ಭಾರತೀಯ ಪಾರಂಪರಿಕ ಕಲೆಯ ಅನನ್ಯತೆಯೆಂದರೆ ಧಾರ್ಮಿಕತೆ ಮತ್ತು ಕಲೆಗಳ ಪರಸ್ಪರ ಅನ್ಯೋನ್ಯಾಶ್ರಯವನ್ನು ಚಿತ್ರಕಲೆ ಮತ್ತು ಶಿಲ್ಪಕಲೆಗಳು ಬಿಂಬಿಸಿರುವುದು. ಪಾರಲೌಕಿಕ ಜಿಜ್ಞಾಸೆ, ಧಾರ್ಮಿಕತೆ, ಕಲೆ – ಇವು ಮೂರೂ ಸಮ್ಮಿಳಿತವಾಗಿರುವುದು ಇಲ್ಲಿಯ ವಿಶೇಷತೆ. ಮಂತ್ರದರ್ಶನ, ತತ್ತ್ವಜಿಜ್ಞಾಸೆ, ಸೌಂದರ್ಯಾನುಭೂತಿ – ಇವು ಒಂದರ ಮೇಲೆ ಇನ್ನೊಂದು ಹೇಗೆ ಪ್ರಭಾವ ಬೀರುತ್ತ ಬಂದವೆಂಬುದರ ಭವ್ಯ ಅಭಿವ್ಯಕ್ತಿಯನ್ನು ಐದಾರು ಸಾವಿರ ವರ್ಷಗಳ ಕಲಾನುಸಂಧಾನದಲ್ಲಿ ಕಾಣುತ್ತೇವೆ. ಅನ್ಯ ದೇಶಗಳಿಗಿಂತ ಬಹುಪಾಲು ಹೆಚ್ಚು ಸಮೃದ್ಧವಾಗಿರುವ ಭಾರತೀಯ ವಾಸ್ತುಕಲೆಯಲ್ಲಿ ಎದ್ದುಕಾಣುವ ಸಂಗತಿಯೆಂದರೆ ದೇವದೇವತೆಗಳ ಮತ್ತು ಪೌರಾಣಿಕ ಆಖ್ಯಾನಗಳ ಸಾಂಕೇತಿಕತೆಯ ಅರಿವು ಜನಸಾಮಾನ್ಯರ ಮಟ್ಟದಲ್ಲಿಯೂ ಪ್ರಚಲಿತವೇ ಆಗಿದ್ದಿತೆಂಬುದು. ಉದಾಹರಣೆಗೆ: ಬ್ರಹ್ಮ ವಿಷ್ಣು ಮಹೇಶ್ವರರನ್ನು ಒಂದೇ ಶಿಲ್ಪದಲ್ಲಿ ಸಂಯೋಜಿಸಿರುವುದು ವಿರಳವಲ್ಲ. ಹೀಗೆ ಆ ದೇವತೆಗಳು ಒಂದೇ ಮೂಲತತ್ತ್ವದ ಬೇರೆಬೇರೆ ಶಕ್ತಿವಿಶೇಷಗಳ ಅಭಿವ್ಯಕ್ತಿಗಳು ಎಂಬುದನ್ನು ಧ್ವನಿಸಲಾಗಿದೆ. ಮಹಾಬಲಿಪುರ ದ ಮಹಿಷಮಂಡಪದ ವಿಷ್ಣು ಅನಂತಶಾಯಿ ಶಿಲ್ಪದಲ್ಲಿ (ಕ್ರಿ..ಶ. ೭ನೇ ಶತಮಾನದ ಆರಂಭ) ಇದನ್ನು ಕಾಣಬಹುದು. ಅನಂತಶಯನ ಎಂಬ ಕಲ್ಪನೆಯೇ ಅದ್ಭುತವಾದದ್ದು. ಅನಂತನ ವಸತಿಗೆ ಇಡೀ ವಿಶ್ವವೇ ಬೇಕಲ್ಲವೆ! ಶೇಷ್ಠ ಎಂಬ ಕಲ್ಪನೆಯೂ ವಿಸ್ಮಯಕರ. ಮಹಾಸಾಗರದ ಒಂದು ಸಣ್ಣ ಅಂಶವಷ್ಟೆ.
ಇದು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕ ಡಾ|ಎಸ್. ಆರ್. ರಾಮಸ್ವಾಮಿಯವರು ೧೩ ಏಪ್ರಿಲ್ ೨೦೧೪ರಂದು ಮೈಸೂರಿನ ರಾಮ್ಸನ್ಸ್ ಕಲಾ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಕಲಾವಿದ ಜಿ.ಎಲ್.ಎನ್. ಸಿಂಹ ಅವರ ಮಂತ್ರಮುಕುರ ಚಿತ್ರಸಮೂಹದ ಪ್ರದರ್ಶನದ ಹಿನ್ನೆಲೆಯಲ್ಲಿ ಮಾಡಿದ ಭಾಷಣದ ಪಾಠ.
ಮೂಲೋಕಗಳಾಗಿ ಹೊಮ್ಮಿದೆ. ಉಳಿದ ಅಗಾಧತೆಯೇ ಶೇಷ ಎಂದರೆ ಅವ್ಯಾಕೃತ ವಾಗಿಯೆ ಉಳಿದುಕೊಂಡದ್ದು. ವಿಷವು ಶೇಷನ ಮಡಿಲಲ್ಲಿ ಪವಡಿಸಿರುವುದು ಒಂದೇ ಮಹಾತತ್ತ್ವವು ಮನುಷ್ಯರೂಪದಲ್ಲಿಯೂ ಪ್ರಾಣಿರೂಪದಲ್ಲಿಯೂ ಹೊಮ್ಮಿತು ಎಂಬುದನ್ನು ಸಂಕೇತಿಸಿರುವುದು ಸ್ಪಷ್ಟವೇ ಆಗಿದೆ. ಭಿನ್ನಭಿನ್ನ ಅಭಿವ್ಯಕ್ತಿಗಳಿಗೆ ಆಧಾರವಾದದ್ದು ಅನಂತ.
ಸನಾತನಧರ್ಮದ ಪ್ರಜ್ವಲತೆಯು ಶ್ರುತಿ, ಸ್ಮೃತಿ, ಪುರಾಣ – ಈ ಮೂರು ಪಥಗಳಲ್ಲಿ ನಿವಿಷ್ಠವಾಗಿದೆ. ಶ್ರುತಿಯಲ್ಲಿ ಎಂದರೆ ವೇದದಲ್ಲಿ ಇರುವವು ಪರತತ್ತ್ವದ ನೇರ ದರ್ಶನ ಪಡೆದ ಋಷಿಗಳ ಉದ್ಗಾರಗಳು. ವಿಶೇಷ ಪ್ರಗಲ್ಭತೆ ಇದ್ದವರಿಗಷ್ಟೆ ಶ್ರುತಿಯ ಆಶಯವು ಗೋಚರಿಸಬಲ್ಲದು. ಆ ಬೋಧೆಗಳು ಕಾಲದಿಂದ ಕಾಲಕ್ಕೆ ಆಚರಣೆಯಲ್ಲಿ ಹೇಗೆ ಪ್ರತಿಫಲಿತವಾದವೆಂಬುದರ ದಾಖಲೆಗಳು ಸ್ಮೃತಿಗಳು. ಮಹಾಪುರುಷರ ಇತಿವೃತ್ತಗಳ ಕಥನದ ಮೂಲಕ ಧರ್ಮದ ಸ್ವರೂಪವನ್ನು ಸಾಮಾನ್ಯರಿಗೆ ತಿಳಿಸಿಕೊಡಲು ಆಯೋಜನೆಗೊಂಡವು ಪುರಾಣಗಳು. ಈ ಮೂರು ಅಭಿವ್ಯಂಜನೆಗಳೂ ಅಖಂಡವಾದವು ಮತ್ತು ಪರಸ್ಪರ ಪೂರಕಗಳು. ಸಾಧಕರ ಮನಃಪಕ್ವತೆ ಹೆಚ್ಚಿದಂತೆಲ್ಲ ಹೊಸಹೊಸ ಅರ್ಥದ ಆಯಾಮಗಳು ಸ್ಫುರಿಸುವುದು ಅಭಿಜಾತ ವಾಙ್ಮಯದ ಲಕ್ಷಣ.
