ಇಬ್ಬರು ಡಾಕ್ಟರುಗಳು ಅವನ ಹತ್ತಿರಕ್ಕೆ ಬಂದು ಅವನಿಗೆ ಅರವಳಿಕೆ ಮದ್ದನ್ನು (ಕ್ಲೋರೊಫಾರಂ) ಕೊಡಲು ಪ್ರಾರಂಭಿಸಿದರು. ಹಾಹೂ ಕಣ್ಣನ್ನು ತಿರುಗಿಸಿ ಎಲ್ಲರ ಕಡೆಗೂ ನೋಡಿದನು. ಪಕ್ಕದಲ್ಲಿ ಮೇಯರು ನಿಂತಿದ್ದನು. ಅವನಿಗೆ ತಕ್ಷಣ ತಿಳಿಯಿತು, ಇದು ಅಧಿಕಾರಿಗಳ ಅನುಮತಿಯಲ್ಲೇ ನಡೆಯುತ್ತಿರುವ ಕೆಲಸವೆಂದು. ಅವನು ಬಳಿಕ ಕಣ್ಣುಮುಚ್ಚಿಕೊಂಡನು. ಡಾಕ್ಟರು ಅರವಳಿಕೆ ಮದ್ದನ್ನು ಪಂಪ್ ಮಾಡುತ್ತಿದ್ದರು. ಒಬ್ಬ ಡಾಕ್ಟರು ನಾಡಿಯನ್ನು ನೋಡಲು ಪ್ರಾರಂಭಿಸಿದರು. ಕಾಲು ಗಂಟೆ ಕಳೆದ ಬಳಿಕ ಸ್ಮೃತಿಯಿದೆಯೋ ಇಲ್ಲವೋ ಎಂದು ನೋಡಿದರು. ಹಾಹೂ ಕಣ್ಣುಗಳನ್ನು ತೆರೆದನು. ಮತ್ತೆ ಕಾಲು ಗಂಟೆ ಕಳೆಯಿತು. ಸ್ಮೃತಿ ತಪ್ಪಿರಬಹುದೆಂದು ಮತ್ತೆ ನೋಡಿದರು. ಹಾಹೂ ಮತ್ತೆ ಕಣ್ಣು ತೆರೆದನು. ಈ ಕಲಾಪವೆಲ್ಲವೂ ಒಂದು ಗಂಟೆಯ ಕಾಲ ನಡೆಯಿತು. ಹಾಹೂ ಕಣ್ಣು ತೆರೆದು ಮುಚ್ಚುತ್ತಲೇ ಇದ್ದನು.
ಹಿಂದಿನ ಸಂಚಿಕೆಯಲ್ಲಿ…
ಕುತ್ತಿಗೆಯ ತನಕ ಮನುಷ್ಯ, ಕುದುರೆಯ ತಲೆ ಇರುವ ಎಂಟು ಅಡಿ ಎತ್ತರದ ವಿಚಿತ್ರ ಪ್ರಾಣಿಯೊಂದು ಲಂಡನ್ನಿನ ‘ಟ್ರಾಫಲ್ಗರ್ ಸ್ಕ್ವೇರ್ನಲ್ಲಿ ಕಾಣಿಸಿತು. ಅದನ್ನು ಎಲ್ಲ ವ್ಯವಸ್ಥೆಗಳಿರುವ ಮನೆಯಲ್ಲಿ ಬಂಧನದಲ್ಲಿರಿಸಲಾಯಿತು. ಆ ಮೃಗವು ಯೂರೋಪಿನ ಪಂಡಿತರಿಂದ ಜನಸಾಮಾನ್ಯರವರೆಗಿನ ಎಲ್ಲರ ಆಕರ್ಷಣೆಯ ಕೇಂದ್ರವಾಯಿತು.
ವಿವಿಧ ಪ್ರಯಾಸಗಳ ನಂತರ ಲಂಡನ್ ಯುನಿವರ್ಸಿಟಿಯ ಸಂಸ್ಕೃತ ಪಂಡಿತನೊಬ್ಬ ವಿಚಿತ್ರಮೃಗವು ಮಾತನಾಡುತ್ತಿರುವುದು ಸಂಸ್ಕೃತಭಾಷೆ ಎಂದೂ ಜರ್ಮನ್ ಪಂಡಿತನೋರ್ವ ಈ ಮೃಗದ ಹೆಸರು ‘ಹಾಹಾಹೂಹೂ’ ಎಂದೂ, ಈ ವ್ಯಕ್ತಿ ಗಂಧರ್ವನೆಂದೂ, ಹಿಂದುಗಳು ವಿಶ್ವಸಿಸುವ ದೇವತೆಗಳಲ್ಲಿ ಇವನದೊಂದು ಜಾತಿಯೆಂದೂ ತಿಳಿಸಿದ.
ಕಾಂಟರ್ಬರಿಯ ಆರ್ಚ್ಬಿಷಪ್ ಅಗ್ರಾಸನಾಧಿಪತ್ಯದ ರಹಸ್ಯಸಭೆಯು ಮೃಗದ ಪೂರ್ವಾಪರಗಳ ಕುರಿತು ಇನ್ನಷ್ಟು ಸಂಶೋಧನೆ ನಡೆಸಬೇಕು ಹಾಗೂ ಆವರೆಗೆ ಈ ವಿಷಯವನ್ನು ರಹಸ್ಯವಾಗಿಡುವ ಪ್ರಮಾಣವನ್ನು ಕೈಗೊಂಡಿತು.
ಜರ್ಮನಿಯಲ್ಲಿ ಒಬ್ಬ ಹಿರಿಯ ಭಾಷಾಶಾಸ್ತ್ರಜ್ಞನಿದ್ದನು. ಅವನು ಕುದುರೆ ಮಾತನಾಡುತ್ತಿದೆ ಎಂದು ಹೇಳಿದಂದಿನಿಂದ ದೊಡ್ಡ ಸಂದೇಹದಲ್ಲಿದ್ದನು. ಫ್ರಾನ್ಸಿನಲ್ಲಿ ಇನ್ನೊಬ್ಬ ಪ್ರಾಣಿಶಾಸ್ತ್ರಜ್ಞನಿದ್ದನು. ಅವನೂ ಕುದುರೆ ಮಾತನಾಡುತ್ತದೆ ಎಂದಾಗ ಸಂಶಯಗೊAಡಿದ್ದನು. ಇಬ್ಬರಿಗೂ ಆ ವಿಷಯದಲ್ಲಿ ವಿಶ್ವಾಸವಿಲ್ಲವಾಗಿತ್ತು. ಹೇಗೆ ತಾನೇ ಆಗುತ್ತದೆ! ಇಬ್ಬರೂ ದೊಡ್ಡ ಶಾಸ್ತ್ರಜ್ಞಾನಿಗಳಲ್ಲವೆ?
ಮೊದಲು ಅವನಿಗೆ ‘ಮನುಷ್ಯರು ಉಚ್ಚರಿಸುವ ಶಬ್ದಗಳನ್ನು ಉಚ್ಚರಿಸುವುದಕ್ಕೆ, ಮನುಷ್ಯರ ಮುಖದ ಅಂಗಗಳು ಒಂದು ಪ್ರತ್ಯೇಕ ಲಕ್ಷಣದಿಂದ ಸೃಷ್ಟಿಯಾಗಿರುವ ಕಾರಣ ಈ ಶಬ್ದಗಳು ಉಚ್ಚರಿಸಲ್ಪಡುತ್ತವೆ. “ದಂತ್ಯಗಳು” “ತಾಲವ್ಯಗಳು” ಆ ಅವಯವಗಳ ಪರಿಮಾಣ ಮನುಷ್ಯರಿಗೆ ಇರುವಷ್ಟೇ ಇರಬೇಕು. ಇಲ್ಲದಿದ್ದರೆ ಆ ಧ್ವನಿ ಉಚ್ಚರಿಸಲ್ಪಡುವುದಿಲ್ಲ ಎಂಬ ವಿಶ್ವಾಸ ಅವನಿಗೆ ಗಟ್ಟಿಯಾಗಿತ್ತು. ಅವನು ಇನ್ನೊಬ್ಬ ಹಿರಿಯ ಭಾಷಾಶಾಸ್ತ್ರಜ್ಞನ ಜೊತೆಯಲ್ಲಿ ಹೀಗೆ ಹೇಳಿದನು: “ನೋಡ್ರೀ – ಒಬ್ಬರಿಗೆ ತುಟಿಗಳು ದಪ್ಪವಾಗಿದ್ದರೆ, ನಾಲಿಗೆ ದಪ್ಪವಾಗಿದ್ದರೆ, ದವಡೆಗಳು ದಪ್ಪವಾಗಿದ್ದರೆ ಅವರ ಉಚ್ಚಾರಣೆ ಮುದ್ದಾಗಿರುತ್ತದೆ. ಅದೇ ದಪ್ಪತನ ಹೆಚ್ಚಾಗಿದ್ದರೆ ಆ ಧ್ವನಿಯೇ ಹೊರಡುವುದಿಲ್ಲ. ಅದಕ್ಕೇ ಅಲ್ಲವೆ ಪ್ರಾಣಿಗಳು ನಾವು ಉಚ್ಚರಿಸಿದಂತೆ ಉಚ್ಚರಿಸಲಾರವು. ಮೇಲಾಗಿ ಮನುಷ್ಯರ ಕಂಠಧ್ವನಿಯಲ್ಲಿ ಏನೋ ಒಂದು ಮಾರ್ದವವಿದೆ. ಪ್ರಾಣಿಗಳ ಗಂಟಲ ಬಿಲಗಳು ಕಠಿಣವಾದ ಧ್ವನಿಗಳನ್ನು ಹುಟ್ಟಿಸುವುದಕ್ಕೆ ಬರುತ್ತವೆ. ಶಬ್ದರೂಪದಲ್ಲಿ ಬರುವ ಧ್ವನಿಗಳಿಗೆ ಆ ಗಂಟಲ ಬಿಲಗಳು ಪ್ರಯೋಜಕವಲ್ಲ” ಎಂದನು.
