ಇಲ್ಲಿಯವರೆಗೆ…
ಮಹೇಶ್ ಮಿಸ್ತ್ರಿ ದೇಶದಲ್ಲಿಯೆ ದೊಡ್ಡ ಉದ್ಯಮಪತಿ ಎನಿಸಿದ್ದ. ಎಂದೂ ಹಣಕ್ಕೆ ಕೊರತೆಯಾಗದ ರಕ್ಷಣಾ ಇಲಾಖೆಯ ಪ್ರಮುಖ ಕಾಂಟ್ರಾಕ್ಟುಗಳನ್ನೆಲ್ಲ ತೆಕ್ಕೆಗೆ ಹಾಕಿಕೊಂಡಿದ್ದ. ಭವಿಷ್ಯದಲ್ಲಿ ಇಡೀ ಜಗತ್ತನ್ನೇ ತನ್ನ ಕೈಗೊಂಬೆಯಾಗಿಸಬಲ್ಲ ಮಟ್ಟದ ಅತಿ ಪ್ರೌಢ ಪ್ರಯೋಗಗಳಿಗಾಗಿ ನಾಗಪುರದ ಸಮೀಪದಲ್ಲಿ ಸಯನ್ಸ್ ಸಿಟಿಯೊಂದನ್ನು ನಿರ್ಮಿಸಿದ್ದ. ಅಲ್ಲಿ ಪ್ರಯೋಗನಿರತರಾಗಿದ್ದ ಮೇಧಾವಿ ಅವಧೂತ್ ಕೊನೆಯ ಹಂತದಲ್ಲಿ ಅದೇಕೊ ಜಿಹಾಸೆ ತಳೆದು ಸಂಶೋಧನೆಯನ್ನು ಮುಂದುವರಿಸಲಾರೆನೆಂದು ಹೇಳಿ ಆತ್ಮಹತ್ಯೆ ಮಾಡಿಕೊಂಡರು. ಶೋಧಕಾರ್ಯವನ್ನು ಪೂರ್ಣಗೊಳಿಸಲು ದೆಹಲಿ ಐ.ಐ.ಟಿ.ಯ ಪ್ರತಿಭಾವಂತ ವಿದ್ಯಾರ್ಥಿ ಮಯಾಂಕ್ನನ್ನು ಕ್ಯಾಂಪಸ್ ಇಂಟರ್ವ್ಯೂನಲ್ಲಿ ಮಿಸ್ತ್ರಿ ಆಯ್ಕೆ ಮಾಡಿದ; ಊಹಿಸಲೂ ಆಗದ ಪ್ರಮಾಣದ ಸಂಭಾವನೆಯನ್ನು ಮುಂಗಡವಾಗಿ ನೀಡಿದ.
ನೂರು ಕೋಟಿ ರೂಪಾಯಿಯ ಚೆಕ್ ಹೀಗಿರುತ್ತದೆಯೆ? – ಎಂದ ಶಿವಾಜಿ, ವಿಸ್ಮಯದಿಂದ. ಅವನೂ ಧನವಂತನೇ ಆದರೂ ಇಷ್ಟು ದೊಡ್ಡ ಮೊತ್ತ ಚೆಕ್ಕಿನ ಮೂಲಕ ಹಸ್ತಾಂತರವಾಗುವುದನ್ನು ಹಿಂದೆಂದೂ ನೋಡಿರಲಿಲ್ಲ. ಮಯಾಂಕ್ ಮತ್ತು ಶಿವಾಜಿ ಚೆಕ್ಕನ್ನು ಖಾತೆಗೆ ಜಮೆ ಮಾಡಲು ಬ್ಯಾಂಕಿಗೆ ಹೊರಡಲನುವಾದರು.
ಮೊತ್ತ ಎಷ್ಟೇ ಇದ್ದರೂ ಚೆಕ್ ಇರುವುದು ಹೀಗೆಯೇ! ಎಂದ, ಮಯಾಂಕ್.
ಅದು ಸರಿಯೆಂದುಕೋ. ಆದರೆ ನೂರು ಕೋಟಿ ರೂಪಾಯಿಯ ಚೆಕ್ಕನ್ನು ಹಿಂದೆ ಯಾವಾಗಲಾದರೂ ನೀನು ನೋಡಿದ್ದೆಯಾ? ನಾನಂತೂ ಇದೇ ಮೊದಲ ಸಾರಿ ಇಂತಹದನ್ನು ನೋಡುತ್ತಿರುವುದು ಎಂದ ಶಿವಾಜಿ, ಇನ್ನೊಮ್ಮೆ ಚೆಕ್ಕನ್ನು ಪರಿಶೀಲಿಸುತ್ತ.
ಇದಕ್ಕೂ ಹೆಚ್ಚಿನ ಹಣ ನಿನ್ನ ತಂದೆಯವರ ಹತ್ತಿರ ಇರುತ್ತದಲ್ಲವೆ!
ಇರಬಹುದು. ಆದರೆ ಅವರ ವ್ಯವಹಾರಗಳಲ್ಲಿ ಹೆಚ್ಚಿನವು ಲೆಕ್ಕದ ಪುಸ್ತಕಗಳಿಂದ ದೂರವಾಗಿ ನಗದಿನ ರೂಪದಲ್ಲಿ ಇರುತ್ತವಾದ್ದರಿಂದ ಇಷ್ಟು ದೊಡ್ಡ ಮೊತ್ತದ ಚೆಕ್ಕನ್ನು ನೋಡುವ ಸಂದರ್ಭ ಬಂದಿರಲಿಲ್ಲ ಎಂದ, ಶಿವಾಜಿ.
ಇಷ್ಟು ಹೊತ್ತಿಗೆ ಇಬ್ಬರೂ ಬ್ಯಾಂಕ್ ತಲಪಿದ್ದರು. ಹಿಂದೆಯಾದರೆ ಅವರು ಬ್ಯಾಂಕಿಗೆ ಬರುತ್ತಿದ್ದುದು ಹೆಚ್ಚೆಂದರೆ ಐದೋ ಹತ್ತೋ ಸಾವಿರ ಡ್ರಾ ಮಾಡುವುದಕ್ಕಷ್ಟೆ. ಬೇರೆ ವ್ಯವಹಾರಗಳು ಅವರಿಗೆ ಅಷ್ಟಾಗಿ ಪರಿಚಿತವಿರಲಿಲ್ಲ. ಕೌಂಟರಿನಲ್ಲಿದ್ದಾಕೆಯನ್ನು ಕೇಳಿದರು – ಚೆಕ್ಕನ್ನು ರೆಮಿಟ್ ಮಾಡುವುದು ಎಲ್ಲಿ?
ಇಲ್ಲಿ ಕೊಡಿ ಎಂದವಳೇ ಅದನ್ನು ಕೈಗೆ ತೆಗೆದುಕೊಂಡಳು. ಚೆಕ್ಕಿನ ಮೊತ್ತ ನೋಡಿ ಹೌಹಾರಿದಳು.
ಇದು ನಿಮ್ಮಿಬ್ಬರಲ್ಲಿ ಯಾರದು? – ಕೇಳಿದಳು.
ಬಹುಶಃ ನೀವು ಕೂಡಾ ಇಷ್ಟು ಮೊತ್ತದ ಚೆಕ್ಕನ್ನು ಹಿಂದೆ ನೋಡಿರಲಿಕ್ಕಿಲ್ಲವೇನೊ ಎಂದ, ಶಿವಾಜಿ.
ಚೆಕ್ ಇರುವುದು ನನ್ನ ಹೆಸರಿನಲ್ಲಿ ಎಂದ ಮಯಾಂಕ್, ಆಕೆಯ ಪ್ರಶ್ನೆಗೆ ಉತ್ತರಿಸುತ್ತ.
ಇದನ್ನು ಕೊಟ್ಟಿರುವವರು ಯಾರು – ಏತಕ್ಕಾಗಿ?
ಅದು ನನ್ನ ಸಂಬಳದ ಅಡ್ವಾನ್ಸ್.
ಚೆಕ್ಕಿನ ಮೊತ್ತದಲ್ಲಿ ಕೈತಪ್ಪಿ ಹಲವು ಸೊನ್ನೆಗಳನ್ನು ಹೆಚ್ಚುವರಿಯಾಗಿ ಸೇರಿಸಿರಬಹುದೇನೊ ಎಂದು ಅನುಮಾನ ಬಂದು ಕೇಳಿದೆ.
