ನಾಗೇಶ್ಕುಮಾರ್ ಸಿ.ಎಸ್. ಕನ್ನಡ ಪತ್ತೇದಾರಿ ಬರಹಗಾರರ ಸಾಲಿನಲ್ಲಿ ಮೂಡಿಬರುತ್ತಿರುವ ಹೊಸ ಹೆಸರು. ಬೆಂಗಳೂರಿನವರಾದ ಇವರು ಈಗ ನೆಲೆಸಿರುವುದು ಚೆನ್ನೈ ನಗರದ ಅಡ್ಯಾರ್ನಲ್ಲಿ. ಸಿವಿಲ್ ಇಂಜಿನಿಯರ್ ಪದವೀಧರರಾದ ನಾಗೇಶ್ ಕುಮಾರ್ ವೃತ್ತಿಯಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಇಂಜಿನಿಯರಿಂಗ್ ಮ್ಯಾನೇಜರ್ ಆಗಿದ್ದಾರೆ.
‘ಕರಾಳಗರ್ಭ’ ನಾಗೇಶ್ಕುಮಾರ್ ರಚಿಸಿರುವ ಹೊಸ ಪತ್ತೇದಾರಿ ಕಾದಂಬರಿ. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗುವ ಕಥೆ ಓದುಗರ ಮೈನವಿರೇಳಿಸುವುದು ಖಂಡಿತ.
ಈ ಸಂಚಿಕೆಯಿಂದ ‘ಕರಾಳಗರ್ಭ’ ಕಾದಂಬರಿ ನಿಮ್ಮ ನೆಚ್ಚಿನ ‘ಉತ್ಥಾನ’ದಲ್ಲಿ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತದೆ.
-ಸಂಪಾದಕ
ನನ್ನ ಆಫೀಸಿನ ಟೇಬಲ್ ಮೇಲೆ ಕಾಲು ಚಾಚಿ ಕಣ್ಣುಮುಚ್ಚಿ ಮಲಗಿರುವಾಗ `ಮಿಂಚಾಗಿ ನೀನು ಬರಲು…….’ ಎಂಬ ಹಾಡಿನ ರಿಂಗ್ಟೋನ್ನೊಂದಿಗೆ ಎಬ್ಬಿಸಿತು ನನ್ನ ಮೊಬೈಲ್ಫೋನ್.
ಇದು ನನ್ನದೇ ಆಫೀಸ್, ನಾನೊಬ್ಬನೆ ಇದ್ದಿದ್ದು; ಹಾಗಾಗಿ ನನ್ನ ಪ್ರಪಂಚ ಶಾಂತವಾಗಿದೆ ಅಂದುಕೊಳ್ಳುತ್ತಿರುವಾಗಲೇ….
“ಹಲೋ, ವಿಜಯ್ ದೇಶಪಾಂಡೆಯವರು ತಾನೆ?” ಕಿವಿಗೆ ಬಡಿದಿತ್ತು ಆಕೆಯ ದನಿ.
ಮೊದಲೇ ನನಗೆ ಹಿಂದಿನರಾತ್ರಿಯ ಭಾರೀ ಪಾರ್ಟಿಯ ಹ್ಯಾಂಗೋವರ್ನಿಂದ ತಲೆ ಸಿಡಿಯುತ್ತಿತ್ತು.
“ನಾನಲ್ಲದಿದ್ದರೆ, ನನ್ನ ಧ್ವನಿಯ ಭೂತ ಇರಬೇಕು ಇಲ್ಲಿ….” ಎಂದೆ ಬೇಸರವಾದವನಂತೆ.
ಒಂದು ಕ್ಷಣ ಅಹಿತಕರ ಮೌನ.
“ನೀವು ಒರಟರೆಂದು ಕೇಳಿದ್ದೆ, ಆದರೂ ಮೊದಲ ಬಾರಿಯೇ ಹೀಗೆ?…..” ಮುನಿದ ಹೆಣ್ಣಿನ ದನಿ ಅನುಮಾನಿಸಿತು.
“ಇದು ನನ್ನ ಒಳ್ಳೆ ಮೂಡ್ನಲ್ಲಿ ಆಡಿದ ಮಾತು ಅಂದುಕೊಳ್ಳಿ….”
“ಸರಿ, ನಾನೇ ವಿಜಯ್, ಏನಾಗಬೇಕಿತ್ತು?”
ಆ ಟಿ.ವಿ ಚಾನೆಲ್ನ `ಸುಂದರ ಸಂಸಾರ’ ಸೀರಿಯಲ್ನಲ್ಲಿ ಪಾತ್ರ ಮಾಡುವ ಮೃದುಲಾ ಹೊಸಮನಿ ಗೊತ್ತು ತಾನೆ ನಿಮಗೆ?” ಎಂದಳು ಆಕೆ, ಎಲ್ಲರಿಗೂ ಗೊತ್ತಿರಲೇಬೇಕು ಎಂಬ ವಿಶ್ವಾಸದಿಂದ.
ನಾನು ಟೇಬಲ್ನಿಂದ ಕಾಲು ಕೆಳಗಿಡುತ್ತಾ ನಿಡುಸುಯ್ದೆ.
“ಇಲ್ಲಾ, ಆ ಗೋಳು ಸೀರಿಯಲ್ ಬಂದ ತಕ್ಷಣ ನಾನು ಮೈನ್ಸ್ವಿಚ್ ಆರಿಸುತ್ತೇನೆ…..” ಎಂದೆ.
ನನಗಿವತ್ತು ಯಾವ ಕ್ಲಯಂಟ್ ಕಾಟವೂ ಬೇಕಿರಲಿಲ್ಲ…..
“ಹುಂ….” ಎಂದು ಗುಟುರುಹಾಕಿದ ಆಕೆ “ನೋಡಿ, ನಾನವರ ಸೆಕ್ರೆಟರಿ ವಿನುತಾ. ನಿಮ್ಮನ್ನು ಭೇಟಿ ಮಾಡಲು ಇವತ್ತು ಸಂಜೆ ಅವರು ನಿಮ್ಮ ಆಫೀಸಿಗೆ ಬರುತ್ತಾರಂತೆ….” ಎಂದಳು, ನಿಮಗೆ ಆಫೀಸ್ ಕೂಡಾ ಇದೆಯೆ ಎನ್ನುವ ಅನುಮಾನದ ದನಿಯಲ್ಲಿ.
“ಆದರೆ ನನ್ನ ಆಫೀಸಿನಲ್ಲಿ ಅವರಿಗೆ ಶೂಟಿಂಗ್ ಮಾಡಲು ನಾನು ಬಿಡುವುದಿಲ್ಲವಲ್ಲಾ! ಯಾಕೆ ಬರುತ್ತಾರೆ?” ಎಂದೆ ತಪ್ಪಿಸಿಕೊಳ್ಳಲು ಕೊನೆಯ ಅಸ್ತ್ರವೆಂಬಂತೆ.
ಆಕೆ ರಂಪ ಮಾಡುವ ಮಕ್ಕಳಿಗೆ ಸಮಜಾಯಿಶಿ ಮಾಡುವ ದನಿಯಲ್ಲಿ, “ನೋಡಿ ಮಿ. ವಿಜಯ್, ನಿಮ್ಮ ಹೆಸರನ್ನು ಹೇಳಿ `ಇವರು ಈ ಊರಿನ ಬೆಸ್ಟ್ ಪತ್ತೇದಾರ, ಜಾಣ ಡಿಟೆಕ್ಟಿವ್’ ಎಂದಿದ್ದರು ಮಿ. ವಿಶಾಲ್ ಕಪೂರ್….. ಹಾಗಾಗಿ ನಾವು….” ಎಂದಳು ಇದಕ್ಕಿಂತ ತಾನು ಹೆಚ್ಚಾಗಿ ಹೇಳಲಾರೆ ಎಂಬಂತೆ. ನಾನು ಸೀಟ್ನಲ್ಲಿ ಅರ್ಧ ಎಗರಿಬಿದ್ದೆ.
ವಿಶಾಲ್ ಕಪೂರ್ ನನ್ನ ಹಳೆಯ ಕಕ್ಷಿದಾರ. ಅದಕ್ಕಿಂತ ಮುಖ್ಯವಾಗಿ ಟಿ.ವಿ. ಜಗತ್ತಿನ ಅನಭಿಶಿಕ್ತ ದೊರೆ. ನನ್ನ ದಿನಗಳು ಚೆನ್ನಾಗಿದ್ದಾಗ ನಾನು ಅವರ ಒಂದು ಬ್ಲಾಕ್ಮೇಲ್ ಕೇಸನ್ನು ಜಯಿಸಿಕೊಟ್ಟಿದ್ದೆ. ಅವರು ನೀಡಿದ್ದ ಸಂಭಾವನೆ ನನಗೆ ಆರು ತಿಂಗಳ ಖರ್ಚು ತೂಗಿತ್ತು…. ಅವರೇ ಹೇಳಿರಬೇಕಾದರೆ….. ತಲೆನೋವು ದೂರವಾದಂತೆ ಭಾಸವಾಯಿತು.
“ಅವರ ಕೇಸ್ ಆಗಿ ಬಹಳ ಸಮಯವಾಯ್ತು. ಈಗ ಏನಾಗಬೇಕು ನಿಮ್ಮ ಮೇಡಮ್ಗೆ?” ಎಂದೆ ಸ್ವಲ್ಪ ಎಚ್ಚರಿಕೆಯಿಂದ. ದೊಡ್ಡವರ ಸೆಕ್ರೆಟರಿಗಳಿಗೆ ಪ್ರತಿಷ್ಠೆ ಜಾಸ್ತಿ ಎಂದು ಅರಿತು!
“ಸಂಜೆ ಆರು ಗಂಟೆಗೆ ಬರುತ್ತಾರೆ ಅವರ ಲಾಯರ್ ಜತೆ, ಅವರನ್ನೇ ಕೇಳಿ. ನಿಮ್ಮ ವೈಯಾಲಿ ಕಾವಲ್ ಆಫೀಸ್ ಅಡ್ರೆಸನ್ನು `ಯೆಲ್ಲೋ ಪೇಜಸ್’ನಲ್ಲಿ ನೋಡಿದ್ದೇನೆ. ಮೊಬೈಲ್ ನಂಬರ್ ಕೂಡಾ ಅಲ್ಲೆ ಸಿಕ್ತು! ಥ್ಯಾಂಕ್ ಯೂ!” ಎಂದು ಮರುಮಾತನಾಡಲು ಬಿಡದೇ ಫೋನ್ಕಟ್ ಮಾಡಿದ್ದಳು.
ನಾನು ಮುಖ ಸೊಟ್ಟಗೆ ಮಾಡಿದೆ. ಎಲ್ಲರಿಗೂ ನನ್ನಂತೆ ಹಾಸ್ಯಪ್ರವೃತ್ತಿ ಇರಲ್ಲ ನೋಡಿ!
ನನ್ನ ಆಫೀಸಿನ ಹಳೇ ಮಾಸಿದ ಗೋಡೆಗಳು, ಹೋದ ವರ್ಷದ ಕ್ಯಾಲೆಂಡರ್ ನೋಡುತ್ತಾ `ಆದರೂ ನನ್ನ ಹತ್ತಿರ ಜನ ಬರುತ್ತಾರಲ್ಲಾ?’ ಎಂದುಕೊಂಡೆ ಹೆಮ್ಮೆಪಡುತ್ತಾ. ಸ್ವಲ್ಪ ಕಕ್ಷಿದಾರರಿಗಾಗಿಯಾದರೂ ಫ್ರೆಶ್ ಆಗೋಣವೆಂದು ಎದ್ದೆ.
