ತೆಲುಗಿನಲ್ಲಿ: ಪುಟ್ಟಗಂಟಿ ಗೋಪೀಕೃಷ್ಣ
ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ
ಇಲ್ಲಿಯವರೆಗೆ…
ಉದ್ಯಮಪತಿ ಮಹೇಶ್ ಮಿಸ್ತ್ರಿ ಭವಿಷ್ಯದಲ್ಲಿ ಇಡೀ ಜಗತ್ತನ್ನೇ ತನ್ನ ಕೈಗೊಂಬೆಯಾಗಿಸಬಲ್ಲ ಪ್ರೌಢ ಪ್ರಯೋಗಗಳಿಗಾಗಿ ನಾಗಪುರದ ಸಮೀಪದಲ್ಲಿ ಸಯನ್ಸ್ ಸಿಟಿ ನಿರ್ಮಿಸಿದ್ದ. ಅಲ್ಲಿ ಪ್ರಯೋಗನಿರತರಾಗಿದ್ದ ಮೇಧಾವಿ ಅವಧೂತ್ ಕೊನೆಯ ಹಂತದಲ್ಲಿ ಅದೇಕೊ ಜಿಹಾಸೆ ತಳೆದು ತಾನು ಶೋಧವನ್ನು ಮುಂದುವರಿಸಲಾರೆನೆಂದು ಹೇಳಿ ಆತ್ಮಹತ್ಯೆ ಮಾಡಿಕೊಂಡರು. ಪ್ರಯೋಗವನ್ನು ಮುಂದುವರಿಸಲು ದೆಹಲಿಯ ಐ.ಐ.ಟಿ.ಯ ಪ್ರತಿಭಾವಂತ ವಿದ್ಯಾರ್ಥಿ ಮಯಾಂಕ್‌ನನ್ನು ಮಿಸ್ತ್ರಿ ನೇಮಿಸಿಕೊಂಡ. ಏತನ್ಮಧ್ಯೆ ಮಯಾಂಕ್ ವಿವಾಹವಾಯಿತು; ಪತ್ನಿ ದೇವಯಾನಿಯೊಡನೆ ಸಯನ್ಸ್ ಸಿಟಿಗೆ ಸೇರಿ ಕಾರ್ಯಾರಂಭ ಮಾಡಿದ. ಅವಧೂತ್‌ರ ವಸತಿಯಲ್ಲಿ ಮಯಾಂಕ್ ಹುಡುಕಾಡಿದಾಗ ತನ್ನನ್ನು ಉದ್ದೇಶಿಸಿ ಅವರು ರಹಸ್ಯರೀತಿಯಲ್ಲಿ ಹುದುಗಿಸಿಟ್ಟಿದ್ದ ಸಂದೇಶ ಸಿಕ್ಕಿತು. ಎರಡೇ ಎರಡು ಸಾರಿ ಭವಿಷ್ಯವನ್ನು ಸೂಚಿಸಬಲ್ಲ ತಾಂತ್ರಿಕತೆಯ ಬ್ಲೂಪ್ರಿಂಟ್‌ಗಳನ್ನು ಮಯಾಂಕ್‌ಗೆ ಅವಧೂತ್ ಲಭ್ಯವಾಗಿಸಿದ್ದರು.
ಅವಧೂತ್ ಅವರು ಬರೆದಿದ್ದ ಪತ್ರವನ್ನು ಮಯಾಂಕ್ ಓದಿ ಎರಡು ತಿಂಗಳು ಕಳೆದಿತ್ತು. ಈ ವಿಷಯವನ್ನು ಯಾರಿಗೂ ತಿಳಿಸದೆ ರಹಸ್ಯವಾಗಿರಿಸಿದ್ದ. ಆಗಿಂದಾಗ ತಾನು ಸಿದ್ಧಪಡಿಸಿದ್ದ ಒಂದೊಂದು ಎಲೆಕ್‌ಟ್ರಾನಿಕ್ ಚಿಪ್ಸ್ ಬ್ಲೂಪ್ರಿಂಟ್‌ಗಳನ್ನು ಸಿಸೋದಿಯಾನಿಗೆ ತಲಪಿಸುತ್ತಿದ್ದ. ಮಯಾಂಕ್ ಅವನ್ನು ಹೊಸದಾಗಿ ಆವಿಷ್ಕರಿಸಬೇಕಾಗಿದ್ದುದರಿಂದ ಸಮಯ ಹೆಚ್ಚು ಹಿಡಿಯುತ್ತಿದೆಯೆಂದು ಸಿಸೋದಿಯಾ ಚಿಂತೆ ವ್ಯಕ್ತಪಡಿಸಿದಾಗ ಮಯಾಂಕ್ ತಾನು ನಿಗದಿಯಾದ ಅವಧಿಯೊಳಗೆ ಕೆಲಸವನ್ನು ಮುಗಿಸುವ ಭರವಸೆ ತನಗಿರುವುದಾಗಿ ಆಶ್ವಾಸನೆ ನೀಡಿದ. ಸಿಸೋದಿಯಾ ಸಮಾಧಾನಗೊಂಡ; ಮಹೇಶ್ ಮಿಸ್ತ್ರಿಗೂ ತಿಳಿಸಿದ.
ಆದರೆ ಮಿಸ್ತ್ರಿಗೆ ಸಂತೃಪ್ತಿಯಾದಂತೆ ತೋರಲಿಲ್ಲ. “ಹಿಂದೆಯೂ ನೀನು ಹೀಗೆಯೇ ಹೇಳಿದ್ದೆ, ಸಿಸೋದಿಯಾ. ಆದರೆ ಕೊನೆಘಳಿಗೆಯಲ್ಲಿ ಅವಧೂತ್ ತಿರುಗಿಬಿದ್ದು ನಾವು ಶೋಧನೆಯನ್ನು ಮತ್ತೆ ಆರಂಭಿಸಬೇಕಾಯಿತು. ಈ ಸಾರಿಯೂ ಹಾಗೆ ಆಗುವುದಿಲ್ಲವೆನ್ನಲು ಗ್ಯಾರಂಟಿ ಏನು?” – ಎಂದ.
“ನನ್ನನ್ನು ನಂಬಿ, ಸಾರ್. ಏನಾದರೂ ಹೆಚ್ಚುಕಡಮೆಯಾದರೆ ನನ್ನದೇ ಜವಾಬ್ದಾರಿ. ಈಗ ಲ್ಯಾಬ್‌ನಲ್ಲಿ ಉತ್ಸಾಹದ ವಾತಾವರಣ ಕಾಣುತ್ತಿದೆ.”
ಹೊಸ ಸಂಶೋಧನೆಯೊಂದು ಅಂತಿಮ ಹಂತಕ್ಕೆ ಬರುತ್ತಿದೆಯೆಂಬ ಭಾವನೆ ಸಿಬ್ಬಂದಿಯಲ್ಲಿ ಉತ್ಸಾಹವನ್ನು ಮೂಡಿಸುತ್ತಿತ್ತಾದರೂ ವಾಸ್ತವವಾಗಿ ಮಯಾಂಕ್ ಮಾಡುತ್ತಿದ್ದದ್ದು ಕಡಮೆ. ಅವಧೂತ್ ತನ್ನ ವಶಕ್ಕೆ ಕೊಟ್ಟಿದ್ದ ಬ್ಲೂಪ್ರಿಂಟ್‌ಗಳನ್ನು ಹಸ್ತಾಂತರಿಸುತ್ತಿದ್ದನಷ್ಟೆ. ಉಳಿದ ಸಮಯದಲ್ಲಿ ಈ ಜೇನುಗೂಡಿನಿಂದ ಹೇಗೆ ಹೊರಬೀಳಬೇಕೆಂದು ದೇವಯಾನಿಯೊಡನೆ ಆಲೋಚಿಸುತ್ತಿದ್ದ.
* * *
ಕಡೆಗೂ ನಿಶ್ಚಿತ ದಿನ ಬಂದೇಬಿಟ್ಟಿತು. ಕಟ್ಟಕಡೆಯ ಚಿಪ್ ಅನ್ನು ಮುಖ್ಯ ಉಪಕರಣದಲ್ಲಿ ಅಳವಡಿಸಿದ್ದೂ ಆಯಿತು. ಎಂದರೆ ಯಂತ್ರದ ನಿರ್ಮಾಣದ ಕೆಲಸ ಮುಗಿದಹಾಗೆಯೇ. ಆದರೆ ಪ್ರಯೋಗಿಸಿ ನೋಡಿದರಷ್ಟೆ ಅದು ಕೆಲಸ ಮಾಡುತ್ತದೆಯೆ ಇಲ್ಲವೆ ಎಂಬುದು ಖಾತರಿಯಾಗಿ ತಿಳಿಯುವುದು? ಆದ್ದರಿಂದ ಅಂದು ಪರೀಕ್ಷೆ ಮಾಡಿ ನೋಡುವುದೆಂದು ಮಯಾಂಕ್ ನಿರ್ಧರಿಸಿದ್ದ. ಇನ್ನೊಂದು ಕಾರಣವೆಂದರೆ ಅಂದು ಸಿಸೋದಿಯಾ ಇರಲಿಲ್ಲ, ಪ್ರವಾಸ ಹೋಗಿದ್ದ. ತನ್ನ ನಿರ್ಧಾರವನ್ನು ಮಯಾಂಕ್ ಯಾರಿಗೂ ತಿಳಿಸಿರಲಿಲ್ಲ – ದೇವಯಾನಿಗೂ ಸಹ. ಎಂದಿನಂತೆ ಮಾಮೂಲು ವೇಳೆಗೆ ಲ್ಯಾಬ್ ಸೇರಿಕೊಂಡ. ಏನೋ ನೆಪ ಹೇಳಿ ರವಿಯನ್ನೂ ದತ್ತಾತ್ರೇಯನನ್ನೂ ಇನ್ನೆಲ್ಲಿಗೋ ಕಳಿಸಿದ. ಲ್ಯಾಬಿನ ಬಾಗಿಲನ್ನು ಬಂಧಿಸಿದ. ಭವಿಷ್ಯದ ಘಟನೆಗಳನ್ನು ಸೂಚಿಸುವ ಶಕ್ತಿ ಹೊಂದಿದ್ದ ಯಂತ್ರದ ಬಳಿಗೆ ಹೋದ.
