ಸೂರ್ಯೋಪಾಸನೆ ಇಂದು ನಿನ್ನೆಯ ಆಚರಣೆ ಅಲ್ಲ. ಅನಾದಿಕಾಲದಿಂದಲೂ ಇದು ಜನಜೀವನದಲ್ಲಿ ಹಾಸುಹೊಕ್ಕಾಗಿ, ಸಾಂಪ್ರದಾಯಿಕ ಆಚರಣೆಯಾಗಿ ಪ್ರಚಲಿತದಲ್ಲಿ ಇದೆ.
ವಿಶ್ವರೂಪಂ ಹರಿಣಂ ಜಾತವೇದಸಂ
ಪರಾಯಣಂ ಜ್ಯೋತಿರೇಕಂ ತಪಂತಮ್ |
ಸಹಸ್ರರಶ್ಮಿಃ ಶತಧಾ ವರ್ತಮಾನಃ
ಪ್ರಾಣಃ ಪ್ರಜಾನಾಮುದಯತ್ಯೇಷ ಸೂರ್ಯ ||
– ಪ್ರಶ್ನ-೮
ಪ್ರಶ್ನೋಪನಿಷತ್ತಿನಲ್ಲಿ ಕಂಡು ಬರುವ ಸೂರ್ಯನ
ಕುರಿತಾದ ವರ್ಣನೆ ಇದು. ಹಾಗೆಯೆ,
ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ |
ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋsಸ್ತುತೇ ||
ಸೂರ್ಯಾಷ್ಟಕದ ಈ ಸಾಲುಗಳು ಸೂರ್ಯನ ಕುರಿತಾದ ಪ್ರಾರ್ಥನೆ ಎಂದು ಪ್ರತ್ಯೇಕವಾಗಿ ಬೇರೆ ಹೇಳಬೇಕಾಗಿಲ್ಲ. ಸೂರ್ಯೋಪಾಸನೆಯು ಮೂಲತಃ ನಮ್ಮ ಸನಾತನ ಧರ್ಮದ ಅವಿಭಾಜ್ಯ ಅಂಗ. ಪ್ರಾಚೀನ ಕಾಲದಿಂದ ಹಿಡಿದು ಇಂದಿಗೂ ಕೂಡ ಸೂರ್ಯನನ್ನು ಪೂಜ್ಯಭಾವದಿಂದ, ಭಕ್ತಿಭಾವದಿಂದ ಆರಾಧಿಸಿಕೊಂಡು ಬರಲಾಗುತ್ತಿದೆ. ಆದ್ದರಿಂದಲೆ ಆತ ಕೇವಲ ಸೂರ್ಯನಲ್ಲ, ಸೂರ್ಯನಾರಾಯಣ. ಉದಯಕಾಲದಲ್ಲಿ ಬ್ರಹ್ಮಸ್ವರೂಪನಾಗಿ, ಮಧ್ಯಾಹ್ನದಲ್ಲಿ ಮಹೇಶ್ವರನಾಗಿ, ಅಸ್ತಮಾನದ ವೇಳೆ ಸ್ವಯಂ ವಿಷ್ಣುವಾಗಿರುವ ದಿವಾಕರನು ತ್ರಿಮೂರ್ತಿ ಸ್ವರೂಪನು.
ಪ್ರತಿವರ್ಷ ಮಾಘಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿ ಸೂರ್ಯನ ಆರಾಧನೆಗೆ ಎಂದು ಮೀಸಲಾದ ದಿನ. ಸೂರ್ಯಸಪ್ತಮಿ ಅಥವಾ ರಥಸಪ್ತಮಿ ಎಂದು ಕರೆಯಲ್ಪಡುವ ಈ ದಿನ ಶಿಶಿರಋತುವಿನಲ್ಲಿ ಬರುವ ಒಂದು ಪ್ರಮುಖವಾದ ಹಬ್ಬ ಅಥವಾ ಆಚರಣೆ. ಈ ದಿನ ಉದಯ ಮತ್ತು ಅಸ್ತಮಾನಗಳು ಎಂಬ ಚಾಚೂತಪ್ಪದ ನಿಯಮಕ್ಕೆ ಒಳಪಟ್ಟು ಶಿಸ್ತನ್ನು ಮೆರೆಯುವ ಸೂರ್ಯದೇವನ ಜನ್ಮದಿನ ಎಂಬ ನಂಬಿಕೆಯೂ ಇದೆ. ಅದಿತಿ-ಕಶ್ಯಪರ ಪುತ್ರನಾದ ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನು ಏರಿ ಉತ್ತರ ದಿಕ್ಕಿನ ಕಡೆಗೆ ಪ್ರಯಾಣ ಹೊರಟ ದಿನ ಇದು.