ನಾವು ನಿಮಗೆ ಮೋಸಗಾರರಂತೆ ಕಾಣುತ್ತಿದ್ದೇವೆಯೆ? ಎಂದ ಶಿವಾಜಿ, ವಿಚಲಿತನಾಗಿ.
ನಿಮ್ಮನ್ನು ನೋಡಿದರೆ ಬಹಳವೆಂದರೆ ಐದು ಸೊನ್ನೆಗಳಿಗಿಂತ ಹೆಚ್ಚು ಇರುವ ಸಂಭವ ಕಡಮೆಯೆನಿಸಿ ಕೇಳಿದೆ.
ವ್ಯಕ್ತಿಯ ಚಹರೆ ನೋಡಿ ಸೊನ್ನೆಗಳು ಎಷ್ಟೆಂದು ತೀರ್ಮಾನಿಸಲು ಆಗುತ್ತದೆಯೆ ಮೇಡಂ? ಬಹುಶಃ ಮೂರು-ನಾಲ್ಕು ಸೊನ್ನೆಗಳೇ ನಿಮ್ಮ ಮಟ್ಟದಲ್ಲಿ ಬರುತ್ತವೇನೊ! ಎಂದ ಶಿವಾಜಿ, ಸ್ವಲ್ಪ ಗಡಸು ಧ್ವನಿಯಲ್ಲಿ.
ನೀವು ದಯವಿಟ್ಟು ಮ್ಯಾನೇಜರವರನ್ನು ಭೇಟಿಯಾಗಿರಿ ಎಂದು ಆಕೆ ಚೆಕ್ಕನ್ನು ಹಿಂದಿರುಗಿಸಿ ತನ್ನ ಇತರ ಕೆಲಸಗಳಲ್ಲಿ ಮುಳುಗಿದಳು.
ಮ್ಯಾನೇಜರ್ ಚೇಂಬರಿನಲ್ಲಿ ಯಾರೊ ಇಬ್ಬರು-ಮೂವರೊಡನೆ ಮಾತುಕತೆಯಲ್ಲಿ ತೊಡಗಿದ್ದ. ಶಿವಾಜಿ-ಮಯಾಂಕ್ರಿಗೆ ಕಾಯುವಂತೆ ಸನ್ನೆ ಮಾಡಿದ.
ನಮ್ಮ ರೀತಿ ಇದಕ್ಕೆ ಸರಿಹೋಗದು, ಸ್ವಲ್ಪ ತಡಿ – ಎನ್ನುತ್ತ ಶಿವಾಜಿ ಅಟೆಂಡರನ ಕೈಯಲ್ಲಿ ಚೆಕ್ಕನ್ನಿರಿಸಿ ಇದರ ಬಗ್ಗೆ ಮಾತನಾಡಲು ಬಂದಿದ್ದಾರೆಂದು ಸಾಹೇಬರಿಗೆ ತಿಳಿಸು ಎಂದು ಅವನನ್ನು ಒಳಕ್ಕೆ ಕಳಿಸಿದ.
ಮ್ಯಾನೇಜರ್ ಚೆಕ್ಕನ್ನು ಗಮನಿಸಿ ನೋಡಿದೊಡನೆ ಬೇರೆಯೆ ವ್ಯಕ್ತಿಯಾದ. ದೊಡ್ಡ ಹೆಜ್ಜೆ ಇಡುತ್ತ ಹೊರಕ್ಕೆ ಬಂದವನೇ ತಡಬಡಿಸುತ್ತ ಇವರಿಬ್ಬರನ್ನು ಚೇಂಬರಿನೊಳಕ್ಕೆ ಕರೆದೊಯ್ದ. ಅಲ್ಲಿ ಕುಳಿತಿದ್ದವರಿಗೆ ನೀವು ದಯವಿಟ್ಟು ಆಮೇಲೆ ಬನ್ನಿ, ಈಗ ತುರ್ತು ಕೆಲಸವಿದೆ ಎಂದು ಹೇಳಿ ಅವರನ್ನು ಸಾಗಹಾಕಿದ. ಅವರು ಜಾಗ ಖಾಲಿ ಮಾಡಿದರು. ಮ್ಯಾನೇಜರ್ ಇವರಿಬ್ಬರನ್ನು ಕುಳಿತುಕೊಳ್ಳುವಂತೆ ಹೇಳಿ ಚೆಕ್ಕಿನಲ್ಲಿದ್ದ ಫಾರೀನ್ ಬ್ಯಾಂಕಿಗೆ ಫೋನ್ ಮಾಡಿದ. ಖಾತೆದಾರರ ಅಕೌಂಟಿನಲ್ಲಿ ಅಷ್ಟು ಹಣ ಸಿದ್ಧವಾಗಿ ಇರುವುದೆಂದು ಆಚಿನವರು ಹೇಳಿರಬೇಕು.
ಪರೀಕ್ಷಿಸುವವನಂತೆ ಶಿವಾಜಿ ಕೇಳಿದ – ನೀವು ಇದುವರೆಗೆ ಗರಿಷ್ಠ ಎಷ್ಟು ಸೊನ್ನೆಗಳಿರುವ ಚೆಕ್ಕನ್ನು ನೋಡಿರಬಹುದು?
ಒಂಬತ್ತು ಸೊನ್ನೆಗಳ ಚೆಕ್ಕನ್ನು ಇದುವರೆಗೆ ನೋಡಿರಲಿಲ್ಲ ಎಂದ ಮ್ಯಾನೇಜರ್ ಪ್ರಾಮಾಣಿಕವಾಗಿ.
ಈಗ ಚೆಕ್ಕನ್ನು ನಮ್ಮ ಖಾತೆಗೆ ಹಾಕಿದರೆ ಖಾತೆಯಲ್ಲಿ ಹಣ ಯಾವಾಗ ಸೇರಬಹುದು? ಎಂದು ಕೇಳಿದ, ಶಿವಾಜಿ.
ಎರಡು ದಿನಗಳೊಳಗೆ ನಿಮ್ಮ ಫೋನ್ ನಂಬರಿಗೆ ನಮ್ಮಿಂದ ಮೆಸೇಜ್ ಬರುತ್ತದೆ – ಎಂದ ಮ್ಯಾನೇಜರ್, ಕೂಲ್ ಡ್ರಿಂಕ್ಸ್ ತೆಗೆದುಕೊಳ್ಳುವಂತೆ ಕೋರುತ್ತ.
ಹಾಗಾದರೆ ನಾಳಿದ್ದು ಬರುತ್ತೇವೆ ಎಂದ, ಶಿವಾಜಿ.
ನೀವು ಮತ್ತೆ ಬರುವ ಆವಶ್ಯಕತೆ ಇಲ್ಲ. ಹೇಳಿದೆನಲ್ಲ, ನೀವು ಇರುವ ಕಡೆಗೇ ಮೆಸೇಜ್ ಬರುತ್ತದೆ.
* * *
ಬ್ಯಾಂಕಿನಿಂದ ಹೊರಬಿದ್ದ ಮೇಲೆ ಶಿವಾಜಿಯ ಮನಸ್ಸನ್ನು ಬೇರೆಡೆಗೆ ತಿರುಗಿಸುವ ಉದ್ದೇಶದಿಂದ ಮಯಾಂಕ್ ಕೇಳಿದ – ಕೆಲವು ದಿನ ಹಿಂದೆ ಬಂದಿದ್ದ ನಿಮ್ಮ ಸೋದರಸೊಸೆಯೊ ಏನೊ – ಅವಳು ಏನು ಕೆಲಸ ಮಾಡುತ್ತಾಳೆ?
ಮದುವೆ ಆದ ಮೇಲೆ ಗಂಡನನ್ನು ಹೇಗೆ ನಿಯಂತ್ರಣ ಮಾಡಬೇಕೆಂದು ಕೋಚಿಂಗ್ ತರಗತಿಗೆ ಸೇರಿದ್ದಾಳೆ.
ಕೆಲವು ಕ್ಷಣ ಕಳೆದು ಶಿವಾಜಿ ಮುಂದುವರಿಸಿದ –
ಇಷ್ಟಾಗಿ ಯಾವ ಹೆಣ್ಣಿನ ಬಗ್ಗೆ ಮಾತನಾಡ ಹೊರಟರೂ ನೀನು ನಿರ್ಲಿಪ್ತನಾಗಿ ಇದ್ದುಬಿಡುತ್ತೀಯಲ್ಲ! ನಿನ್ನ ಕಥೆ ಏನು? ಯಾವುದಾದರೂ ಹೆಣ್ಣಿನ ಕಡೆಗೆ ನಿನ್ನ ದೃಷ್ಟಿ ಬಿದ್ದಿದೆಯಾ ಹೇಗೆ? ಕೇಳಿದಾಗೆಲ್ಲ ಬೇರೇನೊ ಮಾತು ತೆಗೆಯುತ್ತೀ.