ಬಾತ್ರೂಮಿನ ಕನ್ನಡಿಯಲ್ಲಿ ನನ್ನ ಪ್ರತಿಬಿಂಬವನ್ನು ನೋಡಿಕೊಂಡೆ. ಹೊಸದೇನಿದೆ? ಅದೇ ಮೂವತ್ತು ವರ್ಷ ವಯಸ್ಸಿನ ನೀಳ ಕೂದಲು, ಬಿಸಿಲಿನಲ್ಲಿ ಹದವಾದ ಗೋಧಿವರ್ಣದ ಮುಖ, ಬಲ ಹುಬ್ಬಿನ ಕೆಳಕ್ಕೆ ಚಾಕು ಹಾಕಿದ ಹಳೇ ಗಾಯದ ಗುರುತು….. ಐದಡಿ ಎಂಟು ಇಂಚು ಎತ್ತರದ ಯೋಗಾಭ್ಯಾಸ ಮಾಡುವ ತೆಳ್ಳಗಿನ ಮೈ, ಸ್ವಲ್ಪ ಮಾತ್ರ ಶರ್ಟ್ನಲ್ಲಿ ಎದ್ದು ಕಾಣುವ ಭುಜದ ಸ್ನಾಯುಗಳು. ಒಟ್ಟಿನಲ್ಲಿ ಹೆದರಿಕೆ ಬರುವಂತಹ ವ್ಯಕ್ತಿಯೇನಲ್ಲ. ಅದೃಷ್ಟವಿದ್ದರೆ ಯಾವುದಾದರೂ ಹೆಣ್ಣು ಅವಸರದಲ್ಲಿ ನನ್ನನು ಹ್ಯಾಂಡ್ಸಮ್ ಎಂದು ತಪ್ಪು ತಿಳಿದುಕೊಳ್ಳಲೂ ಸಾಧ್ಯ. ನನ್ನ ಅದೃಷ್ಟವಿದ್ದರೆ, ಅವಳದ್ದಲ್ಲ!
ಹೊರಗೆ ಬಂದು ಕೆಟಲ್ನಲ್ಲಿ ಯಾವಾಗಲೂ ಸಿದ್ಧವಿರುವ ಕಾಫಿ ಬಗ್ಗಿಸಿಕೊಂಡು ಕುಡಿದು ಕುಳಿತೆ.
ಸಮಯ ಆರಾಗುತ್ತಿತ್ತು ಆಗಲೇ… ‘ಇವರಿಗೇನು ಗೊತ್ತಿತ್ತು ನಾನು ಆಫೀಸಿನಲ್ಲಿ ಸಿಕ್ಕೇ ಸಿಗುತ್ತೇನೆಂದು?…. ನಾನೊಬ್ಬನೆ ಪತ್ತೇದಾರನಲ್ಲ ಈ ಊರಿನಲ್ಲಿ. ಇವರಿಗೆಲ್ಲ ನನ್ನ ಸ್ಥಿತಿ ಗೊತ್ತೋ ಏನೋ?’ ಎಂದೆಲ್ಲಾ ಯೋಚನೆಗಳು ಬಂದು ಹೋದವು.
ಈ ನಾಲ್ಕು ತಿಂಗಳಿಂದ ಎರಡು ಅನುಮಾನಕ್ಕೆ ಗಂಡ-ಹೆಂಡತಿ ಮೇಲೆ ನಿಗಾ ಇಡುವ ಕೇಸ್, ಎರಡು ಮುದುಕಿಯರ ಕಳೆದು ಹೋದ ಬೆಕ್ಕು ಹುಡುಕುವ ಕೇಸ್ಗಳು ಸಿಕ್ಕಿದ್ದವು ಅಷ್ಟೆ. ಆದರೂ ಹೊಸ ಕೆಲಸ ಹುಡುಕಿಕೊಂಡು ಹೋಗುವಂಥ ಚುರುಕ ನಾನಲ್ಲ. ಅಲ್ಪತೃಪ್ತ ನಾನು.
“ವಿಜಯ್ ವಿಕ್ರಮ್ ಇನ್ವೆಸ್ಟಿಗೇಶನ್ಸ್” ಎಂಬುದು ನಾನು ಮತ್ತು ವಿಕ್ರಮ್ ಇಬ್ಬರೂ ಇಂಡಿಯನ್ ಮಿಲಿಟರಿ ಪೊಲೀಸ್ ಪಡೆಯಲ್ಲಿ ಈ ಹಿಂದೆ ಮೂರು ವರ್ಷ ಡಿಟೆಕ್ಟಿವ್ಸ್ ಸೇವೆ ಮಾಡಿ ಹೊರಕ್ಕೆ ಬಂದು ನಮ್ಮ ಉಳಿತಾಯವನ್ನು ಇಟ್ಟು ಕಟ್ಟಿದ ಪತ್ತೇದಾರಿ ಸಂಸ್ಥೆ. ಏರುಪೇರುಗಳು ಹೆಚ್ಚಾಗಿ ಆರು ತಿಂಗಳಿನಿಂದ ಕುಂಟುತ್ತಿತ್ತು ಬಿಸಿನೆಸ್. ಬ್ರಹ್ಮಚಾರಿಗಳಾದ್ದರಿಂದ ಬಚಾವ್ ಆಗಿದ್ದೆವು ಅನ್ನಿ… ಹೇಗೋ ನಮ್ಮ ಪಾಲಿಗೆ ನಿಭಾಯಿಸಿಕೊಂಡು ಹೋಗಿದ್ದೆವು.
ನಿನ್ನೆ ತಾನೇ, ಸ್ವಲ್ಪ ಹಣ ಕೂಡಿಟ್ಟಿದ್ದ ವಿಕ್ರಮ್ ತಾನು ಗೋವಾಗೆ ಹೋಗಿಬರುತ್ತೇನೆಂದು ಹೇಳಿದ್ದ.
“ಎಂಥ ಕೆಲಸ ಬಂದರೂ ನೀನಿದ್ದಿಯಲ್ಲಾ…. ಒಬ್ನೇ ಮಾಡ್ಕೊ…. ನನಗೇನೂ ಕೊಡಬೇಡ” ಎಂದು ನನ್ನನ್ನು ಆಫೀಸಿನಿಂದ ಎಳೆದುಕೊಂಡು ಹೋಗಿ ರಾತ್ರಿ ಪಾರ್ಟಿ ಕೊಡಿಸಿದ್ದ, ಹೊರಟೂ ಹೋಗಿದ್ದ…..
ನನ್ನ ಸಿಗರೇಟ್ ಚಟ ಬಿಡಿಸಲು ಅದೇನೋ ಚೂಯಿಂಗ್ಗಮ್ ಕೊಟ್ಟಿದ್ದ ವಿಕ್ರಮ್, “ಇದನ್ನು ತಿಂದು ನೋಡು” ಎಂದಿದ್ದ ಆ ಸಿಗರೇಟ್ ಮುಟ್ಟದ ಭೂಪ. ಅದನ್ನು ಬಾಯಿಗೆ ಹಾಕಿಕೊಂಡೆ, ನೋಡುವಾ ಎಂದು.
ಹಾಗಾಗಿ ನನಗೆ ಈಗ ಕೆಲಸ ದುಡ್ಡು ಎರಡೂ ಬೇಕಿತ್ತು…. ಹೌದು ಹೌದು ಎಂದು ತಲೆಯಾಡಿಸುತ್ತಿದ್ದವು, ನನ್ನ ಟೇಬಲ್ ಮೇಲೆ ಇಟ್ಟಿದ್ದ ಚೆನ್ನಪಟ್ಟಣದ ಮೂರು ಕೋತಿ ಬೊಂಬೆಗಳು.
೨
ಮೃದುಲಾ ಹೊಸಮನಿ ಎಂಬ ಈ ನಟಿ ಚಿಕ್ಕತೆರೆ ಜಗತ್ತಿನ ದೊಡ್ಡ ತಾರೆ.
ಆಕೆಯ `ಸುಂದರ ಸಂಸಾರ’ ಎಂಬ ಧಾರಾವಾಹಿ ಈ ಮೂರು ವರ್ಷಗಳಲ್ಲಿ ಬಂದ ಅತ್ಯಂತ ಯಶಸ್ವೀ ಕಣ್ಣೀರಿನ ಕತೆಗಳಲ್ಲಿ ಒಂದು. ಹೆಂಗಸರನ್ನು ಅಳಿಸಿ ದುಡ್ಡುಮಾಡುವುದು ಒಂದು ಕಲೆಯೆಂದಾದರೆ ಈ ಧಾರಾವಾಹಿ ನಿರ್ಮಾಪಕರು ಅದರಲ್ಲಿ ಚಾಣಾಕ್ಷ ಡಕಾಯಿತರು ಎನ್ನಬಹುದು. ಅವರ ಯಶಸ್ಸಿನ ಕುರುಹಾದ ಟಿ.ಆರ್.ಪಿ. ಕ್ರಮಾಂಕಗಳು ಸದಾ ನಂ. ೧ ಎಂದೇ ಕೊಚ್ಚಿಕೊಳ್ಳುತ್ತಿದ್ದವು. ನನ್ನ ಪ್ರಕಾರ ಮಾತ್ರ, ಗಂಡನೇನಾದರೂ ಹೆಂಡತಿಯನ್ನು ಇಷ್ಟು ಅಳಿಸಿದ್ದರೆ ಬೇರೇನಾದರೂ ನಡೆದು ಹೋಗುತ್ತಿತ್ತು ಆ ಮನೆಗಳಲ್ಲಿ!
ತುಂಬು ಗುಂಗುರು ಕೂದಲಿನ ಕೇರಳ ಅಥವಾ ಕರಾವಳಿ ಭಾಗದ ಹೆಣ್ಣಿನಂತೆ ಕಾಣುವ ಈಕೆ ಉತ್ತರ ಕರ್ನಾಟಕದ `ಹೊಸಮನಿ’ ಹೇಗಾದಳು ಎಂಬುದು ಯಾರಿಗೂ ತಿಳಿಯದು.
ಅಂದು ಆಫೀಸಿಗೆ ಬಂದು ಪರಿಚಯವಾದ ನಂತರ ಆಕೆಯನ್ನು ಕೇಳಿದ ಮೊದಲ ಪ್ರಶ್ನೆಯೇ ಇದು.
“ಆದರೆ ಆ ವಿಷಯವನ್ನು ಹೇಳಲೇ ನಾನು ಬಂದಿದ್ದು” ಎಂದು ಮಾತು ತೆಗೆದರು ಮೃದುಲಾ, ಎದುರಿಗಿದ್ದ ನನ್ನ ಹಳೇ ಸೋಫಾ ಕುಶನ್ ಮೇಲೆ ಕುಳಿತು ಮುಗುಳ್ನಗುತ್ತಾ.
ಆದರೆ ಆಕೆಯ ಮಿನುಗುವ ಗ್ಲಾಮರ್ಗೆ ದೃಷ್ಟಿತೆಗೆಯುವಂತಿತ್ತು ನನ್ನ ಆಫೀಸಿನ ಕಳಪೆ ಒಳಭಾಗ.
ಸುಮಾರು ಐದಡಿ ಏಳಿಂಚು ಎತ್ತರ, ಬಿಳಿ ಮೈಕಾಂತಿ ಮತ್ತು ಆಕರ್ಷಕ ಮೈಕಟ್ಟಿನಲ್ಲಿ ಹಸಿರು ಸೀರೆಯಲ್ಲಿ ಮಂದಹಾಸ ಬೀರುತ್ತ ಕುಳಿತ ಆಕೆ ಅದನ್ನು ಗಮನಿಸಿದಂತೆ ಕಾಣಲಿಲ್ಲ.
ಆದರೆ ಪಕ್ಕದಲ್ಲಿ ಕುಳಿತಿದ್ದ ಆಕೆಯ ಶ್ರೀಮಂತ ಲಾಯರ್ ಫರ್ನಾಂಡೆಸ್ ನನ್ನನ್ನೂ, ನನ್ನ ಆಫೀಸನ್ನೂ ಹೇಗೋ ಸಹಿಸಿಕೊಂಡವರಂತೆ ಮುದುಡಿ ಕುಳಿತಿದ್ದರು.
“ನನಗೆ ಈಗ ಮೂವತ್ತೈದು ವರ್ಷ ಆಯ್ತು, ಮಿ. ವಿಜಯ್… ನಿಮಗೆ ತಿಳಿದಂತೆ ನಾನೀಗ ಸ್ಟಾರ್. ನನ್ನ ಸೀರಿಯಲ್ ತುಂಬ ಜನಪ್ರಿಯವಾಗಿದೆ. ನನಗೆ ಹೆಸರು, ದುಡ್ಡು, ಬಿಡುವಿಲ್ಲದಷ್ಟು ಕಾಲ್ಶೀಟ್ ಎಲ್ಲ ತಂದು ಕೊಟ್ಟಿದೆ” ಎಂದರು.
