ಆಫ್ರಿಕಾ, ದಕ್ಷಿಣ ಅಮೆರಿಕಾ ಕಾಡುಗಳಲ್ಲಿ ಬಹಳ ವಿಧವಾದ ಪ್ರಾಣಿಗಳನ್ನು ನೋಡಿ, ಅವುಗಳಲ್ಲಿ ಹಲವನ್ನು ಲಂಡನ್ “ಝೂ” (ಪ್ರಾಣಿಸಂಗ್ರಹಾಲಯ)ಕ್ಕೆ ಹಿಡಿದು ತಂದ ಒಬ್ಬ ದೊಡ್ಡ ಬೇಟೆಗಾರ ಹೀಗೆಂದನು, ‘ಶರೀರ ಮನುಷ್ಯನದ್ದೂ, ಮುಖವು ಕುದುರೆಯದ್ದೂ ಇರುವ ಒಂದು ಪ್ರಾಣಿ ಆಫ್ರಿಕಾದ ಕಾಡಿನಲ್ಲಿ ಎಲ್ಲಿಯೋ ಇದೆಯೆಂದು ನಾನು ಕೇಳಿದ್ದೇನೆ. ಆದರೆ ನಾನು ನಂಬಲಿಲ್ಲ” ಎಂದು: “ಅಯ್ಯೋ! ಈ ಪ್ರಾಣಿ ನನಗೆ ದೊರಕಿದ್ದಿದ್ದರೆ ಲಂಡನ್ನಿನ ‘ಝೂ’ಗೆ ಇದನ್ನು ಹಿಡಿದುತಂದ ಭಾಗ್ಯ ನನಗೆ ಸಿಗುತ್ತಿತ್ತು. ಇಂತಹ ಪ್ರಾಣಿಯನ್ನು ತಂದಿದ್ದಾನೆಂದು ನನಗೆ ‘ಪ್ರೈಜು಼’ ಕೊಡುತ್ತಿದ್ದರು. ಈಗ ಆ ಲಾಭವೂ ಇಲ್ಲದೆಹೋಯಿತು!’
ಒಂದು ದಿನ ಬೆಳಗ್ಗೆ ಲಂಡನ್ನಿನ “ಟ್ರೆಫಾಲ್ಗರ್ ಸ್ಕ್ವೇರ್” ಹತ್ತಿರ ಜನರು ಗುಂಪುಗುಂಪಾಗಿ ಮುತ್ತಿಕೊಂಡಿದ್ದರು. ಅವರೆಲ್ಲರೂ ಒಂದು ವಿಚಿತ್ರಪ್ರಾಣಿಯ ಕಡೆಗೆ ನೋಡುತ್ತಿದ್ದರು. ಆ ಪ್ರಾಣಿಯು ಅವರನ್ನು ಎಲ್ಲ ವಿಧಗಳಲ್ಲಿಯೂ ಆಕರ್ಷಿಸುತ್ತಿತ್ತು. ಆ ಪ್ರಾಣಿಯು ಕುತ್ತಿಗೆಯ ತನಕ ಮನುಷ್ಯ, ತಲೆ ಮಾತ್ರ ಕುದುರೆಯ ತಲೆ. ಜೂಲು, ಮೇಲಕ್ಕೆ ಚಾಚಿಕೊಂಡ ಕಿವಿಗಳು, ಅರ್ಧದಷ್ಟು ಮಾತ್ರ ಕಾಣುತ್ತಿರುವ ಬೀಸುವ ಕಲ್ಲಿನಂತಹ ದಂತಪಂಕ್ತಿ, ಹಣೆಯಲ್ಲಿ ಒಂದು ಬೊಟ್ಟು ಇದೆ. ಅದು ಮೇಲ್ಮುಖವಾದ ಬೊಟ್ಟು. ಆ ಜಂತುವಿನ ಉಳಿದ ಅವಯವಗಳೆಲ್ಲವೂ ಮನುಷ್ಯರವೇ. ಎರಡು ಕೈಗಳು, ಎರಡು ಕಾಲುಗಳು, ಕಾಲುಗಳಿಗೆ ಕಡಗಗಳಿವೆ. ಅವು ಬಂಗಾರದವೋ ಹಿತ್ತಾಳೆಯವೋ ತಿಳಿಯದಾದರೂ ಅದರ ಬಣ್ಣ ಮಾತ್ರ ಹಚ್ಚಹಳದಿ. ಅವುಗಳನ್ನು ಕಡಗಗಳು ಎನ್ನುವುದಕ್ಕಿಂತ ಅಂದುಗೆಗಳೆಂದೇ ಹೇಳಬಹುದು. ಕಾಲುಗಳ ಬೆರಳುಗಳಿಗೆ ಹತ್ತು ರತ್ನಗಳ ಉಂಗುರಗಳಿವೆ. ತೋಳುಗಳಲ್ಲಿ “ಬಾಜಾಬಂದಿಗಳು”. ಭುಜಗಳ ಮೇಲೆ ಭುಜಕೀರ್ತಿಗಳಿವೆ. ಶಿರಸ್ಸಿನ ಮೇಲೆ ಕಿರೀಟವಿದೆ. ಈ ಪ್ರಾಣಿ ಸತ್ತುಹೋಗಿದೆಯೋ ಮೂರ್ಛೆಯಲ್ಲಿದೆಯೋ ತಿಳಿದಿಲ್ಲ. ಇದು ಪ್ರಾಣಿಯೋ ಮನುಷ್ಯನೋ ಗೊತ್ತಿಲ್ಲ. ಒಂದುವೇಳೆ ಈ ಪ್ರಾಣಿ ನಿದ್ರೆಹೋಗಿದೆಯೇನೊ! ಮಗ್ಗುಲಾಗಿ ಮಲಗಿಕೊಂಡಿದೆ. ಆ ಪ್ರಾಣಿ ರೇಷ್ಮೆಯ ಬಟ್ಟೆಯನ್ನು ತೊಟ್ಟುಕೊಂಡಿದೆ. ಅದರ ಎರಡೂ ಕೈಗಳ ಹಿಂದೆ ಉದ್ದವಾದ ಎರಡು ಗಾಯಗಳಿವೆ. ಆ ಗಾಯಗಳಿಂದ ಇಲ್ಲಿಯತನಕ ಎಷ್ಟು ರಕ್ತ ಹರಿದಿದೆಯೊ ಗೊತ್ತಾಗುತ್ತಿಲ್ಲ, ಆದರೆ ಸ್ವಲ್ಪ ನೆತ್ತರು ಭೂಮಿಯ ಮೇಲೆ ಗಡ್ಡೆಕಟ್ಟಿಕೊಂಡಿದೆ. ಆ ನೆತ್ತರಿನಿಂದ ಸ್ವಲ್ಪ ದೂರದಲ್ಲಿಯೇ ಬಿದ್ದಿರುವ “ಜರತಾರಿ ಉತ್ತರೀಯ” ಒದ್ದೆಯಾಗಿದೆ. ಬೇಸಗೆ ಕಾಲವಾದರೂ ಲಂಡನ್ನಿನಲ್ಲಿ ರಾತ್ರಿಯಲ್ಲಿ ಸ್ವಲ್ಪ ಮಂಜು ಸುರಿಯುತ್ತಲೇ ಇರುತ್ತದೆಯಾದ ಕಾರಣ, ಆ ಮಂಜಿಗೆ ನೆತ್ತರು ಹರಿಯದಂತಾಗಿದೆ.
ಆ ಪ್ರಾಣಿಯ ದೇಹಪ್ರಮಾಣ ಬಹಳ ದೊಡ್ಡದು. ಮನುಷ್ಯರು ಸಾಮಾನ್ಯವಾಗಿ ಐದಾರು ಅಡಿಗಳಷ್ಟು ಎತ್ತರವಿರಬಹುದು. ಆ ಪ್ರಾಣಿ ಎಂಟು ಅಡಿಗಳಷ್ಟಂತೂ ಇದ್ದೇ ಇದೆ. ಅದರ ಎದೆ ನಮ್ಮ ಒಂದು ಮಾರಿನಷ್ಟು ಇರಬಹುದು.
ಜನರೆಲ್ಲರೂ ಅದನ್ನು ದೂರದಿಂದ ನೋಡಲು ಪ್ರಾರಂಭಿಸಿದರು. ಹೊತ್ತೇರುತ್ತಿದ್ದಂತೆ ಜನರೂ ಹೆಚ್ಚಾಗಿ ಮುತ್ತಿಕೊಂಡರು. ಅವರು ತಮ್ಮತಮ್ಮಲ್ಲೇ ಅನೇಕ ವಿಧವಾಗಿ ಮಾತನಾಡಿಕೊಳ್ಳಲು ಪ್ರಾರಂಭಿಸಿದರು. ಒಬ್ಬ ಗ್ರೀಕ್ ಭಾಷಾ ಪಂಡಿತನು “ಗ್ರೀಕ್ ಹೀರೋ ‘ಥೀಸಿಯಸ್’, ‘ಮೈನೊಟಾರ್’ ಎಂಬ ಒಂದು ಎತ್ತಿನ ಮುಖದ ಪ್ರಾಣಿಯನ್ನು ಸಾಯಿಸಿದ್ದನು. ಇದು ಕೂಡಾ ಅಂತಹದ್ದೇ” ಎಂದನು.
