ತೆಲುಗಿನಲ್ಲಿ: ಪುಟ್ಟಗಂಟಿ ಗೋಪೀಕೃಷ್ಣ
ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ
ಸಿಸೋದಿಯಾನೊಡನೆ ಹೆಜ್ಜೆ ಹಾಕುತ್ತ ಮಯಾಂಕ್ ಆ ಅತ್ಯಾಧುನಿಕ ಲ್ಯಾಬಿನ ವ್ಯವಸ್ಥೆಗಳನ್ನು ನೋಡಿ ವಿಸ್ಮಯಗೊಂಡ. ಅದು ಎಷ್ಟು ಪ್ರೌಢ ಮಟ್ಟದ್ದೆಂಬುದು ಹೊರನೋಟಕ್ಕೇ ತಿಳಿಯುತ್ತಿತ್ತು. ಅಲ್ಲಿಯ ಭದ್ರತಾ ವ್ಯವಸ್ಥೆಗಳನ್ನು ಸಿಸೋದಿಯಾ ಮಯಾಂಕನಿಗೆ ವಿವರಿಸಿದ. ಅನಂತರ ಅವನ ಸಹಾಯಕ್ಕಾಗಿ ನಿಯುಕ್ತರಾಗಿದ್ದ ಸಿಬ್ಬಂದಿಯವರನ್ನು ಪರಿಚಯ ಮಾಡಿದ.
ನಮಸ್ತೇ ಸಾರ್ ಎಂದ, ಸುಮಾರು ಇಪ್ಪತ್ತೈದು ವರ್ಷ ವಯಸ್ಸಿನ ರಾಮ್ ಎಂಬ ಹುಡುಗ. ತುಂಬಾ ಚೂಟಿಯಾಗಿ ಕಂಡ. ಅನಂತರ ಹಿರಿಯನಾದ ಸುಮಾರು ಐವತ್ತು ವರ್ಷದ ದತ್ತಾತ್ರೇಯ ಎಂಬಾತನ ಪರಿಚಯವಾಯಿತು.
ನಿಮಗೆ ಏನೇ ಆವಶ್ಯಕತೆ ಇದ್ದರೂ ಇವರಿಬ್ಬರಿಗೆ ಹೇಳಬಹುದು. ಅವರು ನಮ್ಮ ಗಮನಕ್ಕೆ ತಂದು ಆಗಬೇಕಾದ ವ್ಯವಸ್ಥೆಗಳನ್ನು ಮಾಡುತ್ತಾರೆ ಎಂದ, ಸಿಸೋದಿಯಾ.
ಅದಾದ ಮೇಲೆ ಕೆಫೆಟೀರಿಯಾ ತೋರಿಸಿ ಸಿಸೋದಿಯಾ ಹೇಳಿದ – ನೀವು ಮಾತ್ರವಲ್ಲ, ದೇವಯಾನಿಯವರೂ ಕೂಡಾ ಊಟಕ್ಕೆ ಇಲ್ಲಿಗೇ ಬರಬಹುದು. ನೀವು ಅಪೇಕ್ಷೆಪಟ್ಟಲ್ಲಿ ನಿಮ್ಮ ವಸತಿಗೇ ಊಟವನ್ನು ಕಳಿಸಲೂ ಅಭ್ಯಂತರವಿಲ್ಲ.
ಅಲ್ಲಿಂದ ನಾಲ್ವರೂ ಲ್ಯಾಬಿನ ಒಳಹೊಕ್ಕರು. ಮುರಿದುಹೋದ ಟ್ರಾನ್ಸಿಸ್ಟರುಗಳು, ಎಲೆಕ್ಟ್ರಾನಿಕ್ ಚಿಪ್ಗಳು, ಉಪಕರಣಗಳು ನೆಲದ ಮೇಲೆಲ್ಲ ಚೆಲ್ಲಾಪಿಲ್ಲಿ ಹರಡಿದ್ದವು. ಆ ಬೀಭತ್ಸ ದೃಶ್ಯ ನೋಡಿ ವಿಚಲಿತನಾಗಿ ಮಯಾಂಕ್ ಕೇಳಿದ – ಏನು ಇದೆಲ್ಲ?
ಹೇಳುತ್ತೇನೆ ಎಂದ ಸಿಸೋದಿಯಾ ರಾಮ್ ಮತ್ತು ದತ್ತಾತ್ರೇಯರಿಗೆ ಹೊರಕ್ಕೆ ಹೋಗಲು ಸಂಜ್ಞೆ ಮಾಡಿದ. ಅವರು ಹೋದ ಮೇಲೆ ಇಬ್ಬರೂ ಕುರ್ಚಿಗಳಲ್ಲಿ ಆಸೀನರಾದರು. ಸಿಸೋದಿಯಾ ಮಾತಿಗೆ ತೊಡಗಿದ.
ದೆಹಲಿಯ ಐ.ಐ.ಟಿ.ಯಲ್ಲಿ ಪ್ರೊಫೆಸರಾಗಿದ್ದು ನಿವೃತ್ತರಾದ ಅವಧೂತ್ ಅವರ ಬಗೆಗೆ ನೀವು ಕೇಳಿರಬೇಕಲ್ಲ?
ನನಗೆ ನೇರ ಪರಿಚಯ ಇರದಿದ್ದರೂ ಅವರ ಬಗೆಗೆ ಕೇಳಿದ್ದೇನೆ. ಒಮ್ಮೆ ಯಾವುದೊ ಪ್ರಯೋಗಾಲಯದಲ್ಲಿ ನನಗೆ ಕೆಲಸ ಕೊಡಿಸುವುದಾಗಿ ಹೇಳಿ ಫೋನಿನಲ್ಲಿ ಇಂಟರ್ವ್ಯೂ ಕೂಡಾ ಮಾಡಿದ್ದರು. ಆಮೇಲೆ ಮತ್ತೆ ಸಂಪರ್ಕವಾಗಲಿಲ್ಲ.
ವಾಸ್ತವವಾಗಿ ಆ ಇಂಟರ್ವ್ಯೂ ನಡೆದಿದ್ದುದು ಇಲ್ಲಿಯ ಉದ್ಯೋಗಕ್ಕಾಗಿಯೆ ಎಂಬುದನ್ನು ಸಿಸೋದಿಯಾ ಹೇಳಲಿಲ್ಲ.
ಅವಧೂತ್ ಅವರ ಥಿಯೊರಿಯೊಂದಿತ್ತು. ಥಿಯೊರಿ ಹಳೆಯದೇ ಆಗಿದ್ದರೂ ಅದನ್ನು ಅವರು ಮುಂದುವರಿಸಿ ಬೆಳೆಸಿದ್ದರು….
ಸಿಸೋದಿಯಾನ ಮಾತಿಗೆ ತಡೆ ಹಾಕಿ ಮಯಾಂಕ್ ಕೇಳಿದ – ಯಾವುದು ಆ ಥಿಯೊರಿ?
ಕ್ವಾಂಟಂ ಫಿಸಿಕ್ಸ್ನಲ್ಲಿ ಪ್ಯಾರಲಲ್ ಯೂನಿವರ್ಸ್ ಎಂಬ ಕಲ್ಪನೆಯನ್ನು ಕುರಿತು ನೀವು ಕೇಳಿದ್ದೀರಾ?
ಕೇಳಿದ್ದೇನೆ. ಭೂಮಿಯಲ್ಲಿ ನಮ್ಮ ಸಂಚಾರವೆಲ್ಲ ಅಕ್ಷಾಂಶ ರೇಖಾಂಶಗಳಿಗೆ ಅನುಗುಣವಾಗಿ ನಡೆಯುವುದಷ್ಟೆ. ಹಾಗೆಯೆ ಭೂತ-ಭವಿಷ್ಯತ್-ವರ್ತಮಾನಗಳೆಂಬವೂ ಕಾಲದ ನಕ್ಷೆಯ ಬೇರೆ ಬೇರೆ ಹಂತಗಳ ಸೂಚಿಕೆಗಳು. ಅವುಗಳ ವಿನ್ಯಾಸಗಳನ್ನು ಅರಿತುಕೊಂಡರೆ ನಾವು ಕಾಲದ ಆವರಣದಲ್ಲಿ ನಮಗೆ ಬೇಕಾದಂತೆ ಯಾವುದೇ ಮಿತಿ-ಪರಿಧಿಗಳಿಲ್ಲದೆ ಸಂಚರಿಸಬಹುದು – ಎಂಬುದು ಆ ವಾದ. ಆದರೆ ಬಹುಮಂದಿ ವಿಜ್ಞಾನಿಗಳು ಅದನ್ನೊಪ್ಪದೆ ವೈಶ್ವಿಕ ಪರಿಮಿತಿಗಳು ಅನುಲ್ಲಂಘ್ಯವೆಂದು ಹೇಳಿ ಆ ವಾದವನ್ನು ವಿರೋಧಿಸಿದ್ದಾರೆ ಎಂದ, ಮಯಾಂಕ್.
