ಇಲ್ಲಿಯವರೆಗೆ…..
ವಿಜಯ್ ಮತ್ತು ಲೂಸಿಯಾ ಪರಸ್ಪರ ಆಕರ್ಷಿತವಾಗತೊಡಗಿದರು. ಇಬ್ಬರೂ ದತ್ತುಕೊಟ್ಟವರ ಲಿಸ್ಟ್ಗಳನ್ನು ಪರಿಶೀಲಿಸುತ್ತಲೇ ಮುಂದೆ ಇಡಬೇಕಾದ ಹೆಜ್ಜೆಗಳ ಕುರಿತು ಕೂಲಂಕಷವಾಗಿ ಚರ್ಚಿಸುತ್ತಾ ರಾತ್ರೆ ಜೊತೆಯಾಗಿ ಊಟಮಾಡಿದರು…..
ಲಿಸ್ಟ್ನಲ್ಲಿದ್ದ ನಂಬೂದರಿ ಮನೆಗೆ ವಿಜಯ್ ತೆರಳಬೇಕೆಂದು ನಿಶ್ಚಯವಾಯಿತು. ಮೃದುಲಾ ಹಾಗೂ ಫರ್ನಾಂಡಿಸ್ಗೆ ಎಲ್ಲ ವಿಷಯ ಗೊತ್ತಿದ್ದೂ ತನ್ನನ್ನು ಆಟವಾಡಿಸುತ್ತಿದ್ದಾರೆ ಎಂದು ವಿಜಯ್ ತಿಳಿದು ಕೋಪಗೊಂಡ. ಇಲ್ಲಿಗೆ ತನ್ನ ಕೆಲಸ ಮುಗಿಯಿತು ಎಂದು ಹೇಳಲು ನಿರ್ಧರಿಸಿದ. ಮೃದುಲಾ ಮತ್ತು ಫರ್ನಾಂಡಿಸ್ ಕಾನ್ಫರೆನ್ಸ್ಲೈನಿಗೆ ಬಂದಾಗ ಅದೇ ವಿಷಯದ ಕುರಿತು ರೇಗಾಡಿದ…
ಮೃದುಲಾ ಅನೈತಿಕವಾಗಿ ಹುಟ್ಟಿದ ಕೂಸು; ಜಾನಿ ಅದೇ ವಿಷಯವನ್ನು ಮುಂದಿಟ್ಟುಕೊಂಡು ಬ್ಲ್ಯಾಕ್ಮೈಲ್ ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ ವಿಷಯವನ್ನು ಮುಚ್ಚಿಟ್ಟಿದ್ದಕ್ಕಾಗಿ ಫರ್ನಾಂಡೆಸ್ ಕ್ಷಮೆ ಕೋರಿದರು.
ವಿಜಯ್ ಮುಂದಿನ ವಿಚಾರಣೆಗಾಗಿ ನಂಬೂದರಿ ಮನೆಗೆ ತೆರಳಿದ……
ಮೃದುಲಾರ ಜನ್ಮವಿಚಾರ ಏನೇ ನಡೆದಿದ್ದರೂ ಆ ಕಾಲದಲ್ಲಿ ಈಕೆಯ ಅಪ್ಪ ಅಮ್ಮನೇ ಮಗುವನ್ನು ದತ್ತುಕೊಡಿಸಿ ಸಮಾಜದ ಕಂಗಳಿಂದ ಕುಲಗೌರವವನ್ನು ಕಾಪಾಡಿಕೊಂಡಿರಲು ಸಾಧ್ಯ…
ಸಮಯ ಹತ್ತು ಘಂಟೆಯಾಗುತ್ತಿತ್ತು.
ನಾನೂ ಲೂಸಿ ಈ ಬೆಳಗ್ಗೆ ತಾನೆ ಆಕೆಯ ಆಫೀಸಿನಲ್ಲಿ `ಯೆಲ್ಲೋ ಪೇಜಸ್’ ತಿರುವಿಹಾಕಿ, ಲೋಕಲ್ ಪೇಪರ್ನಲ್ಲಿ ರಚನಾ ಮತ್ತು ಕಮೀಶನರ್ ಬಗ್ಗೆ ಓದಿ ತಿಳಿದು ಮತ್ತೂ ಕೆಲವು ಲೋಕಲ್ ಕಾಂಟ್ಯಾಕ್ಟ್ಸ್ ಅನ್ನುತ್ತಾರಲ್ಲ ಅವರೆಲ್ಲರಿಂದ ಸಂಗ್ರಹಿಸಿದ್ದ ವಿಷಯ ಇಷ್ಟು:
`ಈಗಾಕೆ ರಚನಾ ರಾಮನ್; ಇಲ್ಲಿನ ಪೊಲೀಸ್ ಕಮೀಶನರ್ ರಾಮನ್ರವರ ಪತ್ನಿ. ಊರಿನ ಮಾರ್ಕೆಟ್ ಬೀದಿಯಲ್ಲಿ ಬಣ್ಣದ ಪೆಯಿಂಟಿಂಗ್ಸ್ ಶಾಪ್ ಇಟ್ಟಿದ್ದಾರೆ. ಸ್ವತಃ ಕಲಾವಿದೆಯಂತೆ. ದಿನ ಬೆಳಗ್ಗೆ ಹತ್ತೂವರೆಯಿಂದ ಮಧ್ಯಾಹ್ನ ೪ರವರೆಗೆ ಅಲ್ಲಿರುತ್ತಾರಂತೆ. ಆಮೇಲೆ ತಮ್ಮ ವಯಸ್ಸಾದ ತಂದೆ ನಂಬೂದರಿಯನ್ನು ನೋಡಿಕೊಳ್ಳಲು ಹೊರಟುಹೋಗುತ್ತಾರಂತೆ. ಆಕೆಯ ಪತಿ ಕಮೀಶನರ್ ಮನೆಯೂ, ಪಕ್ಕದಲ್ಲೆ ಇದೆಯಂತೆ.
ಈ ನಂಬೂದರಿಗಳಿಗೆ ಮೃದುಲಾ ತಂದೆ-ತಾಯಿಯ ಬಗ್ಗೆ ಏನು ಅಥವಾ ಎಷ್ಟು ತಿಳಿದಿರಲು ಸಾಧ್ಯ ಎಂಬುದು ಈಗಲೇ ನನಗೆ ಗೊತ್ತಿರಲಿಲ್ಲ. ಸುಬ್ಬಮ್ಮನ ಪ್ರಕಾರ ಚೆನ್ನಾಗಿಯೆ ಗೊತ್ತಿರಬೇಕು!
