ನಿಶ್ಚಲಾಂತರಂಗ
ಅನುತ್ಸಾಹಕರ ಸನ್ನಿವೇಶದಲ್ಲಿಯೂ ವಾಜಪೇಯಿ ಸ್ಥೈರ್ಯವನ್ನು ಕಳೆದುಕೊಂಡವರಲ್ಲ. ೧೯೭೫ರ ತುರ್ತುಪರಿಸ್ಥಿತಿಯಲ್ಲಿ ಬಂಧನದಲ್ಲಿ ಇದ್ದಾಗಲೂ ಅವರ ಸ್ತಿಮಿತತೆ ಕುಗ್ಗಲಿಲ್ಲ. ಅಲ್ಲಿಯೂ ಅವರಿಂದ ಕಾವ್ಯ ಪ್ರವಾಹ ಹೊರಟಿತ್ತು:
ಟೂಟ್ ಸಕತೇ ಹೈ ಮಗರ್ ಹಮ್ ಝುಕ್ ನಹೀ ಸಕತೇ |
ಸತ್ಯ ಕಾ ಸಂಘರ್ಷ ಸತ್ತಾ ಸೇ,
ನ್ಯಾಯ ಲಡತಾ ನಿರಂಕುಶತಾ ಸೇ |* * * *
ಯಹ್ ಬರಾಬರ್ ಕಾ ನಹೀ ಹೈ ಯುದ್ಧ
ಹಮ್ ನಿಹತ್ಥೇ ಶತ್ರು ಹೈ ಸನ್ನದ್ಧ |
* * * *
ಪ್ರಾಣ-ಪಣ ಸೇ ಕರೇಂಗೇ ಪ್ರತಿಕಾರ,
ಸಮರ್ಪಣ ಕೀ ಮಾಂಗ್ ಅಸ್ವೀಕಾರ |
ಟೂಟ್ ಸಕತೇ ಹೈ ಮಗರ್ ಹಮ್
ಝುಕ್ ನಹೀ ಸಕತೇ |
“ನಾವು ಮುರಿದುಹೋದೇವು, ಆದರೆ ಬಾಗುವುದಿಲ್ಲ. ಸತ್ಯವೂ ನ್ಯಾಯವೂ ಈಗ ನಿರಂಕುಶತೆಯೊಡನೆ ಸೆಣಸಬೇಕಾಗಿದೆ. ನಾವು ನಿಃಶಸ್ತ್ರರು, ಶತ್ರುಗಳು ಸನ್ನದ್ಧರು. ಆದರೂ ಪ್ರಾಣವನ್ನು ಪಣವಾಗಿಟ್ಟು ದಬ್ಬಾಳಿಕೆಯನ್ನು ಎದುರಿಸುತ್ತೇವೆ…. ನಾವು ಮಣಿಯುವ ಮಾತೇ ಇಲ್ಲ. ಮುರಿದೇವು, ಆದರೆ ಬಾಗುವುದಿಲ್ಲ.”
ಮಾರ್ಟಿನ್ ಲೂಥರ್ ಕಿಂಗ್ ಮಾಡಿದ ““We shall overcome” ಉದ್ಘೋಷವನ್ನು ನೆನಪಿಗೆ ತರುವಂತೆ ಇದ್ದವು ವಾಜಪೇಯಿಯವರ ಕವನಪಂಕ್ತಿಗಳು.
ದೃಷ್ಟಿವೈಶಾಲ್ಯ, ಹೃದಯವಂತಿಕೆ
“ನೀವು ನಿಮ್ಮ ಉದಾರದೃಷ್ಟಿಯಿಂದಾಗಿ ದೇಶದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ವಿಶ್ವಾಸದ ಮತ್ತು ಭರವಸೆಯ ಭಾವನೆಯನ್ನು ಮೂಡಿಸಿದ್ದೀರಿ” ಎಂದು ಆಗಿನ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಅವರೂ ವಾಜಪೇಯಿಯವರಿಗೆ ಪತ್ರ ಬರೆದಿದ್ದರು.