ಕೆಲವು ಕ್ಷಣ ಯಂತ್ರವನ್ನೇ ದಿಟ್ಟಿಸುತ್ತ ಸ್ತಬ್ಧನಾಗಿ ನಿಂತ. ಅನಂತರ ಮನಸ್ಸನ್ನು ಗಟ್ಟಿಗೊಳಿಸಿಕೊಂಡು ಯಂತ್ರದ ಸ್ವಿಚ್‌ಗಳನ್ನು ಒಂದೊಂದಾಗಿ ಆನ್ ಮಾಡತೊಡಗಿದ. ಎರಡೂ ಅಂಗೈಗಳನ್ನು ಯಂತ್ರದ ಕನ್‌ಸೋಲಿನ ಮೇಲೆ ಇರಿಸಿದ.
ಸಜೀವಗೊಂಡಂತೆ ಯಂತ್ರದೊಳಗೆ ಸಂಚಲನಗಳುಂಟಾದವು – ಸಣ್ಣಗೆ ಗುರುಗುರು ಶಬ್ದದೊಡನೆ. ಒಂದಲ್ಲ ಎರಡಲ್ಲ, ಪೂರಾ ಎಪ್ಪತ್ತನಾಲ್ಕು ಸೂಪರ್‌ಕಂಪ್ಯೂಟರ್‌ಗಳೂ ತಮಗೆ ಆಜ್ಞಾಪಿಸಿದ ಕೆಲಸವನ್ನು ಮಾಡಲು ಆರಂಭಿಸಿದವು. ಪ್ಯಾನೆಲುಗಳಿಂದ ಅವಶ್ಯವಿದ್ದ ವಿದ್ಯುತ್ತಿನ ನಿರಂತರ ಸರಬರಾಜಿಗಾಗಿ ಟ್ರಾನ್ಸ್‌ಫಾರ್ಮರುಗಳು ಮೊದಲೇ ಏರ್ಪಟ್ಟಿದ್ದವು. ಆದರೂ ಅಗಾಧ ಪ್ರಮಾಣದ ವಿದ್ಯುತ್ತು ಬೇಕಾಗಿದ್ದುದರಿಂದ ಆಗಾಗ ಗ್ರಿಡ್‌ನಲ್ಲಿ ವಿಚ್ಛೇದ ಉಂಟಾಗಿ ಒಂದೆರಡು ಕ್ಷಣಗಳಾದ ಮೇಲೆ ಪೂರ್ವಸ್ಥಿತಿಗೆ ಮರಳಿ ಮತ್ತೆ ಮುಂದುವರಿಯುತ್ತಿತ್ತು. ಇದೆಲ್ಲ ಮಯಾಂಕ್‌ಗೆ ಪೂರ್ತಿ ಅವಗಾಹನೆಗೆ ಬಂದಿರಲಿಲ್ಲ. ಎದುರಿಗಿದ್ದ ಸ್ಕ್ರೀನಿನ ಕಡೆಗೆ ನೋಡುತ್ತ ಕುಳಿತಿದ್ದ. ಕೆಲ ಕ್ಷಣಗಳಾದ ಮೇಲೆ ಸ್ಕ್ರೀನಿನಲ್ಲಿ ಏನೇನೊ ಬಗೆಬಗೆಯ ದೃಶ್ಯಗಳು ಕಾಣತೊಡಗಿದವು. ಮೊದಮೊದಲು ಅಸ್ಪಷ್ಟವಾಗಿದ್ದ ಅವು ಕ್ರಮೇಣ ಪ್ರಖರಗೊಂಡವು.
ಅಲ್ಲಿ ಕಂಡ ಒಂದು ದೃಶ್ಯದಲ್ಲಿ ಆಪರೇಷನ್ ಥಿಯೇಟರಿನಂತಹ ಕೋಣೆಯೊಂದರಲ್ಲಿ ಪಕ್ಕಪಕ್ಕದ ಕುರ್ಚಿಗಳಲ್ಲಿ ತಾನೂ ದೇವಯಾನಿಯೂ ಹಿಂದಕ್ಕೊರಗಿ ಕುಳಿತಿದ್ದರು. ಇಬ್ಬರ ತಲೆಯ ಮೇಲೂ ಕಿರಣಗಳನ್ನು ಚಿಮ್ಮಿಸುತ್ತಿದ್ದ ಹೆಲ್ಮೆಟಿನಂತಹ ಪರಿಕರಗಳು ಸಂಚಲಿಸುತ್ತಿದ್ದವು. ಸಯನ್ಸ್ ಸಿಟಿಯಿಂದ ತಾವಿಬ್ಬರೂ ಹೊರಬೀಳುವುದಕ್ಕೆ ಮೊದಲು ತಮ್ಮ ಮೆದುಳುಗಳೊಳಗಿನ ಮೆಮೊರಿಯಷ್ಟನ್ನೂ ಅಳಿಸಿಹಾಕಲಾಗುತ್ತಿದೆಯೆಂದು ಮಯಾಂಕ್‌ಗೆ ಅರಿವಾಯಿತು. ಮುಂದಿನ ದೃಶ್ಯದಲ್ಲಿ ಇಬ್ಬರನ್ನೂ ಸಿಸೋದಿಯಾ ಗೇಟಿನ ಬಳಿ ಬೀಳ್ಕೊಡುತ್ತಿದ್ದ. ಇವರನ್ನೊಯ್ಯಲು ಕಾರು ಸಿದ್ಧವಾಗಿ ನಿಂತಿತ್ತು. ಕಾರು ವಿಮಾನನಿಲ್ದಾಣದ ಕಡೆಗೆ ಧಾವಿಸಿತು.
ದೆಹಲಿಯಲ್ಲಿ ವಿಮಾನದಿಂದಿಳಿದು ಇಬ್ಬರೂ ಮೊದಲು ದೇವಯಾನಿಯ ಮನೆಗೆ ತೆರಳಿದರು. ಕಾರು ವೇಗವಾಗಿ ಚಲಿಸುತ್ತಿತ್ತು.
ಆದರೆ ಹೋಗುತ್ತಿದ್ದಂತೆ ತಮ್ಮನ್ನು ಯಾರೋ ಹಿಂದಿನಿಂದ ತಳ್ಳುತ್ತಿರುವಂತೆ ಭಾಸವಾಯಿತು. ವಿಮಾನನಿಲ್ದಾಣ ಮತ್ತೆ ಎದುರಾದಂತೆನಿಸಿತು. ಪಯಣ ಮಾಡಿ ತಾವು ತಲಪಿದ ಊರು ಗೋವಾದಂತೆ ಕಾಣುತ್ತಿತ್ತು. ಅನಂತರ ತಾವು ಇದ್ದದ್ದು ವಿಹಾರದ ದೋಣಿಯೊಂದರಲ್ಲಿ. ಮುಂದಿನ ದೃಶ್ಯದಲ್ಲಿ ತಾವಿಬ್ಬರು ಮತ್ತು ಮಹೇಶ್ ಮಿಸ್ತ್ರಿ ಹೆಲಿಕಾಪ್ಟರೊಂದರಲ್ಲಿ ಕುಳಿತಿದ್ದರು.
ಕೆಲವೇ ನಿಮಿಷಗಳಾದ ಮೇಲೆ ಹೆಲಿಕಾಪ್ಟರಿನಲ್ಲಿ ಏನೊ ಗೊಂದಲ ಉಂಟಾಗಿ ತಾನೂ ದೇವಯಾನಿಯೂ ವೇಗವಾಗಿ ಕೆಳಕ್ಕೆ ಬೀಳುತ್ತಿದ್ದಂತೆಯೂ ನೆಲ ಸಮೀಪಿಸುತ್ತಿದ್ದಂತೆಯೂ ತೋರಿತು.
ಇಷ್ಟರಲ್ಲಿ ದೃಶ್ಯಗಳು ಮುಗಿದು ಸ್ಕ್ರೀನ್ ಖಾಲಿಯಾಗಿಬಿಟ್ಟಿತು.