ಆದರೆ ಆ ವಾದವು ಅಸಮಂಜಸವಲ್ಲವೆಂದೂ ವ್ಯವಹಾರಗಮ್ಯವೆಂದೂ ಅವಧೂತ್ ಅವರು ನಂಬಿದ್ದರು. ತಂತ್ರಜ್ಞಾನ ಇನ್ನೂ ಸಾಕಷ್ಟು ಬೆಳೆಯದಿದ್ದಾಗ ಅಂತಹ ಕಾಲ-ಯಾನ ಅಸಾಧ್ಯವೆನಿಸಿರಬಹುದಾದರೂ ತಂತ್ರಜ್ಞಾನದ ಈಗಿನ ಪ್ರಗತಿಯನ್ನು ಗಮನಿಸಿದರೆ ಅದು ಸಾಧ್ಯತೆಯ ಕಕ್ಷೆಗೆ ಒಳಪಡುತ್ತದೆಂಬುದು ಅವರ ನಿಲವಾಗಿದ್ದಿತು. ಆದರೆ ಅದಕ್ಕೆ ಅವಶ್ಯವಾದ ಸಂಶೋಧನ ಪ್ರಯೋಗಗಳಿಗೆ ಅವಕಾಶ ಕಲ್ಪಿಸಲು ಸರ್ಕಾರವಾಗಲಿ ಖಾಸಗಿ ಕಂಪೆನಿಗಳಾಗಲಿ ಮುಂದಾಗಲಿಲ್ಲ. ಇದು ಮಹೇಶ್ ಮಿಸ್ತ್ರಿಯವರಿಗೆ ತಿಳಿಯಿತು. ಅವರು ಅವಧೂತ್ರನ್ನು ಕರೆಯಿಸಿ ಕೇಳಿದರು:
ನನಗೆ ಹಿಂದೆ ಆಗಿಹೋದದ್ದರ ಬಗೆಗೆ ಆಸಕ್ತಿಯಿಲ್ಲ. ಮುಂದೆ ನಡೆಯುವುದನ್ನು ಮೊದಲೇ ತಿಳಿದುಕೊಳ್ಳಬಹುದಾದ ತಂತ್ರವನ್ನು ಆವಿಷ್ಕರಿಸಬಲ್ಲಿರಾ? – ಎಂದು.
ಅದು ಸಾಧ್ಯವೇ ಇಲ್ಲ ಎಂದ, ಮಯಾಂಕ್.
ಆದರೆ ಅದನ್ನು ತಾನು ಮಾಡಬಲ್ಲೆನೆಂದು ಅವಧೂತ್ ಹೇಳಿದರು. ತನಗೆ ಅವಶ್ಯವಿರುವ ಸೌಕರ್ಯಗಳನ್ನು ಒದಗಿಸಿದರೆ ಅದನ್ನು ಮಾಡಿ ತೋರಿಸಬಲ್ಲೆ ಎಂದು ನಿಶ್ಚಯಧ್ವನಿಯಲ್ಲಿ ಹೇಳಿದರು. ಮಹೇಶ್ ಮಿಸ್ತ್ರಿಯವರಾದರೋ ವಾಣಿಜ್ಯೋದ್ಯಮಿ. ಲಾಭದ ಸಾಧ್ಯತೆಯಿಲ್ಲದ ಏನನ್ನೂ ಮಾಡುವವರಲ್ಲ. ಅದನ್ನು ತಪ್ಪೆನ್ನಲಾರೆ. ಅವಧೂತ್ ತೋರಿಸಿದ ಭರವಸೆಯಲ್ಲಿ ಕಾಲುಭಾಗ ನಿಜವಾದರೂ ತಾನು ಪ್ರಪಂಚವನ್ನೇ ಆಳಬಲ್ಲೆನೆಂದು ಮಿಸ್ತ್ರಿ ಲೆಕ್ಕಹಾಕಿ ಅದರಲ್ಲಿ ಹಣ ಹೂಡಿದರು… ಒಂದಲ್ಲ ಎರಡಲ್ಲ ಎಪ್ಪತ್ತನಾಲ್ಕು ಸೂಪರ್ಕಂಪ್ಯೂಟರ್ ಘಟಕಗಳನ್ನು ಏರ್ಪಡಿಸುವುದು ಎಷ್ಟು ಕಷ್ಟದ ಕೆಲಸವೆಂಬುದನ್ನು ಯೋಚಿಸಿರಿ. ಆದರೆ ಮಿಸ್ತ್ರಿ ಅವರು ಹಿಂದೆಗೆಯದೆ ಎಲ್ಲ ಏರ್ಪಾಟನ್ನೂ ಮಾಡಿದರು. ಅನಂತರ ವಿಚಾರಿಸಿದಾಗಲೆಲ್ಲ ಅವಧೂತ್ ತಮ್ಮ ಪ್ರಯೋಗ ನಿರೀಕ್ಷೆಯಂತೆ ಸಾಗುತ್ತಿದೆ ಎಂದು ಹೇಳುತ್ತಿದ್ದರು. ಆದರೆ ಏನಾಯಿತೊ ತಿಳಿಯದು – ಈಗ್ಗೆ ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದ ಹಾಗೆ ನನ್ನನ್ನು ಕರೆದು ತಾನು ತನ್ನ ಇಲ್ಲಿಯ ಪ್ರಯೋಗವನ್ನು ಮುಂದುವರಿಸಲಾರೆನೆಂದು ಹೇಳಿದರು. ಆಮೇಲೆ ಮಹೇಶ್ ಮಿಸ್ತ್ರಿಯವರೂ ಬಂದು ಅವಧೂತ್ರೊಡನೆ ಮಾತನಾಡಿದರು. ಒತ್ತೊತ್ತಿ ಕೇಳಿದರೂ ಇಲ್ಲಿಯ ಪ್ರಯೋಗವನ್ನು ನಿಲ್ಲಿಸಬೇಕಾಗಿದೆ ಎಂದರೇ ಹೊರತು ಕಾರಣ ಹೇಳಲಿಲ್ಲ. ಅವರು ಸ್ಪಷ್ಟವಾಗಿ ಹೇಳದಿದ್ದರೂ ನಮಗನಿಸಿದ್ದೇನೆಂದರೆ ಅವರ ಪ್ರಯೋಗ ನಿಜಕ್ಕೂ ಮುಗಿದಿದ್ದರೂ ಏನೊ ಕಾರಣದಿಂದ ಅವರು ಇದನ್ನೊಪ್ಪಲು ಸಿದ್ಧರಿಲ್ಲ – ಎಂದು. ಮುಂದೆ ಏನು ಮಾಡಬೇಕೆಂದು ನಾವು ಆಲೋಚನೆಯಲ್ಲಿ ತೊಡಗಿದ್ದಾಗಲೇ ಅವಧೂತ್ ತಮ್ಮ ಪ್ರಯೋಗದ ಪರಿಕರಗಳನ್ನೆಲ್ಲ ನಾಶ ಮಾಡಲು ಆರಂಭಿಸಿಬಿಟ್ಟರು. ಅದನ್ನು ತಡೆಯಲು ನಮಗೆ ಅವಕಾಶವನ್ನೇ ಕೊಡಲಿಲ್ಲ. ಪ್ರಯೋಗಾಲಯದ ಬಾಗಿಲನ್ನು ಹಾಕಿಕೊಂಡು ತಾವು ಮಾಡಿದ್ದುದನ್ನೆಲ್ಲ ನಾಶ ಮಾಡಿ ಕಡೆಗೆ ತಮ್ಮ ಮೇಲೆ ತಾವೇ ಗುಂಡು ಹಾರಿಸಿಕೊಂಡು ಸತ್ತುಹೋದರು.
ಹೌದೆ? ಅವರು ತೀರಿಕೊಂಡ ಸುದ್ದಿಯನ್ನು ಕೇಳಿದ್ದೆ, ಆದರೆ ಆತ್ಮಹತ್ಯೆ ಮಾಡಿಕೊಂಡರೆಂಬುದು ನನಗೆ ತಿಳಿದಿರಲಿಲ್ಲ ಎಂದ, ಮಯಾಂಕ್.
ನಿಮಗೆ ಮಾತ್ರವಲ್ಲ, ಯಾರಿಗೂ ಅವರದು ಆತ್ಮಹತ್ಯೆಯೆಂಬುದು ಗೊತ್ತಿಲ್ಲ. ಅವರಿಂದ ನಮಗೆ ನಷ್ಟವಾದರೂ ಅವರ ಹೆಸರು ಕೆಡದಿರಲಿ ಎಂದು ನಾವು ಎಚ್ಚರಿಕೆ ವಹಿಸಿದೆವು.
ಎಂದರೆ ಅವಧೂತ್ ಅವರಿದ್ದ ಸ್ಥಾನದಲ್ಲಿ ನನ್ನನ್ನು ನಿಯುಕ್ತಿ ಮಾಡಿದ್ದೀರಾ? ಎಂದು ಕೇಳಿದ ಮಯಾಂಕ್ ಆಶ್ಚರ್ಯದಿಂದ.
