ಈ ಜಾಡಿನ ಧೋರಣೆಗಳು ವಿವಿಧ ಸಮುದಾಯಗಳ ನಡುವೆ ಬಿರುಕನ್ನು ಹೆಚ್ಚಿಸುವುದಂತೂ ನಿಶ್ಚಿತ. ರಾಜಕೀಯ ಪಕ್ಷಗಳಿಗೆ ಬೇಕಾಗಿರುವುದೂ ಅದೇ!
ಇತ್ತೀಚೆಗೆ ಕರ್ನಾಟಕ ಸರ್ಕಾರ ಹಲವರ ವಿರೋಧದ ನಡುವೆಯೂ ಜಾತಿ-ಆಧಾರಿತ ಜನಗಣತಿಗೆ ತೊಡಗಿತು. ಇತರ ಹಲವು ರಾಜ್ಯಸರ್ಕಾರಗಳೂ ಈ ದಿಶೆಯಲ್ಲಿ ಪ್ರವೃತ್ತವಾಗಿವೆ. ಈ ಪ್ರಕ್ರಿಯೆಗೆ ೨೦೧೧ರಲ್ಲಿ ಚಾಲನೆ ನೀಡಿದುದು ಆಗಿನ ಯು.ಪಿ.ಎ. ಸರ್ಕಾರ. ಈ ಪ್ರಯಾಸವು ಕಾಂಗ್ರೆಸ್ ತಾನೇ ವರ್ಷಗಳುದ್ದಕ್ಕೂ ಘೋಷಿಸುತ್ತಬಂದ ನೀತಿಗೆ ವಿರುದ್ಧವಾದುದೆಂಬುದು ಸ್ಪಷ್ಟವೇ ಆಗಿದೆ. ಆದರೂ ಇದಕ್ಕೆ ಯು.ಪಿ.ಎ. ಸರ್ಕಾರ ಚಾಲನೆ ನೀಡಿದುದು ಏಕೆ? ಇದಕ್ಕೆ ಯು.ಪಿ.ಎ. ಸರ್ಕಾರ ನೀಡಿದ ಸಮರ್ಥನೆ ತಮ್ಮ ಜನಕಲ್ಯಾಣ ಯೋಜನೆಗಳಿಗೆ ಎಷ್ಟೆಷ್ಟು ಹಣವನ್ನು ತೆಗೆದಿರಿಸಬೇಕೆಂದು ಅಂದಾಜು ಮಾಡುವುದಕ್ಕೆ ಈ ನಮೂನೆಯ ಜನಗಣತಿಯು ನೆರವಾಗುತ್ತದೆ – ಎಂದು.
ಜಾತಿಪದ್ಧತಿ ತೊಲಗಬೇಕೆಂದು ಎಲ್ಲರೂ ಸೂರಿನಿಂದ ಅರಚುವವರೇ. ಹೀಗಿರುವಾಗ ಕಲ್ಪಿತ ಹೊಸ ಧೋರಣೆಗಳಿಗೆ ಜಾತಿಯ ಅವಲಂಬವನ್ನೇರ್ಪಡಿಸಲು ಈಗಿನ ಸರ್ಕಾರಗಳೇ ಹಾತೊರೆಯುತ್ತಿರುವುದು ಏಕೆ? ಜಾತೀಯ ಜನಗಣನೆ ಈಗ ಯಾರಿಗೆ ಬೇಕಾಗಿತ್ತು? ಅದು ಸಂವಿಧಾನಕ್ಕೆ ವ್ಯತಿರಿಕ್ತವೂ ಆದ ಕ್ರಮವೆಂಬುದನ್ನೂ ನೆನೆಯಬಹುದು. ಇಷ್ಟಾಗಿ ಜಾತೀಯ ಜನಗಣತಿ ಈಗ ಸಂಗತವಾಗಿದ್ದಿತೆ? ಜಾತಿವ್ಯವಸ್ಥೆಯ ಫಲಾನುಭವಿಗಳಿಂದ ಬಂದಿರಬಹುದಾದ ಒತ್ತಾಯದ ಹೊರತು ಇದಕ್ಕೆ ಬೇರೇನೂ ಕಾರಣ ಕಾಣುತ್ತಿಲ್ಲ. ಬರಲಿರುವ ಬಿಹಾರದ ಚುನಾವಣೆ ಈ ತುರ್ತನ್ನು ನಿರ್ಮಿಸಿದೆಯೆಂಬ ಊಹನೆಗಳೂ ಇವೆ. ಜಾತೀಯ ಜನಗಣತಿಯ ಫಲಿತವನ್ನು ಚುನಾವಣೆಯ ಅಸ್ತ್ರವನ್ನಾಗಿ ಬಳಸುವ ಅಂದಾಜು ರಾಜಕೀಯ ಪಕ್ಷಗಳಿಗೆ ಇದ್ದಲ್ಲಿ ಆಶ್ಚರ್ಯವಿಲ್ಲ.