ಆಫ್ರಿಕಾ, ದಕ್ಷಿಣ ಅಮೆರಿಕಾ ಕಾಡುಗಳಲ್ಲಿ ಬಹಳ ವಿಧವಾದ ಪ್ರಾಣಿಗಳನ್ನು ನೋಡಿ, ಅವುಗಳಲ್ಲಿ ಹಲವನ್ನು ಲಂಡನ್ “ಝೂ” (ಪ್ರಾಣಿಸಂಗ್ರಹಾಲಯ)ಕ್ಕೆ ಹಿಡಿದು ತಂದ ಒಬ್ಬ ದೊಡ್ಡ ಬೇಟೆಗಾರ ಹೀಗೆಂದನು, ‘ಶರೀರ ಮನುಷ್ಯನದ್ದೂ, ಮುಖವು ಕುದುರೆಯದ್ದೂ ಇರುವ ಒಂದು ಪ್ರಾಣಿ ಆಫ್ರಿಕಾದ ಕಾಡಿನಲ್ಲಿ ಎಲ್ಲಿಯೋ ಇದೆಯೆಂದು ನಾನು ಕೇಳಿದ್ದೇನೆ. ಆದರೆ ನಾನು ನಂಬಲಿಲ್ಲ” ಎಂದು “ಅಯ್ಯೋ! ಈ ಪ್ರಾಣಿ ನನಗೆ ದೊರಕಿದ್ದಿದ್ದರೆ ಲಂಡನ್ನಿನ ‘ಝೂ’ಗೆ ಇದನ್ನು ಹಿಡಿದುತಂದ ಭಾಗ್ಯ ನನಗೆ ಸಿಗುತ್ತಿತ್ತು. ಇಂತಹ ಪ್ರಾಣಿಯನ್ನು ತಂದಿದ್ದಾನೆಂದು ನನಗೆ ‘ಪ್ರೈಜು಼’ ಕೊಡುತ್ತಿದ್ದರು. ಈಗ ಆ ಲಾಭವೂ ಇಲ್ಲದೆಹೋಯಿತು!’ ಎಂದುಕೊಂಡು ಪೆಚ್ಚುಮೋರೆ ಹಾಕಿಕೊಂಡನು.
ಕದಲಾಡದೆ ಬಿದ್ದುಕೊಂಡಿರುವ ಆ ಮೃಗದ ಹತ್ತಿರಕ್ಕೆ ಕೆಲವು ಮಕ್ಕಳು ಸಾಹಸವನ್ನು ಮಾಡಿ ಹೊರಟಿದ್ದರೆ ಅವರ ತಾಯಂದಿರು ಅವರನ್ನು ಹಿಂದಕ್ಕೆ ಎಳೆದುಕೊಂಡರು.
“ಇದು ಮೃಗವೇ ಆಗಿದ್ದರೆ ಇದಕ್ಕೆ ಬಟ್ಟೆಗಳು ಎಲ್ಲಿಂದ ಬಂದವು? ಪ್ರಾಣಿಗೆ ಆಭರಣಗಳೆಲ್ಲಿಂದ ಬರಬೇಕು?” ಎಂದು ಕೆಲವರು ಪ್ರಶ್ನೆ ಹಾಕಿದರು. ಕೆಲವರು “ನಿಜವೇ!” ಎಂದರು.
“ಮೃಗವಲ್ಲದಿದ್ದರೆ ಬೇರೆ ಏನು?” ಎಂಬ ಪ್ರಶ್ನೆ ಹುಟ್ಟಿತು. ಇನ್ನೂ ಕೆಲವರು ಹೇಳಿದರು “ಇದು ನಿಜವಾಗಿಯೂ ಯಾವುದೋ ಪ್ರಾಣಿಯೇ, ಇದನ್ನು ಯಾರೋ ಅಮೆರಿಕಾದವನೋ ಫ್ರೆಂಚ್ನವನೋ ಆಫ್ರಿಕಾದ ಅಡವಿಯಲ್ಲೆಲ್ಲೋ ಹಿಡಿದಿದ್ದಾನೆ. ಆದರೆ ಅದನ್ನು ಏರೋಪ್ಲೇನ್ನಲ್ಲಿ ಅವರ ದೇಶಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ ಈ ಪ್ರಾಣಿ ಕೆಳಗೆ ಬಿದ್ದಿರುತ್ತದೆ. ಹಾಗೆ ಕೆಳಗೆ ಬೀಳುವಾಗ ಸತ್ತೇಹೋಗಿರಬಹುದು. ಆಗ ತಲೆ ಒಡೆದಿರಬೇಕು. ಆ ರಕ್ತ ಹಾಗೆ ಹರಿಯುತ್ತಿದೆಯಲ್ಲ” ಎಂದರು.
ಇನ್ನೊಬ್ಬನು “ಹಾಗಾದರೆ ಇದಕ್ಕೆ ಆ ಬಟ್ಟೆಗಳೆಲ್ಲಿಂದ ಬಂತು? ಒಂದು ತುಂಡು ಬಟ್ಟೆಯನ್ನು ಕಟ್ಟಿಕೊಂಡು ಇನ್ನೊಂದು ತುಂಡು ಬಟ್ಟೆಯನ್ನು ಹೊದೆದುಕೊಳ್ಳುವುದೇನು? ಇದೆಂತಹ ಉಡುಪುಗಳು? ತೊಟ್ಟುಕೊಳ್ಳುವುದಿದ್ದರೆ ಪ್ಯಾಂಟೂ ಕೋಟೂ ತೊಡುತ್ತಾರೆ ಅಲ್ಲದೆ ತುಂಡು ಬಟ್ಟೆ ಯಾರು ಕಟ್ಟಿಕೊಳ್ಳುತ್ತಾರೆ?” ಎಂದನು.
ಇನ್ನೊಬ್ಬನು “ಹಿಂದೂ ದೇಶದಲ್ಲಿ ಹೀಗೆಯೇ ಕಟ್ಟಿಕೊಳ್ಳುತ್ತಾರಂತೆ” ಎಂದನು. ಇನ್ನೊಂದು ಧ್ವನಿ ಹೀಗೆ ಕೇಳಿಸಿತು. “ಹಿಂದೂ ದೇಶದಲ್ಲಿ ಈ ಪ್ರಾಣಿಯನ್ನು ಯಾರೋ ಸಾಕಿಕೊಂಡಿದ್ದಿರಬಹುದು” ಇಂಗ್ಲಿಷುತನವೆಲ್ಲಾ ಮುಖದಲ್ಲಿಯೇ ಉಕ್ಕುತ್ತಿದ್ದ ಇನ್ನೊಬ್ಬನು “ಹಿಂದೂ ದೇಶದಲ್ಲಿ ಮನುಷ್ಯರೇ ಪ್ರಾಣಿಗಳಾಗಿದ್ದಾರೆ! ಅವರು ಮತ್ತೆ ಪ್ರಾಣಿಗಳನ್ನು ಸಾಕುವುದೇತಕ್ಕೆ?” ಎಂದನು. ಎಲ್ಲರೂ ನಕ್ಕರು.
ಇನ್ನೊಬ್ಬನು ಹೇಳಿದನು “ಹಿಂದೂ ದೇಶದಲ್ಲಿ ಅವರು ಯಾವತ್ತೂ ಆಪ್ರಿಕಾದ ಕಾಡುಗಳಲ್ಲಿ ಅಥವಾ ದಕ್ಷಿಣ ಅಮೆರಿಕಾದ ಕಾಡುಗಳಲ್ಲಿ ಇರುವಂತೆ ಬೇಟೆಗೆ ಹೋಗುವುದಿಲ್ಲ. ಅವರು ಹಾಗೆ ಬೇಟೆಯಾಡುವುದಕ್ಕೆ ಗೌರ್ನಮೆಂಟು ಒಪ್ಪುವುದಿಲ್ಲ. ಹಾಗಾಗಿ ಈ ಪ್ರಾಣಿಯನ್ನು ಅವರು ಹಿಡಿದುಕೊಂಡರು ಎಂಬುದು ಸುಳ್ಳೇ, ಅವರ ದೇಶದಲ್ಲಿ ಸಾಕಿಕೊಂಡದ್ದೂ ಸುಳ್ಳೇ!” ಎಂದನು.
