ಅಂತರ್ಜಲವನ್ನು ಹೀರಿ ಮಾರಾಟಮಾಡುವ ಬಾಟಲುನೀರು ಪೂರೈಕೆ ಉದ್ಯಮಗಳು ದೇಶದ ಅಂತರ್ಜಲವನ್ನು ಯಾವ ರೀತಿಯಲ್ಲಿ ಆಪೋಶಿಸುತ್ತಿವೆಯೆಂದರೆ ಅತ್ಯಂತ ತ್ವರಿತಗತಿಯಲ್ಲಿ ಅವುಗಳ ಖಜಾನೆ ತುಂಬಿ ತುಳುಕುತ್ತವೆ’
ಇತ್ತೀಚೆಗೆ, ತೀವ್ರ ನೀರಿನ ಬರ ಎದುರಿಸುತ್ತಿರುವ ಮಹಾರಾಷ್ಟ್ರದ ಲಾಥೂರ್ ಜಿಲ್ಲೆಗೆ ಅರ್ಧ ದಶಲಕ್ಷ ಲೀಟರ್ (1,32,000 ಗ್ಯಾಲನ್) ನೀರನ್ನು ‘ನೀರಿನ ರೈಲು ಮೂಲಕ ಸರ್ಕಾರ ಕಳಿಸಿಕೊಟ್ಟಾಗ ಅದೊಂದು ಚರಿತ್ರಾರ್ಹ ಕ್ರಮವೆಂಬಂತೆ ನಮ್ಮ ಮಾಧ್ಯಮಗಳು ಆದ್ಯತೆಯಿಂದ ವರದಿಮಾಡಿದವು. ಖೇದದ ಸಂಗತಿಯೆಂದರೆ, ಅದೇ ವೇಳೆಗೆ ಬಾಟಲುನೀರು ಹಾಗೂ ಪಾನೀಯ ಪೂರೈಸುವ ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳು ದೇಶದ ಅಂತರ್ಜಲಸಂಪತ್ತನ್ನು ಕೊಳ್ಳೆಹೊಡೆದು ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿರುವುದು ಹಾಗೂ ದೇಶದ ಅಂತರ್ಜಲಮೂಲ ಬರಿದಾಗಿ ನಮ್ಮದೇ ಮುಂದಿನ ಪೀಳಿಗೆ ಅಳಿವು-ಉಳಿವಿನಂಥ ಘೋರ ಸಂಕಷ್ಟಕ್ಕೆ ತುತ್ತಾಗಲಿರುವುದು ಯಾವ ಮಹತ್ತ್ವವನ್ನೂ ಪಡೆಯಲಿಲ್ಲ.
ಲೋಕಸಭೆಯಲ್ಲಿ ಸರಕಾರದ ಹೇಳಿಕೆ ಪ್ರಕಾರ, ಪ್ರಸಕ್ತ ವರ್ಷ ದೇಶದ 313 ಜಿಲ್ಲೆಗಳ 1,58,205 ಗ್ರಾಮಗಳ 4.44,280 ಜನವಸತಿ ಪ್ರದೇಶದ 33 ಕೋಟಿಗೂ ಹೆಚ್ಚು ಜನರು ತೀವ್ರ ಬರಗಾಲಕ್ಕೆ ತುತ್ತಾಗಿ ಪರಿತಪಿಸುತ್ತಿದ್ದಾರೆ. ನೀರಿನ ಕೊರತೆಯಿಂದ ದೇಶದಲ್ಲಿ, ರೈತಾಪಿ ಜನರಲ್ಲಿ ಹಾಹಾಕಾರವೆದ್ದಿದೆ. ಕೈಗೆ ಬರಬೇಕಾದ ಬೆಳೆಗಳು ಸುಟ್ಟು ಕರಕಲಾಗಿವೆ. ವಿಜ್ಞಾನಿಗಳ, ತಜ್ಞರ, ಪರಿಸರ ಹೋರಾಟಗಾರರ ಎಚ್ಚರಿಕೆಯ ಹೊರತಾಗಿಯೂ, ಶೋಷಣೆಯ ಕಾರಣದಿಂದಾಗಿ, ದೇಶದ ಅಂತರ್ಜಲ ಮಟ್ಟ ವಿಶ್ವದಲ್ಲೇ ಇನ್ನಿಲ್ಲದಂಥ ತೀವ್ರಗತಿಯಿಂದ ಕುಸಿಯುತ್ತಿದೆ. ಇದೇ ರೀತಿ ಅಂತರ್ಜಲ ನಾಶ ಮುಂದುವರಿದದ್ದೇ ಆದರೆ, ಮುಂದೆ ಭೂಗರ್ಭದಲ್ಲಿ ಹನಿ ನೀರಿಗೂ ತತ್ವಾರವಾಗುವುದು ನಿಸ್ಸಂಶಯ.
