ಜಗದ್ವಿಖ್ಯಾತ ಅಧ್ಯಾತ್ಮ ಲೇಖಕ ಪೌಲೋ ಕೊಯ್ಲೋ ಈಚೆಗೆ ಒಂದು ಸಂದರ್ಭದಲ್ಲಿ ಹೇಳಿದ: ನಾನು ಭಗವದ್ಗೀತೆಯನ್ನು ಓದಿದೊಡನೆಯೆ ಅದರ ಬಗೆಗೆ ನನಗೆ ಅತಿಶಯ ಪ್ರೇಮ ಉಂಟಾಯಿತು. ಬದುಕಿನ ಎಲ್ಲ ಸಂದರ್ಭಗಳಿಗೂ ಅದು ಸಾಕಾಗುತ್ತದೆ ಎನಿಸಿತು. ವಿಶ್ವದ ರಹಸ್ಯವನ್ನು ಅರಿಯಲು, ನಿಮ್ಮ ವಿಧಿಯನ್ನು ಗೊಣಗದೆ ಸ್ವೀಕರಿಸಲು, ಮತ್ತು ಸಂಘ?ವು ಎದುರಾದಾಗ ಮುನ್ನಡೆದು ನಿಮ್ಮ ಕರ್ತವ್ಯವನ್ನು ನಿರ್ವಹಿಸಲು ಗೀತೆ ನಿಮ್ಮನ್ನು ಸಜ್ಜುಗೊಳಿಸುತ್ತದೆ.
ಭಗವದ್ಗೀತೆಯ ಪರಿಚಯ ದೊರೆತ ಎಲ್ಲ ಶ್ರದ್ಧಾವಂತರದೂ ಇಂತಹದೇ ಅನಿಸಿಕೆ ಇದೆ.
ಗೀತೆಯ ಬಗೆಗೆ ಏನೇ ಹೇಳಹೊರಟರೂ ಚರ್ವಿತಚರ್ವಣವೆನಿಸುವ ಸಂಭವವಿದೆ. ಆದುದರಿಂದ ಅದರ ಬೋಧೆಗಳ ವಿಸ್ತೃತ ನಿರೂಪಣೆಗೆ ಹೋಗದೆ ಗೀತೆಯನ್ನು ಅನನ್ಯವಾಗಿಸಿರುವ, ಎಂದರೆ ಅದರ ವಿಶಾಲ ಜನಾದರಕ್ಕೆ ಕಾರಣವಾಗಿರುವ ಪ್ರಮುಖ ಅಂಶಗಳು ಯಾವುವೆಂದು ಗುರುತಿಸುವುದು ಪ್ರಕೃತ ಪ್ರಬಂಧದ ಪರಿಮಿತ ಆಶಯ. ಈ ಪ್ರವೇಶಿಕೆ ಗೀತೆಯ ಗಂಭೀರ ಅಧ್ಯಯನದಲ್ಲಿ ತೊಡಗುವ ಇಚ್ಛೆಯುಳ್ಳವರಿಗೆ ಸ್ವಲ್ಪಮಟ್ಟಿಗೆ ನೆರವಾದೀತೆಂಬುದು ಆಕಾಂಕ್ಷೆ.
ಸ್ನೇಹಧ್ವನಿ
ಭಗವದ್ಗೀತೆಯ ಮುಖ್ಯ ಬೋಧೆಗಳೇನೆಂಬುದರ ಪುನಃಸ್ಮರಣೆಗಾಗಿ ಕೆಲವು ಮಾತುಗಳು ಸಾಕಾದಾವು. ಬ್ರಹ್ಮದ ಸ್ಮರಣೆಯಲ್ಲಿ ನೆಲೆನಿಂತು ಇಹದ ಬದುಕನ್ನು ಸಾರ್ಥಕವಾಗಿ ನಡೆಸಬೇಕು – ಎಂದು ಗೀತೆ ಆಡುಮಾತಿನಲ್ಲಿ ತಿಳಿಸಿಕೊಟ್ಟಿದೆ. ಇಲ್ಲಿಯ ಬೋಧನೆ ಗುರು-ಶಿ? ಸಂವಾದದ ಆಕಾರದಲ್ಲಿದ್ದರೂ ಇಲ್ಲಿಯದು ಶಾಸ್ತ್ರಕ್ಲೇಶಗಳಿಂದ ದೂರ ಉಳಿದ ಮೈತ್ರ್ಯಾಧಾರಿತ ಮಾತುಕತೆ. ಮೋಕ್ಷ, ಸಂನ್ಯಾಸ, ವೈರಾಗ್ಯ ಮೊದಲಾದ ಪರಿಚಿತ ಶಬ್ದಗಳು ಇಲ್ಲಿ ಬಳಕೆಗೊಂಡಿರುವುದೂ ಪಾರಿಭಾಷಿಕವಲ್ಲದ ವ್ಯಾಪಕ ಅರ್ಥದಲ್ಲಿ. ಇಲ್ಲಿ ಇರುವುದು ಇದಮಿತ್ಥಂ ಎಂಬ ಅಧಿಕಾರಧ್ವನಿಯಲ್ಲ; ಬದಲಾಗಿ ನಿನ್ನ ಮನಸ್ಸಿಗೆ ಒಗ್ಗುವ ಯಾವ ಮಾರ್ಗದಿಂದಲಾದರೂ ನೀನು ಉನ್ನತಿ ಪಡೆಯಬಹುದು ಎಂಬ ಓಲೈಕೆಯ ಸ್ನೇಹಧ್ವನಿ, ಮತ್ತು ಯಾವುದೇ ಶ್ರದ್ಧಾಪೂರ್ವಕ ಅನುಸಂಧಾನಮಾರ್ಗಗಳೂ ಸದ್ಗತಿಗೆ ಒಯ್ಯಬಲ್ಲವು ಎಂಬ ಭರವಸೆ. ಮುಖ್ಯವಾದದ್ದು ಪ್ರಾಮಾಣಿಕ ಸಾಧನೆಯ?. ಇಂದ್ರಿಯನಿಯಂತ್ರಣವನ್ನೂ ತ್ಯಾಗಬುದ್ಧಿಯನ್ನೂ ಲೋಕಹಿತೇಚ್ಛೆಯನ್ನೂ ಅಭ್ಯಾಸಮಾಡಿಕೊಳ್ಳುವುದೇ ಯೋಗ. ಇಲ್ಲಿ ಯಾವುದೇ ವ್ಯಾವಹಾರಿಕ ಕರ್ತವ್ಯಗಳಿಂದಲೂ ವಿಮುಖರಾಗುವ ಪ್ರಶ್ನೆಯೇ ಇಲ್ಲ; ಪ್ರತಿಯಾಗಿ ಎಂತಹ ಜ್ಞಾನಿಯೂ ಕರ್ತವ್ಯಾಚರಣೆಯಿಂದ ಪಕ್ಕಕ್ಕೆ ಸರಿಯಬಾರದೆಂಬುದೇ ಬೋಧೆ.
ವ್ಯವಹಾರಗಳಲ್ಲಿ ಸಂಯಮ ಇರುವಂತೆ ನೋಡಿಕೊಳ್ಳಬೇಕ?. ಸ್ವಾರ್ಥದ ಆವೇಶವಿಲ್ಲದೆ ಮಾಡುವ ಎಲ್ಲ ಜೀವನಕಾರ್ಯವೂ ಯಜ್ಞವೇ ಎಂದು ಗೀತೆ ಘೋಷಿಸಿದೆ.
ಹೀಗೆ ಜೀವನಸಾರ್ಥಕತೆಯ ಪಾರಂಪರಿಕ ಪರಿಧಿಯನ್ನು ಗೀತೆ ವಿಸ್ತರಿಸಿದೆ. ಈ ಕಾರಣದಿಂದ ಉಂಟಾಗಿರುವುದು ಗೀತೆಯ ವ್ಯಾಪಕ ಗ್ರಾಹ್ಯತೆ. ಗೀತೆಯು ಬದುಕಿನ ಎಂದರೆ ವ್ಯಕ್ತಿತ್ವವಿಕಾಸದ ಕೈಪಿಡಿಯೇ ಹೊರತು ಶಾಸ್ತ್ರಗ್ರಂಥವಲ್ಲ. ಮತೀಯ ಗ್ರಂಥವಂತೂ ಅಲ್ಲವೇ ಅಲ್ಲ. ಇಲ್ಲಿಯ ಆಶಯವನ್ನು ’ಲೋಕಸಂಗ್ರಹ’ ಎಂಬ ಸುಂದರವೂ ಅಡಕವೂ ಆದ ಮಾತಿನಲ್ಲಿ ಗೀತೆ ಸೂತ್ರಿಸಿದೆ. ಸಾರ್ಥಕಜೀವನವೆಂಬ ನಾಣ್ಯದ ಒಂದು ಬದಿ ಆತ್ಮಸಾಕ್ಷಾತ್ಕಾರವಾದರೆ ಇನ್ನೊಂದು ಬದಿ ಲೋಕಸಂಗ್ರಹ ಅಥವಾ ಲೋಕಕಲ್ಯಾಣಸಾಧನೆ. ಇಂದ್ರಿಯನಿಗ್ರಹವಾಗಲಿ ಸ್ವಾರ್ಥತ್ಯಾಗವಾಗಲಿ ಸುಲಭವಲ್ಲವೆಂಬ ಮತ್ತು ಕಠಿಣ ಅಭ್ಯಾಸದಿಂದ? ಶಕ್ಯವೆಂಬ ಪೂರ್ಣ ಅರಿವಿನ ನೆಲಗಟ್ಟಿನ ಮೇಲೆ ಇಲ್ಲಿ ಸಂವಾದ ನಡೆದಿರುವುದರಿಂದ ಗೀತೆ ಎಲ್ಲರಿಗೂ ಆಪ್ತವೂ ಆತ್ಮೀಯವೂ ಆಗಿದೆ.
ಗೀತೆಯ ತಾತ್ಪರ್ಯದ ವಿಷಯದಲ್ಲಿ ಪ್ರಕೃತಕ್ಕೆ ಇಷ್ಟು ಪರ್ಯಾಪ್ತವೆನಿಸುತ್ತದೆ.
ಈಗ ಗೀತೆಯ ವಿಶಿಷತೆಗಳಲ್ಲಿ ಕೆಲವನ್ನು ಅವಲೋಕಿಸಬಹುದು.