ಸುಗ್ಗಿಯು ಆರಂಭವಾಗುವ ಕಾಲದ ಈ ಹಬ್ಬವನ್ನು ಸೂರ್ಯಜಯಂತಿ, ಮಾಘಸಪ್ತಮಿ ಎಂಬ ಇತರೆ ಹೆಸರುಗಳಿಂದಲೂ ಕರೆಯುತ್ತಾರೆ. ಎಲ್ಲಾ ಸೂರ್ಯ ದೇವಾಲಯಗಳಲ್ಲಿ ಹಾಗೂ ವಿಶೇಷವಾಗಿ ದಕ್ಷಿಣಭಾರತದ ವೈಷ್ಣವ ದೇವಾಲಯಗಳಲ್ಲಿ ಅತ್ಯಂತ ಶ್ರದ್ಧಾಭಕ್ತಿಗಳಿಂದ ರಥಸಪ್ತಮಿಯನ್ನು ಆಚರಿಸಲಾಗುತ್ತದೆ.
ಈ ದಿನ ಎಕ್ಕದ ಎಲೆಗಳಿಗೆ ವಿಶೇಷ ಪ್ರಾಶಸ್ತ್ಯವಿದೆ ಮತ್ತು ಸ್ನಾನಕ್ರಮವೂ ತುಸು ವಿಶಿಷ್ಟವಾಗಿ ಇರುತ್ತದೆ. ಹಿಂದಿನಿಂದ ಬಂದ ಸಾಂಪ್ರದಾಯಿಕ ಕ್ರಮದಂತೆ ರಥಸಪ್ತಮಿಯ ದಿನದಂದು ತಲೆಯ ಮೇಲೆ ಒಂದು, ಎರಡು ಭುಜಗಳು, ಮೊಣಕಾಲುಗಳು, ಮತ್ತು ಪಾದಗಳ ಮೇಲೆ ತಲಾ ಒಂದೊಂದು (ಹೀಗೆ ಒಟ್ಟು ಏಳು) ಎಕ್ಕದ ಎಲೆಗಳನ್ನು ಇಟ್ಟು ಪವಿತ್ರಸ್ನಾನ ಮಾಡುವ ಪದ್ಧತಿ ರೂಢಿಯಲ್ಲಿ ಇದೆ. ಸ್ನಾನದ ಬಳಿಕ ಸೂರ್ಯದೇವನಿಗೆ ಅರ್ಘ್ಯಪ್ರದಾನ, ತದನಂತರ ಪೂಜೆ, ನೈವೇದ್ಯ ಸಮರ್ಪಣೆ. ಸೂರ್ಯೋದಯವಾದ ಬಳಿಕದ ಒಂದು ಗಂಟೆಯ ಒಳಗಿನ ಅವಧಿ ಪೂಜೆಗೆ ಅತ್ಯಂತ ಪ್ರಶಸ್ತ ಕಾಲ. ಹೀಗೆ ಶ್ರದ್ಧಾಭಕ್ತಿಗಳಿಂದ ಸೂರ್ಯಾರಾಧನೆ ಕೈಗೊಂಡರೆ ಜನ್ಮಾಂತರದ ಪಾಪಗಳು ನೀಗುತ್ತವೆ; ರೋಗ ನಿವಾರಣೆ ಆಗುತ್ತದೆ; ಸದೃಢ ಶರೀರ, ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂಬ ಬಲವಾದ ನಂಬಿಕೆಯೂ ಇದೆ. ಪೃಥ್ವಿಯ ಮೇಲಿನ ಸಕಲ ಜೀವರಾಶಿಗಳ ಜೀವಶಕ್ತಿ ಸೂರ್ಯ. ಶಾಖ, ಶಕ್ತಿ, ಆರೋಗ್ಯ ನೀಡುವ ಸೂರ್ಯಾರಾಧನೆಯ ಹಿಂದೆ ವೈಜ್ಞಾನಿಕ ಸತ್ಯವೂ ಅಡಗಿದೆ. ಇದು ಸತ್ಯ.
ರಥಸಪ್ತಮಿ ಅಲ್ಲದೆ ಮಕರ ಸಂಕ್ರಮಣ ದಿನದಂದೂ ಸೂರ್ಯನನ್ನು ಆರಾಧಿಸಲಾಗುತ್ತದೆ. ಛತ್ಪೂಜೆ, ಸಾಂಬದಶಮಿ ಎಂಬ ಇನ್ನೂ ಎರಡು ಸೂರ್ಯಾರಾಧನೆಗೆ ಮೀಸಲಾದ ಆಚರಣೆಗಳೂ ಇವೆ. ಛತ್ಪೂಜೆಯನ್ನು ಕಾರ್ತಿಕ ಶುಕ್ಲ ಷಷ್ಠಿಯಂದು ಆಚರಿಸಲಾಗುತ್ತದೆ. ಸತತ ನಾಲ್ಕು ದಿನಗಳ ಕಾಲ ನಡೆಯುವ ಈ ಆಚರಣೆಯು ಹಲವು ಧಾರ್ಮಿಕ ವಿಧಿಗಳನ್ನು ಒಳಗೊಂಡಿದೆ. ಪವಿತ್ರಸ್ನಾನ, ನೀರನ್ನೂ ಸೇವಿಸದೆ ಉಪವಾಸ ವ್ರತಾನುಷ್ಠಾನ, ದೀರ್ಘಕಾಲ ನೀರಿನಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುವುದು ಹಾಗೂ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯಗಳಲ್ಲಿ ಅರ್ಘ್ಯಪ್ರದಾನ ಮಾಡುವುದು ಛತ್ಪೂಜೆಯ ವಿಶೇಷ. ಈ ಆಚರಣೆಯು ಪ್ರಮುಖವಾಗಿ ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಉತ್ತರಪ್ರದೇಶ, ಛತ್ತೀಸ್ಗಢ, ಚಂಡೀಗಢ, ಗುಜರಾತ್, ದೆಹಲಿ, ಮುಂಬಯಿ ಮಾತ್ರವಲ್ಲದೆ ಮಾರಿಷಸ್, ಫಿಜಿ, ನೇಪಾಳದ ತೇರಾಯಿ ಪ್ರಾಂತ್ಯ ಮುಂತಾದ ಕಡೆಗಳಲ್ಲಿ ಕಂಡುಬರುತ್ತದೆ. ಸೂರ್ಯನ ಪುತ್ರನಾದ ಕರ್ಣ ಈ ಆಚರಣೆಯನ್ನು ಆರಂಭಿಸಿದ ಎಂದು ನಂಬಲಾಗುತ್ತದೆ.
