ಇಲ್ಲಿಯವರೆಗೆ…
ಉದ್ಯಮಿ ಮಹೇಶ್ ಮಿಸ್ತ್ರಿ ಕ್ರಮೇಣ ದೇಶದಲ್ಲಿಯೆ ಪ್ರತಿಷ್ಠೆ ಗಳಿಸಿ ಸಾಟಿಯಿಲ್ಲದ ಮಟ್ಟಕ್ಕೆ ಏರಿ ಈಗ ರಕ್ಷಣಾ ಇಲಾಖೆಯ ಪ್ರಮುಖ ಕಾಂಟ್ರ್ಯಾಕ್ಟುಗಳನ್ನೂ ತನ್ನದಾಗಿಸಿಕೊಂಡಿದ್ದ. ಭವಿಷ್ಯದಲ್ಲಿ ಊಹೆಗೆ ಮೀರಿದ ಲಾಭ ತರುವ ಆವಿಷ್ಕರಣಗಳನ್ನು ಮಾಡಲು ಅತ್ಯಾಧುನಿಕ ಪ್ರೌಢಪ್ರಯೋಗಾಲಯ ಸಂಕೀರ್ಣವನ್ನು ಸ್ಥಾಪಿಸಿದ್ದ. ಅಭೂತಪೂರ್ವ ಆವಿಷ್ಕರಣ ಅಂತಿಮ ಹಂತದಲ್ಲಿದ್ದಾಗ ಅದನ್ನು ನಿರ್ವಹಿಸುತ್ತಿದ್ದ ವಿಜ್ಞಾನಿ ಅವಧೂತ್ ತಾನು ಆ ಪ್ರಾಜೆಕ್ಟಿನಿಂದ ಹಿಂದೆ ಸರಿಯುತ್ತಿರುವೆನೆಂದು ಆಘಾತಕಾರಿ ಘೋಷಣೆ ಮಾಡಿದ.

ಅವಧೂತ್ ತಾವು ಧ್ವಂಸ ಮಾಡಬೇಕೆಂದು ನಿಶ್ಚಯಿಸಿದ್ದ ಅಷ್ಟನ್ನೂ ಹಾಳುಗೆಡಿಸುವ ಕೆಲಸವನ್ನು ಮಾಡಿ ಮುಗಿಸಿರುವಂತಿದೆ – ಎಂದುಕೊಂಡ, ಸಿಸೋದಿಯ. ನಿರಾಳವಾದ ಮನಸ್ಸಿನಿಂದೆಂಬಂತೆ ತಾನು ಮಾಡುತ್ತಿದ್ದುದನ್ನು ಯಾರಾದರೂ ಗಮನಿಸುತ್ತಿದ್ದಾರೆಯೆ ಎಂದು ಕುತೂಹಲಗೊಂಡಂತೆ ಸುತ್ತ ತಿರುಗಿ ನೋಡಿದರು, ಅವಧೂತ್. ಈ ವೇಳೆಗೆ ಸೆಕ್ಯುರಿಟಿ ಸಿಬ್ಬಂದಿ ಸ್ಫೋಟಕದಿಂದ ಚಿಲಕ ಮುರಿದು ಬಾಗಿಲನ್ನು ತೆರೆದುದಾಗಿತ್ತು, ಒಳಕ್ಕೆ ಬರಲು ಸಜ್ಜಾದರು. ಸ್ಫೋಟದ ಶಬ್ದ ಅವಧೂತ್ರಿಗೂ ಕೇಳಿಸಿತ್ತು, ಸೆಕ್ಯುರಿಟಿ ಸಿಬ್ಬಂದಿ ಒಳಕ್ಕೆ ಬರಲಿದ್ದಾರೆಂದು ಅವರು ನಿರೀಕ್ಷಿಸಿಯೂ ಇದ್ದರು. ಆದರೆ ಅವರು ಆತಂಕಗೊಳ್ಳಲಿಲ್ಲ.
ಅವಧೂತ್ರ ಮುಂದಿನ ಚರ್ಯೆ ದಿಗ್ಭ್ರಮೆ ತರುವಂತಿತ್ತು. ಮೇಜಿನ ಡ್ರಾಯರಿನಿಂದ ರಿವಾಲ್ವರನ್ನು ಹೊರತೆಗೆದು ತಮ್ಮ ತಲೆಗೆ ಗುರಿಯಿಟ್ಟರು. ಅದನ್ನು ಹೊರಕೋಣೆಯ ಮಾನಿಟರಿನಲ್ಲಿ ಗಮನಿಸುತ್ತಿದ್ದ ಸಿಸೋದಿಯ ಅಯ್ಯೋ! ಎಂದು ಉದ್ಗರಿಸಿದ; ನಿಮ್ಮನ್ನು ಸಾಯಿಸಬೇಕೆಂಬಷ್ಟು ಕೋಪ ನಮಗೆ ಬಂದದ್ದು ಹೌದಾದರೂ – ನೀವು ಇಲ್ಲದಿದ್ದರೆ ಪುಡಿಪುಡಿಯಾಗಿರುವ ಈ ಪರಿಕರಗಳ ರಾಶಿಯನ್ನು ಬೇರೆ ಯಾರು ಮತ್ತೆ ಜೋಡಿಸಿ ನಿಭಾಯಿಸಬಲ್ಲರು? – ಎಂದ.
ಸೆಕ್ಯುರಿಟಿ ಸಿಬ್ಬಂದಿ ಒಳಕ್ಕೆ ಪ್ರವೇಶಿಸುತ್ತಿದ್ದ ಹಾಗೆಯೆ ಅವಧೂತ್ರ ಕೈಯಲ್ಲಿನ ರಿವಾಲ್ವರ್ ಗುಂಡು ಹಾರಿಸಿದ್ದಾಗಿತ್ತು.
***
ಸಿಸೋದಿಯನನ್ನು ಮಹೇಶ್ ಮಿಸ್ತ್ರಿ ಶಾಂತ ಧ್ವನಿಯಲ್ಲಿ ಸಮಾಧಾನಗೊಳಿಸತೊಡಗಿದ – ಅದೇಕೆ ಇಷ್ಟೊಂದು ಡಿಸ್ಟರ್ಬ್ ಆಗಿದ್ದೀ?
ಡಿಸ್ಟರ್ಬ್ ಆಗದಿರಲು ಹೇಗೆ ಸಾಧ್ಯ? ಈಗ ಇನ್ನೇನು ತಾನೆ ಉಳಿದಿದೆ? ಈತ ತಾನು ಸಾಯುವುದಲ್ಲದೆ ಇಷ್ಟು ದಿನ ಮಾಡಿದ್ದ ಸಂಶೋಧನೆಯಷ್ಟನ್ನೂ ವ್ಯರ್ಥ ಮಾಡಿಬಿಟ್ಟನಲ್ಲ!
ಮೊದಲಿಗೆ ಸಂಶೋಧನೆ ಮಾಡುವುದೇ ಕಷ್ಟದ ಕೆಲಸ. ಅದಕ್ಕೆ ಬಹಳ ಕಾಲ ಹಿಡಿಯುತ್ತದೆ. ಉದಾಹರಣೆಗೆ ರೇಡಿಯೊ ಪೆಟ್ಟಿಗೆಯನ್ನು ಚೂರು ಚೂರು ಮಾಡಿದರೂ ಯಾರೋ ಪ್ರತಿಭಾವಂತರು ಅದನ್ನು ಮತ್ತೆ ದುರಸ್ತು ಮಾಡುವುದು ಅಸಾಧ್ಯವಲ್ಲ, ಅಲ್ಲವೆ? ಅಂತಹವರನ್ನು ನಾವೀಗ ಹುಡುಕಬೇಕಾಗಿದೆ, ಎಲ್ಲಿಯೋ ಇರುತ್ತಾರೆ, ನಮಗೆ ಹತ್ತಿರದಲ್ಲಿಯೆ ಇರಲೂಬಹುದು. ಜಾಗ್ರತೆಯಾಗಿ ಹುಡುಕಬೇಕಷ್ಟೆ – ಎಂದ, ಮಹೇಶ್ ಮಿಸ್ತ್ರಿ.
