ಮದುವೆಯೆಂಬುದು ಪ್ರತಿಷ್ಠೆಗೆ ಮತ್ತು ಪ್ರದರ್ಶನಕ್ಕೆ ಸೀಮಿತವಾದ ದಕ್ಷಿಣ ಆಫ್ರಿಕದ ಮೇಲ್ವರ್ಗದ ಕುಟುಂಬಗಳಲ್ಲಿ ಸಿತಾರ್ನಂಥ ಮಧುರ ವಾದ್ಯದ ವಾದನವನ್ನು ಸಭಾಗೃಹದ ಸೌಂದರ್ಯಕ್ಕೆ ಬಳಸಿಕೊಳ್ಳಲಾಗುತ್ತದೆಯೇ ಹೊರತು ಸಂಗೀತವನ್ನು ಆಸ್ವಾದಿಸಲು ಖಂಡಿತ ಅಲ್ಲ. ಅಂಥ ಸಮಾರಂಭಗಳ ಇಂಥ ಆಹ್ವಾನಗಳನ್ನು ನಿರಾಕರಿಸುತ್ತ ನಮ್ಮ ಸಂಗೀತದ ಮಹತ್ತು ಮತ್ತು ಸ್ವಂತಿಕೆಯನ್ನು ಉಳಿಸಿಕೊಳ್ಳುತ್ತ ವಿದೇಶೀ ನೆಲದಲ್ಲಿ ಬದುಕುವುದು, ಹಾಗೆಯೇ ಭಾರತೀಯ ಸಂಗೀತದ ಮೌಲ್ಯವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಸರಿಯಾದ ಹೆಜ್ಜೆಗಳನ್ನಿಡುತ್ತ ಸಾಗುವುದು ಒಂದು ವಿಶಿಷ್ಟವಾದ ಅನುಭವ ಮತ್ತು ಮಾರ್ಗವೂ ಹೌದು.
ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿ ದಕ್ಷಿಣ ಆಫ್ರಿಕದ ಡರ್ಬನ್ನಲ್ಲಿ ಯಶಸ್ವೀ ಜೀವನವನ್ನು ನಡೆಸುತ್ತಿರುವ ಉತ್ತರ ಕನ್ನಡದ ಯುವಕ ಕಣಾದ ರಾಘವ ಪ್ರವೃತ್ತಿಯಲ್ಲಿ ಬರಹಗಾರರೂ ಹೌದು, ಉತ್ತಮ ಸಿತಾರ್ ವಾದಕರೂ ಹೌದು. ದಕ್ಷಿಣ ಆಫ್ರಿಕದಲ್ಲಿ ಭಾರತೀಯ ಸಂಗೀತದ ಮಾಧುರ್ಯವನ್ನು ಪರಿಚಯಿಸುತ್ತಿರುವ ರಾಘವರ ಪ್ರಯತ್ನ ಶ್ಲಾಘನೀಯವಾದದ್ದು.
ಕಣಾದ ರಾಘವ `ಉತ್ಥಾನ’ದ ಓದುಗರಿಗಾಗಿಯೇ ಬರೆದ ತಮ್ಮ ಸಂಗೀತ ಯಾತ್ರೆಯ ಅನುಭವ ಕಥನ ಇಲ್ಲಿದೆ –
ಸಂಗೀತಗಾರನಾಗಿ, ಅದರಲ್ಲೂ ಶಾಸ್ತ್ರೀಯ ಸಂಗೀತದ ಸಾಧನೆಯಲ್ಲಿ ತೊಡಗಿರುವ ಸಾಧಕನ ಸಾಧನೆಯು ಅಥವಾ ಸಾಧನೆಯ ಹಾದಿಯು ಸಾಮಾನ್ಯವಾಗಿ ಕತ್ತಲ ದಾರಿಯಲ್ಲಿಯೇ ಸಾಗುತ್ತದೆ. ನಮ್ಮ ಸಂಗೀತದ ಆಳ, ವಿಸ್ತಾರ, ಗಾಂಭೀರ್ಯ ಮತ್ತು ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಂಡರೆ ಒಂದರ್ಥದಲ್ಲಿ ಈ ಸಾಧನೆಯ ಹಾದಿಯು ಕತ್ತಲೆಯಲ್ಲಿಯೇ ಸಾಗುವುದು ಒಳಿತೇನೊ. ಒಂದಿಡೀ ಇರುಳು ಕಳೆಯಲೇಬೇಕಲ್ಲ, ಬೆಳಗ ಬೆಳಕನ್ನು ಕಾಣಲು?
ನನ್ನ ಗುರುಗಳಾದ ಸಂಜೀವ್ ಕೊರ್ತಿಯವರು ಆಗಾಗ ಈ ಮಾತನ್ನು ಹೇಳುತ್ತಿರುತ್ತಾರೆ. ಹರಿಯುವುದು ಮಾತ್ರ ನಾದವಲ್ಲ. ಸ್ವರವು ಹಾಗೆ ಹರಿಯುವಾಗ, ಆ ಸ್ವರವು ಎಲ್ಲಿಂದ ಬರುತ್ತಿದೆಯೆಂಬುದನ್ನು ನಾದದ ಗಾಂಭೀರ್ಯವು ಅಳೆಯುತ್ತದೆ. ನಿಜವಾದ ಸಂಗೀತಸಾಧಕನೊಬ್ಬ ಏಕತಾರಿಯಲ್ಲಿ ಅದೆಷ್ಟು ಚೆನ್ನಾಗಿ ಸ್ವರವನ್ನು ಕೂಡಿಸುತ್ತಾನೆಯೋ ಅಷ್ಟೇ ಶುದ್ಧವಾಗಿ ಹಾರ್ಮೋನಿಯಮ್ ಇಟ್ಟುಕೊಂಡೂ ಹಾಡಬಲ್ಲವನಾಗಿರುತ್ತಾನೆ. ಅಥವಾ ಸಾಧನೆಯ ಪ್ರಮಾಣ ಅಷ್ಟು ಚೆನ್ನಾಗಿದ್ದರೆ ಎಲ್ಲಿಂದಲೊ ತೋರಿಬಂದ ಅಸ್ಪಷ್ಟ ಶಬ್ದದ ಶ್ರುತಿಯನ್ನು ಆಧಾರವಾಗಿಟ್ಟುಕೊಂಡು ಕೂಡ ಹಾಡಬಲ್ಲ. ಇದು ನಮ್ಮ ಸಂಗೀತದ ಮಹಿಮೆ.
