ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ್ದು ೧೯೧೫ ಜನವರಿ ೯ರಂದು. ಅನಂತರ ಮದರಾಸಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಗಾಂಧಿ ಮೊದಲಿಗೆ ಗ್ರಂಥಪ್ರಕಾಶಕ ಜಿ.ಎ. ನಟೇಶನ್ ಅವರ ಮನೆಯಲ್ಲಿ ತಂಗುತ್ತಿದ್ದು ಅನಂತರದಲ್ಲಿ ರಾಜಗೋಪಾಲಾಚಾರಿಯವರ ಮನೆಯಲ್ಲಿ ತಂಗುತ್ತಿದ್ದರು. ಆ ಸಮಯದಲ್ಲಿ ರಾಜಗೋಪಾಲಾಚಾರಿಯವರ ದ್ವಿತೀಯ ಪುತ್ರಿ ಲಕ್ಷ್ಮೀದೇವಿಗೆ ಗಾಂಧಿಯವರ ಜೊತೆ ಇರುತ್ತಿದ್ದ ಕಿರಿಯ ಪುತ್ರ ದೇವದಾಸ್ಗಾಂಧಿ ಹಿಂದಿಯನ್ನು ಹೇಳಿಕೊಡುತ್ತಿದ್ದರು.
ಕ್ರಮೇಣ ಗಾಂಧಿಯವರೊಂದಿಗೆ ಬಹು ಆಪ್ತರಾದ ರಾಜಗೋಪಾಲಾಚಾರಿಯವರು ಗಾಂಧಿ ಮತ್ತು ಇತರರೊಂದಿಗೆ ಖಾದಿ ಪ್ರಚಾರಕ್ಕಾಗಿ ೧೯೨೭ರಲ್ಲಿ ಪ್ರವಾಸ ಪ್ರಾರಂಭಿಸಿದರು. ಪ್ರವಾಸ ಮಾಡುತ್ತಾ ದಕ್ಷಿಣ ಭಾರತಕ್ಕೆ ಆಗಮಿಸಿದ ಗಾಂಧಿಯವರು ಮೈಸೂರು ಸಂಸ್ಥಾನ ಪ್ರವೇಶಿಸುತ್ತಿದ್ದಂತೆಯೇ ಅನಾರೋಗ್ಯಕ್ಕೆ ಒಳಗಾದರು. ಈ ಕಾರಣ ವೈದ್ಯರ ಸಲಹೆಯಂತೆ ನೇರವಾಗಿ ನಂದಿಗಿರಿಧಾಮಕ್ಕೆ ತೆರಳಿ ೧೯೨೭ ಏಪ್ರಿಲ್ ೨೦ರಿಂದ ಜೂನ್ ೫ರವರೆಗೆ (೪೫ ದಿವಸ) ವಿಶ್ರಾಂತಿ ಪಡೆದರು. ಆಗ ೨೮ ವರ್ಷದ ದೇವದಾಸ್ ಗಾಂಧಿ (ಜನನ ೨೨-೫-೧೮೯೯) ಮತ್ತು ೧೫ ವರ್ಷದ ಲಕ್ಷ್ಮೀದೇವಿ (ಜನನ ೧೯೧೨) ಗಾಂಧಿಯವರ ಸೇವೆಯಲ್ಲಿ ಗಿರಿಧಾಮದಲ್ಲಿ ನಿರತರಾಗಿದ್ದರು. ಆ ಸಮಯದಲ್ಲಿ ಮೊದಲಿನಿಂದಲೂ ಇದ್ದ ಇವರಿಬ್ಬರ ಪರಿಚಯ ಕ್ರಮೇಣ ಪ್ರಣಯಕ್ಕೆ ತಿರುಗಿ ಒಬ್ಬರಿಗೊಬ್ಬರು ವಿವಾಹವಾಗಲು ನಿಶ್ಚಯಿಸಿದರು. ಅನಂತರ ಬೆಂಗಳೂರಿಗೆ ಮರಳಿದ ಗಾಂಧಿ ಮತ್ತು ರಾಜಾಜಿಯವರಿಗೆ ಈ ವಿಷಯ ತಿಳಿಯಿತು. ಬ್ರಾಹ್ಮಣರಾದ ರಾಜಾಜಿಯವರಿಗೆ ತಮ್ಮ ಮಗಳು ಬನಿಯ ಜಾತಿಯ ದೇವದಾಸ್ ಜೊತೆ ಮದುವೆಯಾಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಬಾಪೂಜಿಗೂ ಸಹ ರಾಜಾಜಿಗೆ ಬೇಸರಪಡಿಸುವಂಥ ಯಾವುದೇ ವರ್ತನೆ ಇಷ್ಟವಿರಲಿಲ್ಲ. ಆದರೆ ಲಕ್ಷ್ಮೀದೇವಿ ಮತ್ತು ದೇವದಾಸ್ ಅತೀವ ದೃಢತೆ ಮತ್ತು ಧೈರ್ಯ ತೋರಿದರು. ಕ್ರಮೇಣ ರಾಜಾಜಿಯ ವಿರೋಧ ಕಡಮೆಯಾಯಿತು. ಲಕ್ಷ್ಮೀದೇವಿಯು ಬಹಳ ಸುಂದರಿಯಾಗಿದ್ದಳು. ಗೌರವರ್ಣ, ಎಳಸು ದೇಹದ ಶರೀರ, ಕೂದಲು ಕಾಲಿನವರೆಗೂ ದಟ್ಟವಾಗಿ ಬೆಳೆದಿತ್ತು. ಸ್ವತಃ ಅಧ್ಯಯನ ಸ್ವಭಾವದವಳಾಗಿದ್ದಳು. ತಂದೆ ರಾಜಾಜಿಯೂ ವಿದ್ವಾಂಸರು. ತಂದೆ ಬರೆದ ಪುಸ್ತಕಗಳನ್ನು ಲಕ್ಷ್ಮೀ ಹಿಂದಿಗೆ ಅನುವಾದ ಮಾಡುತ್ತಿದ್ದಳು.
ಈ ಅಂತರ್ಜಾತಿ ವಿವಾಹಕ್ಕೆ ಗಾಂಧಿಯವರು ಒಪ್ಪಿ, `ಒಬ್ಬರಿಗೊಬ್ಬರು ಐದು ವರ್ಷ ಭೇಟಿಯಾಗಬಾರದು ಮತ್ತು ಪತ್ರವ್ಯವಹಾರವನ್ನು ಮಾಡಬಾರದು’ ಎಂದು ಕರಾರನ್ನು ವಿಧಿಸಿದರು. ಬಹಳ ಕಷ್ಟದಿಂದ ಐದು ವರ್ಷ ಕಾದ ಇವರ ವಿವಾಹ ಪುಣೆಯಲ್ಲಿ ೧೯೩೩ರ ಜೂನ್ ೧೬ ಶುಕ್ರವಾರ ಬೆಳಗ್ಗೆ ೬.೨೦ಕ್ಕೆ ಗಾಂಧಿಯವರ ಕುಟುಂಬದ ಸ್ನೇಹಿತೆ ಲೇಡಿ ಪ್ರಮೀಳಾ ಥ್ಯಾಕರ್ಸೆಯವರ ಗೃಹದಲ್ಲಿ ನಡೆಯಿತು. ಈ ಗೃಹ ಪುಣೆಯಲ್ಲಿನ ಯರವಾಡ ಸೆರೆಮನೆಯ ಸನಿಹದಲ್ಲೇ ಗುಡ್ಡದ ಮೇಲಿದ್ದ ಬಂಗಲೆ ಎನ್ನಬಹುದಾದ ವಿಶಾಲವಾದ ಅಮೃತಶಿಲಾಭವನ. ಪರ್ಣಕುಟಿ ಎಂದು ಹೆಸರು. ಸಮಾಜಸುಧಾರಕರಾಗಿದ್ದ ಬಾಪೂಜಿಯವರಿಗೆ ವಿವಾಹಗಳ ವೈಭವಕ್ಕಾಗಿ ಅನಾವಶ್ಯಕ ಖರ್ಚಾಗಬಾರದೆಂಬುದು ಸ್ಪಷ್ಟವಾದ ಅಭಿಪ್ರಾಯವಾಗಿತ್ತು. ಸಾಧ್ಯವಾದಷ್ಟು ಕಡಮೆ ಜನರನ್ನು ಕರೆದು ಆಡಂಬರದಿಂದ ತಪ್ಪಿಸಿಕೊಳ್ಳಬೇಕೆನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬಯಸುತ್ತಿದ್ದರು.