ಮಹಿಳೆಯರಿಗೆ ಶಾಸಕಾಂಗದಲ್ಲಿಯೂ ಆಡಳಿತದಲ್ಲಿಯೂ ಹೆಚ್ಚಿನ ಸ್ಥಾನಮಾನಗಳು ಸಲ್ಲುತ್ತವೆ – ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದರು ಅಟಲ್ಜೀ.
ಗಾಂಧಿಯವರನ್ನೂ ಜಯಪ್ರಕಾಶ ನಾರಾಯಣ್ರನ್ನೂ ಸಂಬೋಧಿಸಿದ ಭಾವಪೂರ್ಣ ಕವನವೊಂದರಲ್ಲಿ “ನೀವು ನಿರೀಕ್ಷಿಸಿದ ಮಟ್ಟಕ್ಕೆ ನಾವು ಏರಲಿಲ್ಲವೆಂಬುದಕ್ಕೆ ನಾವು ಕ್ಷಮೆ ಕೋರುತ್ತಿದ್ದೇವೆ. ಆದರೆ ಮುರಿದ ಕನಸುಗಳನ್ನು ಮತ್ತೆ ಜೋಡಿಸಿ ಪ್ರಕಾಶವನ್ನು ತರುತ್ತೇವೆ” ಎಂದು ಆಶ್ವಾಸನೆಯನ್ನು ನೀಡುತ್ತಾರೆ:
ಟೂಟೇ ಸಪನೋಂ ಕೋ ಜೋಡೇಂಗೇ
ಚಿತಾಭಸ್ಮ ಕೀ ಚಿನಗಾರೀ ಸೇ
ಅಂಧಕಾರ ಕೇ ಗಢ ತೋಡೇಂಗೇ
ವಾಜಪೇಯಿಯವರಷ್ಟು ದೀರ್ಘಕಾಲ ರಾಜಕಾರಣದ ಮುಂಚೂಣಿಯಲ್ಲಿದ್ದವರೂ ಅವರಷ್ಟು ದೀರ್ಘಕಾಲ ಸತತವಾಗಿ ಸಾಂಸದರಾಗಿದ್ದವರೂ ವಿರಳ. ಇದು ಅತಿಶಯವೇ. ಅದರೆ ಇದಕ್ಕಿಂತ ಗಮನ ಸೆಳೆಯುವ ಸಂಗತಿಯೆಂದರೆ ಒಬ್ಬ gentleman politician ಆಗಿ ಅವರು ಎಲ್ಲ ವರ್ಗಗಳಲ್ಲಿಯೂ ಗಳಿಸಿಕೊಂಡಿದ್ದ ಆದರಣೀಯತೆ. ತಮಗೆ ವಾಜಪೇಯಿ ಸಂಗತರಾದವರು ಎಂಬ ಭಾವನೆ ಎಲ್ಲ ಜನವರ್ಗಗಳಲ್ಲಿ ದೃಢಗೊಂಡಿತ್ತು. ಅರ್ಧಶತಮಾನದ ಅವರ ಸಾರ್ವತ್ರಿಕ ಜೀವನದಲ್ಲಿ ಅವರು ಎಂದೂ ಜನಪ್ರಿಯತೆಗಾಗಿ ಯಾವುದೇ ’ಗಿಮಿಕ್ಸ್’ ಮಾಡುವ ಆವಶ್ಯಕತೆಯೇ ಬೀಳಲಿಲ್ಲ. ಅವರ ಹೃದಯವಂತಿಕೆ ಅಷ್ಟು ಪ್ರಕಟವೂ ಪ್ರಕಾಶಮಯವೂ ಆಗಿತ್ತು.
