ಇಲ್ಲಿಯವರೆಗೆ…
ವಿಜಯ್ ಮತ್ತು ಲೂಸಿ ಬಂದಿದ್ದನ್ನು ಕಂಡು ರಚನಾ ವಿಚಲಿತರಾದರೂ ಗಾಬರಿಗೊಳ್ಳಲಿಲ್ಲ. ಮೃದುಲಾಗೆ ಸಂಬಂಧಿಸಿದ ವಿಷಗಳನ್ನು ಹೇಳಲೋ ಬೇಡವೋ ಎಂಬ ಗೊಂದಲಕ್ಕೆ ಬಿದ್ದಳು. ಆದರೆ, ವಿಜಯ್ನ ಕುಮ್ಮಕ್ಕಿಗೆ ಸಿಲುಕಿ ಆಕೆ ತನ್ನ ಗತಜೀವನದಲ್ಲಿ ಘಟಿಸಿದ ಸತ್ಯಸಂಗತಿಗಳನ್ನು ನಿಧಾನವಾಗಿ ಬಿಚ್ಚಿಡತೊಡಗಿದಳು…
ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಿದ್ದ ಅಪ್ಪನ ಒಣದರ್ಪಕ್ಕೆ ಸಿಲುಕಿ ಮನೆಯ ಉಸಿರುಗಟ್ಟಿಸುವ ವಾತಾವರಣದಲ್ಲಿ ಪ್ರೀತಿ ಸಿಗದೆ ನಲುಗಿದ ರಚನಾ ಕರ್ಪೂರಿ ನದೀತೀರದಲ್ಲಿ ಚಿತ್ರರಚನೆಯಲ್ಲಿ ತೊಡಗಿದ್ದಾಗ ಪರಿಚಯವಾದ ಯುವಕ, ತಮಿಳು ನಿರಾಶ್ರಿತರ ಕ್ಯಾಂಪಿನ ಕಣ್ಣನ್ನ ಪ್ರೇಮದ ಸುಳಿಗೆ ಬಿದ್ದಳು. ಪ್ರೀತಿ ಮುಂದುವರಿದು ರಚನಾ ಗರ್ಭಧರಿಸಿದಳು. ವಿಷಯ ತಿಳಿದ ನಂಬೂದಿರಿ ಕುಲಗೌರವ ಹಾಳಾಯಿತು ಎಂಬ ಆವೇಶಕ್ಕೆ ಒಳಗಾಗಿ ಯುವಕ ಕಣ್ಣನ್ನ ಕೊಲೆಮಾಡಿ, ಗೆಳೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸನ್ ನೆರವಿನಿಂದ ಕೇಸನ್ನು ಮುಚ್ಚಿಹಾಕಿದರು. ಅನಂತರ ರಚನಾಗೆ ರಹಸ್ಯವಾಗಿ ಹೆರಿಗೆ ಮಾಡಿಸಿ, ಹುಟ್ಟಿದ ಹೆಣ್ಣುಮಗುವನ್ನು ಹೊಸಮನಿ ದಂಪತಿಗಳಿಗೆ ದತ್ತು ನೀಡಿದರು. ಆ ಮಗುವೇ ಪ್ರಸಿದ್ಧ ಚಿತ್ರತಾರೆ, ಟಿವಿ ನಟಿ ಮೃದುಲಾ. ಕೊಲೆ ರಹಸ್ಯ ತಮ್ಮತಮ್ಮಲ್ಲೇ ಉಳಿದುಹೋಗಲಿ ಎಂದು ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸನ್ ಮಗ ರಾಮನ್ಗೆ ರಚನಾಳನ್ನು ಕೊಟ್ಟು ಮದುವೆಯನ್ನೂ ಮಾಡಿದರು…
ಒಮ್ಮೆ ಕುಡಿದ ಅಮಲಿನಲ್ಲಿ ನಂಬೂದಿರಿ ಹಾಗೂ ಶ್ರೀನಿವಾಸನ್ ವಾದಮಾಡುತ್ತಿದ್ದಾಗ ಅಲ್ಲಿಗೆ ಬಂದ ಜಾನಿಗೆ ಈ ಎಲ್ಲ ರಹಸ್ಯ ತಿಳಿದು ಆತ ನಂಬೂದಿರಿ ಹಾಗೂ ಮೃದುಲಾರನ್ನು ಬ್ಲ್ಯಾಕ್ಮೇಲ್ ಮಾಡುವುದಕ್ಕೆ ಆರಂಭಿಸಿದ…
ಪ್ರಕರಣ ಕ್ಲೈಮಾಕ್ಸ್ಗೆ ತಲಪುತ್ತಿದ್ದಂತೆ ಮೃದುಲಾ ಹಾಗೂ ಫೆರ್ನಾಂಡೆಸ್ ರಚನಾ ಮತ್ತು ಕಮಿಷನರ್ ಇಬ್ಬರನ್ನೂ ಭೇಟಿಮಾಡಲು ಆಸಕ್ತರಾದರು…
ಅವರ ಕಂಗಳಲ್ಲಿ ಅದೇನೋ ಅಲೌಕಿಕ ಶಾಂತಿಯಿದ್ದಂತೆ ನನಗೆ ಭಾಸವಾಯಿತು…
ರಾತ್ರಿ ಮಲಗಿದ್ದರೂ ನಿದ್ದೆಹತ್ತಲಿಲ್ಲ. ಜಾನಿ ಮತ್ತು ಅವನ ಪ್ರಿಯತಮೆ ಶಾಂತಿಯ ಕೊಲೆ ನನ್ನ ಕಣ್ಣಿಗೆ ಕಟ್ಟಿದಂತಾಗಿ “ನೀನು ನಮ್ಮನ್ನು ಉಳಿಸಲು ಆಗುತ್ತಿರಲಿಲ್ಲವೇ?” ಎಂದು ಚುಚ್ಚಿ ಚುಚ್ಚಿ ಕೇಳಿದಂತಾಯಿತು. ಕಡೇ ಪಕ್ಷ ಅವರ ಕೊಲೆಗಾರನನ್ನಾದರೂ ನಾನು ಪತ್ತೆಹಚ್ಚಿ ಕಾನೂನಿಗೆ ಕೊಡಬೇಕೆಂಬ ಛಲ ಹುಟ್ಟಿತು.
ಮರುದಿನ ಬೆಳಗ್ಗೆ ನಾನು ಕಾಫಿ-ತಿಂಡಿ ಮುಗಿಸುತ್ತಿರುವಾಗಲೇ ಲೂಸಿಯ ಕರೆ ಬಂದಿತ್ತು. `ಮೃದುಲಾ ಮತ್ತು ಫರ್ನಾಂಡೆಸ್ ಆಗಲೇ ಬೆಳಗ್ಗೆ ವಿಮಾನದಲ್ಲಿ ಬಂದಿಳಿದರೆಂದೂ ತಾನು ತಾಯಿ, ಮಗಳ ಭಾವುಕ ಪುನರ್ಮಿಲನಕ್ಕೆ ರಚನಾಳ ಮನೆಗೆ ಹೋಗುತ್ತಿರುವೆ’ – ಎಂದು ತಿಳಿಸಲು.
“ನೀವೂ ಬರಬಹುದಲ್ಲಾ?” ಕೇಳಿದಳು.
ನಾನು ಜಾನಿ-ಶಾಂತಿಯ ಕೊಲೆಗಾರ ಸಿಗುವವರೆಗೂ ದುಡಿಯುತ್ತೇನೆಂದೂ ಇಲ್ಲದಿದ್ದರೆ ನನ್ನ ಮನಸ್ಸಾಕ್ಷಿ ಒಪ್ಪುವುದಿಲ್ಲವೆಂದೂ ಉತ್ತರಿಸಿದೆ.
ಅದಾಗಿ ಹತ್ತು ನಿಮಿಷದಲ್ಲಿ ಕಮಿಷನರ್ ರಾಮನ್ ನನ್ನ ಮೊಬೈಲ್ಗೆ ಕರೆ ಮಾಡಿದರು.
“ವಿಜಯ್, ಇನ್ನೊಂದು ಕೋಲ್ಟ್ ೦.೩೮ ರಿವಾಲ್ವರ್ನ ಪತ್ತೆಯಾಯ್ತು. ಅದು ನಮ್ಮ ತಂದೆಗೆ ಪೊಲೀಸ್ ಸರ್ವಿಸ್ನಲ್ಲಿ ಕೊಟ್ಟಿದ್ದು.” ಎಂದು ನಿಲ್ಲಿಸಿದರು.
“ಹಾಗಾದರೆ ಅದನ್ನು ಅವರು ಪೊಲೀಸ್ ಇಲಾಖೆಗೆ ವಾಪಸ್ ಕೊಟ್ಟಿದ್ದಿರಬೇಕು. ಇಲ್ಲವೇ ನಿಮ್ಮ ಮನೆಯಲ್ಲೇ ಇರಬಹುದು….”
