ಒಬ್ಬ ಪಂಡಿತ “ನಿಮ್ಮ ಹೆಸರು ‘ಹಾಹಾಹೂಹೂ’ ಎಂದಾ?” ಎಂದನು. ಆಗ ಆ ಕುದುರೆ ಮನುಷ್ಯ ಆಶ್ಚರ್ಯಗೊಂಡಂತೆ ಬಾಯಿ ತೆರೆಯಿತು. ಕಣ್ಣು ಅಗಲವಾಯಿತು. ಎದ್ದು ನಿಂತು ಮೈಮುರಿಯುವಷ್ಟರಲ್ಲಿ ದುಃಖಪಡುತ್ತಿರುವಂತೆ ಕಂಡನು. ಅವನ ಬಾಯಿಂದ “ಅಥ ಕಿಂ” ಎಂದು ಯಂತ್ರವಿಲ್ಲದೆ ಬಂದ ಮಾತು ದೊಡ್ಡದಾದ ಗುಡುಗಿನಂತೆ ಕೇಳಿಸಿತು. ಅಲ್ಲಿಂದ ಮೊದಲಾಗಿ ಪಂಡಿತರು ಮಾತ್ರ ಅವನನ್ನು “ಹಾಹಾಹೂಹೂ” ಎಂದು ಹೇಳುವುದಕ್ಕೆ ಪ್ರಾರಂಭಿಸಿದರು. ಅದು ಉದ್ದವಾದ ಹೆಸರಾದ ಕಾರಣ “ಹಾಹೂ” ಎಂದು ಆ ಹೆಸರನ್ನು ಸಣ್ಣದಾಗಿಸಿದರು.
ಆ ಪ್ರಾಣಿಯ ಕೈಯಲ್ಲಿ ಸಿಕ್ಕಿದ ಬಂದೂಕನ್ನು ಹಿಂದೆ ಪಡೆದುಕೊಳ್ಳುವುದು ಹೇಗೆಂದು ಅಧಿಕಾರಿಗಳೆಲ್ಲ ವಿಚಾರಿಸುತ್ತಿದ್ದರು. ಅವರೆಲ್ಲರೂ ವಿಚಾರಿಸುತ್ತಿದ್ದ ಹೊತ್ತಿನಲ್ಲಿ ಆ ಪ್ರಾಣಿ ಬಂದೂಕನ್ನು ಹಾಗೆ ಹೀಗೆ ತಿರುಗಿಸಿ ಪರಿಶೀಲಿಸಲು ಪ್ರಾರಂಭಿಸಿತ್ತು. ಯಾವ ಸಮಯದಲ್ಲಿ ಅದರ ಕೈ ಟ್ರಿಗ್ಗರಿನ (ಕುದುರೆ) ಮೇಲೆ ಬೀಳುತ್ತದೆಯೋ, ಯಾವಾಗ ಗುಂಡು ಸಿಡಿಯುತ್ತದೆಯೋ ಯಾರಿಗೆ ಬೀಳುತ್ತದೆಯೋ ಎಂದು ಎಲ್ಲರೂ ಭಯಪಡಲು ಪ್ರಾರಂಭಿಸಿದರು. ಮೇಯರ್ ಆಜ್ಞೆಯಿಲ್ಲದಿದ್ದರೆ ಸಾಮಾನ್ಯ ಸೈನಿಕರೆಲ್ಲರೂ ಅಷ್ಟರಲ್ಲೇ ಓಡಿಹೋಗುತ್ತಿದ್ದರು. ಅವರಲ್ಲಿ ಒಬ್ಬ ಹಿರಿಯ ಇನ್ಸ್ಪೆಕ್ಟರ್ ಒಂದು ಉಪಾಯವನ್ನು ಆಲೋಚಿಸಿದನು. ಒಂದು ಬೀದಿನಾಯಿಯನ್ನು ತರಿಸಿ, ಅದನ್ನು ಆ ಪ್ರಾಣಿ ನೋಡುತ್ತಿರುವಂತೆಯೇ ಬಂದೂಕಿನಿಂದ ಗುಂಡು ಹೊಡೆದನು. ಅದು ಸತ್ತುಹೋಯಿತು. ಬಳಿಕ ಎಲ್ಲ ಬಂದೂಕುಗಳನ್ನು ಆ ಪ್ರಾಣಿಯ ಕಡೆ ಗುರಿಯಿಟ್ಟು, ಬಂದೂಕನ್ನು ಹೊರಕ್ಕೆ ಎಸೆಯುತ್ತೀಯಾ, ಗುಂಡು ಹೊಡೆ ಎನ್ನುತ್ತೀಯಾ ಎಂಬಂತೆ ಸನ್ನೆ ಮಾಡಿದನು. ಪಂಜರದಲ್ಲಿರುವ ಅದು ಬಂದೂಕಿನ ಕಡೆ ಸಾಭಿಪ್ರಾಯವಾಗಿ ನೋಡಿತು. ನಾಯಿಯನ್ನು ಬಂದೂಕಿನಿಂದ ಸಾಯಿಸಿದವನು ಹೊಸ ತೋಟಾವನ್ನು ಮತ್ತೆ ಅದರಲ್ಲಿ ಹಾಕುತ್ತಿರುವುದನ್ನೂ ನೋಡಿತು. ಆಮೇಲೆ ಏನು ಆಲೋಚಿಸಿಕೊಂಡಿತೋ ಬಂದೂಕನ್ನು ಹೊರಗಡೆಗೆ ಕೊಟ್ಟುಬಿಟ್ಟಿತು. ಬಂದೂಕನ್ನು ಪಡೆದುಕೊಳ್ಳುವವನನ್ನು ಅದರ ಹಿಡಿಕೆಯಿಂದ ಸ್ವಲ್ಪ ತಳ್ಳಿದಂತಾದ ಕಾರಣವೋ ಏನೋ ಅವನು ಅಂಗಾತ ಬಿದ್ದುಬಿಟ್ಟನು.
ರಾತ್ರಿಪೂರ್ತಿ ಬೆಳಕು ಹರಿಯುವ ತನಕವೂ ಆ ಮೃಗ ಕಣ್ಣುಮುಚ್ಚಿಕೊಂಡು ಧ್ಯಾನ ಮಾಡುವುದಕ್ಕೆ ಪ್ರಾರಂಭಿಸಿತ್ತು. ಪ್ರತಿ ರಾತ್ರಿಯೂ ಆ ಮೃಗಕ್ಕೆ ಹೊದೆದುಕೊಳ್ಳುವುದಕ್ಕೆಂದು ಅವರು ಎರಡು ಕಂಬಳಿಗಳನ್ನು ಬೋನಿನಲ್ಲಿ ಹಾಕಿದ್ದರು. ಇಷ್ಟು ದಿನವೂ ಆ ಕಂಬಳಿಗಳು ಎಲ್ಲಿ ಹಾಕಿದ್ದರೋ ಅಲ್ಲಿಯೇ ಬಿದ್ದಿತ್ತು. ಇಂದು ಅದು ಆ ಕಂಬಳಿಯನ್ನು ತೆಗೆದು ಹೊದೆದುಕೊಂಡಿತು.