ಪೌರಾಣಿಕ ವಾಙ್ಮಯದ ಅಂತರ್ನಿಹಿತ ಅರ್ಥವನ್ನು ಯಾರು ಗ್ರಹಿಸಿಲ್ಲವೋ ಅವರನ್ನು ಕಂಡು ಇವರು ಅಲ್ಪಶ್ರುತರು, ಇವರು ನನ್ನನ್ನು ಬಾಧಿಸುತ್ತಾರೆ ಎಂದು ವೇದವು ಗಾಬರಿಗೊಳ್ಳುತ್ತದೆ – ಎಂಬ ಪ್ರಾಚೀನೋಕ್ತಿಯು ಮಹಾಭಾರತದ ಆದಿಪರ್ವದಲ್ಲಿ ಉಲ್ಲೇಖಗೊಂಡಿದೆ:
ಇತಿಹಾಸಪುರಾಣಾಭ್ಯಾಂ
ವೇದಾರ್ಥಮುಪಬೃಂಹಯೇತ್ |
ಬಿಭೇತ್ಯಲ್ಪಶ್ರುತಾದ್ ವೇದಃ
ಮಾಮಯಂ ಪ್ರಹರಿಷ್ಯತಿ ||
ವೇದ, ಸ್ಮೃತಿ, ಪುರಾಣ – ಇವು ಜ್ಞಾನಿಗಳ ಮೂರು ಕಣ್ಣುಗಳು – ಎಂದಿದೆ ಸ್ಕಾಂದಪುರಾಣ:
ಶ್ರುತಿ-ಸ್ಮೃತಿ-ಪುರಾಣಾನಿ
ವಿದುಷಾಂ ಲೋಚನತ್ರಯಮ್ |
ಯಸ್ತ್ರಿಭಿರ್ನಯನೈಃ ಪಶ್ಯೇತ್
ಸೋsಂಶೋ ಮಾಹೇಶ್ವರೋ ಮತಃ ||
ವೇದಗಳನ್ನು ವಿಭಾಗ ಮಾಡಿ ವ್ಯವಸ್ಥೆಗೊಳಿಸಿದ ವೇದವ್ಯಾಸರೇ ಪುರಾಣಗಳ ರಚಯಿತರೂ ಆಗಿದ್ದಾರೆ – ಎಂಬುದನ್ನು ನೆನಪಿಡಬೇಕು.
ವೇದಗಳ ವಿಷಯವು ಲೋಕಾತೀತವಾದುದು. ಲೋಕಾತೀತವಾದುದನ್ನು ವಿವರಿಸಲು ಲೌಕಿಕ ಭಾಷೆಯು ಸಾಕಾಗುವುದಿಲ್ಲವೆಂಬುದು ಸ್ಪಷ್ಟವೇ ಆಗಿದೆ; ಮತ್ತು ವೇದಗಳು ಮೊದಲು ಪ್ರಕಟಗೊಂಡ
ಕಾಲದ ವೇಳೆಗೆ ಈಗ ನಮಗೆ ಪರಿಚಿತವಾಗಿರುವ ಭಾಷೆಯು ವಿಕಾಸಗೊಂಡಿರಲೂ ಇಲ್ಲ. ಋಷಿಗಳ ದರ್ಶನವೇನೋ ಸ್ಫುಟವಾಗಿಯೆ ಇದ್ದಿತು, ಮತ್ತು ಆ ದರ್ಶನವನ್ನು ಸಂರಕ್ಷಿಸಿ ಪ್ರಚುರಗೊಳಿಸುವ ಆಶಯ ಋಷಿಗಳಿಗೆ ಇದ್ದಿತು. ಈ ಹಿನ್ನೆಲೆಯಲ್ಲಿ ಸಹಜವಾಗಿ ಆಲಂಕಾರಿಕ ಭಾಷೆಯ ಬಳಕೆಯಾಯಿತು. ವೇದಗಳಿಗೆ ಇನ್ನೊಂದು ಹೆಸರಾದ ಛಂದಸ್ ಎಂಬ ಮಾತಿನ ಅರ್ಥವೇ ಗೋಪ್ಯವಾಗಿಸುವುದು (ಛಾದನಾತ್) ಎಂಬುದು. ಬಳಕೆಮಾತುಗಳ ಹಿಂದುಗಡೆ ನಿಗೂಢ ಅರ್ಥಗಳನ್ನು ಅಡಗಿಸಿಡಲಾಗಿದೆ ಎಂಬುದು ತಾತ್ಪರ್ಯ ಉದಾಹರಣೆಗೆ: ದೇವದೇವತೆಯರೆಂದರೆ ಅಂತರ್ನಿಹಿತ ಚೈತನ್ಯದ ವಿಶೇಷ ಅಭಿವ್ಯಕ್ತಿಗಳು – ಎಂದೇ ವೇದದ ಲಬ್ಧ ಕೈಪಿಡಿಗಳಲ್ಲಿ ಅತ್ಯಂತ ಪ್ರಾಚೀನವಾದ ಯಾಸ್ಕರಚಿತ ನಿರುಕ್ತ ವಿವರಿಸಿದೆ. ಹೀಗೆ ತತ್ಸಂಬಂಧಿತ ಪೌರಾಣಿಕ ಕಥನಗಳು ಬೋಧನಸೌಕರ್ಯಕ್ಕಾಗಿ ಆಮೇಲಿನ ಕಾಲದಲ್ಲಿ ಯೋಜಿತವಾದವು ಎಂಬುದು ಸ್ಪಷ್ಟವಾಗಿದೆ ನಿರುಕ್ತಕಾರ ಯಾಸ್ಕರು ಸ್ಪಷ್ಟವಾಗಿ ಹೇಳುತ್ತಾರೆ:
ಏಕ ಆತ್ಮಾ ಬಹುಧಾ ಸ್ತೂಯತೇ |
ಏಕಸ್ಯ ಆತ್ಮನಃ ಅನ್ಯೇ ದೇವಾಃ ಪ್ರತ್ಯಂಗಾನಿ ಭವನ್ತಿ ||
ಭೂಲೋಕದಲ್ಲಿ ಮಳೆ, ಗಾಳಿ, ಬಿಸಿಲು ಮೊದಲಾದವೆಲ್ಲ ಪರಸ್ಪರ ಸಹಕರಿಸುವ ಹಾಗೆ ಅಂತರಿಕ್ಷಲೋಕದಲ್ಲಿ ಪರ್ಜನ್ಯ, ವಾಯು, ಆದಿತ್ಯ ಮೊದಲಾದ ದೇವತೆಗಳೆಲ್ಲ ಪರಸ್ಪರ ಪೂರಕಗಳಾಗಿರುತ್ತಾರೆ.
ವೇದಗಳು ಜಗತ್ತಿನ ಅತ್ಯಂತ ಪ್ರಾಚೀನ ದಾಖಲೆಗಳು. ಹೀಗಾಗಿ ಅನೇಕ ಶಬ್ದಗಳು ಅಕೃತಕ ಮೂಲಾರ್ಥದಲ್ಲಿ ಬಳಕೆಯಾಗಿರುತ್ತವೆ. ಉದಾಹರಣೆಗೆ: ಅಗ್ನಿ ಎಂಬ ಮಾತು ಅಗ್ರಸ್ಥಾನದಲ್ಲಿ ಎಂದರೆ ಮುಂದೆ ಇರುವವನು ಎಂಬ ಅರ್ಥದಲ್ಲಿಯೆ (ಅಗ್ರಣೀಃ ಭವತಿ) ಹಲವಾರೆಡೆ ಪ್ರಯುಕ್ತವಾಗಿರುವುದು. ಇಂದ್ರ ಎಂಬ ಮಾತಿನ ಅರ್ಥ ಸತ್ಯವನ್ನು ನೋಡಿದವನು (ಇದಿಂ + ದ್ರ) ಎಂದಿದೆ. ರುದ್ರ ಎಂಬ ಮಾತಿನ ನಿರ್ವಚನ ಸೂಚನೆಗಳನ್ನು ಕೊಡುವವನು (ರುದ್ + ದ್ರ).