ಅವರು ಅಧಿಕಾರಸ್ಥಾನದಲ್ಲಿ ಇರದಿದ್ದಾಗಲೂ ವಿದೇಶಗಳ ಗಣ್ಯರು ಬಂದಾಗ ವಾಜಪೇಯಿಯವರನ್ನು ನೆಹರು ’ಇವರು ನಮ್ಮ ಒಬ್ಬ ಗಣ್ಯ ಸಹೋದ್ಯೋಗಿ’ ಎಂದು ತಪ್ಪದೆ ಪರಿಚಯ ಮಾಡಿಸುತ್ತಿದ್ದರು.
* * *
ಪ್ರಶಾಂತಮನಸ್ಕತೆ
ಎಷ್ಟು ಒತ್ತಡ ಇದ್ದಾಗಲೂ ವಾಜಪೇಯಿ ಅವರ ಹಸನ್ಮುಖ ಬಾಡುತ್ತಿರಲಿಲ್ಲ. ಸಂಜೆಯಾದೊಡನೆ ’ಚಲಿಯೇ, ಪಿಕ್ಚರ್ ದೇಖತೇ ಹೈ’ ಎಂದು ಯಾವುದೋ ಹಿಂದಿ ಸಿನೆಮಾ ನೋಡಲು ಉತ್ಸಾಹದಿಂದ ಹೊರಟುಬಿಡುವರು. ಅಂತರಂಗದಲ್ಲಿ ಪ್ರಶಾಂತಿ ನೆಲೆನಿಂತಿದ್ದವರಿಗೆ ಮಾತ್ರ ಇಂತಹ ಆನಂದಮಯತೆ, ಅವಿಚಲಿತತೆ ಸ್ವಭಾವಗತವಾಗಿ ಇರಬಲ್ಲದು.
ಒಮ್ಮೆ ಹೊಸ ಸಾಂಸದರನ್ನು ಪರಿಚಯ ಮಾಡಿಸಿದಾಗ ಆಗಿನ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್ “ಭಾರತೀಯ ಜನಸಂಘ ಎಂದಿರಾ? ಆ ಹೆಸರಿನ ರಾಜಕೀಯ ಪಕ್ಷ ಇರುವುದೇ ನನಗೆ ಗೊತ್ತಿರಲಿಲ್ಲ!” ಎಂದು ಹಾಸ್ಯಪೂರ್ವಕ ಹೇಳಿದ್ದುದುಂಟು. ಅಂತಹ ಸನ್ನಿವೇಶದಿಂದ ವಾಜಪೇಯಿಯವರು ಪಕ್ಷವನ್ನು ಯಾವ ಸ್ಥಿತಿಗೆ ಏರಿಸಿದರೆಂಬುದು ಈಗ ಇತಿಹಾಸ.
ವರ್ಷಗಳುದ್ದಕ್ಕೂ ನೆಹರು ಮತ್ತು ವಾಜಪೇಯಿ ಪರಸ್ಪರ ಎಷ್ಟು ಉನ್ನತ ಗೌರವಭಾವನೆಯನ್ನು ಮೆರೆದಿದ್ದರು ಎಂಬುದನ್ನು ಇವತ್ತಿನ ವಿ?ಮಯ ವಾತಾವರಣದಲ್ಲಿ ನೆನೆಸಿಕೊಳ್ಳುವುದು ಆರೋಗ್ಯಕರ.
ಅಧಿಕಾರಸ್ಥಾನ ಲಭಿಸುವುದಕ್ಕೆ ಬಹಳ ಹಿಂದೆಯೇ – ೧೯೮೦ರ ದಶಕದಿಂದಲೇ – ವಿಶ್ವಸಂಸ್ಥೆಗೆ ಪ್ರೇಷಿತವಾಗುತ್ತಿದ್ದ ನಿಯೋಗಗಳ ಸದಸ್ಯರಾಗಿ ವಾಜಪೇಯಿ ತಮ್ಮ ತಜ್ಞತೆಯಿಂದ ಗಮನ ಸೆಳೆದಿದ್ದರು. ವಿದೇಶಾಂಗ ಮಂತ್ರಿ ಆದಾಗಲಂತೂ ‘The Best Foreign Minister’ ಎಂದೇ ಜಾಗತಿಕ ಸ್ತರದಲ್ಲಿಯೂ ಖ್ಯಾತಿ ಪಡೆದುಕೊಂಡರು.
