
ಪ್ರವೇಶಿಕೆ
ಆಧುನಿಕಕಾಲದಲ್ಲಿ ಕರ್ಣಾಟಕದ ನಾಡು-ನುಡಿಗಳನ್ನು ರೂಪಿಸಿ, ಅವುಗಳ ಸಮೃದ್ಧಿ-ಸೌಂದರ್ಯಗಳಿಗಾಗಿ ಶ್ರಮಿಸಿದವರ ಪೈಕಿ ಡಿ.ವಿ. ಗುಂಡಪ್ಪನವರು (1887-1975) ಅಗ್ರಗಣ್ಯರು. ಋಷಿಕಲ್ಪರಾದ ಅವರ ವ್ಯಕ್ತಿತ್ವ-ವಿದ್ವತ್ತೆಗಳ ಬಗೆಗೆ, ಪ್ರತಿಭೆ-ಪ್ರಾಜ್ಞತೆಗಳ ಬಗೆಗೆ ಸಾಕಷ್ಟು ಪ್ರಮಾಣದಲ್ಲಿ ಮಾಹಿತಿ ಲಭ್ಯವಿದೆ; ಇದು ಕನ್ನಡಿಗರ ಭಾಗ್ಯ. ಆದರೆ ಡಿ.ವಿ.ಜಿ.ಯವರದು ಮಹಾಕಾವ್ಯೋಪಮವಾದ ಜೀವನ. ಧ್ವನನಶೀಲತೆಯೇ ಶ್ರೇಷ್ಠಸಾಹಿತ್ಯದ ಹೆಗ್ಗುರುತಲ್ಲವೇ? ಪ್ರತಿಕ್ಷಣವೂ ಬಗೆಬಗೆಯ ಹೂವು-ಹಣ್ಣುಗಳಿಂದ ನವೋನವವಾಗಿ ಕಂಗೊಳಿಸುವ ವಸಂತದ ವನರಾಜಿಯಂತೆ, ಮಹಾಕಾವ್ಯವು ಸವಿದಷ್ಟೂ ಸೊಗಯಿಸುತ್ತದೆ. ಹೀಗೆ ಬುದ್ಧಿಗೆ ಆಕರ್ಷಕವೂ ಭಾವಕ್ಕೆ ಆರೋಗ್ಯಕರವೂ ಆದ ಡಿ.ವಿ.ಜಿ.ಯವರ ಬದುಕು-ಬರೆಹಗಳನ್ನು ಇನ್ನಷ್ಟು ವಿಶದವಾಗಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ರೂಪುಗೊಂಡಿರುವುದು ಪ್ರಕೃತಪ್ರಬಂಧ.
ಭಾಷೆಯೆಂಬುದು ನಮ್ಮ ಜಗತ್ತಿನ ಚಿರವಿಸ್ಮಯಗಳಲ್ಲೊಂದು. ಅಂತರಂಗದ ಅಭಿವ್ಯಕ್ತಿಗೆ ಇದಕ್ಕಿಂತ ಮಿಗಿಲಾದ ಮಾಧ್ಯಮವು ಮತ್ತೊಂದಿಲ್ಲ. ಆಲೋಚನೆಯ ನೆಲೆಯಾಗಿ, ಸಂವಹನದ ಹಿನ್ನೆಲೆಯಾಗಿ ನಿಲ್ಲುವ ಭಾಷೆ ಅದೆಷ್ಟು ಪೂರ್ಣವಾದರೂ “ಒರಟು ಯಾನ”ವೇ ಸರಿ! ಆದರೆ ನಮ್ಮೆಲ್ಲರ ಒಳ-ಹೊರಗಿನ ಪ್ರಪಂಚಗಳನ್ನು ಬೆಸೆಯುವಲ್ಲಿ ಸೇತುವೆಯಾಗಿ ಭಾಷೆಯು ನೀಡಿರುವ ಕೊಡುಗೆ ಅಪಾರ. ಹೀಗೆ ಒಬ್ಬ ವ್ಯಕ್ತಿಯ ಗುಣ-ದೋಷಗಳನ್ನೂ ಇಷ್ಟ-ಅನಿಷ್ಟಗಳನ್ನೂ ಅರಿಯಲು ಭಾಷೆಯು ಚೆನ್ನಾಗಿ ಒದಗಿಬರುತ್ತದೆ. ಸದ್ಯದಲ್ಲಿ ಗುಂಡಪ್ಪನವರು ಭಾಷೆಯನ್ನು ಬಳಸಿದ ಬಗೆಗಳನ್ನು ವಿಶ್ಲೇಷಿಸುತ್ತ ಅವರ ಮನೋಧರ್ಮವನ್ನು ತಿಳಿಯಲು ಪ್ರಯತ್ನಿಸೋಣ.
‘ಡಿ.ವಿ.ಜಿ. ಅವರ ಭಾಷಾಶಿಲ್ಪ’ ಎಂಬುದು ಪ್ರಬಂಧದ ಶೀರ್ಷಿಕೆ. ಭಾಷೆಯೆಂಬ ಸುಂದರಶಿಲ್ಪವನ್ನು ಗುಂಡಪ್ಪನವರು ಕಟ್ಟಿಕೊಟ್ಟ ವಿಧಾನವನ್ನು ವಿವೇಚಿಸುವುದು ಈ ಲೇಖನದ ಉದ್ದೇಶ; ಇದನ್ನೇ ಶೀರ್ಷಿಕೆಯು ಸೂಚಿಸುತ್ತದೆ. ಇದಕ್ಕೆ ಮತ್ತೂ ಒಂದು ಆಯಾಮವಿದೆ. ‘ಶಿಲ್ಪ’ ಶಬ್ದವು “ಶೀಲ್-ಸಮಾಧೌ” ಎಂಬ ಧಾತುವಿನಿಂದ ನಿಷ್ಪನ್ನವಾಗಿದ್ದು ಸಮತ್ವ ಮತ್ತು ಸಮಾಧಾನಗಳನ್ನು ಬೋಧಿಸುತ್ತದೆ. ಹೀಗೆ ಆಕೃತಿಯ ದೃಷ್ಟಿಯಿಂದ ಸೌಷ್ಠವವನ್ನೂ ಆಶಯದ ದೃಷ್ಟಿಯಿಂದ ಸಂಸ್ಕಾರವನ್ನೂ ಈ ಶಬ್ದವು ತಿಳಿಸುತ್ತದೆ. ಈ ಎಲ್ಲ ನೆಲೆಗಳಲ್ಲಿ ಡಿ.ವಿ.ಜಿ.ಯವರ ವಾಗ್ವಿಲಾಸವನ್ನು ಗಮನಿಸಬಹುದು.
ಕನ್ನಡಸಾಹಿತ್ಯದ ನವೋದಯಕಾಲದಲ್ಲಿ ಎಲ್ಲ ಬಗೆಯ ಆಲೋಚನೆಗಳಿಗೂ ಹೊಂದುವಂತೆ ಭಾಷೆಯನ್ನು ರೂಪಿಸುವ ಯತ್ನಗಳಾದವು. ಆ ಸಮಯಕ್ಕೆ ಮುಂಚೆ ಬಳಕೆಯಿದ್ದ ಕನ್ನಡವನ್ನು ಡಿ.ವಿ.ಜಿ.ಯವರೇ ಉದಾಹರಿಸಿದ್ದಾರೆ: “ಈ ಹುಕ್ಕೂಮಿಗೆ ಲಗತ್ತಿರುವ ತಃಖ್ತೆಯ ಕಲಂಗಳಲ್ಲಿ ಸವಾಲಿಗೆ ಜವಾಬನ್ನು ಹುಷ್ಯಾರಿಯಿಂದ ನಮೂದಿಸತಕ್ಕದ್ದಿದೆ.” ಇನ್ನೊಂದು ಹಳಗನ್ನಡದ ರೀತಿಯಲ್ಲಿ ಆಡಂಬರವಾಗಿ ಬರೆಯುವುದು: “ಆದೊಡೆ, ಸಾರ್ಧಮಾಸದಿಂದೀವರಮೆನ್ನ ದೇಹಾಲಸ್ಯದೊಡನೆ ಅನೇಕಕಾರ್ಯ ವ್ಯಗ್ರತೆಯುಂ ಸೇರಿ, ಸಮುಚಿತೋತ್ತರಮನೀಯಲಿನಿತು ದಿನಂ ತಡಮಾಯ್ತು; ಮೇಣಿದರೊಡನೆ ರಿಜಿಸ್ಟರ ಬುಕ್ಕು ಬಂಗಿಯೊಂದುಂ ಪ್ರೇಷಿತಮಾಗಿರ್ಪುದು”.
ಹೀಗೆ ಅನಾಕರ್ಷಕಶೈಲಿಯಲ್ಲಿ ವಿಚಾರಗಳನ್ನು ನಿರೂಪಿಸುವುದನ್ನು ನಿಲ್ಲಿಸಿ, ಸ್ವತಂತ್ರವಿಚಾರಗಳಿಗೆ ಒತ್ತುಕೊಟ್ಟು ರಮಣೀಯರೀತಿಯನ್ನು ಬರವಣಿಗೆಯಲ್ಲಿ ಕಾಣಿಸಲು ಹಲವರು ಶ್ರಮಿಸಿದರು. ಒಂದು ಕಡೆ ಪ್ರಾಚೀನಪರಂಪರೆಯ ಪಂಡಿತರಾದ ಬಸವಪ್ಪಶಾಸ್ತ್ರಿಗಳು, ಗರಲಪುರಿಶಾಸ್ತ್ರಿಗಳು, ಸೋಸಲೆ ಅಯ್ಯಶಾಸ್ತ್ರಿಗಳು, ಕಡಬದ ನಂಜುಂಡಶಾಸ್ತ್ರಿಗಳು, ಕರಿಬಸವಶಾಸ್ತ್ರಿಗಳು ಮುಂತಾದವರಿದ್ದರೆ, ಮತ್ತೊಂದೆಡೆ ಆಲೂರ ವೆಂಕಟರಾಯರು, ಚ. ವಾಸುದೇವಯ್ಯನವರು, ಎಂ. ಎಸ್. ಪುಟ್ಟಣ್ಣನವರು, ಬಿ. ಎಂ. ಶ್ರೀಕಂಠಯ್ಯನವರು, ಮುಳಿಯ ತಿಮ್ಮಪ್ಪಯ್ಯನವರು, ಪಂಜೆ ಮಂಗೇಶರಾಯರು, ಮ. ಪ್ರ. ಪೂಜಾರರು, ಶಿ.ಶಿ. ಬಸವನಾಳರು, ಡಿ. ವಿ. ಗುಂಡಪ್ಪನವರು, ಮಾಸ್ತಿ ವೆಂಕಟೇಶ ಅಯ್ಯಂಗಾರರು, ಎ. ಆರ್. ಕೃಷ್ಣಶಾಸ್ತ್ರಿಗಳು, ಟಿ. ಎಸ್. ವೆಂಕಣ್ಣಯ್ಯನವರು, ಎಂ. ಗೋವಿಂದ ಪೈಗಳೇ ಮೊದಲಾದವರಿದ್ದರು. ಆಗ ಕಥೆ, ಕವಿತೆ, ನಾಟಕ, ಕಾದಂಬರಿ, ಲಲಿತಪ್ರಬಂಧ, ಜೀವನಚರಿತ್ರೆ, ವಿಚಾರಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಸ್ವತಂತ್ರ ಮತ್ತು ಅನುವಾದಕೃತಿಗಳ ಮೂಲಕ ಹೊಸದೊಂದು ಸಂಚಲನವೇ ಪ್ರಾರಂಭವಾಯಿತು.
ಈ ಅಭಿಯಾನವನ್ನು ಮುಂದಿನ ಪೀಳಿಗೆಯು ಸಮರ್ಥವಾಗಿ ಮುನ್ನಡೆಸಿ ಕನ್ನಡವನ್ನು ಪರಿಪುಷ್ಟವಾಗಿಸಿತು. ವಿ. ಸೀತಾರಾಮಯ್ಯ, ಸೇಡಿಯಾಪು ಕೃಷ್ಣಭಟ್ಟ, ಪು.ತಿ. ನರಸಿಂಹಾಚಾರ್, ಎಸ್.ವಿ. ರಂಗಣ್ಣ, ಸಿ.ಕೆ. ವೆಂಕಟರಾಮಯ್ಯ, ಕುವೆಂಪು, ತೀ.ನಂ. ಶ್ರೀಕಂಠಯ್ಯ, ಡಿ.ಎಲ್. ನರಸಿಂಹಾಚಾರ್,
ಕೆ. ಕೃಷ್ಣಮೂರ್ತಿ, ಎ.ಎನ್. ಮೂರ್ತಿರಾವ್, ಶಿವರಾಮ ಕಾರಂತ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮುಂತಾದ ಅಸಂಖ್ಯ ಲೇಖಕರು ತಮ್ಮದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿದರು. ಅಮೂಲ್ಯವಾದ ಶಾಸ್ತ್ರ-ಕಾವ್ಯಗಳೂ ಹೊರಬಂದವು.
ಈ ಕಾರ್ಯದಲ್ಲಿ ಕನ್ನಡಧ್ವಜವನ್ನು ಹಿಡಿದು ವೀರಾಲಾಪಗಳನ್ನು ಮಾಡುತ್ತ ಯೋಧರಂತೆ ಮುನ್ನುಗ್ಗಿದವರು ಕೆಲವರಾದರೆ, ಧೀರವಾದರೂ ಶಾಂತವಾದ ಹೆಜ್ಜೆ ಹಾಕುತ್ತ ಸಾಗಿದವರು ಹಲವರು. ಲೇಖಕರು ಆರಂಭದ ದಶೆಯಲ್ಲಿಯೇ ಬರವಣಿಗೆಯಲ್ಲಿ ತಮ್ಮ ತಮ್ಮ ವ್ಯಕ್ತಿತ್ವದ ವಿಶಿಷ್ಟಮುದ್ರಿಕೆಗಳನ್ನು ಒತ್ತಿದುದು ಅಚ್ಚರಿಯ ಸಂಗತಿ. ಕೆಲವು ಪುಟಗಳನ್ನಿರಲಿ, ಒಂದೆರಡು ಪಂಕ್ತಿಗಳನ್ನು ಓದುವುದರಲ್ಲಿಯೇ ಈ ಲೇಖನ ಇಂಥವರದ್ದೆಂದು ತಿಳಿಯುವಷ್ಟರ ಮಟ್ಟಿಗೆ ಸ್ಫುಟವಾಗಿತ್ತು ಅಂದಿನ ಲೇಖಕರ ಶೈಲಿ. ಉದಾಹರಣೆಗೆ: ಬಿ.ಎಂ.ಶ್ರೀ. ಅವರಲ್ಲಿ ಕೆಚ್ಚು ಹೆಚ್ಚಾದರೆ ಮಾಸ್ತಿಯವರದು ನಿರಾಡಂಬರಶೈಲಿ; ಪು.ತಿ.ನ. ಅವರ ಜಾಡು ಕಲ್ಪನಾಶೀಲವಾದರೆ, ಪೈಗಳದು ಶಾಸ್ತ್ರಕರ್ಕಶ; ಕೃಷ್ಣಶಾಸ್ತ್ರಿ-ಕೃಷ್ಣಭಟ್ಟರಲ್ಲಿಯ ನಾಮಸಾಮ್ಯದಂತೆ ಅವರ ಶೈಲಿಯಲ್ಲಿ ನಿರ್ದಿಷ್ಟತೆ-ನಿರ್ದುಷ್ಟತೆಗಳು ಸಮಾನವಾಗಿವೆ, ಆದರೆ ಶಾಸ್ತ್ರಿಗಳ ಮೊನಚುತನ ಭಟ್ಟರಲ್ಲಿಲ್ಲ, ಸೇಡಿಯಾಪು ಅವರ ಸರ್ವಂಕಷತೆ ಕೃಷ್ಣಶಾಸ್ತ್ರಿಗಳಲ್ಲಿಲ್ಲ (ಇವು ಆಯಾ ಲೇಖಕರ ಶೈಲಿಗಳ ಬಗೆಗೆ ಕೊನೆಯ ಮಾತುಗಳಲ್ಲ. ಕೃತಿಕಾರರಲ್ಲಿ ನನಗೆ ತೋರಿದ ಗುಣವಿಶೇಷಗಳನ್ನು ಗುರುತುಮಾಡಿದ್ದೇನೆ, ಅಷ್ಟೆ). ಹೀಗೆ ಲೇಖಕರು ವೈಶಿಷ್ಟ್ಯವನ್ನು ಮೆರೆದು ಅದನ್ನು ಕಾಪಾಡಿಕೊಳ್ಳುವುದು ಸಾಹಿತ್ಯಕೃತಿಗಳೇ ಹೆಚ್ಚಾಗಿ ಲಭ್ಯವಿಲ್ಲದ ಕಾಲದಲ್ಲಿ ಕಷ್ಟವೇನಲ್ಲ. ಆದರೆ ಹೊಸಗನ್ನಡದ ಸಂದರ್ಭದಲ್ಲಿ ಕೃತಿಗಳಿಗೇನೂ ಕೊರತೆಯಿರಲಿಲ್ಲ; ಗುಣ-ಗಾತ್ರಗಳಲ್ಲಿ ಗಣನೀಯವಾದ ಸಾಹಿತ್ಯವು ಅಂದು ಪ್ರಚುರವಾಗಿತ್ತು. ಹೀಗೆ ಕಂಡಾಗ ನವೋದಯದ ಲೇಖಕರು ತೋರಿದ ಸ್ವಂತಿಕೆ ಅಚ್ಚರಿಯೆನಿಸದಿರದು. ಇಂಥ ಹಿನ್ನೆಲೆಯಲ್ಲಿ ಡಿ.ವಿ. ಗುಂಡಪ್ಪನವರ ಸಾಹಿತ್ಯಕೃಷಿಯನ್ನು ಗಮನಿಸಿದಾಗ ಅದೆಷ್ಟು ಸ್ವೋಪಜ್ಞ ಹಾಗೂ ಮೌಲ್ಯನಿಷ್ಠ ಎಂದು ತಿಳಿಯುತ್ತದೆ.