ಇಲ್ಲಿ ಹೀಗಿರುವಾಗ ಝೂ (ಪ್ರಾಣಿಸಂಗ್ರಹಾಲಯ) ಅಧಿಕಾರಿ ಈ ಪ್ರಾಣಿಯನ್ನು ತನ್ನ ಝೂಕ್ಕೆ ಕಳುಹಿಸಬೇಕೆಂದು ಮೇಯರಿಗೆ ಅರ್ಜಿಯನ್ನು ಬರೆದನು. ಅಧಿಕಾರಿಗಳೆಲ್ಲರ ಬಳಿಯಲ್ಲಿಯೂ ಹೋಗಿ ಹೇಳಿದನು. ಆದರೆ ಮೇಯರಿಗೆ ಆ ಪ್ರಾಣಿಯನ್ನು ಬಿಟ್ಟುಕೊಡಲು ಮನಸ್ಸಿಲ್ಲ. ಆ ಕಾರಣದಿಂದ ಇವರಿಬ್ಬರ ಮಧ್ಯದಲ್ಲಿ ವೈಮನಸ್ಯಗಳುಂಟಾದವು. ಝೂ ಅಧಿಕಾರಿ ಒಂದು ವಿಷಯವನ್ನು ಆಲೋಚಿಸಿಕೊಂಡನು – ಎಲ್ಲರೂ ನಿದ್ರೆ ಹೋದ ಸಂದರ್ಭದಲ್ಲಿ ಈ ಮೃಗವನ್ನು ಮೋಟಾರು ಲಾರಿಯ ಮೇಲೆ ಹಾಕಿಕೊಂಡು ಪ್ರಾಣಿಸಂಗ್ರಹಾಲಯಕ್ಕೆ ತೆಗೆದುಕೊಂಡು ಹೋಗಬೇಕೆಂದು. ಆ ರಾತ್ರಿಯೇ ಅದಕ್ಕೆ ತಕ್ಕ ಸಾಧನಗಳನ್ನೆಲ್ಲ ಅವನು ಏರ್ಪಾಟು ಮಾಡಿಕೊಂಡನು. ಅಲ್ಲಿ ಕಾವಲಿಗೆ ಇರುವ ಪೊಲೀಸರಲ್ಲಿ ಕೆಲವರಿಗೆ ಏನೇನೋ ಆಸೆಗಳನ್ನು ತೋರಿಸಿ, ಅವನು ಅದನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಅವರು ಯಾರೂ ಮಾತನಾಡದೆ ಇರುವಂತೆ ಮಾಡಿಕೊಂಡನು. ಆದರೆ ಆತನ ಮನಸ್ಸಿನಲ್ಲಿ ಭಯವಂತೂ ಇತ್ತು. ಅಂತಹ ಕೆಲಸ ಲಂಡನ್ನಿನಲ್ಲಿ ನಡೆಯುವುದಂತೂ ಅಸಂಭವ. ಮೇಯರ್ ಸರ್ವಾಧಿಕಾರಿ. ಇದರಿಂದ ಝೂ ಅಧಿಕಾರಿಗೆ ಉದ್ಯೋಗವೂ ಹೋಗಬಹುದು. ಆದರೂ ಆ ದೇಶೀಯರಿಗೆ ಇನ್ನೂ ಆ ಪ್ರಾಣಿಯ ಬಗ್ಗೆ ಇರುವ ಕುತೂಹಲದ ಕಾರಣ ಇಂತಹ ಕೆಲಸಕ್ಕೆ ತಲೆಹಾಕಿದನು.
ಆ ದಿನ ರಾತ್ರಿಯ ಎರಡನೇ ಜಾವದಲ್ಲಿ ಇಪ್ಪತ್ತು ಜನ ಮನುಷ್ಯರೂ ಒಂದು ಲಾರಿಯೂ ಬಂದು ಆ ಪಂಜರದ ಬಳಿ ನಿಂತಿತು. ಆಗ ಸ್ವಲ್ಪ ಸದ್ದಾಯಿತು. ಸರಿಯಾಗಿ ಆ ಸಮಯದಲ್ಲಿಯೇ ಆ ವಿಚಿತ್ರಪ್ರಾಣಿ ನಿದ್ರೆ ಮಾಡುತ್ತಿದ್ದುದು ಎಚ್ಚೆತ್ತು ಆಕಳಿಸಿತು. ದೊಡ್ಡದಾಗಿ ಕೆನೆಯಿತು. ಆ ಧ್ವನಿಗೆ ಸುತ್ತಲೂ ನಿದ್ರಿಸುತ್ತಿದ್ದ ಸೈನಿಕರೆಲ್ಲರೂ ಎದ್ದುಬಿಟ್ಟರು. ಇನ್ಸ್ಪೆಕ್ಟರುಗಳೂ ಎದ್ದರು. ಝೂ ಅಧಿಕಾರಿ ಇನ್ನು ಆ ಪ್ರಾಣಿಯನ್ನು ಹಿಡಿದುಕೊಂಡು ಹೋಗುವುದಕ್ಕೆ ಆಗುವುದಿಲ್ಲ ಎಂದು ಬೇರೇನೋ ಕೆಲಸದ ಮೇಲೆ ಬಂದಂತೆ ನಟಿಸಿ ಲಾರಿಯನ್ನು ತೆಗೆದುಕೊಂಡು ಹೋದನು.
ಮಾರನೆ ದಿನ ಬೆಳಗಾಯಿತು. ಆ ಮೃಗ ಮತ್ತೆ ಸ್ನಾನ ಮಾಡಬೇಕೆಂದು ಅಭಿನಯಿಸಿತು. ಪೈಪಿನಿಂದ ನೀರನ್ನು ಬಿಡುವುದಕ್ಕೆ ಮತ್ತೆ ಪ್ರಯತ್ನವನ್ನು ಮಾಡಿದರು. ಮೃಗ ಹಾಗೆ ಬೇಡವೆಂದು ಕೈಯಿಂದ ಸನ್ನೆ ಮಾಡಿತು. ಮತ್ತೆ ಹೇಗೆ ಸ್ನಾನ ಮಾಡುತ್ತದೆ? ಇಷ್ಟರಲ್ಲಿ ಆ ಮೃಗ ಏನನ್ನೋ ಕೇಳುತ್ತಿರುವಂತೆ ಅರಚಿತು. ಅದು ದೂರದಲ್ಲಿರುವವರಿಗೆ ಹೀಗೆ ಕೇಳಿತು “ಪೃಚ್ಚಸ್ಸಮ್, ಅದ್ದಿವಾ ಏತ್ಥಣದೀ?” (ಪೃಚ್ಛಿಷ್ಯಾಮಿ, ಅಸ್ತಿ ವಾ ಅತ್ರ ನದೀ – ಕೇಳುತ್ತಿದ್ದೇನೆ, ಇಲ್ಲೆಲ್ಲಾದರೂ ನದಿ ಇದೆಯಾ?)
ಈ ಮಾತಿಗೆ ಅಲ್ಲಿರುವವರಿಗೆ ಯಾರಿಗೂ ಅರ್ಥ ತಿಳಿಯಲಿಲ್ಲ. ಸರಿಯಾಗಿ ಆ ಹೊತ್ತಿಗೆ ಮೇಯರ್ ಆ ಪ್ರಾಣಿಯ ಕೂಗು ಮಾತಿನಂತೆ ಕೇಳುವಷ್ಟು ದೂರದಲ್ಲಿಯೇ ಇದ್ದ. ಅವನಿಗೆ ಅದು ಒಂದು ಭಾಷೆಯಂತೆ ಕೇಳಿಸಿತು. ಅವನು ಬಹಳ ಆಶ್ಚರ್ಯಪಟ್ಟ. ಹಿಂದಿನ ದಿನಗಳಲ್ಲೆಲ್ಲಾ ಅವನು ಅದಕ್ಕೆ ಹತ್ತಿರವೇ ಇದ್ದ ಕಾರಣ ಅದರ ಕೂಗು ಕೆನೆತದಂತೆಯೇ ಕೇಳಿಸುತ್ತಿತ್ತು. “ಇದು ಯಾವ ಭಾಷೆಯಾಗಿರಬಹುದು? ಇದು ಪ್ರಾಣಿಯಲ್ಲ. ಯಾವುದೋ ದೇಶದ ಮನುಷ್ಯನೇ ಇರಬೇಕು. ಯಾವ ದೇಶದಲ್ಲಿಯೂ ಇಂತಹ ಮನುಷ್ಯರು ಇಲ್ಲವೆಂದು ಜಿಯಾಗ್ರಫಿ, ಹಿಸ್ಟರಿಗಳು (ಭೂಗೋಳಶಾಸ್ತ್ರ, ಚರಿತ್ರೆಗಳು) ಹೇಳುತ್ತವೆ.” ಮತ್ತೆ ಆ ಪ್ರಾಣಿ ಮಾತನಾಡಿದರೆ ಕೇಳೋಣವೆಂದುಕೊಂಡು ಮೇಯರು ಅಲ್ಲಿಯೇ ನಿಂತುಕೊಂಡನು. ಅದು ಮತ್ತೆ ಕೂಗಿತು. “ಪೃಚ್ಚಸ್ಸಮ್, ಅದ್ದಿವಾ ಏತ್ಥ ಣದೀ?” ಎಂಬ ಅಕ್ಷರಗಳು ಮೇಯರಿಗೆ ಸ್ಪಷ್ಟವಾಗಿ ಕೇಳಿಸಿದವು.
