ಭಾರತದ ಹದಿನಾಲ್ಕನೇ ರಾಷ್ಟ್ರಾಧ್ಯಕ್ಷರಾಗಿ ರಾಮನಾಥ ಕೋವಿಂದ್ ಅವರು ಆಯ್ಕೆಗೊಂಡಿರುವುದು ಶುಭಸೂಚಕ. ಅವರ ಆಯ್ಕೆಗೆ ದಾರಿಮಾಡಿದ ಪರಿಗಣನೆಗಳು ಈಗ ಗತ-ಇತಿಹಾಸ. ಅವರು ಯಾವ ರಾಜಕೀಯಪಕ್ಷದ ಹಿನ್ನೆಲೆಯವರು ಮೊದಲಾದ ಲೆಕ್ಕಾಚಾರಗಳಿಗೂ ಈಗ ಮಹತ್ತ್ವ ಉಳಿದಿಲ್ಲ. ಮುಖ್ಯ ಸಂಗತಿಯೆಂದರೆ ಸರ್ಕಾರದ ಪರ ವಕೀಲರು, ರಾಜ್ಯಸಭಾ ಸದಸ್ಯರು, ವಿಶ್ವಸಂಸ್ಥೆಗೆ ಭಾರತದ ವತಿಯಿಂದ ಹೋಗಿದ್ದ ನಿಯೋಗದ ಸದಸ್ಯರು, ಭಾಜಪಾದ ದಲಿತ ಮೋರ್ಛಾ ಅಧ್ಯಕ್ಷರು, ಕಳೆದ ಎರಡು ವರ್ಷ ಕಾಲ ಬಿಹಾರದ ರಾಜ್ಯಪಾಲರು – ಹೀಗೆ ಕಳೆದ ನಾಲ್ಕು ದಶಕಗಳಲ್ಲಿ ಅವರು ನಿರ್ವಹಿಸಿದ ಯಾವುದೇ ಹೊಣೆಗಾರಿಕೆಯ ಸಂದರ್ಭದಲ್ಲಿಯೂ ಎಂದೂ ಅವರು ಸಣ್ಣ ವಿವಾದಕ್ಕೂ ಎಡೆಗೊಟ್ಟಿಲ್ಲವೆಂಬುದು. ಪ್ರತಿಯಾಗಿ ಸೌಮ್ಯತೆ-ಸುವ್ಯವಸ್ಥಿತತೆಗಳೇ ಅವರ ಸ್ವಭಾವಲಕ್ಷಣಗಳೆಂದು ಉದ್ದಕ್ಕೂ ಗುರುತಿಸಲ್ಪಟ್ಟಿವೆ. ರಾಷ್ಟ್ರಾಧ್ಯಕ್ಷಪದನಿಯುಕ್ತರಲ್ಲಿ ಇರಬೇಕಾದ ಗುಣಸಮುಚ್ಚಯದಲ್ಲಿ – ವಿಶೇಷವಾಗಿ ಭಾರತದ ಸಂದರ್ಭದಲ್ಲಿ – ನಿಕಟ ಸಮಾಜಾನುಭವವೂ ಮಧ್ಯಮಮಾರ್ಗವೂ ಸರ್ವಥಾ ಅಪೇಕ್ಷಣೀಯಗಳು. ಕಾರಣ ಇದು: ಒಂದುಕಡೆ ಸಂವಿಧಾನಲಬ್ಧ ಔನ್ನತ್ಯ, ಇನ್ನೊಂದುಕಡೆ ಕಾರ್ಯಾಂಗದ ಮಂಡನೆಗಳನ್ನು ಅನುಮೋದಿಸಲೇಬೇಕಾದ ಸಮಯಾಚಾರ, ಮತ್ತೊಂದುಕಡೆ ಸದಾ ವಿಕ್ಷೆಭ ತುಂಬಿದ ರಾಜಕಾರಣ ಬಯಸುವ ಸ್ಪಂದನ – ಈ ಮುಮ್ಮುಖ ಸನ್ನಿವೇಶದ ಸಮರ್ಪಕ ನಿರ್ವಹಣೆಯಲ್ಲಿ ಅತಿವಾದವಾಗಲಿ ಸಾಹಸವಂತಿಕೆಯಾಗಲಿ ಕೆಲಸಕ್ಕೆ ಬಾರದು. ಕಾರ್ಯಾಂಗಕ್ಕೂ ಸಾಂವಿಧಾನಿಕ ಸ್ಥಾನೌನ್ನತ್ಯಕ್ಕೂ ನಡುವೆ ಸುಸಂಗತತೆ ಇರುವುದು ರಾಷ್ಟ್ರದ ಸ್ವಾಸ್ಥ್ಯದ ದೃಷ್ಟಿಯಿಂದ ಅವಶ್ಯವಿದೆ.
