ಇರುವ ಅರಿವಿಗೆ, ಪ್ರಕೃತಿಯಿಂದ ತಾನಾಗಿ ಬರುವ ಅರಿವಿಗೆ, ಬರಹ ಸೇರಿದರೆ ಅದು ಲಾಭ. ಈ ಲಾಭಕ್ಕಾಗಿ ಆ ಲಾಭ ಬಿಟ್ಟರೆ, ಹುಟ್ಟರಿವನ್ನು ಬಿಟ್ಟರೆ, ಹುಟ್ಟರಿವಿನಿಂದಲೇ ಬರುವ ಕೃಷಿಜ್ಞಾನಕ್ಕೆ, ಅಡುಗೆಯ ವಿಜ್ಞಾನಕ್ಕೆ, ವಿರಾಮದ ಆಟಕ್ಕೆಲ್ಲ ಪಾಠ್ಯ ಮಾಡುವುದರಿಂದ, ಲೋಭಿ ತಾ ಉಪವಾಸವಿದ್ದು ಕೂಡಿಟ್ಟ ಸಂಪತ್ತಿನಂತೆ ಎಲ್ಲ ವ್ಯರ್ಥ.
ಪಶ್ಚಿಮದ ಹಾಲೆಂಡ್, ಪೋಲೆಂಡ್‌ಗಳಿಂದ ಲಕ್ಷಗಟ್ಟಲೆ ರೋಸೀ ಸ್ಟಾರ್ಲಿಂಗ್ – ಗುಲಾಬಿ ಮೈನಾ ಹಕ್ಕಿಗಳು ಭಾರತದ ಮೂಲೆಮೂಲೆಗಳಿಗೆ ವಲಸೆ ಬಂದುಬಿಡುತ್ತವೆ, ಸಮುದ್ರದಲ್ಲಿ ಹೆದ್ದೆರೆ ಎದ್ದ ಹಾಗೆ; ಮೋಡ ಚಲಿಸಿದ ಹಾಗೆ. ಹೀಗೆ ಹಾರುವ ಹಕ್ಕಿಗಳನ್ನು ನೋಡುವುದೇ ಒಂದು ಆನಂದ. ಅಲ್ಲಿ ಚಳಿಯೆಂದು ಎಲ್ಲಿಂದಲೋ ಬಂದ ಹಕ್ಕಿಗಳು, ಇಲ್ಲಿನ ಹೊಲ-ಗದ್ದೆಗಳಲ್ಲಿ, ಬೇಳೆ-ಕಾಳು, ಹುಳು-ಹುಪ್ಪಟೆ ತಿಂದು, ಮುಂದೆ ಬೇಸಿಗೆ ಬಂದಾಗ ತಂಪಿನ ತವರಿಗೆ ಮತ್ತೆ ಹೋಗುತ್ತವೆ. ಅವಕ್ಕೆ ಅದು ತವರೋ, ಇದು ತವರೋ ಹೇಳುವುದಾದರೂ ಹೇಗೆ? ಕಾಲ ಬದಲಾದ ಹಾಗೆ ದೇಶ ಬದಲಾಯಿಸಲು ಅವುಗಳಿಗೆ ಹೇಳಿಕೊಟ್ಟವರಾರು?
ರೋಸೀ ಸ್ಟಾರ್ಲಿಂಗ್ ಹಕ್ಕಿಗಳಾದರೋ, ಸಾವಿರ ಸಾವಿರ ಜೊತೆಯಾಗಿ ಬರುತ್ತವೆ, ಜೊತೆಯಾಗಿ ಇರುತ್ತವೆ. ಹಾಗಾಗಿ ಅವಕ್ಕೊಂದು ‘ಗುಂಪಿನ ಧೈರ್‍ಯ’ ಎಂದಂದುಕೊಳ್ಳೋಣ. ಆದರೆ ವಾರ್‌ಬ್ಲರ್ (warbler) – ಉಲಿಹಕ್ಕಿಯಂಥ ಹಕ್ಕಿಗಳು ಅಲ್ಲಿಂದ ಬರುವುದು ಜೊತೆಗಾದರೂ ಇಲ್ಲಿರುವುದು ಒಂದೆರಡೇ. ಎಲ್ಲಾ ಚದುರಿ ಬೇರೆ ಬೇರೆಯೆ. ಇವಕ್ಕೆ ಎಷ್ಟೊಂದು ಧೈರ್‍ಯ! ಎಷ್ಟೊಂದು ಸಾಹಸ! ಕಾಣದ ಊರಿನಲ್ಲಿ ಒಂದೆರಡು ಇದ್ದು, ಸ್ಥಳೀಯ ಹಕ್ಕಿಗಳ ನಡುವೆಯೇ ತಮ್ಮ ಬದುಕನ್ನು ಬೆಳಸಲು ಇವುಗಳಿಗೆ ತರಬೇತುಕೊಟ್ಟವರಾರು?
