ಇಲ್ಲಿಯವರೆಗೆ…….
ವಿಜಯ್ ಮತ್ತು ಲೂಸಿಯಾ `ರಚನಾ ಪೈಂಟಿಂಗ್ಸ್ ಶಾಪೀ’ಗೆ ತೆರಳಿದಾಗ ಅಲ್ಲಿ ರಚನಾ ಮತ್ತು ಅವರ ಪತಿ, ಪೊಲೀಸ್ ಕಮಿಷನರ್ ಅವರು ಭೇಟಿಯಾದರು. ದತ್ತಕದ ವಿಚಾರ ಪ್ರಶ್ನಿಸಿದಾಗ ಕಮೀಶನರ್ ಇಬ್ಬರನ್ನೂ ಗದರಿ ಕಳುಹಿಸಿದರು…..
ಲೂಸಿ ಆಫೀಸ್ಗೆ ತೆರಳಿದರೆ, ವಿಜಯ್ ರಚನಾ ಮನೆಯ ಹಿತ್ತಲಲ್ಲಿದ್ದುಕೊಂಡು ಅವರ ಮಾತನ್ನು ಕದ್ದಾಲಿಸಿದಾಗ ರಚನಾಳ ಮಗಳೇ ಮೃದುಲಾ; ಜಾನಿ ಇವರನ್ನೂ ಕೂಡ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ ಎನ್ನುವ ವಿಷಯ ತಿಳಿಯುತ್ತದೆ…..
ಅನಂತರ, ರಚನಾ ತನ್ನ ಮನೆಯಿಂದ ತಂದೆಯ ಮನೆಗೆ ತೆರಳುತ್ತಾಳೆ. ಆಗ ವಿಜಯ್ ಕೂಡ ಹಿಂಬಾಲಿಸಿ ರಚನಾಳ ತಂದೆ ಮಾಧವನ್ ನಂಬೂದರಿ ರಿಟೈರ್ಡ್ ಡಿಸ್ಟ್ರಿಕ್ಟ್ ಕಲೆಕ್ಟರ್ ಎನ್ನುವ ವಿಚಾರವನ್ನು ತಿಳಿದುಕೊಂಡು ಲೂಸಿಯ ಆಫೀಸ್ನತ್ತ ಹೊರಡುತ್ತಾನೆ….
“ಓಹ್, ಹಾಗಾದರೆ ಇದೇ ಏನು ನಂಬೂದರಿ ಕುಟುಂಬದ ರಹಸ್ಯ?” ಲೂಸಿ ಗಾಬರಿಯಿಂದ ನನ್ನತ್ತ ನೋಡಿದಳು.
ನಾನು ಒಪ್ಪಿ ಬಂದ ಕೆಲಸದ ಉದ್ದೇಶ ಎರಡು ಬಗೆಯದ್ದು:
ಮೊದಲಾಗಿ ಮೂಲಭೂತ ಸಮಸ್ಯೆಯಾದ ಮೃದುಲಾರ ಹೆತ್ತ ತಂದೆ-ತಾಯಿಯ ಅನ್ವೇಷಣೆಯಲ್ಲಿ ಅರ್ಧ ಮಾತ್ರ ಯಶಸ್ಸಾಗಿದೆ; ತಾಯಿ ಸಿಕ್ಕಿದ್ದಾರೆ, ಆದರೆ ತಂದೆಯ ಪತ್ತೆಯಾಗಿಲ್ಲ. ಜತೆಗೆ ಈ ಹೆತ್ತ ತಾಯಿ ಬೇರೆ ಮದುವೆಯಾಗಿ, ಕಮೀಶನರ್ರವರ ಪತ್ನಿಯಾಗಿದ್ದೂ, ಜಾನಿಯಂಥವನ ಕಪಿಮುಷ್ಟಿಯಲ್ಲಿ ಸಿಕ್ಕಿಬಿದ್ದು ಅವನ ಬಾಯ್ಮುಚ್ಚಲು ಹಣ ತೆರುತ್ತಿದ್ದಾರೆ. ಕಮಿಶನರ್ ಮತ್ತು ರಚನಾ ಇಬ್ಬರೂ ಈ ಹಳೇ ರಹಸ್ಯವನ್ನು ಯಾವ ಬೆಲೆ ತೆತ್ತಾದರೂ ಮುಚ್ಚಿಡುವ ಯತ್ನದಲ್ಲಿದ್ದಾರೆ ಎನ್ನುವುದು ಸ್ಪಷ್ಟ. ಅದಕ್ಕೇ ಅವರು ನನ್ನನ್ನೂ ಲೂಸಿಯನ್ನೂ ಮುಂದೆ ವಿಚಾರಿಸದಂತೆ ಹೊರಗಟ್ಟಿದ್ದಾರೆ.
ಇನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದವನು ಜಾನಿಯೇ ಎಂದು ಗೊತ್ತಾದರೂ ನಾನು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಏಕೆಂದರೆ ನನ್ನ ಕಕ್ಷಿದಾರ ಮೃದುಲಾ, ಲಾಯರ್ ಫೆರ್ನಾಂಡೆಸ್ ಸದ್ಯಕ್ಕಂತೂ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ.
ಅಂದರೆ ಈ ಸಮಸ್ಯೆಯಲ್ಲಿ ಇನ್ನೂ ಒಂದು ತಿಳಿಯದ ಮುಖವಿದೆ. ಇದು ಬರೇ ಅನೈತಿಕವಾಗಿ ಜನಿಸಿದ ಮಗುವನ್ನು ದತ್ತು ಪಡೆದ ಬ್ಲ್ಯಾಕ್ಮೇಲ್ ಕೇಸಿನಲ್ಲೇ ಅಂತ್ಯವಾಗುವಂತೆ ಕಾಣುತ್ತಿಲ್ಲ. ಇನ್ನೇನೋ ಅಡಗಿದೆ; ಬೆಳಕಿಗೆ ಬಂದಿಲ್ಲ. ಇನ್ನು ಕಮೀಶನರ್ ಈಗ ತಾನೆ ತಮ್ಮ ಪತ್ನಿಗೆ ಹೇಳಿದಂತೆ ಅವರೇ ಜಾನಿಯ ಮೇಲೆ ಏನಾದರೂ ಕ್ರಮ ತೆಗೆದುಕೊಂಡರೆ ಮಾತ್ರ ಆ ಕಳೆದುಹೋಗಿರುವ ಮೃದುಲಾರ ತಂದೆಯ ಬಗ್ಗೆ ಬೆಳಕು ಚೆಲ್ಲುವುದು!
ನಾನು ಈ ರೀತಿ ಹೇಳಿದ್ದೆಲ್ಲ ಕೇಳಿ ಲೂಸಿ ತನ್ನ ಆಫೀಸಿನಲ್ಲಿ ಬಹಳೇ ಅಚ್ಚರಿಪಟ್ಟಳು.
