ಮನೆಗೊಂದು ಮಗು ಬರುವ ಸಮಯ ಬಹು ಅಮೂಲ್ಯವಾದದ್ದು. ಒಡಲೊಳಗೆ ಜೀವವೊಂದು ಮಿಸುಕಾಡುವ ಆ ಕ್ಷಣ ಹೆಣ್ಣಾದವಳಿಗೆ ಅನಿರ್ವಚನೀಯ. ಆ ದಿನಗಳ ಸಂತೋಷ, ಅರ್ಥವಾಗದ ಒತ್ತಡ, ಹೊಮ್ಮುವ ಭಾವಗಳ ಒರತೆ… ಎಲ್ಲವೂ ಅನುಭವಿಸಿಯೇ ತಿಳಿಯಬೇಕು. ಮಗುವೊಂದು ಆರೋಗ್ಯಪೂರ್ಣವಾಗಿ ಬೆಳೆಯುವಲ್ಲಿ ಮನೆಮಂದಿಯೆಲ್ಲರ ಹೊಣೆಗಾರಿಕೆಯಿದೆ ಎಂಬುದು ಮಾತ್ರ ಬೆಳಕಿನಷ್ಟು ಸತ್ಯ. ಆದರೆ ತಾಯಿ ಹೆತ್ತದ್ದು ಹೆಣ್ಣುಮಗುವಾದರೆ ಅವಳನ್ನೇ ದೂಷಿಸಿ ಅನಿಷ್ಟವೆಂದು ಕಾಣುವ ವಾತಾವರಣ ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಿರುವಾಗ ಮುದ್ದಾದ ಮಗುವೊಂದು ಜನಿಸುವುದರಲ್ಲಿ ತಂದೆಯ ಪಾತ್ರವೂ ಬಹಳ ಮುಖ್ಯ ಎಂಬುದನ್ನು ಮನದಟ್ಟುಮಾಡಿಕೊಡಬೇಕಾದ್ದು ಇಂದಿನ ಅನಿವಾರ್ಯತೆ. ಕೇವಲ ಶಾರೀರಿಕವಾಗಿ ನೋಡಿದರೆ ಅಪ್ಪನೆನಿಸಿಕೊಳ್ಳುವುದಕ್ಕೆ ಕೆಲವು ಕ್ಷಣಗಳು ಸಾಕಾಗಬಹುದು, ಆದರೆ ಅಪ್ಪನಾಗುವುದೆಂದರೆ ತಾಯಿಯೊಂದಿಗೆ ತಂದೆಯದೂ ಭಾವನಾತ್ಮಕ ಪಯಣವೇ ಹೌದು. ಆದರೆ ಎಷ್ಟು ಮಂದಿಗೆ ಅದರ ಅರಿವಿದೆ?
ಮೊದಲಿಗೆ ತಮ್ಮ ಅನುಬಂಧವನ್ನು ಮತ್ತಷ್ಟು ಬೆಸೆಯುವುದಕ್ಕೆ ಕಂದಮ್ಮನೊಂದು ಬರಬೇಕಿದೆ ಎಂಬುದು ಪತಿ ಪತ್ನಿಯರಿಬ್ಬರ ನಿರ್ಧಾರ. ಕೆಲವರ ಬದುಕಲ್ಲಿ ಎಲ್ಲವೂ ಅವರು ಅಂದುಕೊಂಡಂತೆ, ಯೋಜನೆಗಳನ್ನು ಮಾಡಿಕೊಂಡಂತೆ ಘಟಿಸಬಹುದು. ಆದರೆ ಎಲ್ಲರ ಬದುಕಿನಲ್ಲೂ ಹಾಗಾಗುವುದಿಲ್ಲವಲ್ಲ! ಸಂದರ್ಭ ಹೇಗೇ ಇದ್ದರೂ ಮೊದಲಿಗೆ ಪತ್ನಿ ಗರ್ಭ ಧರಿಸಿದ್ದಾಳೆ ಎಂಬುದು ಖಚಿತವಾದಾಗ ’ಈಗಲೇ ಬೇಕಿತ್ತಾ?’ ’ಇಷ್ಟು ಅವಸರವಿತ್ತಾ?’ ಎಂಬ ಪ್ರಶ್ನೆಗಳಿಗಿಂತ ಆಪ್ಯಾಯಮಾನವೆನಿಸುವುದು ನಾವು ಜೊತೆಯಾಗಿದ್ದೇವೆ, ಬರುತ್ತಿರುವುದು ನಮ್ಮ ಮಗು, ಅದರ ಕಾಳಜಿಯಲ್ಲಿ ನಾವು ಬದ್ಧ ಎಂಬ ನಂಬಿಕೆ.