ವಧು-ವರರು ಬೇರೆ ಜಾತಿಗಳಿಗೆ ಸೇರಿದವರಾಗಿದ್ದರಿಂದ ಮಹಾರಾಷ್ಟ್ರದ ಸುಧಾರಣಾ ಸಂಘದ ಪುರೋಹಿತ ಲಕ್ಷ್ಮಣಶಾಸ್ತ್ರಿ ಜೋಶಿ ಎಂಬವರು ವಿವಾಹ ಮಾಡಿಸಿದರು. ಗಾಂಧಿ, ಕಸ್ತೂರಿಬಾ, ರಾಜಾಜಿ ಹಾಗೂ ಒಂದಿಷ್ಟು ಅತಿಥಿಗಳು ಮಾತ್ರ ಮುಹೂರ್ತದಲ್ಲಿ ಹಾಜರಿದ್ದು ನವದಂಪತಿಗಳನ್ನು ಆಶೀರ್ವದಿಸಿದರು. ಗಾಂಧಿಯವರು ಮಗನಿಗೆ ಗುಜರಾತಿಯಲ್ಲೂ, ಸೊಸೆಗೆ ಹಿಂದಿಯಲ್ಲೂ ಹೀಗೆ ಹಿತೋಪದೇಶ ಮಾಡಿದರು:
“ದೇವದಾಸ್! ನಿನ್ನನ್ನು ನಾನೆಷ್ಟು ಪ್ರಮುಖನನ್ನಾಗಿ ಮಾಡಬೇಕೆಂದಿದ್ದೇನೆಂಬುದನ್ನು ನೀನು ಬಲ್ಲೆ. ನನ್ನನ್ನು ಸಫಲ ಮನೋರಥನನ್ನಾಗಿಸುವುದು ನಿನ್ನ ಭಾರ. ನನ್ನ ಅಭೀಷ್ಟಾನುಸಾರ ನೀನು ಆಚರಿಸಿದೆಯಾದರೆ ನಿಮ್ಮ ದಾಂಪತ್ಯದ ವಿಚಾರವಾಗಿದ್ದ ಆಕ್ಷೇಪಗಳೆಲ್ಲವೂ ಸೂರ್ಯಕಾಂತಿಯ ಮುಂದೆ ಮಂಜು ಕರಗಿದಂತೆ ಮಾಯವಾಗುವವು.