ಪೂರ್ವೇತಿಹಾಸ
ಇತಿಹಾಸವು ಆಗಾಗ ಪುನರಾವರ್ತನೆಯಾಗುತ್ತಿರುತ್ತದೆ ಎಂಬ ಹೇಳಿಕೆ ಉಂಟು. ನಮ್ಮ ದೇಶದ ಜನಗಣತಿಯ ಇತಿಹಾಸವನ್ನು ಇಲ್ಲಿ ಸ್ಮರಿಸುವುದು ಸಂಗತವಾದೀತು. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲ ಸಮುದಾಯಗಳವರೂ ಒಗ್ಗೂಡಿ ಹೋರಾಟಕ್ಕೆ ಇಳಿದಿದ್ದರು. ಆ ಏಕತೆಯನ್ನು ಹೇಗಾದರೂ ಭಗ್ನಗೊಳಿಸುವ ಮಾರ್ಗಗಳನ್ನು ಬ್ರಿಟಿಷ್ ಸರ್ಕಾರ ಅನ್ವೇಷಿಸತೊಡಗಿತು. ಹೀಗೆ ವಿವಿಧ ಸಮುದಾಯಗಳಲ್ಲಿ ಪ್ರತ್ಯೇಕತೆಯ ಬೀಜನೆಡುವ ಪ್ರಯಾಸಗಳು ಶುರುವಾದವು. ಆ ಕಾರಸ್ಥಾನದ ಒಂದು ಫಲಿತವೇ ೧೮೭೧ರ ‘ಹಂಟರ್ ವರದಿ’. ಹಾಗೆ ಪೋಷಿಸಿಕೊಂಡುಬಂದ ಭೇದವೃತ್ತಿಯೇ ೧೯೦೫ರ ವಂಗವಿಭಜನೆಗೆ ಕಾರಣವಾದದ್ದು. ಅದೇ ತಂತ್ರದ ಅಂತಿಮ ಪರಿಣಾಮವೇ ೧೯೪೭ರಲ್ಲಾದ ದೇಶವಿಭಜನೆ.
ಜಾತ್ಯಾಧಾರಿತ ಜನಗಣತಿಯ ಹಿಂದಿದ್ದ ದುರುದ್ದೇಶವನ್ನು ಆರಂಭದಿಂದಲೇ ಮನಗಂಡಿದ್ದ ಗಾಂಧಿಯವರು ೧೯೩೧ರ ಜನವರಿ ೧೧ನೇ ದಿನಾಂಕವನ್ನು ‘ಜನಗಣನಾ ಬಹಿಷ್ಕಾರ ದಿವಸ’ವಾಗಿ ಆಚರಿಸಲು ಕರೆನೀಡಿದ್ದರು. ಹೀಗೆ ಪ್ರಬಲ ಜನವಿರೋಧವಿದ್ದುದರಿಂದ ೧೯೩೧ರ ನಂತರ ಆಂಗ್ಲಸರ್ಕಾರವು ಜಾತೀಯ ರೀತಿಯ ಜನಗಣನೆಯನ್ನು ಕೈಬಿಟ್ಟಿತ್ತು.