ಅಷ್ಟರಲ್ಲಿ ಸ್ವಲ್ಪ ಬೆಳಕು ಹರಿಯುತ್ತಿರುವ ಕಾರಣ ಜನರು ಗುಂಪುಗುಂಪಾಗಿ ನೋಡಲು ಬರುತ್ತಿದ್ದರು. ಅವರಲ್ಲಿ ಒಬ್ಬಾತ ಲಂಡನ್ ಯುನಿವರ್ಸಿಟಿಯಲ್ಲಿ ಸಂಸ್ಕೃತ ಪಂಡಿತನಾಗಿದ್ದನು. ಅವನು ಇಂಗ್ಲಿಷಿನವನೇ. ಅವನಿಗೆ ಹದಿನೈದು ದಿನಗಳಿಂದ ಇಂತಹ ಮೃಗವೊಂದು ಸಿಕ್ಕಿದೆ ಎಂದು ಹೇಳುತ್ತಲೇ ಇದ್ದರು. ಆದರೆ ಅವನಿಗೆ ನಂಬಿಕೆಯಾಗಲಿಲ್ಲ. ಇಂತಹ ವಿಷಯವನ್ನು ಸಾಮಾನ್ಯ ಜನರು ನಂಬಿದಂತೆ ಪಂಡಿತರು ನಂಬುವುದಿಲ್ಲವಲ್ಲವೇ! ಆ ಮೃಗ ನಿನ್ನೆ ಎಚ್ಚೆತ್ತುಕೊಂಡಿದೆ ಎಂದೂ ಅದು ಮಾತನಾಡುತ್ತಿದೆ ಎಂದೂ ಹೇಳಿದರು. ಹಾಗೆ ಹೇಳಿದ್ದಕ್ಕೆ ಈ ಸೋಜಿಗವನ್ನು ನೋಡೋಣವೆಂದು ಇಷ್ಟು ದಿನಗಳ ಬಳಿಕ ಅವನು ಹೊರಟು ಬಂದಿದ್ದ. ಬಂದು ಮೇಯರು ನಿಂತುಕೊಂಡದ್ದಕ್ಕೆ ಸಮೀಪದಲ್ಲಿಯೇ ನಿಂತಿದ್ದ. ಈ ಮಾತುಗಳು ಅವನ ಕಿವಿಗೂ ಬಿದ್ದವು. ಅವನು ಆ ಧ್ವನಿಯನ್ನು ಕೇಳಿ ಮೇಯರನ ಜೊತೆ ಮಾತನಾಡಿದನು. “ಇದು ಸಂಸ್ಕೃತ ಅಲ್ಲವಾದರೂ, ಸಂಸ್ಕೃತದಂತೆಯೇ ಇದೆ. ಸಂಸ್ಕೃತದಿಂದ ಹುಟ್ಟಿದ ಭಾಷೆಗಳು ಬಹಳ ಇವೆ. ಅವುಗಳನ್ನು ಪ್ರಾಕೃತ, ಪೈಶಾಚಿ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಈ ಭಾಷೆ ಅವುಗಳಲ್ಲೇ ಯಾವುದೋ ಆಗಿರುತ್ತದೆ. ನನ್ನ ಬಳಿ ಪ್ರಾಕೃತಭಾಷಾ ಡಿಕ್ಷನರಿ ಇದೆ. ಅದನ್ನು ತೆಗೆದುಕೊಂಡು ಬರುತ್ತೇನೆ. ಆದರೆ ಈ ಪ್ರಾಣಿಗೆ ಪ್ರಾಕೃತ ಬರುತ್ತದೆಯೆಂದಾದರೆ ಸಂಸ್ಕೃತ ಕೂಡ ತಿಳಿದೇ ಇರುತ್ತದೆ” ಎಂದು ಅವನು ಆ ಪಂಜರದ ಬಳಿಗೆ ಹೋದನು. ಹೋಗಿ ಆ ಮೃಗವನ್ನು ನೋಡುತ್ತಾ ಕೈಯನ್ನು ತಿರುಗಿಸುತ್ತ ಪ್ರಶ್ನಿಸಿದನು “ಕಿಮಾತ್ಥ? (ಏನು ಹೇಳಿದೆ?)” ಎಂದು.
ಆ ಪ್ರಾಣಿ ಈ ಮಾತನ್ನು ಕೇಳುತ್ತಿದ್ದಂತೆಯೇ ಕಿವಿಯನ್ನು ಹೊರಳಿಸಿ, ಕಣ್ಣುಗಳನ್ನು ಅರಳಿಸಿ ಕೈಯನ್ನು ಚಾಚಿ ದೊಡ್ಡದಾಗಿ ಕೆನೆಯಿತು. ಆ ಪಂಡಿತನಿಗೆ ಆ ಮಾತೇನೂ ತಿಳಿಯಲಿಲ್ಲ. ಅವನು ಮತ್ತೆ ಮತ್ತೆ ಪ್ರಶ್ನಿಸಿದನು. ಕೇಳಿದಂತೆಲ್ಲ ಅದು ಏನೋ ಹೇಳುತ್ತಿದೆ. ಅವನಿಗೆ ಅದು ಗೊತ್ತಾಗುತ್ತಿಲ್ಲ. ಸ್ವಲ್ಪ ಹೊತ್ತಿಗೆ “ಹತ್ತಿರದಲ್ಲಿದ್ದರೆ ಕೇಳುವುದಿಲ್ಲ, ಗೊತ್ತಾಗುವುದಿಲ್ಲ. ದೂರದಲ್ಲಿದ್ದರೆ ತಿಳಿಯುತ್ತದೆ” ಎಂದು ಎಲ್ಲರೂ ಗ್ರಹಿಸಿದರು. ಆ ಪ್ರಾಣಿಯ ಕಂಠ ದೊಡ್ಡದಾದ ಕಾರಣ ಹತ್ತಿರವಿದ್ದವರಿಗೆ ಮಾತುಗಳು ದೊಡ್ಡ ಶಬ್ದದಂತೆ ಮಾತ್ರ ಕೇಳಿಸುತ್ತಿದೆ. ದೂರಕ್ಕೆ ಹೋಗುತ್ತಲೇ, ಆ ಧ್ವನಿ ತೆಳುವಾಗಿ ದೂರದಲ್ಲಿ ಆ ಧ್ವನಿಯ ಶಬ್ದಗಳು ಸ್ಪಷ್ಟವಾಗಿ ಕೇಳುತ್ತಿತ್ತು.
ಆ ಪಂಡಿತನು ದೂರಕ್ಕೆ ಹೋಗಿ ಮತ್ತೆ ಕೇಳಿದನು. ಅಕ್ಷರಗಳು ಚೆನ್ನಾಗಿ ಕೇಳಿದವು. “ಅತ್ರ ಸಮೀಪೇ ಅಸ್ತಿ ವಾ ಕಾಚಿನ್ನದೀ? ಸ್ನಾತುಮಿಚ್ಛಾಮಿ” (ಇಲ್ಲಿ ಸಮೀಪದಲ್ಲಿ ಯಾವುದಾದರೂ ನದಿ ಇದೆಯೇ ಸ್ನಾನ ಮಾಡಬೇಕು) ಎಂಬ ಮಾತುಗಳು ಸ್ಪಷ್ಟವಾಗಿ ಕೇಳಿದವು.
ಆದರೆ ಇದರಲ್ಲಿ ಒಂದು ಸಮಸ್ಯೆ ತಲೆದೋರಿತು. ಆ ಪ್ರಾಣಿ ಹೇಳುವುದನ್ನು ಕೇಳುವುದಕ್ಕೆಂದರೆ ನೂರು ಅಡಿ ದೂರಕ್ಕೆ ಹೋಗಬೇಕು. ಅದರ ಜೊತೆ ಮಾತನಾಡಬೇಕೆಂದರೆ ಹತ್ತಿರಕ್ಕೆ ಬರಬೇಕು. ಹೀಗೆ ದೂರಕ್ಕೆ ಹೋಗುವುದೂ ಹತ್ತಿರಕ್ಕೆ ಬರುವುದೂ ಅಶಕ್ಯವೆಂದೆನಿಸಿತು.