ಈ ಭೂಮಿಕೆಯನ್ನು ನೆನಪಿನಲ್ಲಿ ಇರಿಸಿಕೊಂಡಲ್ಲಿ ಅರ್ವಾಚೀನ ಪ್ರಯೋಗದ ಅರ್ಥಗಳನ್ನು ಪ್ರಾಚೀನ ವೇದಮಂತ್ರ ಪ್ರಯೋಗಗಳಿಗೆ ಜೋಡಿಸುವುದು ಯುಕ್ತವಾಗದು ಎಂದು ಅರಿವಾಗುತ್ತದೆ.
ಈಗ ಪರಿಚಿತವಾಗಿರುವ ಅನೇಕ ಶಬ್ದಗಳು ಪೂರ್ತಿ ಭಿನ್ನವಾದ ಅರ್ಥಗಳಲ್ಲಿಯೆ ವೇದವಾಙ್ಮಯದಲ್ಲಿ ಬಳಕೆಯಾಗಿವೆ. ಉದಾಹರಣೆಗೆ: ಆರ್ಯ ಎಂಬ ಶಬ್ದವು ಎಲ್ಲೆಡೆ ಬಳಕೆಯಾಗಿರುವುದು ಕೃಷಿ ಮತ್ತು ವಾಣಿಜ್ಯದ ಮೂಲಕ ಸಂಪತ್ತನ್ನು ವೃದ್ಧಿಗೊಳಿಸಿದ್ದವರು ಎಂಬ ಅರ್ಥದಲ್ಲಿ. ಪಾರಂಪರಿಕ ಪ್ರಮಾಣಕ್ಕೆ ಅನುಗುಣವಾಗಿರುವುದು, ಬೇರೆಬೇರೆ ಸಂದರ್ಭಗಳ ಪ್ರಯೋಗಗಳಿಗೆ ಹೊಂದಾಣಿಕೆಯಾಗುವುದು, ಸ್ವವಿರೋಧವಿಲ್ಲದಿರುವುದು; – ಇಂತಹ ನಿಯಮಗಳಿಗೊಳಪಟ್ಟು ಮಂತ್ರಗಳನ್ನು ಅರ್ಥೈಸಬೇಕಾಗುತ್ತದೆ.
ಅನೇಕ ಮಂತ್ರಗಳಲ್ಲಿ ಅವು ಸಂಕೇತಾರ್ಥಸೂಚಕಗಳೆಂಬುದು ಆ ಹೇಳಿಕೆಗಳಲ್ಲಿಯೆ ವ್ಯಕ್ತವಾಗಿರುವುದೂ ಉಂಟು. ಒಂದು ಪ್ರಸಿದ್ಧ ಮಂತ್ರ ಹೀಗಿದೆ:
ಚತ್ವಾರಿ ಶೃಂಗಾ ತ್ರಯೋ ಅಸ್ಯ ಪಾದಾ
ದ್ವೇ ಶೀರ್ಷೆ ಸಪ್ತಹಸ್ತಾಸೋ ಅಸ್ಯ |
ತ್ರಿಧಾ ಬದ್ಧೋ ವೃಷಭೋ ರೋರವೀತಿ
ಮಹೋ ದೇವೋ ಮರ್ತ್ಯಾನಾವಿವೇಶ ||
(ಋಗ್ವೇದ, iv: ೫೮:೩)
ಈ ಋಷಭನಿಗೆ ನಾಲ್ಕು ಕೊಂಬುಗಳೂ ಮೂರು ಕಾಲುಗಳೂ ಎರಡು ತಲೆಗಳೂ ಏಳು ಕೈಗಳೂ ಇವೆ – ಎಂಬುದು ಮಂತ್ರದ ಮಾತುಗಳಿಂದ ಹೊರಡುವ ಅರ್ಥ. ಆದರೆ ಅದು ಉದ್ದಿಷ್ಠ ಅರ್ಥವಲ್ಲವೆಂಬುದು
ಮೇಲ್ನೋಟಕ್ಕೇ ತಿಳಿಯುತ್ತದೆ. ಈ ವಾಕ್ಯದಲ್ಲಿ ನಾಲ್ಕು ಎಂದರೆ ನಾಮ, ಆಖ್ಯಾತ, ಉಪಸರ್ಗ, ನಿಪಾತ ಎಂಬ ವಾಕ್ಯಾಂಗಗಳು; ಎರಡು ಎಂದರೆ ಶಬ್ದದ ನಿತ್ಯ ಮತ್ತು ಕಾರ್ಯ ದಶೆಗಳು; ಮೂರು ಎಂದರೆ ಭೂತ-ವರ್ತಮಾನ-ಭವಿಷ್ಯ ಕಾಲಗಳು; ಏಳು ಎಂದರೆ ವಿಭಕ್ತಿಗಳು; – ಮೊದಲಾದ ಸ್ಪಷ್ಟೀಕರಣಗಳು
ಪಾತಂಜಲ ಮಹಾಭಾಷ್ಯದಲ್ಲಿ ದೊರೆಯುತ್ತವೆ. ವೇದಸಂಹಿತೆಯಲ್ಲಿಯೆ ಬೇರೊಂದೆಡೆಯಲ್ಲಿ (ಚತ್ವಾರಿ ವಾಕ್ ಪರಿಮಿತಾ ಪದಾನಿ ಇತ್ಯಾದಿ) ವಾಕ್ಕಿನ ಪರಾ, ಪಶ್ಯಂತೀ, ಮಧ್ಯಮಾ, ವೈಖರೀ ಎಂಬ ಭೇದಗಳ ಪ್ರಸ್ತಾವ ಬರುತ್ತದೆ.
ಇಡೀ ವೇದವಾಙ್ಮಯದಲ್ಲಿ ಅತ್ಯಂತ ಅರ್ಥಗರ್ಭಿತ ಭಾಗಗಳಲ್ಲೊಂದು ಪುರುಷಸೂಕ್ತ. ಋಗ್ವೇದದ
ದಶಮ ಮಂಡಲದ ಈ ಸೂಕ್ತ ಬಹುತೇಕ ಎಲ್ಲ ವೇದಶಾಖೆಗಳಲ್ಲೂ ಅನುವೃತ್ತವಾಗಿದೆ ಎಂಬುದರಿಂದ ಇದರ ಮುಖ್ಯತೆಯನ್ನು ಊಹಿಸಬಹುದು. ಗಾಯತ್ರೀಮಂತ್ರವು ಇಡೀ ನಾಮರೂಪಾತ್ಮಕ ಜಗತ್ತನ್ನು ಸಂಕೇತಿಸಿದ್ದಲ್ಲಿ ಅದಕ್ಕೆ ಅತೀತವಾದ ಬ್ರಹ್ಮವನ್ನು ಬೋಧಿಸಿರುವುದು ಪುರುಷಸೂಕ್ತ – ಎಂದಿದ್ದಾರೆ ಶಂಕರರು. ಎಲ್ಲವನ್ನೂ ಸಮಗ್ರಗೊಳಿಸುವುದು ಯಾವುದೋ ಅದು ಪುರುಷ : ಪುರುಷಃ ಸರ್ವ-ಪೂರಣಾತ್. ಪುರುಷ ಎಂದರೆ ಪೂರ್ಣತ್ವ – ಎಂದು ವಿವರಿಸಿದ್ದಾರೆ ಆನಂದತೀರ್ಥರು:
ಸ ಪೂರ್ಣತ್ವಾತ್ ಪುಮಾನ್ನಾಮ ಪೌರುಷೇ ಸೂಕ್ತ ಈರಿತಃ ||
ಪುರುಷ ಶಬ್ದದ ಯೌಗಿಕ ಅರ್ಥವೇ ಮುಂದೆಮುಂದೆ ಸಾಗುವುದು (ಪುರತಿ ಅಗ್ರೇ ಗಚ್ಛತಿ) ಎಂದು, ಎಲ್ಲದರಲ್ಲಿಯೂ ಬಲವನ್ನು ತುಂಬುವುದು (ಪಿಪರ್ತಿ ಪೂರಯತಿ ಬಲಂ ಯಃ) ಎಂದಿದೆ. ಸಾಂಖ್ಯದರ್ಶನದಂತೆ ಪ್ರಕೃತಿಯು ಜಡವಾದುದರಿಂದ ಅದರಲ್ಲಿ ಚೈತನ್ಯವನ್ನು ತುಂಬುವುದು ‘ಪುರುಷ’.