ಮೂವತ್ತೆರಡು ವರ್ಷಗಳ ಹಿಂದಿನ ಮಾತು. ಮೈಸೂರು ಸಮೀಪ, ‘ಇಂದ್ರಪ್ರಸ’ವೆಂಬ ಜಮೀನು ಕೊಂಡು ಕೃಷಿ ಪ್ರಾರಂಭಿಸಿದ ಕಾಲ. ಅಲ್ಲೊಂದು ಜಂಬುನೇರಳೆ ಗಿಡ ನೆಟ್ಟಿದ್ದೆ. ಅದು ಬೆಳೆಯುತ್ತಿತ್ತು. ಅದು ಅದರ ಗುಣ. ಆದರೆ ನಾನು ಮರೆತಿದ್ದೆ. ಆದರದು ಮರೆಯಲಿಲ್ಲ! ತಾನು ಯೌವನಭರಿತವಾಗಿ ಹೂವು ಬಿಟ್ಟಿತ್ತು. ಅದರದು ಚಿತ್ತಾಕರ್ಷಕ ಗುಲಾಬಿ ಹೂವು. ದೊಡ್ಡ ದೊಡ್ಡ ಹೂವುಗಳು. ಹೂವಿನ ಗೊಂಚಲುಗಳು. ಹಸುರೆಲೆಗಳ ನಡುವಿಂದ ಮಿಂಚಬಲ್ಲವುಗಳು. ಫಲಭರಿತವಾದ ಮೇಲೆ ಉದುರುವ ಹೂವಿನ ಕುಸುಮಗಳ ರಾಶಿ ಸೇರಿ ಅಲ್ಲೊಂದು ಗುಲಾಬಿಬಣ್ಣದ ಹಾಸಿಗೆಯೇ ಆಗಿಬಿಡುತ್ತದೆ. ಆದರೂ ನನಗದು ಕಾಣಿಸಲಿಲ್ಲ. ಹೂವು ಹೋಗಿ ಕಾಯಿ ಆಗಿತ್ತು. ಕಾಯಿ ಮಾಗಿ ಹಣ್ಣಾಗಿತ್ತು….
ರುಚಿಯಾದ ಜಂಬುನೇರಳೆ ಹಣ್ಣಿನ ರುಚಿ ನನಗೆ ಗೊತ್ತು. ಹಾಸಿಗೆಯಾಗುವ ಹೂವಿಗೂ ರುಚಿ ಇರುವುದು ನನಗೆ ಗೊತ್ತು. ಹಾಗಾಗಿಯೇ ನಾನದರ ಗಿಡ ನೆಟ್ಟಿದ್ದೆ ಆ ಹೊತ್ತು. ಆದರೂ ಅದು ಹಣ್ಣು ಬಿಟ್ಟದ್ದು ನನಗೆ ಗೊತ್ತಾಗಲಿಲ್ಲ. ಆದರೆ ನಮ್ಮ ತೋಟದ ಗಿಳಿ, ಬಾವಲಿ, ಅಳಿಲು, ಕೋತಿಗಳಿಗೆಲ್ಲ ಅದು ಗೊತ್ತಾಗಿತ್ತು. ಅರೆವಾಸಿ ಹಣ್ಣು ಆಗಿ ಮುಗಿದಿತ್ತು. ಅಕಸ್ಮಾತ್ ನನ್ನ ಸವಾರಿ ಅತ್ತ ಹೋಗಿತ್ತು. ಪಕ್ಷಿಗಳ ಕಲರವ ನನ್ನನ್ನತ್ತ ಸೆಳೆದಿತ್ತು.
ಆಶ್ಚರ್‍ಯವಲ್ಲವೆ? ಮಲೆನಾಡಿನ ಜಂಬುನೇರಳೆ ಹಣ್ಣು, ಮೈಸೂರಿನ ಬಯಲಲ್ಲಿ! ಯಾರೂ ನೋಡಿ, ಕೇಳಿ ಅರಿಯದ ಹಣ್ಣು, ನಮ್ಮ ತೋಟದ ಮಧ್ಯದಲ್ಲಿ ಸಾವಿರಾರು ಮರಗಿಡಗಳೊಳಗೆ ಒಂದಾಗಿ, ಗುಟ್ಟಾಗಿ ಬೆಳೆದ ಹಣ್ಣು. ಅದು ಹಣ್ಣೆಂದೂ, ರುಚಿಯೆಂದೂ, ತಿನ್ನಬಹುದೆಂದೂ ಈ ಬಯಲುಸೀಮೆಯ ಕೋತಿಗಳಿಗೆ ಹೇಳಿಕೊಟ್ಟವರು ಯಾರು? ಅಳಿಲಿಗೆ ಸೇವನೆಯ ಮಾರ್ಗ ತೋರಿದವರು ಯಾರು? ಹಕ್ಕಿಗಳನ್ನತ್ತ ಸೆಳೆದವರು ಯಾರು? ಯಾವುದೇ ಶಾಲೆ ಇಲ್ಲ, ಪಾಠ-ಪ್ರವಚನಗಳಿಲ್ಲ. ಬಹುಮಾಧ್ಯಮ ಪ್ರಚಾರವಿಲ್ಲ. ಬಣ್ಣದ ಜಾಹೀರಾತು ಫಲಕಗಳಿಲ್ಲ. ಆದರೂ ಕಾಡಿನ ಹಣ್ಣೊಂದು ಭೋಜನಕ್ಕೆ ಲಭ್ಯವೆಂದು ಲೋಕಕ್ಕೆ ತಿಳಿಸಿ ಹೇಳಿದವರು ಯಾರು?
ಏನಿದು ಪ್ರಕೃತಿಯ ಜಾಣ್ಮೆ!