ಪಂಡಿತನು ಮೇಯರನಿಗೆ ಹೇಳಿದನು. “ಅವನು ಸ್ನಾನವನ್ನು ಮಾಡಬೇಕಂತೆ, ಪಕ್ಕದಲ್ಲೆಲ್ಲಾದರೂ ನದಿಯೇನಾದರೂ ಇದೆಯೇ? ಎಂದು ಕೇಳುತ್ತಿದ್ದಾನೆ” ಈ ಮಾತನ್ನು ಕೇಳುತ್ತಿದ್ದಂತೆಯೇ ಮೇಯರನ ಗುಂಡಿಗೆ ನಡುಗಿತು. “ಈ ಪ್ರಾಣಿಯನ್ನು ಕರೆದುಕೊಂಡು ಹೋಗುವುದು ಹೇಗೆ? ಸ್ನಾನ ಮಾಡಿಸುವುದು ಹೇಗೆ? ಸ್ನಾನ ಮಾಡಿಸಿದ ಮೇಲೆ ಇದು ನದಿಯಿಂದ ಮತ್ತೆ ಹಿಂದಿರುಗಿ ಬರುತ್ತದೆಯೋ ಇಲ್ಲವೋ!?” ಎಂಬ ಆಲೋಚನೆ ಮೊದಲಾಯಿತು. ಅಧಿಕಾರಿಗಳೆಲ್ಲರೂ ಕುಳಿತುಕೊಂಡು ಆಲೋಚಿಸಿದರು, “ಈ ಪ್ರಾಣಿಯನ್ನು ನದಿಗೆ ಕರೆದುಕೊಂಡು ಹೋಗಿ ಸ್ನಾನವನ್ನು ಮಾಡಿಸಬೇಕಾ ಬೇಡವಾ?” ಎಂದು. “ಸ್ನಾನವನ್ನು ಮಾಡಿಸುವುದು ಹೇಗೆ?” ಎಂಬ ಪ್ರಶ್ನೆ ಹುಟ್ಟಿತು. “ಅದು ಹೇಗೋ ಆಮೇಲೆ ವಿಚಾರ ಮಾಡೋಣ. ಮೊದಲು ನದಿಗೆ ಕರೆದುಕೊಂಡು ಹೋಗಬಹುದಾ?” ಎಂದರು. ಒಬ್ಬಾತ “ಸ್ನಾನ ಮಾಡಿಸಿದರೆ ತಪ್ಪೇನು? ಅದು ಯಾವುದೋ ಉಷ್ಣದೇಶದ ಮೃಗದಂತೆ ಇದೆ” ಎಂದು ಹೇಳಿದ. ಇನ್ನೊಬ್ಬ “ಮೃಗ ಯಾವುದು? ಸಂಸ್ಕೃತದಲ್ಲಿ ಮಾತನಾಡುತ್ತಿದೆ. ಸಂಸ್ಕೃತ ಬಹಳ ದೊಡ್ಡ ಭಾಷೆಯೆಂದೂ ಆ ಭಾಷೆಯಲ್ಲಿ ಸಾಕಷ್ಟು ದೊಡ್ಡ ದೊಡ್ಡ ಪುಸ್ತಕಗಳೂ ಇವೆ ಎಂದೂ ಹೇಳುತ್ತಾರೆ. ಆ ಭಾಷೆಯನ್ನು ಮಾತನಾಡುತ್ತಿದ್ದರೆ ಪ್ರಾಣಿ ಹೇಗಾಗುತ್ತದೆ?” ಎಂದನು. ಇನ್ನೊಬ್ಬಾತ “ಅದು ಪ್ರಾಣಿಯೋ ಮನುಷ್ಯನೋ ತಿಳಿಯುವುದಕ್ಕೆ ಅವಕಾಶವಿಲ್ಲದಾಗಿದೆ. ತಲೆಯನ್ನು ನೋಡಿದರೆ ಪ್ರಾಣಿ. ಮಾತನ್ನು ನೋಡಿದರೆ ಮನುಷ್ಯ. ಸಂಸ್ಕೃತಭಾಷೆಯನ್ನು ಮಾತನಾಡುತ್ತದೆಯೆಂದರೆ ದೊಡ್ಡ ನಾಗರಿಕತೆಯುಳ್ಳ ಪ್ರಾಣಿ ಎಂದುಕೊಳ್ಳಬೇಕಾಗುತ್ತದೆ. ನಿಜವಾಗಿಯೂ ಅವನ ಶರೀರದ ಮೇಲೆ ಇರುವ ಬಟ್ಟೆಗಳನ್ನೂ ಆಭರಣಗಳನ್ನೂ ನೋಡಿದರೆ ನಾಗರಿಕತೆಯಿರುವಂತೆಯೇ ಕಾಣಿಸುತ್ತದೆ. ಆ ಮೃಗಕ್ಕೆ ಸ್ನಾನವನ್ನು ಮಾಡಲು ಕೊಡಬಹುದು” ಎಂದನು. ಇನ್ನೊಬ್ಬ ಇನ್ಸ್ಪೆಕ್ಟರು “ಅದು ಸಂಸ್ಕೃತವೋ ಅಲ್ಲವೋ! ಈ ಪಂಡಿತನು ಹಾಗೆ ಅಂದುಕೊಂಡಿರಬಹುದೇನೋ! ಅಲ್ಲದೆ ಮಾತನಾಡುವ ಭಾಷೆಯ ಮೇಲೆ ಮಾತನಾಡುವವರ ನಾಗರಿಕತೆ ಹೇಗೆ ನಿರ್ಧಾರವಾಗುತ್ತದೆ? ನಾಗರಿಕವಾದ ಭಾಷೆಯನ್ನು ಮಾತನಾಡುತ್ತ ಹೃದಯದಲ್ಲಿ ಮನುಷ್ಯರೂ ರಾಕ್ಷಸರಾಗಿರಬಹುದು. ಇದನ್ನು ನದಿಗೆ ಕರೆದುಕೊಂಡು ಹೋದರೆ ಇದು ದಾರಿಯಲ್ಲಿಯೇ ಮನುಷ್ಯರನ್ನು ಕೊಲ್ಲಬಹುದೇನೋ? ಇದರಲ್ಲಿ ಇನ್ನೊಂದು ಸಮಸ್ಯೆಯಿದೆ. ಹಿಪ್ಪೋಪೊಟಮಸ್ ಎಂಬ ಜಾತಿಯ ನೀರಿನ ಕುದುರೆಗಳಿವೆ. ಇದೂ ಆ ಜಾತಿಯಲ್ಲಿಯೇ ಇನ್ನೊಂದು ಕುದುರೆಯಿರಬಹುದೇನೋ! ನಾವು ನೀರಿಗಿಳಿಯಲು ಬಿಡುತ್ತಿದ್ದಂತೆಯೇ ಇದು ಮುಳುಗಿ ನಮಗೆ ಕಾಣಿಸದಂತೆಯೇ ಹೋಗಬಹುದು. ಹೋದ ಬಳಿಕ ನಾವು ಅದನ್ನು ಖೈದಿಗಳಂತೆ ಹಿಡಿದಿಟ್ಟಿದ್ದೇವೆಂದು ನಮಗೆ ಅಪಕಾರವನ್ನೂ ಮಾಡಬಹುದು. ಹಾಗಾಗಿ ನದಿಗೆ ಕರೆದುಕೊಂಡು ಹೋಗದಿರುವುದೇ ಒಳ್ಳೆಯದು” ಎಂದನು.
