ದಶಕಗಳುದ್ದಕ್ಕೂ ಬೆಳೆಸಿರುವ ಗಲೀಜುಗಳು ಏಕಾಏಕಿ ನಿವಾರಣೆಯಾಗಲಾರವು. ಆದರೆ ಈಚಿನ ಚುನಾವಣೆಗಳ ಫಲಿತ ಆಶಾಸ್ಪದವಾಗಿದೆಯೆಂಬುದನ್ನು ಅಲ್ಲಗಳೆಯುವಂತಿಲ್ಲ.
ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳ ಫಲಿತಗಳಲ್ಲಿ ಹಲವು ಕೌತುಕಗಳು ತುಂಬಿವೆ. ಮೊತ್ತಮೊದಲನೆಯದಾಗಿ ಚುನಾವಣೆಗಳಿಗೆ ಕೆಲವೇ ದಿನಗಳ ಹಿಂದೆ ’ತಜ್ಞ’ರನೇಕರು ನುಡಿದಿದ್ದ ಭವಿ?ವಾಣಿಗಳು ಈಗ ನಗೆಪಾಟಲೆನಿಸಿವೆ. ಭವಿಷ್ಯವಾಣಿಗಳಿಗೂ ವಾಸ್ತವ ಫಲಿತಗಳಿಗೂ ಇರುವ ಅಗಾಧ ಅಂತರವನ್ನು ಕುರಿತು ಯೋಚಿಸುವಾಗ ಅನೇಕ ಸಮೀಕ್ಷಕರು ತಾವು ಏನೇನೋ ಕಾರಣಗಳಿಂದ ಬಯಸುವ ಪರಿಣಾಮಗಳಿಗೆ ಸಾಧ್ಯತೆಯ ಗವುಸನ್ನು ಹೊದಿಸಿ ಮತದಾರರಿಗೆ ’ಮಾರ್ಗದರ್ಶನ’ ಮಾಡಲೆಳಸುತ್ತಾರೆಯೇ – ಎಂಬ ಶಂಕೆ ಮೂಡುತ್ತದೆ. ಪರಾಮರ್ಶನೆ ಅಥವಾ ವಿಶ್ಲೇ?ಣೆಯೂ ಈಗ ಛದ್ಮಪ್ರಚಾರದ ಒಂದು ಸಾಧನವಾಗಿದೆ ಎನಿಸಿದಲ್ಲಿ ಇದನ್ನು ಸಿನಿಕತನವೆನ್ನಲಾಗದು. ಕೆಲವೇ ದಿನಗಳ ಹಿಂದೆ ಪಂಜಾಬಿನಲ್ಲಿ ’ಎ.ಎ.ಪಿ. ಹೆದ್ದೆರೆ’ ತಜ್ಞರಿಗೆ ಕಂಡಿತ್ತು. ಭಾಜಪಾದ ಹಾದಿ ದುರ್ಗಮವಾಗಿದೆಯೆಂದು ’ತಜ್ಞ’ರು ಅಪ್ಪಣೆಕೊಡಿಸಿದ್ದ ಪ್ರದೇಶಗಳಲ್ಲಿ ಭಾಜಪಾ ಪರವಾದ ’ಭೂಪಾತ’ವೇ ಆದದ್ದು ಹೇಗೆ? ಅದ್ಧೂರಿ ಟ್ವೀಟ್-ಫೇಸ್‌ಬುಕ್ ಪ್ರಚಾರಪ್ರವಾಹದ ನಂತರವೂ ಎ.ಎ.ಪಿ. ನೆಲಕಚ್ಚಿದುದೇಕೆ? ’ಮಾಧ್ಯಮಗಳನ್ನು ನಂಬಬೇಡಿ; ಇಂಗ್ಲಿ? ಮಾಧ್ಯಮಗಳನ್ನಂತೂ ನಂಬಲೇಬೇಡಿ’ ಎಂದು ತ್ರಯಸ್ಥವಲಯಗಳು ಹೇಳುತ್ತಿದ್ದುದನ್ನು ಚುನಾವಣೆಯ ಫಲಿತಗಳು ಸಮರ್ಥಿಸಿವೆ. ಐನಾತಿ ಸಂಗತಿಯೆಂದರೆ ತಥೋಕ್ತ ’ತಜ್ಞ’ ಮಹನೀಯರು ಈಗಲೂ ಆನುವಂಶಿಕತೆ, ಜಾತೀಯತೆ ಮೊದಲಾದ ಗತಾನುಗತಿಕ ಚಿಂತನಕಕ್ಷೆಯಿಂದ ಹೊಬರಲಾಗದುದು. ಆ ಜಾಡಿನ ಗಣನೆಗಳು ಗತಾರ್ಥವಾಗಿವೆಯೆಂದು ಹೇಳಬಹುದಾದ ಸ್ಥಿತಿ ಇನ್ನೂ ಇಲ್ಲವಾದರೂ ಗಣನೀಯ ಪ್ರಮಾಣದ ಜನವರ್ಗಗಳ ಚಿಂತೆ ಈಚಿನ ದಿನಗಳಲ್ಲಿ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿವೆಯೆಂದು ಭಾವಿಸಲು ಆಧಾರಗಳು ಕಾಣುತ್ತಿವೆ. ಜನರು ಯಾವುದೊ ನಿರ್ದಿಷ್ಟ ಸೈದ್ಧಾಂತಿಕಧಾರೆಗೆ ಬದ್ಧರಾಗಿ ಮತಗಳನ್ನು ಸುರಿಯುತ್ತಾರೆಂಬ ಅನಿಸಿಕೆಗೂ ಈಗ ಸಮರ್ಥನೆ ಕಾಣುತ್ತಿಲ್ಲ. ಇಂತಹ ನಿಲವುಗಳ ಉಚ್ಚಾರವೇ ಈಗ ಹಾಸ್ಯಾಸ್ಪದವೆನಿಸುತ್ತದೆ. ಆ ಜಾಡಿನಲ್ಲಿ ಯಾಂತ್ರಿಕವಾಗಿ ಮುಂದುವರಿಯುತ್ತಿರುವ ಧೀಮಂತ ಪಡೆಗಳು ಬಂಡಿಜಾಡಿನ ಮನಃಪ್ರವೃತ್ತಿಗಳಿಂದ ಈಗಲಾದರೂ ದೂರ ಸರಿದು ವಾಸ್ತವಾಧಾರ ತಥ್ಯಗಳನ್ನು ಗ್ರಹಿಸಲೆಂದು ಆಶಿಸಬೇಕಾಗಿದೆ. ಹಾಗಾಗದಿದ್ದಲ್ಲಿ ಚುನಾವಣಾಫಲಿತಗಳು ಹೊರಬೀಳುತ್ತಿದ್ದ ಸಮಯದಲ್ಲಿ ವಿವಿಧ ಚ್ಯಾನೆಲುಗಳ ’ಆಸ್ಥಾನ ತಜ್ಞ’ರು ಭಾರದ್ವಾಜಾಸನ, ಅಧೋಮುಖ ವೃಕ್ಷಾಸನಾದಿ ಕಸರತ್ತುಗಳಲ್ಲಿ ತೊಡಗಬೇಕಾಗಿ ಬಂದದ್ದು ಮುಂದೆಯೂ ಪುನರಾವೃತ್ತಗೊಳ್ಳಬೇಕಾಗಿ ಬಂದೀತು.
ಅಲ್ಪಸಂಖ್ಯಕರ ಓಲೈಸುವಿಕೆ ಮೊದಲಾದ ’ಶಾಶ್ವತ’ ತ್ರೈರಾಶಿಗಳೂ ಉತ್ತರಪ್ರದೇಶದಂತಹ ಪ್ರಾಂತದಲ್ಲಿಯೆ ಅಪ್ರಸಕ್ತವೆನಿಸಿದ ’ಅಪ್ರಿಯ ಸತ್ಯ’ವಾದರೂ ಮಾಧ್ಯಮವೀರರ ಮತ್ತು ರಾಜಕೀಯ ಸಮೀಕ್ಷಕರ ಕಣ್ಣು ತೆರೆಸಬೇಕಾಗಿದೆ. ಪ್ರತ್ಯೇಕತಾವಾದಿ ಸಂಘಟನೆಗಳ ತವರೆಂದು ಹೆಸರಾಗಿರುವ ಪ್ರದೇಶಗಳಲ್ಲಿಯೇ ಭಾಜಪಾ ಮುನ್ನಡೆ ಸಾಧಿಸಿದೆ. ಹಿಂದಿನ ಆರೂಢ ಸಮಾಜವಾದಿ ಪಕ್ಷವು ಪ್ರತ್ಯೆಕತಾವಾದಿ ಬಣಗಳಿಗೆ ಧಾರಾಳವಾಗಿ ವಿತರಣೆ ಮಾಡಿದ್ದ ಧನರಾಶಿಗಳೂ ಮತದಾರರ ಮೇಲೆ ಪರಿಣಾಮ ಬೀರಿದಂತಿಲ್ಲ. ಅಷ್ಟೇಕೆ, ಗುಜರಾತಿನಲ್ಲಿ ಹೆಸರೇ ಕಂಪನಗಳನ್ನುಂಟುಮಾಡುವ ಲಷ್ಕರ್-ಎ-ತೋಯ್ಬಾ ನೀಡಿದ ಕರೆಗಳಿಗೂ ಸ್ಪಂದನ ದೊರೆಯದುದು ಏನನ್ನು ಸೂಚಿಸುತ್ತದೆ?
ಮೇಲಿನ ವ್ಯಾಖ್ಯೆಯ ತಾತ್ಪರ್ಯ ರಾತ್ರೋರಾತ್ರಿ ಸಮಾಜಸ್ಥಿತಿ ಬದಲಾಗಿಬಿಟ್ಟಿದೆಯೆಂದಲ್ಲ. ದಶಕಗಳುದ್ದಕ್ಕೂ ಬೆಳೆಸಿರುವ ಗಲೀಜುಗಳು ಏಕಾಏಕಿ ನಿವಾರಣೆಯಾಗಲಾರವು. ಆದರೆ ಈಚಿನ ಚುನಾವಣೆಗಳ ಫಲಿತ ಆಶಾಸ್ಪದವಾಗಿದೆಯೆಂಬುದನ್ನು ಅಲ್ಲಗಳೆಯುವಂತಿಲ್ಲ.