ವ್ಯಾಸಸದೃಶ ನಿರ್ವೇದ
ವಾಜಪೇಯಿಯವರು ಎಷ್ಟು ದಶಕಗಳ ಹಿಂದೆ ಬರೆದ ಪ್ರಸಿದ್ಧ ಕವನ ಇಂದಿಗೂ ಸಂಗತವೆನಿಸುತ್ತಿದೆ:
ಕೌರವ ಕೌನ್, ಕೌನ್ ಪಾಂಡವ-
ಟೇಢಾ ಸವಾಲ್ ಹೈ |
ದೋನೋಂ ಓರ್ ಶಕುನಿ ಕಾ ಫೈಲಾ
ಕೂಟಜಾಲ ಹೈ|
ಧರ್ಮರಾಜ ನೇ ಛೋಡೀ ನಹೀ
ಜುಎ ಕೀ ಲತ್ ಹೈ |
ಹರ್ ಪಂಚಾಯತ್ ಮೇ ಪಾಂಚಾಲೀ
ಅಪಮಾನಿತ ಹೈ
ಬಿನಾ ಕೃಷ್ಣಾ ಕೇ ಆಜ್
ಮಹಾಭಾರತ ಹೋನಾ ಹೈ,
ಕೋಈ ರಾಜಾ ಬನೇ,
ರಂಕ ಕೋ ತೋ ರೋನಾ ಹೈ |
“ಕೌರವರು ಯಾರು, ಪಾಂಡವರು ಯಾರು? ಇಂದು ವಿಂಗಡಿಸಿ ಹೇಳುವುದೇ ಕಷ್ಟವಾಗಿದೆ. ಎರಡು ಕಡೆಗಳಲ್ಲಿಯೂ ಶಕುನಿಯ ಕೂಟ ಜಾಲ ಹರಡಿ ಬಳಕೆಯಾಗುತ್ತಿದೆ. ಧರ್ಮರಾಜ ಈಗಲೂ ಜೂಜಿಗೆ ದಾಸನೇ. ದ್ರೌಪದಿ ಈಗಲೂ ಅಪಮಾನಿತಳಾಗುತ್ತಲೇ ಇದ್ದಾಳೆ. ಈಗಲೂ ಮಹಾಭಾರತ ನಡೆಯಲೇಬೇಕಾಗಿದೆ. ಆದರೆ ಈಗ ಕೃಷ್ಟ ಇಲ್ಲ. ಈಗ ದೇವರಿಲ್ಲದ ಯುದ್ಧ ನಡೆಯಬೇಕಾಗಿದೆ. ಯಾರೇ ಗೆದ್ದು ರಾಜರಾಗಲಿ; ನಷ್ಟಗೊಂಡು ಅಳುವವನು ಸಾಮಾನ್ಯ ಪ್ರಜೆ.”
