ತೇರಾ ವೈಭವ ಅಮರ ರಹೇ ಮಾ.. ಹಮ್ ದಿನ ಚಾರ್ ರಹೇ ನ ರಹೇ..
೭೮ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ನಾಡಿನೆಲ್ಲೆಡೆ ಮನೆಮಾಡಿದೆ. ಕಿತ್ತೂರಿನ ವೀರರಾಣಿ ಚನ್ನಮ್ಮ ಮಲ್ಲಸರ್ಜ ದೇಸಾಯಿ, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ; ನೀವು ಉತ್ತಿದವರಲ್ಲ, ಬಿತ್ತಿದವರಲ್ಲ. ಬೆವರು ಸುರಿಸಿ ದುಡಿದವರಲ್ಲ. ನಾಡು ಕಟ್ಟಿದವರಲ್ಲ. ಕಪ್ಪ ಕೊಡಲಾಗದು’ ಎಂದು ಗರ್ಜಿಸಿ ೨೦೦ ವರ್ಷ! ಅಂತಹುದೇ ಒಂದು ಪ್ರೇರಣಾದಾಯಿ ಚೇತೋಹಾರಿ ಕಥನ ‘ಸ್ವಯಂ ಸ್ವಾತಂತ್ರö್ಯ ಘೋಷಿಸಿಕೊಂಡ ಈಸೂರು ಕಲಿಗಳದ್ದು!’
ಈಸೂರು: ಇದೀಗ ತಾನೇ ಬಂದ ಸುದ್ದಿ…
“ಬೇಜವಾಬ್ದಾರಿ ಬ್ರಿಟಿಷ್ ಅಧಿಕಾರಿಗಳಿಗೆ ಈಸೂರಿನಲ್ಲಿ ಪ್ರವೇಶ ನಿಷೇಧಿಸಿದೆ”
ಬ್ರಿಟಿಷ್ ದಬ್ಬಾಳ್ವಿಕೆಯ ಸ್ವಾತಂತ್ರ್ಯಪೂರ್ವದ ಭಾರತದಲ್ಲಿ, ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕಿನ ಈಸೂರು ಗ್ರಾಮಸ್ಥರು, ಬ್ರ್ರಿಟಿಷರಿಗೆ ಮೀಸೆ ತಿರುವಿ, ಸೆಡ್ಡುಹೊಡೆದು ಊರ ಮುಂದೆ ಈ ಫಲಕ ನೆಟ್ಟು, ವೀರೋಚಿತವಾಗಿ ಕಾದಾಡಿ, ವೀರ ಮರಣವನ್ನಪ್ಪಿದ ೮೨ನೇ ಸಂಸ್ಮರಣಾ ವರ್ಷವಿದು.
ಭಾರತ ಆಗಸ್ಟ್ ೧೪, ೧೯೪೭ರ ಮಧ್ಯರಾತ್ರಿ ಸ್ವಾತಂತ್ರ್ಯ ಗಳಿಸುವ ೫ ವರ್ಷಗಳ ಮೊದಲು, ೧೯೪೨ರಲ್ಲಿ ಸ್ವಯಂ ಸ್ವಾತಂತ್ರ್ಯ ಘೋಷಿಸಿಕೊಂಡು, “‘ಸ್ವಯಂಮೇವ ಮೃಗೇಂದ್ರತಾ” ತತ್ತ್ವವನ್ನು ಅಕ್ಷರಶಃ ಅನುಷ್ಠಾನಗೊಳಿಸಿದ, ಸ್ವಾತಂತ್ರ್ಯ ಹೋರಾಟಕ್ಕೊಂದು ದಿಕ್ಕು, ದೆಸೆ ತೋರಿದ ಗ್ರಾಮ ಈಸೂರು!
ಐತಿಹಾಸಿಕ ಆಧಾರಗಳನ್ನು ಅವಲೋಕಿಸಿ ಹೇಳುವುದಾದರೆ, ಇಡೀ ದೇಶದಲ್ಲಿ ಬ್ರಿಟಿಷರನ್ನು ಒದ್ದೋಡಿಸಲು ಸಂಕಲ್ಪ ತೊಟ್ಟು, ಸ್ವಾತಂತ್ರ್ಯದ ಕಹಳೆ ಮೊಳಗಿಸಿದ, ಮೊದಲು ಸ್ವಾತಂತ್ರ್ಯಗಳಿಸಿದ ಸಾಮ್ರಾಜ್ಯ, ಬೆಳಗಾವಿ ಜಿಲ್ಲೆಯ ಕಿತ್ತೂರು ನಾಡಾದರೆ, ಗ್ರಾಮವೊಂದು ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಈಸೂರು ಮಾತ್ರ!
ರಾಷ್ಟ್ರಪಿತ ಮೋಹನದಾಸ ಕರಮಚಂದ ಗಾಂಧಿ ೧೯೪೨ ಆಗಸ್ಟ್ ೮ರಂದು, ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಆಂದೋಲನಕ್ಕೆ ದೇಶಾದ್ಯಂತ ಕರೆ ನೀಡಿದರು. ನಾಡಿನ ಜನರು ಮಾಡು ಇಲ್ಲವೇ ಮಡಿ ಎಂಬ ನಿರ್ಣಯದೊಂದಿಗೆ, ಬ್ರಿಟಿಷರ ವಿರುದ್ಧ ‘ಕ್ವಿಟ್ ಇಂಡಿಯಾ ಚಳವಳಿ’ ಆರಂಭಿಸಿದರು.