“ನೋಡಿ ಅದೇ ವಿಚಿತ್ರ ಎನ್ನುವುದು. ಅವರು ಹಾಗೆ ಮಾಡಿಯೇ ಇಲ್ಲ. ಇಲಾಖೆಗೆ ವಾಪಸ್ ಕೊಟ್ಟ ದಾಖಲೆಯೂ ಇಲ್ಲ. ಇತ್ತ ಮನೆಯಲ್ಲಿಯೂ ಖಂಡಿತ ಇಲ್ಲ ಎಂದರು; ಇದೊಂದು ಅರ್ಥವಾಗದ ಒಗಟು ಎಂಬಂತೆ.
“ನಿಮಗೆ ಈ ಬಗ್ಗೆ ಖಚಿತವಾಗಿ ಗೊತ್ತೆ?” ಎಂದೆ, ನನ್ನ ಎದೆ ಡವಗುಟ್ಟುತಿತ್ತು.
“ಹೌದು, ನಾನು ನೋಡಿರುವ ಹಾಗೆ ಅಪ್ಪ ನಿವೃತ್ತರಾದ ಮೇಲೆ ಎಂದೂ ನಮ್ಮ ಮನೆಯಲ್ಲಿ ಅವರ ರಿವಾಲ್ವರ್ ಇದ್ದದ್ದು ಕಾಣೆ. ಯಾವತ್ತಿನಿಂದ ಅದು ಕಾಣೆಯಾಗಿತ್ತೋ ಗೊತ್ತಿಲ್ಲ.”
ಇಬ್ಬರೂ ನಮ್ಮೆದುರಿಗಿದ್ದ ಸತ್ಯವನ್ನು ಅರಿತು ಎರಡು ಕ್ಷಣ ಸ್ತಂಭೀಭೂತರಾದೆವು.
“ಇದರ ಅರ್ಥ ಏನೆಂದು ನಿಮಗೆ ಗೊತ್ತಾಯಿತು ತಾನೆ?” ಎಂದೆ ನಾನು ಉದ್ವೇಗದಿಂದ. ಎಷ್ಟಾದರೂ ಕಮಿಷನರ್ ಅಲ್ಲವೆ ಅವರು! “ಗೊತ್ತಾಯಿತು! ವಿಜಯ್, ನಾನೂ ಬರುತ್ತೇನೆ ಅಲ್ಲಿಗೆ. ಒಟ್ಟಿಗೇ ಹೋಗೋಣ” ಎಂದು ದೃಢವಾಗಿ ನುಡಿದರು.
“ಬೇಡ, ನೀವೀಗ ನಿಮ್ಮ ಹೆಂಡತಿ ಮತ್ತು ದತ್ತುಪುತ್ರಿಯ ಮಿಲನವನ್ನು ನೋಡಿಕೊಳ್ಳುತ್ತಿರಿ. ಸ್ವಲ್ಪ ನನಗೆ ಅಲ್ಲಿಗೆ ಹೋಗಿ ಮಾತನಾಡಲು ಅವಕಾಶ ಕೊಡಿ. ಅರ್ಧ ಗಂಟೆ ಬಿಟ್ಟು ಬಂದುಬಿಡಿ” ಎಂದು ಕೋರಿದೆ.
“ಹಾಗೇ ಆಗಲಿ. ನಾನಲ್ಲಿಗೆ ಬಂದೇ ಬರುತ್ತೇನೆ, ನೀವು ಜೋಪಾನವಾಗಿರಿ” ಎಂದು ಕಾಲ್ ಮುಗಿಸಿದರು.
ನಾನು ಲಾಡ್ಜ್ನಿಂದ ತರಾತುರಿಯಿಂದ ಹೊರಬಿದ್ದೆ.
ಕೆಲವು ಕೇಸ್ಗಳಲ್ಲಿ ಹೀಗೇ ನೋಡಿ, ಎಲ್ಲಾ ಸಂಬಂಧಿತ ಸಾಕ್ಷಿಗಳನ್ನೂ ವಿಚಾರಿಸಿಬಿಟ್ಟಿದ್ದೇವೆಂದು ಊಹಿಸಿರುತ್ತೇವೆ. ಆದರೆ ಯಾವುದೋ ಒಬ್ಬ ಅತ್ಯಂತ ಪ್ರಮುಖ ವ್ಯಕ್ತಿಯನ್ನು ಭೇಟಿಯೂ ಆಗಿರುವುದಿಲ್ಲ.
ಅಂತಹದೇ ತಪ್ಪನ್ನು ಮಾಡಿರಬಹುದೆಂಬ ಅನುಮಾನ ಬಲವಾಗಿತ್ತು.
ಕೇವಲ ಐದೇ ನಿಮಿಷಗಳಲ್ಲಿ ಅವರ ಮನೆಗೆ ತಲಪಿದ್ದೆ.
ನದಿಯ ಬದಿಯ ಮನೆ ಎಂದಿನಂತೆ ಖಾಲಿ ಮತ್ತು ನಿರ್ಜನವಾಗಿ ಕಾಣುತಿತ್ತು.
ಅಲ್ಶೇಶಿಯನ್ ನಾಯಿ ಇರಬಹುದಾದುದನ್ನೂ ಲೆಕ್ಕಿಸದೆ ನಾನು ನಂಬೂದರಿಯ ಮನೆಗೆ ನುಗ್ಗಿದೆ. ನಾಯಿಯನ್ನು ಹಿಂದೆ ಕಟ್ಟಿದ್ದರೆಂದು ಕಾಣುತ್ತದೆ. ಅದು ಅಂದು ನನಗೆ ಅಡ್ಡಿ ಮಾಡಲಿಲ್ಲ.
ಅಲ್ಲಿ ಅಡ್ಡಿಪಡಿಸಲು ಮನೆಯ ಮಾಲಿಕನೇ ಇರಲಿಲ್ಲ ಎಂದು ನನಗೆ ಐದೇ ನಿಮಿಷಗಳಲ್ಲಿ, ಒಂದು ಸುತ್ತು ಎಲ್ಲಾ ಕೋಣೆಗಳನ್ನು ಸುತ್ತುವಷ್ಟರಲ್ಲಿ ಅರಿವಾಗಿಬಿಟ್ಟಿತ್ತು.
ಮನೆಯ ಲಿವಿಂಗ್ರೂಮಿನ ಮಧ್ಯದ ಮೇಜಿನ ಮೇಲೆ ಎರಡು ವಸ್ತುಗಳಿದ್ದವು. ಒಂದು ಬಿಳಿ ಕಾಗದದಲ್ಲಿ ಬರೆದ ಪತ್ರ ಮತ್ತು ಅದರ ಮೇಲೆ ಗಾಳಿಗೆ ಹಾರಿಹೋಗದಂತೆ ಗಟ್ಟಿ ಮರಳಿನ ಗಂಟುಕಟ್ಟಿದ ಚೀಲ. ತಲೆಗೆ ಹೊಡೆದರೆ ಮೂರ್ಛೆ ಬರುವಂಥದ್ದು. ನನ್ನ ತಲೆಗೆ ಆಗಲೇ ರುಚಿ ತೋರಿರುವಂಥದ್ದು!