ಎಂದರೆ ತನಗೆ ಕಾಣಿಸಲು ಯಂತ್ರದಲ್ಲಿ ಏನೂ ಉಳಿದಿರಲಿಲ್ಲವೆಂಬುದು ಸ್ಪಷ್ಟವಾಯಿತು ಮಯಾಂಕ್‌ಗೆ. ತನ್ನ ಬದುಕು ಹೀಗೆ ಮುಗಿಯಲಿದೆಯೆ? ಅದೆಷ್ಟು ವಿಶಿಷ್ಟ ಸಾಧನೆಗಳನ್ನು ಮಾಡಬೇಕೆಂದು ತಾನು ಕನಸು ಕಂಡಿದ್ದೆ! ದೇಶದ ಅಭಿವೃದ್ಧಿಗಾಗಿ ಏನೇನೆಲ್ಲ ತಾಂತ್ರಿಕತೆಗಳನ್ನು ನೀಡಬೇಕೆಂದುಕೊಂಡಿದ್ದೆ! ಆ ಕನಸುಗಳೆಲ್ಲ ಅರ್ಧಾಂತಕವಾದವೆನಿಸಿ ನಿರಾಶೆಯಾಯಿತು.
ಮೆಶೀನನ್ನು ‘ಆಫ್’ ಮಾಡಿ ಲ್ಯಾಬಿನ ಕಿಟಕಿಯ ಕಡೆಗೆ ಬಂದು ಹೊರಕ್ಕೆ ನೋಡುತ್ತ ನಿಶ್ಚಲವಾಗಿ ನಿಂತ. ಈ ವೇಳೆಗೆ ಕೆಲಸದ ಸಮಯ ಮುಗಿದಿತ್ತು.
ಸಯನ್ಸ್ ಸಿಟಿಯ ಆವರಣವಷ್ಟೂ ದೀಪಗಳಿಂದ ಜಗಮಗಿಸುತ್ತಿತ್ತು. ಆದರೆ ಮಯಾಂಕ್‌ಗೆ ತಿಳಿಯದ ಸಂಗತಿಯೆಂದರೆ ಅದೇ ಸಮಯದಲ್ಲಿ ವಿದ್ಯುದ್ ವ್ಯವಸ್ಥೆಯ ಮೇಲೆ ‘ಲೋಡ್’ ಮಿತಿಮೀರಿ ವಿದ್ಯುತ್ತಿನ ಸರಬರಾಜು ‘ಟ್ರಿಪ್’ ಆಗಿ ವ್ಯತ್ಯಾಸಗೊಂಡಿತ್ತು. ಇಲಾಖೆಯ ಇಂಜಿನಿಯರುಗಳು ಒಮ್ಮೆಗೇ ‘ಗ್ರಿಡ್’ನ ಮೇಲೆ ಇಷ್ಟೊಂದು ‘ಲೋಡ್’ ಹೇಗೆ ಏರ್ಪಟ್ಟಿತ್ತೆಂದು ಸೋಜಿಗಗೊಂಡರು. ಸ್ವಲ್ಪ ಸಮಯದ ತರುವಾಯ ಸರಬರಾಜು ಪೂರ್ವಸ್ಥಿತಿಗೆ ಮರಳತೊಡಗಿದುದರಿಂದ ಎಲ್ಲರೂ ನಿಶ್ಚಿಂತರಾದರು.
* * *
ಮಾರನೇ ದಿನ ಮಯಾಂಕ್ ಮತ್ತು ದೇವಯಾನಿ ಕ್ಯಾಂಪಸಿನ ಆವರಣದಲ್ಲಿ ವಾಯುವಿಹಾರದಲ್ಲಿದ್ದಾಗ ಮಯಾಂಕ್ ತಾನು ಹಿಂದಿನ ದಿನ ನಡೆಸಿದ್ದ ಕೊನೆಯ ಹಂತದ ಪರೀಕ್ಷಣೆ ಕುರಿತು ಹೇಳಿದ. ದೇವಯಾನಿ ಕೇಳಿದಳು:
“ಯಂತ್ರದಲ್ಲಿ ನಿನಗೆ ನಿಜವಾಗಿ ಭವಿಷ್ಯದಲ್ಲಾಗುವುದು ಕಂಡಿತೆ?”
“ಕಾಣಿಸಿತು.”
“ಅಲ್ಲಿ ಏನು ಕಾಣಿಸಿತೊ ಹೇಳುತ್ತೀಯಾ?”
“ವಿಶೇಷವೇನಿಲ್ಲ. ಎಲ್ಲವೂ ನಾವು ನಿರೀಕ್ಷಿಸಿದ್ದ ಹಾಗೆಯೇ. ಅವಧೂತ್ ನಮಗೆ ಮಾಡಿದ ಸಹಾಯವನ್ನು ಮರೆಯುವಂತೆಯೇ ಇಲ್ಲ. ಅವರು ನಮಗೆ ಬ್ಲೂಪ್ರಿಂಟ್‌ಗಳನ್ನು ನೀಡದೆ ಹೋಗಿದ್ದಿದ್ದರೆ ನಮ್ಮಿಂದ ಯಂತ್ರದ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ.”
“ಅದು ಸರಿಯೆ. ಆದರೆ ನನ್ನನ್ನು ಒಂದು ಸಂದೇಹ ಇನ್ನೂ ಬಾಧಿಸುತ್ತಿದೆ. ಅವಧೂತ್ ತಾವು ಅಷ್ಟು ಕಷ್ಟಪಟ್ಟು ತಯಾರಿಸಿದ್ದ ಯಂತ್ರವನ್ನು ಅದು ಇತರರ ಕೈಗೆ ಸೇರುವುದಕ್ಕೆ ಮುಂಚೆಯೇ ತಾವೇ ನಾಶ ಮಾಡಿದ್ದು ಯಾವ ಕಾರಣಕ್ಕಾಗಿ? ಹಾಗೆ ಮಾಡಿದ ಮೇಲೆ ತಮ್ಮಲ್ಲಿದ್ದ ಬ್ಲೂಪ್ರಿಂಟ್‌ಗಳನ್ನು ನಿನ್ನ ಕೈಗೆ ಮಾತ್ರ ಸಿಗುವಂತೆ ಏರ್ಪಾಟು ಮಾಡಿದ್ದು ಯಾವ ಉದ್ದೇಶದಿಂದ?”
“ನನಗೂ ಅದು ವಿಚಿತ್ರವೆನಿಸಿತ್ತು. ಆಮೇಲೆ ಯೋಚಿಸಿದಾಗ ತೋಚಿತು – ಮಹೇಶ್ ಮಿಸ್ತ್ರಿಗೆ ಅಪಾರ ಧನಬಲ ಇರುವುದರಿಂದ ಜಗತ್ತಿನ ಎಲ್ಲಿಂದಲಾದರೂ ತಜ್ಞರನ್ನು ಕರೆದುಕೊಂಡು ಬಂದು ಅವಧೂತ್ ನಾಶಮಾಡಿದ್ದ ಯಂತ್ರವನ್ನು ಪುನಃ ನಿರ್ಮಿಸುವುದು ಅಸಾಧ್ಯವಲ್ಲ. ಹಾಗೇನಾದರೂ ಆದರೆ ಅದು ಇಡೀ ಜಗತ್ತಿಗೇ ಹಾನಿಯನ್ನುಂಟು ಮಾಡಬಹುದೆಂದು ಊಹಿಸಿ ಬ್ಲೂಪ್ರಿಂಟ್‌ಗಳು ನನ್ನ ಕೈಗೆ ಮಾತ್ರ ಸಿಗುವಂತೆ ಜಾಗ್ರತೆ ವಹಿಸಿದರು. ಆದರೆ ವಿಶೇಷವೆಂದರೆ ಈ ಬ್ಲೂಪ್ರಿಂಟ್‌ಗಳಿಂದ ತಯಾರಿಸಬಹುದಾದ ಯಂತ್ರ ಎರಡು ಸಾರಿ ಮಾತ್ರ ಕೆಲಸ ಮಾಡಬಲ್ಲದು. ಹಾಗೆ ನಾವಿಬ್ಬರೂ ಈ ಕ್ಯಾಂಪಸಿನಿಂದ ಕ್ಷೇಮವಾಗಿ ಹೊರಬೀಳಲು ಅನುವಾಗುತ್ತದೆ. ನಾವು ಸುರಕ್ಷಿತವಾಗಿ ಉಳಿಯಬೇಕೆಂದೇ ಅವಧೂತ್ ಹೀಗೆ ಯೋಜನೆ ಮಾಡಿದ್ದಾರೆ.”