ಹೌದು. ಆದರೆ ಅವಧೂತ್ರವರು ಮಾಡಿದ್ದುದನ್ನೆಲ್ಲ ನೀವು ಮೊದಲಿನಿಂದ ಮತ್ತೆ ಮಾಡಬೇಕಾಗಿಲ್ಲ. ಅವರು ಈಗಾಗಲೇ ಮಾಡಿದ್ದುದನ್ನು ರಿಪೇರಿ ಮಾಡಿದರೆ ಸಾಕಾಗುತ್ತದೆ. ಅದನ್ನು ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆಯೆಂದು ನಮಗೆ ನಂಬಿಕೆ ಇದೆ. ದಯವಿಟ್ಟು ನಮ್ಮ ನಂಬಿಕೆಯನ್ನು ನಿಜಗೊಳಿಸಿರಿ – ಎಂದ, ಸಿಸೋದಿಯಾ.
ಮಯಾಂಕ್ ಕೇಳಿದ – ಇಲ್ಲಿ ನಡೆಯುತ್ತಿರುವ ಪ್ರಯೋಗಗಳು ಭವಿಷ್ಯವನ್ನು ತಿಳಿದುಕೊಳ್ಳಲು ನೆರವಾಗುತ್ತದೆಂಬುದು ಎಷ್ಟು ಮಂದಿಗೆ ತಿಳಿದಿದೆ?
ಅದು ಅವಧೂತ್, ಮಿಸ್ತ್ರಿ, ನಾನು – ನಮ್ಮ ಹೊರತು ಬೇರಾರಿಗೂ ತಿಳಿದಿಲ್ಲ. ಈಗ ನಿಮಗೂ ತಿಳಿದಹಾಗಾಯಿತು.
ನನ್ನ ಸಹಾಯಕರು – ರಾಮ್, ದತ್ತಾತ್ರೇಯ ಅವರಿಗೂ ಆ ಸಂಗತಿ ತಿಳಿಯದೆ?
ಇಲ್ಲ, ಅವರಿಗೂ ತಿಳಿಯದು.
ಸ್ವಲ್ಪ ಹೊತ್ತು ಮೌನವಾಗಿದ್ದು ಆಮೇಲೆ ಎದ್ದು ನಿಂತು ಮಯಾಂಕ್ ಹೇಳಿದ – ನಾಳೆಯಿಂದ ಕೆಲಸವನ್ನು ಶುರು ಮಾಡುತ್ತೇನೆ.
* * *
ಮಯಾಂಕ್ಗೂ ದೇವಯಾನಿಗೂ ವಿದಾಯ ಹೇಳಿ ಹೊರಡುತ್ತ ಸಿಸೋದಿಯಾ ನಿಮಗೆ ಯಾವುದಾದರೂ ಆವಶ್ಯಕತೆ ಬಿದ್ದರೆ ಈ ನಂಬರುಗಳಿಗೆ ಫೋನ್ ಮಾಡಿರಿ ಎಂದು ಸಿಸೋದಿಯಾ ಕೆಲವು ಇಂಟರ್ಕಾಮ್ ನಂಬರುಗಳನ್ನು ತಿಳಿಸಿದ.
ಅವನು ಹೋದ ಮೇಲೆ ಇಬ್ಬರೂ ಸೋಫಾದ ಮೇಲೆ ಕುಳಿತರು.
ನಾವು ಅಂದುಕೊಂಡಿದ್ದುದಕ್ಕಿಂತ ಇಲ್ಲಿಯ ಪರಿಸ್ಥಿತಿ…. ಎಂದು ದೇವಯಾನಿ ಏನನ್ನೋ ಹೇಳತೊಡಗಿದಂತೆ ಮಯಾಂಕ್ ಬಾಯ ಮೇಲೆ ತೋರುಬೆರಳನ್ನಿಟ್ಟು ಮಾತನಾಡದಿರುವಂತೆ ಸಂಜ್ಞೆ ಮಾಡಿದ. ಮೇಜಿನ ಮೇಲಿದ್ದ ಪ್ಯಾಡಿನ ಹಾಳೆಯ ಮೇಲೆ ಬರೆದ – ಬಟ್ಟೆಯೊಳಗೆ ಬಚ್ಚಿಟ್ಟುಕೊಂಡಿದ್ದ ಮೊಬೈಲನ್ನೂ ಗಮನಿಸಿ ಟ್ರ್ಯಾಕ್ ಮಾಡಿದರೆಂದ ಮೇಲೆ ನಾವು ಏನು ಮಾತನಾಡುತ್ತೇವೆ, ಏನು ಮಾಡುತ್ತೇವೆ ಎಂಬುದನ್ನೆಲ್ಲ ಅವರು ನಿಶ್ಚಿತವಾಗಿ ಗಮನಿಸುತ್ತಿರುತ್ತಾರೆ. ಆದ್ದರಿಂದ ಅವರಿಗೆ ತಿಳಿದರೂ ಪರವಾಗಿಲ್ಲವೆಂಬಂತಹ ವಿಷಯಗಳನ್ನು ಮಾತ್ರ ನಾವು ಬಹಿರಂಗವಾಗಿ ಮಾತನಾಡಬಹುದು.
ಆದರೆ ನಾವು ಏನಾದರೂ ಮಾತಾಡಬೇಕೆನಿಸಿದರೆ ಏನು ಮಾಡಬೇಕು? ಎಂದು ಚೀಟಿಯಲ್ಲಿ ಬರೆದು ಕೇಳಿದಳು ದೇವಯಾನಿ.
ಬಾತ್ರೂಮಿನಲ್ಲಿ ಷವರ್ ಆನ್ ಮಾಡಿ ನಾವು ಮೆಲುದನಿಯಲ್ಲಿ ಮಾತನಾಡಿದರೆ ಬಹುಶಃ ಅವರಿಗೆ ನಮ್ಮ ಮಾತುಗಳನ್ನು ಟ್ರ್ಯಾಕ್ ಮಾಡಲು ಆಗಲಾರದು ಎಂದು ದೇವಯಾನಿಯ ಕಿವಿಯಲ್ಲಿ ಹೇಳಿದ, ಮಯಾಂಕ್.
ಒಳ್ಳೆಯ ಮಾತು ಹೇಳಿದೆ. ಬದಲಾಯಿಸಲು ಒಂದು ಜೊತೆ ಬಟ್ಟೆಯೂ ಇಲ್ಲದಿರುವಾಗ ಷವರಿನಲ್ಲಿ ಬಟ್ಟೆ ತೋಯಿಸಿಕೊಳ್ಳುವ ಸಲಹೆ ಕೊಡುತ್ತಿದ್ದೀ.
ಯೋಚಿಸಬೇಡ. ಇಲ್ಲಿ ದೊಡ್ಡ ಸ್ಟೋರ್ಸ್ ಇದೆಯೆಂದು ಹೇಳಿದರಲ್ಲ ಸಿಸೋದಿಯಾ. ನಾಳೆ ಬೆಳಗ್ಗೆ ಅಲ್ಲಿಗೆ ಹೋಗಿ ಬರೋಣ.
* * *
ಮರುದಿನ ಬೆಳಗ್ಗೆ ಇಬ್ಬರೂ ಸ್ಟೋರ್ಸ್ಗೆ ಹೋಗಿ ಒಂದಷ್ಟು ಬಟ್ಟೆಗಳನ್ನೂ ಬೇರೆ ಹಲವು ಆವಶ್ಯಕ ವಸ್ತುಗಳನ್ನೂ ತೆಗೆದುಕೊಂಡರು.
ದಾರಿಯಲ್ಲಿ ದೇವಯಾನಿ ಕೇಳಿದಳು – ನಿಜವಾಗಿ ನಮ್ಮ ಮಾತುಗಳನ್ನೆಲ್ಲ ಅವರು ಕೇಳಿಸಿಕೊಳ್ಳುತ್ತಾರೆಯೆ?
ಅದಕ್ಕೆ ಅವಕಾಶವಂತೂ ಇದೆ. ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕಷ್ಟೆ.
ಆದರೆ ಸದಾ ಕಾಗದದಲ್ಲಿ ಬರೆದು ಮಾತಾಡಲು ಆಗುತ್ತದೆಯೆ?
ಹಾಗೇನಿಲ್ಲ. ಓಡಾಡುವಾಗ ಬಯಲಿನಲ್ಲಿ ನಾವು ಮಾತನಾಡುವುದನ್ನು ಟ್ರ್ಯಾಕ್ ಮಾಡುವುದು ಸುಲಭವಲ್ಲ. ಆಗಾಗ ಸ್ವಿಮ್ಮಿಂಗ್ಪೂಲಿನಲ್ಲಿ ಈಜುವಾಗ ಮಾತನಾಡಿಕೊಳ್ಳಬಹುದು.
ಕೆಲವು ನಿಮಿಷ ಕಳೆದ ಮೇಲೆ ಮಯಾಂಕ್ ಕೇಳಿದ – ಇಲ್ಲಿ ನಡೆದಿರುವ ಪ್ರಯೋಗ ಯಾವುದಕ್ಕಾಗಿ ಎಂದು ನಿನಗೆ ಅಂದಾಜು ಆಯಿತೆ?
ನಿನಗದು ತಿಳಿದರೆ ನೀನೇ ಹೇಳುತ್ತೀ ಎಂದುಕೊಂಡು ನಾನು ನಿನ್ನನ್ನು ಕೇಳಲಿಲ್ಲ.