ಈ `ರಚನಾ ಪೆಯಿಂಟಿಂಗ್ಸ್ ಶಾಪೀ’ ಎಂಬ ಅಂಗಡಿಯಿದ್ದಿದ್ದು ಜನನಿಬಿಡ ರಸ್ತೆಯ ಅಂಚಿನಲ್ಲಿ. ನಾನು ಅದರೆದುರು ಅದೃಷ್ಟವಶಾತ್ ಇದ್ದ ಕಾರ್ಪೊರೇಷನ್ ಕಾರ್ಪಾರ್ಕಿನಲ್ಲಿ ಅರ್ಧದಿನದ ಟಿಕೆಟ್ ತೆಗೆದುಕೊಂಡು ಬಂದು, ಪಕ್ಕದ ಡಬ್ಬಿ ಅಂಗಡಿಯಿಂದ ಫ್ಲಾಸ್ಕಿನಲ್ಲಿ ಕಾಫಿ, ಬಿಸ್ಕೇಟ್ಸ್ ಮತ್ತು ಕ್ಯಾಡ್ಬರಿ ಚಾಕಲೇಟ್ಸ್ ತಂದಿಟ್ಟುಕೊಂಡು ನನ್ನ ಕಾರನ್ನು ಅಂಗಡಿಯ ಮುಂಬಾಗಿಲಿಗೆ ಮುಖ ಮಾಡಿ ನಿಲ್ಲಿಸಿ ಕಾಯಲು ಆರಂಭಿಸಿದೆ.
ಕಾಯುವುದು ಎಂಬುದು ಪತ್ತೇದಾರನಿಗೆ ಬೇಕಾದ ಮುಖ್ಯ ಕಲೆ. ಕಾಫಿ-ತಿಂಡಿ ಜತೆಗಿದ್ದರೆ ಸುಮ್ಮನೆ ಕೂತು ಕಾಯುವುದನ್ನು ನನಗೆ ಯಾರೂ ಹೇಳಿಕೊಡಬೇಕಿಲ್ಲ. ನಿದ್ದೆ ಬರಬಾರದು ಅಷ್ಟೆ. ಬಿಸ್ಕೆಟ್ಸ್, ಚಾಕಲೇಟ್ಸ್ ಖಾಲಿ ಮಾಡುತ್ತಾ ಕುಳಿತೆ.
ಹತ್ತೂವರೆ ಹೊತ್ತಿಗೆ ಒಂದು ಮಾರುತಿ ಡಿಜೈರ್ ಕಾರ್ ಆಂಗಡಿಯ ಮುಂದೆಯೇ ನಿಂತಿತು. ಒಬ್ಬರು ಮಧ್ಯವಯಸ್ಕ ಮಹಿಳೆ ಆ ಕಾರಿನಿಂದ ಇಳಿದು ರೋಲಿಂಗ್ ಶಟರ್ಸ್ ಬಳಿಗೆ ಬಂದರು.
ನನಗೆ ಒಂದು ಕ್ಷಣ ಎದೆ ಬಡಿತ ನಿಂತಂತಾಯಿತು, ಚಾಕಲೇಟ್ ಗಂಟಲಲ್ಲಿ ಸಿಕ್ಕಿಕೊಂಡಂತಾಯ್ತು.
ಈ ರಚನಾ ನಮ್ಮ ಮೃದುಲಾರ ಪಡಿಯಚ್ಚು. ಮೃದುಲಾಗೆ ಇನ್ನೂ ೧೫-೨೦ ವರ್ಷವಾದರೆ ಥೇಟ್ ಹೇಗೆ ಇರಬಲ್ಲರು ಎಂದು ಸಾಕಾರವಾದಂತಿದೆ. ರಚನಾ-ನಂಬೂದರಿ-ರಾಮನ್ರವರ ಮುಖ ಚರ್ಯೆ, ವ್ಯಕ್ತಿತ್ಚ, ಮೈಕಟ್ಟು ನಡೆ ಎಲ್ಲವೂ ಮೃದುಲಾರನ್ನು ಹೋಲುತ್ತದೆ. ಅಂದರೆ ಈಕೆ ಮೃದುಲಾಗೆ ಅಕ್ಕನೇ ಇರಬೇಕು. ಇಲ್ಲದಿದ್ದರೆ ಅದೇ ರೂಪ-ಲಕ್ಷಣ ಹೇಗೆ ಇರಲು ಸಾಧ್ಯ?
ಇನ್ನು ಮಿಕ್ಕ ಮೂವರನ್ನು ವಿಚಾರಿಸುವ ಆವಶ್ಯಕತೆ ಇರಲಿಲ್ಲ. ಹಾಗಾಗಿ ತಕ್ಷಣ ಲೂಸಿಗೆ ಫೋನ್ ಮಾಡಿದೆ:
“ನಿನ್ನ ಕಡೆಯ ತನಿಖೆಯನ್ನು ನಿಲ್ಲಿಸಬಹುದು. ನನ್ನನ್ನು ಸರಿಯಾಗಿಯೇ ಗೈಡ್ ಮಾಡಿದೆ, ರಚನಾ ಬಗ್ಗೆ ಎಂದು ಇಲ್ಲಿ ಕಂಡಿದ್ದನ್ನು ವಿವರಿಸಿದೆ.
“ನೀವು ಒಬ್ಬರೇ ಹೋಗಿ ಆಕೆಯನ್ನು ಭೇಟಿ ಮಾಡಬೇಡಿ; ಒಪ್ಪದಿರಬಹುದು….. ನಾನು ಬಂದು ಇದು ಕಾನೂನಿನ ವಿಚಾರ ಎಂದೆಲ್ಲ ಅವರಿಗೆ ವಿವರಿಸಿದರೆ ಅವರು ಸಹಕರಿಸಬಹುದು. ಈಗಲೇ ಹೊರಟೆ” ಎಂದಳು.
ನಾನು ಹೇಳಲಿಲ್ಲವೆ, ದಕ್ಷ ಲಾಯರ್ ಇವಳು.
“ಹೌದು, ಇಬ್ಬರೂ ಆಕೆಯ ಜತೆಗಿನ ಸಂಭಾಷಣೆಗೆ ಪರಸ್ಪರ ಸಾಕ್ಷಿಯಾಗಿರಬಹುದು. ನಿನಗಾಗಿ ಇಲ್ಲೇ ಕಾಯುತ್ತಿದ್ದೇನೆ” ಎಂದು ಮಾತು ಮುಗಿಸಿ ಅವಳಿಗಾಗಿ ಕಾಯತೊಡಗಿದೆ.