ಮಹಾರಾಷ್ಟ್ರದ ಸುಧಾರಣಾ ಸಂಘದ ಪುರೋಹಿತ ಲಕ್ಷ್ಮಣಶಾಸ್ತ್ರಿ ಜೋಶಿ
“ನಾನು ಪ್ರಾಪ್ತವಯಸ್ಕನಾದಾಗಿನಿಂದ ಧರ್ಮದ ಯಥಾರ್ಥ ನ್ಯಾಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದೇನೆ. ಸಾಧ್ಯವಾಗುವವರೆಗೂ ರೂಢಿಯ ಧರ್ಮವನ್ನೇ ಆಚರಿಸಲು ಪ್ರಯತ್ನಿಸುತ್ತಿದ್ದೆ. ಈ ದಾಂಪತ್ಯದಲ್ಲಿ ಧರ್ಮವಿರುದ್ಧವಾದುದೇನೂ ನನಗೆ ಗೋಚರವಾಗುವುದಿಲ್ಲ. ಧರ್ಮ ವಿರುದ್ಧವಾದುದೇ ಆಗಿದ್ದರೆ ನಾನೀ ಶುಭಕಾರ್ಯಕ್ಕೆ ಹಾಜರಾಗುತ್ತಿರಲಿಲ್ಲ; ನನ್ನ ಆಶೀರ್ವಾದದ ಭಾಗ್ಯವೂ ನಿನಗೆ ಲಭ್ಯವಾಗುತ್ತಿರಲಿಲ್ಲ.
“ನಿನ್ನ ಭಾಗ್ಯವು ಫಲಿಸಿತು. ನಿನ್ನ ಅದೃಷ್ಟಕ್ಕೆ ಮೇರೆ ಇಲ್ಲ. ಅದೃಷ್ಟಕ್ಕೆ ಸರಿಸಮಾನವಾದ ಅಪರಿಮಿತ ಕಾರ್ಯಭಾರವು ಈಗ ನಿನ್ನ ಮೇಲಿದೆ. ಪವಿತ್ರಹೃದಯಳಾದ ಥ್ಯಾಕರ್ಸೆ ಸತಿಯ ಭವನದಲ್ಲಿ ಶುಭಕಾರ್ಯ ನಡೆಯುವುದೆಂದು ಯಾರು ನಿರೀಕ್ಷಿಸಿದರು! ಅಸಮಾನ ಪಂಡಿತರೂ ಸತ್ಪುರುಷರೂ ಆದ ಲಕ್ಷ್ಮಣಶಾಸ್ತ್ರಿ ಜೋಶಿಗಳಂತಹ ಉತ್ತಮೋತ್ತಮರು ವಸಿಷ್ಠಪೀಠವನ್ನಲಂಕರಿಸುವರೆಂದು ಯಾರು ಬಗೆದಿದ್ದರು! ಈ ಕಾರ್ಯವು ಮುಂದೆ ಇನ್ನು ಯಾವಾಗಲೋ ನಮ್ಮ ಅವಕಾಶವನ್ನು ಅನುಸರಿಸಿ ಆಶ್ರಮದಲ್ಲಿ ನಡೆಯಬೇಕಾಗಿತ್ತು. ಇದೆಲ್ಲವೂ ನನ್ನ ಉಪವಾಸದೀಕ್ಷೆಯ ಫಲಿತಾಂಶವೇನೊ. ದೀಕ್ಷೆಯನ್ನು ನನ್ನ ಆಪ್ತರಿಗಾಗಿ ಮಾಡಿದೆ. ಇದರಲ್ಲಿ ಇತರರಿಗಿರುವಂತೆಯೇ ನಿಮಗೂ ಸ್ವಲ್ಪ ಪಾಲುಂಟು. ದೀಕ್ಷೆಯು ಕೇವಲ ಮತಸಂಬಂಧವಾದುದು. ಅದರ ಫಲವನ್ನು ಮತಸಂಬಂಧವಾದ ಕಾರ್ಯಕ್ಕೆ ವಿನಿಯೋಗಿಸುವುದು ಉತ್ತಮ. ದೀಕ್ಷೆಯಿಂದ ನೀನು ಕಲಿಯಬೇಕಾದುದು