ಸಿಸೋದಿಯ ಕೆಲವು ಕ್ಷಣ ಮೌನವಾಗಿದ್ದು ಏನೋ ನೆನಪಾದಂತೆ ಹೇಳಿದ – ನೀವು ಹೇಳುವುದನ್ನು ಕೇಳಿ ಒಂದು ಸಂಗತಿ ಜ್ಞಾಪಕಕ್ಕೆ ಬರುತ್ತಿದೆ. ತಮಗೆ ಯಾರಾದರೂ ಸಹಾಯಕರು ಸಿಕ್ಕಿದರೆ ಸಂಶೋಧನೆ ಹೆಚ್ಚು ವೇಗವಾಗಿ ಸಾಗಬಹುದೆಂದು ಅವಧೂತ್ ಒಮ್ಮೆ ಹೇಳಿದ್ದರು. ಅಂತಹವರು ಯಾರಾದರೂ ಇದ್ದರೆ ಹುಡುಕುವಂತೆ ಅವರಿಗೇ ಹೇಳಿದ್ದೆವು. ಅವರು ಬೇರೆ ಬೇರೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳನ್ನೂ ಪ್ರಯೋಗಾಲಯಗಳನ್ನೂ ಸಂಪರ್ಕಿಸಿ ಒಬ್ಬಿಬ್ಬರನ್ನು ಫೋನ್ ಮೂಲಕವೇ ಸಂದರ್ಶಿಸಿದ್ದರು. ತಮಗೆ ಇಲ್ಲಿಯ ಕೆಲಸಕ್ಕೆ ಸಮರ್ಪಕವೆನಿಸಿದ ಒಬ್ಬ ವ್ಯಕ್ತಿ ಮಾತ್ರ ಗಮನಕ್ಕೆ ಬಂದಿರುವುದಾಗಿ ಹೇಳಿದರು. ಆತನನ್ನು ಏಕೆ ಇಲ್ಲಿಗೆ ಕರೆಸಿಕೊಳ್ಳಬಾರದು – ಎಂದು ನಮ್ಮಲ್ಲಿ ಮಾತುಕತೆ ನಡೆದಿದ್ದಾಗ ಅವಧೂತ್ ಏಕೊ ಮನಸ್ಸು ಬದಲಾಯಿಸಿ ಬಹುಶಃ ನಾನೇ ಮುಂದುವರಿಸಿ ಈ ಕೆಲಸವನ್ನು ಮುಗಿಸಬಲ್ಲೆನೇನೊ ಎಂದರು. ಹಾಗಾಗಿ ಆ ವ್ಯಕ್ತಿಯೊಡನೆ ಮಾತನಾಡಲು ಸಂದರ್ಭ ಬರಲಿಲ್ಲ.
ಯಾರು ಆ ವ್ಯಕ್ತಿ? ಎಲ್ಲಿ ಇರುತ್ತಾನೆ? ಎಂದು ಕೇಳಿದ, ಮಿಸ್ತ್ರಿ.
ಅವನ ಹೆಸರು ಮಯಾಂಕ್. ದೆಹಲಿಯ ಐ.ಐ.ಟಿ.ಯಲ್ಲಿ ವಿದ್ಯಾರ್ಥಿಯಾಗಿದ್ದಾನೆ ಎಂದ ಸಿಸೋದಿಯ, ನೆನಪು ಮಾಡಿಕೊಳ್ಳುತ್ತ.
***
ಕೆಲವರು ಯುವಕರು ಹುಟ್ಟುವಾಗಲೇ ಮುದುಕರಾಗಿಬಿಟ್ಟಿರುತ್ತಾರೆ ಎಂದು ಕವಿಗಳೊಬ್ಬರು ಹೇಳಿದ್ದಾರೆ. ಇನ್ನು ಸ್ವಲ್ಪ ಯೋಚಿಸಿದ್ದಿದ್ದರೆ ಕೆಲವರು ಹುಟ್ಟಿನಿಂದಲೇ ಮೇಧಾವಿಗಳಾಗಿರುತ್ತಾರೆ ಎಂದೂ ಹೇಳಿರುತ್ತಿದ್ದರೇನೊ ಎಂದ, ಶಿವಾಜಿ.
ಆ ಕವಿಗಳು ನಿನ್ನನ್ನು ನೋಡಿದ್ದಿದ್ದರೆ ಕೆಲವರು ಹುಟ್ಟಿನಿಂದಲೇ ಕುಡುಕರಾಗಿಬಿಟ್ಟಿರುತ್ತಾರೆ ಎಂದಿರುತ್ತಿದ್ದರೇನೊ! ಎಂದ ಮಯಾಂಕ್ ಶಿವಾಜಿಯ ಪಕ್ಕದಲ್ಲಿ ಕುಳಿತುಕೊಳ್ಳುತ್ತ.
ರಾತ್ರಿ ಹತ್ತು ಗಂಟೆಯಾಗಿತ್ತು. ಅವರಿಬ್ಬರೂ ದೆಹಲಿಯ ಐ.ಐ.ಟಿ. ಕ್ಯಾಂಪಸಿನ ಹಾಸ್ಟೆಲಿನ ವಾಟರ್ಟ್ಯಾಂಕಿನ ಕೆಳಗೆ ಕುಳಿತಿದ್ದರು.
ಯಾವಾಗಲೊ ಒಂದು ಸಲ ಗಂಟಲನ್ನು ವದ್ದೆ ಮಾಡಿಕೊಂಡಾಕ್ಷಣ ಕುಡುಕರೆಂಬ ಬಿರುದಿಗೆ ಅರ್ಹರಾಗಿಬಿಡುತ್ತಾರೆಯೆ? ಎಂದ ಶಿವಾಜಿ, ಆಕ್ಷೇಪದ ಧ್ವನಿಯಲ್ಲಿ.
ಅವರಿಬ್ಬರೂ ಗಾಢ ಸ್ನೇಹಿತರು. ಮಯಾಂಕ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ಪ್ರೌಢ ಅಧ್ಯಯನ ನಡೆಸಿದ್ದರೆ ಶಿವಾಜಿ ಆರಿಸಿಕೊಂಡಿದ್ದುದು ನಾನೊಟೆಕ್ನಾಲಜಿ ಕ್ಷೇತ್ರವನ್ನು. ವಿರುದ್ಧ ಧ್ರುವಗಳು ಒಂದನ್ನೊಂದು ಆಕರ್ಷಿಸುತ್ತವೆಂಬಂತೆ ಬೇರೆ ಬೇರೆ ಆಸಕ್ತಿಕ್ಷೇತ್ರಗಳವರಾದರೂ ಇಬ್ಬರೂ ನಿಕಟವರ್ತಿಗಳಾಗಿದ್ದರು. ಪ್ರತಿ ದಿನ ಒಂದು ಸಲವಾದರೂ ಭೇಟಿಯಾಗಲೇಬೇಕು, ಇಲ್ಲದಿದ್ದರೆ ನಿದ್ರೆ ಹತ್ತುತ್ತಿರಲಿಲ್ಲ.
ಹೈದರಾಬಾದಿಗೆ ಹೋಗಿದ್ದೆಯಲ್ಲ, ಅಲ್ಲಿ ಏನಾಯಿತು? – ಕೇಳಿದ, ಶಿವಾಜಿ.
ಮಯಾಂಕ್ ಕೃತಕ ಬುದ್ಧಿಮತ್ತೆಯ ರೋಬೋ ತಯಾರಿಸಿದ್ದುದು, ಅದನ್ನು ರಕ್ಷಣಾ ಇಲಾಖೆಯ ಪರಿಶೀಲನೆಗಾಗಿ ನೀಡಿದ್ದುದು ತಿಳಿದಿದ್ದ ಕಡಮೆ ಜನರಲ್ಲಿ ಶಿವಾಜಿ ಒಬ್ಬ.
ಸರ್ಕಾರೀ ವ್ಯವಹಾರಗಳ ರೀತಿನೀತಿ ನಿನಗೆ ಗೊತ್ತಲ್ಲ! ನಿರ್ಣಯಗಳು ಅಂದುಕೊಂಡಷ್ಟು ಬೇಗ ಆಗುವುದಿಲ್ಲ. ಯಾವುದೊ ಕಮಿಟಿಯನ್ನು ರಚಿಸುವುದಾಗಿ ಹೇಳಿದರು. ಆ ಕಮಿಟಿಯ ಅನುಮೋದನೆ ಸಿಕ್ಕಿದರೆ ವಿಷಯ ಮೇಲಿನ ಅಧಿಕಾರಿಗಳ ಕಕ್ಷೆಗೆ ಹೋಗುತ್ತದೆಯಂತೆ… ಅದೆಲ್ಲ ಇರಲಿ, ನೀನೇಕೆ ಏನೊ ಚಿಂತೆ ಹಚ್ಚಿಕೊಂಡಹಾಗಿದೆ?