ಒಡಿಶಾದಲ್ಲಿ
ಸಾಂಬ ದಶಮಿಯು ಒಡಿಶಾ ರಾಜ್ಯದಲ್ಲಿ ಕಂಡುಬರುವ ವಿಶಿಷ್ಟ ಬಗೆಯ ಸೂರ್ಯಾರಾಧನೆ ಆಗಿದೆ. ತಮ್ಮ ಮಕ್ಕಳ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ತಾಯಂದಿರು ಸೂರ್ಯದೇವನನ್ನು ಆರಾಧಿಸುವ ಹಬ್ಬ ಇದು. ಈ ದಿನ ಸೂರ್ಯೋದಯ ಹಾಗೂ ಮಧ್ಯಾಹ್ನದ ವೇಳೆ ಪ್ರತ್ಯೇಕವಾಗಿ ತಯಾರಿಸಿದ ಸ್ಥಳೀಯವಾದ ವಿಶೇಷ ಖಾದ್ಯಗಳನ್ನು ಸೂರ್ಯನಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ತಿನಿಸುಗಳನ್ನು ಕುಟುಂಬ ಸದಸ್ಯರ ಹೆಸರಿನಲ್ಲಿ ಸೂರ್ಯದೇವನಿಗೆ ಅರ್ಪಿಸುವುದು ಈ ಆಚರಣೆಯ ವೈಶಿಷ್ಟ್ಯ. ಜೊತೆಗೆ ಮಧ್ಯಾಹ್ನದ ವೇಳೆ ಕುಟುಂಬದ ಹಿರಿಯ ಮಹಿಳೆಯರು ಒಂದು ಪಾತ್ರೆಯಲ್ಲಿ ವೀಳ್ಯದೆಲೆ ಸಹಿತ ಅರಿಶಿನ ಮಿಶ್ರಿತ ನೀರು ತೆಗೆದುಕೊಂಡು, ಅದರಲ್ಲಿ ಸೂರ್ಯನ ಬಿಂಬವನ್ನು ನೋಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅನಂತರ ಸಾಂಬದಶಮಿಯ ವ್ರತಕಥೆಯ ವಾಚನ-ಶ್ರವಣ ನಡೆಯುತ್ತದೆ. ಸಂಜೆಯ ವೇಳೆ ಈ ಹಬ್ಬದ ಕೊನೆಯ ಧಾರ್ಮಿಕ ವಿಧಿಯಾಗಿ `ಮಹಾಕಾಲಪೂಜೆ’ ನಡೆಯುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಪುತ್ರನಾದ ಯಮನಿಗೆ ವಿಶೇಷ ತಿನಿಸು ಅರ್ಪಿಸಲಾಗುತ್ತದೆ. ಕುಷ್ಠರೋಗ ಪೀಡಿತನಾಗಿದ್ದ ಕೃಷ್ಣನ ಮಗ ಸಾಂಬ ಕೋಣಾರ್ಕದ ಬಳಿ ಹನ್ನೆರಡು ವರ್ಷಗಳ ಕಾಲ ಕಠಿಣ ವ್ರತಾನುಷ್ಠಾನ ಮಾಡಿದನೆಂದೂ, ಪ್ರಸನ್ನನಾದ ಸೂರ್ಯನು ಅವನನ್ನು ರೋಗಮುಕ್ತನನ್ನಾಗಿ ಮಾಡಿದನು ಎಂಬ ಕಥೆಯ ಹಿನ್ನೆಲೆ ಈ ಆಚರಣೆಗೆ ಇದೆ. ಪುಷ್ಯಮಾಸ ಶುಕ್ಲಪಕ್ಷ ದಶಮಿ ತಿಥಿಯಂದು ಸಾಂಬದಶಮಿಯನ್ನು ಆಚರಿಸಲಾಗುತ್ತದೆ.
