
ತೆಲುಗಿನಲ್ಲಿ: ಪುಟ್ಟಗಂಟಿ ಗೋಪೀಕೃಷ್ಣ
ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ
ಮಯಾಂಕ್ನನ್ನೂ ದೇವಯಾನಿಯನ್ನೂ ಅವರ ಮೆಮೊರಿಯನ್ನು ಅಳಿಸಿಹಾಕುವುದಕ್ಕಾಗಿ ಪರಿಕರಗಳಿದ್ದ ಕೋಣೆಯೊಂದಕ್ಕೆ ಕರೆದೊಯ್ದರು. ಅದಕ್ಕೆ ಮುಂಚೆಯೆ ಅವರಿಬ್ಬರೂ ಕ್ಯಾಂಪಸಿಗೆ ಬಂದಾಗ ಅವರಿಂದ ವಶಪಡಿಸಿಕೊಂಡಿದ್ದ ಅವರ ಸಾಮಾನುಗಳನ್ನೆಲ್ಲ ಅವರಿಗೆ ಹಿಂದಿರುಗಿಸುವುದಕ್ಕಾಗಿ ಅಣಿಮಾಡಿರಿಸಿದ್ದರು.
ಆ ಕೋಣೆಯಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಪ್ರದರ್ಶನಕ್ಕೆ ಇರಿಸಿದಂತೆ ತೋರುತ್ತಿದ್ದವೇ ವಿನಾ ಆಪರೇಶನ್ ಥಿಯೇಟರಿನ ಸಜ್ಜಿಕೆಯಂತೆ ಇರಲಿಲ್ಲ. ಸೋಜಿಗದಿಂದ ಮಯಾಂಕ್ ಮತ್ತು ದೇವಯಾನಿ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಇಲ್ಲಿಯ ಮೆಮೊರಿ ವೈಪ್ ಕಲಾಪ ಮುಗಿದರೆ ಕಳೆದ ಮೂರು ತಿಂಗಳಲ್ಲಿ ಈ ಕ್ಯಾಂಪಸಿನಲ್ಲಿ ನಡೆದದ್ದಾವುದರ ನೆನಪೂ ಇರುವುದಿಲ್ಲ; ಇಲ್ಲಿಗೆ ಏಕೆ ಬಂದೆವೆಂಬ ಪರಿಜ್ಞಾನವೂ ಇರಲಾರದು.
ಅಲ್ಲಿಯ ಸಿಬ್ಬಂದಿ ಕಾರ್ಯೋನ್ಮುಖರಾದರು. ಇಬ್ಬರಿಗೂ ಮತ್ತು ಬರಿಸುವ ಔಷಧ ನೀಡಿದ್ದರಿಂದ ಬಾಹ್ಯಪ್ರಜ್ಞೆ ತಪ್ಪಿತು. ಒಂದಷ್ಟು ಸಮಯವಾದ ಮೇಲೆ ಮತ್ತೆ ಪ್ರಜ್ಞೆ ಬಂದಾಗ ಇಬ್ಬರೂ ಆರಾಮವಾಗಿ ಸೋಫಾದಲ್ಲಿ ಕುಳಿತಿದ್ದರು. ಒಬ್ಬರನ್ನೊಬ್ಬರು ನೋಡಿದರು. ಮೊದಲಿಗೆ ತಾವು ಎಲ್ಲಿ ಇರುವೆವೆಂದು ತೋರದಿದ್ದರೂ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಅರಿವಿಗೆ ಬಂದಿತು. ಅವರ ಲಗೇಜ್ ಎದುರಿಗೆ ಸಿದ್ಧವಾಗಿತ್ತು. ಸಿಸೋದಿಯಾ ಮುಗುಳ್ನಗುತ್ತ ಸಂಗಡ ಕುಳಿತಿದ್ದ. ವಿಮಾನನಿಲ್ದಾಣದಿಂದ ಸಯನ್ಸ್ ಸಿಟಿಗೆ ಬಂದದ್ದಷ್ಟೆ ಇಬ್ಬರಿಗೂ ನೆನಪಾಗುತ್ತಿತ್ತು.
“ನಮಗೆ ಅದಾವಾಗ ನಿದ್ರೆ ಹತ್ತಿತೋ ಗೊತ್ತಾಗಲಿಲ್ಲ. ನೀವು ಇಲ್ಲಿ ಇದ್ದದ್ದೂ ಗಮನಕ್ಕೆ ಬರಲಿಲ್ಲ, ಕ್ಷಮಿಸಿರಿ” – ಎಂದ, ಮಯಾಂಕ್.
“ಕ್ಷಮೆ ಕೋರುವ ಆವಶ್ಯಕತೆ ಇಲ್ಲ” – ಎಂದ, ಸಿಸೋದಿಯಾ – “ನೀವು ಕ್ಯಾಂಪಸಿಗೆ ಬಂದು ಎಷ್ಟು ಕಾಲ ಆಯಿತೆಂದುಕೊಂಡಿದ್ದೀರಿ?”
ಉತ್ತರಿಸಲಾರದೆ ಮಯಾಂಕ್ ಗೊಂದಲಕ್ಕೀಡಾದ.
ಸಿಸೋದಿಯಾ ನಗುತ್ತ ಹೇಳಿದ: “ನೀವು ಇಲ್ಲಿ ಬಂದು ಸೇರಿ ಎರಡು ತಿಂಗಳಿಗೂ ಹೆಚ್ಚೇ ಆಗಿದೆ. ನೀವು ಯಾವ ಕೆಲಸಕ್ಕಾಗಿ ಬಂದಿರೋ ಅದೀಗ ಮುಗಿದಿದೆ. ಈಗ ನೀವು ಹಿಂದಿರುಗಲು ಸಿದ್ಧರಾಗಿದ್ದೀರಿ. ನೀವು ಬಂದಾಗ ನಿಮ್ಮ ಖಾಸಗಿ ವಸ್ತುಗಳು, ಕೈಗಡಿಯಾರ, ಮೊಬೈಲ್, ಒಡವೆಗಳು – ಎಲ್ಲವನ್ನೂ ನಾವು ತೆಗೆದಿಟ್ಟುಕೊಂಡಿದ್ದೆವು. ಅವನ್ನೆಲ್ಲ ಈಗ ನಿಮಗೆ ಹಿಂದಿರುಗಿಸುತ್ತಿದ್ದೇವೆ. ಅದರಿಂದಾಗಿಯೆ ನಿಮ್ಮ ಕೈಗಳಲ್ಲಿ ವಾಚುಗಳಿಲ್ಲ.”
ಅವನು ಹೇಳಿದ್ದೇನೂ ಪೂರ್ತಿಯಾಗಿ ದೇವಯಾನಿ-ಮಯಾಂಕ್ರಿಗೆ ಅರ್ಥವಾಗಲಿಲ್ಲ.
“ಅಂದರೆ, ನನ್ನನ್ನು ಯಾವ ಕೆಲಸಕ್ಕಾಗಿ ಕರೆದುಕೊಂಡು ಬಂದಿರೋ ಅದನ್ನು ನಾನು ಮುಗಿಸಿದೆನೆ?” – ಎಂದ ಮಯಾಂಕ್ ಅಚ್ಚರಿಯಿಂದ.
“ನೀವು ಅಪೇಕ್ಷಿಸಿದ ಹಾಗೆ ಮಯಾಂಕ್ ಮಾಡಿ ಮುಗಿಸಿದ್ದಾನೆ ಎನ್ನುತ್ತಿದ್ದೀರಾ?” – ಎಂದು ದೇವಯಾನಿಯೂ ಕೇಳಿದಳು.
ಹೌದೆಂದು ತಲೆಯಾಡಿಸಿದ, ಸಿಸೋದಿಯಾ.
“ಇವತ್ತು ತಾರೀಖು ಏನು?”
ಸಿಸೋದಿಯಾ ಅಲ್ಲಿದ್ದ ಕ್ಯಾಲೆಂಡರಿನ ಕಡೆಗೆ ಬೊಟ್ಟು ಮಾಡಿದ.
ಇಷ್ಟರಲ್ಲಿ ಡ್ರೈವರ್ ಬಂದು ಇವರ ವಸ್ತುಗಳು, ಲಗೇಜನ್ನು ಕಾರಿನಲ್ಲಿ ಇರಿಸಲು ತೆಗೆದುಕೊಂಡು ಹೋದ. ಅವರ ವಾಚುಗಳು ಮೊದಲಾದವನ್ನಿರಿಸಿದ್ದ ಲಕೋಟೆಯನ್ನು ಸಿಸೋದಿಯಾ ಮಯಾಂಕ್ನ ಕೈಯಲ್ಲಿರಿಸಿದ.
“ನಾವು ನಿರೀಕ್ಷಿಸಿದಂತೆ ನೀವು ಕೆಲಸ ಮಾಡಿದ್ದೀರಿ” ಎಂದ, ಸಿಸೋದಿಯಾ – “ನಿಮಗೆ ಸಲ್ಲಬೇಕಾದ ಎರಡನೇ ಕಂತಿನ ಸಂಭಾವನೆಯ ಹಣವನ್ನೂ ನಿಮಗೆ ಕೊಡಬೇಕೆಂದು ಮಹೇಶ್ ಮಿಸ್ತ್ರಿಯವರು ಆದೇಶಿಸಿದ್ದಾರೆ. ಅದನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್ಫರ್ ಮಾಡಲಾಗುತ್ತದೆ.”