ಅವನ ವಾದ ಎಲ್ಲರಿಗೂ ಮೆಚ್ಚುಗೆಯಾಯಿತು. ನಿಜವೇ ಎಂದರೆ ನಿಜವೇ ಎಂದರು. “ಒಂದು ವೇಳೆ ಇದು ಹೋಗಿ ಹಿಪ್ಪೋಪೊಟಮಸ್ ಜೊತೆ ಸೇರಿಬಿಟ್ಟರೆ ಮನುಷ್ಯರ ಜ್ಞಾನಕ್ಕೆ ಎಂತಹ ನಷ್ಟ? ನಾವೆಲ್ಲರೂ ಆಫ್ರಿಕಾ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾಗಳಲ್ಲಿರುವ ಪರಮರಹಸ್ಯಗಳನ್ನೆಲ್ಲ ಕಂಡುಕೊಂಡು ಜ್ಞಾನವನ್ನೆಲ್ಲ ಬರೆದುಹಾಕಿದ್ದೇವೆ. ಇದರ ಕುರಿತು ಸಂಶೋಧನೆಯನ್ನು ಮಾಡುವ ಮೊದಲೇ ಇದನ್ನು ಕೈಯಿಂದ ಜಾರಿ ಬಿಟ್ಟುಕೊಡಬಾರದು” ಎಂದು ನಿರ್ಣಯಿಸಿದರು. ಆ ನಿರ್ಣಯವನ್ನು ಮೃಗಕ್ಕೆ ಹೇಳಿದರೆ ಕೋಪಗೊಳ್ಳುತ್ತದೆಯೇನೋ ಎಂದುಕೊಂಡರು. ಹಾಗಾಗಿ ಮತ್ತೆ ಒಂದು ಆಲೋಚನೆಯನ್ನು ಮಾಡಿದರು. “ಮೃಗಕ್ಕೆ ಈ ವಿಷಯವನ್ನು ಹೇಳಬಾರದು. ಇಲ್ಲಿ ಸುತ್ತಮುತ್ತ ನದಿಯಿಲ್ಲ ಎಂದು ಹೇಳಿದರೆ ಸರಿಯಾಗುತ್ತದೆ” ಎಂದರು. ಆ ಪಂಡಿತನ ಬಳಿ ಅದಕ್ಕೆ ಆ ವಿಷಯವನ್ನೇ ಹೇಳಿಸಿದರು. ಅದನ್ನು ಕೇಳುತ್ತಿದ್ದಂತೆಯೇ ಅದರ ಮುಖ ದುಃಖದಿಂದ ಕೂಡಿತು. ಸ್ವಲ್ಪ ಆಲೋಚಿಸುತ್ತಿದ್ದಂತೆ ಕಾಣಿಸಿತು. ಅಷ್ಟರಲ್ಲಿ ಸಾಕಷ್ಟು ಬೆಳಕು ಹರಿದಿದ್ದ ಕಾರಣ ಪೈಪುಗಳಿಂದಲೇ ಅದರ ಸ್ನಾನವನ್ನು ಮಾಡಿಸಿದರು. ಅದು ಮತ್ತೆ ಕಣ್ಣು ಮುಚ್ಚಿಕೊಂಡು ಸ್ವಲ್ಪ ಹೊತ್ತು ಧ್ಯಾನವನ್ನು ಮಾಡಿತು. ತಟ್ಟೆಗಳಲ್ಲಿ ಹಣ್ಣುಗಳನ್ನು ತಂದರು. ಅದು ತಿಂದಿತು.
* * *
ಆ ಮೃಗ ಮಾತನಾಡುತ್ತಿದೆಯೆಂದೂ, ಅದರ ಭಾಷೆ ಸಂಸ್ಕೃತವೆಂದೂ ಸ್ನಾನವನ್ನು ಮಾಡದೆಯೆ ಭೋಜನವನ್ನು ಮಾಡುವುದಿಲ್ಲವೆಂದೂ, ಭೋಜನ ಮಾಡುವ ಮೊದಲೂ ಏನೋ ಧ್ಯಾನವನ್ನು ಮಾಡುತ್ತದೆಯೆಂದೂ ಈ ಸುದ್ದಿ ದೇಶದೇಶಗಳಿಗೆಲ್ಲ ಹಬ್ಬಿತು. ಯೂರೋಪಿನಲ್ಲಿ ದೊಡ್ಡ ಗದ್ದಲವೇ ಆಯಿತು. ಜರ್ಮನಿಯಿಂದ ಒಂದು ರೈಲುಬೋಗಿಯನ್ನು ತುಂಬುವಷ್ಟು ಸಂಸ್ಕೃತಪಂಡಿತರು ಹೊರಟು ಲಂಡನ್ನಿಗೆ ಬಂದರು.
ಜನರು ಆ ಮೃಗವನ್ನು ನೋಡುವುದಕ್ಕೆ ಸಾಕಷ್ಟು ಸ್ಥಳಾವಕಾಶವಿಲ್ಲದೆ ಹೋದ ಕಾರಣ ಬೇರೆ ಒಂದು ದೊಡ್ಡ ಮನೆಯನ್ನು ಕಟ್ಟಿಸಿದ್ದರು. ಆ ಮನೆಯಲ್ಲಿ ಸಮೃದ್ಧವಾಗಿ ಗಾಳಿ ಬರುವಂತೆ ಮಾಡಿದ್ದರು. ಅದನ್ನು ಬಹಳ ಎತ್ತರವಾದ ಸ್ಥಳದಲ್ಲಿ ಕಟ್ಟಿಸಿದ್ದರು. ಆ ಮನೆಗೆ ಗೋಡೆಗಳಿರಲಿಲ್ಲ. ಸುತ್ತಲೂ ಬಲಿಷ್ಠವಾದ ಕಬ್ಬಿಣದ ಕಟಕಟೆಗಳನ್ನೇ ಹಾಕಿಸಿದ್ದರು. ಆ ಮನೆಯ ಸುತ್ತಲೂ ಖಾಲಿಯಾದ ಸ್ಥಳವಿತ್ತು. ಆ ಖಾಲಿ ಸ್ಥಳದ ಸುತ್ತಲೂ ಎತ್ತರವಾದ ಗೋಡೆ. ಆ ಪ್ರಾಣಿಯನ್ನು ಈಗ ಇದ್ದ ಕಬ್ಬಿಣದ ಪಂಜರದಿಂದ ಚಕ್ರಗಳಿರುವ ಇನ್ನೊಂದು ದೊಡ್ಡ ಪಂಜರಕ್ಕೆ ಕಳುಹಿಸಿ, ಅದರಿಂದ ಆ ಮನೆಗೆ ಪ್ರವೇಶ ಮಾಡಿಸಿದ್ದರು.
ಆ ಮನೆಯಲ್ಲಿ ಆ ಮೃಗಕ್ಕೆ ಎಲ್ಲ ವ್ಯವಸ್ಥೆಯನ್ನೂ ಮಾಡಿದ್ದರು. ಒಂದು ದೊಡ್ಡ ಕೋಣೆಯಲ್ಲಿ ಒಂದು ದೊಡ್ಡ ಮಂಚವನ್ನು ಹಾಕಿ ಅದರ ಮೇಲೆ ಎರಡು ಮೂರು ಹಾಸಿಗೆಗಳನ್ನು ಹಾಕಿದ್ದರು. ತಲೆದಿಂಬುಗಳನ್ನೂ ಹಾಕಿದ್ದರು. ಅದರ ಪಕ್ಕದಲ್ಲಿಯೇ ಸ್ನಾನದ ಕೋಣೆ. ದೊಡ್ಡದಾಗಿ ಧಾರೆಯಾಗಿ ನೀರು ಬರುವ ಪೈಪನ್ನಿಟ್ಟು ಅಲ್ಲಿಯೇ ಟವೆಲ್ಗಳನ್ನೂ ಸಾಬೂನುಗಳನ್ನೂ ಇಟ್ಟಿದ್ದರು. ಮುಂದಿನ ಚಾವಡಿಯಲ್ಲಿ ನಾಲ್ಕೈದು ಕುರ್ಚಿಗಳು, ಎರಡು ಆರಾಮಕುರ್ಚಿಗಳು, ಮತ್ತೆರಡು ಸಾಮಾನ್ಯವಾದವು, ಆ ಪ್ರಾಣಿಯ ಪ್ರಮಾಣಕ್ಕೆ ತಕ್ಕಂತಹವನ್ನು ಮಾಡಿಸಿದ್ದರು. ಈ ಪ್ರಯತ್ನವೆಲ್ಲವೂ ನಡೆಯುವಷ್ಟರಲ್ಲಿ ಎರಡು ತಿಂಗಳು ಕಳೆದಿದ್ದವು. ಇನ್ನೊಂದು ಸಾಮಾನುಗಳನ್ನು ಇಡುವ ಕೋಣೆ. ಅಲ್ಲಿ ಅದಕ್ಕೆ ಆಹಾರವನ್ನು ಇಟ್ಟಿದ್ದರು. ಅಲ್ಲಿಯೇ ಬುಟ್ಟಿಯಲ್ಲಿ ಅನೇಕ ವಿಧವಾದ ಹಣ್ಣುಗಳನ್ನು ಇಟ್ಟಿದ್ದರು. ಆ ಪ್ರಾಣಿಗೆ ಯಾವಾಗ ಹಸಿವಾಗುತ್ತದೆಯೋ ಆಗ ಅಲ್ಲಿಗೆ ಹೋಗುವುದು, ತಿನ್ನುವುದು. ಈ ಎರಡು ತಿಂಗಳಲ್ಲಿ ಅವನಿಗೆ ನೀರು ಕುಡಿಯಲು ಒಂದು ಚೊಂಬು ಬೇಕೆಂದು ಅವರಿಗೆಲ್ಲ ತಿಳಿಯಿತು. ಅದಕ್ಕಾಗಿ ಮೂರು ನಾಲ್ಕು ಚೊಂಬುಗಳನ್ನೂ ಅವನ ಮನೆಯಲ್ಲಿ ಇಟ್ಟರು. ಅವನು ಧರಿಸುವುದಕ್ಕೆ ಅವನ ಪ್ರಮಾಣವನ್ನು ಅನುಸರಿಸಿ ಎರಡು ಸೂಟುಗಳನ್ನೂ ಹೊಲಿಸಿದ್ದರು.