ನಾನು ಯೋಚಿಸತೊಡಗಿದೆ ‘ನಂಬೂದರಿಯನ್ನು ನಂಬಬಾರದು’ ಎಂದಿದ್ದಳು ಆ ಸುಬ್ಬಮ್ಮ. ಆದರೇಕೆ ಈಕೆಯ ತಂದೆಯನ್ನು ನಾವು ನಂಬಬಾರದು? ಮೂವತ್ತೈದು ವರ್ಷದ ಕೆಳಗೆ ನಡೆದ ತನ್ನ ತಂಗಿಯ ಜನ್ಮ, ದತ್ತು ವಿಚಾರವೆಲ್ಲ ಈಕೆಗೆ ತಿಳಿದಿದೆಯೆ? ಮೃದುಲಾಗೆ ಬ್ಲ್ಯಾಕ್ಮೇಲ್ ಮಾಡಿದ ಜಾನಿ ಇವರನ್ನೂ ಕಂಡುಹಿಡಿದಿದ್ದರೆ? ಅವನು ಇವರಿಗೂ ಸಹಿತಾ?….
ಉಹುಂ, ಇದಕ್ಕೆಲ್ಲ ಸುಲಭ ಉತ್ತರವೇ ಇಲ್ಲದಾಗಿದೆ.
ಲೂಸಿ ದಡಬಡಾಯಿಸಿಕೊಂಡು ಡ್ರೈವ್ ಮಾಡುತ್ತಾ ಬಂದು ಕಾರನ್ನು `ಕ್ರೀಚ್’ ಎಂದು ನನ್ನ ಪಕ್ಕಕ್ಕೆ ನಿಲ್ಲಿಸಿದಳು. ನಾನೂ ಕಾರಿನಿಂದ ಹೊರಬಂದೆ.
“ಹೀಗೆ ಸ್ಪೀಡಾಗಿ ಬರುವಾಗ ಯಾವುದೇ ಕಾನೂನು ಮುರಿಯಲಿಲ್ಲ ತಾನೆ, ಕಾನೂನು ದೇವತೆ?” ಎಂದು ನಗಾಡಿದೆ.
“ಮುರಿಯಲಿಲ್ಲ, ಸ್ವಲ್ಪ ಬಗ್ಗಿಸಿದೆ” ಎಂದು ನಕ್ಕು ಹೊರಬಂದಳು.
ತಕ್ಷಣ ಇಬ್ಬರೂ ಆ ಪೆಯಿಂಟಿಂಗ್ಸ್ ಅಂಗಡಿಗೆ ಹೋದೆವು.
ಒಳಗೆ ಗಾಜಿನ ಗೋಡೆಗಳಿಗೆ, ಫ್ರೇಮ್ ಮಾಡಿದ ಹಲವಾರು ರಂಗು ರಂಗಿನ ಚಿತ್ರಗಳಿದ್ದವು.
ಮುಖ್ಯವಾಗಿ ಆ ಕರ್ಪೂರಿನದಿಯ ಬಳಿ ಸೂರ್ಯಾಸ್ತದ ದೃಶ್ಯಗಳು, ಅಲ್ಲೊಬ್ಬ ಕೊಳಲೂದುವ ಹುಡುಗ, ಇಬ್ಬರು ಪ್ರೇಮಿಗಳು ಅಕ್ಕಪಕ್ಕದಲ್ಲಿ ಕುಳಿತಿರುವುದು ಹೀಗೆ….. ಎಲ್ಲವನ್ನೂ ಈಕೆಯೆ ರಚಿಸಿರಬಹುದೆ?
“ಹಲೋ, ನಿಮಗೇನು ಬೇಕು?” ಎಂದವಳತ್ತ ತಿರುಗಿ ನೋಡಿದೆವು. ಲೂಸಿ ಮೊದಲ ಬಾರಿ ಆಕೆಯನ್ನು ನೋಡಿ ಅರೆ ಕ್ಷಣ ಮೂಕ ವಿಸ್ಮಿತಳಾದಳು. ನನಗಾದಂತೆಯೆ! ಮೃದುಲಾಗೆ ಅಷ್ಟೊಂದು ಹೋಲಿಕೆಯನ್ನು ಅವಳೂ ನಿರೀಕ್ಷಿಸಿರಲಿಲ್ಲ….
ಆದರೂ ಸಂಭಾಳಿಸಿಕೊಂಡು ಲೂಸಿ ನುಡಿದಳು:
“ನೋಡಿ, ಮಿಸೆಸ್ ರಾಮನ್. ನಾನೊಬ್ಬ ಸಿವಿಲ್ ಲಾಯರ್; ಲೂಸಿಯಾ ಅಂತ. ಇವರು ನಮ್ಮ ಪತ್ತೆದಾರರು ವಿಜಯ್. ಒಂದು ಹಳೇ ಜನ್ಮದತ್ತು ವಿಚಾರವಾಗಿ ನಿಮ್ಮನ್ನು ಮಾತನಾಡಿಸೋಣ ಎಂದು ನಾವು ಬಂದಿದ್ದೇವೆ. ಪೊಲೀಸ್ ಕಮೀಶನರ್ ಪತ್ನಿಯಾದ ನೀವು ಇಂಥದಕ್ಕೆ ಒಪ್ಪುತ್ತೀರಿ, ಸಹಕರಿಸುತ್ತೀರಿ ಎಂದು ನಂಬಿದ್ದೇವೆ.”
ಆಕೆ ಸ್ವಲ್ಪ ಗಾಬರಿಯಾದವಳಂತೆ “ಯಾರ ಜನ್ಮ,-ದತ್ತು? ನನ್ನ…..” ಎನ್ನುವಷ್ಟರಲ್ಲಿ, ಲೂಸಿ ಮತ್ತೆ ಸಾವಧಾನದಿಂದ ವಿವರಿಸಿದಳು:
“ನಾನು ವಿವರಿಸುತ್ತೇನೆ, ತಾಳಿ….. ಮೂವತ್ತೈದು ವರ್ಷದ ಹಿಂದೆ ನಿಮ್ಮ ತಾಯಿ ಒಂದು ಹೆಣ್ಣು ಮಗುವನ್ನು ಹೆತ್ತು, ಅದನ್ನು ಬೇರೆ ದಂಪತಿಗಳಿಗೆ ಸಾಕಿಕೊಳ್ಳಲು ದತ್ತು ಕೊಟ್ಟರೆಂದು ನಮಗೆ ತಿಳಿದು ಬಂದಿದೆ. ಇದು ನಿಜವೆ? ನಿಮಗೆ ಇದರ ಬಗ್ಗೆ ಏನು ಗೊತ್ತು?” ಎಂದಳು.
ಆಕೆಯ ಮುಖ ತಕ್ಷಣವೆ ವಿವರ್ಣವಾಗಿ ತಮ್ಮ ಎದೆಯನ್ನು ಗಾಬರಿಯಿಂದ ಒತ್ತಿಕೊಂಡರು. “ನಮ್ಮಮ್ಮ, ನನ್ನ ತಂಗಿ, ನನಗೇನೂ ಗೊತ್ತಿಲ್ಲ…” ಎಂದು ತೊದಲುತ್ತಾ ತಲೆಯಾಡಿಸಿ ಚಡಪಡಿಸಿದರು. ಯಾವುದೋ ಮರೆತು ಹೋದ ಭೂತ ಮತ್ತೆ ಪೀಡಿಸಲು ಬಂದಿತೆಂಬಂತೆ.
ನಾನು ವಿವರಿಸಲು ಮುಂದಾದೆ:
“ನೋಡಿ, ನಮ್ಮ ಕಕ್ಷಿದಾರಳು ಈಗ ಚಿತ್ರರಂಗ ಮತ್ತು ಚಿಕ್ಕತೆರೆಯ ಜನಪ್ರಿಯ ನಟಿ.
ಆಕೆ ತನ್ನ ಸಾಕು ತಂದೆ-ತಾಯಿಯಿಂದ ಈ ವಿಷಯ ಅರಿತರಂತೆ…. ಅವರಿಗೆ ತಮ್ಮ ಹೆತ್ತ ಅಮ್ಮ-ಅಪ್ಪನನ್ನು ನೋಡುವ ಬಯಕೆಯಾಗಿದೆ. ಆ ಕಾಲದಲ್ಲಿ ನಂಬೂದರಿ ಕುಟುಂಬದಲ್ಲೆ ಇಂಥ ಹೆಣ್ಣುಮಗು ಹುಟ್ಟಿತ್ತೆಂದು ಸೂಲಗಿತ್ತಿ ಸುಬ್ಬಮ್ಮ ಹೇಳಿದರು.”
ಹೊರಗೆ ಜೀಪೊಂದು ಭರ್ರನೆ ಬಂದು ನಿಲ್ಲುವ ಸದ್ದಾಗುತ್ತಿದೆ. ಪೊಲೀಸ್ ಜೀಪ್?
ನಮ್ಮನ್ನು ಗಾಬರಿ ಕಂಗಳಿಂದ ದಿಟ್ಟಿಸಿದರು ರಚನಾ. ಕೀಚಲು ದನಿಯಲ್ಲಿ ಬೆದರಿದ ಹರಿಣಿಯಂತಾದ ಆಕೆ, “ನಿಮ್ಮನ್ನು ಯಾರು ಕಳಿಸಿದರು? ಹೇಗೆ ಗೊತ್ತಾಯಿತು? ಎಂದೆಲ್ಲಾ ತೊದಲಲು ಶುರು ಮಾಡುತ್ತಿರುವಂತೆಯೇ, ದಬದಬನೆ ಕಾಲು ಹಾಕುತ್ತಾ ಪೊಲೀಸ್ ಸಮವಸ್ತ್ರ ಧರಿಸಿದ್ದ ಅಧಿಕಾರಿಯೊಬ್ಬರು ಒಳಗೆ ನುಗ್ಗಿದ್ದರು.
“ಅವರಿಗೇ ಏನೂ ಹೇಳಬೇಡ ರಚನಾ. ಕೀಪ್ ಕ್ವೈಟ್” ಎಂದು ಆತ ಗದರುತ್ತಾ ನಮ್ಮತ್ತ ತಿರುಗಿದರು.
ಆತನ ಶರ್ಟ್ ಮೇಲೆ `ರಾಮನ್, ಕಮಿಶನರ್ ಆಫ್ ಪೊಲೀಸ್’ ಬ್ಯಾಡ್ಜ್ ಇದೆ.
ಬಕ್ಕತಲೆ, ಸ್ವಲ್ಪ ಬೊಜ್ಜು, ಆಜಾನುಬಾಹು….. ಆದರೆ ಈಗೀಗ ನಿವೃತ್ತಿ ವಯಸ್ಸು ಹತ್ತಿರವಾಗಿದೆ. ಇಷ್ಟನ್ನು ಗ್ರಹಿಸಿದೆ ನನ್ನ ಅನುಭವೀ ಕಂಗಳಿದ.
ನಮ್ಮಿಬ್ಬರತ್ತ ದುರುಗುಟ್ಟಿ ನೋಡುತ್ತಾ ರಾಮನ್:
“ನಿಮಗೇನು ಅಧಿಕಾರವಿದೆ ಇಲ್ಲಿಗೆ ಬಂದು ನನ್ನ ಹೆಂಡತಿಯನ್ನು ಪ್ರಶ್ನಿಸಲು? ಯಾರು ಅನುಮತಿ ಕೊಟ್ಟರು? ಎಂದು ಗುಡುಗಿದರು.
ಮಧ್ಯೆ ಬಾಯಿ ಹಾಕಿದ ಲೂಸಿ, “ನಾವು ಕಾನೂನು ಅಧಿಕಾರಿಗಳು. ನಿಮಗೇ ಗೊತ್ತು ಕಮೀಶನರ್, ಸಿವಿಲ್ ಕೇಸಿನಲ್ಲಿ ವಿಚಾರಿಸಲು ಯಾರ ಅನುಮತಿಯು ಬೇಕಿಲ್ಲ” ಎಂದಾಗ, “ನಾನೂ ನಮ್ಮ ಲಾಯರನ್ನು ಕರೆಸುತ್ತೇನೆ, ಅವರೊಂದಿಗೇ ಮಾತಾಡಿ. ಈಗ ಹೊರಡಿ ಇಲ್ಲಿಂದ ಎಂದು ಗದರಿಸಿ, “ನೀನು ಮೊದಲು ಒಳಗೆ ಹೋಗು, ನಿನ್ನ ಜತೆ ಆಮೇಲೆ ಮಾತಾಡುತ್ತೇನೆ” ಎಂದು ಹೆಂಡತಿಯನ್ನು ಅಂಗಡಿಯ ಒಳಕೋಣೆಗೆ ಅಟ್ಟಿದರು.
ಇವರ ಕೋಪಕ್ಕೆ ಬೆದರಿ ಮುಖ ಬಿಳಿಚಿಕೊಂಡ ರಚನಾ ಒಳಗೋಡಿದರು. ಹಾಗೂ ಬೆದರದ ಲೂಸಿ, “ಇದರಲ್ಲಿ ಮುಚ್ಚಿಡುವುದು, ಬಚ್ಚಿಡುವುದು ಏನಿದೆ? ನಿಮಗೆ ಈ ಬಗ್ಗೆ ಗೊತ್ತಿದ್ದದ್ದನ್ನು ಹೇಳಿದರೆ ನಾವು ಹೋಗುತ್ತೇವೆ.”