“ಅಂದರೆ ನೂರು ಕೋಟಿ ಅಲ್ಲವೆ?” – ಸ್ಪಷ್ಟಪಡಿಸಿಕೊಳ್ಳಲು ಕೇಳಿದಳು, ದೇವಯಾನಿ.
“ಹೌದು” ಎಂದ ಸಿಸೋದಿಯಾ ಇಬ್ಬರ ದೆಹಲಿ ಪ್ರಯಾಣದ ಫ್ಲೈಟ್ ಟಿಕೆಟ್ಗಳನ್ನು ಆಕೆಯ ಕೈಯಲ್ಲಿರಿಸಿದ.
* * *
ದೆಹಲಿಗೆ ಹೋಗುವ ವಿಮಾನದಲ್ಲಿ ಕುಳಿತಿದ್ದಾರೆ ಮಯಾಂಕ್ ಮತ್ತು ದೇವಯಾನಿ. ಅಲ್ಲಿ ಕುಳಿತ ಕೂಡಲೆ ದೇವಯಾನಿ ಮಾತಿಗೆ ತೊಡಗಿದಳು.
“ಹೀಗೆಲ್ಲ ನಡೆಯಿತೆಂದು ಹೇಳಿದರೆ ಯಾರೂ ನಂಬಲಾರರೇನೊ!”
“ಹೌದು” ಎಂದ, ತನ್ನದೇ ಆಲೋಚನೆಗಳಲ್ಲಿ ಮುಳುಗಿದ್ದ ಮಯಾಂಕ್ –“ಈ ಇಡೀ ವ್ಯವಹಾರವೆಲ್ಲ ತುಂಬಾ ಪ್ರಮಾದಕರವೆನಿಸುತ್ತಿದೆ. ಆ ಸಯನ್ಸ್ ಸಿಟಿಯಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ ಏನೇನು ನಡೆಯಿತೆಂಬುದು ಎಷ್ಟು ಯೋಚಿಸಿದರೂ ನೆನಪಾಗುತ್ತಲೇ ಇಲ್ಲ. ನಮ್ಮಿಂದ ಅವರು ಏನೆಲ್ಲವನ್ನೂ ಮಾಡಿಸಿರಬಹುದು. ಅವೆಷ್ಟೋ ಕಾನೂನುಬಾಹಿರವೂ ಆಗಿರಬಹುದು….”
ಇನ್ನೂ ಏನೊ ಹೇಳಬೇಕೆಂದಿದ್ದ ಮಯಾಂಕ್ನ ಮಾತನ್ನು ತಡೆದು ದೇವಯಾನಿ ಹೇಳಿದಳು:
“ನನಗನಿಸುವುದೇನೆಂದರೆ – ಅಲ್ಲಿ ಏನು ನಡೆಯಿತೆಂಬುದು ಈಗ ನಮಗೆ ನೆನಪಾಗದಿರಬಹುದು. ಆದರೆ ಅಲ್ಲಿ ಇದ್ದಾಗ ನಾವು ಬುದ್ಧಿಪೂರ್ವಕವಾಗಿಯೆ ಕೆಲಸ ಮಾಡುತ್ತಿದ್ದೆವಲ್ಲ! ಅದಾವುದಾದರೂ ಕಾನೂನುಬಾಹಿರ ಆಗಿರಬಹುದೆಂದು ಈಗ ಅನಿಸುತ್ತಿರಬೇಕಾದರೆ ಅಲ್ಲಿದ್ದಾಗ ನಾವು ಅಕ್ರಮವಾದದ್ದೇನನ್ನೋ ಏಕೆ ಮಾಡಿರುತ್ತೇವೆ?”
ಮಯಾಂಕ್ ಮಾತನಾಡಲಿಲ್ಲ.
ಇಷ್ಟು ಹೊತ್ತಿಗೆ ವಿಮಾನ ಗಗನಗಾಮಿಯಾಗಿತ್ತು.
“ಅವರು ಒಂದು ವೇಳೆ ನಿನ್ನನ್ನು ಕಿಡ್ನಾಪ್ ಮಾಡಿ ನನ್ನಿಂದ ಬಲವಂತವಾಗಿ ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿದ್ದರೂ ಅದಾವುದೂ ಈಗ ನೆನಪಾಗದಿರಬಹುದಲ್ಲವೆ?”
ಮಯಾಂಕ್ನ ಊಹೆ ಸರಿಯೆನಿಸಿತು ದೇವಯಾನಿಗೆ.
ಏನೇ ಆದರೂ ಇನ್ನೆಂದೂ ಇಂತಹ ಸನ್ನಿವೇಶದಲ್ಲಿ ಸಿಲುಕಿಕೊಳ್ಳಬಾರದು -ಎಂದುಕೊಂಡರು ಇಬ್ಬರೂ.
ಪಯಣ ಮುಂದುವರಿಯಿತು.
* * *
ಅನಿರೀಕ್ಷಿತವಾಗಿ ಮಗಳು-ಅಳಿಯ ಬಂದದ್ದು ದೇವಯಾನಿಯ ತಾಯಿಗೆ ಸಂತಸ ನೀಡಿತು. “ಬರುತ್ತಿರುವೆವೆಂದು ಒಂದು ಮಾತನ್ನು ಮುಂಚಿತವಾಗಿ ತಿಳಿಸಿದ್ದಿದ್ದರೆ ಗಂಟೇನು ಹೋಗುತ್ತಿತ್ತು?” -ಎಂದರು, ಆಪ್ಯಾಯತೆಯಿಂದ.
ತಾವು ಹೊರಟು ಬರುತ್ತಿದ್ದುದು ತಮಗೂ ಮುಂಚೆ ಅಂದಾಜು ಇರಲಿಲ್ಲ ಎಂದು ದೇವಯಾನಿ ತನ್ನೊಳಗೇ ಅಂದುಕೊಂಡರೂ ತಾಯಿಗೆ ಉತ್ತರಿಸಲಿಲ್ಲ.
ಎಲ್ಲರೂ ಒಳಕ್ಕೆ ಹೋದರು. ಸೋಫಾದಲ್ಲಿ ಕುಳಿತ ಮೇಲೆ ಮಯಾಂಕ್ನನ್ನು ದೇವಯಾನಿಯ ತಂದೆ ಕೇಳಿದರು:
“ಯಾವುದೊ ಭಾರಿ ಕೆಲಸಕ್ಕಾಗಿ ನಿಮ್ಮನ್ನು ಅಲ್ಲಿಗೆ ಕರೆಸಿಕೊಂಡರಲ್ಲ – ಕೆಲಸ ಎಲ್ಲಿಯವರೆಗೆ ಬಂತು?”
“ಆ ಕೆಲಸ ಮುಗಿಯಿತು.”
“ಅಷ್ಟು ದೊಡ್ಡ ಸಂಭಾವನೆ ಕೊಟ್ಟರೆಂದರೆ ಅದೇನೊ ತುಂಬಾ ಮುಖ್ಯವಾದ ಕಷ್ಟದ ಕೆಲಸವೇ ಆಗಿರಬೇಕು ಎಂದುಕೊಂಡೆವು ನಾವು. ಅವರ ನಿರೀಕ್ಷೆಯಂತೆ ಕೆಲಸ ಮುಗಿಯಿತೆ?”
ಮಯಾಂಕ್ ಸುಮ್ಮನೆ ನಕ್ಕ.
“ಇಷ್ಟಾಗಿ ಅಲ್ಲಿಯ ಸಂಶೋಧನೆ ಯಾವ ವಿಷಯಕ್ಕೆ ಸಂಬಂಧಿಸಿದ್ದು?….”
ಅವರು ಮಾತನ್ನು ಮುಗಿಸುವುದರೊಳಗಾಗಿ ದೇವಯಾನಿ ಒಳಗಿನಿಂದ ಬಂದು ಮಾತಿಗೆ ತಡೆಯೊಡ್ಡಿದಳು.
“ಏಕೊ ತಲೆನೋವು ಎನ್ನುತ್ತಿದ್ದೆಯಲ್ಲ ಮಯಾಂಕ್? ಸ್ನಾನ ಮಾಡುತ್ತೀಯಾ? ಒಂದಷ್ಟು ಹೊತ್ತು ರೆಸ್ಟ್ ತೆಗೆದುಕೊಳ್ಳಬಹುದೇನೊ.”
“ಹಾಗೆಯೆ ಆಗಲಿ. ನನಗೂ ಸ್ವಲ್ಪ ಹೊರಗಡೆಯ ಕೆಲಸ ಇದೆ” – ಎನ್ನುತ್ತ ತಂದೆಯವರು ಎದ್ದು ಹೊರಟರು.
* * *
ರಾತ್ರಿ ಇಬ್ಬರೂ ಹಾಸಿಗೆಯಲ್ಲಿ ಪವಡಿಸಿದ್ದಾಗ ದೇವಯಾನಿ ಹೇಳಿದಳು –
“ಬೇರೆ ಎಲ್ಲ ವಿಷಯಗಳೂ ಮರೆತುಹೋದದ್ದು ಹಾಗಿರಲಿ. ಒಂದು ಸಂಗತಿ ಬಾಧಿಸುತ್ತಿದೆ.”