ಇಂಥ ವಿಷಮಪರಿಸ್ಥಿತಿಯಲ್ಲೂ ಪೆಪ್ಸಿಕೋ, ಕೋಕಾ ಕೋಲಾ, ಧಾರಿವಾಲ್, ಪಾರ್ಲೆ, ಬಿಸ್ಲೆರಿ ಮುಂತಾದ ಬಾಟಲು ನೀರು ಹಾಗೂ ಪಾನೀಯ ಪೂರೈಸುವ ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳು ಲಾಭದ ಆಸೆಗಾಗಿ ದೇಶದ ಅಂತರ್ಜಲವನ್ನು ಎಗ್ಗಿಲ್ಲದೆ ಕೊಳ್ಳೆಹೊಡೆಯುತ್ತಿರುವುದು ದಾರುಣ ಸಂಗತಿ.
ಆರೋಗ್ಯದ ಕಾಳಜಿ, ಪ್ರವಾಸೋದ್ಯಮದ ತೇಜಿ ಮತ್ತು ಬಾಟಲು ನೀರಿನ ಸುಲಭ ಲಭ್ಯತೆಯ ಕಾರಣದಿಂದಾಗಿ ಭಾರತದಲ್ಲಿ ಬಾಟಲುನೀರಿನ ಬಿಕರಿ ವೃದ್ಧಿಯನ್ನು ಸಾಧಿಸಿದೆ. ೨೦೧೩ರ ವೇಳೆಗೆ ಭಾರತದ ಬಾಟಲುನೀರಿನ ಉದ್ಯಮದ ವಹಿವಾಟು ರೂ. 60 ಲಕ್ಷ ಕೋಟಿಯನ್ನು ಮೀರಿದೆ. ಇದರಲ್ಲಿ 67%ದಷ್ಟು ಸಿಂಹಪಾಲು ಮೇಲೆ ಹೆಸರಿಸಿದ ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳದ್ದೇ ಎಂಬುದು ಗಮನಾರ್ಹ. ಈ ಮಾರುಕಟ್ಟೆ ವಹಿವಾಟು, ಶೇಕಡ 22ರ ಸಂಯುಕ್ತ ವಾರ್ಷಿಕ ವೃದ್ಧಿದರ(ಸಿಎಜಿ ವರದಿ)ದ ಆಧಾರದಲ್ಲಿ,2008ರ ವೇಳೆಗೆ ರೂ. 160 ಲಕ್ಷ ಕೋಟಿಯನ್ನು ತಲಪಬಹುದು ಎಂದು ಪುಣೆ ಮೂಲದ ಶೋಧಸಂಸ್ಥೆ ‘ವಾಲ್ಯೂ ನೋಟ್ಸ್’ನ ಶಿಲ್ಪಾ ಎಗುವಂಟಿ ಹೇಳುತ್ತಾರೆ.
1990ರಲ್ಲಿ ’ಬಿಸ್ಲೆರಿ’ ಕಂಪೆನಿ ಕುಡಿಯುವ ನೀರನ್ನು ಬಾಟಲಿಗಳಲ್ಲಿ ತುಂಬಿ ಬಿಕರಿಗೆ ಶುರುವಿಟ್ಟ ನಂತರ ಭಾರತದಲ್ಲಿ ಬಾಟಲು ನೀರಿನ ಉದ್ದಿಮೆ ತೀವ್ರಗತಿಯ ಬೆಳವಣಿಗೆಯನ್ನು ಕಂಡಿದೆ. ಈ ಕಂಪೆನಿಗಳು ಜಾಹೀರಾತುಗಳ ಮೂಲಕ ’ಬಾಟಲುನೀರು ಪರಿಶುದ್ಧ ಹಾಗೂ ಆರೋಗ್ಯಕರ’ – ಎಂದು ಜನರನ್ನು ಮರುಳುಮಾಡಿದ್ದು ಈ ಚಿಂತನೀಯ ಬೆಳವಣಿಗೆಗೆ ಕಾರಣವಾಯಿತು ಹಾಗೂ ಅದಕ್ಕೆ ತೇಜಿಯನ್ನೂ ನೀಡಿತು.
