ಆರಂಭದ ಹಂತಗಳಲ್ಲಿ ಆಧಾರ್ ಕಾರ್ಡ್ ನೀಡಿಕೆ ಐಚ್ಛಿಕ ಎಂಬ ಘೋಷಣೆ ಇದ್ದರೂ ವ್ಯಾವಹಾರಿಕ ಮಟ್ಟದಲ್ಲಿ ವಿವಿಧ ಸೇವೆಗಳ ಲಭ್ಯತೆಗೆ ಅದನ್ನು ಕಡ್ಡಾಯಗೊಳಿಸುವ ದಿಕ್ಕಿನಲ್ಲಿ ೨೦೧೧ರಿಂದಲೇ ಪ್ರಯತ್ನಗಳು ನಡೆದಿವೆ. ಅದಕ್ಕೆ ಆಗಿನ ಯು.ಪಿಎ. ಸರ್ಕಾರದ ಪೂರ್ಣ ಮದ್ದತು ಇದ್ದಿತು.
ಸ್ಥೂಲವಾಗಿ ಪ್ರಜೆಯ ಖಾಸಗಿತನವೆಂಬುದು ಮೂಲಭೂತ ಹಕ್ಕುಗಳ ಪರಿಧಿಗೆ ಒಳಪಡುತ್ತದೆ ಎಂಬ ಕಳೆದ (೨೦೧೭) ಆಗಸ್ಟ್ ೨೪ರ ಸರ್ವೋಚ್ಚ ನ್ಯಾಯಾಲಯದ ತೀರ್ಪು ದೂರಗಾಮಿ ಪರಿಣಾಮದ್ದಾಗಿದೆ. ಖಾಸಗಿತನವೆಂಬುದು ಪ್ರಜೆಯ ವ್ಯಕ್ತಿಘನತೆಯ ಮತ್ತು ನಿಸರ್ಗಸಿದ್ಧ ಆಯ್ಕೆಯ ಸ್ವಾತಂತ್ರ್ಯದ ಅಂಶವೇ ಆಗಿದೆಯೆಂಬುದು ತೀರ್ಪಿನ ಹೃದ್ಭಾಗ. ಖಾಸಗಿತನವು ಸಂವಿಧಾನದ ೨೧ನೇ ವಿಧಿಯಲ್ಲಿ ಗ್ರಂಥಸ್ಥಗೊಂಡಿರುವ ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಾಗೂ ಸಂವಿಧಾನದ ಮೂರನೇ ಖಂಡದಲ್ಲಿ (Part-III) ನಿರ್ದಿಷ್ಟವಾಗಿರುವ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಮುಖ್ಯನ್ಯಾಯಾಧೀಶ ಜೆ.ಎಸ್. ಖೇಹರ್ ಅಧ್ಯಕ್ಷತೆಯ ೯ ನ್ಯಾಯಾಧೀಶರ ಪೀಠವು ಅಭಿಮತ ನೀಡಿರುವುದು ದೇಶದ ಜನತೆಯ ಕೃತಜ್ಞತೆಗೆ ಅರ್ಹವಾಗಿದೆ. ಖಾಸಗಿತನವೆಂಬುದು ಕೇವಲ
ಸಂವಿಧಾನದ ಒಂದು ನಿರ್ಮಿತಿಯಲ್ಲವೆಂದೂ, ಅದು ಪ್ರಕೃತಿಸಿದ್ಧ ಬದುಕುವ ಹಕ್ಕಿನ ಮತ್ತು ವ್ಯಕ್ತಿಸ್ವಾತಂತ್ರ್ಯದ ಅಂಶವಾಗಿದೆ ಎಂದೂ, ಆ ನೈಸರ್ಗಿಕ ತತ್ತ್ವವನ್ನು ಸಂವಿಧಾನವು ಅನುಮೋದನಪೂರ್ವಕ ಉಚ್ಚರಿಸಿದೆಯ? ಎಂದೂ ತೀರ್ಪು ಸ್ಪಷ್ಟೀಕರಿಸಿದೆ. “ಪ್ರತಿಯೊಬ್ಬ ಪ್ರಜೆಗೆ ಅವಶ್ಯವಾಗಿ ಇರಲೇಬೇಕಾದ ಮತ್ತು ಪ್ರತ್ಯೇಕಿಸಲಾಗದ ಮೂಲಭೂತ ಹಕ್ಕನ್ನು ಸಂವಿಧಾನವು ಅನುಮೋದಿಸಿದೆಯ?” ಎಂಬ ತೀರ್ಪಿನ ಮಾತುಗಳು ಅರ್ಥಪೂರ್ಣವಾಗಿವೆ. ಆದರೆ ಇತರ ಮೂಲಭೂತ ಸ್ವಾತಂತ್ರ್ಯಗಳಂತೆಯೇ ಖಾಸಗಿತನದ ಹಕ್ಕು ಕೂಡಾ ಅನಿರ್ಬದ್ಧವಲ್ಲ ಎಂಬ ಟಿಪ್ಪಣಿಯೂ ತೀರ್ಪಿನಲ್ಲಿ ಇದೆ. ಯಾವುದೇ ’ಮೂಲಭೂತ ಹಕ್ಕು’ ಅನಿರ್ಬದ್ಧವಲ್ಲ ಎಂಬುದು ಆಧುನಿಕ ನ್ಯಾಯವ್ಯವಸ್ಥೆಯ ಆಧಾರಸಂಹಿತೆಯ ಸ್ವೀಕೃತ ತತ್ತ್ವವೇ ಆಗಿದೆ.
ಮಹತ್ತ್ವದ ತೀರ್ಪು
ಇದೀಗ ಅನಿಶ್ಚಿತತೆಯ ಸುಳಿಯಲ್ಲಿರುವ ಉದ್ದೇಶಪೂರ್ವಕ ಗರ್ಭಪಾತ; ದಯಾಮರಣ; ಆಹಾರದ ಆಯ್ಕೆ (ಗೋಮಾಂಸ ಭಕ್ಷಣ ಇತ್ಯಾದಿ); ಸಲಿಂಗ ಕಾಮ; ಆಸ್ಪತ್ರೆ ಸೇವೆಗಳಿಗಾಗಿಯೂ ಅಧಾರ್ ಕಾರ್ಡ್ ಲಭ್ಯತೆಯನ್ನು ಕೋರುವುದು; ಗೂಗಲ್, ಫೇಸ್ಬುಕ್, ಊಬರ್ ಮೊದಲಾದ ಕಂಪೆನಿಗಳಿಂದ ವೈಯಕ್ತಿಕ ಮಾಹಿತಿಯ ಬಳಕೆ; ಆಪ್ ಕೂಡ ಕಡ್ಡಾಯವಾಗಿ ಖಾಸಗಿ ಮಾಹಿತಿ ಕೋರುತ್ತಿರುವುದು; ದೂರವಾಣಿಯ ಕದ್ದಾಲಿಕೆ; – ಮೊದಲಾದ ನಾಲ್ಕಾರು ವ್ಯವಹಾರಗಳ ಮೇಲೆ ಮುಂದಿನ ದಿನಗಳಲ್ಲಿ ಈಗಿನ ತೀರ್ಪು ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಬಹುದು. ಎಲ್ಲ ದೃಷ್ಟಿಗಳಿಂದಲೂ ಈಗಿನ ತೀರ್ಪು ತುಂಬಾ ಮಹತ್ತ್ವದ್ದಾಗಿದೆ.