ನಾನು ಡರ್ಬನ್ನಿಗೆ ಬಂದ ಆರಂಭದ ಕಾಲ. ನನ್ನ ಆಯುರ್ವೇದ ಚಿಕಿತ್ಸಾಲಯ ಮತ್ತು ಮನೆ ಆಗ ಒಂದೇ ಆಗಿದ್ದರಿಂದ, ನನ್ನ ಸಹಾಯಕರು ರೋಗಿಗಳಿಗೆ ಅಭ್ಯಂಗ ಮೊದಲಾದ ಚಿಕಿತ್ಸೆಗಳನ್ನು ಮಾಡುವಾಗ ನಾನು ನನ್ನ ಕಾನ್ಸಲ್ಟೇಶನ್ ರೂಮಿನ ಪಕ್ಕದ ಒಂದು ಖಾಲಿ ರೂಮಿನಲ್ಲಿ ಕುಳಿತು ಸಿತಾರ್ ನುಡಿಸುತ್ತಿದ್ದೆ. ಸಾಮಾನ್ಯವಾಗಿ ಹೊಸ ರೋಗಿಗಳನ್ನು ಪರಿಶೀಲಿಸುವುದು ನನ್ನ ಬೆಳಗಿನ ಕೆಲಸವಾದ್ದರಿಂದ ಉಳಿದ ದಿನ ರೋಗಿಗಳ ಪಂಚಕರ್ಮದ ಮೇಲ್ವಿಚಾರಣೆ ಮತ್ತು ಸಿತಾರ್ ಅಭ್ಯಾಸ ಇವೆರಡೇ ನನ್ನ ಕೆಲಸವಾಗಿತ್ತು. ಹಾಗೆ ನನ್ನ ದಿನವೊಂದರ ಅರ್ಧಭಾಗ ಚಿಕಿತ್ಸೆಗಳ ಮೇಲ್ವಿಚಾರಣೆ ಮತ್ತು ಸಿತಾರ್ ಅಭ್ಯಾಸದಲ್ಲಿ ಕಳೆದು ಹೋಗುತ್ತಿತ್ತು.
‘ಸಿಡಿ’ಯ ಮೋಡಿ
ಹೀಗೆಯೇ ಒಂದು ದಿನ ತಮಾಷೆಯ ಸಂಗತಿಯೊಂದು ನಡೆಯಿತು. ಬಹಳ ವರ್ಷಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ರೋಗಿಯೊಬ್ಬರು ನನ್ನ ಕ್ಲಿನಿಕ್ನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಎಂದಿನಂತೆ ಅವರ ಚಿಕಿತ್ಸೆಯು ನಡೆಯುವಾಗಲೂ ನಾನು ನನ್ನ ಕಾನ್ಸಲ್ಟೇಶನ್ ರೂಮಿನ ಪಕ್ಕದ ರೂಮಿನಲ್ಲಿ ಕುಳಿತು ಸಿತಾರ್ ಅಭ್ಯಾಸ ಮಾಡುತ್ತಿದ್ದೆ. ಅವರ ಚಿಕಿತ್ಸೆ ಮುಗಿದ ದಿನ ಅವರು ನನ್ನಲ್ಲಿ ಬಂದು ಹೇಳಿದರು, “ನನ್ನ ಚಿಕಿತ್ಸೆ ನಡೆಯುವಾಗ ನೀವು ಪ್ಲೇ ಮಾಡುವ ಹಿನ್ನೆಲೆ ಸಂಗೀತವು ಬಹಳ ಇಂಪಾಗಿರುತ್ತದೆ. ದಯವಿಟ್ಟು ಅವು ಯಾವ ಸಿಡಿಗಳು ಮತ್ತು ಎಲ್ಲಿ ದೊರಕುತ್ತವೆಯೆಂದು ಹೇಳಿ, ನಾನು ಅವುಗಳನ್ನು ಕೊಳ್ಳಬಯಸುತ್ತೇನೆ.” ನನಗೆ ಅವರ ಈ ಮಾತಿಗೆ ಉತ್ತರವಾಗಿ ಏನು ಹೇಳಬೇಕೆಂದು ಆ ಕ್ಷಣಕ್ಕೆ ತಿಳಿಯದೇ, “ಆಗಲಿ, ಮುಂದಿನ ಬಾರಿ ಬರುವ ಹೊತ್ತಿಗೆ ವಿವರಗಳನ್ನು ಹುಡುಕಿ ತಿಳಿಸುತ್ತೇನೆ” ಎಂದು ಹೇಳಿ ಕಳಿಸಿದೆ.