ಸಾತ್ತ್ವಿಕ ಅಭಿರುಚಿ
ಪುರಸತ್ತು ಸಿಕ್ಕರೆ ದೆಹಲಿಯ ಪರಂಟೆವಾಲೀ ಗಲ್ಲಿಗೋ ಚುಂಗವಾಗೋ ಹೋಗಿ ಊಟ ಮಾಡುವರು. ಮೀನಾಕುಮಾರಿ, ದಿಲೀಪ್ಕುಮಾರ್, ದೇವ್ಆನಂದ್ ಚಿತ್ರಗಳನ್ನು ಪದೇ ಪದೇ ನೋಡುವರು. ವಿಶ್ರಾಂತಿಯಲ್ಲಿದ್ದಾಗ ಸೂರ್ಯಕಾಂತ ತ್ರಿಪಾಠಿ ನಿರಾಲಾ ಹಿಂದಿ ಕವನಗಳನ್ನೋ ಫೈಜ್ ಅಹಮದ್ ಫೈಜ್ ಉರ್ದು ಕವನಗಳನ್ನೋ ಓದುವರು. ಹಾಕಿ, ಫುಟ್ಬಾಲ್ ಪಂದ್ಯಗಳಿದ್ದರೆ ಹೋಗುವರು. ’ದೇವದಾಸ್’, ’ತೀಸರೀ ಕಸಮ್’ನಂತಹ ಚಿತ್ರಗಳನ್ನು ಎ? ಬಾರಿಯಾದರೂ ನೋಡುವರು. ಹಲವು ದಿನಗಳು ವಿರಾಮ ಹೊಂದಿಸಲಾದರೆ ಮನಾಲಿಗೋ ಆಲ್ಮೋರಾಕ್ಕೋ ಹೋಗಿ ಇದ್ದು ಬರುವರು. ಲತಾ, ರಫಿ, ಮುಕೇಶ್ ಹಾಡುಗಳು ಅವರಿಗೆ ಉಸಿರಾಟದಂತೆ.
ಇಂತಹ ಸಾತ್ತ್ವಿಕ ಅಭಿರುಚಿವೈವಿಧ್ಯಗಳ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು ಈಗಿನ ಪೀಳಿಗೆಯ ರಾಜಕಾರಣಗಳಲ್ಲಿ ಯಾರಾದರೂ ಇರುವುದು ಸಂದೇಹಾಸ್ಪದ.
* * *
ವಿದ್ಯಾರ್ಥಿದಶೆಯಲ್ಲಿಯೇ ವಾಜಪೇಯಿಯವರ ವಕ್ತೃತ್ವ ಪ್ರಕಾಶಕ್ಕೆ ಬಂದಿದ್ದಿತು. ಅವರು ಕಾನ್ಪುರದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಒಮ್ಮೆ ಖ್ಯಾತನಾಮರಾದ ಬಾಲಕೃಷ್ಣ ತ್ರಿಪಾಠಿ ಅವರ ಉಪನ್ಯಾಸ ಏರ್ಪಾಟಾಗಿದ್ದಿತು. ಮುಖ್ಯ ಉಪನ್ಯಾಸಕ್ಕೆ ಮುಂಚೆ ಒಬ್ಬಿಬ್ಬ ವಿದ್ಯಾರ್ಥಿ ಪ್ರಮುಖರಿಂದಲೂ ಭಾಷಣ ಮಾಡಿಸುವ ರೂಢಿ ಆಗ ಇತ್ತು. ಅದರಂತೆ ವಾಜಪೇಯಿ ಭಾಷ ಮಾಡಿದರು. ಅವರ ಭಾಷಣ ಎಷ್ಟು ಪ್ರಭಾವಿಯಾಗಿತ್ತೆಂದರೆ ತ್ರಿಪಾಠಿಯವರು ’ಇಷ್ಟು ಒಳ್ಳೆಯ ಭಾಷಣ ಆದ ನಂತರ ನನಗೆ ಮಾತನಾಡಬೇಕೆಂದೇ ಅನ್ನಿಸುತ್ತಿಲ್ಲ” ಎಂದು ಸುಮ್ಮನಾಗಿಬಿಟ್ಟರು.