ಪುನಶ್ಚೇತನ ಷರತ್ತನ್ನು ಅಲಕ್ಷಿಸಿದ ಕಂಪೆನಿಗಳು
ಬಾಟಲುನೀರು ಹಾಗೂ ಪಾನೀಯ ಪೂರೈಸುವ ಕಂಪೆನಿಗಳಿಗೆ ಪರವಾನಗಿ ನೀಡುವಾಗಲೇ ಸರ್ಕಾರ ಅವುಗಳಿಗೆ ವಾರ್ಷಿಕ ಪುನಶ್ಚೇತನಗೊಳಿಸುವ ಮತ್ತು ತ್ಯಾಜ್ಯನೀರಿನ ಪುನರ್ಬಳಕೆ ಮಾಡುವ ಕುರಿತು ಷರತ್ತನ್ನೂ ವಿಧಿಸಿರುತ್ತದೆ. ಆದರೆ ಕೇಂದ್ರೀಯ ಅಂತರ್ಜಲ ಪ್ರಾಧಿಕಾರ – ಸಿಜಿಡಬ್ಲ್ಯುಎ ವರದಿಯನ್ನು ಆಧರಿಸಿ ಭಾರತೀಯ ಅಂತರ್ಜಾಲ ಹಾಗೂ ಟೆಲಿವಿ?ನ್ ಸುದ್ದಿ ಸಂಸ್ಥೆ ’ಕೋಬ್ರಾಪೋಸ್ಟ್’ ಬಹಿರಂಗಪಡಿಸುವಂತೆ, ಪರವಾನಗಿ ಪಡೆದ ಒಟ್ಟು 144 ಬಹುರಾಷ್ಟ್ರೀಯ ಹಾಗೂ ದೇಶೀ ಕಂಪೆನಿಗಳಲ್ಲಿ ಕೇವಲ 24 ಸಂಸ್ಥೆಗಳನ್ನು ಹೊರತುಪಡಿಸಿದರೆ, ಉಳಿದ ಯಾವೊಂದು ಕಂಪೆನಿಯೂ ಒಂದು ಹನಿ ನೀರನ್ನೂ ಮರುಪೂರೈಸಿದ್ದಿಲ್ಲ.
‘ಅಂತರ್ಜಲವನ್ನು ಹೀರಿ ಮಾರಾಟಮಾಡುವ ಈ ಬಾಟಲುನೀರು ಪೂರೈಕೆ ಉದ್ಯಮಗಳು ದೇಶದ ಅಂತರ್ಜಲವನ್ನು ಯಾವ ರೀತಿಯಲ್ಲಿ ಆಪೋಶಿಸುತ್ತಿವೆಯೆಂದರೆ ಅತ್ಯಂತ ತ್ವರಿತಗತಿಯಲ್ಲಿ ಅವುಗಳ ಖಜಾನೆ ತುಂಬಿ ತುಳುಕುತ್ತವೆ’ – ಎಂದು ಕೋಬ್ರಾಪೋಸ್ಟ್ನ ವರದಿಗಾರ ಮಹಮ್ಮದ್ ಹಿಜ್ಬುಲ್ಲಾ ವರದಿಮಾಡಿದ್ದಾರೆ. ಅಮೆರಿಕಾದ ಸಿದ್ಧಾಹಾರ ಮತ್ತು ಪಾನೀಯ ಕಂಪೆನಿಗಳ ದೈತ್ಯ ಪೆಪ್ಸಿಕೋ ಒಂದನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಭಾರತೀಯ ಲಘುಪಾನೀಯ ಹಾಗೂ ಬಾಟಲುನೀರು ಪೂರೈಕೆ ಮಾರುಕಟ್ಟೆಯಲ್ಲಿ ಅದು ಬಲಿಷ್ಠವಾದ ಏಕಸ್ವಾಮ್ಯವನ್ನು ಹೊಂದಿದೆ. ತನ್ನ ಜನಪ್ರಿಯ ಬ್ರಾಂಡ್ಗಳಾದ ಸ್ಲೈಸ್, ಮಿರಿಂಡಾ, ಪೆಪ್ಸಿ, ಮೌಂಟೆನ್ ಡ್ಯೂ, ಸೆವೆನ್-ಅಪ್, ಟ್ರೋಪಿಕಾನಾ, ನಿಂಬೂಜ್ ಮತ್ತು ಡ್ಯೂಕ್ಸ್ ಹಾಗೂ ಅಕ್ವಾಫಿನಾಕ್ಕಾಗಿ ಪೆಪ್ಸಿಕೋ ಪ್ರತಿವರ್ಷ 6,48,000 ಕ್ಯೂಬಿಕ್ ಮೀಟರ್ ಗಳಷ್ಟು ಅಂತರ್ಜಲವನ್ನು ಆಪೋಶನಗೈಯುತ್ತಿದೆ. ಪರಿಹಾರವಾಗಿ ಅದು ಪ್ರತಿವರ್ಷ ಕನಿಷ್ಠ 83,778 ಕ್ಯೂಬಿಕ್ ಮೀಟರ್ ಗಳಷ್ಟು ನೀರನ್ನು ಪುನಶ್ಚೇತನಗೊಳಿಸಬೇಕಿದ್ದರೂ ಇದುವರೆಗೆ ಹನಿ ನೀರನ್ನೂ ಮರುಪೂರೈಸಿದ್ದಿಲ್ಲ.
ದೇಶದಲ್ಲಿ ಪೆಪ್ಸಿಕೋದ ಎರಡು ಮಾರಾಟ ವಿಭಾಗಗಳಲ್ಲಿ ಒಂದು – ’ನೆಕ್ಟರ್ ಬೆವರೇಜಸ್’ ಕರ್ನಾಟಕದಲ್ಲಿ ಧಾರವಾಡದ ಹಳ್ಳಿ ಸೈದಾಪುರದಲ್ಲಿದೆ. ಇನ್ನೊಂದು – ’ವಿಶಾಲ್ ಬೆವರೇಜಸ್’ ಉತ್ತರಪ್ರದೇಶದಲ್ಲಿ ನೋಯ್ಡಾ ಪಕ್ಕದ ಹಳ್ಳಿ ನಿಥಾರಿಯಲ್ಲಿದೆ. ಎರಡೂ ಕಡೆ ಬಾಟಲು ತುಂಬುವ ಘಟಕಗಳು ಇವೆ. ಇವುಗಳಲ್ಲಿ ಸೈದಾಪುರದ ’ನೆಕ್ಟರ್ ಬೆವರೇಜಸ್’ 13,800 ಕ್ಯೂಬಿಕ್ ಮೀಟರ್ಗಳು ಮತ್ತು ನಿಥಾರಿಯ ’ವಿಶಾಲ್ ಬೆವರೇಜಸ್’ 7200 ಕ್ಯೂಬಿಕ್ ಮೀಟರ್ಗಳ? ಅಂತರ್ಜಲವನ್ನು ಪ್ರತಿ ವರ್ಷ ಹೀರಿ ಮುಗಿಸುತ್ತವೆ. ಆದರೆ ಪುನಶ್ಚೇತನ ಕಾರ್ಯದ ಮೂಲಕ ಒಂದು ಹನಿಯನ್ನೂ ಮರುಪೂರೈಸುವ ಸಾಹಸಕ್ಕೆ ಈ ಎರಡೂ ಘಟಕಗಳು ಪ್ರಯತ್ನಿಸಿದಂತಿಲ್ಲ. ಇದೇ ಸಂದರ್ಭದಲ್ಲಿ ’ಜಲಮೂಲ ಪುನಶ್ಚೇತನಕ್ಕಾಗಿ ಏನೇನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬ ವಿವರಗಳನ್ನು ತಿಳಿಯುವುದಕ್ಕಾಗಿ ನಾವು ಪೆಪ್ಸಿಕೋಗೆ ನೀಡಿದ ಪ್ರಶ್ನಾವಳಿಗೆ ಕಂಪೆನಿಯಿಂದ ಇನ್ನೂ ಉತ್ತರವೇ ಬಂದಿಲ್ಲ’ – ಎಂದು ಕೋಬ್ರಾಪೋಸ್ಟ್ ಹೇಳಿಕೊಂಡಿದೆ.