ಮಾರ್ಗದರ್ಶನದ ಅಗತ್ಯ
ಎಷ್ಟು ವಿದ್ಯಾವಂತರಾದರೂ ಪತಿಗಾಗಲೀ ಪತ್ನಿಗಾಗಲೀ ಅದೊಂದು ವಿಸ್ಮಯದ, ಗೊಂದಲದ ಸಮಯ. ವೈಜ್ಞಾನಿಕವಾಗಿ ಏನೇನಾಗಿದೆ ಎನ್ನುವುದಕ್ಕಿಂತ ಭಾವನಾತ್ಮಕವಾಗಿ ಅಲ್ಲೊಂದು ಪುಳಕವಿರುತ್ತದೆ. ಆದರೆ ಅರ್ಥವಾಗದಿರುವುದೆಂದರೆ ಬಸುರಿಯಲ್ಲಾಗುವ ಬದಲಾವಣೆಗಳು. ದೈಹಿಕವಾಗಿ ಗೋಚರಿಸುವ ಬದಲಾವಣೆಗಳು ಹಲವಾದರೆ ಕಾಣಿಸದ, ಆದರೆ ಅನುಭವಕ್ಕೆ ಬರುವ ಬದಲಾವಣೆಗಳು ಹಲವಾರಿರುತ್ತವೆ. ಯಾರಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಹೋಗುವ ವಿಷಯಗಳು ಅವೇ. ಈ ಕ್ಷಣದಲ್ಲಿ ಖುಷಿಖುಷಿಯಾಗಿ ಓಡಾಡಿಕೊಂಡಿದ್ದವಳು ಮರುಕ್ಷಣದಲ್ಲಿ ಜಗತ್ತಿನ ಚಿಂತೆಯನ್ನೆಲ್ಲ ತಾನೇ ಹೊತ್ತಿರುವಂತೆ ಗಂಭೀರೆಯಾಗಬಲ್ಲಳು. ತತ್ಕ್ಷಣದಲ್ಲಿ ಕಾರಣವೇ ಇಲ್ಲದೆ ಅಳುವಿನ ಮುದ್ದೆಯಾದಾಳು. ಅಥವಾ ನೂರೆಂಟು ಪ್ರಶ್ನೆಗಳಿಂದ ಗಂಡನ ತಲೆತಿಂದಾಳು. ಗಂಡನಿಗೂ ಪತ್ನಿಯ ಈ ಎಲ್ಲ ನಡೆ ಹೊಸತೇ ಆದುದುರಿಂದ ಅದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅವನು ಸೋಲಬಹುದು; ಅಥವಾ ನಿರ್ಲಕ್ಷಿಸಬಹುದು. ಆದರೆ ಆ ಸಂದರ್ಭದಲ್ಲಿ ಅವಳೊಂದಿಗೆ ಮನೆಮಂದಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಅವಳ ಗರ್ಭದಲ್ಲಿರುವ ಮಗುವಿನ ಮನೋವಿಕಾಸ ನಿಂತಿರುತ್ತದೆ. ಬಹುಶಃ ಗರ್ಭಿಣಿಯರಿಗೆ ಆಸ್ಪತ್ರೆಗಳಲ್ಲಿ ನವಮಾಸ ಹೇಗಿರಬೇಕು, ಗರ್ಭದಲ್ಲಿರುವ ಶಿಶುವಿನ ಅಕರಾಸ್ಥೆ ಹೇಗೆ ಮಾಡಿಕೊಳ್ಳಬೇಕು, ಯಾವ ಬಗೆಯ ಆಹಾರ ಸ್ವೀಕರಿಸಬೇಕು ಎಂಬಿತ್ಯಾದಿ ಮಾರ್ಗದರ್ಶನದ ಕೈಪಿಡಿಗಳನ್ನು ಕೊಡುವಂತೆ ಪತಿಯಾದವನಿಗೂ ಗರ್ಭಿಣಿ ಪತ್ನಿಯ ಕಾಳಜಿ ಹೇಗೆ ಮಾಡಬೇಕೆಂಬುದರ ಮಾರ್ಗದರ್ಶನ ಕೊಡುವುದು ಅತ್ಯಗತ್ಯ. ಇದು ತಮಾ?ಯೆನಿಸಬಹುದು. ಆದರೆ ಇಂದಿನ ಒತ್ತಡದ ಬದುಕಿನಲ್ಲಿ ಅದಕ್ಕೂ ಮಿಗಿಲಾಗಿ ಕೂಡುಕುಟುಂಬಗಳು ಇಲ್ಲದೇ ಇರುವ ನಮ್ಮ ಸಮಾಜದಲ್ಲಿ ಈ ಬಗೆಯ ಅರಿವನ್ನು ಗಂಡಸರಲ್ಲೂ ಮೂಡಿಸುವುದು ಅನಿವಾರ್ಯ.