“ಏನದು?”
“ಅಲ್ಲಿ ನಮಗೆ ಆದ ಮಧುರ ಅನುಭವಗಳೂ ಜಾರಿಹೋಗಿವೆಯಲ್ಲ!”
“ಸ್ವಿಮಿಂಗ್ಪೂಲ್ನಲ್ಲಿ ವಿಹರಿಸಿದ್ದು, ಬಾತ್ರೂಮಿನಲ್ಲಿ ಲೋಕಾಭಿರಾಮವಾಗಿ ಸ್ನಾನ ಮಾಡುತ್ತಿದ್ದುದು -ಯಾವುದೂ ನಿನಗೆ ನೆನಪಾಗುತ್ತಿಲ್ಲವೆ?”
“ಅದೆಲ್ಲ ಈಗ ನಿನಗೆ ಹೇಗೆ ನೆನಪಿಗೆ ಬರುತ್ತಿದೆ?” – ಎಂದಳು ದೇವಯಾನಿ ತಟಕ್ಕನೆ ತಲೆಯೆತ್ತಿ ಅಚ್ಚರಿಯಿಂದ.
ಮಯಾಂಕ್ ನಕ್ಕು ಹೇಳಿದ – ನನಗೆ ತಾನೆ ಅದೆಲ್ಲ ಹೇಗೆ ನೆನಪಿದೆ! ಸುಮ್ಮನೆ ಊಹೆ ಮಾಡಿದೆ ಅಷ್ಟೆ.
“ನೀನೊಳ್ಳೆ ಶುದ್ಧ ತರಲೆ!” ಎಂದು ಮಯಾಂಕ್ನ ಎದೆಗೆ ಗುದ್ದಿದಳು ದೇವಯಾನಿ.
ಅಭ್ಯಂತರಗಳು ತೊಲಗಿಹೋದ ಸ್ವಾತಂತ್ರ್ಯದ ಅನುಭವ ಇಬ್ಬರಿಗೂ ಆಹ್ಲಾದಕರವಾಗಿತ್ತು.
ಮಯಾಂಕ್ನ ಎದೆಯ ಮೇಲೆ ಒಂದು ಕಡೆ ಕೆಂಪು ಗುರುತು ಇದ್ದುದನ್ನು ಗಮನಿಸಿ ದೇವಯಾನಿ ಕೇಳಿದಳು :
“ಇದೇನೊ ಗಾಯ ಆದ ಹಾಗೆ ಇದೆಯಲ್ಲ? ಯಾವಾಗ ಆಯಿತು?”
“ಅಷ್ಟೇನು ದೊಡ್ಡ ಗಾಯ ಅಲ್ಲವಾದ್ದರಿಂದ ನಾನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲವೇನೊ.”
– ಎಂದ ಮಯಾಂಕ್ ಅದನ್ನು ದಿಟ್ಟಿಸಿ ನೋಡುತ್ತ. ಗಾಯವು ಆಳವಾಗಿರದೆ ಮೇಲುಮೇಲೆ ತರಚಿದಂತೆ ಕಂಡಿತು.
ಇನ್ನೊಮ್ಮೆ ದೇವಯಾನಿ ಕಣ್ಣಿಟ್ಟು ನೋಡಿ “ಯಾರೋ ಏನೋ ಬರೆದಿರುವ ಹಾಗಿದೆ” ಎಂದಳು.
“ನೀನೇ ಏನೋ ಗೀಚಿರಬೇಕೆನಿಸುತ್ತಿದೆ ನನಗೆ” – ಎಂದ, ಮಯಾಂಕ್.
ಕೆಲವು ಕ್ಷಣ ಯೋಚಿಸಿ ಮಯಾಂಕ್ ಹೇಳಿದ – “ಬಹುಶಃ ಇದು ನೆನಪನ್ನು ಅಳಿಸಿಹಾಕುವುದಕ್ಕೆ ಮುಂಚೆ ನಮಗೆ ನಾವೇ ಕೊಟ್ಟುಕೊಂಡ ಸಂದೇಶ ಇರಬಹುದು. ಏಕೆಂದರೆ ಆಗ ಕಾಗದಗಳಲ್ಲಿ ಬರೆಯುವ ಅಥವಾ ಅಂತಹ ಇತರ ಸಂದೇಶ ನೀಡಿಕೆಗೆ ಅವಕಾಶ ಇರಲಿಲ್ಲವಲ್ಲ! ನಾನು ನನಗೇ ಸಂದೇಶ ಕೊಡುವ ಸಂಭವ, ಅವಕಾಶ ಇರಲಿಲ್ಲ. ಆದ್ದರಿಂದ ನೀನೇ ಬರೆದಿರಬಹುದು ಎನಿಸುತ್ತಿದೆ…. ತೀರಾ ಸಣ್ಣ ಗಾಯದ ಗುರುತಾದ್ದರಿಂದ ನಾನೂ ಇದುವರೆಗೆ ಅದನ್ನು ಗಮನಿಸಿರಲಿಲ್ಲ. ಅದು ಹಾಗಿರಲಿ. ಅದೇನೊ ಮುಖ್ಯ ವಿಷಯವೇ ಆಗಿರಬೇಕು. ಏನು ಬರೆದಿದೆಯೊ ನೋಡಿ ಹೇಳು.”
ದೇವಯಾನಿ ಹತ್ತಿರದಿಂದ ನೋಡಿ ಹೇಳಿದಳು – “ಇಲ್ಲಿ ‘ಗೋ ಟು ಬ್ಯಾಂಕ್’ ಎಂದು ಬರೆದಿದೆ.”
ಇಬ್ಬರೂ ಯೋಚಿಸತೊಡಗಿದರು. ಅಲ್ಲಿಯವರು ಅದೇಕೆ ಹಾಗೆ ಬರೆದಿರಬಹುದೆಂದು ಊಹಿಸಲಾಗಲಿಲ್ಲ. ಹೇಗಾದರಾಗಲಿ, ಬೆಳಗಾದ ಮೇಲೆ ಬ್ಯಾಂಕ್ ತೆರೆಯುವ ಸಮಯಕ್ಕೆ ಅಲ್ಲಿಗೆ ಹೋಗಬೇಕೆಂದು ಮಯಾಂಕ್ ನಿಶ್ಚಯಿಸಿದ.
ಆಯಾಸವಾಗಿದ್ದುದರಿಂದ ಇಬ್ಬರನ್ನೂ ನಿದ್ರೆ ಆವರಿಸಿತು.
* * *
ಬ್ಯಾಂಕಿನೊಳಕ್ಕೆ ಇಬ್ಬರೂ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿಯ ಕೌಂಟರಿನಲ್ಲಿದ್ದಾಕೆಗೆ ಹಿಂದೆ ಇವರನ್ನು ತಾನು ಸಂದೇಹಿಸಿದ್ದುದು ನೆನಪಾಗಿ ಈ ಬಾರಿ ಹಾಗೆ ಆಗದಿರಲೆಂದು ಎಚ್ಚರದಿಂದ ಇಬ್ಬರನ್ನೂ ಸ್ವಾಗತಿಸಿ “ಎಸ್ ಸಾರ್, ನಮ್ಮಿಂದ ಏನಾಗಬೇಕಿತ್ತು?” ಎಂದು ಕಳಕಳಿಯಿಂದ ವಿಚಾರಿಸತೊಡಗಿದಳು.
ಒಂದು ಕ್ಷಣ ಮಯಾಂಕ್ಗೆ ಗಡಿಬಿಡಿಯಾಯಿತು. ತಾನು ಏಕೆ ಬಂದಿದ್ದೇನೆಂದು ತನಗೆ ತಿಳಿದಿದ್ದರಲ್ಲವೆ! ಏತನ್ಮಧ್ಯೆ ಕೌಂಟರ್ ಕ್ಲಾರ್ಕ್ ಎರಡು ಕುರ್ಚಿಗಳನ್ನು ತರಿಸಿ ಇಬ್ಬರನ್ನೂ ಕುಳಿತುಕೊಳ್ಳಲು ಹೇಳಿದಳು. “ಕಾಫಿ ತರಿಸಲೆ? ಅಥವಾ ಟೀ ಆಗಬಹುದೆ?”
ಇಷ್ಟರಲ್ಲಿ ಇವರು ಬಂದದ್ದನ್ನು ತನ್ನ ಕ್ಯಾಬಿನಿನಿಂದ ಗಮನಿಸಿದ ಮ್ಯಾನೇಜರ್ ತಾನೇ ಬಂದು ಕೌಂಟರ್ ಕ್ಲಾರ್ಕನ್ನು ತರಾಟೆಗೆ ತೆಗೆದುಕೊಂಡ. “ಇವರು ಬಂದ ಕೂಡಲೆ ನನ್ನಲ್ಲಿಗೆ ಕಳಿಸುವಂತೆ ಹೇಳಿದ್ದೆನಲ್ಲವೆ?” ಈಗೇನೊ ಸರಿ, ಯಾವಾಗಲೂ ಮ್ಯಾನೇಜರ್ ಹೀಗೆ ವರ್ತಿಸುವುದಿಲ್ಲವಲ್ಲ – ವಿಚಿತ್ರ ಮನುಷ್ಯ – ಎಂದುಕೊಂಡಳು ಆಕೆ.