ಮೌಲ್ಯಾಧಾರಿತ ರಾಜಕಾರಣ ಎಂಬ ನುಡಿಗಟ್ಟು ಆಗಾಗ ಬಳಕೆಯಾಗುತ್ತದೆ. ಈಗಂತೂ ಆ ನುಡಿಗಟ್ಟೇ ಮೌಲ್ಯವನ್ನು ಕಳೆದುಕೊಂಡಿದೆ. ಈಚಿನ ಯುಗದಲ್ಲಿ ಮೌಲ್ಯವಂತ ರಾಜಕಾರಣಿ ಎಂದು ಬೊಟ್ಟಿಟ್ಟು ತೋರಿಸಬಹುದಾದ ವಿರಳ ವ್ಯಕ್ತಿ ವಾಜಪೇಯಿಯವರು.
ಅವರ ಅಂತರಂಗದಲ್ಲಿ ಕೃತಕ ಗಡಿಸೀಮೆಗಳು ಇಲ್ಲ. ತಮ್ಮನ್ನು ನೇರವಾಗಿ ರೂಪಿಸಿದ ಡಾಕ್ಟರ್ಜೀ, ದೀನದಯಾಳಜೀ ಅವರನ್ನು ಆರಾಧಿಸುವ? ಪ್ರಾಂಜಲವಾಗಿ ಗಾಂಧಿ, ಜಯಪ್ರಕಾಶರನ್ನೂ ಶ್ರದ್ಧಾಪೂರ್ಣವಾಗಿ ಗೌರವಿಸಿದ್ದಾರೆ.
ದಾರ್ಢ್ಯವಂತಿಕೆ
ಎಂತಹ ವಿಷಮಯ ಸನ್ನಿವೇಶದಲ್ಲಿಯೂ ಅಟಲ್ಜೀ ಅವರು ಸ್ತಿಮಿತತೆಯನ್ನು ಕಳೆದುಕೊಂಡದ್ದನ್ನು ಯಾರೂ ಕಾಣರು. ಅಷ್ಟೇಕೆ, ೧೯೮೮ರ ಅಂತ್ಯದಲ್ಲಿ ನ್ಯೂಯಾರ್ಕಿನ ಆಸ್ಪತ್ರೆಯಲ್ಲಿ ಜೀವನ್ಮರಣ ಸೆಣಸಾಟದಲ್ಲಿ ಇದ್ದಾಗಲೂ ಮೃತ್ಯುವಿಗೆ ಸವಾಲೆಸೆದು ಕವನ ಬರೆದರು:
ಮೌತ್ ಕೀ ಉಮ್ರ್ ಕ್ಯಾ? ದೋ ಪಲ್ ಭೀ ನಹೀ,
ಜಿಂದಗೀ-ಸಿಲ್ಸಿಲಾ, ಆಜ್ ಕಲ್ ಕೀ ನಹೀ
ತೂ ದಬೇ ಪಾಂವ್ ಚೋರೀ-ಛಿಪೇ ಸೇ ನ ಆ,
ಸಾಮನೇ ವಾರಕರ್, ಫಿರ್ ಮುಝೇ ಆಜ್ಮಾ
“ಮೃತ್ಯುವಿನ ಅವಧಿ ಒಂದು ಕ್ಷಣ ಮಾತ್ರ. ಆದರೆ ಜೀವನ ಕೇವಲ ಇಂದು-ನಾಳೆಗಳ ಒಟ್ಟಿಲಾಗಿರದೆ ನಿರಂತರವೂ ಅನಂತವೂ ಆಗಿದೆ. ಅಯ್ಯಾ ಕಾಲಪುರು?! ನೀನು ಕಳ್ಳಹೆಜ್ಜೆಗಳನ್ನಿಟ್ಟು ಹಿಂಬದಿಯಿಂದ ಬರಬೇಡ, ಎದುರಿಗೆ ಬಂದು ನನಗೆ ಮುಖಾಮುಖಿಯಾಗು.”