“ವಿಜಯ್, ನನಗನ್ನಿಸುವ ಮಟ್ಟಿಗೆ ನಾವು ಮಾಡಿರುವ ಪ್ರಗತಿ ಆಶಾದಾಯಕವಾಗಿಯೇ ಇದೆ. ಮುಂದೇನಾದರೂ ದಾರಿ ಹುಡುಕಿ ರಚನಾ ಸುಮಾರು ೧೬ ವರ್ಷ ತರುಣಿಯಾಗಿದ್ದಾಗ ಯಾವ ಯುವಕನೊಂದಿಗೆ ಸಂಬಂಧ ಬೆಳೆಸಿ ಗರ್ಭಿಣಿಯಾದಳು ತಿಳಿದುಕೊಳ್ಳಬೇಕು. ಅವಳ ಅಪ್ಪ-ಅಮ್ಮ ಸುಲಭವಾಗಿ ಗರ್ಭಪಾತ ಮಾಡಿಸಿ ಅವರು ಈ ಸಮಸ್ಯೆಯನ್ನು ಅಲ್ಲೇ ಕೊನೆಗೊಳಿಸಬಹುದಾಗಿತ್ತು. ಆದರೂ ಏಕೆ ಆಕೆಗೆ ಗರ್ಭಪಾತ ಮಾಡಿಸದೆ, ಮಗು ಹೆತ್ತು ಕದ್ದುಮುಚ್ಚಿ ದತ್ತು ಕೊಡುವಂತೆ ಮಾಡಿದರು ಎಂಬುದು ನನಗೆ ಕಾಡುತ್ತಿದೆ” ಎಂದಳು.
“ಹೌದು, ಲೂಸಿ, ನಾನೂ ಯೋಚಿಸಿ ನೋಡಿದೆ. ಇನ್ನೂ ನಾವು ತಿಳಿದುಕೊಳ್ಳುವುದು, ಬಹಿರಂಗ ಪಡಿಸಬೇಕಾಗಿರುವುದು ಬಹಳವಿದೆ ಎನಿಸುತ್ತಿದೆ. ನನಗೆ ಬಹಳ ಆಯಾಸವಾಗಿದೆ. ನನ್ನ ರೂಮಿನಲ್ಲಿ ಕುಳಿತು ಸ್ವಲ್ಪಹೊತ್ತು ಇದನ್ನೆಲ್ಲ ಒಂದು ವರದಿಯಂತೆ ಬರೆದಿಡುತ್ತೇನೆ. ಬರೆಯುತ್ತಾ ಬರೆಯುತ್ತಾ ಏನಾದರೂ ಜ್ಞಾನೋದಯವಾಗಬಹುದು. ಆದರೆ ನಿನಗೆ ತಕ್ಷಣ ತಿಳಿಸುತ್ತೇನೆ” ಎಂದೆದ್ದೆ.
ಲೂಸಿ ನನ್ನತ್ತ ಅರ್ಥಗರ್ಭಿತವಾಗಿ ಮುಗುಳ್ನಗುತ್ತಾ, “ಯುರೇಕಾ ಅನ್ನುವಂತೆ ಹಾಗೇನಾದರೂ ನಿಮ್ಮ ಜಾಣ ಬುದ್ಧಿಗೆ ಹೊಳೆದರೆ, ನಾಳೆ ಮಧ್ಯಾಹ್ನದ ಊಟದ ಟ್ರೀಟ್ ನನ್ನದು. ಇಲ್ಲಿ ಹೊಸ ಪಂಜಾಬಿ ಡಾಭಾ ಆಗಿದೆ. ಅಲ್ಲಿಗೆ ಹೋಗೋಣ ಎಂದು ಬಹಳ ದಿನದಿಂದ ಯೋಚಿಸುತ್ತಿದ್ದೆ” ಎಂದು ಅಲ್ಲೇ ನಿಲ್ಲಿಸಿದಳು.
“ಓ.ಕೆ. ನೋಡುವ. ಗುಡ್ನೈಟ್” ಎಂದು ಹೊರಗೆ ಬಂದೆ. ನನ್ನ `ಜಾಣ ಬುದ್ಧಿಗೆ’ ಎಂದು ಲೂಸಿ ಅಂದಿದ್ದರಲ್ಲಿ ನನಗೇನೂ ಹೆಮ್ಮೆಯಾಗಲೀ ಸತ್ಯವಾಗಲೀ ಕಾಣಿಸಲಿಲ್ಲ. `ಪೆದ್ದು ಬುದ್ಧಿ’ಗೆ ಎನ್ನಬಹುದಾಗಿತ್ತೇನೋ……
ಅಂದು ರಾತ್ರಿ ನಾನು ಹೇಳಿದಂತೆ ಆ ವರದಿಯನ್ನು ಬರೆಯುತ್ತಾ ಹೋದೆ. ಅರ್ಥಸಿಗದ ಕೊಂಡಿಗಳಿಗೆ ಪ್ರಶ್ನಾರ್ಥಕ ಚಿನ್ಹೆಯಿತ್ತೆ. ಪ್ರಶ್ನೆಗಳನ್ನು ಅಂಡರ್ಲೈನ್ ಮಾಡಿದೆ. ಒಮ್ಮೆ ಬರೆದಿದ್ದೆಲ್ಲವನ್ನೂ ಪರಿಶೀಲನೆ ಮಾಡಿದೆ. ಅದರಲ್ಲಿ ನನಗೆ ಎದ್ದು ಕಾಣಿಸಿದ ಪದವೆಂದರೆ: ಜಾನಿ….. ಜಾನಿ!
ಬೆಳಗ್ಗೆ ಎದ್ದು ಕಾಪಿ-ತಿಂಡಿ ಮುಗಿಸಿ ಮತ್ತೆ ಸೂಲಗಿತ್ತಿ ಸುಬ್ಬಮ್ಮನನ್ನು ಭೇಟಿಮಾಡಿ ನೋಡೋಣವೆನ್ನಿಸಿತು. ಇನ್ನೇನಾದರೂ ಆಕೆ ಒಗಟಿನಂತೆ ಹೇಳಿಯಾಳೆ? ಹೇಳಿದರೂ ಪರವಾಗಿಲ್ಲ; ನಂಬೂದರಿಯ ಕುಟುಂಬದತ್ತ ಮೊದಲು ಬೆರಳು ತೋರಿಸಿದ್ದು ಆಕೆಯೇ ತಾನೆ? ಹಾಗಾಗಿ ಇನ್ನೊಂದು ಬಾರಿ ಆಕೆಯಿದ್ದ ಆಸ್ಪತ್ರೆಗೆ ಹೋಗುವುದರಲ್ಲಿ ನನಗೆ ತಪ್ಪೇನೂ ಕಾಣಿಸಲಿಲ್ಲ. ಅನಂತರ ಜಾನಿಯ ಬಳಿ ಹೋಗಿ ಸ್ವಲ್ಪ ಜಾಣತನ ಮತ್ತು ಒತ್ತಡ ಎರಡೂ ಬೆರೆಸಿ ಡೀಲ್ ಮಾಡಿ ಅವನಿಂದ ಬಾಯಿಬಿಡಿಸಿದರೆ ಎಲ್ಲಾ ತಿಳಿಯಾಗುತ್ತದೆ ಎನಿಸಿತು. ಹೇಗೂ ನನ್ನ ಬಳಿ ನನ್ನ ಕೋಲ್ಟ್ ೦.೪೫ ಪಿಸ್ತೂಲ್ ಭಧ್ರವಾಗಿದೆಯಲ್ಲಾ! ಆದರೆ, ಕಮೀಶನರ್ ಅವನ ಬಳಿ ಹೋಗುವ ಮುಂಚೆ ನಾನು ಅವನಲ್ಲಿಗೆ ಹೋಗಬೇಕು.