ಸಹಸ್ರ ಎಂಬ ಶಬ್ದವು ವೇದಸಾಹಿತ್ಯದುದ್ದಕ್ಕೂ ಅನಂತ ಎಂಬ ಅರ್ಥದಲ್ಲಿಯೇ ಬಳಕೆಗೊಂಡಿದೆ. ಸರ್ವಂ ವೈ ಸಹಸ್ರಂ ಎಂದಿದೆ ಶತಪಥಬ್ರಾಹ್ಮಣ. ಹಾಗೆಯೇ ಪಾದ ಎಂದರೆ ರಶ್ಮಿ, ಕಿರಣ, ಪ್ರಭಾವ ಎಂಬ ಅರ್ಥವೇ ಪ್ರಚಲಿತ. ಅಗ್ನಿ, ಇಂದ್ರ, ವಾಯು, ಸೂರ್ಯರ ವಾಚಕವಾದ ಅಕ್ಷ ಶಬ್ದವು ಭೂಲೋಕ ಭುವರ್ಲೋಕ ಸುವರ್ಲೋಕಗಳಷ್ಟನ್ನೂ ಗರ್ಭೀಕರಿಸಿದೆ. ವಿರಾಟ್ಪುರುಷನು ವಿಶ್ವದಿಂದ ಅತೀತನೆಂಬ ಅತ್ಯತಿಷ್ಯತ್ ದಶಾಂಗುಲಂ ಮಂತ್ರದ ಆಶಯ ಸ್ಪಷ್ಟವೇ ಇದೆ. ಅವಿದ್ಯಾಜನ್ಯ ಜಗತ್ತಿನಿಂದ ಅತೀತನಾಗಿ ವಿಕಾರರಹಿತ ಬ್ರಹ್ಮನು ವಿರಾಜಿಸುತ್ತಾನೆ ಎಂದು ಸೂಕ್ತವು ಮುಂದುವರಿದಿದೆ (ಊರ್ಧ್ವ ಉದೈತ್). ಸೂಕ್ತದ ಮುಂದಿನ ಭಾಗದಲ್ಲಿ ಸೃಷ್ಟಿಯೇ ಯಜ್ಞ ಎಂಬ ಕಲ್ಪನೆಯು ವ್ಯಾಖ್ಯೆಗೊಂಡಿದೆ. ವಸಂತ ಗ್ರೀಷ್ಮಾದಿ ಪ್ರತಿಮೆಗಳ ಮೂಲಕ ಈ ಯಜ್ಞದ ವೈಶ್ವಿಕತೆಯನ್ನು ತಿಳಿಸಲಾಗಿದೆ. ಸೃಷ್ಟಿಕಾರ್ಯದ ಹಂತಗಳನ್ನು ಯಜ್ಞ ಪರಿಭಾಷೆಯಲ್ಲಿಯೆ ಸೂಕ್ತವು ವಿವರಿಸಿದೆ. ಯಜ್ಞವು ದೇವತೆಗಳ ರಥ; ಆಜ್ಯವೆಂಬುದು ಪೃಥಿವಿ- ದ್ಯುಲೋಕಗಳೆರಡನ್ನೂ ಚೈತನ್ಯಯುಕ್ತಗೊಳಿಸುವ ರಸ; – ಇತ್ಯಾದಿ. ಅಶ್ವಜಾತಿ, ಗೋಜಾತಿ, ಅಜ-ಜಾತಿ ಮೊದಲಾದ ಸಚೇತನ ಪ್ರಾಣಿಜಾತಿಗಳೆಲ್ಲದರ ಮೂಲವು ಪುರು?. ಋಕ್, ಸಾಮ, ಯಜುಸ್; ಅಶ್ವ, ಗೌ, ಅಜ; – ಹೀಗೆ ಎಲ್ಲೆಡೆ ಮೂರು ಮೂರು ವರ್ಗಗಳ ಉಲ್ಲೇಖವೇ ಇರುವುದರಿಂದ ಧ್ವನಿತವಾಗುವುದು ಮೂರು ಲೋಕಗಳು ಎಂಬ ಪ್ರತಿಮೆ. ಈ ಸಂಕೇತಾರ್ಥಸರಣಿಯ ಕ್ರೋಡೀಕರಣವೆಂಬಂತೆ ಕಡೆಯ ಎಂದರೆ ೧೬ನೇ ಋಕ್ಕಿನಲ್ಲಿ ಕ್ರಿಯೆಯ ಉದ್ದೇಶ, ಕಾರ್ಯದ ಸಾಧನ ಮತ್ತು ಸ್ವಯಂ ಕ್ರಿಯೆ – ಮೂರನ್ನೂ ಸೂಚಿಸಲು ಯಜ್ಞ ಎಂಬ ಒಂದೇ ಮಾತನ್ನು ಬಳಸಲಾಗಿದೆ (ಯಜ್ಞೇನ ಯಜ್ಞಂ ಅಯಜನ್ತ ದೇವಾಃ). ಜ್ಞಾನ ಮತ್ತು ಕರ್ಮಗಳ ಏಕತ್ರೀಕರಣ ಇಲ್ಲಿ ಸೂಚಿತವಾಗಿದೆ.
ವೇದಗಳ ಅರ್ಥದ ಅನುಸಂಧಾನದ ಪರಂಪರೆ ದುರ್ಬಲಗೊಂಡು ಬಹುಮಟ್ಟಿಗೆ ಸಸ್ವರ ಪಠನ ಪಾಠನಗಳಿಗೆ ಸೀಮಿತವಾಗಿದ್ದುದರ ಹಿನ್ನೆಲೆಯಲ್ಲಿ ಜನಸಾಮಾನ್ಯರ ಸ್ಪಂದನವನ್ನೂ ಗಳಿಸಬಲ್ಲ ಪುರಾಣಗಳು ಪ್ರಾಚುರ್ಯವನ್ನು ಪಡೆದಿದ್ದಿರಬಹುದು. ಪೌರಾಣಿಕ ಮಾಧ್ಯಮವು ಸ್ಥಪತಿ ಕಲಾವಿದರಿಗೂ
ಅನುಕೂಲಕರವಾಗಿ ಒದಗಿಬಂದಿತು. ಇನ್ನೊಂದು ಮುಖ್ಯ ಅಂಶವನ್ನೂ ಇಲ್ಲಿ ಸ್ಮರಿಸಬಹುದು. ದುರ್ಗ್ರಾಹ್ಯತೆಯ ಕಾರಣದಿಂದ ವೇದಸೂಕ್ತಗಳ ನಿಜಾರ್ಥವಿಶೇಷಗಳ ಪರಿಚಯ ಹಿಂದೆ ಸರಿದಿತ್ತು; ಶುಷ್ಕ ಬಾಹ್ಯಾಚರಣೆಗಳು ಮೆರೆದಿದ್ದವು. ಹಾಗೆ ಉಂಟಾದ ಕೊರತೆಯನ್ನು ಪೌರಾಣಿಕ-ಆಧಾರದ ಸ್ಥಾಪತ್ಯಕಲೆ ತುಂಬಿದುದು ಅತ್ಯಂತ ಪ್ರಯೋಜನಕರವಾಯಿತು. ಏಕೆಂದರೆ ಈ ಶಿಲ್ಪಕಲಾ ಭವ್ಯತೆಯು ಪ್ರಸಾರಗೊಂಡಿರದಿದ್ದರೆ ಸಮಾಜದಲ್ಲಿ ನಿಧರ್ಮೀಯತೆ ಹರಡಲು ಅವಕಾಶವಾಗುತ್ತಿತ್ತು. ಆಗಮಗಳಿಂದ ನಿರ್ದೇಶನಗೊಂಡ ಕಲೆಗಳೂ ಪೂಜಾವಿಧಾನಗಳೂ ಧರ್ಮವನ್ನು ಪೂರ್ತಿ ನಶಿಸದಂತೆ ಸಂರಕ್ಷಿಸಿದವು. ಸ್ಥಾಪತ್ಯಕಲಾಕೇಂದ್ರಿತವಾದ ದೇವಾಲಯಗಳು ಸಾಮಾಜಿಕ ಜೀವನದ ಕೇಂದ್ರಗಳೂ ಆದವು. ಪ್ರಾಚೀನ ಯುಗದಲ್ಲಿ ಯಜ್ಞಕಲಾಪಗಳು ಜನಜೀವನದಲ್ಲಿ ಸಾಮೂಹಿಕತೆಯನ್ನು ಪ್ರವರ್ತಿಸಿದ್ದಂತೆ, ಅರ್ವಾಚೀನ ಕಾಲದಲ್ಲಿ ದೇವಾಲಯಗಳೂ ಪೂಜೆ- ಆಚರಣೆಗಳ ರೂಢಿಗಳೂ ಸಮಾಜಸಂಘಟನೆಯ
ಸಾಧನಗಳಾದವು.