ದೇಶದಾದ್ಯಂತ ಅಂತರ್ಜಲ ಮೂಲಗಳ ನಿರ್ವಹಣೆ ಮತ್ತು ಅಂತರ್ಜಲ ಬಳಕೆ ಹಾಗೂ ಪುನಶ್ಚೇತನ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿರುವ, ಜಲಸಂಪನ್ಮೂಲ ಸಚಿವಾಲಯದ ಅಧೀನದಲ್ಲಿರುವ, ಕೇಂದ್ರೀಯ ಅಂತರ್ಜಲ ಪ್ರಾಧಿಕಾರ – ಸಿಜಿಡಬ್ಲ್ಯುಎ ಮೇಲೆ ಹೇಳಿದ ೧೪೪ ಕಂಪೆನಿಗಳಿಗೆ ದೇಶದಲ್ಲಿ ಅಂತರ್ಜಲವನ್ನು ಮೇಲೆತ್ತಿ ಮಾರಾಟಮಾಡಲು ಅಗತ್ಯವಾದ ನಿರಾಕ್ಷೇಪಣಾ ಪತ್ರ(ಎನ್ಓಸಿ)ವನ್ನು ನೀಡಿದೆ. ಈ ಕಂಪೆನಿಗಳು ಕರ್ನಾಟಕ ಸೇರಿದಂತೆ ಹರ್ಯಾಣಾ, ಪಂಜಾಬ್, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾ?, ಛತ್ತೀಸ್ಗಢ, ಒಡಿಸ್ಸಾ, ಝಾರ್ಖಂಡ್, ಉತ್ತರಾಖಂಡ, ಅಸ್ಸಾಮ್, ಬಿಹಾರ್, ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯ, ಅರುಣಾಚಲಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲಿ ಬಾಟಲಿ ತುಂಬುವ ಘಟಕಗಳನ್ನು ನಡೆಸುತ್ತಿವೆ. ಇವುಗಳಲ್ಲಿ ೨೯ ಘಟಕಗಳು ಅಸ್ಸಾಮ್ ರಾಜ್ಯವೊಂದರಲ್ಲೇ ಇವೆ. ಇನ್ನು ಉತ್ತರಪ್ರದೇಶದಲ್ಲಿ ೨೮, ಆಂಧ್ರಪ್ರದೇಶದಲ್ಲಿ ೧೩, ಹರ್ಯಾಣಾದಲ್ಲಿ ೧೦ ಮತ್ತು ಮಹಾರಾ?ದಲ್ಲಿ ೮ ಇವೆ. ಒಟ್ಟು ೧೪೪ ಕಂಪೆನಿಗಳ ಪೈಕಿ ಕೇವಲ ೨೪ ಕಂಪೆನಿಗಳು ಮಾತ್ರ ತಾವು ಅಂತರ್ಜಲ ಪುನಶ್ಚೇತನಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿಕೊಂಡಿವೆ.
ಕೊಳ್ಳೆಯ ಪರಿಣಾಮಗಳು
ಕಂಪೆನಿಗಳು ಎಗ್ಗಿಲ್ಲದೆ ನಡೆಸುತ್ತಿರುವ ಇಂಥ ಅಂತರ್ಜಲ ಕೊಳ್ಳೆಯ ದು?ರಿಣಾಮಗಳು ಸ್ಥಾಪಿತ ಬಾಟಲಿ ತುಂಬುವ ಘಟಕಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗಾಗಲೇ ಕಂಡಿವೆ. ಪೆಪ್ಸಿಕೋದ ’ವಿಶಾಲ್ ಬೆವರೇಜಸ್’ ಇರುವ ನೋಯ್ಡಾದ ನಿಥಾರಿಯಲ್ಲಿ ಅಂತರ್ಜಲ ಮಟ್ಟ ೧೮೦ ಅಡಿಗೂ ಮೀರಿ ಕುಸಿದಿದೆ. ಇದರಿಂದ ಹಳ್ಳಿಯ ಜನರಿಗೆ ಕೆರೆಕಟ್ಟೆ, ಬಾವಿಗಳಲ್ಲಿ ಸುಲಭವಾಗಿ ದೊರೆಯುತ್ತಿದ್ದ ಸಹಜ ಜಲಸಂಪನ್ಮೂಲಕ್ಕೆ ಆಪತ್ತು ಉಂಟಾಗಿದೆ. ವಿಪರ್ಯಾಸವೆಂದರೆ, ಈ ಪ್ರದೇಶವನ್ನು ಸಿಜಿಡಬ್ಲ್ಯುಎ ’ಅಂತರ್ಜಲ ಮೇಲೆತ್ತಲು ಸುರಕ್ಷಿತ ವಲಯ’ ಎಂದು ಘೋಷಿಸಿದೆ! ಇದೇ ರೀತಿ ಬಾಟಲಿ ತುಂಬುವ ಘಟಕಗಳಿರುವ ಎಲ್ಲ ಕಡೆಗಳಲ್ಲೂ ಅಂತರ್ಜಲ ಮಟ್ಟ 180 ಅಡಿಗಳಿಗಿಂತಲೂ ಹೆಚ್ಚು ಆಳಕ್ಕೆ ಕುಸಿಯುತ್ತಲೇ ಇದೆ.
ಮೊದಲು ನಮ್ಮ ಕೊಳವೆಬಾವಿಯ ಪಂಪನ್ನು ಒಮ್ಮೆ ಮೀಟಿದರೆ ಸುಮಾರು ಒಂದೂಕಾಲು ಲೀಟರ್ ನಷ್ಟು ನೀರು ಸಿಗುತ್ತಿತ್ತು; ಆದರೆ ಈಗ ಅದು ಅರ್ಧ ಲೀಟರಿಗಿಂತಲೂ ಕಡಮೆಯಾಗಿದೆ – ಎಂದು ಬಾಟಲುನೀರು ಘಟಕವೊಂದರ ಹತ್ತಿರದ ಹಳ್ಳಿಯ ನಾಗರಿಕರು ಆತಂಕ ಪಡುತ್ತಾರೆ.
ಸುರಕ್ಷಿತ ವಲಯದಲ್ಲೇ ಅಂತರ್ಜಲ ಮಟ್ಟ ಈ ಪರಿಯ ಕುಸಿತ ಕಂಡರೆ, ಇನ್ನು ಅರೆಸುರಕ್ಷಿತ, ಅಸುರಕ್ಷಿತ ಹಾಗೂ ಶೋಷಿತ ವಲಯಗಳಲ್ಲಿ ಪರಿಸ್ಥಿತಿ ಹೇಗಿರಬಹುದು? ಪುನಶ್ಚೇತನ ಕ್ರಮಗಳನ್ನು ಕೈಗೊಳ್ಳದೆ ಇದೇ ರೀತಿ ಕಂಪೆನಿಗಳಿಗೆ ನಿರಂತರ ನೀರನ್ನು ಮೇಲೆತ್ತಲು ಅವಕಾಶವನ್ನು ಇತ್ತುದೇ ಆದರೆ, ಭವಿಷ್ಯದಲ್ಲಿ ಸುತ್ತಮುತ್ತಲಿನ ಅಂತರ್ಜಲಮೂಲ ಸಂಪೂರ್ಣವಾಗಿ ಬತ್ತಿಹೋಗಲಿದೆ.