ಈ ಬಾರಿ ಮಾನಸಿಕ ಆಸ್ಪತ್ರೆಯಲ್ಲಿ ಮುಖ್ಯ ಡಾಕ್ಟರ್ ಬಳಿ ಲೂಸಿಯ ಹೆಸರು ಹೇಳುವ, ಫೋನ್ ಕಾಲ್ ಮಾಡುವ ಪ್ರಮೇಯ ಬರಲಿಲ್ಲ. ಆ `ಹುಚ್ಚಿಯನ್ನು ನೋಡಲು ಬಂದ ಇವನು ಇನ್ನೊಬ್ಬ ಹುಚ್ಚ’ ಎಂಬಂತೆ ನಗುತ್ತಾ ಡಾಕ್ಟರ್, “ಈ ಸಲ ನಿನ್ನ ಪ್ರಶ್ನೆಯೇನು?” ಎಂದು ನೇರವಾಗಿ ಕೇಳಿದರು.
“ನಾನು ಆಕೆಯನ್ನು ನೋಡಿ ಸ್ವಲ್ಪ ಮಾತನಾಡಿಸಬೇಕಲ್ಲಾ? ಎಂದೆ, ಒಂದು ಚಿಕ್ಕ ಅವಕಾಶ ಸಿಗುತ್ತೆನೋ ಎಂಬಂತೆ.
“ಸಾರಿ. ಆಕೆಗೆ ಮಾನಸಿಕ ಸ್ವಾಸ್ಥ್ಯವಿಲ್ಲದೆ ಆಲ್ಝಿಮರ್ಸ್ ರೋಗದ ತೊಂದರೆ ಕೂಡಾ ಇದೆ. ಸ್ಪಷ್ಟವಾಗಿ ಯಾರ ಬಳಿಯೂ ಮಾತನಾಡಲಾರಳು. ಅವಳ ಮನದಲ್ಲಿ ಬಂದ ಯೋಚನೆಗಳನ್ನು ತುಂಡು ತುಣುಕಾದರೂ ಬರೆಯಬಲ್ಲಳು. ನೀವು ಅಂದಿನಂತೆ ಪ್ರಶ್ನೆ ಬರೆದು ಕೊಡಿ. ಅದೇ ವಾಸಿ. ಆಕೆಗೆ ತೊಂದರೆಯಿಲ್ಲದಿದ್ದರೆ ಉತ್ತರ ಬರೆಯಬಹುದು” ಎಂದರು ಆಕೆಯ ಡಾಕ್ಟರ್.
ಸರಿ, ಒಗಟಿನ ಉತ್ತರವೇ ಗತಿ ಎಂದು ಹೀಗೆ ಒಂದು ಕಾಗದದ ಮೇಲೆ ಬರೆದು ಕೇಳಿದೆ: “ನಂಬೂದರಿ ಮಗಳ ಪ್ರೇಮಿಯಾರು? ಅವನೆಲ್ಲಿದ್ದಾನೆ?”
ಸ್ವಲ್ಪ ಹೊತ್ತಿನಲ್ಲಿ ಉತ್ತರ ಬಂದಿತ್ತು.
ಡಾಕ್ಟರ್-ನರ್ಸ್ ಇಬ್ಬರೂ ಆ ಚೀಟಿಯನ್ನು ತೆಗೆದುಕೊಂಡು ಬಂದು ಸ್ವಲ್ಪ ಅಚ್ಚರಿಯಿಂದ, “ಮಿ. ವಿಜಯ್. ಈ ಸಲ ಆಕೆ ಅಳುತ್ತಾ ಅಳುತ್ತಾ ಈ ಪದಗಳನ್ನು ಬರೆದರು. ಯಾವತ್ತೂ ಎದುರಿಗೇ ಅಷ್ಟು ದುಃಖ ತೋರಿಸಿಲ್ಲ ಆಕೆ. ಇದು ನಿಮಗೇನಾದರೂ ಅರ್ಥವಾಗುತ್ತಾ ನೋಡಿ” ಎನ್ನುತ್ತಾ ಆ ಉತ್ತರವನ್ನು ಕೊಟ್ಟರು.
ನನ್ನ ಪ್ರಶ್ನೆಯ ಕೆಳಗೆ ಬರೆದಿತ್ತು – `ನದಿಯ ಬದಿಯಲ್ಲಿ ಬಣ್ಣದ ಚಿತ್ರಣ. ಮಿಲನ ದೂರದಿಂದ ಬಂದಿದ್ದ, ಇನ್ನೂ ದೂರಕ್ಕೆ ಹೋಗಿಬಿಟ್ಟ.’
ಒಂದು ಕ್ಷಣ ಯೋಚಿಸಿದೆ. ಕೆಲವು ಬಾರಿ ಜೀವನದಲ್ಲಿ ಆರನೆಯ ಇಂದ್ರಿಯಕ್ಕೆ ಕೆಲವು ಅಡಗಿದ್ದ ವಿಚಾರಗಳು ಅರಿವಾಗುತ್ತೆ, ಸ್ಪಷ್ಟವಾಗುತ್ತೆ ಎನ್ನುತ್ತಾರೆ.
ಡಾಕ್ಟರತ್ತ ತಲೆಯೆತ್ತಿ ನೋಡಿದೆ, “ನನಗರ್ಥವಾಯ್ತು, ಥ್ಯಾಂಕ್ಸ್” ಎಂದು ಅಲ್ಲಿಂದ ಹೊರಟೆ. ಅವರು ನಾನು ಹೋಗುವುದನ್ನೇ ವಿಚಿತ್ರವಾಗಿ ಗಮನಿಸುತ್ತಿದ್ದರು.
ನನಗೀಗ ಜಾನಿಯ ಬಳಿ ಹೋಗಿ ಮಾತನಾಡುವುದು ಬಹಳ ಮುಖ್ಯವಾಗಿತ್ತು.
ನೇರವಾಗಿ, ಗುಂಯ್ಗುಡುತ್ತಿದ್ದ ಮನವನ್ನು ನಿಯಂತ್ರಿಸಿಕೊಂಡೇ, ನಾನು ಜಾನಿಯ ಮನೆಯ ಮುಂದೆ ಕಾರ್ ನಿಲ್ಲಿಸಿ ಒಳಹೋದೆ. ಅವನ ಮನೆಯ ಬಾಗಿಲು ಅರೆ ತೆರೆದಿತ್ತು! ತಲೆಯಲ್ಲಿ ಅಪಾಯದ ಗಂಟೆಗಳು ಶುರುವಾಗಿದ್ದವು.
ನನ್ನ ಕೈಯಲ್ಲಿ ತಾನಾಗಿ ತಾನೇ ಕೋಲ್ಟ್ ೦.೪೫ ರಿವಾಲ್ವರ್ ಹೊರಬಂದಿತ್ತು, ಈ ಬಾರಿ ಅದರಲ್ಲಿ ಬುಲೆಟ್ಸ್ ಕೂಡಾ ತುಂಬಿಸಿಕೊಂಡು ಬಂದಿದ್ದೆ.