ಅದಾದ ೮ ದಶಕಗಳು ಕಳೆದ ಮೇಲೆ ೨೦೧೦ರಲ್ಲಿ ಸೋನಿಯಾ ನಿಯಂತ್ರಿತ ಕಾಂಗ್ರೆಸ್ ಜಾತೀಯ ಗಣನೆಗೆ ಮರುಜೀವ ಕೊಟ್ಟಿತು. ಅದಕ್ಕೆ ತೀವ್ರ ಪ್ರತಿರೋಧ ಹೊಮ್ಮಿದುದರಿಂದ ಕಾಂಗ್ರೆಸಿನ ಅಭಿಯಾನ ಆಗ ಮುಂದುವರಿಯಲಿಲ್ಲ.
ಮರುಹುಟ್ಟು
ಹೀಗೆ ಹಿಂದಕ್ಕೆ ಸರಿದಿದ್ದ ಯೋಜನೆಯು ಈಗ ಮರುಕಳಿಸಿರುವುದು ವಿಚಿತ್ರವೆನಿಸುತ್ತದೆ. ಇಂತಹ ಕ್ರಮಗಳು ಹೊಸಹೊಸ ಜಾತಿಗಳ ಉಗಮಕ್ಕೆ ಕಾರಣವಾಗುತ್ತವೆ ಎಂದು ೭೦ ವರ್ಷ ಹಿಂದಿನ ಆಂಗ್ಲಾಧಿಕಾರಿಗಳೇ ಶಂಕೆಯನ್ನು ವ್ಯಕ್ತಪಡಿಸಿದ್ದರು. ೧೯ನೇ ಶತಮಾನದ ನಡುಭಾಗದ ವೇಳೆಗೇ ಹೀಗೆ ಸಾವಿರಾರು ಹೊಸ ಜಾತಿಗಳು ಪಟ್ಟಿಗೆ ಸೇರ್ಪಡೆಯಾಗಿದ್ದವು. ಈಗಲಾದರೋ ಜಾತಿಗಳ ಸಂಖ್ಯೆ ೪೬ ಲಕ್ಷಕ್ಕೂ ಮೀರಿದೆಯೆಂಬ ಈಚಿನ ಮಾಹಿತಿಯು ಕೇಂದ್ರಸರ್ಕಾರವನ್ನು ಗಾಬರಿಗೊಳಿಸಿದೆ.
ಯಾವುದೇ ಮಾಹಿತಿ ಸಂಗ್ರಹಣೆ ಉಪಯುಕ್ತವಲ್ಲವೆಂದು ಹೇಳಲಾಗದು. ಇಂತಹ ಗಣತಿಯ ಆಧಾರದ ಮೇಲೆ ಯಾವ ಜಾತಿಯು ಅತ್ಯಂತ ಹಿಂದುಳಿದಿದೆ ಎಂಬುದು ತಿಳಿದೀತು – ಎಂದು ಸರ್ಕಾರ ಹೇಳಿದರೆ ಅದನ್ನು ಅಲ್ಲವೆನ್ನುವುದು ಹೇಗೆ? ತನ್ನ ಸಾಮಾಜಿಕ-ಆರ್ಥಿಕ ಯೋಜನೆಗಳನ್ನು ವಿಮರ್ಶೆಗೊಳಪಡಿಸಲು ಇಂತಹ ಜನಗಣತಿ ಪ್ರಯೋಜನಕರವೆಂದು ಸರ್ಕಾರ ಹೇಳಿದರೆ ಅದಕ್ಕೆ ಆಕ್ಷೇಪಿಸುವುದು ಹೇಗೆ? ನೌಕರಿ ಆರಕ್ಷಣೆಯು ಎಲ್ಲ ಸರ್ಕಾರಗಳ ಸ್ವೀಕೃತ ನೀತಿಯಾಗಿರುವುದರಿಂದ ಆರಕ್ಷಣೆಯ ಪ್ರಮಾಣದ ನಿರ್ಣಯಕ್ಕೂ ಬಡವರ್ಗಗಳ ಮಕ್ಕಳಿಗೆ ಶಿಕ್ಷಣಸೌಕರ್ಯಗಳ ಒದಗಣೆ ಮೊದಲಾದ ವ್ಯವಸ್ಥೆಗಳಿಗೂ ಇಂತಹ ಸಂಕಲಿತ ಮಾಹಿತಿಯು ಅವಲಂಬವನ್ನು ಒದಗಿಸೀತು – ಎಂಬುದು ಪೂರ್ವಪಕ್ಷ.