ಹಲವು ಸಲ ವಿಷಯ ತಪ್ಪಿಸಿದ್ದುದರಿಂದ ಈಗ ಮಯಾಂಕ್ ಒಪ್ಪಿಕೊಂಡ – ಹೌದು – ಒಂದು ಹೆಣ್ಣು ಇದೆ.
ಹೇಳು – ಯಾರು ಅದು?
ಅವಳ ಹೆಸರು ದೇವಯಾನಿ… ಎಂದು ಮಯಾಂಕ್ ಮನ ಬಿಚ್ಚಿ ಹೇಳತೊಡಗಿದ.
ಅದೊಂದು ಪ್ರಮುಖ ದಿನಪತ್ರಿಕೆಯ ಕಚೇರಿ. ಆ ಪತ್ರಿಕೆ ಪ್ರತಿ ದಿನ ಸುಡೋಕು ಅಂಕಣವನ್ನು ಪ್ರಕಟಿಸುತ್ತಿತ್ತು; ವರ್ಷಕ್ಕೊಮ್ಮೆ ಸುಡೋಕು ಪಜಲ್ ಸ್ಪರ್ಧೆಯನ್ನೂ ನಡೆಸುತ್ತಿತ್ತು – ತಾಲೂಕು ಮಟ್ಟದಿಂದ ರಾಷ್ಟ್ರಮಟ್ಟದವರೆಗೆ. ಒಮ್ಮೆ ಅದರಲ್ಲಿ ಭಾಗವಹಿಸಲು ಮಯಾಂಕ್ ಹೋದ. ವಾಸ್ತವವಾಗಿ ಅವನಿಗೆ ಅದರಲ್ಲಿ ವಿಶೇಷ ಆಸಕ್ತಿಯೇನೂ ಇರಲಿಲ್ಲ. ಆ ವೇಳೆಗೇ ತನ್ನ ರೋಬೋವನ್ನು ಅವನು ಆವಿಷ್ಕರಿಸಿದ್ದು ಆಗಿತ್ತು. ಚಾಂಪಿಯನ್ಗಳ ಸಹವಾಸ ಹೇಗಿರುತ್ತದೊ ನೋಡೋಣವೆಂಬ ಕುತೂಹಲದಿಂದ ಅಲ್ಲಿಗೆ ಹೋಗಿದ್ದನಷ್ಟೆ. ಎದುರಿಗೆ ಅಗಲವಾದ ಪೆಯಿಂಟಿಂಗ್ ಕ್ಯಾನ್ವಾಸ್ ಇರಿಸಿಕೊಂಡು ಅದರ ಮೇಲೆ ರೋಬೋ ಮೂಲಕ ಸವಾಲನ್ನು ಮೂಡಿಸಿ ರೋಬೋ ಮೂಲಕವೇ ಪರಿಹಾರ ಪ್ರಕಟಿಸತೊಡಗಿದ – ಉಳಿದವರಿಗಿಂತ ಮೊದಲೇ. ರೋಬೋವನ್ನೇ ಸ್ಪರ್ಧಿಯಾಗಿ ಪರಿಗಣಿಸಲು ಆಯೋಜಕರು ಒಪ್ಪಿದರು. ಆ ಸನ್ನಿವೇಶದಲ್ಲಿಯೆ ದೇವಯಾನಿಯನ್ನು ಮೊತ್ತಮೊದಲಿಗೆ ಮಯಾಂಕ್ ಗಮನಿಸಿದ್ದು. ಅವಳಲ್ಲಿ ಏನೊ ಒಂದು ವಿಶೇಷ ಮಾಧುರ್ಯ, ಆಕರ್ಷಣೆ ಕಂಡಿತು. ಕಣ್ಣ ನೋಟದಲ್ಲಿ ತೀಕ್ಷ್ಣತೆ ಇತ್ತು.
ಸ್ಪರ್ಧಿಯನ್ನು ಹಿಂದಿಕ್ಕಿ ದೇವಯಾನಿ ಹನ್ನೆರಡು ನಿಮಿಷಗಳಲ್ಲೇ ಪರಿಹಾರ ಹೇಳಿದಳಾದರೂ ಚಪ್ಪಾಳೆ ಬೀಳಲಿಲ್ಲ. ಕಾರಣ – ಮಯಾಂಕ್ ಮೂರೇ ನಿಮಿಷಗಳಲ್ಲಿ ಮುಗಿಸಿದ್ದ!
ನಿರಾಶೆ ತಡೆದುಕೊಳ್ಳಲಾಗದೆ ದೇವಯಾನಿ ಇದೇನು ಆಭಾಸ? ಮನುಷ್ಯರ ಸ್ಪರ್ಧೆಯ ನಡುವೆ ಯಂತ್ರ ಪ್ರವೇಶಿಸಬಹುದೆ? ಎಂದು ಆಕ್ಷೇಪವೆತ್ತಿದಳು.
ಇದರಲ್ಲಿ ನನ್ನ ತಪ್ಪೇನೂ ಇಲ್ಲ ಮೇಡಂ. ಆಯೋಜಕರು ಅನುಮತಿ ನೀಡಿ ಆಮಂತ್ರಿಸಿದಂತೆ ವೇದಿಕೆಗೆ ಬಂದೆನಷ್ಟೆ ಎಂದ, ಮಯಾಂಕ್.
ದೇವಯಾನಿ ಪಟ್ಟು ಬಿಡಲಿಲ್ಲ. ಯಂತ್ರಗಳ ವಿರುದ್ಧ ಮನುಷ್ಯರು ಹೇಗೆ ಗೆದ್ದಾರು? ಅದು ಇರಲಿ, ಮನುಷ್ಯರನ್ನು ಹೀಗೆ ಕೀಳಾಗಿಸುವುದು ಸರಿಯೆ? ಇಷ್ಟಕ್ಕೂ ರೋಬೋ ತನಗೆ ಕೊಟ್ಟ ಪ್ರೋಗ್ರಾಂನಂತಷ್ಟೆ ಕೆಲಸ ಮಾಡಬಲ್ಲದು, ಅಲ್ಲವೆ? ನೋಡೋಣ. ಶಕ್ತಿ ಇದ್ದರೆ ಸುಡೋಕು-ಎಕ್ಸ್ ವಿಧಾನದಲ್ಲಿ ನನ್ನೊಡನೆ ಸ್ಫರ್ಧಿಸಲಿ. ಆಗಲೂ ರೋಬೋ ಗೆದ್ದರೆ ನಾನು ಸೋತೆನೆಂದು ಒಪ್ಪಿಕೊಳ್ಳುತ್ತೇನೆ.
ಮಯಾಂಕ್ ಏನು ಹೇಳುವುದೆಂದು ಯೋಚಿಸುತ್ತಿರುವಷ್ಟರಲ್ಲಿಯೆ ಆಯೋಜಕರು ಆ ವಿಧಾನದ ಸ್ಪರ್ಧೆಗೆ ಏರ್ಪಾಡು ಮಾಡಿದರು.
ಅದರಲ್ಲಿ ರೋಬೋ ವಿಫಲಗೊಂಡಿತು; ದೇವಯಾನಿಗೇ ಗೆಲವು ದಕ್ಕಿತು. ಕರತಾಡನದ ಸುರಿಮಳೆಯಾಯಿತು. ಮಯಾಂಕ್ ಕೂಡಾ ಚಪ್ಪಾಳೆ ತಟ್ಟದಿರಲಿಲ್ಲ.
ಮಾರನೆ ದಿನ ಮಯಾಂಕ್ ಅಲ್ಲಿಯ ರೆಸ್ಟುರಾಂಟಿಗೆ ಹೋದಾಗ ಅಲ್ಲಿ ಸ್ನೇಹಿತರೊಡನೆ ದೇವಯಾನಿ ಕುಳಿತಿದ್ದುದರಿಂದ ಅವಳು ತನ್ನ ಜೊತೆಗಾರರಿಗೆ ಮಯಾಂಕ್ನನ್ನು ಪರಿಚಯ ಮಾಡಲೇಬೇಕಾಯಿತು.