ಹಾಲಿನ ಮಧ್ಯದಲ್ಲಿ ಕತ್ತಲಲ್ಲಿ ನೆಲದ ಮೇಲೆ ಜಾನಿಯ ಶೂಗಳು ಮಂಕಾಗಿ ಕಾಣಿಸುತ್ತಿದ್ದವು. ಕಾಲಿಗೆ ಪಿಚಪಿಚ ಎಂದು ಏನೋ ಅಂಟಿಕೊಂಡಂತಾಯಿತು. ಗೋಡೆಯಲ್ಲಿ ಲೈಟ್ ಸ್ವಿಚ್ ತಡಕಾಡಿ ಹುಡುಕಿ ಆನ್ ಮಾಡಿದೆ.
ರಕ್ತ ಕಾಲುವೆಯಂತೆ ಅವನಿಂದ ಹರಿದಿತ್ತು. ಹಾಲಿನ ಮಧ್ಯೆ ಜಾನಿ ಬಿದ್ದಿದ್ದ, ತಲೆ ನನ್ನೆಡೆಗೇ ತಿರುಗಿತ್ತು. ಅವನ ಹಣೆಯ ಮಧ್ಯೆಯಲ್ಲಿ ಒಂದು ಗುಂಡು ಒಳಹೊಕ್ಕಿ ಹಿಂಭಾಗದಿಂದ ಹೊರಬಂದದ್ದು ಕಾಣಿಸುತ್ತಿತ್ತು. ಮನೆಯಲ್ಲಿ ಏನೋ ಸುಟ್ಟ ವಾಸನೆ ಬೇರೆ ಬರುತ್ತಿತ್ತು. ಗಾಬರಿಯಾಗಿ ಕಿಚನ್ ಕಡೆಗೆ ಓಡಿದೆ. ನಾನಂದುಕೊಂಡ ಹಾಗೆಯೆ ಅವನ ಗರ್ಲ್ಫ್ರೆಂಡ್ ಶಾಂತಿಯ ಹೆಣ ಅಡುಗೆಮನೆಯಲ್ಲಿ ಬಿದ್ದಿತ್ತು. ಅದೇ ಗುಂಡೇಟು ಹಣೆಯ ಮಧ್ಯೆ. ಉರಿಯುತ್ತಿರುವ ಒಲೆಯಲ್ಲಿ, ಸುಟ್ಟು ಹೋದ ಅಡುಗೆಯಿತ್ತು. ನಾನೇ ಗ್ಯಾಸ್ ಒಲೆ ಆರಿಸಿದೆ. ಹಾಲ್ಗೆ ಬಂದು ವಿಫಲನಾದವನಂತೆ ಅವನ ಸೋಫಾದಲ್ಲಿ ಕುಸಿದು ಕುಳಿತೆ. ನಾನಿನ್ನು ಪೊಲೀಸರನ್ನು ಇಲ್ಲಿಗೆ ಕರೆಯಲೇಬೇಕು ಎಂದು ಗೊತ್ತು. ಆದರೆ ಅಷ್ಟರಲ್ಲಿ ಇಲ್ಲಿ ನಡೆದುದನ್ನು ನಾನು ಅರ್ಥಮಾಡಿಕೊಳ್ಳಲೇಬೇಕು ಎನಿಸಿತು.
ಮೊದಲ ನೋಟಕ್ಕೆ ಅವರ ರಕ್ತ, ಗಾಯದ ಸ್ಥಿತಿ ಎಲ್ಲ ನೋಡಿದರೆ ಇವರಿಬ್ಬರನ್ನೂ ಶೂಟ್ ಮಾಡಿದ್ದು ಹಿಂದಿನ ರಾತ್ರಿಯಿರಬೇಕು. ಕೊಲೆ ಮಾಡಲು ಬಳಸಿದ ರಿವಾಲ್ವರ್ ಅಲ್ಲೆಲ್ಲೂ ಕಾಣುತ್ತಿಲ್ಲ….. ಮತ್ತೆ ನಾನು ಎದ್ದು ಅವನು ಬ್ಲ್ಯಾಕ್ಮೈಲ್ ಮಾಡಲು ಬಳಸುತ್ತಿದ್ದ ಪತ್ರಗಳ ಫೈಲ್ಸ್ ಎಲ್ಲಾ ಹುಡುಕಿದೆ. ಎಲ್ಲವನ್ನೂ ಹರಿದು ಚೂರು ಚೂರು ಮಾಡಿ ನೆಲದ ಮೇಲೆ ಎಸೆದಿದ್ದಾರೆ.
ಆಗ ನನಗೆ ಎಲ್ಲಾ ತಿಳಿಯುತ್ತಾ ಹೋಯಿತು….
ಕೊಲೆಗಾರನಿಗೆ ಬೇಕಾದ ಮೇ ತಿಂಗಳ ಜನ್ಮ ಮತ್ತು ದತ್ತುಪತ್ರಗಳನ್ನು ನಾನು ಅಂದೇ ತೆಗೆದುಕೊಂಡು ಹೋಗಿಬಿಟ್ಟಿದ್ದೆ. ಅದು ಕೊಲೆಗಾರನಿಗೆ ಗೊತ್ತಿರಲಿಲ್ಲ. ಹಾಗಾಗಿ ಅವನೇ ಮೊದಲ ದಿನ ತಾನು ಹೊರಗೆ ಬಂದಾಗ ಕತ್ತಲಲ್ಲಿ ಜಾನಿಯೆಂದು ತಪ್ಪುತಿಳಿದು ಹೊಡೆದಿದ್ದರೂ, ಆ ಪತ್ರಗಳು ಒಳಗೆ ಎಲ್ಲಿಯೂ ಸಿಗದ್ದು ನೋಡಿ ಅವನ್ನು ಜಾನಿಯೇ ಬಚ್ಚಿಟ್ಟಿದ್ದನೆಂದುದು ಊಹಿಸಿದ್ದಿರಬೇಕು. ನನ್ನನ್ನು ಕಂಡು ತನ್ನ ತರಹ ಅವನನ್ನು ಭೇಟಿ ಮಾಡಲು ಬಂದವನೆಂದು ಭಾವಿಸಿ, ಪತ್ರಗಳನ್ನು ನನ್ನ ಜೇಬಿನಲ್ಲಿ ಹುಡುಕದೆಯೇ, ಏನೂ ಹಾನಿ ಮಾಡದೆ ಸುಮ್ಮನೆ ಹೊರಟು ಹೋಗಿದ್ದಾನೆ. ನನ್ನ ಅದೃಷ್ಟ ಮತ್ತು ಆತನ ತಪ್ಪುಗ್ರಹಿಕೆ ಎರಡೂ ಇದೆ! ಇಲ್ಲದಿದ್ದರೆ ಅಂದು ಆ ಪತ್ರಗಳಿಂದ ನಾನು ನನ್ನ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತಿತ್ತೋ ಏನೋ?
ನಾನು ಅದೃಷ್ಟವಂತ, ಸರಿ. ಆದರೆ ಜಾನಿ ಮತ್ತು ಅವನ ಪ್ರಿಯತಮೆ ಶಾಂತಿ ಅಂತಹ ಅದೃಷ್ಟವಂತರಾಗಿರಲಿಲ್ಲ. ಅವರು ತಮ್ಮ ಜಾಲದಲ್ಲಿ ತಾವೇ ಬಲಿಯಾಗಿದ್ದರು.