ಗಾಂಧಿ ಕೊಟ್ಟ ಕರೆಗೆ ಅನೇಕ ಸ್ವಾತಂತ್ರ್ಯ ಸೇನಾನಿಗಳು, ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟು, ಪ್ರಾಣಾಹುತಿಗೂ ಸನ್ನದ್ಧರಾಗಿ, ಬ್ರಿಟಿಷರ ಮರ್ಮಕ್ಕೆ ತಾಗುವಂತೆ ವ್ಯವಸ್ಥಿತ ಮತ್ತು ಯೋಜಿತ ರೀತಿಯಲ್ಲಿ ಕೆಣಕಿಬಿಟ್ಟರು!
ಪರಿಣಾಮವೆಂಬಂತೆ, ಆ ಸ್ವಾಭಿಮಾನದ ಕಿಡಿ ನಾಡಿನ ಮೂಲೆಮೂಲೆಗೆ ಹಬ್ಬಿ, ಧಗಧಗಿಸತೊಡಗಿತು. ಶಿಕಾರಿಪುರ-ಚಿಕ್ಕಮಗಳೂರು ರಸ್ತೆಯ ಮೇಲಿರುವ ಮಲಗಿದಂತಿದ್ದ ಮೂಲೆಯ ಊರು ಈಸೂರಿಗೆ ಆ ಸಂದೇಶ ತಲಪುವುದು ತಡವಾಗಲಿಲ್ಲ! ೧೯೪೨ರಲ್ಲಿಯೇ ‘ಕ್ವಿಟ್ ಇಂಡಿಯಾ ಚಳವಳಿ’ಗೆ ಗ್ರಾಮಸ್ಥರು ಕಂಕಣ ಕಟ್ಟಿದರು. ಅಸಹಕಾರ ಚಳವಳಿ ಆರಂಭಿಸಿದರು.
ಈಸೂರು ಗ್ರಾಮಸ್ಥರಿಗೆ ಇಡೀ ದಿನ ಬದುಕಿನ ದಗದ; ಸಂಜೆ ಸ್ವಾತಂತ್ರ್ಯ ಹೋರಾಟ! ರಾತ್ರಿ ಗ್ರಾಮದ ದೈವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ಚರ್ಚಿಸಿಕೊಂಡು, ನಾಳಿನ ಹೋರಾಟದ ರೂಪರೇಷೆ ಸಿದ್ಧಪಡಿಸುವುದು.
ಸಂಜೆ ಗ್ರಾಮಸ್ಥರನ್ನು ಒಂದೆಡೆ ಸೇರಿಸಲು, ‘ವಂದೇ ಮಾತರಂ’ ರಾಷ್ಟ್ರಗಾನ, ‘ಭಾರತ ಮಾತಾ ಕೀ ಜೈ’ ಎಂಬ ಜೈಕಾರಗಳೊಂದಿಗೆ ಮೆರವಣಿಗೆ. ಸಮುದಾಯ ಸಂಘಟನೆ ಮೂಲಕ ಸ್ವಾತಂತ್ರ್ಯದ ಕಿಚ್ಚು ದೈದೀಪ್ಯಮಾನವಾಗಿರಿಸುವ ಹಂಬಲ!
ಭಾಷೆ ತಿಳಿಯದಿದ್ದರೂ ಭಾವ ಅರಿಯುವ ಕುಟಿಲ ನೀತಿಜ್ಞ ಬ್ರಿಟಿಷರಿಗೆ ಕಾರಸ್ಥಾನಿಗಳಾದ ನಮ್ಮವರೇ ಕೆಲವರ ಮಧ್ಯವರ್ತಿಯಿಂದ ಈಸೂರಿನ ಜನರ ಕಾರಬಾರ ತಿಳಿಯುವುದು ತಡವಾಗಲಿಲ್ಲ. ಕಟ್ಟಲಾಗದಷ್ಟು (ದುಪ್ಪಟ್ಟು ಪುಂಡಗಂದಾಯ) ಕಂದಾಯ ಹೇರಿ, ಬೆನ್ನೆಲುಬು ಮುರಿಯುವ ಹುನ್ನಾರ ಬ್ರಿಟಿಷರು ಹೊಸೆದರು.
ನಿರೀಕ್ಷೆಯಂತೆ ಮತ್ತು ಪೂರ್ವಯೋಜನೆಯಂತೆ ಬ್ರಿಟಿಷ್ ಕಂದಾಯ ಅಧಿಕಾರಿ, ಈಸೂರಿಗೆ ದಂಡಿನೊಂದಿಗೆ ವಸೂಲಿಗೆ ಬಂದ. ‘ಕೂಡಲೇ ಕಂದಾಯ ಕಟ್ಟಿ; ಇಲ್ಲವೇ ಜೈಲು ಪಾಲಾಗಿ…’ ಗ್ರಾಮಸ್ಥರಿಗೆ ಎರಡೇ ಆಯ್ಕೆ ಮುಂದಿಟ್ಟ.
