗಂತೂ ಆ ಜನಾಂಗದ ಭಾಷೆಯನ್ನೇ ಸರ್ವಸ್ವವೆಂದು ಭಾವಿಸಿ ತನ್ನ ಭಾಷೆಯನ್ನು ಮನೆಯಲ್ಲಾಗಲಿ ವ್ಯವಹಾರದಲ್ಲಾಗಲಿ ಯಾವುದೇ ರೀತಿಯಲ್ಲಾಗಲಿ ನಿಷೇಧ ಹೇರಿದ ಬಗೆಯಲ್ಲಿ ಉಪಯೋಗಿಸದೆ ಹತ್ಯೆ ಮಾಡುವುದಾಗುತ್ತದೆ.
ಕನ್ನಡವೂ ಸೇರಿದಂತೆ ಭಾರತದ ಎಲ್ಲ ಭಾಷೆಗಳಿಗೂ ತಮ್ಮದೇ ಸ್ವಾಭಿಮಾನವಿಹೀನ ಭಾಷಿಗರಿಂದ ಒದಗುತ್ತಿರುವ ದುರವಸ್ಥೆ ಈ ಪರಿಯದು.
ಜಪಾನ್, ರಷ್ಯಾ, ಚೀಣಾ ಮುಂತಾದ ಪ್ರಗತದೇಶಗಳು ತಮ್ಮದೇ ಭಾಷೆಯಲ್ಲಿ ಶಿಕ್ಷಣ ಮಾಧ್ಯಮವನ್ನೂ ವಿಜ್ಞಾನ-ತಂತ್ರಜ್ಞಾನಗಳ ಶೋಧವನ್ನೂ ಅತ್ಯಂತ ಯಶಃಪ್ರದವಾಗಿ ಮಾಡುತ್ತಿರುವಾಗ, ತಮ್ಮದೇ ಭಾಷೆಗೆ ಅನ್ನದ ಭಾಷೆಯ ಪಟ್ಟಕಟ್ಟಿರುವಾಗ ಸಂಪನ್ನಭಾಷೆಯಾದ ಕನ್ನಡಕ್ಕೂ ಆ ಸಾಮರ್ಥ್ಯ ಇರಲೇಬೇಕು. ಭಾರತದ ಎಲ್ಲ ಪ್ರಾಂತಭಾಷೆಗಳಿಗೂ ಈ ಸಾಮರ್ಥ್ಯ ಇದ್ದೇ ಇರುತ್ತದೆ. ಆಂಗ್ಲಮೋಹದಿಂದ ಹೊರತಾಗಿ ಪ್ರಬಲ ಇಚ್ಛಾಶಕ್ತಿಯನ್ನು ಪ್ರಕಟಿಸಿ ಆ ನಿಟ್ಟಿನಲ್ಲಿ ತೊಡಗಬೇಕಷ್ಟೆ.
ಭಂಜನೆಯ ಭಂಜಿಸಿ..
ಇದೇ ವೇಳೆ ನಮಗೆ ಎದುರಾಗಿರುವ ಮತ್ತೊಂದು ಸವಾಲೂ ಇದೆ. ಅದು, ಭಾರತಭಂಜನೆಯ ಸವಾಲು.
ಹೌದು, ಭಾರತಭಂಜನೆ!
