ಒಬ್ಬ ತಪಸ್ವಿ ಸಾಧಕ, ಸಂಗೀತದ ಸಂಶೋಧಕ, ತತ್ತ್ವಶಾಸ್ತ್ರದ ಪರಿಕಲ್ಪನೆಗಳ ಅನ್ವೇಷಕ ಅಥವಾ ಪುರಾತತ್ತ್ವಜ್ಞರಿಗೆ ಪ್ರಿಯವಾದ ಕಲ್ಲು, ಶಿಲ್ಪ, ಶಾಸನ ಮಡಕೆಯ ಚೂರು, ಪುರಾತನ ಮಣಿಯ ಸರ – ಇವುಗಳನ್ನು ಹುಡುಕಿಕೊಂಡು ಯಾರಾದರೂ ಜಗತ್ತಿನಾದ್ಯಂತ ನಡೆದಿರುವ ಬೌದ್ಧಿಕ ಕೆಲಸಗಳನ್ನು ಗಮನಿಸಿದರೆ ಭಾರತದ ವಿರಾಡ್ ದರ್ಶನವಾಗುತ್ತದೆ. ಆ ದಿಕ್ಕಿನಲ್ಲಿ ಒಂದು ಪುಟ್ಟ ಪ್ರಯತ್ನವನ್ನು ಮುಂದೆ ಮಾಡಲಾಗಿದೆ.
ನನ್ನ ನೆಚ್ಚಿನ ಇತಿಹಾಸಕಾರರಾದ ಸ್ವರ್ಗೀಯ ಸೀತಾರಾಮ್ ಗೋಯಲ್ ಅವರ ‘ಹಿಂದೂ ದೇವಾಲಯಗಳು ಮತ್ತು ಅವುಗಳಿಗೆ ಏನಾಯಿತು?’ ಪುಸ್ತಕದ ಎರಡನೇ ಸಂಪುಟವನ್ನು ತಿರುವಿಹಾಕುತ್ತಿದ್ದೆ. ಅದರಲ್ಲಿ ಒಂದು ಅಧ್ಯಾಯ ಕಣ್ಣಿಗೆ ಬಿತ್ತು. ಅದರ ಹೆಸರು ಇಸ್ಲಾಂಪೂರ್ವದ ಅರಬ್ ದೇಶ (ಪುಟ ೨೬೪-೨೭೨). ಅರಬ್ ದೇಶ ಮೊದಲು ಬಹುದೇವತಾ ಉಪಾಸಕರಿಂದ ಕೂಡಿತ್ತು. ಇಸ್ಲಾಮಿನ ‘ಅಲ್ಲಾಹು’ ಪರಿಕಲ್ಪನೆ ಮೂಡುವುದಕ್ಕಿಂತ ಮುಂಚೆ ಅಂದರೆ ಪ್ರವಾದಿ ಮಹಮ್ಮದರು ಅಬ್ರಹಾಂ ಎಂಬ ಹೆಸರನ್ನು ಹೇಳುವುದಕ್ಕಿಂತ ಮುಂಚೆ ಅವರಿಗೆ ಆ ಕುರಿತು ಏನೂ ಗೊತ್ತಿರಲಿಲ್ಲ. ಸ್ವತಂತ್ರ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದ್ದ ಸ್ತ್ರೀ-ಪುರುಷರು ಪ್ರವಾದಿ ಮಹಮ್ಮದರು ಮತ್ತು ಅವರ ಸೈನ್ಯವನ್ನು ಬೌದ್ಧಿಕವಾಗಿ ಮತ್ತು ಶಾರೀರಿಕವಾಗಿ ಎದುರಿಸಿದ ಸಂಗತಿಯನ್ನು ಹೇಳುತ್ತಾರೆ. ‘ಒಂದು ನಾಗರಿಕತೆಯ ಗುಣಮಟ್ಟವನ್ನು ಅದು ತನ್ನ ಸ್ತ್ರೀಯರಿಗೆ ಕೊಟ್ಟಿರುವ ಸ್ಥಾನಮಾನದ ಮೇಲೆ ನಿರ್ಧರಿಸುವುದಾದರೆ ಪ್ರಾಚೀನ ಅರಬ್ ಸಂಸ್ಕೃತಿಯಲ್ಲಿ ಅದು ಅತ್ಯುನ್ನತವಾಗಿತ್ತು’ – ಎಂಬುದು ಗೋಯಲ್ ಅವರ ಅಭಿಪ್ರಾಯ.
ತನ್ನ ಸ್ವದೇಶೀ ಸ್ವಕೀಯ ಸಂಸ್ಕೃತಿಯೊಂದಿಗೆ ಸುತ್ತಮುತ್ತಲಿನ ಪ್ರಾಚೀನ ದೇಶಗಳಾಗಿದ್ದ ಬೆಬಿಲೋನಿಯ, ಅಸ್ಸಿರಿಯ, ಈಜಿಪ್ಟ್, ಹೀಬ್ರೂಗಳು, ಗ್ರೀಕರು ಮತ್ತು ರೋಮನ್ರಿಂದಲೂ ಅದು ಉಪಕೃತವಾಗಿತ್ತು. ಈಗ ನಮ್ಮ ಮುಂದಿರುವ ಪ್ರಶ್ನೆ, ಈ ಪ್ರಾಚೀನ ಸಂಸ್ಕೃತಿಗಳಿಗೂ ಸನಾತನ ಭಾರತೀಯ ಹಿಂದೂ ಸಂಸ್ಕೃತಿಗೂ ಏನಾದರೂ ಸಂಬಂಧವಿದೆಯೇ ಎಂಬುದು.
ಕಳೆದ ೧೫೦ ವರ್ಷಗಳಲ್ಲಿ ಪ್ರಾಚೀನ ಭಾರತದ ಇತಿಹಾಸವನ್ನು ಬರೆದಿರುವ ಲೇಖನ-ಪುಸ್ತಕಗಳಲ್ಲಿ ಪ್ರಮುಖ ಧಾರೆಗಳನ್ನು ವೈಚಾರಿಕವಾಗಿ ಮತ್ತು ದಾರ್ಶನಿಕವಾಗಿ ಕಾಣಬಹುದು. ಈ ದಾರಿಯ ಲೇಖಕರು ಭರತವರ್ಷ ಖಾಲಿ ಹೊಲದಂತೆ ಇತ್ತು; ಇಲ್ಲಿಗೆ ಗ್ರೀಕರು, ಪಾರ್ಥಿಯನ್ನರು, ಕುಶಾನರು, ಹೂಣರು, ಶಕರು, ಯವನರು, ಪಠಾಣರು, ತುರುಕರು, ಮೊಘಲರು, ಡಚ್ಚರು-ಫ್ರೆಂಚರು-ಪೋರ್ಚುಗೀಸರು ಮತ್ತು ಬ್ರಿಟಿಷರು ಬಂದು ಅದನ್ನು ಸಂಸ್ಕೃತಿಸಂಪನ್ನಗೊಳಿಸಿದರು ಎಂದು ಒಟ್ಟಾರೆ ಅರ್ಥ ಬರುವಂತೆ ಇತಿಹಾಸಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಜೇಮ್ಸ್ ಮಿಲ್ ಈ ಗುಂಪಿನ ಪ್ರತಿನಿಧಿಗಳಲ್ಲೊಬ್ಬರು. ಆತ ಬರೆದ ಭಾರತದ ಇತಿಹಾಸ ಸಂಬಂಧಿತ ಪುಸ್ತಕಗಳು ಹಲವಾರು ದಶಕಗಳವರೆಗೆ ಪ್ರಶ್ನಾತೀತ ಅಧಿಕೃತ ಇತಿಹಾಸದ ಗ್ರಂಥವಾಗಿ, ಶಾಲಾ-ಕಾಲೇಜುಗಳಿಂದ ಐಸಿಎಸ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೂ ಪ್ರಮುಖ ಆಕರಗ್ರಂಥವಾಗಿತ್ತು. ಜೇಮ್ಸ್ ಮಿಲ್, ಕಾರ್ಲ್ ಮಾರ್ಕ್ಸ್ ಮತ್ತು ಮೆಕಾಲೆ ಇವರ ಪ್ರಕಾರ ‘ಬ್ರಿಟಿಷರು ಭಾರತವನ್ನು ಅಳುತ್ತಿರುವುದು ಭಾರತೀಯರ ಸೌಭಾಗ್ಯ’ ಎಂಬುದನ್ನು ಹಿಂದೂ ದಾರ್ಶನಿಕ ರಾಮ್ ಸ್ವರೂಪ್ ಗುರುತಿಸಿದ್ದಾರೆ.
– (ಹಿಂದೂಯಿಸಂ: ಸಮ್ ರಿವ್ಯೂಸ್ ಅಂಡ್ ರೆಫ್ಲೆಕ್ಷನ್ಸ್, ಪುಟ ೪೨ ಮತ್ತು ೧೧೧).
ಇನ್ನೊಂದು ದಾರಿಯ ಲೇಖಕರು ಭಾರತ ಹಿಮಾಲಯ, ವಿಂಧ್ಯ, ಅರಾವಳಿ ಮುಂತಾದ ಪರ್ವತಗಳಿಂದ ಹಾಗೂ ಸರಸ್ವತಿ ಸಿಂಧು ಗಂಗಾ ಕಾವೇರಿ ಮುಂತಾದ ಪವಿತ್ರ ನದಿಗಳಿಂದ ಕೂಡಿರುವ ಪ್ರಾಚೀನ ರಾಷ್ಟ್ರ ಎಂದು ಗುರುತಿಸಿದ್ದಾರೆ. “ತಂ ದೇವನಿರ್ಮಿತಂ ದೇಶಂ” ಅಂದರೆ ಭಗವಂತನೇ ನಿರ್ಮಾಣ ಮಾಡಿರುವ ಪುಣ್ಯಭೂಮಿ, ಪವಿತ್ರ ನೆಲ ಭಾರತ – ಎಂಬುದು ಇಂತಹ ಲೇಖಕ-ಲೇಖಕಿಯರ, ಚಿಂತಕರ ಬರವಣಿಗೆಗಳ ಧ್ವನಿ. ಡಾ. ಆನಂದ ಕುಮಾರಸ್ವಾಮಿ, ಡಾ. ರಘುವೀರ, ಡಾ. ಲೋಕೇಶ್ ಚಂದ್ರ ಮತ್ತು ಡಾ. ಎಸ್ ಶ್ರೀಕಂಠಶಾಸ್ತ್ರಿ -ಮುಂತಾದವರು ಈ ಮಾರ್ಗದ ಉತ್ತಮ ಪ್ರತಿನಿಧಿಗಳು. ಭಾರತವು ಅದರ ರಾಜಕೀಯ ಸ್ಥಿತಿಯಲ್ಲಿ ಜಗತ್ತಿಗೆ ಯಾವ ಕೊಡುಗೆಗಳನ್ನು ನೀಡಿದೆ ಎಂಬುದನ್ನು ರಾಜಕೀಯಶಾಸ್ತ್ರ, ಅಂತರರಾಷ್ಟ್ರೀಯ ತೌಲನಿಕ ರಾಜಕೀಯಶಾಸ್ತ್ರಗಳು ತಿಳಿಸುತ್ತವೆ. ಆದರೆ ಪುರಾಣಗಳು, ಪುರಾತತ್ತ್ವ ಸಂಶೋಧನೆಗಳು, ಲಲಿತಕಲೆ ಮತ್ತು ಸಾಹಿತ್ಯ ಚರಿತ್ರೆಗಳು ಭರತವರ್ಷ ಭರತಖಂಡ ಮತ್ತು ಜಂಬೂದ್ವೀಪ – ಈ ಕಲ್ಪನೆಗಳನ್ನು ನಮ್ಮ ಮುಂದಿಟ್ಟಿವೆ. ಭಾರತದ ಜಾಗತಿಕ ವಿಸ್ತಾರವನ್ನು ಕುರಿತಂತೆ ಪರಿಶೀಲಿಸಲು ಇವು ಸಹಾಯಕ.
ಒಬ್ಬ ತಪಸ್ವಿ ಸಾಧಕ, ಸಂಗೀತದ ಸಂಶೋಧಕ, ತತ್ತ್ವಶಾಸ್ತ್ರದ ಪರಿಕಲ್ಪನೆಗಳ ಅನ್ವೇಷಕ ಅಥವಾ ಪುರಾತತ್ತ್ವಜ್ಞರಿಗೆ ಪ್ರಿಯವಾದ ಕಲ್ಲು, ಶಿಲ್ಪ, ಶಾಸನ, ಮಡಕೆಯ ಚೂರು, ಪುರಾತನ ಮಣಿಯ ಸರ – ಇವುಗಳನ್ನು ಹುಡುಕಿಕೊಂಡು ಯಾರಾದರೂ ಜಗತ್ತಿನಾದ್ಯಂತ ನಡೆದಿರುವ ಬೌದ್ಧಿಕ ಕೆಲಸಗಳನ್ನು ಗಮನಿಸಿದರೆ ಭಾರತದ ವಿರಾಡ್ ದರ್ಶನವಾಗುತ್ತದೆ. ಆ ದಿಕ್ಕಿನಲ್ಲಿ ಒಂದು ಪುಟ್ಟ ಪ್ರಯತ್ನವನ್ನು ಮುಂದೆ ಮಾಡಲಾಗಿದೆ.
* * *
ಈಗ ಕೃತಕವಾಗಿ ನಿರ್ಮಾಣಗೊಂಡಿರುವ ವಿಸ್ತಾರವನ್ನು ದಾಟಿ ಹೋದರೆ ಸಿಗುವ ದೇಶ ಆಫಘಾನಿಸ್ತಾನ. ಪ್ರಾಚೀನ ಕಾಲದಲ್ಲಿ ಇದಕ್ಕೆ ಗಾಂಧಾರ ದೇಶ ಎಂದು ಹೆಸರಿತ್ತು. ಕಂದಹಾರ ಅಥವಾ ಕಾಂದಹಾರ ಎಂಬ ಈಗಿನ ರೂಪಕ್ಕೆ ಇದೇ ಮೂಲ.
ವೈದಿಕ ಯುಗ: ಸರಸ್ವತಿ-ಸಿಂಧು ನಾಗರಿಕತೆಯ ಕಾಲದಿಂದಲೂ ಆಫಘಾನಿಸ್ತಾನವು ಪ್ರಾಚೀನ ಹಿಂದುಸ್ತಾನದ ಭಾಗವಾಗಿತ್ತು. ಋಗ್ವೇದದಲ್ಲಿ ಈ ಭಾಗದ ನದಿಗಳ ಉಲ್ಲೇಖವಿದೆ. ವೇದದ ಒಂದು ಕಥೆಯ ಪ್ರಕಾರ, ಒಮ್ಮೆ ಪಣಿಗಳು ಹಸುಗಳನ್ನು ಒಯ್ದು ಗುಹೆಯಲ್ಲಿ ಬಚ್ಚಿಡುತ್ತಾರೆ. ಆಗ ಸರಮಾ ಎಂಬ ನಾಯಿ ರಸಾ ಎಂಬ ನದಿಯನ್ನು ದಾಟಿ ಬರುತ್ತದೆ. ಆ ನದಿ ಇಂದಿನ ಆಫಘಾನಿಸ್ತಾನದಲ್ಲಿ ಇದೆ. ವೇದದಲ್ಲಿ ಬರುವ ಕುಭಾ ಎಂಬ ನದಿಯೇ ಕಾಬುಲ್ ನದಿ ಎಂಬುದು ವಿದ್ವಾಂಸರ ಅಭಿಪ್ರಾಯ.
ಮಹಾಭಾರತದ ಗಾಂಧಾರಿ ಮತ್ತು ಸಹೋದರ – ಇವರು ಇಲ್ಲಿ ಪ್ರಸ್ತಾವಿಸಿರುವ ಗಾಂಧಾರದಿಂದ ಹಸ್ತಿನಾವತಿಗೆ ಬಂದವರು.
ಮಗಧ ಸಾಮ್ರಾಜ್ಯದ ಪೂರ್ವಕಾಲದಲ್ಲಿದ್ದ ಭಾರತದ ಹದಿನಾರು ಮಹಾಜನಪದಗಳಲ್ಲಿ ಈ ಗಾಂಧಾರವು ಒಂದು.
ಭಾರತ ಮತ್ತು ಗ್ರೀಕ್ ಸಂಬಂಧ: ಇದು ಗ್ರೀಕರ ಅಲೆಗ್ಸಾಂಡರ್ನ ದಾಳಿಯ ಚಿತ್ರಣವನ್ನು ಕಂಡು ಅದಕ್ಕೆ ಪ್ರತ್ಯಾಕ್ರಮಣವನ್ನು ನೀಡಿರುವ ವೀರಭೂಮಿ. ಅವನ ನಂತರದ ಸೆಲ್ಯೂಕಸ್ ಕಾಲದಲ್ಲಿ ಅವನ ವಶದಲ್ಲಿದ್ದ ಈ ನೆಲ, ಅವನು ತನ್ನ ಮಗಳನ್ನು ಚಂದ್ರಗುಪ್ತನಿಗೆ ವಿವಾಹದ ಮೂಲಕ ನೀಡಿ ಸಂಧಿ ಮಾಡಿಕೊಂಡ ಮೇಲೆ ಗಾಂಧಾರದ ಸಾಕಷ್ಟು ಭಾಗಗಳು ಮಹಾನ್ ಮೌರ್ಯ ಸಾಮ್ರಾಜ್ಯದ ಅಂಗವಾದವು. ಈ ಸಂದರ್ಭದಲ್ಲಿ ಚಂದ್ರಗುಪ್ತನು ಗ್ರೀಕರ ಈ ಪ್ರತಿನಿಧಿಗೆ ೫೦೦ ಆನೆಗಳನ್ನು ನೀಡಿದನು ಎಂಬುದಾಗಿ ಗ್ರೀಕ್ ಇತಿಹಾಸಕಾರ ಸ್ಟಾçಬೋ ಹೇಳಿದ್ದಾನೆ.
ಮುಂದಿನ ಹಂತ: ಮುಂದೆ ಕೆಲಕಾಲ ಗ್ರೀಕೋ-ಭಾರತೀಯರು ಈ ಪ್ರದೇಶವನ್ನು ಆಳಿ ಅಲ್ಲಿ ಗ್ರೀಕ್ ಮತ್ತು ಹಿಂದೂ ಸಮ್ಮಿಶ್ರ ಸಂಸ್ಕೃತಿ ಟಿಸಿಲು ಒಡೆಯಿತು.
ಮೊದಲು ವಿದೇಶೀಯರಾಗಿ ಬಂದು ಅನಂತರ ವೈಷ್ಣವ ಮತ್ತು ಬೌದ್ಧ ಸಂಪ್ರದಾಯವನ್ನು ಅಪ್ಪಿಕೊಂಡವರು ಕುಶಾನರು. ಆ ವಂಶದ ರಾಜ ಹವಿಷ್ಕನ ಕಾಲದಲ್ಲಿ ಆಫಘಾನಿಸ್ತಾನಕ್ಕೆ ಒಂದು ರಾಜಕೀಯ ಸ್ವರೂಪ ಬಂತು. ಈ ಪ್ರದೇಶದಲ್ಲಿ ದೊರೆತಿರುವ ವಿಗ್ರಹಗಳು ಇಲ್ಲಿ ಹಿಂದೂ ರಾಜರು ಆಳ್ವಿಕೆ ಮಾಡಿದ್ದನ್ನು ಸಾಬೀತುಪಡಿಸುತ್ತವೆ.
ಕಾಲಪ್ರವಾಹದ ಅನೇಕ ಭಯಂಕರ ಸಾಂಸ್ಕೃತಿಕ ಹೊಡೆತಗಳನ್ನು ತಿಂದ ಬಳಿಕವೂ ಈ ಪ್ರದೇಶದಲ್ಲಿ ಪ್ರಾಚೀನ ವೈದಿಕ ಮತ್ತು ಬೌದ್ಧ ಸಂಸ್ಕೃತಿಯ ಅವಶೇಷಗಳು ಉಳಿದಿವೆ. ಅವುಗಳಲ್ಲಿ ಪ್ರಾಚೀನ ಪುರಾತತ್ತ್ವ ನೆಲೆಗಳು, ನಾಣ್ಯಗಳು, ವಿಗ್ರಹಗಳು ಮತ್ತು ಇಲ್ಲಿ ಜನ್ಮತಳೆದ ಕೆಲವು ದಾರ್ಶನಿಕರ ನೆನಪುಗಳು ಸೇರಿಕೊಂಡಿವೆ. ಅವುಗಳನ್ನು ಕ್ರಮವಾಗಿ ಮುಂದೆ ನೋಡಬಹುದು.
ಪ್ರಾಚೀನ ಪುರಾತತ್ತ್ವ ನೆಲೆಗಳು: ಈ ದೇಶದ ಕಂದಹಾರ ಪ್ರದೇಶದಲ್ಲಿರುವ ಮುಂಡಿಗಕ್ ಹಾಗೂ ಶೋರ್-ತು-ಗೈ ಸ್ಥಳಗಳಲ್ಲಿ ಪ್ರಾಚೀನ ವೈದಿಕ ಸಿಂಧೂ-ಸರಸ್ವತಿ-ಹರಪ್ಪ ಸಂಸ್ಕೃತಿಯ ಅವಶೇಷಗಳನ್ನು ಪುರಾತತ್ತ್ವ ವಿಭಾಗದವರು ಸಂಶೋಧನೆ ಮಾಡಿದ್ದಾರೆ. ಇಲ್ಲಿ ಸಿಂಧೂ ಮುದ್ರಿಕೆಗಳ ಜೊತೆಗೆ ಹಾವು, ಗೂಳಿ ಇರುವ ಚಿಹ್ನೆಗಳು ದೊರೆತಿವೆ.
ವಿಗ್ರಹಗಳು: ವಿದ್ಯಾಧಿದೇವತೆಯಾದ ಗಣೇಶನ ವಿಗ್ರಹ ಈಗಿನ ಆಫಘಾನಿಸ್ತಾನದ ಗರ್-ದೆಸ್ ಪ್ರದೇಶದಲ್ಲಿ ದೊರೆತಿದೆ. ಇಡೀ ಭಾರತದಲ್ಲಿ ದೊರೆತಿರುವ ಅತಿ ಪ್ರಾಚೀನ ಗಣೇಶನ ಮೂರ್ತಿ ಇದು ಎಂಬುದಾಗಿ ಪುರಾತತ್ತ್ವಶಾಸ್ತ್ರಜ್ಞ ಎಂ.ಕೆ. ಧವಳಿಕರ್ ಅಭಿಪ್ರಾಯಪಡುತ್ತಾರೆ. ಈ ಸುಂದರ ಮೂರ್ತಿ ಗಾಂಧಾರದಲ್ಲಿ ಹಿಂದೂ ಸಂಸ್ಕೃತಿಯ ಅಸ್ತಿತ್ವಕ್ಕೆ ಬಲವಾದ ಸಾಕ್ಷಿಯಾಗಿದೆ. ಪ್ರಾಗೈತಿಹಾಸಿಕ ವಿಷಯಗಳಲ್ಲಿ ಸುಪ್ರಸಿದ್ಧ ವಿದ್ವಾಂಸರಾದ ಡಾ|| ಅ. ಸುಂದರ ಅವರು ಈ ಗಣಪತಿ ಮೂರ್ತಿಗೂ ಕರ್ನಾಟಕದ ಕರಾವಳಿಯ ಇಡುಗುಂಜಿ ಗಣೇಶನಿಗೂ ಸಾಮ್ಯತೆಗಳಿರುವ ಬಗ್ಗೆ ಗಮನ ಸೆಳೆದಿದ್ದಾರೆ.
ಮುಂದೆ ಹಿಂದೂಕುಶ್ ಕಣಿವೆಯ ಮೂಲಕ ಸಾಗಿಬಂದ ಇಸ್ಲಾಮಿನ ದಾಳಿಕೋರರು ಹಲವಾರು ಹಿಂದೂ ಮತ್ತು ಬೌದ್ಧ ದೇವಾಲಯ ಶಿಲ್ಪಗಳನ್ನು ನಾಶಪಡಿಸಿದರು. ಅವರಲ್ಲಿ ಘಜ್ನಿ, ಘೋರಿ, ಮೊಘಲರು ಸೇರಿದ್ದಾರೆ. ಅವರಿಗೆಲ್ಲ ಪ್ರಾಚೀನ ಹಿಂದೂ ಆಫಘಾನಿಸ್ತಾನವು ಯುದ್ಧದ ಆಯಕಟ್ಟಿನ ನೆಲೆಯಾಗಿ ಹೋಯಿತು.
ಗಣೇಶನ ವಿಗ್ರಹ ಮುಂದೆ ಕಾಬೂಲಿಗೆ ಸ್ಥಳಾಂತರಗೊಂಡು ಅಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಅದನ್ನು ಪೂಜಿಸುತ್ತಿದ್ದರು. ಈ ಪ್ರದೇಶವನ್ನು ಆಳಿದ ಶಾಹಿ ರಾಜರು ಈ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಈ ಕೆಲಸ ಮಾಡಿದ ರಾಜ ಶಾಹಿ – ಕಿಂಗಲ.
ಕಾಬೂಲಿನಿಂದ ಉತ್ತರಕ್ಕೆ ೧೦ ಮೈಲುಗಳು ದೂರದಲ್ಲಿ ಶಂಕರ ಧರ್ ಎಂಬಲ್ಲಿ ಗಣೇಶನ ಕಲ್ಲಿನ ವಿಗ್ರಹ ಸಿಕ್ಕಿದೆ. ಇದೇ ಸ್ಥಳದಲ್ಲಿ ಸೂರ್ಯಭಗವಾನ್ ಮತ್ತು ಶಿವನ ವಿಗ್ರಹ ದೊರೆತಿದೆ. ತಂಡೋಪತಂಡವಾಗಿ ವಿಗ್ರಹಭಂಜಕ ರಾಜರು ಹಾಗೂ ಇಸ್ಲಾಮಿನ ಅನುಯಾಯಿಗಳಾದ ವಿಗ್ರಹಭಂಜಕರು ಈ ಮಾರ್ಗವಾಗಿ ಬಂದ ನಂತರವೂ ಹೀಗೆ ಒಂದಷ್ಟು ಪ್ರಾಚೀನ ವೈದಿಕ ಮೂರ್ತಿಗಳು ಕಾಲ ಪ್ರವಾಹದಲ್ಲಿ ಉಳಿದುಕೊಂಡಿವೆ!
ಭಾರತದ ಮೇಲೆ ಅಲೆಕ್ಸಾಂಡರ್ ದಾಳಿ ಮಾಡಿದ ಮತ್ತು ಅದೊಂದು ದಾಳಿಯಾಗಿರದೆ ಕೇವಲ ಬಂದು ಹೋಗುವಿಕೆ ಮಾತ್ರವಾಗಿತ್ತು ಎಂಬ ಎರಡು ದೃಷ್ಟಿಗಳನ್ನು ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ತ್ವ ವಿಶ್ವಕೋಶವು ಸಾಧಾರವಾಗಿ ದಾಖಲಿಸಿದೆ. ಇಂತಹ ಅಲೆಕ್ಸಾಂಡರ್ ಮಹಾನ್ ಚಕ್ರವರ್ತಿ ಆಗಿದ್ದನೇ ಇಲ್ಲವೇ ಎಂಬುದು ಕೂಡ ಪ್ರಸ್ತುತ ಹಲವು ಇತಿಹಾಸಕಾರರು ಕೈಗೆತ್ತಿಕೊಂಡಿರುವ ಪ್ರಶ್ನೆ. ಅದನ್ನು ಬೇರೊಂದು ಸಂದರ್ಭದಲ್ಲಿ ಪರಿಶೀಲಿಸಬಹುದು. ಇಲ್ಲಿ ಪ್ರಸ್ತುತವಾದ ವಿಷಯವೆಂದರೆ: ಈ ಪ್ರದೇಶವನ್ನು ಅಲೆಕ್ಸಾಂಡರ್ಗಿಂತ ಮೊದಲು ಕೂಡ ಹಲವರು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದರು. ತಾತ್ಕಾಲಿಕವಾಗಿ ಅಲೆಕ್ಸಾಂಡರ್ ಇಲ್ಲಿ ಗ್ರೀಕರನ್ನು ಬೇರೂರಿಸಲು ಪ್ರಯತ್ನಿಸಿದ್ದ. ಆದರೆ ಅವನ ನಂತರ ಬಂದ ಸೆಲ್ಯೂಕಸ್ ನಿಕೇಟರ್ ಮಗಧದ ಚಂದ್ರಗುಪ್ತನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಟ್ಟು ಗ್ರೀಕ್ ಮತ್ತು ಭಾರತೀಯರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದ್ದ. ಗ್ರೀಕರು ಈಗ ಹಲವಾರು ಇತಿಹಾಸಕಾರರು ವಾದಿಸುವಂತೆ ಮಧ್ಯಕಾಲೀನ ಮತ್ತು ಆಧುನಿಕ ಯೂರೋಪ್ ಸಂಸ್ಕೃತಿಯ ಜನಕರು ಎಂಬುದು ನಿಜವಾದರೂ, ಅವರು ಭಾರತೀಯ ಹಿಂದೂ ಸಂಸ್ಕೃತಿಯಿಂದ ಪೂರ್ಣ ಪ್ರತ್ಯೇಕವಾಗಿ ಬೆಳೆದ ಸಂಸ್ಕೃತಿಯೆ? – ಎಂಬ ಮುಖ್ಯ ಪ್ರಶ್ನೆಯನ್ನು ಕೋಟ ವೆಂಕಟಾಚಲಂ, ವಾಮದೇವಶಾಸ್ತ್ರಿ, ರಾಮೇಶ್ವರ ಮಿಶ್ರ ಪಂಕಜ್, ಕುಸುಮಲತಾ ಕೇಡಿಯಾ ಅವರ ಬರವಣಿಗೆಗಳಲ್ಲಿ ಎತ್ತಿದ್ದಾರೆ. ಒಂದು ಮಾತು ಸ್ಪಷ್ಟ. ಗಾಂಧಾರ ದೇಶ ೩,೦೦೦ ವರ್ಷಗಳಿಗೂ ಹೆಚ್ಚು ಕಾಲ ಹಿಂದೂ ಸಂಸ್ಕೃತಿಯನ್ನು ತನ್ನ ಗರ್ಭದಲ್ಲಿ ಕಾಪಾಡಿಕೊಂಡು ಬಂದಿತ್ತು. ಇವರನ್ನು “ದೈವಪುತ್ರ ಶಾಹಿ ಶಹನ್ ಶಾಹಿ ಶಕ ಮುರುಂ ದಹಿ” ಎಂದು ಗುಪ್ತವಂಶದ ಸಾಮ್ರಾಟ್ ಸಮುದ್ರಗುಪ್ತನ ಅಲಹಾಬಾದ್ ಪ್ರಶಸ್ತಿ ಶಾಸನವು ಗುರುತಿಸಿದೆ.
* * *
ಗಾಂಧಾರದ ಬೌದ್ಧಪರಂಪರೆ: ಆಫಘಾನಿಸ್ತಾನ ಭಾರತೀಯ ಮೂಲದ ಬೌದ್ಧಪರಂಪರೆಯ ಹಲವಾರು ವಿಸ್ಮಯಗಳಿಗೆ ಕಾರಣವಾಗಿದೆ. ಇದರಲ್ಲಿ ಶಾಸನ ಶಿಲ್ಪಕಲೆ ಮತ್ತು ಭಾಷೆ ಸಾಹಿತ್ಯ ಸೇರಿವೆ.
ಏಳನೆಯ ಶತಮಾನದಲ್ಲಿ (೬೩೦ ಸಾಮಾನ್ಯ ಶಕ) ಚೀನಾ ದೇಶದ ಯಾತ್ರಿಕ ಮತ್ತು ಭಾರತೀಯ ವಿದ್ಯಾರ್ಥಿ ಹ್ಯೂಯನ್ತ್ಸಾಂಗ್ ಗಾಂಧಾರದ ಮೂಲಕ ಭಾರತದೊಳಕ್ಕೆ ಪ್ರಯಾಣ ಮಾಡಿದ್ದ. ಅವನ ಕಾಲದಲ್ಲಿ ಕಾಬೂಲ್ ಕಣಿವೆಯು ಕಪೀಶ ಸಾಮ್ರಾಜ್ಯದ ಅಂಗವಾಗಿತ್ತು. ಕಪೀಶ ಕಾಬುಲ್ ನಗರದಿಂದ ೬೦ ಮೈಲು ದೂರದಲ್ಲಿರುವ ಪ್ರದೇಶ. ಈ ಭಾಗವನ್ನು ವೈದಿಕ ಧರ್ಮವನ್ನು ಅನುಸರಿಸುವ ಶಾಹಿ-ಕಿಂ ಗಲ್ ಎಂಬ ವೈದಿಕ ಕ್ಷತ್ರಿಯ ರಾಜನು ಆಳುತ್ತಿದ್ದ. ಸುತ್ತಮುತ್ತಲಿನ ೧೦ ಸಂಸ್ಥಾನಗಳನ್ನು ಅವನು ಅಧೀನದಲ್ಲಿ ಇಟ್ಟುಕೊಂಡಿದ್ದ. ಆ ಸಮಯದಲ್ಲಿ ಈ ಪ್ರದೇಶದಲ್ಲಿ ಬೌದ್ಧಧರ್ಮವು ಇಳಿಮುಖವಾಗಿ, ವೈದಿಕಧರ್ಮವು ಏರುಗತಿಯನ್ನು ಹೊಂದುತ್ತಿತ್ತು.
ಸಾಮಾನ್ಯ ಶಕ ೬೫೩-೫೪ರ ವೇಳೆಗೆ ಪ್ರವಾದಿ ಮಹಮದ್ರಿಂದ ಸ್ಥಾಪಿತಗೊಂಡಿದ್ದ ಬೇಟೆಗಾರ ಮತ ಇಸ್ಲಾಮಿನ ಕಣ್ಣು ಗಾಂಧಾರ-ಕಪೀಶಗಳ ಕಡೆ ತಿರುಗಿತ್ತು. ಜಮೀನುದಾರವಾರ, ಝರಾಂಸ ಇವು ಇಸ್ಲಾಮಿನ ವಶಕ್ಕೆ ಬಂದವು. ಅಂದರೆ ಸರಸ್ವತಿ-ಸಿಂಧು ನಾಗರಿಕತೆಯ ಕಾಲದಿಂದ ಸಾಮಾನ್ಯ ಶಕ ೬೫೩ರ ತನಕ ಆಫಘಾನಿಸ್ತಾನ ಭಾರತೀಯ ಹಿಂದೂ ಸಂಸ್ಕೃತಿಯ ನೆಲೆಮನೆಯಾಗಿತ್ತು ಎಂಬುದು ನಿಸ್ಸಂಶಯವಾಗಿ ತಿಳಿಯುತ್ತದೆ.
ಮುಂದೆ ಸಾಮಾನ್ಯ ಶಕ ೭೦೦ರಿಂದ ೧೦೦೦ದವರೆಗೆ ಕಾಬೂಲಿನಲ್ಲಿ ತುರುಕರು ಮತ್ತು ಕ್ಷತ್ರಿಯ ವೈದಿಕ ವಂಶದವರು ಸಮಾನಾಂತರವಾಗಿ ರಾಜ್ಯವಾಳಿದರು. ಇದರೊಂದಿಗೆ ಬ್ರಾಹ್ಮಣ ವೈದಿಕರು ಸಹ ರಾಜ್ಯಭಾರ ಮಾಡಿದರು. ತುರುಕರು ಮತ್ತು ಈ ಇಬ್ಬರು ವೈದಿಕ ವಂಶದವರು ತಮ್ಮನ್ನು ‘ಶಾಹಿ’ ಎಂಬ ಬಿರುದಿನಿಂದ ಗುರುತಿಸಿಕೊಳ್ಳುತ್ತಿದ್ದರು. ಆದ್ದರಿಂದ ಶಾಹಿ ಎಂದಾಕ್ಷಣ ಅದು ಇಸ್ಲಾಮಿನ ಪ್ರಭಾವವೇ ಆಗಬೇಕೆಂದು ನಿಯಮವಿಲ್ಲ.
ಸಾಮಾನ್ಯ ಶಕ ೯೮೦ರಲ್ಲಿ ಘಜ್ನಿಯ ಸಬ್ಬಕ್ತಗಿನ್ ಈ ಪ್ರದೇಶದ ಮೇಲೆ ಅದು ದಾಳಿ ಮಾಡಿ ಅಲ್ಲಿದ್ದ ಹಿಂದೂ ವೈದಿಕರಾಜ ಜಯಪಾಲ ಶಾಹಿಯನ್ನು ಸೋಲಿಸಿದ ಮೇಲೆ ಅದು ಇಸ್ಲಾಮಿನ ನೇರ ಪ್ರಭಾವಕ್ಕೆ ಒಳಗಾಯಿತು. ಆವೇಳೆಗೆ ಹಿಂದೂ ದೇವಾಲಯಗಳು, ಬೌದ್ಧಮಠಗಳು, ವಿದ್ಯಾಕೇಂದ್ರಗಳು ನಿರ್ಮಾಣಗೊಂಡಿದ್ದು ಆಫಘಾನಿಸ್ತಾನ ಹಿಂದೂ ಸಂಸ್ಕೃತಿಯ ಬಲಿಷ್ಠ ಚಿಹ್ನೆಗಳನ್ನು ಹೊಂದಿತ್ತು. ಮುಂದೆ ಅವರ ಪವಿತ್ರ ಗ್ರಂಥದ ಆದೇಶದಂತೆ, ಪರಕೀಯ ಹಿಂದೂಗಳ ಶ್ರದ್ಧಾಕೇಂದ್ರಗಳು, ವ್ಯಾಪಾರ-ವಿದ್ಯಾ ಕೇಂದ್ರಗಳ ಮೇಲೆ ಸತತ ದಾಳಿಗಳು ನಡೆದವು. ಹಿಂದೂಗಳು ಎಡೆಬಿಡದೆ ಈ ಸಂಘರ್ಷಕ್ಕೆ ಎದೆಯೊಡ್ಡಿದರು. ಆದರೆ ಅಂತಿಮವಾಗಿ ಗೆದ್ದಲು ಹುಳು ಬಲಿಷ್ಠ ಮರವನ್ನು ತಿಂದುಹಾಕುವಂತೆ ಅಫಘಾನ್ನಲ್ಲಿ ಹಿಂದೂ ಸಂಸ್ಕೃತಿಯನ್ನು ಇಸ್ಲಾಂ ಒರೆಸಿ ಹಾಕತೊಡಗಿತು.
ಹಳೆಯ ದೇವಾಲಯಗಳ ಮೂರ್ತಿಶಿಲ್ಪಗಳು ಮಣ್ಣಿನೊಳಗೆ ಹೂತುಹೋದವು. ಮುಂದೆ ನಡೆದ (ಅಷ್ಟೇನೂ ತೃಪ್ತಿಕರವಲ್ಲದ) ಆರ್ಕಿಯಾಲಜಿಯ ಉತ್ಖನನದ ಕೆಲಸಗಳಿಂದಾಗಿ ಹಿಂದೂ ಮತ್ತು ಬೌದ್ಧ ಪ್ರಾಚೀನ ಅವಶೇಷಗಳು ಇಂದು ನಮಗೆ ಪ್ರಾಪ್ತವಾಗಿವೆ. ಅವುಗಳಲ್ಲಿ ಕೆಲವು ಕಾಬೂಲಿನ ವಸ್ತುಸಂಗ್ರಹಾಲಯದಲ್ಲಿದ್ದವು, ಇನ್ನು ಕೆಲವು ಯೂರೋಪಿನ ವಸ್ತುಸಂಗ್ರಹಾಲಯಗಳಿಗೆ ಸ್ಥಳಾಂತರವಾದವು. ಯಾವಾಗ ತಾಲಿಬಾನ್ ಉಗ್ರರು ಆಫಘಾನಿಸ್ತಾನವನ್ನು ವಶಪಡಿಸಿಕೊಂಡರೋ ಆಗ ಆಫಘಾನಿಸ್ತಾನದ ಗುಹೆಗಳಲ್ಲಿ ಇರುವ ಸುಂದರವಾದ ಶಿವನ ವರ್ಣಶಿಲ್ಪ ಮತ್ತು ಬುದ್ಧನ ಎತ್ತರದ ವಿಗ್ರಹಗಳು ನಾಶವಾದವು. ಇಲ್ಲಿನ ಗುಹೆಗಳಲ್ಲಿದ್ದ ಭಗವಾನ್ ಬುದ್ಧನ ವಿಗ್ರಹಗಳನ್ನು ಬಾಮಿಯಾನ್ ಬುದ್ಧ ಎಂದು ಕರೆಯಲಾಗುತ್ತಿತ್ತು. ಇಸ್ಲಾಂ ಎಂದರೆ ಶಾಂತಿ ಎಂದು ಈಗಲೂ ಸುಳ್ಳುಪ್ರಚಾರ ಮಾಡುವವರು ಬುದ್ಧನ ವಿಗ್ರಹಗಳಿಗೆ ಆದ ಗತಿಯನ್ನು ಗಮನಿಸುವುದೇ ಇಲ್ಲ.
ಪ್ರಾಚೀನ ಆಫಘಾನಿಸ್ತಾನದ ವಿಷಯದಲ್ಲಿ ವೈದಿಕ ಸಂಸ್ಕೃತಿ ಮತ್ತು ಶಿಲ್ಪಗಳದು ಒಂದು ಕಥೆಯಾದರೆ ಬೌದ್ಧ ಶಿಲ್ಪಕಲೆ ಮತ್ತು ಗ್ರಂಥಕಾರರ ಅಸ್ತಿತ್ವ ಅದೇ ಒಂದು ಪ್ರತ್ಯೇಕ ಅಧ್ಯಾಯ.
(ಸಾಧಾರ)