ಈಸೂರಿನ ಸ್ವಾತಂತ್ರ್ಯ ಸೇನಾನಿಗಳು ಈ ದಿನ ಬರಬಹುದು ಎಂದು ಮೊದಲೇ ಮಾನಸಿಕವಾಗಿ ಸಿದ್ಧಗೊಂಡಿದ್ದ ಹಿನ್ನೆಲೆ, ದೈಹಿಕ ಪೀಡನೆಗೂ ನರ-ನಾಡಿಗಳನ್ನು ಹುರಿಗೊಳಿಸಿ ಹೊಸೆದು ನಿಂತಿದ್ದರು.
“ಏಸೂರು ಬೇಕಾದರೂ ಕೊಟ್ಟೆವೂ; ಈಸೂರು ಮಾತ್ರ ಕೊಡೆವು” ಎಂದು ರಣಕಹಳೆ ಮೊಳಗಿಸಿಯೇ ಬಿಟ್ಟರು!
ಸ್ವಾತಂತ್ರ್ಯ ಹೋರಾಟದ ಸುವರ್ಣ ಅಧ್ಯಾಯವೊಂದಕ್ಕೆ ನಾವು ಮುನ್ನುಡಿ ಬರೆಯುತ್ತಿದ್ದೇವೆ ಎಂಬ ಕಲ್ಪನೆಯೇ ಇಲ್ಲದೆ ನಿಸ್ವಾರ್ಥ ಹೆಜ್ಜೆ ಇಟ್ಟು ಪರಮಾರ್ಥ ಸಾಧಿಸಿದವರು ಈ ನಮ್ಮ ದೇಶಾಭಿಮಾನದ ಜನ. ಯೋಗ್ಯ ಕೂಲಿಯನ್ನೂ ಕೇಳದೇ! ರಾಷ್ಟ್ರಾಯ ಇದಂ ನ ಮಮ…
ಬ್ರಿಟಿಷ್ ಕಂದಾಯ ಅಧಿಕಾರಿ ಕೈಯಲ್ಲಿದ್ದ ಲೆಕ್ಕದ ಪುಸ್ತಕವನ್ನು ಅನಾಮತ್ ಕಸಿದು ಹರಿದು ಚೆಲ್ಲಿಬಿಟ್ಟರು! ಇದನ್ನು ನಿರೀಕ್ಷಿಸದಿದ್ದ ಆ ವಸೂಲಿ ಅಧಿಕಾರಿ ಕಕ್ಕಾಬಿಕ್ಕಿಯಾದ! “ಎಲ್ಲಿಂದ ಬಂತು ಈ ಕುನ್ನಿಗಳಿಗೆ ಇಷ್ಟು ಧೈರ್ಯ” ಎಂದು ಹಲ್ಲುಕಡಿದ. ಆದರೆ ಸಂಘಟಿತರಾಗಿದ್ದ ಈಸೂರು ಸೇನಾನಿಗಳು ಅವನ ದಂಡಿನ ಹೆಡೆಮುರಿ ಕಟ್ಟಿ, ಗಾಂಧಿ ಟೊಪ್ಪಿಗೆ ಧರಿಸುವಂತೆ ಅಧಿಕಾರ ಮದದಲ್ಲಿ ಮಿಂದಿದ್ದ ಅಧಿಕಾರಿಗೆ ಸೂಚಿಸಿದರು.
ಕುದ್ದುಹೋದ ಬ್ರಿಟಿಷ್ ಅಧಿಕಾರಿ ಮರುಮಾತನಾಡದೆ ಬಂದ ದಾರಿಗೆ ಸುಂಕ ಕಟ್ಟಬೇಕಿಲ್ಲವಲ್ಲ ಎಂದು ನಿಟ್ಟುಸಿರುಬಿಟ್ಟು ಬಂದ ವೇಗದಲ್ಲೇ ಕುದುರೆ ಹತ್ತಿ ಹಿಂತಿರುಗಿದ. ಆದರೆ ಹಲ್ಲು ಕಿತ್ತ ಹಾವಿನಂತಾಗಿದ್ದ! ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವ ಜಾಯಮಾನ ಅವರದ್ದಲ್ಲ. ಪುಂಡಗಂದಾಯ ಎರಡು ಪಟ್ಟು ಹೇರಲು ಹವಣಿಸಿದ. ಹೀಗಾಗಿ, ಗ್ರಾಮಸ್ಥರು ‘ಲಗಾನ್ ಭರಿಸದೇ’ ಮುಂದಿನ ಹೋರಾಟಕ್ಕೆ ಸಜ್ಜುಗೊಳ್ಳಬೇಕಿತ್ತು.
ಬ್ರಿಟಿಷ್ ಕಂದಾಯ ನಿರೀಕ್ಷಕ, ‘ಈಸೂರಿನ ಅವಮಾನಕ್ಕೆ’ ಸಾಕ್ಷಿ ಎಂಬಂತೆ, ತಾನು ಧರಿಸದೆ ತಂದ ಗಾಂಧಿ ಟೊಪ್ಪಿಗೆಯನ್ನು ಶಿಕಾರಿಪುರದ ಅಮಲ್ದಾರ್ ಸಾಹೇಬರ ಮೇಜಿನ ಮೇಲಿಟ್ಟು ವಿಸ್ತೃತ ವರದಿ ಸಲ್ಲಿಸಿ, ದೂರು ಕೊಟ್ಟ.