ಭಾಷೆ-ವ್ಯಕ್ತಿತ್ವಗಳ ಸಂಬಂಧ
ಭಾಷೆಯ ಬಗೆಗಳು ಮುಖ್ಯವಾಗಿ ಮೂರು: ಗದ್ಯ, ಪದ್ಯ ಮತ್ತು ಗೀತ. ಈ ಮೂರರಲ್ಲಿಯೂ ಗುಂಡಪ್ಪನವರು ಗಣನೀಯವಾದ ಪ್ರಮಾಣದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯಸಿಂಧುವು ಪದ್ಯಕಾವ್ಯ, ಗೀತಕಾವ್ಯ, ಮನನಕಾವ್ಯ, ನಾಟಕ, ನೆನಪಿನ ಚಿತ್ರ, ಜೀವನಚರಿತ್ರೆ, ವೈಚಾರಿಕಪ್ರಬಂಧ, ಮಕ್ಕಳ ಸಾಹಿತ್ಯ ಮೊದಲಾದ ಪ್ರಣಾಲಿಗಳಲ್ಲಿ ಹರಿದಿದೆ. ಅದರ ಆಳ-ಅಗಲಗಳು ಸಾಧಾರಣವಲ್ಲ. ಆಳಿನಿಂದ ಅರಸನವರೆಗೆ ಎಲ್ಲರೂ ಇದರಲ್ಲಿ ಮಿಂದೇಳುವವರೇ. ಅಧ್ಯಾತ್ಮ, ರಾಜಕೀಯ, ಕಾವ್ಯಮೀಮಾಂಸೆ ಮೊದಲಾದ ಕ್ಷೇತ್ರಗಳಲ್ಲಿ ಈ ನದಿಯು ಹದವರಿತು ಹರಿದು ವಿಪುಲವಾದ ಕೃಷಿಯನ್ನು ಕರುಣಿಸಿದೆ. ಇಲ್ಲಿ ಸ್ವತಂತ್ರಗ್ರಂಥಗಳದ್ದು ಸಿಂಹಪಾಲಾದರೆ, ಅನುವಾದಕೃತಿಗಳೂ ಹಲವಿವೆ.
ಡಿ.ವಿ.ಜಿ.ಯವರ ಗದ್ಯವು ವಿಶಿಷ್ಟವಾದೊಂದು ಪ್ರವಚನಶೈಲಿಯಲ್ಲಿ ಸಾಗುತ್ತದೆ. ಅವರೇ ನಮ್ಮೆದುರು ಹಾಯಾಗಿ ಕುಳಿತು ವಿಚಾರಗಳನ್ನು ನಯವಾಗಿ ವಿವರಿಸುತ್ತಿರುವರೋ ಎಂದು ಭಾಸವಾಗುವ ಮಟ್ಟಿಗೆ ಆಪ್ತವಾದ ಬರವಣಿಗೆದು. ಅದರಲ್ಲಿ ಸಮನ್ವಯದ ಹದವಿದೆ, ಆದರೆ ವಾಚಕರನ್ನು ಒಪ್ಪಿಸಲೇಬೇಕೆಂಬ ಹಠವಿಲ್ಲ; ಇನ್ನೆಲ್ಲಿಯೂ ಕಾಣಸಿಗದ ಕಾಂತಿಯಿದೆ, ಆದರೆ ಅದು ಕಣ್ಣುಕೋರೈಸುವಂಥದ್ದಲ್ಲ; ಅಧಿಕೃತತೆಗೆ ಕೊರತೆಯಿಲ್ಲ, ಆದರೆ ಅಧಿಕಾರದ ಧೋರಣೆಯಿಲ್ಲ; ಪಾಂಡಿತ್ಯದ ಪುಷ್ಟಿಯಿದೆ, ಆದರೆ ಅದನ್ನು ಮೆರೆಸಬೇಕೆಂಬ ಪೈತ್ಯವಿಲ್ಲ; ಭಾವತೀವ್ರತೆಯಿದೆ, ಆದರೆ ಅದೆಂದೂ ಭಾರವೆನಿಸುವುದಿಲ್ಲ. ಒಟ್ಟಿನಲ್ಲಿ ಅದೊಂದು “ಪಾಕ”; ಶುಚಿ-ರುಚಿಗಳ ರಸಪಾಕ. ಇದನ್ನು ಅ. ನ. ಕೃಷ್ಣರಾಯರು “ಇಠಿiಛಿ Pಡಿose” ಎಂದು ಬಣ್ಣಿಸಿದ್ದು ಅದೆಷ್ಟು ಉಚಿತ!
ಗುಂಡಪ್ಪನವರ ಶೈಲಿ ಹೀಗೆ ರೂಪಗೊಳ್ಳಲು ಅವರ ಚಿಂತನವಿಧಾನವೇ ಮುಖ್ಯಕಾರಣ. ರಸಾಸ್ವಾದದಿಂದಲೂ ತತ್ತ್ವಚಿಂತನೆಯಿಂದಲೂ ಬದುಕಿನ ವಿಕಟಸುಂದರಸಂದರ್ಭಗಳ ಅನುಭವದಿಂದಲೂ ಸಂಸ್ಕಾರಗೊಂಡಿದ್ದ ಅವರ ಮನಸ್ಸು ಪ್ರಧಾನವಾಗಿ ಎರಡು ಗುಣಗಳನ್ನು ಹೊಂದಿತ್ತು: ಪ್ರಸನ್ನತೆ (ಅಥವಾ ವೈಶದ್ಯ) ಮತ್ತು ಸುವ್ಯವಸ್ಥಿತತೆ. ಈ ಗುಣಗಳೇ ಅವರ ವಚನ-ರಚನೆಗಳಲ್ಲಿಯೂ ಪ್ರತಿಫಲಿಸಿರುವುದನ್ನು ಎಲ್ಲರೂ ಗುರುತಿಸಬಹುದು. ಅವರ ಶೈಲಿಯ ಮತ್ತೊಂದು ಗುಣ ಧಾರಾಳತೆ. ಊಟದಲ್ಲಾಗಲಿ, ನೋಟದಲ್ಲಾಗಲಿ ಎಲ್ಲವೂ ಅವರಿಗೆ ಪೆÇಗದಸ್ತಾಗಿರಬೇಕು. ಹೀಗಾಗಿ ಯಾವುದೇ ಬಗೆಯ ಸಂಕುಚಿತತೆ ಅವರ ಬಳಿ ಸುಳಿಯಲು ಸಾಧ್ಯವಿಲ್ಲ. ಈ ಗುಣದಿಂದ ವಾಚಕರಿಗಾದ ಉಪಯೋಗ ಸ್ವಲ್ಪದ್ದಲ್ಲ. ಏಕೆಂದರೆ ಒಂದು ವಿಚಾರವನ್ನು ಅದರ ಸಮಸ್ತವಿವರಗಳೊಡನೆ ಒಮ್ಮೆಲೇ ಧಾರಾಕಾರವಾಗಿ ಕುಮ್ಮರಿಸಿದರೆ, ಎಂಥ ವ್ಯುತ್ಪನ್ನನಿಗಾದರೂ ಅದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ಹಗ್ಗದ ಮೇಲಿನ ನಡಿಗೆಯಂತೆ ಹೆಚ್ಚಿನ ಅವಧಾರಣೆಯನ್ನು ಅಪೇಕ್ಷಿಸುತ್ತದೆ. ಡಿ.ವಿ.ಜಿ.ಯವರನ್ನು ಓದುವುದಾದರೋ ಪರ್ವತದಲ್ಲಿಯ ವಿಶಾಲಶಾದ್ವಲಗಳಲ್ಲಿ ಓಡಾಡುವಂತೆ ಸುಖಮಯವಾಗಿರುತ್ತದೆ. ಆ ಎತ್ತರದಿಂದ ನೋಡಿದರೆ ಗುಹೆ, ಗುಡಿ, ಕೆರೆ, ಕಂದರ ಮುಂತಾದವುಗಳೆಲ್ಲವೂ ತಮ್ಮ ತಮ್ಮ ಸ್ಥಾನಗಳಲ್ಲಿ ಸ್ಫುಟವಾಗಿ, ಸಹಜವಾಗಿ ಕಾಣುತ್ತವೆ. ಇದೇ ರೀತಿ ಗುಂಡಪ್ಪನವರ ಬರೆಹದ ಮೂಲಕ ಅವರು ಪ್ರತಿಪಾದಿಸುವ ವಿಷಯವನ್ನು ಗಮನಿಸಿದರೆ, ಅದರಲ್ಲಿಯ ಎಲ್ಲ ವಿವರಗಳೂ ಸ್ಪಷ್ಟವಾಗಿ ಗೋಚರಿಸುತ್ತವೆ.
ಗುಂಡಪ್ಪನವರ ವಿದ್ಯಾಭ್ಯಾಸ ಮುಳುಬಾಗಿಲಿನಲ್ಲಿ ಪ್ರಾರಂಭವಾದಾಗ ಅವರ ಚಿಕ್ಕತಾತಂದಿರೂ ಅಲ್ಲಿಯ ಸ್ಥಳೀಯರಾದ ರಾಮದಾಸಪ್ಪನವರೂ ಯಾವುದೇ ಗ್ರಂಥವನ್ನು ಓದುವಾಗ ಅದರ ತಿರುಳನ್ನು ಗ್ರಹಿಸುವ ವಿಧಾನವನ್ನು ಮನದಟ್ಟುಮಾಡಿಕೊಟ್ಟರು. ಮುಂದೆ ಬೆಂಗಳೂರಿನಲ್ಲಿ ಕೆ.ಎ. ಕೃಷ್ಣಸ್ವಾಮಿ ಅಯ್ಯರ್, ಎನ್. ನರಸಿಂಹಮೂರ್ತಿ ಮತ್ತಿತರರು ಭಾಷೆಯ ಸೌಂದರ್ಯದತ್ತಲೂ ವಿಚಾರದ ತರ್ಕಸಾಂಗತ್ಯದತ್ತಲೂ ಗಮನಹರಿಸುವಂತೆ ಮಾಡಿದರು. ಈ ಎಲ್ಲರ ನೆರವಿನಿಂದಲೂ ಸಂತತವಾದ ಸ್ವಪರಿಶ್ರಮದಿಂದಲೂ ಡಿ.ವಿ.ಜಿ. ಸಾರಾಸಾರವಿವೇಕವನ್ನು ಹೃದ್ಗತಮಾಡಿಕೊಂಡರು. ಮುಂದೆ ಅವರು ಆಯ್ದುಕೊಂಡ ಪತ್ರಿಕಾವೃತ್ತಿಯಲ್ಲಿ ಯಶಸ್ಸು ಕಾಣಲು ಈ ಗುಣವು ನೆರವಾಯಿತು. ಪತ್ರಿಕೆಯಲ್ಲಿಯ ವರದಿಗಳು ಗೊಂದಲಕ್ಕೆ ಅವಕಾಶವಿಲ್ಲದಂತೆ ಕೆಲವೇ ಸಾರೋಕ್ತಿಗಳಲ್ಲಿ ವಿಷಯವನ್ನು ಓದುಗರ ಮುಂದಿಡಬೇಕೆಂಬುದು ಡಿ.ವಿ.ಜಿ.ಯವರ ಆದರ್ಶ. ಹೀಗಾಗಿ ಅಡಕವಾದರೂ ಅಳ್ಳಕವಾಗದಂತೆ ಬರೆಯುವುದನ್ನು ಅವರು ಅಭ್ಯಾಸಮಾಡಿಕೊಂಡರು. ಈ ಕಾರ್ಯದಲ್ಲಿ ಹೆಜ್ಜೆಹೆಜ್ಜೆಗೂ ಉಪಯೋಗವಾಗದ್ದು ಅವರ ಅಗಾಧವಾದ ಸ್ಮೃತಿಶಕ್ತಿ. ನಾಲ್ಕಾರು ದಶಕಗಳ ಹಿಂದೆ ನಡೆದುಹೋದ ಸಂಗತಿಗಳನ್ನವರು ವರ್ತಮಾನವೆಂಬಂತೆ ವಿವರಿಸಬಲ್ಲವರಾಗಿದ್ದರು!
ಹುಣಸೆಹಣ್ಣಿನಿಂದ ಹಿಮಾಲಯದವರೆಗೆ, ದಿವಾನರಿಂದ ಜವಾನನವರೆಗೆ ಡಿ.ವಿ.ಜಿ.ಯವರಿಗೆ ಎಲ್ಲವೂ ಬೇಕು, ಎಲ್ಲರೂ ಬೇಕು. ಅವರು ಲೋಕದ ಎಲ್ಲ ಹಂತಗಳ ಎಲ್ಲ ಆಯಾಮಗಳಲ್ಲಿಯೂ ತಾದಾತ್ಮ್ಯವನ್ನು ಹೊಂದಿದ್ದರು. ಜನಮನೋಭಾವವನ್ನು ಇಷ್ಟು ವಿಶಾಲವಾಗಿ ಗಮನಿಸಿ ಗೌರವಿಸಿದುದರಿಂದ ತಮ್ಮ ಗ್ರಂಥಗಳಲ್ಲಿ ಎಲ್ಲರೂ ಅರ್ಥಮಾಡಿಕೊಂಡು ಆಸ್ವಾದಿಸಬಲ್ಲ ಉದಾಹರಣೆಗಳನ್ನು ಅವರು ನೀಡಲು ಸಾಧ್ಯವಾಯಿತು. ಸಮಾಜದ ಸಾಹಚರ್ಯವನ್ನು ಈ ಮಟ್ಟದಲ್ಲಿ ರೂಢಿಸಿಕೊಂಡವರಿಗೆ ತಮ್ಮ ಖಾಸಗಿ ಕೆಲಸಗಳಿಗೆ ಸಮಯ ಸಿಕ್ಕೀತೆ? ಹೀಗಾಗಿ ಲೋಕಾಂತದಲ್ಲಿಯೇ ಏಕಾಂತವನ್ನು ಜಾಗೃತಗೊಳಿಸುವ ಪರಿಸ್ಥಿತಿ ಅನಿವಾರ್ಯವಾಗಿ, ಅವರ ಬರೆಹ ವ್ಯಕ್ತಸ್ವಗತದ ರೀತಿಯಲ್ಲಿ ವ್ಯವಸ್ಥಿತವಾಯಿತು. ಜ್ಞಾಪಕಚಿತ್ರಶಾಲೆಯ ಸಂಪುಟಗಳನ್ನೂ ಹಲವಾರು ಲೇಖನಗಳನ್ನೂ ಡಿ.ವಿ.ಜಿ.ಯವರು ಉಕ್ತಲೇಖನದ ರೀತಿಯಲ್ಲಿ ಬರೆಯಿಸಿದರೆಂಬುದನ್ನು ಗಮನಿಸಿದರೆ ಈ ಅಂಶವು ಇನ್ನಷ್ಟು ಸ್ಫುಟವಾದೀತು.