ಹಾಗಾದರೆ ನನ್ನ ಪ್ರಕಾರ: ನಿನ್ನೆ ರಾತ್ರಿ ಕೊಲೆಗಾರ ಮತ್ತೆ ಇಲ್ಲಿಗೆ ಬಂದು `ಆ ಪತ್ರಗಳು, ದುಡ್ದು ತೆಗೆದುಕೊಂಡ ರಸೀತಿಗಳು ಎಲ್ಲಿ, ಕೊಡು’ ಎಂದು ಜಬರಿಸಿ ಕೇಳಿರಬೇಕು. ಜಾನಿ ತನ್ನ ಬ್ಲ್ಯಾಕ್ಮೈಲ್ ತ್ಯಜಿಸಲು ಒಪ್ಪುವನೆ? ಮಾತಿಗೆ ಮಾತು ಬೆಳೆದಿರಬೇಕು. ಕೊಲೆಗಾರ ತನ್ನನ್ನು ನೋಡಿಬಿಟ್ಟಿದ್ದರಿಂದ ಜಾನಿಯನ್ನೂ ಅಲ್ಲೇ ಅವನ ಜತೆಗಿದ್ದ ಶಾಂತಿಯನ್ನೂ ಕೊಂದುಬಿಟ್ಟಿದ್ದಾನೆ. ಆ ಪತ್ರಗಳನ್ನೆಲ್ಲಾ ಹುಡುಕಿ ಸಿಗದೇ ಹತಾಶನಾಗಿ, ಎಲ್ಲವನ್ನೂ ಹರಿದು ಹಾಕಿ ಹೋಗಿದ್ದಾನೆ.
ಆದರೆ ಯಾರವನು? ನನ್ನ ಮೇಲೆ ದಾಳಿ ಮಾಡಿದ್ದವನೇ ಆದರೂ ನಾನವನನ್ನು ಅಂದು ನೋಡಲಿಕ್ಕಾಗಿರಲಿಲ್ಲ. ನಾನು ಎಚ್ಚರಿಕೆಯಿಂದ ಜಾನಿಯ ಹಣೆಯನ್ನು ಪರೀಕ್ಷಿಸಿದೆ. ಕೋಲ್ಟ್ ೦.೩೮ ಸೈಜಿನ ಬುಲೆಟ್ ಒಳಹೊಕ್ಕಿದೆ ಎಂದೆನಿಸಿತು. ಹತ್ತಿರವೆಲ್ಲೂ ಆ ಗುಂಡಿನ ಖಾಲಿ ಕಾರ್ಟ್ರಿಜ್ ಸಿಕ್ಕಲಿಲ್ಲ. ಕೊಲೆಗಾರನೇ ಆ ಪುರಾವೆಯನ್ನು ತೆಗೆದುಕೊಂಡು ಹೋಗಿದ್ದಾನೆ ಮರೆಯದೇ!
ಈ ಕೋಲ್ಟ್ ೦.೩೮ ರಿವಾಲ್ವರನ್ನು ಪೊಲೀಸರೂ ಉಪಯೋಗಿಸುತ್ತಾರೆ ಎಂದು ನನಗೆ ಗೊತ್ತು. ನನ್ನ ಬಳಿಯಿದ್ದ ಕೋಲ್ಟ್ ೦.೪೫ಗಿಂತ ಸ್ವಲ್ಪ ಚಿಕ್ಕದು ಇದು. ಪೊಲೀಸ್ ಸ್ಟಾಕಿನಲ್ಲಿ ಅವು ಸಿಗುತ್ತವೆ.
ಕಮಿಷನರ್ ಬಳಿಯೂ ಇಂಥ ಒಂದು ರಿವಾಲ್ವರ್ ಇರಲು ಸಾಧ್ಯ.
ನನ್ನ ಮುಖದಲ್ಲಿ ಈ ಯೋಚನೆಯಿಂದ ಬೆವರೊಡೆಯಿತು. ಹಾಗಾದರೆ ಕಮಿಷನರ್ ರಾಮನ್ ಮಾಡಬೇಕೆಂದಿದ್ದ ಉಪಾಯ ಇದೇ ಏನು? ಬೇರೆ ಮಾರ್ಗವಿಲ್ಲದೆ ಬ್ಲ್ಯಾಕ್ಮೈಲ್ನಿಂದ ತಮ್ಮ ಮನೆಯ ಗೌರವ ಕಾಪಾಡಲು ಜಾನಿ ಮತ್ತು ಶಾಂತಿಯನ್ನು ಅವರೇ ಕೊಂದುಬಿಟ್ಟರೆ?
ನನ್ನ ಮೊಬೈಲ್ನಲ್ಲಿ ಆಗಲೇ ಕಮಿಷನರ್ ಫೋನ್ ನಂಬರ್ ದಾಖಲಿಸಿಕೊಂಡಿದ್ದೆ.
ಹೇಗೂ ನಾನು ಈ ಎರಡೂ ಕೊಲೆಗಳ ಬಗ್ಗೆ ಸುದ್ದಿ ಕೊಡಬೇಕಿತ್ತು. ಆ ವಿಷಯವನ್ನು ಪೊಲೀಸ್ ಸ್ಟೇಷನ್ನಿನಲ್ಲಿ ಯಾರಿಗೋ ಹೇಳದೆ ಅವರಿಗೇ ನೇರವಾಗಿ ವರದಿ ಮಾಡಿ ನೋಡಿದೆ.
“ಮೈ ಗಾಡ್. ನಾನಿದನ್ನು ನಿರೀಕ್ಷಿಸಿರಲಿಲ್ಲ. ನಾವು ಈಗಲೆ ಬರುತ್ತೇವೆ. ನೀನೆಲ್ಲೂ ಹೋಗಬೇಡ, ಯಾವ ಸಾಕ್ಷಿ ಪುರಾವೆಯನ್ನೂ ಹಾಳು ಮಾಡಬೇಡ” ಎಂದರು ಕಮಿಷನರ್.
ಅದೆಲ್ಲಾ ನನಗೆ ಚೆನ್ನಾಗಿ ತಿಳಿದ ವಿಷಯ ಎಂದೆ? ನಾನಿದನ್ನು ನಿರೀಕ್ಷಿರಲಿಲ್ಲ ಎಂದರೇನು? ತಾನಲ್ಲ ಎಂದೆ?
ನನ್ನ ಜತೆ ಒತ್ತಾಸೆಯಾಗಿ ಲೂಸಿ ಇದ್ದರೆ ಚೆನ್ನ ಎನಿಸಿತು. ಅವಳಿಗೆ ಫೋನ್ ಮಾಡಿದೆ.
“ಲೂಸಿ, ನೀನು ಡಾಭಾದಲ್ಲಿ ಕೊಡುತ್ತೇನೆಂದ ಟ್ರೀಟ್ ನನಗೆ ಸದ್ಯಕ್ಕೆ ದೊರೆಯುವಂತಿಲ್ಲ. ನಾನು ತಪ್ಪು ಮಾಡಿಬಿಟ್ಟೆನೆ ಎನಿಸುತ್ತೆ. ಜಾನಿಯನ್ನು ಸಮಯಕ್ಕೆ ಸರಿಯಾಗಿ ಎಚ್ಚರಿಸಲಾಗಲಿಲ್ಲ” ಎಂದು ಅವಳಿಗೆ ಜಂಟಿ ಕೊಲೆಯ ಎಲ್ಲಾ ವಿವರಗಳನ್ನೂ ಕೊಟ್ಟೆ.