ನಾನು ಮೈಸೂರಿನ ಪಕ್ಕದಲ್ಲೊಂದು ಜಮೀನು ಕೊಂಡೆನೆಂದು ಹೇಳಿದೆನಲ್ಲ? ಆಗ ಅಲ್ಲೊಂದು ನಾಯಿ ಇತ್ತು. ಅದು ಆ ಜಮೀನಿನ ನಾಯಿ. ಆದರೆ ನನ್ನ ದೃಷ್ಟಿಯಲ್ಲಿ ಅದೊಂದು ಕೊಳಕು ನಾಯಿ. ಮನೆಯಂಗಳದಲ್ಲಿ ಹೊಲಸು ಮಾಡುತ್ತಿತ್ತು. ನನಗೂ ರೋಸಿಹೋಯಿತು. ಒಂದು ದಿನ ಯಾರೋ ಬಂದವರ ಜೊತೆಗೆ ಕಾರಿನಲ್ಲಿ ಹಾಕಿ ಆ ನಾಯಿಯನ್ನು ಮೈಸೂರು ಪೇಟೆಯೊಳಗೆ ಬಿಟ್ಟು ಬಂದೆ. ವಿಶಾಲ ಮೈಸೂರು. ಸಮೃದ್ಧಿಯ ಊರು. ಯಾರೋ ಶ್ರೀಮಂತರು ತಿನ್ನಲಾರದೆ ಎಸೆದದ್ದನ್ನು ತಿಂದುಂಡು ಕಾಲ ಕಳೆಯಲಿ, ಎಲ್ಲಾದರೂ ಕೊಳಕು ಮಾಡಲಿ ಎಂದುಕೊಂಡಿದ್ದೆ. ಆದರೆ ಏನಾಶ್ಚರ್‍ಯ! ‘ಅದು ಕಾಲಾಂತರದಲ್ಲಿ ಮತ್ತೆ ನಮ್ಮ ತೋಟ ಹುಡುಕಿಕೊಂಡು ಬಂತು’ ಎಂದು ನಾನು ಹೇಳುವೆನೆಂದುಕೊಂಡಿರಾ? ಹಾಗೆ ನಾನು ಹೇಳಿದರದು ಆಶ್ಚರ್‍ಯವಾದರೂ ಅಷ್ಟೊಂದು ಆಶ್ಚರ್‍ಯವಲ್ಲ. ತನ್ನ ವಾಸನಾಶಕ್ತಿಯಿಂದ ನಾಯಿ ಹಾಗೆ ಹಿಂತಿರುಗಿ ಬಂದ ಹತ್ತಾರು ಉದಾಹರಣೆಗಳಿರಬಹುದು. ಆದರಿದು ಆದದ್ದು ಬೇರೆ ರೀತಿ.
ನಮಗೆ ಜಮೀನು ಮಾರಿದವರು ಗಣಪತಿ ಎಂಬವರು. ಅವರು ತೋಟ ಮಾರಿದ ಮೇಲೆ ಮೈಸೂರು ಜೆ.ಪಿ. ನಗರದಲ್ಲಿ ಮನೆ ಮಾಡಿದ್ದರು. ತೋಟದ ಮತ್ತು ನಾಯಿಯ ಸಂಕಟ ತಪ್ಪಿತೆಂದು ಖುಷಿಯಲ್ಲಿದ್ದರು. ನಾಯಿಯ ಸಂಬಂಧ ಕಡಿದು ವರ್ಷವೇ ಕಳೆದಿತ್ತು. ಆದರೆ….
ನಾನು ಆ ಕೊಳಕು ನಾಯಿಯನ್ನು ಬಿಟ್ಟದ್ದು ಮೈಸೂರಿನ ವಿದ್ಯಾರಣ್ಯಪುರಂನಲ್ಲಿ. ವಿದ್ಯಾರಣ್ಯಪುರಂಗೂ, ಜೆ.ಪಿ. ನಗರಕ್ಕೂ ಏನಿಲ್ಲವೆಂದರೂ ಎರಡು ಕಿಲೋಮೀಟರ್ ಅಂತರ. ಈ ಅಂತರವನ್ನು ಎಷ್ಟಾದರೂ ಹೆಚ್ಚಿಸುವಂತೆ ನೂರಾರು ಸಮಾನಾಂತರ ರಸ್ತೆಗಳು. ಅಲ್ಲೆಲ್ಲ ನೂರಾರು ವಾಹನಗಳು. ಸಾವಿರಾರು ಜನರು. ಓಡಾಡುವವರು. ಕೂಗಾಡುವವರು. ತೂರಾಡುವವರು. ಪೇಟೆಯೆಂದರೆ ಹೇಳಬೇಕೆ? ಬೆಂಕಿಪೊಟ್ಟಣ ಗಾತ್ರದಿಂದ ಹಿಡಿದು, ಭಾರೀ ಭಾಂಗಿಯವರೆಗೆ ನೂರಾರು ತರಹದ ಮನೆ, ಮಹಲು, ಮಂದಿರಗಳು. ಅಲ್ಲೊಬ್ಬ ಗಣಪತಿ. ಎಂದೋ ಒಂದೊಮ್ಮೆ ಆಗಿದ್ದವರು ಆ ನಾಯಿಗೂ ಪತಿ. ಅವರ ಬೆವರಿನ ವಾಸನೆಯನ್ನು ಈ ನಾಯಿ ಹಿಡಿದೇಬಿಟ್ಟಿತಲ್ಲಾ! ಬೆಚ್ಚನೆಯ ಮನೆ ಅರಸಿ ಬಿಟ್ಟಿತಲ್ಲಾ!
ಏನಿದು ಪ್ರಕೃತಿಯ ಜಾಣ್ಮೆ! ತಾಳ್ಮೆ! Instinct! ಹುಟ್ಟರಿವು!
ಎತ್ತಣಿಂದೆತ್ತ!