ಹೌದು. ಎರಡು ಬೆಳವಣಿಗೆಗಳನ್ನು ನಿನಗೆ ತಿಳಿಸಬೇಕಾಗಿದೆ. ಮೊದಲನೆಯದಾಗಿ – ಈಗಿರುವ ಹಾಗೆ ಅವೇಳೆಯಲ್ಲಿ ನಿನ್ನೊಡನೆ ಸೇರಿ ಹರಟುವ ಸ್ವಾತಂತ್ರ್ಯವನ್ನು ನಾನು ಕಳೆದುಕೊಳ್ಳುತ್ತಿದ್ದೇನೆ.
ಅಂದರೆ – ಮದುವೆಯಾಗುತ್ತಿದ್ದೀಯಾ?
ಇದಕ್ಕೇ ನಿನ್ನನ್ನು ಎಲ್ಲರೂ ಚಾಣಾಕ್ಷನೆಂದು ಹೊಗಳುವುದು. ಇಷ್ಟು ಬೇಗ ಊಹಿಸಿಬಿಟ್ಟೆಯಲ್ಲ!
ಹುಡುಗಿ ಯಾರು?
ಹತ್ತಿರದ ನಂಟರ ಪೈಕಿಯೇ.
ಸರಿಯೆ, ಎರಡನೇ ವಿಷಯ ಏನು?
ನಾನು ರಾಜಕೀಯ ಕ್ಷೇತ್ರಕ್ಕೆ ಹೋಗಬೇಕೆಂದು ನಿಶ್ಚಯಿಸಿದ್ದೇನೆ – ಎಂದ, ಶಿವಾಜಿ.
ಅದರ ಬಗ್ಗೆ ಇನ್ನೂ ಆಖೈರಾಗಿ ಮನಸ್ಸು ಮಾಡಿಲ್ಲ ಎನ್ನುತ್ತಿದ್ದೆ?
ಹೌದು. ಆದರೆ ತಂದೆಯವರ ಆರೋಗ್ಯ ಅಷ್ಟೇನು ಚೆನ್ನಾಗಿಲ್ಲ. ನಿನಗೇ ಗೊತ್ತಲ್ಲ – ರಾಜಕೀಯವೆಂದರೆ ನಾನಾ ಸರ್ಕಸ್ಸುಗಳು. ಅವನ್ನೆಲ್ಲ ನಿಭಾಯಿಸುವುದು ತಂದೆಯವರಿಗೆ ಈಗ ಕಷ್ಟವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ತಮಗೆ ಬದಲಾಗಿ ನನ್ನನ್ನು ನಿಲ್ಲಿಸಬೇಕು ಎಂದು ಯೋಚಿಸುತ್ತಿದ್ದಾರೆ.
ಶಿವಾಜಿಯ ತಂದೆ ದೊಡ್ಡ ರಾಜಕಾರಣಿ. ಮಂತ್ರಿ ಕೂಡಾ. ಹಣದ ಕೊರತೆಯೇನಿಲ್ಲ. ಐ.ಐ.ಟಿ.ಯಲ್ಲಿ ಶಿವಾಜಿಗೆ ಸೀಟು ಸಿಕ್ಕಿದ್ದುದೂ ಅವರ ಪ್ರಭಾವದಿಂದ. ಎಷ್ಟು ಸೆಮಿಸ್ಟರ್ಗಳು ಮುಗಿದಿವೆ, ಎಷ್ಟು ಬಾಕಿ ಇವೆ – ಎಂಬುದು ಬಹುಶಃ ಶಿವಾಜಿಗೇ ತಿಳಿದಿರಲಾರದು. ತನ್ನಿಂದ ಕೋರ್ಸನ್ನು ಮುಗಿಸುವುದು ಅಸಾಧ್ಯವೆಂದು ಅವನಿಗೆ ಈಗಾಗಲೆ ಅನಿಸಿದ್ದ ಹಾಗಿತ್ತು. ಹೀಗಿದ್ದೂ ಅವನು ಮುಂದುವರಿದಿದ್ದುದಕ್ಕೆ ಒಂದು ಕಾರಣ – ಅವನು ಮಯಾಂಕ್ನ ಸ್ನೇಹವನ್ನು ಇಷ್ಟಪಟ್ಟಿದ್ದುದು.
ನನ್ನ ವಿಷಯ ಬಿಡು. ನೀನು ಮುಂದೆ ಏನು ಮಾಡಬೇಕು ಅಂದುಕೊಂಡಿದ್ದೀ? – ಕೇಳಿದ, ಶಿವಾಜಿ.
ನಿನಗೇ ಗೊತ್ತಲ್ಲ – ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನನಗೆ ಇಷ್ಟವಾದ ವಿಷಯ. ಇದಕ್ಕೆ ಸಂಬಂಧಿಸಿದ ಸಂಶೋಧನೆಗಾಗಿ ಸಂಸ್ಥೆಯೊಂದನ್ನು ಶುರು ಮಾಡಬಹುದು ಅಂದುಕೊಂಡಿದ್ದೇನೆ. ಈ ಕ್ಷೇತ್ರದಲ್ಲಿ ದೊಡ್ಡ ಹೆಸರು ಸಂಪಾದಿಸಬೇಕು, ಈ ಕ್ಷೇತ್ರದಲ್ಲಿ ನಮ್ಮ ದೇಶ ಮೊದಲ ಸಾಲಿನಲ್ಲಿ ಇರಬೇಕು ಎಂಬುದು ನನ್ನ ಆಸೆ. ಜಗತ್ತೆಲ್ಲ ನಮ್ಮ ದೇಶದ ಕಡೆ ನೋಡುವ ಹಾಗೆ ಆಗಬೇಕು. ನಮ್ಮ ಕಣ್ಣ ಮುಂದೆಯೇ ನಮ್ಮ ದೇಶ ದೊಡ್ಡ ಸಂಪನ್ನ ದೇಶ ಆಗಬೇಕು – ಎಂದ, ಮಯಾಂಕ್.
ಅಲ್ಲ, ರಾಜಕೀಯಕ್ಕೆ ಹೋಗುತ್ತಿರುವುದು ನಾನು. ಆದರೆ ಭಾಷಣ ಮಾಡುತ್ತಿರುವುದು ನೀನು! – ಎಂದ ಶಿವಾಜಿ, ನಗುತ್ತ.
ಮಯಾಂಕ್ ಹೀಗೆ ದೊಡ್ಡ ದೊಡ್ಡ ಆಕಾಂಕ್ಷೆಗಳನ್ನು ಇಟ್ಟುಕೊಂಡಿದ್ದುದು ಸಹಜವೇ ಆಗಿತ್ತು. ಹುಟ್ಟಿನಿಂದಲೇ ಅವನು ಪ್ರತಿಭಾಶಾಲಿ. ಎಳೆತನದಲ್ಲಿಯೆ ತಂದೆ-ತಾಯಿ ತೀರಿಕೊಂಡಿದ್ದರು. ಸೋದರಮಾವ ಅವನನ್ನು ಹತ್ತನೇ ತರಗತಿಯವರೆಗೆ ಓದಿಸಿದ್ದ. ಆದರೆ ತಾನು ಯಾರಿಗೂ ಭಾರವಾಗಬಾರದೆಂಬ ಮನಸ್ಸಿನಿಂದ ಸೋದರಮಾವನ ಆಸರೆಯಿಂದ ಹೊರಬಿದ್ದ. ತನ್ನ ಓದಿಗೆ ಬೇಕಾದ ಹಣವನ್ನು ಸಂಪಾದಿಸಿಕೊಳ್ಳುವುದು ಅವನಿಗೆ ಕಷ್ಟವಾಗಲಿಲ್ಲ. ಏಕೆಂದರೆ ಕಾಲೇಜು ಪಾಠಗಳನ್ನು ಗ್ರಹಿಸುವುದು ಅವನಿಗೆ ಹೂವೆತ್ತಿದಷ್ಟು ಸುಲಭವಾಗಿತ್ತು, ಅದಕ್ಕಾಗಿ ತುಂಬಾ ಸಮಯ ಖರ್ಚು ಮಾಡಬೇಕಾದ ಸ್ಥಿತಿ ಇರಲಿಲ್ಲ. ಒಂದು ಸಲ ಕೇಳಿದರೆ, ಓದಿದರೆ ವಿಷಯವೆಲ್ಲ ಸ್ವಾಧೀನವಾಗಿಬಿಡುತ್ತಿತ್ತು. ಉಳಿದ ಸಮಯವನ್ನೆಲ್ಲ ಬೇರೆ ವಿಷಯಗಳಿಗಾಗಿ ವ್ಯಯ ಮಾಡುತ್ತಿದ್ದ. ಐ.ಐ.ಟಿ. ಸೇರಿದ ಮೇಲಂತೂ ಹೊಸ ಹೊಸ ಶೋಧಗಳ ಕಡೆಗೆ ಮನಸ್ಸನ್ನು ಹರಿಸಲು ಯಥೇಷ್ಟ ಅವಕಾಶವಾಗಿತ್ತು. ಯಾರ ಮೇಲೂ ಅವಲಂಬಿಸದೆ ತನ್ನ ಜೀವನದ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವುದಂತೂ ಅವನಿಗೆ ಸಮಸ್ಯೆಯೆಂದೇ ಅನಿಸಿರಲಿಲ್ಲ.