ಅಭಿಜಾತಕೃತಿ
ಶಿಷ್ಟವಾಙ್ಮಯದಲ್ಲಿ ಅಭಿಜಾತಕೃತಿಗಳು, ಲೌಕಿಕಕೃತಿಗಳು – ಎಂದು ಸ್ಥೂಲವಾಗಿ ಎರಡು ಧಾರೆಗಳನ್ನು ಗುರುತಿಸಬಹುದು. ಅಭಿಜಾತಕೃತಿಗಳಲ್ಲಿ ಉನ್ನತ ಸಂಸ್ಕಾರಕ ಅಂಶಗಳು ಇರುವುದು ಮಾತ್ರವಲ್ಲದೆ ವ್ಯವಹಾರಾತೀತ ಸ್ಫುರಣೆಯ ಆಯಾಮವೂ ಸೇರಿರುತ್ತದೆ. ಎರಡನೆಯ ಧಾರೆಯ ಕೃತಿಗಳಲ್ಲಿ ಉಚ್ಚಮಟ್ಟದ ಸಾಹಿತ್ಯಿಕ ಗುಣವೂ ವ್ಯುತ್ಪಾದಕ (ಎಂದರೆ ಭಾ?ಯ ಮತ್ತು ಅನ್ಯ ಕಾವ್ಯಪರಿಕರಗಳ ಪರಿಜ್ಞಾನವನ್ನು ಉಂಟುಮಾಡಬಲ್ಲ) ಗುಣಗಳೂ ಗಮನ ಸೆಳೆಯುತ್ತವೆ. ಈ ಎರಡು ಧಾರೆಗಳೂ ಸಂಸ್ಕಾರಕಾರಿಗಳೇ. ಆದರೆ ಅಭಿಜಾತಕೃತಿಗಳ ಪ್ರಭಾವವು ದೂರಗಾಮಿಯೂ ದೀರ್ಘಕಾಲಿಕವೂ ಆಗಿರುತ್ತದೆ, ಹೀಗೆ ಹೆಚ್ಚು ಗತಿಶೀಲವಾಗಿರುತ್ತದೆ. ಈ ಕೃತಿಗಳು ಅಭ್ಯಾಸಿಗಳ ಮೇಲೆ ಉಂಟುಮಾಡುವ ಪರಿಣಾಮವು ಸಾಹಿತ್ಯಕ್ಷೇತ್ರಕಕ್ಷೆಯಿಂದ ಅತೀತವಾಗಿರುತ್ತದೆ. ಒಂದು ನಾಗರಿಕತೆಯನ್ನು ರೂಪಿಸುವುದರಲ್ಲಿ ಇಂತಹ ಕೃತಿಗಳ ಪಾತ್ರ ಮಹತ್ತ್ವದ್ದಿರುತ್ತದೆ, ಮತ್ತು ಇವು ಶಾಶ್ವತಮೌಲ್ಯ ಪ್ರತಿಪಾದಕಗಳಾಗಿರುತ್ತವೆ; ಮೌಲ್ಯಗಳ ನಿರ್ಣಯಕ್ಕೆ ಮಾನದಂಡಗಳ ಆಕರಗಳಾಗಿ ಈ ಕೃತಿಗಳು ಒದಗಿಬರುತ್ತವೆ. ಇಂತಹ ಕೃತಿಗಳು ಜಗತ್ತಿನ ಯಾವುದೇ ಭಾ?ಯಲ್ಲಿ ಬೆರಳೆಣಿಕೆಯ? ಇರುತ್ತವೆ. ಸ್ಥಾನೀಯ ಭಾ?ಗಳಲ್ಲಿ ರಚನೆಗೊಂಡಿದ್ದರೂ ಇವಕ್ಕೆ ದೇಶಕಾಲಾತೀತ ಮಾನ್ಯತೆ ಸಲ್ಲುತ್ತದೆ.
ಭಗವದ್ಗೀತೆಯು ಅಂತಹ ಅಭಿಜಾತವರ್ಗಕ್ಕೆ ಸೇರಿರುವ ಕೃತಿ ಮಾತ್ರವಲ್ಲದೆ ಅಭಿಜಾತಕೃತಿಗಳಿಗೆಲ್ಲ ಮೂರ್ಧನ್ಯಭೂತವೂ ಆಗಿದೆ. ಎಲ್ಲ ದಾರ್ಶನಿಕ ಧಾರೆಗಳವರ ದೃಷ್ಟಿಯಲ್ಲಿ ಸಮುನ್ನತ ಸ್ಥಾನ ಅದಕ್ಕೆ ಲಭಿಸಿದೆ. ಅದು ದೇಶಕಾಲಾತೀತವೂ ಸಾರ್ವತ್ರಿಕ ನೆಲೆಯದೂ ಆಗಿದ್ದು, ಸನಾತನಧರ್ಮಜನಿತವಾದ ತತ್ತ್ವಾನುಸಂಧಾನದ ಅತ್ಯುನ್ನತಸ್ತರದ ಪ್ರಾತಿನಿಧಿಕ ಕೃತಿಯಾಗಿದೆ. ವೇದಾಂತದರ್ಶನದ ಬಹುತೇಕ ಎಲ್ಲ ಪ್ರಮುಖ ಪ್ರಮೇಯಗಳ ಪ್ರತಿಪಾದನೆಯನ್ನು ಅದು ಒಳಗೊಂಡಿದೆ. ಅದರ? ವಿಪುಲವಾಗಿ ವ್ಯಾಖ್ಯಾನಗೊಂಡಿರುವ ಕೃತಿಯು ವೇದಾಂತವಾಙ್ಮಯಧಾರೆಯಲ್ಲಿ ಬೇರೆ ಇರದು – ಎಂಬುದೇ ಅದರ ಅನನ್ಯ ಆದರಣೀಯತೆಯನ್ನು ಸಾಕ್ಷ್ಯಪಡಿಸಿದೆ. ರಚನೆಗೊಂಡ ಐದು ಸಾವಿರ ವ?ಗಳ ತರುವಾಯವೂ ಅದು ಹೊಸಹೊಸ ಅರ್ಥಾನ್ವೇ?ಣೆಗೆ ವಸ್ತುವಾಗುತ್ತಿರುವುದು ಮಾತ್ರವಲ್ಲದೆ ತತ್ತ್ವಶಾಸ್ತ್ರೇತರ ಅನ್ವೇಯತೆಯನ್ನೂ ಅದರಲ್ಲಿ ಗುರುತಿಸಲಾಗುತ್ತಿದೆ – ವ್ಯಕ್ತಿತ್ವವಿಕಸನ ಕೈಪಿಡಿಯಾಗಿ, ವ್ಯವಸ್ಥಾಪನಶಾಸ್ತ್ರಕ್ಕೆ ದಿಕ್ಪ್ರದರ್ಶಕವಾಗಿ, ಇತ್ಯಾದಿ. ಈ ರೀತಿಯಾಗಿ ಹೊಸಹೊಸ ಸಾಧ್ಯತೆಗಳಿಗೆ ಆಸ್ಪದ ನೀಡಬಲ್ಲವು ಅಭಿಜಾತಕೃತಿಗಳು ಮಾತ್ರ.
ವೇದಾಂತದರ್ಶನದ ಬಹುತೇಕ ಎಲ್ಲ ಪ್ರಮುಖ ಪ್ರಮೇಯಗಳ ಪ್ರತಿಪಾದನೆಯನ್ನು ಗೀತೆ ಒಳಗೊಂಡಿದೆ. ಅದರ? ವಿಪುಲವಾಗಿ ವ್ಯಾಖ್ಯಾನಗೊಂಡಿರುವ ಕೃತಿಯು ವೇದಾಂತವಾಙ್ಮಯಧಾರೆಯಲ್ಲಿ ಬೇರೆ ಇರದು – ಎಂಬುದೇ ಅದರ ಅನನ್ಯ ಆದರಣೀಯತೆಯನ್ನು ಸಾಕ್ಷ್ಯಪಡಿಸಿದೆ.
ಸ್ವಾತಂತ್ರ್ಯಪರವಾಗಿಯೂ ವಿದೇಶೀ ಪ್ರಭುತ್ವದ ವಿರುದ್ಧವಾಗಿಯೂ ನಡೆಯಬೇಕಾಗಿದ್ದ ಜನಜಾಗರಣೋದ್ಯಮದಲ್ಲಿ ಲೋಕಮಾನ್ಯ ತಿಲಕರು ರಾಜಕೀಯ ಸಂಘ?ಕ್ಕೆ ಪೂರಕವಾಗಿ ಅಧ್ಯಾತ್ಮಚಿಂತನಕ್ಷೇತ್ರವನ್ನೂ ಬಳಸಿಕೊಂಡದ್ದು ಒಂದು ದೊಡ್ಡ ಚಮತ್ಕಾರವೆನಿಸಿತು.
ಸ್ವಾತಂತ್ರ್ಯಸಂಘ?ದ ವ?ಗಳಲ್ಲಿ ಪೌರು?ಪ್ರತಿಪಾದಕವಾಗಿ ತಿಲಕರು, ಮಾಲವೀಯ, ಗಾಂಧಿ – ಎಲ್ಲರೂ ಪ್ರಮುಖವಾಗಿ ಬಳಸಿದುದು ಭಗವದ್ಗೀತೆಯನ್ನು. ಚಾಫೇಕರ್, ಖುದಿರಾಮ್ ಬೋಸ್, ರಾಮಪ್ರಸಾದ್ ಬಿಸ್ಮಿಲ್ ಮೊದಲಾದ ಬಲಿದಾನಿಗಳೆಲ್ಲ ಗಲ್ಲಿಗೇರುವ ಮೊದಲ ಅಂತಿಮ ಕ್ಷಣದಲ್ಲಿ ಕೋರಿದುದು ಗೀತೆಯನ್ನು ಕೈಯಲ್ಲಿ ಧರಿಸಿರಬೇಕೆಂದು. ’ವಂದೇ ಮಾತರಂ’ ರಣಕಹಳೆಯನ್ನು ನಾಡಿಗೆ ನೀಡಿದ ಬಂಕಿಮಚಂದ್ರರೂ ಸ್ವಯಂ ಗೀತೆಯ ಮೇಲೆ ಸ್ವೋಪಜ್ಞ ವ್ಯಾಖ್ಯಾನವನ್ನು ಬರೆದರು.
ಪ್ರಸಿದ್ಧ ಅಲಿಪುರ ಬಾಂಬ್ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿದ್ದ ಉಪೇಂದ್ರನಾಥ ಬಂದ್ಯೋಪಾಧ್ಯಾಯ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯಲ್ಲಿ ರಾ?ಭಕ್ತನಾಗಲು ನನಗೆ ಪ್ರೇರಣೆ ಲಭಿಸಿದುದು ಭಗವದ್ಗೀತೆಯ ಕರ್ಮಯೋಗಬೋಧನೆಯಿಂದ ಎಂದಿದ್ದ.