ಕ್ಯಾಬಿನಿನೊಳಹೊಕ್ಕೊಡನೆ ಮ್ಯಾನೇಜರ್ ಹೇಳಿದ – “ಸಾರ್, ನಿಮ್ಮ ಅಕೌಂಟಿಗೆ ಇನ್ನೊಂದು ನೂರು ಕೋಟಿ ರೂಪಾಯಿ ಜಮೆ ಆಗಿದೆ. ನಿಮ್ಮಿಂದಾಗಿ ನಮ್ಮ ಬ್ಯಾಂಕ್ ಈಗ ಮೊದಲ ಸ್ಥಾನದಲ್ಲಿದೆ.”
“ಕಂಗ್ರಾಚ್ಯುಲೇಷನ್ಸ್!”
“ಥ್ಯಾಂಕ್ ಯೂ… ನೀವು ಊರಿನಲ್ಲಿಲ್ಲದಿದ್ದಾಗ ನಿಮ್ಮ ಫ್ರೆಂಡ್ ಶಿವಾಜಿಯವರು ಬಂದಿದ್ದರು. ನೀವು ಕಳಿಸಿದ್ದೆಂದು ಹೇಳಿ ಪತ್ರವೊಂದನ್ನು ಕೊಟ್ಟು ಹೋಗಿದ್ದಾರೆ. ನೀವು ಸೂಚಿಸಿರುವ ಹಾಗೆ ನಿಮ್ಮ ಹೆಸರಿನಲ್ಲಿ ಒಂದು ಲಾಕರ್ ಏರ್ಪಡಿಸಿದ್ದೇವೆ” – ಎನ್ನುತ್ತ ಲಾಕರಿನ ಬೀಗದಕೈಯನ್ನು ಮಯಾಂಕ್ನ ಕೈಯಲ್ಲಿರಿಸಿ ಹೇಳಿದ – “ಸಾಮಾನ್ಯವಾಗಿ ನೀವು ಖುದ್ದಾಗಿ ಹಾಜರಿದ್ದರೆ ಮಾತ್ರ ಲಾಕರನ್ನು ಏರ್ಪಡಿಸುವುದಾಗುತ್ತದೆ. ಆದರೂ ನಿಮ್ಮ ಅಕೌಂಟಿನ ಸ್ಟೇಟಸ್ ಕಾರಣದಿಂದಾಗಿ ನೀವು ಇಲ್ಲದಿದ್ದರೂ ಲಾಕರ್ ತೆರೆದಿದ್ದೇವೆ.” ಹೀಗೆಂದವನೇ ಅದಕ್ಕೆ ಸಂಬಂಧಿಸಿದ ಫಾರ್ಮುಗಳನ್ನು ಸಹಿಗಾಗಿ ಮುಂದಿರಿಸಿದ.
“ಶಿವಾಜಿಯವರು ನಿಮಗಿತ್ತ ಪತ್ರವನ್ನೊಮ್ಮೆ ನಾನು ನೋಡಬಹುದೆ?”
“ಅವಶ್ಯವಾಗಿ” ಎಂದು ಫೈಲಿನಿಂದ ಪತ್ರವನ್ನು ಹೊರಕ್ಕೆ ತೆಗೆದು ಮಯಾಂಕ್ನ ಕೈಗಿತ್ತ, ಮ್ಯಾನೇಜರ್.
ಪತ್ರವನ್ನು ಪರಿಶೀಲಿಸಿದ, ಮಯಾಂಕ್. ಅದು ಟೈಪ್ ಆಗಿರದೆ ತನ್ನದೇ ಕೈಬರಹದಲ್ಲಿತ್ತು. ಇಷ್ಟಾಗಿ ತಾನು ಲಾಕರ್ ಬೇಕೆಂದು ಕೋರಿದುದೇಕೆ – ಎಂಬುದು ಮಯಾಂಕ್ಗೆ ಸ್ಪಷ್ಟವಾಗಲಿಲ್ಲ.
“ಒಮ್ಮೆ ಲಾಕರನ್ನು ತೆಗೆದು ನೋಡುತ್ತೀರೇನು?” – ಕೇಳಿದ, ಮ್ಯಾನೇಜರ್.
“ಅದಕ್ಕೆ ಈಗೇನು ಅವಸರ! ಈಗಷ್ಟೇ ಲಾಕರನ್ನು ತೆರೆದಿದ್ದೀರಲ್ಲವೆ.”
“ಆದರೆ ನೀವು ಶಿವಾಜಿಯವರ ಮೂಲಕ ಕಳಿಸಿದ ಪೆಟ್ಟಿಗೆಯನ್ನು ಆಗಲೇ ಲಾಕರ್ನಲ್ಲಿ ಇರಿಸಿದ್ದಾಗಿದೆ.”
“ಸರಿಯೆ, ನೋಡಿಬಿಡೋಣ” ಎಂದು ಮಯಾಂಕ್ ಮ್ಯಾನೇಜರನ್ನು ಹಿಂಬಾಲಿಸಿದ.
ಮ್ಯಾನೇಜರ್ ಬಳಿ ಇದ್ದ ಬೀಗದಕೈ, ಮಯಾಂಕ್ನದ್ದು – ಎರಡನ್ನೂ ಬೀಗದೊಳಕ್ಕೆ ಹಾಕಿ ತಿರುಗಿಸಿದಾಗ ಲಾಕರ್ ತೆರೆಯಿತು.
“ನೀವಿಲ್ಲಿ ಎಷ್ಟು ಸಮಯ ಬೇಕಾದರೂ ಇರಬಹುದು. ಇಲ್ಲಿಂದ ಹೋಗುವಾಗ ನಿಮ್ಮ ಬೀಗದಕೈ ಬಳಸಿದರೆ ಎರಡೂ ಬೀಗಗಳು ಲಾಕ್ ಆಗುತ್ತವೆ” ಎಂದು ಹೇಳಿ ಮ್ಯಾನೇಜರ್ ನಿರ್ಗಮಿಸಿದ. ಅವನು ಹೋದದ್ದನ್ನು ಖಾತರಿಪಡಿಸಿಕೊಂಡು ಮಯಾಂಕ್ ಲಾಕರಿನೊಳಗೆ ಏನಿದೆಯೆಂದು ನೋಡತೊಡಗಿದ. ಮ್ಯಾನೇಜರ್ ಹೇಳಿದ್ದಂತೆ ಅಲ್ಲೊಂದು ಚಿಕ್ಕ ಪೆಟ್ಟಿಗೆ ಇತ್ತು. ಒಳ್ಳೆಯ ಮರದಿಂದ ಮಾಡಿದ್ದುದು. ಒಂದೂವರೆ ಅಡಿ ಉದ್ದ, ಒಂದಡಿ ಅಗಲ ಇದ್ದ ಆ ಪೆಟ್ಟಿಗೆಯ ಮೇಲೆ ‘ಹತ್ತು ದಿಕ್ಕುಗಳು’ ಎಂದು ಬರೆದಿತ್ತು. ಪೆಟ್ಟಿಗೆಯಲ್ಲಿ ಹತ್ತು ಅರಗಳು ಇದ್ದವು. ಮೊದಲ ಅರದಲ್ಲಿ ಹೈದರಾಬಾದಿಗೆ ಹೋಗುವ ಇಂಡಿಗೋ ವಿಮಾನದ ಫ್ಲೈಟ್ ಟಿಕೆಟ್ಗಳು ಇದ್ದವು – ‘ರವಿ’, ‘ಶಿಲ್ಪ’ ಎಂಬ ಹೆಸರುಗಳಲ್ಲಿ. ಎರಡನೇ ಅರದಲ್ಲಿ ಅವೇ ಹೆಸರುಗಳ ಆಧಾರ್ ಕಾರ್ಡುಗಳು ಇದ್ದವು. ಅವನ್ನು ನೋಡಿ ‘ರವಿ-ಶಿಲ್ಪ ಎಂದರೆ ಬೇರೆ ಯಾರೂ ಅಲ್ಲ, ನಾವೇ’ ಎಂದಳು ದೇವಯಾನಿ. ಆಧಾರ್ ಕಾರ್ಡುಗಳಲ್ಲಿ ಇದ್ದವು ತಮ್ಮವೇ ಫೋಟೋಗಳು.
“ಫ್ಲೈಟ್ ಎಷ್ಟು ಗಂಟೆಗಿದೆಯೊ ನೋಡು” ಎಂದಳು, ದೇವಯಾನಿ. ನೋಡಿ ಹೇಳಿದ ಮಯಾಂಕ್ – “ಮಧ್ಯಾಹ್ನ ಎರಡು ಗಂಟೆಗೆ.”
“ಅಂದರೆ ನಾವು ಕೂಡಲೇ ಹೊರಡಬೇಕು.”
“ಇಷ್ಟಾಗಿ ನಾವು ಹೈದರಾಬಾದಿಗೆ ಏಕಾದರೂ ಹೋಗಬೇಕೆಂಬುದು ಅರ್ಥವಾಗುತ್ತಿಲ್ಲ.”