“ನಾನು ಬರುತ್ತಾ ಇದ್ದೇನೆ, ಅಲ್ಲೇ ಇರಿ. ಎಲ್ಲೂ ಹೋಗಬೇಡಿ” ಎಂದಳು. ಎಂಥ ಸಂದರ್ಭದಲ್ಲೂ ಗಾಬರಿಯಿಲ್ಲ, ಹೆಚ್ಚು ಮಾತಿಲ್ಲ, ಭಲೇ!
“ನಾನೆಲ್ಲಿ ಹೋಗುತ್ತೇನೆ? ಪೊಲೀಸರನ್ನು ನಾನೇ ಕರೆಸಿದ್ದೇನೆ. ಬಾ” ಎಂದೆ.
ಪೊಲೀಸ್ ಕಮಿಷನರೇ ಖುದ್ದಾಗಿ ತಮ್ಮ ಇನ್ಸ್ಪೆಕ್ಟರ್, ಛಾಯಾಗ್ರಾಹಕ, ಬೆರಳಚ್ಚುತಜ್ಞ ಮೊದಲುಗೊಂಡು ತಮ್ಮ ಪೂರ್ತಿತಂಡವನ್ನು ಕರೆತಂದರು. ಅವರು ಹೆಣಗಳ ಚಿತ್ರಗಳು, ಅದರ ನೆಲದ ಮೇಲಿನ ಪೊಸಿಶನ್ನ ಚಿತ್ರ, ಅಲ್ಲಿ ಬಿದ್ದಿದ್ದ ಪತ್ರಗಳ ತುಂಡುಗಳು ಹೀಗೆ ಎಲ್ಲವನ್ನೂ ತಮ್ಮ ಮಹಜರ್ನಲ್ಲಿ ಸೇರಿಸಿದರು.
ಬೆರಳಚ್ಚು ತಜ್ಞರು ನನ್ನ ಕೈಬೆರಳ ಗುರುತನ್ನೂ ಕೇಳಿದರು. ನಾನು ಗ್ಯಾಸ್ ಒಲೆ ಮತ್ತು ಸ್ವಿಚ್ ಬಿಟ್ಟು ಬೇರೇನೂ ಮುಟ್ಟಿಲ್ಲವೆಂದೆ.
ನನ್ನನ್ನೇ ದುರುಗಟ್ಟಿ ನೋಡುತ್ತಿದ್ದ ಕಮಿಷನರ್, “ಕೊಡಿ. ಸಾಬೀತಾಗುವವರೆಗೂ ಎಲ್ಲರ ಮೇಲೂ ಸಂಶಯ ಇರುತ್ತೆ. ನೀವು ಕೊಲೆ ಮಾಡಿಲ್ಲ ಎಂದ ಮೇಲೆ ಏಕೆ ಅನುಮಾನ?” ಎಂದು ನನ್ನನ್ನು ಕೆಣಕಿದರು.
“ನನ್ನ ಬಳಿ ಕೋಲ್ಟ್ ೦.೪೫ ಇದೆ. ಅದರಲ್ಲಿ ಕೊಲೆ ನಡೆದಿಲ್ಲ. ನಿಮ್ಮ ಬಳಿ ೦.೩೮ ಇರಬಹುದಲ್ಲ? ಈ ಕೊಲೆ ಅಂತಾ ಪಿಸ್ತೂಲಿನಲ್ಲೆ ಆಗಿದೆ. ಹಾಗಾದರೆ ನಿಮ್ಮ ಮೇಲೂ ಅನುಮಾನ ಪಡಬಹುದಲ್ಲಾ?” ಎಂದು ಸವಾಲೆಸೆದೆ.
“ನಿನಗೆ ಬೇರೆ ರಿವಾಲ್ವರ್ ಪಡೆದಿರಲು ಸಾಧ್ಯವಿಲ್ಲವೆ? ಬಚ್ಚಿಟ್ಟಿರಬಹುದು ಅದನ್ನು. ನೀನು ಜಾನಿಯ ಬಳಿ ಬಂದು ಹೆದರಿಸಿದ್ದು ಉಂಟು ಎಂದು ಅವನು ನನಗೆ ಹೇಳಿದ್ದ. ನಿನಗೆ ಸಾಕಷ್ಟು ಕೊಲ್ಲುವ ಕಾರಣಗಳಿದ್ದವು, ಅವಕಾಶಗಳೂ ಇದ್ದವು” ಎಂದು ವಾದಿಸಿದರು. ಅವರಿಗೆ ಸದ್ಯಕ್ಕೆ ಯಾರಾದರೂ ಬಲಿಪಶು ಬೇಕಾಗಿತ್ತೇನೋ!
“ನಿಮಗೆ ಅವನು ಗೊತ್ತಿದ್ದ ಎಂದು ಹೇಳುತ್ತೀರಿ. ನಿಮಗೆ ಅವನನ್ನು ಕೊಲ್ಲಲು ನನಗಿಂತ ಹೆಚ್ಚಿನ ಪ್ರಮುಖ ಕಾರಣಗಳಿತ್ತಲ್ಲಾ, ಅದು ನನಗೆ ತಿಳಿಯದು ಎಂದುಕೊಂಡಿದ್ದೀರಾ? ಇದಕ್ಕೆ ಲೂಸಿಯೂ ಸಹಾ ಸಾಕ್ಷಿ” ಎಂದು ಅವರ ಮುಖವನ್ನು ಗಮನಿಸಿದೆ.
“ಶಟಪ್! ಈ ಊರಿನಿಂದಲೇ ನಿಮ್ಮನ್ನು ಓಡಿಸಬೇಕಾಗುತ್ತೆ” ಎಂದು ಬೇರೇನೂ ತೋಚದೆ ಗುಡುಗಿದರು.
ಲೂಸಿಯಿದ್ದವಳು, “ಸರ್, ಕೊಲೆಗೆ ಉಪಯೋಗಿಸಿದ ಗುಂಡುಗಳ ಬ್ಯಾಲಿಸ್ಟಿಕ್ ರಿಪೋರ್ಟ್ ಬರಲಿ, ನಿಮಗನುಮಾನವಿದ್ದರೆ ನಮ್ಮ ಮೇಲೆ ಕೇಸ್ ದಾಖಲಿಸಿ ಕ್ರಮ ತೆಗೆದುಕೊಳ್ಳಿ” ಎಂದು ಶಾಂತವಾಗಿ ಉತ್ತರಿಸಿದಳು.
“ನಮ್ಮ ಮೇಲೆ” ಎಂದಳು, ಇಬ್ಬರನ್ನೂ ಸೇರಿಸಿ! ಲೂಸಿ ತನ್ನನ್ನೂ ನನ್ನನ್ನೂ ಒಂದೇ ಎಂದು ಭಾವಿಸಿದ್ದಾಳೆ! ನನ್ನ ರೊಟ್ಟಿ ಜಾರಿ ತುಪ್ಪಕ್ಕೆ ಬೀಳುತ್ತಾ ಇದೆ!