“ನನ್ನ ಹೆಂಡತಿಗೆ ಇದರ ಬಗ್ಗೆ ಏನೂ ಗೊತ್ತಿಲ್ಲ, ನೀವಿನ್ನು ಹೊರಡಬಹುದು. ಔಟ್…..” ಮುಖ ರಂಗೇರಿ ಸಿಡುಕಿದರು ಕಮೀಶನರ್. ಕ್ಷಣಕ್ಷಣಕ್ಕೂ ಆತನ ಅಸಹನೆ ಕೋಪ ಮಿತಿ ಮೀರುತ್ತಿದೆ.
“ಬಾ, ಲೂಸಿ, ನಾವು ಆಮೇಲೆ ಬರೋಣ” ಎಂದು ನಾನು ಅವರೊಂದಿಗೆ ವಾದಮಾಡಲು ಸಿದ್ಧಳಾಗಿದ್ದವಳನ್ನು ಮೆತ್ತಗೆ ಕೈ ಹಿಡಿದು ಅಂಗಡಿಯ ಹೊರತಂದೆ. ‘ಬೀಸೋ ದೊಣ್ಣೆ ತಪ್ಪಿದರೆ…..’ ಎನ್ನುತ್ತಾರಲ್ಲ ಅದು ಈಗ ಅನ್ವಯವಾಗುವಂತಿತ್ತು.
“ಬಟ್, ವಿಜಯ್, ಇದಕ್ಕೆ ಅರ್ಥವೇನು? ಯಾರಾದರೂ ಮಾತನಾಡಿಸಿದರೆ ಹೀಗೆ ಅಟ್ಟುತ್ತಾರೆಯೆ? ಅಂತಹ ಯಾವುದೇ ಕಾನೂನಿಲ್ಲ” ಎಂದು ಮುಖವುಬ್ಬಿಸಿದಳು ಲೂಸಿ.
“ಕಾನೂನಿನ ಚೌಕಟ್ಟಿನಿಂದ ಹೊರಗೆ ಕೆಲಸ ಮಾಡುವವರಿಗೆ ಅಂತಹ ಉಲ್ಲಂಘನೆ ಸಾಧ್ಯವಿದೆ” ಎಂದು ಸಂತೈಸಿದೆ ನಾನು. “ಆದರೆ ಪೊಲೀಸ್ ಕಮೀಶನರ್ ಏನು ಬಚ್ಚಿಡುತ್ತಿದ್ದಾರೆ?”
ಕಾರಿನ ಬಳಿ ಬಂದು “ನೋಡು ಲೂಸಿ, ಇದ್ಯಾಕೋ ಕೈಮೀರುತ್ತಿದೆ. ನೀನು ತೆಪ್ಪಗೆ ಆಫೀಸಿಗೆ ಹೋಗು. ನಾನು ಸಂಜೆ ನಿನಗೆ ಸಿಗುತ್ತೇನೆ, ನನಗೀಗ ಕೆಲಸವಿದೆ….” ಎಂದು ಅವಳನ್ನು ಅಲ್ಲಿಂದ ಸಾಗಹಾಕಿದೆ.
ನಾನು ಮಾಡಿದ ಮುಂದಿನ ಕೆಲಸವೆಂದರೆ ರಚನಾಳ ಅಂಗಡಿಯ ಹಿತ್ತಲನ್ನು ಹುಡುಕಿದ್ದು! ಅತ್ತಿತ್ತ ನೋಡಿದೆ, ಯಾರೂ ನನ್ನತ್ತ ನೋಡುತ್ತಿಲ್ಲ. ಕಮಿಶನರ್ ಮತ್ತು ರಚನಾರ ಸಂವಾದವನ್ನು ಕದ್ದಾದರೂ ಕೇಳುವುದು ನನಗೆ ಬಹಳ ಅವಶ್ಯವಿತ್ತು. ತಡಮಾಡದೆ ಕಾಂಪೌಂಡ್ ಗೋಡೆಯನ್ನೂ ಹಾರಿ, ಅಂಗಡಿಯ ಹಿಂದಿನ ರೂಮಿನ ಕಿಟಕಿ ಬಳಿ ಮೆತ್ತಗೆ ಹೊಗಿ ನಿಂತೆ. ಸುತ್ತಲಿನ ಆಫೀಸುಗಳಿಂದ ಯಾರೂ ನನ್ನತ್ತ ನೋಡುತ್ತಿರಲಿಲ್ಲ ಸಧ್ಯ.
ಕಿಟಕಿಯಿಂದ ರಾಮನ್ ಅವರ ಏರಿದ ದನಿ ಸ್ಪಷ್ಟವಾಗಿ ಕೇಳಿಬರುತ್ತಿದೆ…..
“ನಾನು ಎಷ್ಟು ಸಲ ಹೇಳಿದ್ದೇನೆ. ಇಂಥವರು ಬರುತ್ತಲೇ ಇರುತ್ತಾರೆ. ನಮ್ಮ ಹಳೆ ವಿಷಯವನ್ನು ಕೆದಕಲು ನೀನು ಯಾರಿಗೂ ಆಸ್ಪದ ಕೊಡಬೇಡ ಅಂತ….
ರಚನಾ ಕ್ಷೀಣ ದನಿಯಲ್ಲಿ “ಇಲ್ಲ ರೀ, ನಾನು ಭಯ ಬಿದ್ದೆನೇ ವಿನಃ ಅವರಿಗೆ ಏನೂ ಹೇಳಲಿಲ್ಲ. ಆದರೆ ಈ ವಿಷಯವನ್ನು ಇನ್ನೆಷ್ಟು ವರ್ಷ ಬಚ್ಚಿಡಲಿ. ನನ್ನ ಮನಸ್ಸು ನನ್ನ ಮಗಳಿಗಾಗಿ ಕಾತರಿಸುತ್ತಿದೆ, ಅದು ನಿಮಗೇನು ಗೊತ್ತು?”
ನನಗೆ ಉಸಿರಾಡಲು ಕಷ್ಟವಾಗುತ್ತಿದೆ. ಯಾವ ಮಗಳು?