“ಅದರ ಬಗ್ಗೆ ಈಗೇಕೆ ಯೋಚನೆ? ಇದನ್ನು ನಿರ್ಣಯಿಸಿರುವುದು ನೀನೇ. ಈಗ ಅದರಲ್ಲಿ ಹೇಳಿರುವ ಹಾಗೆ ಮಾಡಬೇಕಷ್ಟೆ.”
ಪೆಟ್ಟಿಗೆಯನ್ನು ತೆಗೆದುಕೊಂಡು ಲಾಕರಿಗೆ ಬೀಗ ಹಾಕಿ ಇಬ್ಬರೂ ಮ್ಯಾನೇಜರ್ನ ಬೀಳ್ಕೊಡುಗೆಯನ್ನೂ ಲೆಕ್ಕಿಸದೆ ಬ್ಯಾಂಕಿನಿಂದ ಅವಸರವಸರವಾಗಿ ಹೊರಬಿದ್ದರು.
“ಏರ್ಪೋರ್ಟಿಗೆ ಹೋಗಲು ನಮ್ಮ ಕಾರನ್ನು ಬಳಸುವುದು ಬೇಡ” ಎಂದಳು ದೇವಯಾನಿ ಮುಂಜಾಗ್ರತೆಯಿಂದ.
“ಆದರೆ ಕಾರನ್ನು ಇಲ್ಲಿಯೆ ಬಿಟ್ಟು ಹೋದರೆ ಅನುಮಾನಕ್ಕೆ ಕಾರಣವಾಗುತ್ತದೆ” ಎಂದ ಮಯಾಂಕ್ ಹತ್ತಿರದ್ದಲ್ಲಿದ್ದ ಪಾನ್ಬೀಡಾದವನ ಬಳಿ ಹೋಗಿ ಕೇಳಿದ – “ನಿನಗೆ ಕಾರ್ ಡ್ರೈವಿಂಗ್ ಬರುತ್ತದೆಯೆ?”
“ಇಲ್ಲ.”
“ಡ್ರೈವಿಂಗ್ ಬರುವ ಯಾರಾದರೂ ಇಲ್ಲಿ ಇರಬಹುದೆ?”
“ನಮ್ಮವನೇ ಒಬ್ಬ ಇದ್ದಾನೆ.”
“ಹಾಗಾದರೆ ಈ ಹಣ ತೆಗೆದುಕೋ. ಕಾರನ್ನು ನಾನು ಹೇಳುವ ವಿಳಾಸಕ್ಕೆ ತಲಪಿಸುವುದು ನಿನ್ನ ಜವಾಬ್ದಾರಿ” ಎಂದು ಕಾರಿನ ಬೀಗದಕೈಯನ್ನೂ ಹತ್ತು ಸಾವಿರ ಹಣವನ್ನೂ ಅವನ ಕೈಯಲ್ಲಿರಿಸಿದ.
ಒಂದೆರಡು ನಿಮಿಷಗಳಲ್ಲಿ ಅಲ್ಲಿಗೆ ಬಂದ ಒಂದು ಕ್ಯಾಬ್ನಲ್ಲಿ ಕುಳಿತು ಇಬ್ಬರೂ ಏರ್ಪೋರ್ಟಿಗೆ ತೆರಳಿದರು. ಕ್ಯಾಬ್ ಹೊರಟೊಡನೆ “ಇನ್ನು ಇವು ನಮ್ಮ ಕೈಯಲ್ಲಿ ಇರಬಾರದು” ಎಂದು ಮಯಾಂಕ್ ಇಬ್ಬರ ಮೊಬೈಲ್ಗಳನ್ನು ಪಕ್ಕದ ಮೋರಿಗೆ ಎಸೆದ.
“ಆದರೆ ನಾವು ಹೊರಟಿರುವುದನ್ನು ಮನೆಗೆ ತಿಳಿಸಬೇಡವೆ?”
“ಇಷ್ಟೆಲ್ಲ ಪೂರ್ವತಯಾರಿ ಆಗಿರುವುದೆಂದರೆ ಅದಕ್ಕೂ ಏನೊ ವ್ಯವಸ್ಥೆ ಆಗಿಯೇ ಇರುತ್ತದೆ” ಎಂದು ಮಯಾಂಕ್ ಹೇಳುತ್ತಿದ್ದ ಸಮಯಕ್ಕೇ ದೇವಯಾನಿಯ ಮನೆಗೆ “ಅನಿರೀಕ್ಷಿತವಾಗಿ ನಾವು ಪ್ರಾಜೆಕ್ಟ್ ಕೆಲಸಕ್ಕಾಗಿ ತುರ್ತಾಗಿ ಹೊರಡಬೇಕಾಗಿದೆ. ಫೋನ್ ಮಾಡಲು ಅವಕಾಶವಿಲ್ಲ”ಎಂದು ಕೋರಿಯರ್ ಸಂದೇಶ ತಲಪಿತ್ತು.
ಇನ್ನೇನು ಬೋರ್ಡಿಂಗಿಗೆ ಫೈನಲ್ ಕಾಲ್ ಪ್ರಸಾರವಾಗಬೇಕೆನ್ನುವ ಹೊತ್ತಿಗೆ ಮಯಾಂಕ್ ಮತ್ತು ದೇವಯಾನಿ ಲೌಂಜಿಗೆ ತಲಪಿದರು. ಸೆಕ್ಯುರಿಟಿ ಚೆಕ್ ಮುಗಿಸಿ ವಿಮಾನ ಹತ್ತಿ ಕುಳಿತರು.
“ಮುಂದೆ ಏನು?” ಎಂದು ದೇವಯಾನಿ ಕೇಳಿದುದಕ್ಕೆ ಮಯಾಂಕ್ “ಮರದ ಪೆಟ್ಟಿಗೆಯನ್ನೇ ಕೇಳಬೇಕಾಗುತ್ತದೆ” ಎಂದ.
* * *
ಮಯಾಂಕ್ ಮತ್ತು ದೇವಯಾನಿ ಕುಳಿತ ವಿಮಾನ ಟೇಕ್ ಆಫ್ ಆಗುತ್ತಿದ್ದ ಸಮಯಕ್ಕೆ ಮಹೇಶ್ ಮಿಸ್ತ್ರಿಯ ಸಿಬ್ಬಂದಿ ವೇಗವಾಗಿ ದೇವಯಾನಿಯ ಮನೆಯತ್ತ ಧಾವಿಸುತ್ತಿದ್ದರು. ಅದಕ್ಕೆ ಕಾರಣ ಸಯನ್ಸ್ ಸಿಟಿಯಲ್ಲಿ ಹಿಂದಿನ ಇಪ್ಪತ್ತನಾಲ್ಕು ಗಂಟೆಗಳಲ್ಲಿ ನಡೆದಿದ್ದ ಘಟನೆಗಳು.
ಮಯಾಂಕ್ ಮತ್ತು ದೇವಯಾನಿ ಕ್ಯಾಂಪಸಿನಿಂದ ಹೊರಬಿದ್ದ ಮೇಲೆ ಸಂಜೆ ಮಹೇಶ್ ಮಿಸ್ತ್ರಿ ಆತುರಾತುರವಾಗಿ ಭವಿಷ್ಯಯಂತ್ರವಿದ್ದಲ್ಲಿಗೆ ಹೋದ. ಅವನ ಆಲೋಚನೆ ಸಿಸೋದಿಯಾಗೂ ತಿಳಿದಿರಲಿಲ್ಲ. ಮಿಸ್ತ್ರಿ ಬರುತ್ತಿರುವುದನ್ನು ಗಮನಿಸಿದ ಸಿಸೋದಿಯಾ ಕೂಡಲೆ ಹೋಗಿ ಲ್ಯಾಬ್ ಬೀಗ ತೆಗೆದ. ಈ ವೇಳೆಗೆ ರವಿ ಮತ್ತು ದತ್ತಾತ್ರೇಯ ಕೂಡಾ ಬಂದ ಸೇರಿಕೊಂಡರು.
ಮಾರನೆಯ ದಿನ ಮಹೇಶ್ ಮಿಸ್ತ್ರಿ ಕೇಂದ್ರಸರ್ಕಾರ ಓಪನ್ ಮಾಡಲಿದ್ದ ೫-ಜಿ ಸ್ಪೆಕ್ಟ್ರಂ ಟೆಂಡರಿನಲ್ಲಿ ಪಾಲ್ಗೊಳ್ಳುವವನಿದ್ದ. ಅದು ಲಕ್ಷಾಂತರ ಕೋಟಿ ವ್ಯವಹಾರ. ದೇಶದಲ್ಲಿನ ದೂರಸಂಪರ್ಕ (ಟೆಲಿ-ಕಮ್ಯೂನಿಕೇಷನ್) ರಂಗದ ಸ್ವರೂಪವನ್ನೇ ಅದು ಇಡಿಯಾಗಿ ಮಾರ್ಪಡಿಸುವ ಸಂಭವವಿತ್ತು. ಮಿಸ್ತ್ರಿಯ ಸ್ಪರ್ಧಿಗಳೆಲ್ಲ ಘಟಾನುಘಟಿಗಳೇ ಇದ್ದರು -ಎಷ್ಟು ಹಣ ಬೇಕಾದರೂ ಸುರಿಯಲು ಸಿದ್ಧರಾಗಿದ್ದರು; ಸಾವಿರಾರು ಕೋಟಿಗಳಾದರೂ ಲೆಕ್ಕಿಸುತ್ತಿರಲಿಲ್ಲ.