“ಹೌದು….. ನಾನೂ ನಿಮ್ಮ ಪ್ರೊಗ್ರಾಮ್ ನೋಡುತ್ತಲೇ ಇರುತ್ತೇನೆ. ರಾತ್ರಿ ಎಂಟೂವರೆಗೆ ಶುರುವಾಗುತ್ತಲ್ಲಾ, ಊಟದ ಹೊತ್ತಿಗೆ…. ಸೋ…..” ಎಂದು ಉಡಾಫೆ ಬಿಟ್ಟೆ.
ಸಧ್ಯ ಆ ಸೆಕ್ರೆಟರಿ ಎದುರಿಗಿಲ್ಲವಲ್ಲ ಎಂದು.
“ಎಂಟೂವರೆ ಅಲ್ಲಾ, ಒಂಬತ್ತೂವರೆಗೆ!” ಎಂದು ನಕ್ಕ ಆಕೆ, ನನ್ನ ಮುಖ ಕೆಂಪಾದದ್ದು ನೋಡಿ “ಹೋಗಲಿಬಿಡಿ, ನೀವು ಅದನ್ನು ನೋಡದಿರುವುದು ಒಳ್ಳೆಯದೇ ಆಯ್ತು, ನಿಷ್ಪಕ್ಷಪಾತವಾಗಿರಬಹುದು, ನಿಮ್ಮ ಅನ್ವೇಷಣೆಯಲ್ಲಿ….” ಎಂದು ಮುಂದುವರಿಸಿದರು.
“ನನ್ನ ನೆನಪಿಗೆ ತಿಳಿದಂತೆ ನಾನು ಚಿಕ್ಕವಳಿದ್ದಾಗಲೇ ನನ್ನನ್ನು ಬೆಳೆಸಿದವರು ದತ್ತು ಪಡೆದು ಸಾಕಿದರು. ಆ ವಿಷಯವನ್ನೆಂದೂ ಅವರು ನನ್ನಿಂದ ಬಚ್ಚಿಡಲಿಲ್ಲ. ಆದರೆ ಬಿಚ್ಚಿಡಲೂ ಇಲ್ಲ” ಎಂದು ನಿಟ್ಟುಸಿರಿಟ್ಟರು.
“ಅಂದರೆ ಹೊಸಮನಿ ನಿಮ್ಮ ಸ್ವಂತ ತಂದೆ-ತಾಯಿಗಳಲ್ಲವೇನೂ!” ಎಂದೆ. ಬಹಳ ಜಾಣ ಡಿಟೆಕ್ಟಿವ್ ಅಲ್ಲವೆ ನಾನು?
“ಅದೇ ತಾನೆ ಆಕೆ ಹೇಳ್ತಿರೋದು” ಎಂದು ಬೇಸರದ ದನಿಯಲ್ಲಿ ಟೀಕಿಸಿದರು, ಫರ್ನಾಂಡೆಸ್. ನಾನವರನ್ನು ಗಮನಿಸಲಿಲ್ಲ.
ಮೃದುಲಾ “ಫರ್ನಾಂಡೆಸ್, ನಾನು ಹೇಳುತ್ತೇನೆ, ಬಿಡಿ….” ಎಂದು ತಡೆದು, ಮುಂದೆ ಹೇಳಿದ್ದು ಇಷ್ಟು:
“ನಾನು ಹುಟ್ಟಿದ್ದು ತಮಿಳುನಾಡು-ಕೇರಳ ಭಾಗದ ಗಡಿಯ ಒಂದು ಊರಿನಲ್ಲಂತೆ. ನಾನಾಗ ಮೂರು ತಿಂಗಳ ಹೆಣ್ಣು ಮಗು…. ಇಲ್ಲಿ ಶ್ರೀಮತಿ ಹೊಸಮನಿಗೆ ಗಂಡುಮಗುವಾಗಿ ಸತ್ತುಹೋಗಿ ಮತ್ತೆ ತಾಯಿಯಾಗುವ ಸ್ಥಿತಿ ಇರಲಿಲ್ಲವಂತೆ. ಅವರ ಮನಃಸ್ಥಿತಿ ಸುಧಾರಣೆಗೆ ಅಂತ ಕೇರಳದ ಆಯುರ್ವೇದಿಕ್ ಚಿಕಿತ್ಸೆಗೆ ಹೋಗಿ ಹಿಂತಿರುಗುವಾಗ, ನಮ್ಮೂರಿನಲ್ಲಿ ಉಳಿದುಕೊಂಡರಂತೆ. ಅಲ್ಲೆ ನನ್ನ ಹೆತ್ತ ತಂದೆ-ತಾಯಿಯರ ಭೇಟಿಯಾಯಿತಂತೆ. ಪುಟ್ಟಕಂದನಾದ ನನ್ನನ್ನು ಕಂಡು ದತ್ತು ಪಡೆದರಂತೆ. ಅದರ ಪ್ರಕಾರ ದತ್ತು ಪಡೆದುದಕ್ಕೆ ಕಾನೂನಿನ ಪತ್ರಗಳೂ ಇದ್ದವಂತೆ. ನನ್ನ ಸಾಕು ತಂದೆ ತಾಯಿಯವರಿದ್ದ ಮನೆ ಇತ್ತೀಚೆಗೆ ಆದ ಭೂಕಂಪದಲ್ಲಿ ಬಿದ್ದುಹೋದಾಗ, ಅಪ್ಪ-ಅಮ್ಮ ಇಬ್ಬರೂ ಹೋಗಿಬಿಟ್ಟರು. ಜೊತೆಗೆ ನನ್ನ ದತ್ತು ಪಡೆದ ಎಲ್ಲಾ ಒರಿಜಿನಲ್ ಪತ್ರಗಳು ಹಾಳಾಗಿಹೋದವು” ಎಂದು ಸರ್ಕಾರಿ ವಕೀಲರು ಮನೆಯ ರೆಕಾರ್ಡ್ಸ್ ನೋಡಿ ವಕೀಲ ಫರ್ನಾಂಡೆಸ್ಗೆ ತಿಳಿಸಿದ್ದಾರೆ. ಹೀಗೆ ಅತ್ತ ಹೆತ್ತ ಅಪ್ಪ-ಅಮ್ಮನನ್ನೂ ತಿಳಿಯದೇ ಸಾಕು ಅಪ್ಪ-ಅಮ್ಮನನ್ನೂ ಕಳೆದುಕೊಂಡು ನನ್ನ ಪೂರ್ವದ ಒಂದು ಸುಳಿವೂ ಇಲ್ಲದಂತಾಯಿತು” ಎಂದವರ ಮುಖದಲ್ಲಿ ನೋವಿನ ಎಳೆಯಿತ್ತು.
“ಪರವಾಗಿಲ್ಲ ಬಿಡಿ. ಕೆಲವರಿಗೆ ಒಂದು ಜತೆ ತಂದೆ-ತಾಯಿಯೂ ಇರುವುದಿಲ್ಲಾ, ನಿಮಗೋ ಎರಡು ಜೊತೆ ಅಪ್ಪ-ಅಮ್ಮ ಇದ್ದರೆಂದು ತಿಳಿಯಿತಲ್ಲಾ. ಈಗ ನಿಮ್ಮ ತೊಂದರೆಯೇನು?” ಎಂದು ಸಂತೈಸ ಹೊರಟೆ.
ಮೃದುಲಾ ಜೋರಾಗಿ ತಲೆಯಾಡಿಸುತ್ತಾ, ನನಗೆ ಇನ್ನೂ ಅರ್ಥವಾಗಿಲ್ಲವೆಂಬಂತೆ, “ತೊಂದರೆಯಿದೆ, ನಿಜವಾಗಿಯೂ ತೊಂದರೆಯಾಗುತ್ತಿದೆ. ಅದೂ ಎರಡು ತರಹ. ಒಂದು ಈಗ ನನ್ನ ಟಿ.ವಿ ಧಾರಾವಾಹಿಯ ಪಾತ್ರದಲ್ಲಿ ನಾನು ಬಂಜೆ. ದತ್ತುಮಗುವನ್ನು ಪಡೆಯುವ ವಿಷಯ ಪ್ರಸ್ತಾಪವಾಗುತ್ತದೆ. ಅದು ನನಗೆ ಮನದಲ್ಲಿ ಕೊರೆಯಹತ್ತಿದೆ. ನನ್ನ ಜನ್ಮದ ಸತ್ಯವನ್ನೇ ತಿಳಿಯದ ನಾನು ಇಂತಹ ಸನ್ನಿವೇಶದಲ್ಲಿ ಸಹಜವಾಗಿ ಅಭಿನಯ ಮಾಡುವುದಾದರೂ ಹೇಗೆ? ಮೊದಮೊದಲು ನನ್ನ ನಿರ್ದೇಶಕರು ಒಪ್ಪಲಿಲ್ಲ. “ಮಾಡು ಪರವಾಗಿಲ್ಲ” ಅನ್ನುತ್ತಿದ್ದರು; “ಮೂವತ್ತೈದು ವರ್ಷಗಳ ಹಿಂದಿನ ನಿನ್ನ ಪುರಾಣ ಈಗೇಕೆ ನನಗೆ ಬೇಕು, ಏನು ಪ್ರಯೋಜನ” ಎಂದು. ನಾನು ಒಪ್ಪಲಿಲ್ಲ. ಇದರ ನಿರ್ಮಾಪಕ ವಿಶಾಲ್ ಕಪೂರ್ ಒಳ್ಳೆಯವರು. ಅವರು “ಹೌದು. ನೋಡೋಣಾ, ಮಾಡೋಣಾ” ಅನ್ನುತ್ತಿದ್ದರು. ಅದು ಎರಡು ತಿಂಗಳ ಹಿಂದೆ. ಆದರೆ ಅಷ್ಟರಲ್ಲಿ ಎರಡನೆ ಬೆಳವಣಿಗೆ ನನ್ನನ್ನು ಕಂಗಾಲಾಗಿಸಿತು ಎಂದು ನಿಲ್ಲಿಸಿ ಆಕೆ ತಣ್ಣಗಾದ ಕಾಫಿಯನ್ನೆ ಗುಟುಕರಿಸಿದರು.
“ಕಂಗಾಲಾಗುವುದು ಏನು? ಯಾರಾದರೂ ಬ್ಲ್ಯಾಕ್ಮೇಲ್ ಮಾಡಿದರೆ?” ಎಂದೆ ನಾನೂ ಯೋಚಿಸುತ್ತಾ, ಇನ್ನೊಂದು ಚೂಯಿಂಗಮ್ ಬಾಯಿಗೆ ಹಾಕಿಕೊಳ್ಳುತ್ತಾ.
ನನ್ನ ಮಾತಿಗೆ ಆಕೆಯ ಕಂಗಳು ಅಗಲವಾಗಿ ಮಿನುಗಿತು. ಆ ರೂಮನ್ನೇ ತುಂಬಿತು ಅದರ ಹೊಳಪು.
“ಹೌದು! ಕರೆಕ್ಟಾಗಿ ಊಹಿಸಿದಿರಿ! ಇವತ್ತಿಗೆ ಎರಡು ತಿಂಗಳ ಹಿಂದೆ ಮೊದಲ ಪತ್ರ ಪೋಸ್ಟ್ನಲ್ಲಿ ಮನೆಗೆ ಬಂತು. ಹಿಂದೆ ಅಡ್ರೆಸ್ ಹೆಸರು ಇರಲಿಲ್ಲ. ಕೈಬರಹದಲ್ಲಿ ಒಂದೇ ಶೀಟ್ ಬರೆದಿದ್ದರು.
“ಕರ್ಪೂರಿ ನದಿ = ಕಪ್ಪುನದಿ ನಿನ್ನ ಪಾಲಿಗೆ.”
“ಅಷ್ಟೇನೆ?” ಎಂದು ನಾನು ಆಕೆ ಸುಳ್ಳು ಹೇಳಿಯಾರು ಎಂದು ಗಮನಿಸುವಂತೆ ದಿಟ್ಟಿಸಿ ನೋಡುತ್ತಿದ್ದೆ.
“ಹೌದು. ಹಿಂಭಾಗದಲ್ಲಿ `ಮುಂದಿದೆ ಮುದುಕಿ….. ಹಬ್ಬ’ ಅಂತಲೂ ಬರೆದಿದ್ದರು.