ಅನಾದಿಕಾಲದಿಂದಲೂ ನಡೆಯುತ್ತಾ ಬಂದಿರುವ ಸೂರ್ಯ ಉಪಾಸನೆಯು ಎಂದು, ಯಾವ ಕಾಲಘಟ್ಟದಲ್ಲಿ ಪ್ರಾರಂಭವಾಯಿತು ಎಂದು ನಿಖರವಾಗಿ ಹೇಳುವುದು ತುಸು ಕಷ್ಟ. ಸಿಂಧೂಕಣಿವೆ ನಾಗರಿಕತೆಯ ಕಾಲದಲ್ಲಿ ಸ್ವಸ್ತಿಕಚಿಹ್ನೆ ಮತ್ತು ಚಕ್ರದ ಕೀಲುಗಳನ್ನು ಗಮನಿಸಿರುವ ಇತಿಹಾಸ ತಜ್ಞರು ಸೂರ್ಯಾರಾಧನೆಯ ಕುರಿತು ಮಹತ್ತ್ವದ ಸುಳಿವು ನೀಡಿದ್ದಾರೆ. ಅಷ್ಟೇ ಅಲ್ಲದೆ ಈಜಿಪ್ಟ್, ಗ್ರೀಸ್, ಇರಾನ್, ರೋಮ್, ಮಧ್ಯ ಆಫ್ರಿಕಾ ಮತ್ತು ಯೂರೋಪಿನ ಕೆಲವು ಕಡೆ ಸೂರ್ಯೋಪಾಸನೆ ಪ್ರಚಲಿತದಲ್ಲಿ ಇತ್ತು ಎಂಬುದನ್ನು ಇತಿಹಾಸ ಪಂಡಿತರು ಕಂಡುಕೊಂಡಿದ್ದಾರೆ.
ಭಾರತೀಯ ಜನಮಾನಸದಲ್ಲಿ `ಆದಿದೇವ’ ಎಂದೇ ಪ್ರತಿಷ್ಠಾಪಿಸಲ್ಪಟ್ಟಿರುವ ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಅಸ್ತಿತ್ವದಲ್ಲಿ ಇದೆ. ನಮ್ಮ ವೈದಿಕ ಧರ್ಮ ಮತ್ತು ಸಂಸ್ಕೃತಿ ಸೂರ್ಯನಿಗೆ ಅತ್ಯುನ್ನತ ಸ್ಥಾನ ನೀಡಿದೆ. ಸೂರ್ಯೋಪಾಸನೆಯೆ ಸೌರಪಂಥದ ಉಗಮಕ್ಕೆ ಕಾರಣ. ಕಾಲಗಣನೆಯಲ್ಲಿ ಚಾಂದ್ರಮಾನ, ಸೌರಮಾನಗಳೆಂಬ ಪದ್ಧತಿಗಳು ಇಂದಿಗೂ ಚಾಲ್ತಿಯಲ್ಲಿ ಇವೆ.
ವೇದ, ಉಪನಿಷತ್ತುಗಳಲ್ಲಿ, ನಂತರದ ಕಾವ್ಯ ಪುರಾಣಗಳಲ್ಲಿಯೂ ಸೂರ್ಯ ಮತ್ತು ಸೂರ್ಯೋಪಾಸನೆಯ ಬಗ್ಗೆ ಸಾಕಷ್ಟು ಮಾಹಿತಿಗಳು ದೊರೆಯುತ್ತವೆ.
ಸೂರ್ಯದೇವನ ಅನುಗ್ರಹದಿಂದ ಮಹರ್ಷಿ ಯಾಜ್ಞವಲ್ಕ್ಯರು ಬ್ರಹ್ಮವಿದ್ಯೆಯನ್ನು ಪಡೆದರು. ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತದಲ್ಲಿಯೂ ಸೂರ್ಯನ ಆರಾಧನೆಗೆ ಸಂಬಂಧಪಟ್ಟ ಮಾಹಿತಿಗಳು ದೊರೆಯುತ್ತವೆ. ಆದಿತ್ಯಹೃದಯದ ಮೂಲಕ ಸೂರ್ಯನ ಆರಾಧನೆಗೈದ ರಾಮ, ಸೂರ್ಯನಿಂದ ಅಪಾರಶಕ್ತಿಯನ್ನು ಪಡೆದು ರಾವಣನ ಮೇಲೆ ವಿಜಯ ಸಾಧಿಸುತ್ತಾನೆ. ಇದು ರಾಮಾಯಣದ ಉಲ್ಲೇಖ. ಇನ್ನು ಮಹಾಭಾರತದಲ್ಲಿ ಕರ್ಣನ ಹುಟ್ಟು ಸರ್ವವೇದ್ಯ. ದೂರ್ವಾಸ ಮುನಿಗಳು ಕುಂತಿಗೆ ಬೋಧಿಸಿದ ಐದು ಮಂತ್ರಗಳಲ್ಲಿ ಸೂರ್ಯಮಂತ್ರವೂ ಒಂದು. ಈ ಮಂತ್ರದ ವರಪ್ರಸಾದವಾಗಿ ಕುಂತಿ ಸೂರ್ಯದೇವನಿಂದ ಕರ್ಣನನ್ನು ಪಡೆದಳು. ಸ್ಕಂದ, ವರಾಹ, ಪದ್ಮಪುರಾಣಗಳಲ್ಲಿ ಸೂರ್ಯ ಮತ್ತು ಸೂರ್ಯೋಪಾಸನೆಯ ವಿಸ್ತೃತ ವಿವರಣೆ ಇದೆ.