ಅದಾದ ಎರಡು ದಿನಗಳು ಕಳೆದ ಮೇಲೆ ದೇವಯಾನಿ ಸಿನೆಮಾ ನೋಡಲು ಹೋದಾಗ ಅಲ್ಲಿಯೂ ಮಯಾಂಕ್ ಕಣ್ಣಿಗೆ ಬಿದ್ದಾಗ ಅವನು ತನ್ನನ್ನು ಉದ್ದೇಶಪೂರ್ವಕ ಬೆನ್ನಟ್ಟುತ್ತಿದ್ದಾನೆಯೆ ಎಂಬ ಸಂದೇಹ ಮೂಡಿ ನೇರವಾಗಿ ಕೇಳಿಯೇಬಿಟ್ಟಳು.
ನೀವು ಈ ಸಿನೆಮಾ ನೋಡಬೇಕೆಂದು ಅಂದುಕೊಂಡದ್ದು ಯಾವಾಗ? – ಎಂದು ಪ್ರಶ್ನಿಸಿದ, ಮಯಾಂಕ್. ಅದು ಪೂರ್ವನಿಶ್ಚಿತವಲ್ಲವೆಂದೂ ಅಂದುಕೊಂಡಂತೆ ಬಂದುದಾಗಿಯೂ ಹೇಳಿದಳು, ದೇವಯಾನಿ.
ಹಾಗಾದರೆ ನಾನು ಯೋಜನೆ ಮಾಡಿಕೊಂಡು ನಿಮ್ಮ ಹಿಂದೆ ಬೀಳುವುದು ಹೇಗೆ ಸಾಧ್ಯ? – ಎಂದ, ಮಯಾಂಕ್.
ಮೂರನೆಯ ದಿನ ತಾಯಿಯೊಡನೆ ಸಮೀಪದ ದೇವಸ್ಥಾನಕ್ಕೆ ಹೋದ ದೇವಯಾನಿ ಆ ಪ್ರಾಂಗಣದಲ್ಲಿ ಮಯಾಂಕ್ ಕಾಣದಿರಲು ಸ್ವಲ್ಪ ದೂರದ ಇನ್ನೊಂದು ದೇವಸ್ಥಾನಕ್ಕೆ ಹೋದಳು – ತಾಯಿ ಅಚ್ಚರಿಗೊಂಡರೂ.
ಗುಡಿಯ ಒಳಹೊಕ್ಕಾಗ ಅಲ್ಲಿ ಮಯಾಂಕ್ ಪ್ರತ್ಯಕ್ಷನಾಗಿದ್ದ. ದೇವಯಾನಿಯ ತಾಯಿಗೆ ತನ್ನನ್ನು ಪರಿಚಯ ಮಾಡಿಕೊಂಡ. ಅವನನ್ನು ನೋಡಿದೊಡನೆ ಅವನು ದೇವಯಾನಿಗೆ ಹೊಂದಿಕೆಯಾಗಬಲ್ಲ ಎಂಬ ಅಸ್ಪಷ್ಟ ಭಾವನೆ ಅವರಲ್ಲಿ ಉಂಟಾಯಿತು.
ನನ್ನ ಹೆಸರು ಮಯಾಂಕ್. ದೆಹಲಿ ಐ.ಐ.ಟಿ.ಯಲ್ಲಿ ಫೈನಲ್ ಸೆಮಿಸ್ಟರ್ ಓದುತ್ತಿದ್ದೇನೆ. ಎರಡು ದಿನ ಹಿಂದೆಯಷ್ಟೆ ದೇವಯಾನಿಯವರ ಪರಿಚಯವಾಯಿತು. ಅಲ್ಲಿಂದೀಚೆಗೆ ಒಂದೆರಡು ಸಲ ಆಕಸ್ಮಿಕವಾಗಿ ಭೇಟಿಯಾಯಿತು.
ಮಿಕ್ಕ ಸಂಗತಿಗಳಿಗಿಂತ ಮಯಾಂಕ್ ದೆಹಲಿ ಐ.ಐ.ಟಿ.ಯಲ್ಲಿರುವುದು ಕೇಳಿ ದೇವಯಾನಿಯ ತಾಯಿ ಹೆಚ್ಚು ಪ್ರಭಾವಗೊಂಡರು.
ದೇವಯಾನಿ ಕೇಳಿದಳು – ಇದೇನೊ ವಿಚಿತ್ರವಾಗಿದೆ. ನಾನು ಎಲ್ಲೆಲ್ಲಿಗೆ ಹೋಗುತ್ತೇನೆಂಬುದು ನಿನಗೆ ಹೇಗೆ ಗೊತ್ತಾಗುತ್ತಿದೆಯೆಂಬುದು ನನಗೆ ಅರ್ಥವಾಗುತ್ತಿಲ್ಲ.
ಇದರಲ್ಲಿ ದೊಡ್ಡ ರಹಸ್ಯ ಏನಿದೆ! ಆದರೂ ನಾಳೆ ಸೇರಿದಾಗ ಮಾತನಾಡೋಣ.
ನಾಳೆ ನಾನು ಮನೆ ಬಿಟ್ಟು ಹೊರಗೆಲ್ಲೂ ಹೋಗುತ್ತಿಲ್ಲ.
ಅವಳ ಮಾತನ್ನು ಕೇಳಿ ತಾಯಿ ಅಚ್ಚರಿಗೊಂಡರು. ಅದೇಕೆ ಟ್ರೈನಿಂಗಿಗೆ ಹೋಗುತ್ತಿಲ್ಲವೆಂದು ವಿಚಾರಿಸಿದರು. ದೇವಯಾನಿ ಹೋಗುತ್ತಿದ್ದುದು ಪೈಲಟ್ ಟ್ರೈನಿಂಗ್ ಕೋರ್ಸಿಗೆ.
ಹೋಗುತ್ತಿಲ್ಲ. ಮಯಾಂಕ್ ನೋಟದಲ್ಲಿ ಅದೇನೊ ನಿರೀಕ್ಷೆ ಕಂಡ ಹಾಗೆ ಆಗುತ್ತಿದೆ. ಅವನನ್ನು ಕೊಡವಿಕೊಳ್ಳಬೇಕಾಗಿದೆ.
ಸಂಜೆಯ ವೇಳೆಗೆ ಮನೆಯಲ್ಲೇ ಕುಳಿತಿದ್ದ ದೇವಯಾನಿಯನ್ನು ತಾಯಿ ಕೇಳಿದರು – ಏಕೆ ಹೀಗೆ ಕುಳಿತಿದ್ದೀ? ಒಂದಷ್ಟು ಮುಖ ಕೈಕಾಲು ತೊಳೆದುಕೊಂಡು ಫ್ರೆಷ್ ಆಗಬಾರದೆ?
ದೂರದಿಂದಲೂ ಮಾತನಾಡಿಸಲು ಅವನಿಗೆ ಅವಕಾಶ ಕೊಡಬಾರದೆಂದುಕೊಂಡಿದ್ದೇನೆ, ಆ ಯೋಚನೆಯಲ್ಲಿಯೆ ಇದ್ದೇನೆ.
ನನಗೇನೊ ಹುಡುಗ ಯೋಗ್ಯವಾಗಿ ಕಾಣುತ್ತಿದ್ದಾನೆ. ಓದಿನಲ್ಲಿಯೂ ಮುಂದಿದ್ದಾನೆ…
ಈ ಮಾತುಕತೆ ನಡೆದಿದ್ದಂತೆ ದೇವಯಾನಿಯ ತಂದೆ ಕಚೇರಿಯಿಂದ ಬಂದು ಮನೆ ಸೇರಿದರು. ಅವರನ್ನು ಹಿಂಬಾಲಿಸಿ ಮಯಾಂಕ್!
ಈಕೆ ನನ್ನ ಭಾರ್ಯೆ. ದೇವಯಾನಿ ನಮ್ಮ ಮಗಳು ಎಂದು ಪರಿಚಯ ಹೇಳಿದರು, ತಂದೆ.
ಗೊತ್ತಾಯಿತು ಸಾರ್. ನಾಲ್ಕು ದಿನ ಹಿಂದೆಯೆ ದೇವಯಾನಿಯವರ ಪರಿಚಯ ಆಯಿತು. ಆಮೇಲೆ ತಾಯಿಯವರ ಪರಿಚಯವೂ ಆಗಿದೆ ಎಂದ, ಮಯಾಂಕ್.
ಹೀಗೆ ಆರಂಭಗೊಂಡ ಪರಿಚಯ ವಿವಾಹದಲ್ಲಿ ಪರ್ಯವಸಾನಗೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ.