“ಈ ಕರ್ಪೂರಿ ನದಿ ಇರುವುದು ತಮಿಳುನಾಡು-ಕೇರಳ ಗಡಿ ಭಾಗದಲ್ಲಿ ಅಲ್ಲವೆ?” ಎಂದು ಪ್ರಶ್ನಿಸಿದೆ.
ಮೃದುಲಾ ಹ್ಹೂಂಗುಟ್ಟುತ್ತಾ, “ಅಲ್ಲೇ…. ಅಲ್ಲೇ…. ನಾನು ಹುಟ್ಟಿದ್ದಂತೆ. ಅಮ್ಮ, ಅಂದರೆ ನನ್ನ ಸಾಕಮ್ಮ ಹೇಳಿದ್ರು. ಮೂವತ್ತೈದು ವರ್ಷದ ನಂತರ ಈಗೇನು ರಹಸ್ಯ ಇರಲು ಸಾಧ್ಯ ನನ್ನ ಬಗ್ಗೆ? `ಮುದುಕಿ….. ಹಬ್ಬ’ ಅಂದರೆ ತಕ್ಕ ಶಾಸ್ತಿ ಮಾಡುತ್ತೇನೆ ಮುಂದೆ ಎಂದಲ್ಲವೆ?” ಎಂದು ಪೇಪರ್, ಕಾಫಿ ಕಪ್ನ್ನು ಕೈಯಲ್ಲಿ ಕಿವುಚತೊಡಗಿದ್ದರು ಆ ಚಿಂತೆಯಲ್ಲಿ ಬೆದರಿದವರಂತೆ.
“ಹೆದರಬೇಡಿ. ಅದರ ಅರ್ಥ ಹಾಗೇ ಬರುತ್ತದೆ. ಆದರೆ ಒಮ್ಮೆ ಬೆದರಿಸಿದವರ ಹುಡುಗಾಟವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವಂತಿಲ್ಲ” ಎಂದು ಆಕೆಯ ಕೈ ತಟ್ಟಿದೆ, ರೇಶಿಮೆಯಂತಿತ್ತು.
“ಆದರೆ ಇನ್ನೊಂದು ಪತ್ರ ಮೊನ್ನೆ ಮತ್ತೆ ಬಂತು. ಅದರಲ್ಲಿ `ಕಪ್ಪುನದಿಯ ತಪ್ಪಲ್ಲ…. ನಿನ್ನ ರಹಸ್ಯ ಉಳಿಯಲ್ಲ’ ಅಂತಾ ಅದೇ ಕೈಬರಹದಲ್ಲಿ ಬರೆದಿದ್ದಾನೆ. ಹಿಂಭಾಗದಲ್ಲಿ `ಸಮಯ ಹತ್ತಿರ ಬಂತು. ನನ್ನ ಬೆಲೆ ಹೇಳುತ್ತೇನೆ’ ಅಂತಾ ಬೇರೆ ಬರೆದಿದ್ದಾನೆ….” ಎಂದು ನುಡಿದು ಸ್ವಲ್ಪ ಸುಮ್ಮನಾದಳು.
ನಾನು ಎದ್ದು ಅವರಿಗೆ ಮತ್ತೆ ಇನ್ನೆರಡು ಕಪ್ ಕಾಫಿ ಬಸಿದು ಕೊಟ್ಟೆ. ನನ್ನ ಯೋಚನಾ ಲಹರಿ ಜೋರಾಗಿತ್ತು.
ಫರ್ನಾಂಡೆಸ್ ಇದ್ದವರು, ನನ್ನ ಮುಖ ಗಮನಿಸುತ್ತಾ, ತಮ್ಮ ಗೋಲ್ಡ್ರಿಮ್ ಕನ್ನಡಕವನ್ನು ಮೇಲೇರಿಸಿಕೊಳ್ಳುತ್ತಾ, “ನಾನೂ ಅದನ್ನು ಕೈಬರಹ ತಜ್ಞರಿಗೂ, ಬೆರಳಚ್ಚಿನವರಿಗೂ ತೋರಿಸಿದೆ. ಸಾಮಾನ್ಯ ಪೇಪರ್, ಸಾಮಾನ್ಯ ಬ್ಲ್ಯಾಕ್ ರೇನಾಲ್ಡ್ಸ್ ಪೆನ್, ಯಾವ ಬೆರಳಚ್ಚೂ ಇಲ್ಲಾ ಅಂದುಬಿಟ್ರು….. ಗ್ಲೋವ್ಸ್ ಹಾಕೊಂಡಿದ್ದರೇನೋ!” ಎಂದರು ತಾವೇನೂ ಕಮ್ಮಿಯಿಲ್ಲಾ ಎಂಬಂತೆ.
“ಅವನು ಮುಂದಕ್ಕೆ ನಿಮ್ಮನ್ನು ಬ್ಲ್ಯಾಕ್ಮೆಲ್ ಮಾಡಲೆಂದು ಸಜ್ಜಾಗುತ್ತಿದ್ದಾನೆ, ಅಸ್ಥಿಭಾರ ಹಾಕುತ್ತಿದ್ದಾನೆ… ಅದಕ್ಕೇ ಈ ಪತ್ರಗಳು…” ಎಂದೆ ಅವರನ್ನೇ ಗಮನಿಸುತ್ತಾ, ಏನಾದರೂ ಬಚ್ಚಿಡುತ್ತಿದ್ದಾರೋ ಎಂಬಂತೆ.
“ಹಾಗಾದರೆ ಅವನಿಗೆ ನಿಜವಾಗಲೂ ಏನಾದರೂ ಗೊತ್ತು ಅನ್ನುತ್ತೀರಾ?” ಎಂದರು ಮೃದುಲಾ ಕಾತರದಿಂದ.
ನಾನು ಕೈಚೆಲ್ಲಿ ಭುಜ ಕುಣಿಸಿದೆ. “ಗೊತ್ತಿರಬಹುದು. ಆದರೆ ಅದಕ್ಕೆ ನಿಮ್ಮ ಹತ್ತಿರ ಎಷ್ಟು ಬೆಲೆ ಇದೆ ಅಂತಾ ನನಗೇನು ಗೊತ್ತು?” ಎಂದೆ.
ಮೃದುಲಾ ಸೀಟಿನಲ್ಲಿ ನನ್ನತ್ತ ಮುಂದೆ ಜರುಗುತ್ತಾ, “ನೋಡಿ, ನೋಡಿ, ನಮ್ಮ ನಿಜವಾದ ಅಪ್ಪ-ಅಮ್ಮನ ಬಗ್ಗೆ ಏನೋ ವಿಷಯ ಅಡಗಿದೆ. ಈಗ ನನಗೆ ಅದು ತಿಳಿಯಲೇಬೇಕು. ನೀವು ನನಗೆ ಪತ್ತೆಮಾಡಿ ಕೊಡಲೇಬೇಕು” ಎಂದು ಕಣ್ಣಲ್ಲಿ ನೀರು ತಂದುಕೊಂಡರು. ಎಷ್ಟು ಚೆನ್ನಾಗಿ ಅಳುವಂತೆ ಮುಖ ಮಾಡುತ್ತಾಳೆ. ಅಷ್ಟಿಲ್ಲದೇ ಸಹಸ್ರಾರು ವೀಕ್ಷಕರನ್ನು ದಿನಾ ರಾತ್ರಿ ಕೊಡ ಕೊಡ ಅಳಿಸಬಲ್ಲಳಲ್ಲವೆ?
ನನಗೆ ಸಾಕಾಗಿತ್ತು. ನಿರ್ದಾಕ್ಷಿಣ್ಯವಾಗಿ ನುಡಿದೆ: “ಈಗ ಇದು ಟಿವಿ ಸೀರಿಯಲ್ ಅಲ್ಲ. ನಾನು ಅಳುವುದೂ ಇಲ್ಲಾ…. ಏನೂ ವಿಷಯ ಹೇಳದೇ ನನಗೆ ಮೂವತ್ತೈದು ವರ್ಷದ ಹಿಂದಿನ ಯಾವುದೋ ಊರಿನ ಜನ್ಮ ರಹಸ್ಯ ಭೇದಿಸು ಎಂದರೆ ನಾನು ಅಂತಹ ಮೂರ್ಖನೂ ಅಲ್ಲ, ಅಷ್ಟು ಸಮಯ ವೇಸ್ಟ್ ಮಾಡಲು ಮನಸ್ಸೂ ಇಲ್ಲಾ. ಕಮ್ ಕ್ಲೀನ್… ನಿಮಗೇನೇನು ಗೊತ್ತು ಆ ಬಗ್ಗೆ ಹೇಳಿ…. ನಾನು ಅನಂತರ ನನ್ನ ತೀರ್ಮಾನ ಹೇಳುತ್ತೇನೆ.”
ಮುಂದಿನ ಒಂದು ಗಂಟೆ ಕಾಲ ವಿಷದವಾಗಿ ಅವರಿಬ್ಬರೂ ಬಾರಿಬಾರಿಯಾಗಿ ನನಗೆ ತಮ್ಮ ಕಥೆಯನ್ನು ಹೇಳಿದರು.
ಆ ಊರಿನ ಹೆಸರು, ಲೊಕೇಶನ್ ತಿಳಿಸಿ ತಮ್ಮ ಬಳಿಯಿದ್ದ ಕೆಲವು ಕಾಗದ ಪತ್ರಗಳ ಕಾಪಿ ನೀಡಿದರು. ಆ ಊರಿನ ಹೆಸರು ಮಾಂಡಿಚೆರ್ರಿಯಂತೆ. ಅವರ ಲೋಕಲ್ ವಕೀಲೆಯಾದ ಲೂಸಿಯಾ ಜತೆ ನಾನು ಸಂಪರ್ಕದಲ್ಲಿರಬಹುದೆಂದೂ, ಆಕೆಯ ಆಫೀಸ್ ಫೋನ್, ಕಂಪ್ಯೂಟರ್, ಇಂಟರ್ನೆಟ್ ಎಲ್ಲ ಸೌಕರ್ಯವನ್ನೂ ಉಪಯೋಗಿಸಬಹುದೆಂದೂ ಹೇಳಿದರು.
“ಆದರೆ ಅಲ್ಲಿ ನಾನೇನು ಕಂಡುಹಿಡಿಯಬಹುದು. ಆ ಜನ್ಮರಹಸ್ಯ ಮುಖ್ಯವೆ ಅಥವಾ ಆ ಬ್ಲ್ಯಾಕ್ಮೇಲ್ ಮಾಡುವವನನ್ನು ಹಿಡಿದು ಲೂಸಿಯಾ ಮೂಲಕ ಕಾನೂನಿಗೆ ಒಪ್ಪಿಸಿದರೆ ಸಾಕೆ? ನಿಮಗೆ ಇದೆಲ್ಲದರ ಪ್ರಯೋಜನವೇನು?” ಎಂದು ನಾನು ವಿವರಣೆ ಕೇಳಿದಾಗ, ಫರ್ನಾಂಡೆಸ್ ಅದುವರೆಗೂ ಯಾವುದೋ ಕಾಲ್ನಲ್ಲಿದ್ದವರು ತಮ್ಮ ಐ-ಫೋನ್ ನನ್ನೆಡೆಗೆ ತಿರುಗಿಸಿ ಕೊಟ್ಟು, “ತಗೊಳ್ಳೀ, ಇದಕ್ಕೆಲ್ಲ ನಿಮ್ಮ ಸ್ನೇಹಿತ ವಿಶಾಲ್ ಕಪೂರ್ ಲೈನ್ನಲ್ಲಿದ್ದಾರೆ. ಮಾತಾಡಿ ಬಿಡಿ” ಎಂದರು.
ನಾನು ಅಚ್ಚರಿಯಿಂದ, “ವಿಶಾಲ್ ನನಗೆ ಸ್ನೇಹಿತರೇನಲ್ಲ, ಕೇವಲ ಮಾಜಿ ಕಕ್ಷಿದಾರ. ಸ್ನೇಹಿತನೇ ಆದರೂ ಚೆನ್ನಾಗಿರುತ್ತಿತ್ತು” ಎಂದು ಹುಳ್ಳಗೆ ನಕ್ಕೆ.