ಇನ್ನು ಚರಿತ್ರೆಯ ಪುಟಗಳನ್ನು ತಿರುವಿಹಾಕಿದರೆ, ನಮ್ಮ ಅನೇಕ ರಾಜ-ಮಹಾರಾಜರುಗಳು ಸೂರ್ಯನ ಭಕ್ತರಾಗಿದ್ದರು ಎಂದು ತಿಳಿದು ಬರುತ್ತದೆ. ವಿಜಯನಗರ, ಕುಶಾನ, ಗುಪ್ತ ಹಾಗೂ ಚಾಲುಕ್ಯ ವಂಶಗಳು ಸೂರ್ಯನ ಆರಾಧಕರಾಗಿದ್ದರು. ಹರ್ಷ ಮಹಾರಾಜನ ಕುಲದೇವ ಸೂರ್ಯನಾಗಿದ್ದ. ಅಶೋಕ ಚಕ್ರವರ್ತಿ ಸಹ ಸೂರ್ಯನ ಭಕ್ತನಾಗಿದ್ದ. ಪಾಂಚಾಲರ ನಾಣ್ಯದಲ್ಲಿ ಸೂರ್ಯನ ಆಕೃತಿ ಕಂಡು ಬಂದಿದೆ. ದೀನ್-ಇ-ಇಲಾಹಿ ಸ್ಥಾಪಕ ಅಕ್ಬರನೂ ಸಹ ಫತೇಪುರ ಸಿಕ್ರಿಯಲ್ಲಿ ಪ್ರತಿದಿನ ಮುಂಜಾನೆ ಸೂರ್ಯನಮಸ್ಕಾರ ಮಾಡುತ್ತಿದ್ದ ಎಂಬ ಅಂಶ ಗಮನಾರ್ಹ. ರಾಜ ಪೋರಸನು ರಣರಂಗದಲ್ಲಿ ಅಲೆಗ್ಸಾಂಡರನಿಗೆ ಮುಖಾಮುಖಿಯಾಗುವ ಮುನ್ನ ಸೂರ್ಯದೇವನನ್ನು ಪ್ರಾರ್ಥಿಸಿದ್ದ ಎಂಬುದಾಗಿ ತಿಳಿದುಬರುತ್ತದೆ. ಹೀಗೆ ಸೂರ್ಯೋಪಾಸನೆಗೆ ಸಂಬಂಧಿಸಿದ ಹಲವು ಉದಾಹರಣೆಗಳು ಚರಿತ್ರೆಯ ಪುಟಗಳಲ್ಲೂ ಯಥೇಚ್ಛವಾಗಿ ಕಂಡುಬರುತ್ತವೆ.
ಅರಳಿಎಲೆ ಆಕಾರದಲ್ಲಿ ಇರುವ ನಮ್ಮ ದೇಶದ ಅತ್ಯುನ್ನತ ನಾಗರಿಕ ಗೌರವವಾದ `ಭಾರತರತ್ನ’ ಪದಕದ ಒಂದು ಬದಿಗೆ ಸೂರ್ಯನ ಚಿತ್ರ ಇದೆ. ಇದು ಕೂಡಾ ಇಲ್ಲಿ ಉಲ್ಲೇಖಾರ್ಹ.
ಸೂರ್ಯದೇವಾಲಯಗಳು
ಭಾರತದಲ್ಲಿ ಸೂರ್ಯನಿಗೆ ಮೀಸಲಾದ ಹಲವಾರು ದೇವಾಲಯಗಳಿವೆ. ಇವುಗಳಲ್ಲಿ ಕೆಲವು ವಿಶ್ವಖ್ಯಾತಿಯನ್ನೂ ಪಡೆದಿವೆ. ಪ್ರಮುಖ ಸೂರ್ಯದೇವಾಲಯಗಳನ್ನು ಗಮನಿಸುತ್ತಾ ಹೋದರೆ ಕೂಡಲೇ ಹೊಳೆಯುವುದು: (೧)
ಒಡಿಶಾ ರಾಜ್ಯದ ಕೋಣಾರ್ಕ್ ಎಂಬಲ್ಲಿನ ಸೂರ್ಯದೇವಾಲಯ. ೧೩ನೇ ಶತಮಾನದಲ್ಲಿ ನರಸಿಂಹದೇವನಿಂದ ನಿರ್ಮಿಸಲ್ಪಟ್ಟಿತು ಎನ್ನಲಾದ ಈ ದೇವಾಲಯವು Black Pagoda ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಇದು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. (೨) ಬಿಹಾರ ರಾಜ್ಯದ ಗಯಾದಲ್ಲಿ ಇರುವ ದಕ್ಷಿಣಾರ್ಕ ದೇವಾಲಯ. ಆಂಧ್ರಪ್ರದೇಶದ ವಾರಾಂಗಲ್ನ ಪ್ರತಾಪರುದ್ರ ಎಂಬ ಅರಸನಿಂದ ೧೩ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಿಸಲ್ಪಟ್ಟಿತು. ಇದಲ್ಲದೆ ಇಲ್ಲಿ ಇನ್ನೂ ಎರಡು ಪ್ರಮುಖವಾದ ಸೂರ್ಯ ದೇವಾಲಯಗಳಿವೆ. ಅವುಗಳು ಯಾವುವು ಎಂದರೆ ಉತ್ತರ ಮಾನಸದ ಬಳಿ ಇರುವ ಉತ್ತರಾರ್ಕ ದೇವಾಲಯ ಹಾಗೂ ಫಾಲ್ಗುಣೀ ನದಿ ತೀರದಲ್ಲಿರುವ ಗಯಾದಿತ್ಯ ದೇವಾಲಯ. (೩) ಮಧ್ಯಪ್ರದೇಶದ ಲುನಾವು ಎಂಬಲ್ಲಿ ಬ್ರಹ್ಮಣ್ಯದೇವ ದೇವಾಲಯ ಇದೆ. (೪)
ಗುಜರಾತ್ನ ಮೊದೆರಾದಲ್ಲಿರುವ ಸೂರ್ಯದೇವಾಲಯ
ಗುಜರಾತ್ನ ಮೊದೆರಾ ಸೂರ್ಯ ದೇವಾಲಯ – ಇದು ಸೌಂದರ್ಯ ಮತ್ತು ಶಿಲ್ಪಕಲಾವೈಭವದಲ್ಲಿ ಕೋಣಾರ್ಕ್ನ ಸೂರ್ಯದೇವಾಲಯವನ್ನೂ ಮೀರಿಸಿದೆ. ಸೂರ್ಯನನ್ನು ಕುಲದೇವರನ್ನಾಗಿ ಹೊಂದಿದ್ದ ಸೋಳಂಕಿ ರಾಜವಂಶಸ್ಥ ಭೀಮದೇವ ಇದರ ನಿರ್ಮಾತೃ. ಒಂದು ಕಾಲಘಟ್ಟದಲ್ಲಿ ಈ ದೇವಾಲಯ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾದರೂ ಮತ್ತೆ ೧೯೬೨ರಲ್ಲಿ ಪುರಾತನ ಶೈಲಿಯಲ್ಲಿ ಮರುಹುಟ್ಟು ಪಡೆಯಿತು. ಇನ್ನು (೫) ದಕ್ಷಿಣ ಭಾರತದಲ್ಲಿ ಸೂರ್ಯನಾರ್ ಕೊಯಿಲ್ ಬಹು ಪ್ರಸಿದ್ಧವಾದ ಸೂರ್ಯದೇವಾಲಯವಿದೆ. ಈ ದೇವಾಲಯದ ಶಿಲಾಶಾಸನವೊಂದರಿಂದ ತಿಳಿದು ಬರುವಂತೆ ಕುಲೋತ್ತುಂಗ ಚೋಳದೇವನ ಆಳ್ವಿಕೆಯಲ್ಲಿ ಈ ದೇವಾಲಯ ರಚಿಸಲ್ಪಟ್ಟಿತು. ಆದ್ದರಿಂದ `ಕುಲೋತ್ತುಂಗ ಚೋಳ ಮಾರ್ತಾಂಡಾಲಯ’ ಎಂಬ ಹೆಸರೂ ಈ ದೇವಳಕ್ಕೆ ಇದೆ. ಇದು ತಮಿಳುನಾಡಿನ ಕುಂಭಕೋಣಂನಿಂದ ೨೨ ಕಿ.ಮೀ. ದೂರದಲ್ಲಿ ಇದೆ. (೬) ಆಂಧ್ರಪ್ರದೇಶದ ಅರಸವಲ್ಲಿ ಎಂಬಲ್ಲಿ ಇರುವ ಸೂರ್ಯನಾರಾಯಣ ದೇವಾಲಯವೂ ಪ್ರಸಿದ್ಧವೆ. ಕರ್ನಾಟಕದ ಶೃಂಗೇರಿಯಲ್ಲಿ ಶ್ರೀ ವಿದ್ಯಾರಣ್ಯರ ಕಾಲದಲ್ಲಿ ಕೆತ್ತಲಾದ `ಶ್ರೀ ವಿದ್ಯಾಶಂಕರ ದೇವಾಲಯ’ವು ಸೂರ್ಯನ ದೇವಾಲಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮರೋಳಿ ಹಾಗೂ ಬೆಳ್ತಂಗಡಿಯ (ಇದೇ ಜಿಲ್ಲಾ ವ್ಯಾಪ್ತಿಗೆ ಸೇರಿದೆ) ನಾರಾವಿ ಎಂಬಲ್ಲಿಯೂ ಸೂರ್ಯ ದೇವಾಲಯಗಳಿವೆ.