ಕಾಲದಿಂದ ಕಾಲಕ್ಕೆ ವೇದಪ್ರಭುತ್ವಸ್ಥಾಪನೆಯ ಪ್ರಯತ್ನಗಳು ನಡೆದುದು ಪ್ರಶಂಸನೀಯವೆಂಬುದು ನಿರ್ವಿವಾದ. ಆದರೆ ಜ್ಞಾನಾನ್ವೇಷಿಗಳ ಪರಿಮಾಣವು ಸಮಾಜದಲ್ಲಿ ಅಧಿಕವಾಗಿರುವ ಸಂಭವ ಯಾವಾಗಲೂ ಕಡಮೆಯೇ. ಈ ವಾಸ್ತವದ ಹಿನ್ನೆಲೆಯಲ್ಲಿ ಧಾರ್ಮಿಕತೆಯನ್ನು ಉಳಿಸಿರುವವು ಭಕ್ತಿಪಂಥ ಮತ್ತು ಜಾನಪದೀಯ ರೂಢಿಗಳು. ಇದಕ್ಕೆ ಪೂರಕವೆಂಬ ರೀತಿಯಲ್ಲಿ ವಿರಳ ಪ್ರಮಾಣದಲ್ಲಿ
ಶುದ್ಧಜ್ಞಾನೋಪಾಸಕರೂ ಯೋಗಸಾಧಕರೂ ಎಲ್ಲ ಕಾಲದಲ್ಲಿಯೂ ಇರುತ್ತಾರೆ. ಈ ಎರಡು ಪಂಥಗಳ ನಡುವೆ ವಿಷಮತೆಯೇನಿಲ್ಲ. ಎರಡೂ ಸಮಾನಾಂತರವಾಗಿ ಸಾವಿರಾರು ವರ್ಷಗಳುದ್ದಕ್ಕೂ ನಡೆದುಬಂದಿವೆ.
ಜೀವನವೇ ಯಜ್ಞ, ದೇಹವೇ ದೇವಾಲಯ ಮೊದಲಾದ ಉದಾತ್ತ ಔಪನಿಷದ ತತ್ತ್ವಗಳನ್ನು ವಚನಸಾಹಿತ್ಯಕಾರರೂ ಹರಿದಾಸರೂ ತಮ್ಮ ರಚನೆಗಳ ಮೂಲಕ ಪ್ರಭಾವಿಯಾಗಿ ಪ್ರವರ್ತನೆ ಮಾಡಿದ್ದಾರೆ. ಹೀಗೆ ಉಪನಿಷದ್ ದರ್ಶನದ ಹೃದಯಭಾಗವನ್ನು ದೇಸೀ ವಾಙ್ಮಯವು ಜೀವಂತವಾಗಿ ಇರಿಸಿದೆ.
ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಗಳು ವಿವಿಧ ಆಕ್ರಮಣಗಳನ್ನು ಎದುರಿಸಿಯೂ ನಶಿಸದೆ ಕನಿಷ್ಠ ಏಳೆಂಟು ಸಾವಿರ ವರ್ಷಕಾಲ ಉಳಿದಿರಲು ಉಪಸ್ತಂಭಕವಾದದ್ದು ಮೇಲೆ ಸಂಕ್ಷಿಪ್ತವಾಗಿ ಪ್ರಸ್ತಾವಿಸಿದ ಆಂತರಿಕ ಗತಿಶೀಲತೆ (ಡೈನಾಮಿಸ್ಮ್).
ಗಮನಿಸಬೇಕಾದ ಅಂಶವೆಂದರೆ – ಮೂರ್ತಿಪೂಜನ ಮೊದಲಾದವು ಸಾಂಕೇತಿಕ ಕಲಾಪಗಳೆಂಬುದನ್ನು ಗ್ರಾಮೀಣ ಜನತೆಯೂ ಸೇರಿದಂತೆ ಎಲ್ಲರೂ ಗ್ರಹಿಸಿಯೇ ಇರುತ್ತಾರೆ. ನಾವು ಕಲ್ಲನ್ನು ಪೂಜಿಸುತ್ತಿದ್ದೇವೆ ಎಂದು ಯಾರಾದರೂ ಅಂದುಕೊಂಡದ್ದು ಉಂಟೆ? ಅವರವರಿಗೆ ಆಸ್ವಾದ್ಯವೆನಿಸಿದ ರೂಪದಲ್ಲಿ ಅವರವರು ಭಗವದುಪಾಸನೆ ಮಾಡಬಹುದೆಂದೂ ಎಲ್ಲ ಉಪಾಸನಾಮಾರ್ಗಗಳೂ ಸಾಧುವಾದವೇ ಎಂದೂ ಸ್ಮೃತಿವಾಕ್ಯಗಳೇ ಇವೆ.
ಸಾಂಕೇತಿಕ ಆಚರಣೆಗಳೂ ಗೂಢಾರ್ಥಸ್ಮರಣೆಯೂ ನಮ್ಮ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿಬಿಟ್ಟಿವೆ. ಉದಾಹರಣೆಗೆ: ಗೃಹ್ಯಸೂತ್ರಾನುಸಾರಿ ಪೂಜನವು ಗಣಪತಿಯ ಆರಾಧನೆಯೊಡನೆ ಆರಂಭವಾಗುತ್ತದೆ. ಇಲ್ಲಿ ಪಾರ್ವತೀಪುತ್ರನ ಅನುಗ್ರಹವನ್ನು ಬೇಡುತ್ತೇವೆಂದು ಭಕ್ತರು ಭಾವಿಸಿದರೆ ಆಕ್ಷೇಪಿಸಬೇಕಾದುದೇನೂ ಇಲ್ಲ. ಆ ಸಂದರ್ಭದಲ್ಲಿ ಮಂತ್ರಲಿಂಗ ಪದ್ಧತಿಯಂತೆ ವೇದಮಂತ್ರಗಳನ್ನೂ ಬಳಸಲಾಗುತ್ತದೆ. ಆದರೆ ವೇದವಾಙ್ಮಯದಲ್ಲಿ ಗಣ-ಪತಿ ಎಂಬ ಮಾತಿನ ಬಳಕೆಯಾಗಿರುವುದು ಮೂರೂ ಲೋಕಗಳ ಲೋಕಹಿತಕಾರಿ ಗಣಗಳಿಗೆ ಅಧಿಪತಿ ಎಂಬ ವ್ಯಾಪಕ ಅರ್ಥದಲ್ಲಿ.
ನಮ್ಮ ಶರೀರವೇ ಮೂರೂ ಲೋಕಗಳ ಆವಾಸ – ಎಂಬ ಪ್ರತಿಪಾದನೆಯನ್ನು ವೇದಗಳಲ್ಲಿಯೆ ಕಾಣುತ್ತೇವೆ.
ಯಜ್ಞದ ಆಚರಣೆಯು ಅಮೃತತ್ವಸಂಪಾದನೆಗಾಗಿ ಮತ್ತು ಜ್ಞಾನಪ್ರಕಾಶಪ್ರಾಪ್ತಿಗಾಗಿ – ಎಂಬ ನಿರೂಪಣೆಯನ್ನು ಋಗ್ವೇದದಲ್ಲಿಯೆ ಕಾಣುತ್ತೇವೆ.
ಕಾಲಗತಿಯ ವಿಪರಿಣಾಮಗಳ ನಡುವೆಯೂ ಎಷ್ಟು ಅಗಾಧ ಗಾತ್ರದ ವೇದ-ವೇದಾಂಗ ಸಾಹಿತ್ಯ ಈಗಲೂ ಉಳಿದಿದೆ ಎಂಬುದನ್ನು ಗಮನಿಸಿದರೆ ವೈದಿಕದರ್ಶನ ಯಾರೋ ಕೆಲವರ ಹವ್ಯಾಸದ ರೀತಿಯದಲ್ಲವೆಂದೂ ಅದು ಭಾರತೀಯ ನಾಗರಿಕತೆಗೆ ಅಸ್ತಿಭಾರ ಆಗಿರುವ ಕಾರಣದಿಂದಲೇ ಚಿರಂತನವಾಗಿ ಉಳಿದುಬಂದಿದೆ ಎಂಬುದೂ ಸ್ಪಷ್ಟವಾಗುತ್ತದೆ.