ಸರ್ವೋಚ್ಚ ನ್ಯಾಯಾಲಯದ ಆಗಸ್ಟ್ ೨೪ರ ತೀರ್ಪು ಸಂವಿಧಾನದ ಮೂಲ-ಆಧಾರ ಸಂರಚನೆಯನ್ನು ಕುರಿತ ಕೇಶವಾನಂದಭಾರತಿ ಮೊಕದ್ದಮೆಯ ತೀರ್ಪಿನಷ್ಟು ಮಹತ್ತ್ವದ್ದಾಗಿದೆ ಎಂದು ಹಲವರು ಪರಾಮರ್ಶಕರು ಅಭಿಪ್ರಾಯಪಟ್ಟಿದ್ದಾರೆ (’ಡೆಕ್ಕನ್ ಹೆರಾಲ್ಡ್’ ಸಂಪಾದಕೀಯ, ೨೬-೮-೨೦೧೭).
ಹಾಲಿ ತೀರ್ಪಿನ ಹಿನ್ನೆಲೆಯಲ್ಲಿ ಹಿಂದಿನ ಹಲವು ನ್ಯಾಯಾಲಯಗಳ ತೀರ್ಪುಗಳೂ ಸರ್ಕಾರೀ ಆದೇಶಗಳೂ ಮುಂದಿನ ದಿನಗಳಲ್ಲಿ ಮರುವಿಮರ್ಶೆಗೆ ಒಳಪಡುವ ಸಾಧ್ಯತೆ ಇದೆ.
ಆರಂಭದಿಂದಲೂ ಆಧಾರ್ ಕಾರ್ಡ್ ವ್ಯವಸ್ಥೆಯು ಆಕ್ಷೇಪಗಳನ್ನು ಎದುರಿಸಿದ್ದುದನ್ನು ಸ್ಮರಿಸಬಹುದು. ಅಧಿಕೃತ ಪೌರತ್ವದ ಗುರುತಿನ ಲಾಂಛನವಾಗಿ ಆಧಾರ್ ಉಪಯುಕ್ತವಾಗಿದೆ, ಹಲವು ಸರ್ಕಾರೀ ಯೋಜನೆಗಳ ಕಾರ್ಯಾನ್ವಯದಲ್ಲಿ ಆಧಾರ್ ಪ್ರಯೋಜನಕರವಾಗಿದೆ – ಮೊದಲಾದ ವಾದಗಳು ಗಟ್ಟಿಯಾದ ನೆಲೆಯವೇನಲ್ಲ. ಒಂದು ವೇಳೆ ಯಾವುದೋ ವ್ಯವಸ್ಥೆಯು ಮೂಲದಲ್ಲಿಯೇ ದೋಷಪೂರ್ಣವಾಗಿದ್ದರೆ ಅದರಿಂದ ಯಾರಿಗೋ ಪ್ರಯೋಜನವಾಗಿದೆಯೆಂಬ ಸಂಗತಿಯ ಆಧಾರದ ಮೇಲೆ ಅದನ್ನು ಸಮರ್ಥಿಸಲಾಗದು. ಈ ಭೂಮಿಕೆಯಲ್ಲಿ ಆಧಾರ್ ಕಾರ್ಡ್ ವ್ಯವಸ್ಥೆಯೂ ಕೂಲಂಕಷ ಪರೀಕ್ಷಣೆಯನ್ನು ಬೇಡುತ್ತದೆ. ೨೦೧೨ರ? ಹಿಂದಿನಿಂದಲೇ ಆಧಾರ್ ವ್ಯವಸ್ಥೆಯ ಸಾಂವಿಧಾನಿಕತೆಯನ್ನು ಸರ್ವೋಚ್ಚ ನ್ಯಾಯಾಲಯದ ಮಟ್ಟದಲ್ಲಿಯೂ ಪ್ರಶ್ನಿಸಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿಗೆ ನಿಮಿತ್ತವಾದವು ಇದೀಗ ಸರ್ವವ್ಯಾಪಿಯೆನಿಸಿರುವ ಆಧಾರ್ ಕಾರ್ಡ್ ವ್ಯವಸ್ಥೆಯ ಹಿನ್ನೆಲೆಯಲ್ಲಿ ವಿವಿಧ ವ್ಯವಹಾರಗಳಿಗೆ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸುತ್ತ ಸಾಗಿರುವ ಸರ್ಕಾರೀ ಧೋರಣೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ದಾಖಲೆಯಾಗಿದ್ದ ೨೦ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು.
ಸರ್ವೋಚ್ಚ ನ್ಯಾಯಾಲಯದ ಪ್ರಾಂಗಣದಲ್ಲಿ
ಉದ್ದಿಷ್ಟ ಆಧಾರ್ ವ್ಯವಸ್ಥೆಯು ಪ್ರಜೆಯ ಖಾಸಗಿತನ ಮೊದಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಮೊತ್ತಮೊದಲಿಗೆ ೨೦೧೨ರಲ್ಲಿಯೆ ಮನವಿ ಸಲ್ಲಿಸಿದ್ದವರು ಕರ್ನಾಟಕದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಕೆ.ಎಸ್. ಪುಟ್ಟಸ್ವಾಮಿ ಅವರು. ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಅವರು (ಜನನ: ೮-೨-೧೯೨೬) ಈಗ ೯೧ ವರ್ಷ ವಯಸ್ಸಿನ ವೃದ್ಧರು; ೧೯೭೦ರ ದಶಕದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದವರು; ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣದ ಮೊದಲ ಉಪಾಧ್ಯಕ್ಷರಾಗಿದ್ದವರು (೧೯೮೬). ಅವರು ದಶಕಗಳುದ್ದಕ್ಕೂ ಸಮಾಜಹಿತ ಕಾರ್ಯಗಳಲ್ಲಿ ನಿರತರು; ’ಇಂಡಿಯನ್ ಲಿಬರಲ್ ಗ್ರೂಪ್’ ಸಂಘಟನೆಯ ಬೆಂಗಳೂರು ಘಟಕದ ಅಧ್ಯಕ್ಷರು.