ನಾನು ಆ ಮರಳಿನ ಚೀಲವನ್ನು ಬದಿಗಿಟ್ಟು ಪತ್ರವನ್ನು ಬೇಗಬೇಗ ಓದತೊಡಗಿದೆ:
ಎಲ್ಲರಿಗೂ ನನ್ನ ಕೊನೆಯ ನಮಸ್ಕಾರ. ಈ ಪತ್ರವನ್ನು ಓದುವ ಹೊತ್ತಿಗಾಗಲೇ ನೀವೆಲ್ಲರೂ ಹುಡುಕುತ್ತಿದ್ದ ಆ ಕ್ರೂರ ಅಪರಾಧಿ ನಾನೇ ಎಂದು ತಿಳಿದುಬಿಟ್ಟಿರುತ್ತದೆ. ಇನ್ನು ನಿಮ್ಮೆಲ್ಲರ ಮುಂದೆ ಎಲ್ಲ ವಿಷಯಗಳನ್ನೂ ಬಹಿರಂಗಪಡಿಸಿ ಹೊರಟುಹೋಗುತ್ತಿದ್ದೇನೆ. ಅಂದು ನನಗೆ ನನ್ನ ಮಗಳು ಅವನ ಮಗುವನ್ನು ಹೆರಬೇಕಾದ ಕಳಂಕ ಹೊರುವುದು ಖಚಿತವಾದ ಮೇಲೆ ಆ ತಮಿಳು ಯುವಕ ಕಣ್ಣನ್ನನ್ನು ಕೊಲ್ಲಬೇಕೆಂಬ ಉದ್ದೇಶ ಹುಟ್ಟಿದ್ದು ನನ್ನ ಪಾಲಿಗೆ ಸಹಜವೇ ಆಗಿತ್ತು. ನಾನು ನಮ್ಮ ನಂಬೂದರಿ ಸಂಪ್ರದಾಯ, ಮರ್ಯಾದೆ ಬಗ್ಗೆ ಅತ್ಯಂತ ಗೌರವವಿಟ್ಟುಕೊಂಡಿದ್ದವನು. ಅಹಂಕಾರವೆಂದಾದರೂ ಅನ್ನಿ. ಅಂಥದ್ದರಲ್ಲಿ ನನ್ನ ಮಗಳನ್ನೆ ಆ ಕುಲಗೆಟ್ಟ ಯುವಕ ಹಾಳುಮಾಡಿದ್ದನೆಂಬ ರೋಷ ಹೆಚ್ಚಾಗಿ ಸೇಡಿಗಾಗಿ ಒಂದು ಯೋಜನೆ ಮಾಡಿದೆ. ನನ್ನ ದುಷ್ಟ ಉದ್ದೇಶಕ್ಕಾಗಿ ನನ್ನ ಗೆಳೆಯನಾದ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸನ ಬಳಿಯಿದ್ದ ೦.೩೮ ಪೊಲೀಸ್ ಸರ್ವಿಸ್ ರಿವಾಲ್ವರ್ ಅನ್ನು ಕದ್ದೆ. ಅವನಿಗೆ ತಿಳಿಯದಂತೆಯೆ. ಅಂದು ನಾನು ದುಃಖ ನುಂಗಲೆಂದು ವಿಸ್ಕಿ ಕುಡಿಯುತ್ತಾ ಕುಳಿತಿದ್ದಾಗ ಅವನು ನನಗೆ ಕಂಪನಿ ಕೊಡಲೆಂದು ಬಂದಿದ್ದ. ಅವನು ಅಮಲಿನಲ್ಲಿರುವಾಗ ನಾನು ಅವನ ರಿವಾಲ್ವರನ್ನು ಕದ್ದು ಬಚ್ಚಿಟ್ಟುಬಿಟ್ಟೆ. ಅನಂತರ ಅವನ ಜತೆಯೇ ಸೇರಿ ಅದನ್ನು ಅಲ್ಲಿ ಇಲ್ಲಿ ಹುಡುಕಾಡುವ ನಾಟಕವನ್ನೂ ಮಾಡಿದೆ.
ಮುಂದಿನ ದಿನ ನನ್ನ ಮಗಳಿಗೆ ಹೊಡೆದೂ ಬಡಿದೂ ಹಿಂಸೆ ಕೊಟ್ಟು ಅವಳ ಪ್ರೇಮಿಯನ್ನು ಹುಡುಕುತ್ತ ಸೇಡಿನ ಮೃಗದಂತೆ ನದಿಯ ಬದಿಗೆ ಹೋದೆ.
“ನೀವೇ ಅವಳ ಅಪ್ಪನಲ್ಲವೆ?” ಎಂದು ಮರಳ ಮೇಲೆ ಕೊಳಲೂದುತ್ತಿದ್ದ ಕಣ್ಣನ್ ಎದ್ದುಕೇಳಿದ್ದ.
“ನಿಮ್ಮಪ್ಪ ಯಾರೋ, ಭಡವಾ?” ಎಂದು ಕೂಗಿದೆ.
“ಗೊತ್ತಿಲ್ಲ, ಸತ್ತುಹೋದರು ಎಂದವನಿಗೆ ಅವನು ಮುಂದೆ ಹೇಳಿದ ಮಾತೇ ಅವನ ಸಾವಿಗೆ ಕಾರಣವಾಯಿತು ಎಂದು ಕಾಣುತ್ತೆ.
“ನೀವೇನೂ ಯೋಚಿಸಬೇಡಿ ಸರ್. ನಿಮ್ಮ ಮಗಳನ್ನು ನಾನೇ ಮದುವೆಯಾಗುತ್ತೇನೆ. ಅವಳಿಗೂ ಹೇಳಿದ್ದೇನೆ, ಒಪ್ಪಿದ್ದಾಳೆ” ಎಂದುಬಿಟ್ಟ. ಕೇವಲ ಹದಿನೇಳು ವರ್ಷ ವಯಸ್ಸಿನ ತಮಿಳು ನಿರಾಶ್ರಿತರ ಯುವಕ, ನನ್ನ ಮೈನರ್ ಮಗಳನ್ನು ಮದುವೆಯಾಗುವ ಯೋಚನೆಯನ್ನೂ ಮಾಡಿದ್ದಾನೆ! ಇವನನ್ನು ಇಲ್ಲೇ ಮುಗಿಸಬೇಕು ಎಂಬ ಕ್ರೋಧ ಉಕ್ಕಿಬಂದು ಆ ಕ್ಷಣವೇ ಅವನನ್ನು ಆ ಪೊಲೀಸ್ ರಿವಾಲ್ವರಿಂದ ಗುಂಡಿಟ್ಟು ಸಾಯಿಸಿದೆ. ನಂತರ ನನಗೆ ನಾನು ಮಾಡಿದ ಅಪರಾಧದ ಅರಿವಾಗಿ, ತಣ್ಣನೆಯ ಬೆವರಿಳಿಯಿತು. ಹೆಣವನ್ನು ಅಲ್ಲೇ ಬಿಟ್ಟು ನನ್ನ ಗೆಳೆಯ ಶ್ರೀನಿವಾಸನ ಬಳಿಗೆ ಓಡೋಡಿ ಹೋಗಿ ಮಾಡಿದ್ದನ್ನೆಲ್ಲಾ ತಿಳಿಸಿದೆ. ಅವನಿಗೂ ನಾನು ಕುಲಗೌರವಕ್ಕಾಗಿ ಹತ್ಯೆ ಮಾಡಿದ್ದು ಸರಿಯೆ ಅನಿಸಿತು. ಆಗಿನ ಕಾಲದ ರೀತಿ-ರಿವಾಜು ಆ ರೀತಿಯೇ ಇತ್ತು.
“ನನ್ನ ಪಿಸ್ತೂಲೇನಾಯ್ತು? ಹೆಣ ಸಿಕ್ಕರೆ ನನ್ನ ಮೇಲೇ ಬರುತ್ತದೆ” ಎಂದು ಹೆದರಿದ. ನಾನು ಪಿಸ್ತೂಲನ್ನು ಮತ್ತೆ ಬಚ್ಚಿಟ್ಟಿದ್ದೆ. ನನ್ನ ಮನಸ್ಸಿನಲ್ಲಿ ಯಾವತ್ತೋ ಯಾವುದೋ ವಿಪತ್ತು ಬಂದರೆ ರಕ್ಷಣೆಗೆ ಇರಲಿ ಎಂಬ ಆಲೋಚನೆಯಿತ್ತು.
“ಅದನ್ನು ನಾನು ನದಿಗೆ ಎಸೆದುಬಿಟ್ಟೆ, ನೀನು ನಿನ್ನ ಇಲಾಖೆಗೆ ಕಳೆದುಹೋಯಿತೆಂದು ಹೇಳು” ಎಂದು ಸೂಚಿಸಿದೆ. ಅವನು ನನ್ನ ಮಾತು ನಂಬಿದ, ಆದರೆ ಒಪ್ಪಲಿಲ್ಲ.
“ಗನ್ ರಿಜಿಸ್ಟರ್ ಮತ್ತೆಲ್ಲ ದಾಖಲೆಗಳು ನನ್ನ ಬಳಿಯೆ ಇವೆ. ನಾನು ಈ ವಿಷಯ ಮುಚ್ಚಿಹಾಕಿಬಿಡುತ್ತೇನೆ, ಯಾರಿಗೂ ಗೊತ್ತಾಗುವುದಿಲ್ಲ. ಆದರೆ ನಾವು ಮೊದಲು ಆ ಹುಡುಗನ ಹೆಣವನ್ನು ಸಾಗಿಸಿಬಿಡಬೇಕು” ಎಂದ.
ನಾನೂ ಅವನೂ ಸೇರಿ ನದಿಯ ಆಳವಾದ ಭಾಗಕ್ಕೆ ಹೆಣ ಕೊಂಡೊಯ್ದು, ಕಾಲುಗಳಿಗೆ ಕಲ್ಲುಕಟ್ಟಿ ಎಸೆದು ಬಿಟ್ಟೆವು. ಯಾರೂ ನಮ್ಮನ್ನು ನೊಡಲಿಲ್ಲ. ನಾನು ಹೆಂಡತಿ, ಮಗಳಿಗೆ ಹೇಳಿ ಅವರಿಬ್ಬರನ್ನೂ ಬಾಯಿಬಿಡದಂತೆ ಪ್ರಮಾಣ ಮಾಡಿಸಿಕೊಂಡೆ; ಇಲ್ಲದಿದ್ದರೆ ನಾನು ಜೈಲುಪಾಲಾದರೆ ಗತಿಯೇನು ಎಂದು ಭಯಪಟ್ಟು ಅವರೂ ಸುಮ್ಮನಾದರು.