ಇತಿಹಾಸಜ್ಞಾನ, ರಾಜನೀತಿ, ಸಾಮಾನ್ಯನೀತಿ, ಪರಮಾರ್ಥಜ್ಞಾನ ಮೊದಲಾದವನ್ನು ಜನರಿಗೆ ಆಸಕ್ತಿಕರಗೊಳಿಸುವ ದೃಷ್ಟಿಯಿಂದ ಆಲಂಕಾರಿಕವಾಗಿ ಯೋಜಿತವಾಗಿರುವವು ಪುರಾಣಗಳು. ಹೀಗೆ ಅವು ಪ್ರಾಚೀನಕಾಲದ ಘಟನೆಗಳ ದಾಖಲೆಗಳಾಗಿರುವುದರ ಜೊತೆಗೆ ಸಾರ್ವಕಾಲಿಕ ಬೋಧೆಗಳ ಕಾವ್ಯಮಯ ಪ್ರತಿಪಾದನೆಗಳೂ ಆಗಿವೆ. ಎಲ್ಲ ಪ್ರಾಚೀನ ವಾಙ್ಮಯದ ವಿಶೇಷತೆಯೆಂದರೆ ಅದರ ಸಂಸ್ಕಾರಜನಕ ಸ್ವರೂಪ. ಯಾವುದೇ ಮಂಡನೆಗೆ ಚಿರಕಾಲಿಕತೆ ಬರುವುದು ಉಕ್ತಿ ಸೌಂದರ್ಯದಿಂದಲೇ – ಎಂಬುದು ಲೋಕಾನುಭವ. ಘಟನೆಗಳ ಕೇವಲ ವಾಚ್ಯರೀತಿಯ
ಶುಷ್ಕ ನಿರೂಪಣೆಗಳ ಪರಿಣಾಮ ಪರಿಮಿತವಾಗಿರುತ್ತದೆ.
ಒಂದೊಂದು ಜ್ಞಾನಾಂಗದ ಅಧ್ಯಯನಕ್ಕೂ ಕೆಲವು ವಿಶೇಷ ನಿಯಮಗಳು ಇರುತ್ತವಷ್ಟೆ. ಹಾಗೆ ಪುರಾಣಗಳ ಅಧ್ಯಯನಕ್ಕೆ ಎರಡು ಮುಖ್ಯ ಅಂಗಗಳು ಇರುತ್ತವೆ:
(೧) ಸೃಷ್ಟಿಯ ಎಂದರೆ ಜಗತ್ಸ್ವರೂಪದ ವಿವೇಚನೆ,
(೨) ಆಖ್ಯಾನಗಳಲ್ಲಿ ಅಡಗಿರುವ ಗೂಢತತ್ತ್ವಗಳ ಗ್ರಹಿಕೆ.
ಅಭ್ಯಾಸಿಯ ಬುದ್ಧಿಯ ಪ್ರಖರತೆ ಹೆಚ್ಚಿದಂತೆಲ್ಲ ಪುರಾಣೋಕ್ತ ಸಂಗತಿಗಳ ಸಂಕೇತಾರ್ಥವು ಗೋಚರಿಸುತ್ತಹೋಗುತ್ತದೆ.
ಲೋಕಾಂತರಗಳೆಂದು ವರ್ಣಿತವಾಗಿರುವವು ವ್ಯಕ್ತಿವಿಕಾಸದ ಅವಸ್ಥಾಂತರಗಳು – ಎಂಬ ಸಂಕೇತಾರ್ಥವು ಮೇಲ್ನೋಟಕ್ಕೇ ಗೋಚರಿಸುತ್ತದೆ.
ಬೇರೆ ಬೇರೆ ಬೌದ್ಧಿಕ ಮಟ್ಟಗಳವರಿಗೆ ಅವರವರ ವಿಕಾಸದ ಹಂತಕ್ಕೆ ಅನುಗುಣವಾಗಿ ಶಾಶ್ವತ ತತ್ತ್ವಗಳನ್ನು ತಿಳಿಸಿಕೊಡಬೇಕು – ಎಂಬುದು ಋಷಿಗಳ ಉದಾರದೃಷ್ಟಿ.
ವಿಶ್ವವು ಹೇಗೆ ಸೃಷ್ಟಿಯಾಯಿತು, ಅನಂತರದಲ್ಲಿ ಯಾವಯಾವ ಮಹಾಪುರು?ರು ಆಗಿಹೋದರು, ರುದ್ರಧ್ಯಾನ ಹಿಂದೆ ಯಾವಾವ ಸ್ವಾರಸ್ಯಕರ ವಿದ್ಯಮಾನಗಳು ನಡೆದವು, ಹಿಂದೆ ಯಾವಾವ ಬಗೆಯಲ್ಲಿ ಉತ್ಕಷ್ಕ ಪ್ರಯತ್ನಗಳು ನಡೆದವು – ಇವೇ ಮೊದಲಾದ ಮುಖ್ಯ ಮಾಹಿತಿಗಳ ಸಂಕಲನಗಳು ಪುರಾಣಗಳು. ಸೃಷ್ಟಿ-ಪ್ರಳಯಗಳು, ವಂಶಗಳು, ಮನ್ವಂತರಗಳು, ಆನುವಂಶಿಕ ವೃತ್ತಾಂತಗಳು – ಇವನ್ನು ಒಳಗೊಂಡಿರುವುದು ಪುರಾಣದ ಲಕ್ಷಣ – ಎಂದಿದೆ ವಿಷ್ಣುಪುರಾಣ:
ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವನ್ತರಾಣಿ ಚ |
ವಂಶಾನುಚರಿತಂ ಚೇತಿ ಪುರಾಣಂ ಪಂಚಲಕ್ಷಣಮ್ ||
ಪುರಾ ನವಂ ಭವತಿ – ಹಳೆಯದಾದರೂ ನಿತ್ಯನೂತನವಾಗಿ ಉಳಿಯುವುದು ಎಂಬುದು ಪುರಾಣ ಶಬ್ದದ ನಿರ್ವಚನ – ಎಂದು ಯಾಸ್ಕಾಚಾರ್ಯರು ನಿರುಕ್ತ ಗ್ರಂಥದಲ್ಲಿ ಹೇಳಿದ್ದಾರೆ.
ವೈದಿಕ ಮತ್ತು ಪೌರಾಣಿಕ ಆಖ್ಯಾನಗಳನ್ನು ಕುರಿತು ಚಿಂತಿಸಿದಲ್ಲಿ ಅವುಗಳಲ್ಲಿ ಹೆಚ್ಚಿನವು ಸಂಕೇತಾರ್ಥದ್ಯೋತಕಗಳೆಂಬುದು ಮೇಲ್ನೋಟಕ್ಕೇ ಕಾಣುತ್ತದೆ. ಉದಾಹರಣೆಗೆ: ಪ್ರಸಿದ್ಧ ದಶಾವತಾರಗಳ ಅನುಕ್ರಮವು ಆಧುನಿಕ ವೈಜ್ಞಾನಿಕ ವಿಕಾಸವಾದದೊಡನೆ ಸವಿವರವಾಗಿ ತಾಳೆಯಾಗುತ್ತದೆ. ಇದನ್ನು ಆಕಸ್ಮಿಕವೆನ್ನಲಾಗದು. ಸಮುದ್ರಮಂಥನವು ಸಾತ್ತ್ವಿಕ ಮತ್ತು ತಾಮಸಿಕ ಶಕ್ತಿಗಳ ನಡುವಣ ನಿತ್ಯಸಂಘರ್ಷವನ್ನು ಪ್ರತಿನಿಧಿಸುತ್ತದೆ ಎಂಬುದು ಸ್ಪಷ್ಟವೇ ಆಗಿದೆ. ಗಣಪತಿ, ಲಕ್ಷ್ಮಿ, ಶಿವ, ವಿಷ್ಣು ಮೊದಲಾದ ದೇವ-ದೇವತೆಗಳ ರೂಪಕಲ್ಪನೆಯೂ ಅತ್ಯಂತ ಅರ್ಥಪು?ವಾಗಿದೆ.