ಕ್ರಾಂತಿಕಾರಿ ಯತೀಂದ್ರನಾಥ ಮುಖರ್ಜಿ ಪ್ರತಿನಿತ್ಯ ಗೀತಾಪಠನ ಮಾಡಿದ ಮೇಲೆಯೆ ದಿನಚರಿಯನ್ನು ಆರಂಭಿಸುತ್ತಿದ್ದ.
ಪ್ರಸಿದ್ಧಿಯು ಗುಣವತ್ತತೆಯಿಂದ ಶತಮಾನಗಳುದ್ದಕ್ಕೂ ವಿವಿಧ ಭಾ?ಗಳಲ್ಲಿ ಗೀತೆಯ ಮೇಲೆ ವ್ಯಾಖ್ಯಾನಗಳು ರಚನೆಗೊಂಡಿದ್ದರೂ ತಾವು ಹೊಸದಾವುದೋ ಒಳನೋಟಗಳನ್ನು ಕಂಡುಕೊಂಡಿದ್ದೇವೆನಿಸಿ ಹೊಸ ವ್ಯಾಖ್ಯಾನಗಳನ್ನು ಶ್ರದ್ಧಾಳುಗಳು ಇತ್ತೀಚೆಗೂ ರಚಿಸುತ್ತಲೇ ಬಂದಿದ್ದಾರೆ. ಈ ನೂತನ ವ್ಯಾಖ್ಯಾನಗಳೂ ಯಾವುದೋ ವಿಶೇ? ವಾಚಕವರ್ಗಗಳನ್ನು ಆಕರ್ಷಿಸುತ್ತಲೇ ಇರುವುದು ಮೂಲಗ್ರಂಥದ ಘನಿ?ತೆಯನ್ನು ಸೂಚಿಸುತ್ತದೆ. ಈಚಿನ ದಶಕಗಳಲ್ಲಂತೂ ಗೀತೆಯನ್ನು ಪ್ರವಚನದ ವಸ್ತುವಾಗಿ ಬಳಸಿಕೊಳ್ಳದ ಸಂತರೂ ಪ್ರವಚನಕಾರರೂ ವಿರಳವೆಂದೇ ಹೇಳಬಹುದು.
ಈ ವೈಶಿ?ವನ್ನು ಹೆಚ್ಚು ವಿಸ್ತರಿಸಬೇಕಾದ ಆವಶ್ಯಕತೆ ಇಲ್ಲ. ಗಮನಿಸಬೇಕಾದ ಅಂಶವೆಂದರೆ – ಭಗವದ್ಗೀತೆಯ ಮಹತಿಯು ಯಾವುದೋ ಹಿತಾಸಕ್ತ ಬಣದಿಂದ ಪ್ರಚಾರಗೊಂಡು ಸಿದ್ಧಿಸಿದುದಲ್ಲ. ಅದು ವ್ಯಾಪಕ ಅಂಗೀಕಾರವನ್ನು ಪಡೆದುಕೊಂಡಿರುವುದು ಅದರ ಸ್ವೀಯ ಅನುಪಮ ಗುಣವತ್ತತೆಯಿಂದಲೇ ಮತ್ತು ಅತುಲ್ಯ ಉದಾತ್ತತೆಯಿಂದಲೇ. ಅದರ ವಿಶಾಲವಾದ ಹರಹು ಅದಕ್ಕೆ ಅಂಗೀಕಾರ್ಯತೆಯನ್ನು ತಂದಿತ್ತಿದೆ. ಹೀಗಾಗಿ ಅದನ್ನು ಯಾವುದೇ ಸಂಪ್ರದಾಯದ ಪ್ರಾಕಾರಕ್ಕೆ ಅನುಬಂಧವಾಗಿ ಕಾಣಿಸುವ ಪ್ರಯಾಸಗಳು ನಿ?ಲವಾಗುತ್ತವೆ.
ಆರಂಭದಿಂದ ಅಂತ್ಯದವರೆಗೂ ಪರಮಾರ್ಥತತ್ತ್ವಗಳನ್ನೇ ಒಳಗೊಂಡಿರುವ ಭಗವದ್ಗೀತೆಯನ್ನು ಒಂದು ದೇಶಕ್ಕೋ ಜನವರ್ಗಕ್ಕೋ ಜಾತಿಗೋ ಸೀಮಿತವೆಂದು ಭ್ರಮಿಸುವವರಿಗೆ ಏನೆನ್ನಬೇಕು!
ಎಲ್ಲ ಸಂಪ್ರದಾಯಗಳಿಂದ ಅತೀತವಾಗಿ ಮಾನವನ ಜೀವನಲಕ್ಷ್ಯವನ್ನೂ ಅದನ್ನು ಸಾಧಿಸುವ ಮಾರ್ಗವನ್ನೂ ತಿಳಿಸಿಕೊಟ್ಟಿರುವ ಅದ್ವಿತೀಯ ಕೈಪಿಡಿ ಭಗವದ್ಗೀತೆ.
ಪ್ರಕ್ಷೇಪಸಾಧ್ಯತೆಗಳ ವಿಶ್ಲೇ?ಣೆ ಏನೇ ಆಗಿದ್ದರೂ ಮಹಾಭಾರತದಲ್ಲಿ ಗೀತೆಯು ಸೇರಿಸಲ್ಪಡದಿದ್ದಿದ್ದರೆ ಮಾನವತೆಗೆ ಎ? ದೊಡ್ಡ ನ?ವಾಗುತ್ತಿತ್ತೆಂದು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ.
’ಗೀತೆ’ ಎಂಬುದು ಸಾಮಾನ್ಯ ಶಬ್ದವೇ ಆಗಿದ್ದರೂ ಗೀತೆ ಎಂದರೆ ಭಗವದ್ಗೀತೆಯೇ ಎಂಬ ಪಾರಿಭಾಷಿಕತೆಯನ್ನು ಅದು ಪಡೆದುಕೊಂಡುಬಿಟ್ಟಿದೆ ಎಂಬುದರಿಂದ ಅದರ ಉನ್ನತಿಯನ್ನು ಊಹಿಸಬಹುದು. ನಮ್ಮ ಪರಂಪರೆಯಲ್ಲಿ ಗೋಪೀಗೀತಾ, ಉದ್ಧವಗೀತಾ, ಅವಧೂತಗೀತಾ, ಅ?ವಕ್ರಗೀತಾ, ಗಣೇಶಗೀತಾ ಮೊದಲಾದ ನಾಲ್ಕಾರು ಗೀತಗಳು ಇದ್ದರೂ ಗೀತೆ ಎಂಬ ಅಭಿಧಾನವನ್ನು ಸ್ವಾಯತ್ತಗೊಳಿಸಿಕೊಂಡಿರುವುದು ಭಗವದ್ಗೀತೆಯೇ.
ಗೀತೆಯ ಸನ್ನಿವೇಶ
ಭಗವದ್ಗೀತೆಯೇ ಮಹಾಭಾರತದ ಅತ್ಯಂತ ಸಾರಭೂತ ಭಾಗವೆಂಬ ಪರಿಗಣನೆ ದೀರ್ಘಕಾಲದಿಂದ ಇದೆ.
ಭಗವಾನ್ ಶ್ರೀಕೃ?ನ ವಾಣಿಯಲ್ಲಿ ಭಗವದ್ಗೀತೆಯು ಹೊಮ್ಮಿದುದು ಮಾರ್ಗಶಿರ ಶುಕ್ಲ ಏಕಾದಶಿಯಂದು ಎಂದು ಸಾಂಪ್ರದಾಯಿಕ ಗಣನೆ ಇರುವುದರಿಂದ ಆ ದಿನವನ್ನು (ಈ ವ? ಡಿಸೆಂಬರ್ ೧೮) ಗೀತಾಜಯಂತಿ ಎಂದು ಆಚರಿಸುವ ರೂಢಿ ಶತಮಾನಗಳಿಂದ ಪ್ರಚಲಿತವಿದೆ. ಆ ದಿನವನ್ನು ’ಮೋಕ್ಷದಾ ಏಕಾದಶಿ’ ಎಂದೂ ಪರಂಪರೆಯು ಕರೆದಿದೆ.
ಧರ್ಮವೆಂದರೇನೆಂಬುದರ ಜಿಜ್ಞಾಸೆಯಿಂದ ಆರಂಭಗೊಂಡು ”ಈಗ ನನ್ನ ಅಜ್ಞಾನ ನೀಗಿದೆ, ನಿನ್ನ ಆದೇಶವನ್ನು ಪಾಲಿಸಲು ನಾನು ಸಿದ್ಧನಿದ್ದೇನೆ ಎಂದು ಅರ್ಜುನನು ಶ್ರೀಕೃ?ನಲ್ಲಿ ಪ್ರಾಂಜಲವಾಗಿ ಬಿನ್ನವಿಸುವವರೆಗಿನ ಅಧ್ಯಾತ್ಮಪಯಣದ ಕಥನವೇ ಭಗವದ್ಗೀತೆ. ಕರ್ಮಮಾರ್ಗ ಮತ್ತು ಭಕ್ತಿಮಾರ್ಗಗಳ ಸಮನ್ವಯ ಮೊದಲಾದವೆಲ್ಲ ಆ ಸಾರ್ಥಕ ಪಯಣದ ಮಜಲುಗಳು.
ಕುರುಕ್ಷೇತ್ರ ರಣಾಂಗಣದ ನಟ್ಟನಡುವೆ ಗೀತೋಪದೇಶ ನಡೆಯಿತೆಂಬುದರ ಸಾಂಕೇತಿಕತೆ ಸ್ಪ?ವೇ ಆಗಿದೆ. ತಾತ್ಕಾಲಿಕ ಮನಃಕ್ಲೇಶಕ್ಕೊಳಗಾಗಿದ್ದ ಅರ್ಜುನನಲ್ಲಿ ಶ್ರೀಕೃ?ನು ಕರ್ತವ್ಯಶ್ರದ್ಧೆಯನ್ನು ಮೂಡಿಸಿದುದರಿಂದ ಗೀತೆಯ ಬೋಧೆಯು ’ಸಂಜೀವನೀ ವಿದ್ಯಾ’ ಎನಿಸಿದೆ. ಅದು ಎಲ್ಲ ಕಾಲಕ್ಕೂ ಸಂಗತವೂ ಅವಶ್ಯವೂ ಆದ ಬೋಧೆಯಾಗಿದೆ. ಈ ಕಾರಣದಿಂದಲೇ ಆದಿಶಂಕರರಿಂದ ಲೋಕಮಾನ್ಯ ತಿಲಕರ ವರೆಗಿನ ಚಿಂತಕಶ್ರೇ?ರು ಗೀತೆಯನ್ನು ಅತಿಶಯವಾಗಿ ಆದರಿಸಿರುವುದು. ತಿಲಕರಿಗೆ ಗೀತೆಯ ಕರ್ಮಮೀಮಾಂಸೆಯು ಮಹತ್ತ್ವದ್ದೆನಿಸಿದರೆ ವಿನೋಬಾರವರಿಗೆ ಸ್ಥಿತಪ್ರಜ್ಞದರ್ಶನವು ಲೋಕಸಂಸ್ಥಿತಿಗೆ ಪೋಷಕವೆನಿಸಿತು.