ಮಯಾಂಕ್ ಹೇಳಿದುದನ್ನು ಜೀರ್ಣಿಸಿಕೊಳ್ಳಲು ದೇವಯಾನಿಗೆ ಕೆಲವು ನಿಮಿಷ ಬೇಕಾಯಿತು. ಆಮೇಲೆ ಹೇಳಿದಳು:
“ನಾವು ಹೇಗೊ ಹೊರಕ್ಕೆ ಹೋದೆವೆಂದು ಇಟ್ಟುಕೊಳ್ಳೋಣ. ಆದರೆ ಆಮೇಲೆ ಯಂತ್ರ ಕೆಲಸ ಮಾಡದಿದ್ದಾಗ ಮಿಸ್ತ್ರಿ ನಮ್ಮನ್ನು ಬೆನ್ನಟ್ಟದೆ ಇರುತ್ತಾನೆಯೆ? ನೀನು ಉದ್ದೇಶಪೂರ್ವಕವಾಗಿಯೆ ಯಂತ್ರವನ್ನು ಹಾಗೆ ವಿಕಾರಗೊಳಿಸಿದ್ದೀ ಎಂದುಕೊಳ್ಳುವುದಿಲ್ಲವೆ? ಆಗ ನಿನ್ನ ಮೇಲೆ ಒತ್ತಡ ತರುವುದಿಲ್ಲವೆ? ಯಂತ್ರವನ್ನು ಬದಲಿಸಲಾರೆನೆಂದು ನೀನು ಹೇಳಿದರೂ ಅವನು ನಿನ್ನನ್ನು ಜೀವದೊರಸೆ ಬಿಟ್ಟಾನೆಯೆ? ನಾವು ಏನು ಮಾಡುವ ಸ್ಥಿತಿಯಲ್ಲಿ ಇರುತ್ತೇವೆ?”
“ಅದನ್ನೆಲ್ಲ ಕುರಿತು ನಾನೂ ಚಿಂತಿಸಿದ್ದೇನೆ. ಯಂತ್ರದಿಂದ ಭವಿಷ್ಯದ ಸುಳಿವು ಸಿಕ್ಕಿರುವುದರಿಂದ ಅದರ ಆಧಾರದ ಮೇಲೆ ನಾವು ಮುಂದಿನ ಕ್ರಮಗಳ ಬಗ್ಗೆ ಯೋಚಿಸಬೇಕಾಗುತ್ತದೆ, ಮಿಸ್ತ್ರಿಯ ಯೋಜನೆಗಳಿಗೆ ಪ್ರತಿತಂತ್ರಗಳನ್ನು ಹೂಡಬೇಕಾಗುತ್ತದೆ. ನಮಗೆ ಅದೊಂದೇ ದಾರಿ.”
ದೇವಯಾನಿಗೆ ಇಷ್ಟನ್ನು ಮಾತ್ರ ಹೇಳಿದ, ಮಯಾಂಕ್. ಹೆಲಿಕಾಪ್ಟರ್‌ನಿಂದ ನೂಕಲ್ಪಟ್ಟು ಬಿದ್ದು ತನ್ನ ಅಂತ್ಯವಾದೀತೆಂದು ಭವಿಷ್ಯಯಂತ್ರ ಸೂಚಿಸಿದ್ದುದನ್ನು ಹೇಳದೆ ಮುಚ್ಚಿರಿಸಿದ. ಮಿಸ್ತ್ರಿಯ ಹುನ್ನಾರ ಸಫಲಗೊಂಡಲ್ಲಿ ದೇವಯಾನಿಯಷ್ಟೆ ಉಳಿದಾಳೆಂದು ಹೇಳಿ ಅವಳನ್ನು ಬಾಧೆಗೆ ಒಳಪಡಿಸಲು ಮಯಾಂಕ್ ಇಚ್ಛಿಸಲಿಲ್ಲ. ಅವನು ಅಂತರ್ಮಥನದಲ್ಲಿದ್ದುದನ್ನು ಗಮನಿಸಿ ದೇವಯಾನಿ ಮಾತನ್ನು ಮುಂದುವರಿಸಲಿಲ್ಲ.
ಇಬ್ಬರೂ ವಸತಿಗೆ ಹಿಂದಿರುಗುವ ವೇಳೆಗೆ ಒಂದು ಕೋರಿಯರ್ ಅವರಿಗಾಗಿ ಕಾಯುತ್ತಿತ್ತು.
ಸಾಮಾನ್ಯವಾಗಿ ಹೊರಗಿನಿಂದ ಯಾವ ಕೋರಿಯರ್ ಆಗಲಿ ಬೇರೆ ಪತ್ರಗಳಾಗಲಿ ಮಯಾಂಕ್‌ಗೆ ತಲಪಿಸಲ್ಪಡುತ್ತಿರಲಿಲ್ಲ. ಇಲ್ಲಿಯ ನಿಯಮ ಹಾಗಿತ್ತು. ಆದರೆ ಈಗ ಬಂದಿದ್ದುದು ಒಂದು ವಿವಾಹದ ಆಮಂತ್ರಣಪತ್ರಿಕೆಯಷ್ಟೆ. ಹಾಗಾಗಿ ಇದು ತಲಪಿತ್ತು.
ಅದು ಮಯಾಂಕ್‌ನ ಆತ್ಮೀಯ ಮಿತ್ರ ಶಿವಾಜಿಯ ವಿವಾಹದ ಆಮಂತ್ರಣ. ತನ್ನ ವಿವಾಹ ಸಮೀಪಬಂಧು ಕುಟುಂಬದ ಕನ್ಯೆಯೊಡನೆ ನಿಶ್ಚಿತವಾಗಿರುವುದಾಗಿ ಶಿವಾಜಿ ಹಿಂದೆಯೇ ತಿಳಿಸಿದ್ದ. ಆದರೆ ಮದುವೆ ಇಷ್ಟು ಶೀಘ್ರವಾಗಿ ಜರುಗುತ್ತದೆಂದು ಮಯಾಂಕ್ ನಿರೀಕ್ಷಿಸಿರಲಿಲ್ಲ. ಈ ವೇಳೆಗೇ ಸ್ನೇಹಿತರೆಲ್ಲ ಸಂಭ್ರಮಿಸುತ್ತಿರಬಹುದು, ಆದರೆ ತಾನು ದೂರದ ಈ ಊರಿನಲ್ಲಿ ಇರಬೇಕಾಗಿ ಬಂದುದರ ಬಗ್ಗೆ ಮಯಾಂಕ್‌ನಿಗೆ ಬೇಸರವಾಯಿತು. ಮದುವೆಯ ದಿನಕ್ಕೆ ಇನ್ನೊಂದು ವಾರ ಮಾತ್ರ ಉಳಿದಿತ್ತು. ಮದುವೆ ಗೋವಾದಲ್ಲಿ ನಡೆಯುವುದಿತ್ತು. ಆಹ್ವಾನಿತರು ಮುಂಚಿತವಾಗಿ ತಮ್ಮ ಭಾಗವಹಿಸುವಿಕೆಯನ್ನು ತಿಳಿಸಿದಲ್ಲಿ ಮಾತ್ರ ಗೋವಾದಲ್ಲಿ ಅವರಿಗೆ ಅವಶ್ಯವಾದ ಹೊಟೇಲ್ ವಸತಿ ಮತ್ತಿತರ ಏರ್ಪಾಡುಗಳನ್ನು ಮಾಡಲು ಸಾಧ್ಯವಾಗುತ್ತದೆ – ಎಂದೂ ಆಮಂತ್ರಣಪತ್ರಿಕೆಯಲ್ಲಿ ಸೂಚಿತವಾಗಿತ್ತು.
ಮಯಾಂಕ್ ಮನಸ್ಸಿನಲ್ಲಿ ಆಲೋಚನೆಗಳು ಸರಣಿಸರಣಿಯಾಗಿ ಚಲಿಸುತ್ತಿದ್ದವು. ತಾನು ಸಯನ್ಸ್ ಸಿಟಿ ಕ್ಯಾಂಪಸಿನಿಂದ ಹೊರಬಿದ್ದ ಮೇಲೆ ಭವಿಷ್ಯಯಂತ್ರ ಕೆಲಸ ಮಾಡದೆ ಸ್ಥಗಿತಗೊಳ್ಳುತ್ತಿತ್ತು. ಸಹಜವಾಗಿ ಮಿಸ್ತ್ರಿ ಮಯಾಂಕ್‌ನನ್ನು ಮತ್ತೆ ಕ್ಯಾಂಪಸಿಗೆ ತರುವಂತೆ ತನ್ನ ಸಿಬ್ಬಂದಿಗೆ ಆಜ್ಞಾಪಿಸುತ್ತಿದ್ದ. ಒಂದು ಅನುಕೂಲವೆಂದರೆ ಮುಂದೆ ಆಗುವುದನ್ನು ಮೊದಲೇ ಅರಿಯುವ ಅವಕಾಶ ಈಗ ತನಗೆ ಇತ್ತು. ಆದರೆ ಹೊರಪ್ರಪಂಚದಲ್ಲಿ ಸಯನ್ಸ್ ಸಿಟಿಯೊಳಗಿನ ವ್ಯವಹಾರಗಳನ್ನು ಕುರಿತ ಪರಿಜ್ಞಾನವಷ್ಟೂ ನಷ್ಟವಾಗಿರುತ್ತದೆ. ಆದ್ದರಿಂದ ಮಿಸ್ತ್ರಿ ಪಡೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಬೇಕಾದ ವಿಧಾನಗಳನ್ನು ಈಗಲೇ ಇಲ್ಲಿರುವಾಗಲೇ ಯೋಜಿಸಿಕೊಳ್ಳಬೇಕಾಗಿದೆ – ಎಂದುಕೊಂಡ. ಮುಂದೆ ತನಗೆ ಸಂಭವಿಸಬಹುದಾದ ಪ್ರಮಾದಗಳನ್ನೆಲ್ಲ ಮಯಾಂಕ್ ಹತ್ತು ದಿಕ್ಕುಗಳಿಂದ ಪರಿಶೀಲಿಸತೊಡಗಿದ, ತಾನು ಕ್ರಮಿಸಬೇಕಾದ ದಾರಿಯನ್ನು ಕುರಿತು ಯೋಚಿಸತೊಡಗಿದ. ತಾನು ಶಿವಾಜಿಗೆ ತಿಳಿಸಬೇಕೆಂದುಕೊಂಡ ಸಂಗತಿಗಳನ್ನು ಪತ್ರರೂಪದಲ್ಲಿ ಬರೆದು ಅದನ್ನು ನಾನೋ ಲ್ಯಾಬಿನಲ್ಲಿ ಮೈಕ್ರೊಡಾಟ್ ಸಂದೇಶದಡಿಯಲ್ಲಿ ಅಡಗಿಸಿಟ್ಟ. ತಾನು ಮದುವೆಗಾಗಿ ಗೋವಾಕ್ಕೆ ಬರಲಿರುವುದಾಗಿ ತಿಳಿಸಿದ ಪತ್ರವನ್ನೂ ಸಿದ್ಧಪಡಿಸಿದ.