ಹೆಚ್ಚಿನ ದೇವತಾರೂಪಗಳು ಏಕಕಾಲದಲ್ಲಿ ಅಧರ್ಮನಿಯಂತ್ರಣ, ಅಭಯಾನುಗ್ರಹ – ಎರಡನ್ನೂ ಪ್ರತಿಮೀಕರಿಸುವ ಅಂಶಗಳನ್ನು ಒಳಗೊಂಡಿರುತ್ತವೆ. ನೈಮಿತ್ತಿಕ ಪೂಜೆಯ ಸಂದರ್ಭದಲ್ಲಿಯೂ ಜಗತ್ಸ್ಥಿತಿಯ ಊರ್ಜಿತತೆಗೆ ಆಧಾರವಾದ ಈ ವಿವಿಧ ಗುಣವಿಶೇಷಗಳನ್ನು ಸ್ಮರಿಸಲಾಗುತ್ತದೆ. ಒಂದೊಂದು ದೇವತೆಯ ವಿಶೇಷಅನುಸಂಧಾನಾರ್ಹ ಗುಣಗಳನ್ನು ಧ್ಯಾನಶ್ಲೋಕಗಳಲ್ಲಿ ಸೂಚಿಸಲಾಗುವುದೂ ಉಂಟು. ಸ್ಥಾಪತ್ಯಕಲೆಗೆ ಸಂಬಂಧಿಸಿದ ಆಗಮಗ್ರಂಥಗಳಲ್ಲಂತೂ ಸಂಕೇತಾರ್ಥಗಳ ವಿಶಾಲ ಪ್ರಪಂಚವನ್ನೇ ತೆರೆದಿರಿಸಲಾಗಿದೆ. ಈ ಸೂಕ್ಷ್ಮಾರ್ಥಗಳನ್ನು ಅನುಸರಿಸಿಯೇ ಆಕೃತಿ ವಿಶೇಷಗಳನ್ನೂ ತಾಳಮಾನಾದಿಗಳನ್ನೂ ಒಳಗೊಂಡ ಶಾಸ್ತ್ರೀಯ ಲಕ್ಷಣಗಳು ನಿರ್ದೇಶಗೊಂಡಿರುತ್ತವೆ.
ಅಮೂರ್ತಭಾವನೆಗಳನ್ನು ಮೂರ್ತೀಕರಿಸುವ ಆಕಾಂಕ್ಷೆಯಿಂದ ಕಲೆಯ ಆವಿಷ್ಕಾರವಾಗುತ್ತದೆ – ಎಂಬ ತತ್ತ್ವದ ಸಾಂಕೇತಿಕ ಕಥನವನ್ನು ಪ್ರಾಚೀನ ಉಷಾ- ಅನಿರುದ್ಧ-ಚಿತ್ರಲೇಖಾ ಪ್ರಕರಣದಲ್ಲಿ ಕಾಣುತ್ತೇವೆ. ಇತರ ಹಲವು ಆಯಾಮಗಳ ಅರ್ಥನಿಗೂಹನಗಳೂ ಆ ಕಥೆಯಲ್ಲಿ ಅಡಗಿವೆ. ಕಥೆಯು ಪ್ರಸಿದ್ಧವಾದದ್ದೇ.
ಉಷಾ ಎಂಬ ರಾಜಕುಮಾರಿಗೆ ಗೌರೀದೇವಿ ಹೇಳಿರುತ್ತಾಳೆ – ವೈಶಾಖ ಶುದ್ಧ ದ್ವಾದಶಿ ನಿನಗೆ ಕನಸಿನಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿ ನಿನ್ನ ಪತಿ ಆಗುತ್ತಾನೆ ಎಂದು. ಉಷಾ ಇದನ್ನು ತನ್ನ ಸಹಾಯಕಿ ಚಿತ್ರಲೇಖಾಗೆ ತಿಳಿಸುತ್ತಾಳೆ. ತುಂಬಾ ಪ್ರತಿಭಾವಂತಳಾದ ಚಿತ್ರಲೇಖಾ ಅತ್ಯಂತ ಸುಂದರರಾದ ಮನುಷ್ಯರ, ಗಂಧರ್ವರ, ದೇವತೆಗಳ ಚಿತ್ರಗಳನ್ನು ತನ್ನ ಕಲ್ಪನೆಯಿಂದ ರಚಿಸಿ ತೋರಿಸುತ್ತಾಳೆ. ಉಷಾ ಅವುಗಳಲ್ಲಿ ದೇವತೆಗಳನ್ನೆಲ್ಲ ಬಿಟ್ಟು ಅನಿರುದ್ಧನೆಂಬ ಮಾನವವ್ಯಕ್ತಿಯ ಚಿತ್ರವನ್ನು ಆರಿಸಿ ಇವನೇ ನನ್ನ ಕನಸಿನ ವ್ಯಕ್ತಿ ಎನ್ನುತ್ತಾಳೆ. ಮಾಂತ್ರಿಕ ಶಕ್ತಿಗಳೂ ಇದ್ದ ಚಿತ್ರಲೇಖಾ ಉಷಾಗೆ ಅನಿರುದ್ಧನ ಭೇಟಿ ಮಾಡಿಸುತ್ತಾಳೆ. ಚಿತ್ರಕಲೆ ಉದಿಸಿದ್ದು ಹೀಗೆ – ಎಂದು ಸಾಂಪ್ರದಾಯಿಕ ಕಥನವಿದೆ. ಮಾನುಷಮಾಧ್ಯಮದ ಮೂಲಕ ದೈವಸಾಕ್ಷಾತ್ಕಾರವು ಶಕ್ಯ – ಮೊದಲಾದ ಸಂಕೇತಾರ್ಥಗಳೂ ಈ ಕಥೆಯಲ್ಲಿ ಇವೆ.
ಈ ವಿಶಾಲವಾದ ಮತ್ತು ಗಹನವಾದ ಪ್ರತಿಮಾಲೋಕವನ್ನು ವರ್ಣಚಿತ್ರ ಮಾಧ್ಯಮದಲ್ಲಿ ಅಭಿವ್ಯಂಜಿಸುವುದು ವೇದವಾಙ್ಮಯಾಧಾರಿತ ಕಲೆಯ ಆಶಯ. ಸುದೀರ್ಘ ಧ್ಯಾನದಿಂದ ಲಬ್ಧವಾದ ಸಂಕೇತಾರ್ಥಸಮೂಹವನ್ನು ವರ್ಣಚಿತ್ರ ಮಾಧ್ಯಮದಲ್ಲಿ ನಿವೇಶಗೊಳಿಸುವುದು ಇಲ್ಲಿಯ ಪ್ರಯತ್ನ. ಈ ಭೂಮಿಕೆಯಿಂದಾಗಿ ಈ ಪ್ರಸ್ಥಾನದ ಚಿತ್ರಗಳು ಗಾಢವಾದ ಮನನಕ್ಕೆ ಸಾಮಗ್ರಿಯನ್ನು ಒದಗಿಸುತ್ತವೆ. ಈ ಸೌಂದರ್ಯಾನುಭೂತಿಯ ಹಿನ್ನೆಲೆಯಲ್ಲಿಯೆ ಲಾರೆನ್ಸ್ ಬಿನ್ಯನ್ (Laurence Binyon) ಹೀಗೆಂದಿದ್ದ:
“One comes in the end to recognize that profound conceptions can dispense with the formulas of calculated surface-arrangement and have their own occult means of knitting together forms in apparent diffusion.”