ಅದೊಂದು ಕಾಡಾನೆ. ಕುರುಡಾನೆ. ಸಕಲೇಶಪುರದಲ್ಲಿ ದಾಂಧಲೆ ಮಾಡುತ್ತಿತ್ತಂತೆ. ಸರಿಮಾಡುವುದು ಸರ್ಕಾರದ ಜವಾಬ್ದಾರಿ. ಹಾಗಾಗಿ ಹೇಗೋ ಹಿಡಿದು, ನೂರಾರು ಕಿ.ಮೀ. ದೂರದ ಸತ್ಯಮಂಗಲ (ಈರೋಡ್) ಘಾಟಿಯಲ್ಲಿ ಆ ಆನೆಯನ್ನು ಬಿಟ್ಟರಂತೆ. ಆದರೆ ಆ ಕುರುಡು ಆನೆ ಮೂರು ತಿಂಗಳ ಅನಂತರ ಮತ್ತೆ ಸಕಲೇಶಪುರದಲ್ಲಿ ಪ್ರತ್ಯಕ್ಷವಂತೆ!
ಎತ್ತಣ ಸಕಲೇಶಪುರ, ಎತ್ತಣ ಈರೋಡು! ಹೋದದ್ದು ರಾಜರಸ್ತೆಯಲ್ಲಿ ಲಾರಿಯಲ್ಲಿ. ಆದರೆ ಅದು ಹಿಂತಿರುಗಿ ಬಂದದ್ದು ಕಾಡುದಾರಿಯಲ್ಲಿ. ಅದಕ್ಕೆ ಅಷ್ಟು ದೂರದ ದಾರಿ ಹೇಳಿದವರು ಯಾರು? ಅದಕ್ಕೆ ಮಾತೃಭೂಮಿಯ ಪ್ರೇಮವನ್ನು ತುಂಬಿದವರು ಯಾರು?
ಯಾವುದೇ ಒಂದು ಸಾಮಾನ್ಯ ಜೀವಿಗೆ ಸಾಧ್ಯವಾಗುವುದು, ಪ್ರಾಕೃತಿಕವಾಗಿಯೇ ಸಿದ್ಧಿಸುವುದು, ಮನುಷ್ಯನಿಗೆ ಇಲ್ಲ ಎಂದರೆ ಹೇಗೆ? ಪ್ರತಿಯೊಂದನ್ನೂ ಶಾಲೆಯಲ್ಲಿ ಕಲಿತೇ ಬರಬೇಕೆಂದರೆ ಹೇಗೆ? ಕಲಿಕೆಯೇ ನಮಗೆ ಹಗೆ ಆಗಿರಬಹುದೇ?
ನಾವೊಂದು ಸಾವಯವ ಮಳಿಗೆ ಮಾಡಿದ್ದೇವೆ. ಸಾವಯವ ಎಂದರೆ, ನಿಮಗೆ ಗೊತ್ತಲ್ಲ? ಅದೇ-ಏನೂ ವಿಷರಾಸಾಯನಿಕ ಹಾಕದೆ ಬೆಳೆದ ಆಹಾರಪದಾರ್ಥಗಳು. ರಾಸಾಯನಿಕ ಹಾಕಿ ಬೆಳೆದದ್ದು ಆರೋಗ್ಯಕ್ಕೆ ಕೆಟ್ಟದ್ದು ಎಂದು ನಿಧಾನವಾಗಿ ಬುದ್ಧಿವಂತ (ವಿದ್ಯಾವಂತ) ಜನರಿಗೆ ಗೊತ್ತಾಗಿದೆ. ಆದರೆ ಸಾವಯವ ಎನ್ನುವುದು ಮಾರಾಟಕ್ಕಿರುವ ವಸ್ತುವಲ್ಲ. ಅದೊಂದು ತತ್ತ್ವ. ಅದು ಏನಿದ್ದರೂ ಸ್ವಂತ ದುಡಿಮೆಯ ಫಲ – ಎಂದು ಇನ್ನೂ ಗೊತ್ತಾಗುವುದು ಬಾಕಿ ಇದೆ. ಹಾಗೆ ಗೊತ್ತಾಗಲು ಇನ್ನೆಂಥ ಶಾಲೆ ಬೇಕೋ ತಲೆಮಾರು ಬೇಕೋ ಗೊತ್ತಿಲ್ಲ. ಹಾಗಾಗಿ ಸಾವಯವಕ್ಕೊಂದು ಅಂಗಡಿ ಇದೆ. ಮತ್ತು ಅಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತದೆ. ಅಲ್ಲಿಗೆ ನಾನು ಒಂದಷ್ಟು ಅಪರೂಪದ ಹಣ್ಣು, ತರಕಾರಿ, ಸೊಪ್ಪುಗಳನ್ನು ತಂದಿಡುವುದು ಇದೆ. ಅದನ್ನು ಕಂಡ ಬುದ್ಧಿವಂತರು ಸಾಮಾನ್ಯವಾಗಿ, ಇದು ಏನಕ್ಕೊಳ್ಳೆಯದು? ಎಂದು ಮೊದಲ ಪ್ರಶ್ನೆ ಹಾಕುತ್ತಾರೆ. ಯಾಕೆಂದರೆ ಅದನ್ನು ತಾನಾಗಿ ತಿಳಿಯುವ instinct (ಹುಟ್ಟರಿವು) ಅವರಿಗೆಲ್ಲಾ ಹೊರಟುಹೋಗಿದೆ. ಏನಕ್ಕೊಳ್ಳೆಯದು? ಎಂದು ಎಂದೂ ಕೇಳದೆ, ಎಲ್ಲದರಲ್ಲೂ ಇರುವ ಒಳ್ಳೆಯದನ್ನು, ರುಚಿಯನ್ನು ತಾವಾಗಿ ಕಂಡುಕೊಳ್ಳುವ, ಪ್ರಾಣಿ ಪಕ್ಷಿಗಳ ಹುಟ್ಟರಿವು ನಾಗರಿಕ ಜಗತ್ತಿಗೆ ಹೊರಟು ಹೋಗಿದೆ.