ಅತ್ತ ವಿಶಾಲ್ ತಮ್ಮ ಶ್ರೀಮಂತ ಗೊಗ್ಗರು ದನಿಯಲ್ಲಿ, “ಹಾಯ್, ವಿಜಯ್! ನೋಡು ನಿನಗೆ ನನ್ನ ಬಿಸಿನೆಸ್ ಇಂಪಾರ್ಟೆನ್ಸ್ ಹೆಚ್ಚು ಹೇಳಬೇಕಿಲ್ಲಾ. ಕೋಟ್ಯಂತರ ರೂ.ಗಳ ಹಣ ಬರುತ್ತದೆ ಹೋಗುತ್ತದೆ, ಈ ಸೀರಿಯಲ್ಗಳಿಂದ. ನನಗೆ ಈಕೆ ಇದ್ದಾಳಲ್ಲಾ, ಮೃದುಲಾ? ಅತಿ ಮುಖ್ಯ ವ್ಯಕ್ತಿ. ಅವಳು ಹೇಳಿದ್ದು ನಡೆಯಲೇಬೇಕು. ಅದಕ್ಕಾಗಿ ನಾನು ನಷ್ಟ ಮಾಡಿಕೊಳ್ಳಲು ಸಿದ್ಧನಿಲ್ಲಾ. ಅವಳು ಈಗ ಇರುವ ಸೀರಿಯಲ್ ಅತ್ಯಂತ ಮುಖ್ಯಘಟ್ಟಕ್ಕೆ ಬಂದಿದೆ. ಆಕೆ ಸರಿಯಾಗಿ ಅಭಿನಯಿಸದಿದ್ದರೆ, ನನಗೆ ಬಹಳ ಲಾಸ್ ಆಗುತ್ತದೆ. ಆಕೆ ಹೇಳಿದ ಕೇಸ್ ನೀನು ದಯವಿಟ್ಟು ತಗೊ! ನಿನಗೆ ನಾನು ನಿನ್ನ ಸಾಮಾನ್ಯ ರೇಟ್ಗಿಂತಾ ಡಬಲ್ ಅಥವಾ ಟ್ರಿಪಲ್ ಕೊಡುತ್ತೇನೆ. ನೀನೇ ಹೇಳು ಎಷ್ಟು ಅಂತಾ…. ಆದರೆ `ಇಲ್ಲ’ ಅಂದರೆ ಮಾತ್ರ ನಾನು ಸುಮ್ಮನಿರುವುದಿಲ್ಲ. ನಾನು ಮಿತ್ರರಿಗೆ ಮಿತ್ರ” ಎಂದೆಲ್ಲಾ ಕೊಚ್ಚಿಕೊಳ್ಳುತ್ತಲೆ ಇದ್ದರು. ದೊಡ್ಡ ವ್ಯಕ್ತಿಗಳಿಗೆ ತಮ್ಮ ದ್ವನಿಯನ್ನೆ ಕೇಳಿಸಿಕೊಳ್ಳುವ ಅಭ್ಯಾಸವಾಗಿರುತ್ತದೇನೋ?
ನಾನು ಮಧ್ಯೆ ಬಾಯಿಹಾಕಿ, “ವಿಶಾಲ್, ವೈ ಮಿ? (ನಾನೇ ಏಕೆ?) ನಿಮ್ಮಂತ ದೊಡ್ಡ ಮನುಷ್ಯರಿಗೆ ಇಂಥ ಕೇಸ್ಗಳಿಗೆ ದೊಡ್ಡ ಡಿಟೆಕ್ಟಿವ್ ಏಜೆನ್ಸಿಗಳೇ ನಿಮ್ಮ ಕಾಲಿಗೆ ಬಿದ್ದು ಕೆಲಸ ಮಾಡುತ್ತವೆ” ಎಂದು ವಾದಿಸಿದೆ.
ವಿಶಾಲ್ ನಕಾರವೆತ್ತುತ್ತಾ, “ನೋ ನೋ… (ಇಲ್ಲ ಇಲ್ಲ) ನೀನು ಸಣ್ಣಕೇಸನ್ನೂ ಹೋದಸಲ ಚೆನ್ನಾಗಿ ನಿಭಾಯಿಸಿಕೊಟ್ಟೆ. ನಿನಗೆ ಪರ್ಸನಲ್ ಟಚ್ ಇದೆ. ಈ ಕೇಸ್ ಹೆಣ್ಣಿನ ಮನಸ್ಸಿಗೆ ಸಂಬಂಧಿಸಿದ್ದು. ಬಲು ಸೂಕ್ಷ್ಮ. ಹಾಗಾಗಿ ನಿನ್ನನ್ನು ಹೈರ್(ಬಾಡಿಗೆಗೆ) ಮಾಡಿದ್ದೇನೆ ಎಂದುಕೋ. ನಾನು ನಿನಗೆ ಒಂದು ಲಕ್ಷಕ್ಕೆ ಚೆಕ್ ಕಳುಹಿಸುತ್ತೇನೆ, ಮೃದುಲಾ ಅಕೌಂಟಿನಿಂದ. ಅಡ್ವಾನ್ಸ್ ಅಂತಾ ಇಟ್ಕೋ. ಬಿಲ್ ಆಮೇಲೆ ಕಳುಹಿಸು ಅವಳಿಗೆ. ಇನ್ನು ಆಕೆಯೇ ನಿನ್ನ ಕಕ್ಷಿದಾರಳು, ಲೆಕ್ಕಕ್ಕೆ ನಾನಲ್ಲ ಅಂತಿಟ್ಕೋ! ಬೈ ಅಂಡ್ ಗುಡ್ಲಕ್” ಎಂದು ಫೋನ್ ಇಟ್ಟೇ ಬಿಟ್ಟರು. ದೊಡ್ಡ ಮನುಷ್ಯರು ಅಂದೆನಲ್ಲಾ?
ನಾನು ಆ ಗಳಿಗೆಯಲ್ಲಿ ಈ ಕೇಸ್ ಬೇಡಾ ಅನ್ನಬಹುದಿತ್ತು. ಹಾಗಂದಿದ್ದರೆ ಮುಂದಿನ ಒಂದು ತಿಂಗಳು ನಡೆಯಲಿದ್ದ ಎಷ್ಟೋ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದಿತ್ತು. ಆದರೆ ನಾನು ಅನ್ನಲಿಲ್ಲ.
“ಸರಿ, ನಾನು ಬಲಿಯಾದೆ… ಮತ್ತಿನ್ನೇನು?” ಎಂದೆ ಶರಣಾಗತ ಭಾವದಿಂದ. ನಾನು ಮೃದುಲಾ ಮತ್ತು ಫರ್ನಾಂಡೆಸ್ ಮುಖ ನೋಡುತ್ತಾ.
ಮೃದುಲಾ ತನ್ನ ಜನಪ್ರಿಯ ತಾರಾ ಮುಗುಳುನಗೆಯನ್ನು ಬೀರುತ್ತಿದ್ದರು. ಮೊದಲ ಬಾರಿಗೆ ಇಂದು ಫರ್ನಾಂಡೆಸ್ ಕೂಡಾ ನಕ್ಕರು.
“ನಿಮ್ಮ ಕಾಫಿ ಬಹಳ ಚೆನ್ನಾಗಿತ್ತು. ಇನ್ನೊಂದು ಕಪ್ ಕೊಡ್ತೀರಾ?” ಎಂದರು.
೩
ಕರ್ಪೂರಿ ನದಿ ತೀರದ ಮಾಂಡಿಚೆರ್ರಿ ಮೊದಲಿಗೆ ಒಂದು ಫ್ರೆಂಚ್ ಕಾಲೊನಿಯಾಗಿತ್ತಂತೆ. ಅದಕ್ಕೂ ಮುಂಚೆ ಪಲ್ಲವರು ಆಳಿದ್ದ ಬಂದರು ಪಟ್ಟಣವಂತೆ. ಮೃದುಲಾ ಹೇಳಿದ ಪ್ರಕಾರ ೧೯೮೦ರಲ್ಲಿ ಅದು ಸುಮಾರು ಚಿಕ್ಕ ಊರು ಆಗಿಯೇ ಇರಲು ಸಾಧ್ಯ. ಅಲ್ಲೇ ಕರ್ಪೂರಿ ನದಿ ಸಮುದ್ರವನ್ನು ಸೇರುವ ಸಂಗಮವಾಗುತ್ತದೆ ಎಂದು ನನ್ನ ಕೈಯಲ್ಲಿದ್ದ ಪ್ರವಾಸಿ ಪುಸ್ತಕ ಹೇಳುತ್ತಿತ್ತು.
ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಟ್ರೈನಿನ ಎ.ಸಿ. ಕೋಚಿನ ಹೊರಗೆ ಸಾಗಿಹೋಗುತ್ತಿದ್ದ ಹಚ್ಚಹಸಿರು ಭತ್ತದ ಗದ್ದೆಗಳನ್ನೇ ನೋಡುತ್ತಾ ನಾನು ಯೋಚಿಸುತ್ತಿದ್ದೆ.
ಟಿ.ವಿ. ಮತ್ತು ಸಿನಿಮಾ ನೋಡಿ ಎಲ್ಲರೂ ತಿಳಿದಿರುವಂತೆ ಪತ್ತೇದಾರಿ ಕೆಲಸವೇನೂ ಅಂಥ ಆಕರ್ಷಕ, ಮನರಂಜನೀಯ ಅಥವಾ ಗ್ಲಾಮರಸ್ ಉದ್ಯೋಗವಲ್ಲ. ಇದರಲ್ಲಿ ಹಲವು ಗಂಟೆಗಳ ಕಾಲ ಅಪರಿಚಿತ ಅಪರಾಧಿಗಳ ಬಗ್ಗೆ ಹುಡುಕಾಟ, ಇಂಟರ್ನೆಟ್ ಮತ್ತು ಲೈಬ್ರರಿಯಲ್ಲಿ ಅನ್ವೇಷಣೆ, ಸರ್ಕಾರಿ ರೆಕಾರ್ಡ್ಸ್ ತಪಾಸಣೆ, ಹತ್ತು ಹಲವಾರು ಮಹಡಿ ಮೆಟ್ಟಿಲುಗಳನ್ನು ದಬಾ ದಬಾ ಅಂತಾ ಹತ್ತಿ ಇಳಿದಿರಬೇಕು; ಮುಕ್ಕಾಲುವಾಸಿ ನಿಷ್ಪ್ರಯೋಜಕವಾಗಿ! ಅನುಮಾನಾಸ್ಪದ ವ್ಯಕ್ತಿಗಳ ಮನೆ, ಕಛೇರಿಗಳ ಮುಂದೆ ದಿನಗಟ್ಟಲೆ ಸಾಕು ನಾಯಿಯಂತೆ ಪಹರೆಗಾಗಿ ಕಾದು ಬಿದ್ದಿರುವುದೂ, ರಾಜಕೀಯ ಬೆಂಬಲವಿರುವ ರೌಡಿಗಳಿಂದ ಒದೆ ತಿನ್ನುವುದು ಅಲ್ಲದೇ ಇದ್ದಕ್ಕಿದ್ದಂತೆ ಅಪಾಯ, ಪ್ರಾಣ ಭಯ… ಅದಲ್ಲದೇ ಎಲ್ಲದಕ್ಕೂ ಮೂಗುತೂರಿಸಿ ನಮ್ಮ ಕೇಸ್ ಹಾಳು ಮಾಡುವ ಪತ್ರಿಕಾ ಪ್ರತಿನಿಧಿಗಳು, ಟಿವಿ ಮಾಧ್ಯಮದವರು. ಎಲ್ಲಕ್ಕಿಂತ ಹೆಚ್ಚಾಗಿ, ತಮಗೆ ಸವಾಲು ಹಾಕಿ ಬರುವ ನಮ್ಮಂಥ ಖಾಸಗಿ ಪತ್ತೇದಾರರಿಗೆ ಸಿಂಹ ಸ್ವಪ್ನವಾಗಿರುವ ಪೊಲೀಸ್ ಅಧಿಕಾರಿಗಳು. ನಾವು ಒಂದೇ ಒಂದು ಹೆಜ್ಜೆ ತಪ್ಪಿಡಲಿ ಎಂದೇ ಅವರು ಕಾಯುತ್ತಿರುತ್ತಾರೆ.
ಹಾಗಾದರೆ ಜಾಣ ಪತ್ತೇದಾರರೇ ಇಲ್ಲವೇ ಎನ್ನುತ್ತೀರಾ?