ಧರ್ಮವನ್ನು; ಸತ್ಯವೇ ಧರ್ಮ. ಸರ್ವಕಾರ್ಯಗಳಲ್ಲೂ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಧರ್ಮವನ್ನು ಮರೆಯದಿದ್ದಲ್ಲಿ ಧರ್ಮವೇ ನಿನಗೆ ಸರ್ವಕಾರ್ಯಗಳಲ್ಲೂ ಕೈಗೋಲಿನಂತಿರುವುದು. ಈ ಶುಭಕಾರ್ಯಕ್ಕೆ ಇಷ್ಟು ಮಂದಿ ಮಿತ್ರರು ಬಂದುದು ನಿನ್ನ ಅದೃಷ್ಟವೆಂದು ಹೇಳಬಹುದು. ಇವರ ಆಶೀರ್ವಾದಗಳಿಗನುಗುಣವಾಗಿ ವರ್ತಿಸಿ ಅವುಗಳಿಗೆಲ್ಲಾ ಅರ್ಹನೆಂದೆನಿಸಿಕೋ. ಇಂದು ನೀನು ರಾಜಾಜಿಯವರ ಪ್ರಾಣಸಮಾನ ರತ್ನವನ್ನು ಸಂಗ್ರಹಿಸಿದೆ. ರತ್ನವು ಲಭಿಸಿದ ಮಾತ್ರಕ್ಕೆ ಸಂತೋಷಿಸಬಾರದು; ಅದನ್ನು ಧರಿಸಲು ನೀನು ಅರ್ಹನಾಗಬೇಕು! ಅದನ್ನು ಭದ್ರಪಡಿಸುವ ಶಕ್ತಿ ಸಾಮರಸ್ಯಗಳನ್ನೂ ಹೊಂದಿರಬೇಕು. ಲಕ್ಷ್ಮಿಯು ನಿಜವಾಗಿ ಲಕ್ಷ್ಮಿಯೇ. ಸೃಷ್ಟಿಗೆಲ್ಲಾ ಸರ್ವೇಶ್ವರಿಯಾದ ಲಕ್ಷ್ಮೀದೇವಿಯನ್ನು ಹೇಗೆ ತಿಳಿಯುವೆಯೋ ಹಾಗೆಯೇ ಲಕ್ಷ್ಮಿಯನ್ನು ತಿಳಿದು ಕಾಪಾಡು. ಈಕೆಯು ಸದ್ಗುಣಶಾಲಿ, ರೂಪವತಿ. ನೀವಿಬ್ಬರೂ ಧರ್ಮಪಥದಲ್ಲಿ ಚಿರಂಜೀವಿಗಳಾಗಿ ಬಾಳಿರಿ.
“ಧರ್ಮವನ್ನು ಧರೆಯಲ್ಲುದ್ಧರಿಸುವುದಕ್ಕೇ ನೀನು ಜೀವಿಸಬೇಕು. ಸಮಯ ಬಂದರೆ ಪ್ರಾಣವನ್ನರ್ಪಿಸುವುದಕ್ಕೂ ಹಿಂಜರಿಯಬಾರದು. ಐಹಿಕ ಸೌಖ್ಯಗಳಿಗೆ ಪ್ರಾಮುಖ್ಯ ಕೊಡದೆ ದೇಶಸೇವೆಯಲ್ಲಿ ಇಂದಿನಿಂದಲೂ ಮಗ್ನನಾಗಿರು. ಇದೇ ನನ್ನ ಮನಃಪೂರ್ವಕವಾದ ಆಶೀರ್ವಾದ! ನೀನು ಮೊದಲಿನಿಂದಲೂ ರಾಜಾಜಿಯನ್ನು ಹಿರಿಯರೆಂದು ಗೌರವಿಸುತ್ತ ಬಂದಿದ್ದೀ. ಇಂದಿನಿಂದ ಇವರು ನಿನಗೆ ಪಿತೃಸಮಾನರು. ನನ್ನಲ್ಲಿ ತೋರಿಸುವ ವಾತ್ಸಲ್ಯ, ವಿನಯ ವಿಧೇಯತೆಗಳನ್ನು ಅವರಲ್ಲಿಯೂ ತೋರಿಸುತ್ತಿರು.”