ಕೆಲವು ವೈಶಿಷ್ಟ್ಯಗಳು
ಕಾದಂಬರಿ, ಪ್ರವಾಸಕಥನ, ಮಹಾಕಾವ್ಯ ಮುಂತಾದ ಪ್ರಕಾರಗಳನ್ನು ಹೊರತುಪಡಿಸಿದರೆ, ಪ್ರಾಯಶಃ ಬೇರೆಲ್ಲ ವಿಧಾನಗಳಲ್ಲಿಯೂ ಡಿ.ವಿ.ಜಿ.ಯವರ ಸರಸಾಗ್ರವಾದ ಲೇಖನಿ ದುಡಿದಿದೆ. ಇಲ್ಲಿ ಗಮನಾರ್ಹವಾದ ವಿಷಯವೊಂದಿದೆ: ಗುಂಡಪ್ಪನವರು ರಚಿಸಿದ ‘ಜ್ಞಾಪಕಚಿತ್ರಶಾಲೆ’ಯ ಸಂಪುಟಗಳನ್ನು ಒಂದೇ ಸಾಹಿತ್ಯಪ್ರಕಾರದ ಅಡಿಯಲ್ಲಿ ಗುರುತಿಸಲಾಗುವುದಿಲ್ಲ. ಅದು ಕಾವ್ಯವೂ ಹೌದು, ಇತಿಹಾಸವೂ ಹೌದು. ಅದರಲ್ಲಿ ಲಲಿತಪ್ರಬಂಧದ ಸೊಗಸಿದೆ, ಪ್ರವಾಸಕಥನದಂಥ ಸಂಗತಿಗಳಿವೆ, ಆತ್ಮಕಥೆಯ ವಿವರಗಳೂ ಸಾಕಷ್ಟಿವೆ. ಹೀಗಾಗಿ, ಅದು ಮಾತೆಂಬ ಮರದ ಹಲವು ರೀತಿಯ ಬಣ್ಣ-ಬೆಡಗುಗಳುಳ್ಳ ಸುಮಗಳನ್ನು ಸ್ಮೃತಿಯೆಂಬ ಏಕಸೂತ್ರದಲ್ಲಿ ಪೆÇೀಣಿಸಿರುವ ಸಂಕೀರ್ಣವಾದ ಸಾಹಿತ್ಯ.
ಅವರ ಅನುವಾದಕೃತಿಗಳು ತಮ್ಮವೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ. ಮೂಲದ ಕೃತಿಕಾರನ ಆಶಯಕ್ಕೆ ಧಕ್ಕೆಬಾರದಂತೆ, ಕನ್ನಡದ ಮರ್ಯಾದೆಯನ್ನು ಮೀರದೆ ಗುಂಡಪ್ಪನವರು ಅನುವಾದಗಳಲ್ಲಿ ಕಂಡುಕೊಂಡ, ಕಾಣಿಸಿದ ಹದ ಸಾಧಾರಣವಲ್ಲ. ಅವರು ಅನುವಾದ ಮಾಡಿದ ಕೃತಿಗಳಲ್ಲಿ ಮೂರು ಬಗೆಗಳನ್ನು ಗುರುತಿಸಬಹುದು: ಯಥಾವತ್ ಅನುವಾದ (‘ಕನ್ನಡ ಮ್ಯಾಕ್ ಬೆತ್’, ‘ಉಮರನ ಒಸಗೆ’), ರೂಪಾಂತರ (‘ಕನಕಾಲುಕಾ’), ಸಂಗ್ರಹಾನುವಾದ (‘ರಾಜ್ಯಶಾಸ್ತ್ರ’, ‘ವಿದ್ಯಾರಣ್ಯರ ಸಮಕಾಲೀನರು’ ಮುಂತಾದ ಗ್ರಂಥಗಳ ಹಲವು ಕಂಡಿಕೆಗಳು).
ಭಾಷೆಯ ಬಳಕೆಯಲ್ಲಿ ಅನವಶ್ಯವಾದ ಸೀಮಿತತೆಗೆ ಗುಂಡಪ್ಪನವರು ಎಂದೂ ಒಳಪಟ್ಟವರಲ್ಲ. ಅವರು ಸಂಪ್ರದಾಯದ ಪಕ್ಷಪಾತಿಗಳಾದರೂ ಆಧುನಿಕತೆಗೆ ವಿಮುಖರಲ್ಲ. ರಾಚನಿಕದೃಷ್ಟಿಯಿಂದ ಗಮನಿಸಿದರೆ, ಹಳಗನ್ನಡ-ನಡುಗನ್ನಡ-ಹೊಸಗನ್ನಡವೆಂಬ ಕನ್ನಡಭಾಷೆಯ ಮುಖ್ಯ ಮಜಲುಗಳಲ್ಲಿದ್ದ ಎಲ್ಲ ಗುಣಾಂಶಗಳನ್ನೂ ಅವರು ಸಮುಚಿತವಾಗಿ ಬಳಸಿಕೊಂಡಿರುವುದು ಕಂಡುಬರುತ್ತದೆ. ಇದನ್ನು ಅವರ ಛಂದೋವಿಚಿತಿಯಿಂದಲೇ ಅರಿಯಬಹುದು: ಹಳಗನ್ನಡದ ಪ್ರತಿನಿಧಿಗಳಾಗಿ ಕಂದ-ವೃತ್ತಗಳು, ನಡುಗನ್ನಡದ ಮಾದರಿಗಳಾಗಿ ದ್ವಿಪದಿ-ಚೌಪದಿ-ಷಟ್ಪದಿ-ರಗಳೆಗಳು, ಹೊಸಗನ್ನಡದ ಜಾಡಿನಲ್ಲಿ ನವೋದಯದ ಕಾಲದಲ್ಲಿ ಬಳಕೆಗೆ ಬಂದ ಬಗೆಬಗೆಯ ಬಂಧಗಳು (ಇದನ್ನು ‘ಕೇತಕೀವನ’ ಕೃತಿಯಲ್ಲಿ ವಿಶೇಷವಾಗಿ ಗಮನಿಸಬಹುದು) ಅವರ ಬರೆಹಗಳಲ್ಲಿ ಕಾಣಸಿಗುತ್ತವೆ. ಇಷ್ಟೇ ಅಲ್ಲದೆ ಗುಂಡಪ್ಪನವರ ಕೃತಿಗಳಲ್ಲಿ ಆಡುಮಾತಿನ ಅಂದವನ್ನೂ ಕಾಣಬಹುದು (ಉದಾ: ‘ಪ್ರಹಸನತ್ರಯಿ’ ಗ್ರಂಥದಲ್ಲಿ; ಅದರಲ್ಲಿಯೂ ‘ಗರ್ದಭವಿಜಯ’ದಲ್ಲಿ).
ಡಿ.ವಿ.ಜಿ. ಭಾಷೆಯ ಸಿಂಹಾವಲೋಕನ
ಈ ಲೇಖನದ ಮುಂದಿನ ಭಾಗದಲ್ಲಿ ಗುಂಡಪ್ಪನವರ ಗದ್ಯದ ಬರೆಹಗಳಲ್ಲಿ ಅವರ ಹಸ್ತಾಕ್ಷರದಂತೆ ವಿಶಿಷ್ಟವಾಗಿ ತೋರುವ ಕೆಲವು ವಾಕ್ಯವಿಧಾನಗಳನ್ನು ಸೂಕ್ತ ಉದಾಹರಣೆಗಳೊಂದಿಗೆ ಸಂಗ್ರಹಿಸಲಾಗಿದೆ. ಉದಾಹರಣೆಗಳು ಹೆಚ್ಚಿನ ವಿವರಣೆಯನ್ನು ಅಪೇಕ್ಷಿಸದ ಕಾರಣ ಅವುಗಳ ಪರಿಯನ್ನು ನಿರೂಪಿಸುವ ಒಂದೆರಡು ಮಾತುಗಳನ್ನಷ್ಟೇ ಬರೆಯಲಾಗಿದೆ. ಗುಂಡಪ್ಪನವರ ಸಾಹಿತ್ಯ ಬಹಳ ವಿಸ್ತೃತವೂ ಗಹನವೂ ಆದದ್ದು. ಅದರ ಎಲ್ಲ ಬಗೆಯ ಸ್ವಾರಸ್ಯವನ್ನೂ ಹಿಡಿದಿಡಲು ಯತ್ನಿಸುವುದು ಸಾಹಸವೇ ಸರಿ. ಹೀಗಾಗಿ ಪ್ರಸ್ತುತಲೇಖನದ ಮಿತಿಯ ಒಳಗೆ ದಿಕ್ಸೂಚಕವಾಗಿ ಕೆಲವೇ ಮಾದರಿಗಳನ್ನು ನೀಡಲಾಗಿದೆ.
ವಿಷಯವೊಂದರ ಅಥವಾ ವ್ಯಕ್ತಿಯೊಬ್ಬರ ಗುಣಗಳನ್ನೋ ಚರ್ಯೆಗಳನ್ನೋ ವಿವರಿಸುವ ಮೂಲಕ ಅದ(ವ)ರ ಸ್ವಭಾವವನ್ನು ಗುಂಡಪ್ಪನವರು ಕೆಲವೇ ಮಾತುಗಳಲ್ಲಿ ಚಿತ್ರಿಸುತ್ತಾರೆ:
ಸುಸಂಸ್ಕೃತನ ಲಕ್ಷಣಗಳು: (1) ಸ್ವಸ್ಥಾನಪರಿಜ್ಞಾನ, (2) ಪರೇಂಗಿತಪರಿಗ್ರಹಣ, (3) ಸ್ವಾರ್ಥನಿಯಮನ, (4) ಸಮನ್ವಯದೃಷ್ಟಿ, (5) ಸರಸತೆ.
(‘ಸಂಸ್ಕೃತಿ’, ಸುಸಂಸ್ಕೃತನೆಂಥವನು)
(ವೈದಿಕರ) ಜೀವನವಿಧಾನದಲ್ಲಿ ಎದ್ದುಕಾಣುತ್ತಿದ್ದ ಲಕ್ಷಣಗಳು ಮುಖ್ಯವಾಗಿ ಮೂರು: (1) ನಂಬಿಕೆ, (2) ನೆಮ್ಮದಿ, (3) ವಾತ್ಸಲ್ಯ.
(‘ಜ್ಞಾಪಕಚಿತ್ರಶಾಲೆ’, ವೈದಿಕಧರ್ಮಸಂಪ್ರದಾಯಸ್ಥರು)
ಗುಂಡಣ್ಣನವರಲ್ಲಿ ಆಕರ್ಷಕವಾಗಿದ್ದ ಗುಣಗಳು ಮುಖ್ಯವಾಗಿ ನಾಲ್ಕು: (1) ಸ್ನೇಹತತ್ಪರತೆ, (2) ಹಾಸ್ಯನಯ, (3) ಸಾಹಿತ್ಯಪ್ರೀತಿ, (4) ಉಪಕಾರಶೀಲತೆ.
(‘ಜ್ಞಾಪಕಚಿತ್ರಶಾಲೆ’, ಸಾಹಿತಿ-ಸಜ್ಜನ-ಸಾರ್ವಜನಿಕರು)
ಹಿರಿಯಣ್ಣನವರ ಗುಣವಿಶೇಷವನ್ನು ತಿಳಿಸುವುದಕ್ಕಾಗಿ ನಾನು ಮೂರು ಪದಗಳನ್ನು ಆರಿಸಿಟ್ಟುಕೊಂಡಿದ್ದೇನೆ: (1) ಅವರು ಪ್ರಾಮಾಣಿಕರು, (2) ಅವರು ಪರಿಶುದ್ಧರು, (3) ಅವರು ಉಪಶಾಂತರು.
(‘ಜ್ಞಾಪಕಚಿತ್ರಶಾಲೆ’, ಹೃದಯಸಂಪನ್ನರು)
ಪದವಿಗೆ ಮುಂಚೆ ಕರ್ತವ್ಯಚಿಂತೆ, ಹುದ್ದೆಗೆ ಮೊದಲು ಉದ್ದೇಶಚಿಂತೆ: ಇದು ವಿಶ್ವೇಶ್ವರಯ್ಯನವರ ಜೀವನದ ಮೂಲಸೂತ್ರವೆನ್ನಬಹುದು.
(‘ಜ್ಞಾಪಕಚಿತ್ರಶಾಲೆ’, ಮೈಸೂರಿನ ದಿವಾನರುಗಳು)
ವಿಷಯವೊಂದನ್ನು ಸರ್ವತೋಮುಖವಾಗಿ ಪರಿಶೀಲಿಸಿ ಅದನ್ನು ವಿಶದವಾಗಿ ವಿವರಿಸುವುದಕ್ಕೆ ಉದಾಹರಣೆ:
ತತ್ತ್ವ ಎಂದರೆ “ಅದು ಅದಾಗಿರುವುದು” (ತತ್+ತ್ವ). ನಮ್ಮ ದೃಷ್ಟಿಯಲ್ಲಿರುವ ಪದಾರ್ಥದಿಂದ ಅದರ ವೇಷ-ಬಣ್ಣಗಳನ್ನು ಕಳೆದು, ಗುಣ-ಚೇಷ್ಟೆಗಳನ್ನು ಮರೆತು, ಅದು ತಾನೇ ತಾನಾಗಿ, ತಾನು ತಾನೇ ಆಗಿ, ತನ್ನಿಂದ ಬೇರೆ ಯಾವುದರ ಸಂಬಂಧವೂ ಇಲ್ಲದೆ, ಹೇಗಿದೆಯೋ ಹಾಗೆ, ನಿರುಪಾಧಿಕವಾಗಿ ಸ್ವಸ್ವಭಾವದಲ್ಲಿರುವ ಸ್ಥಿತಿಯೇ ತತ್+ತ್ವ (ತನ್ನತನ).
(‘ಜೀವನಧರ್ಮಯೋಗ’)
“ಒಳ್ಳೆಯದು” ಎಂಬುದು ಕನ್ನಡಮಾತು. ಅದರ ಬೇರು “ಒಳ್”. ಒಳ್ ಎಂದರೆ ಇರುವುದು. ಈ ಮಾತಿಗೆ ಒಡಹುಟ್ಟಿನಂತೆ ಇರುವ ಕನ್ನಡಮಾತು “ಉಳ್” ಎಂಬುದು. ಉಳ್ ಎಂದರೂ ಇರುವುದು ಎಂದರ್ಥ. ಉಳ್ಳ, ಉಂಟು- ಈ ಮಾತುಗಳಲ್ಲಿ ಉಳ್ ಎಂಬುದು ಕಾಣಬರುತ್ತದೆ. ಹೀಗೆ ಒಳ್ಳೆಯದು ಎಂದರೆ ಬಹುಕಾಲ ಇರುವುದು, ಕುಂದದೆ ಇರುವುದು ಎಂದರ್ಥ. ಯಾವುದು ಅಳಿಯದೆ ಉಳಿದುಕೊಂಡಿರುತ್ತದೆಯೋ ಅದೇ ಉಳ್; ಅದೇ ಒಳ್ಳೆಯದು.