ನಮ್ಮ ಪರಿಚಯದ ಡಾ. ಸೋಮನ್ ಮಾತಿನ ಮೇಲೆ, ಸೂಲಗಿತ್ತಿಯನ್ನಿಟ್ಟು ಮಗಳ ಹೆರಿಗೆ ವ್ಯವಸ್ಥೆ ಮಾಡಿದ್ದೆವು. ಆ ಸುಬ್ಬಮ್ಮನಿಗೆ ನನ್ನ ಮೇಲೆ ಮೊದಲಿನಿಂದ ಅನುಮಾನ. ಮೃದುಲಾಗೆ ಎಷ್ಟು ಹೇಳಿದರೂ ಕೇಳದೆ ಒಮ್ಮೆ ಆಕೆ “ಅಪ್ಪನೇ ಅವನನ್ನು ಕೊಂದರು!” ಎಂದು ಅವಳಿಗೆ ಹೇಳಿಬಿಟ್ಟಳೆಂದು ಕಾಣುತ್ತದೆ. ಸದ್ಯಃ ಅವಳೇ ಸ್ವಲ್ಪ ವರ್ಷದ ನಂತರ ತಲೆಕೆಟ್ಟು ಅರೆಹುಚ್ಚಿಯಾದಳು. ಅವಳಿಂದ ಇನ್ಯಾವ ವಿಷಯವೂ ಯಾರಿಗೂ ತಿಳಿಯುವ ಆಸ್ಪದವಿಲ್ಲ. ಇಲ್ಲದಿದ್ದರೆ ಅವಳನ್ನೂ ನಾನು ಕೊಲ್ಲಬೇಕಾಗುತ್ತಿತ್ತು.
ನನ್ನ ಸ್ನೇಹಿತ ಶ್ರೀನಿವಾಸನ್ ಖುದ್ದಾಗಿ ಆಗ ಮಾಂಡಿಚೆರ್ರಿಗೆ ಟೂರ್ ಮೇಲೆ ಬಂದಿದ್ದ ಹೊಸಮನಿ ದಂಪತಿಯನ್ನು ನನ್ನ ಬಳಿ ಕರೆತಂದ. ಅವರಿಗೆ ಮಗುವನ್ನು ನಮ್ಮದೇ ಎಂದು ಹೇಳಿ ನಾನು, ನನ್ನ ಹೆಂಡತಿ ಪತ್ರಗಳಿಗೆ ಸಹಿ ಮಾಡಿ ದತ್ತು ನೀಡಿದೆವು; ರಚನಾಗೆ ಸ್ವಲ್ಪವೂ ತಿಳಿಯದ ಹಾಗೆ. ಈ ರಹಸ್ಯ ಮನೆ-ಮನೆಯಲ್ಲೇ ಉಳಿಯಲೆಂದು ಶ್ರೀನಿವಾಸನ್ ಮಗ ರಾಮನ್ಗೆ ರಚನಾಳನ್ನು ಕೊಟ್ಟು ಮದುವೆ ಮಾಡಿದೆವು.
ಹಲವಾರು ವರ್ಷಗಳೇ ಉರುಳಿದವು. ನಾನು ಮಾಡಿದ ಆ ಕೊಲೆ ನನ್ನ ಮನಸ್ಸಿನಲ್ಲೇ ಕೊರೆಯುತ್ತಿತ್ತೇ ವಿನಾ ಯಾರಿಗೂ ಹೇಳುವಂತೆಯೇ ಇರಲಿಲ್ಲ. ಆಗಾಗ ಮೊಮ್ಮಗಳ ನೆನಪು ಬರುತ್ತಿದ್ದುದು ನಿಜ. ಆಕೆ ಹೊಸಮನಿ ಕುಟುಂಬದಲ್ಲಿ ಬೆಳೆದು ಮುಂದೆ ಟಿ.ವಿ.ಯಲ್ಲಿ ಜನಪ್ರಿಯ ತಾರೆ ಮೃದುಲಾ ಆಗಿದ್ದು ನಾನು, ರಚನಾ ರಾಮನ್ ಮೆಚ್ಚಿದೆವಾದರೂ ಯಾರಿಗೂ ಹೇಳಿಕೊಳ್ಳಲಾಗಲಿಲ್ಲ. ಇದು ರಚನಾಗೆ ಮಾತ್ರ ಸದಾ ನೋವು ತಂದ ವಿಷಯ. ಆದರೆ ಇತಿಹಾಸ ಮರಳುತ್ತದೆ ಎನ್ನುವುದು ಸುಳ್ಳಾಗಲಿಲ್ಲ. ಸುಮಾರು ಆರು ತಿಂಗಳ ಕೆಳಗೆ ಯಾವುದೋ ಅಮಲಿನ ಗಳಿಗೆಯಲ್ಲಿ ನಾನು ಮತ್ತು ರಾಮನ್ ನಮಗೆ ತಿಳಿಯದೆಯೇ ಜಾನಿಯಂಥ ಮೋಸಗಾರ ಯುವಕನ ಕಿವಿಗೆ ಈ ರಹಸ್ಯವನ್ನು ತಲಪಿಸಿಬಿಟ್ಟಿದ್ದೆವು.
ಈಗಾಗಲೆ ಅವನು ನನ್ನನ್ನೂ, ರಚನಾ ರಾಮನ್ಳನ್ನೂ, ಕೊನೆಗೆ ಏನೂ ತಿಳಿಯದೇ ನಮ್ಮೆಲ್ಲರಿಂದ ದೂರವೇ ಬೆಳೆದಿದ್ದ ನನ್ನ ಮೊಮ್ಮಗಳನ್ನೂ ಬಿಡದೇ ಬ್ಲ್ಯಾಕ್ಮೇಲ್ ಜಾಲದಲ್ಲಿ ಬೀಳಿಸಿಕೊಂಡಿದ್ದ. ಅವನು ಹಣ ಪೀಕಿಸುವುದಲ್ಲದೇ ನಮಗೆ ಬೆದರಿಸಿ ಹೆದರಿಸಿ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದ. ಕೊನೆಗೆ ನನಗೆ ಸಾಕುಸಾಕಾಗಿ ಈ ಜಾನಿಯನ್ನು ಬೆದರಿಸಿ ಅಥವಾ ಹೊಡೆದುರುಳಿಸಿ ಅವನ ಬಳಿಯಿದ್ದ ಪತ್ರಗಳನ್ನೆಲ್ಲಾ ವಾಪಸ್ ತಂದುಬಿಟ್ಟರೆ ಈ ಅನಿಷ್ಟ ವ್ಯವಹಾರವನ್ನೇ ಮುಗಿಸಬಹುದೆಂದೆನಿಸಿತು. ಅಂದಿನ ದಿನ ಈ ಚಿಕ್ಕ ಮರಳಿನ ಚೀಲದ ಆಯುಧವನ್ನು ಕೈಯಲ್ಲಿರಲಿ ಎಂದು ಇಟ್ಟುಕೊಂಡು ಅವನ ಮನೆಗೆ ಹೋಗಿದ್ದೆ. ಮನೆಯಿಂದ ಕತ್ತಲಲ್ಲಿ ಹೊರಬಂದವನು ಜಾನಿಯಲ್ಲದೇ ಮತ್ತಿನ್ಯಾರಿರುವರು ಎಂಬ ಧೈರ್ಯದಿಂದ ಅದನ್ನು ಆ ಪತ್ತೆದಾರನ ತಲೆಗೆ ಬೀಸಿದ್ದೆ. ದುಡುಕಿ ತಪ್ಪಾಗಿಬಿಟ್ಟಿತು. ಆದರೂ, ಅಂಥಾ ಅಪಾಯವೇನಿಲ್ಲ, ಪುಟ್ಟ ಗಾಯ ಎಂದು ಸುಮ್ಮನಾಗಿ ಒಳಗೆ ಹೋಗಿ ಪತ್ರಗಳಿಗಾಗಿ ಹುಡುಕಿದೆ. ಸಿಕ್ಕಲಿಲ್ಲ…..
ಅಂದರೆ ಜಾನಿ ಅದಕ್ಕೂ ಮುಂಚೆಯೇ ಆ ಪತ್ರಗಳನ್ನೆಲ್ಲಾ ಎಲ್ಲೋ ಬಚ್ಚಿಟ್ಟಿದ್ದಾನೆ ಎಂದು ಊಹಿಸಿಕೊಂಡು ಮನೆಗೆ ಹಿಂತಿರುಗಿದೆ.