ಈ ವಿವರಗಳನ್ನೆಲ್ಲ ಅಂದು ರಾತ್ರಿ ದೇವಯಾನಿಗೆ ತಿಳಿಸಿದ.
“ನನಗೆ ಗೊತ್ತಿರುವುದು ಎಂಟು ದಿಕ್ಕುಗಳು. ನೀನು ಹತ್ತು ದಿಕ್ಕುಗಳ ಬಗ್ಗೆ ಹೇಳುತ್ತಿದ್ದೀಯಲ್ಲ?” ಎಂದು ಕೇಳಿದಳು ದೇವಯಾನಿ.
“ನೀನು ಎರಡು ಆಯಾಮಗಳನ್ನಷ್ಟೆ ಕುರಿತು ಯೋಚಿಸುತ್ತಿದ್ದೀ. ಆದರೆ ಬಳಕೆಯದಾದ ಎಂಟು ದಿಕ್ಕುಗಳಲ್ಲದೆ ಮೇಲ್ಗಡೆಗೆ ಮತ್ತು ಕೆಳಗಡೆಗೆ ಎಂಬೆರಡು ದಿಕ್ಕುಗಳೂ ಇರುವುದನ್ನು ಮರೆತೆಯಾ?”
ದೇವಯಾನಿಗೆ ಹತ್ತು ದಿಕ್ಕುಗಳು ಎಂಬ ಪರಿಭಾಷೆ ಈಗ ಸ್ಪಷ್ಟಗೊಂಡಿತು.
* * *
ತುರ್ತಾಗಿ ಭೇಟಿಯಾಗಬೇಕಿದೆ ಎಂಬ ಮಯಾಂಕ್‌ನ ಸಂದೇಶ ನೋಡಿ ಸಿಸೋದಿಯಾ ಧಾವಿಸಿ ಬಂದ.
“ಗುಡ್ ನ್ಯೂಸ್ ಹೇಳಲೆ, ಅಥವಾ ವೆರಿ ಗುಡ್ ನ್ಯೂಸ್ ಹೇಳಲೆ?” ಎಂದು ಆರಂಭಿಸಿದ ಮಯಾಂಕ್, ಮುಗುಳ್ನಗುತ್ತ.
ಏನೊ ಮಹತ್ತ್ವದ ಮಾಹಿತಿಯೇ ಇರಬೇಕೆಂದು ಹರ್ಷಗೊಂಡ ಸಿಸೋದಿಯಾ ಮೊದಲು ವೆರಿ ಗುಡ್ ನ್ಯೂಸನ್ನೇ ಹೇಳಿರಿ ಎಂದ.
“ಅದನ್ನು ಹೇಳಬೇಕಾದರೆ ಮಿಸ್ತ್ರಿಯವರೂ ಇರಬೇಕಾಗುತ್ತದೆ.”
“ಅಂದರೆ ನಮ್ಮ ಪ್ರಯೋಗಕ್ಕೆ ಸಫಲತೆ ಸಿಗುತ್ತಿರಬಹುದೆ?”
“ಸಫಲತೆಯ ಸೂಚನೆ ಸಿಕ್ಕಿರುವುದು ಮಾತ್ರವಲ್ಲ, ನಮ್ಮ ಶೋಧನೆ ಮುಕ್ತಾಯಕ್ಕೆ ಮುಟ್ಟಿದೆ ಎಂದೇ ಹೇಳಬಹುದು.”
ತಮ್ಮ ಗುರಿ ತಲಪಬಹುದಾದ ಶೋಧನೆಯನ್ನು ಈ ಯುವಕ ಇಷ್ಟು ಅಲ್ಪಕಾಲದಲ್ಲಿ ಮುಗಿಸಿಯಾನೆಂದು ನಿರೀಕ್ಷಿಸಿರದಿದ್ದ ಸಿಸೋದಿಯಾ ನಿಟ್ಟುಸಿರಿಟ್ಟ. ತನ್ನ ಮೇಲಿದ್ದ ಭಾರ ಇಳಿದಂತಾಯಿತು ಎಂದುಕೊಂಡ. ಈಗಲೇ ಮಿಸ್ತ್ರಿಯವರಿಗೆ ತಿಳಿಸುತ್ತೇನೆ ಎಂದ.
ನನ್ನದೊಂದು ಸಣ್ಣ ಬೇಡಿಕೆ ಇದೆ. ನನ್ನ ಆತ್ಮೀಯ ಮಿತ್ರನೊಬ್ಬನ ಮದುವೆಯ ಆಮಂತ್ರಣ ಬಂದಿದೆ. ನೀವು ಅದನ್ನು ನೋಡಿಯೇ ನನಗೆ ಕಳಿಸಿರಬೇಕು ಎಂದುಕೊಳ್ಳುತ್ತೇನೆ. ಇಲ್ಲಿ ಹೇಗೂ ನನ್ನ ಕೆಲಸ ಮುಗಿದಿರುವುದರಿಂದ ತಾವು ದಯವಿಟ್ಟು ನನ್ನನ್ನೂ ದೇವಯಾನಿಯನ್ನೂ ಕೂಡಲೆ ಕಳಿಸಿಕೊಟ್ಟರೆ ಮದುವೆಗೆ ಹೋಗಲು ಅನುಕೂಲವಾಗುತ್ತದೆ.
“ಅದಕ್ಕೇನಂತೆ. ಮಿಸ್ತ್ರಿಯವರು ಬಂದ ಮೇಲೆ ಅವರನ್ನು ಒಂದು ಮಾತು ಕೇಳಿ ತಮ್ಮನ್ನು ಕಳಿಸಿಕೊಡಲು ಏರ್ಪಾಟು ಮಾಡಬಹುದು.”
“ಅದಕ್ಕೆ ಮೊದಲು ತಾವು ಒಂದು ಚಿಕ್ಕ ಸಹಾಯ ಮಾಡಬಹುದೆ?”
“ಅದೇನೊ ಹೇಳಿರಿ.”
“ನನ್ನ ಸ್ನೇಹಿತ ಶಿವಾಜಿಯ ಮದುವೆಗೆ ನಾನು ತಪ್ಪದೆ ಬರುವುದಾಗಿ ಮುಂಚಿತವಾಗಿ ತಿಳಿಸಬೇಕಾಗಿದೆ. ಹಾಗೆಂದು ಬರೆದ ಪತ್ರವನ್ನು ನಿಮ್ಮ ಕಡೆಗೆ ಕೊಡುತ್ತೇನೆ. ಅದು ಅತ್ಯಂತ ಶೀಘ್ರವಾಗಿ ನನ್ನ ಮಿತ್ರನ ಕೈ ಸೇರುವಂತೆ ತಾವು ನೆರವಾಗಬಹುದೆ?”
“ಅದಕ್ಕೇನು ಕಷ್ಟ! ನಿಮ್ಮ ಪತ್ರವನ್ನು ನನಗೆ ಕೊಡಿರಿ.”
ಶಿವಾಜಿಗೆ ಬರೆದಿದ್ದ ಪತ್ರವನ್ನು ಸಿಸೋದಿಯಾನ ಕೈಯಲ್ಲಿರಿಸಿದ, ಮಯಾಂಕ್:
“ಪ್ರಿಯ ಶಿವಾಜಿ –
ನಿನ್ನ ಮದುವೆಯ ಆಮಂತ್ರಣಪತ್ರ ಬಂದು ದೇವಯಾನಿಗೂ ನನಗೂ ತುಂಬಾ ಸಂತೋಷವಾಗಿದೆ. ಅವಶ್ಯವಾಗಿ ಬರುತ್ತೇವೆ.