ನಾನು ಶೆರ್ಲಾಕ್ ಹೋಮ್ಸ್ನಂತೆಯೋ, ಹರ್ಕ್ಯೂಲ್ ಪೈರಾಟ್ನಂತೆಯೋ ಅತ್ಯಂತ ನಿಪುಣನೂ ಬುಧ್ಧಿವಂತನೂ ಅಲ್ಲ. ನಿಜಜೀವನದಲ್ಲಿ ಹಾಗೆ ಯಾರಾದರೂ ಸಿಗುವುದು ತೀರಾ ವಿರಳ. ನನಗೆ ತಿಳಿದಿರುವುದು ಅಂದರೆ ಮಿಲಿಟರಿ ಪೊಲೀಸ್ ಟ್ರೈನಿಂಗ್ನಲ್ಲಿ ಕಲಿತ ಮಾಮೂಲಿ ಪತ್ತೇದಾರಿ ವಿದ್ಯೆ. ಆತ್ಮಸಂರಕ್ಷಣೆ ಕಲೆಯಾದ ಕರಾಟೆ, ಕಿಕ್ ಬಾಕ್ಸಿಂಗ್, ನನ್ನ ಪ್ರಿಯವಾದ ಪಿಸ್ತೂಲ್ ಕೋಲ್ಟ್ ೦.೪೫ನಲ್ಲಿ ಗುಂಡಾಡುವುದು ಮತ್ತು ನನ್ನ ಹಾಸ್ಯಪ್ರಜ್ಞೆಯನ್ನು ಮೆರೆಯುವುದು!
ಟ್ರೈನಿನಲ್ಲಿ ಕೊಡುವ ಸ್ಯಾಂಡ್ವಿಚ್ ಮತ್ತು ಕಾಫಿ ಮುಗಿಸಿದ್ದೆ. ನಾನು ಮನೆಯಲ್ಲಿ ಮಾಡುವುದರ ರುಚಿಯಂತೆಯೂ ಇರಲಿಲ್ಲ; ಅದೂ ನಾನು ಸಾಧಾರಣ ಕುಕ್ ಮಾತ್ರ!
ನಾನು ಹೊರಡುವ ಮುನ್ನ ನನಗೆ ಮೃದುಲಾ ಒಂದು ಫೈಲ್ನಲ್ಲಿ ತನ್ನ ಬಗೆಗಿನ ಕಾಗದ ಪತ್ರಗಳನ್ನು ಕೊಟ್ಟಿದ್ದರು. ಅದರಲ್ಲಿ ಅವಳ ಎರಡನೇ ಜನ್ಮ ಪತ್ರ – ಮೃದುಲಾ, ವೀರಭದ್ರ ಮತ್ತು ಸುಮತಿ ಹೊಸಮನಿಯವರ ಪುತ್ರಿಯೆಂದು ಧಾರವಾಡದಲ್ಲಿ ಮಾಡಿಸಿದ್ದ ರಿಜಿಸ್ಟರ್ಡ್ ಪತ್ರ. ಅದರ ದಿನಾಂಕ ೧೯೮೦ರ ಮೇ ೨೨ ಎಂದಿತ್ತು. ಅದರಲ್ಲಿ ಅವಳು ನಿಜವಾಗಿ ಹುಟ್ಟಿದ ದಿನದ ದಾಖಲೆ, ಹೆತ್ತ ತಂದೆ-ತಾಯಿಯರ ಹೆಸರಿದ್ದ ಪತ್ರಗಳು ಯಾವುದೂ ಇರಲಿಲ್ಲ. ಆ ವಿವರಗಳು ಎಲ್ಲ ಅದೇ ಭೂಕಂಪದಲ್ಲಿ ಕಳೆದು ಹೋದವಂತೆ.
ದತ್ತು ಪಡೆದಾಗ ಮಗುವಿನ ವಯಸ್ಸು ಸುಮಾರು ಮೂರು ತಿಂಗಳು ಎಂದಿದ್ದರು. ಆದ್ದರಿಂದ ಮೂರು ತಿಂಗಳೊಳಗಿನ ಅಂದರೆ ಫೆಬ್ರುವರಿಯಿಂದ ಮೇ ವರೆಗಿನ ಮಗುವಿನ ಜನನದ ರೆಕಾರ್ಡ್ಸ್ ಅನ್ನು ಈ ಮಾಂಡಿಚೆರ್ರಿಯ ಸರ್ಕಾರಿ ಕಚೇರಿಯಲ್ಲೇ ಹುಡುಕಬೇಕಾದೀತು. ನನ್ನ ಆಫೀಸಿನಲ್ಲಿ ಹೇಳಿದ ಪ್ರಕಾರ ಈಕೆಗೆ ತಾನು ಆ ನಿಜವಾದ ದಾಖಲೆಯನ್ನು ಒದಗಿಸಿದರೆ ಸಾಕಂತೆ. ಅವರನ್ನೇನೂ ಭೇಟಿ ಮಾಡಲು ಮಗಳಿಗೆ ಆತುರವಿಲ್ಲವಂತೆ. ಅವರೇ ತಂದೆ-ತಾಯಿ ಎಂದು ನಿರೂಪಿಸಿದರೆ ಸಾಕಂತೆ. ಜತೆಗೆ ಸಿಕ್ಕರೆ ಆ ಬ್ಲಾಕ್ಮೈಲರ್ ಅನ್ನು ಪತ್ತೆ ಹಚ್ಚಿ ಕಾನೂನಿನ ವಶಕ್ಕೆ ಕೊಟ್ಟರೆ ಸಾಕು ಎಂದು ಹುಕುಂ ನೀಡಿದ್ದರು.
ಲಾಯರ್ ಫರ್ನಾಂಡೆಸ್ ಅಂತೂ “ಹೌದು ಹೌದು, ಈಕೆ ಈಗ ಜನಪ್ರಿಯ ನಟಿ ಎಂದು ತಿಳಿದರೆ ಆ ನಿಜವಾದ ಅಪ್ಪ-ಅಮ್ಮ ಇನ್ನೇನು ತಕರಾರು ತೆಗೆದು ಇವಳಿಗೆ ಅಂಟಿಕೊಳ್ಳುತ್ತಾರೊ, ದುಡ್ಡಿನಾಸೆಗೆ? ಇನ್ನು ಮೀಡಿಯಾ, ಪ್ರೆಸ್ನವರ ಕಿವಿಗೆಬಿದ್ದರಂತೂ ನಮ್ಮ ಕಥೆ ಮುಗಿಯಿತು; ಅಪಪ್ರಚಾರ ಮಾಡ್ಬಿಡ್ತಾರೆ… ಅವರಿಬ್ಬರಿಗೆ ಇವಳ ಹೆಸರು ತಿಳಿಯುವುದು ಕೂಡಾ ಬೇಡಾ” ಎಂದು ಒತ್ತಿ ಹೇಳಿದ್ದರು.
ಆದರೆ ಅದಕ್ಕೆ ಮುಖ ಕಠಿಣ ಮಾಡಿಕೊಂಡ ಮೃದುಲಾ, “ಇಂಥ ನನ್ನ ಪರ್ಸನಲ್ ವಿಷಯವನ್ನು ನನಗೆ ಬಿಡಿ. ನನ್ನ ಮನಸ್ಸನ್ನು ನೀವರಿಯಲಾರಿರಿ!” ಎಂದು ಅಲ್ಲೆ ಆ ಮಾತನ್ನು ಮೊಟಕುಗೊಳಿಸಿದ್ದರು.
“ಇದೆಲ್ಲಾ ನಿರ್ಧಾರ ಅವರು ಸಿಕ್ಕಿದರೆ….. ಸಿಕ್ಕ ಮೇಲೆ ತಾನೆ?” ಎಂದು ನಾನು ಇಬ್ಬರಿಗೂ ತಿಳಿಹೇಳಿದ್ದೆ.
ಇವರಿಗೇ ತಿಳಿಯದ ಆ ಜನ್ಮಸತ್ಯವನ್ನು ಯಾವ ಬ್ಲ್ಯಾಕ್ ಮೇಲರ್ ಕಂಡು ಹಿಡಿದಿರಬಹುದು? ಅವನನ್ನು ನಾನು ಹೇಗೆ ಪತ್ತೆ ಹಚ್ಚುವುದು; ಒಂದೂ ತಿಳಿಯಲಿಲ್ಲ….. ಇದ್ಯಾರೋ ವಕೀಲೆ ಲೂಸಿಯಾ ಅಂತೆ. ಆಕೆ ಯಾರೋ? ಅವಳಿಗೇನು ಗೊತ್ತೋ? ಏನು ಸಹಾಯ ಮಾಡಬಲ್ಲಳು? ಎಂದೆಲ್ಲಾ ಯೋಚಿಸುತ್ತಿರುವಂತೆ ಮಾಂಡಿಚೆರ್ರಿ ಸ್ಟೇಷನಿಗೆ ರೈಲು ತಲಪಿಯೇ ಬಿಟ್ಟಿತ್ತು.
ಸ್ಟೇಷನ್ನಿಂದ ಟ್ಯಾಕ್ಸಿ ಹಿಡಿದು ಡ್ರೈವರನಿಗೆ “ಒಳ್ಳೆಯ ಹೊಟೇಲ್ ತೋರಿಸು” ಎಂದು ಹೇಳಿ ಹೊರಟಾಗ ಊರನ್ನು ಗಮನಿಸುತ್ತಾ ಹೋದೆ. ಹಳೆಯ ಕಲ್ಲಿನ ಕಟ್ಟಡಗಳು, ಅತ್ತಿತ್ತ ನದಿ ಮತ್ತು ಸಮುದ್ರ ಸಂಗಮ ತೀರದಲ್ಲಿ ತೇಲುವ ಮೀನುಗಾರರ ನಾವೆಗಳು, ಪ್ರವಾಸಿಗರ ಮೋಟಾರ್ ಬೋಟ್ಗಳ ಮೇಲೆ ರಂಗು ರಂಗಿನ ಬಾವುಟಗಳು ಗಾಳಿಗೆ ಪಟಪಟನೆ ಹಾರುತ್ತಿದ್ದವು.
ಊರಿನ ಮಾರ್ಕೆಟ್ ನಡುವಿನ `ಪರ್ಲ್ ಲಾಡ್ಜ್’ ಎಂಬಲ್ಲಿ ತಂದು ತನ್ನ ಟ್ಯಾಕ್ಸಿ ನಿಲ್ಲಿಸಿದ ಡ್ರೈವರ್.
“ನಲ್ಲ ಇರುಕ್ಕು” ಅಂದು ನಕ್ಕ. ಭೂತಬಂಗಲೆಯಂತಿರಲಿಲ್ಲ ಅಷ್ಟೆ. ಸ್ವಲ್ಪ ಪರವಾಗಿಲ್ಲ ಅನಿಸಿತು. ಒಳಗೆ ರಿಸೆಪ್ಷನ್ ಕೌಂಟರ್ನಲ್ಲಿ ಕುಳಿತಿದ್ದ ಬೋಳುತಲೆಯ ಮುದುಕ ತೂಕಡಿಸುತ್ತಿದ್ದವನು ಕತ್ತೆತ್ತಿ ಶ್ರಮಪಟ್ಟು ನೋಡಿದ.
“ರಾತ್ರಿಯೆಲ್ಲಾ ಫುಟ್ಬಾಲ್ ಮ್ಯಾಚ್ ನೋಡಿದಿರೇನೋ, ಪಾಪ ನಿದ್ದೆ ಬರಲಿಲ್ಲ?” ಎಂದು ನಾನು ಅವನನ್ನು ಛೇಡಿಸಿ ನಕ್ಕೆ. ಅವನು ಸಪ್ಪಗೆ “ನಮ್ಮ ತಾಯಿಯ ಗೊರಕೆ ಸದ್ದಿನಿಂದ ನಿದ್ದೆ ಬರಲಿಲ್ಲ ಅಷ್ಟೆ. ಹೇಳಿ, ಏನು ಬೇಕು?” ಅಂದ.
ಇವನ ತಾಯಿಯೆ ಹಾಗಾದರೆ ಈ ಊರಿನ ಜನ ಅಲ್ಪಾಯುಗಳಲ್ಲ ಎಂದೆನಿಸಿತು.