ಸೌಂದರ್ಯಾನುಭೂತಿಯಿಂದ ತತ್ತ್ವಸಾಕ್ಷಾತ್ಕಾರಕ್ಕೆ ಕ್ರಮಣವು ಕ್ಷಿಪ್ರಗತಿಯದು. ಅದು ಪ್ರಜ್ಞೆಯ ಕ್ರಿಯಾಶೀಲತೆಯ ಹೆದ್ದಾರಿ. ಪ್ರಜ್ಞೆಯ ಉನ್ನತ ಹಂತಗಳಲ್ಲಿ ರಸಾನುಭವವೂ ತತ್ತ್ವಸಾಕ್ಷಾತ್ಕಾರವೂ ಅಭಿನ್ನವಾಗಿಬಿಡುತ್ತವೆ. ಈ ಐಕ್ಯಸ್ಥಿತಿಯನ್ನೇ ಸತ್-ಚಿತ್-ಆನಂದ ಎಂದು ಅರ್ಥಪೂರ್ಣವಾಗಿ ಸಂಕೇತಿಸಿರುವುದು. ಈ ಹಿನ್ನೆಲೆಯಲ್ಲಿಯೆ ಬ್ರಹ್ಮಾನುಭವದ ಉದ್ಗಾರಗಳು ಅತ್ಯಂತ ಕಾವ್ಯಮಯವೂ ಆಗಿರುವುದು. ಉದಾಹರಣೆಗೆ ವಿಶ್ವಸೃಷ್ಟಿಯ ವೈಭವವನ್ನು ಶಬ್ದಿತಗೊಳಿಸಿರುವ ನಾಸದೀಯ ಸೂಕ್ತವು ಅನುಪಮ ಕಾವ್ಯವೂ ಆಗಿದೆ.
ಪರತತ್ತ್ವವನ್ನು ತಾವು ಕಂಡಂತೆ ಜ್ಞಾನೇಶ್ವರರು ವರ್ಣನೆ ಮಾಡಿದುದು ಲೋಕೋತ್ತರ ಕಾವ್ಯವೇ ಆಗಿ ಪರಿಣಮಿಸಿತು. ಒಂದು ಅನನ್ಯವಾದ ಭವ್ಯ ಚಿತ್ರಸರಣಿಯನ್ನು ನೋಡುತ್ತ ವಿವರಿಸುತ್ತಿರುವಂತೆಯೇ ಜ್ಞಾನೇಶ್ವರೀ ಕಾವ್ಯ ವಿಜೃಂಭಿಸಿದೆ. ಇದು ಅಂತಃಪ್ರಜ್ಞೆಯ ಸ್ತರದ ಸಂವಹನವೆಂಬುದು ಸ್ಪಷ್ಟವೇ ಆಗಿದೆ. ಹೊರಗಣ್ಣು ಇಲ್ಲದ ಸೂರದಾಸರು ನೀಡಿರುವ ವರ್ಣನೆಗಳು ಯಾವ ತ್ರೀ-ಡೈಮೆನ್ ಷನಲ್ ಚಿತ್ರಣಕ್ಕಿಂತ ಪ್ರಜ್ವಲವಾಗಿವೆಯಲ್ಲವೆ?
ವಸ್ತುಸ್ಥಿತಿಯೆಂದರೆ – ಭಾರತೀಯ ಪರಂಪರೆಯ ಸಂದರ್ಭದಲ್ಲಿ ಅಂತರನುಭವಗಳ ವಿವಿಧ ಪ್ರಕಾರಗಳ ನಡುವೆ ಗೋಡೆಗಳಿಲ್ಲ. ಎಲ್ಲವೂ ಅಖಂಡ. ಹೊರಗಿನ ಅಭಿವ್ಯಕ್ತಿಪ್ರಕಾರಗಳ ಲಾಕ್ಷಣಿಕ ಮಿತಿಗಳನ್ನು ಅತಿಕ್ರಮಿಸಿ ಪರಮಸತ್ಯದಲ್ಲಿ ನೆಲೆಗೊಳ್ಳಬೇಕು – ಎಂಬುದೇ ಆಶಯ.
ಸೌಂದರ್ಯಾಭಿಜ್ಞತೆಯು ಸುಸಂಸ್ಕೃತ ಅಂತಶ್ಚೇತನದ ಸಹಜ ಸ್ಪಂದನವೂ ಆಗಿದೆ. ಅದು ದೇಶಕಾಲಾತೀತವಾದುದು ಎಂದೂ ಗ್ರಹಿಸಬೇಕು. ಉದಾಹರಣೆಗೆ ಫ್ರಾನ್ಸ್-ಸ್ಪೇಯ್ನ್ಗಳ ಇತಿಹಾಸಪೂರ್ವಕಾಲದ ಗುಹಾಚಿತ್ರಗಳ ಪ್ರಾಣಿಚಿತ್ರಣರೀತಿಗೂ ಕ್ರಿ.ಶ. ೧ನೇ ಶತಮಾನದ ಅಜಂತಾ ಭಿತ್ತಿಚಿತ್ರಗಳ ಶೈಲಿಗೂ ಸಾಮ್ಯವಿರುವುದನ್ನು ಕಾಣುತ್ತೇವೆ. ವಾಸ್ತವವಾಗಿ ಅವೆರಡರ ನಡುವೆ ಶತಮಾನಗಳೇ ಉರುಳಿಹೋಗಿದ್ದವು. ಕಾಲಾಂತರಗಳ ಮತ್ತು ಹಲವು ಸಾವಿರ ಮೈಲಿಗಳ ದೇಶಾಂತರಗಳ ವ್ಯತ್ಯಯಗಳು ಇದ್ದರೂ, ಪ್ರಾಣಿಸಂಕುಲ ಮೊದಲಾದವುಗಳ ರೇಖನರೀತಿಗಳಲ್ಲಿ ದಟ್ಟ ಸಾಮ್ಯ ಎದ್ದುಕಾಣುತ್ತದೆ. ಗ್ರೀಕ್ ದೇವದೇವತೆಗಳ ಮತ್ತು ಭಾರತದ ಅಪ್ಸರೆಯರ ಮತ್ತಿತರ ಚಿತ್ರಣರೀತಿಯಲ್ಲಿ ಅನುಸ್ಯೂತತೆಯನ್ನು ಕಾಣಬಹುದು. ಪರಸ್ಪರ ಹೋಲಿಕೆಗಳಿರುವ ಪೌರಾಣಿಕ ಆಖ್ಯಾನಗಳೂ ಉಂಟು. ಉದಾಹರಣೆಗೆ: ಅಯೋನಿಯನ್ ಸಮುದ್ರದಿಂದ ಅಪ್ಸರೆಯರು ಉಗಮಗೊಂಡರು ಎಂಬ ಪಾಶ್ಚಾತ್ಯ ಪೌರಾಣಿಕ ಪರಂಪರೆಗೆ ಸಂವಾದಿಯಾದ ಕಥನಗಳು ಭಾರತೀಯ ಪುರಾಣಗಳಲ್ಲಿಯೂ ಲಭ್ಯವಿವೆ.
ಹೀಗೆ ಮೂಲಪ್ರೇರಣೆ, ಚಿತ್ರಣೋತ್ಸಾಹ, ಅಭಿವ್ಯಕ್ತಿಮಾರ್ಗ – ಎಲ್ಲದರ ಆಂತರ್ಯದಲ್ಲಿ ಸಮಾನಾಂಶಗಳು ಉಂಟು.
ಆಧುನಿಕ ಕಲೆ ಎಂದು ಲಕ್ಷಿತವಾಗಿರುವ ಈಚಿನ ಕೆಲವು ಐರೋಪ್ಯ ಕಲಾಪ್ರಸ್ಥಾನಗಳಲ್ಲಿಯೂ ಕಲಾಕಾರನು ನಿಸರ್ಗಕ್ಕೆ ಹೆಚ್ಚು ನಿಕಟವರ್ತಿಯಾಗಬೇಕೆಂಬ ಧೋರಣೆ ಇದೆ.
“In Indian civilization there was never a division or fundamental contradiction between art and religion, or between art, religion and philosophical thought. Inherited revelation, the scholastic traditions of the priesthoods, and the popular beliefs worked upon each other by ever renewed processes of influence and were pervaded meanwhile by philosophical ideas originating in ascetic experiences, yogic exercises, and introverted intuition. The luxuriant display of religious sculpture so characteristic of the great temples of pilgrimage is therefore a readily legible pictorial script that conveys, through an elaborate yet generally understood symbolism, not only the legends of popular cult, but simultaneously the profoundest teachings of Indian metaphysics”
[Heinrich Zimmer: ‘The Art of Indian Asia: Its Mythology and Transformation.’ Bollingen Series XXXIX. Pantheon Books, New York. 1955. Second edition 1960. Page 12].
ಕಲಾವಿದ ಜಿ.ಎಲ್.ಎನ್. ಸಿಂಹ