ಹಿಂದಿನ ಸಂಚಿಕೆಯಲ್ಲಿ…
ಕುತ್ತಿಗೆಯ ತನಕ ಮನುಷ್ಯ, ಕುದುರೆಯ ತಲೆ ಇರುವ ಎಂಟು ಅಡಿ ಎತ್ತರದ ವಿಚಿತ್ರ ಪ್ರಾಣಿಯೊಂದು ಲಂಡನ್ನಿನ ‘ಟ್ರೆಫಾಲ್ಗರ್ ಸ್ಕ್ವೇರ್ನಲ್ಲಿ ಕಾಣಿಸಿತು. ಸಂಸ್ಕೃತ ಪಂಡಿತರು ಆ ವಿಚಿತ್ರಮೃಗದ ಹೆಸರು ‘ಹಾಹಾಹೂಹೂ’ ಎಂದೂ, ಈ ವ್ಯಕ್ತಿ ಗಂಧರ್ವನೆಂದೂ, ಹಿಂದುಗಳು ವಿಶ್ವಸಿಸುವ ದೇವತೆಗಳಲ್ಲಿ ಒಂದು ಜಾತಿಯೆಂದೂ, ಅವನು ಮಾತನಾಡುತ್ತಿರುವುದು ಸಂಸ್ಕೃತಭಾಷೆಯೆಂದೂ ಸೂಚಿಸಿದರು.
ಸಂಶೋಧನೆಗಾಗಿ ಆಗಮಿಸಿದ ಜರ್ಮನಿಯ ಭಾಷಾಶಾಸ್ತ್ರಜ್ಞ, ಫ್ರಾನ್ಸಿನ ಪ್ರಾಣಿಶಾಸ್ತ್ರಜ್ಞರಿಗೆ ಅವರ ತರ್ಕಕ್ಕೆ ಅವನು (‘ಹಾಹೂ’) ಎಟುಕದೇ ಇದ್ದಾಗ ಅರವಳಿಕೆ ನೀಡಿ, ತಲೆಯನ್ನು ತೆರೆದು ಪರೀಕ್ಷಿಸಲು ಮುಂದಾದರು. ಆ ಪ್ರಯತ್ನವೂ ಯಶಸ್ಸುಕಾಣಲಿಲ್ಲ. ಪಾಂಡಿತ್ಯಪೂರ್ಣ ವಾದಸರಣಿಯಿಂದ ಹಾಹೂ ಪಂಡಿತ-ಶಾಸ್ತ್ರಜ್ಞರೆಲ್ಲರನ್ನೂ ನಿರುತ್ತರರನ್ನಾಗಿಸಿದ.
ಇನ್ನೊಂದೆಡೆ ಹಾಹೂ ‘ನಾನು ಒಬ್ಬ ಮನುಷ್ಯನಷ್ಟೇ ಅಲ್ಲ, ಪ್ರಾಣಿಯಷ್ಟೇ ಅಲ್ಲ, ಪಕ್ಷಿ ಕೂಡಾ ಹೌದು!’ ಎಂದು ತನ್ನ ಎರಡು ದೊಡ್ಡ ರೆಕ್ಕೆಗಳನ್ನೂ ಪ್ರದರ್ಶಿಸಿದ.
ಹಾಹೂ ಸ್ನಾನವನ್ನು ಮಾಡುತ್ತಿದ್ದನು. ಅವನು ಒಂದು ಬಾರಿ ಮುಳುಗೆದ್ದು ರೆಕ್ಕೆಯನ್ನು ಅಲ್ಲಾಡಿಸುವ ಹೊತ್ತಿಗೆ ಚಂಡಮಾರುತದ ಹೊತ್ತಿನ ಸಮುದ್ರದಂತೆ ನದಿಯ ಅಲೆಗಳು ಮೇಲೆದ್ದು ದಡವನ್ನು ದಭಾಲ್ ಎಂದು ಹೊಡೆಯುತ್ತಿದ್ದವು. ಲಂಗರನ್ನು ಹಾಕಿದ್ದ ದೊಡ್ಡ ದೊಡ್ಡ ಸ್ಟೀಮರ್ಗಳು ಕೂಡ ಬಾಗಿ ಒರಗುತ್ತಿದ್ದವು. ಸಣ್ಣ ಸಣ್ಣ ದೋಣಿಗಳು ತಲೆಕೆಳಗಾಗಿ ಬಿದ್ದಿದ್ದವು. ಅವನು ನೀರಿನಲ್ಲಿ ಕುಪ್ಪಳಿಸಿ ಸೊಂಟದ ತನಕ ಏಳುತ್ತಿದ್ದನು. ಎದ್ದು ರೆಕ್ಕೆಗಳನ್ನು ಕೊಡವುತ್ತಿದ್ದನು. ಒಂದು ಕಡೆಯಲ್ಲಿರುವ ಬೆಟ್ಟವೊಂದು ಒಡ್ಡಿಕೊಂಡಿದ್ದರೆ ಭಯಂಕರವಾದ ಸಮುದ್ರದ ಅಲೆಗಳು ಅದಕ್ಕೆ ಹೊಡೆದುಕೊಳ್ಳುತ್ತಿದ್ದರೆ ನೀರು ಉಲ್ಲೋಲಕಲ್ಲೋಲವಾಗಿ ಚಿಮ್ಮುತ್ತಿರುವಂತೆ ಅವನ ರೆಕ್ಕೆಗಳ ಹಿಂದೆಯೇ ಥೇಮ್ಸ್ ನದಿಯ ತರಂಗಜಲ ಎದ್ದು, ದೂರದಲ್ಲಿ ದೋಣಿಗಳಲ್ಲಿರುವ ಜನರನ್ನು ಮಳೆನೀರಿನ ತುಂತುರು ಒದ್ದೆಯಾಗಿಸುವಂತೆ ಸುರಿಯುತ್ತಿತ್ತು.
ಈ ಕುದುರೆಮನುಷ್ಯನಿಗೆ ರೆಕ್ಕೆಗಳಿವೆಯೆಂದೂ, ಅವು ಹೊಸದಾಗಿ ಮೊಳೆತವುಗಳೆಂದೂ, ಅವು ಬಹಳ ಬಲಿಷ್ಠವಾದವುಗಳೆಂದೂ, ಅವು ತಾಗಿ ಕಬ್ಬಿಣದ ಕಟಕಟೆಗಳೇ ಮುರಿದು ಬಿದ್ದವೆಂದೂ, ಮತ್ತೆ ಪತ್ರಿಕೆಗಳಲ್ಲಿ ಬಂತು. ಬಂದೂಕಿನ ಗುಂಡುಗಳೂ ತಾಗಲಿಲ್ಲವೆಂದು ಇಲ್ಲಿಯ ತನಕ ಪತ್ರಿಕೆಗಳಲ್ಲಿ ಬಂದಿದ್ದಕ್ಕೆ, ಆಶ್ಚರ್ಯಗೊಂಡ ಅಮೆರಿಕಾ, ಯೂರೋಪ್, ಆಸ್ಟ್ರೇಲಿಯಾ, ಕೆನಡಾ, ಆಫ್ರಿಕಾ ಎಲ್ಲವೂ ರಾಶಿರಾಶಿಯಾಗಿ ಲಂಡನ್ನಿಗೆ ಸೇರಿದವು. ಪ್ರಯಾಣ ಮಾಡುವುದಕ್ಕೆ ಹಣವಿರುವವರು ಎಲ್ಲರೂ ತಮ್ಮ ಹಡಗನ್ನು ಲಂಡನ್ನಿಗೆ ಸಾಗಿಸಿದರು.
ಮೇಯರೂ, ಊರಿನಲ್ಲಿರುವ ಪಾರ್ಲಿಮೆಂಟ್ ಮೆಂಬರುಗಳೂ, ದೊಡ್ಡ ಉದ್ಯೋಗಸ್ಥರೂ ಸಮಾವೇಶ ಮಾಡಿ ಈ ಹಾಹೂ ವಿಷಯವನ್ನು ವಿಚಾರಿಸಿದರು. ಅವನು ಯಾರಿಗೂ ಅಪಕಾರವನ್ನು ಮಾಡುವವನಲ್ಲದ ಕಾರಣ ಅವನನ್ನು ಖೈದಿಯಂತೆ ಇಡುವುದು ಒಳ್ಳೆಯದಲ್ಲವೆಂದರು. ಅವನನ್ನು ಯಾರಾದರೂ ದೊಡ್ಡ ಮುಖ್ಯಸ್ಥರುಗಳಾದರೂ ತಮ್ಮ ಮನೆಗೆ ಅತಿಥಿಯಾಗಿ ಕರೆದುಕೊಂಡು ಹೋಗಿ ಉಳಿಸಿಕೊಂಡರೆ ಚೆನ್ನಾಗಿರುತ್ತದೆಯೆಂದೂ, ಇಲ್ಲದಿದ್ದರೆ ರಾಜ್ಯಕ್ಕೆ ಅತಿಥಿಯಾಗಿ ಕರೆದುಕೊಂಡು ಹೋಗಿ ಪಾರ್ಲಿಮೆಂಟ್ ಭವನದಲ್ಲಿ ಉಳಿಸಿಕೊಂಡು ಅವನಿಗೆ ಬೇಕಾದ ಆವಶ್ಯಕತೆಗಳನ್ನೆಲ್ಲ ಮಾಡಿಕೊಡುವುದು ನ್ಯಾಯವಾಗುತ್ತದೆ ಎಂದೂ ತೀರ್ಮಾನಿಸಿದರು.