ಅವನು ಇನ್ನೂ ಹೀಗೆ ಹೇಳಿದನು: “ಆ ಕುದುರೆಯ ಧ್ವನಿ ದೂರಕ್ಕೆ ಮಾತಿನಂತೆಯೇ ಕೇಳಿಸುತ್ತದೆಯೆಂದೂ, ಹತ್ತಿರದಲ್ಲಿ ದೊಡ್ಡದಾದ ಕೆನೆತದಂತೆ ಕೇಳುತ್ತದೆಯೆಂದೂ ಪತ್ರಿಕೆಗಳಲ್ಲಿ ಓದಿದ್ದೇವಲ್ಲ! ಹತ್ತಿರದಲ್ಲಿ ಕೂಗಿದಂತೆ ಕೇಳಿರುವುದು ಮಾತ್ರವೇ ನಿಜವಾಗಿರುತ್ತದೆ. ಉಳಿದದ್ದೆಲ್ಲ ನಮ್ಮವರು ಕಲ್ಪನೆ ಮಾಡಿಕೊಂಡಿರುತ್ತಾರೆ” ಎನ್ನುವಷ್ಟರಲ್ಲಿ ಆ ಇನ್ನೊಬ್ಬ ಪಂಡಿತನು “ಮತ್ತೆ ಪತ್ರಿಕೆಗಳಲ್ಲಿ ಸಂಭಾಷಣೆಗಳನ್ನೇ ಪ್ರಕಟಿಸುತ್ತಿದ್ದಾರಲ್ಲಾ!” ಎಂದನು. ಮೊದಲಿನವನು “ಅದೆಲ್ಲ ಕಲ್ಪನೆ ಎಂದುಕೊಳ್ಳಬೇಕಾಗುತ್ತದೆ” ಎಂದನು.
ಪ್ರಾಣಿಶಾಸ್ತ್ರಜ್ಞನು ಕೂಡ ನಂಬಲಿಲ್ಲ. ಆತನು ಪ್ರಾಣಿಗಳ ಮೆದುಳನ್ನು ಬಹಳ ಪರಿಶೀಲಿಸಿದ್ದನು. ಆ ಮೆದುಳಿನಲ್ಲಿ ಮನುಷ್ಯಜ್ಞಾನಕ್ಕೆ ಸಂಬಂಧಿಸಿದ ಅಂಶಗಳು ಯಾವುದೂ ಕಾಣಿಸಲಿಲ್ಲ. ಮನುಷ್ಯಜಾತಿಯ ಮೆದುಳೇ ಬೇರೆ, ಪಶುಜಾತಿಯ ಮೆದುಳೇ ಬೇರೆ, ಇವೆರಡಕ್ಕೂ ಸಂಬಂಧವಿಲ್ಲ. ಪಶುಗಳಂತೆ ಮನುಷ್ಯನ ಮೆದುಳು ಇರುವುದಿಲ್ಲ. “ನಾನು ಅನೇಕ ಕೋತಿಗಳ ಮೆದುಳನ್ನು ಕೂಡ ಪರಿಶೀಲಿಸಿದ್ದೇನೆ. ಅವುಗಳ ಮೆದುಳುಗಳು ಮನುಷ್ಯರ ಮೆದುಳಿಗೆ ಸ್ವಲ್ಪ ಹತ್ತಿರದಲ್ಲಿರುತ್ತವೆ. Suppleness (ಮೃದುತ್ವ) ಅವುಗಳ ಮೆದುಳಿನಲ್ಲಿಯೂ ಇದೆ. ಆದರೆ ಕುದುರೆಯ ತಲೆಯಲ್ಲಿ ಅಂತಹ ಜ್ಞಾನವಿರುವಂತಹ ಮೆದುಳನ್ನು ಇಡುವುದಕ್ಕೇ ಅವಕಾಶವಿಲ್ಲ. ಅದರ ತಲೆಯಲ್ಲಿ ಮೆದುಳಿರುವ ಸ್ಥಳದ ಪರಿಮಾಣಕ್ಕೆ, ಮನುಷ್ಯರ ತಲೆಯಲ್ಲಿ ಮೆದುಳಿರುವ ಪ್ರದೇಶದ ಪರಿಮಾಣಕ್ಕೆ ಕೂಡ ಸಂಬಂಧವೇ ಇಲ್ಲ. ನೀವೇ ನೋಡಿದ್ದೀರಲ್ಲ! ಮನುಷ್ಯನ ತಲೆ ಇಷ್ಟು ದೊಡ್ಡ ಬುರುಡೆ. ಆದರೆ ಕುದುರೆಯ ತಲೆಗೆ ಇಷ್ಟು ದೊಡ್ಡ ಬುರುಡೆಯಿಲ್ಲ. ಮನುಷ್ಯರ ತಲೆಗೂ ಇತರ ಪ್ರಾಣಿಗಳ ತಲೆಗೂ ಬಹಳ ವ್ಯತ್ಯಾಸಗಳಿವೆ. ಮನುಷ್ಯರ ತಲೆಯ ಮೇಲೆ ಕೂದಲು ಮೊಳೆಯುತ್ತದೆ, ಬೆಳೆಯುತ್ತದೆ. ಈ ಕೂದಲು ಬೆಳೆಯುವುದಕ್ಕೆ ಬೇಕಾದ ಶಕ್ತಿ ಮನುಷ್ಯನ ಶಿರಸ್ಸಿನಲ್ಲಿದೆ. ಅದರಂತೆಯೇ ಅವನ ಮೆದುಳಿನ ಸ್ವಭಾವ ಕೂಡ. ಪ್ರಾಣಿಗಳ ತಲೆಯ ಮೇಲೆ ಕೂದಲಿರುವುದಿಲ್ಲ. ಕುದುರೆಗೂ, ಸಿಂಹಕ್ಕೂ ಇರುವುದು ಜೂಲೇ ಹೊರತು ಕೂದಲಲ್ಲ. ಆ ಜೂಲು ಕುತ್ತಿಗೆಯ ಮೇಲೆ ಇರುತ್ತದೆ. ಎಷ್ಟು ವಿಧದಲ್ಲಿ ಆಲೋಚಿಸಿದರೂ ಇದು ಅಸಂಭವವಾದ ವಿಷಯ.” ಇದು ಪ್ರಾಣಿಶಾಸ್ತ್ರಜ್ಞನ ವಾದ.
ಈ ಇಬ್ಬರೂ ಲಂಡನ್ನಿಗೆ ಹೊರಟರು. ಭಾಷಾಶಾಸ್ತ್ರಜ್ಞ ಮೊದಲು ಲಂಡನ್ ತಲಪಿ ಉಳಿದ ಪಂಡಿತರನ್ನು ಸೇರಿಕೊಂಡನು. ಅವರಲ್ಲಿ ಪಂಡಿತರು ಬಹಳಷ್ಟು ಜನ ಭಾಷಾಶಾಸ್ತ್ರಜ್ಞರು ಕೂಡ. ಅವರೆಲ್ಲರೂ ಆತ ಹೇಳಿದ ಮಾತನ್ನು ಒಪ್ಪಿಕೊಂಡರು. ಅಂತರಂಗದ ಪ್ರಯತ್ನವೂ ಬಾಹ್ಯಪ್ರಯತ್ನವೂ ಎರಡೂ ನಡೆಯದಿದ್ದರೆ ಶಬ್ದೋಚ್ಚಾರಣೆ ನಡೆಯುವುದಿಲ್ಲ. ಅವುಗಳಲ್ಲಿ ಸ್ಪಷ್ಟವಾದವುಗಳೂ, ಈಷತ್ಸ್ಪೃಷ್ಟವಾದವುಗಳೂ ಇವೆ! ಇದು ಮನುಷ್ಯಜ್ಞಾನದಿಂದ ಕೂಡಿದ ವ್ಯವಹಾರ. ಈ ಹಾಹಾಹೂಹೂವಿಗೆ ಇರುವುದು ಕುದುರೆಯ ತಲೆ. ಈ ವಿಷಯವನ್ನು ವಿಚಾರಿಸಲೇಬೇಕಾದದ್ದು – ಎಂದರು.