ಇಲ್ಲಿ ಗಮನಿಸಬೇಕಾದ ವಿಷಯವೊಂದಿದೆ. ಸಿತಾರ್ ಅದೆಷ್ಟು ಮಧುರವಾದ ವಾದ್ಯವೆಂದರೆ, ಈ ವಾದ್ಯದ ಅಷ್ಟೂ ತಂತಿಗಳನ್ನು ಸರಿಯಾದ ಹೊಂದಾಣಿಕೆಯಲ್ಲಿ ಶ್ರುತಿಮಾಡಿ ಸುಮ್ಮನೆ ಗಿಟಾರಿನಂತೆ ಝಲ್ ಎನ್ನಿಸಿದರೆ ಸಾಕು, ಅಲ್ಲಿ ಹೊಮ್ಮುವ ನಾದದಲ್ಲಿ ಬಹಳ ಮಾಧುರ್ಯವಿರುತ್ತದೆ. ಅಥವಾ ಹಾಗೆ ಅಚ್ಚುಕಟ್ಟಾಗಿ ಶ್ರುತಿಮಾಡಿದ ಸಿತಾರನ್ನು ಹಿಡಿದು ಸುಮ್ಮನೆ ಶುದ್ಧಸ್ವರಗಳ ಆರೋಹ ಮತ್ತು ಅವರೋಹವನ್ನು ನುಡಿಸಿದರೆ ಸಾಕು, ಬಹಳ ಇಂಪಾಗಿ ಕೇಳಿಸುತ್ತದೆ ಆ ವಾದನ. ಅಂಥದ್ದರಲ್ಲಿ ಚಿಕಿತ್ಸೆಗೆ ಬಂದ ವೃದ್ಧರು ನನ್ನ ಸಿತಾರ್ ಅಭ್ಯಾಸವನ್ನು ನಿತ್ಯವೂ ಕೇಳುತ್ತ ತಲ್ಲೀನರಾದದ್ದರಲ್ಲಿ ಮತ್ತು ನಮ್ಮ ಸಂಗೀತದ ಶುದ್ಧತೆಯತ್ತ ಒಲವನ್ನು ಪ್ರಕಟಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ಅದೇ ವೃದ್ಧರು ಸುಮಾರು ಎರಡು ತಿಂಗಳ ಮೇಲೆ ನನ್ನನ್ನು ಭೇಟಿಯಾಗಲು ಬಂದವರು ಮರೆಯದೇ ಮತ್ತೆ ಅದೇ ಸಂಗೀತದ ವಿಚಾರದ ಬಗ್ಗೆ ಪ್ರಸ್ತಾಪಿಸಿ, ಆ ಸಂಗೀತದ ಸಿಡಿಗಳ ಬಗ್ಗೆ ಏನಾದರೂ ವಿವರ ದೊರೆತಿತೇ ಎಂದು ಕೇಳಿದರು. ನಾನು ಅವರನ್ನು ನನ್ನ ಸಾಧನಾಕೋಣೆಗೆ ಕರೆದೊಯ್ದು ನನ್ನ ಸಿತಾರನ್ನು ತೊರಿಸಿ, “ಇಲ್ಲಿದೆ ನೋಡಿ, ನೀವು ಕೇಳುತ್ತಿದ್ದ ಸಂಗೀತ” ಎಂದೆ.
ಸಾಥ್ ದೊರೆತರು
ಡರ್ಬನ್ನಲ್ಲಿ ಆರ್ಯಸಮಾಜವು ಸ್ಥಾಪಿಸಿದ `ಆರ್ಯ ಅನಾಥಾಶ್ರಮ’ವೊಂದಿದೆ. ಈ ಸಂಸ್ಥೆಯು ಕಳೆದ ತೊಂಭತ್ತು ವರ್ಷಗಳಿಂದ ದಕ್ಷಿಣ ಅಫ್ರಿಕದಲ್ಲಿ ಯಾವುದೇ ಜಾತಿ ವರ್ಣಭೇದವಿಲ್ಲದೆಯೇ ಅನಾಥ ವೃದ್ಧ, ವಿಕಲಾಂಗ, ಬುದ್ಧಿಮಾಂದ್ಯರನ್ನೂ ಮಕ್ಕಳನ್ನೂ ಸಾಕುತ್ತಿದೆ. ಈ ಸಂಸ್ಥೆಯ ಮುಖ್ಯಸ್ಥ ರಾಜೇಶ್ ಲಕ್ಷ್ಮಣ್, ಶಾಸ್ತ್ರೀಯ ಸಂಗೀತ ಪ್ರೇಮಿ ಮತ್ತು ಸ್ವತಃ ಉತ್ತಮ ತಬಲಾ ವಾದಕ ಕೂಡ. ನನ್ನ ಸಿತಾರ್ ವಾದನದ ಬಗ್ಗೆ ಯಾರೋ ಹೇಳಿದ್ದು ಎಂಬ ನೆಪವನ್ನಿಟ್ಟುಕೊಂಡು ಒಂದು ದಿನ ನನ್ನನ್ನು ಕಾಣಲು ಬಂದ ಈ ಸಜ್ಜನರು ಅಂದಿನಿಂದ ನನ್ನ ಜೊತೆಗೆ ಅನೇಕ ಕಾರ್ಯಕ್ರಮಗಳಿಗೆ ತಬಲಾ ಸಾಥ್ ನೀಡುತ್ತ ಬಂದಿದ್ದಾರೆ. ಇವರ ತಂದೆ ಗಣಪತ್ ಲಕ್ಷ್ಮಣ್ ದಕ್ಷಿಣ ಆಫ್ರಿಕದ ಉತ್ತಮ ವಯೊಲಿನ್ ವಾದಕರಾಗಿದ್ದರಂತೆ. ಇಲ್ಲೊಂದು ಹೇಳಲೇಬೇಕಾದ ವಿಚಾರವಿದೆ. ನನ್ನ ಮತ್ತು ರಾಜೇಶ್ ಲಕ್ಷ್ಮಣ್ರ ಅರಂಭದ ದಿನಗಳ ಒಂದು ಭೇಟಿಯಲ್ಲಿ ಅವರು ತಮ್ಮ ಮನೆಯಲ್ಲಿ `ಸುರ್ಬಹಾರ್’ ಎಂಬ ವಾದ್ಯವೊಂದು ಇರುವುದನ್ನು ಪ್ರಸ್ತಾಪಿಸಿದರು ಮತ್ತು ಅದರ ಹಿಂದಿನ ಕಥೆಯನ್ನು ಸಂಕ್ಷಿಪ್ತವಾಗಿ ನನಗೆ ಹೇಳಿದರು. ಐವತ್ತರ ದಶಕದಲ್ಲಿ ಭಾರತ ಪ್ರವಾಸಕ್ಕೆ ಹೋಗಿದ್ದ ರಾಜೇಶ್ ಲಕ್ಷ್ಮಣ್ರ ತಂದೆಯ ತಮ್ಮ, ಕಲ್ಕತ್ತೆಯ ವಾದ್ಯೋಪಕರಣಗಳ ಅಂಗಡಿಯೊಂದರಲ್ಲಿ ಈ ಸುರ್ಬಹಾರನ್ನು ಗಮನಿಸಿದರು. ಆಗಿನ್ನೂ ಈ ಸುರ್ಬಹಾರನ್ನು ತಯಾರಿಸಿದ್ದ ಮಾಲೀಕನನ್ನು ಬಹಳ ಒತ್ತಾಯದಿಂದ ಪ್ರಾರ್ಥಿಸಿಕೊಂಡು ಒಂದಕ್ಕೆ ಎರಡರಷ್ಟು ಬೆಲೆ ತೆತ್ತು ಅದನ್ನು ಹಡಗಿನಲ್ಲಿ ದಕ್ಷಿಣ ಆಫ್ರಿಕಕ್ಕೆ ತೆಗೆದುಕೊಂಡು ಬಂದರು. ಇಲ್ಲಿ ಬಂದು ನೋಡಿದರೆ ಗಣಪತ್ ಲಕ್ಷ್ಮಣ್ರಿಗೆ ಸುರ್ಬಹಾರನ್ನು ನುಡಿಸುವ ಪದ್ಧತಿ ಮತ್ತು ಆ ವಾದ್ಯದ ತಾಂತ್ರಿಕ ಶೈಲಿಯು ತಿಳಿದಿರಲಿಲ್ಲ. ವಾಸ್ತವದಲ್ಲಿ ಸುರ್ಬಹಾರ್ ನೋಡಲು ಸಿತಾರಿನಂತೆ ಕಾಣುವ ಆದರೆ ಸಿತಾರಿಗಿಂತ ಭಾರ, ಗಾತ್ರದಲ್ಲಿ ಸಿತಾರಿಗಿಂತ ಎತ್ತರ ಮತ್ತು ದೊಡ್ಡದಾಗಿರುವ ಮತ್ತು ಹೆಚ್ಚು ತಂತಿಗಳಿಂದ ಕೂಡಿದ, ನಾದದಲ್ಲಿ ರುದ್ರವೀಣೆಯನ್ನು ಹೋಲುವಂಥ ವಾದ್ಯ. ವಯೋಲಿನ್ ವಾದ್ಯಕ್ಕೂ ಮತ್ತು ಸುರ್ಬಹಾರಿಗೂ ವಾದನಪದ್ಧತಿ ಮತ್ತು ವಾದ್ಯದ ರಚನೆಯಲ್ಲಿ ನಿಜವಾಗಿ ಅಜಗಜಾಂತರ ವ್ಯತ್ಯಾಸ. ಕಡೆಗೆ ಯಾರೂ ನುಡಿಸಲಿಕ್ಕೆ ಇಲ್ಲದೆಯೇ ಆ ಸುರ್ಬಹಾರ್ ಗಣಪತ್ ಲಕ್ಷ್ಮಣ್ರ ಮನೆಯಲ್ಲಿ ಸುರಕ್ಷಿತವಾಗಿ ಬರೋಬ್ಬರಿ ಅರವತ್ತು ವರ್ಷಗಳಿಗೂ ಹೆಚ್ಚು ಕಾಲ ಪೆಟ್ಟಿಗೆಯಲ್ಲಿ ಕಳೆಯಿತು. ಈ ಕಥೆಯನ್ನು ಹೇಳಿದ ರಾಜೇಶ್ ಲಕ್ಷ್ಮಣ್ರಿಗೆ ಏನನ್ನಿಸಿತೋ ಏನೋ, ಅದಾಗಿ ನಂತರದ ವಾರ ಅವರು ನನ್ನ ಮನೆಗೆ ರಿಯಾಜ್ಗೆ ಬರುವಾಗ ಆ ಸುರ್ಬಹಾರನ್ನು ತಂದು ನನ್ನ ಮನೆಯಲ್ಲಿಟ್ಟರು.