ಈ ಹಂತವನ್ನು ಅಕಸ್ಮಾತ್ ದಾಟಿದವರು, ಇದರಿಂದ ಏನು ಮಾಡಬಹುದು ಎಂದು ಕೇಳುತ್ತಾರೆ. ಹಾಗೆ ಕೇಳುತ್ತಾರಾದರೂ, ಹೇಳಿದ್ದನ್ನು ಕೇಳಿಸಿಕೊಂಡು, ನೆನಪಿಟ್ಟುಕೊಂಡು, ಅಡುಗೆ ಮಾಡುವಷ್ಟು ವ್ಯವಧಾನವಾಗಲಿ, ಪುರುಸೊತ್ತಾಗಲಿ ಅವರಿಗಾದರೂ ಇರುವುದಿಲ್ಲ. ಒಂದು ರೆಸಿಪೀ ಪ್ರಿಂಟ್‌ಔಟ್ ಹಾಕಬಾರದೇ? ಎಂದು ಆಕ್ಷೇಪಿಸುವ ಮೂಲಕ ತಮ್ಮ ಬುದ್ಧಿವಂತಿಕೆಯನ್ನು ಅಥವಾ ಪ್ರಕೃತಿಪರ ಕಾಳಜಿಯನ್ನು ಪ್ರದರ್ಶಿಸುವಂಥವರಾಗುತ್ತಾರೆ.
ಇಂಥ ಮಾತುಗಳನ್ನು ಕೇಳುವಾಗಲೆಲ್ಲಾ ನನಗೆ ನಗೆಯು ಬರುತ್ತದೆ. ಒಂದು ಮೂಲಂಗಿಯಲ್ಲಿ ಸಾಂಬಾರು ಮಾಡಲು ತಿಳಿದುದಾದರೆ, ಒಂದು ದಂಟಿನಲ್ಲಿ ಪಲ್ಯ ಮಾಡಲು ಬಲ್ಲೆವಾದರೆ, ಒಂದು ಲಿಂಬೆ ಹಣ್ಣನ್ನು ಹಿಂಡಿ ಶರಬತ್ತು ಮಾಡಲು ಅರಿತುದಾದರೆ, ಉಪ್ಪು ಹುಳಿ ಸಿಹಿ ಖಾರಗಳು ನಮ್ಮ ಮನೆಯ ಡಬ್ಬಗಳಲ್ಲಿ ಇರುವುದಾದರೆ, ‘ಎಲ್ಲಾರೂ ದುಡಿಯುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ದಾಸವಾಣಿ ಅನುರಣಿಸಿದರೆ ಹೊಟ್ಟೆಗಾಗುವ ಅಡುಗೆ ಮಾಡುವುದು ಇಷ್ಟು ಕಷ್ಟವೇ? ಇನ್ನೂ ಕಷ್ಟವೇ? ನಾವು ಈಗಾಗಲೇ ಮಾಡುವ ಯಾವುದೋ ಒಂದು ಪಲ್ಯ, ಸಾರು, ಸಾಂಬಾರು, ಜ್ಯೂಸು, ಜಾಮ್, ದೋಸೆ, ರೊಟ್ಟಿ, ಚಕ್ಕುಲಿಯ ತಜ್ಞತೆಯನ್ನು ಉಪಯೋಗಿಸಿ ಒಂದಷ್ಟು ಹಿಗ್ಗಿಸಿ ಅಥವಾ ಕುಗ್ಗಿಸಿ, ಬಗ್ಗಿಸಿ, ಇನ್ಯಾವುದೋ ಒಂದು ಸೊಪ್ಪನ್ನು, ತರಕಾರಿಯನ್ನು, ಹಣ್ಣನ್ನು ಬಳಸುವುದು, ಬೇಯಿಸುವುದು ಅಷ್ಟೊಂದು ಕಷ್ಟವೇ? ನಮ್ಮೊಳಗೆ ಕುತೂಹಲಕ್ಕೂ, ಪ್ರಯೋಗಶೀಲತೆಗೂ ಅಷ್ಟೊಂದು ಕೊರತೆಯೇ? ಇನ್ನೊಂದಷ್ಟು ಕಂಪ್ಯೂಟರ್, ಪೇಪರ್ ದಂಡ ಮಾಡುವುದು ಅಗತ್ಯವೇ?
ಕಾರಣ ಏನು?
ಹಾಗಾದರೆ, ನಾವೆಲ್ಲ ಪ್ರಯೋಗಶೀಲವಾಗಿ ಬೆಳೆದಿದೆ ಎಂದು ಕೊಳ್ಳುವ ವೈಜ್ಞಾನಿಕ ಜಗತ್ತಿನಲ್ಲಿ ಇರುವುದು ಸುಳ್ಳೇ? ಪ್ರಾಕೃತಿಕ ಜಗತ್ತಿನಲ್ಲಿ ಕೇವಲ ಹುಟ್ಟರಿವಿನಿಂದ ಬರುವ ಜ್ಞಾನವು ಕೂಡ, ವೈಜ್ಞಾನಿಕ ಜಗತ್ತಿನಲ್ಲಿ ಅದ್ಭುತಾದ್ಭುತ ತರಬೇತಿಯ ಅನಂತರವೂ ನಮಗೆಲ್ಲ ಬಾರದಿರಲು ಕಾರಣವೇನು?
ಹಾಗಾದರೆ ಪ್ರಕೃತಿಯು ಪಕ್ಷಪಾತಿಯೇ? ಪ್ರಾಣಿ ಪಕ್ಷಿಗಳಿಗೆಲ್ಲ ಕೊಟ್ಟ ಹುಟ್ಟರಿವನ್ನು ಮನುಷ್ಯನಿಗೆ ಮಾತ್ರ ಕೊಡಲಿಲ್ಲವೆನ್ನೋಣವೇ?