ಭಾಷಾಶಾಸ್ತ್ರಜ್ಞ: ನೀವು ಬಹಳ ದಿನಗಳಿಂದ ಆ ಮೃಗದ ಜೊತೆ (ಪಂಡಿತರು ಇಲ್ಲಿ “ಮೃಗದ” ಎಂದು ಹೇಳಬಾರದೆಂದೂ, “ಅವನ ಜೊತೆ” ಎಂದು ಹೇಳಬೇಕೆಂದೂ ಹೇಳಿದರು) ಸರಿ, ಅವನ ಜೊತೆಯಲ್ಲಿ ಮಾತನಾಡಿದ್ದೀರಲ್ಲಾ! ನೀವು ದೂರದಿಂದಲೇ ಮಾತನಾಡಿದ್ದೀರಾ ಅಥವಾ ಹತ್ತಿರಕ್ಕೆ ಹೋಗಿ ಮಾತನಾಡಿದ್ದೀರಾ? ಮಾತನಾಡಿದ್ದರೆ ಆ ಮೃಗದ.. ಅಲ್ಲಲ್ಲ.. ಅವನ ಹಲ್ಲನ್ನಾಗಲಿ ನಾಲಿಗೆಯನ್ನಾಗಲಿ ನೋಡಿದ್ದೀರಾ? ಅವು ಹೇಗೆ ಇವೆ?
ಪಂಡಿತರು: ನಾವು ನೋಡಲಿಲ್ಲ. ಆದರೆ ಅವನ ಬಾಯಿಂದ ಬರುವ ಧ್ವನಿ ದೊಡ್ಡದಾಗಿ ಬರುತ್ತಿದ್ದ ಕಾರಣ ಆ ದೊಡ್ಡ ಧ್ವನಿಯಲ್ಲಿ ನಮಗೆ ಅಕ್ಷರಗಳು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಹಾಗಾಗಿ ನಾವು ಅವನ ಬಾಯಿಗೆ ಧ್ವನಿಯನ್ನು ತಗ್ಗಿಸುವ ಯಂತ್ರವನ್ನು ಹಾಕಿದೆವು. ಅದರಿಂದ ಅವನು ಯಂತ್ರದಲ್ಲಿ ಮಾತನಾಡುತ್ತಿರುವ ಕಾರಣ ನಾವು ಅವನ ದಂತಗಳನ್ನೂ ನಾಲಿಗೆಯನ್ನೂ ಪರಿಶೀಲಿಸಲು ಆಗಲಿಲ್ಲ.
ಭಾಷಾ: ಮತ್ತೆ ಆತ ಆಕಳಿಸುವಾಗಲಾದರೂ ಯಾವತ್ತೂ ನೀವು ನೋಡಲಿಲ್ಲವಾ?
ಪಂಡಿ: ನಾವು ನೋಡಲಿಲ್ಲ. ಆತ ಎರಡು ಮೂರು ಬಾರಿ ಆಕಳಿಸಿದನು. ಆ ಆಕಳಿಕೆ ಅವನು ನಿಂತಿರುವಾಗಲೇ ಆಗುತ್ತಿತ್ತು. ಅವನು ಎಂಟು ಅಡಿ ಎತ್ತರದ ಮನುಷ್ಯ. ನಾವು ತಲೆ ಎತ್ತಿದರೂ ಅವನ ಬಾಯಿ ಕಾಣುತ್ತಿರಲಿಲ್ಲ.
ಭಾಷಾ: ನನ್ನ ಉದ್ದೇಶದಲ್ಲಿ ಇವೆಲ್ಲವೂ ಏನೋ ಒಂದು ಮುಚ್ಚುಮರೆಯಿದ್ದಂತೆ ಇದೆ. ಯಾವ ದೇಶದಲ್ಲಿಯಾದರೂ ಎಂಟು ಅಡಿ ಎತ್ತರದ ಮನುಷ್ಯ ಇದ್ದಿರಬಹುದು. ಅಂತಹವು ಇಂದೂ ಪ್ರಪಂಚದಲ್ಲಿ ಎಷ್ಟೋ ವಿಚಿತ್ರಗಳು ನಡೆಯುತ್ತಿಲ್ಲವೇ? ಇದೂ ಹಾಗೆಯೇ ನಡೆದಿದ್ದರೆ, ಅವನು ಯಾವುದೋ ಯಂತ್ರದಿಂದ ಮಾಡಿದ ಕುದುರೆಯ ತಲೆಬುರುಡೆಯನ್ನು ಧರಿಸಿಕೊಂಡು ಬಂದಿದ್ದಾನೋ ಏನೋ! ನೀವು ಹತ್ತಿರಕ್ಕೆ ಹೋಗಿ ಯಾವತ್ತಾದರೂ ಪರಿಶೀಲಿಸಿ ನೋಡಿದ್ದೀರಾ?
ಪಂಡಿ: ನೋಡಿಲ್ಲ. ಹತ್ತಿರ ಹೋದರೆ ಏನಾದರೂ ಅಪಾಯವಾಗಬಹುದು ಎಂದು ಎಲ್ಲರೂ ಹೇಳಲು ಪ್ರಾರಂಭಿಸಿದರು. ನಮಗೆ ಮಾತ್ರ ಆ ಭಯವೇನೂ ಉಂಟಾಗಲಿಲ್ಲ.
ಭಾಷಾ: ಬಂದ ಬಳಿಕ ಅವನಿಂದ ಯಾರಿಗಾದರೂ ಏನಾದರೂ ಅಪಾಯವುಂಟಾಗಿದೆಯಾ?
ಪಂಡಿ: ಅಂತಹದ್ದೇನೂ ಆಗಿಲ್ಲ.
ಭಾಷಾ: ನೀವು ಕಬ್ಬಿಣದ ಕಟಕಟೆಯ ಒಳಕ್ಕೆ ಹೋಗಿ ಅವನ ಹತ್ತಿರ ಯಾವತ್ತಾದರೂ ಕುಳಿತುಕೊಂಡಿದ್ದೀರಾ?
ಪಂಡಿ: ಕುಳಿತಿದ್ದೇವೆ. ಆಗ ಕೂಡ ಅವನು ನಮಗೇನೂ ಅಪಾಯವನ್ನು ಮಾಡಲಿಲ್ಲ.
ಭಾಷಾ: ಹಾಗಾದರೆ ಅವನು ಸಾಧುವೆಂದಾಯ್ತು. ಅವನಿಂದ ಯಾವುದೇ ಅಪಾಯವಾಗಬಹುದೆಂದು ಶಂಕಿಸುವ ಆವಶ್ಯಕತೆಯಿಲ್ಲ. ನಾವು ಅವನ ಹತ್ತಿರಕ್ಕೆ ಹೋಗೋಣ. ಹೋಗಿ ಬಾಯಿಯನ್ನು ತೆರೆಯಲು ಹೇಳೋಣ. ಆಗ ಪರೀಕ್ಷಿಸೋಣ.
ಪಂಡಿ: ಹಾಗೆ ಹೇಳುವುದು ಮರ್ಯಾದೆಯಲ್ಲ.
ಭಾಷಾ: ನಿಮ್ಮ ಮಾತು ನನಗೆ ಬಹಳ ಹೊಸದಾಗಿದೆ. ಒಬ್ಬ ದೊಡ್ಡ ಮನುಷ್ಯನ ಬಗ್ಗೆ ಮಾತನಾಡಿದಂತೆ ಮಾತನಾಡುತ್ತಿದ್ದೀರಿ, ಇದು ವಿಚಿತ್ರವಾಗಿದೆ. ಮೇಲಾಗಿ ಇದು ಶಾಸ್ತ್ರೀಯವಾದ ವಿಷಯ. ಅವನಿಗೆ ನೀವು ಒಪ್ಪಿಸಿ ಹೇಳಿ. ಶಾಸ್ತ್ರವಿಷಯಕವಾದ ಒಂದು ಯಥಾರ್ಥವನ್ನು ತಿಳಿದುಕೊಳ್ಳುವುದಕ್ಕೋಸ್ಕರ ಜ್ಞಾನವುಳ್ಳ ಎಲ್ಲಾ ಪ್ರಾಣಿಗಳೂ ಏನೇನೋ ಪಾಡು ಪಡಲೇಬೇಕಲ್ಲವೇ! ಮತ್ತೆ ಆತನ ದಂತಗಳು ಕಾಲು ಮೊದಲಾದವು ಕುದುರೆಗೆ ಇದ್ದಂತೆಯೇ ಇದ್ದು ಅವನು ಹೀಗೆ ಮಾತನಾಡಬಲ್ಲವನಾದರೆ, ನಾವು ಲೋಕದಲ್ಲಿರುವ ಎಲ್ಲ ಪ್ರಾಣಿಗಳಿಂದಲೂ ಹೀಗೆ ಮನುಷ್ಯರು ಮಾತನಾಡುವ ಭಾಷೆಯನ್ನು ಮಾತನಾಡಿಸಬಹುದಲ್ಲವೇ!