ಕುತೂಹಲ ಕೆರಳಿಸಿದ `ಸುರ್ಬಹಾರ್’
ವಾಸ್ತವದಲ್ಲಿ ಸುರ್ಬಹಾರನ್ನು ಅಭ್ಯಾಸ ಮಾಡಬೇಕೆಂಬ ಆಸೆ ಮುಂಚಿನಿಂದಲೂ ನನ್ನಲ್ಲಿ ಬಹಳ ಗಾಢವಾಗಿತ್ತು. ಇದಕ್ಕೆ ಕಾರಣ ನನ್ನ ಗುರು ಸಂಜೀವ್ ಕೊರ್ತಿಯವರು. ಸಿತಾರ್ ನಡೆದುಬಂದ ಸಂಪ್ರದಾಯ, ವಾದ್ಯಸಂಗೀತದ ಧ್ರುಪದ್ ಶೈಲಿ, ಮತ್ತು ಕಾಲಾಂತರದಲ್ಲಿ ಧ್ರುಪದ್ ಪದ್ಧತಿಯ ವಾದ್ಯಗಳಲ್ಲಾದ ಬದಲಾವಣೆಯ ಬಗ್ಗೆ ಒಮ್ಮೆ ಅವರು ನನಗೆ ಹೇಳುವಾಗ ಸಿತಾರ್ ವಾದಕ ಸಿತಾರಿನಲ್ಲಿ ರಾಗಾಲಾಪನೆಯ ಶುದ್ಧತೆಯನ್ನು ಸಾಧಿಸುವುದಕ್ಕೆ ಪ್ರಾಥಮಿಕವಾಗಿ ಸುರ್ಬಹಾರ್ ಸಾಧನೆ ಬಹಳ ಸಹಾಯಕ ಎಂಬುದನ್ನು ಹೇಳಿ ಉದಾಹರಣೆಗೆ ಅಂದಿನ ಮತ್ತು ಇಂದಿನ ಪ್ರಮುಖ ಸಿತಾರ್ ವಾದಕರ ಹಿನ್ನೆಲೆಯ ಬಗ್ಗೆ ವಿವರಿಸಿದ್ದರು. ಅಂದಿನಿಂದ ಈ ಸುರ್ಬಹಾರ್ ಎಂಬ ವಾದ್ಯದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ಆಸಕ್ತಿ ನನ್ನಲ್ಲಿ ಬೆಳೆದಿತ್ತು. ೨೦೧೨ರಲ್ಲಿ ಬನಾರಸ್ನ ಗುರುಮಿತ್ರರಾದ ಸಿತಾರ್ ಮತ್ತು ಸುರ್ಬಹಾರ್ ವಾದಕ ಪಂ. ರವೀಂದ್ರ ನಾರಾಯಣ ಗೋಸ್ವಾಮಿಯವರ ಮನೆಯಲ್ಲಿ ಎರಡು ದಿನ ತಂಗಿದ್ದಾಗ ಅವರ ಸುರ್ ಬಹಾರ್ ವಾದನವನ್ನು ಕೇಳಿ ಆನಂದಿಸಿದ್ದೆ ಮತ್ತು ನುಡಿಸಲು ಪ್ರಯತ್ನಿಸಿದ್ದೆ. ಅಂದಿನಿಂದ ಸುರ್ಬಹಾರಿನ ನಾದ ನನ್ನ ಮನಸ್ಸಿನಲ್ಲಿ ಗಾಢವಾಗಿ ಕುಳಿತಿತ್ತು.
ಮೈನವಿರೇಳಿಸಿದ ಕ್ಷಣ
ರಾಜೇಶ್ ಲಕ್ಷ್ಮಣ್ರು ಸುರ್ಬಹಾರನ್ನು ತಂದಿಟ್ಟ ದಿನ ಆ ವಾದ್ಯದ ಬಗ್ಗೆ ಮತ್ತೊಂದು ವಿಷಯವನ್ನು ಹೇಳಿದರು. ಕಲ್ಕತ್ತಾದ ಆ ಅಂಗಡಿಯ ಮಾಲೀಕ ಹೇಳಿದ ಪ್ರಕಾರ ಆ ಸುರ್ಬಹಾರನ್ನು ಪಂ. ರವಿ ಶಂಕರ್ರಿಗಾಗಿ ತಯಾರಿಸಿದ್ದನಂತೆ ಮತ್ತು ಅದೇ ಕಾರಣಕ್ಕೆ ಗಣಪತ್ ಲಕ್ಷ್ಮಣ್ರ ತಮ್ಮ, ಒಂದಕ್ಕೆ ಎರಡರಷ್ಟು ಬೆಲೆಯನ್ನು ತೆತ್ತು ಕೊಂಡು ತಂದಿದ್ದಂತೆ! ಆ ಕ್ಷಣ ನನ್ನ ಮೈ ನವಿರೆದ್ದಿದ್ದು ನಿಜ! ಅದ್ಯಾವಪರಿಯ ಭೂತ ನನ್ನನ್ನು ಆ ರಾತ್ರಿ ಹೊಕ್ಕಿತ್ತೋ ಏನೊ, ಇಡೀ ಸುರ್ಬಹಾರನ್ನು ಬಿಚ್ಚಿ ಧೂಳು ಒರೆಸಿ ಮತ್ತೆ ಕಟ್ಟಿ ಹೊಸ ತಂತಿಗಳನ್ನು ಜೋಡಿಸಿ ಮುಗಿಸಿ ಶ್ರುತಿ ಮಾಡಿ ಮೊದಲ ಬಾರಿಗೆ ಮಿಜರಾಬನ್ನು ಹಚ್ಚಿ ನುಡಿಸಿದಾಗ ನನಗಾದ ಆನಂದವನ್ನು ಶಬ್ದಗಳಲ್ಲಿ ಕಟ್ಟಲು ನಾನು ನಿಜಕ್ಕೂ ಅಸಮರ್ಥ! ಅಂದಿನಿಂದ ಸುರ್ಬಹಾರಿನ ಗಾಢ ಆಲಾಪದ ಸಾಧನೆ ನನ್ನ ದಿನಚರ್ಯದ ಒಂದು ಪ್ರಮುಖ ಕರ್ತವ್ಯವಾಗಿಬಿಟ್ಟಿದೆ. ಆ ಸುರ್ಬಹಾರನ್ನು ಪಂ. ರವಿಶಂಕರರಿಗಾಗಿ ತಯಾರಿಸಲಾಗಿತ್ತು ಮತ್ತು ೬೦ ವರ್ಷಗಳವರೆಗೆ ಆ ಮಹಾನ್ ವಾದ್ಯವು ನನ್ನ ಕೈಯಲ್ಲಿ ಶ್ರುತಿಗೊಳ್ಳಲು ಕಾಯಿತಲ್ಲ ಎಂಬುದು ಅದೆಂಥ ಆಪ್ತ ಸಂಗತಿಯೆಂದರೆ, ನನಗಿಂತ ಈ ವಿಚಾರದಲ್ಲಿ ಪುಣ್ಯವಂತರಿಲ್ಲ ಎಂದೇ ನಾನು ಭಾವಿಸುತ್ತೇನೆ.