ಈ ಎರಡು ತಿಂಗಳು ಕಳೆಯುವಷ್ಟರಲ್ಲಿ ಅವನ ಬೋನಿಗೆ ಮನುಷ್ಯರು ಬಂದು ಹೋಗುವುದನ್ನು ನಡೆಸಿದ್ದರು. ಎರಡು ತಿಂಗಳು ಆಗುವಷ್ಟರಲ್ಲಿ ಒಂದು ನೂರು ಮಂದಿಯಾದರೂ ಪ್ರತಿನಿತ್ಯ ಸಂಸ್ಕೃತಪಂಡಿತರು, ಜರ್ಮನಿ ದೇಶಸ್ಥರು, ಫ್ರೆಂಚರು, ಇಂಗ್ಲಿಷರು ಆ ಮೃಗವನ್ನು ಬಿಡದೆ ಸದಾಕಾಲ ಅವನ ಸುತ್ತಲೂ ಸೇರಿಕೊಂಡಿರುತ್ತಿದ್ದರು. ಅವನ ಜೊತೆ ಮಾತನಾಡುತ್ತ ಇರುತ್ತಿದ್ದರು. ಆ ಮಾತುಗಳನ್ನೆಲ್ಲ ತಮ್ಮ ಭಾಷೆಗೆ ಅನುವಾದ ಮಾಡಿ ತಮ್ಮ ಪತ್ರಿಕೆಗಳಿಗೆ ಕಳುಹಿಸುತ್ತ ಇರುತ್ತಿದ್ದರು. ಅವನ ಜೊತೆ ಮಾತನಾಡುವುದು ಕಷ್ಟವಾಗಿದ್ದ ಕಾರಣ ಅವನ ಮುಖಕ್ಕೆ ಒಂದು ಯಂತ್ರವನ್ನು ಸೇರಿಸಿದ್ದರು. ಮಾತನಾಡುವಾಗ ಅವನು ಆ ಯಂತ್ರವನ್ನು ಬಾಯಿಗೆ ಹಾಕಿಕೊಂಡರೆ ಅದರ ಬಾಯಿಂದ ಹೊರಡುವ ಧ್ವನಿಯೆಲ್ಲವನ್ನೂ ಆ ಯಂತ್ರ ಕೂಡಿಸಿಕೊಂಡು, ಆ ಧ್ವನಿಯನ್ನು ತಗ್ಗಿಸಿ, ಹೊರಗೆ “ಹಿಂದೆ ಅರಚಿದಂತೆ ಆಗದಂತೆ” ಮಾತನಾಡಿದಂತೆಯೇ ಕೇಳಿಸುತ್ತಿತ್ತು. ಆ ಪ್ರಾಣಿಗೆ ಈ ಯಂತ್ರದ ಉಪಯೋಗ ಹೀಗೆ ಎಂದು ಆ ಪಂಡಿತರು ಹೇಳಿದರು. ಅದು ಅಂಗೀಕರಿಸಿ ಅದನ್ನು ಧರಿಸಲು ಒಪ್ಪಿಕೊಂಡಿತು. ಕೆಲವು ದಿನಗಳಲ್ಲಿ ಈ ಮನುಷ್ಯರು ಆಡುವ ಮಾತುಗಳು ಅದಕ್ಕೆ ಸರಿಯಾಗಿ ಕೇಳಿಸುತ್ತಿಲ್ಲ ಎಂದು ತಿಳಿಯಿತು. ಅದಕ್ಕಾಗಿ ಧ್ವನಿಯನ್ನು ವಿಸ್ತರಿಸುವ (ಧ್ವನಿವರ್ಧಕ) ಯಂತ್ರಗಳ ಮೂಲಕ ಮನುಷ್ಯರು ಮಾತನಾಡುತ್ತಿದ್ದರು.
ಮೊದಲ ದಿನದಲ್ಲೇ ಅದಕ್ಕೆ ಈ ಯೂರೋಪಿಯನ್ನರು ಮಾತನಾಡುವ ಸಂಸ್ಕೃತ ತಿಳಿಯಲಿಲ್ಲ. ಆದರೆ ಕ್ರಮವಾಗಿ ಅಭ್ಯಾಸವಾಗಿ ಅವರ ಮಾತುಗಳನ್ನು ಈಗ ಗ್ರಹಿಸುತ್ತಿತ್ತು. ಅವರು “ಆಸ್ತಿಕಲಾ” ಎಂದು ಹೇಳಿದರೆ “ಆ” ಎಂಬುದನ್ನು “ಎ” ಎಂಬಂತೆ ಉಚ್ಚರಿಸುತ್ತಿದ್ದರು. “ಸ”ವನ್ನು “ಷಾ” ಮಾಡಿ, “ಲಾ”ವನ್ನು “ಳಾ” ಎಂಬಂತೆ ಹೇಳುತ್ತಿದ್ದರು. ದೀರ್ಘವಿದ್ದ ಕಡೆಯಲ್ಲಿ ಹ್ರಸ್ವವನ್ನೂ ಹ್ರಸ್ವವಿದ್ದ ಕಡೆಯಲ್ಲಿ ದೀರ್ಘವನ್ನೂ ಉಚ್ಚರಿಸುತ್ತಿದ್ದರು. “ನಾರಾಯಣಃ” ಎಂಬುದಕ್ಕೆ “ನರಯನಾಃ” ಎನ್ನುತ್ತಿದ್ದರು. ಮೊದಲ ದಿನಗಳಲ್ಲಿ ಈ ಉಚ್ಚಾರಣೆ ತಿಳಿಯುವುದು ಕಷ್ಟವಾಗಿತ್ತು. ಆದರೆ ಕ್ರಮವಾಗಿ ಇದೂ ಒಂದು ಬಗೆಯ ಪ್ರಾಕೃತ ಎಂದು ಅರ್ಥ ಮಾಡಿಕೊಂಡು ತಿಳಿದುಕೊಳ್ಳಲು ಪ್ರಾರಂಭಿಸಿತ್ತು. ಈಗ ಮೊದಲಿನಂತೆ ಅದನ್ನು ನೋಡಲು ಎಲ್ಲರಿಗೂ ಬಂದು ನೋಡಲು ಅವಕಾಶವಿರಲಿಲ್ಲ. ಅದನ್ನು ನೋಡುವುದಕ್ಕೆ ಟಿಕೆಟ್ಟನ್ನೂ ವೇಳಾಪಟ್ಟಿಯನ್ನೂ ಹಾಕಿದ್ದರು. ಹೊರಗಿನಿಂದ ಒಂದು ಬಾರಿ ನೋಡಿಕೊಂಡು ಹೋಗಲು ಒಂದಷ್ಟು ಆದರೆ, ಕಬ್ಬಿಣದ ಪಂಜರದ ಹತ್ತಿರಕ್ಕೆ ಹೋಗಿ ನೋಡಬೇಕೆಂದರೆ ಇನ್ನಷ್ಟು ಹೆಚ್ಚು. ಹೋಗಿ ಅದರ ಜೊತೆಯಲ್ಲಿ ಮಾತನಾಡಬೇಕೆಂದರೆ ಹತ್ತು ಪೌಂಡುಗಳಷ್ಟನ್ನು ಸಲ್ಲಿಸಬೇಕು. ಹೀಗೆ ಪ್ರತಿ ದಿನವೂ ಸುಮಾರು ನೂರು ಪೌಂಡುಗಳಷ್ಟು ಆದಾಯವಾಗುತ್ತಿತ್ತು.