ಮಹೇಶ್ ಮಿಸ್ತ್ರಿಯ ಮನಸ್ಸಿಗೆ ಹೊಳೆದ ಯೋಚನೆ -ಯಾರಾರು ಎಷ್ಟು ಕೋಟ್ ಮಾಡಲಿದ್ದಾರೆಂಬುದನ್ನು ತನ್ನ ಭವಿಷ್ಯಯಂತ್ರದ ಮೂಲಕ ತಿಳಿದುಕೊಂಡರೆ ತಾನು ಅದಕ್ಕಿಂತ ಕಡಮೆ ಕೋಟ್ ಮಾಡಿ ಟೆಂಡರನ್ನು ತಾನು ಪಡೆದುಕೊಳ್ಳಬಹುದು – ಎಂದು. ಇದಕ್ಕಾಗಿಯೆ ಅವನು ಮೀಟಿಂಗುಗಳಿಂದ ಬಿಡುವು ಪಡೆದು ಇದ್ದಕ್ಕಿದ್ದ ಹಾಗೆ ಸಯನ್ಸ್ ಸಿಟಿ ಕ್ಯಾಂಪಸಿಗೆ ಬಂದಿದ್ದುದು.
ಯಾರೊಡನೆಯೂ ಮಾತನಾಡದೆ ನೇರವಾಗಿ ಭವಿಷ್ಯಯಂತ್ರವಿದ್ದ ಲ್ಯಾಬಿನ ಒಳಹೊಕ್ಕ. ಅವನು ಬರುವಷ್ಟರಲ್ಲಿ ರವಿ ಮತ್ತು ದತ್ತಾತ್ರೇಯ ಯಂತ್ರವನ್ನು ಆನ್ ಮಾಡಿಟ್ಟಿದ್ದರು. ಯಂತ್ರದ ಮುಂದೆ ನಿಂತ, ಮಿಸ್ತ್ರಿ. ಯಂತ್ರವು ಚಾಲೂ ಆಗಿರುವುದನ್ನು ಸೂಚಿಸುವಂತೆ ಅದರಿಂದ ಮೃದುವಾದ ಶಬ್ದಗಳೂ ಬೆಳಕಿನ ಕಿರಣಗಳೂ ಪ್ರಸಾರವಾಗತೊಡಗಿದವು. ಅವನು ಎರಡೂ ಅಂಗೈಗಳನ್ನು ಯಂತ್ರದ ಮೇಲಿರಿಸಿದ. ಯಂತ್ರದ ಸ್ಕ್ರೀನ್ ಆಕ್ತಿವೇಟ್ ಆಯಿತು. ತಾನು ಕೇಳಿದ ಪ್ರಶ್ನೆಗಳಿಗೆ ಯಂತ್ರ ಉತ್ತರಗಳನ್ನು ಪ್ರದರ್ಶಿಸಬೇಕಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ತೆರೆಯಲ್ಲಿ ನೀಲಿ ಬಣ್ಣ ತುಂಬಿಕೊಂಡಿತು. ತೆರೆಯ ನಡುವೆ ಎರರ್ ನಂಬರ್ ೩೬೯ ಎಂಬ ಸಂದೇಶ ಮೂಡಿತು.
“ಇದೇನು, ಏನಾಗುತ್ತಿದೆ?” ಎಂಬ ಮಿಸ್ತ್ರಿಯ ಉದ್ಗಾರವನ್ನು ಕೇಳಿಸಿಕೊಂಡ ಹೊರಗಿದ್ದ ಸಿಸೋದಿಯಾ ಏನೋ ಎಡವಟ್ಟು ಆಗಿರಬೇಕೆಂದು ಊಹಿಸಿ ರವಿ-ದತ್ತಾತ್ರೇಯರ ಕಡೆಗೆ ಆತಂಕದಿಂದ ನೋಡಿದ.
ಲ್ಯಾಬಿನ ಬಾಗಿಲನ್ನು ತೆರೆದು ಮಿಸ್ತ್ರಿ ಹೊರಕ್ಕೆ ಬಂದ.
“ನೀವು ಸ್ವಲ್ಪ ರೆಸ್ಟ್ ತೆಗೆದುಕೊಳ್ಳಿ ಸಾರ್. ಇಲ್ಲಿ ಸಮಸ್ಯೆ ಏನೆಂದು ನಾವು ನೋಡುತ್ತೇವೆ”ಎಂದರು ಸಹಾಯಕರು.
ಮಿಸ್ತ್ರಿಯಾದರೋ ಕಾದ ಹೆಂಚಿನ ಮೇಲಿನ ಬೆಕ್ಕಿನಂತೆ ಚಡಪಡಿಸುತ್ತಿದ್ದ.
ಅರ್ಧ ಗಂಟೆ ಕಳೆದ ಮೇಲೆ ತನ್ನ ಬಳಿಗೆ ಬಂದ ರವಿ-ದತ್ತಾತ್ರೇಯರನ್ನು ಮಿಸ್ತ್ರಿ ಆತುರದಿಂದ ಕೇಳಿದ –
“ಯಂತ್ರ ಸರಿಹೋಯಿತೆ?”
“ಇಲ್ಲ ಸಾರ್….” ಎಂದು ಏನೋ ಹೇಳಹೊರಟ ಅವರನ್ನು ಸಿಸೋದಿಯಾ ಗಡಸುಧ್ವನಿಯಲ್ಲಿ ಕೇಳಿದ – ಈ ಕೆಲಸ ನಿಮ್ಮಿಂದ ಆಗುತ್ತದೋ ಇಲ್ಲವೋ ಹೇಳಿರಿ.
ಇಬ್ಬರೂ ಮೌನವಾಗಿ ತಲೆ ತಗ್ಗಿಸಿದರು.
“ಆ ಮಯಾಂಕ್ ಇಲ್ಲಿಂದ ಹೋಗಿಯಾಯಿತಲ್ಲ! ಅವನಿಗೆ ಫೋನ್ ಮಾಡಿಯಾದರೂ ಕೇಳಿರಿ – ಈಗ ಏನು ಮಾಡಬೇಕೆಂದು.”
ಯಾರೂ ಮಾತನಾಡದೆ ಶಿಲಾಪ್ರತಿಮೆಗಳಂತೆ ನಿಂತಿದ್ದರು.
ಸಿಸೋದಿಯಾ ಧೈರ್ಯವಹಿಸಿ ಹೇಳಿದ:
“ಮಯಾಂಕ್, ಅವನ ಹೆಂಡತಿ – ಇಬ್ಬರ ಮೆಮೊರಿಯನ್ನು ನಾವು ಅಳಿಸಿಹಾಕಿದ್ದಾಗಿದೆ. ಆದ್ದರಿಂದ ಮಯಾಂಕ್ಗೆ ಈಗ ಈ ಯಂತ್ರದ ಬಗ್ಗೆ ಏನೂ ನೆನಪಿರುವ ಸಂಭವ ಇಲ್ಲ.”
“ಅಂದರೆ ನಾವು ಇನ್ನೂರು ಕೋಟಿ ಚೆಲ್ಲಿದ್ದು ವ್ಯರ್ಥವಾದ ಹಾಗೇನು? ಅವನು ಕೆಲವು ನಿಮಿಷ ಯಂತ್ರದ ತೆರೆಯಲ್ಲಿ ಗ್ರಾಫಿಕ್ಸ್ ತೋರಿಸಿದ್ದಷ್ಟೆ ಲಾಭವೆ? ಅದಿರಲಿ, ಎರಡನೇ ಕಂತು ನೂರು ಕೋಟಿಯನ್ನೂ ಅವನಿಗೆ ಕೊಟ್ಟದ್ದಾಯಿತೆ?”
ಕೊಟ್ಟಿದ್ದೇವೆ – ಎಂಬಂತೆ ತಲೆಯಾಡಿಸಿದ, ಸಿಸೋದಿಯಾ.
“ಹೋಗಲಿ, ಅವನನ್ನು ಮತ್ತೆ ಇಲ್ಲಿಗೆ ಕರೆತಂದು ಅವನ ಮೆಮೊರಿಯನ್ನು ಮೊದಲಿದ್ದ ಸ್ಥಿತಿಗೆ ಮರಳಿಸುವುದು ಸಾಧ್ಯವೆ?”
“ಅಂತಹ ತಂತ್ರಜ್ಞಾನ ಈಗಂತೂ ನಮ್ಮಲ್ಲಿಲ್ಲ. ಅದು ಸಾಧ್ಯವೋ ಅಲ್ಲವೋ ಎಂದೂ ನಾವು ಹೇಳಲಾರೆವು.”
“ಅವನನ್ನು ಕಳಿಸುವ ಮೊದಲು ಯಂತ್ರಕ್ಕೆ ಸಂಬಂಧಿಸಿದ ಬ್ಲೂಪ್ರಿಂಟ್ಗಳನ್ನು ತೆಗೆದಿಟ್ಟುಕೊಳ್ಳಲಿಲ್ಲವೆ?”