ಪಂಡಿ: ನಿಜವೇ ಆದರೂ, ಈ ವಿಷಯ ಶಾಸ್ತçವೆಂದೂ ಇದು ಯಥಾರ್ಥವನ್ನು ತಿಳಿಯಲೆಳಸುವ ಸಂಶೋಧನೆಯೆಂದೂ ಎಂದುಕೊಳ್ಳುತ್ತಿದ್ದೇವೆ. ಅವನು ಕೂಡ ಹಾಗೆಯೇ ಅಂದುಕೊಳ್ಳದಿರಬಹುದು! ಅವನ ಮುಖವನ್ನು ನಾವು ಪರಿಶೀಲಿಸಬೇಕೆಂದರೆ ಅವನನ್ನು ಮಲಗಿಕೊಳ್ಳಲು ಹೇಳಬೇಕು. ಬಾಯಿಯನ್ನು ತೆರೆಯಲು ಹೇಳಬೇಕು. ಅವನಿಗೆ ಅದು ಅಗೌರವವೆಂದೆನ್ನಿಸಬಹುದು. ಮೊನ್ನೆ ಒಂದು ವಿಷಯದಲ್ಲಿ ನೋಡಿದ್ದೇನೆ. ಅವನ ಕೈಯಿಂದ ಯಾವುದೋ ಒಂದು ವಸ್ತುವನ್ನು ನಾನು ತೆಗೆದುಕೊಂಡೆ. ಆಗ ಅವನು ಕೋಪದಿಂದ ನೋಡಿದ. ಕೇಳದೇ ತೆಗೆದುಕೊಂಡಿದ್ದೇನೆಂದು, ಅದು ಮರ್ಯಾದೆಯ ಲಕ್ಷಣವಲ್ಲವೆಂದು. ಅಂತಹವನು ಹೀಗೆ ಮಾಡು ಎಂದರೆ ಒಪ್ಪಿಕೊಳ್ಳುವುದಿಲ್ಲ.
ಭಾಷಾ: ಹಾಗಾದರೆ ಅವನಿಗೆ ಅರಿವಳಿಕೆ ಮದ್ದೇ ಮೊದಲಾದ ಯಾವುದಾದರೂ ವಸ್ತುವನ್ನು ಕೊಟ್ಟು ಅವನನ್ನು ನಿದ್ರೆ ಹೋಗಿಸಬೇಕು. ಹಾಗಲ್ಲದೇ ನಮ್ಮ ಸಂಶೋಧನೆಗೆ ಅವಕಾಶವಿರುವುದಿಲ್ಲ.
ಪಂಡಿ: ನಮ್ಮ ಔಷಧಗಳು ಅವನ ಶರೀರದ ಮೇಲೆ ಎಷ್ಟರವರೆಗೆ ಕೆಲಸ ಮಾಡುತ್ತವೆಯೋ ಅದೂ ಸಂದೇಹಗ್ರಸ್ತವಾದ ವಿಷಯವೇ. ಯಾಕೆಂದರೆ ಅವನ ಕೈಗಳ ಕೆಳಗೆ ಹಿಂಭಾಗದಲ್ಲಿ ಎರಡು ಉದ್ದುದ್ದವಾದ ಗಾಯಗಳಿವೆ. ಅವನ್ನು ಗುಣಪಡಿಸಲೆಂದು ಅವನು ನಿದ್ರೆ ಹೋದ ಮೊದಲ ಹದಿನೈದು ದಿನಗಳಲ್ಲಿ ಔಷಧವನ್ನು ಹಾಕಿದ್ದರಂತೆ. ಅವು ಏನೂ ಗುಣವಾಗಲಿಲ್ಲವಂತೆ. ಅವನು ಎಚ್ಚೆತ್ತ ಮೇಲೆ ಆ ಔಷಧವನ್ನೂ ಯಾರೂ ಹಾಕಲಿಲ್ಲ. ಆ ಹುಣ್ಣುಗಳು ಹಾಗೆಯೆ ಇವೆ.
ಅವನು ಹಣ್ಣುಗಳನ್ನು ತಿನ್ನುತ್ತಾನೆಯೆ ಹೊರತು ಯಾಕೆ ತಿನ್ನುತ್ತಾನೆ ಎಂದು ಗೊತ್ತಾಗುವುದಿಲ್ಲ. ಅವನ ಶರೀರ ಯಾವತ್ತೂ ಮಲವಿಸರ್ಜನೆ ಮಾಡುವುದಿಲ್ಲ. ಅವನು ಮೊತ್ತಮೊದಲ ದಿನ ಬೀದಿಯಲ್ಲಿ ಬಿದ್ದುಕೊಂಡಿದ್ದಾಗ ನೋಡಿದ ವೈದ್ಯರು ಅವನ ಹೃದಯವನ್ನೂ ನಾಡಿಯನ್ನೂ ಪರೀಕ್ಷೆ ಮಾಡಿದ್ದರಂತೆ. ಅವುಗಳಲ್ಲಿ ಮನುಷ್ಯರಿಗೆ ಇರುವಂತೆಯೇ ಸ್ಪಂದನೆ ಎಲ್ಲಿಯೂ ಕಾಣಲಿಲ್ಲವಂತೆ. ಕ್ಲೋರೊಫಾರಂ ಹಾಕುವುದಕ್ಕಾದರೂ ಎಲ್ಲಿ ಅವಕಾಶವಿದೆ. ಆ ಕೊಳವೆಯನ್ನು ಮೂಗಿನ ಹತ್ತಿರ ಹಿಡಿದುಕೊಳ್ಳಬೇಕಲ್ಲ! ಹೋಗಿ ಕೇಳಿದರೆ ಒಪ್ಪಿಕೊಳ್ಳುತ್ತಾನೆಂದು ತೋರುತ್ತಿಲ್ಲ. ಕೇಳಿಸಿ ನೋಡೋಣ.
ಭಾಷಾ: ನೀವು ಹೇಳಿದಂತೆಯೇ ಅವನು ಅಷ್ಟು ಮರ್ಯಾದೆಯುಳ್ಳವನೂ ಜ್ಞಾನವೂ ಇರುವವನೂ ಆದರೆ ತಪ್ಪದೇ ಒಪ್ಪಿಕೊಳ್ಳುತ್ತಾನೆ. ಆದರೆ ಅವನ ಭಾಷೆ ನನಗೆ ಬರುವುದಿಲ್ಲ. ಹಾಗಾಗಿ ನೀವು ನನ್ನ ಮಾತನ್ನು ಅವನಿಗೆ ಅವನ ಭಾಷೆಯಲ್ಲಿ ಅನುವಾದ ಮಾಡಿ ಹೇಳಿದರೆ ಅವನು ಒಪ್ಪಿಕೊಳ್ಳುತ್ತಾನೆಂದು ತೋರುತ್ತದೆ. ಮೇಲಾಗಿ ಇದು ಶಾಸ್ತ್ರ (Science), ಯಥಾರ್ಥಾನ್ವೇಷಣೆ (Search after truth).
ಹೀಗೆಂದು ಎಲ್ಲರೂ ಸೇರಿ ಹಾಹೂ ಬಳಿಗೆ ಸಾಗಿದರು. ಆ ಹೊತ್ತಿಗೆ ಹಾಹೂ ಪ್ರಾಣವನ್ನು ಬಿಗಿಹಿಡಿದುಕೊಂಡು ಕುಳಿತಿದ್ದನು. ಆಗ ಆ ಪಂಡಿತನು, ‘ಆ ಕುಳಿತುಕೊಂಡ ಪದ್ಧತಿ ಪದ್ಮಾಸನವೆಂದೂ, ಅವನು ಉಸಿರನ್ನು ಬಿಗಿಹಿಡಿದುಕೊಳ್ಳುವುದು ಪ್ರಾಣಾಯಾಮವೆಂದೂ, ಅವನೇ ತನ್ನ ಬಳಿ ಹೇಳಿದ್ದಾನೆಂದೂ’ ಹೇಳಿದನು. ‘ಈ ರೀತಿಯಲ್ಲಿ ಅವನು ಬಹಳ ದಿನಗಳ ಕೆಳಗೆ ಮರ್ನಾಲ್ಕು ಗಂಟೆಗಳಷ್ಟು ಮಾತ್ರವೇ ಇರುತ್ತಿದ್ದನೆಂದೂ, ಈಗ ಪ್ರತಿದಿನ ಏಳೆಂಟು ಗಂಟೆಗಳಷ್ಟು ಮಾಡುತ್ತಿದ್ದಾನೆಂದೂ’ ಹೇಳಿದನು.
* * *
೬
ಮಾರನೇ ದಿನ ಬೆಳಗ್ಗೆ ಫ್ರೆಂಚ್ ಪ್ರಾಣಿಶಾಸ್ತ್ರಜ್ಞ ಬಂದು ಇಳಿದ, ಭಾಷಾಶಾಸ್ತ್ರಜ್ಞರ ಜೊತೆ ಸೇರಿಕೊಂಡ. ಒಬ್ಬರ ಜೊತೆ ಒಬ್ಬರಿಗೆ ಪರಿಚಯ ಉಂಟಾಯಿತು.