ನ್ಯಾ|| ಕೆ.ಎಸ್. ಪುಟ್ಟಸ್ವಾಮಿಯವರೊಡನೆ ಸಹ- ಮನವಿದಾರರಾಗಿದ್ದವರು ಮ್ಯಾಕ್ಸೇಸೇ ಪ್ರಶಸ್ತಿಪುರಸ್ಕೃತ ಸಾಮಾಜಿಕ ಕಾರ್ಯಕರ್ತರಾದ ಬೆಜವಾಡ ವಿಲ್ಸನ್. ಹಿಂದಿನ ಒಂದೆರಡು ಪ್ರಸಂಗಗಳಲ್ಲಿ ಸಂದರ್ಭವಶದಿಂದ ಅಸಮರ್ಪಕ ತೀರ್ಪು ಹೊರಬಿದ್ದಿದ್ದರೂ (ಉದಾ: ತುರ್ತುಪರಿಸ್ಥಿತಿಯ ಕಾಲದ ADM Jabalpur vs Shivakant Shuklaಮೊಕದ್ದಮೆ) ಪರಿಸ್ಥಿತಿಯನ್ನು ನೇರ್ಪಡಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ಅವಕಾಶ ಒದಗಿರಲಿಲ್ಲ. ಆ ಅವಕಾಶವನ್ನು ತಮ್ಮ ಮನವಿಯ ಮೂಲಕ ಈಗ ಒದಗಿಸಿದವರು ನ್ಯಾ|| ಕೆ.ಸ್. ಪುಟ್ಟಸ್ವಾಮಿ.
ನ್ಯಾ|| ಪುಟ್ಟಸ್ವಾಮಿ ಅವರು ಮಂಡಿಸಿದ ಆಧಾರಪೂರ್ಣ ವಾದವನ್ನು ಸರ್ವೋಚ್ಚ ನ್ಯಾಯಾಲಯದ ಆಗಸ್ಟ್ ೨೪ರ ತೀರ್ಪು ಎತ್ತಿಹಿಡಿದಂತಾಗಿದೆ.
ಆಧಾರ್ ವ್ಯವಸ್ಥೆಯು ಶಿಷ್ಟ ಪರಿಮಿತಿಗಳನ್ನು ಉಲ್ಲಂಘಿಸಿ ಅತಿವ್ಯಾಪ್ತಿಯದಾಗಿದೆ ಎಂದು ಅರಂಭದಿಂದ ಸಮಾಜವನ್ನೂ ಸರ್ಕಾರವನ್ನೂ ಎಚ್ಚರಿಸುತ್ತ ಬಂದ ಹಿರಿಯರಾದ ನ್ಯಾ|| ಪುಟ್ಟಸ್ವಾಮಿ ಅವರು ವಂದನೆಗೆ ಪಾತ್ರರಾಗಿದ್ದಾರೆ.
ಯು.ಪಿ.ಎ. ಅಧಿಕಾರಾವಧಿಯಲ್ಲಿ ಸಂಸತ್ತಿನಲ್ಲಿ ಮಂಡಿತವಾಗಿ ಪರಿಶೀಲನೆಯಲ್ಲಿದ್ದ National
Identification Authority of India Bill 2010 ಮಸೂದೆಯನ್ನು ಸಂಸದಂಗೀಕಾರವಿಲ್ಲದೆಯೇ ಕಾರ್ಯಾನ್ವಯಗೊಳಿಸಲು ಆಧಾರ್ ಆದೇಶ ಹೊರಟಿದೆಯೆಂದೂ ಈ ಪ್ರಕ್ರಿಯೆಯು ಸಂವಿಧಾನದ ೨೧ನೇ ವಿಧಿಯನ್ವಯ ಪ್ರಜೆಗಳಿಗೆ ಇರುವ ಮೂಲಭೂತ ಹಕ್ಕುಗಳ ಮತ್ತು ವಿಶೇ?ವಾಗಿ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದೂ ಮನವಿಯಲ್ಲಿ ನ್ಯಾ|| ಪುಟ್ಟಸ್ವಾಮಿ ಅವರು ವಾದಿಸಿದ್ದರು; ಮಾತ್ರವಲ್ಲದೆ ಉದ್ದಿಷ್ಟ ವ್ಯವಸ್ಥೆಯ ಶಿಥಿಲತೆಯಿಂದಾಗಿ ಪರೀಕ್ಷಣೆಯೇ ಇಲ್ಲದೆ ಅಕ್ರಮ ವಲಸಿಗರು ಆಧಾರ್ ಕಾರ್ಡನ್ನು ಪಡೆದುಕೊಳ್ಳುವ ಸಾಧ್ಯತೆ ಇದೆಯೆಂದೂ ನ್ಯಾ|| ಪುಟ್ಟಸ್ವಾಮಿ ಅವರು ಶಂಕೆಯನ್ನು ವ್ಯಕ್ತಪಡಿಸಿದ್ದರು; ಆ ಹಿನ್ನೆಲೆಯಲ್ಲಿ ಆಧಾರ್ ವ್ಯವಸ್ಥೆಗೆ ದಾರಿಮಾಡಲು ಹಿಂದಿನ ಯು.ಪಿ.ಎ. ಸರ್ಕಾರವು ೨೦೦೯ ಜನವರಿ ೨೮ ರಂದು ಹೊರಡಿಸಿದ್ದ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿದ್ದರು.
’ಐಚ್ಛಿಕತೆ’ಯ ಹೊಸಲಿನಿಂದಾಚೆಗೆ
ಸರ್ವೋಚ್ಚ ನ್ಯಾಯಾಲಯದ ವಿಚಾರಣೆಯಲ್ಲಿ ಕೇಂದ್ರಸರ್ಕಾರವು ಆಧಾರ್ ನೋಂದಣಿಯು ಐಚ್ಛಿಕಮಾತ್ರವೆಂದೂ ವಿವಾಹ ದಾಖಲಾತಿ, ಸಂಬಳಸಾರಿಗೆ ವಿತರಣೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ಬೇರೆಬೇರೆ ರಾಜ್ಯಗಳಲ್ಲಿ ಬೇರೆಬೇರೆ ನಿಯಮಗಳು ಅನುಸರಣೆಯಲ್ಲಿರುವುದನ್ನು ಆಧಾರ್ ಸುವ್ಯವಸ್ಥಗೊಳಿಸಬೇಕೆಂದು ಸರ್ಕಾರವು ಉದ್ದೇಶಿಸಿದೆಯೆಂದೂ ಹೇಳಿಕೆ ನೀಡಿತ್ತು.