ಮಾರನೇ ದಿನ ಬೆಳಗ್ಗೆಯೇ ಅಧಿಕಾರಿಗಳೂ ಎಲ್ಲರೂ ಅವನ ಬಳಿಗೆ ಹೋದರು. ತಮ್ಮ ಉದ್ದೇಶವನ್ನು ಅವನಿಗೆ ಓದಿ ಹೇಳಿದರು. ಅವರು ಹೇಳಿದ್ದು ಹೀಗಿತ್ತು: “ಓ ಮೃಗವೂ ಪಕ್ಷಿಯೂ ಅಲ್ಲದ ಮನುಷ್ಯನೇ! ನೀನು ಬಹಳ ಒಳ್ಳೆಯ ವ್ಯಕ್ತಿ. ನಿನಗೆ ಮನುಷ್ಯರಿಗೆ ಇರುವಂತಹ ಜ್ಞಾನವೂ ಇದೆ. ನೀನು ಕ್ರೂರವಾಗಿರುವವನೂ ಅಲ್ಲ. ಇಲ್ಲಿಯ ತನಕ ನಿನ್ನ ವಿಷಯ ನಮಗೆ ತಿಳಿಯದ ಕಾರಣ ನಿನ್ನನ್ನು ಖೈದಿಯಂತೆ ಇಟ್ಟೆವು. ನೀನು ಯಾರಿಗೂ ಅಪಕಾರವನ್ನು ಮಾಡುವವನಲ್ಲ ಎಂದು ನಮಗೆ ನಂಬಿಕೆಯಾಗಿದೆ. ನಿನ್ನನ್ನು ಖೈದಿಯಂತಿರಿಸಿಕೊಳ್ಳದೇ ನಮ್ಮ ರಾಜ್ಯಕ್ಕೆ ಅತಿಥಿಯಾಗಿ ತೆಗೆದುಕೊಳ್ಳುತ್ತಿದ್ದೇವೆ. ನಿನಗೆ ಬೇಕಾದ ಎಲ್ಲ ಆವಶ್ಯಕತೆಗಳನ್ನೂ ನಮ್ಮ ರಾಜ್ಯದ ಕಡೆಯಿಂದ ನಮ್ಮ ರಾಜ್ಯದ ಧನದಿಂದಲೇ ಮಾಡಿಕೊಡುತ್ತೇವೆ. ನಮ್ಮ ರಾಜ್ಯ ನಿನಗೆ ರಕ್ಷಣೆಯನ್ನು ಕೊಟ್ಟ ಕಾರಣ ನಿನ್ನನ್ನು ಇನ್ನು ಯಾರೂ ಏನೂ ಮಾಡುವುದಿಲ್ಲ.”
ಈ ಮಾತನ್ನು ಸಂಸ್ಕöÈತದಲ್ಲಿ ಪಂಡಿತರು ಹೇಳಿದಾಗ ಕೇಳಿ ಹಾಹೂ ದೊಡ್ಡದಾಗಿ ನಕ್ಕು ಒಂದು ಧ್ವನಿಯನ್ನು ಹೊರಡಿಸಿದನು “ಅಹೋ ಅಲ್ಪತಾ ಮನುಷ್ಯಾಣಾಂ!” (ಅಯ್ಯೋ! ಮನುಷ್ಯರ ಅಲ್ಪತೆಯೇ!) ಎಂದು.
ಪಂಡಿತರೆಲ್ಲರೂ ಇದನ್ನು ಕೇಳಿದರು. ಈ ಮಾತುಗಳು ಪಂಡಿತರಿಗಷ್ಟೇ ಅರ್ಥವಾಯಿತು, ಉಳಿದವರಿಗೆ ತಿಳಿಯಲಿಲ್ಲ.
ಅಲ್ಲಿಂದ ಹಾಹೂವನ್ನು ಒಬ್ಬ ದೊಡ್ಡ ಮುಖ್ಯಸ್ಥನ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಅವನಿಗೆ ರಾಜಭೋಗಗಳಂತೆ ಇತ್ತು.
ಇತ್ತ ಜನರಲ್ಲಿ ವಿವಾದಗಳು ಹುಟ್ಟಿಕೊಂಡವು. “ಅವನಿಗೆ ರೆಕ್ಕೆಗಳು ಏಕೆ? ಅದರಿಂದ ಹಾರುತ್ತಾನಾ? ಹಾರಿ ಎತ್ತ ಹೋಗುತ್ತಾನೆ? ಇವನನ್ನು ಖೈದಿಯಂತೆ ಇಟ್ಟುಕೊಳ್ಳದೇ ಬಿಟ್ಟುಬಿಡುವುದು ಒಳ್ಳೆಯದಲ್ಲ. ಯಾವ ರಾತ್ರಿಯ ಹೊತ್ತಿನಲ್ಲಿ ಹಾರಿ ಹೋಗುತ್ತಾನೋ! ಹಗಲುಹೊತ್ತು ಹಾರಿ ಹೋದರೆ ವಿಮಾನಗಳಲ್ಲಿ ಬೆನ್ನಟ್ಟಿಯಾದರೂ ಹೋಗಬಹುದು. ಖೈದಿಯನ್ನು ಬಿಟ್ಟುಬಿಡುವುದು ಒಳ್ಳೆಯದಲ್ಲ.” ಎಂದು. “ಅವನು ಖೈದಿ ಹೇಗಾಗುತ್ತಾನೆ? ರೆಕ್ಕೆಗಳಿಂದ ಹೊಡೆದರೆ ಕಬ್ಬಿಣದ ಕಟಕಟೆಯೇ ಮುರಿದುಹೋಯಿತು. ಬಂದೂಕಿನಿAದ ಸಿಡಿಸಿದ ಗುಂಡುಗಳಿಗೆ ಲೆಕ್ಕವಿಲ್ಲ. ಅವನಿಗೆ ಇಷ್ಟವಿರುವ ಕಾರಣ ಇಲ್ಲಿ ಇದ್ದಾನೆ. ಇಲ್ಲದಿದ್ದರೆ ಅವನನ್ನು ಯಾರು ತಾನೇ ತಡೆಯಬಲ್ಲರು!” ಎಂದು. “ಈ ರೆಕ್ಕೆಗಳೂ ಕುದುರೆಯ ತಲೆಯೂ ಏನೋ ಚಮತ್ಕಾರವನ್ನು ಮಾಡಿ ಅಂಟಿಸಿಕೊಂಡಿರುವುದೇ ಹೊರತು ನಿಜವಾಗಿಯೂ ಇರುವುದಲ್ಲ. ರೆಕ್ಕೆಗಳು ನಿಜವಾದವೇ ಆಗಿದ್ದರೆ ಮೊದಲು ಏಕೆ ಇರಲಿಲ್ಲ? ಈಗ ಎಲ್ಲಿಂದ ಬಂದವು?” ಎಂದು ನಾನಾವಿಧವಾಗಿ ಮಾತನಾಡಿಕೊಳ್ಳಲು ಪ್ರಾರಂಭಿಸಿದರು.
ಹೊಸ ಮುಖ್ಯಸ್ಥನ ಮನೆಗೆ ಹೋದ ದಿನದಿಂದ ಹಾಹೂ ತನಗೆ ಒಂದು ದೊಡ್ಡ ಕೋಣೆ ಬೇಕೆಂದೂ, ಅದರಲ್ಲಿ ತಾನು ಕುಳಿತುಕೊಳ್ಳಬೇಕೆಂದೂ, ಒಂದು ತಿಂಗಳ ಮಟ್ಟಿಗೆ ತನ್ನನ್ನು ಯಾರೂ ಮಾತನಾಡಿಸಕೂಡದೆಂದೂ ಹೇಳಿದನು. ಅವರು ದೀರ್ಘವಾಗಿ ಆಲೋಚಿಸಿ “ಇಲ್ಲಿಯ ತನಕ ಹದಿನೈದು ದಿನ ಮೂಗು ಮುಚ್ಚಿಕೊಂಡು ಕುಳಿತುಕೊಂಡಂತೆಯೇ ಕೂತುಕೊಳ್ಳುತ್ತಾನೆ” ಎಂದು ಒಪ್ಪಿಕೊಂಡರು. ಆ ಮುಖ್ಯಸ್ಥ ಬೇರೆ ಒಂದು ದೊಡ್ಡ ಕೋಣೆಯಲ್ಲಿ ಅವನಿಗೆ ಕೂತುಕೊಳ್ಳುವುದಕ್ಕೆ ವ್ಯವಸ್ಥೆಯನ್ನು ಮಾಡಿದನು. ಅವನು ಕೋಣೆಗೆ ಹೋದನು.
ಒಂದು ತಿಂಗಳು ಕಳೆಯಿತು. ಮೂವತ್ತೊಂದನೇ ದಿನ ಆ ಮುಖ್ಯಸ್ಥ ಕೋಣೆಯ ಬಾಗಿಲನ್ನು ತಟ್ಟಿದನು. ಅವನು ಬಂದು ಬಾಗಿಲನ್ನು ತೆರೆದನು. ತೆಗೆದರೆ ಆ ಕೋಣೆಯಲ್ಲಿ ಯಾರೂ ಕಾಣಿಸಲಿಲ್ಲ. ಮುಖ್ಯಸ್ಥ ಭಯಪಟ್ಟು ಕೂಗಿಕೊಂಡನು. ಹಾಹೂ ತತ್ಕ್ಷಣ ಅರ್ಥ ಮಾಡಿಕೊಂಡು “ನಾನು ಈ ತೆರೆಯ ಹಿಂದೆ ಇದ್ದೇನೆ” ಎಂದು ಹೇಳುತ್ತಾ ಬಂದನು. ಮುಖ್ಯಸ್ಥನಿಗೆ ಅಲ್ಲಿ ತೆರೆಯಿದ್ದಂತೆ ಕಾಣಿಸಿತು. ಮತ್ತೆ ಯಥಾಸ್ಥಿತಿ. ಪಂಡಿತರೂ ಜನರೂ ಬರುವುದೂ ಹೋಗುವುದೂ.
ಒಂದು ದಿನ ರಾತ್ರಿ ಆರ್ಚ್ಬಿಷಪ್ಪೂ ಹತ್ತು ಜನ ಬಿಷಪ್ಪುಗಳೂ ಬಂದರು. ಅವನ ಮತವನ್ನು ಕುರಿತು ಕೇಳಿದರು.
ಬಿಷಪ್ಪು: ನಿನ್ನ ಮತ ಯಾವುದು?
ಹಾಹೂ: ನನಗೆ ಮತವೇನೂ ಇಲ್ಲ. ಮತವೆಂದರೇನು?
ಬಿಷಪ್ಪು: ಹಾಗೆ ಹೇಳಬಾರದು. ದೇವರಿದ್ದಾನಲ್ಲವೇ! ಆ ದೇವರ ಮಗನೇ ಕ್ರಿಸ್ತ. ನಾವು ಅವನನ್ನು ನಂಬದೇ ಇದ್ದರೆ ಮುಕ್ತಿಯಿಲ್ಲ.
ಹಾಹೂ ಅವರ ಕಡೆ ವಿಚಿತ್ರವಾಗಿ ನೋಡಿದನು. ಕಣ್ಣುಗಳನ್ನು ಮುಚ್ಚಿಕೊಂಡನು. ಧ್ಯಾನಿಸಿದನು. ಬಳಿಕ ಬಿಷಪ್ಪುಗಳೆಲ್ಲರೂ ನೂರಾರು ಪ್ರಶ್ನೆಗಳನ್ನು ಹಾಕಿದರು. ಅವನು ಉತ್ತರಿಸಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಹಾಹೂ ಹೇಳಿದನು “ಸಾಮಾನ್ಯರಿಗೆ ಮತಗಳಿಲ್ಲ. ಮಹರ್ಷಿಗಳಿಗೆ ಮತಗಳಿರುತ್ತವೆ. ಒಬ್ಬಾನೊಬ್ಬ ಮಹರ್ಷಿ ಹೇಳಿದ ಮತದಲ್ಲಿ ಒಬ್ಬನಿಗೆ ವಿಶ್ವಾಸವಿರುತ್ತದೆ. ಅಲ್ಪರ ವಿಶ್ವಾಸ ಅಲ್ಪವಾದದ್ದು. ಅಧಿಕರಾದವರ ವಿಶ್ವಾಸ ಅಧಿಕವಾದದ್ದು. ಯಾವ ಲೋಕದಲ್ಲಿಯೇ ಆದರೂ – ಕಡಮೆ ಶಕ್ತಿಯಿರುವ ಈ ಲೋಕದಲ್ಲಿಯೇ ಆಗಲಿ, ಅಧಿಕಶಕ್ತಿಯುಳ್ಳ ಇತರ ಲೋಕಗಳಲ್ಲಿಯಾಗಲೀ – ಪ್ರಾಣಿಗಳೆಲ್ಲರೂ ವಾಂಛಾದೂಷಿತರು. ವಾಂಛಾತೀತನಾಗಿ ಬ್ರಹ್ಮಪದವನ್ನು ಯಾರು ಸೇವಿಸುತ್ತಾರೋ ಅವರಿಗೆ ಅಲ್ಪವಾದ ಇಂತಹವುಗಳಿಂದ ಉಪಯೋಗವಿಲ್ಲ. ಮತವೆಂದರೆ ಏನೆಂದು ಹೇಗೆ ತಿಳಿಯುತ್ತದೆ? ಮೊತ್ತಮೊದಲು ಲೋಕದಲ್ಲಿರುವ ಈ ನಶ್ವರತ್ವ ತಿಳಿದರೆ ಸಾಕು” ಎಂದನು. ಬಳಿಕ ಏನು ಹೇಳಬೇಕೋ ಯಾರಿಗೂ ತಿಳಿಯಲಿಲ್ಲ. ಅವರವರ ದಾರಿಯನ್ನು ಹಿಡಿದು ಹೊರಟರು.
ಒಂದು ದಿನ ಸಂಜೆಯ ಹೊತ್ತು ಮುಖ್ಯಸ್ಥ ಅವನನ್ನು ಕರೆದುಕೊಂಡು ಸುತ್ತಾಡಲು ಹೊರಟನು. ದೊಡ್ಡ ಮೋಟರ್ ಕಾರಿನಲ್ಲಿ ಹಾಹೂ ಕುಳಿತಿದ್ದನು. ಪಂಡಿತರು ಹತ್ತು ಜನ ಸುತ್ತಲೂ ಕುಳಿತಿದ್ದರು. ಆ ಹೊತ್ತಿಗೆ ಇನ್ನೂ ಬೆಳಕಿತ್ತು. ಮೋಟರು ಎಷ್ಟು ಬಲವನ್ನು ಹಾಕಿದರೂ ಬಹಳ ಕಷ್ಟದಿಂದ ಹೋಗುತ್ತಿತ್ತು. ಆ ಮಹಾನಗರವನ್ನು ನೋಡಿದನು. ದೊಡ್ಡ ದೊಡ್ಡ ಬೀದಿಗಳನ್ನು ನೋಡಿದನು. ಬೀದಿಯ ಮಧ್ಯದಲ್ಲಿ ಸ್ಥಾಪಿಸಿದ್ದ ಪ್ರತಿಮೆಗಳನ್ನು ನೋಡಿದನು. ಎಲ್ಲವೂ ಬಹಿರಂಗವಾಗಿರುವ ಈ ನಾಗರಿಕತೆಯನ್ನು ನೋಡಿದನು. ಆ ಸಂಚಾರದಲ್ಲಿ ಥೇಮ್ಸ್ ನದಿಯ ದಡಕ್ಕೆ ಹೋದರು. ಅಲ್ಲಿ ಹಾಹೂ ದೋಣಿಗಳನ್ನೂ ಸ್ಟೀಮರ್ಗಳನ್ನೂ ನೋಡಿದನು. ಅವನಿಗೆ, ದೋಣಿಗಳು ಕೂಡ ಮೋಟರಿಂದ ಸಾಗುತ್ತಿರುವ ಥೇಮ್ಸ್ ನದಿ ಕಂಡಿತು. ಕಾಣುತ್ತಿದ್ದಂತೆಯೇ ಅವನು ಮೋಟರನ್ನು ನಿಲ್ಲಿಸಲು ಹೇಳಿ ಕೆಳಗಿಳಿದನು. ಪಂಡಿತರನ್ನು ನೋಡಿ “ಇಲ್ಲಿ ನದಿ ಇದೆಯಲ್ಲ, ನದಿಯಿಲ್ಲ ಎಂದು ನನ್ನ ಬಳಿ ಹೇಳಿದ್ದರಲ್ಲ!” ಎಂದನು. ಆ ಪಂಡಿತರು ತಮಗೆ ಆ ವಿಷಯ ಗೊತ್ತಿಲ್ಲ ಎಂದರು. ಜನರು ಗುಂಪುಗುಂಪಾಗಿ ಬಂದು ಅವನನ್ನು ನೋಡಲು ಪ್ರಾರಂಭಿಸಿದರು. ಮತ್ತೆ ಹೊತ್ತು ಮುಳುಗುವ ಹೊತ್ತಿಗೆ ಮುಖ್ಯಸ್ಥನು ಮನೆ ತಲಪಿದನು.
ಮಾರನೇ ದಿನ ಬೆಳಗ್ಗೆಯೇ ಮುಖ್ಯಸ್ಥನು ಎದ್ದು ಹಾಹೂವನ್ನು ನೋಡಲು ಹೋದನು. ಹಾಹೂ ತನ್ನ ಕೋಣೆಯಲ್ಲಿ ಇಲ್ಲ. ಇಷ್ಟರಲ್ಲಿ ಗೌರ್ಮೆಂಟ್ ಭವನದಿಂದ ಮುಖ್ಯಸ್ಥನ ಮನೆಗೆ ಫೋನ್ ಕರೆ ಬಂತು. ಹಾಹೂ ಥೇಮ್ಸ್ ನದಿಯಲ್ಲಿ ಸ್ನಾನ ಮಾಡುತ್ತಿದ್ದಾನೆ ಎಂದು. ಅಷ್ಟು ಹೊತ್ತಿಗೆ ಲಂಡನ್ ಇನ್ನೂ ಸರಿಯಾಗಿ ಎಚ್ಚರಗೊಂಡಿರಲಿಲ್ಲ. ಅರ್ಧ ಗಂಟೆಯಲ್ಲಿ ನಿದ್ರೆಹೋಗಿದ್ದ ಜನರೆಲ್ಲರೂ ಎದ್ದು ಥೇಮ್ಸ್ ದಡಕ್ಕೆ ಓಡಿದರು. ಮೋಟಾರುಗಳು ಕಿಕ್ಕಿರಿದುಬಿಟ್ಟಿದ್ದವು. ಜನರು ದೋಣಿಗಳ ಮೇಲೆ, ಕಂಬಗಳ ಮೇಲೆ ಎಲ್ಲ ಹತ್ತಿ ನೋಡುತ್ತಿದ್ದರು.
