‘ಉತ್ಥಾನ’ದ ಹೊಸ ರೂಪವೂ ಅದರಲ್ಲಿರುವ ಲೇಖನಗಳೂ ಬಹಳ ಆಕರ್ಷಕವಾಗಿವೆ. ಈ ಸ್ವರೂಪದಿಂದ ಅದರ ಬಗೆಗೆ ಮತ್ತಷ್ಟು ಆತ್ಮೀಯತೆ ಬರುತ್ತದೆ.ಎಸ್.ಎಲ್. ಭೈರಪ್ಪನವರ ‘ಯಾನ’ ಪುಸ್ತಕದ ಬಗೆಗೆ ಇರುವ ಲೇಖನ ಅತ್ಯಂತ ವಿಶಿಷ್ಟವಾಗಿದೆ. ‘ಮ್ಯಾಜಿಕಲ್ ಇಮ್ಯಾಜಿನೇಷನ್’ ಮತ್ತು ‘ಮ್ಯಾಜಿಕಲ್ ರಿಯಲಿಸ್ಮ್’ ನುಡಿಗಟ್ಟುಗಳು ‘ಯಾನ’ಕ್ಕೆ ಪೂರ್ತಿ ಹೊಂದುವ ಶಬ್ದಗಳಾಗಿವೆ. ಆದರೂ ‘ಯಾನ’ವನ್ನು ಓದುವುದು ನಿಧಾನವಾಗಿ ಆಗಬೇಕು; ಆಗ ಅದರ ಸ್ವಾರಸ್ಯ ತಿಳಿವಿಗೆ ಬರುತ್ತದೆ.
– ಪ್ರೊ|| ಜಿ. ವೆಂಕಟಸುಬ್ಬಯ್ಯ, ಬೆಂಗಳೂರು
‘ಉತ್ಥಾನ’ ಹೊಸರೂಪದಲ್ಲಿ, ಮನಸ್ಸಿಗೆ ಆನಂದವನ್ನು ನೀಡುವಂತೆ ಮೂಡಿಬರುತ್ತಿದೆ. ಹಿರಿಯರ ಮಾರ್ಗದರ್ಶನದಲ್ಲಿ ಹೊಸ ಹಾರಾಟಕ್ಕೆ ‘ಎದ್ದಿದೆ’ ಎಂಬಂತಿದೆ.ವಿನ್ಯಾಸ ಮತ್ತು ಲೇಖನಗಳ ವೈವಿಧ್ಯ, ಗುಣಮಟ್ಟದಲ್ಲಿ ‘ಹೊಸ ಚಿಗುರು – ಹಳೇ ಬೇರು’ ಎಂಬ ನೀತಿಯನ್ನು ಅಳವಡಿಸಿಕೊಂಡಿರುವುದು ಅನುಕರಣೀಯಮಾರ್ಗ ಎಂದೆನಿಸಿತು.
‘ಉತ್ಥಾನ’ದ ಹೊಸ ಪಯಣಕ್ಕೆ ಶುಭವಾಗಲಿ ಎಂದು ಹಾರೈಸುವೆ.
