ಹಾಹೂ ಒಳಕ್ಕೆ ಹೋಗಿ ಸ್ನಾನವನ್ನು ಮಾಡಿ ಹೊರಬಂದು ಹಣ್ಣುಗಳನ್ನು ತರಲು ಹೇಳಿದನು. ಹಣ್ಣುಗಳನ್ನು ತಂದರು. ಅದನ್ನು ಆರೋಗಿಸಿದನು. ಜನರು ಮತ್ತೆ ಅವನ ಸುತ್ತಲೂ ಮುತ್ತಲು ಪ್ರಾರಂಭಿಸಿದರು. ಪಂಡಿತರ ಸಂಭಾಷಣೆಯೂ ಪ್ರಾರಂಭವಾಯಿತು. ಅವನು ತನ್ನ ಮೈಮೇಲಿಂದ ಶಾಲನ್ನು ಮಾತ್ರ ತೆರೆಯುತ್ತಲೇ ಇರಲಿಲ್ಲ. ನಾಲ್ಕೈದು ದಿನಗಳಾದವು. ಅವನು ಹಗಲು ಮಾತನಾಡುತ್ತಾನೆ. ಆದರೆ ರಾತ್ರಿ ಮಲಗುವುದಿಲ್ಲ. ಕುಳಿತುಕೊಂಡು ಪ್ರಾಣಾಯಾಮವನ್ನು ಮಾಡುತ್ತ ಇರುತ್ತಾನೆ. ಈ ಸಂಗತಿಯನ್ನು ಎಲ್ಲರೂ ಜಾಗ್ರತೆಯಿಂದ ಗಮನಿಸಿದರು. ಫ್ರೆಂಚ್-ಜರ್ಮನ್ ವಿಜ್ಞಾನಿಗಳು ಅವನು ರಾತ್ರಿಯೆಲ್ಲ ಮಲಗದೆ ಇರುವುದಕ್ಕೆ ತಾವು ಅವನಿಗೆ ಅರಿವಳಿಕೆ ಮದ್ದನ್ನು ಕೊಡಲು ಮಾಡಿದ ಪ್ರಯತ್ನವೇ ಕಾರಣವೆಂದುಕೊಂಡರು.
ಹಿಂದಿನ ಸಂಚಿಕೆಯಲ್ಲಿ...
ಕುತ್ತಿಗೆಯ ತನಕ ಮನುಷ್ಯ, ಕುದುರೆಯ ತಲೆ ಇರುವ ಎಂಟು ಅಡಿ ಎತ್ತರದ ವಿಚಿತ್ರ ಪ್ರಾಣಿಯೊಂದು ಲಂಡನ್ನಿನ ‘ಟ್ರೆಫಾಲ್ಗರ್ ಸ್ಕ್ವೇರ್’ನಲ್ಲಿ ಕಾಣಿಸಿತು. ಸಂಸ್ಕೃತ ಪಂಡಿತರು ಆ ವಿಚಿತ್ರಮೃಗದ ಹೆಸರು ‘ಹಾಹಾಹೂಹೂ’ ಎಂದೂ, ಈ ವ್ಯಕ್ತಿ ಗಂಧರ್ವನೆಂದೂ, ಹಿಂದುಗಳು ವಿಶ್ವಸಿಸುವ ದೇವತೆಗಳಲ್ಲಿ ಇವನೊಬ್ಬನ ಜಾತಿಯೆಂದೂ, ಅವನು ಮಾತನಾಡುತ್ತಿರುವುದು ಸಂಸ್ಕೃತಭಾಷೆಯೆಂದೂ ಸೂಚಿಸಿದರು.
ಕಾಂಟರ್ಬರಿಯ ಆರ್ಚ್ಬಿಷಪ್ ರಹಸ್ಯಸಭೆ ನಡೆಸಿ ಸಂಶೋಧನೆ ನಡೆಸುವಂತೆ ಹಾಗೂ ವಿಷಯವನ್ನು ರಹಸ್ಯವಾಗಿಡುವಂತೆ ಸೂಚಿಸಿದ. ಸಂಶೋಧನೆಗಾಗಿ ಜರ್ಮನಿಯ ಭಾಷಾಶಾಸ್ತ್ರಜ್ಞನೂ ಫ್ರಾನ್ಸಿನ ಪ್ರಾಣಿಶಾಸ್ತ್ರಜ್ಞನೂ ಆಗಮಿಸಿದರು. ಅವರ ತರ್ಕಕ್ಕೆ ಅವನು (‘ಹಾಹೂ’) ಎಟುಕದೇ ಇದ್ದಾಗ ಅರವಳಿಕೆ ನೀಡಿ, ಪ್ರಾಣಿಶಾಸ್ತ್ರಜ್ಞನು ತಲೆಯನ್ನು ತೆರೆದು ಮೆದುಳನ್ನು ಪರೀಕ್ಷಿಸುವುದೆಂದೂ, ಭಾಷಾಶಾಸ್ತ್ರಜ್ಞನು ಮುಖದ ಅವಯವಗಳನ್ನು ಪರೀಕ್ಷಿಸುವುದೆಂದೂ ನಿಶ್ಚಯಿಸಿದರು. ಸಂಸ್ಕೃತ ಪಂಡಿತನ ವಿರೋಧದ ನಡುವೆಯೂ ಅರವಳಿಕೆ ನೀಡಿದ ಕಾಲು ಗಂಟೆಯಲ್ಲಿ ಅವನ ಹೃದಯ–ನಾಡಿಯ ಸ್ಪಂದನ ಸಂಪೂರ್ಣ ನಿಂತುಹೋಯಿತು. ಅನಾಹುತವಾಯಿತೆಂದು ಕೃತಕ ಉಸಿರಾಟ ಅಳವಡಿಕೆಗೆ ಮುಂದಾಗುತ್ತಿದ್ದಂತೆಯೇ ಹಾಹೂ ಕಣ್ಣನ್ನು ತೆರೆದನು. ಅದರೆ ಹೃದಯ–ನಾಡಿಯಲ್ಲಿ ಯಾವುದೇ ಕದಲುವಿಕೆ ಇರಲಿಲ್ಲ.
ಡಾಕ್ಟರೂ ಮೇಯರೂ ಏನು ಆಲೋಚಿಸಿಕೊಂಡರೋ, ಆದರೆ ಅವನ ಕೈಗಳಿಗೆ ಕಾಲುಗಳಿಗೆ ಹಾಕಿದ್ದ ಸಂಕೋಲೆಯನ್ನು ತೆಗೆದುಹಾಕಿಸಿ ಎಲ್ಲರೂ ಹೊರಕ್ಕೆ ನಡೆದರು. ಹೊರಗೆ ರಿವಾಲ್ವರುಗಳನ್ನು ಹಿಡಿದುಕೊಂಡು ನಿಂತಿದ್ದ ಐವತ್ತು ಮಂದಿ ಸೈನಿಕರೂ ಕೂಡ ಅವರ ಹಿಂದೆಯೇ ಸಾಗಿದರು. ಇಬ್ಬರು ವಿಜ್ಞಾನಿಗಳೂ ಇಬ್ಬರು ಡಾಕ್ಟರುಗಳೂ ಕುಳಿತುಕೊಂಡು ಆ ಬಳಿಕ ಏನು ಮಾಡಬೇಕೆಂದು ಆಲೋಚಿಸಲು ಪ್ರಾರಂಭಿಸಿದರು. ಮೇಯರು ತನಗೆ ಕೆಲಸವಿದೆಯೆಂದು ಹೊರಟುಬಿಟ್ಟನು. ಫ್ರೆಂಚ್ ವಿಜ್ಞಾನಿ ಆ ವಿಷಯದಲ್ಲಿ ನಿರಾಶನಾದನು. ಜರ್ಮನ್ ವಿಜ್ಞಾನಿಗೆ ಇನ್ನೂ ನಿರಾಶೆಯಾಗಿರಲಿಲ್ಲ.
ಜರ್ಮನ್-ವಿಜ್ಞಾನಿ: ಒಂದು ವೇಳೆ ಅವನು ಎಚ್ಚರವಾಗಿರುವಾಗಲೇ ಅವನ ತಲೆಯನ್ನು ಕೊಯ್ದು ಮೆದುಳನ್ನು ತೆಗೆದು ನೋಡಿದರೆ ಹೇಗಿರುತ್ತದೆಯೋ!
ಡಾಕ್ಟರು: ಅದು ಅಪಾಯಕರವಲ್ಲವೇ? ಮನುಷ್ಯ ಸತ್ತು ಹೋದರೆ?
ಜ.ವಿ: ಇನ್ನೂ ಮನುಷ್ಯ ಎಂದು ನಿಮಗೆ ಅನುಮಾನವಿದೆಯಾ?