ನಾವು ಅಲ್ಲಿಂದ ಹೊರಡುವಾಗ, ಕಮಿಷನರ್ ಕಡೆಗೆ ಒಂದು ಕೊನೆಯ ಬಾಣ ಬಿಟ್ಟೆ:
“ಆ ಮೇ ತಿಂಗಳ ಪೇಪರ್ಸ್ ನನ್ನ ಬಳಿಯೇ ಇದ್ದವು. ಕೊಲೆಗಾರ ಅದನ್ನು ಹುಡುಕಿದರೂ ಸಿಕ್ಕಲಿಲ್ಲಾ….
ಕಮಿಷನರ್ ಮುಖವನ್ನು ದಿಟ್ಟಿಸಿ ನೋಡಿದೆ. ಅವರಿಗೆ ನಾನು ಆಡಿದ ಮಾತಿನ ತಲೆ-ಬುಡವೇ ಅರ್ಥವಾಗಲಿಲ್ಲ, ಪಾಪ. ಸ್ವಲ್ಪ ಪ್ರತಿಕ್ರಿಯೆ ಇದ್ದರೂ ನಾನು ಹಿಡಿದುಬಿಡುತ್ತಿದ್ದೆ.
ಕೊಲೆಗಾರ ಅವರಲ್ಲವೇ ಅಲ್ಲ ಹಾಗಾದರೆ!
ಆಫೀಸಿಗೆ ಮರಳುತ್ತಲೇ ಕೂಲಾದ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತ ತಕ್ಷಣ, ಲೂಸಿ “ಕಾಫಿ ಬೇಕಲ್ಲವೇ?” ಎಂದಳು. ಅದಲ್ಲವೇ ಮಾತು!
“ಕಾಫಿ ಕುಡಿದು ಯಾವುದೋ ಯುಗವೇ ಆಯಿತು. ಕೊಡು, ಕೊಡು. ಈ ತೂಕಡಿಸುವ ಮಿದುಳಿಗೆ ಚಾಲನೆ ಕೊಟ್ಟು ಬೇಗ ಈ ಕೇಸಿನ ಪರಿಹಾರ ಹುಡುಕೋಣ ಎಂದೆ.
“ಇನ್ಯಾರಾದರೂ ಪ್ರಾಣ ಬಿಡುವ ಮುಂಚೆ ಅಂತಲೆ?” ಎಂದಳು ಕಾಫಿ ಬಗ್ಗಿಸುತ್ತಾ.
“ಇನ್ಯಾರೋ ಅಲ್ಲ, ಲೂಸಿ, ನನ್ನ ಪ್ರಾಣ!” ಎಂದೆ.
“ವಿಜಯ್, ಶಟಪ್!” ಎಂದಳು ತಕ್ಷಣ ಭಾವೋದ್ವೇಗದಿಂದ.
ಅವಳ ಕಂಗಳನ್ನು ನೋಡಿದೆ. ನನಗೆ ಅಷ್ಟು ಆಶ್ವಾಸನೆ ಸಾಕಾಗಿತ್ತು. ಆದರೂ ಅವಳಿಗೆ ತಿಳಿಹೇಳುವುದು ಆವಶ್ಯಕವಿತ್ತು.
“ಲೂಸಿ, ನಾವಿಲ್ಲಿ ಕಳ್ಳ-ಪೊಲೀಸ್ ಆಟವಾಡುತ್ತಿಲ್ಲ. ಇಲ್ಲಿ ನಿಜಕ್ಕೂ ಅಪಾಯವಿದೆ. ಹಲವು ದಶಕಗಳಿಂದ ಕಾಪಾಡಿಕೊಂಡು ಬಂದ ರಹಸ್ಯವನ್ನು ನಾವು ಬಯಲುಮಾಡಹೊರಟಿದ್ದೇವೆ. ಇದರಲ್ಲಿ ಈ ಊರಿನ ಹಲವು ಮಂದಿಯ ಮಾನ, ಅವಮಾನ, ಗೌರವ, ಹಣ ಎಲ್ಲಾ ಅಡಗಿದೆ. ಆಗಲೇ ಇಬ್ಬರನ್ನು ಯಾರೋ ಕೊಂದಿದ್ದಾರೆ. ಆದರೆ ನನಗೆ ಇಂತಹ ಜೀವನ ಹೊಸದಲ್ಲ. ೦.೪೫ ರಿವಾಲ್ವರ್ ಸದಾ ನನ್ನ ಬಳಿಯಿರುತ್ತೆ…. ಸುಮಾರು ಕೇಸ್ಗಳಲ್ಲಿ ನನಗೆ ಇಂತಹದೇ ಪರಿಸ್ಥಿತಿಗಳು ಎದುರಾಗಿವೆ” ಎಂದೆ ಅವಳನ್ನೇ ಗಮನಿಸುತ್ತಾ.
“ನಿಮ್ಮ ಜತೆ ಇರಬೇಕಾದರೆ ಮುಂದೆ ಇದಕ್ಕೆಲ್ಲ ನಾನು ಹೊಂದಿಕೊಳ್ಳಬೇಕು ಅಂತ ತಾನೆ?” ಎಂದಳು ನನ್ನ ದೃಷ್ಟಿಗೆ ದೃಷ್ಟಿ ಸೇರಿಸುತ್ತಾ ಲೂಸಿ. ಎಂತಾ ಸೂಕ್ಷ್ಮಗ್ರಾಹಿ!
“ಮುಂದಿನ ವಿಷಯವನ್ನು ಈ ಕೇಸ್ ಬಗೆಹರಿಸಿದ ನಂತರ ಯೋಚಿಸೋಣ, ಬಿಡು” ಎಂದು ನಾನು ಮತ್ತೆ ಕೇಸಿನ ತನಿಖೆಗೆ ವಾಪಸ್ ಬರುತ್ತಾ ಕೇಳಿದೆ:
“ಈ ಸುಬ್ಬಮ್ಮ ಬರೆದ ಉತ್ತರ – `ನದಿಯ ಬದಿ ಚಿತ್ರಣ – ಮಿಲನ’ ಅಂದರೇನಿರಬಹುದು ಲೂಸಿ?”
ಲೂಸಿ ಜಾಣ ನಗೆ ಬೀರುತ್ತಾ ತಲೆ ಕುಣಿಸಿದಳು: “ಇದನ್ನು ನೀವಾಗಲೇ ಪತ್ತೆ ಹಚ್ಚಿದ್ದೀರಿ. ವಿಜಯ್, ಸುಮ್ನೆ ನನ್ನನ್ನು ಪರೀಕ್ಷಿಸುತ್ತಿದ್ದೀರಾ? ಇರಲಿ. ಆ ಕಾಲದಲ್ಲಿ ೧೬ ವರ್ಷದ ನವಯುವತಿ ರಚನಾ ನಂಬೂದರಿ ಪೆಯಿಂಟಿಂಗ್ ಹವ್ಯಾಸವಿದ್ದವಳು. ಈ ಕರ್ಪೂರಿ ನದಿಯ ಬದಿಯಲ್ಲಿ ಚಿತ್ರ ಬರೆಯಲು ಹೋಗುತ್ತಿದ್ದಳೆನಿಸುತ್ತೆ. ಅಲ್ಲಿ ಈ ಕೊಳಲೂದುವ ಯುವಕನ ಪರಿಚಯವಾಗಿ ಇಬ್ಬರೂ ಪ್ರೀತಿಸಿರಬೇಕು” ಎನ್ನುವಳು.