ಕಳೆದ ಎಪ್ಪತ್ತು ವರ್ಷಗಳ ಅನುಭವದಲ್ಲಿ ಕಾರ್ಯಾಂಗಕ್ಕೂ ರಾಷ್ಟ್ರಾಧ್ಯಕ್ಷರಿಗೂ ನಡುವೆ ಹೊಂದಾಣಿಕೆಯ ಕೊರತೆಯಾದ ಹಲವು ಪ್ರಸಂಗಗಳು ಇಲ್ಲದಿಲ್ಲ. ಸೋಮನಾಥಮಂದಿರ ನಿರ್ಮಾಣದ ಸಂದರ್ಭದಲ್ಲಿ ಜವಾಹರಲಾಲ್ ನೆಹರುರವರಿಗೂ ರಾಜೇಂದ್ರಪ್ರಸಾದರವರಿಗೂ ನಡುವೆ ಇದ್ದ ಭಿನ್ನತೆ, ಚೀಣಾಯುದ್ಧ ಸಂದರ್ಭದಲ್ಲಿ ರಾಧಾಕೃ?ನ್ರವರಿಗೂ ನೆಹರುರವರಿಗೂ ನಡುವೆ ಏರ್ಪಟ್ಟ ದೃಗ್ಭೇದ – ಇವು ತಾವು ದೇಶದ ಇಡೀ ಜನಸಮುದಾಯದ ಪ್ರತಿನಿಧಿಗಳೆಂಬ ಪ್ರಾಮಾಣಿಕ ಕರ್ತವ್ಯಪ್ರಜ್ಞೆಯಿಂದ ಹೊಮ್ಮಿದ್ದವು. ಆದರೆ ಗ್ಯಾನಿ ಜೇಲ್ಸಿಂಹರು ತತ್ಕಾಲೀನ ರಾಜೀವಗಾಂಧಿ ಸರ್ಕಾರದ ಬಗೆಗೆ ತಳೆದ ಅಸಹಕಾರ ನಿಲವು ಕ್ಷುದ್ರ ಗಣನೆಗಳಿಂದ ಪ್ರೇರಿತವಾಗಿದ್ದುದು. ಈಗಿನ ಸನ್ನಿವೇಶದಲ್ಲಂತೂ ರಾಷ್ಟ್ರಾಧ್ಯಕ್ಷಸ್ಥಾನಾಧಿಷ್ಠಿತರು ಕಾರ್ಯಾಂಗದ ಚರ್ಯೆಗಳಿಗೆ ಅಡ್ಡಗಾಲುಹಾಕುವ ಅವಕಾಶವೇ ಮರೆಯಾಗಿದೆ. ಆದರೆ ಸೌಹಾರ್ದಮಯ ಸಂಬಂಧವು ರಾಷ್ಟ್ರಸ್ವಾಸ್ಥ್ಯಕ್ಕೆ ಪೋಷಕವಾಗಬಲ್ಲದು ಎಂಬುದು ಅವಧಾರಣಾರ್ಹ ಅಂಶ. ರಾಜ್ಯಗಳ ವಿಧಾನಸಭೆಗಳ ವಿಸರ್ಜನೆಯಂತಹ ಸಂದರ್ಭಗಳಲ್ಲಂತೂ ಕಾಯಾಂಗಧುರೀಣರ ಮತ್ತು ರಾ?ಧ್ಯಕ್ಷರ ವಿವೇಕವು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ.
ರಾಷ್ಟ್ರಾಧ್ಯಕ್ಷಸ್ಥಾನದ ಅಭ್ಯರ್ಥಿಗಳು ಸ್ಪರ್ಧಿಸುವುದಕ್ಕೆ ಪೂರ್ವದಲ್ಲಿ ಯಾವುದೇ ರಾಜಕೀಯಪಕ್ಷದ ಸಂಪರ್ಕದಿಂದ ದೂರ ಸರಿದಿರುತ್ತಾರೆ. ಇದು ಕೇವಲ ತಾಂತ್ರಿಕತೆಯಾಗದೆ ವಾಸ್ತವವೂ ಆಗಬೇಕು. ಆಗ ಮಾತ್ರ ರಾ?ಧ್ಯಕ್ಷ ಸ್ಥಾನದ ಘನತೆ ಉಳಿಯುತ್ತದೆ.
ಇದೀಗ ಪದನಿವೃತ್ತರಾಗಿರುವ ಪ್ರಣವ್ ಮುಖರ್ಜಿಯವರು ಅನ್ಯಪಕ್ಷದ ಹಿನ್ನೆಲೆಯವರಾದರೂ ಅಧಿಷ್ಠಿತ ಸರ್ಕಾರದೊಡನೆ ಪೂರ್ಣ ಸೌಹಾರ್ದ ತಳೆದು ಗಾಂಭೀರ್ಯಪೂರ್ಣ ವರ್ತನೆಯಿಂದ ವಿಶಾಲ ಮನ್ನಣೆ ಗಳಿಸಿಕೊಂಡರು. ಅವರ ಉದಾತ್ತ ರೀತಿನೀತಿಗಳನ್ನೂ ಸ್ಪಂದನಶೀಲತೆಯನ್ನೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾವಪೂರ್ಣವಾಗಿ ನೆನೆದಿದ್ದಾರೆ. ಅಂಥದೇ ಘನತೆಯನ್ನು ರಾಮನಾಥ ಕೋವಿಂದ್ ಅವರು ಎತ್ತಿಹಿಡಿಯುತ್ತಾರೆ ಎಂಬ ಬಗೆಗೆ ಅವರ ನಾಲ್ಕು ದಶಕಗಳ ವರ್ತನೆಯ ಪರಿಚಯವಿರುವವರು ಸಂದೇಹಿಸಲಾರರು. ಅವರ ಸ್ವಭಾವಮಾಧುರ್ಯವೂ ಪ್ರಚಾರವಿಮುಖತೆಯೂ ಕರ್ತವ್ಯಶೀಲತೆಯೂ ಅ? ಪಾರದರ್ಶಕವಾಗಿವೆ. ಚುನಾವಣೆ ನಡೆದು ಆಯ್ಕೆ ಘೋಷಿತವಾದ ಮೇಲೆ ಕೋವಿಂದ್ ಅವರು ತಮಗೆ ಯಾವುದೇ ಪದವಿ ಬಂದರೂ ಬಾಲ್ಯದ ಸರಳ ದಿನಗಳನ್ನು ಮರೆಯಲಾರೆನೆಂದಿರುವುದೂ ದೇಶದ ಅಸಂಖ್ಯ ಶ್ರಮಜೀವಿಗಳ ಮತ್ತು ಕಠಿಣ ಬದುಕನ್ನು ಸಾಗಿಸುತ್ತಿರುವ ರೈತರ ಬಗೆಗೆ ಆರ್ದ್ರ ಅನುಕಂಪವನ್ನು ವ್ಯಕ್ತಮಾಡಿರುವುದೂ ಅವರು ತಮ್ಮ ಬೇರುಗಳಿಂದ ವಿಚ್ಛಿನ್ನರಾಗಿಲ್ಲವೆಂಬುದನ್ನು ಸೂಚಿಸುತ್ತದೆ. ಇಂತಹ ಮಹನೀಯ ಗುಣಗಳಿರುವವರು ಯಶೋಭಾಜನರಾಗುತ್ತಾರೆಂಬುದನ್ನು ಶಂಕಿಸಲು ಕಾರಣವಿಲ್ಲ.