“ಅವನ್ನು ನಾವೇನೊ ತೆಗೆದಿಟ್ಟುಕೊಂಡೆವು. ಆದರೆ ಅವು ಈಗ ಉಪಯೋಗಕ್ಕೆ ಬರುತ್ತವೆಂದು ನಮಗನಿಸಿಲ್ಲ” – ಎಂದ, ರವಿ.
ಯಂತ್ರದಿಂದ ಇನ್ನು ತಾನು ಪ್ರಯೋಜನ ಪಡೆಯಲಾಗುವ ಸಾಧ್ಯತೆ ಇಲ್ಲವೆಂದು ಕ್ರಮೇಣ ಮಿಸ್ತ್ರಿಗೆ ಅರ್ಥವಾಗತೊಡಗಿತು. ಕೋಪದಿಂದ ಏನೋ ಹೇಳಹೊರಡುತ್ತಿದ್ದಂತೆ ಸಿಸೋದಿಯಾಗೆ ಫೋನ್ ಬಂದಿತು. ಕರೆ ಮಾಡಿದ್ದಾತ ವಿದ್ಯುತ್ ಇಲಾಖೆಯ ಚೀಫ್ ಇಂಜಿನಿಯರ್.
“ಸಿಸೋದಿಯಾರವರೇ, ನಿಮ್ಮ ಕಾರಣದಿಂದ ಇಡೀ ನಗರದ ವಿದ್ಯುದ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಅಷ್ಟೆ ಅಲ್ಲ, ವಿದ್ಯುತ್ತಿನ ಗ್ರಿಡ್ ಜಾಲವೇ ಕುಸಿಯುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ನಿಮ್ಮ ಕ್ಯಾಂಪಸಿಗೆ ವಿದ್ಯುತ್ತಿನ ಸರಬರಾಜನ್ನೇ ನಿಲ್ಲಿಸಬೇಕಾಗುತ್ತದೆ.”
“ಈಗಷ್ಟೆ ಅಲ್ಲವೆ ಸಾರ್ ಸಮಸ್ಯೆಯುಂಟಾಗಿರುವುದು? ಇಲ್ಲಿಯ ಲೋಡ್ಗೆ ತಕ್ಕಷ್ಟು ಟ್ರಾನ್ಸ್ಫಾರ್ಮರುಗಳನ್ನು ಆದಷ್ಟು ತ್ವರೆಯಾಗಿ ನೆಲೆಗೊಳಿಸುತ್ತೇವೆ” – ಹೀಗೆ ಅಧಿಕಾರಿಯನ್ನು ಸಮಾಧಾನಪಡಿಸಲು ಯತ್ನಿಸತೊಡಗಿದಾಗ ಅವನ ಮಾತಿಗೆ ತಡೆ ಹಾಕಿ ಅಧಿಕಾರಿ ಹೇಳಿದ:
“ಏನು ನೀವು ಹೇಳುತ್ತಿರುವುದು? ಈಗ್ಗೆ ಐದು ದಿವಸಗಳ ಹಿಂದೆಯೇ ಹೀಗಾಗಿತ್ತಲ್ಲವೆ? ಆಗ ಗ್ರಿಡ್ ಸ್ಥಗಿತಗೊಂಡಿತ್ತು. ಈಗ ಪೂರ್ತಿ ಫೈಲ್ ಆಗಿದೆ.”
ಹೆಚ್ಚು ಮಾತಿಗೆ ಆಸ್ಪದವಾಗಲಿಲ್ಲ.
ಸಿಸೋದಿಯಾ ಚಿಂತಿತನಾಗಿ ಹೇಳತೊಡಗಿದ –“ಇದೇನು ಅವರು ಹೀಗೆನ್ನುತ್ತಿದ್ದಾರೆ? ಐದು ದಿವಸ ಹಿಂದೆಯೂ ಒಮ್ಮೆ ವಿದ್ಯುತ್ತಿನ ವ್ಯವಸ್ಥೆ ಟ್ರಿಪ್ ಆಗಿತ್ತು ಎನ್ನುತ್ತಿದ್ದಾರಲ್ಲ? ಅಂದರೆ ನಮ್ಮ ಗಮನಕ್ಕೆ ಬರದಂತೆಯೆ ಮಯಾಂಕ್ ಯಂತ್ರವನ್ನು ಆನ್ ಮಾಡಿ ಬಳಸಿರಬಹುದೆ?”
ಸಂದರ್ಭವೇನೆಂದು ಈಗ ಮಹೇಶ್ ಮಿಸ್ತ್ರಿಗೆ ಸ್ಪಷ್ಟವಾಯಿತು.
“ನೀವೆಲ್ಲ ಮೋಸಹೋದಿರಿ. ನನಗಿಂತ ಮೊದಲೇ ಮಯಾಂಕ್ ಯಂತ್ರವನ್ನು ‘ಆನ್’ ಮಾಡಿ ಮುಂದೆ ನಡೆಯಲಿರುವುದನ್ನು ನೋಡಿದ್ದಾನೆ. ನಮ್ಮನ್ನು ನಂಬಿಸುವುದಕ್ಕಾಗಿ ಅನಂತರ ಯಂತ್ರ ಒಂದು ಸಲ ಮಾತ್ರ ಕೆಲಸ ಮಾಡುವ ಹಾಗೆ ಸಂಯೋಜನೆ ಮಾಡಿಟ್ಟು ಇಲ್ಲಿಂದ ಹೊರಟುಹೋಗಿದ್ದಾನೆ. ಇನ್ನು ಮುಂದೆ ಈ ಯಂತ್ರ ಕೆಲಸ ಮಾಡುವುದಿಲ್ಲ. ಇದನ್ನು ಮತ್ತೆ ಚಾಲನೆ ಮಾಡಬಲ್ಲವನು ಅವನು ಮಾತ್ರ. ಹೇಗಾದರೂ ಮಾಡಿ ಇನ್ನು ಇಪ್ಪತ್ತನಾಲ್ಕು ಗಂಟೆಗಳೊಳಗೆ ಅವನನ್ನು ಪತ್ತೆ ಮಾಡಿ ಕರೆದುಕೊಂಡು ಬಂದು ನನ್ನೆದುರಿಗೆ ನಿಲ್ಲಿಸಿರಿ” -ಎಂದು ಉದ್ವೇಗದ ಧ್ವನಿಯಲ್ಲಿ ಆದೇಶವಿತ್ತು ಸರಸರನೆ ಹೊರಟುಹೋದ, ಮಿಸ್ತ್ರಿ.
ಸಿಸೋದಿಯಾ ಕೂಡಲೇ ಸೆಕ್ಯುರಿಟಿ ಚೀಫ್ ವಿಜಯ್ಸಿಂಗ್ನನ್ನು ಕರೆಸಿದ. ಸೈನ್ಯದ ಕಮಾಂಡೋ ಯೂನಿಟ್ನಲ್ಲಿ ಕೆಲಸ ಮಾಡಿ ನಿವೃತ್ತನಾಗಿದ್ದ ಅನುಭವಿ, ಅವನು. ಅವನ ಸಹಾಯಕ ಸಿಬ್ಬಂದಿಯವರೂ ಎಲ್ಲರೂ ನುರಿತವರು – ಸೇನೆಯಲ್ಲಿಯೂ ಪೊಲೀಸ್ ಇಲಾಖೆಯಲ್ಲಿಯೂ ಕೆಲಸ ಮಾಡಿದ್ದವರು.
ವಿಜಯ್ಸಿಂಗ್ನನ್ನು ಕುರಿತು ಹೇಳಿದ, ಸಿಸೋದಿಯಾ – “ತುರ್ತಾಗಿ ಮಯಾಂಕ್ನನ್ನು ಪತ್ತೆ ಮಾಡಿ ಇಲ್ಲಿಗೆ ಕರೆತಂದು ಮಿಸ್ತ್ರಿ ಸಾಹೇಬರೆದುರು ಹಾಜರ್ಪಡಿಸಬೇಕಾಗಿದೆ.”
“ಮಯಾಂಕ್ ಅಂದರೆ ಎರಡು ದಿವಸ ಹಿಂದೆ ಗಂಡ-ಹೆಂಡತಿ ಕ್ಯಾಂಪಸನ್ನು ಬಿಟ್ಟು ಹೋದರಲ್ಲ – ಅವರ ಬಗ್ಗೆ ಹೇಳುತ್ತಿದ್ದೀರಾ?”
“ಹೌದು.”
“ಅದೇನು ಕಷ್ಟದ ಕೆಲಸ ಬಿಡಿ – ನಾಳೆಯೊಳಗೆ ಅವರನ್ನು ಪತ್ತೆಹಚ್ಚುತ್ತೇವೆ” -ಎಂದವನೇ ಹೊರಟು ನಿಂತವನು ಸಂದೇಹ ಬಂದು ಹಿಂದಕ್ಕೆ ತಿರುಗಿ ಕೇಳಿದ –“ಅವರ ಪತ್ನಿಯದೂ ಆವಶ್ಯಕತೆ ಇದೆಯೆ?”