ಹಾಹೂ ಸ್ನಾನವನ್ನು ಮಾಡುತ್ತಿದ್ದನು. ಅವನು ಒಂದು ಬಾರಿ ಮುಳುಗೆದ್ದು ರೆಕ್ಕೆಯನ್ನು ಅಲ್ಲಾಡಿಸುವ ಹೊತ್ತಿಗೆ ಚಂಡಮಾರುತದ ಹೊತ್ತಿನ ಸಮುದ್ರದಂತೆ ನದಿಯ ಅಲೆಗಳು ಮೇಲೆದ್ದು ದಡವನ್ನು ದಭಾಲ್ ಎಂದು ಹೊಡೆಯುತ್ತಿದ್ದವು. ಲಂಗರನ್ನು ಹಾಕಿದ್ದ ದೊಡ್ಡ ದೊಡ್ಡ ಸ್ಟೀಮರ್ಗಳು ಕೂಡ ಬಾಗಿ ಒರಗುತ್ತಿದ್ದವು. ಸಣ್ಣ ಸಣ್ಣ ದೋಣಿಗಳು ತಲೆಕೆಳಗಾಗಿ ಬಿದ್ದಿದ್ದವು. ಅವನು ನೀರಿನಲ್ಲಿ ಕುಪ್ಪಳಿಸಿ ಸೊಂಟದ ತನಕ ಏಳುತ್ತಿದ್ದನು. ಎದ್ದು ರೆಕ್ಕೆಗಳನ್ನು ಕೊಡವುತ್ತಿದ್ದನು. ಒಂದು ಕಡೆಯಲ್ಲಿರುವ ಬೆಟ್ಟವೊಂದು ಒಡ್ಡಿಕೊಂಡಿದ್ದರೆ ಭಯಂಕರವಾದ ಸಮುದ್ರದ ಅಲೆಗಳು ಅದಕ್ಕೆ ಹೊಡೆದುಕೊಳ್ಳುತ್ತಿದ್ದರೆ ನೀರು ಉಲ್ಲೋಲಕಲ್ಲೋಲವಾಗಿ ಚಿಮ್ಮುತ್ತಿರುವಂತೆ ಅವನ ರೆಕ್ಕೆಗಳ ಹಿಂದೆಯೇ ಥೇಮ್ಸ್ ನದಿಯ ತರಂಗಜಲ ಎದ್ದು, ದೂರದಲ್ಲಿ ದೋಣಿಗಳಲ್ಲಿರುವ ಜನರನ್ನು ಮಳೆನೀರಿನ ತುಂತುರು ಒದ್ದೆಯಾಗಿಸುವಂತೆ ಸುರಿಯುತ್ತಿತ್ತು.
ಅವನು ಒಂದು ದೊಡ್ಡ ತಿಮಿಂಗಿಲದ ಹಾಗೆಯೇ ನದಿಯ ಮಧ್ಯದಲ್ಲಿ ರಿವ್ವನೆ ಸಾಗಿದರೆ, ದೊಡ್ಡ ಹಡಗು ಸಮುದ್ರದಲ್ಲಿ ಹೋಗುತ್ತಿದ್ದರೆ ಅದರ ಹಿಂದೆ ನೀರು ಸೀಳಿಕೊಂಡು ದೊಡ್ಡ ಹಳ್ಳ ಬಿದ್ದಂತೆ ಅವನ ಹಿಂದೆಯೂ ಕೂಡ ಹಾಗೆಯೇ ಒಂದು ಭಾಗವಾಗಿ ಸಾಗುತ್ತಿತ್ತು. ಅವನು ಕೈಯಿಂದ ನೀರನ್ನು ಹೊಡೆಯುತ್ತಿದ್ದನು. ಸಿಡಿಲು ಬಿದ್ದಂತೆ ಸದ್ದಾಗುತ್ತಿತ್ತು. ಆ ಏಟನ್ನೂ ವೇಗವನ್ನೂ ನದಿ ತಾಳಿಕೊಳ್ಳುವುದಿಲ್ಲವೋ ಎಂದೆನಿಸುತ್ತಿತ್ತು. ಒಂದು ಸಣ್ಣ ಕೆರೆಯಲ್ಲಿ ಆನೆಯೊಂದು ನುಗ್ಗಿದರೆ ನೀರೆಲ್ಲ ಉಕ್ಕುವಂತೆ ಥೇಮ್ಸ್ ನದಿ ಉಕ್ಕುತ್ತಿತ್ತು. ದೊಡ್ಡ ಕೋಲಾಹಲವೇ ಆಯಿತು. ಅವನು ಸ್ನಾನವನ್ನು ಮಾಡುವುದು ಸುತ್ತಲೂ ಇದ್ದವರಿಗೆಲ್ಲ ಉಪದ್ರವವಾಯಿತು. ಅವನು ನದಿಯಿಂದ ಹೊರಕ್ಕೆ ಬರುವಂತೆ ಮಾಡುವುದು ಹೇಗೆಂದು ತಿಳಿಯಲಿಲ್ಲ.
ಒಂದು ಗಂಟೆ ಕಳೆದ ಬಳಿಕ ಅವನಾಗಿ ಅವನೇ ಹೊರಗೆ ಬಂದನು. ಅದು ಲಂಡನ್ ಆಗಿರುವುದರಿಂದ ಮಂಜು ಸುರಿಯುತ್ತಲೇ ಇತ್ತು. ಅವನು ಹೊರಗೆ ಬಂದು ತಾನಿದ್ದ ಮುಖ್ಯಸ್ಥನ ಮನೆಗೆ ಹೋಗುತ್ತಿದ್ದನು. ಅವನ ಹಿಂದೆಯೇ ಪಂಡಿತರೂ ಮುಖ್ಯಸ್ಥನೂ ಎಲ್ಲರೂ ಹೋದರು. ಮನೆಗೆ ಹೋಗಿ ಅವನು ಮತ್ತೆ ಪ್ರಾಣಾಯಾಮದಲ್ಲಿ ಕುಳಿತುಕೊಂಡನು. ರಾತ್ರಿ ಹನ್ನೆರಡಾದರೂ ಏಳಲಿಲ್ಲ.
ಬೆಳಗಾಗುತ್ತಲೇ ಅವನು ಹೋಗಿ ಮುಖ್ಯಸ್ಥನನ್ನು ಎಬ್ಬಿಸಿದನು. ಪಂಡಿತರೂ ಪಕ್ಕದಲ್ಲಿಯೇ ಇದ್ದರು. ಅವನು ಹೀಗೆಂದನು – “ನಿಮ್ಮ ನದಿ ಚಿಕ್ಕದು. ಅದಕ್ಕಾಗಿಯೇ ಬೆಳಗ್ಗೆ ನಾನು ಸ್ನಾನವನ್ನು ಮಾಡುತ್ತಿದ್ದಾಗ ಕೆಲವು ಹಡಗುಗಳು ಕೂಡ ಮುಳುಗಿಹೋದವು. ನದಿ ಉಲ್ಲೋಲಕಲ್ಲೋಲವಾಯಿತು. ನಿಮಗೆ ಅದು ಅಪಾಯಕರವಾಯಿತೆಂದು ನನಗೆ ಆಮೇಲೆ ಗೊತ್ತಾಯಿತು. ನಾನು ಇನ್ನು ನಿಮ್ಮ ನದಿಯಲ್ಲಿ ಸ್ನಾನವನ್ನು ಮಾಡುವುದಿಲ್ಲ ಬಿಡಿ” ಎಂದನು. ಪಂಡಿತರು “ನಾವು ಅದನ್ನೇ ತಮ್ಮಲ್ಲಿ ಹೇಳೋಣವೆಂದುಕೊಂಡಿದ್ದೆವು” ಎಂದರು.