ಮನು?ಮಾತ್ರರು ಸದಾ ಕರ್ಮನಿ?ರಾಗಿರುವುದು ಅನಿವಾರ್ಯವೆಂಬ ಕೃ?ಪದೇಶವು ಯುದ್ಧಪ್ರಸಂಗಕ್ಕ? ಅನ್ವಯವಾಗುವಂತಹದಲ್ಲ; ಎಲ್ಲರ ಲೌಕಿಕಜೀವನವ?ಕ್ಕೂ ಅನ್ವಯವಾಗುವಂತಹದು. ಇದರಿಂದಾಗಿಯೆ ಗೀತೋಪದಿ? ’ಕರ್ಮಯೋಗ’ ಬೋಧೆಗೆ ಸಾರ್ವತ್ರಿಕತೆಯುಂಟಾಗಿರುವುದು.
ರಣಾಂಗಣವು ಗೀತೋಪದೇಶಕ್ಕೆ ಸನ್ನಿವೇಶವನ್ನು ಒದಗಿಸಿದುದರ ಪ್ರತಿಫಲನವೆಂಬಂತೆ ಈಚಿನ ಕಾಲದಲ್ಲಿಯೂ ಕಾರಾಗೃಹಗಳೊಳಗಿನಿಂದ ಯುಗಾನುಕೂಲ ಗೀತಾವ್ಯಾಖ್ಯೆಗಳು ಹೊಮ್ಮಿವೆ. ಇದನ್ನೂ ಆಸುರೀ ಶಕ್ತಿಗಳಿಗೆ ಸಾತ್ತ್ವಿಕ ಪ್ರತಿಕ್ರಿಯೆಯೆಂದು ಭಾವಿಸಬಹುದು. ಗೀತಾಚಾರ್ಯ ಶ್ರೀಕೃ?ನ ಜನನವಾಗಿದ್ದುದೇ ಸೆರೆಮನೆಯಲ್ಲ?. ಅದರ ಪಡಿನೆಳಲೆಂಬಂತೆ ಯೋಗಿ ಅರವಿಂದರಿಗೆ ಶ್ರೀಕೃ?ದರ್ಶನವಾದದ್ದು ಕಾರಾಗೃಹದಲ್ಲಿ. ಲೋಕಮಾನ್ಯ ತಿಲಕರ ’ಗೀತಾರಹಸ್ಯ’ ಆವಿ?ತವಾದದ್ದು ಅವರು ಬಂಧನದಲ್ಲಿ ಇದ್ದಾಗ. ವಿನೋಬಾ ಭಾವೆಯವರ ’ಗೀತಾಪ್ರವಚನ’ ಹೊಮ್ಮಿದುದೂ ಕಾರಾಗೃಹದಲ್ಲಿ ಒಡನಾಡಿಗಳೊಡನೆ ಸಲ್ಲಾಪ ನಡೆಸುವಾಗ.
ಯೋಗಸ್ಥಿತಿಯಿಂದ ಪ್ರತಿಪಾದನೆ
ಸರಳ ನುಡಿಗಟ್ಟಿನಲ್ಲಿ ಇದ್ದರೂ ಗೀತೆಯು ಲೌಕಿಕ- ವ್ಯಾವಹಾರಿಕ ನೆಲೆಯಿಂದ ಅತೀತವಾದುದು ಎಂಬುದು ಸ್ಪ?ವೇ ಆಗಿದೆ. ಇಂತಹ ಬಹುಸ್ತರೀಯ ಶೈಲಿಯನ್ನು ’ಸಮಾಧಿಭಾ?’ ಎಂದು ಪಾರಂಪರಿಕವಾಗಿ ಕರೆಯಲಾಗಿದೆ. ಇದಕ್ಕೆ ಪೋ?ಕವಾಗಿ ಮಹಾಭಾರತವನ್ನೇ ಉಲ್ಲೇಖಿಸಬಹುದು. ಮಹಾಭಾರತದ ಆಶ್ವಮೇಧಿಕಪರ್ವದಲ್ಲಿ ’ಉತ್ತರಗೀತಾ’ ಎಂಬ ಪ್ರಕರಣವಿದೆ. ಕುರುಕ್ಷೇತ್ರಯುದ್ಧವು ಪಾಂಡವವಿಜಯದಲ್ಲಿ ಪರ್ಯವಸಾನಗೊಂಡ ಮೇಲೆ ಒಮ್ಮೆ ವಾರ್ತಾಲಾಪ ನಡೆದಿದ್ದಾಗ ಅರ್ಜುನನು ಕೃ?ನನ್ನು ಕೇಳುತ್ತಾನೆ: ಭಗವಂತ, ಯುದ್ಧದ ಆರಂಭದಲ್ಲಿ ನೀನು ನನಗೆ ಗೀತೆಯ ಉಪದೇಶ ಮಾಡಿದ್ದೆ. ಅಲ್ಲಿಂದೀಚಿನ ಘಟನಾವಳಿಗಳ ನಡುವೆ ನನಗೆ ವಿಸ್ಮರಣೆಯುಂಟಾಗಿದೆ. ದಯವಿಟ್ಟು ಇನ್ನೊಮ್ಮೆ ನೀನು ಬೋಧಿಸಿದರೆ ಕೃತಜ್ಞನಾಗಿರುವೆ.
ಇದಕ್ಕೆ ಕೃ?ನು ನೀಡಿದ ಉತ್ತರ ಹೀಗಿದೆ: ಅಯ್ಯಾ ಅರ್ಜುನ! ನಿನಗೆ ಆಗ ನಾನು ಉಪದೇಶ ನೀಡಿದುದು ಯೋಗಸ್ಥ ಸ್ಥಿತಿಯಲ್ಲಿ – ದಿವ್ಯ ಅನುಭೂತಿಯ ನೆಲಗಟ್ಟಿನ ಮೇಲೆ. ಈಗ ಅಂತಹ ಆನುಪೂರ್ವಿ ಇಲ್ಲದುದರಿಂದ ನಾನೂ ವಿಸ್ಮರಣೆಗೆ ಒಳಗಾಗಿದ್ದೇನೆ. ಆದರೂ ಸಾಧ್ಯವಾದ?ನ್ನು ನೆನಪು ಮಾಡಿಕೊಂಡು ಹೇಳುತ್ತೇನೆ. ಹೀಗೆ ಜನಿಸಿದುದು ’ಉತ್ತರಗೀತಾ’.
ಇಡೀ ಗೀತೆಯನ್ನು ಆವರಿಸಿರುವ ತಥ್ಯವೆಂದರೆ ಉಪದೇಶ ಮಾಡುವಾಗಿನ ಕೃ?ನು ಇತಿಹಾಸವ್ಯಕ್ತಿಯಾಗಿರದೆ ಸ್ವಯಂ ಭಗವಂತನೇ ಆಗಿದ್ದುದು. ಗೀತೆಯದು ’ಸಮಾಧಿಭಾ?’. ಈ ಹಿನ್ನೆಲೆಯಲ್ಲಿಯೂ ಗ್ರಂಥದ ಹೆಸರಿನಲ್ಲಿನ ’ಭಗವತ್’ ಎಂಬ ಪೂರ್ವಪದಕ್ಕೆ ಅನ್ವರ್ಥತೆ ಇದೆ.
ಉತ್ಕರ್ಷದೃಷ್ಟಿಯಿಂದ ಪ್ರೇರಿತ
ವೇದಾಂತಸಾಹಿತ್ಯದಲ್ಲಿ ಉಳಿದೆಲ್ಲ ಗ್ರಂಥಗಳಿಗಿಂತ ಭಗವದ್ಗೀತೆಯು ಸಮುನ್ನತ ಸ್ಥಾನವನ್ನು ಪಡೆದಿರುವುದಕ್ಕೆ ಹಲವು ವಿಶೇ? ಕಾರಣಗಳಿವೆ. ಮೊತ್ತಮೊದಲನೆಯದಾಗಿ ಉಳಿದ ಹೆಚ್ಚಿನ ಗ್ರಂಥಗಳಂತೆ ಇದು ಯಾವುದೋ ಒಂದು ಪ್ರಸ್ಥಾನದ ಪ್ರವರ್ತನೆಗೆ ಹೊರಟಿರುವುದಲ್ಲ. ಇದು ಎಲ್ಲ ಪ್ರಸ್ಥಾನಗಳಿಗೆ ಮೀರಿದ ದಾರ್ಶನಿಕ ಗ್ರಂಥವಾಗಿದೆ; ಇದರ ನೆಲೆ ಸಾರ್ವತ್ರಿಕವೂ ಸಾರ್ವದೇಶಿಕವೂ ಆಗಿದೆ. ಎರಡನೆಯದಾಗಿ ಇದು ಕೇವಲ ಬೌದ್ಧಿಕಜಿಜ್ಞಾಸೆಯ ಗ್ರಂಥವಾಗಿರದೆ ಸಾಧನೆಯನ್ನು ಕೇಂದ್ರವಾಗಿ ಇರಿಸಿಕೊಂಡ ಬೋಧೆಯಾಗಿದೆ; ಹೀಗೆ ಉತ್ಕ?ಕಾಂಕ್ಷಿಗಳಾದ ಯಾರು ಬೇಕಾದರೂ ಇದನ್ನು ಆಶ್ರಯಿಸಬಹುದಾಗಿದೆ. ಇನ್ನೂ ಒಂದು ಹೆಜ್ಜೆ ಮುಂದುವರಿದು ಹೇಳಬಹುದಾದರೆ ಇದನ್ನು ವೇದಾಂತಗ್ರಂಥವೆಂದು ಕರೆಯುವುದೂ ಔಪಚಾರಿಕವ? ಆಗುತ್ತದೆ. ಮೂರನೆಯದಾಗಿ ಹೆಚ್ಚಿನ ಸಾಧನಗ್ರಂಥಗಳಂತೆ ಗೀತೆಯು ಲೋಕಾಂತರಸದ್ಗತಿಪ್ರಾಪ್ತಿ ಮೊದಲಾದವನ್ನು ಅಧಿಕರಿಸದೆ ಎಲ್ಲ ಮಾನವರೂ ಹುಟ್ಟಿನಿಂದ ಮೊದಲುಗೊಂಡು ಆಚರಿಸಬಹುದಾದ ಮತ್ತು ಆಚರಿಸಬೇಕಾದ ಜೀವಹಿತಸಾಧಕ ಮೌಲ್ಯಗಳನ್ನು ಉದ್ದಕ್ಕೂ ಬೋಧಿಸಿದೆ. ಹೀಗೆ ವೇದಾಂತವೆಂದರೆ ಪರಲೋಕಾಭಿಮುಖ ವ್ಯವಹಾರವೆಂಬ ಜನಜನಿತ ಅನಿಸಿಕೆಯನ್ನು ಗೀತೆಯು ನಿರಸ್ತಗೊಳಿಸಿದೆ. ಗತಯುಗಗಳಲ್ಲಿ ಸಾಧನಮಾರ್ಗಗಳಲ್ಲಿ ಏರ್ಪಟ್ಟಿದ್ದ ಭಿನ್ನತೆಗಳನ್ನೂ ಮೀರಿರುವುದು ಗೀತೆಯ ಬೋಧೆ. ಇಲ್ಲಿ ಇರುವುದು ಅಪ್ಪಟ ಅಧ್ಯಾತ್ಮ ಮಾತ್ರ. ಈ ವೈಶಿ?ಗಳಿಂದಾಗಿಯೆ ಭಗವದ್ಗೀತೆಗೆ ಇ? ವಿಶಾಲ ಜನಾದರಣೆ ಪ್ರಾಪ್ತವಾಗಿರುವುದು; ಮತ್ತು ಈ ಕಾರಣಗಳಿಂದಾಗಿಯೆ ಗೀತೆಯು ವಿಶ್ವಕ್ಕೇ ಭಾರತದ ಅನನ್ಯ ಕೊಡುಗೆ ಎಂಬ ಪರಿಗಣನೆ ಪ್ರಚಲಿತವಾಗಿರುವುದು.