– ಮುಕುಂದ, ಬೆಂಗಳೂರು
೨೦೧೫ರ ಜನವರಿ ತಿಂಗಳಿಂದ ಹೊಸ ಅಕಾರವನ್ನು ತಳೆದು ಪ್ರಕಟವಾಗುತ್ತಿರುವ ‘ಉತ್ಥಾನ’ದ ಬಾಹ್ಯ ಹಾಗೂ ಅಂತರಂಗಸೌಷ್ಠವ ಮನಸೆಳೆಯಿತು. ವೈವಿಧ್ಯಪೂರ್ಣವಾದ ಲೇಖನಗಳು ಪತ್ರಿಕೆಯ ಹೆಸರಿನ ಔಚಿತ್ಯವನ್ನು ಸಾರ್ಥಕವಾಗಿ ಧ್ವನಿಸುತ್ತವೆ. ರಾಧಾಕೃಷ್ಣ ಕಲ್ಚಾರ್ ಅವರ ಪರಕಾಯ ಪ್ರವೇಶ ಅಂಕಣ ಚೆನ್ನಾಗಿ ಮೂಡಿಬರುತ್ತಿದೆ. ನಮ್ಮ ಸಾಹಿತ್ಯ-ಸಂಸ್ಕೃತಿಗಳನ್ನು ಬಿಂಬಿಸುವ ಇಂಥ ಬರಹಗಳು ಇನ್ನಷ್ಟು ಮೂಡಿ ಬರುವಂತಾಗಲಿ. ಹೀಗೆ ಈ ನೆಲದ ಕಂಪನ್ನು ನಮ್ಮ ಯುವಪೀಳಿಗೆಗೆ ತಲಪಿಸುವ ಮೂಲಕ ಸ್ತುತ್ಯರ್ಹಕಾರ್ಯವನ್ನು ಎಸಗುತ್ತಿರುವ ಲೇಖಕರಿಗೆ ಓದುಗರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
– ಕೆ. ರಘುರಾಮ ಭಟ್, ಎಡನೀರು, ಕಾಸರಗೋಡು
‘ಉತ್ಥಾನ’ ಮಾಸಪತ್ರಿಕೆಯ ಜನವರಿ ೨೦೧೫
– ಸಂಕ್ರಾಂತಿ ವಿಶೇಷಾಂಕ ಸುಂದರವಾಗಿ ಮೂಡಿಬಂದಿದೆ. ಓದುಗರ ಮನಮುಟ್ಟುವ ಪ್ರಬುದ್ಧ ಪ್ರಬಂಧಗಳು, ವಿಶೇಷ ಲೇಖನಗಳು ಸಂಚಿಕೆಯ ಮೆರುಗು ಹೆಚ್ಚಿಸಿವೆ. ಬಹುಮಾನಿತ ಕಥೆ ‘ಪ್ರಾಯಶ್ಚಿತ್ತ’ ಮನಮಿಡಿಯುವಂತೆ ಓದಿಸಿಕೊಂಡು ಹೋಗುತ್ತದೆ. ಇಂದಿನ ದೈನಂದಿನ ಸ್ಥಿತಿಗತಿಗಳಲ್ಲಿ ಪ್ರತಿ ಹಳ್ಳಿಯಲ್ಲಿ, ನಗರದಲ್ಲಿ ಕಥಾನಾಯಕಿ ಪುಟ್ಟಮ್ಮನಂತಹ ಕೆಚ್ಚೆದೆಯ ಸ್ತ್ರೀಯರನ್ನು ತಯಾರುಮಾಡಬೇಕಾದಂಥ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ.
ಬೋಧಕಥೆ – ‘ಪ್ರಾಮಾಣಿಕತೆ'(ಪುಟ ೮೪)ಯಲ್ಲಿ ಪಂ. ದೀನದಯಾಳ ಉಪಾಧ್ಯಾಯರು ತಮ್ಮ ಪ್ರಾಮಾಣಿಕತೆಯನ್ನು ತೋರಿದ ನಿರೂಪಣೆ ಓದಿ ತುಂಬ ಹೆಮ್ಮೆಯಾಯಿತು. ಅದನ್ನು ಓದಿದಾಗ, ನನ್ನದೇ ಜೀವನದ ಒಂದು ಕಿರುಪ್ರಸಂಗ ನೆನಪಾಯಿತು. ಅದನ್ನಿಲ್ಲಿ ಮೆಲುಕುಹಾಕಲು ಬಯಸುವೆ.