ಆದರೆ ಹಾಗೇನೂ ಇಲ್ಲ. ಅವರೊಬ್ಬ ಮೇಸ್ಟ್ರು. ತಾರುಣ್ಯದಲ್ಲೇ ಕಣ್ಣಿನ ದೃಷ್ಟಿ ಹೋಗಿತ್ತು. ಆದರೂ ಅವರಿವರಿಂದ ಕೇಳಿ ತಿಳಿದ ಜ್ಞಾನವೇ ಅವರನ್ನು ಜನಸಾಮಾನ್ಯರಿಗಿಂತ ಪ್ರತ್ಯೇಕವಾಗಿಸಿತ್ತು. ನಾನೊಮ್ಮೆ ಅವರನ್ನು ಬಸ್ಸಿನಲ್ಲಿ ಭೇಟಿಯಾದೆ. ನಾಲ್ಕಾರು ವರ್ಷಗಳ ಹಿಂದೊಮ್ಮೆ ಭೇಟಿಯಾಗಿ ಮಾತನಾಡಿಸಿದ ನೆನಪಿನಲ್ಲಿ ಅವರಿಗೆ ನಮಸ್ಕರಿಸಿ ಕ್ಷೇಮ ವಿಚಾರಿಸಿದೆ. ನಾನು ಇನ್ನೂ ನನ್ನ ಹೆಸರು ಹೇಳುವ ಮೊದಲೇ ನೀವು ಚಂದ್ರಶೇಖರ್ ಅಲ್ಲವಾ? ಎಂದು ಅವರೇ ಕೇಳಿದರು. ನಾಲ್ಕು ವರ್ಷಗಳ ಹಿಂದಿನ ನನ್ನ ಸ್ವರವನ್ನು ಅವರು ನೆನಪಿಟ್ಟಿದ್ದರು. ಗುರುತುಹಿಡಿದರು. ಆಹಾ ಎಂತಹ ಹುಟ್ಟರಿವು! ಸಹಜ ಸಾಮರ್ಥ್ಯ!
ನಮ್ಮ ತೋಟದಲ್ಲಿ ಸಾವಿರಾರು ಮರಗಿಡಗಳು, ಕಾಡಿನ ಹಾಗೆ. ಅದರ ನಡುವಿನಲ್ಲಿ ಒಂದಷ್ಟು ಗಂಧದ ಗಿಡಗಳು. ತೋಟದ ರಕ್ಷಣೆಗೆ ಬಂದೋಬಸ್ತು ಬೇಲಿ. ಆ ಕಳ್ಳರೆಂದೂ ಹಗಲುಹೊತ್ತಿನಲ್ಲಿ ಬಂದು ನೋಡಿರಲು ಕೂಡ ಅವಕಾಶ ಇಲ್ಲ. ಆದರೂ ರಾತ್ರಿ ಕಾಲದಲ್ಲಿ, ಬಲಿತ ಗಂಧದ ಮರಗಳು ಕಳ್ಳತನವಾಗುವುದು ಮಾಮೂಲಿ. ಅವರಿಗೆ ಆ ರಾತ್ರಿಯಕಣ್ಣು ಕೊಟ್ಟ ಬರಹವದು ಯಾವುದು?
ಅವನೊಬ್ಬ ಮುಗ್ಧ ಹುಡುಗ. ಹಿಂದೊಮ್ಮೆ ನನ್ನೊಂದಿಗಿದ್ದ. ಟ್ರ್ಯಾಕ್ಟರನ್ನು ಬೆರಗುಕಣ್ಣುಗಳಿಂದ ನೋಡಿದ್ದ. ಆ ನೋಟವೇ ಅವನಿಗೆ ಸ್ಫೂರ್ತಿಯಾಯಿತಂತೆ. ಆತ ಅಕ್ಷರ ಕಲಿಯದಿದ್ದರೇನಂತೆ; ವ್ಯವಹಾರ ಚತುರ. ಈಗ ನಾಲ್ಕು ಟ್ರ್ಯಾಕ್ಟರ್‌ಗಳ ಒಡೆಯ. ಸಾಕಷ್ಟು ಸಂಪತ್ತಿನೊಡೆಯ. ಲೋಕಜ್ಞಾನಕ್ಕೊಡೆಯ. ಸ್ವಾಭಿಮಾನಕ್ಕೊಡೆಯ.
ಒಂದು ಬಡಗಿ, ಮೇಸ್ತ್ರಿ, ಕಮ್ಮಾರ, ಕುಂಬಾರ, ಚಿನಿವಾರ – ಹೀಗೆ ಬದುಕಿನ ಮೂಲಉದ್ಯೋಗವದು ಯಾವುದಾದರೂ ಇರಲಿ, ಓದಿದವರು ಮಾಡುವುದಕ್ಕಿಂತ ಚೆನ್ನಾಗಿ ಓದದವರು ಮಾಡುವುದನ್ನು ನಾವಿಂದು ಗಮನಿಸಬಹುದು. ಹಾಗಾಗಿಯೇ ಇಂದು ಮೂಲಕೆಲಸಗಳಿಗೆ ಕಾರ್ಮಿಕರ ತೀವ್ರ ಕೊರತೆ ಇರುವುದು.