ನೀನು ಹಿಂದೆಯೆ ಹೇಳಿದ್ದಂತೆ ರಾಜಕೀಯ ಕ್ಷೇತ್ರಕ್ಕೆ ನಿನ್ನ ಪ್ರವೇಶವೂ ವಿಳಂಬವಾಗದೆ ನೆರವೇರೀತೆಂದು ಭಾವಿಸಿದ್ದೇನೆ. ನಾಟಿ ಸಾರಾಯಿ, ನೋಟು ಹಂಚಿಕೆ ಮೊದಲಾದ ಕಲಾಪಗಳಲ್ಲದೆ ರಾಜಕೀಯವನ್ನು ಜನಹಿತಪರವಾಗಿ ಹೀಗೂ ಮಾಡಬಹುದು ಎಂದು ನೀನು ಇತರರಿಗೆ ಮೇಲ್ಪಂಕ್ತಿಯಾಗುತ್ತೀ ಎಂದು ಆಶಿಸುತ್ತಿದ್ದೇನೆ.
– ನಿನ್ನವ, ಮಯಾಂಕ್.”
ಮಯಾಂಕ್ ಬರೆದಿದ್ದ ಪತ್ರವನ್ನು ಸಿಸೋದಿಯಾ ಆದ್ಯಂತವಾಗಿ ಓದಿದ. ಅದರಲ್ಲಿ ಸಂಶಯಾಸ್ಪದವಾದದ್ದೇನೂ ಅವನಿಗೆ ಗೋಚರಿಸಲಿಲ್ಲ. ಹೇಗೂ ಇಲ್ಲಿ ತನಗೊಪ್ಪಿಸಿದ ಕೆಲಸವನ್ನು ಮಯಾಂಕ್ ಮುಗಿಸಿದ್ದಾನೆ. ಇನ್ನು ಅವನ ಬಗ್ಗೆ ಸಂದೇಹಪಡಲು ಕಾರಣವಾದರೂ ಏನಿದೆ? – ಎಂದುಕೊಂಡು ಪತ್ರವನ್ನು ಕೋರಿಯರ್ ಮೂಲಕ ಕಳಿಸಲು ಏರ್ಪಾಟು ಮಾಡಿದ.
* * *
ಮರುದಿನವೇ ಮಯಾಂಕ್‌ನ ಪತ್ರ ದೆಹಲಿಯಲ್ಲಿದ್ದ ಶಿವಾಜಿಯ ಕೈಸೇರಿತು. ಆ ಸಮಯದಲ್ಲಿ ಶಿವಾಜಿಯ ಮಿತ್ರನೊಬ್ಬನೂ ಸಂಗಡ ಇದ್ದ. ಶಿವಾಜಿ ಆತುರದಿಂದ ಪತ್ರವನ್ನು ತೆಗೆದು ಓದಿದವನೇ ಮಿತ್ರನಿಗೆ ಹೇಳಿದ –
“ಇದೇನೊ ವಿಚಿತ್ರವಾಗಿದೆಯಲ್ಲೊ! ಮದುವೆಗೆ ಬರುತ್ತೇನೆಂದು ಮಯಾಂಕ್ ಪತ್ರ ಬರೆಯುವ ಆವಶ್ಯಕತೆ ಏನಿತ್ತು? ಅವನ ಮತ್ತು ನನ್ನ ನಡುವಿನ ಸಂಬಂಧದಲ್ಲಿ ಇಂತಹ ಔಪಚಾರಿಕತೆ ಈಗ ಹೇಗೆ ಬಂದಿತು?”
ಮಿತ್ರನೂ ಪತ್ರವನ್ನು ತೆಗೆದುಕೊಂಡು ಓದಿ “ಮದುವೆಗೆ ಬರುತ್ತೇನೆಂದು ಹೇಳಿರುವುದರ ಜೊತೆಗೆ ಇದಕ್ಕೆ ಸಂಬಂಧವಿಲ್ಲದ ರಾಜಕೀಯವನ್ನೂ ತಂದುಬಿಟ್ಟಿದ್ದಾನಲ್ಲ?” – ಎಂದ.
“ಹೌದು. ಅದು ಅಸಂಗತವೆಂದೇ ನನಗೂ ಅನಿಸಿತು. ಅದನ್ನು ನಂಬುವುದೇ ಕಷ್ಟವಾಗಿದೆ” – ಎಂದ, ಶಿವಾಜಿ.
ಇಬ್ಬರೂ ಮತ್ತೆರಡು ಸಾರಿ ಪತ್ರವನ್ನು ಓದಿದರು. “ಬಹುಶಃ ಈ ಪತ್ರದ ಮೂಲಕ ಬೇರೇನೊ ಸಂದೇಶವನ್ನು ನಮಗೆ ತಲಪಿಸಲು ಮಯಾಂಕ್ ಉದ್ದೇಶಿಸಿರಬಹುದೆ?” – ಎಂದ, ಮಿತ್ರ.
ಪತ್ರವನ್ನೇ ದಿಟ್ಟಿಸುತ್ತ ಕೆಲವು ಕ್ಷಣ ಮೌನವಾದ, ಶಿವಾಜಿ. ಪತ್ರದ ಒಕ್ಕಣೆಯಲ್ಲಿ ಏನು ರಹಸ್ಯವನ್ನು ಹುದುಗಿಸಿರಬಹುದು – ಎಂದು ಚಿಂತಿಸತೊಡಗಿದ. ಅನಂತರ ಹೇಳಿದ –
“ಪತ್ರದಲ್ಲಿ ಪೂರ್ತಿ ಅಸಂಗತವೆನಿಸುವ ‘ನಾಟಿ ಸಾರಾಯಿ’ ‘ನೋಟುಗಳು’ ಈ ಎರಡು ಶಬ್ದಗಳ ಮೊದಲ ಅಕ್ಷರಗಳು ಸೇರಿದರೆ ಏನಾಗುತ್ತದೆ?
“‘ನಾನೋ ಎಂದಾಗುತ್ತದಲ್ಲವೆ?”
“ಹಾಗೆಯೆ ಇರಬೇಕು. ಏಕೆಂದರೆ ಪತ್ರದ ಉಳಿದ ಭಾಗವೆಲ್ಲ ಮಾಮೂಲು ರೀತಿಯ ಹಾಗಿದೆ. ಪತ್ರದಲ್ಲಿ ‘ನಾನೋ’ ತಂತ್ರಜ್ಞಾನ ಬಳಸಿದ ಸಂದೇಶವೇನನ್ನೋ ಮಯಾಂಕ್ ಅಡಗಿಸಿಟ್ಟಿರುವ ಸಂಭವ ಕಾಣುತ್ತಿದೆ.”
ಹೀಗನಿಸಿದ ಕೂಡಲೆ ಇಬ್ಬರೂ ಮೋಟಾರ್ ಬೈಕನ್ನೇರಿ ದೆಹಲಿ ಐ.ಐ.ಟಿ. ಕ್ಯಾಂಪಸಿನೊಳಗಿನ ತಮ್ಮ ಡಿಪಾರ್ಟ್‌ಮೆಂಟಿನ ಕಡೆಗೆ ದೌಡಾಯಿಸಿದರು. ಅಲ್ಲಿ ಲ್ಯಾಬಿನಲ್ಲಿದ್ದ ಮೈಕ್ರೊಸ್ಕೋಪಿನಲ್ಲಿ ಪತ್ರವನ್ನಿರಿಸಿ ಪರಿಶೀಲಿಸಿದಾಗ ಪತ್ರದಲ್ಲಿ ಅಕ್ಷರಗಳ ನಡುವೆ ನಿಕ್ಷಿಪ್ತವಾಗಿದ್ದ ಮೈಕ್ರೊಡಾಟ್‌ಗಳು ಗೋಚರಿಸಿದವು. ಅದನ್ನು ಇನ್ನೂ ಹೆಚ್ಚು ಶಕ್ತಿವಂತವಾದ ಮೈಕ್ರೊಸ್ಕೋಪಿನಲ್ಲಿ ನೋಡಿದಾಗ ಗುಪ್ತ ಪತ್ರವನ್ನು ಓದುವುದು ಸಾಧ್ಯವಾಯಿತು. ಆ ಸಂದೇಶದಲ್ಲಿ ಶಿವಾಜಿಯೂ ಜೊತೆಗಾರರೂ ಮಾಡಬೇಕಾದ ಕೆಲಸಗಳನ್ನು ಪಟ್ಟಿ ಮಾಡಲಾಗಿತ್ತು. ಆ ಕೆಲಸಗಳು ನೆರವೇರುವವರೆಗೆ ಯಾರೂ ತನ್ನನ್ನು ಸಂಪರ್ಕಿಸಲು ಪ್ರಯತ್ನಿಸಕೂಡದೆಂದೂ ಆದಷ್ಟು ಶೀಘ್ರ ತಾನು ಹೊರಬರುವುದಾಗಿಯೂ ಮಯಾಂಕ್ ತಿಳಿಸಿದ್ದ. ಮದುವೆಗಾಗಿ ಶಿವಾಜಿ ಮುಂಚಿತವಾಗಿ ಗೋವಾಕ್ಕೆ ಹೋಗಬೇಕಾಗುವುದರಿಂದ ತನ್ನ ನಂಬಿಕೆಯ ಮಿತ್ರರನ್ನೂ ಸಂಗಡ ಕರೆದೊಯ್ಯಬೇಕೆಂದೂ ಸೂಚಿಸಿದ್ದ.