ಕಳೆದ ಮೂರು ವರ್ಷಗಳಲ್ಲಿ ಮಾಡಿದ್ದ ಹೊಸ ಆವಿಷ್ಕರಣಗಳಿಗಾಗಿ ಈಗಾಗಲೇ ಅವನು ಹತ್ತು ಪೇಟೆಂಟುಗಳನ್ನು ಪಡೆದುಕೊಂಡಿದ್ದ.
ಒಮ್ಮೆ ಶಿವಾಜಿಯೊಡನೆ ಮಯಾಂಕ್ ಮೋಟರ್ಸೈಕಲಿನಲ್ಲಿ ಹೋಗುತ್ತಿದ್ದಾಗ ವೇಗ
ಅತಿಯಾಗಿತ್ತೆಂದು, ಅದು ಕುಡಿತದ ಫಲಿತವಾಗಿರಬಹುದೆಂದು ಶಂಕಿಸಿ ಪೊಲೀಸರು ಇಬ್ಬರನ್ನೂ ಬ್ರೀತಲೈಸರ್ ಪರೀಕ್ಷೆಗೆ ಒಳಪಡಿಸಿದ್ದರು. ಈ ಘಟನೆಯಿಂದ ಮಯಾಂಕ್ಗೆ ಹೊಸದೊಂದು ಯೋಚನೆ ಹೊಳೆದಿತ್ತು. ದ್ವಿಚಕ್ರ ವಾಹನದ ಯಂತ್ರದೊಡನೆ ನಿಸ್ತಂತು ಸಂಪರ್ಕವಿದ್ದ ಬ್ರೀತಲೈಸರ್ ಹೆಲ್ಮೆಟ್ ತಯಾರಿಸಿದ್ದ. ಅದು ಈಗ ಎಲ್ಲೆಡೆ ಬಳಕೆಯಾಗುತ್ತಿತ್ತು. ಹೆಲ್ಮೆಟ್ ಧರಿಸಿದ್ದರೆ ಮಾತ್ರ ವಾಹನ ಚಾಲಿತವಾಗುತ್ತಿತ್ತು. ಚಾಲಕನ ಉಸಿರಿನಲ್ಲಿ ಮದ್ಯದ ಅಂಶ ಕಂಡರೆ ವಾಹನ ಸ್ತಬ್ಧವಾಗಿಬಿಡುತ್ತಿತ್ತು.
ಮಣಿಕಟ್ಟಿನಲ್ಲಿಯೆ ಅಳವಡಿಸಿಕೊಳ್ಳಬಹುದಾಗಿದ್ದ ಸೋಲಾರ್ ಮೊಬೈಲ್-ಚಾರ್ಜರನ್ನು ಆವಿಷ್ಕರಿಸಿದ್ದ. ಈ ಚಾರ್ಜರಿನಲ್ಲಿ ಸಣ್ಣ ಲೈಟ್, ಪೋರ್ಟ್ ಕೂಡಾ ಇರುತ್ತಿತ್ತು. ಸ್ತ್ರೀಯರ ಮೇಲೆ ಅತ್ಯಾಚಾರ ಪ್ರಸಂಗಗಳು ಹೆಚ್ಚುತ್ತಿದ್ದುದನ್ನು ಗಮನಿಸಿ, ಒತ್ತಿದೊಡನೆ ಪೊಲೀಸರಿಗೂ ಮನೆಯವರಿಗೂ ಸುದ್ದಿ ಕಳಿಸಬಲ್ಲ ಕೊರಳ ಪೆಂಡೆಂಟ್ ರೂಪಿಸಿದ್ದ. ಅವನ ಇಂತಹ ಕೆಲವು ವಸ್ತುಗಳಿಗೆ ಮಾರುಕಟ್ಟೆಯೂ ಬೆಳೆಯತೊಡಗಿತ್ತು.
ಅದೆಲ್ಲ ಸರಿ, ಮಯಾಂಕ್. ನಮ್ಮ ದೇಶ ಜಗತ್ತಿನಲ್ಲೇ ನಂಬರ್-ಒನ್ ಆರ್ಥಿಕ ಶಕ್ತಿಯಾಗಬೇಕು ಎಂದೆಲ್ಲ ಹೇಳಿದೆಯಲ್ಲ, ಅದಕ್ಕೂ ಮೊದಲು ನಿನ್ನ ಆರ್ಥಿಕ ಶಕ್ತಿಯನ್ನು ಬೆಳೆಸಿಕೊಳ್ಳುವುದರ ಬಗ್ಗೆ ಏನು ಯೋಚಿಸಿದ್ದೀ? – ಎಂದು ಕೇಳಿದ, ಶಿವಾಜಿ.
ನಾನು ಸ್ವಂತ ಕಂಪೆನಿಯನ್ನು ಆರಂಭಿಸುವ ಯೋಚನೆ ಇದೆಯೆಂದು ಹೇಳಿದೆನಲ್ಲ? ಅದಕ್ಕೆ ಬೇಕಾದ ಅನುಭವ ಸಂಪಾದಿಸಿಕೊಳ್ಳುವುದಕ್ಕಾಗಿ ಒಂದಷ್ಟು ಸಮಯ ಬೇರಾವುದಾದರೂ ಕಂಪೆನಿಯಲ್ಲಿ ಕೆಲಸ ಮಾಡಬಹುದು. ದಿ ಫ್ಯೂಚರ್ ಹೆಸರು ನೀನು ಕೇಳಿರಬೇಕಲ್ಲ?
ಕೇಳದೆ ಏನು. ಬಿಜಿನೆಸ್ ಟೈಕೂನ್ ಮಹೇಶ್ ಮಿಸ್ತ್ರಿ ನಡೆಸುತ್ತಿರುವ ಕಂಪೆನಿ ತಾನೆ ಅದು? ಪ್ರಮುಖವಾಗಿ ಕೃತಕ ಮೆದುಳು ಬಗ್ಗೆ ಸಂಶೋಧನೆ ಮಾಡಲಿರುವುದಾಗಿ ಕಂಪೆನಿಯ ಪ್ರಾರಂಭೋತ್ಸವದಲ್ಲಿ ಅವರು ಹೇಳಿದ್ದಂತೆ ನೆನಪು.
ಹೌದು. ಆ ಕಂಪೆನಿಯವರು ಕ್ಯಾಂಪಸ್ ಇಂಟರ್ವ್ಯೂಗೋಸ್ಕರ ನಮ್ಮ ಇನ್ಸ್ಟಿಟ್ಯೂಟಿಗೆ ನಾಳೆ ಬರುತ್ತಿದ್ದಾರಂತೆ. ಅದರಲ್ಲಿ ನಾನೂ ಭಾಗವಹಿಸಲು ಅರ್ಜಿ ಹಾಕಿದ್ದೇನೆ.
ಇಂಟರ್ವ್ಯೂನಲ್ಲಿ ಭಾಗವಹಿಸುವುದೇನು ಬಂತು, ಕಂಪೆನಿಗೆ ಸೇರುತ್ತೇನೆಂದೇ ಹೇಳು. ನೀನು ಇಂಟರ್ವ್ಯೂಗೆ ಹೋದಲ್ಲಿ ಬೇರೆ ಯಾರು ತಾನೆ ಆಯ್ಕೆಯಾಗುತ್ತಾರೆ!