’ವಾಜಪೇಯಿಯವರು ವಿನ್ಸ್ಟನ್ ಚರ್ಚಿಲನಿಗೆ ಹೋಲಿಸಬಹುದಾದವರು: ಎಂದಿಗೂ ಸೋಲನ್ನೊಪ್ಪದವರು’ ಎಂದಿದ್ದರು, ಹಿಂದಿನ ವಿದೇಶಾಂಗ ಕಾರ್ಯದರ್ಶಿ ಜಗತ್ ಮೆಹತಾ. ಅವರನ್ನು ಸದಾ ನಿಯಂತ್ರಿಸಿರುವವು ಅವರ ಸ್ವಚ್ಛ ಕವಿಹೃದಯ ಮತ್ತು ಮೌಲ್ಯಪ್ರಜ್ಞೆ. ಎಲ್ಲ ಆಗಂತುಕ ಒತ್ತಡಗಳನ್ನು ಬದಿಗೆ ಸರಿಸಿ ಪಂಡಿತ್ ಭೀಮಸೇನ ಜೋಶಿ ಅವರ ೭೫ನೇ ವರ್ಧಂತಿಯಲ್ಲಿ ಪಾಲ್ಗೊಂಡು ಭಾವಾವಿಷ್ಟರಾಗಿ ಭಾಷಣ ಮಾಡಿದ್ದರು.
ಒಮ್ಮೆ ಸುಧೀರ್ ಫಡ್ಕೆಯವರು ಗೀತಸಂಯೋಜನೆ ಮಾಡಿದ್ದ ಚಿತ್ರವೊಂದನ್ನು ನೋಡಿ ಹಿಂದಿರುಗುವ ವೇಳೆಗೆ ಮಧ್ಯರಾತ್ರಿ ದಾಟಿತ್ತು. ದಿನವಿಡೀ ಏನನ್ನೂ ತಿಂದಿರಲಿಲ್ಲ. ಸುಧೀರ್ ಫಡ್ಕೆ ಅಡಿಗೆ ವ್ಯವಸ್ಥೆ ಮಾಡಲು ಗಡಬಡಿಸುತ್ತಿದ್ದಾಗ ಅಟಲ್ಜೀ ’ಹೊಟ್ಟೆಪಾಡು ಆಮೇಲಾಗಲಿ. ಈಗ ನಿಮ್ಮ ಕೆಲವು ಹಾಡುಗಳನ್ನು ಹಾಡಿರಿ” ಎಂದರು. ಆ ’ರಸಾಸ್ವಾದ’ ಆದ ಮೇಲೆಯೇ ಊಟಕ್ಕೆ ಗಮನವಿತ್ತದ್ದು.
ದ್ವಂದ್ವಾತೀತ
ವಾಜಪೇಯಿಯವರ ದೀರ್ಘಕಾಲದ ’ಶಾಗಿರ್ದ್’ ಆಗಿದ್ದ ಲೋಹಿಯಾಪಂಥಿ ರಾಜ್ ಬಬ್ಬರ್ ಒಮ್ಮೆ ಅವರ ವಿರುದ್ಧವೇ ಚುನಾವಣೆಗೆ ನಿಲ್ಲಬೇಕಾದ ಪ್ರಸಂಗ ಬಂದಿತು. ಅವರು ಅಟಲ್ಜೀಯವರ ಪಾದಸ್ಪರ್ಶ ಮಾಡಿ ಆಶೀರ್ವಾದ ಬೇಡಿದರು. ಅಟಲ್ಜೀ ನಕ್ಕು ’ವೋಹ್ ತೋ ಮೈ ನಹೀ ದೂಂಗಾ’ ಎಂದರು. ರಾಜಬಬ್ಬರ್ ’ನಿಮ್ಮ ಇ? ವ?ಗಳ ಆರಾಧಕನು ಕ?ವನ್ನು ಎದುರಿಸುತ್ತಿರುವಾಗ ನೀವು ಹೇಗೆ ಆಶೀರ್ವಾದವನ್ನು ನಿರಾಕರಿಸಬಲ್ಲಿರಿ?” ಎಂದು ತರ್ಕವನ್ನು ಒಡ್ಡಿದರು. ಅಟಲ್ಜೀ ಮೊದಲಿಗಿಂತ ಗಟ್ಟಿಯಾಗಿ ಗೊಳ್ಳನೆ ನಕ್ಕು ರಾಜ್ ಬಬ್ಬರರ ತಲೆ ಸವರಿ ’ಮೇರಾ ಆಶೀರ್ವಾದ ಹೈ’ ಎಂದರು.