ಇನ್ನು ಮುಸ್ಲಿಂ ಅರಸರು ಲೂಟಿಗೈದು ಧ್ವಂಸ ಮಾಡಿರುವ ದೇವಾಲಯಗಳು ಅನೇಕ. ಅವುಗಳಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅನಂತನಾಗ್ಗೆ ಸಮೀಪದಲ್ಲಿ ಇರುವ ವಿಶ್ವಪ್ರಸಿದ್ಧ ಮಾರ್ತಾಂಡ ಸೂರ್ಯದೇವಾಲಯವೂ ಒಂದು. ಮಾರ್ತಾಂಡ ಎಂಬುದು ಸೂರ್ಯನ ಇನ್ನೊಂದು ಹೆಸರು. ಇಂದು ಈ ಮಂದಿರದ ಭಗ್ನಾವಶೇಷಗಳು ಮಾತ್ರ ಉಳಿದುಕೊಂಡಿವೆ. ಅವುಗಳತ್ತ ಒಮ್ಮೆ ದೃಷ್ಟಿ ಹಾಯಿಸಿದರೂ ಸಾಕು, ಈ ವಿಶ್ವಪ್ರಸಿದ್ಧ ದೇವಾಲಯದ ನಿರ್ಮಾತೃಗಳ ಕಲೆ ಮತ್ತು ನೈಪುಣ್ಯಗಳಿಗೆ ಯಾರಾದರೂ ಸರಿ ಬೆರಗಾಗಲೇಬೇಕು. ಈ ದೇವಳವನ್ನು ಧ್ವಂಸಗೈಯಲು ಸಿಕಂದರ್ ಬಚ್ಶಿಖಾನ್ ಎಂಬಾತನಿಗೆ ಸರಿಸುಮಾರು ಒಂದು ವರ್ಷ ಕಾಲ ಬೇಕಾಯಿತು ಎಂದು ಚರಿತ್ರೆಯ ಪುಟಗಳು ಹೇಳುತ್ತವೆ. ಭಾರತೀಯ ಪುರಾತತ್ತ್ವ ಇಲಾಖೆಯು ಈ ತಾಣವನ್ನು ರಾಷ್ಟ್ರೀಯ ಮಹತ್ತ್ವದ ತಾಣವನ್ನಾಗಿ ಘೋಷಿಸಿದೆ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಭಾರತ ಸರ್ಕಾರವು ಈ ಪ್ರದೇಶವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿದೆ.
ಕೃಷ್ಣನ ಮಗ ಸಾಂಬನಿಂದ ಕಟ್ಟಲ್ಪಟ್ಟಿತು ಎಂಬ ಐತಿಹ್ಯ ಇರುವ ಆದಿತ್ಯ ದೇವಾಲಯ – ಇದು ಕೂಡಾ ಮುಸ್ಲಿಂ ದೊರೆಗಳ ವಿಕೃತಿಗೆ ಬಲಿಯಾದ ಮತ್ತೊಂದು ಶ್ರೀಮಂತ ಸೂರ್ಯಮಂದಿರ. ಇದು ಇಂದಿನ ಪಾಕಿಸ್ತಾನಕ್ಕೆ ಸೇರಿದ ಆಧುನಿಕ ಪಂಜಾಬ್ನ ಮುಲ್ತಾನ್ ಎಂಬ ನಗರದಲ್ಲಿ ಇದೆ. ಪ್ರಸಿದ್ಧ ಚೀನಾ ಯಾತ್ರಿಕ ಹ್ಯು-ಯೆನ್-ತ್ಸಾಂಗ್ ಈ ಮಂದಿರದ ಶ್ರೀಮಂತಿಕೆಯನ್ನು ವಿವರವಾಗಿ ದಾಖಲಿಸಿದ್ದರೆ, ಅಮೂಲ್ಯ ಹರಳು, ರತ್ನಾಭರಣಗಳಿಂದ ತುಂಬಿ ತುಳುಕುತ್ತಿದ್ದ ಈ ದೇವಾಲಯವನ್ನು ದೋಚಲು, ತದನಂತರ ನಾಶಗೈಯಲು ಮುಸ್ಲಿಂ ಅರಸರು ಸತತವಾಗಿ ನಡೆಸಿದ ಆಕ್ರಮಣಗಳು, ಪೈಶಾಚಿಕ ಕೃತ್ಯಗಳು ಅಸಂಖ್ಯ. ಅಂತಿಮವಾಗಿ ಮಹಮ್ಮದ್ ಗಝನಿಯಿಂದ ಈ ದೇವಾಲಯ ನಿರ್ನಾಮಗೊಂಡಿತು. ಇಂದು ಈ ಪ್ರದೇಶದಲ್ಲಿ ಮಸೀದಿ ತಲೆ ಎತ್ತಿದೆ.