ಇದು ಸುಮಾರು ೩೦-೩೫ ವರ್ಷಗಳ ಹಿಂದಿನ ಮಾತು. ಒಂದು ಸಂಜೆ ನಾನು ಜಯನಗರ ೪ನೇ ಬ್ಲಾಕ್‌ನಲ್ಲಿಯ ‘ಜನತಾ ಬಜಾರ್’ಗೆ ಹೋಗಿ, ಕೆಲವು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ, ರಸೀದಿ ಪಡೆದು ಹಣ ಪಾವತಿಸಿ, ಚಿಲ್ಲರೆ ಪಡೆದು ಹಿಂದಿರುಗಿದೆ. ಜನಜಂಗುಳಿ ತುಂಬಾ ಇದ್ದುದರಿಂದ, ಚಿಲ್ಲರೆ ಸರಿ ಇದೆಯೇ ಎಂದು ನೋಡಲಿಲ್ಲ. ಮನೆಗೆ ಬಂದು ನೋಡಿದರೆ, ಆ ಗುಮಾಸ್ತ ನನಗೆ ಹತ್ತು ರೂಪಾಯಿಗಳನ್ನು ಹೆಚ್ಚಿಗೆ ನೀಡಿದ್ದ. ನನಗೆ ತುಂಬ ಬೇಸರವಾಯ್ತು. ಆ ರಾತ್ರಿ ಅದೇ ಚಿಂತೆಯಲ್ಲಿ ಬೇಗ ನಿದ್ರೆ ಬರಲಿಲ್ಲ. ಛೇ, ನನ್ನಿಂದ ಎಂತಹ ತಪ್ಪಾಯಿತು. ಪಾಪ, ಆ ಗುಮಾಸ್ತ ದಿನದ ಕೊನೆಯಲ್ಲಿ ಮೇಲಧಿಕಾರಿಗೆ ಲೆಕ್ಕ ಒಪ್ಪಿಸುವಾಗ ಹತ್ತು ರೂಪಾಯಿ ಕಡಮೆ ಆಗಿ, ತನ್ನ ಕಿಸೆಯಿಂದಲೇ ಕೊಡಬೇಕಾಗಿ ಬಂದಿರಬೇಕು ಎಂದು ಊಹಿಸಿ ತುಂಬ ಖೇದವಾಯಿತು. ಬೆಳಗ್ಗೆ ಕಾಲೇಜಿಗೆ ಹೋಗುವ ಮೊದಲು ಆ ಹತ್ತು ರೂಪಾಯಿಗಳನ್ನು ಅವನಿಗೆ ಹಿಂದಿರುಗಿಸಬೇಕು ಎಂದು ನಿರ್ಧರಿಸಿದ ಮೇಲೆಯೇ ನಿದ್ರೆ ಬಂತು.
ಬೆಳಗ್ಗೆ ಹೋಗಿ ನೋಡಿದರೆ, ಅಲ್ಲಿ ಅವನ ಬದಲಿಗೆ ಬೇರೊಬ್ಬ ಗುಮಾಸ್ತನಿದ್ದ. ಅವನಿಗೇ ಎಲ್ಲ ವಿಷಯವನ್ನೂ ವಿವರಿಸಿ ಹೇಳಿ, ದಯವಿಟ್ಟು ಈ ಹತ್ತು ರೂಪಾಯಿ ಅವರಿಗೆ ಕೊಟ್ಟುಬಿಡಿ ಎಂದು ಆತನಲ್ಲಿ ವಿನಂತಿಸಿ ಹತ್ತು ರೂಪಾಯಿಯನ್ನು ನೀಡಿದೆ. ಆತ ಆಶ್ಚರ್ಯಚಕಿತನಾಗಿ ನನ್ನನ್ನು ನೋಡಿ, ಸರಿ ಎಂದ. ‘ಈ ಕಾಲದಲ್ಲೂ ಇಂತಹವರು ಇದ್ದಾರ?’ ಅಂತ ಅಂದುಕೊಂಡಿರಬೇಕು! ಕೊನೆಗೂ ಆ ಹತ್ತು ರೂಪಾಯಿ ಯಾರ ಕೈಸೇರಿತೋ, ಗೊತ್ತಿಲ್ಲ; ನನ್ನ ಕರ್ತವ್ಯ ಪೂರೈಸಿದೆ ಎಂದುಕೊಂಡು ಕಾಲೇಜಿಗೆ ಹೋದೆ.
ಇಂದಿನ ಎಷ್ಟೋ ಮಕ್ಕಳಿಗೆ ಇದು ಹಾಸ್ಯಾಸ್ಪದವಾಗಿ ಕಾಣಬಹುದು. ಆದರೆ, ನಾವು ಬೆಳೆದ ವಾತಾವರಣ, ಕಲಿತ ನೈತಿಕ ಮೌಲ್ಯಗಳು, ಹಿರಿಯರ ಸನ್ಮಾರ್ಗದರ್ಶನ ನಮ್ಮನ್ನೆಂದಿಗೂ ತಪ್ಪುದಾರಿ ಹಿಡಿಯಲು ಬಿಡವು, ಅಲ್ಲವೇ?
-ಡಾ|| ಅಚಲಾ ವಿ. ರಾವ್, ಬೆಂಗಳೂರು