“ನದಿ-ಸಮುದ್ರ ಸಂಗಮ ಸ್ಥಳವನ್ನು ಎದುರು ನೋಡಲು ಸಾಧ್ಯವಾಗುವಂಥ ಸಿಂಗಲ್ ರೂಮ್ ಇದ್ದರೆ ಕೊಡಿ” ಎಂದೆ.
“ನಿಮ್ಮ ಹೆಸರು? ಯಾವೂರು? ಈ ಮೊದಲು ನಿಮ್ಮನ್ನಿಲ್ಲಿ ನೋಡಿದಂತಿಲ್ಲಾ” ಎನ್ನುತ್ತ ಹಳೆ ರಿಜಿಸ್ಟರ್ನ್ನು ನನ್ನತ್ತ ತಳ್ಳಿದ.
“ನನ್ನ ಹೆಸರು ವೀರಪ್ಪನ್. ಗೊತ್ತಿಲ್ಲವೆ…..? ನಾನು ಕಾಡಿನಿಂದ ಯಾರಿಗೂ ಹೇಳದೆ ಓಡಿ ಬಂದಿದ್ದೇನೆ. ನನ್ನನ್ನು ಹಿಡಿದು ಕೊಟ್ಟವರಿಗೆ ಹತ್ತು ಲಕ್ಷ ಬಹುಮಾನವಂತೆ!” ಎಂದೆ ಮೀಸೆ ಮೇಲೆ ಕೈ ಹಾಕಿಕೊಳ್ಳುತ್ತಾ.
“ನಿಜವಾದ ಹೆಸರು ವಿಳಾಸ ಬರೆಯಿರಿ, ಸುಮ್ಮನೆ” ಎಂದ ಆಕಳಿಸುತ್ತಾ…. ಅವನು ನನ್ನಂಥ ತರಲೆಗಳನ್ನು ಬಹಳ ನೋಡಿದ್ದನೇನೋ!
ಸುಮ್ಮನೆ ಹೆಸರು ವಿಳಾಸ ಬರೆದುಕೊಟ್ಟೆ. ನಾನೇ ರೂಮಿಗೆ ಹತ್ತಿ ಹೋದೆ.
ಆ ಲಾಡ್ಜಿನಲ್ಲಿ ನನ್ನ ರೂಮ್ ಮತ್ತು ಡೈನಿಂಗ್ ಸರ್ವೀಸ್ ಚೆನ್ನಾಗಿತ್ತು. ನನ್ನ ಕೋಲ್ಟ್ ೦.೪೫ ರಿವಾಲ್ವರ್ ಮತ್ತು ಗುಂಡಿನ ಬಾಕ್ಸ್ ಅನ್ನು ಭದ್ರವಾಗಿ ಲಾಕರ್ನಲ್ಲಿ ತೆಗೆದಿಟ್ಟೆ. ರೈಲಿನಲ್ಲಿ ಸರಿಯಾಗಿ ತಿಂದಿರಲಿಲ್ಲ.
ಬಿಸಿ ಶವರ್ ಮಾಡಿ, ಮಸಾಲೆ ದೋಸೆ, ಜಾಮೂನ್ ನಂತರ ಕಾಫಿ ಕುಡಿದು ತೃಪ್ತನಾಗಿ ಕುಳಿತು, ಕಿಟಕಿ ತೆಗೆದು ಕರ್ಪೂರಿನದೀಸಂಗಮವನ್ನು ನೋಡಿದೆ. ಮೇಲ್ನೋಟಕ್ಕೆ ಎಲ್ಲವೂ ಮಧ್ಯಾಹ್ನದ ಬಿಸಿಲಿನಲ್ಲಿ ಶಾಂತವಾಗಿ, ಸಾಧಾರಣವಾಗಿಯೇ ತೋರುತಿತ್ತು. ಮೂವತ್ತೈದು ವರ್ಷದ ಹಿಂದಿನಿಂದ ಇದು ತನ್ನ ಗರ್ಭದಲ್ಲಿ ಏನೇನು ರಹಸ್ಯ ಅಡಗಿಸಿಕೊಂಡಿದೆಯೋ ಎಂದು ಯೋಚಿಸಿದೆ.
ಒಡನೆಯೇ ಆ ವಕೀಲೆ ಲೂಸಿಯಾಳ ಆಫೀಸಿಗೆ ಫೋನಾಯಿಸಿದೆ. ಇನ್ನೂ ಮೂರು ಗಂಟೆ ಸಮಯ, ಆಫೀಸಿನಲ್ಲೇ ಇರಬಹುದು.
“ಮಿ. ವಿಜಯ್ ದೇಶಪಾಂಡೆ…. ಓಹ್, ಬನ್ನಿ ನಮ್ಮ ಆಫೀಸಿಗೆ…. ನಿಮ್ಮ ಹೊಟೆಲ್ನಿಂದ ಐದು ನಿಮಿಷ ದಕ್ಷಿಣಕ್ಕೆ ನಡೆದು, ಒಂದು ಫರ್ಲಾಂಗ್ ಪಶ್ಚಿಮಕ್ಕೆ ತಿರುಗಿದರೆ, ಎಡಗಡೆ ಮೊದಲನೆಯ ಬಿಲ್ಡಿಂಗ್ ನಮ್ಮದು. ಸೆಕೆಂಡ್ ಫ್ಲೋರ್” ಎಂದಳು ರಮಾ ಎನ್ನುವ ಆಕೆಯ ಸೆಕ್ರೆಟರಿ; ಅದನ್ನೆಲ್ಲಾ ಉರು ಹೊಡೆದವಳಂತೆ.
“ಉತ್ತರ-ದಕ್ಷಿಣ ನೋಡಲು ನನ್ನ ಬಳಿ ಕಂಪಾಸ್ ಇಲ್ಲವಲ್ಲಾ, ಟ್ಯಾಕ್ಸಿಯಲ್ಲೆ ಬರುತ್ತೇನೆ!” ಎಂದೆ. ಕಿಲಕಿಲ ನಕ್ಕಳು. ಸದ್ಯಃ ಇವಳಿಗೆ ಹಾಸ್ಯಪ್ರಜ್ಞೆ ಇದೆಯಲ್ಲ ಎನಿಸಿತು.
ಇನ್ನು ಹತ್ತೇ ನಿಮಿಷಗಳಲ್ಲಿ ಬಿಸಿಲಿಗೆ ಫಳ ಫಳ ಮಿನುಗುವ ಗ್ಲಾಸ್ ಮುಂಭಾಗದ ಹೊಸ ಕಟ್ಟಡದ ಲಿಫ್ಟ್ನಲ್ಲಿ ಸೆಕೆಂಡ್ ಫ್ಲೋರ್ಗೆ ಮೇಲೇರುತ್ತಿದ್ದೆ. ಎಲ್ಲವೂ ಹೊಸದು… ನವನವೀನ… ಶ್ರೀಮಂತರ ಕಾರುಬಾರು. ನನ್ನಂಥ ಬಡ ಪತ್ತೇದಾರನ ಆಫೀಸಿನಂತಲ್ಲಾ ಎಂದು ಕೀಳರಿಮೆ ಬಂತು.
ಹವಾನಿಯಂತ್ರಿತ ಆಫೀಸಿನ ಕಾರ್ಪೆಟ್ ಹಾಕಿದ್ದ ನೆಲದ ಮೇಲೆ ರಿಸೆಪ್ಷನ್ನಿಂದ ನಗುಮುಖದ ಸೆಕ್ರೆಟರಿ ನನ್ನನ್ನು ಒಳಗೆ ಕರೆದೊಯ್ದಳು.
“ಬನ್ನಿ ಮಿ. ದೇಶಪಾಂಡೆ. ನಾನು ಲೂಸಿಯಾ” ಎಂದು ತನ್ನ ಹೈ-ಬ್ಯಾಕ್ ಸೀಟಿನಿಂದ ಎದ್ದವಳನ್ನು ನೋಡಿದೆ.
ಲೂಸಿಯಾ ಓರ್ವ ಬಿಳಿ ಆಂಗ್ಲೋ ಇಂಡಿಯನ್ ಯುವತಿ. ಸುಮಾರು ಐದು ಅಡಿ ಆರಿಂಚು ಎತ್ತರ. ಪುಟ್ಟದಾದ ಬಾಬ್ಕಟ್ ಕೂದಲು. ನಗುಮುಖದಲ್ಲಿ ಗುಳಿಬೀಳುವ ಕೆನ್ನೆ, ಪುಟ್ಟ ಬಾಯಿ, ಲಿಪ್ಸ್ಟಿಕ್ ಹಾಕಿದಂತಿಲ್ಲ. ಚುರುಕಾದ ಕಂಗಳು, ನೀಳವಾದ ಮೂಗು…. ಬಿಳಿ ಸಲ್ವಾರ್ ಕಮೀಝ್ನಲ್ಲಿ ಲಕ್ಷಣವಾಗಿ ಕಾಣುತ್ತಿದ್ದಳು. ನನಗಿಂತ ಚಿಕ್ಕವಳು; ಆದರೆ ವಯಸ್ಸಿನಲ್ಲಿ ತೀರ ವ್ಯತ್ಯಾಸವಿಲ್ಲ ಎನಿಸಿತು. ಇಂತಹದ್ದರಲ್ಲೆಲ್ಲ ನನ್ನ ಪತ್ತೇದಾರಿ ಬುದ್ಧಿ ಬಲು ಚುರುಕಾಗಿ ಕೆಲಸ ಮಾಡುತ್ತದೆ!
ನನ್ನ ಕೈ ಕುಲುಕಿದ ಹಸ್ತ ಕೋಮಲವಾದರೂ ಭದ್ರವಾಗಿತ್ತು.
“ರೂಮಿನಲ್ಲಿ ಮಲ್ಲಿಗೆ ಸುವಾಸನೆಯಿದೆ, ನೈಸ್!” ಎಂದೆ ಸುತ್ತಲೂ ನೊಡುತ್ತಾ.
“ನಿಮಗಿಷ್ಟವಾಯಿತೆ, ಗುಡ್” ಎಂದಳು. ಆಕೆಯ ಎದುರಿನ ಮೆತ್ತನೆಯ ಚೇರಿನಲ್ಲಿ ಕುಳಿತೆ.
“ಇದು ಈ ಊರಿಗೆ ನಿಮ್ಮ ಮೊದಲ ಭೇಟಿಯೆ?” ಎಂದಳು
“ಹೌದು, ಯಾವುದೇ ಮ್ಯಾಪ್ನಲ್ಲಿ ದೊಡ್ಡದಾಗಿ ಕಾಣುವುದಿಲ್ಲ ನಿಮ್ಮೂರು….” ಎಂದೆ. ನೀವೂ ಕಾಣುವುದಿಲ್ಲಾ ಅನ್ನಲಿಲ್ಲ.
“ನಾನು ಐದು ವರ್ಷಗಳಿಂದ ಇಲ್ಲೇ `ಲಾ’ ಮುಗಿಸಿ ಪ್ರಾಕ್ಟಿಸ್ ಮಾಡುತ್ತಿದ್ದೇನೆ” ಎಂದಳು ಫೈಲ್ಗಳನ್ನು ಪಕ್ಕಕ್ಕೆ ತಳ್ಳುತ್ತಾ.
“ಫರ್ನಾಂಡೆಸ್ ನನ್ನ ಗಾಡ್ಫಾದರ್ ತರಹ…. ನನ್ನ ತಂದೆ-ತಾಯಿಗೆ ಬಹಳ ಬೇಕಾದವರು. ನನ್ನ ತಂದೆ-ತಾಯಿ ಒಂದು ಅಪಘಾತದಲ್ಲಿ ತೀರಿಹೋದ ಮೇಲೆ ಅವರೇ ಓದಿಸಿ ನನಗೆ ಎಲ್ಲ ಸಹಾಯ ಮಾಡಿದ್ದು. ಅದಕ್ಕೆ ಅವರ ಕಾರು-ಬಾರನ್ನೆಲ್ಲ ಇಲ್ಲಿ ನಾನೇ ನೋಡಿಕೊಳ್ಳುತ್ತೇನೆ.
