ಬಾಹ್ಯಾಕಾಶನೌಕೆಯನ್ನು ಕಳಿಸಿತ್ತು. ಅಮೆರಿಕ 1969ರಲ್ಲೇ ಮಾನವನನ್ನೂ ಅಲ್ಲಿ ಇಳಿಸಿತ್ತು. ಹಾಗಿದ್ದೂ ಭಾರತ ಈಗ ಯಾಕೆ ಮತ್ತೆ ಚಂದ್ರನಲ್ಲಿಗೆ ಅಂತರಿಕ್ಷನೌಕೆಯನ್ನು ಕಳುಹಿಸಲು ಮುಂದಾಗಿದೆ ಎಂಬ ಪ್ರಶ್ನೆ ಏಳಬಹುದು. ಇದಕ್ಕೆ ಇಸ್ರೋದ ವಿಜ್ಞಾನಿಗಳು ನೀಡುವ ಉತ್ತರ: “ಹಿಂದಿನ ಬಾರಿ ಚಂದ್ರನಲ್ಲಿಗೆ ಗಗನನೌಕೆ ಹೋಗಿದ್ದುದು 1970ರಲ್ಲಿ. ಅಂದಿಗೂ ಇಂದಿಗೂ ಖಗೋಲವಿಜ್ಞಾನದ ಮುನ್ನಡೆಯಾಗಿದೆ. ಈಗ ಅಧ್ಯಯನ ಮಾಡಬಯಸುವವರಿಗೆ ಅಂದಿನ ಮಾಹಿತಿಗಳೂ ಇಂದು ಲಭ್ಯವಿಲ್ಲ. ಚಂದ್ರನಲ್ಲಿ ನೀರಿನ ಅಂಶವಿದೆ ಎಂದು ಮೊದಲಬಾರಿಗೆ ಪತ್ತೆಹಚ್ಚಿದ್ದು ‘ಚಂದ್ರಯಾನ-1’. ಅಲ್ಲದೆ, ಚಂದ್ರಯಾನ-2 ಯೋಜನೆಯಿಂದ ಹೊಸಕಾಲದ ಆವಿಷ್ಕಾರಗಳು, ಸಂಶೋಧನೆಗೂ ಸ್ಫೂರ್ತಿ ಸಿಗಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದಲ್ಲಿ ಹೆಚ್ಚಿನ ವಾಣಿಜ್ಯ ಅವಕಾಶಗಳ ಬೆಳವಣಿಗೆ ಆಗಲಿದೆ. ಬಾಹ್ಯಾಕಾಶದ ಕುರಿತು ನಮ್ಮ ಜ್ಞಾನವೂ ವೃದ್ಧಿಸಲಿದೆ.”
ಇದಕ್ಕಾಗಿ ಚಂದ್ರಯಾನ-2ರಲ್ಲಿ ಕೆಲವು ಸೂಕ್ಷ್ಮ ಸಂಶೋಧಕ ಉಪಕರಣಗಳನ್ನು ರವಾನಿಸಲಾಗಿದೆ. ಒಂದು – ಚಂದ್ರಯಾನ-1ರಲ್ಲಿಯೂ ಕಳಿಸಿದಂಥ, ಎರಡು ಕ್ಯಾಮೆರಾಗಳನ್ನು ಹೊಂದಿರುವ, ಚಂದ್ರನ ಮೇಲ್ಮೈಯ 3 ಆಯಾಮದ ಚಿತ್ರಗಳನ್ನು ತೆಗೆಯಬಲ್ಲ ‘ಟೆರ್ರೇನ್ ಮ್ಯಾಪಿಂಗ್ ಕ್ಯಾಮೆರಾ’. ಎರಡು – ಚಂದ್ರನ ಮೇಲ್ಮೈಯಲ್ಲಿರುವ ಖನಿಜಗಳನ್ನು ಪತ್ತೆಹಚ್ಚುವ ಸಾಧನ ‘ಕಾಲಿಮೇಟೆಡ್ ಲಾರ್ಜ್ ಅರೇ ಸಾಫ್ಟ್ ಎಕ್ಸ್ರೇ ಸ್ಪೆಕ್ಟ್ರೋಮೀಟರ್’. ಮೂರು – ಸೌರ ಎಕ್ಸ್ರೇಗಳನ್ನು ಪತ್ತೆಮಾಡಬಲ್ಲ ಸಾಧನ ‘ಸೋಲಾರ್ ಎಕ್ಸ್ರೇ ಮಾನಿಟರ್’. ನಾಲ್ಕು – ಚಾಂದ್ರವಾತಾವರಣದ ಸ್ವರೂಪವನ್ನು ಗ್ರಹಿಸಬಲ್ಲ ಸಾಧನ ‘ಚಂದ್ರಾಸ್ ಅಟ್ಮೋಸ್ಫಿಯರ್ ಕಾಂಪೋಶÀನ್ ಎಕ್ಸ್ಪ್ಲೋರರ್’. ಐದು – ರೇಡಿಯೋ-ಅಲೆಗಳ ಮೂಲಕ ಚಂದ್ರನ ಮೇಲ್ಮೈಯನ್ನು ಗ್ರಹಿಸಬಲ್ಲ ಉಪಕರಣ ‘ಸಿಂಥೆಟಿಕ್ ಅಪೆರ್ಚರ್ ರೇಡಾರ್’. ಆರು – ಚಂದ್ರನ ಮೇಲ್ಮೈಯಲ್ಲಿರುವ ನೀರಿನ ಅಂಶಗಳನ್ನು ಗ್ರಹಿಸಬಲ್ಲ ಸಾಧನ ‘ಇಮೇಜಿಂಗ್ ಇನ್ಫ್ರಾರೆಡ್ ಸ್ಪೆಕ್ಟ್ರೋಮೀಟರ್’. ಏಳು – ಲ್ಯಾಂಡರ್ ಮತ್ತು ರೋವರ್ ನೆಲಕ್ಕಿಳಿಯುವ ಪ್ರದೇಶವನ್ನು ಅತ್ಯಂತ ಸೂಕ್ಷ್ಮವಾಗಿ ಬಿಂಬಗಳ ಮೂಲಕ ಗ್ರಹಿಸಬಲ್ಲ ಉಪಕರಣ ‘ಆರ್ಬಿಟರ್ ಹೈ ರೆಸೊಲ್ಯೂಶನ್ ಕ್ಯಾಮೆರಾ’. ಎಂಟು – ಚಂದ್ರನಲ್ಲಿ ಚಾಂದ್ರಕಂಪನ ಆಗುತ್ತದೆಯೇ ಎಂದು ಪರೀಕ್ಷಿಸುವ ಸಾಧನ ‘ಲೂನಾರ್ ಸೀಸ್ಮಿಕ್ ಆಕ್ಟಿವಿಟಿ ಸಾಧನ – ಸೀಸ್ಮೋಮೀಟರ್.
978 ಕೋಟಿ ರೂ. ವೆಚ್ಚ
ಜಿಎಸ್ಎಲ್ವಿ ಮಾರ್ಕ್-3 ರಾಕೆಟ್ ಮತ್ತು ಚಂದ್ರಯಾನ-2 ಸ್ಯಾಟಲೈಟನ್ನು ನಿರ್ಮಿಸಲು ಒಟ್ಟಾರೆಯಾಗಿ 978 ಕೋಟಿ ರೂ. ಖರ್ಚಾಗಲಿದೆ. ಇದರಲ್ಲಿ ಉಪಗ್ರಹಕ್ಕೆ ತಗಲುವ ಖರ್ಚು 603 ಕೋಟಿ ರೂ. ಆದರೆ, ರಾಕೆಟ್ ನಿರ್ಮಾಣಕ್ಕೆ ಆಗುವ ಖರ್ಚು 375 ಕೋಟಿ ರೂಪಾಯಿಗಳಾಗಿವೆ.
ಬಾಹ್ಯಾಕಾಶ: ಬದಲಾಗುತ್ತಿರುವ ರಾಷ್ಟ್ರೀಯ ಚಿಂತನೆಗಳು
ಚಂದ್ರಯಾನ-2 ಯೋಜನೆಗೆ ಇಸ್ರೋ ಸಜ್ಜಾಗುತ್ತಿರುವುದರ ಹಿನ್ನೆಲೆಯಲ್ಲಿ ನಾವು ಗಮನಿಸಬಹುದಾದ ಕೆಲವು ಗಮನಾರ್ಹ ವಿಷಯಗಳು ಹೀಗಿವೆ. ಭಾರತೀಯ ಬಾಹ್ಯಾಕಾಶ ಯೋಜನೆಗಳ ಪಿತಾಮಹ ಎನಿಸಿಕೊಂಡಿರುವ ಡಾ. ವಿಕ್ರಂ ಸಾರಾಭಾಯಿ ಅವರು 1968ರ ಫೆಬ್ರುವರಿ 2ರಂದು, ‘ತುಂಬಾ ರಾಕೆಟ್ ಉಡಾವಣ ಕೇಂದ್ರ’ವನ್ನು ಸಾಂಕೇತಿಕವಾಗಿ ವಿಶ್ವಸಂಸ್ಥೆಗೆ ಅರ್ಪಿಸಿದಾಗ, ಭಾರತದಂತಹ ದೇಶವು ಯಾವ ಕಾರಣಕ್ಕೆ ಬಾಹ್ಯಾಕಾಶ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂದು ವಿವರಿಸುತ್ತಾ ಹೇಳಿದ್ದುದು ಹೀಗೆ:
“ಇನ್ನೂ ಅಭಿವೃದ್ಧಿಪಥದಲ್ಲಿರುವ ದೇಶಗಳು ಬಾಹ್ಯಾಕಾಶ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸರಿಯೇ? – ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಇದರ ಬಗ್ಗೆ ನಮಗೆ ಯಾವ ಬಗೆಯ ಸಂದಿಗ್ಧತೆಯೂ ಇಲ್ಲ. ಆರ್ಥಿಕ ಬಲವುಳ್ಳ ದೇಶಗಳೊಡನೆ ಚಂದ್ರನ ಅಥವಾ ಇತರ ಗ್ರಹಗಳ ಅನ್ವೇಷಣೆಯಲ್ಲಾಗಲಿ, ಗಗನಯಾನಿಗಳನ್ನು ಕಳಿಸುವ ವಿಷಯದಲ್ಲಾಗಲಿ, ನಾವು ಸ್ಪರ್ಧಿಸುವ ಹುಚ್ಚು ಯೋಚನೆಯನ್ನು ಹೊಂದಿಲ್ಲ. ಆದರೆ ನಮ್ಮ ದೃಢ ನಿಶ್ಚಯವಂತೂ ಹೀಗಿದೆ – ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಭಾರತವು ಒಂದು ಅರ್ಥಪೂರ್ಣವಾದ ಪಾತ್ರ ವಹಿಸಬೇಕಾದರೆ ನಾವು ನವೀನ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಮತ್ತು ನಮ್ಮ ಅಭ್ಯುದಯಕ್ಕಾಗಿ, ಯಾವ ರಾಷ್ಟ್ರಕ್ಕಿಂತಲೂ ಹಿಂದಕ್ಕೆ ಸರಿಯಬಾರದು. ಇಂದು ನಾವು ಕೇಳಬೇಕಾದ ಮೂಲ ಪ್ರಶ್ನೆ – ನಮಗೆ ಬಾಹ್ಯಾಕಾಶ ತಂತ್ರಜ್ಞಾನ ಬೇಕೇ ಎಂಬುದಲ್ಲ; ಅದು – ನಾವು ಬಾಹ್ಯಾಕಾಶತಂತ್ರಜ್ಞಾನವಿಲ್ಲದೆ ಇರಬಹುದೇ ಎಂದು.”
50 ವರ್ಷಗಳ ಹಿಂದೆ ಪ್ರತಿಪಾದಿಸಿದ ಮೇಲಿನ ಧ್ಯೇಯಗಳು ಇಂದು ಅನೇಕ ತಿರುವುಗಳನ್ನು ಪಡೆದಿವೆ. ಇಸ್ರೋ ಸಂಸ್ಥೆ ಈಗಾಗಲೇ ಒಮ್ಮೆ ಚಂದ್ರನ ಅನ್ವೇಷಣೆ ಮಾಡಿದೆ. ಎರಡನೆಯ ಯೋಜನೆಗೆ ಈಗ ಸಜ್ಜಾಗುತ್ತಿದೆ; ಮಂಗಳಗ್ರಹದೆಡೆಗೆ ಇಸ್ರೋ ಸಂಶೋಧನೆಯನ್ನು ಆಗಲೇ ವಿಸ್ತರಿಸಿದೆ. ಮುಂದೆ, ಸೂರ್ಯನ ಅನ್ವೇಷಣೆ ಮಾಡುವ ಯೋಜನೆಯನ್ನೂ ಹೊಂದಿದೆ. ಬಹು ಮುಖ್ಯವಾಗಿ, ಬರುವ ವರ್ಷಗಳಲ್ಲಿ ಭಾರತದ ಗಗನಯಾನಿಗಳೂ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ. ಇವೆಲ್ಲವೂ ಉಪಯೋಗಕರ ತಂತ್ರಜ್ಞಾನ ಅಳವಡಿಕೆಯೋ ಅಥವಾ ವೈಜ್ಞಾನಿಕ ತಾಂತ್ರಿಕ ಪೈಪೋಟಿಯೋ?
ಕಳೆದ ಐದು ದಶಕಗಳಲ್ಲಿ ರಾಷ್ಟ್ರೀಯ ಧ್ಯೇಯಗಳು ಹೊಸ ರೂಪಗಳನ್ನು ಪಡೆಯುತ್ತಾ ಇವೆ. ಇದಕ್ಕೆ ಕಾರಣ ನಾನಾ ಬಗೆಯ ವಿಶ್ವ ಮಟ್ಟದ ರಾಜಕೀಯ, ವೈಜ್ಞಾನಿಕ, ತಾಂತ್ರಿಕ, ಆರ್ಥಿಕ ಮತ್ತು ರಕ್ಷಣಾ ಒತ್ತಡಗಳು. ಪ್ರಮುಖವಾಗಿ ಇವು:
- ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಮೊದಲಿನ ಹಾಗೆ ಇಂದು ಕೆಲವೇ ಮುಂದುವರಿದ ರಾಷ್ಟ್ರಗಳ ಸ್ವತ್ತಾಗಿ ಉಳಿದಿಲ್ಲ. ಅನೇಕ ರಾಷ್ಟ್ರಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನ ಸಂಸ್ಥೆಗಳು, ವಿದ್ಯಾರ್ಥಿ ತಂಡಗಳು, ಖಾಸಗಿ ಉದ್ಯಮಿಗಳು ಸ್ವಂತವಾಗಿಯೋ ಅಥವಾ ಸಾಮೂಹಿಕವಾಗಿಯೋ ಪೂರ್ಣ ಪ್ರಮಾಣದಲ್ಲಿ ಈ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾರೆ ಮತ್ತು ಪರಿಣತಿಯನ್ನೂ ಪಡೆದಿದ್ದಾರೆ.