ಪ್ರಾಣಿಶಾಸ್ತ್ರಜ್ಞ: ನಿಮಗೆ ಉಂಟಾದ ಸಂದೇಹವೇನೋ ನನಗೂ ಬಂದಿದೆ. ಪ್ರಾಣಿಗಳ ತಲೆಯಲ್ಲಿರುವ ಮೆದುಳು ಮನುಷ್ಯರಿಗಿರುವಷ್ಟು ಜ್ಞಾನವನ್ನು ಹೊಂದಿರುವುದು ಅಸಂಭವ.
ಭಾಷಾ: ಹೌದು, ನಿಜವೇ. ನಾವು ಶಬ್ದವನ್ನು ಉಚ್ಚರಿಸುವಾಗ ಪ್ರಯತ್ನವನ್ನು ಮಾಡುತ್ತೇವೆ. ಆದರೆ ಆ ಪ್ರಯತ್ನ ನಮಗೆ ತಿಳಿಯದೆಯೇ ಆಗುತ್ತದೆ. ಯಾವ ಶಬ್ದವನ್ನು ಹುಟ್ಟಿಸುವುದಕ್ಕೆ ಎಷ್ಟು ಉಸಿರನ್ನು ನಾಭಿಯಿಂದ ಹುಟ್ಟಿಸಬೇಕೋ ಅದನ್ನು ಕಂಠದಲ್ಲಿ ಎಷ್ಟು ಬಿಗಿ ಹಿಡಿದುಕೊಳ್ಳಬೇಕೋ, ಮುಖಕ್ಕೆ ಬರಲು ಬಿಟ್ಟ.
ಉಸಿರು ತಾಲುವಿಗೋ ದಂತಗಳಿಗೋ ಊರ್ಧ್ವಭಾಗಕ್ಕೋ ಹೆಚ್ಚು ತಾಗಿಸಬೇಕೋ ಕಡಮೆ ತಾಗಿಸಬೇಕೋ ಇವೆಲ್ಲವೂ ನಮ್ಮ ಮೆದುಳಿನಲ್ಲಿರುವ ಜ್ಞಾನದಿಂದ ನಮಗೆ ತಿಳಿಯದೆಯೆ ನಡೆಯುತ್ತಲೇ ಇರುತ್ತವೆ.
ಪಂಡಿ: ಹೌದು. ಇದನ್ನೇ ಸಂಸ್ಕೃತವೈಯಾಕರಣರುಸ್ಪೃಷ್ಟವೆಂದೂ, ಈಷತ್-ಸ್ಪೃಷ್ಟವೆಂದೂ ಸಂವಾದವೆಂದೂ ವಿವಾದವೆಂದೂ ಮೊದಲಾಗಿ ಹಲವು ರೀತಿಯಲ್ಲಿ ಹೇಳುತ್ತಾರೆ.
ಭಾಷಾ: ಅವರು ಏನು ಹೆಸರಿಟ್ಟರೆ ಏನು, ನಡೆಯುವ ಪ್ರಯತ್ನ ಮಾತ್ರ ಅದೇ.
ಪ್ರಾಣಿಶಾ: ಇದಕ್ಕೆಲ್ಲ ಸಂಸ್ಕೃತದಲ್ಲಿ ಹೆಸರುಗಳಿವೆಯಾ?! ಹಾಗಾದರೆ ಆ ಭಾಷಾಶಾಸ್ತ್ರವನ್ನು ಬರೆದವರು ದೊಡ್ಡ ಶಾಸ್ತ್ರಜ್ಞರೇ ಹೌದು!
ಪಂಡಿ: ಅವರೆದುರಲ್ಲಿ ನಾವೆಲ್ಲ ಯಾವ ಮೂಲೆಗಾಗುತ್ತೇವೋ?
ಭಾಷಾ: ಆಗುತ್ತೇವೆಯೋ ಬಿಡುತ್ತೇವೆಯೋ ಅದೆಲ್ಲ ಈಗೇತಕ್ಕೆ. ಆದರೆ ಈ ಪ್ರಯತ್ನಗಳು?
ಪಂಡಿ: ಬಾಹ್ಯಾಭ್ಯಂತರ ಪ್ರಯತ್ನಗಳು. ತಾಲ್ವಾದಿ ಸ್ಥಾನಗಳನ್ನೇ ಬಾಹ್ಯಪ್ರಯತ್ನ ಎಂದು ಹೇಳುತ್ತೇವೆ.
ಪ್ರಾಣಿಶಾ: ನಿಮ್ಮ ಪಾರಿಭಾಷಿಕ ಪದಗಳು ಹಾಗಿರಲಿ. ಆ ಪ್ರಯತ್ನ ಜ್ಞಾನ ಇಲ್ಲದಿದ್ದರೆ ಆಗುವುದಿಲ್ಲ. ಆ ಜ್ಞಾನ ಪ್ರಾಣಿಗಳ ಮೆದುಳಿನಲ್ಲಿರುವುದಿಲ್ಲ.
ಭಾಷಾ: ನಿಮ್ಮ ಶಾಸ್ತ್ರವೂ ನಮ್ಮ ಶಾಸ್ತ್ರವೂ ಎರಡೂ ಎರಡು ಮಾರ್ಗಗಳಲ್ಲಿ ಹೋಗುತ್ತಿವೆ. ಆದರೆ ಇವು ಗುರುತಿಸಿದ ಯಾಥಾರ್ಥ್ಯವಿಷಯ ಮಾತ್ರ ಒಂದೇ.
ಪ್ರಾಣಿಶಾ: ನಿಜವಾಗಿಯೂ ಪ್ರಾಣಿಗಳ ರಕ್ತದಲ್ಲಿ ಮನುಷ್ಯರ ನೆತ್ತರಿನಲ್ಲಿರುವಂತಹ ಉಷ್ಣವಿರುವುದಿಲ್ಲ.
ಪಂಡಿ: ಆ ಸಂಗತಿಗೆ ಇಲ್ಲಿ ಅವಕಾಶವಿಲ್ಲ. ಯಾಕೆಂದರೆ ಹಾಹೂ ಅವರ ದೇಹವೇನೋ ಮನುಷ್ಯರ ದೇಹದಂತೆಯೇ ಇದೆ. ಮನುಷ್ಯದೇಹಕ್ಕಿಂತಲೂ ಹೆಚ್ಚಾಗಿ ಸುಕುಮಾರವಾಗಿಯೇ ಇದೆ. ಮೃದುವಾಗಿಯೂ ಇದೆ. ಮನುಷ್ಯರ ಶರೀರದಲ್ಲಿ ಇರುವ ರಕ್ತದ ಉಷ್ಣತೆ ಐವತ್ತರಷ್ಟಿದ್ದರೆ ಆತನ ಶರೀರದಲ್ಲಿ ನೂರರಷ್ಟಿರುತ್ತದೆ. ಇನ್ನು ನೀವಿಬ್ಬರೂ ಆತನ ಮುಖದ ಅಂಗಗಳನ್ನು ಕುರಿತು ಹಾಗೂ ಮೆದುಳಿನ ಗುಣಗಳನ್ನು ಕುರಿತು ಆಲೋಚಿಸಬಹುದು.
ಭಾಷಾ: ನಿಮಗೆ ಅನಾವಶ್ಯಕವಾಗಿ ಕೋಪ ಬರುತ್ತಿದೆ. ನಾವು ಶಾಸ್ತçವಿಷಯವಾಗಿಯೇ ಚರ್ಚಿಸುತ್ತಿದ್ದೇವೆ. ಆದರೆ ನಿಮ್ಮ ಕುದುರೆಯ ಮುಖದವನಿಗೆ ಅವಮಾನವಾಗುವಂತೇನೂ ಮಾತನಾಡುತ್ತಿಲ್ಲ.