೨೦೧೩ರ ಸೆಪ್ಟೆಂಬರ್ ೨೩ರಂದು ಸರ್ವೋಚ್ಚ ನ್ಯಾಯಾಲಯವು “ಆಧಾರ್ ಕಾರ್ಡ್ ಕಡ್ಡಾಯವೆಂದು ಸರ್ಕಾರದ ಯಾವುದೇ ಅಂಗವು ಸುತ್ತೋಲೆ ಕಳಿಸಿದರೂ ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕಾಗಿ ಯಾವೊಬ್ಬ ಪ್ರಜೆಗೂ ತೊಂದರೆಯಾಗಬಾರದು” ಎಂದೂ ಅಕ್ರಮವಲಸಿಗರಿಗೆ ಆಧಾರ್ ಕಾರ್ಡ್ ನೀಡಿಕೆಯನ್ನು ಸರ್ವಥಾ ಪ್ರತಿಬಂಧಿಸಬೇಕೆಂದೂ ತೀರ್ಪನ್ನು ಘೋಷಿಸಿತ್ತು.
ಅದಾದ ಒಂದು ತಿಂಗಳ ತರುವಾಯ ಕೇಂದ್ರಸರ್ಕಾರವು ಎಲ್.ಪಿ.ಜಿ. (ಅಡಿಗೆ ಅನಿಲ) ಸಬ್ಸಿಡಿ ವಿತರಣೆಗೆ ಆಧಾರ್ ಕಾರ್ಡ್ ನೋಂದಣಿ ಅನುಕೂಲಕರ ಎಂದು ಮನವಿ ಸಲ್ಲಿಸಿದಾಗಲೂ ಸರ್ವೋಚ್ಚ ನ್ಯಾಯಾಲಯ ತನ್ನ ಸೆಪ್ಟೆಂಬರ್ ೨೩ರ ಆದೇಶವನ್ನು ಸ್ಥಿರೀಕರಿಸಿತು; ಯಾವುದೇ ಕಾರಣಕ್ಕೂ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಹೇಳಿತು.
ಪ್ರಜೆಗಳಿಗೆ ಹಾನಿಯಾಗದಂತೆ ಆಧಾರ್ಗಾಗಿ ಸಂಗ್ರಹಗೊಂಡ ಮಾಹಿತಿಯನ್ನು ಸಂರಕ್ಷಿಸಲಾಗುವುದು ಎಂಬ ಸರ್ಕಾರದ ಹೇಳಿಕೆ ಬುಡವಿಲ್ಲದ್ದು. ಖಾದಿ ಆಯೋಗ, ಕೇರಳದ ಪಿಂಚಣಿ ವಿಭಾಗ, ಝಾರ್ಖಂಡದ ಸಾಮಾಜಿಕ ಭದ್ರತಾ ನಿರ್ದೇಶನಾಲಯ, ತೆಲಂಗಾಣದ ಹಿಂದುಳಿದ ವರ್ಗಗಳ ಶಿಕ್ಷಣಕ್ಕೆ ಸಂಬಂಧಪಟ್ಟ ಇಲಾಖೆ, ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ – ಮೊದಲಾದ ಅನೇಕ ಸಂಸ್ಥೆಗಳ ಆಧಾರ್-ಸಂಬಂಧಿತ ಮಾಹಿತಿಗಳು ಅನಧಿಕೃತವಾಗಿ ಅನ್ಯರ ಕೈಸೇರಿರುವುದು ಸ್ಥಿರಪಟ್ಟಿದೆ.
ಅಲ್ಲಿಂದೀಚೆಗೆ ಹಲವಾರು ಸರ್ಕಾರೀ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಲಭ್ಯತೆಯನ್ನು ಸರ್ಕಾರವು ನಿಗದಿಗೊಳಿಸುತ್ತಿದ್ದುದನ್ನು ಪ್ರಶ್ನಿಸಿ ನಿವೃತ್ತ ಸೇನಾಧಿಕಾರಿ ಮ್ಯಾಥ್ಯೂ ಥಾಮಸ್ ಎಂಬವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದರು.
ಆಧಾರ್ ಮತ್ತು ಜನಕಲ್ಯಾಣ ಯೋಜನೆಗಳು
ಏತನ್ಮಧ್ಯೆ ಎನ್.ಡಿ.ಎ. ಸರ್ಕಾರ ಅಧಿಷ್ಠಿತವಾಗಿದ್ದು ವಿವಿಧ ಸೌಲಭ್ಯಗಳಿಗೆ ಆಧಾರ್ ಕಡ್ಡಾಯವಲ್ಲವೆಂದು ಸಮಾಧಾನ ನೀಡಿತ್ತು. ಯಾವುದೇ ಸವಲತ್ತಿನ ನೀಡಿಕೆU ಸರ್ಕಾರವು ಆಧಾರ್ ಕಾರ್ಡಿನ ಲಭ್ಯತೆಯನ್ನು ಕೇಳುವುದು ಕಾನೂನುಬಾಹಿರವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ೨೦೧೫ರ ಮಾರ್ಚ್ ತಿಂಗಳಲ್ಲಿ ಕೇಂದ್ರಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು.
೨೦೧೫ರ ಜುಲೈ ತಿಂಗಳಲ್ಲಿ ಕೇಂದ್ರಸರ್ಕಾರವು ಆಧಾರ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದಲ್ಲಿ ಹಲವಾರು ಜನಕಲ್ಯಾಣ ಯೋಜನೆಗಳ ಕಾರ್ಯಾನ್ವಯಕ್ಕೆ ಧಕ್ಕೆ ಬರುತ್ತದೆಂದು ಹೇಳಿಕೆ ನೀಡಿತ್ತು. ಆ ನಿಲವಿಗೆ ಪೋಷಕವಾಗಿ ಸರ್ಕಾರವು ಖಾಸಗಿತನದ ಹಕ್ಕು ಮೂಲಭೂತ ಹಕ್ಕುಗಳ ಪ್ರಾಕಾರಕ್ಕೆ ಒಳಪಡದೆಂಬ ೧೯೫೪ರ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನೂ ೧೯೬೩ರ ಅದೇ ಆಶಯದ ಇನ್ನೊಂದು ತೀರ್ಪನ್ನೂ ಉಲ್ಲೇಖಿಸಿತ್ತು.
೨೦೧೫ರ ಅಕ್ಟೋಬರ್ ತಿಂಗಳಲ್ಲಿ ಆಧಾರ್ ಪ್ರಾಧಿಕಾರ, ರಿಸರ್ವ್ ಬ್ಯಾಂಕ್, ಸೆಬಿ ಮೊದಲಾದ ಸಂಸ್ಥೆಗಳು ಮನವಿ ಸಲ್ಲಿಸಿದಾಗ ಪ್ರಧಾನಮಂತ್ರಿ ಜನಧನ ಯೋಜನೆ, ಉದ್ಯೋಗ ಭರವಸೆ ಯೋಜನೆ, ಪಿಂಚಣಿ ವಿತರಣೆ, ಪ್ರಾವಿಡೆಂಟ್ ಫಂಡ್ ಮೊದಲಾದ ಯೋಜನೆಗಳ ಅನ್ವಯಕ್ಕೆ ಆಧಾರ್ ವ್ಯವಸ್ಥೆಯನ್ನು ಸಾರ್ವಜನಿಕರ ಅನುಮೋದನೆ ದೊರೆತಲ್ಲಿ ಬಳಸಬಹುದು ಎಂದು ಕರಾರುಬದ್ಧ ಆದೇಶ ನೀಡಿದರೂ ೨೦೧೩ ಸೆಪ್ಟೆಂಬರ್ ೨೩ರ ನಿರ್ದೇಶವನ್ನು ಸರ್ಕಾರವು ಪಾಲಿಸುವುದು ಕಡ್ಡಾಯವೆಂದು ಪುನರುಚ್ಚರಿಸಿತು.
ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುವ ಯಾವುದೇ ಸರ್ಕಾರೀ ನಡಾವಳಿಯ ಸಿಂಧುತ್ವವನ್ನು ಪ್ರಜಾಸ್ವಾತಂತ್ರ್ಯದ ಅನುಲ್ಲಂಘ್ಯತೆಯ ಒರೆಗಲ್ಲಿಗೆ ಹಚ್ಚಿ ಮಾತ್ರ ಪರೀಕ್ಷಿಸಬಹುದು – ಎಂದು ೯ ಮಂದಿಯ ಪೀಠ ಸದಸ್ಯರಲ್ಲೊಬ್ಬರಾದ ನ್ಯಾ| ಡಿ.ವೈ. ಚಂದ್ರಚೂಡ್ ಸ್ಫುಟೀಕರಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಆಧಾರ್ ವ್ಯವಸ್ಥೆಯನ್ನು ಶಾಸನಬದ್ಧಗೊಳಿಸುವ ದೃಷ್ಟಿಯಿಂದ ’ಆಧಾರ್ ಆಕ್ಟ್ ೨೦೧೬’ ಜಾರಿಗೊಳಿಸಲಾಯಿತು. ಈ ವರ್ಷದ (೨೦೧೭) ಆದಾಯ ತೆರಿಗೆ ಕಾಯ್ದೆ ತಿದ್ದುಪಡಿಯಲ್ಲಿ ತೆರಿಗೆದಾರರ ’ಪ್ಯಾನ್’ ಕಾರ್ಡನ್ನು ಆಧಾರ್ ಕಾರ್ಡಿಗೆ ಸಂಲಗ್ನಗೊಳಿಸತಕ್ಕದ್ದೆಂದು ಘೋಷಿಸಲಾಯಿತು. ಅದನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಪ್ರಶ್ನಿಸಿದಾಗ ಸರ್ವೋಚ್ಚ ನ್ಯಾಯಾಲಯವು ಆದಾಯ ತೆರಿಗೆ ಕಾಯ್ದೆ ತಿದ್ದುಪಡಿಯು ಕಾನೂನುಬದ್ಧವಾಗಿದೆ ಎಂದು ತೀರ್ಪಿತ್ತಿತು. ಅನಂತರದಲ್ಲಿ ಮಾಕ್ಸೇಸೇ ಪ್ರಶಸ್ತಿ ಪಾತ್ರ ಶಾಂತಿಸಿಂಹ ಅವರೂ ಸೇರಿದಂತೆ ನಾಲ್ಕಾರು ಮಂದಿ ಗಣ್ಯರು ಆಧಾರ್ಗೆ ಸಂಬಂಧಿಸಿದ (ಕಲ್ಯಾಣ ಕಾರ್ಯಕ್ರಮಗಳ ಅನ್ವಯಕ್ಕೆ ಆಧಾರ್ ಕಡ್ಡಾಯವೆಂಬ) ೧೭ ಸರ್ಕಾರೀ ಆದೇಶಗಳ ಸಿಂಧುತ್ವವನ್ನು ಪ್ರಶ್ನಿಸಿ ಹಲವಾರು ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ಸಲ್ಲಿಸಿದರು.
ಈ ಹಿಂದೆ ಐದು ಮಂದಿ ನ್ಯಾಯಾಧೀಶರ ನ್ಯಾಯಪೀಠದ ಮುಂದೆ ಆಧಾರ್ ಆಕ್ಟಿನ ಸಾಂವಿಧಾನಿಕತೆ ಪರಿಶೀಲನೆಗೆ ಬಂದಾಗ ವಿಷಯವು ಖಾಸಗಿತನವು ಮೂಲಭೂತ ಹಕ್ಕು ಆಗಿದೆಯೆ ಎಂಬ ಸಂಕೀರ್ಣ ಅಂಶವನ್ನು ಒಳಗೊಂಡಿದ್ದುದರಿಂದ ವಿಚಾರಣೆ ಮುಂದುವರಿಯಲು ಅವಕಾಶವಾಗದೆ ಅನಂತರ ಒಂಬತ್ತು ಮಂದಿ ನ್ಯಾಯಾಧೀಶರ ನ್ಯಾಯಪೀಠವನ್ನು ರಚಿಸಲಾಗಿತ್ತು.
ಈ ಹಲವಾರು ಮೊಕದ್ದಮೆಗಳನ್ನು ವಿಚಾರಣೆಗೆ ಒಳಪಡಿಸಿದುದರ ಫಲವಾಗಿಯೆ ಸರ್ವೋಚ್ಚ ನ್ಯಾಯಾಲಯದ ೨೦೧೭ ಆಗಸ್ಟ್ ೨೪ರ ತೀರ್ಪು ಹೊರಬಂದಿರುವುದು. ಅದಕ್ಕೆ ಕೇಂದ್ರಸರ್ಕಾರದ ಕಡೆಯಿಂದ ಯಾವ ಪ್ರತಿಕ್ರಿಯೆ ಬಂದೀತೆಂದು ಕಾದು ನೋಡಬೇಕಾಗಿದೆ.