(‘ಬಾಳಿಗೊಂದು ನಂಬಿಕೆ’)
ಅಮೂರ್ತ-ಸಂಕೀರ್ಣವಿಚಾರಗಳನ್ನು ಸ್ಪಷ್ಟವಾಗಿ ನಿರೂಪಿಸುವ ಪರಿ; ಶಾಸ್ತ್ರಗದ್ಯಕ್ಕೆ ಮಾದರಿ:
ಕಾಲವೆಂದರೆ ನಾವು ಗುರುತಿಸಲಾಗದ ಯಾವುದೋ ಒಂದು ವಿಷಯವಲ್ಲ; ಕಾಲವೆಂದರೆ ವಸ್ತುವಿನ ನೈಜದ್ರವ್ಯದ ಸ್ವತಃಪರಿಣಾಮ; ವಸ್ತುವಿನ ಅಂತರ್ಧಾತುಗಳ ರಚನೆಯ ಸ್ವಯಂಭೂತವ್ಯತ್ಯಾಸ… ಗುಣಾವಗುಣಪರಿಪಾಕದ ಕ್ಷಣಾನುಕ್ಷಣಪರಂಪರೆಯೇ ಕಾಲ.
(‘ಕಾವ್ಯಸ್ವಾರಸ್ಯ’, ಮಹಾಭಾರತದ ಪಾತ್ರಗಳು)
ದೇಶ-ಕಾಲಗಳು ಜಗತ್ತಿನ ವಸ್ತು-ಕ್ರಿಯಾಭೇದಗಳ ಅನುಭವದಿಂದ ನಮ್ಮ ಮನಸ್ಸಿನಲ್ಲುತ್ಪನ್ನವಾಗುವ ಗಾತ್ರ-ಪರಿಮಾಣಕಲ್ಪನೆಗಳು. ದೇಶ, ಕಾಲ – ಇವೆರಡೂ ಜಗದಸ್ತಿತ್ವಾನುಭವವಾಚಕಗಳು. ಜಗತ್ತು ವಸ್ತುಗಳ ಮತ್ತು ಕ್ರಿಯೆಗಳ ಸಮುದಾಯ. ಜಗದ್ವಸ್ತುಗಳ ಗಾತ್ರವಿಸ್ತರಗಳನ್ನೂ ಅನ್ಯೋನ್ಯವ್ಯವಧಾನಗಳನ್ನೂ ದೇಶ (ಅಥವಾ ದಿಕ್ಕು) ಎಂಬ ಪದವು ಸೂಚಿಸುತ್ತದೆ. ಜಗತ್ಕ್ರಿಯೆಗಳ ವ್ಯಾಪ್ತಿವಿಸ್ತರಗಳನ್ನೂ ಅನ್ಯೋನ್ಯವ್ಯವಧಾನಗಳನ್ನೂ ಕಾಲಶಬ್ದವು ಸೂಚಿಸುತ್ತದೆ. ಎಲ್ಲಿ ಜಗತ್ತುಂಟೋ ಅಲ್ಲಿ ದೇಶ-ಕಾಲಗಳ ಭಾವನೆಯುಂಟು. ಎಲ್ಲಿ ಜಗತ್ತಿಲ್ಲವೋ ಅಲ್ಲಿ ದೇಶ-ಕಾಲಗಳ ಭಾವನೆ ಇಲ್ಲ: ಅದೇ ವಿಶ್ವಾತೀತ; ಅದೇ ಅನಂತಸತ್ತಾ; ಅದೇ ಕೇವಲಸತ್ತಾ. ದೇಶ-ಕಾಲಗಳು ಜಗತ್ತಿನೊಳಗಿನ ತದನುಭವಪ್ರಕಾರಗಳ ಸಂಜ್ಞೆಗಳು.
(‘ಜೀವನಧರ್ಮಯೋಗ’, ಎರಡನೆಯ ಅಧ್ಯಾಯ)
ಉಜ್ಜ್ವಲವೂ ಪ್ರಚೋದಕವೂ ಆದ ಶೈಲಿಗೆ ಉದಾಹರಣೆ:
ಪ್ರಕೃತ, ಆರುನೂರು ವರ್ಷಗಳ ಹಿಂದೆ ಯಾವ ಮಹಾನುಭಾವರ ಬ್ರಾಹ್ಮಣ್ಯವು ದೀನವೃತ್ತಿಯಾಗಿರದೆ ಧೀರವೃತ್ತಿಯಾಗಿ ವೇದಶಾಸ್ತ್ರಾಭ್ಯುದಯಹೇತುವಾಯಿತೋ, ಯಾರ ವೈರಾಗ್ಯವು ತಾಟಸ್ಥ್ಯದಲ್ಲಿ ಪರ್ಯವಸಾನವಾಗದೆ ಪೌರುಷಪ್ರಕಾಶದಲ್ಲಿ ಪ್ರತಿಫಲಿಸಿತೋ, ಯಾರ ವೇದಾಂತವು ಶುಷ್ಕಾಲಾಪವೆನಿಸದೆ ದೇಶೋನ್ನತಿಕಾರಕವಾಯಿತೋ ಆ ವಿದ್ಯಾರಣ್ಯರ ಚರಿತ್ರೆಯು ಈ ವಿಷಮಕಾಲದಲ್ಲಿ ನಮಗೆ ಕಗ್ಗತ್ತಲೆಯಲ್ಲಿ ಕಾಣಬಂದ ಪಂಜಿನಂತೆಯೂ ಮರುಭೂಮಿಯಲ್ಲಿ ಸಿಕ್ಕಿದ ಸರೋವರದಂತೆಯೂ ಇದೆ. ಆ ಸರಸ್ಸಿನಲ್ಲಿ ನಮ್ಮ ಅಂತಃಕರಣವನ್ನು ತೊಳೆಯೋಣ. ಆ ದೀವಿಗೆಯ ಬೆಳಕಿನಲ್ಲಿ ನಮ್ಮ ಜೀವನಯಾತ್ರೆಯನ್ನು ನಡಸೋಣ.
(‘ಶ್ರೀವಿದ್ಯಾರಣ್ಯರು ಮತ್ತು ಅವರ ಕಾಲ’)
ಸ್ವಾಮಿ ವಿವೇಕಾನಂದರು ಸ್ವಾಭಾವಿಕವಾಗಿ ಅದ್ಭುತಪ್ರತಿಭಾಸಂಪನ್ನರು. ಅವರ ಬುದ್ಧಿ ವಿದ್ಯುದ್ವೇಗದಿಂದ ಸಂಚಾರ ಮಾಡತಕ್ಕದ್ದು. ಅದು ಒಮ್ಮೆ ಲೀಲೆಯಿಂದ ಸಮುದ್ರತಳಕ್ಕೆ ಧುಮುಕುವುದು; ಇನ್ನೊಮ್ಮೆ ಪಕ್ಷಿಯಂತೆ ಗಿರಿಶಿಖರಕ್ಕೆ ಹಾರುವುದು; ಮತ್ತೊಮ್ಮೆ ಹುಲ್ಲುಗಾವಲಿನ ಮೇಲೆ ಮಂದಮಾರುತದಂತೆ ಸುಳಿದಾಡುವುದು. ಒಂದು ತೀಕ್ಷ್ಣತೆ, ಒಂದು ಲಘುತೆ, ಒಂದು ಆವೇಶ, ಒಂದು ವಿಲಾಸ – ಇವು ಆ ಬುದ್ಧಿಯ ಗುಣಗಳು. ಅವರು ಸಂಸ್ಕೃತದಲ್ಲಿ ವ್ಯಾಕರಣ-ತರ್ಕಶಾಸ್ತ್ರಗಳನ್ನು ಸಾಂಗವಾಗಿ ಅಭ್ಯಾಸಮಾಡಿದ್ದರು. ಹಾಗೆಯೇ ಇಂಗ್ಲಿಷಿನಲ್ಲಿ ಕಾವ್ಯ-ಇತಿಹಾಸಗಳನ್ನೂ ವಿಜ್ಞಾನಶಾಸ್ತ್ರ-ತತ್ತ್ವಮೀಮಾಂಸೆಗಳನ್ನೂ ವಿಸ್ತಾರವಾಗಿ ಪರಾಮರ್ಶಿಸಿ ಸ್ವಾಧೀನಪಡಿಸಿಕೊಂಡಿದ್ದರು. ಈ ಉಭಯವಿದ್ಯಾಪ್ರಾವೀಣ್ಯಕ್ಕೆ ಅನುರೂಪವಾದ ವಾಗ್ಧೋರಣೆ, ತದನುಗುಣವಾದ ಉತ್ತಾಲಧ್ವನಿ, ಉನ್ನತವಾದ ವರ್ಚಸ್ವಿಯಾದ ಗಂಭೀರಾಕಾರ, ಸಕಲಜನಮನೋಗ್ರಾಹಿಯಾದ ಹಾಸ್ಯವಿನೋದರಸಿಕತೆ, ಹೃದಯವಿದ್ರಾವಕವಾದ ಗಾನಮಾಧುರ್ಯ ಇದೆಲ್ಲವೂ ಅವರಲ್ಲಿ ಸಮ್ಮಿಳಿತವಾಗದ್ದುವು.
(ಕುವೆಂಪು ಅವರ ‘ಸ್ವಾಮಿ ವಿವೇಕಾನಂದ’ ಗ್ರಂಥಕ್ಕೆ ಬರೆದ ಮುನ್ನುಡಿ)
ಉದಾಹರಣೆಗಳ ಮೂಲಕ ಗಹನ ವಿಷಯವನ್ನು ಸುಲಭಗ್ರಾಹ್ಯವಾಗಿ ಮಾಡುವ ವಿಧಾನ:
ಕಾಲ ಎಂದರೆ ಸಮಯಸಂದರ್ಭ: ನಮ್ಮ ಸುತ್ತಮುತ್ತಲಿನ ವಸ್ತುಸ್ಥಿತಿಸನ್ನಿವೇಶ. ಪ್ರತಿಯೊಂದು ಮನುಷ್ಯಸಂದರ್ಭದ ಗರ್ಭದಲ್ಲಿಯೂ ಅದರ ಭವಿಷ್ಯತ್ತಿನ ಬೀಜಗಳು ಅಡಗಿಕೊಂಡಿರುತ್ತವೆ. ಹಸಿದ ಮನುಷ್ಯನಿರುವ ಕಡೆ ಯಾರೋ ಒಂದು ಘಮಘಮಿಸುವ ಭಕ್ಷ್ಯದ ತಟ್ಟೆಯನ್ನು ಇರಿಸಿ ಹೋಗುತ್ತಾರೆಂದು ಭಾವಿಸೋಣ. ಆ ತಟ್ಟೆಯನ್ನು ಕರಗಿಸುವ ಆತುರದ ಬೀಜ ಅವನ ಹೊಟ್ಟೆಯಲ್ಲಿಯೂ ತಟ್ಟೆಯ ಘಮಲಿನಲ್ಲಿಯೂ ಅಡಗಿಕೊಂಡಿರುತ್ತದೆ. ತಟ್ಟೆಯನ್ನಿಟ್ಟವನು ಮತ್ತೆ ಅಲ್ಲಿಗೆ ಬಂದು ನೋಡುವಾಗ ಅದು ಅರ್ಧ ಬರಿದಾಗಿರುತ್ತದೆ. ಇದು ಕಾಲದಿಂದ ಆದ ವ್ಯತ್ಯಾಸ: ಎಂದರೆ ಆ ಹಸಿವೂ ಈ ಘಮಲೂ ಕೆರಳಿ ಕೆಲಸಮಾಡಲು ಎಷ್ಟು ಹೊತ್ತು ಬೇಕಾಗಿತ್ತೋ ಆ ಹೊತ್ತಿನ ಕೆಲಸ ಅದು. ಬೇರೆ ಯಾವ ಒಂದು ಪ್ರೇರಣೆ, ಅಪ್ಪಣೆಗಳಿಗಾಗಿಯೂ ಆ ಹಸಿವೂ ಆ ಘಮಲೂ ಕಾಯದೆ ತಾವಾಗಿ ಕೆಲಸ ನಡಸಿದವು: ಎಂದರೆ, ನಿದ್ರಿಸಿದಂತಿದ್ದ ಆ ಹಸಿವನ್ನೂ ಘಮಲನ್ನೂ ಎಚ್ಚರಿಸಿದ್ದು ಕಾಲ. ಹಸಿವು ಸ್ವತಃ ಜಡವಸ್ತು; ವಾಸನೆಯೂ ಜಡವಸ್ತು. ಅವೆರಡಕ್ಕೂ ಸಂಯೋಗವಾದಾಗ ಎರಡೂ ಜಡತೆಯನ್ನು ಬಿಟ್ಟು ಚೇತನವಂತಗಳಾದವು. ಆ ಸಂಯೋಗದ ಕ್ಷಣವೇ ಈ ಸಂದರ್ಭದಲ್ಲಿ ಕಾಲ. ಹೀಗೆ ಕಾಲಕರ್ಮಸಂಯೋಗ. ಗಿಡದಲ್ಲಿ ಮೊಗ್ಗು ಹೂವಾಗುವುದೂ ಕಾಯಿ ಹಣ್ಣಾಗುವುದೂ ಋತುವಶದಿಂದ. ಹಾಗೆಯೇ ಮನುಷ್ಯರ ಮನೋಬುದ್ಧಿಗಳೂ ಪಕ್ವವಾಗುತ್ತವೆ – ಕೇವಲ ಲೋಕಾನುಭವಾತ್ಮಕವಾದ ಕಾಲಗತಿಯ ಕಾರಣದಿಂದ. ನೆಲದಲ್ಲಿ ನೆಟ್ಟ ಬೀಜ ಆ ಕ್ಷಣ ಮೊಳಕೆಯಾಗುವುದಿಲ್ಲ. ಬೀಜದ ಅಂತದ್ರ್ರವ್ಯವು ಪಕ್ವವಾಗಿ ಮೊಳಕೆತೋರಲು ಕೆಲವು ಘಂಟೆಗಳಷ್ಟಾದರೂ ಕಾಲ ಬೇಕು. ಹೀಗೆ ಅಂತಶ್ಶಕ್ತಿವಿಕಸನಕ್ಕೆ ಬೇಕಾದ ಕಾಲವೇ ನಾವು ಕಾಲವ್ಯತ್ಯಾಸವೆಂಬ ಪದವನ್ನುಪಯೋಗಿಸುವಾಗ ಉದ್ದೇಶದಲ್ಲಿರುವ ಸಂಗತಿ. ಕಾಲವು ವಸ್ತುಗಳನ್ನು ಹದಪಡಿಸುವ, ಅಥವಾ ಹದಗೆಡಿಸುವ, ಅಧಿಕಾರವುಳ್ಳ ಕ್ಷಣಾನುಕ್ರಮ.
(‘ಕಾವ್ಯಸ್ವಾರಸ್ಯ’, ಮಹಾಭಾರತದ ಪಾತ್ರಗಳು)
ಇಂಗ್ಲಿಷ್ ಪದಗಳಿಗೆ ಕನ್ನಡದ ರೂಪಾಂತರಗಳು:
ರೇಜಿಗೆ (Drudgery), ವ್ಯಕ್ತಿವೈಶಿಷ್ಟ್ಯ (Idiosyncrasy), ಹೇತುವಿಚಾರಪ್ರವೃತ್ತಿ (Rationality), ಅಂತರ್ಬೋಧೆ (Intuition), ಸ್ವತಶ್ಚಲಿಯಾನ (Automobile), ಶೀಘ್ರಲಿಪಿ (Shorthand), ಸಂಪದ್ವಿಷಯಕಸಂಸತ್ (Economic Conference), ಜಲಬಲಶಾಸ್ತ್ರ (Hydraulics), ಮುಂಚಾಚು (Projection), ಹಿಡಿನುಡಿ (Catchword), ಲಂಘಕ (Spring), ಬದಲಾಬದಲಿ (Exchange), ಪಕ್ಷೈಕವಾದ (Dogmatism), ಅಸ್ತ್ಯರ್ಥಕ / ನಾಸ್ತ್ಯರ್ಥಕ (Positive / Negative ), ಆಧಾರಪ್ರತಿಜ್ಞೆ / ಅರ್ಥಾಪತ್ತಿ (Hypothesis), ಪೂರ್ವಸೌಕರ್ಯ (Prerequisite), ಜಗಲಿಯ ಜಿಜ್ಞಾಸೆ (Armchair Philosophy), ನಯವರ್ತನೆ (Manners), ಕ್ಷಿಪ್ರವೇದನಶಕ್ತಿ / ತೀವ್ರವೇದಿತೆ (Sensitiveness), ಆಪಾತಜ್ಞಾನ (Superficial Knowledge), ರಾಷ್ಟ್ರಕ (Citizen), ವರಣ (Vote), ಸ್ಥಾನಾರ್ಥಿ (Candidate), ಸ್ನೇಹಸಮ್ಮತಿ (Consensus), ಬುದ್ಧಿಭೀರುತನ (Intellectual Cowardice), ರಾಜ್ಯವಿಚಕ್ಷಣ / ರಾಜ್ಯತಂತ್ರಧುರಂಧರ (Statesman).