- ಚಂದ್ರ ಮತ್ತು ಹೊರ ಗ್ರಹಗಳಲ್ಲಿ ಕಂಡುಬಂದಿರುವ ಅಗಾಧ ಪ್ರಮಾಣದ ಅಮೂಲ್ಯ ಖನಿಜಗಳನ್ನು, ಶಕ್ತಿಮೂಲಗಳನ್ನು ಸ್ವಾರ್ಥಕ್ಕಾಗಿ ಸೂರೆಗೊಳ್ಳುವ ಮನೋಭಾವವೂ ಬಂದಿದೆ.
- ತಾವು ಗ್ರಹಗಳ ಮೇಲೆ ಇಳಿದು ಸ್ಥಾಪಿಸುವ ಜಾಗಗಳ ಮಾಲೀಕತ್ವವನ್ನು ಆಯಾಯ ದೇಶಗಳು ಪಡೆಯಬಹುದೇ? – ಎಂಬ ಕ್ಲಿಷ್ಟ ಪ್ರಶ್ನೆಯೂ ಎಲ್ಲರ ಮನಸ್ಸಿನಲ್ಲಿದೆ.
ಇದಕ್ಕೆ ವ್ಯತಿರಿಕ್ತವಾಗಿ, 1969ರಲ್ಲಿ ವಿಶ್ವಸಂಸ್ಥೆಯ ವತಿಯಲ್ಲಿ ಬಾಹ್ಯಾಕಾಶ ಒಪ್ಪಂದವೊಂದನ್ನು ಹೊರತಂದು, ಮೊದಲ ನಾಲ್ಕು ದೇಶಗಳು ಅದಕ್ಕೆ ಬದ್ಧವಾದವು. ಈಗ ಈ ಒಪ್ಪಂದಕ್ಕೆ 109 ದೇಶಗಳು ಬದ್ಧವಾಗಿವೆ; ಇನ್ನೂ ಕೆಲವು ದೇಶಗಳು ಬದ್ಧವಾಗಲಿವೆ. ಈ ಒಪ್ಪಂದದ ಪ್ರಕಾರ ಬಾಹ್ಯಾಕಾಶದಲ್ಲಿ ಅಣ್ವಸ್ತ್ರಗಳನ್ನು ಉಡಾವಣೆ ಮಾಡಬಾರದು; ಚಂದ್ರ ಮತ್ತು ಇತರ ಗ್ರಹಗಳನ್ನು ಶಾಂತಿಯುತ ಧ್ಯೇಯಗಳಿಗೆ ಮಾತ್ರ ಉಪಯೋಗಿಸಬೇಕು; ಗ್ರಹಗಳು ಯಾವುದೇ ದೇಶದ ಸ್ವತ್ತುಗಳಲ್ಲ; ಆದರೆ ಅವುಗಳ ಅನ್ವೇಷಣೆಗೆ ಯಾವ ಅಡ್ಡಿಯೂ ಇಲ್ಲ. ಹಾಗೂ ರಕ್ಷಣಾ ವ್ಯವಸ್ಥೆಯಾಗಿ, ಬಾಹ್ಯಾಕಾಶದಲ್ಲಿ ದೇಶಗಳು ಯುದ್ಧಾಸ್ತ್ರಗಳನ್ನು, ಉಪಗ್ರಹಗಳನ್ನು ಉಡಾವಣೆ ಮಾಡಬಹುದು. ಆದರೆ ಅವು ಅಗಾಧ ಗಾತ್ರದಲ್ಲಿ ಹಾನಿ ಮಾಡುವಂತಹ ಅಸ್ತ್ರಗಳಾಗಿರಬಾರದು. ಆದರೆ ಅಮೆರಿಕ, ರಷ್ಯಾ, ಇತರ ಕೆಲವು ದೇಶಗಳು ಬಾಹ್ಯಾಕಾಶವನ್ನು ಯುದ್ಧರಂಗವಾಗಿ ಪರಿವರ್ತಿಸುತ್ತಿವೆ.