“ಲಕ್ಷ್ಮೀ! ನಿನಗೆ ನಾನು ಹೆಚ್ಚು ಹೇಳಬೇಕಾದುದಿಲ್ಲ. ದೇವದಾಸನು ನಿನಗೆ ತಕ್ಕ ಪತಿಯೆಂದೆನಿಸಿಕೊಳ್ಳುವನೆಂದು ನಾನು ಆಶಿಸುತ್ತೇನೆ. ನಿನ್ನ ಪರಿಚಯವಾದಂದಿನಿಂದಲೂ ನೀನು ಅನ್ವರ್ಥ ನಾಮಧೇಯಳೆಂದು ನಾನೆಣಿಸಿದ್ದೇನೆ. ಈ ಸಂಬಂಧದಿಂದ ನನಗೂ ರಾಜಾಜಿಗೂ ಇರುವ ವಾತ್ಸಲ್ಯವು ಇನ್ನಷ್ಟು ವೃದ್ಧಿಹೊಂದಲಿ. ಶುಭಕಾರ್ಯದ ಪವಿತ್ರ ಸಮಯವನ್ನು ಕುರಿತು ನಾನು ಹೆಚ್ಚಾಗಿ ಹೇಳುವ ಅಗತ್ಯವಿಲ್ಲ. ಇದು ಕೇವಲ ಮತಸಂಬಂಧವಾದ ಕಾರ್ಯ. ಈ ಶುಭಕಾರ್ಯದಿಂದ ನೀವು ನಿಮ್ಮ ವಿಧಿಗಳನ್ನು ಚೆನ್ನಾಗಿ ಗ್ರಹಿಸುವವರಾಗಿರಿ. ನಿಮ್ಮ ಅನ್ಯೋನ್ಯ ಪ್ರೇಮವು ಬಹಳ ಕಾಲದಿಂದ ಬೆಳೆಯುತ್ತಿರುವುದೆಂಬುದನ್ನು ನಾನು ಬಲ್ಲೆ. ಈ ಶುಭದಿನಕ್ಕಾಗಿ ನೀವಿಬ್ಬರೂ ಪವಿತ್ರವಾದ ತಪವನ್ನು ಮಾಡುತ್ತಿದ್ದಿರೆಂದು ಸಹ ನಾನು ಚೆನ್ನಾಗಿ ಬಲ್ಲೆ. ಹಿರಿಯರಾದ ನಮ್ಮ ಆಶೀರ್ವಾದಕ್ಕಾಗಿ ಇಷ್ಟು ಕಾಲ ಕಾದಿರುವಿರೆಂದು ನನಗೆ ಸಂಪೂರ್ಣ ವಿಶ್ವಾಸ ಉಂಟಾದುದರಿಂದಲೇ ನಾನೀ ಶುಭಕಾರ್ಯಕ್ಕೆ ಹಾಜರಾದೆನು. ನಮ್ಮ ಆಶೀರ್ವಾದಕ್ಕೆ ನೀವು ಅರ್ಹರು. ವಿಶೇಷ ಶ್ರಮದಿಂದ ನಾನು ಇಷ್ಟು ಮಾತ್ರ ಮಾತನಾಡುವವನಾದೆ. ವಧೂ-ವರರನ್ನು ಆಶೀರ್ವದಿಸಿ ಹಿತೋಪದೇಶವನ್ನು ಮಾಡುವುದು ಅತಿ ಮುಖ್ಯವೆಂದು ಭಾವಿಸಿ ನಾನು ಈ ಶ್ರಮವನ್ನು ವಹಿಸಿದೆ. ಸರ್ವೇಶ್ವರನು ನಿಮ್ಮನ್ನು ರಕ್ಷಿಸಲಿ. ದೇವರಿಗೆ ಮಿಗಿಲಾದ ಆಪ್ತರಿಲ್ಲ. ಈಶ್ವರನನ್ನು ಮೀರಿಸಿದ ಜನನೀಜನಕರಾಗಲಿ ಮಿತ್ರರಾಗಲಿ ಇಲ್ಲ. ಜೀವಿತಯಾತ್ರೆಯನ್ನು ದೇಶಸೇವೆಯಲ್ಲಿ ವಿನಿಯೋಗಿಸಿ ಕ್ರಮೇಣ ಸರ್ವಮಾನವಸೌಭ್ರಾತ್ರವನ್ನು ಸಾಧಿಸಿ. ನೀವಿಬ್ಬರೂ ಯಾವಾಗಲೂ ವಿನಯವಂತರಾಗಿ ವರ್ತಿಸುತ್ತಾ ಸದಾ ಈಶ್ವರನಲ್ಲೇ ಮನಸ್ಸನ್ನು ನೆಲೆಗೊಳಿಸಿ ಪಾಪಭೀತಿಯಿಂದ ನಡೆದುಕೊಳ್ಳುವವರಾಗಿ.”