ಅನುರಣಿಸುವ ಸಂಶಯ
ಅದೊಂದು ದಿನ ನಮ್ಮ ತೋಟಕ್ಕೆ ತೆಂಗಿನಕಾಯಿ ತುಂಬಲು ರಿಕ್ಷಾಟೆಂಪೋ ಬಂದಿತ್ತು. ಕಾಯಿ ಎಣಿಕೆಯಾಗುತ್ತಿತ್ತು. ಆಗ ಯಾರೋ ಕಾಲೇಜು ವಿದ್ಯಾರ್ಥಿಗಳಿಬ್ಬರು ನಮ್ಮ ತೋಟ ನೋಡಲು ಬಂದಿದ್ದರು. ಕಾಯಿ ಎಣಿಕೆ ತುಸು ತಡೆಯಿತು. ಮಾತುಕತೆ ಅನಿವಾರ್‍ಯವಾಯಿತು. ನೀವೇನು ಮಾಡುತ್ತಿದ್ದೀರಿ? ಎಂದು ಕೇಳಿದೆ.
ಎಂ.ಬಿ.ಎ.
ಎಷ್ಟು ಡೊನೇಷನ್?
ಹನ್ನೆರಡು ಲಕ್ಷ.
ಕೇಳಿಸಿಕೊಳ್ಳುತ್ತಿದ್ದ ಟೆಂಪೋಡ್ರೈವರ್. ತನ್ನ ಹುಟ್ಟರಿವಿನ ಬಲದಿಂದ ಉದ್ಗರಿಸಿಯೇ ಬಿಟ್ಟ – ನಾಲ್ಕು ಟೆಂಪೋ, ಆರಾಮ ಜೀವನ!
ಹಾಗಾದರೆ ಎಂ.ಬಿ.ಎ ಎಂದರೆ ಏನು? ನನ್ನೊಳಗೆ ಸದಾ ಅನುರಣಿಸುತ್ತದೆ.
ಆಗಷ್ಟೇ ಹುಟ್ಟಿದ ಮಗು, ತಾಯಿಯ ಮೊಲೆಯಲ್ಲಿರುವ ಹಾಲನ್ನು ಕಂಡುಕೊಳ್ಳುವಂತೆ, ಸಮಾನವಯಸ್ಸಿನ ಮಕ್ಕಳು ಸ್ನೇಹ ಬೆಳೆಸಿ ಮಣ್ಣಿನಲ್ಲೋ, ಮರಳಿನಲ್ಲೋ, ಮರದಲ್ಲೋ ಆಟವಾಡುವಂತೆ, ತಾರುಣ್ಯ ಬಂದಂತೆ ತರುಣ ತರುಣಿಯರೊಳಾಸಕ್ತಿ ಕುದುರುವಂತೆ, ಹಸಿವಿಗಾಗುವ ಅನ್ನವನ್ನು ಗ್ರಹಿಸುವ ಶಕ್ತಿ, ಅನ್ನಕ್ಕಾಗಿ ದುಡಿಯುವ ಶಕ್ತಿ, ಯುಕ್ತಾಯುಕ್ತ ವಿವೇಕ ಶಕ್ತಿ, ಪ್ರಕೃತಿನಿಯಾಮಕ ಶಕ್ತಿಗಳನ್ನು ಅರಿಯುವ ಶಕ್ತಿ – ಅದೇ ಆ ಹಕ್ಕಿ, ಆ ಆನೆ, ಆ ನಾಯಿಗೆ ಇರುವ ಶಕ್ತಿ ಈ ಮನುಷ್ಯನಿಗೂ ಇದೆ.
ಆದರೆ ನಮಗಿಂದು ದಕ್ಕಿರುವ ಸೌಕರ್‍ಯಗಳು – ವಸ್ತುಸೌಕರ್‍ಯ, ವಿತ್ತಸೌಕರ್‍ಯ, ವಿದ್ಯಾಸೌಕರ್‍ಯಗಳು ಬರಬರುತ್ತಾ ನಮ್ಮನ್ನು ಜಡವಾಗಿಸುತ್ತಿವೆ. ನಮ್ಮ ಹುಟ್ಟುಪ್ರತಿಭೆಗಳನ್ನೆಲ್ಲಾ ಹಂತಹಂತವಾಗಿ ಹೊಸಕಿಹಾಕುತ್ತಿವೆ.
ಮಗು ತೀರ್ಥಕುಡಿದರೆ ಶೀತ, ಆರತಿ ಹಿಡಿದರೆ ಉಷ್ಣ ಎಂಬ ಕಾಳಜಿಯಲ್ಲಿ. ಕೇವಲ ಬೇಕರಿ ತಿಂಡಿಗಳ ವೈಭವದಲ್ಲಿ, ನಾಲ್ಕು ಕೋಣೆಯ ಮನೆಯಲ್ಲಿ, ನಾಲ್ಕು ಗೋಡೆಯ ಶಾಲೆಯಲ್ಲಿ ಜೀವಮಾನ ಕಳೆದರೆ ಇಂತಿಪ್ಪ ನಾಲ್ಕು ತಲೆಮಾರೇ ಕಳೆದರೆ, ‘ಸಹಜ ಪ್ರತಿಭೆ’, ‘ಹುಟ್ಟರಿವು’ – ಅರಳುವುದಾದರೂ ಹೇಗೆ?
ನಾವೆಲ್ಲ ಶಾಲೆಗೆ ಹೋಗುತ್ತಿದ್ದುದು, ನಾಲ್ಕಾರು ಕಿಲೋಮೀಟರ್ ನಡೆದು. ಮಳೆ, ಗಾಳಿ, ಬಿಸಿಲುಗಳಿಗೆ ನಲಿದು. ಸುತ್ತಣ ಪಶು, ಪಕ್ಷಿ, ಸಸ್ಯರಾಶಿಗೆ ಒಲಿದು. ಹಾಗಾಗಿ ನಮಗೆಲ್ಲ ನೆನಪುಮಾಡಿ ಹೇಳಲು ಒಂದಷ್ಟು ವಿಷಯಗಳಿವೆ. ಹಾಗಾಗಿ ನಾವೆಲ್ಲ ಮುದುಕರಾದ ಮೇಲೂ, ಹೇಳಿದ್ದನ್ನೇ ಹೇಳುವ ದೀನ ಸ್ಥಿತಿಗೆ ತಲಪಿದ ಮೇಲೂ (ಹಳೆಯದನ್ನಷ್ಟೇ ಮೆಲುಕುಹಾಕುವ ಸ್ಥಿತಿಯಲ್ಲಿ ಕೂಡ) ಒಂದಷ್ಟಾದರೂ ವೈವಿಧ್ಯವಾಗಿ ಹೇಳಲು (ಗೊಣಗಲು) ವಿಷಯ ಇದ್ದೀತು.