“ಯಾರಾರು ಏನೇನು ರಹಸ್ಯಗಳನ್ನು ತಮ್ಮಲ್ಲಿ ಇರಿಸಿಕೊಂಡಿದ್ದಾರೋ ಯಾರಿಗೆ ಗೊತ್ತು – ಇಬ್ಬರನ್ನೂ ಹಿಡಿದುಕೊಂಡು ಬನ್ನಿ.”
ಇದಾದ ಒಂದು ಗಂಟೆಯೊಳಗಾಗಿ ವಿಜಯ್ಸಿಂಗ್ ತನ್ನ ಸಹಾಯಕರೊಡನೆ ದೆಹಲಿಗೆ ಹೋಗುವ ವಿಮಾನವನ್ನೇರಿದ.
ಒಂದು ಗಂಟೆಯ ಪ್ರಯಾಣ.
ದೆಹಲಿಯಲ್ಲಿ ಇಳಿದೊಡನೆ ಎಲ್ಲರೂ ಕೂಡಲೆ ಕ್ಯಾಬ್ಗಳಲ್ಲಿ ದೇವಯಾನಿಯ ಮನೆಗೆ ಧಾವಿಸಿದರು. ಮಯಾಂಕ್ ಮತ್ತು ದೇವಯಾನಿ ಸಯನ್ಸ್ ಸಿಟಿಯನ್ನು ಪ್ರವೇಶಿಸಿದಾಗಲೇ ಅವರ ವಿಳಾಸ ಮೊದಲಾದ ವಿವರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದುದು ಒಳ್ಳೆಯದಾಯಿತೆಂದುಕೊಂಡ, ವಿಜಯ್ಸಿಂಗ್.
ಸಿಬ್ಬಂದಿಯನ್ನು ದೂರದಲ್ಲಿಯೆ ಇರುವಂತೆ ಹೇಳಿ ವಿಜಯ್ಸಿಂಗ್ ಒಬ್ಬ ಸಹಾಯಕನನ್ನು ಮಾತ್ರ ಜೊತೆಗಿರಿಸಿಕೊಂಡು ದೇವಯಾನಿಯ ಮನೆಯ ಕದ ತಟ್ಟಿದ.
“ಯಾರು ನೀವು?” – ಕೇಳಿದರು ದೇವಯಾನಿಯ ತಾಯಿ.
“ನನ್ನ ಹೆಸರು ವಿಜಯ್ಸಿಂಗ್. ನಾನು ಸಯನ್ಸ್ ಸಿಟಿಯ ಸೆಕ್ಯುರಿಟಿ-ಇನ್-ಚಾರ್ಜ್. ಒಂದು ತುರ್ತು ಕೆಲಸಕ್ಕಾಗಿ ಮಯಾಂಕ್ರನ್ನು ಭೇಟಿಯಾಗಲು ಬಂದಿದ್ದೇನೆ.”
ಅವನಿಗೆ ಸುಳ್ಳು ಹೇಳಬೇಕಾದ ಆವಶ್ಯಕತೆಯೇನೂ ಕಾಣಲಿಲ್ಲ.
ತಾಯಿ ಹೇಳಿದರು – “ಅಯ್ಯೊ ದೇವರೆ! ನೀವು ಬೆಳಗ್ಗೆಯಾದರೂ ಬಂದಿದ್ದಿದ್ದರೆ ಅವರನ್ನು ಭೇಟಿ ಮಾಡಬಹುದಿತ್ತೇನೊ.”
ಅವರು ನಿಜವನ್ನು ಹೇಳುತ್ತಿಲ್ಲವೆಂದು ವಿಜಯ್ಸಿಂಗ್ ಶಂಕಿಸಿ ಮಾತನ್ನು ಮುಂದುವರಿಸಬಯಸಿ “ಒಂದು ಲೋಟಾ ನೀರು ಕೊಡುತ್ತೀರಾ?” -ಎಂದು ಕೇಳಿದ. ಅವರು ಒಳಹೋದೆಡೆ ತಾನೂ ಒಳಕ್ಕೆ ಹೋದ. ಅವರು ಬರುವಷ್ಟರೊಳಗೆ ಪಕ್ಕದ ಎರಡು ಬೆಡ್ರೂಮ್ಗಳಲ್ಲಿ ಇಣುಕಿ ನೋಡಿದ. ಅಲ್ಲಿ ಯಾರೂ ಇರಲಿಲ್ಲ.
ಇಷ್ಟರಲ್ಲಿ ದೇವಯಾನಿಯ ತಾಯಿ ನೀರನ್ನು ತಂದು ಇಬ್ಬರಿಗೂ ನೀಡಿದರು. ನೀರನ್ನು ಕುಡಿದ ಮೇಲೆ ವಿಜಯ್ಸಿಂಗ್ ಕೇಳಿದ:
“ಹೋಗಲಿ, ಅವರೀಗ ಎಲ್ಲಿ ಇದ್ದಾರೆಂಬುದಾದರೂ ನಿಮಗೆ ಗೊತ್ತೆ?”
“ಬೆಳಗ್ಗೆ ಬ್ಯಾಂಕಿಗೆ ಹೋಗಿ ಬರುವುದಾಗಿ ಹೇಳಿ ಹೊರಟರು. ಆಮೇಲೆ ಬರಲೇ ಇಲ್ಲ. ಮಧ್ಯಾಹ್ನ ಕೋರಿಯರ್ ಮೂಲಕ ಚುಟುಕಾದ ಸಂದೇಶ ಬಂದಿತು.”
“ಅದರಲ್ಲಿ ಏನೆಂದು ಹೇಳಿದ್ದಾರೆ?”
ಮಾತನಾಡದೆ ಆಕೆ ಒಳಗೆ ಹೋಗಿ ಕೋರಿಯರ್ ಸಂದೇಶವನ್ನು ತಂದು ಅವನ ಕೈಗಿತ್ತರು.
ಸಂದೇಶ ನೋಡಿ ವಿಜಯ್ಸಿಂಗ್ ಹುಬ್ಬು ಮೇಲೇರಿತು. ತಾವು ಇಲ್ಲಿಗೆ ಬಂದೇ ಬರುತ್ತೇವೆಂದು ಊಹಿಸಿ ಮಯಾಂಕ್ ಅದೃಶ್ಯನಾಗಿದ್ದಾನೆಂದು ಅರಿವಾಯಿತು. ಮನೆಯವರು ಗಾಬರಿಗೊಳ್ಳದಿರಲೆಂದು ಸಂದೇಶ ಕಳಿಸಿರುವನೆಂಬುದೂ ಸ್ಪಷ್ಟವಾಯಿತು.
“ನಾವು ಹೋಗಿಬರುತ್ತೇವಮ್ಮ. ಅವರು ಬಂದರೆ ದಯವಿಟ್ಟು ನನಗೆ ಕೂಡಲೆ ತಿಳಿಸಿರಿ” – ಎಂದು ಹೊರಬಿದ್ದ, ವಿಜಯ್ಸಿಂಗ್.
ಕಾರಿನಲ್ಲಿ ಕುಳಿತವನೇ ವಿಜಯ್ಸಿಂಗ್ ಬ್ಯಾಂಕಿಗೆ ಹೋಗುವಂತೆ ಡ್ರೈವರನಿಗೆ ಹೇಳಿದ. ತನ್ನಲ್ಲಿದ್ದ ಮಯಾಂಕ್ ಮತ್ತು ದೇವಯಾನಿಯ ಮೊಬೈಲ್ ನಂಬರುಗಳಿಗೆ ಕರೆ ಮಾಡಿದ. ‘ಸ್ವಿಚ್ಡ್ ಆಫ್’ ಎಂಬ ಉತ್ತರ ಬಂದಿತು.
“ನಾವು ಅಂದುಕೊಂಡಿದ್ದುದಕ್ಕಿಂತ ಅವರು ಹೆಚ್ಚು ಚಾಣಾಕ್ಷರೆನಿಸುತ್ತಿದೆ. ಮೊಬೈಲ್ ಫೋನ್ ನಂಬರುಗಳನ್ನು ಟ್ರ್ಯಾಕ್ ಮಾಡಲಾಗುತ್ತದೆಂದು ತಿಳಿದು ಅವರು ಹಳೆಯ ಮೊಬೈಲ್ಗಳನ್ನು ಬಿಸಾಡಿರಬಹುದು” – ಎಂದು ಹೇಳಿದ ವಿಜಯ್ಸಿಂಗ್ ಸಂಗಡಿಗರಿಗೆ.
ಸಹಾಯಕ ಹೇಳಿದ – “ಆದರೆ ಅವರಿಗೆ ಮೊಬೈಲ್ ಬೇಕೇಬೇಕಾಗುತ್ತದೆ. ಆದ್ದರಿಂದ ಬೇರೆ ಫೋನ್ಗಳನ್ನು ಕೊಂಡಿರುತ್ತಾರೆ.”
“ಆದರೆ ತಮ್ಮ ಹೆಸರಿನಲ್ಲಿಯೆ ಕೊಂಡುಕೊಳ್ಳುವಷ್ಟು ಅವರು ದಡ್ಡರಲ್ಲ” – ಎಂದ, ವಿಜಯ್ಸಿಂಗ್.
(ಸಶೇಷ)