ನಾಲ್ಕು ದಿವಸಗಳ ನಂತರ ಅಂದರೆ ೧೯೩೩ರ ಜೂನ್ ೨೧ರಂದು ಈ ವಿವಾಹ ರಿಜಿಸ್ಟರ್ ಆಯಿತು. ಅನಂತರ ಲಕ್ಷ್ಮೀದೇವಿ ಗುಜರಾತಿ ಅತ್ತೆಯಮನೆಯನ್ನು ತನ್ನದಾಗಿಸಿಕೊಂಡು ಎಲ್ಲರನ್ನೂ ನಿಭಾಯಿಸುತ್ತಾ ಮುನ್ನಡೆಸಿದಳು. ಜೀವನದ ಕೊನೆಯವರೆಗೂ ದಂಪತಿಗಳು ಬಹು ಅನ್ಯೋನ್ಯದಿಂದ ಇದ್ದರು. (ದೇವದಾಸ್ಗಾಂಧಿ ವಿವಾಹದ ಚಿತ್ರ ತೆಗೆಯಲು ಸಹಕರಿಸಿದವರು ಸ್ನೇಹಿತ ಕೆ. ಧನತ.)
ಆಧಾರ:
- ರಾಜಮೋಹನಗಾಂಧಿ, ‘ಮೋಹನದಾಸ್: ಎ ಟ್ರೂ ಸ್ಟೋರಿ ಆಫ್ ಎ ಮ್ಯಾನ್, ಹಿಸ್ ಪೀಪಲ್ ಅಂಡ್ ಆನ್ ಎಂಪೈರ್.’ ಕನ್ನಡ ಅನುವಾದ: ಜಿ.ಎನ್. ರಂಗನಾಥರಾವ್; ‘ಮೋಹನ್ದಾಸ್ – ಒಂದು ಒಂದು ಸತ್ಯಕಥೆ.’ ೨೦೧೨, ಪುಟ ೫೩೯.
- ಸುಮಿತ್ರಗಾಂಧಿ ಕುಲಕರ್ಣಿ, ‘ಮಹಾತ್ಮ ಗಾಂಧಿ: ಮೇರೇ ಪಿತಾಮಹ್’. ಕನ್ನಡ ಅನುವಾದ: ಪ್ರೊ. ಬಿ.ವೈ. ಲಲಿತಾಂಬ, ಡಾ. ಜೆ.ಎಸ್. ಕುಸುಮಗೀತ.
- ‘ಮಹಾತ್ಮಗಾಂಧಿ ನನ್ನ ತಾತ’ – ಭಾಗ-೧, ಪುಟ ೪೦೦; ಭಾಗ-೨, ಪುಟ ೧೯೯. ೨೦೦೯.
- ‘ವಿಶ್ವಕರ್ಣಾಟಕ’ ವಾರಪತ್ರಿಕೆ, ಜೂನ್ ೨೫, ೧೯೩೩. ಪುಟ ೧೧.
- B. Dalal. ‘Gandhi, 1915-48. A Detailed Chronology’. 1971. Page No 102.