ನೋಡೋಣ ಏನಾಗುತ್ತದೊ – ಎಂದ, ಮಯಾಂಕ್.
ಇನ್ನು ಸ್ವಲ್ಪ ಹೊತ್ತು ಅದು-ಇದು ಮಾತುಕತೆಯಾದ ಮೇಲೆ ಇಬ್ಬರೂ ತಮ್ಮ ವಸತಿಗಳಿಗೆ ತೆರಳಿದರು.
***
ಮಾರನೆಯ ದಿನ ದಿ ಫ್ಯೂಚರ್ ಕಂಪೆನಿಯ ಕ್ಯಾಂಪಸ್ ಇಂಟರ್ವ್ಯೂಗಾಗಿ ನಿಶ್ಚಿತವಾಗಿದ್ದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಹೋದ, ಮಯಾಂಕ್. ಕಂಪೆನಿಯ ಮುಖ್ಯಸ್ಥ ಮಹೇಶ್ ಮಿಸ್ತ್ರಿ ಖಾಸಗಿ ವಿಮಾನದಲ್ಲಿ ಬಂದಿಳಿದಿದ್ದು ಸ್ವಲ್ಪ ಸಮಯದಲ್ಲೇ ಇಂಟರ್ವ್ಯೂ ಸ್ಥಳಕ್ಕೆ ತಲಪಲಾಗುತ್ತದೆಂದು ಸಂದೇಶ ಬಂದಿತು.
ಇಪ್ಪತ್ತು-ಮೂವತ್ತು ನಿಮಿಷಗಳಾದ ಮೇಲೆ ಕಲಾಪ ಶುರುವಾಯಿತು.
ಮೊತ್ತಮೊದಲಿಗೆ ಮಯಾಂಕ್ನನ್ನೇ ಒಳಕ್ಕೆ ಕರೆಯಿಸಲಾಯಿತು.
ಸಾಮಾನ್ಯವಾಗಿ ಸಂದರ್ಶನವೆಂದರೆ ಮೂರೋ ನಾಲ್ಕೋ ಮಂದಿ ಪರೀಕ್ಷಕರು ಇರುತ್ತಾರೆ. ಆದರೆ ಇಲ್ಲಿ ಹಾಗಿರಲಿಲ್ಲ. ಎರಡೇ ಕುರ್ಚಿಗಳು ಇಲ್ಲಿ ಇದ್ದದ್ದು. ಮಯಾಂಕ್ ಸಮೀಪಿಸುತ್ತಿದ್ದಂತೆಯೇ ಕಮಾನ್ ಮಿಸ್ಟರ್ ಮಯಾಂಕ್ ಎಂದು ಸ್ವಾಗತಿಸಿದ ಮಹೇಶ್ ಮಿಸ್ತ್ರಿ, ಎದುರಿಗಿನ ಕುರ್ಚಿಯತ್ತ ಕೈ ಮಾಡಿ. ಮೇಜಿನ ಮೇಲೆ ನೀರು, ಫ್ರೂಟ್ಜ್ಯೂಸ್ ಹಾಕಿದ ಗ್ಲಾಸುಗಳು ಇದ್ದವು. ತೆಗೆದುಕೊಳ್ಳುವಂತೆ ಮಿಸ್ತ್ರಿ ಸನ್ನೆ ಮಾಡಿದ. ತನಗೆ ಬೇಡವೆಂದು ಮಯಾಂಕ್ ತಲೆಯನ್ನಾಡಿಸಿದ.
ಮಿಸ್ಟರ್ ಮಯಾಂಕ್! ನನ್ನ ಕಂಪೆನಿಯ ಬಗ್ಗೆ ನೀನು ಕೇಳಿಯೇ ಇರುತ್ತೀ. ನಿನ್ನ ಬಗ್ಗೆ ನಾನು ಈಗಾಗಲೆ ಕೇಳಿದ್ದೇನೆ. ನಿನ್ನಷ್ಟು ಹೆಚ್ಚಿನ ಐ.ಕ್ಯು. ಇರುವವರು ಜಗತ್ತಿನಲ್ಲಿಯೆ ಬೆರಳೆಣಿಕೆಯಷ್ಟು ಇರಬಹುದೆಂದು ಬಲ್ಲೆ. ಅಂಥವರ ಪೈಕಿ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ತೊಡಗಿರುವವರು ಇನ್ನೂ ಕಡಮೆ. ಹೀಗಾಗಿ ನಿನ್ನನ್ನು ಒಪ್ಪಿಸುವುದಕ್ಕಾಗಿಯೆ ನಾನೇ ಖುದ್ದಾಗಿ ಬಂದಿದ್ದೇನೆ. ಇದೀಗ ನಮ್ಮ ಕಂಪೆನಿಯಲ್ಲಿ ಒಂದು ತುಂಬಾ ಮಹತ್ತ್ವದ ಪ್ರಾಜೆಕ್ಟ್ ನಡೆದಿದೆ. ಆದರೆ ಅದು ಕೊನೆಕೊನೆಯ ಹಂತದಲ್ಲಿ ಒಂದು ಸಂದಿಗ್ಧದಲ್ಲಿ ಸಿಕ್ಕಿಹಾಕಿಕೊಂಡಿದೆ. ಅದನ್ನು ನಿನ್ನಂಥ ಸಮರ್ಥರು ಮಾತ್ರ ಬಗೆಹರಿಸಬಲ್ಲರು. ಹೀಗಾಗಿ ನಾನು ನಿನಗೆ ಉದ್ಯೋಗ ನೀಡಲು ಬಂದಿಲ್ಲ, ನಿನ್ನ ಸಹಕಾರ ಕೋರಲು ಬಂದಿದ್ದೇನೆ.
ನಿಮ್ಮ ಪ್ರಾಜೆಕ್ಟ್ ಯಾವುದರ ಬಗ್ಗೆ ಇದೆ?
ನೀನು ನನ್ನ ಕಂಪೆನಿಗೆ ಸೇರಿ ಒಪ್ಪಂದಕ್ಕೆ ಸಹಿ ಮಾಡಿದ ಮೇಲಷ್ಟೆ ನಾನು ನಮ್ಮ ಪ್ರಾಜೆಕ್ಟಿನ ಬಗ್ಗೆ ವಿವರಗಳನ್ನು ತಿಳಿಸಬಲ್ಲೆ – ಎಂದ, ಮಿಸ್ತ್ರಿ.
ವಿವರಗಳನ್ನು ತಿಳಿಸದೆಯೆ ಒಪ್ಪಂದಕ್ಕೆ ನನ್ನ ಸಹಿಯನ್ನು ನಿರೀಕ್ಷಿಸುವುದು ಅವ್ಯಾವಹಾರಿಕವೆನಿಸುವುದಿಲ್ಲವೆ? ಅದು ಅನೈತಿಕವೂ ಆಗಿರಬಹುದು – ಎಂದ, ಮಯಾಂಕ್.

ಕೆಲಸ ಏನೆಂದು ನಾನೀಗ ಹೇಳಲಾರೆ. ಆದರೆ ಅದಕ್ಕೆ ಮೂರು ತಿಂಗಳಿಗಿಂತ ಹೆಚ್ಚು ಸಮಯ ಬೇಕಾಗಲಾರದು ಎಂದಷ್ಟೆ ಹೇಳಬಲ್ಲೆ. ನಮ್ಮ ಸಮಸ್ಯೆಯನ್ನು ಪರಿಹರಿಸಲು ನಿನಗೆ ಅಷ್ಟು ಸಮಯ ಸಾಕಾಗುತ್ತದೆ.
ಒಂದು ವೇಳೆ ನೀವು ಒಪ್ಪಿಸಿದ ಕೆಲಸವನ್ನು ಮಾಡುವುದರಲ್ಲಿ ನಾನು ಸೋತರೆ?
ಅದನ್ನು ದುರದೃಷ್ಟವೆಂದು ಭಾವಿಸಬೇಕಾಗುತ್ತದೆ. ಆದರೆ ಮೂರು ತಿಂಗಳ ಅವಧಿ ಮುಗಿದ ಮೇಲೆ ನಿನ್ನನ್ನು ಒಂದು ದಿನದ ಮಟ್ಟಿಗೂ ನಾವು ಒತ್ತಾಯ ಮಾಡುವುದಿಲ್ಲ.