ನೋಡುನೋಡುತ್ತಿದ್ದಂತೆ ನಾಗಪುರಕ್ಕೆ ತೆರಳಬೇಕಾದ ದಿನ ಬಂದುಬಿಟ್ಟಿತ್ತು.
ಎಲ್ಲವೂ ಸರಿಯೇ. ಆದರೆ ಮದುವೆಯಾಗುತ್ತಿದ್ದಂತೆಯೆ ನಮ್ಮ ಮಗಳನ್ನೂ ಕರೆದುಕೊಂಡು ಬೇರೆ ಊರಿಗೆ ಹೊರಟು ನಿಂತಿದ್ದೀಯಲ್ಲಪ್ಪ ಎಂದರು ಚಿಂತಿತರಾದ ದೇವಯಾನಿಯ ತಾಯಿ.
ಕೂಡಲೇ ಹೊರಡದೆ ಬೇರೆ ದಾರಿಯಿಲ್ಲ. ಇಷ್ಟಕ್ಕೂ ನಾಗಪುರ ಅಷ್ಟೊಂದು ದೂರವೇನಲ್ಲವಲ್ಲ! ಎಂದ ಮಯಾಂಕ್, ಸಮಾಧಾನಪಡಿಸುತ್ತ.
ಯೋಜಿತವಾಗಿದ್ದಂತೆ ಮಯಾಂಕ್-ದೇವಯಾನಿಯರನ್ನು ಕಾರಿನಲ್ಲಿ ವಿಮಾನನಿಲ್ದಾಣಕ್ಕೆ ಡ್ರಾಪ್ ಮಾಡಿದ, ಶಿವಾಜಿ.
* * *
ಪ್ರೈವೇಟ್ ಪ್ಲೇನಿನ ರನ್ವೇಗೆ ಸಮೀಪದ ಗೇಟಿನ ಹತ್ತಿರದವರೆಗೆ ಶಿವಾಜಿಯ ಕಾರು ತಲಪಿತು. ಅಲ್ಲಿಂದ ಬೇರೆ ಒಂದು ಕಾರಿನಲ್ಲಿ ವಿಮಾನವಿದ್ದಲ್ಲಿಗೆ ಹೋಗಬೇಕಾಗಿತ್ತು. ಮಯಾಂಕ್, ದೇವಯಾನಿ – ಇಬ್ಬರಿಗೂ ವಿಮಾನಪ್ರಯಾಣವೇನೂ ಹೊಸದಲ್ಲ. ಆದರೆ ಪ್ರೈವೇಟ್ ಪ್ಲೇನಿನಲ್ಲಿ ಹೋಗುತ್ತಿದ್ದುದು ಇದೇ ಮೊದಲು.
ಒಬ್ಬಳೇ ನನ್ನ ಜೊತೆಯಲ್ಲಿ ಬರುವುದಕ್ಕೆ ಇರುಸುಮುರುಸಾಗುತ್ತಿದೆಯೆ? – ಕೇಳಿದ, ಮಯಾಂಕ್.
ಹಾಗೇನಿಲ್ಲ. ಎಕ್ಸೈಟಿಂಗ್ ಆಗಿಯೆ ಇದೆ ಎಂದಳು, ದೇವಯಾನಿ. ಅವಳಿಗೆ ಮಯಾಂಕನ ಪರಿಚಯವಾಗಿ ಕೆಲವೇ ದಿನಗಳಾಗಿದ್ದರೂ ಹೊಸತನದ ಅನುಭವವೇನೂ ಆಗುತ್ತಿರಲಿಲ್ಲ; ಎಷ್ಟೋ ಸಮಯದಿಂದ ಪರಿಚಿತನಾಗಿದ್ದವನೊಡನೆ ಇದ್ದೇನೆಂದೇ ಅನ್ನಿಸುತ್ತಿತ್ತು.
ನಿನಗೇನಾದರೂ ಮನಸ್ಸಿಗೆ ತಳಮಳವೆನ್ನಿಸಿದರೆ ಸದ್ಯಕ್ಕೆ ನಿನ್ನನ್ನು ಊರಿನಲ್ಲಿಯೆ ಬಿಟ್ಟು ನಾನೊಬ್ಬನೇ ಕೆಲಸದ ಸ್ಥಳಕ್ಕೆ ಹೋಗಬೇಕಾದೀತು – ಎಂದೆಲ್ಲ ಲೆಕ್ಕ ಹಾಕುತ್ತಿದ್ದೆ.
ಮದುವೆಯಾದದ್ದು ಬೇರೆಬೇರೆಯಾಗಿ ಇರುವುದಕ್ಕಲ್ಲವಲ್ಲ!
ಈಗಲೂ ಸಮಯ ಮಿಂಚಿಲ್ಲ. ಹೊರಗಿನೆಲ್ಲ ಸಂಪರ್ಕಗಳಿಂದ ದೂರವಿರುವುದು ಕಷ್ಟವೆನಿಸಿದರೆ ನೀನು ಹೊರಗೇ ಉಳಿಯಬಹುದು. ಆದರೆ ಒಮ್ಮೆ ಪ್ರಯೋಗಾಲಯ ಆವರಣವನ್ನು ಪ್ರವೇಶಿಸಿದ ಮೇಲೆ ಯಾವುದೂ ನಮ್ಮ ಕೈಯಲ್ಲಿ ಇರುವುದಿಲ್ಲ.
ಎಲ್ಲವನ್ನೂ ಯೋಚಿಸಿಯೇ ನಾನು ತೀರ್ಮಾನ ತೆಗೆದುಕೊಂಡಿದ್ದೇನೆ. ಆದರೂ ಇಷ್ಟೊಂದು ಬಿಗಿ ಭದ್ರತೆಯ ಕೋಟೆಯೊಳಗೆ ನಡೆಯುತ್ತಿರುವುದು ಅದೆಂತಹ ಸಂಶೋಧನೆ ಎಂದು ತಿಳಿದುಕೊಳ್ಳುವ ಕುತೂಹಲ ಮಾತ್ರ ಇದೆ. ಕಂಪೆನಿಯವರು ವಿಧಿಸಿರುವ ಶರತ್ತುಗಳು ವಿಚಿತ್ರವೆನಿಸುತ್ತಿದೆ.
ಕೆಲವು ಸಂಗತಿಗಳನ್ನು ಕುರಿತು ತುಂಬಾ ಯೋಚಿಸದಿದ್ದರೆಯೇ ನೆಮ್ಮದಿಯಾಗಿರಬಹುದು! ಎಂದ, ಮಯಾಂಕ್.
ನಮ್ಮ ಮದುವೆ ಆದ ಮೇಲೆ ಬಗೆಬಗೆಯ ಶರತ್ತುಗಳೊಡಗೂಡಿದ ಈ ಕೆಲಸ ಒದಗಿಬಂದಿದ್ದಿದ್ದರೆ ಬಹುಶಃ ನಾನು ಇದಕ್ಕೆ ಅನುಮತಿಸುತ್ತಿರಲಿಲ್ಲವೇನೊ!
ಅದಕ್ಕಾಗಿಯೆ ನೀನು ಈಗಲೂ ಹಿಂದೆಯೆ ಉಳಿಯಲು ಅವಕಾಶವಿದೆಯೆಂದು ನಾನು ಹೇಳಿದ್ದು!
ಮದುವೆಯಾದ ವ್ಯಕ್ತಿ ಅಪಾಯದಲ್ಲಿರಬಹುದೆನಿಸಿದರೆ ತಾನು ಮಾತ್ರ ದೂರ ಉಳಿದು ಸುರಕ್ಷಿತವಾಗಿರಲು ಯಾರು ಇಚ್ಛೆಪಟ್ಟಾರು!
ನಾವು ಇಲ್ಲಿರುವಷ್ಟು ಸಮಯ ಹೊರಗಿನವರನ್ನು ಸಂಪರ್ಕ ಮಾಡಲು ಸಾಧ್ಯವಿಲ್ಲದಿರಬಹುದು. ಆದರೆ ನಾವು ಇಲ್ಲಿ ಇದ್ದೇವೆಂಬುದು ಅವರಿಗೆ ತಿಳಿದೇ ಇರುತ್ತದಲ್ಲ! ನಿನ್ನ ಮನೆಯವರಿಗೆ ಮಾತ್ರವಲ್ಲ. ನನಗೆ ಹತ್ತಿರದವರಾದ ಕಾಲೇಜು ಜೊತೆಗಾರರಿಗೂ ನಾವು ಇಲ್ಲಿರುವ ವಿಷಯ ತಿಳಿದಿದೆ. ನಮಗೆ ಏನಾದರೂ ಆದರೆ ಅವರಾರೂ ಸುಮ್ಮನಿರುವುದಿಲ್ಲ – ಎಂದು ದೇವಯಾನಿಗೆ ಧೈರ್ಯ ತುಂಬಿದ, ಮಯಾಂಕ್.