ಈ ವರ್ಷ ಫೆಬ್ರುವರಿ ಮಾಸದಲ್ಲಿ ಅಮೆರಿಕದ ಅಧ್ಯಕ್ಷರು ಆ ದೇಶದಲ್ಲಿ ‘ಸ್ಪೇಸ್ ಫೋರ್ಸ್’ ಎಂಬ ರಕ್ಷಣಾ ವಿಭಾಗದ ಸ್ಥಾಪನೆಯನ್ನು ಅಧಿಕೃತವಾಗಿ ಘೋಷಿಸಿದರು. ಇದರಿಂದ ಭವಿಷ್ಯದಲ್ಲಿ ಯುದ್ಧಗಳ ಕಾರ್ಯನೀತಿಗಳೇ ಬದಲಾದಾವು. ಈ ನಿಟ್ಟಿನಲ್ಲಿ ಭಾರತ ಹಿಂದೆ ಬೀಳುವಂತಿಲ್ಲ. ಈ ವರ್ಷದ ಮಾರ್ಚ್ 19ರಂದು ಭಾರತ ‘ಆ್ಯಂಟಿ-ಸಾಟಲೈಟ್ ಮಿಸೈಲ್’ ಎಂಬ ಕ್ಷಿಪಣಿಯನ್ನು ಉಡಾವಣೆ ಮಾಡಿ ನಮ್ಮದೇ ಆದ ಒಂದು ನಿಷ್ಕ್ರಿಯವಾಗಿದ್ದ ಉಪಗ್ರಹವನ್ನು ಪ್ರಾಯೋಗಿಕವಾಗಿ ಭೂ ಕಕ್ಷೆಯಲ್ಲಿ ಯಶಸ್ವಿಯಾಗಿ ಧ್ವಂಸ ಮಾಡಿತು. ಇದು ಭಾರತದ ರಕ್ಷಣಾ ಇಲಾಖೆಯ ಹೊಸರೂಪದ ತಂತ್ರಜ್ಞಾನ ಪ್ರದರ್ಶನವಾಗಿತ್ತು. ಇತ್ತೀಚೆಗೆ ಭಾರತದ ರಕ್ಷಣಾ ಇಲಾಖೆ ಬೆಂಗಳೂರಿನಲ್ಲಿ ಬಾಹ್ಯಾಕಾಶ ರಕ್ಷಣಾ ವಿಭಾಗವೊಂದನ್ನು ತೆರೆದಿದೆ.
ಬರುವ ವರ್ಷಗಳಲ್ಲಿ ಚಂದ್ರ ಮತ್ತು ಮಂಗಳ ಗ್ರಹಗಳೆಡೆಗೆ ಮಾನವರನ್ನು (ಪ್ರವಾಸಿಗಳನ್ನೂ ಸೇರಿ!) ಕೊಂಡೊಯ್ಯುವ ರಾಕೆಟ್ ಸಾರಿಗೆ ವ್ಯವಸ್ಥೆಯಲ್ಲಿ ಚಂದ್ರಗ್ರಹ ಒಂದು ಪ್ರಮುಖ ನಿಲ್ದಾಣವಾಗಿ ಸ್ಥಾಪಿತವಾಗಿ,
ಅದರಿಂದ ಹೊರ ಗ್ರಹಗಳೆಡೆಗೆ ಪಯಣಿಸುವ ರಾಕೆಟ್ಗಳಿಗೂ, ನೌಕೆಗಳಿಗೂ, ಗಗನಯಾನಿಗಳಿಗೂ ಒಂದು ತಾಂತ್ರಿಕ ಸಂಕೀರ್ಣವಾಗಲಿದೆ. ಇದಲ್ಲದೆ ಚಂದ್ರನಲ್ಲೇ ಮಾನವನ ನೆಲೆಗಳೂ ರೂಪಗೊಳ್ಳುತ್ತಿವೆ.
ಮೇಲ್ಕಂಡ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಬಹುಶಃ ಚಂದ್ರಯಾನ-2 ಬಾಹ್ಯಾಕಾಶದ ಅನ್ವೇಷಣೆ ಮತ್ತು ಅಳವಡಿಕೆಗಳ ಕಾರ್ಯ ವಿಧಿಗಳಲ್ಲಿ ಮೊದಲನೆಯ ಹೆಜ್ಜೆ ಇಡುತ್ತಿದೆಯೇನೋ!
– ಸಿ.ಆರ್. ಸತ್ಯ (ನಿವೃತ್ತ ವಿಜ್ಞಾನಿ , ಇಸ್ರೋ)
ಚಂದ್ರಯಾನ-2ರ ಒಟ್ಟು ತೂಕ 3.8 ಟನ್. ಚಂದ್ರಯಾನ-2ರಲ್ಲಿ ಒಟ್ಟಾರೆ ಮೂರು ಭಾಗ (ಮಾಡ್ಯೂಲ್)ಗಳಿವೆ. ಒಂದು ಕಕ್ಷೆಯಲ್ಲಿ ಸುತ್ತುವ ಆರ್ಬಿಟರ್; ಇದರ ತೂಕ 2,379 ಕೆ.ಜಿ. ಎರಡನೆಯದು ಚಂದ್ರನ ನೆಲದಲ್ಲಿ ಇಳಿಯಲಿರುವ ವಿಕ್ರಂ ಲ್ಯಾಂಡರ್-3; ಇದರ ತೂಕ 1,471 ಕೆ.