ರಾಮನ್ ದಬಾಯಿಸುತ್ತಿದ್ದಾರೆ: “ಯಾಕೆ, ಅವಳು ನನ್ನ ಮಗಳಲ್ಲ ಅಂತ ತಾನೆ? ನೀನೂ ಅವನೂ ಆ ಕಾಲದಲ್ಲಿ ತಪ್ಪು ಹೆಜ್ಜೆ ಇಡದಿದ್ದರೆ ನಾವೇಕೆ ಇಷ್ಟು ವರ್ಷ ಇಂಥ ವಿಷಯ ಗುಪ್ತವಾಗೇ ಇಟ್ಟುಕೊಳ್ಳಬೇಕಾಗಿತ್ತು? ನೋಡು ರಚನಾ, ಮೃದುಲಾ ಮಗಳಲ್ಲ ನಮ್ಮ ಪಾಲಿನ ಜನ್ಮ ಶನಿ. ನನಗೆ ನಿನಗೆ ಹುಟ್ಟಿದ ರಾಜನ್ ಮಾತ್ರವೇ ನಮ್ಮ ಸಂತಾನ. ನೀನು ಅವಳನ್ನು ಮರೆತು ಬಿಡು. ನೀನೂ ಅವನೂ, ಜತೆಗೆ ನಿಮ್ಮಪ್ಪ ಮಾಡಿದ ಆ ಕಾಲದ ತಪ್ಪುಗಳಿಗೆ ನಾನು ಜೀವನ ಪರ್ಯಂತ ಈ ಸತ್ಯ ಮುಚ್ಚಿಟ್ಟುಕೊಂಡು ಹೀಗೆ ಬದುಕಬೇಕಾಗಿದೆ. ಅಷ್ಟು ಸಾಲದೆ?”
ಓಹ್! ಅದಕ್ಕೇ ಮೃದುಲಾಗೂ ಈಕೆಗೂ ಅಷ್ಟೊಂದು ಹೋಲಿಕೆಯಿರುವುದು. ರಚಾನಾ ಮೃದುಲಾರ ತಾಯಿ! ಅಕ್ಕತಂಗಿಯರೆಂದು ನಾನೂ ಲೂಸಿ ಮೋಸ ಹೋದೆವಲ್ಲ!
ಆಗ ರಚನಾ ಅತ್ತು ಬಿಕ್ಕುತ್ತಿರುವ ಸದ್ದು ಕೇಳಿಸುತ್ತಿದೆ. “ನೋಡಿ, ಇನ್ನು ಆ ಜಾನಿ ಬೇರೆ ಬಂದು ಬಂದು ನಮ್ಮನ್ನು ಕಾಡುತ್ತಾನೆ. ಅವನನ್ನಾದರೂ ತಡೆಯಿರಿ ಅಂದರೆ ಅದೂ ನಿಮ್ಮ ಕೈಲಿ…..”
ರಾಮನ್ ಸಿಟ್ಟಿನಿಂದ ಕೂಗುತ್ತಾರೆ “ನನ್ನ ಕೈಲಾಗಲ್ಲ ಅಂತ ತಾನೇ?…. ಪೊಲೀಸ್ ಕಮೀಶನರ್ ಆಗಿಯೂ ನನ್ನ ಕೈ ಕಟ್ಟಿಹಾಕುವಂಥ ಘಟನೆ ಇದು. ಇಲ್ಲದಿದ್ದರೆ ಇಂಥಹ ಚಿಕ್ಕಪುಟ್ಟ ಕ್ರಿಮಿನಲ್ಸ್ಗಳನ್ನು ನಾನು ಎರಡು ನಿಮಿಷದಲ್ಲಿ ಚಿಟಿಕೆ ಹೊಡೆಯುವಷ್ಟರಲ್ಲಿ ಜೈಲಿಗೆ ತಳ್ತಾ ಇದ್ದೆ.
ರಚನಾ, “ಇಲ್ಲಿ ಇವರೂ ಕೇಳುತ್ತಿದ್ದಾರೆ….. ಅಲ್ಲಿ ಅವನೂ ೨೫-೩೦ ಸಾವಿರ ಅಂತ ಕೇಳುತ್ತಲೆ ಇದ್ದಾನೆ. ಯಾವಾಗ ನನ್ನ ವಿಷಯ ಇಷ್ಟು ವರ್ಷ ಗೋಪ್ಯವಾಗಿದ್ದಿದ್ದು, ಈಗ ಹೊರಗೆ ಬರುತ್ತೇನೋ ಅಂತ ಭಯವಾಗ್ತಿದೆ. ಹಾಗೇನಾದರೂ ಆದರೆ ನನಗೂ, ಅವಳಿಗೂ ಇಬ್ಬರಿಗೂ ಮಾನ ಹೋಗುತ್ತದೆ.”
ರಾಮನ್ ಗುಟುರು ಹಾಕುತ್ತಾರೆ: “ನಿನಗಲ್ಲ ಕಣೆ. ಮುಂದಿನ ವರ್ಷ ರಿಟೈರ್ ಆದ ಮೇಲೆ ಎಮ್ಎಲ್ಎ ಚುನಾವಣೆಗೆ ನಿಲ್ಲಬೇಕೂಂತ ಇದೀನಲ್ಲ ನಾನು….. ನನಗೆ. ನನಗೆ ಮಾನ ಮೂರು ಕಾಸಿಗೆ ಹೋಗುತ್ತೆ ಈ ಊರಲ್ಲಿ. ಅದಕ್ಕೆ ನಾನು ಬಿಡಲ್ಲ…..” ಎಂದವರು ಸ್ವಲ್ಪ ದನಿ ತಗ್ಗಿಸಿ:
“ರಚನಾ, ನೋಡು ಆ ಜಾನಿಗೆ ಹೇಗೋ ಬುದ್ಧಿಕಲಿಸುತ್ತೇನೆ, ಯೋಚಿಸಲು ಬಿಡು. ಅವನಿಂದಲೇ ಅನಿಸುತ್ತೆ ಈ ಲಾಯರ್, ಡಿಟೆಕ್ಟಿವ್ ಇಲ್ಲಿಯವರೆಗೂ ಹುಡುಕಿಕೊಂಡು ಬಂದಿದ್ದು. ಇರಲಿ, ನೀನು ಇದರಲ್ಲಿ ತಲೆಯೇ ಕೆಡಿಸಿಕೊಳ್ಳಬೇಡ. ಇಷ್ಟು ವರ್ಷ ಹೇಗಿದ್ದೆಯೊ, ಹಾಗೇ ಇದ್ದುಬಿಡು” ಎಂದು ಪತ್ನಿಗೆ ಸಾಂತ್ವನ ಹೇಳುತ್ತಿದ್ದಾರೆ.
“ಹೂಂ. ಸರಿ… ಎನ್ನುತ್ತಾ ಆಕೆ ಬಿಕ್ಕುವುದನ್ನು ನಿಲ್ಲಿಸುತ್ತಾ, ಸದ್ಯಕ್ಕೆ ಸಮಾಧಾನ ಪಟ್ಟುಕೊಳ್ಳುತ್ತಿರುವಂತಿದೆ.