ಡಿ.ವಿ.ಜಿ.ಯವರು ಬಳಸಿರುವ ಪರ್ಷಿಯನ್ / ಉರ್ದು / ಮರಾಠಿ / ಹಿಂದಿ ಶಬ್ದಗಳು:
ತರದೂದು (ಏರ್ಪಾಡು), ಮೊಬಲಗು (ಒಟ್ಟು ಹಣ), ತಸ್ತೀಕು (ಛತ್ರ ಮುಂತಾದವುಗಳನ್ನು ಸರಕಾರ ವಶಪಡಿಸಿಕೊಂಡರೆ ಅದಕ್ಕೆ ಪ್ರತಿಯಾಗಿ ಕೊಡುವ ಹಣ), ಮೆಹನತ್ತು (ಪರಿಶ್ರಮ; ಓಲೈಸುವುದು), ಮಸಲಾ (ಅಕಸ್ಮಾತ್), ಇಸಮು (ವಿಷಯ, ಅಂಶ), ಫೈಸಲ್ (ತೀರ್ಮಾನ), ಹುಕುಂ (ಆಜ್ಞೆ), ಮಾಫ್ (ಕ್ಷಮೆ), ವಾಯಿದೆ (ಒಡಂಬಡಿಕೆ; ಗಡುವು), ತಲಬು (ಸಂಬಳ; ಅವಧಿ), ಮಾಮೂಲಾತಿ (ದಿನನಿತ್ಯದ್ದು), ಬಿಲ್ಕುಲ್ (ಖಡಾಖಂಡಿತವಾಗಿ), ಉಡಾಫೆ (ಉದಾಸೀನತೆ), ಅಜಮಾಯಿಷಿ (ತನಿಖೆ), ಬಾಬತ್ತು (ವಾಡಿಕೆ, ತೆರಿಗೆ),
ಆಖೈರು (ಕೊನೆ), ಖಾನೇಷುಮಾರಿ (ವಸ್ತುಗಳ, ಜನರ ಗಣನೆ; ಸೆನ್ಸಸ್), ಪರಿಠವಣೆ / ಪರುಠವಣೆ (ಏರ್ಪಾಟು; ಸಡಗರ; ಅಚ್ಚುಕಟ್ಟು), ರಕಮು (ಹಣ; ಬಗೆ).
ಕೋಲಾರಮಂಡಲದಲ್ಲಿ ಹೆಚ್ಚು ಪ್ರಚಲಿತವಿರುವ ವಾಗ್ರೂಢಿಗಳ ಬಳಕೆ:
ವೆಗಟು / ಎಗಟು (ಹೆಚ್ಚು ಸೇವನೆಯಿಂದ ರುಚಿಗೆಡುವುದು), ಅಂದಿಸು (ಎಟಕುವಂತಾಗಿಸು), ನಸನಸೆ (ರಂಪ; ಸಣ್ಣ ವಿಷಯಗಳನ್ನು ದೊಡ್ಡದು ಮಾಡುವುದು), ಸೊಟ್ಟಾಪಟ್ಟೆ (ಓರೆಯಾದ, ಡೊಂಕಾದ), ಪೆÇೀದಿ (ಆರೈಕೆ), ಮೊಡಕು (ಮೂಲೆ), ಐಲುಫೈಲು (ಹುಚ್ಚು), ಯರ್ರಿಬಿರ್ರಿ (ಶಿಸ್ತು ಇಲ್ಲದಿರುವುದು), ಪೀಕಲಾಟ (ತೊಂದರೆ; ಜಗಳ), ತಕರಾರು (ಆಕ್ಷೇಪಣೆ; ವಿರೋಧ; ಜಗಳ), ಏಮಾರು / ಯಾಮಾರು (ಮೊಸಹೋಗು; ಉಪೇಕ್ಷಿಸು), ಚಿತಾವಣೆಗಾರಿಕೆ (ಪ್ರಚೋದನೆ), ಪೆÇಗದಸ್ತು (ಸಮೃದ್ಧ), ಅಳ್ಳಕ (ಸಡಿಲ; ದ್ರವೀಯ).
ನಾಮಪದಗಳಂತೆ “ಓಣ”-ಅಂತಶಬ್ದಗಳ ಬಳಕೆ ಮತ್ತು ವಿಧಾಯಕಾರ್ಥವುಳ್ಳ – “ತಕ್ಕದ್ದು” ಬಳಕೆ:
ಇರೋಣ, ಆಗೋಣ, ತಿಂಬೋಣ, ಕೇಳೋಣ, ಕೀಳೋಣ, ಅಂಬೋಣ; ಮಾಡತಕ್ಕದ್ದು, ಇರತಕ್ಕದ್ದು, ಹೋಗತಕ್ಕದ್ದು.
ನೂತನಪದಗಳ / ವಾಕ್ಯಖಂಡಗಳ ಟಂಕನ:
ಋತನಿಷ್ಠೆ, ಅಧಿಧರ್ಮ, ಲೈಂಗಕಿಣ್ವ, ಭಗವತ್ಸಮಕ್ಷತಾಭ್ಯಾಸ, ಬ್ರಹ್ಮಪತ್ತನಭಿಕ್ಷುಕ, ತರಂಗವಲಯವಿಸ್ತಾರ, ಅನುಭವರಸಿಕತೆ, ಮಾತ ಮೂದಲಿಸಿಪ ಮಹಾರಣ್ಯಸರಣಿ, ಪ್ರಣಯಪ್ರರೋಹ, ಸಂದೇಹಸೂಕ್ತ, ಉದ್ಯತ್ಖದ್ಯೋತಲೀಲಾಕ್ರಮ, ಸದ್ಯಃಪ್ರಪಂಚಪ್ರಯುಕ್ತತೆ, ಜೀವೋತ್ಕರ್ಷ, ಅನುದ್ವೇಗಪ್ರಗತಿಕುಶಲ, ಅಂತರಂಗದ ಸ್ವತಃಪ್ರವರ್ತಿತಸದ್ಭಾವಪ್ರವಾಹ, ಅಪ್ರತ್ಯಕ್ಷಹೃದಯಪರಿವರ್ತನೆ, ವಿಶ್ವಪತಿಹಸಿತವೀಕ್ಷೆ, ಜೀವಮುಕುಲೋನ್ಮೀಲಾರ್ಕಸಂವೀಕ್ಷೆ, ಮದನಿಕೆಯರ್ ವಿಧುವದನಿಕೆಯರ್ … ಮಧುಕರಣಿಕೆಯರ್ … ಹಿತಕಥನಿಕೆಯರ್ … ಗುಣಭಣನಿಕೆಯರ್, ಅಳುವೇನು ನಗುವೇನು ಹೃತ್ಕಪಾಟೋದ್ಘಾಟ, ಬದುಕು ರಸತರ್ಕೈಕ್ಯ, ಸ್ವಜ್ಞಪ್ತಿಶೋಧಿ ಮುನಿ, ಅನುಪಮಾಸಹ್ಯ, ಧನ್ಯತೆಯ ಬೆದಕಾಟ, ರಸಿಕತೆಯೆ ಯೋಗ, ಗಾವಿಲನ ಗಳಹು, ತಣಿವು ಜೀವಸ್ವರದೆ, ಅನಿತರಜ್ಞತೆ ಮುಕ್ತಿ, ಒರಟುಯಾನವೊ ಭಾಷೆ, ಅಮಿತ ಪ್ರಪಂಚನಾಕುಂಚನಾವರ್ತನಕ್ರಮವೆ ವಿಶ್ವಚರಿತ್ರೆ, ನೊರೆ ಸೃಷ್ಟಿ ಪಾಲ್ ಬ್ರಹ್ಮ, ಕಲಬೆರಕೆ ಜಗದುಸಿರು, ಮತ-ನೀತಿ-ಶಾಸ್ತ್ರಗಳು ರಾಜ್ಯಸಂಧಾನಗಳು ಮತಿಯ ಕಿಂಚಿದ್ವಿಜಯ, ಸಾಜವಂ ಶಿಕ್ಷಿಸುತೆ ಲೋಕಸಂಸ್ಥಿತಿಗದನು ಯೋಜಿಪುದೆ ನರಮಹಿಮೆ, ಸಾಜ ಸೊಗವಾತ್ಮಂಗೆ, ನೀತಿ ನಿಂದೆಯೊಳಿರದು.
ಆರ್ಷಪರಂಪರೆಗೆ ಸಂದ ಸೇರ್ಪಡೆ; ಸಂಸ್ಕೃತದ ಮೇಲಿನ ಹಿಡಿತ:
ಮಹರ್ಷಿಗಳಿಗೆ ವಿಧೇಯರಾದ ನಾವು ಅವರು ತೋರಿರುವ ದಾರಿಯಲ್ಲಿ ಕಾವ್ಯವನ್ನು ಕುರಿತು ಒಂದು ಲಘುಸಂಹಿತೆಯನ್ನು ರೂಪಿಸಿಕೊಂಡರೆ ಅಪಚಾರವಾಗಲಾರದು.
ಅಥಾಧಿಕಾವ್ಯಮ್ | ಕವಿಪ್ರತಿಭಾ ಪೂರ್ವರೂಪಮ್ |
ಶ್ರೋತೃಹೃದಯಮುತ್ತರರೂಪಮ್ | ರಸಾನುಭೂತಿಃ ಸಂಧಿಃ |
ವಾಶ್ಕ್ಶಲಮಂ ಸಂಧಾನಮ್ | ಇತ್ಯಧಿಕಾವ್ಯಮ್ ||
(ಈಗ ಕಾವ್ಯದ ಮಾತು. ಕವಿಯ ಪ್ರತಿಭೆ ಮೊದಲ ಪದಾರ್ಥ. ಓದುಗನ (ಕೇಳುವವನ) ಹೃದಯ ಅನಂತರದ ಪದಾರ್ಥ. ರಸಾನುಭವ ಎರಡಕ್ಕೂ ಸಂಬಂಧ. ವಾಕ್ಯದ ಸೊಗಸು-ಚಮತ್ಕಾರಗಳು ಅದಕ್ಕೆ ಸಾಧನ. ಇಷ್ಟೇ ಕಾವ್ಯದ ಮಾತು.)
(‘ಕಾವ್ಯಸ್ವಾರಸ್ಯ’, ಸಾಹಿತ್ಯಸಂಹಿತೆ)
ಹಾಸ್ಯ / ವ್ಯಂಗ್ಯ:
ಕವಿತ್ವಾವೇಶ ಹರಳೆಣ್ಣೆಯ ಹಾಗೆ. ಅದು ಒಳಗೆ ಒಂದು ತೊಟ್ಟಿನಷ್ಟು ಇದ್ದರೂ ಸುಮ್ಮನಿರುವುದಿಲ್ಲ. ಅದು ನಿಶ್ಶೇಷವಾಗಿ ಹೊರಕ್ಕೆ ಬಂದಮೇಲೆಯೇ ನೆಮ್ಮದಿ. ಒಳಗೆ ಉಳಿದುಕೊಂಡರೆ ಬಾಧೆ, ಅಪಾಯ. ಒಂದು ಸಾರಿ ನಾನು ಈ ಉಪಮಾನವನ್ನು ಹೇಳಿದಾಗ ನನ್ನ ಸ್ನೇಹಿತರು ಎಸ್. ಜಿ. ಶಾಸ್ತ್ರಿಗಳು ತುಂಬ ಆಗ್ರಹಗೊಂಡು ನನಗೆ ಶಾಪವಿಟ್ಟದ್ದು ಜ್ಞಾಪಕವಿದೆ. ಅಂದಿನಿಂದ ಬೇರೊಂದು ಉಪಮಾನ ಹುಡುಕುತ್ತಿದ್ದೇನೆ, ಸಿಕ್ಕಿಲ್ಲ. ಕ್ಷಮಿಸಬೇಕು.
(‘ಜ್ಞಾಪಕಚಿತ್ರಶಾಲೆ’, ಹೃದಯಸಂಪನ್ನರು)
ಕಸ್ತೂರಿ ಮಾರುವವನ ಪಕ್ಕದಲ್ಲಿ ಗೊಬ್ಬರದ ಅಂಗಡಿಯವನು ಇರಲಿ, ಅದೇ ಸಮಾನತ್ವ … ನಿತ್ಯಸ್ನಾನಿಯ ಮೈಯನ್ನು ನೀರು ಸೋಕದವನು ತಿಕ್ಕಲಿ. ಅದೇ ಅಲ್ಲವೆ ಸೋದರತ್ವ?
(‘ಜೀವನಧರ್ಮಯೋಗ’)
(ಮುವ್ವ ಗೋಪಾಲನ) ಆ ಗುಡಿ ವಿನಾಯಕನದೋ ವೀರಭದ್ರನದೋ ಮಾರುತಿಯದೋ ಮಾರಮ್ಮನದೋ ಆಗದೆ ಶೃಂಗಾರಮೂರ್ತಿಯಾದ ಗೋಪಾಲನದಾಗಿದ್ದದ್ದು ರಸಿಕಪ್ರಪಂಚದ ಸೌಭಾಗ್ಯ.
(‘ಕ್ಷೇತ್ರಜ್ಞ’)
ನೀನು ನನಗೆ ವ್ಯಾಪಾರದಲ್ಲಿ ಲಾಭ ಮಾಡಿಸಿದರೆ ನಾನು ನಿನಗೆ ದೀಪಾರಾಧನೆ ಮಾಡಿಸುತ್ತೇನೆ. ನನ್ನ ಈ ಗುಟ್ಟು ಹೊರಕ್ಕೆ ಬೀಳದಂತೆ ನೀನು ಮುಚ್ಚಿಟ್ಟರೆ ನಿನಗೆ ನಾನು ಊರಲ್ಲೆಲ್ಲ ಮೆರವಣಿಗೆ ಮಾಡಿಸುತ್ತೇನೆ. ನನ್ನ ನೆರೆಮನೆಯವನ ಮೀಸೆಯನ್ನು ನೀನು ಉದುರಿಸಿದರೆ ನನ್ನ ತಲೆಗೂದಲನ್ನೆಲ್ಲ ಮುಡಿಪು ಕೊಡುತ್ತೇನೆ.
(‘ಬಾಳಿಗೊಂದು ನಂಬಿಕೆ’)
ಶಕುಂತಲೆ ಋಷ್ಯಾಶ್ರಮದಿಂದ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ಕಣ್ವರು ಆಶ್ರಮದ ಗಿಡಬಳ್ಳಿಗಳನ್ನು ಆಕೆಗೆ ಅನುಜ್ಞೆ ಕೊಡಬೇಕೆಂದು ಬೇಡಿದರಂತೆ. ಗಿಡಬಳ್ಳಿಗಳು ದುಃಖಿಸುವುದೆಂದರೇನು? ಅನುಜ್ಞೆ ಕೊಡುವುದೆಂದರೇನು? … ಇಂಥ ಪ್ರಶ್ನೆಗಳನ್ನು ಚರ್ಚಿಸುವವರು ಅಕೌಂಟೆನ್ಸಿ ಪರೀಕ್ಷೆಗೆ ಹೋಗಬೇಕು, ಕಾವ್ಯವ್ಯಾಸಂಗಕ್ಕಲ್ಲ.