“ಚಿಕ್ಕ ಊರು, ಇಲ್ಲೇನು ಅನ್ನುತೀರಾ, ಬಹಳ ಶಿಪಿಂಗ್, ಟೂರಿಸಮ್ ಮುಂತಾದ ಬಿಜಿನೆಸ್ ಕೂಡಾ ಇದೆ ಅವರಿಗೆ…. ಅಲ್ಲದೆ ಅಂತವರೆಲ್ಲ ನಮ್ಮ ಮುಖ್ಯ ಕಕ್ಷಿದಾರರು ಕೂಡಾ” ಎಂದು ವಿವರಿಸಿದಳು
“ಮೃದುಲಾ ಹೊಸಮನಿಯವರೂ ಸೇರಿದಂತೆ?” ಎಂದು ಮಾತನ್ನು ಬಂದ ವಿಷಯಕ್ಕೆ ತಂದೆ.
“ಹೌದು” ತಲೆಯಾಡಿಸುತ್ತಾ ಲೂಸಿಯಾ “ಕಾಫಿ ತಾ” ಎಂದು ಸೆಕ್ರೆಟರಿಗೆ ಸೂಚಿಸಿದಳು.
“ಆದರೆ ಬೆಂಗಳೂರಿನ ಚಿತ್ರರಂಗದವರ ವ್ಯವಹಾರವನ್ನೆಲ್ಲಾ ಫರ್ನಾಂಡೆಸ್ ಆಫೀಸಿನವರು ಅಲ್ಲೇ ನೋಡಿಕೊಳ್ಳುತ್ತಾರೆ. ಇದೇ ಮೊದಲ ಬಾರಿಗೆ ಚಿತ್ರತಾರೆಯ ಬಗ್ಗೆ ಕೇಸ್ ನನ್ನ ಬಳಿ ಬಂದಿದ್ದು. ನಾನೂ ಈ ಬಗ್ಗೆ ಸ್ವಲ್ಪ ವಿಷಯ ಸಂಗ್ರಹಿಸಿದ್ದೇನೆ, ನಿಮಗೆ ಸಹಾಯವಾಗಬಹುದು” ಎಂದಳು.
ನಾನು ಕೂತೂಹಲದಿಂದ, “ಹೇಳಿ ಮತ್ತೆ, ತಡವೇಕೆ?” ಎಂದೆ.
“ಆಹಾ!…. ಮೊದಲು ಕಾಫಿ…. ಆಮೇಲೆ ಚರ್ಚೆ” ಎಂದು ಆಗ ತಾನೆ ಸೆಕ್ರೆಟರಿ ತಂದಿಟ್ಟ ಕಾಫಿ ಕೆಟಲ್ ಅನ್ನು ಎತ್ತಿ ಎರಡು ಗ್ಲಾಸ್ಗಳಿಗೆ ಕಾಫಿ ಸುರಿಯಹತ್ತಿದಳು ಲುಸಿಯಾ. ಇವಳ್ಯಾಕೋ ನನ್ನ ಜಾತಿಗೆ ಸೇರಿದವಳೇ ಕಾಫಿ ವಿಷಯದಲ್ಲಿ ಅನ್ನಿಸಿತು.
ಲೂಸಿಯಾ ವಿವರಿಸಹತ್ತಿದಳು: “ನಿಮಗೆ ಈ ಅಡಾಪ್ಶನ್ ಕೇಸಸ್ ಬಗ್ಗೆ ಇರುವ ಕಾನೂನು ಏನು ಗೊತ್ತಿದೆಯೊ ನನಗೆ ತಿಳಿಯದು. ನಾನು ಹೇಳುತ್ತೇನೆ. ನೋಡಿ ಈಗ ಸದ್ಯದಲ್ಲಿರುವ ಕಾನೂನಿನ ಪ್ರಕಾರ ಹೆತ್ತವರು ಮಗುವನ್ನು ದತ್ತು ಕೊಡಬೇಕಾದರೆ ಕೆಲವು ಕಾನೂನುಪತ್ರಗಳನ್ನು ಮಾಡಿಸಬೇಕಾಗುತ್ತದೆ. ಅದರಲ್ಲಿ ಆ ಮಗುವಿನ ನಿಜವಾದ ಹೆತ್ತ ತಂದೆ-ತಾಯಿ, ದತ್ತು ಪಡೆಯುವ ತಂದೆ-ತಾಯಿ, ಅವರೆಲ್ಲರ ಮೆಡಿಕಲ್ ಹಿಸ್ಟರಿ, ಮಗುವಿನ ಲಿಂಗ, ಹೆಸರು, ವಯಸ್ಸು ಎಲ್ಲಾ ದಾಖಲೆಗಳನ್ನು ಜೋಡಿಸಿರುತ್ತಾರೆ. ಅಂಥ ಎಲ್ಲಾ ಪತ್ರಗಳು ಈಗ CARA (Central Adoption Resource Authority) ಎಂಬ ಕೇಂದ್ರಸರ್ಕಾರಿ ಆಫೀಸ್ ನೋಡಿಕೊಳ್ಳುತ್ತದೆ. ಆ ಸ್ಥಳದ ಹತ್ತಿರದ ವ್ಯಾಪ್ತಿಯ ಕೋರ್ಟ್ನಲ್ಲಿ ಇದನ್ನು ಒಪ್ಪಿಸಿ ಕೋರ್ಟ್ನ ಅನುಮತಿ ಪತ್ರ ಪಡೆದು ಮಗುವನ್ನು ದತ್ತು ತಂದೆ-ತಾಯಿಗೆ ಒಪ್ಪಿಸಲಾಗುತ್ತದೆ.”
“ಮೃದುಲಾ, ನಮ್ಮ ಕೇಸ್ನಲ್ಲಿ ಆ ಕಾಲದ ಪತ್ರಗಳು ಎಲ್ಲಿ ಸಿಗುತ್ತವೆ?” ಎಂದು ಪ್ರಶ್ನಿಸಿದೆ.
ಕಾಫಿ ಕಪ್ ತಳ್ಳಿದೆ. ಚೆನ್ನಾಗಿತ್ತು; ಆದರೆ ನಾನು ಮಾಡುವ ಸ್ಟ್ರಾಂಗ್ ಕಾಫಿಯಲ್ಲ, ಬಿಡಿ.
ಲೂಸಿಯಾ ಉಸ್ಸ್ ಎಂದು ಮುಂದುವರಿಸಿದಳು: “ಬಹಳ ಶ್ರಮ ಪಡಬೇಕಾಗುತ್ತದೆ. ನೋಡಿ….. ೧೯೮೦ರಲ್ಲಿ ಕಾನೂನು ಪತ್ರಗಳ ಸ್ಥಿತಿ ಸ್ವಲ್ಪ ಅಸ್ಪಷ್ಟವಾಗಿದ್ದವು. ಈಗಿನಷ್ಟು ಕರಾರುವಾಕ್ಕಾಗಿ, ನಿಯಮಬದ್ಧವಾಗಿ ಇರಲಿಲ್ಲ. ಅದೂ ಇಂತಹ ಚಿಕ್ಕ ಊರುಗಳಲ್ಲಿ ಆಗ ಜನನ-ಮರಣ ರಿಜಿಸ್ಟ್ರಾರ್ ಅಥವಾ ಲೋಕಲ್ ಕೋರ್ಟಿನ ದಾಖಲೆಗಳು ಮಾತ್ರ ಇರುತ್ತಿದ್ದವು. ಅಲ್ಲದೇ ಆಗ ಇಂದಿನಂತೆ ಕಂಪ್ಯೂಟರ್ಲೋಕವಲ್ಲದ ಕಾರಣ, ಎಲ್ಲಾ ಪತ್ರಗಳು ಕಾಗದ ರೂಪದಲ್ಲೆ ಇರುತ್ತಿದ್ದವು. ಅಂತಹ ಮೂವತ್ತೈದು ವರ್ಷ ಹಳೆ ಪತ್ರ ಕಡತಗಳನ್ನೆಲ್ಲಾ ಇವರು ಇಲ್ಲಿನ ಚಿಕ್ಕ ರಿಜಿಸ್ಟ್ರಾರ್ ಆಫೀಸಿನ ಕೋಣೆಯಲ್ಲಿ ತುಂಬಿದ್ದಾರಂತೆ. ಅದನ್ನು ಪಡೆಯಲು ನಾವು ಒಂದು ಅಪ್ಲಿಕೇಶನ್ ಹಾಕಬೇಕು. ಆಗ ಅದನ್ನು ನೋಡಲು, ಕಾಪಿ ಮಾಡಲು ಬಿಡುತ್ತಾರಂತೆ. ಇದಕ್ಕಾಗಿ ನಾನಾಗಲೇ ನಿಮ್ಮ ಹೆಸರಿನಲ್ಲಿ ಪತ್ರ ಮಾಡಿಸಿದ್ದೇನೆ. ಇದನ್ನು ತೆಗೆದುಕೊಂಡು ಹೋಗಿ ಅಲ್ಲಿ ಅವರ ಮುಂದೆ ಸಹಿ ಹಾಕಿ, ನೀವು ಮೃದುಲಾರ ರೆಕಾರ್ಡ್ಸ್ ಓಪನ್ ಮಾಡಬಹುದು…”
“ಪರವಾಗಿಲ್ಲಾ, ಬಹಳ ಶೀಘ್ರವೆ ಬಹಳ ಕೆಲಸ ಮಾಡಿದ್ದೀರಿ, ನನಗಾಗಿ” ಎಂದು ಪ್ರಶಂಸಿಸಿದೆ. ಹೆಣ್ಣಿಗೆ ಪ್ರಶಂಸೆಯಿಂದ ಖುಶಿಯಾಗುತ್ತದೆ ಎಂದು ಎಲ್ಲರೂ ಹೇಳುತ್ತಾರೆ.
ಆದರೆ ಲುಸಿಯಾ ನಕ್ಕರೂ ಒಪ್ಪಲಿಲ್ಲ. “ನೋ ನೋ, ನನಗೇನೂ ಬೇರೆ ದಾರಿಯೆ ಇರಲಿಲ್ಲಾ. ನಿಮಗೇ ಇನ್ನು ಹೆಚ್ಚು ಕೆಲಸ. ಅಲ್ಲಿ ಸಿಕ್ಕ ರೆಕಾರ್ಡ್ಸ್ ತೆಗೆದು ಆಕೆಯ ಹೆತ್ತ ತಂದೆ-ತಾಯಿಯ ಪತ್ತೆ ಮಾಡುತ್ತೀರೇನು?” ಎಂದು ಕೇಳಿದಳು.
“ಅದೆಲ್ಲಾ ಕಕ್ಷಿದಾರರಿಗೂ ಪತ್ತೇದಾರನಿಗೂ ನಡುವೆ ಇರುವ ಖಾಸಗಿ ವಿಷಯಗಳು. ಯಾರಿಗೂ ಹೇಳಲಾಗುವುದಿಲ್ಲ. ಲಾಯರ್ಸ್ ಜತೆಯೂ ಹಾಗೆ ತಾನೆ?” ಎಂದೆ ನಯವಾಗಿ.
“ಕಾನ್ಫಿಡೆನ್ಶಿಯಲ್ ಅನ್ನುತ್ತೀರಾ? ನನಗೇನೂ ಹೇಳದೇ ಹೋಗುತ್ತೀರಿ ಅನ್ನಿ…..” ಎಂದಳು ಹುಸಿಮುನಿಸಿನಿಂದ.
“ಹಾಗೆ ಹೋಗುವುದಿಲ್ಲಾ, ಒಳ್ಳೇ ಊಟಕ್ಕೆ ಕರೆದುಕೊಂಡು ಹೋಗುತ್ತೇನೆ; ಎಲ್ಲಾ ಮುಗಿದ ಮೇಲೆ. ಆಗ ಎಲ್ಲ ಹೇಳಿಯೇ ಹೋಗುತ್ತೇನೆ. ನಾನು ಹೇಳಿದೆ ಎಂದು ಮಾತ್ರ ನೀವು ಹೇಳಬಾರದು ಅಷ್ಟೆ. ಅದೂ ಕಾನ್ಫಿಡೆನ್ಶಿಯಲ್!” ಎಂದು ಅವಳಿಗೆ ಬೈ ಹೇಳಿ ಹೊರಬಿದ್ದೆ, ಪತ್ರದ ಫೈಲ್ನೊಂದಿಗೆ.
(ಸಶೇಷ)
Chennagide ri, odisikondu hogatte. Naanu bhaal dina agittu pattedari kategallanna odi.Thanks matte nannanna track( Pattedari kadambarigallanna odalu) hachidakke.