ಆದರೆ ಯಾವುದಕ್ಕೂ ಇತರರ ಮೇಲೆ ಅವಲಂಬಿಸುವುದನ್ನು ನಾನು ಇಷ್ಟಪಡುವುದಿಲ್ಲ – ಎಂದಳು ದೇವಯಾನಿ.
ಅದೆಲ್ಲ ಇರಲಿ. ನಾವು ಇಲ್ಲಿಗೆ ಬಂದದ್ದರಿಂದ ನಿನ್ನ ಟ್ರೈನಿಂಗ್ ಪ್ರೋಗ್ರಾಮಿಗೆ ಅಡಚಣೆ ಬಂದ ಹಾಗಾಯಿತಲ್ಲವೆ?
ದೇವಯಾನಿ ಹೆಲಿಕಾಪ್ಟರ್ ಪೈಲಟ್ ಟ್ರೈನಿಂಗ್ ಕೋರ್ಸ್ನಲ್ಲಿ ಶಿಕ್ಷಣ ಪಡೆಯುತ್ತಿದ್ದಳು.
ತೊಂದರೆಯೇನಿಲ್ಲ. ನಾವು ಹಿಂದಿರುಗಿದ ಮೇಲೆ ಎಲ್ಲಿ ನಿಲ್ಲಿಸಿದ್ದೆವೋ. ಅಲ್ಲಿಂದ ಮತ್ತೆ ಮುಂದುವರಿಸಬಹುದು.
ಈ ಮಾತುಕತೆಯಾಗುತ್ತಿದ್ದಂತೆ ವಿಮಾನ ನಾಗಪುರ ತಲಪಿತ್ತು.
ವಿಮಾನನಿಲ್ದಾಣಕ್ಕೆ ಬಂದಿದ್ದ ಕಾರಿನಲ್ಲಿ ತಮ್ಮ ಲಗೇಜ್ ಇರಿಸಿ ಇಬ್ಬರೂ ಕುಳಿತರು. ಇವರು ಸೇರಬೇಕಾಗಿದ್ದ ಸಯನ್ಸ್ ಸಿಟಿ ಊರಿನಿಂದ ಐವತ್ತು ಕಿಲೊಮೀಟರ್ ದೂರವಿತ್ತು. ದ್ವಾರದಲ್ಲಿ ಇವರನ್ನು ಬರಮಾಡಿಕೊಳ್ಳಲು ಸಿಸೋದಿಯ ಕಾದಿದ್ದ.
ನಿಮ್ಮ ಲಗೇಜನ್ನು ಸಿಬ್ಬಂದಿಯವರು ತರುತ್ತಾರೆ. ಬನ್ನಿ, ನಾವು ಹೋಗೋಣ.
ಸೆಕ್ಯುರಿಟಿ ಕಕ್ಷದಲ್ಲಿದ್ದವರು ಇಬ್ಬರ ಮೊಬೈಲ್ ಫೋನುಗಳನ್ನೂ ಕೇಳಿ ತೆಗೆದುಕೊಂಡರು.
ನೀವು ಊರಿಗೆ ವಾಪಸಾಗುವಾಗ ಫೋನುಗಳನ್ನು ನಿಮಗೆ ಹಿಂದಿರುಗಿಸುತ್ತಾರೆ. ಹೇಗೂ ಇಲ್ಲಿ ಇರುವಷ್ಟು ಕಾಲ ಅವುಗಳ ಆವಶ್ಯಕತೆಯೇನೂ ಇರುವುದಿಲ್ಲ – ಎಂದ, ಸೆಕ್ಯುರಿಟಿ ಅಧಿಕಾರಿ.
ಇಬ್ಬರನ್ನೂ ಕಾರಿನಲ್ಲಿ ಅವರ ವಸತಿಗೆ ಕರೆದೊಯ್ದ, ಸಿಸೋದಿಯ.
ದಾರಿಯಲ್ಲಿ ದೇವಯಾನಿ ಮಯಾಂಕ್ನ ಕೈಯನ್ನು ತನ್ನ ಸೊಂಟಕ್ಕೆ ತಾಗಿಸಿದಳು. ಮಯಾಂಕ್ ಪ್ರಶ್ನಾರ್ಥಕವಾಗಿ ನೋಡಿದಾಗ ತನ್ನಲ್ಲಿ ಇನ್ನೊಂದು ಸೆಲ್ಫೋನ್ ಇರುವುದಾಗಿ ಹೇಳಿದಳು. ಏನು ಮಾಡುವುದಕ್ಕೆ? ಎಂಬಂತೆ ಮಯಾಂಕ್ ಹುಬ್ಬೇರಿಸಿದಾಗ ಅವಳು ಬೇರೆಯವರೊಡನೆ ಮಾತನಾಡಬಹುದು, ಅವಶ್ಯವಿದ್ದಾಗ ಫೋಟೊಗಳನ್ನೂ ತೆಗೆಯಬಹುದು ಎಂದು ಕಿವಿಯಲ್ಲಿ ಹೇಳಿದಳು.
ಮಯಾಂಕ್ ಕೆಲಸ ಮಾಡಬೇಕಾಗಿದ್ದ ಪ್ರಯೋಗಾಲಯ ಮಿಕ್ಕ ಕಟ್ಟಡಗಳಿಂದ ದೂರವಾಗಿ ಪ್ರತ್ಯೇಕವಾಗಿತ್ತು. ಇವರ ವಸತಿ ಅಲ್ಲಿಗೆ ಹತ್ತಿರದಲ್ಲಿ ಇದ್ದಿತು. ವಸತಿಯಲ್ಲಿ ಎಲ್ಲ ಸೌಕರ್ಯಗಳೂ ಇದ್ದವು. ಹಿಂಭಾಗದಲ್ಲಿ ಸಣ್ಣ ತೋಟ, ಈಜುಕೊಳ ಕೂಡಾ ಇದ್ದವು.
ವಸತಿಯ ದಿವಾನಖಾನೆಯಲ್ಲಿ ಎಲ್ಲರೂ ಕುಳಿತು ಕಾಫಿ ಸೇವಿಸಿದ್ದಾದ ಮೇಲೆ ಸಿಸೋದಿಯ ಕೆಲಸದ ಒಪ್ಪಂದ ಪತ್ರಗಳನ್ನು ಮಯಾಂಕ್ನ ಮುಂದಿರಿಸಿದ. ಇಬ್ಬರೂ ಮತ್ತೊಮ್ಮೆ ಅಷ್ಟನ್ನೂ ಓದಿದರು. ಸಾರಾಂಶ: ಮುಂದಿನ ಮೂರು ತಿಂಗಳಲ್ಲಿ ಇಲ್ಲಿ ನಡೆದಿರುವ ಸಂಶೋಧನೆಯ ಯಾವ ವಿವರವಾದರೂ ಹೊರಜಗತ್ತಿಗೆ ಬಯಲಾದ ಪಕ್ಷದಲ್ಲಿ ಮಯಾಂಕ್ ತನಗೆ ಸಂದಿರುವ ಸಂಭಾವನೆಯ ಎರಡರಷ್ಟು ಮೊತ್ತವನ್ನು ಪೆನಾಲ್ಟಿ-ದಂಡವಾಗಿ ಕಂಪೆನಿಗೆ ಸಲ್ಲಿಸಬೇಕು; ದಂಡ ಕಟ್ಟಲಾಗದಿದ್ದಲ್ಲಿ ಕ್ರಿಮಿನಲ್ ಚರ್ಯೆಗಳನ್ನು ಕೈಗೊಳ್ಳುವುದಾಗುತ್ತದೆ.
ಈ ಶರತ್ತು ಮೊದಲೇ ತಿಳಿದಿತ್ತಾದ ಕಾರಣ ಮಯಾಂಕ್ಗೆ ಆಶ್ಚರ್ಯವೇನಾಗಲಿಲ್ಲ; ಮರುಮಾತಾಡದೆ ಒಪ್ಪಂದ ಪತ್ರಕ್ಕೆ ಸಹಿ ಮಾಡಿದ. ದೇವಯಾನಿಯ ಮುಖದಲ್ಲಿ ಸ್ವಲ್ಪ ಗಾಬರಿಯ ಛಾಯೆ ಇಲ್ಲದಿರಲಿಲ್ಲ. ಆದರೂ ಈ ಕೆಲಸದಿಂದ ದೊರೆಯುವ ಸಂಭಾವನೆ ಮಯಾಂಕ್ಗೆ ಅನಿವಾರ್ಯವಾಗಿತ್ತೆಂದು ಅವಳು ಗ್ರಹಿಸಿದ್ದಳು.