ಪಂಡಿ: ಅಯ್ಯಾ! ಒಂದು ವಿಷಯ. ಅವನು ಮಾತನಾಡುತ್ತಿದ್ದಾನೆ. ಆ ಮಾತನಾಡುವುದು ಸಂಸ್ಕೃತ ಭಾಷೆಯೆಂದು ನನಗೆ ತಿಳಿದಿದೆ. ಆದರೆ ಅವನು ಮಾತನಾಡುವ ಭಾಷೆಯಂತಹ ಭಾಷೆಯನ್ನು ನಾನು ಯಾವ ಸಂಸ್ಕೃತ ಗ್ರಂಥದಲ್ಲಿಯೂ ನೋಡಿಲ್ಲ. ಅಂತಹ ಮನೋಹರವಾದ ಭಾಷೆ ಮಾತನಾಡುತ್ತಾನೆ. ಅವನು ಎಷ್ಟು ದೊಡ್ಡ ಪಂಡಿತನೋ ಗೊತ್ತಾಗಿಲ್ಲ. ಅವನು ಹಾಗೆ ಮಾತನಾಡುತ್ತಾನೆಂದರೆ, ಅವನ ಮುಖದ ಅವಯವಗಳು ಹಾಗೆ ಮಾತನಾಡುವುದಕ್ಕೆ ಅನುಗುಣವಾಗಿ ಇವೆಯೆಂದೇ ಅಲ್ಲವೇ? ಅಂತಹ ಜ್ಞಾನವಿದೆಯೆಂದಾದರೆ, ಆ ಮೆದುಳಿರುವ ಪದಾರ್ಥ ಅದಕ್ಕೆ ಅನುಗುಣವಾದದ್ದೇ ಅಲ್ಲವೇ? ಈ ವಿಷಯ ಸಾಮಾನ್ಯವಾದ ಜ್ಞಾನಕ್ಕೇ ಊಹಿಸಲು ಸಾಧ್ಯವಾಗುತ್ತಿರುವಾಗ ನೀವು ಇಷ್ಟೊಂದು ಸಂಶೋಧನೆ ಮಾಡಬೇಕೆಂಬುದು ಒಳ್ಳೆಯದಲ್ಲ!
ಭಾಷಾ: ನಾವು ಸಂಶೋಧನೆ ಮಾಡುತ್ತೇವೆ ಎಂಬುದು ಆ ವಿಷಯವಲ್ಲ. ಅವನ ಮುಖದಲ್ಲಿ ಅವಯವಗಳು ಮನುಷ್ಯರ ಮುಖದ ಅವಯವಗಳಿಗಿಂತ ಭಿನ್ನವಾಗಿದ್ದು ಆ ಶಬ್ದವನ್ನು ಉಚ್ಚರಿಸಬಲ್ಲವಾಗಿವೆಯೇ ಎಂಬ ವಿಷಯ.
ಪ್ರಾಣಿಶಾ: ನಾನೂ ಕೂಡ, ಅವನ ತಲೆಯಲ್ಲಿರುವ ಮೆದುಳು ಮನುಷ್ಯರ ಮೆದುಳಿಗೇನಾದರೂ ಸಮೀಪದಲ್ಲಿದೆಯೇನೋ ಎಂದು ನೋಡಬೇಕು.
ಪಂಡಿ: ಆ ನೋಡುವುದು ಹೇಗೆ ಸಾಧ್ಯವಾಗುತ್ತದೆ?
ಪ್ರಾಣಿಶಾ: ಅವನಿಗೆ ಅರಿವಳಿಕೆ ಮದ್ದನ್ನು ಕೊಟ್ಟರೆ ಅವನ ಮೆದುಳಿನ ಭಾಗವನ್ನು ಶಸ್ತ್ರಚಿಕಿತ್ಸೆಯಲ್ಲಿ ತೆರೆದು ನೋಡಿ ಪರೀಕ್ಷಿಸಬಹುದು.
ಪಂಡಿ: ಶಸ್ತ್ರಚಿಕಿತ್ಸೆ ಕೂಡಾ ಮಾಡುತ್ತೀರಾ? ಅವನಿಗೆ ಅರಿವಳಿಕೆ ಮದ್ದು ಹತ್ತುವುದಿಲ್ಲವೇನೋ! ಮೇಲಾಗಿ ಅದು ಪ್ರಾಣಾಪಾಯವನ್ನೂ ಮಾಡಬಹುದು. ಅವನು ನಮ್ಮ ದೇಶದಲ್ಲಿ ಕೆಲವು ದಿನ ಇದ್ದರೆ ಅವನ ದೇಶ ಯಾವುದು, ಅವನು ಯಾರು ಎಂದು ಕಂಡುಕೊಳ್ಳಬೇಕೆಂದು ಇದೆ. ಅವನಿಂದ ಅನೇಕ ಮಹತ್ತರವಾದ ವಿಷಯಗಳು ಹೊರಬರುತ್ತವೆಯೆಂದು ಇದೆ. ಅವನ ಜ್ಞಾನವನ್ನೂ ಅದರ ಆಳವನ್ನೂ ಕಂಡುಕೊಳ್ಳದೆ ಅಲ್ಪವಾದ ಅವನ ಶರೀರದ ಅವಯವಗಳನ್ನು ಪರಿಶೀಲಿಸುತ್ತೇವೆಂದೂ ಅದರಿಂದ ಏನೋ ಜ್ಞಾನಾಭಿವೃದ್ಧಿಯನ್ನು ಮಾಡುತ್ತೇವೆಂದೂ ಹೇಳುತ್ತಿದ್ದೀರಲ್ಲಾ, ಏನಿದು? ನಿಜವಾಗಿಯೂ ಅವನ ಜ್ಞಾನ ಮನುಷ್ಯರ ಜ್ಞಾನಕ್ಕಿಂತ ಮಿಗಿಲಾಗಿ ಕಾಣಿಸುತ್ತದೆ. ಅವನ ಮೆದುಳು ಮನುಷ್ಯರ ಮೆದುಳಿಗಿಂತ ಬಹಳ ಭಿನ್ನವಾಗಿ ಇದ್ದೇ ಇರಬೇಕು. ಅವನ ಕಂಠಬಿಲ (ಗಂಟಲು) ಖಂಡಿತಾ ದೊಡ್ಡದೇ ಆಗಿರುತ್ತದೆ. ಅವನ ಕತ್ತನ್ನು ನೋಡಲಿಲ್ಲವಾ? ಕುದುರೆಯ ತಲೆಯಷ್ಟು ಬಲವಾಗಿದೆ. ಅವನ ದವಡೆಗಳೂ ದಂತಗಳೂ ನಾಲಿಗೆಯೂ ಬಹಳ ಬಲಶಾಲಿಯಾಗಿರುವವೇ ಆಗಿರುತ್ತವೆ. ಇಲ್ಲದಿದ್ದರೆ ಅವನು ಮಾತನಾಡುತ್ತಿದ್ದರೆ ‘ಬೊಂಯ್’ ಎಂದು ಅಂತಹ ಧ್ವನಿ ಹುಟ್ಟುತ್ತಿರಲಿಲ್ಲ. ಸಮೀಪದಲ್ಲಿರುವವರಿಗೆ ಆ ಧ್ವನಿ ಅಷ್ಟು ಸ್ಪಷ್ಟವಾಗಿ ಇರುವುದಿಲ್ಲ. ಆ ವಿಷಯದಲ್ಲಿ ಯಾವ ಸಂಶೋಧನೆಯೂ ಅವಶ್ಯವಿಲ್ಲವೆಂದು ನನ್ನ ಉದ್ದೇಶ.
ಭಾಷಾ: ನಿಮಗೂ ನಮಗೂ ಪ್ರಧಾನವಿಷಯದಲ್ಲಿ ಸ್ವಲ್ಪ ಭೇದವಿದೆ. ನೀವು ಪ್ರತಿಯೊಂದನ್ನೂ ಊಹಿಸಿ ಎಂದು ಹೇಳುತ್ತೀರಾ. ನಾವು ಪ್ರಯೋಗವನ್ನು (experiment) ಮಾಡಿ ನೋಡಬೇಕೆನ್ನುತ್ತೇವೆ. ನಿಮ್ಮದು ಯಥಾರ್ಥ(ಸತ್ಯ) ಆಗಿರದೇ ಹೋಗಬಹುದು. ನಾವು ಪ್ರತ್ಯಕ್ಷವಾಗಿ ವಿಷಯಗಳನ್ನು ನೋಡಿ ಸಂಶೋಧಿಸುವ ಕಾರಣ ನಮ್ಮ ಶೋಧನೆ ಯಾವತ್ತೂ ಸತ್ಯವೇ ಆಗುತ್ತದೆ.
ಪಂಡಿ: ನಾವೂ ಊಹಿಸುತ್ತೇವೆಂದರೆ ಹುಚ್ಚುಹುಚ್ಚಾಗಿ ಊಹಿಸುವುದಿಲ್ಲವಲ್ಲವೇ! ಒಂದು ಕಾರಣವನ್ನು ಮುಂದಕ್ಕಿಟ್ಟುಕೊಂಡೇ ಊಹಿಸುತ್ತೇವೆ. ನಾವು ಯಾವ ವಿಷಯವನ್ನು ಆಧಾರವಾಗಿಟ್ಟುಕೊಂಡು ಊಹಿಸುತ್ತೇವೆಯೊ ಆ ವಿಷಯದಲ್ಲಿ ದೋಷವಿದ್ದರೆ ನಮ್ಮ ಊಹೆಯೂ ತಪ್ಪಬಹುದು. ನೀವು ಅದನ್ನು ಹೇಳಿ. ದೋಷವಿದ್ದರೆ ನಿಮ್ಮ ವಿಷಯದಲ್ಲಿ ಕೂಡ ಇರಬಹುದು. ನೀವೂ ವಿಷಯವನ್ನು ಸಂಶೋಧನೆ ಮಾಡಿ ನೋಡುತ್ತೀರಾ. ಆ ಸಂಶೋಧನೆಯಲ್ಲಿಯೇ ಕೆಲವಷ್ಟನ್ನು ಸಮಗ್ರವಾಗಿ ಪರಿಶೀಲಿಸಲಾರದೇ ಹೋಗಬಹುದು. ಆಗ ನಿಜವಾದ ಪರಿಜ್ಞಾನಕ್ಕೆ ಭಂಗವುಂಟಾಗುತ್ತದೆ.