“ಅವನು ಏನೋ ಭಾರಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಅನಿಸುತ್ತಿದೆ” – ಎಂದ, ಶಿವಾಜಿ.
“ಆದರೆ ನಾವೆಲ್ಲ ಗೋವಾದಲ್ಲಿ ಕುಳಿತುಬಿಟ್ಟರೆ ಅವನಿಗೆ ಸಹಾಯ ಮಾಡುವವರು ಯಾರು?”
“ಮಯಾಂಕ್‌ನನ್ನು ನೀನು ಕಡಮೆ ಅಂದಾಜು ಮಾಡುತ್ತಿರುವ ಹಾಗಿದೆ. ಯಾವುದೊ ಗಹನವಾದ ಕಾರ್ಯಯೋಜನೆಯನ್ನು ಅವನು ಮಾಡಿಯೇ ಇರುತ್ತಾನೆ. ಅವನು ಸೂಚಿಸಿರುವ ಕೆಲಸಗಳನ್ನಷ್ಟೂ ತಪ್ಪದೆ ಮಾಡಿದರೆ ಅವನಿಗೂ ನಮಗೂ ಕ್ಷೇಮಕರವಾದೀತು. ಆದ್ದರಿಂದ ಅವಕ್ಕೆ ಈಗ ಒಂದೊಂದಾಗಿ ಗಮನ ಕೊಡೋಣ” – ಎಂದ, ಶಿವಾಜಿ.
ಇಬ್ಬರೂ ಅಲ್ಲಿಂದ ನಿರ್ಗಮಿಸಿದರು.
***
ಸಂದೇಶ ತಲಪಿದ ಒಂದು ಗಂಟೆಯೊಳಗೆ ಮಹೇಶ್ ಮಿಸ್ತ್ರಿ ಸಯನ್ಸ್ ಸಿಟಿಗೆ ಬಂದ. ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಲ್ಯಾಬಿನ ಕಡೆಗೆ ನಡೆದ.
“ವೆಲ್‌ಕಮ್ ಟು ಯೂ, ಸರ್” ಎಂದು ಮಯಾಂಕ್ ಸ್ವಾಗತಿಸಿದ.
“ಅಂತೂ ನಾನು ನಿನ್ನಲ್ಲಿರಿಸಿದ ಭರವಸೆಯನ್ನು ನೀನು ನಿಜವಾಗಿಸಿದೆ ಮಯಾಂಕ್” ಎಂದ ಮಿಸ್ತ್ರಿ, ಮುಗುಳ್ನಗುತ್ತ: “ಅಂದರೆ ನಮಗೆ ಬೇಕಾದ ಭವಿಷ್ಯಯಂತ್ರ ಈಗ ಸಿದ್ಧವಾಯಿತು ಎಂದುಕೊಳ್ಳಬಹುದೆ?”
“ಹೌದು.”
“ನೀನು ಪ್ರಯೋಗ ಮಾಡಿ ನೋಡಿದೆಯಾ?”
“ಇಲ್ಲ. ಮೊದಲ ಅನುಭವ ನಿಮಗೇ ಆಗುವುದು ಒಳ್ಳೆಯದೆನಿಸಿತು” – ಎಂದು ತಾನು ಸಿದ್ಧಪಡಿಸಿಕೊಂಡಿದ್ದ ಸುಳ್ಳನ್ನಾಡಿದ, ಮಯಾಂಕ್.
“ಹಾಗಾದರೆ ನಾನೀಗ ಅದನ್ನು ಪರೀಕ್ಷಿಸಬಹುದೆ?”
“ತಮ್ಮ ಇಚ್ಛೆ.”
“ಯಂತ್ರವನ್ನು ಹೇಗೆ ಬಳಕೆಗೆ ತೊಡಗಿಸಬೇಕೆಂಬುದನ್ನು ನನಗೆ ತಿಳಿಸಿ ನೀವೆಲ್ಲ ಹೊರಕ್ಕೆ ಹೋಗಬಹುದು.”
“ಅದು ಬಹಳ ಸುಲಭ ಸರ್. ಯಂತ್ರದ ಮುಂದೆ ನಿಂತು ನಿಮ್ಮ ಕೈಯನ್ನು ಇರಿಸಿ ಇಗೋ ಈ ಕಂಟ್ರೋಲ್ ಬಟನ್‌ಗಳನ್ನು ನೀವು ‘ಆನ್’ ಮಾಡಬೇಕಷ್ಟೆ. ಅನಂತರ ಪ್ರಶ್ನೋತ್ತರದ ಮೂಲಕ ನಿಮ್ಮ ಸಂವಾದ ಏರ್ಪಡುತ್ತದೆ. ನೀವು ನಿಮ್ಮ ಆವಶ್ಯಕತೆಯನ್ನು ಹೇಗೆ ‘ಫೀಡ್’ ಮಾಡಬೇಕೆಂಬುದನ್ನು ಯಂತ್ರವೇ ಸೂಚಿಸುತ್ತದೆ.
“ಆಯಿತು. ಇನ್ನು ನೀವೆಲ್ಲ ಹೊರಡಬಹುದು” – ಎಂದ, ಮಿಸ್ತ್ರಿ.
ಮಿಸ್ತ್ರಿ ಆತುರನಾಗಿರುವುದನ್ನು ಗಮನಿಸಿ ಸಿಸೋದಿಯಾ, ಮಯಾಂಕ್ – ಎಲ್ಲರೂ ಅಲ್ಲಿಂದ ಹೊರಕ್ಕೆ ನಡೆದರು.
ಮಿಸ್ತ್ರಿ ಒಳಗಿನಿಂದ ಬಾಗಿಲಿಗೆ ಅಗಳಿ ಹಾಕಿ ಯಂತ್ರದ ಮುಂದೆ ನಿಂತ. ಯಂತ್ರವನ್ನು ಕಂಡು ಭಯಪಡಬೇಕೋ ಆನಂದಿಸಬೇಕೋ ತೋರದೆ ಒಂದು ಕ್ಷಣ ದಿಗ್ಭ್ರಾಂತನಾದ. ಯಂತ್ರ ನಿರೀಕ್ಷಿಸಿದಂತೆ ಕೆಲಸ ಮಾಡಿದರೆ ಕೆಲವೇ ತಿಂಗಳೊಳಗಡೆ ತಾನು ಇಡೀ ಪ್ರಪಂಚವನ್ನೇ ಆಳಬಹುದು – ಎಂದು ಅವನ ಆಲೋಚನಾ ಲಹರಿ ಹರಿದಿತ್ತು.
ಇಷ್ಟರಲ್ಲಿ ಒಂದು ಪ್ರಶ್ನೆ ಅವನ ಮನಸ್ಸಿನಲ್ಲಿ ಉದಿಸಿತು. ತಾನೀಗ ಯಾರ ಭವಿಷ್ಯ ಕುರಿತು ತಿಳಿದುಕೊಳ್ಳಬೇಕು? ತನ್ನ ಭವಿಷ್ಯವನ್ನೆ?
ಈ ಯೋಚನೆ ಬಂದೊಡನೆ ಅವನ ಮುಖದಲ್ಲಿ ಮಂದಹಾಸ ಮೂಡಿತು. ತನ್ನ ಬಗೆಗೆ ತಿಳಿಯಬೇಕಾದದ್ದು ಏನಿದೆ!? ತನ್ನ ಭವಿಷ್ಯವನ್ನು ತಾನೇ ರೂಪಿಸುವ ಶಕ್ತಿ ತನ್ನಲ್ಲಿ ಈಗಾಗಲೆ ಇದೆಯಲ್ಲವೆ? ಆದ್ದರಿಂದ ಮಯಾಂಕ್ ಭವಿಷ್ಯವನ್ನು ತಿಳಿದುಕೊಳ್ಳುವುದು ಪ್ರಯೋಜನಕರವೇನೊ – ಎನಿಸಿತು. ಏಕೆಂದರೆ ತಾನು ಯೋಚಿಸಿರುವಂತೆ ಮಯಾಂಕ್‌ನ ಸ್ಮೃತಿಯನ್ನು ಅಳಿಸಿಹಾಕಿದರೂ ಏನೋ ಕಾರಣದಿಂದ ಹಿಂದಿನ ಒಂದಷ್ಟು ನೆನಪಿನ ಶಿಲ್ಕು ಉಳಿದುಬಿಟ್ಟರೆ ಅವನಿಂದ ತನಗೆ ಅಪಾಯವಾಗುವ ಸಂಭವವಿರುತ್ತದೆ. ಹಾಗೆ ಆದಲ್ಲಿ ಅವನನ್ನು ಜೀವದೊರಸೆ ಉಳಿಸಬೇಕೆ ಅಥವಾ ಅವನನ್ನು ಮುಗಿಸಬೇಕೆ ಎಂದೇ ಯೋಚಿಸಿ ತೀರ್ಮಾನಿಸಬೇಕಾಗುತ್ತದೆ.