ಮನೆಗೆ ಬಂದ ಮೇಲೆ ಯೊಚಿಸಿ ನೋಡಿದೆ. ನನಗೆ ಹೊಳೆಯಿತು, ಅಯ್ಯೋ! ಆ ಪತ್ತೇದಾರರ ಜೇಬಿನಲ್ಲಿ ನೋಡಲಿಲ್ಲವಲ್ಲಾ ಎಂದು `ನನಗೆ ವಯಸ್ಸಾಗುತ್ತಿದೆ, ಎಲ್ಲಾ ಮರೆಯಹತ್ತಿದ್ದೇನೆ. ತಪ್ಪು ಮಾಡುತ್ತಿದ್ದೇನೆ’ ಎಂದು ನನ್ನನ್ನೇ ಹಳಿದುಕೊಂಡೆ.
ಕೊನೆಗೆ ಮೊನ್ನೆಯೊಮ್ಮೆ ರಚನಾ ಮನೆಗೆ ಬಂದಾಗ ನನ್ನ ಬಳಿ ತುಂಬಾ ದುಃಖಿಸಿದಳು. `ನನ್ನ ಇಡೀ ಜೀವನವನ್ನೇ ಹಾಳುಗೆಡವಿದೆ, ಅಪ್ಪಾ’ ಎಂದು ನನ್ನನ್ನು ವಿಧವಿಧವಾಗಿ ಚುಚ್ಚಿ ನುಡಿದಳು. `ನಿನ್ನಿಂದಾಗಿ ನಾನು ಹುಡುಕಿಕೊಂಡು ಬಂದಿರುವ ನನ್ನ ಕಳೆದುಹೋದ ಮಗಳನ್ನು ಭೇಟಿಯಾಗುವ ಅವಕಾಶ ಸಹ ಇಲ್ಲವಾಯಿತು’ ಎಂದು ದೂಷಿಸಿ ಹೊರಟುಹೋದಳು. ನಾನು ಆಗಲೇ ನಿರ್ಧರಿಸಿದೆ. `ನಾನು ಹಿಂದೆ ಮಗಳ ಬಾಳು ಹಸನಾಗಲಿ ಎಂದು ತಪ್ಪಾಗಿ ಒಂದು ಕೊಲೆಮಾಡಿದ್ದೆ. ಇಂದು ಅದೇ ಕಾರಣಕ್ಕಾಗಿ ಇನ್ನೊಂದು ಕೊಲೆಯನ್ನು ಮಾಡಬೇಕಾದರೂ ಸೈ; ನಾನು ಮಾಡಿದ ಆ ಪಾಪಕ್ಕೆ ಪ್ರಾಯಶ್ಚಿತ್ತವೆಂಬಂತೆ ಜಾನಿಯನ್ನು ಮುಗಿಸಿ ಇದಕ್ಕೆಲ್ಲಾ ಇತಿಶ್ರೀ ಹಾಡಿ ಹೋಗಿಬಿಡುತ್ತೇನೆ’ ಎಂದು ನಿರ್ಧರಿಸಿ ಮೂರೂವರೆ ದಶಕಗಳಿಂದ ಬಚ್ಚಿಟ್ಟಿದ್ದ ಶ್ರೀನಿವಾಸನ್ನ ರಿವಾಲ್ವರನ್ನು ಹೊರತೆಗೆದೆ. ಗುಂಡುಗಳು ಇದ್ದವು, ಕೆಲಸ ಮಾಡುತ್ತದೆ ಎಂಬ ವಿಶ್ವಾಸ ಬಂತು.
ಆದರೆ ಅವನ ಮನೆಗೆ ಹೋದಾಗ ಆಗಿದ್ದೇ ಬೇರೆ. ಅಲ್ಲಿ ಅವನ ಜತೆಗೆ ಆ ಹುಡುಗಿ ಶಾಂತಿಯನ್ನು ಕಂಡು ನನ್ನ ಮನಸ್ಸು ಸ್ವಲ್ಪ ಬದಲಾಯಿತು. ಇವರನ್ನು ಕೊಲ್ಲುವುದು ಬೇಡ ಎನಿಸಿ ಇಬ್ಬರಿಗೂ ಇನ್ನಿಲ್ಲದಂತೆ ತಿಳಿಹೇಳಿದೆ. ನನ್ನ ಯಾವ ಬುದ್ಧಿಮಾತಿಗೂ ಅವರು ಬಗ್ಗಲಿಲ್ಲ. `’ಆ ಪತ್ರಗಳನ್ನು ನನಗೆ ಕೊಟ್ಟುಬಿಡಿರೆಂದು, ನಾನು ನಿಮ್ಮನ್ನು ಪೊಲೀಸರಿಗೆ ಹಿಡಿದುಕೊಡುವುದಿಲ್ಲವೆಂದು” ಹೇಳಿದೆ. ಇಬ್ಬರೂ ನನ್ನನ್ನು ಹುಚ್ಚನೆಂಬಂತೆ ನೋಡಿ ಅಪಹಾಸ್ಯ ಮಾಡಿ ನಕ್ಕರು. ಅಲ್ಲದೆ, ಆ ಯುವತಿ ಶಾಂತಿ ಬಂದು ನನ್ನ ಹಿಂದೆ ನಿಂತು ನನ್ನ ಕೈಗಳನ್ನು ಕಟ್ಟಿಹಾಕುವೆನೆಂದು ಬೆದರಿಸಿದಾಗ, ನಾನು ಅವಳ ಹಿಡಿತದಿಂದ ಬಿಡಿಸಿಕೊಂಡೆ. ಮತ್ತದೇ ಹಳೇ ರೋಷ ನನ್ನ ಮನದಲ್ಲಿ ಉಕ್ಕಿತ್ತು. ಸರ್ರನೆ ರಿವಾಲ್ವರ್ ತೆಗೆದು ಜಾನಿಯನ್ನು ಹತ್ತಿರದಿಂದಲೇ ತಲೆಗೆ ಗುಂಡಿಟ್ಟು ಮುಗಿಸಿಬಿಟ್ಟೆ. ತಪ್ಪಿಸಿಕೊಂಡು ಕಿಚನ್ಗೆ ಓಡಿಹೋದ ಶಾಂತಿಯನ್ನೂ ಬಿಡಲಿಲ್ಲ, ಅವಳನ್ನೂ ಅಲ್ಲೇ ಕೊಂದುಬಿಟ್ಟೆ. ಕೊನೆಗೂ ನನಗೆ ಆ ಬ್ಲ್ಯಾಕ್ಮೇಲ್ಗಾಗಿ ಬಳಸುತ್ತಿದ್ದ ಪತ್ರಗಳು ಸಿಗಲೇ ಇಲ್ಲ. ನನ್ನ ಎಲ್ಲ ಪ್ರಯತ್ನಗಳು ವಿಫಲವಾಗಿದ್ದವು. ನಾನು ಸೋತೆನೆಂದು ನನಗೆ ಅರಿವಾಯಿತು.
ಇನ್ನು ಆ ಪತ್ತೇದಾರ ಮತ್ತು ಆತನ ಜತೆಗಾತಿ ಲಾಯರ್ ಲೂಸಿ ಮಿಕ್ಕೆಲ್ಲವನ್ನು ಪತ್ತೆಹಚ್ಚಿ ರಾಮನ್ನನ್ನೂ ಕರೆದುಕೊಂಡು ಇಲ್ಲಿಗೆ ಬಂದೇ ಬರುತ್ತಾರೆ. ರಾಮನ್ಗೆ ನನ್ನನ್ನು ಅರೆಸ್ಟ್ ಮಾಡಲು ಮನಸ್ಸು, ಧೈರ್ಯ ಇರುವುದಿಲ್ಲ. ತಾನೂ ಸಹಾ ಜಾನಿಗೆ ರಹಸ್ಯ ಬಾಯಿಬಿಟ್ಟುದರಲ್ಲಿ ಶಾಮೀಲಿದ್ದೆನಲ್ಲಾ ಎಂದು ಅಳುಕು ಬರುತ್ತದೆ.