ಪಂಡಿತನು ಹೀಗೆ ವಾದಿಸುತ್ತಲೇ ಭಾಷಾಶಾಸ್ತ್ರಜ್ಞನೂ ಪ್ರಾಣಿಶಾಸ್ತ್ರಜ್ಞನೂ “ನಿಮಗೂ ನಮಗೂ ಅಭಿಪ್ರಾಯಭೇದವಿದೆ” ಎಂದು ಹೇಳಿ ಚರ್ಚೆಯನ್ನು ಮುಗಿಸಿ ಹೊರಟುಹೋದರು. ಪಂಡಿತರು ಹಾಹೂ ಬಳಿಗೆ ಹೋದರು. ಭಾಷಾ-ಪ್ರಾಣಿಶಾಸ್ತ್ರಜ್ಞರಿಬ್ಬರೂ ಒಂದೆಡೆಯಲ್ಲಿ ಕುಳಿತು ಮಾತನಾಡಿಕೊಳ್ಳಲು ಪ್ರಾರಂಭಿಸಿದರು. ಅರಿವಳಿಕೆ ಮದ್ದನ್ನು ಕೊಡುವಲ್ಲಿಯ ತನಕ ಇಬ್ಬರೂ ಒಂದಾದರು. ಅರಿವಳಿಕೆ ಮದ್ದನ್ನು ಕೊಟ್ಟ ಬಳಿಕ ಪ್ರಾಣಿಶಾಸ್ತ್ರಜ್ಞ ತಲೆಯನ್ನು ತೆರೆದು ಮೆದುಳನ್ನು ಪರೀಕ್ಷಿಸಿಕೊಳ್ಳುತ್ತಾನೆ. ಭಾಷಾಶಾಸ್ತçಜ್ಞ ಮುಖದ ಅವಯವಗಳನ್ನು ಪರೀಕ್ಷಿಸಿಕೊಳ್ಳುತ್ತಾನೆ. ಹಾಗಾಗಿ ಆತನಿಗೆ (ಹಾಹೂ) ಅರಿವಳಿಕೆ ಮದ್ದನ್ನು ಕೊಡುವುದಕ್ಕೆ ಪ್ರಯತ್ನವನ್ನು ಮಾಡಲೇಬೇಕೆಂದುಕೊಂಡರು. ಹಾಗೆ ಮಾಡುವುದಕ್ಕೆ ಆ ಮೃಗಕ್ಕೆ ತಿಳಿಯದೇ ಮಾಡಿದರೇ ಒಳ್ಳೆಯದೆಂದುಕೊಂಡರು. ಆ ಪಂಡಿತನು ಹೋಗಿ ಹೇಳುತ್ತಾನೇನೋ ಎಂದು ಭಯಪಟ್ಟರು. ಮತ್ತೆ ಆ ಮೃಗವನ್ನು ಕುರಿತು ಪಂಡಿತನಿಗೆ ಒಳ್ಳೆಯ ಅಭಿಪ್ರಾಯವಿರುವ ಕಾರಣ, ಅದು ಒಂದು ರೀತಿಯಲ್ಲಿ ಮರ್ಯಾದಾಭಂಗದಂತೆ ಇರುತ್ತದೆಯೆಂದು ಹೇಳಿದ್ದಾನೆಂದು ಕೂಡ ಆಲೋಚಿಸಿದರು.
ಅವನು ವಾಸಿಸುತ್ತಿರುವ ಮನೆಯನ್ನು ಮೊತ್ತಮೊದಲು ಪರಿಶೀಲಿಸಬೇಕೆಂದುಕೊಂಡರು. ಇಬ್ಬರೂ ಹೊರಟರು. ಪರಿಶೀಲಿಸಿದರು. ಎರಡು ಮೂರು ದಿನ ಹಗಲೂರಾತ್ರಿ ಎಚ್ಚರವಾಗಿದ್ದು ಆ ಪ್ರಾಣಿ ಮಾಡುವ ಎಲ್ಲ ಕೆಲಸಗಳನ್ನೂ ಜಾಗ್ರತೆಯಾಗಿ ಪರಿಶೀಲಿಸಿದರು. ಆ ಮೃಗ ರಾತ್ರಿಯ ಎರಡನೇ ಜಾವವಾದಾಗ ಎರಡು ಮೂರು ಗಂಟೆಗಳಷ್ಟು ಕಾಲ ಕಣ್ಣನ್ನು ಮುಚ್ಚಿಕೊಂಡು ನಿದ್ರೆ ಹೋದಂತೆ ಮಲಗಿಕೊಳ್ಳುತ್ತದೆ. ಆ ಸಮಯ ತಮ್ಮ ಕಾರ್ಯಕ್ಕೆ ಅನುಕೂಲಕರವಾಗಿರುತ್ತದೆಯೆಂದು ಗ್ರಹಿಸಿದರು.
ಪ್ರತಿದಿನದ ವ್ಯವಹಾರ ಯಥಾಪ್ರಕಾರ ನಡೆಯುತ್ತಿತ್ತು. ಜನರು ಬರುತ್ತಿದ್ದರು. ನೋಡಿಕೊಂಡು ಹೋಗುತ್ತಿದ್ದರು. ಪಂಡಿತರೂ ಬರುತ್ತಿದ್ದರು ಮಾತುಕತೆಯಾಡುತ್ತಿದ್ದರು. ಭಾಷಾ-ಪ್ರಾಣಿಶಾಸ್ತ್ರಜ್ಞರೂ ಕೂಡ ಪ್ರತಿದಿನ ಬರುತ್ತಿದ್ದರು. ಅತ್ತ ಇತ್ತ ನೋಡುತ್ತಿದ್ದರು. ಏನೋ ಆಲೋಚಿಸುತ್ತಿರುವಂತೆ ಕಾಣಿಸುತ್ತಿದ್ದರು. ಮರಳಿ ಹೋಗುತ್ತಿದ್ದರು.
ಬಳಿಕ ಹದಿನೈದು ದಿನಗಳಲ್ಲಿ ಒಂದು ದಿನ ರಾತ್ರಿ ಎರಡನೇ ಜಾವ ಆದ ಹೊತ್ತಿಗೆ ಐವತ್ತು ಜನರೊಡನೆ ಗುಂಪುಗೂಡಿಕೊಂಡು ಸದ್ದಾಗದಂತೆ ಹಾಹೂ ಇರುವ ಮನೆಗೆ ಬಂದರು. ಸಣ್ಣ ಸಪ್ಪಳವಾದರೂ ಅವರಲ್ಲಿ ಉದ್ವೇಗ ಹೆಚ್ಚಾಗುತ್ತಿತ್ತು. ಅವರಲ್ಲಿ ಒಬ್ಬನು ಬಂದು ಬಾಗಿಲಿನ ಚಿಲಕವನ್ನು ಶಬ್ದವಾಗದಂತೆ ತೆಗೆದನು. ನಾಲ್ಕಾರು ದಿನಗಳಿಂದ ಆ ಚಿಲಕಕ್ಕೆ ಎಣ್ಣೆಯನ್ನು ಹಾಕುತ್ತ ಬಂದಿದ್ದರು. ಹಾಗಾಗಿ ಅದು ಶಬ್ದವಿಲ್ಲದೆ ತಿರುಗಿತು. ಆರು ಜನ ಮನುಷ್ಯರು ಮಾತ್ರ ಒಳಗೆ ಹೋದರು. ಮತ್ತೆ ಚಿಲಕವನ್ನು ಹಾಕಿದರು. ಉಳಿದ ಜನರೆಲ್ಲರೂ ಕಟಕಟೆಯ ಹೊರಗೆ ನಿಂತುಕೊಂಡು ರಿವಾಲ್ವರ್ಗಳನ್ನು ಗುಂಡು ತುಂಬಿಕೊಂಡು ಅತ್ತ ಗುರಿ ಹಿಡಿದರು. ಒಳಗೆ ಹೋದ ಆರು ಜನರೂ ರಿವಾಲ್ವರ್ಗಳನ್ನು ಕೈಯಲ್ಲಿಯೇ ಹಿಡಿದುಕೊಂಡು ಜಾಗ್ರತೆಯಿಂದ ಅವನ ಸಮೀಪಕ್ಕೆ ಹೋದರು. ಆ ವೇಳೆ ಅವರ ಅದೃಷ್ಟವಶಾತ್ ಹಾಹೂ-ವಿನ ಎರಡೂ ಕೈಗಳೂ ಹೊಟ್ಟೆಯ ಮೇಲೆ ಹತ್ತಿರದಲ್ಲಿಯೇ ಇಟ್ಟುಕೊಂಡಿದ್ದವು. ಕಾಲುಗಳೂ ಹತ್ತಿರದಲ್ಲಿಯೇ ಇದ್ದವು. ಆ ಆರು ಜನರಲ್ಲಿ ಇಬ್ಬರು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಎರಡು ದೊಡ್ಡ ಕಬ್ಬಿಣದ ಸಂಕೋಲೆಗಳನ್ನು ಕಾಲಿಗೊಂದು ಕೈಗೊಂದು ಕಟ್ಟಿ ಹಾಕಿದರು. ಆ ಸಂಕೋಲೆಗಳು ಮಹಾಬಲಿಷ್ಠವಾದವು. ಅವುಗಳನ್ನು ಬಲಿಷ್ಠವಾದ ಉಕ್ಕಿನ ಸರಳುಗಳಿಂದ ಮಾಡಿಸಿದ್ದರು. ಇಪ್ಪತ್ತೈದು ಮಂದಿ ಮನುಷ್ಯರ ಬಲವಿದ್ದವರಾದರೂ ಅದನ್ನು ಎಳೆದು ಹಿಗ್ಗಿಸಲಾಗುತ್ತಿರಲಿಲ್ಲ.