ಅಟಲ್ಜೀಯವರಿಗೆ ಪ್ರತಿಕಕ್ಷಿಗಳಾಗಲಿ ವಿರೋಧಿಗಳಾಗಲಿ ಭೂಮಂಡಲದಲ್ಲಿ ಇರಲಿಲ್ಲ.
ಸಾಹಿತಿ ಕವಿಕಲಾವಿದ ವರ್ಗದ ಖ್ಯಾತನಾಮರಲ್ಲಿ ಅಟಲ್ಜೀ ಪ್ರಶಂಸಕರ ಪ್ರಮಾಣ ವಿಶಾಲವಾಗಿದೆ. ನರ್ತಕಿ ಸೋನಾಲ್ ಮಾನ್ಸಿಂಗ್, ಕಥಕ್ ಪರಮಾಚಾರ್ಯ ಬಿರ್ಜು ಮಹಾರಾಜ್, ನಟ ನಾನಾ ಪಟೇಕರ್, ಗಾಯಕಿ ಆಶಾ ಭೌಂಸ್ಲೆ ಮೊದಲಾದ ಹತ್ತಾರು ಮಂದಿ ಅಗ್ರಶ್ರೇಣಿಯ ಕಲಾವಿದರು ವಾಜಪೇಯಿಯವರ ನಿತಾಂತ ಪ್ರಶಂಸಕರು.
ಸಮಾಜದೊಡನೆ ತಾದಾತ್ಮ್ಯ
ಎಷ್ಟು ಪ್ರತಿಷ್ಠೆ ಪ್ರಾಪ್ತವಾದರೂ ನೆಲದ ಬೇರುಗಳಿಂದ ವಿಚ್ಛೇದ ಬಾರದಿರಲಿ – ಎಂಬ ನಮ್ರತೆಯನ್ನು ವಾಜಪೇಯಿಯವರ ಕಾವ್ಯಪಂಕ್ತಿಗಳಲ್ಲಿ ಹಲವಾರೆಡೆ ಕಾಣುತ್ತೇವೆ. ಅವರ ’ಊಂಚಾಈ’ ಕವನದ ಸಮಾಪ್ತಿಯಲ್ಲಿ ಅವರು ಹೇಳುವುದು:
ಮೇರೇ ಪ್ರಭು!
ಮುಝೇ ಇತನೀ ಊಂಚಾ ಕಭೀ ಮತ್ ದೇನಾ
ಗೈರೋಂ ಕೋ ಗಲೇ ನ ಲಗಾ ಸಕೂ |
ಆ ಕವನದ ಆರಂಭವೇ ಮನೋಜ್ಞವಾಗಿದೆ:
ಊಂಚೇ ಪಹಾಡ್ ಪರ್
ಪೇಡ್ ನಹೀ ಲಗತೇ,
ಪೌಧೇ ನಹೀ ಲಗತೇ
ನ ಘಾಸ್ ಭೀ ಜಮತೀ ಹೈ.
“ಅತ್ಯಂತ ಎತ್ತರದ ಪರ್ವತದ ಮೇಲೆ ಮರ ಬೆಳೆಯದು, ಗಿಡಬೆಳೆಯದು, ಹುಲ್ಲೂ ಬೆಳೆಯದು.”
ಎತ್ತರದಂತೆ ಹರಹೂ ಇದ್ದಲ್ಲಿ ಮಾತ್ರ ಬದುಕೂ ಒಡನಾಟವೂ ಸಂಗಡಿಕೆಯೂ ಸಾಧ್ಯವಾದಾವು.