(‘ಶ್ರೀಮದ್ವಾಲ್ಮೀಕಿರಾಮಾಯಣಂ’, ಬಾಲಕಾಂಡ: ಮುನ್ನುಡಿ)
ಡಿ.ವಿ.ಜಿ. ಹೆಸರಿಸಿರುವ ಅಡುಗೆ-ತಿಂಡಿ-ತಿನಿಸು-ಪಾನೀಯಗಳು:
ಘೀವರ್, ಬಾದಾಮಿ ಹಲ್ವಾ, ಕಜ್ಜಾಯ, ಸಜ್ಜಪ್ಪ, ತೇಂಗೊಳಲು, ಲಾಡು, ಪುರಿಯುಂಡೆ, ಅವಲಕ್ಕಿ, ಮುಚ್ಚೋರೆ, ಚೆಕ್ಕುಲಿ, ಕೋಡುಬಳೆ, ಹುರಿಗಾಳು, ನುಚ್ಚಿನುಂಡೆ, ಕಾಳುಪ್ಪಿಟ್ಟು, ಹೀರೇಕಾಯಿ ಬೋಂಡ, ದೋಸೆ, ಇಡ್ಲಿ, ಚಿರೋಟಿ, ಪಳದ್ಯ, ಖಾರದವಲಕ್ಕಿ, ಬದನೇಕಾಯಿಹುಳಿ, ಗೊಜ್ಜು, ಆಂಬೊಡೆ, ವಡೆ, ಕೋಸುಂಬರಿ, ಒಬ್ಬಟ್ಟು / ಹೋಳಿಗೆ, ಕಡಲೇಬೇಳೆ ಚಟ್ನಿ, ಹಯಗ್ರೀವ, ಶ್ರೀಮದ್ಬೇಳೆಹುಳಿ, ಹೆಸರುಬೇಳೆ ಪಾಯಸ, ಚಿತ್ರಾನ್ನ, ದಮ್ರೋಟು, ಗುಗ್ಗರಿ / ಉಸಲಿ, ಜಿಲೇಬಿ, ಬೀಡಾ, ಚುಟ್ಟಾ, ಕಾಫೀ, ಟೀ, ಸೋಡ, ಲೆಮನೇಡ್, ಎಳನೀರು, ಪಾನಕ.
ಉದ್ಬೋಧಕವ್ಯಾಖ್ಯೆಗಳು
ಅಧ್ಯಾತ್ಮ-ಸಂಸ್ಕೃತಿ:
ಜೀವನಸಮೃದ್ಧಿ, ಜೀವನಸಂಸ್ಕಾರ, ಜೀವನಸೌಂದರ್ಯ – ಇದು ಬರಿಯ ಐಹಿಕಾಸಕ್ತಿಯಲ್ಲ, ಚಾರ್ವಾಕತನವಲ್ಲ, ಭೋಗನಿಷ್ಠೆಯಲ್ಲ; ಅದು ವೇದ-ವೇದಾಂತಗಳ ಸಾರಾಂಶ.
(‘ಬಾಳಿಗೊಂದು ನಂಬಿಕೆ’)
ಅಂತಸ್ಸಮತೆ-ಬಹಿಸ್ತಾರತಮ್ಯ: ಇವು ಲೋಕಹಿತಸೂತ್ರದ ಎರಡು ಭಾಗಗಳು.
(‘ಜೀವನಧರ್ಮಯೋಗ’)
ಲೋಕಸ್ನೇಹಪ್ರಧಾನವಾದ ಸ್ವಧರ್ಮಪ್ರಕಾಶವೇ ಸಂಸ್ಕೃತಿ.
(‘ಸಂಸ್ಕೃತಿ’)
ಮನಸ್ಸಿನೊಳಗಡೆ ದ್ವೇಷ-ಉದ್ವೇಗಗಳಿಲ್ಲದಿರುವುದೇ ಸಹನೆ; ಬುದ್ಧಿಯ ಒಳಗಡೆ ಉದಾಸೀನತೆ-ಜಡತೆಗಳು ಸೇರದೆ ವಿವೇಚನೆ-ಪ್ರೇರಣೆಗಳು ನಡೆಯುತ್ತ, ಹೊರಗಡೆ ಕಾರ್ಯಪರಂಪರೆಯಾಗುವುದೇ ಪ್ರಯತ್ನ.
(‘ಬಾಳಿಗೊಂದು ನಂಬಿಕೆ’)
ನಿಜವಾದ ವಿರಕ್ತಿಯಲ್ಲಿ ಬೇಡವೆಂಬುದಕ್ಕೆ ಒಂದು ಸ್ಥಾನವಿರುವಂತೆ ಬೇಕೆಂಬುದಕ್ಕೂ ಇರುತ್ತದೆ; ಅಥವಾ ಬೇಕೆಂಬುದು ತಪ್ಪಾದರೆ ಬೇಡವೆಂಬುದೂ ತಪ್ಪಾದೀತು. ರಾಗವು ಅದಕ್ಕೆ ಹೇಗೆ ವಜ್ರ್ಯವೋ ದ್ವೇಷವೂ ಹಾಗೆ ವಜ್ರ್ಯವೇ.
(‘ಉಮರನ ಒಸಗೆ’)
ಸುಖವೂ ದುಃಖದಂತೆಯೇ ಮನುಷ್ಯಜೀವನಕ್ಕೆ ಅವಶ್ಯವಾದ ಒಂದು ಸಂಸ್ಕಾರ.
(‘ಶ್ರೀಕೃಷ್ಣಪರೀಕ್ಷಣಂ’)
ಅಂಗೀಕಾರವೂ ವರ್ಜನೆಯಂತೆ ಒಂದು ಮನಃಪರಿಪಾಕಕ್ರಮ. ಎಷ್ಟೋ ಸಂದರ್ಭಗಳಲ್ಲಿ
ತ್ಯಾಗಕ್ಕೆ ದಾರಿ ಭೋಗದ ಬಾಗಿಲಿನಿಂದಲೇ ಇದ್ದೀತು. ಭೋಗವೂ ಅದರಿಂದ ಬರುವ ಮನೋವಿಕಾಸವೂ ಜೀವಕ್ಕೆ ಒಂದು ತೆರದ ವಿದ್ಯಾಭ್ಯಾಸ.
(‘ಉಮರನ ಒಸಗೆ’)
ಪುರಾತನದಲ್ಲಿ ಸತ್ತ್ವವಿದ್ದರೆ ಅದು ನಮಗೆ ಕಾಲಾನುಕಾಲಕ್ಕೆ ಹಿಂತಿರುಗಿ ಬರುತ್ತದೆ. ಅದರಲ್ಲಿ ಸತ್ತ್ವವಿಲ್ಲದಿದ್ದಲ್ಲಿ ಅದರ ಅಳಿವಿಗಾಗಿ ಯಾರೂ ಅಳಬೇಕಾದದ್ದಿಲ್ಲ.
(‘ಬಾಳಿಗೊಂದು ನಂಬಿಕೆ’)
ವೇದವೆಂಬುದು ಅವಿಚ್ಛಿನ್ನವಾಗಿ ಬಂದಿರುವ ಋಷಿವಚನಪರಂಪರೆಯಾದರೆ ಸಂಪ್ರದಾಯವೆಂಬುದು ಅವಿಚ್ಛಿನ್ನವಾಗಿ ಬಂದಿರುವ ಋಷಿಕರ್ಮಪರಂಪರೆ.
(‘ವಿದ್ಯಾರಣ್ಯರ ಸಮಕಾಲೀನರು’, ಸಾಯಣಾಚಾರ್ಯರು)
ಚಿದಂಶದ ಸ್ವತಃಸ್ಫುರಣೆಯೇ ಋತ … ಋತದ ವಾಗ್ರೂಪ ಸತ್ಯ; ಸತ್ಯದ ಕ್ರಿಯಾರೂಪವೇ ಧರ್ಮ.
ಋತ ಅಂತರನುಭೂತಯಥಾರ್ಥ, ಸತ್ಯ ಬಹಿಃಸಾಧಿತಯಥಾರ್ಥ.
ಅದದು ಅದರದರ ಲೋಕೋಪಯೋಗ
ಯೋಗ್ಯತೆಯಲ್ಲಿ ಸಮೃದ್ಧವಾಗಿರಬೇಕು. ಈ ಬಗೆಯ ತತ್ತದಾತ್ಮಗುಣಪ್ರಾಚುರ್ಯವೇ ಧರ್ಮ.
(‘ಋತ, ಸತ್ಯ, ಧರ್ಮ’)
ಜೀವಕ್ಕೂ ಜಗತ್ತಿಗೂ ನಡುವೆ ಇರಬೇಕಾದ ಅನ್ಯೋನ್ಯಹಿತಸಂಬಂಧವೇ ಧರ್ಮ.
(‘ಜೀವನಧರ್ಮಯೋಗ’)
ಧರ್ಮಸಾಧನೆಯಲ್ಲಿ ದಯೆಗೊಂದು ಸ್ಥಾನವಿದ್ದರೆ ದಂಡಕ್ಕೂ ಒಂದು ಸ್ಥಾನವಿರುತ್ತದೆ. ಧರ್ಮವನ್ನು ಉಳಿಸಹೊರಟವನಿಗೆ ಮೊದಲು ಬೇಕಾದ ಗುಣ ಎದೆಗಾರಿಕೆ. ಅನ್ಯಾಯವನ್ನೂ ಅಧರ್ಮವನ್ನೂ ಕಂಡಾಗ ಎದುರಿಸಿ ಹೋರದೆ ಓಡಿಹೋಗುವೆನೆಂಬವನು ತೋರುವುದು ದಯೆಯನ್ನಲ್ಲ, ಅಧರ್ಮಪೆÇ್ರೀತ್ಸಾಹವನ್ನು.
(‘ಜೀವನಧರ್ಮಯೋಗ’)
ಸಮನ್ವಯಕ್ಕೆ ಪೀಠಿಕೆಯಾದದ್ದು ವಿಷಯಾಂಶತಾರತಮ್ಯನಿರ್ಣಯ … ಅದರಲ್ಲಿ ಯಾವುದಕ್ಕೂ ಅನ್ಯಾಯವಿಲ್ಲ; ಯಾವುದಕ್ಕೂ ಅದರ ಯೋಗ್ಯತೆಯನ್ನು ಮೀರಿದ ಪ್ರಾಶಸ್ತ್ಯವಿಲ್ಲ.
(‘ಸಂಸ್ಕೃತಿ’)
ವಿಶ್ವಸೃಷ್ಟಿಗೆ ಆದಿಕಾಲವೆಂಬುದೊಂದು ಇತ್ತೆಂದು ಇಟ್ಟುಕೊಳ್ಳುವುದಾದರೆ, ಆ ಆದಿದಿವಸದಿಂದಲೇ, ಆ ಪ್ರಾರಂಭದ ಘಳಿಗೆಯಿಂದಲೇ ಪ್ರಕೃತಿಯು ಮನುಷ್ಯಹೃದಯದಲ್ಲಿ ಹಕಾರಬೀಜವನ್ನು ಹುದುಗಿಸಿ ಬೆಳಸಿಕೊಂಡು ಬಂದಿರುವಂತೆ ತೋರುತ್ತದೆ. ಆಶ್ಚರ್ಯವಾದರೆ ಅವನು “ಆಹಾ!” “ಓಹೋ!” ಎಂದು ಅರಚುತ್ತಾನೆ; ಭಯವಾದರೆ “ಹಾಹಾ”ಕಾರ ಮಾಡುತ್ತಾನೆ; ಕೋಪ ಬಂದರೆ “ಹುಂ”ಕರಿಸುತ್ತಾನೆ; ಆಶೆಯಾದರೆ “ಹಾ!” ಎಂದು ಬಾಯಿ ಬಿಡುತ್ತಾನೆ; ನೋವಾದರೆ “ಹೋ!” ಎಂದು ಅಳುತ್ತಾನೆ. ಪ್ರೀತಿಯಾದರೆ “ಹಹ್ಹಹಾ!” ಎಂದು ಲಲ್ಲೆ ಹಾಕುತ್ತಾನೆ; ಸಂತೋಷವಾದರೆ “ಹೀ! ಹೀ!” ಎಂದು ನಗುತ್ತಾನೆ; ಹೀನಾಯ ಮಾಡಬೇಕೆಂದರೆ “ಹೇ ಹೇ!” ಎನ್ನುತ್ತಾನೆ. ಹೀಗೆ ಅವನ ಮನಸ್ಸಿನಲ್ಲಿ ಯಾವ ಹೆಚ್ಚುಕಡಮೆಗಳು ನಡೆದರೂ ಅವನ ಬಾಯಿಂದ ಹೊರಡುತ್ತವೆ ಹಕಾರವಿಕಾರಗಳು. ಇದು ಕನ್ನಡದಲ್ಲಿ ಮಾತ್ರವೇ ಅಲ್ಲ; ಸಂಸ್ಕೃತದಲ್ಲಿಯೂ ಹಾಗೆಯೇ; ಇಂಗ್ಲಿಷಿನಲ್ಲಿ ಕೂಡ ಹಾಗೆಯೇ. ಈ “ಹ”ಆವಳಿಗಳೇ (ಹಾವಳಿ) ನಮ್ಮ ಶೃಂಗಾರ-ವೀರಾದಿ ಅಷ್ಟರಸಗಳು, ಆದಿರಸವಾದ ಶಾಂತ ಕೂಡ ಅದೇಯಂತೆ:
“ಏತತ್ಸಾಮಗಾಯನ್ನಾಸ್ತೇ
“ಹಾ (3) ವು ಹಾ (3) ವು ಹಾ (3) ವು”
(‘ಉಮರನ ಒಸಗೆ’)
ಪ್ರೀತಿ-ರಸಿಕತೆ-ಕಾವ್ಯ:
ಪ್ರಣಯವು ಪ್ರಾರಂಭದಲ್ಲಿ ದ್ವೈತ, ಸರಸಸಲ್ಲಾಪಗಳಲ್ಲಿ ವಿಶಿಷ್ಟಾದ್ವೈತ; ಪ್ರಣಯಶಿಖರದಲ್ಲಿ ದ್ವೈತತಾವಿಸ್ಮೃತಿ, ಅಭೇದವೃತ್ತಿ, ಅದ್ವೈತ.
(‘ಜೀವನಧರ್ಮಯೋಗ’)
ಪ್ರೇಮ-ವಾತ್ಸಲ್ಯರಸಗಳು ಧರ್ಮಪ್ರಣಾಲಿಯಲ್ಲಿ ಹರಿದಾಗ ವ್ಯಾಮೋಹಪಂಕಗಳಾಗದೆ ಪಾವನತೀರ್ಥಗಳಾದಾವು.
(‘ಗೀತಶಾಕುಂತಲ’)
ಶ್ರೀರಾಮನಿಗೆ ಶೃಂಗಾರಪರೀಕ್ಷೆಯು ವಿಯೋಗರೂಪದಲ್ಲಿ ಬಂದರೆ ಶ್ರೀಕೃಷ್ಣನಿಗದು ಅತಿಯೋಗರೂಪದಲ್ಲಿ ಬಂದಿತು.
(‘ಶ್ರೀಕೃಷ್ಣಪರೀಕ್ಷಣಂ’)
ರಸಿಕತೆ ಎಂದರೆ ಜೀವನದ ಎಲ್ಲ ರಂಗಗಳಲ್ಲಿಯೂ ಸೊಗಸನ್ನು ಹುಡುಕುವ ಪ್ರವೃತ್ತಿ, ಮತ್ತು ಇರುವ ಸೊಗಸನ್ನು ಕಂಡು ಸವಿಯುವ ಶಕ್ತಿ.