ಮೂರು ತಿಂಗಳು ಎನ್ನುತ್ತಿದ್ದೀರಿ. ಅಂದರೆ ಇದು ಪರ್ಮನೆಂಟ್ ಉದ್ಯೋಗವಲ್ಲ ಎಂದ ಹಾಗಾಯಿತು.
ನಮಗೆ ನಿನ್ನ ಸೇವೆ ಮೂರು ತಿಂಗಳಮಟ್ಟಿಗೆ ಮಾತ್ರ ಅವಶ್ಯವಿದೆ.
ನಿಮ್ಮ ಶರತ್ತುಗಳು ವಿಚಿತ್ರವಾಗಿವೆ. ಬರಿಯ ಮೂರು ತಿಂಗಳ ಕೆಲಸಕ್ಕಾಗಿ ನಾನು ಏಕಾದರೂ ರಿಸ್ಕ್ ತೆಗೆದುಕೊಳ್ಳಬೇಕು?
ನಿನಗೆ ಒಂದು ಸ್ಥಿರ ಉದ್ಯೋಗವೇ ಸಿಕ್ಕಿತು ಎಂದುಕೊಳ್ಳೋಣ. ನಿನಗೆ ಬಹಳವೆಂದರೆ ಎಷ್ಟು ಸಂಬಳ ಕೊಟ್ಟಾರು? ವರ್ಷಕ್ಕೆ ಒಂದು ಕೋಟಿ ಕೊಡಬಹುದೇನೊ. ಅಥವಾ ನಿನ್ನ ವಿಶೇಷ ಪ್ರತಿಭೆಯನ್ನು ಗುರುತಿಸಿ ಎರಡು ಕೋಟಿ ಕೊಡಬಹುದು. ಅಂದರೆ ನೀನು ಇಪ್ಪತ್ತು ವರ್ಷ ಕೆಲಸ ಮಾಡಿದರೆ ನಿನ್ನ ಜೀವಮಾನದ ಗಳಿಕೆ ನಲವತ್ತೈವತ್ತು ಕೋಟಿ ಆದೀತು. ಅದಕ್ಕಿಂತ ಹೆಚ್ಚು ಮೊತ್ತವನ್ನು ನಾನು ನಿನ್ನ ಮೂರು ತಿಂಗಳ ಕೆಲಸಕ್ಕೇ ಕೊಡಬಲ್ಲೆ.
ಮಿಸ್ತ್ರಿಯ ಈ ಮಾತನ್ನು ಕೇಳಿ ಮಯಾಂಕ್ ದಿಗ್ಭ್ರಮೆಗೊಂಡ. ಒಂದು ಕ್ಷಣ ಈತ ಏನಾದರೂ ತಮಾಷೆ ಮಾಡುತ್ತಿರಬಹುದೆ – ಎಂದುಕೊಂಡ. ಮರುಕ್ಷಣ ಅದು ಹಾಗಿರಲಾರದೆಂದು, ಈತ ಗಂಭೀರವಾಗಿಯೆ ಮಾತನಾಡುತ್ತಿರುವನೆನಿಸಿತು. ಆತನ ಮಾತುಗಳನ್ನು ಹೆಚ್ಚು ಗಮನವಿಟ್ಟು ಕೇಳಿಸಿಕೊಳ್ಳತೊಡಗಿದ, ಮಯಾಂಕ್.
ನನ್ನ ಶರತ್ತುಗಳು ಇನ್ನೂ ಕೆಲವಿವೆ, ಮಯಾಂಕ್. ನಮ್ಮ ಪ್ರಯೋಗಾಲಯ ಸಂಕೀರ್ಣ ಇರುವುದು ನಾಗಪುರ ಊರಾಚೆಯ ಸಯನ್ಸ್ ಸಿಟಿ ಆವರಣದಲ್ಲಿ. ಒಮ್ಮೆ ನಮ್ಮ ಪ್ರಯೋಗಾಲಯವನ್ನು ಪ್ರವೇಶಿಸಿದ ಮೇಲೆ ಹೊರಗಿನ ಪ್ರಪಂಚದೊಡನೆ ಸಂಪರ್ಕವಿರಿಸಿಕೊಳ್ಳಲು ಎಷ್ಟು ಮಾತ್ರ ಅವಕಾಶವೂ ಇರಲಾರದು. ಎಂದರೆ ಆ ಮೂರು ತಿಂಗಳು ನಿನಗೆ ಟಿ.ವಿ. ಇರುವುದಿಲ್ಲ, ದಿನಪತ್ರಿಕೆಗಳು ಇರುವುದಿಲ್ಲ, ಫೋನ್ಗಳು ಇರುವುದಿಲ್ಲ, ಇಂಟರ್ನೆಟ್ ಮೊದಲಾದವೂ ಇರುವುದಿಲ್ಲ. ಒಂದು ದೃಷ್ಟಿಯಿಂದ ಜೈಲಿನಲ್ಲಿದ್ದಂತೆಯೆ ಎನ್ನಬಹುದು. ಅಂತಹ ನಿರ್ಬಂಧದ ಪರಿಸರದಲ್ಲಿ ನೀನು ಕೆಲಸ ಮಾಡಬೇಕಾಗುತ್ತದೆ. ನಿನಗೆ ಸಮ್ಮತವೆ?
ಮಯಾಂಕ್ ಕೂಡಲೆ ಏನೂ ಮಾತನಾಡಲಿಲ್ಲ. ಚಿಂತಿಸುತ್ತಿದ್ದಂತೆ ಕಂಡ. ಅನಂತರ ಕ್ಲುಪ್ತವಾಗಿ ಕೇಳಿದ:
ಮುಗಿಯಿತೆ? ಅಥವಾ ಇನ್ನೂ ನಿಮ್ಮ ಶರತ್ತುಗಳೇನಾದರೂ ಇವೆಯೆ?
ಇನ್ನೊಂದು ಮುಖ್ಯವಾದ ಶರತ್ತು ಇದೆ, ಮಯಾಂಕ್. ಇದನ್ನು ಕೇಳಿ ನಿನಗೆ ಆಘಾತವೇ ಆಗಬಹುದು. ಗಮನವಿಟ್ಟು ಕೇಳು. ಇಲ್ಲಿಯ ನಿನ್ನ ಕೆಲಸದ ಮೂರು ತಿಂಗಳು ಪೂರ್ತಿಯಾದ ಮೇಲೆ ನಿನ್ನ ಮೆದುಳಿನಿಂದ ಈ ಮೂರು ತಿಂಗಳ ನೆನಪನ್ನು ಅಳಿಸಿಹಾಕಲಾಗುತ್ತದೆ. ಈ ಶರತ್ತಿಗೂ ನೀನು ಸಹಿ ಮಾಡಬೇಕಾಗುತ್ತದೆ.
ಈ ಮಾತನ್ನು ಕೇಳಿ ಮಯಾಂಕ್ ಆಘಾತಗೊಳ್ಳುವುದಕ್ಕೆ ಬದಲಾಗಿ ಮುಗುಳ್ನಕ್ಕು ಹೇಳಿದ: ನೀವು ತಮಾಷೆ ಮಾಡುತ್ತಿದ್ದೀರೆನಿಸುತ್ತದೆ. ಏಕೆಂದರೆ ನೀವು ಹೇಳುವಂತಹ ತಂತ್ರಜ್ಞಾನ ಜಗತ್ತಿನಲ್ಲಿ ಇಲ್ಲವೇ ಇಲ್ಲ. ಇಲ್ಲದ ತಂತ್ರಜ್ಞಾನವನ್ನು ನನ್ನ ಮೇಲೆ ಹೇಗೆ ಪ್ರಯೋಗಿಸಬಲ್ಲಿರಿ? ತಮಾಷೆ ಮಾಡುವುದನ್ನು ದಯವಿಟ್ಟು ನಿಲ್ಲಿಸಿ.
ಮಂಜ್ರೇಕರ್ ಎಂಬ ವಿಜ್ಞಾನಿಯ ಹೆಸರನ್ನು ಕೇಳಿದ್ದೀಯಾ? ಆತ ಹೈದರಾಬಾದಿನಲ್ಲಿ ಮೈಂಡ್ ಕೇರ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಎಂಬ ಪ್ರಯೋಗಾಲಯವನ್ನು ಸ್ಥಾಪಿಸಿ ಹಲವಾರು ಆವಿಷ್ಕರಣಗಳನ್ನು ಮಾಡಿದ್ದ.