ಡಾ: ಹೌದೋ ಅಲ್ಲವೋ ತಿಳಿಯದಂತಾಗಿದೆ. ನಾನು “ಗ್ರೀಕ್ ಮೈಥಾಲಜಿ” ಓದಿದ್ದೇನೆ. “ಹಿಂದೂ ಮೈಥಾಲಜಿ”ಯಲ್ಲಿ ಕೂಡ ಕೆಲವು ಗ್ರಂಥಗಳನ್ನು ಓದಿದ್ದೇನೆ. ಇಂತಹ ಪ್ರಾಣಿಗಳು ಇರುವಂತೆ ಆ ಪುಸ್ತಕಗಳಲ್ಲಿ ಇದೆ. ಆದರೆ ಅವುಗಳನ್ನೆಲ್ಲ ಕಲ್ಪಿತವಾದವು ಎಂದುಕೊಂಡಿದ್ದೇನೆ. ಗ್ರೀಕ್ ಪುರಾಣಗಳಲ್ಲಿರುವ “ಮೈನೊಟಾರ್” ಮೊದಲಾದ ಪ್ರಾಣಿಗಳಿಗೆ ಕೂಡ ಪ್ರಾಣವಿರುತ್ತದೆ. ಆ ಗ್ರೀಕ್ ವೀರರು ಅದನ್ನು ಸಾಯಿಸಿದರು. ಪ್ರಾಣವಿದ್ದು ಉಸಿರಾಡುತ್ತಿದ್ದರೆ ಸಾಯಿಸುತ್ತೇವೆ. ಹೃದಯಸ್ಪಂದನೆಯನ್ನು ಹಿಡಿದು, ನಾಡಿಯ ಬಡಿತವನ್ನು ಹಿಡಿದು, ಪ್ರಾಣವಿದೆಯೆಂದು ಗುರುತಿಸುತ್ತೇವೆ. ಈಗ ಇವನಲ್ಲಿ ಒಂದಕ್ಕೊAದು ವಿರುದ್ಧವಾಗಿ ಇದೆ. ಹೃದಯವಾಗಲಿ ನಾಡಿಯಾಗಲಿ ಬಡಿದುಕೊಳ್ಳುತ್ತಿಲ್ಲ. ಅವನು ಬದುಕಿಯೇ ಇದ್ದಾನೆ. ಕಣ್ಣನ್ನು ತೆರೆದು ನೋಡುತ್ತಾನೆ. ನನಗೇನೂ ಹೊಳೆಯುತ್ತಿಲ್ಲ.
ಫ್ರೆಂಚ್-ವಿಜ್ಞಾನಿ: ಒಂದು ಉಪಾಯವನ್ನು ಮಾಡಿದರೆ ಚೆನ್ನಾಗಿರುತ್ತದೆಯೇನೋ ಎಂದು ಊಹಿಸುತ್ತಿದ್ದೇನೆ. ಅವನಿಗೆ ವಿಷಯವೆಲ್ಲವನ್ನೂ ಹೇಳಿ ‘ಇದು ಸಂಶೋಧನೆಯ ವಿಷಯ. ನಿನಗೆ ಪ್ರಾಣಾಪಾಯವಿರುವುದಿಲ್ಲ. ನೀನು ಒಪ್ಪಿಕೊಳ್ಳಲೇಬೇಕು. ಒಂದು ಗಂಟೆಯ ಸಮಯದಲ್ಲಿ ನಿನಗೆ ಪುನಃ ಸ್ಮೃತಿ ಬರುತ್ತದೆ’ ಎಂದು ಒಪ್ಪಿಸಿದರೆ?
ಪಂಡಿತ: ಆದರೆ ಅವನ ಶರೀರದ ಮೇಲೆ ಆದ ಗಾಯ ನಮ್ಮ ಔಷಧಗಳಿಂದ ಗುಣವಾಗಲಿಲ್ಲವಲ್ಲವೇ! ನಾವು ಗಾಯವನ್ನು ಮಾಡಿದವರಷ್ಟೇ ಆಗುತ್ತೇವೆ. ಮೇಲಾಗಿ ಅದೂ ತಲೆಯ ಮೇಲೆ! ಗುಣಪಡಿಸುವುದಕ್ಕೆ ಆಗದೇ ಹೋಗುತ್ತದೆಯೇನೋ!
ಜ.ವಿ: ಒಪ್ಪಿಕೊಳ್ಳದಿದ್ದರೆ ಇನ್ನೊಂದು ಉಪಾಯವನ್ನು ಮಾಡಬಹುದು. ಬಂದೂಕುಗಳನ್ನು ತೋರಿಸಿ “ನೀನು ಒಪ್ಪಿಕೊಳ್ಳದಿದ್ದರೆ ಇದರಿಂದ ಸುಟ್ಟು ಸಾಯಿಸುತ್ತೇವೆ” ಎಂದು ಹೇಳಬಹುದು. ಅವನ ಎದುರಿನಲ್ಲೇ ಈ ಬಂದೂಕಿನಿಂದ ಸುಟ್ಟು ಯಾವುದಾದರೂ ಪ್ರಾಣಿಯನ್ನು ಸಾಯಿಸಿದರೆ ಅವನಿಗೆ ಭಯ ಕೂಡ ಉಂಟಾಗುತ್ತದೆ. ಆಗ ಒಪ್ಪಿಕೊಳ್ಳುತ್ತಾನೆ ಎಂದುಕೊಳ್ಳುತ್ತೇನೆ.
ಡಾ: ಎರಡೂ ಉಪಾಯಗಳೇನೋ ಇವೆ. ನಾಳೆ ನೋಡೋಣ.
ಹೀಗೆಂದು ನಿರ್ಣಯಿಸಿ ಅವರವರ ದಾರಿಯನ್ನು ಹಿಡಿದರು.
* * *
ಮಾರನೇ ದಿನ ಬೆಳಕು ಹರಿಯುತ್ತಿದ್ದಂತೆಯೇ ಹಾಹೂವನ್ನು ನೋಡಲು ಹೋದರು. ಅವನು ಪ್ರಾಣಾಯಾಮದಲ್ಲಿ ಇದ್ದನು. ಇವತ್ತು ಬೆಳಗ್ಗೆಯೇ ಪ್ರಾರಂಭಿಸಿದನೇನಪ್ಪಾ! ಎಂದು ಪಂಡಿತರೆಲ್ಲರೂ ಆಶ್ಚರ್ಯಗೊಂಡರು. ಆ ದಿನ ಹೊತ್ತು ಮುಳುಗುವವರೆಗೂ ಅವನು ಕಣ್ಣನ್ನು ತೆರೆಯಲಿಲ್ಲ. ಸಮಾಧಿಯನ್ನು ಬಿಡಲಿಲ್ಲ. ಕೂತು ಕೂತು ವಿಜ್ಞಾನಿಗಳೂ ಡಾಕ್ಟರೂ ಬೇಸರಗೊಂಡು ಹೊರಟುಹೋದರು. ಮತ್ತೆ ಮಾರನೇದಿನ ಬೆಳಗ್ಗೆ ಬಂದರು. ಅವನು ಸಮಾಧಿಯಲ್ಲಿಯೇ ಇದ್ದನು. “ರಾತ್ರಿಯೆಲ್ಲ ಮಲಗಿದ್ದನಾ?” ಎಂದು ಅಲ್ಲಿಯೇ ಇದ್ದ ಕಾವಲುಗಾರರನ್ನು ಕೇಳಿದರು. ಅವರು “ಹೀಗೇ ಕೂತುಕೊಂಡಿದ್ದಾನೆ” ಎಂದು ಹೇಳಿದರು. ಹೀಗೆಯೇ ಹದಿನೈದು ದಿನಗಳು ಕಳೆದವು. ಯಾರೋ ಅವನ ಹಿಂದಕ್ಕೆ ಹೋಗುವುದಾಯಿತು. ಅವನ ಬೆನ್ನ ಮೇಲೆ ಪಕ್ಷಿಯ ಪುಕ್ಕಗಳಂತೆ ಪೊದೆಯಾಗಿ ಏನೋ ಬೆಳೆಯುತ್ತಿತ್ತು. ಪಕ್ಕದಿಂದ ನೋಡಿದರೆ ಅವನ ಕೈಗಳ ಹಿಂದೆ ಇಲ್ಲಿಯತನಕ ಇದ್ದ ಗಾಯಗಳು ಕಾಣಿಸಲಿಲ್ಲ. ಈ ಪುಕ್ಕಗಳು ಎಲ್ಲಿಯವೆಂದು ಎಲ್ಲರೂ ಆಶ್ಚರ್ಯಗೊಂಡರು. ಈ ಹದಿನೈದು ದಿನಗಳಿಂದ ಅವನ ಹತ್ತಿರಕ್ಕೆ ಯಾರೂ ಹೋಗಲಿಲ್ಲ, ಬರಲಿಲ್ಲ, ಆ ಕಟಕಟೆಯ ಒಳಗೂ ಯಾರೂ ಹೋಗಲಿಲ್ಲ.
ಹದಿನಾರನೆ ದಿನ ಅವನು ಕಣ್ಣನ್ನು ತೆರೆದು “ತತ್ರಭವಂತಃ ಕುತ್ರ ವರ್ತಂತೇ” ಎಂದು ಶಬ್ದಗೈದನು. ಅವನು ಮಾತನಾಡುತ್ತಿದ್ದಾನೆ ಎಂದು ಅಲ್ಲಿರುವ ಪೊಲೀಸರು ಹೋಗಿ ಮೇಯರನಿಗೆ ಹೇಳಿದರು. ಮೇಯರು ಪಂಡಿತರನ್ನು ಕರೆಸಿದನು. ಪಂಡಿತರೂ ಬಂದರು. ಹಾಹೂ ಅವರನ್ನು ತಾನು ಹೊದ್ದುಕೊಳ್ಳುವುದಕ್ಕೆ ಎರಡು ದೊಡ್ಡ ಶಾಲುಗಳು ಬೇಕೆಂದು ಕೇಳಿದನು. ತತ್ಕ್ಷಣ ಶಾಲುಗಳು ಬಂದವು. ಮೂರು ಗಜ ಅಗಲದ ಹದಿನಾಲ್ಕು ಮೊಳ ಉದ್ದದ ಮೆತ್ತನೆಯ ತೆಳುವಾದ ಉಣ್ಣೆಯ ಕಂಬಳಿಗಳನ್ನು ಅಂಚಿನಲ್ಲಿ ಹೊಲಿದು ಎರಡನ್ನು ತಂದು ಅವನಿಗೆ ಕೊಟ್ಟರು. ಅವನು ಒಂದನ್ನು ಹೊದೆದುಕೊಂಡನು.