(‘ಜ್ಞಾಪಕಚಿತ್ರಶಾಲೆ’, ಸಾಹಿತಿ-ಸಜ್ಜನ-ಸಾರ್ವಜನಿಕರು)
ಕಾವ್ಯದ ನೀತಿಪ್ರಭಾವವು ಪ್ರತ್ಯಕ್ಷ ಬೋಧನೆಯಿಂದಲ್ಲ, ಅಪ್ರತ್ಯಕ್ಷ ಹೃದಯಪರಿವರ್ತನೆಯಿಂದ.
ಕಾವ್ಯಕ್ಕೆ ಬೇಕಾದದ್ದು ಬಹಿರಂಗಪ್ರಮಾಣವಲ್ಲ, ಅಂತರಂಗಪ್ರಮಾಣ.
ಅಂತಃಕರಣದ ಸ್ವತಃಪ್ರವರ್ತಿತಸದ್ಭಾವಪ್ರವಾಹವೇ ಮಹಾಕಾವ್ಯದ ಪರಮೋಪಕಾರ.
ಮಹಾಕಾವ್ಯದ ಬಳಿ ಹೋಗುವವರು ತಾಯ ಬಳಿ ಹೋಗುವ ಎಳೆಮಕ್ಕಳಂತೆ ಮನಸ್ಸು ಮಾಡಿಕೊಂಡು ಹೋಗಬೇಕು. ಅಂಥ ಅಕೃತ್ರಿಮ, ಅಂಥ ಸರಳತೆ, ಅಂಥ ಅವಿಶಂಕೆ, ಅಂಥ ಅವಿತರ್ಕ, ಅಂಥ ಸಿದ್ಧವಿಶ್ವಾಸ – ಇವು ಇಲ್ಲದವರಿಗೆ ಕಾವ್ಯಮಾತೆ ಒಲಿಯಳು.
ಕಾವ್ಯಲಕ್ಷಣಗಳು ವೇದದಲ್ಲಿ ಯಥೇಷ್ಟವಾಗಿವೆ … ಆದರೂ ವೇದವು ಕಾವ್ಯವಾಗದು. ಏಕೆಂದರೆ ಕಾವ್ಯದಲ್ಲಿ ಕೇಂದ್ರಸ್ಥಾನ ಮನುಷ್ಯನದು, ವೇದದಲ್ಲಿ ಕೇಂದ್ರಸ್ಥಾನ ದೇವತೆಯದು.
(‘ಶ್ರೀಮದ್ವಾಲ್ಮೀಕಿರಾಮಾಯಣಂ’, ಬಾಲಕಾಂಡ: ಮುನ್ನುಡಿ)
ಉತ್ತಮಕಾವ್ಯವು ಮೂರು ಬಗೆಯ ದ್ರವ್ಯಗಳ ಸಮ್ಮೇಳನ: ಒಂದು ಶ್ರವಣಮೋಹಕದ್ರವ್ಯ; ಇನ್ನೊಂದು ಮನೋವೇಧಕದ್ರವ್ಯ; ಮತ್ತೊಂದು ಬುದ್ಧಿಚೋದಕದ್ರವ್ಯ.
(‘ಸಾಹಿತ್ಯಶಕ್ತಿ’)
ಬಹುತೆರದ ಸೌಂದರ್ಯಾನುಭವಗಳಲ್ಲಿ ಒಂದು ಬಗೆಯ ಸ್ಪರ್ಧೆ, ಅಥವಾ ಎರಡು ವಿಷಮಗುಣಗಳ ಸಂಘರ್ಷಣೆ ನಡೆಯುತ್ತಿರುತ್ತದೆ: ನಮಗೆ ಪರಿಚಿತವಾಗಿರುವುದಕ್ಕೂ ನವೀನವಾದುದಕ್ಕೂ ಸ್ಪರ್ಧೆ, ಸಾಮಾನ್ಯವಾದುದಕ್ಕೂ ಅಪರೂಪವಾದುದಕ್ಕೂ ಸ್ಪರ್ಧೆ. ಈ ಹೋರಾಟವಿರುವುದರಿಂದಲೇ ಅದನ್ನು ನೋಡುವುದರಲ್ಲಿ ನಮಗೆ ಕುತೂಹಲ.
(‘ಜೀವನಸೌಂದರ್ಯ ಮತ್ತು ಸಾಹಿತ್ಯ’)
ಒಳ್ಳೆಯ ಕಾವ್ಯವು ಮತತತ್ತ್ವಗ್ರಂಥವಾಗಿರಬೇಕೆಂಬ ನಿಯಮ ಕಾವ್ಯಶಾಸ್ತ್ರದಲ್ಲಿಯೂ ಇಲ್ಲ, ಧರ್ಮಶಾಸ್ತ್ರದಲ್ಲಿಯೂ ಇಲ್ಲ.
(‘ಉಮರನ ಒಸಗೆ’)
ರಾಜ್ಯಶಾಸ್ತ್ರ-ವೃತ್ತಪತ್ರಿಕೆ:
ನ್ಯಾಯವೆಂಬುದು ಅನೇಕಸ್ವಾರ್ಥಗಳ ಪರಸ್ಪರಸಮಾಧಾನ, ಪರಸ್ಪರಸಂಯೋಜನೆಗಳ ಮರ್ಯಾದೆ … ಶಾಸನಸಮ್ಮತವಾದ ಸ್ವಾರ್ಥವೇ ನ್ಯಾಯ.
(‘ರಾಜ್ಯಶಾಸ್ತ್ರ’)
ನಿರ್ಬಂಧದ ಒಳ್ಳೆಯತನದ ಅಭ್ಯಾಸ ನಮಗೆ ಹೆಚ್ಚಿದಷ್ಟೂ ನೈಜದ ಒಳ್ಳೆಯತನದ ಅಭ್ಯಾಸ ಮರೆತುಹೋಗುತ್ತದೆ.
(‘ರಾಜ್ಯಶಾಸ್ತ್ರ’)
ಸಾಮಾನ್ಯಜನದ ನೆಮ್ಮದಿಗೆ ಬೇಕಾದದ್ದು ಸಾಮಾನ್ಯ ಆಡಳಿತದ ದಕ್ಷತೆ. ನೂತನಸಮಾರಂಭಗಳ ಆಡಂಬರದಲ್ಲಿ ಸಾಮಾನ್ಯ ‘ರೊಟೀನ್’ ಭಾಗ ಅಲಕ್ಷ್ಯಕ್ಕೆ ಬೀಳಬಾರದು.
(‘ರಾಜ್ಯಶಾಸ್ತ್ರ’)
ಪ್ರಜೆಯ ನೈಜಶಕ್ತಿಯ ಸ್ವಾಭಾವಿಕವಿಕಾಸಕ್ಕೆ ದೊರೆಯುವ ಅವಕಾಶವೇ ನಿಜವಾದ ಸ್ವಾತಂತ್ರ್ಯ. ಪ್ರಜಾಜನದ ನೈಜಶಕ್ತಿಗಳ ಸ್ವತೋವಿಕಾಸಕ್ಕೆ, ಅವರ ಅನಿರ್ಬಂಧದ ಸ್ವಪ್ರಯತ್ನಾಭಿವೃದ್ಧಿಗೆ, ಸರಕಾರವು ಬಿಟ್ಟುಕೊಡುವ ಅವಕಾಶಸೌಲಭ್ಯವೇ ನಿಜವಾದ ಪ್ರಜಾಸ್ವಾತಂತ್ರ್ಯ.
(‘ಜ್ಞಾಪಕಚಿತ್ರಶಾಲೆ’, ಮೈಸೂರಿನ ದಿವಾನರುಗಳು)
ಪತ್ರಿಕಾಲೇಖಕರು ಮುಖ್ಯವಾಗಿ ಬೋಧಿಸಬೇಕಾದದ್ದು ಸಿದ್ಧಾಂತವನ್ನಲ್ಲ, ಸಿದ್ಧಾಂತ ಮಾಡುವ ಕ್ರಮವನ್ನ.
(‘ವೃತ್ತಪತ್ರಿಕೆ’)
ಪದ್ಯಶೈಲಿಗೆ ಉದಾಹರಣೆಗಳು
ಈ ಲೇಖನದಲ್ಲಿ ಮೊದಲೇ ನಿವೇದಿಸಿದಂತೆ ಡಿ.ವಿ.ಜಿ.ಯವರು ಬಗೆಬಗೆಯ ಛಂದೋಬಂಧಗಳಲ್ಲಿ ಬರೆದಿದ್ದಾರೆ: ಅವುಗಳಲ್ಲಿ ಒಂದು ಸಾಲಿಗೆ ನಾಲ್ಕಕ್ಷರದ ಪ್ರಮಾಣವುಳ್ಳ “ದೇವರಮ್ಯ”ದಂಥ ಚಿಕ್ಕ ಛಂದಸ್ಸಿನಿಂದ ಮೊದಲ್ಗೊಂಡು ಇಪ್ಪತ್ತೆರಡು ಅಕ್ಷರಗಳಷ್ಟು ನಿಡಿದಾದ “ಮಹಾಸ್ರಗ್ಧರೆ”ಯವರೆಗೆ ಸಾಹಿತ್ಯದ ಸ್ವೈರವಿಹಾರವು ಸಾಗಿದೆ. ಅವುಗಳಲ್ಲೆಲ್ಲ ಎದ್ದುತೋರುವ ಗುಣ ಓಜಸ್ಸು; ಅದು ಶಬ್ದಗತವಾದದ್ದೂ ಹೌದು, ಅರ್ಥಗತವಾದದ್ದೂ ಹೌದು. ಪದ್ಯರಚನೆಯಲ್ಲಿ ಗುಂಡಪ್ಪನವರ ಗಮನವು ಪದಮೈತ್ರಿ, ಪ್ರಾಸಸುಭಗತೆ, ಬಂಧಗುಣ, ಭಣಿತಿವಕ್ರತೆ, ಛಂದೋಘೋಷ, ನಾದಮಾಧುರ್ಯ ಮುಂತಾದ ಸೂಕ್ಷ್ಮವಿಷಯಗಳನ್ನು ಕುರಿತಾಗಿ ಇದ್ದದ್ದು ನೂರಾರು ಉದಾಹರಣೆಗಳ ಮೂಲಕ ಸ್ಪಷ್ಟವಾಗುತ್ತದೆ. ನವೋದಯದ ಅಗ್ರಮಾನ್ಯಲೇಖಕರ ಪೈಕಿ ಇವರಷ್ಟು ಸಮೃದ್ಧಸಂಖ್ಯೆಯ ಕಂದವನ್ನಾಗಲಿ, ಚೌಪದಿಯನ್ನಾಗಲಿ ಬರೆದವರೇ ಇಲ್ಲವೆನ್ನಬಹುದು. ಅವರು ಚೌಪದಿಯ ಪದ್ಯಶಿಲ್ಪದಲ್ಲಿ ಅಸಂಖ್ಯವೈವಿಧ್ಯಗಳನ್ನು ತೋರಿದ್ದಾರೆ.
ಈ ನಿಟ್ಟಿನಲ್ಲಿ ಮಂಕುತಿಮ್ಮನ ಕಗ್ಗದ ನಾಲ್ಕನೆಯ ಸಾಲುಗಳ ವೈಶಿಷ್ಟ್ಯ ಮನನೀಯ. ಎಷ್ಟೋ ಬಾರಿ ಅವು ಅರ್ಥಾಂತರನ್ಯಾಸದ ಸೊಗಸಿನಿಂದ ಕೂಡಿರುತ್ತವೆ; ಜೀವನಸಾಗರದ ಆಳದಲ್ಲಿರುವ ರತ್ನಗಳನ್ನು ನಮ್ಮ ಕೈಗಳಿಗೆ ಎಟುಕಿಸುತ್ತವೆ. ಅವುಗಳಲ್ಲಿ ಮತ್ತೊಂದು ಸ್ವಾರಸ್ಯವಿದೆ: ಮೊದಲ ಮೂರು ಸಾಲುಗಳು ಒಂದು ಬಗೆಯಲ್ಲಿ ಸಾಗುತ್ತಿದ್ದರೆ, ನಾಲ್ಕನೆಯದು ನೂತನ ತಿರುವೊಂದನ್ನು ಪಡೆದು ಆ ಮೂಲಕ ಇನ್ನಷ್ಟು ಆಕರ್ಷಕವಾಗುತ್ತದೆ. ಇದರಿಂದ ಪದ್ಯದ ಚೌಕಟ್ಟಿನಲ್ಲಿ ಪರಿಚಿತ ಮತ್ತು ಅಪರಿಚಿತ ಅಂಶಗಳ ಮಿಶ್ರಣ ಸಾಧಿತವಾಗಿ ವಾಚಕರಿಗೆ ಅನನ್ಯಾನುಭೂತಿ ದೊರೆಯುತ್ತದೆ.