ಇನ್ನು ನಾನು ಬದುಕಿದ್ದರೆ ಎಲ್ಲರಿಗೂ ತೊಂದರೆಯೇ ಹೆಚ್ಚು. ನನಗೂ ಈ ಜೀವನ ಸಾಕು ಸಾಕಾಗಿದೆ. ಕರ್ಪೂರಿನದಿಯ ಬಳಿ ಸೂರ್ಯಾಸ್ತ ನೋಡುವಾಗಲೆಲ್ಲಾ ಆ ದಿಗಂತದಲ್ಲಿ ಒಮ್ಮೆ ಮುಳುಗಿ ಹೋಗಬೇಕೆಂಬ ಯೋಚನೆ ಬರುತ್ತಿರುತ್ತದೆ. ನನ್ನ ಮಗಳು ಮಾಡುತ್ತಿದ್ದ ಪೆಯಿಂಟಿಂಗ್, ಅವರ ಪ್ರೇಮ, ಆ ಯುವಕನ ಕೊಲೆ ಎಲ್ಲಾ ಅಲ್ಲಿಯೇ ನಡೆದದ್ದು. ನಾನು ಈ ರಿವಾಲ್ವರನ್ನು ತೆಗೆದುಕೊಂಡು ಅಲ್ಲಿಗೆ ಹೋಗುತ್ತಿದ್ದೇನೆ. ನನ್ನೊಂದಿಗೆ ಅದೂ ಕಾಣೆಯಾಗಿಬಿಟ್ಟರೆ ಈ ಪ್ರಕರಣವೆಲ್ಲಾ ಸುಖಾಂತ್ಯವಾಗುತ್ತದೆ ಎನಿಸುತ್ತಿದೆ. ಇನ್ನು ಬೇರೆ ಯಾವ ದಾರಿಯೂ ಇಲ್ಲ. ಈ ಮುದುಕನನ್ನು ಸಾಧ್ಯವಾದರೆ ಕ್ಷಮಿಸಿಬಿಡಿ. ರಚನಾ-ರಾಮನ್, ನೀವೆಲ್ಲಾ ಒಂದೇ ಸಂಸಾರದಂತೆ ಸುಖವಾಗಿದ್ದರೆ ಸಾಕು.
ಮಾಧವನ್ ನಂಬೂದರಿ
ನನಗೆ ಎರಡು ಕ್ಷಣ ಇದೆಲ್ಲವನ್ನು ಅರಗಿಸಿಕೊಳ್ಳಲೂ ಸಮಯವಿರಲಿಲ್ಲ.
ನಾನು ಅಕ್ಕಪಕ್ಕದಲ್ಲಿ ನೋಡಿದೆ. ಆತ ಕುಡಿದಿದ್ದ ಹಾಲಿನ ಲೋಟ ಮೇಜಿನ ಮೇಲೆಯೆ ಇನ್ನೂ ಬೆಚ್ಚಗಿತ್ತು. ಹಾಗಾದರೆ ಅವರು ಮನೆಯಿಂದ ಹೊರಟು ಜಾಸ್ತಿ ಸಮಯವಾಗಿರಲಾರದು!
ಅವರನ್ನು ಆತ್ಮಹತ್ಯೆಯಿಂದ ರಕ್ಷಿಸಬೇಕೆಂದು ನನ್ನ ಮನಸ್ಸಾಕ್ಷಿ ನುಡಿಯುತಿತ್ತು. ಮೇಜಿನ ಮೇಲೆಯೆ ಆ ಪತ್ರವನ್ನು ಬಿಟ್ಟು ಹುಚ್ಚನಂತೆ ವೇಗವಾಗಿ ಹೊರಕ್ಕೆ ಓಡಿದೆ. ನದಿಯ ಬದಿಯ ಮರಳಿನಲ್ಲಿ ಕಾಲುಗಳು ಕುಸಿಯುತ್ತಿದ್ದರೂ ಗಮನಿಸದೇ ದಾಪುಗಾಲು ಹಾಕುತ್ತಾ ನದಿ ತಲಪಿ ನೋಡಹತ್ತಿದೆ.
ಅದೋ….. ಏರಿಳಿಯುತ್ತಿರುವ ನದಿಯ ಅಲೆಗಳ ನಡುವೆ ಅವರು ಎದ್ದುಬಿದ್ದು ನಡೆದುಹೋಗುತ್ತಿರುವ ದೃಶ್ಯ ಕಾಣಿಸಿತು. ತಡಮಾಡದೆ ನದಿಗೆ ಧುಮುಕಿದೆ. ಯಾವಾಗ ನಡೆಯುವುದನ್ನು ನಿಲ್ಲಿಸಿದೆನೋ, ಈಜಹತ್ತಿದ್ದೆನೋ ನನಗೇ ಗೊತ್ತಿಲ್ಲ. ನನ್ನ ಕಣ್ಮುಂದೆ ದೂರದೂರಕ್ಕೆ ಕೊಚ್ಚಿಕೊಂಡು ಹೋಗುತ್ತಿರುವ ನಂಬೂದರಿಯ ಆಕೃತಿ ಕಾಣಿಸಿತು. ಅದರ ಮೇಲೆ ಮಾತ್ರ ನನ್ನ ನಿಗಾ ಇತ್ತು.
ಒಮ್ಮೆ ಹಿಂದೆ ತಿರುಗಿ ನೋಡಿದಾಗ ಲೂಸಿ-ರಚನಾ-ರಾಮನ್ ದಡಕ್ಕೆ ಓಡಿ ಬರುತ್ತಿರುವುದು ಕಂಡಿತು.
ನಾನು ಏದುಸಿರುಬಿಡುತ್ತಾ ವೇಗವಾಗಿ ನಂಬೂದರಿಯ ಅಕೃತಿಯತ್ತ ಈಜುತ್ತಿದ್ದೆ. ನದಿಯ ಅಲೆಗಳ ಭೋರ್ಗರೆತ ಹೆಚ್ಚುತ್ತಿದ್ದು ನಾವು ಸಮುದ್ರದ ಸಂಗಮದತ್ತ ಸಾಗುತ್ತಿದ್ದೇವೆಂಬುದನ್ನು ನೆನಪಿಸುತ್ತಿತ್ತು. ನೀರು ಎದೆಮಟ್ಟ ಮುಟ್ಟಿ ಅಲೆಗಳ ಸೆಳೆತ ಭಯಂಕರವಾಗಿತ್ತು.
ಆಗೊಮ್ಮೆ ಸ್ವಲ್ಪ ನನ್ನ ಮಾತು ಕೇಳಲು ಆತನಿಗೆ ಕೊನೆಯ ಅವಕಾಶ ಇದೆ ಎನಿಸಿದಾಗ, ನಾನೇ ಎದೆ ಮಟ್ಟದ ನೀರಿನಲ್ಲಿ ನಿಂತು ಆತನತ್ತ ಅರಚಿದೆ: “ನಿಲ್ಲಿ ಸಾರ್, ಮುಂದೆ ಹೋಗಬೇಡಿ, ನಾನು ನಿಮ್ಮನ್ನು ರಕ್ಷಿಸುತ್ತೇನೆ. ಅಲ್ಲೆ ನಿಲ್ಲಿ ಪ್ಲೀಸ್.
ನನ್ನ ಧ್ವನಿ ಆ ಅಲೆಗಳ ಬೊಬ್ಬಿರಿಯುವ ಸದ್ದಿನಲ್ಲಿಯೂ ಅವರ ಕಿವಿಮುಟ್ಟಿರಲು ಸಾಧ್ಯ. ಅದಕ್ಕೇ ಆತ ಮೊದಲಬಾರಿಗೆ ಹಿಂತಿರುಗಿ ನನ್ನನ್ನು ನೋಡಿದರು. ಅವರ ಕಂಗಳಲ್ಲಿ ಅದೇನೋ ಅಲೌಕಿಕ ಶಾಂತಿಯಿದ್ದಂತೆ ನನಗೆ ಭಾಸವಾಯಿತು. ಆದರೆ ಮರುಕ್ಷಣವೇ ಇನ್ನೊಂದು ದೊಡ್ಡ ಅಲೆ ಏರಿ ಬಂದು ನಂಬೂದರಿಯವರನ್ನು ಪೂರ್ಣವಾಗಿ ತನ್ನ ಆಳಕ್ಕೆ ಸೆಳೆದುಕೊಂಡಿತು.
ನಾನು ನಿರಾಸೆಯಿಂದ “ಓಹ್….. ಹ್…..!” ಎಂದು ಕೂಗಿದ್ದೆ. ಆದರೆ ಈ ಬಾರಿ ನನ್ನ ದನಿಯನ್ನು ಕೇಳಿಸಿಕೊಳ್ಳುವವರು ಯಾರೂ ಇರಲಿಲ್ಲ. ಸುತ್ತಲೂ ಎಲ್ಲೆಲ್ಲೂ ನೀರು, ಆದರೆ ಮನಸ್ಸು ಮಾತ್ರ ಖಾಲಿಯಾಗಿ ಒಣಗಿತ್ತು.
ದಡಕ್ಕೆ ನಿಧಾನವಾಗಿ ಈಜುತ್ತಾ ವಾಪಸ್ ತಲಪಿದಾಗ ಲೂಸಿ ನನ್ನ ಬಳಿ ಧಾವಿಸಿ ಬಂದು, ನೆನೆದು ತೊಪ್ಪೆಯಾಗಿ ತೂರಾಡುತ್ತಿದ್ದ ನನ್ನನ್ನು ಆಯತಪ್ಪಿ ಬೀಳದಂತೆ ಭದ್ರವಾಗಿ ಹಿಡಿದುಕೊಂಡಳು.