ಬೆಳಕು ಹರಿದಿತ್ತು. ಇಷ್ಟರಲ್ಲಿ ಹಾಹೂ ಬಂದು ಹತ್ತು ತಿಂಗಳುಗಳೇ ಆಗಿದ್ದವು. ಪ್ರಪಂಚದಲ್ಲಿ ಎಲ್ಲ ಕಡೆಯಲ್ಲಿಯೂ ಹಾಹೂ ಕಥೆಯನ್ನು ಕೇಳದವರೇ ಇಲ್ಲ. ಹಿಂದೂದೇಶದಲ್ಲಿ ಕೂಡ ಈ ಸಂಗತಿ ತಿಳಿದಿತ್ತು. ಅವರಲ್ಲಿ ಕೆಲವು ಸಂಪ್ರದಾಯಸ್ಥರು “ಅವನು ಯಾರೋ ಗಂಧರ್ವ, ಶಾಪವಶದಿಂದಲೋ ಏನೋ ಅಲ್ಲಿ ಹಾಗೆ ಬಿದ್ದಿದ್ದನು” ಎಂದು ಹೇಳುತ್ತಿದ್ದರು. ಉಳಿದವರು “ಗಂಧರ್ವ ಅಲ್ಲ, ಯಕ್ಷನೋ ಪಿಶಾಚವೋ ಏನೋ. ಅದೊಂದು ವಿಪರೀತಸೃಷ್ಟಿ” ಎಂದರು. ಕೆಲವರು ಚೆನ್ನಾಗಿ ತಿಳಿವುಳ್ಳವರು “ಇದೆಲ್ಲಾ ಸ್ಟಂಟ್ (stunt)” ಎಂದರು. ಮತ್ತೆ ಸ್ವಲ್ಪ ಕಡಮೆ ತಿಳಿವುಳ್ಳವರು “ಹಾಗೆ ಏಕೆ ಇರಬಾರದು? ಕಿಂಗ್ ಕಾಂಗ್ (King Kong) ಇಲ್ಲವಾ?” ಎಂದರು.
ಹಿಂದೂದೇಶದಿಂದ, ಚೈನಾದೇಶದಿಂದ, ಜಪಾನಿನಿಂದ ಜನರು ಹಾಹೂವನ್ನು ನೋಡುವುದಕ್ಕೆ ಹೋದರು. ಯಾವ ಮತದವರು ಕಂಡರೂ ಆ ಮತದವರು ತಮ್ಮ ಪುರಾಣಗಳಲ್ಲಿ ಇರುವ ಯಾವುದೋ ಒಂದು ದೇವತೆಗೆ ಹಾಹೂವನ್ನು ಮುಡಿಪಾಗಿಸಿಕೊಂಡರು. ಹಣವಿರುವವರೂ ಖರ್ಚು ಮಾಡಬಲ್ಲವರೂ ಬಂದು ನೋಡಿಕೊಂಡು ಹೋಗುತ್ತಿದ್ದರು.
* * *
೧೦
ಪಂಡಿತರು, ಹಾಹೂ ಕುಳಿತುಕೊಂಡು ಮಾತನಾಡುವುದು ಹೆಚ್ಚಾಗಿತ್ತು.
ಪಂಡಿತರು: ನೀವು ನಮ್ಮ ದೇಶಕ್ಕೆ ಬಂದು ಹನ್ನೊಂದು ತಿಂಗಳು ಕಳೆದವು. ನಿಮ್ಮ ಸಂಗತಿ ನಮಗೇನೂ ಗೊತ್ತಿಲ್ಲ. ನಿಮ್ಮ ದೇಶವನ್ನು ಕುರಿತು, ನಿಮ್ಮನ್ನು ಕುರಿತು ನಮಗೆ ಏನೇನೂ ತಿಳಿದಿಲ್ಲ. ನೀವು ಯಾವತ್ತೂ ನಮ್ಮ ದೇಶದಲ್ಲೇ ಇರುತ್ತೀರಾ? ಇನ್ನೂ ಬೇರೆ ದೇಶಗಳನ್ನು ನೋಡಬೇಕೆಂದು ನಿಮಗೇನಾದರೂ ಆಸೆಯಿದೆಯಾ?
ಹಾಹೂ: ನನ್ನ ಸಂಗತಿ ನಿಮಗೆ ಈಗಿಂದೀಗಲೇ ತಿಳಿಯುವುದಿಲ್ಲ. ಕೆಲವು ದಿನಗಳಲ್ಲಿ ನಿಮಗೆ ಅದೊಂದು ರೀತಿಯಲ್ಲಿ ತಿಳಿಸುತ್ತೇನೆ. ಇತರ ದೇಶಗಳನ್ನು ಯಾವುದನ್ನೂ ನಾನು ನೋಡಬೇಕೆಂದೇನಿಲ್ಲ. ಇಲ್ಲಿ ನಾನು ಇನ್ನೆಷ್ಟು ದಿನ ಇರುತ್ತೇನೋ ಹೇಳಲಾಗುವುದಿಲ್ಲ.
ಪಂಡಿತರು: ಹೋದರೆ ನೀವು ಎಲ್ಲಿ ಹೋಗುತ್ತೀರಾ?
ಹಾಹೂ: ಆ ಸಂಗತಿಯನ್ನೇ ನಿಮಗೆ ಆಮೇಲೆ ತಿಳಿಸುತ್ತೇನೆ ಎಂದು ಹೇಳಿದ್ದು.
ಪಂಡಿತರು: ನಿಮಗೆ ಮನುಷ್ಯಜ್ಞಾನಕ್ಕಿಂತ ಹೆಚ್ಚು ಜ್ಞಾನವಿದೆ. ನಿಮಗೆ ತಿಳಿದ ಇತರ ವಿಷಯಗಳನ್ನು ನಮಗೂ ಹೇಳಿ. ಮನುಷ್ಯರು ಸತ್ತ ಮೇಲೆ ಏನಾಗುತ್ತಾರೆ?
ಹಾಹೂ: ಅದನ್ನು ನಿಮ್ಮ ಮತಗುರುಗಳನ್ನು ಕೇಳಿಕೊಳ್ಳಿರಿ.
ಪಂಡಿತರು: ನಮ್ಮ ಮತಗುರುಗಳು ಇಲ್ಲಿಯತನಕ ಯಾವುದೋ ಒಂದು ವಿಧವಾಗಿ ಹೇಳಿದ್ದಾರೆ. ಅದೇ ನಿಜವೇ?
ಹಾಹೂ: ಯಾರ ಮತಗುರುಗಳು ಹೇಳಿದ್ದು ಅವರ ಮತದಲ್ಲಿರುವವರಿಗೆ ಸಂಬಂಧಿಸಿದ ಮಟ್ಟಕ್ಕೆ ನಿಜವೇ. ಏಕೆಂದರೆ ಆ ಜ್ಞಾನ ಅವರ ಸಂಸ್ಕಾರಕ್ಕೆ ಅನುಗುಣವಾಗಿ ಇರುತ್ತದೆಯಾದ್ದರಿಂದ. ಅವರ ಸ್ವಭಾವಗಳಿಂದ ಅದನ್ನು ನಂಬಿಕೊಳ್ಳುವ ಶಕ್ತಿ ಮಾತ್ರ ಅವರಿಗೆ ಇರುತ್ತದೆಯಾದ ಕಾರಣ. ಚಿಕ್ಕ ಮೀನು ಚಿಕ್ಕ ಕೆರೆಯಲ್ಲಿರುತ್ತದೆ. ದೊಡ್ಡ ಮೀನು ದೊಡ್ಡ ಕೆರೆಯಲ್ಲಿರುತ್ತದೆ. ತಿಮಿಂಗಿಲ ಸಮುದ್ರದಲ್ಲಿ ಇರುತ್ತದೆ. ಚಿಕ್ಕ ಕೆರೆಯಲ್ಲಿ ತಿಳಿನೀರಿನಲ್ಲಿ ಇರುವ ಮೀನನ್ನು ಸಮುದ್ರದಲ್ಲಿ ಬಿಟ್ಟರೆ ಅದು ಸಾಯುತ್ತದೆ. ನಮ್ಮ ಶರೀರಗಳೂ ನಮ್ಮ ಸಂಸ್ಕಾರಗಳಿಗೆ ಅನುಗುಣವಾಗಿ ಇರುತ್ತವೆ. ನಮ್ಮ ಮನಶ್ಶಕ್ತಿ ನಾವಿರುವ ದೇಶಗಳನ್ನೂ ನಮ್ಮ ಶರೀರವನ್ನೂ ನಮ್ಮ ಪೂರ್ವಿಕರ ಆಚರಣೆಗಳನ್ನೂ ಅನುಸರಿಸಿಕೊಂಡು ಇರುತ್ತದೆ. ಇದೊಂದು ಗಾಢವಾದ ಬಂಧ.
ಪಂಡಿತರು: ನಮಗೆ ಈ ವಿಷಯಗಳೆಲ್ಲ ಗೊತ್ತು. ಈ ವಿಷಯಗಳ ಮೇಲೆ ನಮ್ಮಲ್ಲಿ ದೊಡ್ಡ ದೊಡ್ಡ ಶಾಸ್ತ್ರಗಳನ್ನು ಬರೆದಿದ್ದಾರೆ.
ಹಾಹೂ: ಮತ್ತೆ ಇನ್ನು ನಾನು ಹೇಳಬೇಕಾದದ್ದೇನಿದೆ?
ಪಂಡಿತರು: ಪರಲೋಕವನ್ನು ಕುರಿತು.
ಹಾಹೂ: ಮತ್ತೆ ಅವುಗಳನ್ನು ಕುರಿತು ನಿಮ್ಮಲ್ಲಿ ಶಾಸ್ತçಗಳಿಲ್ಲವೇ?
ಪಂಡಿತರು: ಇವೆ. ಆದರೆ ಅವುಗಳನ್ನು ಕುರಿತು ಇದಮಿತ್ಥಂ ಎಂಬಂತೆ ಗಟ್ಟಿಯಾದ ನಂಬಿಕೆಯಿಲ್ಲ.