ಗೀತೆಯು ಉಪನಿ?ತ್ತುಗಳ ಸಾರವೆಂಬ ಮಾತು ಪ್ರಸಿದ್ಧವಿದೆ. ಅಲ್ಲದೆ ಗೀತೆ ತನ್ನನ್ನೇ ’ಉಪನಿ?ತ್ತು’ ಎಂದು ಕರೆದುಕೊಂಡಿರುವುದು ಆಕಸ್ಮಿಕವಲ್ಲ. (ಕಠೋಪನಿ?ತ್ತಿನ ಹಲವಾರು ಸಾರವಂತ ವಾಕ್ಯಗಳು ಗೀತೆಯಲ್ಲಿ ಅನುವೃತ್ತವಾಗಿವೆ.)
ಎಲ್ಲ ಸಂಪ್ರದಾಯಗಳ ಆಚಾರ್ಯರುಗಳಿಂದಲೂ ವ್ಯಾಖ್ಯಾನ ಮಾಡಿಸಿಕೊಂಡಿರುವ ಹೆಗ್ಗಳಿಕೆಯೂ ಗೀತೆಯದೇ.
ಹೊಸ ಅರ್ಥವಿಸ್ತಾರ
ಗೀತೆಯಲ್ಲಿ ಕಾವ್ಯತ್ವ, ಗೇಯತ್ವ, ಶಾಸ್ತ್ರತ್ವ – ಮೂರೂ ಮುಪ್ಪುರಿಗೊಂಡಿವೆ. ಆಚಾರ್ಯತ್ರಯರ ದೃಷ್ಟಿಯಲ್ಲಿ ಗೀತೆಯು ವೇದಾಂತಶಾಸ್ತ್ರಕ್ಕೆ ಅಡಿಗಲ್ಲಾಗಿರುವುದು ಸುವಿದಿತ. ಆದರೆ ಗೀತೆಯ ಸಂದರ್ಭದಲ್ಲಿ ’ಶಾಸ್ತ್ರ’ ಎಂಬುದಕ್ಕೆ ಸಾಮಾನ್ಯ ಪರಿಭಾ?ಯದಕ್ಕಿಂತ ಹೆಚ್ಚಿನ ವಿವಕ್ಷೆ ಇದೆ. ಇಲ್ಲಿ ಶಾಸ್ತ್ರವೆಂದರೆ ಅಧ್ಯಾತ್ಮಸಾಧನಾನುಕೂಲ ಪ್ರಕ್ರಿಯೆಗಳು.
ಒಂದು ಕಾಕತಾಳೀಯವನ್ನು ಗಮನಿಸಬಹುದು. ಪರಂಪರೆಯಲ್ಲಿ ಅಧ್ಯಾತ್ಮಜಿಜ್ಞಾಸೆಗೂ ಸಮಾಜೋನ್ನತ ವರ್ಣಕ್ಕೂ ಒಂದು ಬಗೆಯ ತಳಕು ಇದೆ. ಆದರೆ ಗೀತೆಯನ್ನು ಉಪದೇಶಿಸಿದ ಕೃ?, ಕೇಳಿಸಿಕೊಂಡ ಅರ್ಜುನ – ಇಬ್ಬರೂ ಕ್ಷತ್ರಿಯರು. ಇದರಿಂದಲೂ ಗ್ರಂಥದ ಪರಮಾರ್ಥಪ್ರವಣತೆ ದ್ಯೋತವಾಗುತ್ತದೆ.
ಹಿಂದಿನ ಕಾಲಖಂಡಗಳಲ್ಲಿ ಪರಿಮಿತಾರ್ಥ ಸೂಚಕಗಳಾಗಿದ್ದ ಯೋಗ, ವೈರಾಗ್ಯ, ಸಂನ್ಯಾಸ ಮೊದಲಾದ ಮಾತುಗಳ ಮೂಲ ವಿವಕ್ಷೆಯನ್ನು ಪ್ರತಿ?ಪಿಸಿರುವುದು ಭಗವದ್ಗೀತೆ.
ಬಹುಶಃ ಯೋಗವೆಂಬ ಶಬ್ದಕ್ಕೆ ದೇಹ-ಮನಸ್ಸುಗಳ ನಿಯಂತ್ರಣ ಮೊದಲಾದ ಅರ್ಥ ಆಯಾಮಗಳೂ ಪ್ರಚಲಿತವಿದ್ದ ಕಾರಣದಿಂದಲೋ ಏನೋ, ಗೀತೆಯ ಸಾರವಂತ ಬೋಧೆಯನ್ನು ’ಬುದ್ಧಿಯೋಗ’ ಎಂದು ವಿಶ್ಲೇಷಿಸಲಾಗಿದೆ. ಇಲ್ಲಿ ಸೂಚಿತಗೊಂಡಿರುವ ಅರ್ಥ ’ಜಾಗೃತಗೊಂಡ ಪ್ರಜ್ಞೆ’ ಎಂದು.
ತ್ರಿಗುಣಪ್ರಭಾವದಿಂದ ಆಚೆಗೆ ಸಾಗಿ ಅನಹಂಕೃತಿಯಲ್ಲಿ ನೆಲೆಗೊಳ್ಳುವುದೇ ಯೋಗಸ್ಥಿತಿ ಎಂಬ ನಿರೂಪಣೆಯು ’ಅಭ್ಯಾಸಯೋಗಾಭ್ಯಾಂ ತನ್ನಿರೋಧಃ’ ಎಂದರೆ ಮನೋಬುದ್ಧಿನಿಯಂತ್ರಣಕ್ಕೆ ಸತತ ಅಭ್ಯಾಸ, ವೈರಾಗ್ಯಭಾವ, ತಲ್ಲೀನತೆಗಳೇ ಮಾರ್ಗವೆಂಬ ಪಾತಂಜಲಯೋಗಸೂತ್ರದೊಂದಿಗೆ ಮೇಲಣ ನಿರೂಪಣೆ ಹೊಂದುತ್ತದೆ.
ಐತಿಹಾಸಿಕ ಸಾಂದರ್ಭಿಕತೆ
ಗೀತೆಯ ಮುಖ್ಯ ಬೋಧೆಗಳು ಸಾರ್ವಕಾಲಿಕವಾಗಿವೆ. ಸತತ ಕ್ರಿಯಾಶೀಲರಾಗಿ ಇರಬೇಕಾದುದರ ಆವಶ್ಯಕತೆಯಂತೂ ಸ್ಪ?ವೇ ಆಗಿದೆ. ಗೀತೆಯು ಅಧ್ಯಾತ್ಮಬೋಧಕ, ವೇದಾಂತದರ್ಶನಪ್ರತಿಪಾದಕ – ಎಂಬ ಕಲ್ಪನೆ ದೀರ್ಘಕಾಲ ನಾನಾ ಕಾರಣಗಳಿಂದ ಪ್ರಚಲಿತವಾಗಿತ್ತು. ವೇದಾಂತವು ನಿತ್ಯಜೀವನಕಕ್ಷೆಯಿಂದ ಹೊರತಾದುದು ಎಂಬ ಕಲ್ಪನೆಯೂ ಒಂದ?ಮಟ್ಟಿಗೆ ಇದಕ್ಕೆ ಕಾರಣವಾಗಿತ್ತು.
ಆದರೆ ವಾಸ್ತವವಾಗಿ ವೇದಾಂತವನ್ನು ನಿತ್ಯಜೀವನದಿಂದ ಬೇರ್ಪಡಿಸಲಾಗದು. ಲೌಕಿಕಜೀವನದಿಂದ ವಿಮುಖರಾಗಬೇಕೆಂಬುದು ವೇದಾಂತದ ಬೋಧೆಯೂ ಅಲ್ಲ. ಕರ್ಮಾಚರಣೆಯಲ್ಲಿ ಯಾವ ದೃಷ್ಟಿಯನ್ನು ತಳೆದಿರಬೇಕೆಂಬುದನ್ನು ವೇದಾಂತ ತಿಳಿಸುತ್ತದೆ. ಗೀತೋಪದೇಶದ ಉದ್ಗಮವಾದದ್ದೇ ಕರ್ಮಾಚರಣೆಯ ಅನಿವಾರ್ಯತೆಯನ್ನು ತಿಳಿಸಿಕೊಡುವುದಕ್ಕಾಗಿ. ಅಧರ್ಮ-ಅನ್ಯಾಯಗಳಿಗೆ ಪ್ರತಿರೋಧ ತೋರುವುದೂ ಸನಾತನಧರ್ಮದ ಅಂಗವೇ ಆಗಿದೆ. ಆದರೆ ಈ ಸಕ್ರಿಯತೆಯು ಬುದ್ಧೋತ್ತರ ಕಾಲದಲ್ಲಿ ಮಸಕಾಗಿದ್ದ ಕಾರಣದಿಂದ ಹಿಂದೂಧರ್ಮ, ಬೌದ್ಧಮತ – ಎರಡೂ ದುರ್ಬಲಗೊಂಡಿದ್ದವು. ಹೀಗೆ ಹಲವು ಶತಮಾನಗಳ ಕಾಲ ಭಾರತೀಯ ಸಮಾಜವು ನಿಸ್ತೇಜಗೊಂಡಿತ್ತು.