ಒಪ್ಪಂದ ಪತ್ರ, ಸಹಿ – ಎಲ್ಲವನ್ನೂ ಸಿಸೋದಿಯ ಇನ್ನೊಮ್ಮೆ ಪರಿಶೀಲಿಸಿ ತೆಗೆದಿರಿಸಿಕೊಂಡು ಹೇಳಿದ:
ಮಿಸ್ಟರ್ ಮಯಾಂಕ್, ಇಲ್ಲಿಯ ನಿಬಂಧನೆಗಳೆಲ್ಲವನ್ನೂ ಮಿಸ್ತ್ರಿ ಸಾಹೇಬರು ತಿಳಿಸಿಯೇ ಇದ್ದಾರೆ. ಆದರೂ ನೆನಪು ಮಾಡುತ್ತಿದ್ದೇನೆ. ನೀವು ಇಲ್ಲಿ ಮೂರು ತಿಂಗಳು ಇರುತ್ತೀರಿ. ನಿಮಗೆ ಒಪ್ಪಿಸಿರುವ ಕೆಲಸಕ್ಕೆ ಅಷ್ಟು ಸಮಯವೂ ಬೇಕಾಗಲಾರದೆಂದು ನಾವು ಬಲ್ಲೆವು. ಆದ್ದರಿಂದ ಮೂರು ತಿಂಗಳಿನಿಂದ ಆಚೆಗೆ ನಿಮ್ಮನ್ನು ಇಲ್ಲಿ ಉಳಿಸಿಕೊಳ್ಳುವ ಉದ್ದೇಶ ನಮಗೆ ಇಲ್ಲ. ಮೂರು ತಿಂಗಳು ಆದ ಮೇಲೆ ಈ ಅವಧಿಯ ನಿಮ್ಮ ಜ್ಞಾಪಕವಷ್ಟನ್ನೂ ಅಳಿಸಿಹಾಕಲಾಗುತ್ತದೆಂಬುದನ್ನೂ ತಿಳಿಸಲಾಗಿದೆ. ನಿಮ್ಮ ಸಂದರ್ಶನ ನಡೆದಾಗ ನೀವು ಒಬ್ಬರೇ ಇಲ್ಲಿಗೆ ಬರುತ್ತೀರಿ ಎಂದುಕೊಂಡಿದ್ದೆವು. ಆದರೆ ನೀವು ಪತ್ನಿಯ ಸಮೇತ ಬಂದಿದ್ದೀರಿ. ಇದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಮೂರು ತಿಂಗಳು ಮುಗಿದಾಗ ಮೆಮೊರಿ ವೈಪ್ ಪ್ರಕ್ರಿಯೆಗೆ ನಿಮ್ಮಾಕೆಯೂ ಒಳಪಡಬೇಕಾಗುತ್ತದೆ. ಅದಕ್ಕೆ ನಿಮ್ಮಾಕೆ ಒಪ್ಪಿದರೆ ಮಾತ್ರ ಇಲ್ಲಿ ಇರಲು ಅವಕಾಶವಾಗುತ್ತದೆ. ಇಲ್ಲವಾದಲ್ಲಿ ಅವರು ಈಗಲೇ ಇಲ್ಲಿಂದ ಹೋಗಬೇಕಾಗುತ್ತದೆ. ಇದು ಏಕೆ ಕಡ್ಡಾಯವೆಂಬುದನ್ನು ನೀವು ಸುಲಭವಾಗಿ ಊಹಿಸಬಲ್ಲಿರಿ – ಎಂದುಕೊಂಡಿದ್ದೇನೆ. ಗಂಡ-ಹೆಂಡತಿಯ ನಡುವೆ ಸಹಜವಾಗಿ ನಡೆಯುವ ಮಾತುಕತೆಗೆ ನಿಯಂತ್ರಣ ವಿಧಿಸುವುದು ಯುಕ್ತವೂ ಅಲ್ಲ, ಸಾಧ್ಯವೂ ಅಲ್ಲ… ಈಗ ಹೇಳಿ. ನಮ್ಮ ಶರತ್ತು ನಿಮಗೆ ಸಮ್ಮತವೆ?
ದೇವಯಾನಿಯೇ ನಕ್ಕು ಉತ್ತರಿಸಿದಳು – ನಿಮ್ಮ ಶಂಕೆ ಸರಿಯಾಗಿಯೇ ಇದೆ. ಮಯಾಂಕ್ ಅವರೇ ಮೆಮೊರಿ ವೈಪ್ ಪ್ರಕ್ರಿಯೆಗೆ ಒಪ್ಪಿಕೊಂಡ ಮೇಲೆ ನಾನು ಅಭ್ಯಂತರ ಹೇಳಲು ಏನು ಕಾರಣ ಇರುತ್ತದೆ?
ಎಲ್ಲವೂ ಇತ್ಯರ್ಥವಾದ ಹಾಗಾಯಿತು. ನೀವು ಇವೊತ್ತು ವಿಶ್ರಮಿಸಿಕೊಳ್ಳಿ. ನಾಳೆಯಿಂದ ಕೆಲಸ ಅರಂಭಿಸಬಹುದು – ಎಂದ, ಸಿಸೋದಿಯ.
ನಾನು ಇವೊತ್ತೇ ಲ್ಯಾಬರಟರಿಯನ್ನು ಒಮ್ಮೆ ನೋಡೋಣವೆಂದುಕೊಂಡಿದ್ದೆ – ಎಂದ, ಮಯಾಂಕ್.
ಅದು ನಿಮ್ಮ ಇಷ್ಟಕ್ಕೆ ಬಿಟ್ಟದ್ದು… ಇವೊತ್ತಿನಿಂದ ಲ್ಯಾಬ್ ನಿಮ್ಮದೇ. ನೀವು ಬಯಸಿದಾಗ ಅಲ್ಲಿಗೆ ಹೋಗಬಹುದು. ಇದು ಮೊದಲ ಸಾರಿ ಆದ್ದರಿಂದ ನಾನೂ ಬರುತ್ತೇನೆ. ಮೊದಲಿಗೆ ಸೆಕ್ಯುರಿಟಿ ಆಫೀಸರ್ ವಿಜಯಸಿಂಗ್ ನಿಮಗೆ ಕೆಲವು ವಿವರಗಳನ್ನು ತಿಳಿಸುತ್ತಾರೆ – ಎಂದ, ಸಿಸೋದಿಯ.
ವಿಜಯಸಿಂಗ್ ಹೇಳತೊಡಗಿದ – ಇದು ಹೈ ಸೆಕ್ಯುರಿಟಿ ಜೋನ್ ಆಗಿರುವುದರಿಂದ ಇಲ್ಲಿ ಫೋನ್ಗಳು ಕೆಲಸ ಮಾಡದಂತೆ ಜ್ಯಾಮರ್ಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿಯೆ ಪ್ರವೇಶದ್ವಾರದಲ್ಲಿಯೆ ನಿಮ್ಮ ಫೋನ್ಗಳನ್ನು ತೆಗೆದುಕೊಂಡದ್ದು. ನಿಮ್ಮ ವಸತಿಯಲ್ಲಿ ಮಾತ್ರವಲ್ಲ. ಈ ಇಡೀ ಕ್ಯಾಂಪಸಿನೊಳಗೇ ಎಲ್ಲಿಯೂ ಟೆಲೆವಿಶನಿನಲ್ಲಿ ಹೊರಗಿನ ಪ್ರಸಾರಗಳು ಬರುವಂತಿಲ್ಲ, ದಿನಪತ್ರಿಕೆಗಳೂ ಬರುವುದಿಲ್ಲ. ನಿಮ್ಮ ಮನರಂಜನೆಗಾಗಿ ವಿಶೇಷ ಹೋಮ್ ಥಿಯೇಟರನ್ನು ಏರ್ಪಡಿಸಲಾಗಿದೆ, ಬೇಕೆನಿಸಿದಲ್ಲಿ ಅದರಲ್ಲಿ ಆಯ್ದ ವಿಡಿಯೋಗಳನ್ನು ನೀವು ವೀಕ್ಷಿಸಬಹುದು.