ಹಾಹೂ: ನಾನು ಹೇಳುವುದೂ ಅದೇ. ಆ ನಂಬಿಕೆ ವ್ಯಕ್ತಿಗೆ ತಕ್ಕಂತೆ ಬದಲಾಗುತ್ತದೆ. ವರ್ಣಕ್ಕೆ ತಕ್ಕಂತೆ ಬದಲಾಗುತ್ತದೆ. ಜಾತಿಗೆ ತಕ್ಕಂತೆ ಬದಲಾಗುತ್ತದೆ. ತನಗೆ ಯಾವುದರಲ್ಲಿ ವಿಶ್ವಾಸವಿದೆಯೋ ಅದಾಗಲೀ ಅದನ್ನು ಕುರಿತಾಗಲೀ ಹೇಳಿದರೆ ಅವುಗಳಲ್ಲಿ ವಿಶ್ವಾಸವುಂಟಾಗದು. ಮೇಲಾಗಿ ಒಂದು ದೊಡ್ಡ ಪರ್ವತದ ಮೇಲೆ ನಿವಾಸ ಮಾಡುತ್ತಿರುವವನ ಬಳಿ ಸಮುದ್ರ ಇದೆಯೆಂದು ಹೇಳುತ್ತೇವೆ. ಅವನು ನಂಬುತ್ತಾನೆ. ಪ್ರಯೋಜನವೇನಾಯ್ತು? ಹೋಗಿ ನೋಡುತ್ತಾನೆ. ಆ ಅನುಭವದಲ್ಲಿ ಸ್ವಲ್ಪ ಭೇದವಾಯ್ತು. ಅದರ ಮೇಲೆಯೇ ಪ್ರಯಾಣವನ್ನು ಮಾಡುತ್ತಾನೆ. ಮತ್ತಷ್ಟು ಅನುಭವದ ವ್ಯತ್ಯಾಸವಾಯ್ತು. ಒಬ್ಬನು ಅದರಲ್ಲಿಯೇ ಮುಳುಗಿ ರತ್ನಗಳನ್ನು ತೆಗೆದುಕೊಂಡು ಬರುತ್ತಾನೆ. ಅದು ಬೇರೆಯದೇ ಅನುಭವ. ಪ್ರಯೋಜನವೇನಿದೆ? ಅಷ್ಟರಲ್ಲಿಯಾದರೂ ಸಮುದ್ರ ಅವರಿಗೆ ಸಂಪೂರ್ಣವಾಗಿ ತಿಳಿಯಿತಾ? ಯಾವುದು ನಮಗೆ ಗಾಢವಾದ ಅನುಭವಕ್ಕೆ ಬರುತ್ತದೆಯೋ ಅದರಲ್ಲಿ ನಮಗೆ ಸಾಫಲ್ಯ. ಉಳಿದ ವ್ಯರ್ಥವಾದ ಉಪನ್ಯಾಸಗಳಿಂದ ಯಾವುದೇ ಪ್ರಯೋಜನವಿಲ್ಲ. ಅದಕ್ಕಾಗಿಯೇ ತಿಳಿದುಕೊಳ್ಳಬೇಕಾದ ವಿಷಯಗಳನ್ನು ದೊಡ್ಡದಾಗಿ ರಾಶಿ ಹಾಕಿಕೊಳ್ಳುವುದಕ್ಕಿಂತ ಒಂದು ವಿಷಯವನ್ನು ಅನುಭವಪೂರ್ವಕವಾಗಿ ಚೆನ್ನಾಗಿ ತಿಳಿದುಕೊಂಡರೆ ಹೆಚ್ಚು ಕೃತಾರ್ಥತೆ.
ಅವನು ಹೇಳಿದ ಉಪನ್ಯಾಸ ಮಾರನೇ ದಿನ ಯೂರೋಪಿನ ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಯಿತು. ಹತ್ತು-ಹನ್ನೊಂದು ತಿಂಗಳುಗಳು ಕಳೆದ ಮೇಲೆ ಹಾಹೂ ರೂಪವನ್ನು ಕುರಿತ ಕುತೂಹಲ ಬಹಳ ಕಡಮೆಯಾಗಿತ್ತು. ಅದು ಕೂಡ ಒಂದು ಪರಿಚಿತವಾದ ವಿಷಯವೆಂಬಂತೆ ಪರಿಗಣಿಸಲ್ಪಟ್ಟಿತ್ತು. ಅವನ ಈ ಉಪನ್ಯಾಸವನ್ನು ಓದಿ ಯುರೋಪು ಅಮೇರಿಕಾಗಳಲ್ಲಿರುವ ಪಂಡಿತರಲ್ಲಿ ಕೆಲವರು ಅವನನ್ನು ತಾತ್ತ್ವಿಕ (ತತ್ತ್ವಜ್ಞಾನಿ) ಎಂದರು. ಕೆಲವರು ಅವನನ್ನು ಮತಪ್ರವಾದಿ ಎಂದರು. ಕೆಲವರು ಆಲೋಚನಾಪರ (‘ಥಿಂಕರ್’) ಎಂದರು. ಅವನ ಈ ಮಾತನ್ನು ಕೆಲವರು ಕೇಳುತ್ತಲೂ ಕೆಲವರು ಓದುತ್ತಲೂ ಯೂರೋಪು ಅಮೆರಿಕಾಗಳಿಗೆ ಅವನಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿತು- “ಈ ಮೃಗವೇನು? ಈ ಮಾತುಗಳೇನು?” ಎಂದು.
ಅವನನ್ನು ನೋಡಲು ಗುಂಪುಗುಂಪಾಗಿ ಮತ್ತೆ ಹೊರಟರು. ಜನರು ಮತ್ತೆ ತನ್ನನ್ನು ನೋಡುವುದಕ್ಕೆ ಗುಂಪುಗುಂಪಾಗಿ ಬರುತ್ತಿದ್ದಾರೆಂದು ಅವನಿಗೂ ಗೊತ್ತಾಯಿತು. ಅವನು ಹೇಳಿದನು – “ನನ್ನ ಮಾತುಗಳನ್ನು ನೀವು ಪತ್ರಿಕೆಗಳಲ್ಲಿ ಪ್ರಕಟಿಸಿದರೆ ಈ ಜನರಿಗೆ ನಾನು ಪ್ರಾಣಿ ಎಂಬ ಬುದ್ಧಿ ಕಡಮೆಯಾಗುವ ಬದಲು ಹೆಚ್ಚಾಯಿತೋ ಹೇಗೆ?”
ಒಂದು ದಿನ ಇವನನ್ನು ಕರೆದುಕೊಂಡು ಹೋಗಿ ರೈಲುಗಳನ್ನು ತೋರಿಸಿದರು. ಸ್ಟೀಮ್ ಬೋಟುಗಳನ್ನು ತೋರಿಸಿದರು. ಫಿರಂಗಿಗಳನ್ನು ತೋರಿಸಿದರು. ಮುದ್ರಣಾಲಯವನ್ನು ತೋರಿಸಿದರು. ತಂತಿವಾರ್ತೆಯನ್ನು ತೋರಿಸಿದರು. ಇವುಗಳೆಲ್ಲವನ್ನೂ ಕುರಿತು ಅವನಿಗೆ ವಿವರಿಸಿ ಹೇಳಿದರು. ಅವನು ಎಲ್ಲವನ್ನೂ ಸಾವಕಾಶವಾಗಿ ಕೇಳಿದನು.
ಪಂಡಿತರು: ನಾವು ಪ್ರಪಂಚದಲ್ಲಿ ಮಹಾವಿಷಯಗಳನ್ನು ಕಂಡುಹಿಡಿದಿದ್ದೇವೆ. ಇವುಗಳೆಲ್ಲವನ್ನೂ ಮಾನವರು ಇಲ್ಲಿಯ ತನಕ ಯಾವತ್ತೂ ಮಾಡಿರಲಿಲ್ಲ. ನಾವು ಮಾಡಿದ್ದೇವೆ. ಇವುಗಳಲ್ಲಿ ನಿಮಗೇನೂ ಆಶ್ಚರ್ಯವುಂಟಾಗಲಿಲ್ಲವೇ?
ಹಾಹೂ: ಇವುಗಳಲ್ಲಿ ಆಶ್ಚರ್ಯವೇನೂ ಇಲ್ಲ. ಒಂದು ಬುದ್ಧಿ ಒಂದು ಪದ್ಧತಿಯಲ್ಲಿ ತಿರುಗುತ್ತ ಇದ್ದರೆ ಅದಕ್ಕೆ ಅನುಗುಣವಾದ ಆಲೋಚನೆಯನ್ನೇ ಮಾಡುತ್ತ ಇರುತ್ತದೆ. ಆಗ ಈ ತರಹದವೆಲ್ಲಾ ಹೊರಬರುತ್ತವೆ.
ಪಂಡಿತರು: ಮತ್ತೆ ಈ ಪ್ರಪಂಚದಲ್ಲಿ ಬೇರೆ ಯಾವ ದೇಶದವರೂ ಇಂತಹವುಗಳನ್ನು ಮಾಡಲಿಲ್ಲ.
ಹಾಹೂ: ಅವರು ಮಾಡಬಲ್ಲದ್ದನ್ನು ಅವರು ಮಾಡಿದ್ದಾರೆ. ನೀವು ಭಾರತದೇಶವನ್ನು ತಿಳಿದಿದ್ದೀರಲ್ಲವೇ!