ಇದಕ್ಕೆ ಥಟ್ಟನೆ ಎದುರಾಗುವ ಪ್ರಶ್ನೆ: ಈ ಜಾಡಿನ ಧೋರಣೆಯನ್ನು ದಶಕಗಳುದ್ದಕ್ಕೂ ಅನುಸರಿಸಿದುದು ಆಗಿದೆಯಲ್ಲವೆ? ಅದರಿಂದ ಬಡತನವಾಗಲಿ ಅಸಮಾನತೆಗಳಾಗಲಿ ಅಲ್ಪಮಾತ್ರವಾದರೂ ನಿವಾರಣೆಯಾಗಿವೆ ಎನ್ನಲು ಗಟ್ಟಿ ಆಧಾರಗಳು ಇಲ್ಲ. ಪ್ರತಿಯಾಗಿ ತಮ್ಮ ಉದ್ದೇಶಗಳಿಗಾಗಿ ಜಾತಿಗಳಲ್ಲಿ ಒಂದರ ವಿರುದ್ಧ ಒಂದನ್ನು ಎತ್ತಿಕಟ್ಟುವುದಕ್ಕಾಗಿ ಸರ್ಕಾರಗಳು ಈ ಮಾಹಿತಿಗಳನ್ನು ಬಳಸಿಕೊಳ್ಳುವುದು ಸಾಧ್ಯವಿದೆ. ಅಂಕಿ-ಅಂಶಗಳೇ ನಿಕಷವಾದಾಗ ಕೆಲವು ಬಲಿಷ್ಠ ಸಮುದಾಯಗಳು ಸರ್ಕಾರೀ ಯೋಜನೆಗಳ ಪ್ರಮುಖ ಫಲಾನುಭವಿಗಳಾದಾವು. ಒಟ್ಟಿನಮೇಲೆ ಈ ಜಾಡಿನ ಧೋರಣೆಗಳು ವಿವಿಧ ಸಮುದಾಯಗಳ ನಡುವೆ ಬಿರುಕನ್ನು ಹೆಚ್ಚಿಸುವುದಂತೂ ನಿಶ್ಚಿತ. ರಾಜಕೀಯ ಪಕ್ಷಗಳಿಗೆ ಬೇಕಾಗಿರುವುದೂ ಅದೇ! ಬಲಿಷ್ಠ ಸಮುದಾಯಗಳಿಗೆ ಕುಮ್ಮಕ್ಕು ಕೊಡುವುದರಲ್ಲಿಯೆ ರಾಜಕೀಯ ಪಕ್ಷಗಳಿಗೆ ಹೆಚ್ಚಿನ ಲಾಭವಿದೆ. ಈ ಸನ್ನಿವೇಶದಲ್ಲಿ ನಿಜವಾಗಿ ಸಂತ್ರಸ್ತರಾದವರನ್ನು ಯಾರು ಕೇಳಬೇಕು!
ಚುನಾವಣೆಗಳ ಟಿಕೆಟ್ ನೀಡಿಕೆಯಲ್ಲಿಯೂ ಬಲಿಷ್ಠರ ಓಲೈಕೆಯ ಲೆಕ್ಕಾಚಾರಗಳೇ ಕೆಲಸಮಾಡುತ್ತವೆ.
ಈ ಅನುಭವಗಳ ಹಿನ್ನೆಲೆಯಲ್ಲಿ ಜಾತೀಯ ಜನಗಣತಿಯಂತಹ ಪ್ರಯತ್ನಗಳನ್ನು ದೂರವಿರಿಸುವುದೇ ಮೇಲೆನಿಸದೆ?