“ಹಾಗಾದರೆ ಹಿಂದೂ ದೇಶಸ್ಥರಂತೆಯೇ ಪ್ರಾಣಿಯ ದೇಹದ ಮೇಲೆ ಏಕೆ ಬಟ್ಟೆಯಿದೆ?” ಎಂಬ ಪ್ರಶ್ನೆ ಬಂತು. ಅದಕ್ಕೊಬ್ಬ ಬುದ್ಧಿವಂತನು ಸಮಾಧಾನವನ್ನು ಹೇಳಿದನು, “ಈ ಪ್ರಾಣಿಯನ್ನು ಹಿಡಿದ ಬೇಟೆಗಾರ ಕೆಲವು ಕಾಲ ಹಿಂದೂ ದೇಶದಲ್ಲಿ ಇದ್ದೇ ಇರುತ್ತಾನೆ. ಅವನು ಫ್ಯಾನ್ಸ್ಗೋಸ್ಕರ ಈ ಪ್ರಾಣಿಗೆ ಈ ವಸ್ತ್ರಗಳನ್ನು ಹಾಕಿರುತ್ತಾನೆ” ಎಂದು. ಸಮಾಧಾನವಾಯಿತು. ಎಲ್ಲರೂ ಅವನನ್ನು ಮೆಚ್ಚಿಕೊಂಡು ಅಭಿನಂದಿಸಲು ತೊಡಗಿದರು.
ಒಂದು ವೇಳೆ ಆ ಮೃಗ ನಿದ್ದೆಹೋಗಿದೆಯೇನೋ, ಗಲಾಟೆಗೆ ಎಚ್ಚೆತ್ತುಕೊಂಡರೆ ಅಪಾಯವಾಗಬಹುದೇನೋ ಎಂದು ಹಲವರು ಜನರಿಗೆ ಗಲಾಟೆ ಮಾಡದಂತೆ ಹೇಳಲು ಪ್ರಾರಂಭಿಸಿದರು.
ಇನ್ನೊಬ್ಬನು “ಹಾಗಾದರೆ ಈ ಪ್ರಾಣಿಯ ಮೈತುಂಬಾ ಇಷ್ಟೊಂದು ಆಭರಣಗಳು ಎಲ್ಲಿಂದ ಬಂದವು? ಈ ಆಭರಣಗಳೂ ಬಹಳ ದುಬಾರಿ ಬೆಲೆಯುಳ್ಳವೇ ಆಗಿವೆ!” ಎಂದನು. ಆ ಮಾತನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಜನರೆಲ್ಲರೂ ಮಾಡುವ ಗದ್ದಲ ಹೆಚ್ಚಾಗಿಹೋಯಿತು.
ಆ ಪ್ರಾಣಿಯು ಸತ್ತುಹೋಗಿದೆಯೆಂದು ಕೆಲವರೂ, ಬದುಕಿಯೇ ಇದೆ ಎಂದು ಕೆಲವರೂ ಹೇಳುತ್ತಿದ್ದರು. ಪ್ರತಿಯೊಬ್ಬರಿಗೂ ಈ ಪ್ರಾಣಿ ಎಚ್ಚರಗೊಂಡರೆ ಏನು ಅಪಾಯವಾಗುತ್ತದೆಯೇನೋ ಎಂದು ಭಯವೇ. ಆದರೆ ಆ ಜಾಗವನ್ನು ಬಿಟ್ಟು ಯಾರೂ ಹೋಗಲಾರರು. ರಸ್ತೆಯ ಮೇಲೆ ಟ್ರಾಫಿಕ್ಕು ಎಲ್ಲೆಂದರಲ್ಲಿಯೇ ನಿಂತುಹೋಗಿತ್ತು. ಜನರೆಲ್ಲರೂ ಅಲ್ಲಿ ಸೇರಿಕೊಳ್ಳುತ್ತಿದ್ದರೇ ಹೊರತು ಒಬ್ಬರೂ ಅಲ್ಲಿಂದ ಹೊರಡಲಿಲ್ಲ.
ಇಷ್ಟರಲ್ಲಿ ಈ ಸುದ್ದಿ ಲಂಡನ್ ನಗರಕ್ಕೆಲ್ಲ ತಿಳಿದುಹೋಗಿತ್ತು. ದೊಡ್ಡ ದೊಡ್ಡ ಡ್ಯೂಕರೂ, ಲಾರ್ಡ್ ಮೇಯರುಗಳೂ, ಆರ್ಚ್ಬಿಷಪ್ಗಳೂ ಎಲ್ಲರೂ ಬಂದರು. ಸ್ಕಾಟ್ಲೆಂಡ್ ಯಾರ್ಡ್ನವರೆಲ್ಲ (ಪೊಲೀಸರು) ಸೇರಿದ್ದರು. ಶೂಟ್ ಮಾಡಲು ಸಿದ್ಧರನ್ನಾಗಿಸಿ, ಬಂದೂಕುಗಳನ್ನು ಹಿಡಿಸಿ ಪೊಲೀಸರನ್ನು ಆ ಪ್ರಾಣಿಯ ಸುತ್ತಲೂ ಇಪ್ಪತ್ತು ಗಜಗಳಷ್ಟು ದೂರದಲ್ಲಿ ನಿಲ್ಲಿಸಿ, ಮೇಯರೂ ಮತ್ತೆ ಕೆಲವರು ಹಿರಿಯ ಅಧಿಕಾರಿಗಳೂ ಆ ಪ್ರಾಣಿಯ ಹತ್ತಿರಕ್ಕೆ ನಡೆದರು. ಅವರ ಕೈಗಳಲ್ಲಿಯೂ ಕಣ್ರೆಪ್ಪೆ ಮಿಟುಕಿಸುವಷ್ಟರಲ್ಲಿ ಸಿಡಿದು ಪ್ರಾಣಿಯನ್ನು ಸುಟ್ಟುಹಾಕುವ ಪಿಸ್ತೂಲುಗಳು ಗುರಿ ಹಿಡಿದಿದ್ದವು.
ಜನರನ್ನು ಪೊಲೀಸರು ಎಲ್ಲೆಂದರಲ್ಲಿ ಹೊರಗಟ್ಟುತ್ತಿದ್ದರು. ಇಲ್ಲಿಯವರೆಗೆ ಜನರ ಗುಂಪು ಆ ಪ್ರಾಣಿಗೆ ಇನ್ನೂ ಹತ್ತಿರಕ್ಕೆ ಹೋಗಿತ್ತು. ಜನರಲ್ಲಿಯೂ ಕೆಲವರು ಪಿಸ್ತೂಲು ಇಲ್ಲದಿದ್ದರೂ ಇದಕ್ಕೂ ಮೊದಲೇ ಆ ಪ್ರಾಣಿಗೆ ಬಹಳ ಹತ್ತಿರಕ್ಕೆ ಹೋಗಿ ಎಲ್ಲವನ್ನೂ ಪರಿಶೀಲಿಸಿದ್ದರು. ಆದರೆ ಅವರು ಅಧಿಕಾರಿಗಳಾದ ಕಾರಣ, ಅಧಿಕಾರಿಗಳು ಮಾಡಬೇಕಾದ ಪದ್ಧತಿಯಂತೆ ಮಾಡುತ್ತಿದ್ದರು.