ಪಂಡಿತರು “ಹೂ” ಎಂದರು. ಆಮೇಲೆ ಹಾಹೂ ಏನೂ ಮಾತನಾಡಲಿಲ್ಲ.
ಅಲ್ಲಿಂದ ಅವನನ್ನು ಪ್ರಾಣಿಸಂಗ್ರಹಾಲಯಕ್ಕೆ ಕರೆದುಕೊಂಡು ಹೋದರು. ಅದೊಂದು ದೊಡ್ಡ ಆಫ್ರಿಕಾದ ಅಡವಿಯಂತೆಯೇ ಇತ್ತು. ಒಬ್ಬ ಪಂಡಿತ ನಗುತ್ತಾ ಹಾಹೂ ಬಳಿ ಹೇಳಿದನು, “ನಿಜವಾಗಿ ನಿಮ್ಮನ್ನು ಇಲ್ಲಿ ಇಡಬೇಕಿತ್ತು” ಎಂದು. ಎಲ್ಲರೂ ಝೂ ಒಳಕ್ಕೆ ಹೋದರು. ಹಾಹೂ ಒಳಕ್ಕೆ ಕಾಲಿಡುತ್ತಿದ್ದಂತೆಯೇ ಒಂದೆರಡು ಪ್ರಾಣಿಗಳು ಅವನನ್ನು ನೋಡಿದವು. ಯಾವುದೋ ವಾಸನೆ ಹಿಡಿದಂತೆ ಝೂನಲ್ಲಿರುವ ಮೃಗಗಳೆಲ್ಲವೂ ಒಂದೇ ಸಾರಿ ಕೊರಳೆತ್ತಿ ಕೂಗಿದವು. ಆ ಮಹಾಧ್ವನಿಯನ್ನು ಅಲ್ಲಿರುವ ಜನರು ತಡೆದುಕೊಳ್ಳದಾದರು. ಕೆಲವು ದೊಡ್ಡ ಪ್ರಾಣಿಗಳು ತಮ್ಮ ಬೋನನ್ನು ಮುರಿದುಕೊಂಡು ಹೊರಕ್ಕೆ ಬರಲು ಪ್ರಯತ್ನಿಸತೊಡಗಿದವು. ಕೆಲವು ಕೋತಿಗಳು, ಎರಡು ಆನೆಗಳು, ಮೂರ್ನಾಲ್ಕು ಮೊಸಳೆಗಳು ತಮ್ಮ ಸ್ಥಾನಗಳಿಂದ ತಪ್ಪಿಸಿಕೊಂಡು ಹೊರಕ್ಕೆ ಬಂದವು.
ಈ ಘೋರಕ್ಕೆ ಕಾರಣ ತಿಳಿಯದೇ ಎಲ್ಲರೂ ಭಯಗೊಂಡರು. ಆಗ ಹಾಹೂ ಈ ಪ್ರಾಣಿಗಳ ಮಹಾಧ್ವನಿಯನ್ನು ಕೇಳಿ ಈ ಕೋಲಾಹಲವನ್ನು ಕಂಡು ಪಂಡಿತರನ್ನೆಲ್ಲರನ್ನೂ ಹಿಂದಕ್ಕೆ ಕರೆದುಕೊಂಡು ಹೊರಟನು.
ಆಮೇಲೆ ನಾಲ್ಕು ದಿನಗಳ ಬಳಿಕ ಒಬ್ಬ ಮುಖ್ಯಸ್ಥನ ಮನೆಯಲ್ಲಿ ದೊಡ್ಡ ಔತಣಕೂಟ ನಡೆಯಿತು. ಆ ದಿನ ಹಾಹಾಹೂಹೂ ಲಂಡನ್ನಿನಲ್ಲಿ ಕಾಣಿಸಿಕೊಂಡು ಸರಿಯಾಗಿ ಒಂದು ವರ್ಷವಾಗಿತ್ತು. ರಾತ್ರಿ ಎಂಟು ಗಂಟೆಗೆ ಔತಣ ಪ್ರಾರಂಭವಾಯಿತು. ಅದಕ್ಕೆ ಹಾಹಾಹೂಹೂವನ್ನು ಕೂಡ ಕರೆದಿದ್ದರು. ಅವನೂ ಹೋಗಿದ್ದನು. ಅವನ ಸುತ್ತಲೂ ಪಂಡಿತರು ಕುಳಿತಿದ್ದರು. ರಾತ್ರಿ ಹನ್ನೊಂದು ಗಂಟೆಗೆ ಎಲ್ಲವೂ ಮುಗಿದಿತ್ತು. ಆಗ ಒಬ್ಬ ದೊಡ್ಡ ಜರ್ಮನಿಯ ಸಂಗೀತಶಾಸ್ತçಜ್ಞ ಪಿಯಾನೋದಲ್ಲಿ ತಾನು ಬರೆದ ಹೊಸ ಸಂಗೀತವನ್ನು ಹಾಡುವುದಕ್ಕೆ ಏರ್ಪಾಟಾಗಿತ್ತು. ಇಷ್ಟರಲ್ಲಿಯೇ ಪಂಡಿತರ ಜೊತೆಯ ಮಾತುಕತೆಯಲ್ಲಿ ಯೂರೋಪಿನಲ್ಲಿ ದೊಡ್ಡ ಸಂಗೀತಗಾರರಿದ್ದಾರೆ ಎಂದು ಹಾಹಾಹೂಹೂ ಕೇಳಿದ್ದನು. ಆದರೆ ಯಾವತ್ತೂ ಅವರ ಸಂಗೀತವನ್ನು ಕೇಳಿರಲಿಲ್ಲ.
ಆ ದಿನ ರಾತ್ರಿ ಆ ಜರ್ಮನ್ ಪಂಡಿತ ಬಂದನು. ಅವನು ಸ್ವಲ್ಪ ಕುಳ್ಳಗಿದ್ದನು. ಕೆಂಪಾದ ಗಡ್ಡೆಯಂತಿದ್ದನು. ಕಪ್ಪಾದ ಪ್ಯಾಂಟನ್ನು ಹಾಕಿಕೊಂಡು, ಬಿಳಿದಾದ ಅಂಗಿಯನ್ನು ತೊಟ್ಟುಕೊಂಡಿದ್ದನು. ಅವನು ಪಿಯಾನೋ ಹತ್ತಿರ ಕುಳಿತುಕೊಂಡು ರೀಡುಗಳ ಮೇಲೆ ಬೆರಳನ್ನು ಇಡುತ್ತ ಧ್ವನಿತರಂಗಗಳನ್ನು ಸೃಷ್ಟಿಸಿದನು, ಬಾಸ್ ಅಲ್ಲಿ (Bass – ಯೂರೋಪಿಯನ್ ಸಂಗೀತದಲ್ಲಿ ಇದು ಒಂದು ಸ್ಥಾಯಿ – ‘ಮಂದ್ರ’) ಆ ಜರ್ಮನ್ ಪಂಡಿತ ಪ್ರಸಿದ್ಧ. ಆತ ಆ ಸ್ಥಾಯಿಯಲ್ಲಿ ಹಾಡಲು ಪ್ರಾರಂಭಿಸಿದನು. ವಾದನವನ್ನೂ ಮಾಡತೊಡಗಿದನು. ಊಟದ ಚಾವಡಿಯಲ್ಲೆಲ್ಲ ಕುದುರೆಗಳ ಹೇಷಾರವದಂತಹ ಧ್ವನಿಗಳು ಚಿತ್ರವಿಚಿತ್ರವಾಗಿ ವ್ಯಾಪಿಸಿದವು. ಹಾಹಾಹೂಹೂ ಕುಳಿತಿದ್ದವನು ಎದ್ದು ಪಿಯಾನೋ ಹತ್ತಿರಕ್ಕೆ ಹೋದನು. ಅವನ ಹಿಂದೆಯೇ ಪಂಡಿತರೂ ಹೋದರು. ಜರ್ಮನ್ ಪಂಡಿತನು ಪಿಯಾನೋ ನುಡಿಸುತ್ತಿದ್ದರೆ ಹಾಹಾಹೂಹೂ ಎಚ್ಚರದಿಂದ ನೋಡಿದನು. ಅವನು ಯಾಕೆ ನೋಡುತ್ತಿದ್ದಾನೋ ಯಾರಿಗೂ ತಿಳಿಯಲಿಲ್ಲ. ಒಂದು ಪ್ರಾಣಿ ಬಂದು ಮಧುರಧ್ವನಿಯ ವಿಶೇಷವನ್ನು ಕುತೂಹಲದಿಂದ ಪರಿಶೀಲಿಸುತ್ತಿರುವಂತೆ ಸಭಾಸದರೆಲ್ಲರೂ ಭಾವಿಸಿದರು.
ಜರ್ಮನ್ ಪಂಡಿತ ತನ್ನ ವಿದ್ಯೆಯೆಲ್ಲವನ್ನೂ ಧಾರೆಯಾಗಿ ನೀರಿನಲ್ಲಿ ಸಕ್ಕರೆಯನ್ನು ಕರಗಿಸಿದಂತೆ ವಾಯುಮಾರ್ಗದಲ್ಲಿ ಸಂಗೀತವನ್ನು ಕರಗಿಸಿದನು. ಜನರೆಲ್ಲರೂ ದಿಗ್ಭ್ರಾಂತರಾಗಿಹೋದರು. ಆಗ ಜರ್ಮನ್ ಗಾಯಕ ಎದ್ದು ನಿಂತು ಎಲ್ಲರಿಗೂ ವಿನಯದಿಂದ ಬಾಗಿ ನಿಂತುಕೊಂಡನು.