ರಚನಾಳ ಕಣ್ಣಲ್ಲಿ ನೀರಿತ್ತು, ಅಲ್ಲಿಯೂ ಭೋರ್ಗರೆವ ಭಾವನೆಗಳಿದ್ದವು. “ಈ ಕಪ್ಪು ನದಿ ಅಪ್ಪನನ್ನೂ ನುಂಗಿ ಬಿಡ್ತು ಎಂದಳು ಕ್ಷೀಣ ದನಿಯಲ್ಲಿ.
ಆಗ ರಾಮನ್ ಆಕೆಯ ಭುಜವೊತ್ತಿ ಸಂತೈಸಿದರು. “ಮೃದುಲಾ ಮನೆಯಲ್ಲಿ ಕಾಯುತ್ತಿದ್ದಾಳೆ, ಬಾ” ಎಂದರು. ಆಕೆ ಕಣ್ಣೊರೆಸಿಕೊಂಡು ಪತಿಯ ಮುಖ ನೋಡಿದರು. ಕಂಗಳಿಂದ ದುಃಖದ ಕಾರ್ಮುಗಿಲು ಸರಿದು ಹೊಳಪಾಯಿತೋ ಎನಿಸಿತು. ಮೃದುಲಾ ಮತ್ತು ಫರ್ನಾಂಡೆಸ್ ಈಗ ನಂಬೂದರಿ ಮನೆಯಲ್ಲೇ ನಮಗಾಗಿ ಕಾಯುತ್ತಿದ್ದರು. ಅವರಿಗೋ ಈಗ ಎಲ್ಲಾ ಒಂದೊಂದೇ ತಿಳಿಯಾಗುತ್ತಿತ್ತು. ಅವರ ಮನದ ಭಾವನೆಗಳೂ, ಅಭಿಪ್ರಾಯಗಳೂ ಇನ್ನೂ ಹಸಿಯಾಗಿದ್ದವು. ಹಾಗಾಗಿ ಮೂಕವಿಸ್ಮಿತರಾಗಿದ್ದರು.
ಫರ್ನಾಂಡೆಸ್ ನನ್ನ ಕೈ ಒತ್ತಿ ಕಣ್ಣಲ್ಲಿಯೇ ತಮ್ಮ ಕೃತಜ್ಞತೆಯನ್ನು ಸೂಚಿಸುತ್ತಿದ್ದವರು: “ನೀವು ನಾವಂದುಕೊಂಡಿದ್ದಿದ್ದಕ್ಕಿಂತ ಹೆಚ್ಚು ಚೆನ್ನಾಗಿ ನಿಮ್ಮ ಕೆಲಸ ಮಾಡಿಕೊಟ್ಟಿರಿ. ಪ್ರಾಣವನ್ನೂ ಲೆಕ್ಕಿಸದೆ ಕರ್ತವ್ಯ ಮಾಡಿದಿರಿ. ಬಹಳ ಚತುರರಪ್ಪಾ ನೀವು” ಎಂದರು.
ನಾನು ಪ್ರತ್ಯುತ್ತರವಾಗಿ ಜೊರಾಗಿ ನಕ್ಕೆ: “ಇದೇ ಮೊದಲ ಬಾರಿಗೆ ಯಾವ ಅಪರಾಧಿಯನ್ನೂ ಹಿಡಿಯದೆಯೇ ಕೇಸ್ ಯಶಸ್ವಿಯಾಗಿ ಮುಗಿದುಹೋಗಿದ್ದು” ಎಂದೆ. ರಚನಾಳನ್ನು ಅಪ್ಪಿಕೊಂಡಿದ್ದ ಮೃದುಲಾ, ಇತ್ತ ಬಂದು ನನ್ನ ಮತ್ತು ಲೂಸಿಯ ಕೈ ಕುಲುಕಿದರು. “ನಮಗೆ ನಮ್ಮ ಸಂಸಾರವನ್ನೇ ಒಂದು ಮಾಡಿಕೊಟ್ಟಿರಿ. ನಿಜವಾಗಿಯೂ ಇದೇ ‘ಸುಂದರ ಸಂಸಾರ’, ನನ್ನ ಸೀರಿಯಲ್ ಅಲ್ಲಾ” ಎಂದರು.
“ವಿಜಯ್, ನಿಮಗೆ ಇದಕ್ಕಾಗಿ ಒಂದು ದೊಡ್ಡ ಬೋನಸ್ ಕೊಡಿಸುತ್ತೇನೆ, ಊರಿಗೆ ವಾಪಸ್ ಹೋದಮೇಲೆ” ಎಂದರು ಫರ್ನಾಂಡೆಸ್. ಶ್ರೀಮಂತ ಲಾಯರಿಗೆ ಈ ಕೇಸಿಗೆ ನಾ ಪಡೆದ ಫೀಸ್ ಕಳಪೆಯೆನಿಸಿರಬೇಕು!
“ದೊಡ್ಡ ಬೋನಸ್ ನನಗೆ ಇಲ್ಲಿಗೆ ಬಂದಾಗಲೇ ಸಿಕ್ಕಿತು, ಸರ್” ಎಂದುಬಿಟ್ಟೆ.
ಫರ್ನಾಂಡೆಸ್ಗೆ ಅರ್ಥವಾಗಲಿಲ್ಲ. ಕಣ್ಣುಕಣ್ಣು ಬಿಟ್ಟರು. ಆದರೆ ಮೃದುಲಾಗೆ ತಕ್ಷಣ ಅರ್ಥವಾಗಿತ್ತು. “ಗುಡ್ ಚಾಯ್ಸ್” ಎಂದಷ್ಟೆ ಹೇಳಿ ಮುಗುಳ್ನಕ್ಕು ನಮ್ಮಿಬ್ಬರನ್ನೂ ಬಿಟ್ಟು ಮನೆಯವರತ್ತ ನಡೆದರು.
*****
ಮರುದಿನ ಕೆಲವು ಮಹತ್ತ್ವದ ಬೆಳವಣಿಗೆಗಳು ಅಲ್ಲಿದ್ದ ಎಲ್ಲರ ಜೀವನದಲ್ಲೂ ನಡೆದವು.
ಕಮಿಷನರ್ ರಾಮನ್ ಬೆಳಗ್ಗೆಯೇ ರಾಜೀನಾಮೆಯಿತ್ತು ತಮ್ಮ ಕೈಕೆಳಗಿನ ಅಸಿಸ್ಟೆಂಟ್ ಕಮೀಷನರಿಗೆ ತಮ್ಮ ಸ್ಥಾನವನ್ನು ತೆರವುಮಾಡಿಕೊಟ್ಟರು. ತಾವು ಸತ್ಯವನ್ನು ಮುಚ್ಚಿಟ್ಟು ಕೊಲೆ ಅಪರಾಧವನ್ನು ಮಾಡಿದ್ದ ಮಾವನನ್ನು ಅರೆಸ್ಟ್ ಮಾಡದ ಲೋಪಕ್ಕೆ ಮತ್ತು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಜಾನಿಯನ್ನೂ ಗುಪ್ತವಾಗಿಟ್ಟಿದ್ದ ಕಾರಣಗಳಿಗೆ ತಮ್ಮ ಮೇಲೆ ಕೇಸ್ ಜರುಗಿಸುವಂತೆ ವಿನಂತಿಸಿಕೊಂಡರು. ಆಗ ನಾನೂ ಅಲ್ಲೆ ಇದ್ದೆ.
ಬಹಳ ವರ್ಷಗಳಿಂದ ಈ ಪ್ರಾಮಾಣಿಕ ಅಧಿಕಾರಿಯನ್ನು ನೋಡಿದ್ದ ಅವರ ಅಸಿಸ್ಟೆಂಟ್ ನಿರ್ವಿಣಣ್ಣನಾಗಿ ನಗುತ್ತಾ ಹೇಳಿದ್ದು ಇಷ್ಟೆ: ಜಾನಿಯೂ ಇಲ್ಲ; ಅವನನ್ನು ಕೊಲೆ ಮಾಡಿದ ನಂಬೂದರಿಯೂ ಇಲ್ಲ. ಆ ಕೇಸಿನ ದಾಖಲೆಗಳನ್ನು ಕದ್ದ ಶಾಂತಿಯೂ ಇಲ್ಲ. ಕೊಲೆ ಮಾಡಿದ್ದ ಆಯುಧವೂ ಇಲ್ಲ. ಹಾಗಾಗಿ ಈ ಕೇಸಿನಲ್ಲಿ ಯಾವುದೇ ಹುರುಳಿಲ್ಲ… ‘ಓಪನ್ ಎಂಡ್ ಶಟ್’ ಎನ್ನುವಂತೆ ಇದರಲ್ಲಿ ನಿಮ್ಮ ಅಪರಾಧವೇನೂ ಇಲ್ಲ ಎಂದು ಕೇಸ್ ಫೈಲನ್ನು ಪಕ್ಕಕ್ಕಿಟ್ಟನು. ಇನ್ನು ಅದು ನಾನು ನೋಡಿದ್ದ ರಿಜಿಸ್ಟ್ರಾರ್ ಆಫೀಸ್ ತರಹದ ಒಂದು ಹಳೇ ಕಡತಗಳ ಕೋಣೆಗೆ ಸೇರಿ ಬೆಚ್ಚಗೆ ಮಲಗಲಿದೆ ಎಂದು ಭಾವಿಸಿದೆ.