ಭವಿಷ್ಯದಲ್ಲಿ ಆಗುವುದನ್ನು ಮೊದಲೇ ಕಂಡುಕೊಳ್ಳುವುದಕ್ಕಾಗಿ.
ಅದು ಸಾಧ್ಯವೆ?
ತಿಳಿಯದು. ಆದರೆ ಇವರು ಹೇಳುತ್ತಿರುವುದನ್ನು ನೋಡಿದರೆ ಆ ಪ್ರಯೋಗ ಮುಗಿದು ಅದಕ್ಕೆ ಬೇಕಾದ ಉಪಕರಣಗಳೂ ತಯಾರಾಗಿವೆ. ಕೊನೆಯ ದಿವಸಗಳಲ್ಲಿ, ಪ್ರಯೋಗ ಮುಗಿದಿದೆಯೆಂದು ಮಹೇಶ್ ಮಿಸ್ತ್ರಿಯವರಿಗೆ ವರದಿ ಮಾಡಬೇಕಾದ ಹಂತದಲ್ಲಿ ಅವಧೂತ್ರವರು ತಿರುಗಿಬಿದ್ದಿದ್ದಾರೆ.
ಅದೇಕೆ?
ತಿಳಿಯದು.
ಒಂದು ವೇಳೆ ನಿಜಕ್ಕೂ ಭವಿಷ್ಯವನ್ನು ಕಂಡುಕೊಳ್ಳುವುದು ಸಾಧ್ಯವಾದರೆ ಏನಾಗಬಹುದು? ಅವನು ದೇವರೇ ಆಗಿಬಿಡಬಹುದೇನೊ.
ಅದನ್ನು ನಾನು ಹೇಳಲಾರೆ. ಆದರೆ ಆ ತಂತ್ರಜ್ಞಾನ ಹೊಂದಿರುವವನು ಜಗತ್ತಿನಲ್ಲಿಯೆ ಅತ್ಯಂತ ಶಕ್ತಿವಂತನಾಗಬಹುದು. ಜಗತ್ತಿನ ವ್ಯಾಪಾರ ವಾಣಿಜ್ಯವೆಲ್ಲದರ ಮೇಲೂ ಅವನಿಗೆ ನಿಯಂತ್ರಣ ಬರಬಹುದು. ಆ ಪರಿಜ್ಞಾನದಿಂದ ಅವನು ಯಥೇಷ್ಟ ಹಣ ಗಳಿಸಬಹುದು. ಇಡೀ ಜಗತ್ತೇ ಅವನನ್ನು ಅವಲಂಬಿಸಬೇಕಾಗಬಹುದು. ಸ್ಟಾಕ್ಮಾರ್ಕೆಟ್ ಏರಿಳಿತಗಳು ಅವನಿಗೆ ಮೊದಲೇ ತಿಳಿದುಹೋಗಿರುತ್ತವೆ, ಚುನಾವಣೆಗಳ ಫಲಿತ ಕೂಡಾ. ಹೀಗೆ ಇಡೀ ಜಗತ್ತಿನ ಆಧಿಪತ್ಯ ಆ ಒಬ್ಬನ ಕೈ ಸೇರುತ್ತದೆ. ಆದರೆ ಆ ಸನ್ನಿವೇಶದಲ್ಲಿ ಒಳ್ಳೆಯದೂ ಆಗಬಹುದು: ಯಾವುದೊ ದೇಶ ಬೇರಾವುದೋ ದೇಶದ ಮೇಲೆ ದಾಳಿ ಮಾಡುವುದು ಮೊದಲೇ ತಿಳಿದಲ್ಲಿ ಪ್ರತಿಬಂಧಕ ಮಾರ್ಗಗಳನ್ನು ಯೋಚಿಸಬಹುದು. ಹೀಗೆ ಸೈನಿಕ ವ್ಯವಸ್ಥೆಗಳೇ ಅರ್ಥಹೀನವಾಗಬಹುದು. ಹಾಗೆ ಅಪಾರ ಹಣ ಬೇರೆ ಜನೋಪಯೋಗಿ ಉದ್ದೇಶಗಳಿಗೆ ಲಭ್ಯವಾಗಬಹುದು. ಕೊಲೆ ಸುಲಿಗೆಗಳಾಗಲಿ ಅಪಘಾತಗಳಾಗಲಿ ಮೊದಲೇ ತಿಳಿದುಹೋಗಿರುತ್ತವೆ, ನಿವಾರಣೆ ಸಾಧ್ಯವಾಗಬಹುದು. ಸಾಂಕ್ರಾಮಿಕಗಳ ಬಗೆಗೆ ಮೊದಲೇ ಮಾಹಿತಿ ದೊರೆಯಬಹುದು, ಹಾಗೆ ಪೂರ್ವಸಿದ್ಧತೆಗೆ ಅನುಕೂಲವಾಗಬಹುದು….
ಒಂದು ವೇಳೆ ಈ ತಂತ್ರಜ್ಞಾನವನ್ನು ಸ್ವಾಧೀನಪಡಿಸಿಕೊಂಡವನು ದುಷ್ಟನಾಗಿದ್ದರೆ?
ಏನು ಆದೀತೊ ನಾನು ಊಹಿಸಲಾರೆ. ಹೇಗಾದರಾಗಲಿ – ಒಳ್ಳೆಯದೇ ಆಗಲಿ ಕೆಟ್ಟದ್ದೇ ಆಗಲಿ – ಅಪರಿಮಿತ ಅಧಿಕಾರ ಒಬ್ಬನೇ ವ್ಯಕ್ತಿಯ ಕೈಯಲ್ಲಿ ಸೇರುವುದರಿಂದ ಜನರಿಗೆ ಒಳ್ಳೆಯದಾಗುವುದಿಲ್ಲ.
ನನ್ನ ಕೊನೆಯ ಪ್ರಶ್ನೆ- ಭವಿಷ್ಯವನ್ನರಿಯುವ ಇಂತಹ ತಂತ್ರಜ್ಞಾನ ಸಾಧ್ಯವೆಂದು ನೀನು ನಂಬುತ್ತಿದ್ದೀಯಾ?
ಒಂದು ವೇಳೆ ಆ ಸಾಧ್ಯತೆ ನಮ್ಮ ಕಣ್ಣ ಮುಂದೆಯೇ ಕಂಡಲ್ಲಿ ನಂಬದಿರುವುದು ಹೇಗೆ?
* * *
ಮರುದಿನವೇ ಲ್ಯಾಬ್ನಲ್ಲಿ ಮಯಾಂಕ್ ತನ್ನ ಕೆಲಸವನ್ನು ಆರಂಭಿಸಿದ. ಅದು ತುಂಬಾ ಸವಾಲಿನದೆಂದೇನೂ ಅವನಿಗೆ ಅನ್ನಿಸಲಿಲ್ಲ. ಮೊದಲ ಹೆಜ್ಜೆಯೆಂದರೆ ಅವಧೂತ್ ನಾಶಮಾಡಿದ್ದ ಪರಿಕರಗಳನ್ನು ದುರಸ್ತು ಮಾಡುವುದು. ರಿಸರ್ಚ್ ಇಂಜಿನಿಯರಿಂಗಿನಲ್ಲಿ ಒಂದು ನಮೂನೆಯನ್ನು ಗ್ರಹಿಸಿ ಇನ್ನೊಂದನ್ನು ರೂಪಿಸುವುದು ದೊಡ್ಡ ವಿಷಯವೇನಲ್ಲ. ಒಂದು ಕಿರಿಕಿರಿ ಎಂದರೆ ತಾನು ಯಾವುದನ್ನು ಏಕೆ ಮಾಡುತ್ತಿದ್ದೇನೆಂಬುದು ಸಹಾಯಕರಾದ ರಾಮ್ ಮತ್ತು ದತ್ತಾತ್ರೇಯರಿಗೂ ಇದುವರೆಗೆ ತಿಳಿದಿಲ್ಲ ಮತ್ತು ತಾನೂ ತಿಳಿಸಬಾರದು. ಸದ್ಯಕ್ಕೆ ಇದೊಂದು ಮುಖ್ಯ ಸಮಸ್ಯೆ.
ನೂರಾರು ಎಲೆಕ್ಟ್ರಾನಿಕ್ ಚಿಪ್ಗಳೂ ಭಾಗಗಳೂ ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿದ್ದವು. ಅವನ್ನು ಮತ್ತೆ ತಯಾರು ಮಾಡುವುದು ಒಂದು ಕೆಲಸವಾದರೆ, ಅವುಗಳಲ್ಲಿ ಯಾವಾವುದು ಎಲ್ಲೆಲ್ಲಿ ಯಾವಾವ ಸರ್ಕ್ಯೂಟಿನಲ್ಲಿ ಸೇರಬೇಕೆಂಬುದನ್ನು ಕಂಡುಕೊಳ್ಳುವುದು ಇನ್ನೊಂದು ಕಷ್ಟದ ಕೆಲಸ. ಮೊದಲಿಗೆ ಕೆಟ್ಟಿದ್ದ ಒಂದು ಚಿಪ್ ತೆಗೆದುಕೊಂಡು ಅದನ್ನು ಮೈಕ್ರೋಸ್ಕೋಪಿನಲ್ಲಿ ನೋಡಿದಾಗ ಅವನಿಗೆ ತಿಳಿಯಿತು – ಅದು ಮಾಮೂಲು ಚಿಪ್ ಅಲ್ಲ, ಅದು ನಾನೊಟೆಕ್ನಾಲಜಿ ವಿಧಾನದಲ್ಲಿ ಮಾತ್ರ ಸಾಧ್ಯವಾಗುವಂಥದು. ಆದರೆ ತನಗೆ ಇದುವರೆಗೆ ಸ್ವಾಧೀನವಾಗಿದ್ದ ಯಾವ ತಂತ್ರವಿಧಾನದಿಂದಲೂ ಆ ಪ್ರಮಾಣದ ಸಾಂದ್ರೀಕರಣವಾಗಲಿ ಅಳವಡಿಸುವಿಕೆಯಾಗಲಿ ಶಕ್ಯವಿರಲಿಲ್ಲ. ಅವಧೂತ್ ಇದನ್ನು ಹೇಗೆ ಸಾಧಿಸಿದ್ದರು? – ಎಂದು ಮಯಾಂಕ್ ಸೋಜಿಗಗೊಂಡ.
ಪ್ರಶ್ನಿಸಿದಾಗ ರವಿ ಎಂಬ ಸಹಾಯಕ ಹೇಳಿದ – ನಾನೊಟೆಕ್ನಾಲಜಿ ಬಳಕೆಯಾಗಿದೆ ಎಂದು.
ನಾನೊಟೆಕ್ನಾಲಜಿ ಲ್ಯಾಬ್ ಎಲ್ಲಿದೆ?
ಈ ಕ್ಯಾಂಪಸಿನೊಳಗೇ ಇದೆ.
ಎಂದರೆ ಈ ಚಿಪ್ಗಳ ಬ್ಲೂಪ್ರಿಂಟ್ಸ್ ನಮಗೆ ಸಿಕ್ಕಿದರೆ ಕೆಲಸ ಆಗುತ್ತದೆ.
ಆದರೆ ಅವಧೂತ್ ಬ್ಲೂಪ್ರಿಂಟ್ಗಳಿಗಾಗಿ ಸಮಯ ಖರ್ಚು ಮಾಡುತ್ತಿರಲಿಲ್ಲ. ನನಗೆ ತಿಳಿದಂತೆ ಆ ವಿವರಗಳೆಲ್ಲ ಅವರ ಮನಸ್ಸಿನಲ್ಲೇ ನಿಕ್ಷಿಪ್ತವಾಗಿರುತ್ತಿದ್ದವು – ಎಂದ, ರವಿ.
ಕೂಡಲೆ ಮಯಾಂಕ್ ಏನೂ ಮಾತನಾಡಲಿಲ್ಲ. ಬ್ಲೂಪ್ರಿಂಟ್ಗಳಿಲ್ಲದೆ ತಾನು ಒಂದು ಹೆಜ್ಜೆಯನ್ನೂ ಇಡಲಾಗದೆಂದು ಅವನಿಗೆ ಖಾತರಿಯಾಗಿತ್ತು.
ಅಂದು ಸಂಜೆ ವಸತಿಗೆ ಹೋದೊಡನೆ ಅಂದಿನ ಕೆಲಸದ ವಿಶೇಷಗಳೇನೆಂದು ದೇವಯಾನಿ ವಿಚಾರಿಸಿದಾಗ ಮಾತನಾಡದಿರುವಂತೆ ಸಂಜ್ಞೆ ಮಾಡಿ ಅವಳನ್ನು ಸ್ವಿಮ್ಮಿಂಗ್ ಪೂಲಿಗೆ ಕರೆದೊಯ್ದು ಅಂದು ನಡೆದಿದ್ದುದನ್ನೆಲ್ಲ ವಿವರಿಸಿ ಕೆಲಸ ಮುಂದುವರಿಯುವುದು ಕಷ್ಟಕರವೆನಿಸತೊಡಗಿದೆ – ಎಂದ.
* * *
ಕೆಲ ದಿನಗಳಾದ ಮೇಲೆ ಮಯಾಂಕ್ನೊಡನೆ ಮಿಸ್ತ್ರಿಯ ವಿಡಿಯೊ ಕಾನ್ಫರೆನ್ಸ್ ನಡೆಯಿತು. ಮಯಾಂಕ್ ಸಂಗಡ ಸಿಸೋದಿಯಾ ಸಹ ಇದ್ದ.
ಕೆಲಸ ಹೇಗೆ ನಡೆಯುತ್ತಿದೆ ಮಯಾಂಕ್?
ನಿಜ ಹೇಳಬೇಕೆಂದರೆ ಹೇಳಿಕೊಳ್ಳುವಷ್ಟೇನೂ ಆಗಿಲ್ಲ.
ನಿನಗೆ ಬೇಕಾದ ಸೌಕರ್ಯಗಳೆಲ್ಲ ಏರ್ಪಾಟಾಗಿದೆ ತಾನೆ?
ಕೊರತೆಯೇನಿಲ್ಲ.
ನಾನು ನಿನ್ನನ್ನು ಅವಸರಪಡಿಸುವುದಿಲ್ಲ. ಆದರೆ ನೆನಪಿಟ್ಟುಕೊ – ಈ ಕೆಲಸವನ್ನು ಯಾರಾದರೂ ಸಾಧಿಸಬಹುದಾದರೆ ಅದು ನೀನು ಮಾತ್ರ. ಇದು ನನ್ನ ಅಭಿಪ್ರಾಯ ಮಾತ್ರವಲ್ಲ, ಅವಧೂತ್ ಅವರ ಅಭಿಪ್ರಾಯವೂ ಅಗಿತ್ತು. ನಿನ್ನ ಪ್ರಯತ್ನವನ್ನು ಮುಂದುವರಿಸು. ನೀನು ಸಾಧಿಸಬಲ್ಲೆ ಎಂದು ನನಗೆ ವಿಶ್ವಾಸವಿದೆ.
ಅದರೊಡನೆ ವಿಡಿಯೊ ಕಾನ್ಫರೆನ್ಸ್ ಮುಗಿಯಿತು.
ಒಂದೆರಡು ನಿಮಿಷಗಳಾದ ಮೇಲೆ ಸಿಸೋದಿಯಾ ಹೇಳಿದ –
ಒಂದು ಹಂತದಲ್ಲಿ ಅವಧೂತ್ ತಮ್ಮ ಸಹಾಯಕನಾಗಲು ಯೋಗ್ಯನೆಂದು ನಿಮ್ಮನ್ನೇ ಗುರುತಿಸಿದ್ದರು. ಅವರ ಪ್ರಯೋಗವನ್ನು ನೀವು ಮಾತ್ರ ಮುಂದುವರಿಸಬಲ್ಲಿರೆಂದು ಅವರಿಗೆ ಭರವಸೆ ಇತ್ತು. ಆದರೆ ಅದೇನು ಕಾರಣವೊ – ಆಮೇಲೆ ಬೇಡವೆಂದರು. ಆದ್ದರಿಂದ ನಾವು ನಿಮ್ಮನ್ನು ಸಂಪರ್ಕಿಸಲಿಲ್ಲ.
ಈ ಮಾತನ್ನು ಕೇಳಿ ಮಯಾಂಕ್ ಇನ್ನಷ್ಟು ಗಲಿಬಿಲಿಗೊಂಡ. ಅವಧೂತ್ ತನ್ನನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದರು, ಆಮೇಲೆ ಏಕೆ ಬೇಡವೆಂದರು – ಎಂದು ಯೋಚಿಸತೊಡಗಿದ. ಆಳವಾಗಿ ಹುಡುಕಿದರೆ ಏನಾದರೂ ಸುಳಿವು ಸಿಕ್ಕೀತು – ಎಂದುಕೊಂಡ.
ಮರುದಿನ ಲ್ಯಾಬ್ಗೆ ಹೋಗಿ ಸಂಜೆಯವರೆಗೂ ಅಂಗುಲಂಗುಲವನ್ನೂ ಜಾಲಾಡಿ ನೋಡಿದ. ಏನೂ ಪ್ರಯೋಜನವಾಗಲಿಲ್ಲ. ಅದರ ಮಾರನೆ ದಿನವೂ ಹುಡುಕಾಟ ಮುಂದುವರಿಸಿದ.
ನಡುವೆ ಏನೊ ಯೋಚನೆ ಹೊಳೆದು ಸಿಸೋದಿಯಾಗೆ ಫೋನ್ ಮಾಡಿದ.
ಅವಧೂತ್ ಅವರ ವಸತಿ ಎಲ್ಲಿತ್ತು?
ಅವರು ಅವಿವಾಹಿತರು. ಬೇರೆ ಕ್ವಾರ್ಟರ್ಸ್ ಬೇಡವೆಂದರು. ಲ್ಯಾಬ್ನೊಳಗಿದ್ದ ಒಂದು ಕೋಣೆಯನ್ನೇ ತಮ್ಮ ವಸತಿಗಾಗಿ ಬಳಸುತ್ತಿದ್ದರು.
ನಾನು ಒಮ್ಮೆ ಅವರ ಕೋಣೆಯನ್ನು ನೋಡಬೇಕಾಗಿದೆ. ಬೀಗದ ಕೈ ಯಾರ ಹತ್ತಿರ ಇರುತ್ತದೆ?