ತಮ್ಮ ಮಾತಿಗೆ ಯೋಗ್ಯ ಬೆಲೆ ಕೊಡದ ಬ್ರಿಟಿಷ್ ಕಂದಾಯ ಅಧಿಕಾರಿಯ ನಡೆಯನ್ನು ರಾಷ್ಟ್ರದ್ರೋಹವೇ ಎಂದು ಪರಿಗಣಿಸಿದ ಈಸೂರು ಗ್ರಾಮಸ್ಥರು, ಊರ ತೋರಣ ಬಾಗಿಲಿಗೆ “ಬೇಜವಾಬ್ದಾರಿ ಬ್ರಿಟಿಷ್ ಸರ್ಕಾರಿ ಅಧಿಕಾರಿಗಳಿಗೆ ಇನ್ನು ಮುಂದೆ ಈಸೂರಿನಲ್ಲಿ ಪ್ರವೇಶವಿಲ್ಲ” ಎಂದು ನಾಮಫಲಕವನ್ನು ಹಾಕಿಬಿಟ್ಟರು!
ಇಷ್ಟಕ್ಕೇ ಸುಮ್ಮನಾಗಲಿಲ್ಲ! ಈಸೂರು ಗ್ರಾಮದ ಸಾಹುಕಾರ ಜಯಣ್ಣ ಅವರನ್ನು ಅಮಲ್ದಾರ್ ಆಗಿ ಹಾಗೂ ಕೆ.ಜಿ. ಮಲ್ಲಯ್ಯ ಅವರನ್ನು (ಆರಕ್ಷಕ ಉಪನಿರೀಕ್ಷಕ) ಪೊಲೀಸ್ ಸಬ್-ಇನ್ಸ್ಪೆಕ್ಟರ್ ಆಗಿ ನೇಮಿಸಿ ಸ್ವಂತದ ಸರ್ಕಾರ ಘೋಷಿಸಿಕೊಂಡು ಬಿಟ್ಟರು! ದೇಶ ಸ್ವತಂತ್ರಗೊಳ್ಳುವ ಮೊದಲು ಈಸೂರು ಸ್ವಾತಂತ್ರ್ಯ ಘೋಷಿಸಿಕೊಂಡಿತು!
ಬ್ರಿಟಿಷ್ ಸರ್ಕಾರದ ಆಜ್ಞಾಧಾರಕರಾಗಿದ್ದ ಅಮಲ್ದಾರ ಚೆನ್ನಕೃಷ್ಣಪ್ಪ ಸಾಹೇಬರಿಗೆ ಇದು ಮನ್ನಿಸಿಬಿಡಹುದಾದ ತನ್ನವರ ಸಣ್ಣ ತಪ್ಪು ಎನ್ನಿಸಲಿಲ್ಲ! ತನಗೇ ಆದ ಅವಮಾನ ಎಂಬಂತೆ ಬ್ರಿಟಿಷ್ ಕಂದಾಯ ನಿರೀಕ್ಷಕನ ದೂರನ್ನು ಗಂಭೀರವಾಗಿ ಪರಿಗಣಿಸಿ ಈಸೂರಿಗೆ ‘ತತ್ಕಾಲ್ ಪಾರ್ಟಿಯೊಂದಿಗೆ ಶಸ್ತ್ರಸಜ್ಜಿತರಾಗಿ ಹೊರಟುಬಂದರು.
ಸೆಪ್ಟೆಂಬರ್ ೨೮, ೧೯೪೨ರಂದು ನಡೆದ ಈ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಗಮನ ಸೆಳೆಯಿತು. ಸ್ವಾತಂತ್ರ್ಯದ ಕಿಚ್ಚು ಜ್ವಾಲೆಯಾಗಿ ಧಗಧಗಿಸಿತು.
‘ಸ್ವತಂತ್ರ ಗ್ರಾಮ’ ಎಂದು ಘೋಷಿಸಿಕೊಂಡಿದ್ದ ಈಸೂರಿಗೆ ಈಗ ಸಾಹುಕಾರ್ ಜಯಣ್ಣ ಅಮಲ್ದಾರ ಹಾಗೂ ಕೆ.ಜಿ. ಮಲ್ಲಯ್ಯ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದರು. ಸಹಜವಾಗಿಯೇ ಈ ವಿಷಯ ಶಿಕಾರಿಪುರದ ಅಮಲ್ದಾರ ಚೆನ್ನಕೃಷ್ಣಪ್ಪ ಮತ್ತು ಪೊಲೀಸ್ ಸಬ್-ಇನ್ಸ್ಪೆಕ್ಟರ್ ಕೆಂಚೇಗೌಡ ಅವರಿಗೆ ನುಂಗಲಾಗದ ತುತ್ತಾಯಿತು. ಅವರ ಹುಬ್ಬು ಹಣೆ ದಾಟಿ ಏರಿದವು!