೯ ಮಂದಿ ನ್ಯಾಯಾಧೀಶರ ಪೀಠದ ಪರವಾಗಿ ತೀರ್ಪನ್ನು ಘೋಷಿಸಿದ ನ್ಯಾ|| ಡಿ.ವೈ. ಚಂದ್ರಚೂಡ್ ಅವರು ನೀಡಿರುವ ಈ ವ್ಯಾಖ್ಯೆಯು ಪಥದರ್ಶಕವಾಗಿದೆ:
“ಸಂವಿಧಾನ ರಚಯಿತರು ಕಲ್ಪಿಸಿದ್ದ ಹಕ್ಕುಗಳ ಭರವಸೆಯನ್ನು ಈ ಸರ್ವೋಚ್ಚ ನ್ಯಾಯಾಲಯವು ಸಂಕುಚಿತಗೊಳಿಸಲಾಗದು. ಸಂವಿಧಾನವು ಒಂದು ಐತಿಹಾಸಿಕ ಸಂದರ್ಭದಲ್ಲಿ ಗ್ರಂಥಸ್ಥಗೊಂಡಿತು. ಅದರ ರಚಯಿತರ ದರ್ಶನಕ್ಕೆ ಈ ದೇಶದಲ್ಲಿಯೂ ಬೇರೆಡೆಗಳಲ್ಲೂ ಅಸಂಖ್ಯ ಜನರ ವ್ಯಕ್ತಿಘನತೆಯ ಮೇಲೆ ನಡೆದಿದ್ದ ಆಘಾತಗಳ ಪರಿಜ್ಞಾನದ ಹಿನ್ನೆಲೆ ಇದ್ದಿತು. ಈಚಿನ ಕಾಲದಲ್ಲಿ ಸಮಾಜಕ್ಕೆ ಎದುರಾಗಿರುವ ಜಟಿಲತೆಗಳು ಆಗ ಅವರ ನೋಟದ ಕಕ್ಷೆಯಲ್ಲಿ ಬರುವ ಸಂಭವ ಇರಲಿಲ್ಲ. ಮುಂದಿನ ದಿನಗಳಲ್ಲಿ ಖಾಸಗಿತನದ ಹಕ್ಕಿನ ಪರಿಧಿಗಳನ್ನು ನ್ಯಾಯಾಂಗವು ಪರಿ?ರಿಸುತ್ತ ಹೋಗಬೇಕಾಗುತ್ತದೆ. ಆ ಪ್ರಕ್ರಿಯೆಗೆ ಆಧಾರವಾಗಬೇಕಾದವು (೧) ಅಸ್ತಿತ್ವದಲ್ಲಿರುವ ಕಾನೂನು; (೨) ವಸ್ತುನಿ?ವೂ ಸ್ವಚ್ಛಂದವಲ್ಲದುದೂ ಆದ ಸರ್ಕಾರದ ಆಶಯ; ಮತ್ತು (೩) ಸರ್ಕಾರದ ಗುರಿಯ ಸಾಧನೆಯು ಶಿ? ಪರಿಮಿತಿಗಳನ್ನು ಮೀರದೆ ಪ್ರಮಾಣಬದ್ಧವಾಗಿರಬೇಕಾದುದು; – ಇವು.”
ಇದೇ ಸಂದರ್ಭದಲ್ಲಿ ಆಧಾರ್ ಕುರಿತು ಇನ್ನು ಕೆಲವು ಹಿನ್ನೆಲೆ ಸಂಗತಿಗಳನ್ನು ಸ್ಮರಿಸಬಹುದು.
* * * * *
’ಮಾನವ ಹಕ್ಕು’
ಪ್ರಜೆಗಳ ಖಾಸಗಿ ಮಾಹಿತಿಗಳ ದುರುಪಯೋಗವನ್ನು ನಿವಾರಿಸುವುದಕ್ಕಾಗಿ ನಿಯಮಾವಳಿಯನ್ನು ರೂಪಿಸಲು ಈಗಾಗಲೆ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರ ಅಧ್ಯಕ್ಷತೆಯ ಹತ್ತು ಮಂದಿ ಸದಸ್ಯರ ಸಮಿತಿಯು ಕಾರ್ಯರತವಾಗಿದ್ದು ಈ ವ?ದ (೨೦೧೭) ಅಂತ್ಯದೊಳಗೆ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದೆ.
ಖಾಸಗಿತನದ ಸುರಕ್ಷಿತತೆಯು ಒಂದು ಮೂಲಭೂತ ಹಕ್ಕು – ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಘೋಷಣೆ (United Nations Declaration of Human Rights) ಅಸಂದಿಗ್ಧವಾಗಿ ಪರಿಗಣಿಸಿದೆ:
“No one shall be subjected to arbitrary interference with his privacy, family, home or correspondence, nor to attacks upon his honour and reputation. Everyone has the right to the protection of the law against such interference
or attacks.”
ಆ ಘೋಷಣೆಗೆ ಭಾರತ ಸರ್ಕಾರವೂ ಅನುಮೋದನೆ ನೀಡಿ ಸಹಿ ಮಾಡಿದೆ.
ಸಂಖ್ಯಾಂಕನ
ಎಲ್ಲ ಪ್ರಜೆಗಳಿಗೂ ಒಂದು ಅನನ್ಯ ರೀತಿಯ (ಎಂದರೆ ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟವಾದ) ಗುರುತಿನ ಸಂಖ್ಯೆ ಇರುವುದು ಅಪೇಕ್ಷಣೀಯವೆಂಬ ಕಲ್ಪನೆಯು ಮೊದಲು ಉದಿಸಿದುದು ೧೯೯೦ರ ದಶಕದಲ್ಲಿ, ಭಯೋತ್ಪಾದನ ನಿಯಂತ್ರಣದ ಹಿನ್ನೆಲೆಯಲ್ಲಿ. ಆ ಸನ್ನಿವೇಶದಲ್ಲಿ ವಾಜಪೇಯಿ ಸರ್ಕಾರವು ೨೦೦೩ರಲ್ಲಿ Multipurpose National Identity Card (MNIC) ವ್ಯವಸ್ಥೆಯನ್ನು ರೂಪಿಸಿತು. ಆ ಹಂತದಲ್ಲಿ ಪ್ರತಿ ಪ್ರಜೆಯ ಹೆಸರಿಗೆ ಪ್ರತ್ಯೇಕ ಸಂಖ್ಯಾಂಕನವನ್ನು ನಿಗದಿಪಡಿಸುವ ಯೋಜನೆಯಷ್ಟೇ ಇದ್ದಿತು. ಆದರೆ ಮರುವರ್ಷ (೨೦೦೪-೦೫) ಸಾರ್ವಜನಿಕ ಅಭಿಪ್ರಾಯ ಕೇಳದೆಯೇ MNIC ಸಂಖ್ಯೆಯೊಡನೆ ಬಯೋಮೆಟ್ರಿಕ್ ಮಾಹಿತಿಯನ್ನೂ ಸೇರ್ಪಡೆಗೊಳಿಸಲಾಯಿತು. ಅದರಿಂದ ಇನ್ನಷ್ಟು ಗೊಂದಲ ಏರ್ಪಟ್ಟಿತು; ಯಾರು ಅಧಿಕೃತ ನಾಗರಿಕರೆಂಬ ನಿರ್ಣಯವೇ ಗೋಜಲಾಯಿತು. ವಿಷಯಕ್ಕೆ ಸಮಗ್ರ ಪರಿಹಾರದ ರೀತಿಯಲ್ಲಿ ೨೦೦೮ರಲ್ಲಿ Unique Identification Authority of
India ಪ್ರಾಧಿಕಾರವನ್ನು ರಚಿಸಲಾಯಿತು. ಅದರಿಂದ ಭಿನ್ನವಾಗಿ ಅಭಿವೃದ್ಧಿಕಾರ್ಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಂಖ್ಯಾಂಕನವೊಂದನ್ನು ಯೋಜನಾ ಆಯೋಗ ಸೂಚಿಸಿತು. National Population Register ದಾಖಲಾತಿಗಳನ್ನು ಆಧಾರ್ ಪ್ರಾಧಿಕಾರದ ಯೋಜನೆಗೆ ಹೊಂದಿಸಲಾಯಿತು. ಈ ಸಂಪರ್ಕ ಕೊಂಡಿಯಿಂದಾಗಿಯೇ ಆಧಾರ್ ವಿ?ಯದಲ್ಲಿ ಖಾಸಗಿತನದ ಮತ್ತು ರಾಷ್ಟ್ರೀಯ ಭದ್ರತೆಯ ಪ್ರಶ್ನೆಗಳು ಮುನ್ನೆಲೆಗೆ ಬಂದಿರುವುದು. ಐನಾತಿ ಸಂಗತಿಯೆಂದರೆ – ಯಾವುದೋ ವಿಶಿ? ಉದ್ದೇಶಕ್ಕಾಗಿ ಸಂಗ್ರಹಿಸಲ್ಪಟ್ಟಿದ್ದ ಮಾಹಿತಿಯು ಅನಂತರದಲ್ಲಿ ಬಿಡಿಬೀಸಾಗಿ ಅನ್ಯ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವುದು.