ಆ ಎಂ.ಸಿ.ಎ.ಆರ್.ಐ. ಸಂಸ್ಥೆ ತುಂಬಾ ಪ್ರಸಿದ್ಧವಾಗಿತ್ತು. ಒಬ್ಬ ವ್ಯಕ್ತಿಯ ಮೆದುಳಿನಲ್ಲಿನ ಜ್ಞಾಪಕಗಳನ್ನು ಬೇರೊಬ್ಬ ವ್ಯಕ್ತಿಯ ಮೆದುಳಿಗೆ ವರ್ಗಾಯಿಸುವುದನ್ನೂ ಸಾಧಿಸಿದ್ದ. ಆ ತಂತ್ರಜ್ಞಾನವನ್ನು ಅವಲಂಬಿಸಿ ಪೊಲೀಸ್ ಇನ್ಸ್ಪೆಕ್ಟರನೊಬ್ಬ ಮೃತನಾದ ಮೇಲೂ ಸಂರಕ್ಷಿತಗೊಳಿಸಲ್ಪಟ್ಟಿದ್ದ ನೆನಪುಗಳ ಆಧಾರದ ಮೇಲೆ ಹಲವರು ದೇಶದ್ರೋಹಿಗಳನ್ನು ಪತ್ತೆ ಮಾಡುವುದು ಸಾಧ್ಯವಾಗಿತ್ತು. ಅದು ದೊಡ್ಡ ಸುದ್ದಿ ಆಗಿತ್ತು. ಇನ್ನೊಂದು ಸಂಗತಿಯನ್ನೂ ಹೇಳಬೇಕು. ಒಬ್ಬನ ಜ್ಞಾಪಕಗಳನ್ನು ವ್ಯತ್ಯಾಸ ಮಾಡಬೇಕಾದರೆ ಮೊದಲಿನ ಜ್ಞಾಪಕಗಳನ್ನು ನಾಶ ಮಾಡುವುದು ಅವಶ್ಯವಾಗುತ್ತದೆ. ಇದನ್ನೂ ಮಂಜ್ರೇಕರ್ ಮಾಡಿದ್ದ. ಅದರ ಬಗ್ಗೆ ಮೇಧಾಮಥನ ಎಂಬ ಕಾದಂಬರಿಯೂ ಬಂದಿತ್ತು. ಆ ಮಂಜ್ರೇಕರ್ ಈಗ ಎಲ್ಲಿದ್ದಾನೊ ಏನಾದನೊ ನಿನಗೆ ಮಾತ್ರವಲ್ಲ ಯಾರಿಗೂ ತಿಳಿದಿಲ್ಲ.
ಹೀಗೆಂದ ಮಹೇಶ್ ಮಿಸ್ತ್ರಿ ಕೆಲವು ನಿಮಿಷ ಮೌನದ ತರುವಾಯ ಹೇಳಿದ – ಅವನೀಗ ನನ್ನ ಹತ್ತಿರ ಇದ್ದಾನೆ. ಅವನನ್ನು ಪ್ರೋತ್ಸಾಹಿಸಿ ಇನ್ನೂ ಕೆಲವು ಸಾಧನೆಗಳನ್ನು ಅವನಿಂದ ಮಾಡಿಸಿದ್ದೇನೆ. ಅವನೀಗ ಪ್ರಯೋಗಗಳಲ್ಲಿ ಎಷ್ಟು ಮುಂದುವರಿದಿದ್ದಾನೆಂದರೆ ಒಬ್ಬ ವ್ಯಕ್ತಿಯ ಒಂದು ದಿನದ, ಒಂದು ವಾರದ, ಎರಡು ತಿಂಗಳ ಜ್ಞಾಪಕಗಳನ್ನು ಬೇಕಾದರೂ ಅವನ ಮೆದುಳಿನಿಂದ ತೆಗೆದುಹಾಕುವುದು ಸಾಧ್ಯವಾಗಿದೆ. ಆ ಹಿನ್ನೆಲೆಯಲ್ಲಿಯೆ ನಾನು ನನ್ನ ಶರತ್ತನ್ನು ಕುರಿತು ನಿನಗೆ ಹೇಳಿದ್ದು. ಅದಕ್ಕೆ ನೀನು ಒಪ್ಪಿಕೊಂಡಲ್ಲಿ ಮೂರು ತಿಂಗಳಾದ ಮೇಲೆ ನೀನು ಯಾವ ಸ್ಥಿತಿಯಲ್ಲಿ ನನ್ನಲ್ಲಿಗೆ ಬರುತ್ತೀಯೋ ಅದೇ ಸ್ಥಿತಿಯಲ್ಲಿ ನೀನು ಹಿಂದಿರುಗುವಂತೆ ಏರ್ಪಾಡು ಮಾಡಬಲ್ಲೆವು. ಈ ಮೂರು ತಿಂಗಳಲ್ಲಿ ಏನೇನಾಗುತ್ತದೋ ಅದಾವುದರ ಸ್ಮರಣೆಯೂ ನಿನ್ನಲ್ಲಿ ಉಳಿದಿರುವುದಿಲ್ಲ. ಇದನ್ನೇ ನಾನು ನಿನಗೆ ಹೇಳಲು ಬಯಸಿದ್ದುದು. ನಿನಗೆ ಒಪ್ಪಿಗೆಯಾದರೆ ತಿಳಿಸು. ಈಗಲೇ ನಾವು ಒಪ್ಪಂದ ಮಾಡಿಕೊಳ್ಳಬಹುದು – ಎಂದ, ಮಹೇಶ್ ಮಿಸ್ತ್ರಿ.
ಅವನೆಡೆಗೆ ಕೌತುಕದಿಂದ ದಿಟ್ಟಿಸಿದ, ಮಯಾಂಕ್. ಅಸಲು ಇಂತಹ ವಿಚಿತ್ರ ಶರತ್ತಿಗೆ ಯಾರಾದರೂ ಒಪ್ಪಿಕೊಂಡಾರೆಂದು ನಿಮಗೆ ಅನಿಸಿದ್ದು ಹೇಗೆ? – ಎಂದ.
ನನ್ನಲ್ಲಿರುವ ಇನ್ನೂ ಒಂದು ಅಸ್ತ್ರದ ಬಗ್ಗೆ ನಿನಗಿನ್ನೂ ಹೇಳಿಲ್ಲ ಎನ್ನುತ್ತ ಮಿಸ್ತ್ರಿ ತನ್ನ ಕಿಸೆಯಿಂದ ಚೆಕ್ಬುಕ್ಕನ್ನು ಹೊರಕ್ಕೆ ತೆಗೆದ. ಅದರಿಂದ ಒಂದು ಚೆಕ್ಕನ್ನು ಹರಿದು ತೆಗೆದು ಮಯಾಂಕ್ನ ಕೈಯಲ್ಲಿರಿಸಿದ. ಅದರಲ್ಲಿ ರೂ. ೧೦೦ ಕೋಟಿ ಮೊಬಲಗನ್ನು ಬರೆದು ಸಹಿ ಮಾಡಲಾಗಿತ್ತು.
ಇದು ನಡೆಯುವುದೊ ನಕಲಿಯೊ ಎಂದು ನಿನಗೆ ಅನುಮಾನವಿದ್ದರೆ ಈಗಲೆ ಅದನ್ನು ಬ್ಯಾಂಕಿಗೆ ಕಳಿಸಬಹುದು. ಮೊತ್ತವು ನಿನ್ನ ಅಕೌಂಟಿಗೆ ಜಮೆ ಆದ ಮೇಲೆಯೆ ನೀನು ನಮ್ಮ ಒಪ್ಪಂದಕ್ಕೆ ಸಹಿ ಹಾಕಬಹುದು – ಎಂದ, ಮಿಸ್ತ್ರಿ. ಆ ಚೆಕ್ಕನ್ನು ನಂಬಲಾರದವನಂತೆ ಮಯಾಂಕ್ ನೋಡುತ್ತಲೇ ಇದ್ದ.