ಬ್ರಿಟಿಷ್ ಸರ್ಕಾರದ ಪ್ರತಿನಿಧಿಗಳಾದ ಈ ಇಬ್ಬರೂ, ‘ಸ್ವತಂತ್ರ ಗ್ರಾಮ’ ಈಸೂರಿಗೆ ಬಂದವರೆ ದ್ವಾರ ಬಾಗಿಲಿಗೆ ಹಾಕಿದ ಎಚ್ಚರಿಕೆ ಫಲಕ ಮತ್ತು ಅಲಂಕಾರಕ್ಕೆ ಬಳಸಲಾದ ಹೂವಿನ ತೋರಣ ಕಿತ್ತು ಹಾಕಿ, ಅಧಿಕಾರದ ದರ್ಪ ಮೆರೆದರು. ‘ನಾವ್ ಅಂದ್ರೆ ಏನ್ ತಿಳಿದೀರಿ…?’ ಅಂತ ಗುಟುರು ಹಾಕಿದರು.
ಈಸೂರು ಗ್ರಾಮದ ದೈವ ಶ್ರೀವೀರಭದ್ರೇಶ್ವರ ದೇವಸ್ಥಾನದ ಬಳಿ ಜನ ಸೇರಿದ್ದನ್ನು ಅರಿತು ಅಲ್ಲಿಗೆ ಬಂದ ಇಬ್ಬರೂ, ಸಮಾವೇಶಗೊಂಡಿದ್ದ ಜನಕ್ಕೆ ಕೂಡಲೇ ಚದುರುವಂತೆ ಯಾವ ಪೂರ್ವಸೂಚನೆಯನ್ನೂ ನೀಡದೆ ಅನಾಮತ್ ಹಿಂಸಾಚಾರಕ್ಕಿಳಿದು ಗಂಭೀರವಾಗಿ ಗಾಯಗೊಳ್ಳುವಂತೆ ಹಿಂಸಿಸಿಬಿಟ್ಟರು.
ಪೊಲೀಸ್ ಸಬ್-ಇನ್ಸ್ಪೆಕ್ಟರ್ ಕೆಂಚೇಗೌಡ, ಈಸೂರು ಗ್ರಾಮಸ್ಥರು ಗಾಯಗೊಂಡರೂ ನುಂಗಿಕೊಂಡು, ತಕ್ಕ ಪ್ರ್ರತಿಕ್ರಿಯೆ ನೀಡದ ಹಿನ್ನೆಲೆ ಗಾಂಧಿ ಅವರ ಕರೆಯ ಮೇರೆಗೆ ಹಿಂಸಾಚಾರಕ್ಕೆ ಆಸ್ಪದ ಮಾಡಿಕೊಡದೆ, ಶಾಂತರೀತಿಯಲ್ಲಿ ಮೌನಹೋರಾಟ ಮುಂದುವರಿಸಿದ್ದನ್ನು ಕಂಡು ಇನ್ನಷ್ಟು ಕೆರಳಿದರು.
ತನಗಿರುವ ಅಧಿಕಾರಕ್ಕೆ ಜನ ತಲೆ ಬಾಗಿದ್ದಾರೆ ಎಂದು ಪರಿಭಾವಿಸಿದ ಕೆಂಚೇಗೌಡ ಜನರ ಮೇಲೆ ಲಾಠಿ ಪ್ರಹಾರ ಮಾಡಿದ. ಆದರೂ ಶಾಂತವಾಗಿ ಯುವಜನರ ತಂಡ ಆ ಪೆಟ್ಟುಗಳನ್ನೂ ಸಹಿಸಿಕೊಂಡು ಗಾಂಧಿ ಮಾತಿಗೆ ಮನ್ನಣೆ ಇತ್ತು ಸುಮ್ಮನಾದರು.
ಇನ್ನಷ್ಟು ಪ್ರಚೋದಿತನಾದ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಕೆಂಚೇಗೌಡ, ಬುದ್ಧಿ ಕಲಿಸಿಯೇ ತೀರುವೆ ಎಂಬ ಹಟಕ್ಕೆ ಬಿದ್ದವನಂತೆ ಶಾಂತವಾಗಿ ಪ್ರತಿಭಟಿಸುತ್ತಿದ್ದ ಗ್ರಾಮಸ್ಥರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿಬಿಟ್ಟ.
ಆ ಪೈಕಿ ಒಂದು ಗುಂಡು ಈಸೂರಿನ ಹಿರಿಯರೋರ್ವರಿಗೆ ತಗುಲಿ ಅವರು ಗ್ರಾಮ ದೈವ ಶ್ರೀ ವೀರಭದ್ರೇಶ್ವರ ದೇಗುಲದ ಕಟ್ಟೆಗೆ ಕುಸಿದುಬಿದ್ದು ಸ್ಥಳದಲ್ಲಿಯೇ ಬಲಿದಾನಗೈದರು. ಸ್ವಾತಂತ್ರ್ಯ ಸೇನಾನಿ ಮಲ್ಲಪ್ಪಯ್ಯ ಸಾಹುಕಾರರ ಪುಟ್ಟ ಮಗಳು ಸಹ ಗುಂಡೇಟಿಗೆ ಸಾವನ್ನಪ್ಪಿದಳು.