ಮೌಲ್ಯ ಪ್ರತಿಪಾದನೆ, ರಕ್ಷಣೆ
ದಕ್ಷಿಣ ಆಫ್ರಿಕದ ಟಿ.ವಿ. ವಾಹಿನಿಯಲ್ಲಿ…
ಡರ್ಬನ್ನಲ್ಲಿ ವಾಸಿಸಲು ಶುರುಮಾಡಿದ ಆರಂಭಕಾಲದಲ್ಲಿ ಒಮ್ಮೆ ಹೀಗಾಯಿತು. ನನ್ನ ಆಪ್ತರಲ್ಲಿ ಒಬ್ಬರ ಗೆಳೆಯನ ಮನೆಯಲ್ಲಿ ಮದುವೆ. ನನ್ನಲ್ಲಿ ಬಂದು ನನ್ನ ಆ ಆಪ್ತರು ಮದುವೆಯ ಅಂಗವಾಗಿ ನನ್ನ ಸಿತಾರ್ ವಾದನದ ಕಾರ್ಯಕ್ರಮವನ್ನಿಟ್ಟುಕೊಳ್ಳಲು ನನ್ನ ಅನುಮತಿಯನ್ನು ಕೇಳಿದರು. ಈ ಮದುವೆಮನೆಯ ಗೌಜು ಗದ್ದಲದಲ್ಲಿ ಸಿತಾರಿನಂಥ ವಾದ್ಯವನ್ನು ಯಾರು ಕೇಳುತ್ತಾರೆ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಾನು ಶಾಸ್ತ್ರೀಯ ರಾಗಗಳನ್ನು ಪದ್ಧತಿಯಂತೆ ನುಡಿಸುವವನಾದ್ದರಿಂದ ನನ್ನ ಸಂಗೀತ ಮದುವೆಯ ಮನೆಗೆ ಸರಿಹೊಂದುವುದಿಲ್ಲವೆಂದು ಎಷ್ಟು ಕೇಳಿದರೂ ಆ ಪುಣ್ಯಾತ್ಮರು ನನ್ನನ್ನು ಸೋಲಿಸಿ ತಾವು ಗೆದ್ದು ಆ ಕಾರ್ಯಕ್ರಮಕ್ಕೆ ಒಪ್ಪಿಸಿದರು. ಕೊನೆಗೆ ನಾನು ಅಂದುಕೊಂಡಂತೆಯೇ ಆಯಿತು. ಮದುವೆಮಂಟಪದ ಪಕ್ಕದಲ್ಲಿ ಮದುವೆಯ ಕಾರ್ಯದ ಆಚರಣೆಗಳು ನಡೆಯುವಾಗ ನಾನು ಸಿತಾರ್ ನುಡಿಸಬೇಕಿತ್ತು. ಸಾಧ್ಯವಾದಷ್ಟು ಕಷ್ಟಪಟ್ಟು ಹಿಡಿದ ರಾಗವನ್ನು ಮುಗಿಸಿ ಅಲ್ಲಿಂದ ಹೊರಟೆ. ವ್ಯವಸ್ಥಾಪಕರು ನನ್ನನ್ನು ತಡೆದು ಸಂಭಾವನೆಯನ್ನು ಪಡೆದು ಹೋಗಬೇಕೆಂದು ಕೇಳಿದರು. ತಬಲಾದವರಲ್ಲಿ ಕೊಟ್ಟುಬಿಡಿ ಎಂದು ಹೇಳಿ ನಾನು ನನ್ನಷ್ಟಕ್ಕೆ ಹೊರಟುಬಿಟ್ಟೆ. ಪ್ರಾಯಃ ಒಂದು ಸಾಧಾರಣ ಬದುಕನ್ನು ನೆಮ್ಮದಿಯಾಗಿ ಬದುಕಲು ನನಗೊಂದು ವೃತ್ತಿಯ ಬಲವಿರುವುದೂ ಇದಕ್ಕೆ ಕಾರಣವಿರಬಹುದು. ಆದರೆ ವೃತ್ತಿಗಾಗಿ ಮದುವೆಯಂಥ ಸಂದರ್ಭಗಳಲ್ಲಿ ಸಂಗೀತಗಾರರು ನುಡಿಸುವ ಸಂಗೀತದ ಬಗ್ಗೆ ನನಗೆ ನಿಜವಾಗಿ ಅಪಾರ ಗೌರವವಿದೆ. ಮದುವೆಮನೆಗಳಲ್ಲಿ ನಾನು ಹೋಗಿ ಕೂರುವುದು ಅವರ ಪಕ್ಕವೇ. ಆದರೆ ಶಾಸ್ತ್ರೀಯ ಸಂಗೀತವನ್ನು ಹೆಚ್ಚು ಆಧಾರವಾಗಿಟ್ಟುಕೊಂಡ ನನಗೆ ಅದು ಕಷ್ಟ ಮತ್ತು ನನ್ನಿಂದ ಅದು ಸಾಧ್ಯವಾಗಲಿಲ್ಲ. ಅಂದಿನಿಂದ ಇಂದಿಗೂ “ನನ್ನ ಮಗಳ ಮದುವೆಗೆ ಮೆಹಂದಿಯ ಸಮಯದಲ್ಲಿ ಬಂದು ಹದಿನೈದು ನಿಮಿಷ ಸಿತಾರ್ ನುಡಿಸಬಹುದೇ?” ಹೀಗೆ ಬಹಳಷ್ಟು ಜನ ನನ್ನನ್ನು ಸಂಪರ್ಕಿಸುತ್ತಾರೆ. ನಾನು ಹಾಗೆ ಕೇಳಿದವರನ್ನು ಕರೆದು ಕೂರಿಸಿ ನಮ್ಮ ಸಂಗೀತದ ಮೌಲ್ಯವನ್ನು, ಮತ್ತು ರಾಗಸಂಗೀತದ ಮಹತ್ತನ್ನು ತಿಳಿಸಿಹೇಳುತ್ತೇನೆ. ಮದುವೆ ಮೊದಲಾದ ಕಾರ್ಯಕ್ರಮಗಳು ಪ್ರತಿಷ್ಠೆ ಮತ್ತು ಪ್ರದರ್ಶನಕ್ಕೆ ಮಾತ್ರ ಸೀಮಿತವಾದ ಜಗತ್ತಿನ ಮೇಲ್ವರ್ಗದ ಕುಟುಂಬಗಳಲ್ಲಿ ಸಿತಾರ್ನಂಥ ಮಧುರ ವಾದ್ಯದ ವಾದನವನ್ನು ಸಭಾಗೃಹದ ಸೌಂದರ್ಯಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆಯೇ ಹೊರತು ಸಂಗೀತವನ್ನು ಆಸ್ವಾದಿಸುವ ರಸಿಕತೆಗಾಗಿ ಅಲ್ಲವೇ ಅಲ್ಲ. ಸಂಗೀತಗಾರನಾಗಿ ಇಂಥ ಆಹ್ವಾನಗಳನ್ನು ನಿರಾಕರಿಸುತ್ತ ನಮ್ಮ ಸಂಗೀತದ ಮಹತ್ತು ಮತ್ತು ಸ್ವಂತಿಕೆಯನ್ನು ಉಳಿಸಿಕೊಳ್ಳುತ್ತ ವಿದೇಶೀ ನೆಲದಲ್ಲಿ ಬದುಕುವುದು ಮತ್ತು ಭಾರತೀಯ ಸಂಗೀತದ ಮೌಲ್ಯಗಳನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಸರಿಯಾದ ಹೆಜ್ಜೆಗಳನ್ನಿಡುತ್ತ ಸಾಗುವುದು ನಿಜಕ್ಕೂ ಒಂದು ವಿಶಿಷ್ಟವಾದ ಅನುಭವ ಮತ್ತು ಮಾರ್ಗ.
ಸುರ್ಬಹಾರ್ ವಾದನದಲ್ಲಿ ತಲ್ಲೀನವಾಗಿರುವ ಲೇಖಕ
ಭಿನ್ನ ಪರಿಸ್ಥಿತಿ
ಬಿಳಿಯರು, ಕರಿಯರು, ಮಲಯರು, ಮಂಗೋಲಿಯನ್ನರು, ಭಾರತೀಯರು ಎಲ್ಲ ವಾಸಿಸುವ ದಕ್ಷಿಣ ಆಫ್ರಿಕಾದ ಮಿಶ್ರಸಂಸ್ಕೃತಿಯಲ್ಲಿ ಭಾರತೀಯ ಸಂಗೀತವನ್ನು ಕೇಳುವವರು ಚೆನ್ನಾಗಿಯೇ ಇದ್ದಾರೆ. ಎಲ್ಲಕ್ಕಿಂತ ಬಾಲಿವುಡ್ ಮತ್ತು ಭೋಜ್ಪುರಿ ಸಂಗೀತ ಇಲ್ಲಿ ಹೆಚ್ಚು ಜನಪ್ರಿಯ. ನಮ್ಮ ಗ್ಲಾಮರ್ ಗಾಯಕರು ಮತ್ತು ಗಾಯಕಿಯರನ್ನು ಇಲ್ಲಿನ ಅನೇಕ ವ್ಯವಸ್ಥಾಪಕರು ಕರೆಸಿ ದುಬಾರಿ ಬೆಲೆಯ ಶೋಗಳನ್ನು ನಡೆಸುವುದು ಸಾಮಾನ್ಯ. ಇನ್ನು ಆಗಾಗ ಭಜನ್ ಗಾಯಕರು, ನಂತರದ ಸ್ಥಾನ ಶಾಸ್ತ್ರೀಯ ಸಂಗೀತಗಾರರದ್ದು. ನಮ್ಮ ಸಂಗೀತದ ವಿಷಯದಲ್ಲಿ ಎಲ್ಲ ವಿದೇಶಗಳದ್ದೂ ಒಂದರ್ಥದಲ್ಲಿ ತುಸು ಭಿನ್ನವಾಗಿದ್ದರೂ ಇಂಥದ್ದೇ ಪರಿಸ್ಥಿತಿಯೇ.