“ಕರೆಕ್ಟ್, ಲೂಸಿ! ಆಕೆಯ ಅಂಗಡಿಯಲ್ಲಿದ್ದ ಆ ಕೊಳಲೂದುವ ಯುವಕನ ಪೆಯಿಂಟಿಂಗ್ಸ್ ನೋಡಿದ್ದುದರಿಂದ ನನಗೆ ಆಗಲೇ ಅನುಮಾನವಿತ್ತು” ಎಂದು ಮುಂದೆ ಹೇಳು ಎಂದು ಸೂಚಿಸಿದೆ.
“ಅವನು ಬಡವರ ಮನೆಯ ಹುಡುಗನಿರಬೇಕು, ವಿಜಯ್….. ಆದರೂ ಕಲಾಪ್ರೇಮಿಗಳಾದ ಈ ಯುವ ಜೋಡಿ ಯಾರ ಭಯವೂ ಇಲ್ಲದೇ ಒಂದಾದರು ಅನ್ನಿಸುತ್ತೆ. ರಚನಾ ಅಪ್ರಾಪ್ತ ವಯಸ್ಸಿನಲ್ಲಿ ಬಸುರಾದಳು ಎಂದು ಲೂಸಿ `ಹೇಗಿದೆ ನನ್ನ ಉತ್ತರ’ ಎನ್ನುವಂತೆ ನೋಡುವಳು.
“ಯಾರೋ ಬಡವರ ಹುಡುಗನಲ್ಲ ಲೂಸಿ, ಶ್ರೀಲಂಕಾ ದ್ವೀಪದಿಂದ ಬಂದ ನಿರಾಶ್ರಿತರ ಕ್ಯಾಂಪಿನಲ್ಲಿದ್ದ ಒಬ್ಬ ಬಡ ತಮಿಳು ಯುವಕ ಎಂದು ನಾವು ಊಹಿಸಬಹುದು ಎಂದೆ, ಮುಂದೆ ಯೋಚಿಸು ಎನ್ನುವಂತೆ ನೋಡಿದೆ.
ಲೂಸಿ ನನ್ನ ಪ್ರಶ್ನೋತ್ತರದ ಕಾಗದವನ್ನೆ ದಿಟ್ಟಿಸಿ ನೋಡುತ್ತಿದ್ದಳು. “ದೂರದಿಂದ ಬಂದವನು ಎನ್ನುವುದಕ್ಕೆ ಇದು ಸರಿ ಹೋಗುತ್ತದೆ. ಶ್ರೀಲಂಕಾದಿಂದ! ಕರೆಕ್ಟ್! ಆಮೇಲೆ ಮುಂದೆ ಬರೆದಿರುವುದು: ಇನ್ನೂ ದೂರಕ್ಕೆಹೋಗಿಬಿಟ್ಟ!
“ಹಾಗಂದರೇನು, ವಿಜಯ್?”
ನಾನು ಸುಮ್ಮನೆ ಮುಗುಳ್ನಕ್ಕೆ. “ನೀನೇ ಹೇಳು ಲೂಸಿ, ಜಾಣೆಯಲ್ಲವೆ?” ಎಂದೆ.
ಎರಡು ಕ್ಷಣ ನೀರವ ಮೌನ.
ಲೂಸಿ ಗಾಬರಿಯಿಂದ ನನ್ನತ್ತ ನೋಡಿದಳು: “ಅಂದರೆ ಅವನನ್ನು ಕೊಂದು ಬಿಟ್ಟರೆ ವಿಜಯ್? `ಇನ್ನೂ ದೂರ’ ಎಂದರೆ ವಾಪಸ್ ಬಾರದ ಜಾಗಕ್ಕೆ ಹೋಗಿಬಿಟ್ಟ ಅಂತಲ್ಲವೇ?” ಎಂದು ಕಣ್ಣು ಮಿಟುಗಿಸದೇ ನನ್ನತ್ತ ನೋಡಿ, “ಓಹ್, ಹಾಗಾದರೆ ಇದೇ ಏನು ನಂಬೂದರಿ ಕುಟುಂಬದ ಬಹಿರಂಗವಾಗಬಾರದ ರಹಸ್ಯ?” ಎಂದು ಉಸುರಿದಳು.
ನಾನು ಒಪ್ಪುತ್ತಾ, “ಹೌದು, ಲೂಸಿ….. ಮೃದುಲಾ ಹೆತ್ತಮ್ಮ ರಚನಾ ಮಾತ್ರ ಈಗ ಬದುಕಿದ್ದಾಳೆ. ಅವಳ ತಂದೆಯನ್ನು ಆಗಲೇ ಕೊಂದುಬಿಟ್ಟಿದ್ದರು. ಪಾಪ, ಆ ಸುಬ್ಬಮ್ಮನಿಗೆ ಅಂತಾ ಹುಚ್ಚು ಹಿಡಿದಿಲ್ಲ, ಅಲ್ಲವೆ? ಎಷ್ಟೋ ತಲೆ ಸರಿಯಿರುವವರಿಗಿಂತಾ ಚೆನ್ನಾಗಿಯೇ ಹಳೆಕಥೆಯನ್ನು ಜ್ಞಾಪಿಸಿಕೊಂಡೇ ನಮಗೆ ಉತ್ತರಿಸಿದ್ದಾಳೆ” ಎಂದೆ. ಇದು ಕೇಸಿನ ನಿರ್ಣಾಯಕ ಘಟ್ಟವೆನ್ನುವಂಥ ಸ್ಥಿತಿ ಎಂದು ತೋಚಿತು.
“ಹಾಗಾದರೆ ಆ ಯುವಕನನ್ನು ಕೊಂದಿದ್ದು ಯಾರು? ರಚನಾಗೆ ಗರ್ಭಪಾತ ಮಾಡಿಸಿಲ್ಲ ಯಾಕೆ? ಮತ್ತು ಜಾನಿ-ಶಾಂತಿಯನ್ನು ಯಾರು ಕೊಂದರು?” ಎಂದು ತಲೆಕೆರೆದುಕೊಂಡಳು ಲೂಸಿ.
ನಾನು ಗಡಿಯಾರ ನೋಡಿಕೊಂಡೆ. “ಹನ್ನೊಂದು ಗಂಟೆಯಾಗುತ್ತಿದೆ, ಲೂಸಿ….. ಇದಕ್ಕೆಲ್ಲಾ ರಚನಾ ಮಾತ್ರವೇ ಉತ್ತರಿಸಲು ಸಾಧ್ಯ. ಬಾ, ಹೋಗೋಣಾ ಎಂದೆ.
ಅವಳು ತಲೆಯೆತ್ತಿ ನನ್ನತ್ತ ನೋಡಿ ಬೇರೆ ದಾರಿಯೇ ಇಲ್ಲ ಎಂದು ಅರಿವಾದವಳಂತೆ ತಲೆಯಾಡಿಸಿದಳು.
(ಫೆಬ್ರುವರಿ ೨೦೧೬ರ ಸಂಚಿಕೆಯಲ್ಲಿ ಮುಂದುವರಿಯುವುದು)