ಆ ಸ್ಥಿತಿಯಿಂದ ಸಮಾಜವನ್ನು ಹೊರತರಲು ಮಧ್ಯಯುಗದಿಂದೀಚೆಗೆ ಪ್ರಯಾಸಗಳು ನಡೆದವು. ಆ ಪ್ರಯಾಸಸರಣಿಯು ಉಜ್ಜ್ವಲಗೊಂಡು ಹಿಂದೂಧರ್ಮದ ಸತ್ತ್ವವಂತಿಕೆ ಮತ್ತೊಮ್ಮೆ ಪ್ರಕಟೀಕರಣಗೊಳ್ಳಲು ಈಚಿನ ಕಾಲದಲ್ಲಿ ಸ್ವಾತಂತ್ರ್ಯೋದ್ಯಮವು ನಿಮಿತ್ತವಾಯಿತು. ಈ ಪ್ರಕ್ರಿಯೆಯ ಪ್ರಮುಖ ಸಂಚಾಲಕರಾದವರು ದಯಾನಂದರು. ವಿವೇಕಾನಂದರು, ತಿಲಕರು, ಅರವಿಂದರು.
ಭಗವದ್ಗೀತೆಯಲ್ಲಿ ಶ್ರೀಕೃ?ನು ಅರ್ಜುನನಿಗೆ ಬೋಧಿಸಿದ ’ಕುತಸ್ತ್ವಾ ಕಶ್ಮಲಮಿದಂ’, ’ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ’ ಸಂದೇಶಗಳು ದಮನಶೀಲ ವಿದೇಶೀ ಪ್ರಭುತ್ವದ ವಿರುದ್ಧ ನಡೆದಿದ್ದ ಸ್ವಾತಂತ್ರ್ಯೋದ್ಯಮಕ್ಕೆ ಗೀತೆಯ ಸಾರವಂತ ಬೋಧೆಯನ್ನು ’ಬುದ್ಧಿಯೋಗ’ ಎಂದು ಕರೆಯಲಾಗಿದೆ. ಇಲ್ಲಿ ’ಬುದ್ಧಿ’ ಎಂಬ ಶಬ್ದವು ಸೂಚಿಸುವುದು ’ಜಾಗೃತಗೊಂಡ ಪ್ರಜ್ಞೆ’ಯನ್ನು. ಎ? ಸಂಗತವಿದ್ದವೆಂಬುದನ್ನು ಹೆಚ್ಚು ವಿವರಿಸುವ ಆವಶ್ಯಕತೆ ಇಲ್ಲ.
ಭಗವದ್ಗೀತೆಯ ತಾತ್ತ್ವಿಕ ಅನನ್ಯತೆಯನ್ನೂ ವೈಶಾಲ್ಯವನ್ನೂ ಆಧ್ಯಾತ್ಮಿಕ ಸೌ?ವವನ್ನೂ ಕುರಿತು ಅಪಾರ ಸಾಹಿತ್ಯ ಲಭ್ಯವಿದೆ. ಅದನ್ನು ಹೊಸದಾಗಿ ವಿಸ್ತರಿಸಬೇಕಾದ ಆವಶ್ಯಕತೆ ಸುತರಾಂ ಇರದು. ಆದರೆ ಅದು ಕಳೆದ ಹಲವು ನೂರು ವ?ಗಳುದ್ದಕ್ಕೂ ಹೇಗೆ ತನ್ನ ಪ್ರಶಸ್ತಿಯನ್ನು ಎಲ್ಲೆಡೆ ಹೆಚ್ಚಿಸಿಕೊಳ್ಳುತ್ತ ಸಾಗಿದೆ ಎಂಬುದನ್ನು ಮೆಲುಕುಹಾಕುವುದು ಸ್ವಾರಸ್ಯಕರ.
ವ್ಯಾಖ್ಯಾನಪರಂಪರೆ
ಪಶ್ಚಿಮಭಾರತದ ಭಕ್ತಸಂತರಲ್ಲಿ ಅಗ್ರಿಮರೆನಿಸಿದ ಈಗ್ಗೆ ಏಳು ಶತಾಬ್ದಗಳ? ಹಿಂದೆ ವಿರಾಜಮಾನರಾದ ಸಂತ ಜ್ಞಾನೇಶ್ವರ ಮಹಾರಾಜರ ’ಜ್ಞಾನೇಶ್ವರೀ’ ಟೀಕೆಯು ಗೀತೆಯ ಮೇಲಣ ಎಲ್ಲಕ್ಕಿಂತ ಹೆಚ್ಚು ಕಾವ್ಯಮಯವೂ ರಸವಂತವೂ ಹೆಜ್ಜೆಹೆಜ್ಜೆಗೂ ಸ್ವೋಪಜ್ಞ ಉಪಮೆಗಳಿಂದ ಕೂಡಿದುದೂ ಆದ ವ್ಯಾಖ್ಯಾನವಾಗಿದೆ. ಈಗ ಬಳಕೆಯಲ್ಲಿಲ್ಲದ ಹಿಂದಿನ ನುಡಿಗಟ್ಟಿನಲ್ಲಿ ರಚಿತವಾದ ಮತ್ತು ಸುಲಭಗ್ರಾಹ್ಯವೆನ್ನಲಾಗದ ’ಜ್ಞಾನೇಶ್ವರಿ’ಯಂತಹ ಕೃತಿಯು ಏಳುನೂರು ವ?ಗಳ ತರುವಾಯವೂ ಜನಾದರಣೆಯನ್ನು ಉಳಿಸಿಕೊಂಡಿರುವುದು ಜನರ ದೃಷ್ಟಿಯಲ್ಲಿ ಗೀತಾಬೋಧೆಗೆ ಎ? ವಿಶೇ?ವಾದ ಸ್ಥಾನವಿದೆ ಎಂಬುದನ್ನು ಎತ್ತಿತೋರಿಸುತ್ತದೆ.
ಗೀತೆಯ ಮೊದಮೊದಲ ಅನುವಾದವನ್ನು ಮಾಡಿಸಿದವರು ಮುಸ್ಲಿಂ ದೊರೆಗಳು ಎಂಬುದರಿಂದಲೂ ಅದರ ಸಾರ್ವತ್ರಿಕತೆಯನ್ನು ಊಹಿಸಬಹುದು.
ಔರಂಗಜೇಬನ ಸೋದರ ದಾರಾಶಿಕೋ ಭಗವದ್ಗೀತೆಯನ್ನು ಓದಿ ಎ? ಪ್ರಭಾವಗೊಂಡಿದ್ದನೆಂದರೆ ಗೀತೆಯನ್ನು ಪರ್ಶಿಯನ್ ಭಾ?ಗೆ ತರ್ಜುಮೆ ಮಾಡಿಸಿ ಪ್ರತಿಗಳನ್ನು ಬಂಧುಮಿತ್ರರಿಗೆಲ್ಲ ನೀಡಿದ್ದ.
ಭಾರತೀಯ ಸಂಸ್ಕೃತಿಯ ಹಿನ್ನೆಲೆಯಿಲ್ಲದ ಹತ್ತಾರು ಮಂದಿ ಪಾಶ್ಚಾತ್ಯರೂ ಭಗವದ್ಗೀತೆಯಿಂದ ಆಕರ್ಷಿತರಾಗಿದ್ದಾರೆ – ಎಂಬುದೇ ಈ ಗ್ರಂಥದ ಸಾರ್ವತ್ರಿಕ ಸಂಮಾನ್ಯತೆಯನ್ನು ಪುರಾವೆಗೊಳಿಸುತ್ತದೆ.
ಈಚಿನ ಕಾಲದಲ್ಲಿ ಗೀತೆಯಿಂದ ಪ್ರಭಾವಗೊಂಡ ಆದ್ಯನೆಂದರೆ ಮೊದಲ ಗವರ್ನರ್-ಜನರಲ್ ವಾರನ್ ಹೇಸ್ಟಿಂಗ್ಸ್. ಆತನ ಮೇಲೆ ಗೀತೆಯು ಎ? ಅತಿಶಯ ಪ್ರಭಾವ ಬೀರಿತೆಂದರೆ ಆತ ಚಾರ್ಲ್ಸ್ ವಿಲ್ಕಿನ್ಸ್ನನ್ನು ಸಂಸ್ಕೃತ ಕಲಿಯುವಂತೆ ಪ್ರೇರಿಸಿ ಅವನಿಂದ ಗೀತೆಯನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿಸಿದ. ೧೭೮೫ರಲ್ಲಿ ಪ್ರಕಟಗೊಂಡ ಆ ಇಂಗ್ಲಿ? ಅನುವಾದಕ್ಕೆ ಹೇಸ್ಟಿಂಗ್ಸ್ನೇ ಅತ್ಯಂತ ಪ್ರಶಂಸಾಪೂರ್ಣ ಮುನ್ನುಡಿಯನ್ನು ಬರೆದ. ಆ ಮುನ್ನುಡಿಯಲ್ಲಿ ಆತ ಹೇಳಿದ್ದ ಮಾತು ಮಾರ್ಮಿಕವಾಗಿದೆ:
“The work (Gita) will survive when the British dominion in India shall have long ceased to exist, and when the sources it once yielded of wealth and power are lost to remembrance.”
ತನ್ನ ಮಿತ್ರವಲಯದವರಿಗೆ ಬರೆದ ಪತ್ರಗಳಲ್ಲಿಯೂ ಹೇಸ್ಟಿಂಗ್ಸ್ ಗೀತೆಯ ಬಗೆಗೆ ಉತ್ಕಂಠೆಯಿಂದ ಬರೆದಿದ್ದ. The Bhagavdgita is the deepest and sublimest production that the world possesses” ಎಂದಿದ್ದ, ಜರ್ಮನ್ ವಿದ್ವಾಂಸ ಫಾನ್ ಹಂಬೋಲ್ಟ್.
ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ್ರವಿಸ್ತರೈಃ (’ಕರ್ತವ್ಯನಿರ್ದೇಶನಕ್ಕೆ ಗೀತೆಯೊಂದೇ ಪರ್ಯಾಪ್ತವಾಗಿರುವಾಗ ಬೇರೆ ಶಾಸ್ತ್ರಗ್ರಂಥಗಳ ಅನಿವಾರ್ಯತೆ ಎಲ್ಲಿದೆ?’) – ಈ ಜಾಡಿನ ಗೀತಾಮಾಹಾತ್ಮ್ಯಸೂಚಕ ಪ್ರಶಂಸೆಗಳು ಹೇರಳವಾಗಿವೆ.