ಸಮಸ್ಯೆಯ ಜಟಿಲತೆ
ಈ ಬಗೆಯ ಜನಗಣತಿ ಉಗಮಗೊಂಡದ್ದೇ ಬ್ರಿಟಿಷರ ‘ಒಡೆದು ಆಳುವ’ ನೀತಿಯ ಕಾರ್ಯಾನ್ವಯಕ್ಕಾಗಿ. ವಿಶೇಷವಾಗಿ ಬ್ರಿಟಿಷರಿಗೆ ಬೇಕಾಗಿದ್ದ ಇನ್ನೊಂದು ಸೌಲಭ್ಯವೆಂದರೆ ಯಾವ ಜನವರ್ಗಗಳ ಮೇಲೆ ಹೆಚ್ಚಿನ ತೆರಿಗೆ ದರವನ್ನು ವಿಧಿಸಬಹುದು ಎಂಬ ಅಂದಾಜು. ಇದನ್ನು ಬ್ರಿಟಿಷ್ ಸರ್ಕಾರ ಅಮಲುಗೊಳಿಸಿತು ಕೂಡಾ. ಆ ಹಿನ್ನೆಲೆಯಲ್ಲಿ ಹೆಚ್ಚುಕಡಮೆ ಇಡೀ ದೇಶದ ಜನಗಣತಿಯನ್ನು ಬ್ರಿಟಿಷ್ ಸರ್ಕಾರ ನಡೆಸಿತ್ತು.
ಸ್ವಾತಂತ್ರ್ಯೋತ್ತರ ಕಾಲದಲ್ಲಿ ಸ್ವತಂತ್ರ ಭಾರತ ಸರ್ಕಾರ ಅದೇ ಧೋರಣೆಯನ್ನು ಕೈಗೆತ್ತಿಕೊಳ್ಳಲು ಯೋಚಿಸಿದಾಗ ಅದಕ್ಕೆ ಎಲ್ಲೆಡೆಯಿಂದ ತೀಕ್ಷ್ಣ ವಿರೋಧವು ಹೊಮ್ಮಿದ ಕಾರಣದಿಂದ ಆ ಪ್ರಯತ್ನವನ್ನು ಸರ್ಕಾರ ಕೈಬಿಟ್ಟಿತ್ತು.
ಒಂದು ಜನಗಣತಿಯಿಂದ ಇನ್ನೊಂದು ಜನಗಣತಿಗೆ ತಮ್ಮ ಘೋಷಿತ ಜಾತಿಯನ್ನು ಬದಲಾಯಿಸುವವರ ಸಂಖ್ಯೆಯು ಹೇರಳವಾಗಿದೆ – ಎಂದು ೧೯೩೧ರ ಸೆನ್ಸಸ್ ಕಮಿಷನರ್ ಹಟ್ಟನ್ ವ್ಯಾಖ್ಯೆ ಮಾಡಿದ್ದ. ಅದದೇ ವ್ಯಕ್ತಿಗಳು ಒಂದು ಗಣತಿಯಲ್ಲಿ ಬನಿಯಾಗಳೆಂದೂ ಇನ್ನೊಂದರಲ್ಲಿ ರಜಪೂತರೆಂದೂ ಮತ್ತೊಂದರಲ್ಲಿ ಬ್ರಾಹ್ಮಣರೆಂದೂ ನಮೂದಿಸಿಕೊಂಡಿದ್ದುದು ವಿರಳವಾಗಿರಲಿಲ್ಲ. ನಾವು ಇಂತಿಂಥ ಋಷಿಗಳ ಆನುಪೂರ್ವಿಯವರಾದುದರಿಂದ ನಾವು ಬ್ರಾಹ್ಮಣರು – ಎಂದು ಹಲವರು ಶೂದ್ರಾದಿಗಳೂ ನಮೂದಿಸಿದ್ದರು. ಒಂದಷ್ಟು ಸಮಯದ ನಂತರ ಅವರು ಮತ್ತೆ ತಮ್ಮನ್ನು ಶೂದ್ರರೆಂದು ಕರೆದುಕೊಂಡದ್ದೂ ಉಂಟು. ಇಷ್ಟಾಗಿ ಒಬ್ಬ ವ್ಯಕ್ತಿಯನ್ನು ಮೂಲದಲ್ಲಿ ಇದೇ ಜಾತಿ ಎಂದು ನಿರ್ಣಯಿಸಲು ವೈಜ್ಞಾನಿಕ ವಿಧಾನಗಳಾದರೂ ಎಲ್ಲಿವೆ? ಒಂದೇ ಮನೆವಾರ್ತೆಯವರು ಒಂದು ಜಿಲ್ಲೆಯಲ್ಲಿ ಬ್ರಾಹ್ಮಣರೆಂದೂ ಇನ್ನೊಂದು ಜಿಲ್ಲೆಯಲ್ಲಿ ಶೂದ್ರರೆಂದೂ ನಮೂದಿಸಿರುವ ನಿದರ್ಶನಗಳಿವೆ. ರಜಪೂತರ, ಜಾಟರ, ಗುರ್ಜರರ ಮತ್ತು ಆಹೀರರ ಸಮುದಾಯಗಳ ಎಷ್ಟೋ ಮಂದಿ ಒಂದೇ ಗೋತ್ರದವರಿರುತ್ತಾರೆ.