ಅವನು ಪಂಡಿತರ ಬಳಿ ಹೇಳಿದನು. “ನಾನು ಸ್ನಾನವನ್ನು ಮಾಡಬೇಕಲ್ಲ. ನಾನು ಸ್ನಾನ ಮಾಡುವಷ್ಟು ಹೊತ್ತು, ಈ ಸುತ್ತಮುತ್ತ ಯಾರೂ ಇರಬಾರದು. ಇಲ್ಲದಿದ್ದರೆ ಸ್ನಾನವನ್ನು ಮಾಡುವ ಸ್ಥಳಕ್ಕೆ ಅಡ್ಡಲಾಗಿ ತೆರೆ ಕಟ್ಟಿಸಬೇಕು” ಎಂದು. ಈ ಮಾತಿನಿಂದ ಎಲ್ಲರಿಗೂ ಆಶ್ಚರ್ಯವಾಯಿತು. ಆದರೆ ಮೇಯರು ಕೇಳುತ್ತಿದ್ದಂತೆಯೇ “ನಿಜವೇ” ಎಂದುಕೊಂಡನು. ಅವನು “ನಿಜವಾಗಿಯೂ ಈ ಹಾಹೂ ನಾಗರಿಕನೇ ಹೌದು. ಇಲ್ಲದಿದ್ದರೆ ಸ್ನಾನದ ಕೋಣೆ ಬೇಕೆಂದು ಕೇಳುತ್ತಾನಾ?” ಎಂದುಕೊಂಡರು. ತತ್ಕ್ಷಣ ಏನನ್ನೋ ತೆಗೆದುಕೊಂಡು ಬಂದು ಸ್ನಾನದ ಕೋಣೆಗೆ ಅಡ್ಡವಾಗಿ ಕಟ್ಟಿಸಿದರು.
ಹಾಹೂ ಒಳಕ್ಕೆ ಹೋಗಿ ಸ್ನಾನವನ್ನು ಮಾಡಿ ಹೊರಬಂದು ಹಣ್ಣುಗಳನ್ನು ತರಲು ಹೇಳಿದನು. ಹಣ್ಣುಗಳನ್ನು ತಂದರು. ಅದನ್ನು ಆರೋಗಿಸಿದನು. ಜನರು ಮತ್ತೆ ಅವನ ಸುತ್ತಲೂ ಮುತ್ತಲು ಪ್ರಾರಂಭಿಸಿದರು. ಪಂಡಿತರ ಸಂಭಾಷಣೆಯೂ ಪ್ರಾರಂಭವಾಯಿತು. ಅವನು ತನ್ನ ಮೈಮೇಲಿಂದ ಶಾಲನ್ನು ಮಾತ್ರ ತೆರೆಯುತ್ತಲೇ ಇರಲಿಲ್ಲ. ನಾಲ್ಕೈದು ದಿನಗಳಾದವು. ಅವನು ಹಗಲು ಮಾತನಾಡುತ್ತಾನೆ. ಆದರೆ ರಾತ್ರಿ ಮಲಗುವುದಿಲ್ಲ. ಕುಳಿತುಕೊಂಡು ಪ್ರಾಣಾಯಾಮವನ್ನು ಮಾಡುತ್ತ ಇರುತ್ತಾನೆ. ಈ ಸಂಗತಿಯನ್ನು ಎಲ್ಲರೂ ಜಾಗ್ರತೆಯಿಂದ ಗಮನಿಸಿದರು. ಫ್ರೆಂಚ್-ಜರ್ಮನ್ ವಿಜ್ಞಾನಿಗಳು ಅವನು ರಾತ್ರಿಯೆಲ್ಲ ಮಲಗದೆ ಇರುವುದಕ್ಕೆ ತಾವು ಅವನಿಗೆ ಅರವಳಿಕೆ ಮದ್ದನ್ನು ಕೊಡಲು ಮಾಡಿದ ಪ್ರಯತ್ನವೇ ಕಾರಣವೆಂದುಕೊಂಡರು.
ಹೀಗಿರುವಾಗ ಒಂದು ವಾರದಲ್ಲಿ ಅವನ ಬೆನ್ನ ಮೇಲೆ ಏನೋ ಎತ್ತರವಾಗಿ ಇರುವಂತೆ ಕಂಡಿತು. ಮೊದಲು ಅದು ಶಾಲು ಮಡಿಸಿಕೊಂಡು ಬಿದ್ದಿದೆಯೆಂದುಕೊಂಡರು. ದಿನದಿನಗಳಲ್ಲಿ ಅದು ಎತ್ತರವಾಗುತ್ತಲೆ ಇತ್ತು. ಅವನು ಕುಳಿತಿರುವಾಗ ಅವನ ಹಿಂದೆ ಏನೋ ಬಂಗಾರದ ಪುಕ್ಕಗಳು ಹರಡಿದಂತೆ ಕಾಣುವುದಕ್ಕೆ ಮೊದಲಾಯಿತು.
ಅವನು ಯಾರೂ ಏಳುವುದಕ್ಕೆ ಮೊದಲೇ ಹೋಗಿ ಸ್ನಾನವನ್ನು ಮಾಡಿ ಬಂದು ಅಲ್ಲಿ ಕುಳಿತುಕೊಂಡಿರುತ್ತಿದ್ದನು. ಹಾಗೆ ಕೂತಿದ್ದು ಕೂತಿದ್ದು ಹೊತ್ತು ಮುಳುಗುವ ತನಕ ಹಾಗೆಯೇ ಕುಳಿತಿರುತ್ತಿದ್ದನು. ಅಲ್ಲಿಯ ತನಕ ಹಣ್ಣುಗಳನ್ನು ತಿನ್ನುತ್ತಿದ್ದನು. ಇತ್ತೀಚೆಗೆ ಅವುಗಳನ್ನೂ ಬಿಟ್ಟಿದ್ದನು. ಸೂರ್ಯ ಮುಳುಗುತ್ತಿದ್ದಂತೆಯೇ ಸ್ವಲ್ಪ ಕದಲಿ ಪದ್ಮಾಸನವನ್ನು ಹಾಕಿಕೊಂಡು ಪ್ರಾಣಾಯಾಮವನ್ನು ಪ್ರಾರಂಭಿಸುತ್ತಿದ್ದನು.
ಒಂದು ದಿನ ಮಧ್ಯಾಹ್ನ ಇಬ್ಬರು ವಿಜ್ಞಾನಿಗಳು, ಇಬ್ಬರು ಡಾಕ್ಟರುಗಳು, ಇಬ್ಬರು ಪಂಡಿತರನ್ನೂ ಹಿಂದಕ್ಕಿಟ್ಟುಕೊಂಡು ಅವನ ಬಳಿಗೆ ಹೋದರು. ಹೋಗಿ ಅವನಿಗೆ ಸ್ವಲ್ಪ ದೂರದಲ್ಲಿ ಕುಳಿತುಕೊಂಡರು. ಅವನು ಎರಡನೇ ಶಾಲನ್ನೂ ತೆಗೆದುಕೊಂಡು ಮೈಗೆಲ್ಲ ಹೊದ್ದುಕೊಂಡನು. ಅವನ ಮುಖವನ್ನು ಬಿಟ್ಟು ಬೇರೆ ಏನೂ ಕಾಣಿಸುತ್ತಿರಲಿಲ್ಲ. ವಿಜ್ಞಾನಿಗಳ ಉದ್ದೇಶವನ್ನು ಸಂಸ್ಕೃತೀಕರಿಸಿ ಪಂಡಿತರು ಅವನಿಗೆ ಹೇಳಿದರು. “ಅಯ್ಯಾ! ಇವರದ್ದು ಜರ್ಮನಿ ದೇಶ. ಇವರು ಭಾಷಾಶಾಸ್ತ್ರಜ್ಞ” ಎಂದು ಪಂಡಿತರು ಪ್ರಾರಂಭಿಸುತ್ತಿದ್ದಂತೆಯೇ ಆತ “ಭಾಷಾಶಾಸ್ತ್ರ ನಾಮ ಕಿಂ?” (ಭಾಷಾಶಾಸ್ತ್ರ ಎಂದರೇನು?) ಎಂದು ಪ್ರಶ್ನಿಸಿದನು.
ಪಂಡಿ: ಭಾಷೆ ಹೇಗೆ ಹುಟ್ಟಿತೋ, ಯಾವ ಭಾಷೆಯಿಂದ ಯಾವ ಭಾಷೆಗಳು ಹುಟ್ಟಿದವೋ ಈ ವಿಷಯವನ್ನು ತಿಳಿದುಕೊಳ್ಳುವುದು ಭಾಷಾಶಾಸ್ತ್ರ.
ಹಾಹೂ ನಕ್ಕು “ಸರ್ವಾಸಾಂ ಭಾಷಾಣಾಂ ಗೀರ್ವಾಣ್ಯೈವ ಪ್ರಭವಹೇತುಃ ಏಷಾ ವಿಚಾರಣಾ ನಾಮ ಕಿಂ ಪ್ರಕಾರಾಃ” ಎಂದನು.
ಪಂಡಿ: ಮೊತ್ತಮೊದಲು “ಇಂಡೋ ಯುರೋಪಿಯನ್” ಭಾಷೆ ಎಂಬ ಒಂದು ಇತ್ತು. ಅದರಿಂದ “ಇಂಡೋ ಇರಾನಿಯನ್” ಭಾಷೆ ಹುಟ್ಟಿತು. ಅದರಿಂದ ಸಂಸ್ಕೃತ ಹುಟ್ಟಿತು. ಇದು ನಮ್ಮ ಶಾಸ್ತ್ರೀಯ ಸಂಶೋಧನೆ.