ಮಗುವಿನ ಆಗಮನದ ಸೂಚನೆಯನ್ನು ಸಂಭ್ರಮಿಸಿ. ಸಿನೆಮಾಗಳಲ್ಲೋ ಧಾರಾವಾಹಿಗಳಲ್ಲೋ ತೋರಿಸುವಂತೆ ಎತ್ತಿ ಮೂರು ಸುತ್ತು ತಿರುಗಿಸಬೇಕಾಗಿಲ್ಲ, ಅಥವಾ ಸಿನೆಮಾಗಳಂತೆ ನಿಜ ಬದುಕಲ್ಲಿ ಮೂರು ತಿಂಗಳಾದ ಮೇಲೆ ತಿಳಿಯುವುದೂ ಅಲ್ಲ. ತನ್ನ ಶರೀರದಲ್ಲಿ ಆಗುತ್ತಿರುವ ಬದಲಾವಣೆ ಹೆಣ್ಣಿಗೆ ತಿಳಿದೇ ತಿಳಿಯುತ್ತದೆ. ಒಂದೊಮ್ಮೆ ಮಗುವಿನ ಆಗಮನ ನಿಮಗೆ ಅನಿರೀಕ್ಷಿತವೇ ಆಗಿದ್ದರೂ ಪತ್ನಿಯೊಂದಿಗೆ ಸಹಾನುಭೂತಿಯಿಂದ ವರ್ತಿಸಿ. ಅವಳು ಸಮಾಧಾನದಿಂದಷ್ಟೇ ನಿಮ್ಮ ಮಗು ಸಮಾಧಾನಿಯಾಗಿರುತ್ತದೆ.
ನಿಯಮಿತ ತಪಾಸಣೆಗಾಗಿ ವೈದ್ಯರ ಬಳಿ ಹೋಗಬೇಕಾದಾಗಲೆಲ್ಲ ನಿಮ್ಮ ಕಾರ್ಯಭಾರ ಎಷ್ಟು ಬ್ಯುಸಿಯಾಗಿರಲಿ, ಬದಿಗೊತ್ತಿ ಅಥವಾ ಸಮಯ ಹೊಂದಿಸಿಕೊಂಡು ಪತ್ನಿಯನ್ನು ನೀವೇ ಕರೆದೊಯ್ಯಿರಿ. ’ಅಯ್ಯೋ ಇಲ್ಲಿ ಕಾಯುವ ಕರ್ಮ ನನ್ನಿಂದಾಗದು. ಚೆಕಪ್ ಆದಾಗ ಕಾಲ್ ಮಾಡು, ಬಂದು ಕರೆದುಕೊಂಡು ಹೋಗುತ್ತೇನೆ’ ಎಂದು ಅವಳನ್ನೊಬ್ಬಳನ್ನೇ ಆಸ್ಪತ್ರೆಯಲ್ಲಿ ಬಿಟ್ಟು ಹೋಗಬೇಡಿ. ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಅವಳು ಅನುಭವಿಸುವ ಮಾನಸಿಕ ತಾಕಲಾಟಗಳು ಒಂದೆರಡಲ್ಲ. ತಾನು ಒಂಟಿಯೆಂಬ ಭಾವ ಅವಳನ್ನು ಕಾಡಬಾರದು. ಅಮ್ಮನೊಂದಿಗೋ ಅತ್ತೆಯೊಂದಿಗೋ ಹೋಗಬಹುದು. ಆದರೆ ಪತಿಯೇ ಜೊತೆಯಲ್ಲಿದ್ದು ಕರೆದೊಯ್ದರೆ ಅವಳಲ್ಲಿರುವ ಆತ್ಮವಿಶ್ವಾಸ ಹೆಚ್ಚುತ್ತದೆ. ಮಾತ್ರವಲ್ಲ ಎಲ್ಲಾ ಸಂದರ್ಭದಲ್ಲೂ ಪತಿ ತನ್ನೊಂದಿಗಿದ್ದು ಆಸರೆಯಾಗುತ್ತಾನೆ ಎಂಬ ಧೈರ್ಯ ಹೆಚ್ಚುತ್ತದೆ. ಇದು ಜೀವನಪರ್ಯಂತ ದಂಪತಿಗಳನ್ನು ಬೆಸೆದಿಡುತ್ತದೆ. ವೈದ್ಯಕೀಯವಾಗಿಯೂ ಮಗುವಿನ ಬೆಳವಣಿಗೆಯ ಕುರಿತು ಅರಿವು ಮೂಡಲು ಇದು ಅಗತ್ಯ.