ಕೆಲವರು ಒಂದು ವಿಷಯವನ್ನು ಕಂಡುಹಿಡಿದರು. ಆ ಪ್ರಾಣಿ ನಿದ್ರೆಹೋಗುವುದಿಲ್ಲವೆಂದೂ, ಆಹಾರವನ್ನು ಮಾತ್ರ ದಿನಕ್ಕೆ ಒಂದು ಬಾರಿ ಬೆಳಗ್ಗೆ ಸ್ನಾನವನ್ನು ಮಾಡಿ ತಿನ್ನುತ್ತದೆ ಎಂದು. ನಿದ್ರಿಸುತ್ತಿರುವಂತೆ ಮಂಚದ ಮೇಲೆ ಮಲಗಿಕೊಂಡಿರುತ್ತದೆ. ಅದು ಮಾಡುವ ಚೇಷ್ಟೆಗಳು ಬಹಳ ವಿಪರೀತವಾಗಿರುತ್ತವೆ. ಅದು ತಲೆಯನ್ನು ನೆಲಕ್ಕಿಟ್ಟು ಕಾಲುಗಳನ್ನು ಮೇಲಕ್ಕೆತ್ತಿ ಕೆಲವು ಗಂಟೆಗಳಷ್ಟು ಕಾಲ ಹಾಗೆಯೇ ಇರುತ್ತದೆ. ಒಮ್ಮೊಮ್ಮೆ ಎಡಗಾಲಿನ ಹಿಮ್ಮಡಿ ಪೃಷ್ಠದ ಕೆಳಗಿನಿಂದ ಬಲಗಾಲ ಹಿಮ್ಮಡಿ ಸರಿಯಾಗಿ ಅದರ ಮೇಲೆ ಇಟ್ಟು ಉಸಿರನ್ನು ಎಳೆದುಕೊಂಡು ಬಿಗಿ ಹಿಡಿದುಕೊಂಡು ಹಾಗೆಯೇ ಇರುತ್ತದೆ. ಹೀಗೆ ಎರಡು ಮೂರು ಗಂಟೆಗಳ ಕಾಲ ಅದೇ ರೀತಿ ಇರುತ್ತದೆ. ಆಗ ಯಾರು ಮಾತನಾಡಿಸಿದರೂ ಏನೂ ಲಾಭವಿಲ್ಲ.
ಪಂಡಿತರು ಅದರ ಜೊತೆಯಲ್ಲಿ ನಡೆಸಿದ ಮಾತುಕತೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು, ಇನ್ನೂ ಬರೆಯುತ್ತಲೇ ಇದ್ದರು. ಪ್ರತಿ ಪತ್ರಿಕೆಯಲ್ಲಿಯೂ ಕೂಡ ಈ ದಿನ ಈ ಪ್ರಸಂಗ ಇಲ್ಲದೇ ಇರುತ್ತಿರಲಿಲ್ಲ. ಯೂರೋಪು ಪೂರ್ತಿಯಾಗಿ ಎಲ್ಲ ದೇಶಗಳಲ್ಲೂ ‘ಹಾರ್ಸ್-ಮ್ಯಾನ್’ (ಕುದುರೆ ಮನುಷ್ಯ) ಎಂದು ಅವನ ಚಿತ್ರವನ್ನು ಹಾಕುವುದನ್ನೂ, ಅವನನ್ನು ಕುರಿತು ವಿಚಿತ್ರವಾಗಿ ಬರೆಯುವುದನ್ನೂ ಪಂಡಿತರು ಅವನ ಜೊತೆ ಆಡಿದ ಮಾತುಕತೆಗಳನ್ನು ವಿವರಿಸಿ ಮುದ್ರಿಸುವುದನ್ನೂ ಪ್ರತಿ ಪತ್ರಿಕೆಯೂ ಮಾಡುತ್ತಿತ್ತು. ಜನರೆಲ್ಲರೂ ಮೇಲುಬಿದ್ದು ಅದನ್ನು ಓದುತ್ತಿದ್ದರು. ಪ್ರತಿ ದಿನವೂ ವಿಧವಿಧವಾದ ಸುದ್ದಿಗಳು ದೇಶದೆಲ್ಲೆಡೆ ಪ್ರಬಲಿಸಿದ್ದವು.
ಪಂಡಿತರು: ನಿನ್ನದು ಯಾವ ದೇಶ?
ಕುದುರೆ ಮನುಷ್ಯ: ನನಗೆ ಗೊತ್ತಿಲ್ಲ.
ಪಂ : ನೀವು ಯಾರು?
ಕು : ನನಗೆ ಗೊತ್ತಿಲ್ಲ.
ಪಂ : ನೀವು ಎಲ್ಲಿಂದ ಬಂದಿದ್ದೀರಾ?
ಕು : ನನಗೆ ಗೊತ್ತಿಲ್ಲ.
ಪಂ : ಇಲ್ಲಿಗೆ ಹೇಗೆ ಬಂದಿದ್ದೀರಾ?
ಕು : ನನಗೆ ಅದೇನೂ ನೆನಪಾಗುತ್ತಿಲ್ಲ. ಏನೋ ಜ್ಞಾಪಕವಿದ್ದಂತೆಯೇ ಇದೆಯಾದರೂ ಎಲ್ಲವೂ ಮರೆತುಹೋಗಿವೆ.
ಪಂ : ನಿಮ್ಮ ಹೆಸರೇನು?
ಕು : ಆ ಆ! ಜ್ಞಾಪಕವಾಗುತ್ತಿದೆ. ಹಾಹಾ ಪೂರ್ತಿಯಾಗಿ ನೆನಪಿಗೆ ಬರುತ್ತಿಲ್ಲ.
ಪಂ : ನಿಮಗೆ ಸಂಸ್ಕೃತ ಹೇಗೆ ಬರುತ್ತದೆ?
ಕು : ಹೇಗೆ ಬರುವುದೇನು? ಎಲ್ಲಾ ಅದಾಗಿ ಅದೇ ಬರುತ್ತದೆ.
ಪಂ : ನಿಮ್ಮ ದೇಶದಲ್ಲಿ ಎಲ್ಲರೂ ಸಂಸ್ಕೃತ ಮಾತನಾಡುತ್ತಾರಾ?
ಕು : ಆ! ಮಾತನಾಡುತ್ತಾರೆ ಎಂದೇ ಅನಿಸುತ್ತದೆ. ಆದರೆ ನನ್ನ ದೇಶ ಯಾವುದೋ ನೆನಪಾಗುತ್ತಿಲ್ಲ.
ಪಂ : ನಿಮ್ಮ ದೇಶ ಯಾವುದು?
ಕುದುರೆ ಮನುಷ್ಯ ಆಲೋಚಿಸಿ ಇದಕ್ಕೆ ಉತ್ತರವನ್ನು ಹೇಳಲಿಲ್ಲ. ಇನ್ನೊಂದು ದಿನ ಪಂಡಿತರು ಹೀಗೆ ಪ್ರಶ್ನಿಸಿದರು.
ಪಂ : ನೀವು ನಿಮ್ಮ ದೇಶದಲ್ಲಿ ಲಂಡನ್ ಎಂಬ ಹೆಸರು ಕೇಳಿದ್ದೀರಾ?
ಅಷ್ಟರಲ್ಲಿ ಒಬ್ಬ ಜರ್ಮನ್ ಪಂಡಿತ “ನೀವು ಬರ್ಲಿನ್ ಹೆಸರು ಕೇಳಿದ್ದೀರಾ?” ಎಂದು ಕೇಳಿದನು. ಒಬ್ಬ ಫ್ರೆಂಚಿನವನು “ಪ್ಯಾರಿಸ್ ಹೆಸರು ಕೇಳಿದ್ದೀರಾ?’ ಎಂದನು. ಕುದುರೆಮನುಷ್ಯ ಅವರೆಲ್ಲರ ಕಡೆಗೆ ಆಶ್ಚರ್ಯದಿಂದ ನೋಡಿದನು. ಇಷ್ಟರಲ್ಲಿ ಒಬ್ಬ ಪಂಡಿತ “ನಿಮ್ಮ ಹೆಸರು “ಹಾಹಾಹೂಹೂ” ಎಂದಾ?” ಎಂದನು. ಆಗ ಆ ಕುದುರೆ ಮನುಷ್ಯ ಆಶ್ಚರ್ಯಗೊಂಡಂತೆ ಬಾಯಿ ತೆರೆಯಿತು. ಕಣ್ಣು ಅಗಲವಾಯಿತು. ಎದ್ದು ನಿಂತು ಮೈಮುರಿಯುವಷ್ಟರಲ್ಲಿ ದುಃಖಪಡುತ್ತಿರುವಂತೆ ಕಂಡನು. ಅವನ ಬಾಯಿಂದ “ಅಥ ಕಿಂ” ಎಂದು ಯಂತ್ರವಿಲ್ಲದೆ ಬಂದ ಮಾತು ದೊಡ್ಡದಾದ ಗುಡುಗಿನಂತೆ ಕೇಳಿಸಿತು.