ಹಾಹೂ ನಕ್ಕು “ಮುಂದಿನ ಕಥೆ ಹೇಳಿ” ಎಂದನು.
ಪಂಡಿ: ಈ ಎರಡನೆಯವರು ಫ್ರೆಂಚ್ ದೇಶದವರು. ಪ್ರಾಣಿಶಾಸ್ತ್ರಜ್ಞ. ಇಬ್ಬರೂ ಆಯಾ ಶಾಸ್ತ್ರಗಳಲ್ಲಿ ಎಷ್ಟೋ ಸಾಮರ್ಥ್ಯವನ್ನು ಗಳಿಸಿದ್ದಾರೆ. ಅವರಿಗೆ ತಮ್ಮ ವಿಷಯದಲ್ಲಿ ಒಂದು ಸಂದೇಹವಿದೆ. ಅದನ್ನು ತೀರಿಸಿಕೊಳ್ಳಲು ಬಂದಿದ್ದಾರೆ.
ಹಾಹೂ: ಕ ಏಷ ಕಥ್ಯತಾಂ
ಪಂಡಿ: ತಮ್ಮ ಚಿತ್ತ. ನೀವು ಕ್ಷಮಿಸಬೇಕು. ನಿಮ್ಮ ಶರೀರವು ಮಾನವರ ಅಂಗಾಂಗಗಳಿಂದ ಕೂಡಿದೆ. ನಿಮ್ಮ ತಲೆಯು ಅಶ್ವದ್ದು. ಅಶ್ವವೇ ಮೊದಲಾದವು ಪ್ರಾಣಿಗಳು. ಅವುಗಳಿಗೆ ಮಾನವರಿಗೆ ಇರುವಷ್ಟು ಜ್ಞಾನವೂ ಉಚ್ಚಾರಣಾ ಸೌಲಭ್ಯವೂ ಇರುವುದಿಲ್ಲ. ನಿಮ್ಮ ಶಿರಸ್ಸು ಅಶ್ವಶಿರಸ್ಸಾದ ಕಾರಣ ಅದರಲ್ಲಿ ಮಾನವರ ಜ್ಞಾನಕ್ಕೆ ತಕ್ಕಂತೆ ಮಾಡುವ ಮೆದುಳಿರುವುದು ಹೇಗೆ ಸಾಧ್ಯವೆಂದು ಪ್ರಾಣಿಶಾಸ್ತ್ರಜ್ಞನ ಸಂದೇಹ. ನಿಮ್ಮ ತಾಲು, ದಂತ ಮೊದಲಾದ ಮುಖದ ಒಳಗಿರುವ ಅವಯವಗಳು ಕುದುರೆಯ ಮುಖದ ಅವಯವಗಳಾದ ಕಾರಣ ನಿಮ್ಮ ಬಾಯಿಯಿಂದ ಮನುಷ್ಯರ ಉಚ್ಚಾರಣೆ ಹೇಗೆ ಬರುತ್ತಿದೆ ಎಂದು ಜರ್ಮನಿ ಪಂಡಿತರ ಸಂದೇಹ. ಈ ಸಂದೇಹ ನಿವಾರಣೆ ಮಾಡಿಕೊಳ್ಳುವುದಕ್ಕೆ ಅವರು ನಿಮಗೆ ಒಂದು ಔಷಧವನ್ನು ಕೊಟ್ಟು ನಿಮಗೆ ಸ್ಮೃತಿಯಿಲ್ಲದಂತೆ ಮಾಡುತ್ತಾರೆ. ಆಗ ನಿಮ್ಮ ಮೆದುಳನ್ನು ಅವರು ಕತ್ತಿಯಿಂದ ತೆರೆದು ಪರೀಕ್ಷಿಸುತ್ತಾರೆ. ಇದು ಯಥಾರ್ಥಪರಿಜ್ಞಾನಕ್ಕೋಸ್ಕರವಾದ ಕಾರಣ ಇದಕ್ಕೆ ನೀವು ಒಪ್ಪಿಕೊಳ್ಳಬೇಕು.
ಹಾಹೂ: ನಾನು ಒಪ್ಪಿಕೊಳ್ಳದಿದ್ದರೆ ಏನು ಮಾಡುತ್ತೀರಿ?
ಜ.ವಿ: ನಮ್ಮ ಬಲವನ್ನು ಪ್ರಯೋಗಿಸಿ ನೀವು ಒಪ್ಪಿಕೊಳ್ಳುವಂತೆ ಮಾಡಬೇಕಾಗುತ್ತದೆ.
ಹಾಹೂ “ಇವನು ಏನು ಹೇಳುತ್ತಿದ್ದಾನೆ” ಎಂದು ಪಂಡಿತನನ್ನು ಕೇಳಿದನು. ಆ ಪಂಡಿತನು ಅದನ್ನು ಸಂಸ್ಕೃತದಲ್ಲಿ ಹೇಳಿದನು.
ಹಾಹೂ: ಒಂದು ವಿಷಯ ನೋಡಿ. ನನಗೆ ನಿಮ್ಮ ಮನಸ್ಸಿನಲ್ಲಿ ಇಂತಹ ಕೀಟಲೆಯ ಯೋಚನೆಗಳು ಹೇಗೆ ಹುಟ್ಟುತ್ತವೆಯೋ ಎಂದು ಸಂದೇಹವಿದೆ. ಈ ಊಹೆಗಳು ಹುಟ್ಟುವುದಕ್ಕೆ ನಿಮ್ಮ ತಲೆಯಲ್ಲಿ ಇರುವ ಮೆದುಳು ಯಾವ ತರಹದ್ದು ಎಂದು ಪರಿಶೀಲಿಸೋಣವೆಂದೂ ಇದೆ. ನನ್ನನ್ನು ಏನು ಮಾಡಬೇಕೆಂದು ಹೇಳುತ್ತೀರಿ?
ಪಂಡಿತನು ಈ ವಾಕ್ಯವನ್ನು ತರ್ಜುಮೆ ಮಾಡಿ ಶಾಸ್ತ್ರಜ್ಞರಿಗೆ ಹೇಳಿದನು. ಅವರು ಒಬ್ಬರ ಮುಖದ ಕಡೆ ಒಬ್ಬರು ನೋಡಿಕೊಂಡರು. ಏನು ಸಮಾಧಾನವನ್ನು ಹೇಳಬೇಕೆಂದು ತಿಳಿಯಲಿಲ್ಲ. ಸ್ವಲ್ಪ ಹೊತ್ತು ಆ ಕಡೆ ಈ ಕಡೆ ಸುತ್ತಾಡಿ ಅವರ ದಾರಿ ಹಿಡಿದರು.
ಆಗ ಪಂಡಿತನು ಹೀಗೆ ಹೇಳಿದನು “ನಮ್ಮ ದೇಶಗಳಲ್ಲಿ ವಿಷಯವನ್ನು ತಿಳಿದುಕೊಳ್ಳಬೇಕೆಂಬ ಜಿಜ್ಞಾಸೆ ಹೆಚ್ಚು. ನಮ್ಮ ದೇಶದವರು ಇತರ ಖಂಡಗಳಿಗೆ ಹೋಗಿ ಅಲ್ಲಿರುವ ವಿಚಿತ್ರ ವಿಷಯಗಳನ್ನು ವಿಶೇಷಗಳನ್ನು ಕುರಿತು ಬರೆಯುತ್ತಿರುತ್ತಾರೆ.”
ಹಾಹೂ “ಆ ಕೆಲಸವನ್ನು ಏಕೆ ಮಾಡುತ್ತಾರೆ? ಸೃಷ್ಟಿ ವಿಭಿನ್ನವಾದದ್ದೆಂದು ನಿಮಗೆ ತಿಳಿದಿಲ್ಲವೇ? ಸೃಷ್ಟಿಯಲ್ಲಿ ಅನೇಕ ವಿಧವಾದ ಪ್ರಾಣಿಗಳು ಇರುತ್ತವೆಯೆಂದು ನಿಮಗೆ ತಿಳಿಯದೇ? ಅನೇಕ ವಿಧವಾದ ಪ್ರಾಣಿಗಳು ಇದ್ದಂತೆಯೇ ಅವುಗಳ ಅಭ್ಯಾಸಗಳೂ ಬೇರೆ, ಅನೇಕ ಜಾತಿಯ ಮನುಷ್ಯರಿದ್ದರೆ ಅವರ ಆಚಾರ-ವಿಚಾರಗಳು ಬೇರೆಯಾಗಿರುತ್ತವೆ ಎಂದು ತಿಳಿದುಕೊಳ್ಳುವುದು ಬಹಳ ಸುಲಭವಾದ ವಿಚಾರ. ಮೊತ್ತಮೊದಲು ಕೆಲವು ಹೊಸ ಪ್ರಾಣಿಗಳನ್ನೂ ಹೊಸ ದೇಶಗಳನ್ನೂ ನೋಡಿದರೆ ಅದು ಆಶ್ಚರ್ಯಕರವಾಗಿರಬಹುದು. ಅದು ಅಜ್ಞಾನದ ಒಂದು ಲಕ್ಷಣ. ಶಾಸ್ತ್ರಜ್ಞಾನವುಂಟಾದ ಬಳಿಕ ಬುದ್ಧಿ ಪರಿಪಕ್ವವಾದರೆ ಆಶ್ಚರ್ಯಕರವಾದ ವಿಷಯವೆಂಬುದು ಯಾವುದೂ ಇರಬೇಕೆಂದೇನಿಲ್ಲ. ಮೇಲಾಗಿ ನಾವು ಒಂದು ವಿಷಯವನ್ನು ನೋಡಿ ತಿಳಿದುಕೊಂಡರೆ ಅದನ್ನು ಕುರಿತ ಅನೇಕ ವಿಷಯಗಳನ್ನು ಊಹಿಸಬಹುದು. ಯಾವುದನ್ನು ನಾವು ಊಹಿಸುತ್ತೇವೆಯೋ ಅದನ್ನು ಆಮೇಲೆ ಪ್ರತ್ಯಕ್ಷವಾಗಿ ನೋಡಿದರೆ ಆಶ್ಚರ್ಯವಾಗೇನೂ ಇರುವುದಿಲ್ಲ. ಇಷ್ಟು ಮಾತ್ರಕ್ಕೆ ಸಂಶೋಧನೆಯೆಂದೂ ಕತ್ತರಿಸಿ ನೋಡುತ್ತೇವೆ ಎಂದೂ ಹೇಳುವುದೇಕೆ? ಮೇಲಾಗಿ ನೀವು ಆಲೋಚಿಸಿ ಮನಸ್ಸನ್ನು ಏಕಾಗ್ರವಾಗಿ ನಿಲ್ಲಿಸಿ ವಿಷಯಗಳ ಯಥಾರ್ಥಜ್ಞಾನವನ್ನು ತಿಳಿದುಕೊಳ್ಳುವುದಿಲ್ಲವೆಂಬಂತಿದೆ. ಶಾರೀರಿಕವಾಗಿ ಸಂಶೋಧನೆ ಮಾಡಿ ಎಷ್ಟೆಂದು ಜ್ಞಾನವನ್ನು ಕಲಿತುಕೊಳ್ಳುತ್ತೀರಾ? ಏಕಾಗ್ರಮನಸ್ಕರಾಗಿ ಭಾವಿಸಿದರೆ ಅದರ ವಿಷಯ ತಿಳಿಯುತ್ತದೆಯಲ್ಲವೇ?