ಅವುಗಳನ್ನು ಹಾಕುತ್ತಿದ್ದಂತೆಯೆ ಹಾಹೂ ಕಣ್ಣನ್ನು ತೆರೆದನು. ಕಣ್ಣು ತೆರೆಯುತ್ತಿದ್ದಂತೆಯೆ ಹತ್ತು ಎಲೆಕ್ಟ್ರಿಕ್ ದೀಪಗಳನ್ನು ಅವನ ಕಣ್ಣಿನ ಮೇಲೆ ಕೇಂದ್ರೀಕರಿಸಿದರು. ಅವನು ನಿಶ್ಚಲವಾಗಿ ಮಲಗಿಕೊಂಡು ಎಲ್ಲರ ಕಡೆಗೆ ನೋಡಿದನು. ತತ್ಕ್ಷಣ ಅವನು ಮಲಗಿದ್ದ ಕೋಣೆಯ ತುಂಬೆಲ್ಲ ದೊಡ್ಡ ಬೆಳಕು ವ್ಯಾಪಿಸಿತು. ಅಷ್ಟರಲ್ಲಿ ಅವರಲ್ಲೊಬ್ಬ ಪಂಡಿತನು ಕಂಡನು. ಅವನು ಹಾಹೂ ಕಿವಿಯ ಬಳಿ ಹೀಗೆ ಅರಚಿದನು – “ನಿನ್ನ ಕೈಗಳಿಗೆ ಕಾಲುಗಳಿಗೆ ಸಂಕೋಲೆಯನ್ನು ಹಾಕಿದ್ದೇವೆ. ನೀನು ಕದಲಾಡಿದರೆ ನಿನ್ನನ್ನು ಸಾಯಿಸಿಹಾಕುತ್ತೇವೆ. ನಮ್ಮ ವೈಜ್ಞಾನಿಕ ಪರಿಶೋಧನೆಗೋಸ್ಕರ ನಿನಗೆ ಮತ್ತು ಬರುವ ಔಷಧವನ್ನು ಕೊಡುತ್ತಿದ್ದೇವೆ. ನೀನು ಒಂದೆರಡು ಗಂಟೆಗಳಷ್ಟು ಕಾಲ ಮತ್ತಿನಲ್ಲಿ ಇರುತ್ತೀಯಾ. ನಿನಗೆ ಯಾವುದೇ ಪ್ರಾಣಾಪಾಯವಿಲ್ಲ. ಹಾಗಾಗಿ ಪ್ರತಿಭಟಿಸದೆ ಇದ್ದರೆ ನಿನ್ನ ಮರ್ಯಾದೆ, ನಮ್ಮ ಮರ್ಯಾದೆ ಎರಡೂ ಉಳಿಯುತ್ತದೆ.”
ಇಬ್ಬರು ಡಾಕ್ಟರುಗಳು ಅವನ ಹತ್ತಿರಕ್ಕೆ ಬಂದು ಅವನಿಗೆ ಅರವಳಿಕೆ ಮದ್ದನ್ನು (ಕ್ಲೋರೊಫಾರಂ) ಕೊಡಲು ಪ್ರಾರಂಭಿಸಿದರು. ಹಾಹೂ ಕಣ್ಣನ್ನು ತಿರುಗಿಸಿ ಎಲ್ಲರ ಕಡೆಗೂ ನೋಡಿದನು. ಪಕ್ಕದಲ್ಲಿ ಮೇಯರು ನಿಂತಿದ್ದನು. ಅವನಿಗೆ ತಕ್ಷಣ ತಿಳಿಯಿತು. ಇದು ಅಧಿಕಾರಿಗಳ ಅನುಮತಿಯಲ್ಲೇ ನಡೆಯುತ್ತಿರುವ ಕೆಲಸವೆಂದು. ಅವನು ಬಳಿಕ ಕಣ್ಣುಮುಚ್ಚಿಕೊಂಡನು. ಡಾಕ್ಟರು ಅರವಳಿಕೆ ಮದ್ದನ್ನು ಪಂಪ್ ಮಾಡುತ್ತಿದ್ದರು. ಒಬ್ಬ ಡಾಕ್ಟರು ನಾಡಿಯನ್ನು ನೋಡಲು ಪ್ರಾರಂಭಿಸಿದರು. ಕಾಲು ಗಂಟೆ ಕಳೆದ ಬಳಿಕ ಸ್ಮೃತಿಯಿದೆಯೋ ಇಲ್ಲವೋ ಎಂದು ನೋಡಿದರು. ಹಾಹೂ ಕಣ್ಣುಗಳನ್ನು ತೆರೆದನು. ಮತ್ತೆ ಕಾಲು ಗಂಟೆ ಕಳೆಯಿತು. ಸ್ಮೃತಿ ತಪ್ಪಿರಬಹುದೆಂದು ಮತ್ತೆ ನೋಡಿದರು. ಹಾಹೂ ಮತ್ತೆ ಕಣ್ಣು ತೆರೆದನು. ಈ ಕಲಾಪವೆಲ್ಲವೂ ಒಂದು ಗಂಟೆಯ ಕಾಲ ನಡೆಯಿತು. ಹಾಹೂ ಕಣ್ಣು ತೆರೆದು ಮುಚ್ಚುತ್ತಲೇ ಇದ್ದನು.
ಅಷ್ಟರಲ್ಲಿ ಭಾಷಾಶಾಸ್ತ್ರಜ್ಞನಿಗೆ ಒಂದು ಸಂದೇಹವಾಯಿತು. ಈ ಪ್ರಾಣಿ ನಿಜವಾಗಿಯೂ ಉಸಿರನ್ನು ತೆಗೆದುಕೊಳ್ಳದೆ ಬಿಗಿದುಕೊಂಡಿದೆಯೇನೋ ಎಂದು. ಅರವಳಿಕೆ ಮದ್ದಿನ ಡಬ್ಬವನ್ನು ಮತ್ತೆ ಹಿಂದಕ್ಕೆ ತೆಗೆದುಕೊಂಡು ಅವನ ಮೂಗಿನ ಬಳಿ ಬೆರಳನ್ನಿಟ್ಟನು. ಉಸಿರು ಆಡುತ್ತಿರಲಿಲ್ಲ. ಡಾಕ್ಟರುಗಳು ಹೃದಯವನ್ನು ಪರಿಶೀಲಿಸಿದರು. ಹೃದಯದಲ್ಲೂ ಸ್ಪಂದನೆಯಿಲ್ಲ. ನಾಡಿಯನ್ನು ನೋಡಿದರು. ನಾಡಿಯೂ ಆಡುತ್ತಿಲ್ಲ. ಹೃದಯ ನಿಂತುಹೋಗಿದೆ. ಕೃತ್ರಿಮಶ್ವಾಸವನ್ನು (ಆರ್ಟಿಫಿಷಿಯಲ್ ರೆಸ್ಪಿರೇಷನ್) ಹಾಕಬೇಕೆಂದುಕೊಂಡರು. “ಅಯ್ಯೋ! ಅಪಾಯವಾಯಿತು” ಎಂದುಕೊಂಡರು. ಇವರೆಲ್ಲರೂ ಗಾಬರಿಪಡುತ್ತಿರುವಂತೆಯೇ ಹಾಹೂ ಕಣ್ಣನ್ನು ತೆರೆದನು. ಎಲ್ಲರೂ ಆಶ್ಚರ್ಯಪಟ್ಟರು. ವೈದ್ಯರು ಹೃದಯವನ್ನೂ ನಾಡಿಯನ್ನೂ ಮತ್ತೆ ಪರೀಕ್ಷಿಸಿದರು. ಅವೆರಡರಲ್ಲೂ ಯಾವುದೇ ಕದಲಿಕೆಯಿಲ್ಲ. ಆದರೆ ಹಾಹೂ ಕಣ್ಣನ್ನು ಮಾತ್ರ ತೆರೆದುಕೊಂಡೇ ಇದ್ದ.
(ಸಶೇಷ)