ಆದರೆ ಸಂಶೋಧನೆಯ ಯಾವುದೊ ಆವಶ್ಯಕತೆಗಳಿಗೆ ಇಂಟರ್ನೆಟ್ ಸಂಪರ್ಕ ಬೇಕಾಗಬಹುದಲ್ಲವೆ? – ಎಂದ, ಮಯಾಂಕ್.
ನಮ್ಮ ಅಂದಾಜಿನಂತೆ ನಿಮ್ಮ ಕೆಲಸಕ್ಕೆ ಇಂಟರ್ನೆಟ್ ಬೇಕಾಗಲಾರದು. ಆದರೂ ನಿಮಗೆ ಆವಶ್ಯಕವೆನಿಸಿದಲ್ಲಿ ಲ್ಯಾಪ್ಟಾಪನ್ನು ತಂದುಕೊಡುತ್ತೇವೆ. ಅದನ್ನು ನಮ್ಮ ಎದುರಿನಲ್ಲಿ ಬಳಸಬಹುದು.
ಮಯಾಂಕ್ ಮರುಮಾತಾಡದೆ ಮೌನವಾದ.
ಇನ್ನೊಂದು ವಿಷಯ – ಎಂದು ವಿಜಯಸಿಂಗ್ ಮುಂದುವರಿಸಿದ – ನೀವು ತಂದ ಲಗೇಜ್ ನಮ್ಮಲ್ಲಿ ಸುರಕ್ಷಿತವಾಗಿದೆ. ನೀವು ಆ ಆವರಣದಲ್ಲಿ ಇರುವಷ್ಟು ಕಾಲ ನಿಮಗೆ ಏನೇ ಬೇಕಾದರೂ ಇಲ್ಲಿಯ ಕ್ಯಾಂಪಸ್ ಸೂಪರ್ಬಜಾರಿನಿಂದ ಪಡೆದುಕೊಳ್ಳಬಹುದು – ಹಣ ಕೊಡಬೇಕಾಗಿಲ್ಲ.
ಆದರೆ ನಮ್ಮ ಲಗೇಜಿನಲ್ಲಿ ನಮ್ಮ ಹಲವು ಪ್ರೈವೇಟ್ ವಸ್ತುಗಳು ಇವೆಯಲ್ಲ… ಎಂದು ಹೇಳಹೊರಟಳು, ದೇವಯಾನಿ.
ಗೊತ್ತು ಮೇಡಂ. ಬಟ್ಟೆ, ಗಡಿಯಾರ – ಹೀಗೆ ನಿಮಗೆ ಏನೇ ಬೇಕಾದರೂ ನೀವು ಇಲ್ಲಿ ಒದಗಿಸಲಾಗುವುದನ್ನೇ ಬಳಸಬೇಕಾಗುತ್ತದೆ. ಹೊರಗಿನ ಯಾವುದೇ ವಸ್ತುಗಳ ಬಳಕೆಗೆ ಕ್ಯಾಂಪಸಿನ ಒಳಗಡೆ ಅನುಮತಿ ಇಲ್ಲ. ಅದು ಇಲ್ಲಿಯ ನಿಯಮ. ಇಲ್ಲಿಯ ಪ್ರಾಜೆಕ್ಟ್ ಮುಗಿದು ನೀವು ಹಿಂದಿರುಗುವಾಗ ನಿಮ್ಮ ಸ್ವಂತ ವಸ್ತುಗಳಷ್ಟನ್ನೂ ಒಯ್ಯಬಹುದು ಎಂದ, ವಿಜಯಸಿಂಗ್.
ಆಯಿತು. ನಾವು ನಿಮ್ಮ ನಿಯಮಗಳನ್ನೆಲ್ಲ ಪಾಲಿಸುತ್ತೇವೆ.
ಹಾಗಾದರೆ ನೀವು ಬಚ್ಚಿಟ್ಟುಕೊಂಡಿರುವ ಸೆಲ್ಫೋನನ್ನೂ ಇತ್ತ ಕೊಡಿರಿ.
ದೇವಯಾನಿ ಮರುಮಾತಾಡದೆ ಉಡುಪಿನೊಳಗಿನಿಂದ ತನ್ನ ಸೆಲ್ಫೋನನ್ನು ತೆಗೆದಿತ್ತಳು.
ಮಯಾಂಕ್ ಅಪ್ರತಿಭನಾದರೂ ಅದನ್ನು ತೋರಗೊಡದೆ ಮಾತನ್ನು ಮರೆಯಿಸಲೆಂಬಂತೆ ಇಷ್ಟಾಗಿ ನಾನು ಮಾಡಬೇಕಾದ ಕೆಲಸದ ಬಗ್ಗೆ ನೀವು ಹೇಳಲೇ ಇಲ್ಲವಲ್ಲ ಎಂದ.
ಅದೆಲ್ಲ ಮೇಡಂ ಎದುರಿನಲ್ಲೇಕೆ! ಅವರು ಹೋಗಿ ವಿಶ್ರಮಿಸಲಿ. ನಾವು ಲ್ಯಾಬ್ಗೆ ಹೋಗೋಣ. ನಿಮಗೆ ಲ್ಯಾಬನ್ನು ತೋರಿಸಿದ ಹಾಗೂ ಆಗುತ್ತದೆ, ಕೆಲಸದ ಬಗೆಗೂ ಮಾತನಾಡಬಹುದು ಎಂದ, ಸಿಸೋದಿಯ.
ಅವರಿಬ್ಬರೂ ತೆರಳಿದ ಮೇಲೆ ದೇವಯಾನಿ ಯೋಚನೆಗೊಳಗಾದಳು. ತಾನು ಉಟ್ಟ ಬಟ್ಟೆಯ ವಿನಾ ಏನೂ ಜೊತೆಯಲ್ಲಿಲ್ಲ. ಇಲ್ಲಿಯ ನಿಯಮಗಳನ್ನು ಕುರಿತು ಯೋಚಿಸಿದ ಹಾಗೆಲ್ಲ ಅವಳು ಸ್ವಲ್ಪ ಅಸ್ವಸ್ಥಳಾಗತೊಡಗಿದಳು. ಇಂದಲ್ಲ ನಾಳೆ ತಾವಿಬ್ಬರೂ ಯಾವುದೊ ಪ್ರಮಾದಕ್ಕೆ ಸಿಲುಕಬಹುದು ಎನಿಸದಿರಲಿಲ್ಲ. ತನಗಿಂತ ಮಯಾಂಕ್ ಹೆಚ್ಚು ಅಪಾಯಕ್ಕೆ ಒಳಗಾಗಬಹುದೆನಿಸಿತು. ಆದರೆ ಈ ಹಂತದಲ್ಲಿ ಮಯಾಂಕ್ನ ಮನಸ್ಸನ್ನು ಬದಲಾಯಿಸುವುದು ಸಾಧ್ಯವಿಲ್ಲದ ಮಾತು. ಕನಿಷ್ಠಪಕ್ಷ ತಾನು ಇಲ್ಲಿಯೇ ಉಳಿದರೆ ಯಾವಾಗಲೊ ಅವನಿಗೆ ಒಂದಷ್ಟು ನೆರವಾಗಬಹುದು. ತಾನು ಬಚ್ಚಿಟ್ಟುಕೊಂಡಿದ್ದ ಮೊಬೈಲಿನ ಬಗ್ಗೆ ಇಲ್ಲಿಯವರಿಗೆ ಹೇಗೆ ತಿಳಿಯಿತೆಂದು ಯೋಚಿಸುತ್ತಲೇ ಇದ್ದಳು. ಬಹುಶಃ ವಿಮಾನ ನಿಲ್ದಾಣದಲ್ಲಿ ಬಾಡಿ ಸ್ಕ್ಯಾನಿಂಗ್ ಮಾಡಿದಾಗ ತನ್ನ ಗುಟ್ಟು ಬಯಲಾಗಿರಬಹುದೆ? ಮುಂದುವರಿದಂತೆ ಇನ್ನೂ ಏನೇನು ಆಶ್ಚರ್ಯಗಳು ಎದುರಾಗಬಹುದೊ! – ಎಂದುಕೊಂಡಳು.
(ಸಶೇಷ)
ಧಾರವಾಹಿ ಭಾಗ -3
ತೆಲುಗಿನಲ್ಲಿ: ಪುಟ್ಟಗಂಟಿ ಗೋಪೀಕೃಷ್ಣ
ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