ಸುರಕ್ಷಿತತೆ ಸಾಧ್ಯವೆ?
ಈಗಿನ ತಂತ್ರಜ್ಞಾನ ಸ್ಥಿತಿಯಲ್ಲಿ ಒಮ್ಮೆ ಸಂಗ್ರಹಗೊಂಡ ಮಾಹಿತಿಯು ಇತರರಿಂದ ಪ್ರಶ್ನಾರ್ಹ ಉದ್ದೇಶಗಳಿಗಾಗಿ ಬಳಕೆಗೊಳ್ಳುವುದು ತೀರಾ ಸುಲಭಸಾಧ್ಯ. ಇದನ್ನು ನಿವಾರಿಸಲಾಗಲಿ ಅಕ್ರಮ ವಲಸಿಗರಿಗೆ ಕಾರ್ಡ್ ನೀಡಿಕೆಯನ್ನು ಪ್ರತಿಬಂಧಿಸುವುದಕ್ಕಾಗಲಿ ಸರ್ಕಾರವು ಸಮರ್ಪಕ ಕ್ರಮಗಳನ್ನು ಕೈಗೊಂಡಿರುವಂತೆ ತೋರುತ್ತಿಲ್ಲ.
ಆರಂಭದ ಹಂತಗಳಲ್ಲಿ ಆಧಾರ್ ಕಾರ್ಡ್ ನೀಡಿಕೆ ಐಚ್ಛಿಕ ಎಂಬ ಘೋ?ಣೆ ಇದ್ದರೂ ವ್ಯಾವಹಾರಿಕ ಮಟ್ಟದಲ್ಲಿ ವಿವಿಧ ಸೇವೆಗಳ ಲಭ್ಯತೆಗೆ ಅದನ್ನು ಕಡ್ಡಾಯಗೊಳಿಸುವ ದಿಕ್ಕಿನಲ್ಲಿ ೨೦೧೧ರಿಂದಲೇ ಪ್ರಯತ್ನಗಳು ನಡೆದಿವೆ. ಅದಕ್ಕೆ ಆಗಿನ ಯು.ಪಿಎ. ಸರ್ಕಾರದ ಪೂರ್ಣ ಮದ್ದತು ಇದ್ದಿತು. ಎ?ಮಟ್ಟಿಗೆ ಎಂದರೆ ಆಧಾರ್ ವ್ಯವಸ್ಥೆಯನ್ನು ತಾವು ಅಧಿಕಾರಕ್ಕೆ ಬಂದಲ್ಲಿ ಪ್ರತಿಬಂಧಿಸುತ್ತೇವೆ ಎಂದೇ ಭಾಜಪಾ ವರಿ?ರ ಚುನಾವಣಾ ಪ್ರಚಾರ ನಡೆದಿತ್ತು. ಆದರೆ ಅನಂತರ ಪರಿಸ್ಥಿತಿ ತಿರುವುಮುರುವಾಯಿತು.
ಬ್ಯಾಂಕ್ ಖಾತೆಗಳನ್ನೂ ಮೊಬೈಲ್ ಫೋನ್ಗಳನ್ನೂ ಆಧಾರ್ ಕಾರ್ಡಿನೊಡನೆ ಸಂಬದ್ಧಗೊಳಿಸುವುದು ಅವಶ್ಯವೆಂದು ಈಗಾಗಲೆ ಅಸಂಖ್ಯ ನಾಗರಿಕರಿಗೆ ಬ್ಯಾಂಕುಗಳಿಂದಲೂ ಏರ್ಟೆಲ್ ಇತ್ಯಾದಿ ಜಾಲಗಳಿಂದಲೂ ಸೂಚನೆಗಳು ಬಂದಿವೆ.
ಇದು ಎಷ್ಟಮಟ್ಟಿಗೆ ಸಮರ್ಥನೀಯ? ವ್ಯಕ್ತಿಯ ನಾಗರಿಕತ್ವಕ್ಕೆ ಪುರಾವೆ ಕೇಳುವುದಷ್ಟೇ ಉದ್ದೇಶವಾಗಿದ್ದಿದ್ದರೆ ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್, ಮತದಾರ ಗುರುತಿನ ಚೀಟಿ, ಪಾಸ್ಪೋರ್ಟ್, ಟೆಲಿಫೋನ್ ಬಿಲ್, ವಿದ್ಯುತ್ತಿನ ಬಿಲ್ ಮೊದಲಾದ ನಾಲ್ಕಾರು ಸಾಧನಗಳು ಹಿಂದಿನಿಂದ ಇರಲಿಲ್ಲವೆ? ಅವೆಲ್ಲದರ ಜೊತೆಗೆ ಮತ್ತೊಂದು ಗುರುತು ಪದ್ಧತಿಯನ್ನು ಭಾರವಾಗಿ ಹೇರುವ ಆವಶ್ಯಕತೆ ಇದ್ದಿತೆ?
ದಿಕ್ಸೂಚಕ ತೀರ್ಪು
ನಿಸರ್ಗಲಬ್ಧವಾದ ಖಾಸಗಿತನದ ಹಕ್ಕನ್ನು ಆಧಾರ್ ಅತಿವ್ಯಾಪಕತೆಯು ಉಲ್ಲಂಘಿಸುತ್ತಿರುವುದು ಕಾನೂನಿನ ಉಲ್ಲಂಘನೆ ಮಾತ್ರವಲ್ಲದೆ ವ್ಯಕ್ತಿಗೌರವಕ್ಕೆ ಅವಮಾನಕಾರಿಯೂ ಆಗಿದೆ.