ಪಂಡಿತರಿಗೆ ಈ ಮಾತುಗಳು ಯಾವುದೂ ಅರ್ಥವಾಗಲಿಲ್ಲ. ಆ ಪಂಡಿತರು ಹೋಗಿ ಈ ಮಾತುಗಳೆಲ್ಲವನ್ನೂ ಹೊರಗೆ ಬಂದು ಎಲ್ಲರಿಗೂ ಹೇಳಿದರು. ಮಾರನೇ ದಿನ ಈ ವಿಷಯಗಳು ಪತ್ರಿಕೆಗಳ ತುಂಬಾ ಬಂದಿದ್ದವು. ಈ ಮಾತುಗಳನ್ನು ಓದಿದ ಬಳಿಕ ಯುರೋಪಿನಲ್ಲಿ ಇರುವ ದೊಡ್ಡ ದೊಡ್ಡ ತತ್ತ್ವಶಾಸ್ತ್ರಜ್ಞರೆಲ್ಲರೂ ಈ ಕುದುರೆಮನುಷ್ಯನ ಮೇಧಾವಿಶೇಷವನ್ನು ಕುರಿತು ಆಲೋಚಿಸಲು ಪ್ರಾರಂಭಿಸಿದರು. ಬಹಳ ಮಂದಿ ಅವನನ್ನು ನೋಡಲು ಲಂಡನ್ನಿಗೆ ಹೊರಟರು. ಪಂಡಿತರಿಗೂ ಶಾಸ್ತ್ರಜ್ಞರಿಗೂ ಹಾಹೂ ಜೊತೆಯಲ್ಲಿ ವಾದಿಸಲು ಏನೂ ತೋರಲಿಲ್ಲ. ಅವರೆಲ್ಲರೂ ಏನು ಹೇಳಿದರೂ ಅವನು ಒಂದು ಸಣ್ಣ ಮಾತಿನಿಂದ ಅವರ ವಾದವನ್ನೆಲ್ಲ ಸೋಲಿಸಿಬಿಡುತ್ತಿದ್ದನು. ಲಂಡನ್ನಿನಲ್ಲಿ ಅವನು ಒಂದು ಮೃಗ ಎಂಬ ಆಶ್ಚರ್ಯ ಹೋಗಿ ಅವನೊಬ್ಬ ವಾದನಶೀಲ ಎಂದು ಆಶ್ಚರ್ಯ ಹುಟ್ಟಿತು.
* * *
ಒಂದು ದಿನ ಭಾಷಾ-ಪ್ರಾಣಿಶಾಸ್ತ್ರಜ್ಞರು ಕುಳಿತು ಆಲೋಚಿಸಲು ಪ್ರಾರಂಭಿಸಿದರು.
ಪ್ರಾ: ಈ ಪ್ರಾಣಿ ನಮಗೆ ಸ್ವಾಧೀನವಾಗುವಂತೆ ಕಾಣುವುದಿಲ್ಲ. ಇದನ್ನೇನು ಮಾಡೋಣ?
ಭಾಷಾ: ನಾವು ಮೊದಲು ಆಲೋಚಿಸಿದ ಉಪಾಯವೇ ಚೆನ್ನಾಗಿದೆ. ಅವನ ಎದುರು ಒಂದು ಕೋಣವನ್ನೋ ಎತ್ತನ್ನೋ ಬಂದೂಕಿನಿಂದ ಗುಂಡು ಹೊಡೆದು ಸಾಯಿಸಿ ತೋರಿಸಿ ಆತನನ್ನು ಭಯಪಡಿಸಿ ನಾವು ವಶಪಡಿಸಿಕೊಳ್ಳಬೇಕಷ್ಟೆ!
ಪ್ರಾ: ಈ ಸಂಗತಿಯನ್ನು ಲಾರ್ಡ್ ಮೇಯರ್ ಬಳಿ ಹೇಳಿ ಡಾಕ್ಟರನ್ನು ಕರೆದುಕೊಂಡು ಹೋಗಿ ಪ್ರಯತ್ನವನ್ನು ಮಾಡೋಣ.
ಹೀಗೆಂದು ಅವರಿಬ್ಬರೂ ಹೋಗಿ ಈ ವಿಷಯವನ್ನು ಮೇಯರ್ ಬಳಿ ಹೇಳಿದರು. ಮೇಯರ್ ಹೀಗೆಂದನು – “ಬಂದೂಕಿನಿಂದ ಗುಂಡು ಹೊಡೆದರೆ ಪ್ರಾಣ ಹೋಗುತ್ತದೆಯೆಂದು ಅವನಿಗೆ ಈ ಮೊದಲೇ ನಾವು ತಿಳಿಸಿದ್ದೇವೆ. ಅವನು ಬಂದ ಹೊಸತರಲ್ಲಿ ಒಂದು ದಿನ ಅವನು ಸೈನಿಕನೊಬ್ಬನ ಕೈಯಿಂದ ಬಂದೂಕನ್ನು ಸೆಳೆದುಕೊಂಡುಬಿಟ್ಟಿದ್ದ. ಆಗ ನಾವು ರಿವಾಲ್ವರಿನಿಂದ ಒಂದು ನಾಯಿಯನ್ನು ಸಾಯಿಸಿ ಅವನಿಗೆ ತೋರಿಸಿ ಬಂದೂಕನ್ನು ಹಿಂದಕ್ಕೆ ಪಡೆದುಕೊಂಡೆವು.”
ಪ್ರಾ: ಹಾಗಾದರೆ ಅವನಿಗೆ ಈಗಾಗಲೇ ಭಯ ಹುಟ್ಟಿದೆ ಎಂದಂತಾಯ್ತು. ಸರಿ. ಇನ್ನು ಈ ಪ್ರಯತ್ನ ಮಾಡೋಣ.
ಹೀಗೆಂದು ಡಾಕ್ಟರು, ಸಿಬ್ಬಂದಿಗಳು, ವಿಜ್ಞಾನಿಗಳು ಎಲ್ಲರೂ ಸೇರಿ ಅವನ ಬಳಿ ಹೋದರು. ಅವನ ಬಳಿ ಈ ವಿಷಯವನ್ನೆಲ್ಲ ಹೇಳಿದರು. “ನೀವು ಒಪ್ಪಿಕೊಳ್ಳದಿದ್ದರೆ ಮರ್ಯಾದೆ ಇರುವುದಿಲ್ಲ. ಯಥಾರ್ಥವಿಷಯವನ್ನು ತಿಳಿದುಕೊಳ್ಳುವುದಕ್ಕೋಸ್ಕರ ನಮ್ಮಲ್ಲಿ ಪ್ರಾಣಗಳೆಂದರೂ ಲೆಕ್ಕವಿರುವುದಿಲ್ಲ. ಕ್ಲೋರೊಫಾರಂ ಎಂಬ ಈ ಮದ್ದನ್ನು ಹೆಚ್ಚಾಗಿ ಹಾಕಿದರೆ ಮನುಷ್ಯ ಸಾಯುತ್ತಾನಾ ಸಾಯುವುದಿಲ್ಲವಾ ಎಂಬ ವಿಷಯವನ್ನು ತಿಳಿದುಕೊಳ್ಳುವುದಕ್ಕೋಸ್ಕರ ಒಬ್ಬ ಫ್ರೆಂಚ್ ವಿಜ್ಞಾನಿ ತಾನೇ ಈ ಮದ್ದನ್ನು ತೆಗೆದುಕೊಂಡು ಸತ್ತುಹೋದನು. ಹೀಗೆ ಎಷ್ಟೋ ಮಂದಿ ದೊಡ್ಡ ವಿಜ್ಞಾನಿಗಳು ನಮ್ಮ ದೇಶದಲ್ಲಿ ಜ್ಞಾನಕ್ಕಾಗಿ ಆಹುತಿಯಾಗಿದ್ದಾರೆ. ಹಾಗಾಗಿ ನೀವು ಇದಕ್ಕೆ ಒಪ್ಪಿಕೊಳ್ಳಬೇಕು.”