ಬ್ರಿಟಿಷರ ಎಂಜಲು ಸಂಬಳಕ್ಕೆ ಕೈಯೊಡ್ಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ತನ್ನವರ ಮೇಲೆ ಅದರಲ್ಲೂ ಪುಟ್ಟಮಕ್ಕಳು, ಹೆಣ್ಣುಮಕ್ಕಳ ಮೇಲೆ, ನಿರ್ದಯವಾಗಿ ಗುಂಡು ಹಾರಿಸಿ ಕೊಂದ ಪರಿಗೆ ತಾಳ್ಮೆಯ ಕಟ್ಟೆ ಒಡೆದಿದ್ದೇ ತಡ, ಈಸೂರಿನ ಸ್ವಾತಂತ್ರ್ಯ ಸೇನಾನಿಗಳು ಆಯುಧ ಕೈಗೆತ್ತಿಕೊಂಡರು.
ಆತ್ಮರಕ್ಷಣೆಗಾಗಿ ಗಾಂಧಿಗೆ ಕೊಟ್ಟ ವಚನ ಮುರಿದು, ಪೊಲೀಸ್ ಸಬ್-ಇನ್ಸ್ಪೆಕ್ಟರ್ ಕೆಂಚೇಗೌಡ ಮತ್ತು ಅಮಲ್ದಾರ್ ಚೆನ್ನಕೃಷ್ಣಪ್ಪ ಅವರನ್ನು ಎರಡೇ ಏಟಿಗೆ ಇಹದ ವ್ಯಾಪಾರ ಮುಗಿಸುವಂತೆ ಹೆಣ ಎತ್ತಿದರು. ಇಬ್ಬರು ಸ್ಥಳದಲ್ಲಿಯೇ ಉಸಿರು ನೀಗಿದರು. ಈ ಘಟನೆ ದೇಶಾದ್ಯಂತ ದೊಡ್ಡ ಸುದ್ದಿ ಆಯಿತು.
ಸಾರ್ಜೆಂಟ್ ಸಿ. ಕಾಡಪ್ಪ ಎಂಬುವರು ಸ್ವಾತಂತ್ರ್ಯ ಸೇನಾನಿಗಳ ಶವಗಳನ್ನು ಮತ್ತು ಇತರರ ಹೆಣಗಳನ್ನು ಶಿಕಾರಿಪುರಕ್ಕೆ ಸಾಗಿಸಿ ಎಂ.ಎಲ್.ಸಿ. ಪ್ರಕರಣ ದಾಖಲಿಸಲು ಜನರ ಮನವೊಲಿಸಿದರು.
ಈ ದುರ್ಘಟನೆಯ ಮಧ್ಯೆ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿಯೇ ಬ್ರಿಟಿಷರು ಹಾಗೂ ಪಕ್ಕದ ಹಳ್ಳಿಯಿಂದ ಕರೆತಂದಿದ್ದ ಮುಸಲ್ಮಾನ್ ಲೂಟಿಕೋರರನ್ನು ಈಸೂರಿಗೆ ನುಗ್ಗಿಸಿ, ಎರಡು ಲಕ್ಷಕ್ಕೂ ಹೆಚ್ಚಿನ ಮೊತ್ತದ ಸಂಪತ್ತನ್ನು ಹಾಡಹಗಲೇ ಲೂಟಿ ಹೊಡೆದರು. ಮಲ್ಲಪ್ಪಯ್ಯ ಸಾಹುಕಾರರ ಮನೆಯ ತಿಜೂರಿಯನ್ನು ಒಡೆದು ದೋಚಲಾಯಿತು.
ನ್ಯಾಯಯುತ ಬೇಡಿಕೆಯ ಹೋರಾಟವೇ ಆದರೂ ಹಿಂಸಾಚಾರಕ್ಕೆ ತಿರುಗಿದ್ದು ಬ್ರಿಟಿಷ್ ಸರ್ಕಾರದ ಜಂಘಾಬಲವನ್ನೇ ಈ ‘ದುರ್ಘಟನೆ’ ಉಡುಗಿಸಿತು. ಮುಯ್ಯಿ ತೀರಿಸಲು ಅವರು ತಡಮಾಡಲಿಲ್ಲ. ಈಸೂರು ಸ್ಮಶಾನವಾಗಬೇಕು! ‘ಆಪರೇಷನ್ ಈಸೂರ್ ಝೀರೋಡ್’ ಮಿಷನ್ ಕಾರ್ಯಾಚರಣೆ ಆರಂಭವಾಯಿತು.
ಬ್ರಿಟಿಷ್ ಸೈನ್ಯ ಈಸೂರಿಗೆ ಮುತ್ತಿಗೆ ಹಾಕಿತು. ಈ ಬೆಳವಣಿಗೆಗಳ ವಾಸನೆ ಮೊದಲೇ ಗ್ರಹಿಸಿದ್ದ ಸ್ವಾತಂತ್ರ್ಯ ಸೇನಾನಿಗಳು ಗುಪ್ತ ಸಂದೇಶ ರವಾನಿಸಿ ಇಡೀ ಊರು ಮೊದಲೇ ಖಾಲಿ ಮಾಡಿ, ಮನೆಗಳಿಗೆ ಬೀಗ ಜಡಿದು ಭೂಗತರಾಗಿಬಿಟ್ಟರು.