ಜಿ. ಮೂರನೆಯದು ಮಾದರಿಗಳನ್ನು ಸಂಗ್ರಹಿಸುವ ಪ್ರಜ್ಞಾನ್ ರೋವರ್-2; ಇದರ ತೂಕ 27 ಕೆ.ಜಿ. ಈ ಮೂರೂ ವಿಭಾಗಗಳನ್ನು ಹೊತ್ತ ಜಿಎಸ್ಎಲ್ವಿ ಮಾರ್ಕ್-3 ರಾಕೆಟ್ ಉಡಾವಣೆಗೊಳ್ಳಲಿದೆ. ಬಾಹ್ಯಾಕಾಶದಿಂದ ಚಂದ್ರನ ಕಕ್ಷೆಯನ್ನು ಸೇರುವವರೆಗೂ ಒಟ್ಟು 5 ಬಾರಿ ಆರ್ಬಿಟರ್ನ ಇಂಜಿನನ್ನು ಚಾಲನಗೊಳಿಸಿ ಚಂದ್ರನ ಕಡೆಗೆ ಕಳುಹಿಸಲಾಗುತ್ತದೆ. ಈ ಸಂದರ್ಭದಲ್ಲಿ ಜಗತ್ತಿನ ಇತರ ಬಾಹ್ಯಾಕಾಶ ಸಂಸ್ಥೆಗಳೂ ಈ ಪ್ರಕ್ರಿಯೆಯ ಮೇಲೆ ನಿಗಾ ಇರಿಸಿ ಇಸ್ರೋಗೆ ನೆರವು ನೀಡಲಿವೆ. ಚಂದ್ರನ ಕಕ್ಷೆಯನ್ನು ತಲಪಿದ ಬಳಿಕ ನೌಕೆಯಿಂದ ಆರ್ಬಿಟರ್ ಬೇರೆಯಾಗಿ, ಲ್ಯಾಂಡರ್ ಅದರಿಂದ ಕಳಚಿಕೊಂಡು ಚಂದ್ರನ ದಕ್ಷಿಣಧ್ರುವದ ಸಮೀಪದಲ್ಲಿ ನಿಗದಿತ ಸ್ಥಳದಲ್ಲಿ ಇಳಿಯುತ್ತದೆ. ಬಳಿಕ ರೋವರ್ ಲ್ಯಾಂಡರ್ನಿಂದ ಆಚೆಗೆ ಬಂದು ಮಾದರಿಗಳನ್ನು ಸಂಗ್ರಹಿಸುತ್ತದೆ ಹಾಗೂ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತದೆ. ಆರ್ಬಿಟರ್ ಹಾಗೂ ಲ್ಯಾಂಡರ್ಗಳು ತಮ್ಮವೇ ಆದ ಉಪಕರಣಗಳಿಂದ ಪ್ರಯೋಗ ನಡೆಸುತ್ತವೆ.
ಸ್ವದೇಶೀ ನಿರ್ಮಾಣ
‘ನಾಸಾ’ದ ಒಂದು ಸಣ್ಣ ಸಂವಹನಸಾಧನ ಬಿಟ್ಟರೆ ಭಾರತೀಯ ತಂತ್ರಜ್ಞಾನವನ್ನೇ ಸಂಪೂರ್ಣವಾಗಿ ಬಳಸಿಕೊಂಡು ಚಂದ್ರಯಾನ-2ನ್ನು ಸಿದ್ಧಗೊಳಿಸಲಾಗಿದೆ. ಯೋಜನೆಯ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿರುವ ಅತ್ಯಾಧುನಿಕ ‘ಇಸ್ರೋ ಸ್ಯಾಟಲೈಟ್ ಜೋಡಣೆ ಮತ್ತು ಪರೀಕ್ಷಾಕೇಂದ್ರ’ದಲ್ಲಿ (ISITE-ISRO Satellite Integration and Testing Establishment) ಸಿದ್ಧಗೊಂಡಿದೆ. ‘ಜಿಎಸ್ಎಲ್ವಿ ಮಾರ್ಕ್-3’ ರಾಕೆಟ್ನ ನಿರ್ಮಾಣದಲ್ಲಿ ದೇಶದ 500 ಉದ್ಯಮಗಳು ಹಾಗೂ ಚಂದ್ರಯಾನ-2ರ ನಿರ್ಮಾಣದಲ್ಲಿ ದೇಶದ 120 ಉದ್ಯಮಗಳು ಪಾಲ್ಗೊಂಡಿವೆ. ಇದರಲ್ಲಿ ಐಐಎಸ್ಸಿ, ಐಐಟಿ ಸೇರಿದಂತೆ ದೇಶದ 15 ಪ್ರತಿಷ್ಠಿತ ಶಿಕ್ಷಣಸಂಸ್ಥೆಗಳೂ ಮಹತ್ತ್ವದ ಪಾತ್ರವಹಿಸಿವೆ.