ಖಾಸಗಿ ಬೈಠಕ್ಗಳ ಆಪ್ತತೆ
ನನ್ನ ಪುಣ್ಯಕ್ಕೆ ನಿಧಾನವಾಗಿ ಇಲ್ಲಿನ ಅನೇಕ ಸಂಸ್ಥೆಗಳು ಶಾಸ್ತ್ರೀಯ ಸಂಗೀತವನ್ನು ಅರ್ಥೈಸಿಕೊಳ್ಳುವತ್ತ ಮನಸ್ಸು ಮಾಡುತ್ತಿರುವುದು, ನನ್ನ ಸಿತಾರ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಮಾಧಾನದ ಸಂಗತಿ. ದೊಡ್ದ ವೇದಿಕೆಗಳ ಮೇಲೆ ಅದೆಷ್ಟು ಕಾರ್ಯಕ್ರಮಗಳನ್ನು ನುಡಿಸಿದರೂ ಖಾಸ್ ಬೈಠಕ್ಗಳಲ್ಲಿ ಸಿಗುವ ಆಪ್ತತೆ ಮತ್ತೆಲ್ಲೂ ಸಿಗುವುದಿಲ್ಲ. ಇದು ಪ್ರಾಯಃ ಎಲ್ಲ ಸಂಗೀತಗಾರರು ಅನುಭವಿಸಿ ಒಪ್ಪಿಕೊಂಡ ಮಾತು. ದಕ್ಷಿಣ ಆಫ್ರಿಕದ ಬ್ಲೂಮ್ಫೌಂಟೇನ್ ಎಂಬ ನಗರದಲ್ಲಿ ನಡೆದ ಒಂದು ಆಪ್ತ ಕಛೇರಿಯಲ್ಲಿ ಆಲಾಪ್, ಜೋಡ್ ಮತ್ತು ಝಾಲಾ ಮುಗಿಸಿ ಚಪ್ಪಾಳೆಗಳಿಗೆ ನಮಸ್ಕರಿಸಿ ತಲೆಯೆತ್ತಿ ಬಹಳ ಹತ್ತಿರ ಕುಳಿತಿದ್ದ ಪ್ರೇಕ್ಷಕರ ಗುಂಪಿನಲ್ಲಿ ನಾಲ್ಕಾರು ಬಿಳಿಯ ಮಹಿಳೆಯರು ಕಣ್ಣೀರು ಸುರಿಸುತ್ತಲಿದ್ದುದು ನನಗೆ ಅನೇಕ ಬಾರಿ ನೆನಪಾಗುತ್ತದೆ. ಒಮ್ಮೆ ಭಾರತೀಯ ರಾಯಭಾರಿ ರಂಗನಾಥನ್ರ ಮನೆಯ ಆಪ್ತ ಕಛೇರಿ. ಎಲ್ಲ ದೊಡ್ಡ ಸಾಹೇಬರು ಮತ್ತು ಗಣ್ಯ ವ್ಯಕ್ತಿಗಳು ಸೇರಿದ್ದ ಯಾವುದೋ ಆಪ್ತ ಸಮಾರಂಭ, ರಾಯಭಾರಿಯವರ ಮನೆಯಲ್ಲಿ. ರಾಜಮಹಲಿನಂಥ ಆ ಮನೆಯ ದೊಡ್ಡ ಹಜಾರವೊಂದರಲ್ಲಿ ನಾನು ನೆಲದ ಮೇಲೆ ಹಾಸಲಾಗಿದ್ದ ಕಾರ್ಪೆಟ್ನ ಮೇಲೆ ಕುಳಿತು ಆಲಾಪ್ ಆರಂಭಿಸಿ ಕೆಲವು ನಿಮಿಷಗಳ ನಂತರ ಕಣ್ತೆರೆದು ನೋಡಿದರೆ ಕಾನ್ಸಲ್ ಜನರಲ್ ರಂಗನಾಥನ್ ಮತ್ತು ನಾಲ್ಕೈದು ಜನ ಗಣ್ಯ ವ್ಯಕ್ತಿಗಳು ತಮ್ಮ ಆಸನವನ್ನು ಬಿಟ್ಟು ಅಲ್ಲೆ ಕೆಳಗೆ ಕಾರ್ಪೆಟ್ನ ಮೇಲೆ ಕುಳಿತಿದ್ದಾರೆ! ಇಂಥ ಅನುಭವಗಳನ್ನು ಸಾಮಾನ್ಯ ಮರೆಯುವುದು ಕಷ್ಟ. ಅಷ್ಟು ಖುಷಿ ಕೊಡುವ ಅನುಭವಗಳಿವು.
`ಸಾಧಕ ಸಾಧನೆಯಲ್ಲಿರಬೇಕು ಮತ್ತು ಸಿದ್ಧಿಯ ಬಲ್ಬು ಅಂಗಡಿಯಲ್ಲಿ ದೊರಕುವುದಿಲ್ಲ!’ – ಇದು ನನಗೆ ನಾನು ನಿತ್ಯ ಸಿತಾರ್ ಹಿಡಿದು ರಿಯಾಜ್ಗೆ ಕುಳಿತುಕೊಳ್ಳುವಾಗ ನೆನಪಿಸಿಕೊಳ್ಳುವ ನನ್ನದೇ ಧಾಟಿಯ ಸಾಧಕರ ಮಾತಿನ ಸಾರ. ವಿದೇಶದ ನೆಲದಲ್ಲಿ ನಮ್ಮ ಸಂಗೀತದ ಮಹಿಮೆಯನ್ನು ನುಡಿಸುವ ಮತ್ತು ಪಸರಿಸುವ ಭಾಗ್ಯ ನನ್ನದಾಯಿತಲ್ಲ ಎಂಬುದು ನಿಜಕ್ಕೂ ಖುಷಿಯ ಸಂಗತಿ ಮತ್ತು ಈ ಯಾತ್ರೆಯ ಹೆಜ್ಜೆ ಹೆಜ್ಜೆಯೂ ನನ್ನ ಪಾಲಿಗೆ ನಿತ್ಯಸಿದ್ಧಿ.