ಆಗ ಹಾಹೂ ಪಿಯಾನೋ ಮುಂದೆ ಕುಳಿತುಕೊಂಡನು. ಪಿಯಾನೋ ಮೇಲೆ ಮೇಲೆ ಬೆರಳಿಟ್ಟನು. ಮಧುರವಾದ ಧ್ವನಿಗಳು ಹುಟ್ಟಿದವು. ಜನರೆಲ್ಲರೂ ನಿಬ್ಬೆರಗಾಗಿ ನೋಡಿದರು. ಆಗ ಹಾಹೂ ತನ್ನ ಪಕ್ಕದಲ್ಲಿದ್ದ ಒಬ್ಬ ಪಂಡಿತನ್ನು ಕರೆದು ಮುಚ್ಚಿದ್ದ ಒಂದು ಕವರನ್ನು ಅವನ ಕೈಗಿತ್ತು “ಇದನ್ನು ನಾಳೆ ಬೆಳಗ್ಗೆ ನೀವು ನೋಡಿ” ಎಂದು ಹೇಳಿದನು. ಆ ಪಂಡಿತನು ಅದನ್ನು ಸ್ವೀಕರಿಸಿದನು.
ಪಿಯಾನೋದಲ್ಲಿ ಮತ್ತೆ ಧ್ವನಿ ಕೇಳಿಸತೊಡಗಿತು. ಹಾಹೂ ಮತ್ತೆ ಕೊರಳನ್ನೆತ್ತಿ ಧೈವತದಲ್ಲಿ ಏನೋ ಹಾಡತೊಡಗಿದನು. ಆ ಧೈವತದ ಮಾಧುರ್ಯ ಯಾರಿಗೂ ಏನೂ ತಿಳಿಯಲಿಲ್ಲ. ಜರ್ಮನ್ ಪಂಡಿತ ಆಶ್ಚರ್ಯಗೊಂಡು ಅವನ ಕಡೆ ನೋಡುತ್ತಾ ನಿಂತುಕೊಂಡನು.
ಧ್ವನಿ ಚಿತ್ರವಿಚಿತ್ರವಾಗಿ ಹುಟ್ಟಿತು. ಬಾಯಿ ಸಣ್ಣದಾಗಿರುವ ಮಡಕೆಯಲ್ಲಿ ತುಂಬಿಕೊಂಡಿರುವ ನೀರು ಚೆಲ್ಲುತ್ತಿರುವಂತೆ, ವಿಸ್ತಾರವಾಗಿದ್ದ ಕಲ್ಲುಬಂಡೆಯ ಮೇಲೆ ಸಮುದ್ರದ ಅಲೆಗಳು ರ್ರನೆ ಬಂದು ಹೊಡೆದುಕೊಂಡಂತೆ ಧ್ವನಿ ಉಕ್ಕಿ ಹರಿಯುತ್ತಿತ್ತು. ಅವನೊಂದು ಅರ್ಧ ಗಂಟೆಯಷ್ಟು ಕಾಲ ಗಾನವನ್ನು ಮಾಡಿದನು. ಪ್ರಕೃತಿ ನಿಶ್ಶಬ್ದವಾಯಿತು.
ಅಷ್ಟರಲ್ಲಿ ಅವನು ಎದ್ದು ಜನರೆಲ್ಲರ ಕಡೆ ಒಂದು ಸಾರಿ ನೋಡಿದನು. ಪಿಯಾನೋವನ್ನು ಬಿಟ್ಟಿದ್ದನು. ಸುಮ್ಮನೇ ಹಾಡುತ್ತಿದ್ದನು. ಮತ್ತೆ ಸ್ವಲ್ಪ ಹೊತ್ತಲ್ಲಿ ಜನರು ನೋಡಿದರು. ಅವನ ಕೈಯಲ್ಲಿ ಒಂದು ದೊಡ್ಡ ತಂಬೂರಿಯಿತ್ತು. ಅದನ್ನು ಕೊನೆಯ ಬೆರಳಿನಿಂದ ಮೀಟುತ್ತಾ ಹಾಡುತ್ತಿದ್ದನು. ಜನರೆಲ್ಲರಿಗೂ ಮನಸ್ಸು ಕೆಲಸ ಮಾಡುತ್ತಿರಲಿಲ್ಲ. ತಂಬೂರಿ ಎಲ್ಲಿಂದ ಬಂತು ಎಂದು ಯಾರಿಗೂ ಆಲೋಚನೆ ಬರಲಿಲ್ಲ. ಸರ್ವಜಗತ್ತೂ ತನ್ನ ಶ್ರವಣೇಂದ್ರಿಯದಲ್ಲಿ ಲೀನವಾಗಿಹೋಗಿತ್ತು.
ಹೀಗೆ ಕಾಣಿಸಿದ ಹಾಹೂ ಮತ್ತೆ ನೋಡುವಷ್ಟರಲ್ಲಿ ಕಾಣಿಸಲೇ ಇಲ್ಲ. ಅವನ ಸಂಗೀತ ಬಾಗಿಲ ಬಳಿಯಲ್ಲಿ ಕೇಳಿಸಿತು. ಜನರೆಲ್ಲರೂ ಬಾಗಿಲ ಕಡೆಗೆ ಹೋದರು. ಆಕಾಶದಲ್ಲಿ ಹಾರುತ್ತಿರುವಂತೆ ಕಂಡನು. ವೀಣೆಯನ್ನು ನುಡಿಸುತ್ತಿದ್ದನು. ಆ ಧ್ವನಿ ಸಮುದ್ರದ ಅಲೆಗಳಂತೆ ಭೂಮಿಗೆ ಬಂದು ತಾಗಿ ಸದ್ದಾಗುತ್ತಿತ್ತು. ಆಕಾಶದಲ್ಲಿ ಆ ಸಂಗೀತ ದೂರದೂರಕ್ಕೆ ಹೋಗುತ್ತಿತ್ತು. ಅಷ್ಟರಲ್ಲಿ ಕೆಲವರಿಗೆ ಮೈಮೇಲೆ ಪ್ರಜ್ಞೆ ಬಂದು ಬೇಗ ಬೇಗ ಕೆಲವು ವಿಮಾನಗಳನ್ನು ಅವನ ಹಿಂದೆಯೇ ಕಳುಹಿಸಿದರು. ಕೆಲವು ವಿಮಾನಗಳು ಹಿಂದಿರುಗಿ ಬಂದವು. ಕೆಲವು ಬರಲಿಲ್ಲ.
ಮಾರನೇ ದಿನ ಬೆಳಗ್ಗೆಯೇ ಆ ಪಂಡಿತನು ಹಾಹೂ ತನ್ನ ಕೈಗೆ ಕೊಟ್ಟ ಕಾಗದವನ್ನು ತೆಗೆದು ಓದಿದನು. ಅದರಲ್ಲಿ ಅವನು ಬರೆದಿದ್ದ ಸಂಸ್ಕೃತಕ್ಕೆ ಅರ್ಥ ಹೀಗೆ: “ಪ್ರಾಣಿಗಳಲ್ಲಿ ಕೃತ್ರಿಮತ್ತ್ವ ವಿಜೃಂಭಿಸುತ್ತಿಲ್ಲವಾದ ಕಾರಣ, ಅವುಗಳಲ್ಲಿ ವಾಸನೆ ಸತ್ತಿಲ್ಲ. ಹಾಗಾಗಿಯೇ ಪ್ರಾಣಿಸಂಗ್ರಹಾಲಯದ ಪ್ರಾಣಿಗಳು ನಾನು ಹೋಗುತ್ತಿದ್ದಂತೆ ಅರಚತೊಡಗಿದವು. ಮನುಷ್ಯ ಕೃತ್ರಿಮಜ್ಞಾನವನ್ನು ಅಭಿವೃದ್ಧಿ ಮಾಡಿಕೊಳ್ಳುತ್ತ ಹಾಳಾಗುತ್ತಿದ್ದಾನೆ. ಕೆಲವು ದಿನಗಳ ಹಿಂದೆ ನನ್ನನ್ನು ಒಬ್ಬ ಪಂಡಿತ ಕೇಳಿದ ಪ್ರಶ್ನೆಗೆ ಮಾತ್ರ ಸಮಾಧಾನವನ್ನು ಹೇಳಬೇಕು. `ನಮ್ಮನ್ನು ನೀವು ಏನೆಂದು ತಿಳಿದುಕೊಳ್ಳುತ್ತೀರಾ?’ ಎಂದು. ನಾನಂದುಕೊಂಡದ್ದು ಇದು `ಇದಕ್ಕಿಂತ ಕೀಟಲೆಯ ಪ್ರಾಣಿಯನ್ನು ನಾನು ಯಾವತ್ತೂ ನೋಡಿರಲಿಲ್ಲ’ ನಮ್ಮ ಗಂಧರ್ವಲೋಕದಲ್ಲಿ ಈ ಸಂಗತಿಯನ್ನು ಹೇಳುತ್ತೇನೆ.”
(ಮುಗಿಯಿತು)