ಚಂದ್ರಯಾನ-2ರಲ್ಲಿ ಇಬ್ಬರು ಮಹಿಳಾ ವಿಜ್ಞಾನಿಗಳು ಪ್ರಮುಖ ಪಾತ್ರವಹಿಸಿದ್ದಾರೆ: ಯೋಜನಾ ನಿರ್ದೇಶಕರಾಗಿ ಎಂ. ವನಿತಾ ಮತ್ತು ಅನುಷ್ಠಾನ (ಮಿಷನ್) ನಿರ್ದೇಶಕರಾಗಿ ರಿತು ಕರಿಧಲ್ ಅವರು. ಇವರಲ್ಲಿ ವಿನ್ಯಾಸ ಇಂಜಿನಿಯರ್ ಆಗಿರುವ ಎಂ. ವನಿತಾ 2006ರಲ್ಲಿ ‘ಆಸ್ಟ್ರಾನಾಮಿಕಲ್ ಸೊಸೈಟಿ ಆಫ್ ಇಂಡಿಯಾ’ದಿಂದ ಅತ್ಯುತ್ತಮ ವಿಜ್ಞಾನಿ ಎಂದು ಪಾರಿತೋಷಿಕದೊಂದಿಗೆ ಸಂಮಾನಿತರಾಗಿದ್ದರು. ಇಸ್ರೋದಲ್ಲಿ 18ಕ್ಕೂ ಹೆಚ್ಚು ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ರಿತು ಕರಿಧಲ್ ‘ಚಂದ್ರಯಾನ-1’ರಲ್ಲಿಯೂ ಕಾರ್ಯ ನಿರ್ವಹಿಸಿದ್ದು, ‘ಮಂಗಳಯಾನ’ ಯೋಜನೆಯಲ್ಲಿ ಕಾರ್ಯಾಚರಣೆ ವಿಭಾಗದ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಇಬ್ಬರೂ ಇಸ್ರೋದ ಹಲವು ಸ್ಯಾಟಲೈಟ್ ಯೋಜನೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
“ಒಟ್ಟಾರೆಯಾಗಿ ಈ ಯೋಜನೆಯಲ್ಲಿ ಶೇ. 30ರಷ್ಟು ಮಹಿಳಾ ವಿಜ್ಞಾನಿಗಳ ತಂಡವೇ ಭಾಗಿಯಾಗಿದೆ” ಎಂದು ಹೆಮ್ಮೆಪಡುತ್ತಾರೆ ಇಸ್ರೋದ ಅಧ್ಯಕ್ಷ ಡಾ. ಕೆ. ಶಿವನ್. ಹಾಗೆ ನೋಡಿದರೆ ಈ ಯೋಜನೆಯಲ್ಲಿ ರಷ್ಯಾವನ್ನೂ ಭಾಗಿಯಾಗಿಸುವ ಉದ್ದೇಶ ಇಸ್ರೋಗೆ ಮೊದಲು ಇತ್ತು. ಅದಕ್ಕಾಗಿ 2007ರಲ್ಲಿ ಇಸ್ರೋ ಹಾಗೂ ರಷ್ಯಾದ ಬಾಹ್ಯಾಕಾಶಸಂಸ್ಥೆಗಳು ಒಪ್ಪಂದವನ್ನೂ ಮಾಡಿಕೊಂಡಿದ್ದವು. ಇದು 2013ರಲ್ಲಿ ನೆರವೇರಬೇಕಿತ್ತು. ಆದರೆ ರಷ್ಯಾ ಈ ಒಪ್ಪಂದದಿಂದ ಹಿಂದೆ ಸರಿಯಿತು. ಅದಕ್ಕೆ ಕಾರಣ – ಲ್ಯಾಂಡರ್ನ ನಿರ್ಮಾಣದಲ್ಲಿ ರಷ್ಯಾ ವಿಫಲಗೊಂಡದ್ದು ಎನ್ನಲಾಗುತ್ತದೆ. ಆನಂತರ ಅಮೆರಿಕದ ‘ನಾಸಾ’ ಸಂಸ್ಥೆಯೂ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿಸಿತ್ತು. ಆದರೆ ಆ ಒಪ್ಪಂದವೂ ನೆರವೇರಲಿಲ್ಲ. ಅಂತಿಮವಾಗಿ ಇಸ್ರೋ ಏಕಾಂಗಿಯಾಗಿಯೇ ಚಂದ್ರಯಾನ-2ನ್ನು ನಿರ್ವಹಿಸುವ ನಿರ್ಧಾರವನ್ನು ಮಾಡಿತು.
ಸಂಕೀರ್ಣ ಸಾಹಸ
ಚಂದ್ರಯಾನ-2ರ ಮೂಲಕ ಭಾರತವು ಅಮೆರಿಕ, ರಷ್ಯಾ, ಚೀಣಾದ ಬಳಿಕ ಚಂದ್ರನ ಮೇಲೆ ಸಂಶೋಧನಾ ಸಲಕರಣೆಗಳನ್ನು ಇಳಿಸುವ ನಾಲ್ಕನೇ ರಾಷ್ಟ್ರವಾಗಲಿದೆ. ಚಂದ್ರನ ದಕ್ಷಿಣಧ್ರುವದಲ್ಲಿ ಅಂದರೆ ಕತ್ತಲೆಯ ಭಾಗದಲ್ಲಿ ಇದುವರೆಗೆ ಯಾರೂ ಇಳಿದು ಅಧ್ಯಯನ ನಡೆಸಿಲ್ಲ. ಹೀಗಾಗಿ ಚಂದ್ರಯಾನ-2 ಲ್ಯಾಂಡರ್ ಮತ್ತು ರೋವರನ್ನು ದಕ್ಷಿಣಧ್ರುವದಲ್ಲೇ ಸ್ವಯಂಚಾಲಿತವಾಗಿ ಇಳಿಸುವ ಪ್ರಯತ್ನ ನಡೆಯಲಿದೆ. ತನ್ಮೂಲಕ ಲ್ಯಾಂಡರ್ನ್ನು ಚಂದ್ರನ ಕತ್ತಲೆಯ ಭಾಗದಲ್ಲಿ ಇಳಿಸಿದ ಪ್ರಥಮ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.