ಹೀಗೆ ಯೋಚಿಸುತ್ತಲೇ ಯಂತ್ರದ ಮುಂಭಾಗದಲ್ಲಿದ್ದ ಕಂಟ್ರೋಲ್ ಬಟನ್‌ಗಳನ್ನು ಒಂದೊಂದಾಗಿ ಆಪರೇಟ್ ಮಾಡತೊಡಗಿದ.
ಮೆದುವಾದ ವಿಚಿತ್ರ ಶಬ್ದಗಳೊಡಗೂಡಿ ಹಲವು ಬಣ್ಣಬಣ್ಣದ ಕಿರಣಗಳು ಹೊರಬೀಳುತ್ತಿದ್ದವು. ಸುತ್ತಲೂ ಯಾವುದೊ ಅಲೌಕಿಕ ಶಕ್ತಿಯ ಆವರಣ ಹರಡಿರುವ ಅನುಭವವಾಯಿತು. ಯಂತ್ರವು ಕೇಳಿದ ಪ್ರಶ್ನೆಗಳಿಗೆಲ್ಲ ಸಮಾಧಾನ ನೀಡುತ್ತ ಹೋದ ಮಿಸ್ತ್ರಿ. ಆಖೈರಾಗಿ ತಾನು ಮಯಾಂಕ್‌ನ ಭವಿಷ್ಯವನ್ನು ತಿಳಿಯಬಯಸುವುದಾಗಿ ಯಂತ್ರಕ್ಕೆ ಸೂಚಿಸಿದ. ಆಗ ಯಂತ್ರದ ತೆರೆ ಪ್ರಕಾಶಗೊಂಡಿತು. ಅದರಲ್ಲಿ ದೃಶ್ಯಗಳು ಕಾಣತೊಡಗಿದವು.
ಆಪರೇಷನ್ ಥಿಯೇಟರನ್ನು ಹೋಲುವ ಒಂದು ಘಟಕದಲ್ಲಿ ಮಯಾಂಕ್ ಮತ್ತು ದೇವಯಾನಿ ಕುಳಿತಿದ್ದಾರೆ. ಅವರಿಬ್ಬರ ಸ್ಮೃತಿತರಂಗಗಳನ್ನು ಅಳಿಸಿಹಾಕುವ ಪ್ರಕ್ರಿಯೆ ನಡೆಯುತ್ತಿದೆಯೆಂದು ಮಿಸ್ತ್ರಿಗೆ ಖಾತರಿಯಾಯಿತು. ಅನಂತರ ಇಬ್ಬರೂ ಸಯನ್ಸ್ ಸಿಟಿ ಕ್ಯಾಂಪಸಿನಿಂದ ನಿಷ್ಕ್ರಮಿಸಿದರು. ದೆಹಲಿಯ ವಿಮಾನನಿಲ್ದಾಣದಲ್ಲಿ ಇಳಿದವರೇ ಇಬ್ಬರೂ ಹೊರಟದ್ದು ದೇವಯಾನಿಯ ಮನೆಗೆ. ಸ್ವಲ್ಪ ಸಮಯದನಂತರ ಇಬ್ಬರನ್ನೂ ಯಾರೋ ಹಿಂದಿನಿಂದ ತಳ್ಳುತ್ತಿರುವಂತೆ ಭಾಸವಾಯಿತು, ಇಬ್ಬರೂ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಸೆಣಸುತ್ತಿರುವಂತೆ ಕಂಡಿತು. ಮತ್ತೆ ಯಾವುದೋ ವಿಮಾನನಿಲ್ದಾಣದ ಚಿತ್ರ ಕಾಣತೊಡಗಿತು. ಯಾವುದೋ ಮದುವೆ ಸಡಗರದ ಓಡಾಟಗಳು ಎದುರಾದವು. ಹಿಂದಿನ ಸಯನ್ಸ್ ಸಿಟಿ ವಾಸ್ತವ್ಯದ ನೆನಪುಗಳೆಲ್ಲ ಅವರಿಂದ ದೂರವಾಗಿವೆಯೆಂದು ಮಿಸ್ತ್ರಿ ತೀರ್ಮಾನಿಸಿದ.
ಇದ್ದಕ್ಕಿದ್ದ ಹಾಗೆ ಸಯನ್ಸ್ ಸಿಟಿಯೊಳಗಿನ ಎಪ್ಪತ್ತನಾಲ್ಕು ಸೂಪರ್ ಕಂಪ್ಯೂಟರುಗಳಿಗೆ ಗ್ರಿಡ್ ಜಾಲದಿಂದ ಸರಬರಾಜಾಗುತ್ತಿದ್ದ ವಿದ್ಯುತ್ತು ನಿಂತುಹೋಗಿ ಯಂತ್ರ ಸ್ಥಗಿತಗೊಂಡಿತು. ಯಂತ್ರದ ಕಾರ್ಯ ಮುಂದುವರಿದಿದ್ದರೆ ಇನ್ನು ಕೆಲವು ಕ್ಷಣಗಳಲ್ಲಿ ತಾನು, ಮಯಾಂಕ್ ಮತ್ತು ದೇವಯಾನಿ ಮೂವರೂ ಹೆಲಿಕಾಪ್ಟರೊಂದರಲ್ಲಿ ಪಯಣಿಸುತ್ತಿರುವ ದೃಶ್ಯವನ್ನು ಮಿಸ್ತ್ರಿ ನೋಡಿರುತ್ತಿದ್ದ. ಈ ದೃಶ್ಯ ಕಂಡಿದ್ದಿದ್ದರೆ ಮಯಾಂಕ್‌ನನ್ನೂ ದೇವಯಾನಿಯನ್ನೂ ಮಿಸ್ತ್ರಿ ಕ್ಯಾಂಪಸಿನಿಂದ ಹೊರಕ್ಕೆ ಬಿಡುತ್ತಿರಲಿಲ್ಲವೇನೊ.
ಯಂತ್ರವನ್ನು ಆಫ್ ಮಾಡಿ ಮಿಸ್ತ್ರಿ ಲ್ಯಾಬಿನ ಕಿಟಕಿಯತ್ತ ಸರಿದು ಹೊರಗಡೆಗೆ ಕಣ್ಣು ಹಾಯಿಸಿದ. ಸದಾ ದೀಪಗಳಿಂದ ಜಗಮಗಿಸುತ್ತಿದ್ದ ಕ್ಯಾಂಪಸ್‌ನಲ್ಲಿ ಈಗ ಕತ್ತಲು ಆವರಿಸಿತ್ತು.
ಹೊರಗಿನಿಂದ ಸಿಸೋದಿಯಾ ಮತ್ತು ಮಯಾಂಕ್ ಲ್ಯಾಬಿನ ಬಾಗಿಲನ್ನು ತಟ್ಟಿದರು. ಬಾಗಿಲನ್ನು ತೆಗೆದ ಮಿಸ್ತ್ರಿಗೆ ಸಿಸೋದಿಯಾ ಚಿಂತಿತನಾಗಿ ಹೇಳಿದ –
“ಪವರ್ ಫೈಲ್ಯೂರ್ ಆಗಿದೆ. ಇಡೀ ಗ್ರಿಡ್ ಕೊಲ್ಯಾಪ್ಸ್ ಆಗಿದೆಯಂತೆ.”
ಮಿಸ್ತ್ರಿ ಮಾತನಾಡಲಿಲ್ಲ.
ಒಂದೆರಡು ನಿಮಿಷಗಳಾದ ಮೇಲೆ ಮಯಾಂಕ್‌ನತ್ತ ತಿರುಗಿ ಕೇಳಿದ –
“ಮತ್ತೆ ಯಂತ್ರ ಯಾವಾಗ ರೆಡಿ ಆಗಬಹುದು?”
“ಬಹುಶಃ ಅದಕ್ಕೆ ಇಪ್ಪತ್ತನಾಲ್ಕು ಗಂಟೆಗಳು ಹಿಡಿಯಬಹುದು.”
“ಯಂತ್ರದ ಮೈಂಟೆನನ್ಸ್ ಹೇಗೆ ಆಗುತ್ತದೆ?”
“ಅದನ್ನು ವಿವರವಾಗಿ ದತ್ತಾತ್ರೇಯ ಅವರಿಗೆ ತಿಳಿಸಿದ್ದೇನೆ.”
“ಹಾಗಾದರೆ ಈಗ ಮಯಾಂಕ್‌ರಿಗೆ ವಿದಾಯ ಹೇಳಲು ಅಭ್ಯಂತರವೇನೂ ಕಾಣುತ್ತಿಲ್ಲ” – ಎಂದ ಮಿಸ್ತ್ರಿ, ಸಿಸೋದಿಯಾನ ಕಡೆ ತಿರುಗಿ.
ಮುಂದುವರಿದು “ನಾನು ತುರ್ತು ಕೆಲಸಕ್ಕಾಗಿ ಹೋಗಬೇಕಾಗಿದೆ, ಬರಲು ಎರಡು ದಿನಗಳು ಆಗುತ್ತದೆ. ಅಷ್ಟರಲ್ಲಿ ಯಂತ್ರವನ್ನು ರೆಡಿ ಮಾಡಿಸಿಟ್ಟಿರಿ” – ಎಂದ.
(ಸಶೇಷ)