ಅದಕ್ಕೇನಂತೆ – ಈಗಲೇ ಕಳಿಸಿಕೊಡುತ್ತೇನೆ – ಎಂದ, ಸಿಸೋದಿಯಾ.
ಬೀಗದಕೈ ತೆಗೆದುಕೊಂಡು ಲ್ಯಾಬಿಗೆ ತಾಗಿದಂತೆಯೆ ಇದ್ದ ಅವಧೂತ್ರ ಕೋಣೆಗೆ ಹೋದ, ಮಯಾಂಕ್. ಅದೊಂದು ಆಡಂಬರವಿಲ್ಲದ ಕೋಣೆ. ಚಿಕ್ಕ ವೆರಾಂಡಾ, ಮಲಗುವ ಮನೆ, ಬಚ್ಚಲಮನೆ. ಬೆಡ್ರೂಮಷ್ಟನ್ನೂ ಶೋಧಿಸಿದ, ಒಂದಂಗುಲವನ್ನೂ ಬಿಡದೆ. ಅಲ್ಲಿ ನಾಲ್ಕು ಜೊತೆ ಬಟ್ಟೆಗಳೂ ಇರಲಿಲ್ಲ. ಇದ್ದಷ್ಟನ್ನು ಚಿಕ್ಕ ಬೀರುವಿನಲ್ಲಿ ನೇತುಹಾಕಲಾಗಿತ್ತು. ಕೋಣೆಯಲ್ಲಿ ಯಾವ ಪೀಠೋಪಕರಣಗಳೂ ಬರಲಿಲ್ಲ – ಒಂಟಿಹಾಸಿಗೆ ಮಂಚದ ವಿನಾ. ಗಮನವಿಟ್ಟು ಹುಡುಕಿದರೂ ಉಪಯುಕ್ತವಾದ್ದೇನೂ ಕಾಣಲಿಲ್ಲ. ಇಷ್ಟಕ್ಕೂ ತಾನು ಏನನ್ನು ಹುಡುಕುತ್ತಿದ್ದೇನೆಂದೂ ಅವನಿಗೇ ಅಂದಾಜಿರಲಿಲ್ಲ. ಮನಸ್ಸಿನಲ್ಲಿ ಮೂಡಿದ್ದ ಅಸ್ಪಷ್ಟ ಸಂಕೇತಗಳ ಬೆನ್ನುಹತ್ತಿ ಹುಡುಕಾಟ ನಡೆಸಿದ್ದ.
ಅಲ್ಲಿಂದ ಮುಂದಿನ ಕೋಣೆಗೆ ಬಂದ. ಅಲ್ಲಿದ್ದ ಟೀಪಾಯ್ ಮೇಲೆ ಹಲವು ಕಾಗದಗಳು ಅಸ್ತವ್ಯಸ್ತವಾಗಿ ಹರಡಿದ್ದವು. ಆ ಒಂದೊಂದು ತುಣುಕನ್ನೂ ಅದರಲ್ಲೇನಾದರೂ ಉಪಯುಕ್ತ ಸಾಮಗ್ರಿ ದೊರೆತೀತೇನೊ ಎಂದು ಪರೀಕ್ಷಿಸಿದ. ಅಲ್ಲಿದ್ದವು ಮಾಮೂಲು ದೈನಂದಿನ ವಿವರಗಳಷ್ಟೆ.
ಅನಂತರ ಪಕ್ಕದ ರ್ಯಾಕ್ – ಅರಗಳಲ್ಲಿದ್ದ ಪುಸ್ತಕಗಳ ನಡುವೆ ಏನಾದರೂ ಸುಳುಹು ಸಿಕ್ಕೀತೇನೊ ಎಂದು ಹುಡುಕಿದ. ಅಲ್ಲೊಂದು ಅರದಲ್ಲಿ ಪುಸ್ತಕಗಳಲ್ಲದೆ ಸ್ಪೈರಲ್ ಬೈಂಡಿಂಗ್ ಮಾಡಿದ್ದ ಒಂದೆರಡು ಫೈಲುಗಳು ಕಂಡವು. ಒಂದು ಫೈಲಿನ ಮೇಲೆ ಸೆಲೆಕ್ಶನ್ ಆಫ್ ಅಸಿಸ್ಟೆಂಟ್ ಎಂದು ಬರೆದಿತ್ತು. ತೆಗೆದು ನೋಡಿದ. ಅದರಲ್ಲಿ ಮಯಾಂಕ್ನ ಹಾಗೂ ಇನ್ನು ಕೆಲವರ ಟೆಲಿಫೋನ್ ಸಂದರ್ಶನದ ಟಿಪ್ಪಣಿಗಳಿದ್ದವು. ಹಾಳೆಗಳ ಮಧ್ಯೆ ಬಿಡಿಯಾಗಿದ್ದ ಒಂದು ಕಾಗದ ಕಾಣಿಸಿತು. ಅದು ಸಂದರ್ಶನಕ್ಕೆ ಯಾವ ದಿನ ಎಷ್ಟು ಹೊತ್ತಿಗೆ ಬರಬೇಕೆಂದು ಮಯಾಂಕ್ಗೆ ಬರೆದಿದ್ದ ಪತ್ರದ ಆಫೀಸ್ ಕಾಪಿ. ಮಯಾಂಕ್ಗೆ ಆಶ್ಚರ್ಯವಾಯಿತು: ಆ ಪತ್ರ ಅವನಿಗೆ ಬಂದೇ ಇರಲಿಲ್ಲ! ಮಯಾಂಕ್ ಗಮನಿಸಿದ ಇನ್ನೊಂದು ಸಂಗತಿಯೆಂದರೆ ಇಂತಹ ಆಫೀಸ್ ಕಾಪಿ ಬೇರಾವ ಅಭ್ಯರ್ಥಿಯ ಮಾಹಿತಿಪತ್ರದೊಡನೆಯೂ ಇರಲಿಲ್ಲ.
ಮಯಾಂಕ್ ತನಗೆ ಸಂಬಂಧಿಸಿದ ಪತ್ರದ ಆಫೀಸ್ ಕಾಪಿಯನ್ನು ತನ್ನ ಕಿಸೆಯಲ್ಲಿರಿಸಿಕೊಂಡು ಅಲ್ಲಿದ್ದ ಪುಸ್ತಕಗಳತ್ತ ಕಣ್ಣು ಹಾಯಿಸಿ ಅಲ್ಲಿಂದ ಲ್ಯಾಬ್ಗೆ ಹಿಂದಿರುಗಿದ.
ಇನ್ನೊಮ್ಮೆ ತನ್ನನ್ನು ಉದ್ದೇಶಿಸಿದ್ದ ಪತ್ರವನ್ನು ಪರಿಶೀಲಿಸಿದ. ಕಾಗದದ ಎಡಭಾಗದಲ್ಲಿ ತನ್ನ ವಿಳಾಸವನ್ನು ಟೈಪ್ ಮಾಡಲಾಗಿತ್ತು. ಪತ್ರದಲ್ಲಿ ತಾನು ಸಂದರ್ಶನಕ್ಕೆ ಹೋಗಬೇಕಾದುದರ ವಿವರಗಳನ್ನು ಸೂಚಿಸಿದ ಮೂರೇ ಮೂರು ಪಂಕ್ತಿಗಳು ಇದ್ದವು. ಕೆಳಗೆ ಅವಧೂತ್ ಅವರ ಸಹಿ ಇದ್ದಿತು. ಪತ್ರದ ಬಲ ಮೇಲ್ಭಾಗದಲ್ಲಿ ಮಯಾಂಕ್ ಅವರ ಅವಗಾಹನೆಗಾಗಿ ಮಾತ್ರ ಎಂಬ ಸೂಚನೆ ಕಂಡಿತು.
ಆ ಬರಹವನ್ನು ಮೊದಲ ಸಾರಿ ನೋಡಿದಾಗ ಮಾಮೂಲು ಸೂಚನೆಯಂತಷ್ಟೆ ಕಂಡಿತು. ಆದರೆ ಎರಡನೆ ಮೂರನೆ ಸಾರಿ ನೋಡಿದಾಗ ಅದರಲ್ಲೇನೊ ವಿಶೇಷ ಇರಬೇಕೆನಿಸತೊಡಗಿತು. ಅವಧೂತ್ ತನಗೆ ಏನೊ ರಹಸ್ಯವನ್ನು ತಿಳಿಸಲು ಇಚ್ಛಿಸಿರಬಹುದೆ?
ಯೋಚಿಸಿದಂತೆಲ್ಲ ಮಯಾಂಕ್ನಿಗೆ ಅನಿಸತೊಡಗಿದ್ದು ಅಲ್ಲಿ ಅಡಗಿದ್ದ ಸೂಚನೆ ಹಿಂದಿನ ಸಂದರ್ಭಕ್ಕಾಗಿ ಅಲ್ಲ, ಈಗಿನ ತನ್ನ ಸನ್ನಿವೇಶಕ್ಕೆ ಸಂಬಂಧಿಸಿ – ಎಂದು. ಹೀಗನಿಸಿದ ಮೇಲೆ ಅದನ್ನು ಇನ್ನೂ ಗಮನವಿಟ್ಟು ಪರಿಶೀಲಿಸಿದ. ಮೇಲ್ನೋಟಕ್ಕಂತೂ ಏನೂ ಕಾಣಲಿಲ್ಲ.