“ಸರಿ, ನಾನಿನ್ನು ಅಪ್ಪನ್ನ ನೋಡಿಕೊಂಡು ಬರ್ತೀನಿ. ಅವರಿಗೆ ಔಷಧಿ, ಹಾಲು ಕೊಟ್ಟು ಬರ್ತೀನಿ ಎಂದರು ರಚನಾ ಒಂದು ನಿಮಿಷ ತಡೆದು.
ನನ್ನ ತಲೆಯಲ್ಲಿ ಜೇನುಗೂಡು ಕೆದರಿದಂತಿದೆ, ಮಿದುಳು ಗುಂಯ್ಗುಡುತ್ತಿದೆ. ಅಲ್ಲಿಂದ ಜಾಗ ಖಾಲಿ ಮಾಡುವುದು ಉಚಿತ ಎಂದರಿತ ನಾನು ಮತ್ತೆ ಕಾಂಪೌಂಡ್ ಗೋಡೆ ಹಾರಿ ಸುರಕ್ಷಿತವಾಗಿ ನನ್ನ ಕಾರ್ ತಲಪಿದೆ. ಲೂಸಿಗೆ ಈ ವಿಷಯ ಹೇಳೊಣವೆಂದು ಕಾತರದಿಂದ ಮೊಬೈಲ್ ಕೈಗೆತ್ತಿಕೊಳ್ಳುವಷ್ಟರಲ್ಲಿ, ಅತ್ತ ರಾಮನ್ ಅವರು ಜೀಪಿನಲ್ಲಿ ಹೋಗುವುದಕ್ಕೂ, ಇತ್ತ ಅಂಗಡಿಗೆ ಬೀಗ ಹಾಕಿಕೊಂಡು, ರಚನಾ ತಮ್ಮ ಕಾರಿನತ್ತ ಹೋಗುವುದಕ್ಕೂ ಸರಿಹೋಯಿತು.
ನಾನು ಬೇಗ ಯೋಚನೆ ಮಾಡಿದೆ: ತನ್ನ ವಯಸ್ಸಾದ ತಂದೆಯನ್ನು ನೋಡಲು ಹೊರಟಳಲ್ಲವೆ? ಈಕೆಯ ವಯಸ್ಸು ಈಗ ೫೦ರ ಆಸುಪಾಸಿನಲ್ಲಿರಬಹುದು. ಮೃದುಲಾಗೆ ಈಗೀಗ ೩೫ ವರ್ಷ ತುಂಬಿದ್ದೂ ಗಮನಿಸಿದರೆ, ರಚನಾಗೆ ೧೬ರ ವಯಸ್ಸಿನಲ್ಲೇ ಗರ್ಭಿಣಿಯಾಗಿರಲು ಸಾಧ್ಯ. ಸಾಮಾನ್ಯವಾಗಿ ನಂಬೂದರಿಗಳು ಬಹಳ ಆಚಾರವಂತರು ಎಂದು ಕೇಳಿದ್ದೆ. ಇದೊಂದು ಅಪ್ರಾಪ್ತ ವಯಸ್ಸಿನ ಯುವತಿಯು ಗರ್ಭಿಣಿಯಾದ ಕಥೆ ಎಂದಾಯಿತು. ಆ ಮೃದುಲಾರ ಜನ್ಮವಿಚಾರ ಏನೇ ನಡೆದಿದ್ದರೂ ಆ ಕಾಲದಲ್ಲಿ ಈಕೆಯ ಅಪ್ಪ ಅಮ್ಮನೇ ಆ ಮಗುವನ್ನು ದತ್ತು ಕೊಡಿಸಿ ಸಮಾಜದ ಕಂಗಳಿಂದ ಕುಲಗೌರವವನ್ನು ಕಾಪಾಡಿಕೊಂಡಿರಲು ಸಾಧ್ಯ.
ಸರಿ, ನಾನು ರಚನಾಳನ್ನು ಹಿಂಬಾಲಿಸುತ್ತಾ ಹೋಗಿ, ಆಕೆಯ ತಂದೆಯ ಮನೆಯನ್ನೂ ಒಮ್ಮೆ ನೋಡಿ ಬಿಟ್ಟರೆ ವಾಸಿ ಎಂದೆನಿಸಿ ನನ್ನ ಕಾರಿನ ಚಾವಿ ತಿರುಗಿಸಿ ರೆಡಿಯಾದೆ. ರಚನಾ ತಮ್ಮ ಡಿಝೈರ್ ಕಾರನ್ನು ನಡೆಸಲಾರಂಭಿಸಿದಾಗ ನಿಧಾನವಾಗಿ ನಾನೂ ಆ ಕಾರಿನ ಹಿಂದೆ ನಡೆಸಿದೆ.
ಊರಿನ ಜನಜಂಗುಳಿಯಿದ್ದ ಮುಖ್ಯರಸ್ತೆ ಬಿಟ್ಟು ಊರಾಚೆಯ ನದಿ ಪಕ್ಕದ ಕಾಲೋನಿಗಳ ಧೂಳಿನ ರಸ್ತೆಗಳಲ್ಲಿ ಸಾಗುತ್ತಿದ್ದೇವೆ. ಈ ರಸ್ತೆಗಳಲ್ಲಿ ನಾನು ನಿರೀಕ್ಷಿಸುವುದಕ್ಕಿಂತಾ ಕಡಮೆ ಜನರಿದ್ದುದರಿಂದ ಆಕೆಗೆ ಅನುಮಾನ ಬರದಂತೆ ಕಾರುಗಳ ನಡುವೆ ಅಂತರವನ್ನು ಕಾಪಾಡಿಕೊಂಡಿದ್ದೇನೆ.
ನದಿಗೆ ಅನತಿದೂರದ ಚಿಕ್ಕ ಕೆಂಪು ಹಳದಿ ಬಣ್ಣ ಬಳಿದ ಗೋಡೆಗಳ ಹಳೆ ಬಂಗಲೆಯ ಮುಂದೆ ಕಾರು ನಿಲ್ಲುತ್ತಿದೆ. ಮನೆಯ ಆವರಣದಲ್ಲಿ ಗಿಡ-ಪೊದೆಗಳು ಸಿಕ್ಕಾಪಟ್ಟೆ ಬೆಳೆದಿದೆ. ಖಂಡಿತ ಇದಕ್ಕೆ ಮಾಲಿಯಂತೂ ಇಲ್ಲ. ಈಕೆಯೇ ಇಳಿದು ಗೇಟ್ ತೆಗೆದು ಮತ್ತೆ ಕಾರನ್ನು ಒಳನಡೆಸುತ್ತಿದ್ದಾರೆ. ಅಲ್ಲಿ ಮತ್ಯಾರೂ ಇಲ್ಲ, ಹಾಗಾದರೆ….
ರಚನಾರ ಕಾರ್ ಮನೆಯ ಪೋರ್ಚ್ನಲ್ಲಿ ನಿಲ್ಲಿಸುವುದನ್ನು ನೋಡುತ್ತಾ ನಾನು ಆ ಬಂಗಲೆಯನ್ನು ದಾಟಿ ಮುಂದಿನ ರಸ್ತೆಯ ನಿರ್ಜನ ಮೂಲೆಗೆ ಹೋಗಿ ಕಾರ್ ನಿಲ್ಲಿಸಿದೆ. ವಾಪಸ್ ಆಕೆಯನ್ನು ಫಾಲೋ ಮಾಡಲು ಸುಲಭವಾಗುವಂತೆ. ನಾನು ಕಾರಿನಲ್ಲೇ ಕುಳಿತರೂ ಆ ಮನೆಯ ಮುಂಬಾಗಿಲು ಕಾಣಿಸುತ್ತಿದೆ. ಹೊರಗಿನ ಗೇಟ್ ಪಕ್ಕದ ಮಾಸಿಹೋದ ನಾಮ ಫಲಕದಲ್ಲಿ `ಮಾಧವನ್ ನಂಬೂದರಿ, ರಿಟೈರ್ಡ್ ಡಿಸ್ಟ್ರಿಕ್ಟ್ ಕಲೆಕ್ಟರ್’ ಎಂದಿದೆ.
ರಚನಾ ಒಳಗೆ ಹೋಗಿದ್ದಾರೆ. ಯಾವಾಗ ಹೊರ ಬರುತ್ತಾರೋ ಎಂದು ಆಕಳಿಸಿದ ನಾನು ಮಿಕ್ಕ ಬಿಸ್ಕೆಟ್ಸ್ ಸೇವಿಸಿ ಫ್ಲಾಸ್ಕ್ನಲ್ಲಿದ ಕಾಫಿಯನ್ನು ಕುಡಿಯಲಾರಂಭಿಸಿದೆ. ಓಹ್, ನಾನು ಲೂಸಿಗೆ ಫೋನ್ ಮಾಡಿಯೇ ಇಲ್ಲ ಎನಿಸಿದರೂ, ಇರಲಿ, ಇಲ್ಲಿಯ ವಿಷಯವನ್ನೂ ಅರಿತು ಸಂಜೆ ಒಟ್ಟಿಗೇ ವರದಿ ಮಾಡಿದರಾಯಿತು ಎಂದು ಸುಮ್ಮನಾದೆ.
ಅರ್ಧಗಂಟೆ ನಂತರವೇ ಅಲ್ಲಿ ಸ್ವಲ್ಪ ಚಟುವಟಿಕೆ ಶುರುವಾದದ್ದು. ಮೊದಲು ಬಾಗಿಲು ಹಾರು ಹೊಡೆದು ರಚನಾ ಹೊರಬಂದರು. ಆಕೆಯ ಮುಖಚರ್ಯೆ, ನಡೆಯುವ ರೀತಿ ನೋಡಿದರೆ ಸ್ವಲ್ಪ ಉದ್ವಿಗ್ನಗೊಂಡಂತಿದೆ. ಹಿಂದಿನಿಂದ ಸಣ್ಣಗಿನ, ಬೆನ್ನು ಬಾಗಿದಂತ ವೃದ್ಧರೊಬ್ಬರು ಆಕೆಯನ್ನು ಮಾತನಾಡಿಸುತ್ತಲೇ ಬರುತ್ತಿದ್ದಾರೆ. ‘ನಿಲ್ಲು’ ಎಂದು ಹೇಳುತ್ತಿರುವಂತಿದೆ. ನಾನು ಬಹಳ ದೂರವಿರುವುದರಿಂದ ಏನೂ ಕೇಳಿಸುತ್ತಿಲ್ಲ.
ಹಳೆಯ ಜೀನ್ಸ್ ಮತ್ತು ಜ್ಯಾಕೆಟ್ ಧರಿಸಿ ವುಲ್ಲನ್ ಮಫ್ಲರ್ ಕಟ್ಟಿದ್ದ ನಂಬೂದರಿಯವರು ವಯೋವೃದ್ಧರು ಎಂಬುದು ನಿಶ್ಚಿತ. ರಚನಾ ಕಾರಿಗೆ ಹತ್ತುವುದನ್ನು ತಡೆಯುತ್ತಾ, ಆಕೆಗೆ ಏನೋ ಸಮಜಾಯಿಷಿ ಮಾಡಹತ್ತಿದ್ದಾರೆ ನಂಬೂದರಿ. ರಚನಾ ಕುಪಿತಳಾಗಿ ನಿರಾಕರಿಸುತ್ತಿದ್ದರೆ, ಆತ ಇನ್ನೂ ಒತ್ತಾಯಿಸುತ್ತಾ, ಆಕೆಯ ಬೆನ್ನಮೇಲೆ ಕೈಯಿಟ್ಟು ಏನೋ ವಿವರಿಸುತ್ತಿದ್ದಾರೆ. ಆಗ ರಚನಾ ಏಕ್ದಂ ಅಪ್ಪನ ಕೈನೂಕಿ, ಸಿಟ್ಟಿನಿಂದ ಕಾರ್ ಹತ್ತಿಯೇ ಬಿಡುತ್ತಾರೆ. ಮುದುಕ ನಂಬೂದರಿಯವರ ಮುಖ ದುಃಖ-ಅವಮಾನದಿಂದ ಕೆಂಪಾಗಿದೆ. ಅವರು ಆಕೆಯ ಕಾರ್ ಹೋಗುವುದನ್ನೇ ದಿಟ್ಟಿಸಿನೋಡಿ ಮನೆಯೊಳಕ್ಕೆ ಹೋದರು. ನಾನು ಕಾಯುತ್ತಲೆ ಇದ್ದೇನೆ. ಆತ ಇನ್ನೈದು ನಿಮಿಷಕ್ಕೆ ಒಂದು ಆಲ್ಸೇಷಿಯನ್ ನಾಯಿಯೊಂದಿಗೆ ಹೊರಬಂದರು. ನದಿಯ ಬದಿಗೆ ವಾಕಿಂಗ್ ಹೊರಟರು. ಇನ್ನು ನನಗೆ ಅಲ್ಲಿರಲು ಯಾವುದೇ ಕಾರಣವಿರಲಿಲ್ಲಾ ಎನಿಸಿತು.
ನಾನೂ ಲೂಸಿಯ ಆಫೀಸಿನತ್ತ ಕಾರ್ ತಿರುಗಿಸಿ ಹೊರಟೆ. ರಸ್ತೆಯಲ್ಲಿ ಹೋಗುವಾಗ ಯೋಚಿಸುತ್ತಿದ್ದೇನೆ….. (ಸಶೇಷ)
Comments are closed.