ಹಿರಿಯ ಅಧಿಕಾರಿಗಳು ಪಿಸ್ತೂಲುಗಳನ್ನು ಹಿಡಿದು ತಯಾರಾಗಿ ನಿಂತುಕೊಂಡಿದ್ದಾಗ, ಒಬ್ಬ ಗುಮಾಸ್ತ ಬಂದು ಪ್ರಾಣಿಯನ್ನು ಪರಿಶೀಲಿಸಿದನು. ಪ್ರಾಣಿ ಸತ್ತಿದೆಯೊ ಬದುಕಿದೆಯೊ ಎಂದು ತಿಳಿದುಕೊಳ್ಳುವುದಕ್ಕೋಸ್ಕರ ಒಬ್ಬ ದೊಡ್ಡ ಡಾಕ್ಟರಿಗೆ ಸುದ್ದಿಯನ್ನು ಕಳಿಸಿದ್ದರು. ದೊಡ್ಡ ದೊಡ್ಡ ಸರಪಣಿಗಳನ್ನು ತರಿಸಿ ಆ ಪ್ರಾಣಿಯ ಕಾಲುಗಳನ್ನೂ ಕೈಗಳನ್ನೂ ಕಟ್ಟಿಹಾಕಿದ್ದರು. ಅದು ಒಂದೊಮ್ಮೆ ಎದ್ದರೂ ಏನೂ ಮಾಡಲಾರದು. ಬಳಿಕ ಡಾಕ್ಟರ್ ಬಂದು ಪರೀಕ್ಷಿಸಿದನು. ಎರಡು ಪಕ್ಕದಲ್ಲೂ ಎರಡು ಗಂಟೆಗಳ ಕಾಲ ಪರೀಕ್ಷಿಸಿ, “ಈ ಪ್ರಾಣಿ ಸತ್ತಿಲ್ಲ. ಆದರೆ ಬದುಕಿದೆ ಎಂದು ಹೇಳುವುದಕ್ಕೂ ಅವಕಾಶವಿಲ್ಲ. ಉಚ್ಛ್ವಾಸ-ನಿಃಶ್ವಾಸಗಳು ಆಡುತ್ತಿಲ್ಲ. ಹೃದಯದಲ್ಲಿ ಯಾವುದೇ ಸ್ಪಂದನವಿಲ್ಲ. ಆದರೆ ಹಾರ್ಟ್ “ಸೌಂಡ್” ಆಗಿದೆ. ನಾಡಿ ಆಡುತ್ತಿಲ್ಲ. ಆದರೆ ರಕ್ತ ತಣ್ಣಗಾಗಿಲ್ಲ. ಈ ಪ್ರಾಣಿಯ ಶರೀರತತ್ತ್ವಕ್ಕೆ, ನಮ್ಮ ವೈದ್ಯಸೂತ್ರಕ್ಕೆ ಸಂಬಂಧವೇ ಇಲ್ಲದಂತೆ ಇದೆ. ಇದರ ಕಳೇಬರ ಲೋಕದಲ್ಲಿರುವ ಇತರ ಪ್ರಾಣಿಗಳ ಕಳೇಬರದಂತಹದ್ದಲ್ಲ. ಇದು ಈ ಲೋಕದ ಪ್ರಾಣಿಯೇ ಅಲ್ಲ” ಎಂದು ತೀರ್ಮಾನಿಸಿದರು.
ಈ ತೀರ್ಮಾನ ಬಾಯಿಂದ ಬಾಯಿಗೆ ಸಾಗಿ, ಜನಸಾಮಾನ್ಯರಲ್ಲಿ ಹಾಸ್ಯವನ್ನು ಹುಟ್ಟಿಸಿತು. ಪ್ರಾಣಿಶಾಸ್ತ್ರವನ್ನು ತಿಳಿದ, ಆಫ್ರಿಕಾದಿಂದ ಅನೇಕ ವಿಚಿತ್ರಮೃಗಗಳನ್ನು ಲಂಡನ್ ‘ಝೂ’ಕ್ಕೆ ತಂದಿದ್ದ “ಮಿಸ್ಟರ್ ಡಿಕೆನ್ಸನ್” ಡಾಕ್ಟರುಗಳನ್ನೆಲ್ಲರನ್ನೂ ಪರಿಹಾಸ ಮಾಡಿದನು. ತಾನಾಗಿದ್ದರೆ ಒಂದು ನಿಮಿಷದಲ್ಲಿಯೇ ಆ ಪ್ರಾಣಿಯ ವಿಷಯವನ್ನು ತಿಳಿಸುತ್ತಿದ್ದೆ ಎಂದು ಹೇಳಿದನು.
ಪ್ರಾಣಿಯನ್ನು ಎಲ್ಲ ರೀತಿಯಲ್ಲಿಯೂ ಪರೀಕ್ಷಿಸಿದರು. ಅದರ ಕೈಗಳ ಹಿಂದೆ ಇದ್ದ ಎರಡು ದೊಡ್ಡ ಉದ್ದವಾದ ಗಾಯಗಳು ಯಾಕೆ ಆಗಿವೆ ಎಂದು ಗೊತ್ತಾಗಲಿಲ್ಲ. “ಯಾವುದೋ ವಿಮಾನದಿಂದ ಇದು ಕೆಳಗೆ ಬಿದ್ದಿರಬಹುದು” ಎಂಬ ವಿಷಯ ಮಾತ್ರ ನಿಶ್ಚಯವಾಗಿ ತಿಳಿಯಿತು. “ಅದು ರಾತ್ರಿಯಲ್ಲಿ ಎಲ್ಲೋ ನಡೆದಿರಬೇಕು. ಈ ಪ್ರಾಣಿ ವಿಮಾನದಿಂದ ಕೆಳಕ್ಕೆ ಜಿಗಿಯುತ್ತಿರುವಾಗ ಎರಡೂ ಕೈಗಳನ್ನು ಹಿಂದಕ್ಕಿಟ್ಟುಕೊಂಡು ಹರಿತವಾದ ಯಾವುದೋ ವಸ್ತುವನ್ನು ಹಿಡಿದುಕೊಂಡಿರಬೇಕು. ಆಗ ಈ ಕೈಗಳ ಹಿಂದೆ ಕುಯ್ದುಕೊಂಡಿರಬೇಕು” ಎಂದು ನಿಶ್ಚಯಿಸಿದರು. ಆದರೆ “ಇದು ಹಾಗೆ ಬಿದ್ದಿದ್ದರೆ ಇದಕ್ಕೆ ದೇಹದ ಮೇಲೆ ಬೇರೆ ಎಲ್ಲಿಯೂ ಏಟು ಬೀಳಲಿಲ್ಲವೆ? ಅಷ್ಟು ಎತ್ತರದಿಂದ ಬಿದ್ದಿದ್ದರೆ ಹೇಗೆ ತಾನೇ ಏಟಾಗದೆ ಇರುತ್ತದೆ?” ಎಂದರು.
ಆ ಪ್ರಾಣಿಯ ಶರೀರದ ಮೇಲಿರುವ ಆಭರಣಗಳನ್ನೆಲ್ಲ ತೆಗೆದರು. ಎಲ್ಲವನ್ನೂ ಒಂದು ಪಟ್ಟಿ ಮಾಡಿ ಬರೆದು ಪೊಲೀಸರ ಅಧೀನದಲ್ಲಿ ಇಟ್ಟರು. ಡಾಕ್ಟರು ಅದರ ಗಾಯಕ್ಕೆ ಕಟ್ಟು ಕಟ್ಟಿ ಮದ್ದನ್ನು ಹಾಕಿದರು. ಎಷ್ಟು ಹೊತ್ತಾದರೂ ಆ ಪ್ರಾಣಿಯು ಕದಲಿ ಅಲ್ಲಾಡಲಿಲ್ಲ. ಅದರ ಮೇಲಿರುವ ಬಟ್ಟೆಯನ್ನು ಪರೀಕ್ಷಿಸಿದರು. ಅಷ್ಟು ಸುಕುಮಾರವಾದ ವಸ್ತçವನ್ನು ಯಾವ ದೇಶದಲ್ಲಿ ನೇಯಿಸಿದ್ದಾರೋ ಗೊತ್ತಾಗಲಿಲ್ಲ. “ಢಾಕಾ ಮಸ್ಲಿನ್” ಬಟ್ಟೆ ಎಂದು ಮಾತನಾಡಿಕೊಂಡು. ಅದು ಕೂಡ ಅಷ್ಟು ತೆಳುವಾಗಿದೆಯೋ ಇಲ್ಲವೋ! ಆ ವಸ್ತçಗಳಿಗೆ ಮೇಲಿನಿಂದ ಜರಿ! ಆ ಜರಿಯ ಸೊಗಸನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಅಂಚನ್ನು ಸಂಜೆಹೊತ್ತಿನ ಗುಲಾಬಿಯ ಬಣ್ಣದಿಂದ ಮಾಡಿದ್ದರು. ಆ ವಸ್ತçವೇ ಆಶ್ಚರ್ಯಕರವಾಗಿತ್ತು.
ಈ ಪ್ರಾಣಿಯನ್ನು ನೂರು ಜನ ಮನುಷ್ಯರು ಹಿಡಿದುಕೊಂಡು ಒಂದು ದೊಡ್ಡ ಮೋಟಾರುವ್ಯಾನಿನ ಮೇಲೆ ಹತ್ತಿಸಿದರು. ಇದನ್ನು ಪೊಲೀಸ್ ಸ್ಟೇಷನ್ನಿಗೆ ತೆಗೆದುಕೊಂಡು ಹೋಗಬೇಕೋ, ಮೃಗಾಲಯಕ್ಕೆ ತೆಗೆದುಕೊಂಡು ಹೋಗಬೇಕೋ ಗೊತ್ತಾಗಲಿಲ್ಲ. ಝೂ-ಅಧಿಕಾರಿ ಈ ಪ್ರಾಣಿ ತನ್ನದು ಎಂದು ಹೇಳಿದ. ಮೇಯರು “ಈ ಪ್ರಾಣಿ ಎಚ್ಚರಗೊಂಡ ನಂತರ ಅದರ ಗುಣವನ್ನು ಪರೀಕ್ಷಿಸುವ ತನಕ ಯಾವುದನ್ನೂ ನಿರ್ಣಯಿಸುವುದಕ್ಕೆ ಸಾಧ್ಯವಿಲ್ಲ” ಎಂದನು.