ಖಂಡಭೋಗಷಟ್ಪದಿ:
ಮನಕೆ ತೋರ್ಪ ಸೊಬಗನೆಲ್ಲ
ತನಗೆ ತುಷ್ಟಿಯಪ್ಪ ತೆರದಿ
ಜನಕೆ ನುಡಿಯಲರಿತ ಸುಕವಿ
ತಿಲಕನಾತನು
ಅನುವಿನಿಂದ ಬರೆವ ಕಲೆಯ
ಕಲಿತನಾತನು ||
(‘ನಿವೇದನ’)
ಸೀಸಪದ್ಯ:
ಜೀವಿಯಂ ಪ್ರಾಕ್ತನಾದ್ಯತನಕರಯುಗಲಸಂ-
ಪುಟದಿ ಸಿಲುಕಿಸಿ ಮೃದಿಸುತಿಹುದು ದೈವಂ |
ಪೂರ್ವಜನ್ಮದ ವಾಸನಾಭಿರುಚಿ-ಋಣಮತ್ತ,
ಸದ್ಯದ ನಿಸರ್ಗಸುಂದರಗಳಿತ್ತ ||
ಹಸಿವತ್ತಲುಣಿಸಿತ್ತಲೊಂದನೊಂದೆಳೆಯುತ್ತ
ಕೆಣಕಿಸುತ ಕೆರಳಿಸುತ ದಿಕ್ಕುಗೆಡಿಸಿ |
ಪರಿಶೋಧವಾಗಿಪುದು ಪರಿಪಾಕವಾಗಿಪುದು
ಗುರುವದುವೆ ಬಿಡಿಸಲಿಕ್ಕಟ್ಟಿನಿಂದೆ ||
ಸೌಂದರ್ಯದನುಭೂತಿ ಜೀವಿಗೊಂದುಚಿತಶಿಕ್ಷೆ
ಗೃಹ್ಯತಾಪತಿತಿಕ್ಷೆ, ಆತ್ಮಸಂಯಮಪರೀಕ್ಷೆ |
ಪ್ರಣಯರಾಗೋದ್ವೀಕ್ಷೆ, ವಿಶ್ವಸಾಂತತ್ಯರಕ್ಷೆ
ವಿಧಿದತ್ತಮಧುಭಿಕ್ಷೆ, ವಿಶ್ವಪತಿಹಸಿತವೀಕ್ಷೆ ||
(‘ಶೃಂಗಾರಮಂಗಳಂ’)
ಕಂದಪದ್ಯ:
ಧೂರ್ಜಟಿಕಿರೀಟದಿಂದಾ
ಸ್ಫೂರ್ಜದ್ಗಂಗಾವರೋಹಮಾದ ಕ್ರಮಮಂ|
ಗರ್ಜಿತದಿಂ ಗಹನತೆಯಿಂ-
ದೂರ್ಜಸ್ವತಿ ತೋರುತೀ ಶರಾವತಿಯಿಳಿವಳ್ ||
(‘ನಿವೇದನ’, ಜೋಗದ ಜಲಪಾತ)
ಚೌಪದಿ:
ನೂತ್ನತೆಯ ಪೂರ್ಣತೆಯನನ್ಯೂನತೆಯಗಳಿಪ
ಯತ್ನಮೇ ಪೌರುಷಪ್ರಗತಿ; ಅದೆ ಪ್ರಕೃತಿ|
ವಿಜ್ಞಾನ-ಶಾಸ್ತ್ರ-ಕಲೆ-ಕಾವ್ಯ-ವಿದ್ಯೆಗಳೆಲ್ಲ
ಧನ್ಯತೆಯ ಬೆದಕಾಟ – ಮಂಕುತಿಮ್ಮ ||
ಅಸಮದಲಿ ಸಮತೆಯನು ವಿಷಮದಲಿ
ಮೈತ್ರಿಯನು
ಅಸಮಂಜಸದಿ ಸಮನ್ವಯಸೂತ್ರನಯವ |
ವ್ಯಸನಮಯಸಂಸಾರದಲಿ ವಿನೋದವ ಕಾಣ್ಬ
ರಸಿಕತೆಯೆ ಯೋಗವೆಲೊ – ಮಂಕುತಿಮ್ಮ ||
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ |
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ
ಬಿಡಿಗಾಸು ಹೂವಳಗೆ – ಮಂಕುತಿಮ್ಮ ||
ದೃಶ್ಯವೆಲ್ಲವು ನಶ್ಯವಾದೊಡೇಂ? ದೃಷ್ಟಿಗದು
ವಶ್ಯವಿರುವನಕದನು ದೃಷ್ಟಿಪುದೆ ಕಾರ್ಯಂ |
ವಿಶ್ವಾನುಭವವೆ ವಿಶ್ವಾತ್ಮಾನುಭವಕೆ ಪಥ
ನಶ್ಯದಿಂದವಿನಶ್ಯ – ಮಂಕುತಿಮ್ಮ ||
(‘ಮಂಕುತಿಮ್ಮನ ಕಗ್ಗ’)
ಶಾರ್ದೂಲವಿಕ್ರೀಡಿತ:
ವೇಣುಸ್ವಾನಮೊ ಪಾಂಚಜನ್ಯರವಮೋ ಗೀತೋಕ್ತಗಾಂಭೀರ್ಯಮೋ
ಮೌನಿಸ್ನೇಹಮೊ ಗೋಪಿಕಾಪ್ರಣಯಮೋ ಕೌಂತೇಯವಾತ್ಸಲ್ಯಮೋ |
ಸೇನಾನಿತ್ವಮೊ ರಾಜ್ಯತಂತ್ರನಯಮೋ ಚಕ್ರಾಸ್ತ್ರಸಂಧಾನಮೋ
ನಾನಾಜೀವನಧರ್ಮರಂಗಗಳೊಳಾದರ್ಶಂ ಯಶೋದಾಸುತಂ ||
(‘ಶ್ರೀಕೃಷ್ಣಪರೀಕ್ಷಣಂ’)
ಸೌಂದರ್ಯಂ ಪರವಸ್ತುಸಾಗರಚಿದಾನಂದೋ ರ್ಮಿಮಾಲಾಪೃಷ-
ದ್ಬಿಂದೂತ್ಸೇಕಮಕಾಂಡಪುಣ್ಯಪವನಾವಾತಂನರಂಗುರ್ವಿಯೊಳ್ |
ಅಂಧೀಕಾರಕಮಾಪೃಷನ್ಮಯಪಟಂ ಭೋಗಾಶಯಂಗಾದೊಡಂ
ಸಂಧ್ಯಾತಾತ್ಮವಿಚಾರಿಗಾರಸಭರಂ ತಾಂ ಬ್ರಹ್ಮಸಂಜ್ಞಾಪಕಂ ||
(‘ಶ್ರೀಚೆನ್ನಕೇಶವ ಅಂತಃಪುರಗೀತ’)
ಚಂಪಕಮಾಲೆ:
ಭುವನಕುಲಾಲನೀ ಗಿರಿಯ ನಾಭಿಯನಾಗಿಸಿ ತನ್ನ ಚಕ್ರಮಂ
ಜವದಿ ಪರಿಭ್ರಮಂಗೊಳಿಸೆ ಪುಟ್ಟಿದ ವರ್ತುಲಜಾಲಮೇನೆನಿ-
ಪ್ಪವೊಲೆಸೆಯಿತ್ತುಮಿರ್ಪುದಿದರೆಣ್ದೆಸೆಯೊಳ್ ವನಶೋಭಿಪರ್ವತ-
ಪ್ರವಲಯಪಂಕ್ತಿಯಚ್ಚರಿಯ ಬೀರುತೆ ಲೋಚನಮೋಡುವನ್ನೆಗಂ ||
(‘ನಿವೇದನ’, ಕೊಡಗಿನ ಬೆಡಗು)
ಉತ್ಪಲಮಾಲೆ:
ಭಾರತಮೆಂಬುದೇಂಬರಿಯಮೃತ್ಸ್ನೆಯೆ? ಭೌತಮೆ? ಭಾವಸೃಷ್ಟಿಯೇನ್?
ಆರಯಲೊಂದು ತೇಜಮದು; ಪೂಜ್ಯಹಿಮಾಚಲರಾಮಸೇತುವಿ-
ಸ್ತಾರನಿಕೇತವಾಸಿಜನತಾವಯವೋಲ್ಲಸದಾತ್ಮತತ್ತ್ವ ಮಾ
ಕಾರಣದಿಂದಲೀ ನೆಲದ ಧೂಳಿಯುಮೆಮ್ಮ ಶಿರಕ್ಕೆ ಸೇಸೆಯಯ್ ||
(‘ಸ್ವತಂತ್ರಭಾರತಾಭಿನಂದನಸ್ತವ’)
ಸ್ರಗ್ಧರೆ:
ಸಾಂದ್ರಾಮೋದಪ್ರಭಾಕರ್ಷಣಗಳಿನೆಳೆದಿಟ್ಟಿಂದ್ರಿಯಗ್ರಾಮಮಂತ-
ತ್ಕೇಂದ್ರಾಧಿಷ್ಠಾನದೊಳ್ಜೀವವ ಸುಖರಸತಲ್ಲೀನಮಂ ಗೆಯ್ದು ವಾಂಛಾ-
ಬಂಧಂ ವಾಂಛಾಕರಂ ವಾಂಛಕನಿವುಕರಗಲ್ಮೂರನೈಕ್ಯಂಗೊಳಿಪ್ಪಾ
ಸೌಂದರ್ಯಾದ್ವೈತಯೋಗಂ ಜಯಿಸುಗೆ ಜಗದೊಳ್ಕೇಶವಾಮ್ನಾಯರಾಗಂ||
(‘ಶ್ರೀಚೆನ್ನಕೇಶವ ಅಂತಃಪುರಗೀತ’)
ಗೀತರಚನೆಯ ಪಾಟವ
ನವೋದಯದ ಕವಿಗಳ ಪೈಕಿ ಡಿ.ವಿ.ಜಿ.ಯವರಂತೆ ಲಕ್ಷಣಶುದ್ಧವಾದ ಗೀತಗಳನ್ನು ರಚಿಸಿದವರು ಹಲವರಿಲ್ಲ. ಅವರ ಗೀತಗಳಲ್ಲಿ ರಾಗ-ತಾಳಗಳ ಸುಂದರಾನ್ವಯಕ್ಕೆ ವಿಪುಲಾವಕಾಶವಿದೆ. ಜೊತೆಗೆ ಆದಿಪ್ರಾಸ, ಅನುಪ್ರಾಸ ಮತ್ತು ಅಂತ್ಯಪ್ರಾಸಗಳ ಅಂದವೂ ಸಮೃದ್ಧವಾಗಿದೆ. ಇಷ್ಟೇ ಅಲ್ಲದೆ ಅವರು ವಡಿ, ವರಣ, ಅತೀತ, ಅನಾಗತ, ಪದಗರ್ಭ, ಗಣಪರಿವೃತ್ತಿ ಮುಂತಾದ ಗೇಯಶಿಲ್ಪದ ತಾಂತ್ರಿಕಸೂಕ್ಷ್ಮತೆಗಳನ್ನು ಸೊಗಸಾಗಿ ಬಳಸಿಕೊಂಡಿದ್ದಾರೆ. ಮುಖ್ಯವಾಗಿ ಪಲ್ಲವಿ-ಅನುಪಲ್ಲವಿ-ಚರಣಗಳ ಸಾಂಪ್ರದಾಯಿಕ ಚೌಕಟ್ಟಿನೊಳಗೆ ಗತಿಭೇದಗಳ ಹಾಗೂ ಕಾಲಭೇದಗಳ ಲಯವಿಲಾಸಗಳನ್ನು ಸಾಧಿಸಿರುವುದು ಡಿ.ವಿ.ಜಿ.ಯವರ ಭಾಷೆ-ಬಂಧಗಳ ಸೌಂದರ್ಯಕ್ಕೆ ಒಳ್ಳೆಯ ನಿದರ್ಶನ.
‘ಶ್ರೀಚೆನ್ನಕೇಶವ ಅಂತಃಪುರಗೀತ’, ‘ಗೀತಶಾಕುಂತಲ’ ಮತ್ತು ‘ಶ್ರೀಕೃಷ್ಣಪರೀಕ್ಷಣಂ’ ಕೃತಿಗಳ ಹಾಡುಗಳು ಯಾವುದೇ ಭಾಷೆಗೆ ಭೂಷಣಗಳು. ಇದಕ್ಕೊಂದು ಮಾದರಿಯಾಗಿ ‘ಭಸ್ಮಮೋಹಿನಿ’ ಗೀತವನ್ನು ಗಮನಿಸಬಹುದು:
[ರಾಗಮಾಲಿಕೆ: ಮೋಹನ,ತೋಡಿ ಇತ್ಯಾದಿ] [ತಾಳ: ಆದಿ]
ಹಿಮ್ಮೇಳ:
ಆಹಾ!?ಮೋಹಾಭಿನಯದ ಸನ್ನಾಹಾ!
ಕೇಶವನುತ್ಸಾಹಾ ||ಪ||
ಮೋಹಿನಿವೇಷದೆ ಭಸ್ಮದಾನವನ
ದಾಹಿಸಿ ಧರ್ಮವ ಕಾಯ್ದ ಚರಿತೆಯಿದು ||ಅ.ಪ.||
ಪ್ರವೇಶಕ:
ಬಂದಳ್?ಸುರಸುಂದರಿಯಿದೊ ತಾಂ ಬಂದಳ್
ತ್ರಿಜಗನ್ಮೋಹಿನಿಯೈತಂದಳ್
ಆನಂದವ ಲೋಕಕೆ ತಂದಳ್ |
ಕಂಕಣಕಿಂಕಿಣಿರಣಿತಕೆ ಕುಣಿಯುತ
ಕಣ್ಕಿವಿಮನಗಳಿಗಮೃತವನೆರೆಯುತ ||1||
ಹಿಮ್ಮೇಳ:
ಬಂದನ್ ಭಸ್ಮಾಸುರನಿದೊ ತಾಂ ಬಂದನ್
ಬಂದಾ ಮೋಹಿನಿಯನು ಕಂಡನ್
ಕಂಡಾಕೆಯ ಬೆಡಗಿಗೆ ನಿಂದನ್ |
ನಿಂದು ನಿರುಕಿಸುತೆ ರೂಪವಿಲಾಸವ
ಸುಂದರಿಯೊಡನಾಡಿದನೀ ಚಾಟುವ ||2||
ಭಸ್ಮಾಸುರ:
ಬಾರೆ ಬಾ ನೀರೆ ಸಕಲಸುಖಸಾರೆ
ನೀನೆನ್ನಯ ಮನವನು ಸೂರೆ-
ಗೈದಿಹೆಯೆಲೆ ನೀಂ ದಯತೋರೆ |
ಆರೆ ತಕ್ಕವನು ನಾನಲ್ಲದೆ ಶೃಂ-
ಗಾರವಾರಿನಿಧಿ ನಿನ್ನೊಯ್ಯಾರಕೆ ||3||
ಮೋಹಿನಿ:
ವೀರಾ ನಿನಗೆನ್ನೊಡೆನೇನು ವಿಚಾರಾ
ಶೂರರ ನೀನರಸೆಲೊ ಶೂರಾ
ಹೋರಾಟವೆ ನಿನಗೆ ವಿಹಾರಾ |
ನೀರೆಯರೆಡೆ ನೀನೆನ ಸಾಧಿಸುವೆ
ಸಾರು ಶೂರರೆಡೆ ಸಾರೆಲೊ ದೂರಕೆ ||8||
ಭಸ್ಮಾಸುರ:
ರಾಣೀ ಕಲಿಸಾ ನೃತ್ಯವ ಬಿನ್ನಾಣೀ
ನೀಂ ಗುರುವಾಗೆಲೆ ಸುಶ್ರೋಣೀ
ನಾಂ ಶಿಷ್ಯನಹೆನೆಶುಕವಾಣೀ |
ಚಿತ್ತೇಶ್ವರಿ ನಿನ್ನೊಲುಮೆಯ ಗಳಿಸಲು
ನೃತ್ಯವನಾಡುವೆ ನೀನಾಡುವವೊಲು ||13||
ಹಿಮ್ಮೇಳ:
ಹೋ ಹೋ!?ಹೋ! ಭಸ್ಮನೀಗ ತಾಂ ಭಸ್ಮ
ಆ ಹರವರಕರಶಿಖಿಯೂಷ್ಮ-
ಕ್ಕಾಹುತಿ ತಾನಾ ವಿಕೃತಾತ್ಮ |
ಆಹಾ ಏನದ್ಭುತವೀ ನಾಟ್ಯ
ಮೋಹನಕೇಶವಹಿತಕಾಪಟ್ಯ ||22||
(‘ಶ್ರೀಚೆನ್ನಕೇಶವ ಅಂತಃಪುರಗೀತ’, ಭಸ್ಮಮೋಹಿನಿ)
ಉಪಸಂಹಾರ
ಡಿ.ವಿ.ಜಿ.ಯವರನ್ನು ಕನ್ನಡಸಾಹಿತ್ಯವನದ ಅಶ್ವತ್ಥವೆಂದೇ ಅನ್ವರ್ಥವಾಗಿ ವಿದ್ವಾಂಸರು ಗುರುತಿಸಿದ್ದಾರೆ. ಅಶ್ವತ್ಥವೃಕ್ಷದ ಕೊಂಬೆಗಳ ಹರಹೂ ಅದರ ಎಲೆಗಳ ಸಮೃದ್ಧಿಯೂ ತುಂಬ ಆಕರ್ಷಕ. ವಸಂತಕಾಲದಲ್ಲಿ ಕೆಂಪುಚಿಗುರುಗಳಿಂದ ಕಂಗೊಳಿಸುವ ಅರಳಿಮರವು ಏಕಕಾಲದಲ್ಲಿ ಉಲ್ಲಾಸ ಮತ್ತು ಪಾವಿತ್ರ್ಯಗಳ ಸಂಕೇತವಾಗಿ ತೋರುತ್ತದೆ. ಇದೇ ರೀತಿ ಡಿ.ವಿ.ಜಿ.ಯವರ ಭಾಷಾಪಾಕವು ಸುಂದರ ಹಾಗೂ ಸರ್ವತೋಮುಖ.
ಕನ್ನಡವು ಓಜಸ್ಸನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ, ಭಾಷಾಶುದ್ಧಿಗೆ ಗಮನವೀಯದ ಈ ಹೊತ್ತಿನಲ್ಲಿ ಗುಂಡಪ್ಪನವರಂಥ ಧೀಮಂತರ ಮಾರ್ಗದರ್ಶನವು ನಮಗೆ ತುಂಬ ಉಪಾದೇಯ. ನಮ್ಮ ತಾಯ್ನುಡಿ ಅದೆಂತು ಅನೇಕರೀತಿಯ ಕಾರ್ಯಭಾರಗಳನ್ನು ಅವಲೀಲೆಯಿಂದ ಸಾಗಿಸಬಲ್ಲದೆಂಬುದಕ್ಕೆ ನಿದರ್ಶನವಾದ ಈ ಮಹನೀಯರ ಬರೆಹಗಳು ಸಾಹಿತ್ಯಶರೀರಕ್ಕೆ ಹೊಸ ರಕ್ತವನ್ನು ತುಂಬಬಲ್ಲವು. ಈ ನಿಟ್ಟಿನಲ್ಲಿ ಸದ್ಯದ ಪ್ರಯತ್ನವು ದಿಕ್ಸೂಚಿಯಾದೀತು .