ಆದರೆ ಇಂದಿನ ಮಕ್ಕಳು ಮುದುಕರಾದ ಮೇಲೆ ಅವರ ಮಕ್ಕಳ, ಮೊಮ್ಮಕ್ಕಳ ಸ್ಥಿತಿ….? ಪಾಪ! ಪಾಪ! ಅದು ಹೇಗಿದ್ದೀತು?
ಅದೇ ಹಳದಿ ವ್ಯಾನ್, ಅದೇ ಬಿಸ್ಕೇಟ್ ಡಬ್ಬ, ಅದೇ ಹೋಮ್‌ವರ್ಕ್, ಅದೇ ಬೈಹಾರ್ಟ್…. ಎಲ್ಲ ಮುದುಕರೂ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ಎಂದು ಪ್ರತಿ ದಿನವೂ ಬಡಬಡಿಸಲು ತೊಡಗಿದರೆ – ಆಗ ನಾನಿರುವುದಿಲ್ಲ, ಆದರೂ ಆ ಸ್ಥಿತಿಯನ್ನು ಗ್ರಹಿಸಿದರೆ – ನನಗೆ ಈಗಲೇ ಭಯವಾಗುತ್ತದೆ (ಆ ನಮ್ಮ ಮೊಮ್ಮಕ್ಕಳನ್ನು ಕುರಿತು ವೇದನೆಯಾಗುತ್ತದೆ).
ಬರಹ ಇಂದು ನಮಗೆ ಬಹಳಷ್ಟನ್ನು ಕಲಿಸುತ್ತದೆ; ಆದರೆ ಬಹಳಷ್ಟನ್ನು ಮರೆಸುತ್ತಿದೆ. ಅದು ಮರೆಸುತ್ತಿರುವುದು ಎಷ್ಟೆಂದರೆ, ಎಷ್ಟುದ್ದ ಕ್ಯಾಮರಾ, ಬೈನಾಕ್ಯುಲರ್ ಹಿಡಿದರೂ ಅಲ್ಲೇನೂ ಇಲ್ಲದಂತಾಗುತ್ತಿದೆ. ಪ್ರಕೃತಿಯಲ್ಲಿ ಜಲಮೂಲವೂ, ಜ್ಞಾನಮೂಲವೂ ಬರಿದಾಗುತ್ತಿರಲು, ತೂತುಬಾವಿಯಿಂದ ಹೊರಕ್ಕೆ ತೆಗೆಯುವುದೇನು? ಕ್ಯಾಮರಾ ಕಣ್ಣಿಂದ ನೆನೆಯುವುದೇನು?
ಇರುವ ಅರಿವಿಗೆ, ಪ್ರಕೃತಿಯಿಂದ ತಾನಾಗಿ ಬರುವ ಅರಿವಿಗೆ, ಬರಹ ಸೇರಿದರೆ ಅದು ಲಾಭ. ಈ ಲಾಭಕ್ಕಾಗಿ ಆ ಲಾಭ ಬಿಟ್ಟರೆ, ಹುಟ್ಟರಿವನ್ನು ಬಿಟ್ಟರೆ, ಹುಟ್ಟರಿವಿನಿಂದಲೇ ಬರುವ ಕೃಷಿಜ್ಞಾನಕ್ಕೆ, ಅಡುಗೆಯ ವಿಜ್ಞಾನಕ್ಕೆ, ವಿರಾಮದ ಆಟಕ್ಕೆಲ್ಲ ಪಾಠ್ಯ ಮಾಡುವುದರಿಂದ, ಲೋಭಿ ತಾ ಉಪವಾಸವಿದ್ದು ಕೂಡಿಟ್ಟ ಸಂಪತ್ತಿನಂತೆ ಎಲ್ಲ ವ್ಯರ್ಥ.
ಬರಹವೆಮ್ಮನು ಜ್ಞಾನದ ಬಲದೊಳೆತ್ತುವು-
ದೆಂದೆನುತ, ಬಲ ಮೀರಿ ಶಾಲೆಯೊಳ್
ಪುಸ್ತಕವನೆತ್ತಿಳಿಸುತಲಿಂದೆಮ್ಮ ಕಂದರ
ಕತ್ತೆ ಸೋತಿರಲತ್ತಿತ್ತ ನೋಡಲಾಪರು
ಬರವ ನೀಗಲುಪಾಯವ ಕಾಣರು _ ವಿಜ್ಞಾನೇಶ್ವರಾ
ಲೇಖನ ಚೇತೋಹಾರಿಯಾಗಿದೆ. ಚಿತ್ರಗಳು ಕಣ್ತುಂಬುತ್ತದೆ. ಚಂದ್ರಶೇಖರ ಅವರ ವಿದ್ಯೆ, ವೃತ್ತಿ, ಹವ್ಯಾಸ ಎಲ್ಲವೂ ವೈವಿಧ್ಯಮಯ. ಉತ್ಥಾನಕ್ಕೆ ಅಭಿನಂದನೆಗಳು.