ಹಿಂದಿನ ದಿನವಷ್ಟೆ ತನ್ನ ಸ್ವಂತ ಕಂಪೆನಿ ತೆರೆಯುವ ಬಗ್ಗೆ ಶಿವಾಜಿಯೊಡನೆ ತನ್ನ ಮಾತುಕತೆ ನಡೆದಿದ್ದುದು ನೆನಪಾಯಿತು. ಈ ವ್ಯವಹಾರ ನಿರೀಕ್ಷೆಯಂತೆ ನಡೆದರೆ ಬರಿಯ ಮೂರು ತಿಂಗಳ ಪರಿಶ್ರಮದಿಂದ ತನಗೆ ಬೇಕಾದಷ್ಟು ಬಂಡವಾಳ ತನ್ನ ಕೈ ಸೇರಿರುತ್ತದೆ. ಮಿಸ್ತ್ರಿ ಹೇಳಿದ್ದಂತೆ ಅಷ್ಟು ದೊಡ್ಡ ಮೊತ್ತವನ್ನು ತಾನು ಸಂಗ್ರಹಿಸುವುದು ಎಷ್ಟೊ ವರ್ಷಗಳ ಹೆಣಗಾಟದಿಂದಲೂ ಸಾಧ್ಯವಾಗದ ಮಾತು. ಈಗ ಮಿಸ್ತ್ರಿಯ ಶರತ್ತುಗಳಿಗೆ ಸಮ್ಮತಿಸಿದರೆ ಕೆಲವೇ ಗಂಟೆಗಳೊಳಗೆ ಅಗಾಧ ಮೊತ್ತದ ಹಣ ತನ್ನ ವಶಕ್ಕೆ ಬಂದಿರುತ್ತದೆ.
ಮಯಾಂಕ್ನ ಮನಸ್ಸಿನ ಡೋಲಾಯಮಾನ ಸ್ಥಿತಿಯನ್ನು ಊಹಿಸಿದಂತೆ ಮಹೇಶ್ ಮಿಸ್ತ್ರಿ ಹೇಳಿದ: ಈಗ ನಿನಗೆ ಕೊಡುತ್ತಿರುವುದು ಅಡ್ವಾನ್ಸ್ ಮಾತ್ರ, ಮಯಾಂಕ್. ನಾವು ಅಪೇಕ್ಷೆ ಪಟ್ಟಿರುವ ಕೆಲಸವನ್ನು ನೀನು ಮುಗಿಸುವುದು ಸಾಧ್ಯವಾದರೆ ನಿನಗೆ ಇನ್ನೂ ಹೆಚ್ಚುವರಿ ನೂರು ಕೋಟಿ ಕೊಡಲು ನಾವು ಸಿದ್ಧರಾಗಿದ್ದೇವೆ. ಯಾವುದೇ ಕಾರಣದಿಂದ ಕೆಲಸ ಅಂದುಕೊಂಡಂತೆ ಸಫಲವಾಗಿ ಮುಗಿಯದಿದ್ದರೆ ಈಗ ನಿನಗೆ ಕೊಡುತ್ತಿರುವ ನೂರು ಕೋಟಿಯನ್ನು ನಾವು ವಾಪಸ್ ಕೇಳುವುದಿಲ್ಲ.
ಈ ಮಾತಿಗೆ ಏನು ಉತ್ತರ ಕೊಡಬೇಕೊ ಮಯಾಂಕ್ಗೆ ತೋರಲಿಲ್ಲ. ಸ್ವಲ್ಪ ತಡೆದು ಕೇಳಿದ: ಈ ಕೆಲಸಕ್ಕಾಗಿ ನೀವು ನನ್ನನ್ನಲ್ಲದೆ ಬೇರೆ ಅಭ್ಯರ್ಥಿ ಯಾರನ್ನಾದರೂ ಸಂಪರ್ಕಿಸಿದ್ದೀರಾ?
ಇಲ್ಲ. ನಿನ್ನನ್ನೊಬ್ಬನನ್ನೇ ನಾವು ಸಂಪರ್ಕ ಮಾಡಿರುವುದು.
ನೀವು ಈ ಕೆಲಸದ ಸಲುವಾಗಿ ನನ್ನಲ್ಲಿ ಮಾತ್ರ ವಿಶ್ವಾಸ ಇರಿಸುತ್ತಿರುವುದು ಹೇಗೆ? ನಾನು ಈ ಕೆಲಸ ಮಾಡಬಲ್ಲೆನೆಂಬ ನಿಮ್ಮ ಭರವಸೆಗೆ ಕಾರಣ ಏನು?
ನಿನ್ನ ಸಾಮರ್ಥ್ಯ ಕುರಿತು ನಿನಗಿಂತ ನಮಗೇ ಹೆಚ್ಚು ತಿಳಿದಿರುವುದರಿಂದಾಗಿ.
ಮಯಾಂಕ್ ತನಗೇ ಅರಿವಿಲ್ಲದಂತೆ ಗೋಣು ಹಾಕಿದ.
ಮಿಸ್ತ್ರಿ ಮುಂದುವರಿಸಿದ: ನೀನು ನಮ್ಮೊಡನೆ ಸಹಕರಿಸಲು ಸಮ್ಮತಿಸುವುದಾದರೆ ಇನ್ನೊಂದು ಶರತ್ತನ್ನೂ ಹೇಳಿಬಿಡುತ್ತೇನೆ. ನಿನಗೆ ಕೆಲಸ ಸಿಕ್ಕಿರುವುದರ ಬಗ್ಗೆ ಬೇರೆಯವರಿಗೆ ನೀನು ತಿಳಿಸಲು ಅಭ್ಯಂತರವಿಲ್ಲ. ನಿನಗೆ ನೂರು ಕೋಟಿ ಸಂಭಾವನೆ ಕೊಡುತ್ತಿರುವುದರ ಬಗ್ಗೆ ಕೂಡಾ ನೀನು ನಿನ್ನವರಿಗೆ ತಿಳಿಸಲು ನಮ್ಮ ಆಕ್ಷೇಪ ಇಲ್ಲ. ಆದರೆ ಅಂತ್ಯದಲ್ಲಿ ನಿನ್ನ ಮೂರು ತಿಂಗಳ ನೆನಪಿನ ಸಾಮಗ್ರಿಯನ್ನು ಅಳಿಸಿಹಾಕಲಾಗುವುದನ್ನು ಕುರಿತು ಮಾತ್ರ ನೀನು ಯಾರಲ್ಲಿಯೂ ಹೇಳಲು ಅವಕಾಶ ಇರುವುದಿಲ್ಲ. ನಿನ್ನ ಕುಟುಂಬ ಸದಸ್ಯರಿಗಾಗಲಿ ಸ್ನೇಹಿತರಿಗಾಗಲಿ ಯಾರಿಗೂ ಈ ವಿವರವನ್ನು ತಿಳಿಸಬಾರದು. ಹಾಗೇನಾದರೂ ಅಕಸ್ಮಾತ್ತಾಗಿ ಈ ಸಂಗತಿ ಹೊರಬಿದ್ದರೆ ನೀನು ಪೆನಾಲ್ಟಿಗೆ ಗುರಿಯಾಗಬೇಕಾದೀತು – ಎಂದು ನಕ್ಕ, ಮಿಸ್ತ್ರಿ.
ಈ ಮಾತು ಕೇಳಿ ತಾನೂ ನಕ್ಕ, ಮಯಾಂಕ್. ನೀವೇನೂ ಚಿಂತಿಸಬೇಕಾದ್ದಿಲ್ಲ. ನಾನು ಯಾರಿಗೂ ಹೇಳುವುದಿಲ್ಲ.
ಒಳ್ಳೆಯದು. ಇವತ್ತು ತಾರೀಖು ೫. ಇನ್ನು ಹತ್ತು ದಿನಗಳಲ್ಲಿ ನೀನು ಸಿದ್ಧನಾಗಬೇಕು. ನಿನ್ನನ್ನು ಗಮ್ಯಸ್ಥಾನಕ್ಕೆ ಕರೆದುಕೊಂಡು ಬರಲು ನಮ್ಮ ಖಾಸಗಿ ವಿಮಾನವನ್ನು ಕಳಿಸಲಾಗುತ್ತದೆ ಎಂದು ಮುಗಿಸಿದ, ಮಹೇಶ್ ಮಿಸ್ತ್ರಿ.
ಇದಾದ ಮೇಲೆ ಕಂಪೆನಿಯ ಕಡೆಯಿಂದ ಬೇರೆ ಯಾವ ಅಭ್ಯರ್ಥಿಯ ಸಂದರ್ಶನವೂ ನಡೆಯಲಿಲ್ಲ.
(ಸಶೇಷ)
ತೆಲುಗಿನಲ್ಲಿ: ಪುಟ್ಟಗಂಟಿ ಗೋಪೀಕೃಷ್ಣ
ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