ಮೃದುಲಾ ತಾನು ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಅಲ್ಲಿ ಪತ್ರಿಕಾಗೋಷ್ಠಿ ನಡೆಸುವೆ, ಕಳಿಸಿಕೊಡಿ ಎಂದು ರಾಮನ್ಗೆ ಕೋರಿದರು. ರಾಜಕೀಯಕ್ಕೆ ಇನ್ನೇನು ಇಳಿದು ನಿರಾಶ್ರಿತರ ಪುನರ್ವಸತಿಯನ್ನೇ ಮುಖ್ಯಭೂಮಿಕೆ ಮಾಡಿಕೊಳ್ಳಬೇಕೆಂದಿದ್ದ ತನಗೆ ಅದರಿಂದ ಲಾಭವೇ ಎಂದರಿತ ರಾಮನ್ ತಕ್ಷಣ ಒಪ್ಪಿದರು.
ಕಿರುತೆರೆಯ ಟಿ.ಆರ್.ಪಿ. ಪ್ರಚಾರ ಮತ್ತು ಜನಪ್ರಿಯತೆಯೇ ಆಧಾರವಾಗಿದ್ದ ಆ ಬಣ್ಣದಲೋಕದಲ್ಲಿ ಇವೆಲ್ಲಾ ಸಹಜವೇ ಆಗಿತ್ತು. ಇದಕ್ಕಿಂತ ಇನ್ನೂ ಸಹಜ ಮತ್ತು ಪ್ರಿಯವಾದ ಘಟನೆಯೆಂದರೆ ಲೂಸಿ ಸ್ವಲ್ಪ ದಿನಗಳ ಕಾಲ ತನ್ನ ಮಾಂಡಿಚೆರ್ರಿ ಆಫೀಸಿನಿಂದ ಹೊರಬಂದು ಬೆಂಗಳೂರಿಗೆ ಶಿಫ್ಟ್ ಆಗಿ ಅಲ್ಲಿ ಮೃದುಲಾ ಮತ್ತು ರಚನಾಗೆ ಸಂಬಂಧಿಸಿದ ಕಾನೂನುಸಹಾಯಗಳನ್ನು ಮಾಡಲೆಂದು ಸ್ವತಃ ಬಹಳ ಬಿಝಿಯಿದ್ದ ಫರ್ನಾಂಡೆಸ್ ಅವಳಿಗೆ ಹೇಳಿದರು. ಅದಕ್ಕೆ ಲೂಸಿ ಒಪ್ಪಲೇ ಬೇಕಾಯಿತು. ಅದೇ, ರೊಟ್ಟಿ ಜಾರಿ ತುಪ್ಪಕ್ಕೆ ಬೀಳಲಿದೆ ಎಂದಿದ್ದೆನಲ್ಲ ಹಾಗೆ!
ಅಂದು ಸಂಜೆ ನಾನಿಳಿದಿದ್ದ ಲಾಡ್ಜಿನ ಬಿಲ್ ತೆತ್ತು, ಕಾರನ್ನು ಬಾಡಿಗೆ ಅಂಗಡಿಗೆ ವಾಪಸ್ ನೀಡಿ ಹೊರಬಂದಾಗ ಸುಯ್ಯನೆ ಲೂಸಿಯ ಹ್ಯುಂಡೈ ಕಾರ್ ನನ್ನ ಪಕ್ಕವೇ ಬಂದು ನಿಂತಿತು. ಕಾರಿನಿಂದ ಹೊರಬಂದ ಲೂಸಿ ನನ್ನ ಕೈಗೆ ಕಾರಿನ ಕೀ ಕೊಟ್ಟು, “ಇಲ್ಲಿಂದ ಬೆಂಗಳೂರಿನ ದಾರಿ ನನಗೆ ಗೊತ್ತಿಲ್ಲವಲ್ಲ…” ಎಂದು ಚೇಷ್ಟೆಯ ದೃಷ್ಟಿ ಬೀರುತ್ತಾ ನುಡಿದಳು.
ನಾನು ಕಾರ್ ಹತ್ತಿದೆ, ನನ್ನ ಕಂಕುಳಲ್ಲಿ ಕೊರೆಯುತ್ತಿದ್ದ ರಿವಾಲ್ವರ್ ಜತೆಗೆ ಹೋಲ್ಡರನ್ನೂ ಹಿಂದಿನ ಸೀಟಿನಲ್ಲಿ ನಮ್ಮ ಬ್ಯಾಗುಗಳ ನಡುವೆ ಎಸೆದೆ, ಸದ್ಯದಲ್ಲಿ ಅದಕ್ಕೆ ಕೆಲಸವಿರಲಾರದು ಎಂದು. ಕಾರ್ ಸ್ಟಾರ್ಟ್ ಮಾಡುತ್ತ, “ಲೂಸಿ, ದಾರಿ ಗೊತ್ತಿಲ್ಲವೆನ್ನುತ್ತೀಯಲ್ಲ ಅಲ್ಲಿ ಎಲ್ಲಿ ಇಳಿದುಕೊಳ್ಳುತ್ತೀಯಾ; ಯಾರ ಜತೆ ಇರುತ್ತೀಯಾ?” ಎಂದೆ ಮುಗ್ಧನಂತೆ. ನನಗೆ ಬೇಕಿದ್ದ ಉತ್ತರವೇ ಬರುತ್ತದೆಯೇ ಎಂದು ನಿರೀಕ್ಷಿಸುತ್ತಾ.
ಲೂಸಿ ಭುಜ ಕುಣಿಸುತ್ತಾ ನಿರಾತಂಕದಿಂದ “ಅದಕ್ಕೇನು? ನನಗೆ ತುಂಬಾ ಹತ್ತಿರದವರೊಬ್ಬರಿದ್ದಾರೆ, ಅವರು ನನಗೆ ಎಲ್ಲಾ ವ್ಯವಸ್ಥೆ ಮಾಡಿಕೊಡುವರು ಎಂದಳು.
ಕಾರ್ ಊರು ಬಿಟ್ಟು ಸೇತುವೆಯತ್ತ ಸಾಗುತ್ತಿದೆ. ನಾನು “ಯಾರು, ಫರ್ನಾಂಡೆಸ್ ಅಂಕಲ್ ತಾನೆ?” ಎಂದೆ ಸ್ಪಷ್ಟೀಕರಣ ಕೇಳುತ್ತ.
ಹೌದು. ಆದರೆ ಅವರು ಹೇಳಿದ ಜಾಗದಲ್ಲೇ ಯಾವಾಗಲೂ ಇರಬೇಕಿಲ್ಲ. ಆಗಾಗ ನಿಮ್ಮನ್ನೂ ಬಂದು ನೋಡುತ್ತಿರಬಹುದು” ಎಂದು ನನ್ನ ಪಕ್ಕೆ ತಿವಿದು, “ಈಗ ತೃಪ್ತಿಯಾಯಿತೆ?” ಎಂದು ತುಂಟಿಯಂತೆ ನಕ್ಕಳು. ಅವಳ ಕೆನ್ನೆಯ ಗುಳಿಗಳಲ್ಲಿ ಎರಡು ನಕ್ಷತ್ರಗಳು ಮಿನುಗಿದಂತೆನಿಸಿತು.
ನಾವು ಸೇತುವೆ ಮೇಲೆ ಬಂದಾಗ ಬೆಳದಿಂಗಳು ದಟ್ಟವಾಗಿ ಹಬ್ಬಿ ಕಾರಿನೊಳಗೆ ಇಣುಕಿತ್ತು; ಲೂಸಿಯ ಅಮೃತಶಿಲೆಯಂಥ ಕೈಗಳ ಮೇಲೆ ಹಾಲು ಸುರಿದಂತೆ. ಒಮ್ಮೆ ತಿರುಗಿ ನೋಡಿದಾಗ ಕೆಳಗೆ ಕರ್ಪೂರಿ ನದಿಯ ತೆರೆಗಳ ಮೇಲೆ ಚಂದ್ರಬಿಂಬ ತೇಲುತ್ತಿತ್ತು.
ನಾವು ಮತ್ತೆ ಹಿಂತಿರುಗಿ ನೋಡಲಿಲ್ಲ.
(ಮುಗಿಯಿತು)
Comments are closed.