ಹಾಹೂ: ಅದರಿಂದ ನಿಮ್ಮ ಮನುಷ್ಯಜಾತಿಗೆ ಯಾವ ದೊಡ್ಡ ಲಾಭವಾಗಿದೆ? ಪಂಡಿತರು ನನ್ನ ಜೊತೆಯಲ್ಲಿ ಹೇಳಿರುವ ವಿಷಯಗಳನ್ನು ಕುರಿತು ನೋಡಿದರೆ ನಿಮ್ಮ ದೇಶದಲ್ಲಿ ಅಜ್ಞಾನವೇ ಹೆಚ್ಚಾಗಿರುವಂತಿದೆ! ಕೆಲವಷ್ಟು ರೋಗಗಳಿಗೆ ಔಷಧವೇ ಇಲ್ಲವಂತೆ. ಕಾಲರಾ-ಸಿಡುಬು ಮೊದಲಾದ ರೋಗಗಳು ಬಂದು ಜನರು ಸತ್ತು ಹೋಗುತ್ತಿದ್ದಾರಂತೆ. ನೂರು ವರ್ಷಗಳಷ್ಟು ಕೂಡ ಸರಿಯಾಗಿ ಬದುಕುತ್ತಿಲ್ಲವಂತೆ. ತಪಸ್ಸನ್ನು ಯಾರೂ ಮಾಡುವುದಿಲ್ಲವಂತೆ. ಜ್ಞಾನ ಎಂಬುದು ತಪಸ್ಸನ್ನು ಮಾಡುವುದರಿಂದ ಬರುತ್ತದೆಯೇ ಹೊರತು ಪ್ರಾಣಿಗಳ ಶರೀರವನ್ನು ಕತ್ತರಿಸಿ ನೋಡಿದರೆ ಬರುವುದಿಲ್ಲ.
ಪ್ರಾ: ನಾವು ನಿಮ್ಮೊಡನೆ ವಾದ ಮಾಡಲು ಬಂದಿಲ್ಲ. ನಾವು ಹೇಳಿದ ಪ್ರಕಾರ ಕೇಳದೇ ಹೋದರೆ ಈ ತುಪಾಕಿಯಿಂದ ಬಾಧಿಸಿ, ನಿಮ್ಮ ಸ್ಮೃತಿ ತಪ್ಪಿದ ಬಳಿಕ ನಮ್ಮ ಸಂಶೋಧನೆ ಮಾಡಬೇಕಾಗಿ ಬರುತ್ತದೆ. ಹಾಗಾಗಿ ಆಲೋಚಿಸಿಕೊಳ್ಳಬೇಕು!
ಹಾಹೂ: ನಿಮ್ಮ ದೇಶದಲ್ಲಿ ಪ್ರತಿ ವ್ಯಕ್ತಿಗೂ ಸ್ವಾತಂತ್ರ್ಯವಿದೆಯಂತಲ್ಲವೇ! ಮೊನ್ನೆ ಒಬ್ಬ ಪಂಡಿತರು ಹೇಳಿದರು. ಆ ಸ್ವಾತಂತ್ರ್ಯ ನಿಮ್ಮ ದೇಶದಲ್ಲಿ ಹುಟ್ಟಿದವರಿಗೆ ಮಾತ್ರವಾ? ಬೇರೆ ದೇಶಗಳಿಂದ ಇಲ್ಲಿಗೆ ಬಂದರೆ ಅವರಿಗೆ ಆ ಸ್ವಾತಂತ್ರö್ಯವಿರುವುದಿಲ್ಲವಾ? ನಾನೊಬ್ಬ ವ್ಯಕ್ತಿ. ನನ್ನ ಸ್ವಾತಂತ್ರö್ಯ ನನಗೆ ಇದೆ. ನನ್ನ ಶರೀರದ ಮೇಲೆ ನೀವು ಮಾಡುತ್ತೇವೆ ಎಂದು ಹೇಳುತ್ತಿರುವ ಪರೀಕ್ಷೆಗೆ ನಾನು ಒಪ್ಪಿಕೊಳ್ಳುವುದಿಲ್ಲ. ಮತ್ತೆ ನನ್ನ ಸ್ವಾತಂತ್ರ್ಯವೇನಾಗಬೇಕು?
ಹಿರಿಯರೆಲ್ಲರೂ ತಲೆದೂಗಿದರು. ಪ್ರಾಣಿಶಾಸ್ತ್ರಜ್ಞನು ಹೀಗೆ ಹೇಳಿದನು – “ಸ್ವಾತಂತ್ರ್ಯ ಎಂಬುದು ಮನುಷ್ಯರಿಗೇ ಹೊರತು ಪ್ರಾಣಿಗಳಿಗಿಲ್ಲ. ನೀವು ಮೃಗವೇ ಆದ ಕಾರಣ ಆ ಸ್ವಾತಂತ್ರ್ಯ ನಿಮಗೆ ಇರುವುದಿಲ್ಲ.”
ಹಾಹೂ: ನಾವೆಲ್ಲರೂ ಪ್ರಾಣಿಗಳೇ. ತಿರ್ಯಗ್ಜಂತುಗಳಿಗೂ ಮನುಷ್ಯರಿಗೂ ಜ್ಞಾನದಲ್ಲಿ ಭೇದವಿದೆ. ಮನುಷ್ಯರಿಗಿರುವ ಉನ್ನತವಾದ ಜ್ಞಾನ ಪ್ರಾಣಿಗಳಿಗಿಲ್ಲ. ಅವುಗಳ ಭೇದ ಜ್ಞಾನದಿಂದಲೇ ನಿರ್ಣಯಿಸಲ್ಪಡುತ್ತದೆ. ನನಗೆ ಕೂಡ ನಿಮಗೆ ಇರುವಷ್ಟೇ ಜ್ಞಾನವಿದೆ. ಹಾಗಾಗಿ ನನ್ನನ್ನು ನೀವು ನಿಮ್ಮಂತೆಯೇ ನೋಡಬೇಕು.
ಪ್ರಾ: ಆದರೆ ಈ ವಿಷಯವನ್ನು ನಿರ್ಣಯಿಸುವುದು ಒಂದು ಜ್ಞಾನ ಮಾತ್ರವೇ ಅಲ್ಲ. ಆಕಾರ ಕೂಡ.
ಹಾಹೂ: ಹಾಗಾದರೆ ನಿಮಗೆ ಇರುವ ಆಕಾರ ಮಾತ್ರ ಜ್ಞಾನವಿರುವ ಆಕಾರವಾಗಿ, ನನಗಿರುವ ಆಕಾರ ಜ್ಞಾನವಿಲ್ಲದಿರುವುದು ಹೇಗಾಗುತ್ತದೆ? ನನಗೆ ಈ ಆಕಾರವಿದೆ, ನನಗೆ ಈ ಜ್ಞಾನವಿದೆ. ಮೊದಲು ನಿಮಗೆ ಉಂಟಾದ ಅನುಭವಗಳ ಪ್ರಕಾರ ಈ ಎರಡಕ್ಕೂ ಹೊಂದಿಕೆಯಿಲ್ಲ, ಆದರೆ ಇಂದು ನನ್ನಲ್ಲಿ ಆ ಹೊಂದಿಕೆ ಕಾಣುತ್ತಿದೆ. ಯಾಕೆ ಒಪ್ಪಿಕೊಳ್ಳುವುದಿಲ್ಲ? ನಾನೇ ಪ್ರಾಣಿಯಾಗುವುದು ಎಂದರೇನು? ಸರ್ವಜಂತುಲೋಕವೂ ಪಶುಮಯವೇ!
ಪ್ರಾ: ನಾವು ಇಲ್ಲಿ ಅಧಿಕ ಬಲ ಇರುವವರು. ನೀವು ನಮ್ಮ ದೇಶಕ್ಕೆ ಬಂದ ಕಾರಣ ನಮ್ಮ ಇಷ್ಟದಂತೆ ನಡೆಯಲೇಬೇಕು.
ಹಾಹೂ: ನಾನು ಹೇಗೆ ಬಂದಿದ್ದೇನೆ? ಎಲ್ಲಿಂದ ಬಂದಿದ್ದೇನೆ? ಈ ವಿಷಯವನ್ನು ನೀವು ಹೇಳಬಲ್ಲಿರಾದರೆ ನಾನು ನಿಮಗೆ ಸ್ವಾಧೀನವಾಗುತ್ತೇನೆ.
ಇನ್ನು ವಾದೋಪವಾದಗಳು ಪ್ರಬಲವಾದವೆಂದೂ, ಯಾವ ಲಾಭವೂ ಇಲ್ಲವೆಂದು ಅವರಲ್ಲಿಯೇ ಅವರು ಸಂಜ್ಞೆಯನ್ನು ಮಾಡಿಕೊಂಡು ಹೊರಗಡೆ ಬಂದರು. ಬಾಗಿಲು ಚಿಲಕ ಹಾಕಿದರು. ಅವನ ಕೈಗಳಿಗೂ ಕಾಲುಗಳಿಗೂ ಗುಂಡು ಹಾರಿಸಿ ಎಂದು ಸೈನಿಕರಿಗೆ ಆಜ್ಞೆ ಮಾಡಿದರು. ಒಬ್ಬ ಸೈನಿಕ ಬಂದೂಕು ಸಿಡಿಸಿದನು. ಆ ಗುಂಡು ಹಾಹೂವಿನ ಎಡಗೈ ದಂಡದ ಮಾಂಸಖಂಡದಲ್ಲಿ ತೂರಿಹೋಯಿತು. ಅವನು ಹೊದೆದುಕೊಂಡ ಶಾಲಿನ ಮೇಲೆ ರಂಧ್ರವಾಯಿತು. ಹಾಹೂ ಹಾಗೆಯೇ ಕುಳಿತಿದ್ದ. ಅವನು ನೋವನ್ನು ಕೂಡ ಅನುಭವಿಸಲಿಲ್ಲ.