ಸೂರ್ಯಸಾಹಿತ್ಯ
ಸೂರ್ಯನು ಬೆಳಕು ನೀಡುವವನು. ಸಕಲಜೀವಿಗಳ ಸಂರಕ್ಷಕ ಮತ್ತು ಪೋಷಕನು. ಕತ್ತಲೆಯನ್ನು ಹೊಡೆದೋಡಿಸುವವನೂ, ರೋಗನಿವಾರಕನೂ ಹೌದು. ಹಗಲು-ರಾತ್ರಿಗಳ ನಿಯಾಮಕನೂ ಅವನೇ. ಸೂರ್ಯನನ್ನು ಕೊಂಡಾಡುವ, ವರ್ಣಿಸುವ, ಸ್ತುತಿಸುವ ಹಲವು ಬಗೆಯ ಸೂರ್ಯ ಸಾಹಿತ್ಯವು ನಮ್ಮಲ್ಲಿ ಹೇರಳವಾಗಿದೆ. ನಮ್ಮ ಹಿರಿಯರ ಸೂರ್ಯಕಲ್ಪನೆ, ಸೂರ್ಯಚಿಂತನೆಯನ್ನು ಅಧ್ಯಯನ ಮಾಡುವುದೇ ಒಂದು ರೋಚಕ ಅನುಭವ. ಆದಿತ್ಯ, ಅಗ್ನಿಗರ್ಭ, ಹಿರಣ್ಯಗರ್ಭ, ಭಾಸ್ಕರ, ಸವಿತೃ, ಮಿತ್ರ, ಅರುಣ, ಅರ್ಕ, ರವಿ… ಹೀಗೆ ವಿಸ್ತಾರವಾದ ಸೂರ್ಯಕಲ್ಪನೆಯ ಹಿಂದೆ ಹಿರಿದಾದ ಭಾವವಲಯ ಇರುವುದನ್ನೂ ನಾವು ಗಮನಿಸಬೇಕು.
ಅಗಸ್ತ್ಯಮುನಿಗಳಿಂದ ರಚಿಸಲ್ಪಟ್ಟ ಸೂರ್ಯನನ್ನು ಸ್ತುತಿಸುವ ಸ್ತೋತ್ರವೆ `ಆದಿತ್ಯಹೃದಯಂ’. ರಾಮಾಯಣದ ಯುದ್ಧಕಾಂಡದಲ್ಲಿ ಈ ಸ್ತೋತ್ರ ಬರುತ್ತದೆ. ಇದಲ್ಲದೆ, ಅರುಣಪ್ರಶ್ನ, ಮಹಾಸೌರ, ಸೂರ್ಯೋಪನಿಷತ್ತು, ಸೂರ್ಯಾಷ್ಟಕ, ಆದಿತ್ಯಗಾಯತ್ರಿ, ಸೂರ್ಯ ಸಹಸ್ರನಾಮ, ನವಗ್ರಹಸ್ತೋತ್ರ ಇವು ಎಲ್ಲವೂ ನಮ್ಮವರ ಸೂರ್ಯಚಿಂತನೆಗೆ ಸಾಕ್ಷಿಯಾಗಿವೆ.
ಇನ್ನು ಸಂಸ್ಕೃತ ಸಾಹಿತ್ಯದಲ್ಲಿ `ಮಯೂರ ಶತಕ’ ಎಂಬ ಸೂರ್ಯನನ್ನು ಕೊಂಡಾಡುವ ಪ್ರಸಿದ್ಧ ಕೃತಿಯೊಂದು ಇದೆ. ಹರ್ಷ ಚಕ್ರವರ್ತಿಯ ಆಸ್ಥಾನಕವಿಯಾದ ಮಯೂರ ಇದರ ಕರ್ತೃ.
ಪರಂಪರೆಯಿಂದ ಬಂದಿರುವ ಸೂರ್ಯ ಸಾಹಿತ್ಯಕ್ಕೆ ಆಧುನಿಕ ವಿದ್ವಾಂಸರೂ ತಮ್ಮ ಕಾಣಿಕೆಯನ್ನು ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಉಲ್ಲೇಖಿಸಲು ಯೋಗ್ಯವಾದುದು ಹೊರನಾಡು ಕನ್ನಡಿಗರಾಗಿದ್ದ ದಿವಂಗತ ಶಾ. ಬಾಬುರಾಯರು ಬರೆದ `ಸೂರ್ಯ ಇವನೊಬ್ಬನೆ’ ಎಂಬ ಕೃತಿ.
ಕೊನೆಯದಾಗಿ ಒಂದಂತೂ ಸತ್ಯ. ಸೂರ್ಯೋಪಾಸನೆ ಇಂದು ನಿನ್ನೆಯ ಆಚರಣೆ ಅಲ್ಲ. ಅನಾದಿಕಾಲದಿಂದಲೂ ಇದು ಜನ ಜೀವನದಲ್ಲಿ ಹಾಸುಹೊಕ್ಕಾಗಿ, ಸಾಂಪ್ರದಾಯಿಕ ಆಚರಣೆಯಾಗಿ ಪ್ರಚಲಿತದಲ್ಲಿ ಇದೆ. ಧಾರ್ಮಿಕವಾಗಿ, ವೈಜ್ಞಾನಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಕೂಡಾ ಸೂರ್ಯನ ಮಹತ್ತ್ವ ಅಗಾಧ ವಾದುದು. ಬಾನಂಗಳದಲ್ಲಿ ಮಿನುಗುವ ಸೂರ್ಯ ಜೀವಜಗತ್ತಿನ ಸಕಲಜೀವರಾಶಿಗಳ ಬಾಳಿಗೆ ತೀರಾ ಅಗತ್ಯ. ಹಾಗೆಯೆ ಅನಿವಾರ್ಯ ಕೂಡಾ. ಅಂತಹ ದಿನಮಣಿಗೆ ಶತ ಶತ ಪ್ರಣಾಮಗಳು.?