ಭೂಮಿಯಿಂದ ಚಂದ್ರನವರೆಗಿನ ಸುಮಾರು 3.84 ಲಕ್ಷ ಕಿ.ಮೀ. ದೂರವನ್ನು ಕ್ರಮಿಸಿ, ನಿಖರವಾಗಿ ಲ್ಯಾಂಡರನ್ನು ಇಳಿಸುವುದು ಕ್ಲಿಷ್ಟಕರ; ಲ್ಯಾಂಡರ್ ಜೊತೆಗೆ ಸಂಪರ್ಕ ಸಾಧಿಸುವಾಗ ರೇಡಿಯೋ ಸಿಗ್ನಲ್ಗಳು ದುರ್ಬಲವಾಗಿರುತ್ತವೆ. ಚಂದ್ರನಲ್ಲಿರುವ ಧೂಳು ಕೂಡ ಲ್ಯಾಂಡರ್ ಮತ್ತು ರೋವರ್ಗಳ ಕೆಲಸಕ್ಕೆ ಅಡ್ಡಿಯಾಗಬಹುದು. ಅದರಿಂದ ಲ್ಯಾಂಡರ್ ಹಾಗೂ ರೋವರನ್ನು ರಕ್ಷಿಸಿಕೊಳ್ಳುವುದು, ಸುರಕ್ಷಿತವಾಗಿ ಚಂದ್ರನಲ್ಲಿ ಅವುಗಳನ್ನು ಇಳಿಸುವುದು ಸೇರಿದಂತೆ ಹಲವು ಸಾಹಸಗಳನ್ನು ಇಸ್ರೋದ ವಿಜ್ಞಾನಿಗಳು ನಿಯಂತ್ರಣಕೇಂದ್ರಗಳಲ್ಲಿ ಇದ್ದುಕೊಂಡೇ ಮಾಡಬೇಕಾಗುತ್ತದೆ. ಹಾಗಾಗಿ ಇಸ್ರೋದ ವಿಜ್ಞಾನಿಗಳಿಗೆ ಇದೊಂದು ಸಂಕೀರ್ಣವಾದ ಬಹಳ ದೊಡ್ಡ ಸವಾಲು.
ನೇವಿಗೇಶನ್, ನಿಯಂತ್ರಣ ಮತ್ತು ಪ್ರೊಪಲ್ಷನ್ ಸಿಸ್ಟಂಗಳು ಪರಸ್ಪರ ಹೊಂದಾಣಿಕೆಯಿಂದ ಹಾಗೂ ಸ್ವಯಂಚಾಲಿತವಾಗಿ ಕೆಲಸ ಮಾಡಬೇಕಾಗುತ್ತದೆ. ರಾಕೆಟ್ನ ಮೂಲಕ ಕಕ್ಷೆಗೆ ಸೇರುವ ಆರ್ಬಿಟರ್ನ ಶಿರದಿಂದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಆ 15 ನಿಮಿಷಗಳ ಅವಧಿಯಂತೂ ಆತಂಕದ ಕ್ಷಣಗಳಾಗಲಿವೆ. ಭಾರತ ಇದುವರೆಗೆ ಇಂಥ ಸಾಹಸವನ್ನು ಮಾಡಿಲ್ಲ. “ರೋವರನ್ನು ಏನೂ ಧಕ್ಕೆಯಾಗದಂತೆ ಚಂದ್ರನ ಮೇಲೆ ಇಳಿಸುವುದು ಮತ್ತು ಅದು 500 ಮೀ.ನಷ್ಟು ಅತ್ತಿತ್ತ ಚಲಿಸಿ ಮಾದರಿಗಳನ್ನು ಸಂಗ್ರಹಿಸುವಂತೆ ಮಾಡುವ ತಂತ್ರಜ್ಞಾನ ಅತ್ಯಂತ ಕ್ಲಿಷ್ಟವಾದದ್ದು” – ಎಂದು ಇಸ್ರೋದ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಅವರು ಹೇಳುತ್ತಾರೆ.
ಚಂದ್ರನ ಮೇಲೆ ಇಳಿದ 15-20 ನಿಮಿಷಕ್ಕೆ ಲ್ಯಾಂಡರ್ ಚಿತ್ರವನ್ನು ಭೂಮಿಗೆ ಕಳಿಸಲಿದ್ದರೆ, 4-5 ಗಂಟೆಯೊಳಗೆ ರೋವರ್ ಚಿತ್ರ ಕಳಿಸಲಿದೆ. ಚಂದ್ರನ ಮೇಲ್ಮೈಯ 100 ಕಿ.ಮೀ. ದೂರದಲ್ಲಿ ಆರ್ಬಿಟರ್ ಸುತ್ತುತ್ತ ಲ್ಯಾಂಡರ್ ಮತ್ತು ರೋವರ್ ಕಳುಹಿಸುವ ಸಂದೇಶವನ್ನು ಭೂಮಿಗೆ ರವಾನಿಸಲಿದೆ. ಒಟ್ಟು 14 ದಿನಗಳ ಕಾಲ (ಒಂದು ಚಾಂದ್ರ ದಿವಸ) ಈ ಮೂರೂ ಯಂತ್ರಗಳು ವಿವಿಧ ