ನವೆಂಬರ್ ೨೦೧೪ರ `ಉತ್ಥಾನ’ ಸಂಚಿಕೆಯ `ದೀಪ್ತಿ’ಯಲ್ಲಿ ಮೂಡಿಬಂದ ಪಂಚತಂತ, ಮಿತ್ರಭೇದದ ಶ್ಲೋಕದಲ್ಲಿ ಸದ್ಗುಣವಂತರ ಮನಸ್ಸನ್ನು ಶುಭ್ರವಾದ ಜಲಕ್ಕೂ ಮತ್ತು ಸದ್ಗುಣವಂತರನ್ನು ಲೋಕೋಪಕಾರಿಯಾದ ಮೋಡಗಳಿಗೂ ಹೋಲಿಸಿದ ವಿವರಣೆ ಉತ್ತಮ ನೀತಿಪಾಠವಾಗಿದೆ.
ಒಂದು ಒಳ್ಳೆಯ ಕಾರ್ಯವನ್ನು ಸಾಧಿಸುವಾಗ ಅದರ ನಡುವೆ ಬರುವ ಅಡ್ಡಿ-ಆತಂಕಗಳ ಬಗ್ಗೆ ಧೃತಿಗೆಡದೆ ತಾಳ್ಮೆ, ಸಹನೆಯಿಂದ ಸಹಿಸಿಕೊಂಡು ಕಾರ್ಯಪ್ರವೃತ್ತರಾಗಿ ಮುನ್ನಡೆದಾಗ ಯಶಸ್ಸನ್ನು ಕಾಣಬಹುದು .
ಭವಾನಿಶಂಕರ ಚಿನ್ನಪ್ಪನವರ್, ದಾಂಡೇಲಿ
ಡಾ. ಕೆ. ಜಗದೀಶ ಪೈ ಅವರ ವ್ಯಕ್ತಿತ್ತ್ವ ವಿಕಾಸ ಅಂಕಣದಲ್ಲಿ ಪ್ರಕಟವಾದ `ದ್ವೇಷ ದಹಿಸಿ ಪ್ರೇಮಸ್ವರೂಪಿಗಳಾಗೋಣ’ ಚೆನ್ನಾಗಿ ಮೂಡಿಬಂದಿದೆ. ೨೦೧೪ರ ಸೆಪ್ಟೆಂಬರ್ ತಿಂಗಳ `ಉತ್ಥಾನ’ದಲ್ಲಿ ಪ್ರಕಟವಾದ ಎಚ್. ಮಂಜುನಾಥ ಭಟ್ ಅವರ `ನೆಹರು ಬಳುವಳಿಗಳು’ ಲೇಖನದಲ್ಲಿ ನೆಹರು ಮತ್ತು ಪಟೇಲ್‌ರ ಬಗೆಗಿನ ವಿವರಗಳು ಚೆನ್ನಾಗಿ ಮೂಡಿ ಬಂದಿವೆ. ಅದೇ ರೀತಿ ಎಂ.ಬಿ. ಹಾರ್‍ಯಾಡಿ ಅವರ `ಭಾರತದ ಇಂಜಿನಿಯರ್ ವಿಶ್ವೇಶ್ವರಯ್ಯ’ ಲೇಖನದಲ್ಲಿ ಸಾಹಿತ್ಯಗಂಗೆ ಹರಿದಿದ್ದಾಳೆ. ಅಂಥ ಮಹಾನ್ ವ್ಯಕ್ತಿಯ ಪ್ರತಿಮೆ ಸ್ಥಾಪನೆಗೆ ಅಡ್ಡಿ ಪಡಿಸುವವರೂ ಇದ್ದಾರೆ ಎಂದು ತಿಳಿದು ಆಶ್ಚರ್ಯ ಹಾಗೂ ನೋವಾಯಿತು.
೨೦೧೪ರ ಅಕ್ಟೋಬರ್ ತಿಂಗಳ `ಉತ್ಥಾನ’ದಲ್ಲಿ ಪ್ರಕಟವಾದ `ಸುದೃಢ ರಾಷ್ಟ್ರದಿಂದ ಸುಸ್ಥಿರ ಬದುಕು’, `ಸುಸ್ಥಿರ ಅಭಿವೃದ್ಧಿ’ ನಾ. ಕಾರಂತ ಪೆರಾಜೆ ಅವರ `ಅನ್ನದ ಬಟ್ಟಲು ತುಂಬಿಸುತ್ತಿದ್ದ ಸುಸ್ಥಿರ ಕೃಷಿ’, ಮುಖಪುಟ ಲೇಖನ `ಸರಸ್ವತಿಯ ತವರು – ನಾಗಾಯಿ’ ಒಂದು ರೂಪಕ ಎಲ್ಲವೂ ಬಹಳ ಚೆನ್ನಾಗಿ ಮೂಡಿಬಂದಿವೆ. ಈಗ `ಉತ್ಥಾನ’ ಯಾವಾಗ ಬರುವುದೋ ಎಂದು ಕಾತರದಿಂದ ಕಾಯುತ್ತಿರುತ್ತೇನೆ.
ಆರ್. ಶ್ರೀಪತಿ, ಚಳ್ಳಕೆರೆ