ಭಾರತವನ್ನು ಭಂಜಿಸುವವರು ಭಾರತವಿರೋಧಿಗಳು ತಾನೆ? ಅಂದರೆ, ನಾನಾ ಕಾರಣಗಳಿಗಾಗಿ ಭಾರತವನ್ನು ವಿರೊಧಿಸುವವರು ಇಲ್ಲವೇ ದ್ವೇಷಿಸುವವರು ಭಾರತವನ್ನು ಭಂಜಿಸಲು ಮುಂದಾಗಬಹುದು. ಇದೂ ಹೌದೇ. ಖಂಡಿತ ಹೌದು. ಆದರೆ ಇಷ್ಟು ದೊಡ್ಡ ಪ್ರಜಾಸಂಖ್ಯೆಯನ್ನು ಹೊಂದಿರುವ ದೇಶವೊಂದನ್ನು ವಿರೋಧಿಗಳು ಭಂಜಿಸಲು ಸಾಧ್ಯವಾಗುವುದು ಕಷ್ಟಸಾಧ್ಯ. ಸ್ವಾತಂತ್ರ್ಯಪೂರ್ವದಲ್ಲಿ ಆಂಗ್ಲರು ಮತ್ತು ಅವರಿಗಿಂತ ಪೂರ್ವದಲ್ಲಿ ಮೊಘಲರು ಮತ್ತು ಅವರಂಥವೇ ಸೆಮೆಟಿಕ್ ಸಂತತಿಯವರು ಈ ಭಂಜನೆಯ ಕೃತ್ಯವನ್ನು ಕೆಲವೊಮ್ಮೆ ನಾಜೂಕಿನಿಂದಲೂ, ಇನ್ನು ಕೆಲವೊಮ್ಮೆ ಕ್ರೌರ್ಯದಿಂದಲೂ ಮಾಡಿದ್ದರು. ಆಗ ಅಧಿಕಾರ ಅವರ ಕೈಯಲ್ಲಿತ್ತು. ನಮ್ಮ ರಾಷ್ಟçದಲ್ಲಿ ಒಗ್ಗಟ್ಟಿನ ಕೊರತೆಯಿತ್ತು. ಅದಕ್ಕಿಂತ ಮುಖ್ಯವಾಗಿ ಸ್ವಾಭಿಮಾನಶೂನ್ಯತೆಯಿತ್ತು. ನಮ್ಮೀ ದೋಷಗಳೆಲ್ಲವೂ ಆ ಎಲ್ಲ ತೋಳದಂಥ ಪರಕೀಯರಿಗೆ ಸಾಧನಗಳೇ ಆಗಿಹೋದುವು.
ಈಗ ಸ್ವಾತಂತ್ರ್ಯ ಇದೆ. ಅಧಿಕಾರ ನಮ್ಮದೇ ಕೈಯಲ್ಲಿದೆ. ಆದರೆ ಆಯಕಟ್ಟಿನ ಜಾಗಗಳಲ್ಲಿ ಮತ್ತದೇ ಪರಕೀಯ ಮಾನಸಿಕತೆಯವರು ಸ್ವಾತಂತ್ರ್ಯ ಲಭಿಸಿದ ದಿನಗಳಿಂದಲೇ ಶತ್ರುಭಾವದಲ್ಲಿ ಪ್ರತಿಷ್ಠಾಪನೆಗೊಂಡಿದ್ದಾರೆ. ಸ್ವಕೀಯರಲ್ಲಿ ಸ್ವತ್ವದ ಬಗೆಗೆ ಹೇವರಿಕೆ ಹಾಗೂ ಪರಮತ-ಪರಸಿದ್ಧಾಂತಗಳ ಬಗೆಗೆ ಮೇಲರಿಮೆ ಬರುವಂತೆ ಮಾಡಬಲ್ಲ ಶಿಕ್ಷಣ, ಮಾಧ್ಯಮಗಳು ಮತ್ತಿತರ ಇಂಥ ಆಯಕಟ್ಟಿನ ಜಾಗಗಳು ಅವರ ಕೈಸೇರಿವೆ. ಸ್ವಕೀಯಪ್ರೀತಿ ಉಳ್ಳವರ ಕೈಗೆ ಆಡಳಿತ ಹೋದರೂ ಇಚ್ಛಾಶಕ್ತಿಯ ಕೊರತೆಯಿಂದ ಈ ಜಾಗಗಳನ್ನು ಇನ್ನೂ ಭಾರತವಿರೋಧಿಗಳಿಂದ ಪೂರ್ತಿ ಮುಕ್ತಗೊಳಿಸಲು ಸಾಧ್ಯವಾಗಿಲ್ಲ.