ಪಕ್ಕದಲ್ಲಿಯೆ ಇದ್ದ ಎಲೆಕ್ಟ್ರಾನಿಕ್ ಮೈಕ್ರೊಸ್ಕೋಪಿನಲ್ಲಿ ಕಾಗದವನ್ನಿರಿಸಿ ಪರೀಕ್ಷಿಸತೊಡಗಿದ. ಮೊದಮೊದಲಿಗೆ ಹೆಚ್ಚಿನದೇನೂ ಕಾಣಲಿಲ್ಲ. ಆದರೆ ಸೂಚನೆಯೊಳಗಿನ ಮಯಾಂಕ್ ಹೆಸರನ್ನು ಸಮೀಪಿಸಿದಾಗ ಹೆಸರಿನ ನಡುವೆ ಏನೊ ಅಕ್ಷರಗಳು ಹುದುಗಿರುವಂತೆ ಭಾಸವಾಯಿತು. ಮೈಕ್ರೊಸ್ಕೋಪಿನಲ್ಲಿ ಇನ್ನಷ್ಟು ದೊಡ್ಡದಾಗಿ ಮಾಡಿದಾಗ ತನಗೆ ಅವಧೂತ್ ನೀಡಿದ್ದ ಸಂದೇಶ ಗೋಚರಿಸಿತು:
ಪ್ರಿಯ ಮಯಾಂಕ್-
ಈ ಸಂದೇಶ ನಿನಗೆ ತಲಪುವ ವೇಳೆಗೆ ನಾನು ಈ ಲೋಕವನ್ನು ತ್ಯಜಿಸಿರುತ್ತೇನೆ. ನಾನು ಜೀವಂತ ಇದ್ದಿದ್ದರೆ ನಿನಗೆ ಈ ಸಂದೇಶವನ್ನು ಓದುವ ಸಂದರ್ಭ ಬರುತ್ತಿರಲಿಲ್ಲ. ನೀನು ವ್ಯಾಸಂಗ ಮಾಡುತ್ತಿರುವ ದೆಹಲಿ ಐ.ಐ.ಟಿ.ಯಲ್ಲಿಯೆ ನಾನು ಹಿಂದೆ ಪ್ರೊಫೆಸರ್ ಆಗಿದ್ದೆ. ನಾನು ನಿವೃತ್ತನಾದ ಮೇಲೂ ನಿನ್ನ ಪ್ರಗತಿಯನ್ನು ಗಮನಿಸುತ್ತಿದ್ದೆ.
ಪುಸ್ತಕಲಬ್ಧ ಪರಿಜ್ಞಾನದೊಡನೆ ಅಸಾಧಾರಣ ಸಹಜ ಪ್ರತಿಭೆಯೂ ಬೆರೆತ ನಿದರ್ಶನಗಳಾಗಿ ಒಂದು ತಲೆಮಾರಿನಲ್ಲಿ ವಿರಳವಾಗಿ ಒಬ್ಬೊಬ್ಬರಷ್ಟೆ ಇರುತ್ತಾರೆ. ಅಂತಹ ಒಬ್ಬ ನೀನು. ಆದ್ದರಿಂದ ನಾನಿದ್ದ ಸ್ಥಾನವನ್ನು ಭರ್ತಿ ಮಾಡುವುದಕ್ಕೆ ನಿನ್ನನ್ನು ಕರೆಯಿಸಿಕೊಳ್ಳಲಾಗಿರುತ್ತದೆ ಎಂದು ನಾನು ಅರಿತಿದ್ದೇನೆ. ಏಕೆಂದರೆ ದಿ ಫ್ಯೂಚರ್ ಕಂಪೆನಿಯವರಿಗೆ ನಿನ್ನ ಹೆಸರನ್ನು ಸೂಚಿಸಿದ್ದುದು ನಾನೇ.
ನಿಜ ಹೇಳಬೇಕೆಂದರೆ ನಮ್ಮ ಜಗತ್ತಿಗೆ ನಿನ್ನ ಆವಶ್ಯಕತೆ ತುಂಬಾ ಇದೆ. ಮುಂದಿನ ದಿನಗಳಲ್ಲಿ ನೀನು ಜಗತ್ತಿಗೆ ಉಪಯುಕ್ತವಾದ ಅನೇಕ ಆವಿಷ್ಕರಣಗಳನ್ನು ನೀಡಬೇಕಾಗಿದೆ. ಮನಸಾ ವಾಚಾ ಕರ್ಮಣಾ ಎನ್ನುತ್ತಾರಲ್ಲ ಹಾಗೆ ನೂತನ ಸಂಶೋಧನೆ ನಿನ್ನ ಅಂತರಂಗದ ಲಕ್ಷ್ಯವೇ ಆಗಿದೆ. ನಾನು ದೀರ್ಘಕಾಲ ನನ್ನ ಸಂಶೋಧನೆ ಮಾಡುತ್ತ ಬಂದೆ. ಆದರೆ ಅದು ಹೆಚ್ಚುಕಡಮೆ ಮುಕ್ತಾಯಗೊಂಡು ಅದನ್ನು ಪ್ರಯೋಗಿಸಿ ನೋಡಿದಾಗ ಇದು ಎಷ್ಟು ಹಾನಿಗೆ ದಾರಿಮಾಡಬಹುದೆಂಬುದು ನನಗೆ ಮನವರಿಕೆಯಾಯಿತು.
ನನ್ನ ಸಂಶೋಧನೆಯಿಂದ ಜಗತ್ತಿಗೆ ಒಳ್ಳೆಯದಾಗುವುದಕ್ಕಿಂತ ಕೆಟ್ಟದಾಗುವುದೇ ಹೆಚ್ಚು ಸಂಭವವೆಂದು ನನಗನ್ನಿಸತೊಡಗಿತು. ನಾನು ನಿರ್ಮಿಸಿದ್ದ ಸಾಧನಗಳನ್ನೆಲ್ಲ ನಾಶಮಾಡಿಬಿಡೋಣವೆನ್ನಿಸಿತು. ಆದರೆ ಮನಸ್ಸಿನ ಮೂಲೆಯಲ್ಲಿ ನಾನು ಸಾಧಿಸಿದ್ದುದರ ಬಗೆಗೆ ಒಂದಷ್ಟು ಮೋಹ ಇದ್ದ ಕಾರಣದಿಂದ ಆಲಸ್ಯ ಮಾಡಿದೆ. ನನ್ನ ಸಾಧನೆಯನ್ನು ನಿಃಶೇಷವಾಗಿ ಧ್ವಂಸ ಮಾಡದೆಯೇ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಏಕೆನ್ನುತ್ತೀಯಾ? ನಾನು ಬದುಕಿ ಉಳಿದಲ್ಲಿ ಬಲಾತ್ಕಾರ ಮಾಡಿಯಾದರೂ ನನ್ನಿಂದ ಮಾಹಿತಿಯನ್ನು ಹೊರಕ್ಕೆ ತೆಗೆಯುವ ವಿಧಾನ ಈಗಾಗಲೆ ಮಹೇಶ್ ಮಿಸ್ತ್ರಿಗೆ ಸ್ವಾಧೀನವಾಗಿದೆ. ಅದರಿಂದಾಗಿಯೆ ಈ ಲ್ಯಾಬಿನಲ್ಲಿ ಕೆಲಸ ಮಾಡುವವರ ಸ್ಮರಣಶಕ್ತಿಯನ್ನು ಅವನು ಒತ್ತೆಯಿರಿಸಿಕೊಂಡಿರುತ್ತಾನೆ. ಒಂದು ವೇಳೆ ಯಾರಿಗಾದರೂ ಇಲ್ಲಿಯ ವಿದ್ಯಮಾನ ಸರಿಯೆನಿಸದೆ ಹೊರಕ್ಕೆ ಹೋದರೂ ಅವನ ಮೆದುಳು ಖಾಲಿಯಾಗಿರುತ್ತದೆ, ಇಲ್ಲಿಯದೇನೂ ನೆನಪಿನಲ್ಲಿ ಉಳಿದಿರುವುದಿಲ್ಲ. ಹೀಗಾಗಿ ನನ್ನ ಆವಿಷ್ಕರಣ ಪೂರ್ತಿ ಇಲ್ಲಿಯವರ ಕೈಸೇರದಿರಬೇಕಾದರೆ ನನಗೆ ಆತ್ಮಹತ್ಯೆಯೊಂದೇ ದಾರಿ. ನಾನೇಕೆ ಆತ್ಮಹತ್ಯೆ ಮಾಡಿಕೊಂಡೆನೆಂಬುದು ಈಗ ನಿನಗೆ ಸ್ಪಷ್ಟವಾಗಿರಬೇಕು.
ಈಗ ನೀನು ಮಾಡಬೇಕಾದ್ದನ್ನು ಹೇಳುತ್ತೇನೆ.