ಗೀತೆಯ ಪ್ರಭಾವವಲಯ
ರವೀಂದ್ರನಾಥ ಠಾಕೂರರು ಅಮೆರಿಕದ ಒಂದು ದೊಡ್ಡ ಗ್ರಂಥಾಲಯವನ್ನು ನೋಡಲು ಹೋಗಿದ್ದ ಸಂದರ್ಭದಲ್ಲಿ ಅಲ್ಲಿಯ ಅತ್ಯಮೂಲ್ಯ ಪುಸ್ತಕಗಳಾವುವೆಂದು ನೋಡುವ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಅಲ್ಲಿಯ ಅಧಿಕಾರಿಗಳು ಬಟ್ಟೆಯೊಂದರಲ್ಲಿ ಸುತ್ತಿ ಅತ್ಯಂತ ಜಾಗರೂಕತೆಯಿಂದ ಸುರಕ್ಷಿತಗೊಳಿಸಿದ್ದ ಹಲವು ಗ್ರಂಥಗಳನ್ನು ತಂದು ತೋರಿಸಿದರು. ಅವುಗಳ ಪೈಕಿ ಠಾಕೂರರ ಗಮನ ಸೆಳೆದದ್ದು ಭಗವದ್ಗೀತೆಯ ಒಂದು ವಿರಳ ಮುದ್ರಣ.
ವಿಶೇ? ಸನ್ನಿವೇಶಗಳಿಂದ ಹೇಗೋ ಗೀತೆಯ ಸಂಪರ್ಕಕ್ಕೆ ಬಂದ ಅನೇಕ ಪಾಶ್ಚಾತ್ಯ ಚಿಂತಕರೂ ಕವಿಗಳೂ ಗೀತೆಯ ದಟ್ಟ ಪ್ರಭಾವಕ್ಕೆ ಒಳಗಾದರೆಂಬುದನ್ನು ನೆನೆಯುವಾಗ ಗೀತೆಯ ಸಾರ್ವತ್ರಿಕತೆ ಮನದಟ್ಟಾಗುತ್ತದೆ. ಥಾಮಸ್ ಕಾರ್ಲೈಲ್, ಮ್ಯಾತ್ಯೂ ಆರ್ನಾಲ್ಡ್, ವಿಲಿಯಂ ವರ್ಡ್ಸ್ವರ್ತ್, ರಾಲ್ಫ್ ವಾಲ್ಡೋ ಎಮರ್ಸನ್, ಹೆನ್ರಿ ಡೇವಿಡ್ ಥೋರೋ, ವಾಲ್ಟ್ ವ್ಹಿಟ್ಮನ್, ಆಲ್ಡಸ್ ಹಕ್ಸ್ಲೀ …. ಒಬ್ಬರೇ ಇಬ್ಬರೇ! ಆಧುನಿಕ ಇಂಗ್ಲಿ? ಕವಿಗಳಲ್ಲಿ ಮೂರ್ಧನ್ಯನೆನಿಸಿದ ಟಿ. ಎಸ್. ಎಲಿಯಟ್ ಗೀತೆ- ಉಪನಿ?ತ್ತುಗಳಿಂದ ಗಾಢವಾಗಿ ಪ್ರಭಾವಿತನಾಗಿದ್ದುದು ಆತನ ಪ್ರಸಿದ್ಧ ’ಫೋರ್ ಕ್ವಾರ್ಟೆಟ್ಸ್’ ಕಾವ್ಯದಲ್ಲಿ ಸ್ಫುಟಗೊಂಡಿದೆ.
ಭಾರತದ ಒಬ್ಬ ಭೌತಶಾಸ್ತ್ರ ಪದವೀಧರ ಡಾ|| ಬಿ. ಎಂ. ಗುಪ್ತಾ ಎಂಬವರು ಪ್ರೌಢ ಸಂಶೋಧನೆಗಾಗಿ ೧೯೪೮-೪೯ರಲ್ಲಿ ಅಮೆರಿಕಕ್ಕೆ ಹೋಗಿದ್ದಾಗ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಆಲ್ಬರ್ಟ್ ಐನ್ಸ್ಟೈನರನ್ನು ಭೇಟಿ ಮಾಡಿದರು. ಇವರು ಭಾರತದಿಂದ ಬಂದವರೆಂಬುದು ತಿಳಿದೊಡನೆ ಐನ್ಸ್ಟೈನ್ ಭಾರತದ ಅಧ್ಯಾತ್ಮಪರಂಪರೆಯ ಬಗೆಗೂ ಭಗವದ್ಗೀತೆಯ ಬಗೆಗೂ ಉತ್ಸಾಹದಿಂದ ಮಾತನಾಡತೊಡಗಿದರು. ಆದರೆ ಪಾಪ ಗುಪ್ತಾರವರಿಗೆ ಸಂಸ್ಕೃತದ ಪ್ರಾಥಮಿಕ ಜ್ಞಾನವಾಗಲಿ ಗೀತೆಯ ಪರಿಚಯವಾಗಲಿ ಇರಲಿಲ್ಲವೆಂಬುದನ್ನು ಗಮನಿಸಿ ಐನ್ಸ್ಟೈನ್ ಖಿನ್ನರಾದರು, ಆಶ್ಚರ್ಯಗೊಂಡರು. ಗುಪ್ತಾರವರಿಗೆ ಗೀತೆ ಮತ್ತಿತರ ಸಂಸ್ಕೃತ ಗ್ರಂಥಗಳನ್ನೊಳಗೊಂಡ ತಮ್ಮ ಖಾಸಗಿ ಗ್ರಂಥಸಂಗ್ರಹವನ್ನು ತೋರಿಸಿ ಹೇಳಿದರು: “I have read many Sanskrit works including the Gita. I have made the Gita the main source of my inspiration and guidance.”
ಕ್ರೈಸ್ತಮತದ ಹಿನ್ನೆಲೆಯ ಪ್ರವರ್ತಕರಿಂದ ಈಗ್ಗೆ ನೂರೈವತ್ತು ವ? ಹಿಂದೆ ಸ್ಥಾಪನೆಗೊಂಡ ಅಮೆರಿಕದ ಸೆಂಟೋ ಹಾಲ್ ವಿಶ್ವವಿದ್ಯಾಲಯ ತನ್ನ ಶಿಕ್ಷಾರ್ಥಿಗಳಿಗೆ ಭಗವದ್ಗೀತೆಯ ಅಧ್ಯಯನವನ್ನು ವಿಧಿಸಿದೆ. ನ್ಯೂ ಜೆರ್ಸಿ ಪ್ರಾಂತದಲ್ಲಿ ಇರುವ ಆ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವವರಲ್ಲಿ ಅಧಿಕ ಮಂದಿ ಯಹೂದ್ಯರು, ಕ್ರೈಸ್ತರು, ಮುಸ್ಲಿಮರು, ಬೌದ್ಧರು. ಅಲ್ಲಿಯ ಶಿಕ್ಷಾರ್ಥಿಗಳ ಬೇಡಿಕೆಯನ್ನು ಪೂರೈಸಲು ಅಲ್ಲಿಯ ಪ್ರೊಫೆಸರ್ ಸ್ಟೀಫನ್ ಮಿಚೆಲ್ರವರು ಭಗವದ್ಗೀತೆಯ ನೂತನ ಅನುವಾದವೊಂದನ್ನು ಸಿದ್ಧಪಡಿಸಿ ಪ್ರಕಟಿಸಿದ್ದಾರೆ.
ತಿಲಕರ ’ಗೀತಾರಹಸ್ಯ’
ತಿಲಕರ ’ಗೀತಾರಹಸ್ಯ’ ಅಥವಾ ಕರ್ಮಯೋಗವ್ಯಾಖ್ಯಾನ ರಚನೆಯಾದದ್ದು ಈಗ್ಗೆ ನೂರಹದಿನೈದು ವ?ಕ್ಕೂ ಹಿಂದೆ (೧೯೧೦- ೧೧). ಹೀಗೆ ಹತ್ತಿರಹತ್ತಿರ ಐದು ಪೀಳಿಗೆಗಳೇ ಕಳೆದಿರುವುದರಿಂದ ಈಗಿನ ಯುವಜನರಿಗೆ ತಿಲಕರ ಗ್ರಂಥದ ರಚನೆಯ ಸಂದರ್ಭವನ್ನು ತಿಳಿಸಿಕೊಡಬೇಕಾದ ಆವಶ್ಯಕತೆ ಇದೆ. ಭಗವದ್ಗೀತೆಯ ಉದ್ಗಮವಾದದ್ದು ಯುದ್ಧಭೂಮಿಯಲ್ಲಿ. ಮಹಾಭಾರತದಲ್ಲಿ ತಾಮಸೀ ಶಕ್ತಿಗಳ ವಿರುದ್ಧ ಸಾತ್ತ್ವಿಕ ಶಕ್ತಿಗಳು ಸಮರ ಸಾರಿದಂತೆಯೇ ದಮನಕಾರಿ ಬ್ರಿಟಿ? ಪ್ರಭುತ್ವದ ವಿರುದ್ಧ ತಿಲಕರು ಸಮರೋದ್ಘೋ? ಮಾಡಿದರು. ಬ್ರಿಟಿ? ಸರ್ಕಾರವು ತಿಲಕರ ಮೇಲೆ ರಾಜದ್ರೋಹದ ಆರೋಪ ಹೊರಿಸಿ ದೂರದ ಬ್ರಹ್ಮದೇಶದ (ಈಗಿನ ಮ್ಯಾನ್ಮಾರ್) ಮಾಂಡಲೇ ಕಾರಾಗೃಹದಲ್ಲಿ ಬಂದನದಲ್ಲಿರಿಸಿತು. ಆರು ವ?ಗಳ? ದೀರ್ಘಕಾಲದ ಆ ಬಂಧನಾವಧಿಯ ಏಕಾಂತವಾಸದಿಂದಾದ ಪರೋಕ್ಷ ಲಾಭವೆಂದರೆ ’ಗೀತಾರಹಸ್ಯ’ದಂತಹ ಉದ್ಗ್ರಂಥದ ರಚನೆ.
ಕಾರಾಗೃಹವಾಸಕ್ಕೆ (೧೯೦೮) ಹಿಂದೆಯೇ ತಿಲಕರು ಭಗವದ್ಗೀತೆಯ ಗಾಢ ಅಧ್ಯಯನವನ್ನು ಉಪಕ್ರಮಿಸಿದ್ದುದು ಹೌದು. ಸುಮಾರು ಆರುನೂರು ಪುಟಗಳ? ದೀರ್ಘವಾದ ತಿಲಕರ ವ್ಯಾಖ್ಯಾನದ ಬರವಣಿಗೆ ಸಾಗಿದ್ದಂತೆಯೇ ಭಾರತವಾಸಿಗಳಲ್ಲಿ ಅದರ ಬಗೆಗೆ ಹೆಚ್ಚಿನ ಆಸಕ್ತಿ ಉದ್ಬುದ್ಧವಾಗಿದ್ದಿತು.