ಮತ್ತೆ ಇನ್ನೊಮ್ಮೆ ಗುಂಡು ಹೊಡೆದರು. ಅದು ಬಲಗೈ ಮೇಲೆ ತಗುಲಿತು. ಹೀಗೆ ಹತ್ತು ಬಾರಿ ಆಯಿತು. ಏಟು ಬಿದ್ದ ಸ್ಥಳದಲ್ಲೆಲ್ಲ ಶಾಲಿನ ಮೇಲೆ ತೂತುಗಳಾಗುತ್ತಿದ್ದವು. ಗುಂಡುಗಳು ಅವನ ಶರೀರದಲ್ಲಿ ತೂರಿಕೊಂಡು ಹಿಂದಕ್ಕೆ ಹೋಗುತ್ತಿದ್ದವು. ಅವನು ಸ್ವಲ್ಪವೂ ಕದಲಲಿಲ್ಲ. ಆದರೆ ಸ್ವಲ್ಪ ಬಾಧೆಪಡುತ್ತಿದ್ದಂತೆ ನಟಿಸಿದನು. ಸೈನಿಕರು ಗುಂಡು ಹೊಡೆಯವುದನ್ನು ನಿಲ್ಲಿಸಿದರು.
ಅವನು ತಕ್ಷಣ ಕದಲಿ ಪದ್ಮಾಸನವನ್ನು ಹಾಕಿಕೊಂಡು ಪ್ರಾಣಾಯಾಮವನ್ನು ಪ್ರಾರಂಭಿಸಿದನು. ಐದು ನಿಮಿಷಗಳ ಕಾಲ ನಿಲ್ಲಿಸಿ ಮತ್ತೆ ಗುಂಡುಗಳನ್ನು ಸಿಡಿಸಿದರು. ಈ ಬಾರಿ ಗುಂಡುಗಳು ಅವನ ಶರೀರಕ್ಕೆ ತಾಗುವುದೂ ಕೆಳಕ್ಕೆ ಬೀಳುವುದೂ ಸಾಗಿತು. ಕೆಳಕ್ಕೆ ಬಿದ್ದ ತೋಟಾಗಳು ಸಿಡಿದು ಸುತ್ತಲೂ ಹೊತ್ತಿಕೊಳ್ಳಲು ಪ್ರಾರಂಭವಾಯಿತು. ಆ ಬೆಂಕಿಯ ಮಧ್ಯದಲ್ಲೇ ಅವನು ಕುಳಿತಿದ್ದನು. ಹೀಗೆ ಇಪ್ಪತ್ತು ಬಾರಿ ಗುಂಡು ಸಿಡಿಸಿದ ಬಳಿಕ ಅವನಿಗೇನಾಯಿತೋ ನೋಡೋಣವೆಂದು ಮತ್ತೆ ಒಳಕ್ಕೆ ಹೋದರು. ಸುತ್ತಲೂ ಇರುವ ತೋಟಾಗಳ ಬೆಂಕಿಯನ್ನು ಆರಿಸಿದರು. ಅವನ ಕಡೆಗೆ ನೋಡಿದರು.
ಅವನ ಮೇಲಿರುವ ಶಾಲು ಸುಟ್ಟುಹೋಗಿತ್ತು. ಆದರೆ ಅವನ ಬೆನ್ನಿನ ಮೇಲಿಂದ ದೊಡ್ಡ ಹಕ್ಕಿಯ ಪುಕ್ಕಗಳು ತೂಗಾಡುತ್ತಿದ್ದವು. ಆ ಪುಕ್ಕಗಳು ಬಂಗಾರದ ಬಣ್ಣದವುಗಳಾಗಿದ್ದವು. ಅವನು ಕಣ್ಣುಗಳನ್ನು ತೆರೆದು ನೋಡಿದನು. ಕೋಪದಿಂದ ನೋಡಿದನು. ಒಳಗೆ ಬಂದಿದ್ದ ಮನುಷ್ಯರೆಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿಹೋದರು. ಅವನು ಮತ್ತೆ ಸ್ವಲ್ಪ ಹೊತ್ತು ಕಣ್ಣುಮುಚ್ಚಿಕೊಂಡು ಕುಳಿತುಕೊಂಡು ಮತ್ತೆ ಕಣ್ಣನ್ನು ತೆರೆದನು. ಭಯದಿಂದ ದೂರಕ್ಕೆ ಓಡಿ ಹೋದ ಜನರು ಮತ್ತೆ ಸ್ವಲ್ಪ ಹತ್ತಿರಕ್ಕೆ ಬಂದರು. ಇಷ್ಟರಲ್ಲಿ ಚಿಲಕವನ್ನು ಹಾಕದೇ ಓಡಿ ಹೋದ ಸೈನಿಕನೊಬ್ಬ ಮತ್ತೆ ಬಂದು ಚಿಲಕವನ್ನು ಹಾಕಿದ. ಹಾಹೂ ತನ್ನ ಬಟ್ಟೆಗಳು ಸುಟ್ಟುಹೋದ ಕಾರಣ ಮತ್ತೆ ನಾಲ್ಕು ಶಾಲುಗಳು ಬೇಕು ಎಂದನು. ಮೇಯರು ತರಿಸಿಕೊಡಲು ಹೊರಟಾಗ ವಿಜ್ಞಾನಿಗಳಿಬ್ಬರೂ ಬೇಡ ಎಂದರು. ಅವನು ನಮ್ಮ ಸಂಶೋಧನೆಗೆ ಒಪ್ಪಿಕೊಂಡರೆ ಶಾಲುಗಳನ್ನು ಕೊಡೋಣ ಎಂದರು. ಮೇಯರೂ ಪಂಡಿತರೂ “ಅದು ತಪ್ಪು. ಹಾಗೆ ಹೇಳಬಾರದು” ಎಂದು ಶಾಲುಗಳನ್ನು ತರಿಸಿಕೊಟ್ಟರು. ಒಬ್ಬ ಡಾಕ್ಟರು ಹೇಳಿದನು – “ಅವನೇ ಕೆಲವು ದಿನಗಳಲ್ಲಿ ಒಪ್ಪಿಕೊಳ್ಳಬಹುದು. ನಾವು ಕೆಲವು ದಿನಗಳ ಮಟ್ಟಿಗೆ ಸುಮ್ಮನಿರೋಣ” ಎಂದು.
ಇತ್ತ ಹೀಗಿರುವಾಗ, ಅತ್ತ ಸೈನಿಕರಲ್ಲಿ ದೊಡ್ಡ ಕೋಲಾಹಲವೇ ಹುಟ್ಟಿತ್ತು. “ನಾವು ಮೊದಲು ಗುಂಡು ಹೊಡೆದದ್ದು ಅವನಿಗೆ ತಾಗಿತ್ತು. ಅದಕ್ಕೆ ಅವನು ಬಹಳ ನೋವುಪಡಲಿಲ್ಲ. ಆಮೇಲೆ ಒಂದು ಇಪ್ಪತ್ತೈದು ಗುಂಡುಗಳು ತಾಗಿ ಕೆಳಕ್ಕೆ ಬಿದ್ದುಬಿಟ್ಟವು. ಇವತ್ತು ನಾವು ಅದೃಷ್ಟವಂತರಾಗಿದ್ದಕ್ಕೆ ಅವನು ನಮ್ಮನ್ನು ಸಾಯಿಸಲು ಬರಲಿಲ್ಲ. ಬಂದಿದ್ದರೆ ನಾವೆಲ್ಲರೂ ರೊಟ್ಟಿಗಳ ಹಾಗೆ ತುಂಡುತುಂಡಾಗುತ್ತಿದ್ದೆವು” ಎಂದುಕೊಂಡರು. ಅಂದಿನಿಂದ ಅವನ ಬಳಿ ಹೋಗಲು ಹೇಳಿದರೆ ಸೈನಿಕರಿಗೆ ಬಹಳ ಭಯವಾಗಲು ಪ್ರಾರಂಭವಾಯಿತು. ಅವರಲ್ಲಿ ಕೆಲವರಿದ್ದರು. “ಅವನು ನಮ್ಮನ್ನು ಏನೂ ಮಾಡುವುದಿಲ್ಲ. ಮಾಡುವುದಿದ್ದರೆ ಇಷ್ಟರಲ್ಲೇ ಮಾಡಿರುತ್ತಿದ್ದ. ಹಾಗಾಗಿ ಭಯವೇನೂ ಇಲ್ಲ, ಹೋಗೋಣ” ಎಂದರು. ಭಯವೋ, ಭಯವಿಲ್ಲವೋ, ರಾಜಸೇವಕರಾಗಿರುವ ಕಾರಣ ಹೋಗಿ ತೀರಲೇಬೇಕು. ಮತ್ತೆ ಹೋದರು. ಬಂದೂಕುಗಳಿಂದ ಲಾಭವೇನೂ ಇಲ್ಲವಲ್ಲ, ‘ಅವನ ಹತ್ತಿರ ಹೋಗುವುದಕ್ಕೆ ಮತ್ತೇಕೆ ಬಂದೂಕುಗಳು’ ಎಂದರು ಕೆಲವರು. ಲಾಭವಿಲ್ಲದಿದ್ದರೂ ಕೋವಿಗಳನ್ನು ಇಟ್ಟುಕೊಂಡೇ ಹೋದರು. ಮತ್ತೆ ಕಾವಲು ಕಾಯುತ್ತಿದ್ದರು.