ಇಲ್ಲಿಯ ಸಂಶೋಧನೆಯಿಂದ ಜಗತ್ತಿಗೆ ಹಾನಿಯುಂಟಾಗಬಹುದೆಂದು ಹೇಳಿದೆನಲ್ಲ. ಹೀಗಾಗಿ ಇದನ್ನು ನಾಶಮಾಡಬೇಕೆಂಬುದರ ಬಗೆಗೆ ದ್ವೈಧವೇನಿಲ್ಲ. ಆದರೆ ಅದು ಅಷ್ಟು ಸುಲಭವಲ್ಲ. ಏಕೆಂದರೆ ನೀನು ಅದನ್ನು ನಾಶಮಾಡಿದರೆ ಈ ಕ್ಯಾಂಪಸಿನಿಂದ ಹೊರಗೆ ಹೋಗಲಾರೆ. ನಿನ್ನನ್ನು ಕೊಲ್ಲುವುದಕ್ಕೂ ಮಹೇಶ್ ಮಿಸ್ತ್ರಿ ಎಷ್ಟು ಮಾತ್ರವೂ ಹಿಂದೆಗೆಯುವುದಿಲ್ಲ. ನಿನ್ನ ಹೆಂಡತಿ ದೇವಯಾನಿಯೂ ಉಳಿಯುವುದಿಲ್ಲ. ನಿಮ್ಮಿಬ್ಬರ ಮದುವೆಯಾದದ್ದು ನನಗೆ ಹೇಗೆ ತಿಳಿಯಿತೆಂದು ಗಲಿಬಿಲಿಗೊಳ್ಳಬೇಡ. ಮುಂದೆ ನಡೆಯಲಿರುವುದನ್ನೂ ನಾನು ನೋಡಬಲ್ಲೆನೆಂಬುದನ್ನು ಮರೆಯಬೇಡ.
ನಾನು ಸಾಯುವುದಾದರೂ ಪರವಾಗಿಲ್ಲ, ಇದನ್ನು ನಾಶಮಾಡಿಯೆ ತೀರುತ್ತೇನೆ – ಎಂದುಕೊಳ್ಳುತ್ತೀಯಾ? ಅದೂ ಸರಿದಾರಿಯಲ್ಲ. ಏಕೆಂದರೆ ದೇಶಕ್ಕೆ ಮುಂದೆ ನಿನ್ನಿಂದ ಸಲ್ಲಬೇಕಾದ ಸೇವೆ ಬಹಳ ಇದೆ. ನಿನ್ನ ಬದುಕಿಗೆ ತುಂಬಾ ಬೆಲೆಯಿದೆ.
ನಿನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಬಹುದು. ಇಷ್ಟೆಲ್ಲ ತಿಳಿದೂ ನಾನು ನಿನ್ನನ್ನು ಏಕೆ ಈ ಇಕ್ಕುಳದಲ್ಲಿ ಸಿಲುಕಿಸಿದೆ – ಎಂದು ನೀನು ಪ್ರಶ್ನಿಸಬಹುದು. ಅದಕ್ಕೆ ಕಾರಣವೆಂದರೆ – ನಾನೀಗ ಸೂಚಿಸುವ ಕೆಲಸವನ್ನು ನೀನು ಮಾತ್ರ ಮಾಡಬಲ್ಲೆ. ನಾನು ಮಾಡಿದುದನ್ನು ನೇರ್ಪಡಿಸಬಲ್ಲವನು ನೀನೇ. ನೀನು ಈಗ ಮಾಡಬೇಕಾದ್ದೇನೆಂದರೆ – ನಾನು ಭಗ್ನಗೊಳಿಸಿರುವ ಸಾಧನಗಳನ್ನು ಮೊದಲು ದುರಸ್ತುಗೊಳಿಸಬೇಕು. ಅದಕ್ಕೆ ನಾನು ಸಹಾಯ ಮಾಡುತ್ತೇನೆ. ಎಲೆಕ್ಟ್ರಾನಿಕ್ ಚಿಪ್ಗಳ ಬ್ಲೂಪ್ರಿಂಟ್ಗಳನ್ನು ನಿನಗೆ ಲಭ್ಯವಾಗಿಸುತ್ತೇನೆ. ಎಂದರೆ ಅವು ಈ ಹಿಂದೆ ಸಿದ್ಧಪಡಿಸಿದ್ದ ಚಿಪ್ಗಳ ಬ್ಲೂಪ್ರಿಂಟ್ಗಳಲ್ಲ, ಅವನ್ನು ಬದಲಾಯಿಸಲಾಗಿದೆ. ನಾನು ಈಗ ಕಲ್ಪಿಸಿರುವ ಚಿಪ್ಸ್ ಅಳವಡಿಸಿದ ಉಪಕರಣಗಳು ಎರಡೇ ಎರಡು ಸಾರಿ ಮಾತ್ರ ಭವಿಷ್ಯದಲ್ಲಾಗುವುದನ್ನು ಸೂಚಿಸಬಲ್ಲವು: ಮೊದಲ ಸಾರಿ ನೀನು ಭವಿಷ್ಯವನ್ನು ಕಾಣುವುದಕ್ಕಾಗಿ; ಎರಡನೆಯ ಸಾರಿ ಮಹೇಶ್ ಮಿಸ್ತ್ರಿ ಉಪಕರಣಗಳು ಕೆಲಸ ಮಾಡುತ್ತವೋ ಇಲ್ಲವೋ ಎಂದು ಪರೀಕ್ಷಿಸಹೊರಟಾಗ. ಆಗಲೂ ಅವು ಕೆಲಸ ಮಾಡುತ್ತವೆ. ಆದರೆ ಮೂರನೆಯ ಸಾರಿ ಅವು ಕೆಲಸ ಮಾಡುವುದಿಲ್ಲ, ಲಾಕ್ ಆಗಿಬಿಡುತ್ತವೆ. ಆ ವೇಳೆಗೆ ನೀನು ಹೊರಕ್ಕೆ ಹೋಗಿರುತ್ತೀ.
ಇನ್ನೊಂದು ಸಂಗತಿ ನೆನಪಿನಲ್ಲಿರಲಿ. ಇಲ್ಲಿಂದ ಬಿಡುಗಡೆಗೊಳಿಸುವುದಕ್ಕೆ ಮೊದಲು ನಿನ್ನ ಮತ್ತು ದೇವಯಾನಿಯ ಇಲ್ಲಿಯ ಅವಧಿಯ ಸ್ಮರಣೆಯಷ್ಟನ್ನೂ ಮಹೇಶ್ ಮಿಸ್ತ್ರಿ ಅಳಿಸಿಹಾಕಿರುತ್ತಾನೆ. ಆದ್ದರಿಂದ ನಿಮಗೆ ಯಾವುದರ ನೆನಪಿನ ತುಣುಕೂ ಉಳಿದಿರುವುದಿಲ್ಲ. ಯಾವುದೇ ಮಾಹಿತಿಯನ್ನು ಗುರುತುಹಾಕಿದ ಕಾಗದಗಳನ್ನು ನೀವು ಹೊರಕ್ಕೊಯ್ಯಲು ಅವಕಾಶ ಇರುವುದಿಲ್ಲ. ಈ ಸಮಸ್ಯೆಯನ್ನು ತಟಾಯಿಸುವ ಉಪಾಯ ನನಗೂ ತಿಳಿಯದು. ಆದರೆ ನಿನ್ನ ಪ್ರತಿಭೆಯಲ್ಲಿ ನನಗೆ ವಿಶ್ವಾಸವಿದೆ.
ಈಗ ನಾನು ನಿನಗೆ ಕೊಡಬೇಕಾದ್ದು ಎಲೆಕ್ಟ್ರಾನಿಕ್ ಚಿಪ್ಸ್ಗಳ ಬ್ಲೂಪ್ರಿಂಟ್ಗಳನ್ನು. ಅವನ್ನು ಮಿನಿಯೇಚರ್ಗೊಳಿಸಿ ಈ ಹಾಳೆಯ ಹಿಂಭಾಗದಲ್ಲಿ ಮೈಕ್ರೊಡಾಟ್ ರೂಪದಲ್ಲಿ ನಿಕ್ಷೇಪಗೊಳಿಸಿದ್ದೇನೆ.
ಮುಂದಿನವರಿಗಾಗಿ ಜಗತ್ತನ್ನು ಕ್ಷೇಮವಾಗಿ ಉಳಿಸುವುದು ಈಗ ನಿನ್ನ ಕೈಯಲ್ಲಿದೆ.
ಇಂತು, –
ಅವಧೂತ್.
ಕಾಗದವನ್ನು ತಿರುಗಿಸಿ ಹಿಂಬದಿಯನ್ನು ನೋಡಿದಾಗ ಮಯಾಂಕ್ಗೆ ಅಲ್ಲಿದ್ದ ಮೈಕ್ರೊಡಾಟ್ಗಳು ಕಂಡೂ ಕಾಣದಷ್ಟು ಸೂಕ್ಷ್ಮ ಆಕಾರದಲ್ಲಿ ಗೋಚರಿಸಿದವು.
[೨೦೨೨ ಫೆಬ್ರುವರಿ ಸಂಚಿಕೆಯಲ್ಲಿ ಮುಂದುವರಿಯುತ್ತದೆ.]