ಇಲ್ಲದಿದ್ದರೆ ಇಡೀ ಊರವರನ್ನು ಗುಂಡಿಟ್ಟು ಅಂದು ಅವರು ಕೊಲ್ಲುವಲ್ಲಿ ಯಶಸ್ವಿಯಾಗುತ್ತಿದ್ದರು. ಇದು ಕರ್ನಾಟಕದ ಗೌರಿಬಿದನೂರಿನ ವಿದುರಾಶ್ವತ್ಥದಂತೆ ಎರಡನೇ ಜಲಿಯನ್ ವಾಲಾಬಾಗ್ ಆಗುವ ಎಲ್ಲ ಸಾಧ್ಯತೆಯೂ ಇತ್ತು. ಮಕ್ಕಳು, ಹೆಣ್ಣುಮಕ್ಕಳು, ವಯೋವೃದ್ಧರು ಯಾರನ್ನೂ ಬಿಡದೆ ಗುಂಡಿಕ್ಕಿ ಸಾಯಿಸುವ ಮಿಷನ್ ಕಾರ್ಯರೂಪಕ್ಕೆ ಬಂದುಬಿಡುವ ಘೋರ ಘಟನೆಯೊಂದು ಪ್ರಸಂಗಾವಧಾನದಿಂದ ತಪ್ಪಿತು. ರಕ್ತಸಿಕ್ತ ಅಧ್ಯಾಯಕ್ಕೆ ಆಸ್ಪದ ದೊರಕಲಿಲ್ಲ.
ಅಂದುಕೊಂಡಂತೆ ಸ್ವಾತಂತ್ರ್ಯ ಸೇನಾನಿಗಳ ಹೆಡೆಮುರಿ ಕಟ್ಟಲು ಸಾಧ್ಯವಾಗದೆ ಈಸೂರಿನಲ್ಲಿ ಬೀಡುಬಿಟ್ಟು, ಬ್ರಿಟಿಷ್ ಅಧಿಕಾರಿಗಳು ಆರೋಪಪಟ್ಟಿ ಸಿದ್ಧಪಡಿಸಿದರು. ೧೧ ಜನರಿಗೆ ಮರಣದಂಡನೆ, ೧೩ ಜನರಿಗೆ ಜೀವಾವಧಿ ಶಿಕ್ಷೆ! ನ್ಯಾಯಾಲಯ ಅವರದ್ದು; ನ್ಯಾಯವೂ ಅವರ ಪರವಾದ್ದು! ಈಸೂರಿನ ಕಲಿಗಳಿಗೆ ವೀರ ಮರಣದ ಶಾಸನ, ವಿಚಾರಣೆ ಇಲ್ಲದೆ ಏಕಪಕ್ಷೀಯವಾಗಿ ನ್ಯಾಯಾಧೀಶರು ಷರಾ ಬರೆದರು. ಅದೂ ಒಂದೇ ಕಡೆಯವರ ಅನುಕೂಲಸಿಂಧು ವಾದ ಆಲಿಸಿ, ನಿಸರ್ಗ ನ್ಯಾಯಕ್ಕೆ ವಿರುದ್ಧವಾಗಿ!
ದೇಶದ್ರೋಹದ ಪಟ್ಟವನ್ನು ಈಸೂರಿನ ವೀರರ ತಲೆಗೆ ಕಟ್ಟಲಾಯಿತು. ಈ ಪುಟವನ್ನು ಇತಿಹಾಸದಲ್ಲಿ ಬರೆಯಬೇಕಿದೆ.
ಬ್ರಿಟಿಷ್ ನ್ಯಾಯಾಲಯದ ಆದೇಶದನ್ವಯ, ೧೯೪೩ರ ಮಾರ್ಚ್ ೮ರಂದು, ಕೆ. ಗುರಪ್ಪ (ಅಲಿಯಾಸ್ ಈಶ್ವರಪ್ಪ ಕುಮಾರ) ಹಾಗೂ ಜಿನಹಳ್ಳಿ ಮಲ್ಲಪ್ಪ ಅವರನ್ನು ದೇಶದ್ರೋಹದ ಅಪರಾಧಿ ಎಂದು ಪರಿಗಣಿಸಿ ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು.
ಸ್ವಾತಂತ್ರ್ಯ ಸೇನಾನಿ ಸೂರ್ಯನಾರಾಯಣಾಚಾರ್ (ಅಲಿಯಾಸ್ ಪಂಪಪ್ಪಚಾರ್) ಅವರಿಗೆ ಮಾರ್ಚ್ ೯, ೧೯೪೩ರಲ್ಲಿ, ಮರಣದಂಡನೆ ವಿಧಿಸಲಾಯಿತು. ಈಸೂರು ಸ್ವಾತಂತ್ರö್ಯ ಸೇನಾನಿಗಳ ಪೈಕಿ ಬಡಕಳ್ಳಿ ಹಾಲಪ್ಪ (ಅಲಿಯಾಸ್ ಬಸಪ್ಪ) ಹಾಗೂ ಅಂಗಡಿ ಹಾಲಪ್ಪ ತಲೆಮರೆಸಿಕೊಂಡಿದ್ದರು. ಅವರ ಬದಲು ಬಿ. ಹಾಲಪ್ಪ ಅವರನ್ನು ಅದೇ ದಿನ ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು.