ವಾರ-ಹದಿನೈದು ದಿನಗಳಲ್ಲಿ ಅವನಿಗೆ ಮಾಡಿದ ದ್ರೋಹದ ಕಾವು ತಣಿದಿತ್ತು. ಮತ್ತೆ ಪಂಡಿತರು ಬರುತ್ತಿದ್ದರು ಹೋಗುತ್ತಿದ್ದರು. ಒಂದು ದಿನ ವಿಜ್ಞಾನಿಗಳಿಬ್ಬರೂ ಅವನ ಬಳಿ ಹೋದರು. ಅವನು ಅವರ ಕಡೆ ನೋಡಿ ಗುರುತಿಸಿ ನಕ್ಕನು. ಅವರಿಬ್ಬರ ಪ್ರಾಣಗಳೂ ಮೇಲೆ ಮೇಲೆ ಹಾರುತ್ತಿದ್ದವು.
ಹಾಹೂ ಪಂಡಿತನನ್ನು ನೋಡಿ ಹೇಳಿದನು – “ಇಲ್ಲಿ ನೋಡಿ! ಈ ಇಬ್ಬರೂ ನನ್ನನ್ನು ನೋಡಿ ಪ್ರಾಣಿ ಎಂದುಕೊಂಡರು! ನಾನು ಒಬ್ಬ ಮನುಷ್ಯನಷ್ಟೇ ಅಲ್ಲ, ಪ್ರಾಣಿಯಷ್ಟೇ ಅಲ್ಲ, ಪಕ್ಷಿ ಕೂಡಾ ಹೌದು!” ಎಂದು ಎದ್ದು ನಿಂತು ಶಾಲುಗಳನ್ನು ತೆಗೆದುಹಾಕಿ ಇಲ್ಲಿಯವರೆಗೆ ಪುಕ್ಕಗಳಂತೆ ಇದ್ದ ತನ್ನ ಬೆನ್ನ ಭಾಗವನ್ನೆಲ್ಲ ಬಿಡಿಸಿ, ಎರಡು ದೊಡ್ಡ ರೆಕ್ಕೆಗಳನ್ನು ಪ್ರದರ್ಶಿಸಿದನು. ಅವುಗಳನ್ನು ಹಾಗೆ ಹೀಗೆ ಬೀಸಿದನು. ಹಾಗೆ ಬೀಸಿದಾಗ ಬೀಸಿದ ಗಾಳಿಗೆ ಸುತ್ತಮುತ್ತ ಇರುವ ಜನ ಪ್ರಳಯಮಾರುತಕ್ಕೆ ಸಿಕ್ಕು ಹಾರಿ ಬೀಳುವಂತೆ ಕೆಳಕ್ಕೆ ಬಿದ್ದರು. ಆ ರೆಕ್ಕೆಗಳು ತಾಗಿ ಎರಡೂ ಕಡೆಗಳಲ್ಲಿ ಇರುವ ಕಬ್ಬಿಣದ ಕಟಕಟೆಗಳು ಮುರಿದುಹೋದವು. ಆ ಸುತ್ತಲೂ ಇದ್ದ ಪ್ರದೇಶವನ್ನೆಲ್ಲ ಬಂಗಾರದ ಕಾಂತಿ ವ್ಯಾಪಿಸಿತು.
ಸುತ್ತಲೂ ಇದ್ದ ನೂರಿನ್ನೂರು ಜನರ ಕಣ್ಣುಗಳೂ ಕೋರೈಸಿದವು. ಪ್ರತಿಯೊಬ್ಬರೂ ಭಯದಿಂದ ಹಿಂದಕ್ಕೆ ಹಿಂದಕ್ಕೆ ಸರಿದರು. ಅವನು ಎರಡು ಮೂರು ಅಡಿಗಳಷ್ಟು ಹಾಗೆ ಹೀಗೆ ಬೀಸಿದನು. ಬೀಸಿದಾಗ ಕೆಳಗೆ ಕಲ್ಲು ಹಾಸಿದ ನೆಲ ಬಲಿಷ್ಠವಾದ ಕುದುರೆಯ ಗೊರಸಿನಿಂದ ಹೊಡೆದಂತೆ ಖಂಗ್ ಖಂಗ್ ಎಂದು ಮೊಳಗಿತು. ಅವನ ಶರೀರವೆಲ್ಲ ಬಂಗಾರದಂತೆ ಧಗಧಗ ಹೊಳೆಯುತ್ತಿತ್ತು. ಅವನು ಹಾರಿಹೋಗುತ್ತಾನೇನೋ ಎಂದೆನಿಸುತ್ತಿತ್ತು. ಅವನು ರೆಕ್ಕೆಯನ್ನು ಚಾಚಿ ನಿಂತುಕೊಂಡರೆ ಎಂಟು ಅಡಿ ಎತ್ತರದವನು ತಾಳೆಯ ಮರದಷ್ಟು ಎತ್ತರದವನಂತೆ ಕಾಣುತ್ತಿದ್ದನು. ಅವನ ರೆಕ್ಕೆಗಳನ್ನು ನೋಡಿದರೆ ಒಂದು ದೊಡ್ಡ ಪರ್ವತಕ್ಕೇ ರೆಕ್ಕೆಗಳು ಬಂದಂತಿತ್ತು.
ಜನರೆಲ್ಲ ಆ ದೃಶ್ಯವನ್ನು ನೋಡಲಾರದೆ, ಕೆಲವರು ಕಣ್ಣನ್ನು ಮುಚ್ಚಿಕೊಂಡರು, ಕೆಲವರು ನೆಲದ ಮೇಲೆ ಬೋರಲಾಗಿ ಮಲಗಿಕೊಂಡರು. ಕೆಲವರು ನಡುಗಿಹೋದರು. ಕೆಲವರು ಮೂರ್ಛೆಹೋದರು.
ಅಷ್ಟರಲ್ಲಿ ಅವನು ಮತ್ತೆ ತನ್ನ ರೆಕ್ಕೆಗಳನ್ನು ಮಡಿಸಿಕೊಂಡು ಶಾಲನ್ನು ಹೊದೆದುಕೊಂಡು ಕುಳಿತುಕೊಂಡನು. ಸುತ್ತಲೂ ಇರುವ ಜನರೆಲ್ಲ ಭಯಪಟ್ಟರೆಂದು ತಿಳಿದುಕೊಂಡು ಭಯವಿಲ್ಲವೆಂಬಂತೆ ಕೈಯಿಂದ ಸಂಜ್ಞೆಯನ್ನು ಮಾಡಿ ಎಲ್ಲರನ್ನೂ ಹತ್ತಿರಕ್ಕೆ ಬರಲು ಹೇಳಿದನು. ಮುರಿದುಹೋದ ಕಬ್ಬಿಣದ ಕಟಕಟೆಯನ್ನು ತೆಗೆದು ಹೊರಗಿಟ್ಟರು. ಈಗ ಅವನು ಒಂದು ಸ್ಥಳದಲ್ಲಿ ಕುಳಿತುಕೊಂಡನು. ಬಹಳಷ್ಟು ಜನ ಹತ್ತಿರಕ್ಕೆ ಬಂದರು. ಮತ್ತೆ ಪಂಡಿತರು ಸಂಭಾಷಣೆಯನ್ನು ಪ್ರಾರಂಭಿಸಿದರು.
ಅವನು ವಿಜ್ಞಾನಿಗಳ ಕಡೆ ನೋಡಿ ಹೀಗೆ ಹೇಳಿದನು – “ಭೂಮಿಯ ಮೇಲೆ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಅವುಗಳ ಲಕ್ಷಣಗಳು ಬೇರೆ ಬೇರೆಯಾಗಿ ಇರುತ್ತವೆ. ಈ ಭೂಮಿಯಲ್ಲಾಗಲಿ, ಇನ್ನೊಂದು ಕಡೆಯಲ್ಲಾಗಲಿ ಇವೆಲ್ಲವೂ ಸೇರಿಕೊಂಡು ಇರಬಹುದು. ನಾವು ಹೇಗೆ ಸಂಕಲ್ಪಿಸುತ್ತೇವೆಯೋ ಈ ಶರೀರ ಹಾಗೆಯೇ ಇರುತ್ತದೆ.”
ಈ ಮಾತು ಯಾರಿಗೂ ಅರ್ಥವಾಗಲಿಲ್ಲ. ಹೇಗೆ ಸಂಕಲ್ಪ ಮಾಡಿದರೆ ಹಾಗೆ ಇರುತ್ತದೆ ಎಂದರೆ ಏನು – ಎಂದು ಯೋಚಿಸಿದರು. ಅವರಲ್ಲಿ ಇಬ್ಬರು ಮೂವರು ಪಂಡಿತರು ಮ್ಯಾಕ್ಸ್ಮುಲ್ಲರ್ ಪುಸ್ತಕಗಳನ್ನು ಓದಿದ್ದವರು. ಅವರಿಗೆ ಈ ಮಾತುಗಳು ಸ್ವಲ್ಪ ಅರ್ಥವಾಯಿತು. ಅಷ್ಟರಲ್ಲಿ ಹೊತ್ತು ಮುಳುಗಿ, ಅವರವರ ಮನೆ ದಾರಿಯನ್ನು ಹಿಡಿದರು. ಕಟಕಟೆಗಳಿಲ್ಲದಂತಹ ಖಾಲಿಯಾದ ಸ್ಥಳದಲ್ಲಿ ಹಾಹೂ ಆ ರಾತ್ರಿಯನ್ನು ಕಳೆದನು.
(ಸಶೇಷ)