ಈ ವಿರೋಧಿಗಳು ಈಗಾಗಲೇ ಇಲ್ಲಿಯ ರಾಷ್ಟ್ರೀಯರಲ್ಲಿ ಅರಾಷ್ಟ್ರೀಯ ಭಾವವನ್ನು ಸಮರ್ಥವಾಗಿ ಬಿತ್ತಿದ್ದಾರೆ, ಮತ್ತೀಗಲೂ ಬಿತ್ತುತ್ತಲೇ ಇದ್ದಾರೆ. ಪರಿಣಾಮವಾಗಿ ಇಲ್ಲಿಯ ಪ್ರಜೆಗಳೇ ಇವರ ದಾಳಗಳಾಗಿ ಬಳಕೆಯಾಗುತ್ತಿದ್ದಾರೆ. ಪಂಜಾಬಿಗನಿಗೆ ತಾನು ಭಾರತೀಯ ಎಂದು ಅನಿಸುವುದರ ಬದಲು ಕನಸಿನ ಖಾಲಿಸ್ತಾನದ ಅವಿಭಾಜ್ಯ ಅಂಗವೆಂಬಂತೆ ತೋರುತ್ತದೆ. ಭಾರತದ ದಕ್ಷಿಣದಲ್ಲಿರುವವನಿಗೆ ಭಾರತೀಯತೆಯೆಂದರೆ ತನ್ನ ಮೇಲೆ ಹಿಂದಿಯನ್ನು ಹೇರುವ ಸಂಚು ಎಂದು ಅನಿಸುತ್ತದೆ. ಈಶಾನ್ಯದ ಮತಾಂತರಿತ ಸಮುದಾಯಕ್ಕೆ ತಾವು ಭಾರತಕ್ಕೆ ಸೇರಿದವರಲ್ಲ ಎಂದು ಕಾಣುತ್ತದೆ.
ಕನ್ನಡಿಗನಿಗೆ ಕನ್ನಡವನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಆಂಗ್ಲಭಾಷೆಯ ಬಗೆಗೆ ಹೆಮ್ಮೆ! ತನ್ನದೇ ಸ್ಥಿತಿಯಲ್ಲಿರುವ ತನ್ನ ಅಕ್ಕತಂಗಿಯರೇ ಆಗಿರುವ ತಮಿಳು ಮರಾಠಿ ಹಿಂದಿ ಭಾಷೆಗಳ ಬಗ್ಗೆ ಇನ್ನಿಲ್ಲದ ದ್ವೇಷ. ಈ ಭಾವವನ್ನು ಹೋರಾಟಗಾರರು ಕನ್ನಡಿಗರಲ್ಲಿ ಪರಿಣಾಮಕಾರಿಯಾಗಿ ಬಿತ್ತಿದ್ದಾರೆ. ಈ ಹೋರಾಟಗಾರರೂ ಭಾರತಭಂಜಕರ ಸಾಧನಗಳೇ ಆಗಿದ್ದಾರೆ. ಹಲವರಿಗೆ ತಾವು ಈ ರೀತಿ ಪರಕೀಯರ ಸಾಧನಗಳಾಗಿದ್ದೇವೆ ಎಂಬುದೇ ಗೊತ್ತಿಲ್ಲ! ತಾವು ತಮ್ಮದೇ ದೇಶವನ್ನು ದ್ವೇಷಿಸುತ್ತಿದ್ದೇವೆಂದು ಕನ್ನಡಪ್ರೀತಿಯಲ್ಲಿ ತಮಿಳನ್ನೋ ಸಂಸ್ಕöÈತವನ್ನೋ ವಿರೋಧಿಸುವ ಮಂದಿಗೆ ಗೊತ್ತಿಲ್ಲ!
ಕನ್ನಡ ಉಳಿಯಲು, ಭಾರತದ ಎಲ್ಲ ಭಾಷೆಗಳೂ ಉಳಿಯಲು ಮೊದಲು ಭಾರತ ಉಳಿಯಬೇಕು. ಭಾರತಭಂಜನೆಯ ರೂಪ-ಸ್ವರೂಪಗಳನ್ನು ಅರ್ಥೈಸಿಕೊಂಡು ಅದಕ್ಕೆ ಸರಿಯಾದ ಘಾತವನ್ನು ಎಲ್ಲರೂ ನೀಡುವಂತಾಗಬೇಕು. ಆಗ ಕನ್ನಡದ ಮಿತ್ರ ಯಾರು, ಶತ್ರು ಯಾರು – ಎಂದು ಸರಿಯಾಗಿ ಗೊತ್ತಾದೀತು. ಕನ್ನಡದ ಅಕ್ಕತಂಗಿಯರ ಬಗೆಗೆ ಪ್ರೀತಿ, ಹೆಮ್ಮೆ ಉಂಟಾದೀತು.
ಶತ್ರುಗಳ ನಡುವೆ ಅಲ್ಲ, ಅಕ್ಕತಂಗಿಯರ ನಡುವೆಯೇ ಕನ್ನಡ ಬೆಳೆಯಬೇಕಾದುದು.