ಅಲ್ಲಿಂದ ಮೊದಲಾಗಿ ಪಂಡಿತರು ಮಾತ್ರ ಅವನನ್ನು “ಹಾಹಾಹೂಹೂ” ಎಂದು ಹೇಳುವುದಕ್ಕೆ ಪ್ರಾರಂಭಿಸಿದರು. ಅದು ಉದ್ದವಾದ ಹೆಸರಾದ ಕಾರಣ “ಹಾಹೂ” ಎಂದು ಆ ಹೆಸರನ್ನು ಸಣ್ಣದಾಗಿಸಿದರು.
“ನಿನ್ನ ಹೆಸರು ‘ಹಾಹಾಹೂಹೂ’ ಅಲ್ಲವಾ?” ಎಂದು ಪ್ರಶ್ನಿಸಿದ ಪಂಡಿತನನ್ನು ನೋಡಿ ಉಳಿದವರೆಲ್ಲರೂ ಆಶ್ಚರ್ಯಗೊಂಡರು, ಇವನಿಗೆ ಹೇಗೆ ಗೊತ್ತಾಯಿತು ಎಂದು. ಅವನು ಹಿಂದೂ ದೇಶದಲ್ಲಿ ಮುದ್ರಿಸಿದ್ದ ಸಂಸ್ಕೃತ ಲಿಪಿಯ ಶಬ್ದಮಂಜರಿಯನ್ನು ನೋಡಿ ತಿಳಿದುಕೊಂಡಿದ್ದನು. ಅದರ ಪಕ್ಕದಲ್ಲಿ ‘ಇದು ಒಬ್ಬ ಗಂಧರ್ವನ ಹೆಸರು’ ಎಂದೂ ಇತ್ತು. ಗಂಧರ್ವ ಎಂದರೆ ಅದು ಒಂದು ಜಾತಿಯ ಮನುಷ್ಯ ಎಂದುಕೊಂಡನು. ಅದಕ್ಕಿಂತ ಹೆಚ್ಚಿನ ಸಂಶೋಧನೆಯನ್ನು ಮಾಡಲಿಲ್ಲ. ಈ ಸಂಗತಿಯನ್ನು ಅವನ ಜೊತೆಯಲ್ಲಿರುವ ಪರಿಶೋಧಕರಲ್ಲಿ ಹೇಳಿದಾಗ ಅವರೆಲ್ಲರೂ ಸಮಾಲೋಚಿಸಿ, ಗಂಧರ್ವನೆಂದರೆ ದೇವಯೋನಿಃ ಎಂದಿರುವ ಕಾರಣ, ದೇವಯೋನಿ ಎಂದರೆ ದೇವತೆಗಳಿಗಿಂತ ಸ್ವಲ್ಪ ಕಡಮೆಯವನಾದ ಕಾರಣ, ‘ನಿಜವಾಗಿಯೂ ದೇವತೆಗಳು ಇಲ್ಲವೇ ಇಲ್ಲ’ ಎಂಬ ಪ್ರಬಲ ವಿಶ್ವಾಸದಲ್ಲಿ ಈ ಸಿದ್ಧಾಂತವನ್ನು ನಿರಾಕರಿಸಿದರು. ಆದರೆ ಅವನ ಆಕಾರ ಮಾತುಗಳನ್ನು ನೋಡಿದರೆ ಆ ಪುಸ್ತಕದಲ್ಲಿ ಗಂಧರ್ವರನ್ನು ಕುರಿತು ಹೇಳಿದ ಎಲ್ಲವೂ ಸರಿಯಾಗುತ್ತಿದ್ದವು.
ಪಂಡಿತರೆಲ್ಲರೂ ಒಂದು ರಹಸ್ಯಾಲೋಚನ ಸಭೆಯನ್ನು ನಡೆಸಿದರು. ಇದರಲ್ಲಿ ಈ ವಿಷಯವು ಎಲ್ಲ ಪಂಡಿತರಿಗೂ ತಿಳಿಯುವಂತಿರಲಿಲ್ಲ. ಕೆಲವೇ ಕೆಲವು ದೊಡ್ಡ ದೊಡ್ಡ ಪಂಡಿತರು ಮಾತ್ರವೇ ಸೇರಿ, ಈ ವ್ಯಕ್ತಿ ಒಬ್ಬ ಗಂಧರ್ವನೆಂದೂ, ಹಿಂದೂಗಳು ವಿಶ್ವಸಿಸುವ ದೇವತೆಗಳಲ್ಲಿ ಇವನೊಬ್ಬನ ಜಾತಿಯೆಂದೂ ತಿಳಿಸಬಹುದಾ? – ಎಂಬ ವಿಷಯವನ್ನು ಕುರಿತು ವಿಚಾರಿಸಿದರು. ಈ ವಿಷಯವನ್ನು ತಿಳಿಸಿದರೆ ಬಹಳ ನಷ್ಟವಾಗುತ್ತದೆಯೆಂದೂ ತಿಳಿದರು. ತತ್ಕ್ಷಣ ಈ ವಿಷಯ ಸರ್ಕಾರದ ಕೈಗೆ ಹೋಯಿತು. ಪಂಡಿತರೆಲ್ಲರೂ ಸೇರಿಕೊಂಡು, ಎಲ್ಲರೂ ಕೂಡ “ಈ ವಿಷಯವನ್ನು ಹೊರಗೆ ಹೇಳುವುದಿಲ್ಲ” ಎಂದು ಪ್ರಮಾಣವನ್ನು ಮಾಡಿದರು. ಕಾಂಟರ್ಬರಿಯ ಆರ್ಚ್ಬಿಷಪ್ ಈ ವಿಷಯವನ್ನು ತಿಳಿಸಬಾರದೆಂಬ ರಹಸ್ಯಸಭೆಗೆ ಅಗ್ರಾಸನಾಧಿಪತಿಯಾಗಿದ್ದನು. ಅವರ ಉದ್ದೇಶ ಕೂಡ “ಈ ವಿಷಯವನ್ನು ಸಮಗ್ರವಾಗಿ ಸಂಶೋಧನೆ ಮಾಡಿ, ಅದು ನಿಜವಾದರೆ ಲೋಕಕ್ಕೆ ತಿಳಿಸಬಹುದು” ಎಂದು. ಒಂದುವೇಳೆ ಈ ವ್ಯಕ್ತಿ ಗಂಧರ್ವನಲ್ಲದಿರಬಹುದೇನೋ! ವೃಥಾ ಇವನು ಗಂಧರ್ವನೆಂದು ಪ್ರಚಾರ ಮಾಡಿದರೆ, ಆವಶ್ಯಕತೆಯಿಲ್ಲದ ವಿಶ್ವಾಸವನ್ನು ಪ್ರಬಲಗೊಳಿಸಿದಂತೆ ಆಗುತ್ತದೆ – ಹೀಗೆಂದು ಎಲ್ಲರೂ ಸುಮ್ಮನಾದರು. ಪಂಡಿತರನ್ನು ಈ ವಿಷಯದಲ್ಲಿ ಇನ್ನೂ ಸಂಶೋಧಿಸಬೇಕೆಂದು ಆಜ್ಞಾಪಿಸಿದರು. ಅವರೂ ಸರಿಯೆಂದರು. ಇವನು ಗಂಧರ್ವನಲ್ಲ ಎಂದು ಹೇಳುವುದಕ್ಕೆ ಒಂದು ಪ್ರಬಲವಾದ ಕಾರಣವಿದೆ. ಗಂಧರ್ವರಿಗೆ ರೆಕ್ಕೆಗಳಿರುತ್ತವೆ. ಅವರು ಆಕಾಶದಲ್ಲಿ ಹಾರುತ್ತಾರೆ. ಅವರು ಬಹಳ ಸುಂದರವಾದ ರೂಪವುಳ್ಳವರು. ಇವನಲ್ಲಿ ಈ ವಿಷಯಗಳು ಹೊಂದುತ್ತಿಲ್ಲ. ಇದರಿಂದ ಅವರೆಲ್ಲರೂ ಇವನು ಗಂಧರ್ವನಲ್ಲವೆಂದೇ ತೀರ್ಮಾನಿಸಿದರು. ಮೇಲಾಗಿ ಅದು ಅಸಂಭವವಾದ ವಿಷಯ!
(ಸಶೇಷ)