ಸ್ಕಾಟ್ಲೆಂಡ್ ಯಾರ್ಡಿನಲ್ಲಿ: ಹತ್ತು ಗಜ ಉದ್ದ, ಹತ್ತು ಗಜ ಅಗಲದ, ಹದಿನೈದು ಗಜದಷ್ಟು ಎತ್ತರದ ಬಲಿಷ್ಠವಾದ ದೊಡ್ಡ ಕಬ್ಬಿಣದ ಪಂಜರವನ್ನು ಕಟ್ಟಿದರು. ಸುತ್ತಲೂ ನೂರು ಜನ ಪೊಲೀಸಿನವರನ್ನು ಗುಂಡನ್ನು ತುಂಬಿಸಿದ ಪಿಸ್ತೂಲಿನ ಜೊತೆ ಅದರ ಕಾವಲಿಗೆ ನಿಲ್ಲಿಸಿದರು. ಅಷ್ಟರಲ್ಲಿ ಹೊತ್ತು ಮುಳುಗಿತ್ತು. ಹತ್ತು ಜನ ಡಾಕ್ಟರು ಆ ಪ್ರಾಣಿಯ ಸುತ್ತಲೂ ಕುಳಿತಿದ್ದರು. ಅದು ಒಂದೊಮ್ಮೆ ಎಚ್ಚೆತ್ತರೆ ಆಹಾರವೇನು ಎಂದು ವಿಚಾರಣೆ ಸಾಗಿತು. ಹುಲ್ಲು, ಹುರುಳಿ, ರೊಟ್ಟಿಗಳು, ಸಾರಾಯಿ ಶೀಶೆಗಳು ಎಲ್ಲವನ್ನೂ ಸಿದ್ಧವಾಗಿಟ್ಟುಕೊಂಡರು. ಆ ಪ್ರಾಣಿ ಎಚ್ಚರಗೊಳ್ಳುವುದನ್ನೇ ಕಾಯುತ್ತಿದ್ದರು.
* * *
೨
ಆ ಪ್ರಾಣಿ, ಬಳಿಕ ಹದಿನೈದು ದಿನಗಳಿಗೆ ಕದಲಾಡಲು ಪ್ರಾರಂಭಿಸಿತು. ಇಲ್ಲಿಯ ತನಕ ಆ ಪ್ರಾಣಿಯನ್ನು ನೋಡುವುದಕ್ಕೋಸ್ಕರ ಇಂಗ್ಲೆಂಡಿನ ನಾಲ್ಕು ದಿಕ್ಕುಗಳಿಂದ, ಯುರೋಪಿನ ಎಲ್ಲ ಕಡೆಗಳಿಂದ ಜನರು ತೀರ್ಥಯಾತ್ರೆಗೆ ಬರುವಂತೆ ಬಂದು ನೋಡಿ ಹೋಗುತ್ತಿದ್ದರು. ಹೊಸದಾಗಿ ಬರುತ್ತಿರುವ ಜನರಿಗೆ ಲಂಡನ್ನಿನ ಹೊಟೇಲುಗಳು ಸಾಕಾಗುತ್ತಿರಲಿಲ್ಲ. ಜನರಿಂದ ಊರೆಲ್ಲ ಕಿಕ್ಕಿರಿದು ತುಂಬಿತ್ತು.
ಹೀಗಿರುವಾಗ ಆ ಪ್ರಾಣಿ ಹಾಗೆ ಹೀಗೆ ಕದಲಾಡಿತು ಎಂಬ ಸುದ್ದಿ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಇಡೀ ಲಂಡನ್ನಿಗೆ ತಿಳಿದುಹೋಗಿತ್ತು. ಕಬ್ಬಿಣದ ಪಂಜರದ ಸುತ್ತಲೂ ರಿವಾಲ್ವರುಗಳು, ಎಂಟು ಬ್ಯಾರೆಲ್ ಬಂದೂಕು ಹಿಡಿದುಕೊಂಡು ಸೈನಿಕರು ನಿಂತಿದ್ದರು. ಆ ಮೃಗದ ಬೆನ್ನಿನ ಮೇಲೆ ಇರುವ ಗಾಯಗಳು ಡಾಕ್ಟರು ಕಟ್ಟಿದ ಕಟ್ಟುಗಳಿಂದ ಮಾಯ್ದಿರಲಿಲ್ಲ. ಅದಕ್ಕೆ ಎಚ್ಚರವಾಯಿತು. ಕೈಗಳನ್ನು ಚಾಚಿ, ಕಾಲುಗಳನ್ನು ನೀಡಿ, ಮೈಮುರಿದು ಹಾಗೆ ಹೀಗೆ ಪಕ್ಕಕ್ಕೆ ಹೊರಳಾಡಿ, ಅದು ಕಣ್ಣನ್ನು ತೆರೆಯಿತು. ತಕ್ಷಣ ಸುತ್ತಲೂ ಇದ್ದ ಸೈನಿಕರು ಇನ್ನಷ್ಟು ಜಾಗ್ರತರಾದರು.
ಆ ಪ್ರಾಣಿ ಕಣ್ಣು ತೆರೆದು ತನ್ನ ಸುತ್ತಲೂ ನೋಡಿತು. ಆಶ್ಚರ್ಯಗೊಂಡವರಂತೆ ಹಾಗೆ ಹೀಗೆ ನೋಡಿತು. ಎಗರಿ ಒಮ್ಮೆ ನೆಗೆದು ನಿಂತುಕೊಂಡಿತು. “ಕಿಂ ಗದೋಮ್ಹಿ?” (ಕಿಂ ಗತೋಸ್ಮಿ- ಏನಾಗಿದ್ದೇನೆ?) ಎಂದು ದೊಡ್ಡದಾಗಿ ಒಂದು ಕೂಗನ್ನು ಹಾಕಿತು.
ಆ ಕೂಗು ಹತ್ತಿರದಲ್ಲಿದ್ದವರಿಗೆ ಸರಿಯಾಗಿ ಕೇಳಲಿಲ್ಲ. ಕುದುರೆಯ ಕೆನೆತದಂತೆ ಕೇಳಿತ್ತು. ಆದರೆ ಒಂದು ಫರ್ಲಾಂಗು ದೂರದಲ್ಲಿದ್ದವರಿಗೆ ಅಕ್ಷರಗಳೆಲ್ಲವೂ ಸ್ಪಷ್ಟವಾಗಿ ಕೇಳಿಸಿದ್ದವು. ಆದರೆ ಅದು ಭಾಷೆಯೆಂದು ಯಾರಿಗೆ ತಾನೇ ತಿಳಿದಿತ್ತು! ಭಾಷೆಯಾಗಿದ್ದರೆ ಯಾವ ಭಾಷೆಯೋ? ಅಲ್ಲದೆ ಈ ಪ್ರಾಣಿಗೆ ಭಾಷೆಯೇನು ಗೊತ್ತು? ಅದು ಭಾಷೆಯಾಗಿರಬೇಕೆಂಬ ಊಹೆಯೇ ಯಾರಿಗೂ ಬರಲಿಲ್ಲ. ದೂರದಲ್ಲಿ ಆ ಕೂಗೇ ಅಕ್ಷರಗಳಂತೆ ಕೇಳಿಸಿದವರಿಗೆ ಸ್ವಲ್ಪ ಆಶ್ಚರ್ಯವುಂಟಾಯಿತು.