೧೯೯೯ರ ಕಾರ್ಗಿಲ್ ಸಮರದಲ್ಲಿ ಪ್ರಾಣಾರ್ಪಣೆ ಮಾಡಿ ವೀರಸ್ವರ್ಗ ಸೇರಿದ ರಾಜಸ್ಥಾನ ಮೂಲದ ೩೧ ವ?ದ ಮೇಜರ್ ಪದ್ಮಪಾಣಿ ಆಚಾರ್ಯ ಮರಣಕ್ಕೆ ನಾಲ್ಕೈದು ದಿನಗಳ ಹಿಂದೆಯ? ಬರೆದ ಪತ್ರದಲ್ಲಿ ಗೀತೆಯ ’ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ’ ವಾಕ್ಯವನ್ನು ಸ್ಮರಿಸಿದ್ದ.
ಗ್ರಂಥದ ರಚನೆಯಲ್ಲಿ ತಿಲಕರು ೪೦೦ಕ್ಕೂ ಹೆಚ್ಚು ಭಾರತೀಯ ಹಾಗೂ ವಿದೇಶೀಯ ವಿದ್ವಾಂಸರ ಗ್ರಂಥಗಳನ್ನು ಅಧ್ಯಯನ ಮಾಡಿ ಆಕರಗಳಾಗಿ ಬಳಸಿದ್ದಾರೆ.
’ಸಮರ್ಪಯೇ ಗ್ರಂಥಮಿಮಂ ಶ್ರೀಶಾಯ ಜನತಾತ್ಮನೇ’ ಎಂದು ಅಂಕಿತ ಮಾಡಿದ್ದ ತಿಲಕರ ಮೂಲ ಮರಾಠಿ ಗ್ರಂಥ ಪ್ರಕಟವಾದ (೧೯೧೫) ಅಲ್ಪಕಾಲದಲ್ಲಿ (೧೯೧೭) ಮಾಧವರಾವ್ ಸಪ್ರೇ ಅವರು ಮಾಡಿದ ಹಿಂದೀ ತರ್ಜುಮೆಯೂ ಪ್ರಕಟಗೊಂಡದ್ದು ಗ್ರಂಥದ ವ್ಯಾಪಕ ಪ್ರಸಾರಕ್ಕೆ ಕಾರಣವಾಯಿತು.
ತಿಲಕರ ಗ್ರಂಥದ ಸ್ವೋಪಜ್ಞತೆ ಹಾಗೂ ಸಂಗತತೆಯ ಕಾರಣದಿಂದಾಗಿ ಅದು ವಿದ್ವಾಂಸರಲ್ಲದೆ ಜನಸಾಮಾನ್ಯರಿಗೂ ಅಧ್ಯಯನಾರ್ಹವೆನಿಸಿತು.
ಪ್ರಸಾರವೈಶಾಲ್ಯ
ಕಳೆದ ತೊಂಬತ್ತು ವ?ಗಳಿಂದ ಧಾರ್ಮಿಕಸಾಹಿತ್ಯಪ್ರಸರಣದಲ್ಲಿ ವಿಶ್ವದಾಖಲೆಯನ್ನೇ ನಿರ್ಮಿಸಿರುವ ಗೋರಖಪುರದ ’ಗೀತಾ ಪ್ರೆಸ್’ ಎಂಬ ಹೆಸರನ್ನೇ ತಳೆದ ಪ್ರಕಾಶನಸಂಸ್ಥೆ ಇದುವರೆಗೆ ಎಲ್ಲ ಭಾರತೀಯ ಭಾ?ಗಳಲ್ಲಿ ಒಟ್ಟು ಹತ್ತಿರ ಹತ್ತಿರ ೬೦ ಕೋಟಿ ಗ್ರಂಥಗಳನ್ನು ವಿತರಿಸಿದೆ. ಅವುಗಳಲ್ಲಿ ಭಗವದ್ಗೀತೆಯ ವಿವಿಧ ಆವೃತ್ತಿಗಳೇ ಸುಮಾರು ೧೨ ಕೋಟಿಯ? ಆಗಿವೆ.
ಉರ್ದು ಭಾ?ಯಲ್ಲಿಯೂ ಭಗವದ್ಗೀತೆ ಲಭ್ಯವಿದೆ.
೧೯೪೫ರ ಮೇ ೫ರಂದು ಮೆಕ್ಸಿಕೋ ಸಮೀಪದ ಮರುಭೂಮಿಯಲ್ಲಿ ಅಣುಬಾಂಬಿನ ಪ್ರಾಯೋಗಿಕ ಸ್ಫೋಟವನ್ನು ವೀಕ್ಷಿಸಿದ ಅಣ್ವಸ್ತ್ರ ಆವಿ?ರ್ತರಲ್ಲಿ ಪ್ರಮುಖನಾಗಿದ್ದ ವಿಜ್ಞಾನಿ ಓಪನ್ಹೈಮರ್ ಅನಂತರ ಹಲವು ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ಮಾಡುವಾಗ ಪ್ರಶ್ನೆಗಳಿಗೆ ಉತ್ತರಿಸುತ್ತ ಆ ಸ್ಫೋಟವು ತನಗೆ ಭಗವದ್ಗೀತೆಯ ವಿಶ್ವರೂಪದರ್ಶನದ ವರ್ಣನೆಯನ್ನು ನೆನಪಿಸಿತೆಂದು ಹೇಳಿದನೆಂದು ವರದಿಯಾಗಿತ್ತು.
ಇತ್ತೀಚಿನ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹೇಳಿದ್ದು ಬಾಹ್ಯಾಂತರಿಕ್ಷ ಪಯಣದಲ್ಲಿ ನಾನು ಸಂಗಡ ಒಯ್ದಿದ್ದ ಭಗವದ್ಗೀತೆ ಸದಾ ನನಗೆ ಬಲವನ್ನೂ ಉತ್ಸಾಹವನ್ನೂ ನೀಡುತ್ತಿತ್ತು – ಎಂದು.
ಹೀಗೆ ಸಾಹಿತ್ಯವಲಯದಿಂದ ಆಚೆಗೂ ಭಗವದ್ಗೀತೆಯ ಪ್ರಭಾವವಲಯ ಹರಡಿದೆ.
೧೯೯೦ರ ದಶಕದಲ್ಲಿ ಟರ್ಕಿ ದೇಶದ ಪ್ರಧಾನಮಂತ್ರಿಯಾಗಿದ್ದ ಬುಲೆಂಟ್ ಎಸೆವಿಟ್ ವಿ?ಮ ಸಂದರ್ಭಗಳಲ್ಲಿ ಗೀತೆಯಿಂದ ಸಾಂತ್ವನ ಪಡೆಯುತ್ತಿದ್ದುದಲ್ಲದೆ ಗೀತೆಯ ಅನೇಕ ಶ್ಲೋಕಗಳನ್ನು ತನ್ನ ಬಳಕೆಗಾಗಿ ಟರ್ಕಿಶ್ ಭಾ?ಗೆ ತಾನೇ ಅನುವಾದ ಮಾಡಿ ಇರಿಸಿಕೊಂಡಿದ್ದ.
ಭಗವದ್ಗೀತೆಯ ಬೋಧನೆ ಕಾಲಜಯಿಯಾದುದೆಂಬುದನ್ನು ಇತ್ತೀಚೆಗೆ ನಿದರ್ಶನಪಡಿಸಿದ ಘಟನೆ: ೧೯೯೯ರ ಕಾರ್ಗಿಲ್ ಸಮರದಲ್ಲಿ ಪ್ರಾಣಾರ್ಪಣೆ ಮಾಡಿ ವೀರಸ್ವರ್ಗ ಸೇರಿದ ರಾಜಸ್ಥಾನ ಮೂಲದ ೩೧ ವ?ದ ಮೇಜರ್ ಪದ್ಮಪಾಣಿ ಆಚಾರ್ಯ ಮರಣಕ್ಕೆ ನಾಲ್ಕೈದು ದಿನಗಳ ಹಿಂದೆಯ? ತಂದೆಗೆ ಬರೆದಿದ್ದ ಪತ್ರದಲ್ಲಿ ಗೀತೆಯ ’ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ’ ಶ್ಲೋಕವನ್ನು ಉಲ್ಲೇಖಮಾಡಿದ್ದ.
ಕಳೆದ ವ? (೨೦೧೭) ನಡೆದ ಅಂತರರಾಷ್ಟ್ರೀಯ ಗೀತಾ ಮಹೋತ್ಸವದಲ್ಲಿ ಅಮೆರಿಕ, ಕೆನಡಾ, ಇಂಗ್ಲೆಂಡ್, ಇಂಡೋನೇಷಿಯಾ, ಜಪಾನ್ ಮೊದಲಾದ ನಾಲ್ಕಾರು ದೇಶಗಳ ಪ್ರತಿನಿಧಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಕೆನಡಾದ ಒಂದು ತಂಡವು ಗೀತೆಯನ್ನು ಗೇಯನಾಟಕರೂಪಕ್ಕೂ ಅಳವಡಿಸಿ ಪ್ರದರ್ಶಿಸಿತು.
ಈಗ್ಗೆ ಹತ್ತು ವ? ಹಿಂದೆ ವಾರಾಣಸಿಯ ಒಂದು ದೇವಸ್ಥಾನಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ತೀರ್ಪನ್ನು ಘೋಷಿಸುವಾಗ ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶ್ರೀವಾಸ್ತವ ಎಂಬವರು ಸಾಂದರ್ಭಿಕವಾಗಿ ನಮ್ಮ ದೇಶಕ್ಕೆ ರಾ?ಧ್ವಜ ಮೊದಲಾದ ಲಾಂಛನಗಳು ಇರುವಂತೆ ಭಗವದ್ಗೀತೆಯನ್ನು ರಾಷ್ಟ್ರೀಯ ಧರ್ಮಶಾಸ್ತ್ರಗ್ರಂಥವೆಂದು ಪರಿಗಣಿಸುವುದು ಯುಕ್ತವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸರ್ಕಾರ ಹಾಗೆ ಗಣಿಸಲಿ ಅಥವಾ ಬಿಡಲಿ, ಇಡೀ ದೇಶದ ಜನರ ಅಂತರಂಗದಲ್ಲಂತೂ ಭಗವದ್ಗೀತೆಗೆ ಅತ್ಯುನ್ನತ ಸ್ಥಾನ ಹಲವು ಸಾವಿರ ವ?ಗಳ ಹಿಂದೆಯೇ ಲಭಿಸಿರುವುದಾಗಿದೆ.