ಗೌಡ್ರ ಶಂಕ್ರಪ್ಪ (ಅಲಿಯಾಸ್ ಹೊಳಿಯಪ್ಪ) ಅವರನ್ನೂ ಅಪರಾಧಿ ಎಂದು ಸಾಕ್ಷೀಕರಿಸಿ ಮಾರ್ಚ್ ೧೦, ೧೯೪೩ರಂದು ಮರಣದಂಡನೆ ವಿಧಿಸಿತು. ಈಸೂರು ಗ್ರಾಮದ ೨೩ ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಯಿತು. ಆ ಪೈಕಿ ಮಹಿಳೆಯರೂ ಇದ್ದದ್ದು ಮನನೀಯ. ಆರೋಪಿ ಸಂಖ್ಯೆ (೧) ಚನಬಸಮ್ಮ, (೧೧) ಹಾಲಮ್ಮ, (೧೨) ಪಾರ್ವತಮ್ಮ, (೧೩) ಸಿದ್ದಮ್ಮ – ಪ್ರಮುಖರು. ಇವರೆಲ್ಲರೂ ಜೀವನಪರ್ಯಂತ ಈಸೂರಿನಿಂದ ಗಡಿಪಾರು ಶಿಕ್ಷೆಗೆ ಒಳಗಾದ ಸ್ವಾತಂತ್ರ್ಯ ಸೇನಾನಿಗಳು.
ಸದ್ಯ ಆ ಎಲ್ಲ ಶಿಕ್ಷೆಯನ್ನು ಅನುಭವಿಸಿ ಬದುಕುಳಿದವರು ಎಸ್.ಎಸ್ ಹುಚ್ಚರಾಯಪ್ಪನವರು ಮಾತ್ರ. ಶತಾಯುಷಿಯಾಗುವ ಹೊಸ್ತಿಲಲ್ಲಿರುವ ಈ ಹಿರಿಯ ಸ್ವಾತಂತ್ರ್ಯಸೇನಾನಿ ಈಸೂರು ಗ್ರಾಮದ ತಮ್ಮ ಸ್ವಗೃಹದಲ್ಲಿ ನಾಡಿನ ಹೋರಾಟದ ಕೊನೆಯ ಕೊಂಡಿಯಾಗಿ ಬದುಕುಳಿದಿದ್ದಾರೆ.
ಈಸೂರು ಸ್ವಾತಂತ್ರ್ಯಸೇನಾನಿಗಳ ಹೋರಾಟವನ್ನು ಜೀವಂತವಾಗಿಡಲು ಹುತಾತ್ಮರ ಸ್ಮಾರಕ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ೫ ಕೋಟಿ ರೂಪಾಯಿ ವೆಚ್ಚದಲ್ಲಿ ಈಸೂರನ್ನು ಐತಿಹಾಸಿಕ ಸ್ಥಳವನ್ನಾಗಿ ರೂಪಿಸುವ ಸ್ಮಾರಕ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಈ ಸ್ಮಾರಕವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಭವನದಲ್ಲಿ ಈಸೂರು ಸ್ವಾತಂತ್ರ್ಯಸೇನಾನಿಗಳ ನಾಮಫಲಕದ ಶಿಲಾಕೃತಿಗಳನ್ನು ಯೋಜಿಸಲಾಗಿದೆ. ಸಂಕ್ಷಿಪ್ತ ಮಾಹಿತಿ ನೀಡುವ ವ್ಯವಸ್ಥೆ ರೂಪಗೊಳ್ಳಲಿದೆ. ಜೊತೆಗೆ ವಿಶಿಷ್ಟ ಗ್ರಂಥಾಲಯ, ಅತಿಥಿ ಗೃಹ ಹಾಗೂ ಉದ್ಯಾನ ನಿರ್ಮಾಣ ಹಂತದಲ್ಲಿವೆ.
ಸ್ವಯಂ ಸ್ವಾತಂತ್ರ್ಯ ಘೋಷಿಸಿಕೊಂಡ ಈಸೂರು ಗ್ರಾಮ, ಸದೈವ ನಮಗೆ ಪ್ರೇರಣೆ ನೀಡುವ, ಪಾವನ ನೆಲ. ತೀರ್ಥ ಕ್ಷೇತ್ರ.
‘ದೇಖೋ ಅಪ್ನಾ ದೇಶ್; ಪೀಪಲ್ಸ್ ಚಾಯ್ಸ್ನಲ್ಲಿ (https://innovateindia.mygov.in/dekho-apna-desh/login) ನಾವೆಲ್ಲರೂ ಈಸೂರನ್ನು ನಮೂದಿಸೋಣ. ಒಮ್ಮೆ ನಮ್ಮ ಮಕ್ಕಳಿಗೆ ಆ ನೆಲದ ಮಣ್ಣನ್ನು ಸೋಕಿಸೋಣ.
ಸಹಕಾರ: ಅಕ್ಷತಾ ವಿಜಯಕುಮಾರ ಬಳಿಗಾರ, ಶಿವಮೊಗ್ಗ.
ಚಿತ್ರ ಕೃಪೆ: ಲಿಂಗರಾಜ ಹೊಸಮನಿ, ಶಿವಮೊಗ್ಗ.