ಪತ್ನಿಗೆ ಒತ್ತಡಗಳನ್ನು ಕಡಮೆ ಮಾಡಿಕೊಳ್ಳಲು ಸಹಕಾರ ನೀಡಿ. ಇದು ಆಕೆಗೆ ದೈಹಿಕವಾಗಿಯೂ ಮಾನಸಿಕವಾಗಿಯೂ ಅತ್ಯಗತ್ಯ. ಹೆಚ್ಚುವರಿಯಾಗಿ ಯಾವುದೇ ಒತ್ತಡ ಅವಳ ಮೇಲೆ ಬೀಳದಂತೆ ಜಾಗ್ರತೆ ವಹಿಸಿ. ಮನೆಮಂದಿಯಿಂದಲಾದರೂ ಆಕೆ ನೋಯದಂತೆ ಕಾಯ್ದುಕೊಳ್ಳುವುದು ಪತಿಯ ಕೈಯ್ಯಲ್ಲಿದೆ. ಅನಪೇಕ್ಷಿತ ಮಾತು, ವರ್ತನೆಗಳಿಂದ ಅವಳು ನಲುಗಿದರೆ ನಿಜಕ್ಕೂ ತೊಂದರೆಯಾಗುವುದು ನಿಮ್ಮದೇ ಮಗುವಿಗೆ.
ಗರ್ಭಿಣಿ ಸಾಮಾನ್ಯವಾಗಿ ನಿದ್ರಾಹೀನತೆಯಿಂದ ಬಳಲುತ್ತಾಳೆ. ವೈದ್ಯರು ಸಲಹೆ ಮಾಡುವಂತೆ ಎಡಗಡೆಗೆ ವಾಲಿಯೇ ಮಲಗಬೇಕಿರುವುದು ಕೆಲವು ಸಲ ಅವಳಿಗೆ ಹಿತವೆನ್ನಿಸದಿರಬಹುದು. ಶಾರೀರಿಕವಾಗಿ ಅಸಹನೀಯ ಉರಿ ನವಮಾಸ ಪರ್ಯಂತ ಅವಳನ್ನು ಬಾಧಿಸಬಹುದು. ಅವಳು ನಿದ್ದೆಹೋಗುವಂತೆ ಹಿತವಾದ ವಾತಾವರಣ ಕಲ್ಪಿಸಿಕೊಡಿ. ನಿದ್ರಾಭಂಗವಾಗದಂತೆ ಎಚ್ಚರವಹಿಸಿ. ತಿಂಗಳು ತುಂಬುತ್ತ ಬರುವಂತೆ ಅವಳಿಗೆ ಪದೇ ಪದೇ ಬಚ್ಚಲುಮನೆಗೆ ಹೋಗಬೇಕೆನಿಸಬಹುದು. ಈ ಬಗ್ಗೆ ಅಸಡ್ಡೆ ಬೇಡ.
ಹೆಣ್ಣಿಗೆ ತನ್ನ ಶರೀರದ ಸೌಂದರ್ಯದ ಕುರಿತು ಪ್ರಜ್ಞೆ ಕೊಂಚ ಹೆಚ್ಚೇ ಇರುತ್ತದೆ. ಬಸಿರಿನ ಸಮಯದಲ್ಲಿ ಅವಳು ಮಗುವಿನ ಸಲುವಾಗಿಯಾದರೂ ತೂಕ ಏರಿಸಿಕೊಳ್ಳಲೇ ಬೇಕು. ಅವಳಿಗೆ ನೋವಾಗುವಂಥ ಕಮೆಂಟುಗಳನ್ನು ಕೊಡಬೇಡಿ. ನಿಮ್ಮ ಕಣ್ಣಿಗೆ ಅವಳು ದಿನದಿಂದ ದಿನಕ್ಕೆ ರೂಪಸಿಯಾಗಿಯೇ ಕಾಣುತ್ತಿದ್ದಾಳೆ ಮತ್ತು ನೀವು ಅವಳನ್ನು ಹಿಂದಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದೀರಿ ಎಂಬಿತ್ಯಾದಿ ಮಾತುಗಳನ್ನು ಆಡಿ. ಇದರಿಂದ ಮಗುವಿಗಾಗಿ ಅವಳು ಪೌಷ್ಟಿಕ ಆಹಾರವನ್ನು ಸರಿಯಾಗಿ ತೆಗೆದುಕೊಳ್ಳುತ್ತಾಳೆ.
ಬಸಿರಿನ ಆರಂಭದ ಮೂರು ನಾಲ್ಕು ತಿಂಗಳು ವಾಂತಿಯಿಂದ ಅವಳು ಬಳಲುತ್ತಾಳೆ. ಅದರೊಂದಿಗೆ ನಿತ್ರಾಣ ಬಾಧಿಸಬಹುದು. ಮನೆಯ ಇತರರಿಗಿಂತ ಹೆಚ್ಚಾಗಿ ಇದನ್ನು ಅರ್ಥಮಾಡಿಕೊಳ್ಳಬೇಕಾದವನು ಪತಿಯೇ. ಇದರೊಂದಿಗೆ ಕೆಲವೊಮ್ಮೆ ತಲೆನೋವು, ಆಲಸ್ಯ ಸೇರಿಕೊಳ್ಳಬಹುದು. ಅವಳಿಗಾಗಿ ನಿಮ್ಮ ಆಹಾರಕ್ರಮದಲ್ಲೂ ಬದಲಾವಣೆಗಳನ್ನು ಮಾಡಿಕೊಳ್ಳಿ. ಅವಳಿಗೇನಾದರೂ ಪಥ್ಯ ಮಾಡಬೇಕಾದ ಸಂದರ್ಭವಿದ್ದರೆ ಅವಳೊಂದಿಗೆ ನೀವೂ ಪಾಲಿಸಿ. ಅಕ್ಷರಶಃ ಈ ಒಂಭತ್ತು ತಿಂಗಳು ನೀವೂ ಬಸುರಿಯಂತೆ ಬಾಳಲು ಕಲಿಯಿರಿ.
ಗರ್ಭಿಣಿ ಈ ಸಮಯದಲ್ಲಿ ಅತಿಸೂಕ್ಷ್ಮವಾಗಿರುತ್ತಾಳೆ. ಮೊದಲು ಇಷ್ಟಪಟ್ಟ ಸೆಂಟ್ ಈಗ ಅವಳಿಗೆ ವಾಕರಿಕೆ ತರಬಹುದು, ಮೊದಲು ಇಷ್ಟಪಡುತ್ತಿದ್ದ ಸಿನೆಮಾ ಹಾಡುಗಳು ಈಗ ಕಿರಿಕಿರಿಯೆನಿಸಬಹುದು. ಅವಳ ಇ?ದ ಹವ್ಯಾಸದಿಂದ ಅವಳು ದೂರಸರಿಯಬಹುದು. ಗರ್ಭದಲ್ಲಿರುವ ನಿಮ್ಮ ಮಗು ಅವಳ ಒಟ್ಟೂ ಪ್ರಪಂಚವನ್ನು ಆಳುತ್ತಿರುತ್ತದೆ ಎಂಬುದು ನಿಮಗೆ ಸದಾ ನೆನಪಿರಲಿ.
ಇವೆಲ್ಲದರ ಅರ್ಥ ಅವಳಿಗೆ ಕುಳಿತಲ್ಲಿಗೆ ಸೇವೆಮಾಡಬೇಕೆಂಬುದಲ್ಲ. ಅವಳು ಓಡಾಡುತ್ತಿರಬೇಕು, ಅಗತ್ಯ ವ್ಯಾಯಾಮಗಳನ್ನು ಮಾಡುತ್ತಿರಬೇಕು. ವಾಕಿಂಗ್ ಹೋಗಬೇಕು. ಆದರೆ ಅದೆಲ್ಲವೂ ಸಂಗಾತಿಯ ಸಾಮೀಪ್ಯದೊಂದಿಗೆ. ಕಂದಮ್ಮ ಹಸನ್ಮುಖಿಯಾದರೂ ಸಿಡಸಿಡ ಅನ್ನುತ್ತಿದ್ದರೂ ಅದಕ್ಕೆ ಕಾರಣ ಅಮ್ಮ ಮಾತ್ರ ಅಲ್ಲ, ಅಪ್ಪನೂ ಕೂಡ ಎಂಬ ಅರಿವು ಮನೆಮಂದಿಯೆಲ್ಲರಲ್ಲಿ ಜಾಗೃತವಾಗಿರಬೇಕು.