ಆ ಹೊತ್ತಿಗೆ ಹಗಲು ಎರಡು ಜಾವ ಆಗಿತ್ತು. ಆ ಪ್ರಾಣಿ ತನ್ನ ಸುತ್ತ ಇದ್ದ ಕಬ್ಬಿಣದ ಪಂಜರವನ್ನು ನೋಡಿ, ಒಮ್ಮೆ ದೊಡ್ಡ ಹೇಷಾರವವನ್ನು ಮಾಡಿತು. ಅದು ನಕ್ಕಂತೆ ಇತ್ತು. ಆದರೆ ಮತ್ತೆ ಅದರ ಕಣ್ಣುಗಳಲ್ಲಿ ಒಂದು ವಿಧವಾದ ದುಃಖ ಕಂಡುಬಂದಿತ್ತು. ಜೊತೆಯಲ್ಲೇ ಆ ಪ್ರಾಣಿ ಭೂಮಿಗೆ ಬಿದ್ದ ಬಾಧೆಯಿಂದ ನೊಂದುಕೊಳ್ಳುತ್ತಿರುವಂತೆ ಒಂದು ಬಾರಿ ಅರಚಿತು. ಆ ಕೂಗು ದೂರದಲ್ಲಿರುವವರಿಗೆ “ಅಹೋ ಮೇ ಅಧಣ್ಣತ್ತ, ಇಂ ಕಿಮದ್ದಿ ಕಿಂ ಸಮಾದಿಠ್ಠೋ” (“ಅಹೋ ಮಯಿ ಅಧನ್ಯತ್ವಮ್, ಕಿಮೇತತ್ ಕಿಂ ಸಮಾದಿಷ್ಟಃ” – ಓಹೋ! ನನ್ನ ಅಧನ್ಯತ್ವ! ಏನಿದು? ಏನು ನಡೆದಿದೆ?”) ಎಂದು ಹೇಳಿದಂತೆ ಕೇಳಿಸಿತು. ಹತ್ತಿರದಲ್ಲಿರುವ ಪೊಲೀಸರೂ, ಸೈನಿಕರೂ ಕುದುರೆ ಚಿತ್ರವಿಚಿತ್ರವಾಗಿ ಕೆನೆಯುತ್ತಿದೆ ಎಂದುಕೊಂಡರು. ಅವರಲ್ಲಿ ಕೆಲವರು ಹಿರಿಯರು ಇದರ ತತ್ತ್ವ ಇಷ್ಟು ಮಾತ್ರದಿಂದಲೇ ತಿಳಿಯುವುದಿಲ್ಲ ಎಂದುಕೊಂಡರು.
ಮತ್ತೆ ಸ್ವಲ್ಪ ಸಮಯದ ನಂತರ ಆ ಪ್ರಾಣಿ ಎದ್ದು ಕುಳಿತುಕೊಂಡು ಜನರನ್ನು ನೋಡಿತು. ಅದಕ್ಕೂ ಸ್ವಲ್ಪ ಆಶ್ಚರ್ಯ ಕಡಮೆಯಾಗಿತ್ತು. ಇಷ್ಟರಲ್ಲಿ ಅಲ್ಲಿರುವ ಕೆಲವು ಅಧಿಕಾರಿಗಳು ಆಹಾರವನ್ನು ತಂದು ಅದರ ಹತ್ತಿರಕ್ಕೆ ತಳ್ಳಿದರು. ಅದು ಆಹಾರವನ್ನು ನೋಡಿತು. ರೊಟ್ಟಿ ಹುರುಳಿ ಗಡ್ಡೆಗೆಣಸುಗಳು ಇವೆಲ್ಲವನ್ನೂ ನೋಡಿದ ಆ ಪ್ರಾಣಿಗೆ ಅವು ಯಾವುದೂ ಗೊತ್ತಾಗಲಿಲ್ಲ. ಅಷ್ಟರಲ್ಲಿ ಕೆಲವು ಹಣ್ಣುಗಳನ್ನು ತಂದು ಅದರ ಮುಂದಕ್ಕೆ ಇಟ್ಟರು. ಅದು ಅವುಗಳ ಕಡೆ ನೋಡುತ್ತಲೇ ಅವು ಹಣ್ಣುಗಳೆಂದು ತಿಳಿದುಕೊಂಡಂತೆ ಸ್ವಲ್ಪ ಅಭಿನಯವನ್ನು ಮಾಡಿತು. ಆ ಹಣ್ಣನ್ನು ಕೈಗಳಲ್ಲಿ ತೆಗೆದುಕೊಂಡಿತು. ಎಲ್ಲರೂ ತಿನ್ನುತ್ತದೆ ಎಂದುಕೊಂಡರು. ಆದರೆ ಅದು ಹಣ್ಣುಗಳನ್ನು ತುಂಡು ಮಾಡಿ ಅತ್ತ ಇತ್ತ ನೋಡಿ ಮತ್ತೆ ಪಕ್ಕದಲ್ಲಿಯೇ ಇಟ್ಟಿತು.
“ಹದಿನೈದು ದಿನಗಳಿಂದ ತಿಂಡಿಯಿಲ್ಲ ಇದಕ್ಕೆ, ಅಬ್ಬಾ! ಹಣ್ಣನ್ನೂ ತಿನ್ನುವುದಿಲ್ಲವೇ?” ಎಂದು ಕೆಲವರು, “ಅಷ್ಟು ದೊಡ್ಡ ಮೃಗಕ್ಕೆ ಹಸಿವು ತೀರಬೇಕೆಂದರೆ ಈ ಹಣ್ಣುಗಳೇನು ಸಾಕಾಗುತ್ತವೆ?” ಎಂದು ಕೆಲವರು, “ವಿಚಿತ್ರವಾಗಿದೆ! ಕುದುರೆ ಹಣ್ಣು ತಿನ್ನುವುದೇ?” ಎಂದು ಕೆಲವರು ಮಾತನಾಡಿಕೊಂಡರು.
ಸ್ವಲ್ಪ ಹೊತ್ತು ಆ ಪ್ರಾಣಿ ಆಲೋಚಿಸಿತು. ಪಂಜರದ ಹೊರಗಿರುವ ಒಬ್ಬನಿಗೆ ಕೈಯಿಂದ ಹತ್ತಿರಕ್ಕೆ ಬಾ ಎಂದು ಸಂಜ್ಞೆ ಮಾಡಿತು. ಅವನು ಹತ್ತಿರಕ್ಕೆ ಬಂದ ಹಾಗೆಯೇ ಅದು ಕೆನೆಯಿತು. ಆ ಧ್ವನಿ ದೂರದಲ್ಲಿರುವವರಿಗೆ “ಕೋಣು ತುಮಂ (ಕೋ ನು ತ್ವಂ? – ನೀನು ಯಾರು?”) ಎಂದು ಹೇಳಿದಂತೆ ಕೇಳಿತು.
ಇದರಿಂದ ಆ ಪ್ರಾಣಿಯೇನೋ ಮಾತನಾಡುತ್ತಿದೆ ಎಂದು ಎಲ್ಲರೂ ಭಾವಿಸಿಕೊಳ್ಳತೊಡಗಿದರು. ಆದರೆ ಏನು ಮಾತನಾಡುತ್ತಿದೆ ಎಂಬ ವಿಷಯ ಹಾಗಿರಲಿ, “ಇದು ಮಾತನಾಡುವುದೇನು?” ಎಂಬ ಆಶ್ಚರ್ಯವೇ ಹೆಚ್ಚಾಗಿಹೋಯಿತು.
ತಾನು ಹೇಳಿದ್ದು ಇವರಿಗೆ ಗೊತ್ತಾಗಲಿಲ್ಲವೆಂದು ಆ ಪ್ರಾಣಿಗೆ ತಿಳಿಯಿತು. ಅದೇನೆಂದುಕೊಂಡಿತೊ, ಎರಡೂ ಕೈಗಳಿಂದ ತಲೆಯ ಮೇಲೆ ನೀರನ್ನು ಹೊಯ್ದುಕೊಳ್ಳುವಂತೆ ಸಂಜ್ಞೆ ಮಾಡಲು ಪ್ರಾರಂಭಿಸಿತು. ಯಾರಿಗೂ ಏನೂ ತಿಳಿಯಲಿಲ್ಲ. ಸ್ವಲ್ಪ ಹೊತ್ತಿಗೆ ನೋಡಲು ಬಂದವರಲ್ಲಿ ಒಬ್ಬ ಹಿಂದೂಸ್ಥಾನದವನಿದ್ದನು. ಅವನು “ಸ್ನಾನವನ್ನು ಮಾಡಬೇಕೆಂದೇನೋ” ಎಂದನು.
ಈ ಮಾತು ಕ್ರಮೇಣ ಮೇಯರಿನ ಕಿವಿಗೆ ಬಿತ್ತು. ಆ ಸಂಗತಿ ನಿಜವೇ ಎಂದು ಅನಿಸಿತುs. ಆ ಪ್ರಾಣಿಗೆ ಸ್ನಾನ ಮಾಡಿಸುವುದು ಹೇಗೆ? ಎಷ್ಟು ನೀರನ್ನು ತಂದರೆ ಸರಿಯಾಗುತ್ತದೆ? “ಅದರ ಕಾಲಿಗೆ ಕೈಗೆ ಸಂಕೋಲೆ ಹಾಕಿ ಥೇಮ್ಸ್ ನದಿಯ ಬಳಿ ಕರೆದುಕೊಂಡು ಹೋಗೋಣ” ಎಂದರು ಕೆಲವರು. “ಅದು ಬಹಳ ಅಪಾಯಕಾರಿ ಕೆಲಸ. ದಾರಿಯಲ್ಲಿ ಇದು ಮನುಷ್ಯರ ಮೇಲೆ ಬಿದ್ದು ಕೊಲ್ಲಲೂಬಹುದು” ಎಂದು ಇನ್ನು ಕೆಲವರು ಹೇಳಿದರು.