ಈ ಕಂಪೆನಿಗಳು ಮಿಲಿಯಾಂತರ ವರ್ಷಗಳಿಂದ ನಮ್ಮಲ್ಲಿರುವ ಅಂತರ್ಜಲ ಸಂಗ್ರಹವನ್ನು ನಿರ್ದಯವಾಗಿ ಶೋಷಿಸುತ್ತಿದ್ದು ನಮ್ಮ ಮುಂದಿನ ಪೀಳಿಗೆಯ ಉಳಿವೇ ಅಪಾಯಕ್ಕೆ ಸಿಲುಕಿದೆ. ಏನು ನಡೆಯುತ್ತಿದೆ ಎಂಬ ಸ್ಪಷ್ಟ ಅರಿವಿದ್ದರೂ ನಮ್ಮನ್ನಾಳುವವರೂ, ಜನನಾಯಕರೂ ಏನನ್ನೂ ಮಾಡದೆ ಕಣ್ಣುಮುಚ್ಚಿ ಕುಳಿತಿದ್ದಾರೆ. ಪರಿಸರ ಹೋರಾಟಗಾರರೂ ಹೋರಾಟದ ಕೆಚ್ಚನ್ನು ಕಳೆದುಕೊಂಡು ಮಂಕಾಗಿದ್ದಾರೆ ಎಂದು ಮಾಹಿತಿಹಕ್ಕು ಕಾರ್ಯಕರ್ತ ಎನ್.ಕೆ. ಟಂಡನ್ ಆತಂಕವ್ಯಕ್ತಪಡಿಸುತ್ತಾರೆ.
ಇದೀಗ ಕೇಂದ್ರೀಯ ಅಂತರ್ಜಲ ಪ್ರಾಧಿಕಾರ – ಸಿಜಿಡಬ್ಲ್ಯುಎ, ಜನಹಿತ ಹಾಗೂ ಮುಂದಿನ ಪೀಳಿಗೆಯ ಹಿತದ ದೃಷ್ಟಿಯಿಂದ, ತನ್ನ ಎಲ್ಲ ಷರತ್ತುಗಳನ್ನು ಉಲ್ಲಂಘಿಸಿ ಅಂತರ್ಜಲಮೂಲವನ್ನು ಶೋಷಿಸುತ್ತಿರುವ ಇಂತಹ ಕಂಪೆನಿಗಳ ವಿರುದ್ಧ ಕಠಿಣ ಶಿಸ್ತನ್ನು ಜರಗಿಸಬೇಕಾದುದು ಕಾಲದ ಅಗತ್ಯವಾಗಿದೆ.
ಕೇಂದ್ರಸರ್ಕಾರ, ರಾಜ್ಯಸರ್ಕಾರಗಳು, ಗ್ರಾಮ ಪಂಚಾಯತ್ಗಳು, ಮುನಿಸಿಪಲ್ ಪಂಚಾಯತ್ಗಳು ಮುಂತಾದ ಅಂತರ್ಜಲಮೂಲ ರಕ್ಷಣೆಯ ಹೊಣೆಹೊತ್ತಿರುವ, ಜನಹಿತಕರವಾಗಿ ಅಗತ್ಯ ಕಾನೂನುಗಳನ್ನು ಮಾಡುವ ಮತ್ತು ಅವಕ್ಕೆ ಯೋಗ್ಯ ತಿದ್ದುಪಡಿ ತರುವ ಅಧಿಕಾರವುಳ್ಳ, ದೇಶದ ಎಲ್ಲ ಸರ್ಕಾರೀ ಕಾರ್ಯಾಂಗಗಳು ಅಂತರ್ಜಲಮೂಲ ರಕ್ಷಣೆ, ಪೋ?ಣೆ, ಪುನಶ್ಚೇತನದಂಥ ಕಾರ್ಯಗಳಿಗೆ ಸೂಕ್ತ ಯೋಜನೆಗಳನ್ನು ಕೈಗೊಂಡು, ತುರ್ತಾಗಿ ನಮ್ಮ ಅಂತರ್ಜಲಮೂಲವನ್ನು ವೃದ್ಧಿಸಿಕೊಳ್ಳಬೇಕಾಗಿದೆ ಎಂದು ಜಗತ್ತಿನಾದ್ಯಂತ ’ನೀರಿನ ಮನು?’ ಎಂದೇ ಖ್ಯಾತಿ ಪಡೆದ, ಮ್ಯಾಗ್ಸೇಸೇ ಪುರಸ್ಕೃತ, ಅಂತರ್ಜಲತಜ್ಞ ರಾಜೇಂದ್ರ ಸಿಂಗ್ ಹೇಳುತ್ತಾರೆ.
ಈ ನಿಟ್ಟಿನಲ್ಲಿ ಜನಾಗ್ರಹ ಇನ್ನಷ್ಟು ಚುರುಕುಗೊಳ್ಳುವ ಅಗತ್ಯವಿದೆ.