ಖಾಸಗಿತನವೆಂಬುದು ಪ್ರಜಾಸ್ವಾತಂತ್ರ್ಯದ ಒಂದು ಅಂಶ ಮಾತ್ರವೆಂಬ ಮತ್ತು ಅಸ್ಫುಟತೆಯ ಕಾರಣದಿಂದ ಅದನ್ನು ಮೂಲಭೂತಹಕ್ಕು ಎಂದು ಪರಿಗಣಿಸಲಾಗದೆಂಬ ಅಟಾರ್ನಿ-ಜನರಲ್ ಕೆ.ಕೆ. ವೇಣುಗೋಪಾಲ್ ಅವರ ವಾದವನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿಹಾಕಿದೆ.
Kharak Singh vs State of Uttar Pradesh ಮೊಕದ್ದಮೆಯ ತೀರ್ಪಿನಲ್ಲಿ ಅಭಿಪ್ರಾಯಭೇದ ವ್ಯಕ್ತಪಡಿಸಿದ್ದ ನ್ಯಾ|| ಸುಬ್ಬರಾವ್ ಅವರ “ಸಂವಿಧಾನದಲ್ಲಿ ಇದನ್ನು ಕುರಿತು ಕಂಠೋಕ್ತ ಸೂಚನೆ ಇರದಿದ್ದರೂ ಖಾಸಗಿತನವು ಮೂಲಭೂತ ಹಕ್ಕೆಂಬುದನ್ನು ನಿರಾಕರಿಸಿದರೆ ವ್ಯಕ್ತಿಸ್ವಾತಂತ್ರ್ಯಕ್ಕೆ ಅರ್ಥವೇ ಉಳಿಯುವುದಿಲ್ಲ” ಎಂಬ ನಿಲವನ್ನು ಈಗಿನ ಸರ್ವೋಚ್ಚ ನ್ಯಾಯಾಲಯದ ತೀರ್ಪು ಪುಷ್ಟೀಕರಿಸಿದಂತೆ ಆಗಿದೆ.
ಖಾಸಗಿತನದ ಹಕ್ಕುಗಳಿಗೆ ಸಂಬಂಧಿಸಿ ಯಾವುದೇ ಹೊಸ ನಿಯಮಗಳನ್ನು ಜಾರಿಗೊಳಿಸಹೊರಟರೂ ಅವು ಸಂವಿಧಾನದ ೨೧ನೇ ವಿಧಿಯ ಪ್ರಾಕಾರದೊಳಗೇ ನಡೆಯಬೇಕಾದುದು ಅನಿವಾರ್ಯವಾಗಿದೆ.
೫೪೭ ಪುಟದಷ್ಟು ವಿಸ್ತಾರವಾಗಿರುವ ಈಗಿನ ಸರ್ವೋಚ್ಚ ನ್ಯಾಯಾಲಯದ ತೀರ್ಪು ಭಗವದ್ಗೀತೆ, ಅಮೆರಿಕ ಸಂವಿಧಾನ ಮೊದಲಾದ ಆಕರಗಳನ್ನೂ ಉಲ್ಲೇಖಿಸಿರುವುದು ಗಮನಾರ್ಹ. ಸರ್ವೋಚ್ಚ ನ್ಯಾಯಾಲಯದ ಅಸಂದಿಗ್ಧ ತೀರ್ಪು ದೂರಗಾಮಿ ಪರಿಣಾಮಗಳನ್ನು ಬೀರುವಂತಹದಾಗಿದೆ. ಇದಕ್ಕೆ ಸರ್ಕಾರದ ಆಡಳಿತಾಂಗವು ಹೇಗೆ ಸ್ಪಂದಿಸುತ್ತದೆ ಎಂದು ಕಾದು ನೋಡಬೇಕಾಗಿದೆ.
ಸರ್ವೋಚ್ಚ ನ್ಯಾಯಾಲಯದ ಹಿಂದಿನ ಮತ್ತು ಇತ್ತೀಚಿನ ತೀರ್ಪಿನ ಪರಿಣಾಮವಾಗಿ ಆಧಾರ್ ವ್ಯವಸ್ಥೆಯನ್ನು ಪ್ರತಿಬಂಧಿಸುವ ಆವಶ್ಯಕತೆ ಬೀಳದು – ಎಂದು ಕೇಂದ್ರಸರ್ಕಾರವೇನೋ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿ, ಸಮಾಜ, ಸರ್ಕಾರ – ಈ ಮೂಲಭೂತ ಘಟಕಗಳ ನಡುವೆ ಇರಬೇಕಾದ ವಿಹಿತ ಸಂಬಂಧಗಳು ಯಾವ ರೀತಿಯವಾಗಿರಬೇಕು, ಅವುಗಳ ಪರಿಧಿಗಳು ಏನಿರಬೇಕು – ಎಂಬ ಅತ್ಯಂತ ಮುಖ್ಯವಾದ ಮೌಲಿಕ ವಿಷಯದ ಬಗೆಗೆ ಹೆಚ್ಚಿನ ಚಿಂತನೆಗೆ ಈಚಿನ ಸರ್ವೋಚ್ಚ ನ್ಯಾಯಾಲಯದ ತೀರ್ಪು ದಾರಿ ಮಾಡಲಿ – ಎಂದು ಆಶಿಸಬೇಕಾಗಿದೆ.
ಪ್ರಜಾಪ್ರಭುತ್ವದಲ್ಲಿ ಪ್ರತ್ಯೇಕ ವ್ಯಕ್ತಿಗೆ ಹಲವಾರು ಹಕ್ಕುಗಳು ಗ್ರಾಂಥಿಕವಾಗಿ ಲಭ್ಯವಿದ್ದರೂ ಅವು ಸ್ವಯಂಸಿದ್ಧ (ಆಟೊಮ್ಯಾಟಿಕ್) ಆಗಿರದೆ ಪ್ರಯತ್ನಸಂಪಾದ್ಯಗಳಾಗಿರುತ್ತವೆ; ಅವುಗಳ ವಾಸ್ತವ ನಿಷ್ಕೃಷ್ಟ ಪರಿಧಿಗಳು ಪ್ರತ್ಯೇಕ ಸಂದರ್ಭ ವಿವೇಚನೆಗಳ (ಕೇಸ್ ಲಾ) ಆಧಾರದ ಮೇಲೆ ಪರಿಷ್ಕಾರಗೊಳ್ಳುತ್ತಿರಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆಗಸ್ಟ್ ೨೪ರ ವಿಶೇ?ಪೀಠದ ತೀರ್ಪು ಒಂದು ಮೈಲಿಗಲ್ಲು ಎಂದು ಭಾವಿಸಬೇಕಾಗಿದೆ. ಇದು ನ್ಯಾಯಾಂಗ ವ್ಯವಸ್ಥೆಯ ಜೀವಂತಿಕೆಗೆ ನಿದರ್ಶನವೂ ಆಗಿದೆ.