ಇಂತಹ ಜಟಿಲತೆಗಳನ್ನು ಸಮಗ್ರವಾಗಿ ಪರಾಮರ್ಶಿಸಿದ್ದ ಹಟ್ಟನ್ ಮಹಾಶಯನ ಶಿಫಾರಸಿನಂತೆ ಬ್ರಿಟಿಷ್ ಸರ್ಕಾರವು ಜಾತೀಯ ಗಣತಿಯನ್ನು ಕೈಬಿಟ್ಟದ್ದು ಗಾಂಧಿ, ನೆಹರು, ಬೋಸ್ ಮೊದಲಾದ ನಾಯಕರಿಗೆ ಸಂತೋಷ ತಂದಿದ್ದಿತು.
ಮಾಹಿತಿ ವಿಶ್ವಸನೀಯವೆ?
ಜಾತಿಭಾವನೆಯು ಜನರ ಮಾನಸಿಕತೆಯಲ್ಲಿ ಎಷ್ಟೇ ಆಳವಾಗಿ ಬೇರೂರಿದ್ದರೂ, ಈ ವಿಷಯವನ್ನು ಬಹಿರಂಗವಾಗಿಯಂತೂ ಹೆಚ್ಚಿನವರು ಚರ್ಚಿಸಲು ಇಚ್ಛಿಸುವುದಿಲ್ಲ. ಎಷ್ಟೋ ವ್ಯವಹಾರಗಳಲ್ಲಿ ತಮ್ಮ ಜಾತಿಯು ಯಾವುದೆಂಬುದು ಪ್ರಕಟೀಕರಣಗೊಳ್ಳದಿರಲೆಂದೇ ಜನರು ಬಯಸುವುದೂ ಉಂಟು.
ಈ ಜಟಿಲತೆಗಳ ಹಿನ್ನೆಲೆಯಲ್ಲಿ ಜಾತೀಯ ಜನಗಣತಿಯಿಂದ ಲಬ್ಧವಾಗಬಹುದಾದ ಮಾಹಿತಿಯ ವಿಶ್ವಸನೀಯತೆ ಎಷ್ಟು ಮಾತ್ರ ಇದ್ದೀತು? ಅದರಿಂದ ಇನ್ನಷ್ಟು ಗೊಂದಲವೇ ನಿರ್ಮಾಣವಾದೀತು.
ಸಮಾಜಶಾಸ್ತ್ರಜ್ಞರೋ ಮಾನವಶಾಸ್ತ್ರಜ್ಞರೋ ಬೇಕಾದರೆ ಇಂತಹ ಅಧ್ಯಯನಗಳನ್ನು ಮಾಡಿಕೊಳ್ಳಬಹುದು. ಆದರೆ ಸರ್ಕಾರವೇ ಇದಕ್ಕೆ ಕೈಹಾಕುವುದು ಸಮಾಜದಲ್ಲಿ ಸಂಘರ್ಷಗಳನ್ನೂ ವಿರಸಗಳನ್ನೂ ಪ್ರೋತ್ಸಾಹಿಸಿದಂತೆ ಆಗದೆ? ಅದು ಅಪೇಕ್ಷಣೀಯವೆ?
ಇದಕ್ಕೆ ಬದಲಾಗಿ ಈಗಾಗಲೆ ಜಾರಿಯಲ್ಲಿರುವ ಕಲ್ಯಾಣಕಾರ್ಯಕ್ರಮಗಳಲ್ಲಿ ಹೆಚ್ಚಿನ ದಕ್ಷತೆಯನ್ನು ತರುವುದರ ಕಡೆಗೆ ಗಮನ ಕೊಡುವುದು ಮೇಲೆನಿಸದೆ?