ಹೀಗೆಲ್ಲ ಅಲ್ಲವೆಂದು ಅಗ್ನಿಶಾಮಕದಳದಲ್ಲಿ ಬಳಸುವ ಟ್ಯಾಂಕನ್ನು ತಂದು ಪೈಪಿನಲ್ಲಿ ಅದರ ಮೇಲೆ ನೀರನ್ನು ಬಿಟ್ಟರು. ಆ ಪ್ರಾಣಿ ಮೇಲಿಂದ ಕೆಳಗಿನವರೆಗೆ ಒದ್ದೆಯಾಗಿಬಿಟ್ಟಿತು. ಬೋನಿನಲ್ಲೂ ಕೆಳಗೆಲ್ಲ ಕೆಸರಾಗಿಬಿಟ್ಟಿತು. ಆಗ ಆ ಪ್ರಾಣಿ ತನ್ನ ಮೇಲಿರುವ ಉತ್ತರೀಯವನ್ನು ಹಿಂಡಿ ಮೈಯನ್ನು ಒರೆಸಿಕೊಂಡಿತು. ಆ ಉತ್ತರೀಯವನ್ನು ಕಟ್ಟಿಕೊಂಡು ಧೋತಿಯನ್ನು ಹಿಂಡಿ ಬೋನಿನ ಕಟಕಟೆಗಳಿಗೆ ಒಣಗಿಸಲು ಹರವಿತು. ಇದನ್ನೆಲ್ಲ ನೋಡುತ್ತಿರುವ ಜನ ಮತ್ತಷ್ಟು ಮುಗಿಬೀಳುತ್ತಿದ್ದರು. ಅವರ ಆಶ್ಚರ್ಯಕ್ಕೆ ಕೊನೆಮೊದಲಿರಲಿಲ್ಲ. ಕೆಳಗೆಲ್ಲ ಕೆಸರಾಗಿರುವ ಕಾರಣ ಕುಳಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬಂತೆ ಆ ಪ್ರಾಣಿ ಸನ್ನೆ ಮಾಡಿತು. ಅದನ್ನು ತಿಳಿದುಕೊಂಡು ಒಂದು ದೊಡ್ಡ ಹಲಗೆಯನ್ನು ತಂದು ಆ ಬೋನಿನ ಒಳಗೆ ಕೊಟ್ಟರು. ಅದು ಆ ಹಲಗೆಯನ್ನು ಹಾಕಿಕೊಂಡು ಅದರ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತುಕೊಂಡು ಮೂಗನ್ನು ಮುಚ್ಚಿಕೊಂಡು ಧ್ಯಾನವನ್ನು ಮಾಡಲು ಪ್ರಾರಂಭಿಸಿತು.
ಸುತ್ತಮುತ್ತ ಇರುವವರಿಗೆ ಇದರ ತತ್ತ್ವವೇನೆಂದು ತಿಳಿಯಲಿಲ್ಲ. ಒಂದು ಗಂಟೆಯಷ್ಟು ಕಾಲದ ಬಳಿಕ ಮತ್ತೆ ಕಣ್ಣನ್ನು ತೆರೆಯಿತು. ಎದ್ದು ನಿಂತುಕೊಂಡಿತು. ಆರಿರುವ ಬಟ್ಟೆಯನ್ನು ಕಟ್ಟಿಕೊಂಡಿತು. ತಾನು ಕಟ್ಟಿಕೊಂಡ ಉತ್ತರೀಯ ಒದ್ದೆಯಾಗಿದೆಯೆಂದು ಅದನ್ನು ಒಣಗಲು ಹಾಕಿತು. ಹಣ್ಣುಗಳನ್ನು ತೋರಿಸಿ ಇಂತಹವುಗಳನ್ನು ತೆಗೆದುಕೊಂಡು ಬನ್ನಿ ಎಂದು ಸನ್ನೆ ಮಾಡಿತು. ತಕ್ಷಣ ಮೇಯರ್ ಜನರನ್ನು ಕಳುಹಿಸಿ ಒಂದು ತಟ್ಟೆಯಲ್ಲಿ ಹಣ್ಣುಗಳನ್ನು ತರಿಸಿದನು. ಒಂದು ಚೊಂಬು ಬೇಕೆಂದು ಸನ್ನೆ ಮಾಡಿತು. ಆ ದೇಶದಲ್ಲಿ ಚೊಂಬೆಲ್ಲಿ ಸಿಗುತ್ತದೆ! ಒಂದು ಗ್ಲಾಸನ್ನು ತಂದುಕೊಟ್ಟರು. ಆ ಗ್ಲಾಸನ್ನು ತೆಗೆದುಕೊಂಡ ಪ್ರಾಣಿ ಹಣ್ಣುಗಳ ಮೇಲೆ ನೀರನ್ನು ಚೆಲ್ಲಿ ಏನೋ ಗೊಣಗಿಕೊಳ್ಳುತ್ತ ಕೈಗಳನ್ನು ಹಣ್ಣುಗಳ ಮೇಲೆ ಸುತ್ತಿಸಿ ಆ ತಟ್ಟೆಯ ಹಣ್ಣುಗಳೆಲ್ಲವನ್ನೂ ತಿಂದಿತು. ನೀರು ಬೇಕೆಂದು ಕೈಯನ್ನು ತೋರಿಸಿತು. ಮತ್ತೆ ಟ್ಯಾಂಕಿನಿಂದ ಬಿಟ್ಟರು. ಆ ನೀರನ್ನು ಹೊಟ್ಟೆ ತಣಿಯುವಷ್ಟು ಕುಡಿಯಿತು.
ಆ ಬಳಿಕ ಹಲಗೆಯ ಮೇಲೆ ಕುಳಿತುಕೊಂಡು ಅವರ ಕಡೆಗೆ ನಾಲ್ಕೂ ದಿಕ್ಕುಗಳಲ್ಲಿಯೂ ನೋಡಿತು. ಸ್ವಲ್ಪ ಹೊತ್ತಿಗೆ ಮತ್ತೆ ನಕ್ಕಿತು. ಅಷ್ಟು ಹೊತ್ತಿಗೆ ಜನರಿಗೆ ಆ ಪ್ರಾಣಿ ಹೀಗೆ ನಗುತ್ತದೆಯೆಂದು ಗೊತ್ತಾಗಿತ್ತು. ಮೃಗ ಆ ಕಟಕಟೆಯ ಕಡೆಗೆ ನೋಡಿ ಇವು ಏತಕ್ಕೆ ಎಂಬಂತೆ ಪ್ರಶ್ನಿಸಿತು. ಎಲ್ಲರಿಗೂ ಆಶ್ಚರ್ಯವಾಯಿತು. ಕೆಲವರು ಹೇಳಿದರು “ಇದು ಮೃಗವಲ್ಲ, ಮನುಷ್ಯನೇ! ತಲೆ ಬುರುಡೆ ಮಾತ್ರ ಕುದುರೆಯದ್ದು. ನಾವು ಬೇರೆ ಬೇರೆ ಖಂಡಗಳನ್ನೆಲ್ಲ ಕಂಡುಹಿಡಿದಿದ್ದೇವೆಯಾದರೂ ಈ ರೀತಿಯ ಮನುಷ್ಯರು ಯಾವ ಖಂಡದಲ್ಲಿದ್ದಾರೋ ಆ ಖಂಡವನ್ನು ಕಂಡುಹಿಡಿದಿಲ್ಲ. ಹೋಗಲಿ, ಅವನು ಮಾತನಾಡುವ ಭಾಷೆಯಾದರೂ ಯಾವುದು ಎಂದು ಕಂಡುಕೊಳ್ಳೋಣ. ಅವರದ್ದು ಯಾವ ದೇಶವೋ ಕಂಡುಕೊಳ್ಳೋಣ. ಆ ಮನುಷ್ಯ ಪ್ರಾಣಿಯಂತೂ ಅಲ್ಲ. ನಾಗರಿಕತೆ ಚೆನ್ನಾಗಿ ಬೆಳೆದ ದೇಶದವರಂತಿದ್ದಾನೆ. ಅಂತಹವರ ಸುತ್ತ ಪಂಜರ ಏಕೆ? ತೆಗೆದುಹಾಕಿದರೆ ಚೆನ್ನಾಗಿರುತ್ತದೆ” ಎಂದು. ಅಧಿಕಾರಿಗಳು ಮಾತ್ರ “ಈ ಪಂಜರವನ್ನು ತೆಗೆಯುವುದಕ್ಕೆ ಅವಕಾಶವಿಲ್ಲ. ಇದು ಪ್ರಾಣಿ ಅಲ್ಲ ಎಂಬ ನಂಬಿಕೆ ಹೇಗಾಗುತ್ತದೆ? ಜನರ ಮೇಲೆ ಬಿದ್ದು ಮುರಿದುಕೊಂಡು ತಿಂದರೆ ಹೇಗೆ?” ಎಂದರು. ಕಬ್ಬಿಣದ ಪಂಜರವನ್ನು ತೆಗೆಯಲಿಲ್ಲ.
ಸುತ್ತಲೂ ಇರುವ ಅಧಿಕಾರಿಗಳು ಇಂಗ್ಲಿಷಿನಲ್ಲಿ ಆ ಪ್ರಾಣಿಗೆ ಬಹಳಷ್ಟು ವಿಷಯಗಳನ್ನು ಹೇಳಿದರು. ಆ ಭಾಷೆ ಅದಕ್ಕೆ ತಿಳಿಯುತ್ತಿಲ್ಲ ಎಂದು ತಿಳಿದುಕೊಂಡು ಫ್ರೆಂಚು, ಜರ್ಮನ್, ಇಟಾಲಿಯನ್, ರಷ್ಯನ್ ಭಾಷೆಗಳನ್ನೆಲ್ಲ ಒಂದಾದ ಮೇಲೆ ಒಂದರಂತೆ ಮಾತನಾಡಿ ಕೇಳಿಸಿದರು. ಅದಕ್ಕೆ ಯಾವುದೂ ಗೊತ್ತಾಗಲಿಲ್ಲ. ಒಬ್ಬ ನೀಗ್ರೋನನ್ನು ಕರೆದು ಅವರ ಭಾಷೆಯನ್ನೂ ಮಾತನಾಡಿಸಿದರು. ಅವರ ಮಾತುಗಳನ್ನೆಲ್ಲ ಕೇಳಿ ಆ ಪ್ರಾಣಿ ಪರಿಹಾಸ ಮಾಡುವಂತೆ ನಗಲು ಪ್ರಾರಂಭಿಸಿತು. ಎಲ್ಲರೂ ಏನೂ ತಿಳಿಯದೆ ಸುಮ್ಮನಾದರು. ಒಂದಿಬ್ಬರು ಮಾತ್ರವೇ ಆ ಪ್ರಾಣಿ ನಮ್ಮ ಭಾಷೆಯನ್ನು ಕೇಳಿ ಪರಿಹಾಸ ಮಾಡುತ್ತಿದೆ ಎಂದು ಮನಸ್ಸಿನಲ್ಲೇ ಎಂದುಕೊಂಡರು. ಸ್ವಲ್ಪ ಹೊತ್ತಿಗೆ “ಕಿಂ ಮಏಸುದಂ ಕಿಂ ಏದಂ?” (ಕಿಂ ಮಯಾ ಶ್ರುತಂ, ಕಿಮಿದಂ – ನಾನು ಕೇಳುತ್ತಿರುವುದೇನು? ಇದೇನು?) ಎಂಬ ಮಾತುಗಳು ದೂರಕ್ಕೆ ಕೇಳುವಂತೆ ಕೆನೆಯಿತು. ಆಗ ಎಲ್ಲರಿಗೂ ಆ ಪ್ರಾಣಿ ಮಾತನಾಡುತ್ತಿದೆ ಎಂದು ಸ್ಪಷ್ಟವಾಗಿ ತಿಳಿಯಿತು. ನಮ್ಮ ಭಾಷೆಗಳು ಯಾವುದೂ ಅದಕ್ಕೆ ತಿಳಿಯದಿರುವ ಕಾರಣ ಏನು ಮಾಡಬೇಕೆಂದು ತಿಳಿಯಲಿಲ್ಲ.
ಆದರೆ ಆ ಮೃಗದಲ್ಲಿ ಒಂದು ವಿಶೇಷವು ಕಂಡಿತ್ತು. ಸಿಟ್ಟಾಗುವುದಿಲ್ಲ, ವ್ಯಗ್ರವಾಗುವುದಿಲ್ಲ. ತನ್ನ ಸುತ್ತಲೂ ಇರುವ ಜನರನ್ನು ಯಾವುದೇ ಆದರವಿಲ್ಲದೆ ನೋಡುತ್ತ ಇದೆ.
ಇಷ್ಟು ಹೊತ್ತೂ ಸೈನಿಕರು ಸುತ್ತಲೂ ಬಂದೂಕುಗಳನ್ನು ಸಿದ್ಧವಾಗಿರಿಸಿಕೊಂಡು ಕುಳಿತಿದ್ದರು. ಈಗ ಅದರ ಕಣ್ಣು ಒಂದು ಬಂದೂಕಿನ ಮೇಲೆ ಬಿತ್ತು. ಏತಕ್ಕೋ ಅದು ಆಗ ಪಂಜರಕ್ಕೆ ಅಂಟಿಕೊಂಡು ನಿಂತಿತು. ಅದರ ಹಿಂದಿರುವ ಸೈನಿಕ ಭಯದಿಂದ ನಾಲ್ಕು ಅಡಿ ಹಿಂದೆ ಸರಿದು ಬಂದೂಕನ್ನು ಎತ್ತಿ ಹಿಡಿದುಕೊಂಡನು. ಆಗ ಅದೂ ಹಿಂದಕ್ಕೆ ತಿರುಗುವುದನ್ನು ನಿಲ್ಲಿಸಿತು. ಅದನ್ನು ನೋಡಿ ಅವನ ಭಯವನ್ನೂ ನೋಡಿ ಅದು ಯಾವುದೋ ಮಾರಣಾಯುಧ ಎಂದು ತಿಳಿದುಕೊಂಡಿತು. ಅದರ ಕಡೆಗೆ ಸಾಭಿಪ್ರಾಯವಾಗಿ ನೋಡಿತು. ಅದನ್ನು ತನ್ನ ಕೈಗೆ ಕೊಡುವಂತೆ ಸನ್ನೆ ಮಾಡಿ ಕೇಳಿತು. ಅವನು ಕೊಡಲಿಲ್ಲ.
ಎಲ್ಲರೂ ಆಶ್ಚರ್ಯದಿಂದ ನೋಡಿದರು. ಅಷ್ಟು ಹೊತ್ತಿಗೆ ಹೊತ್ತು ಕಂತಿತ್ತು. ಜನ ಅವರವರ ದಾರಿಯಲ್ಲಿ ಮರಳತೊಡಗಿದರು. ಒಬ್ಬ ಪೊಲೀಸ್ ಇನ್ಸ್ಪೆಕ್ಟರನ ಮಗ, ಎಂಟುವರ್ಷದ ಹುಡುಗ ತನ್ನ ಕುತೂಹಲದಿಂದ ಕೈಯಲ್ಲಿರುವ ಬ್ಯಾಟಿನಿಂದ ಆ ಮೃಗದ ಹಿಂದಿನಿಂದ ತಿವಿದನು. ಅದು ಹಿಂದಕ್ಕೆ ತಿರುಗಿ ನೋಡಿತು. ಅವನು ದೂರಕ್ಕೆ ಓಡಿಬಿಟ್ಟನು. ಅವನನ್ನು ಹಿಡಿದುಕೊಳ್ಳಬೇಕೆಂದು ಅದು ತನ್ನ ಕೈಯನ್ನು ಕಟಕಟೆಗಳಿಂದ ಹೊರಕ್ಕೆ ಚಾಚಿತು. ಅವನು ದೊರೆಯಲಿಲ್ಲ, ಆದರೆ ಒಬ್ಬ ಸೈನಿಕ ಕೈಗೆ ಸಿಕ್ಕಿದ. ಅವನ ಕೈಯಲ್ಲಿರುವ ಬಂದೂಕನ್ನು ಆ ಮೃಗ ಸೆಳೆದುಕೊಂಡಿತು. ಅದನ್ನು ಪಂಜರದೊಳಕ್ಕೆ ತೆಗೆದುಕೊಂಡಿತು. ತತ್ಕ್ಷಣ ಜನರು ಎಲ್ಲೆಲ್ಲಿಯೋ ಚೆಲ್ಲಾಪಿಲ್ಲಿಯಾಗಿ ಓಡಿಹೋದರು. ಪೊಲೀಸರೂ ಸೈನಿಕರೂ ಕೂಡ ಓಡಲು ಪ್ರಾರಂಭಿಸುತ್ತಿರುವಾಗ ಮೇಯರು ತನ್ನ ಆಜ್ಞೆಯಿಂದ ನಿಲ್ಲಿಸಿದನು. ಆ ಪ್ರಾಣಿ ಬಂದೂಕನ್ನು ತೆಗೆದುಕೊಂಡು ಅದನ್ನು ಪರಿಶೀಲಿಸಲು ಪ್ರಾರಂಭಿಸಿತು.
(ಸಶೇಷ)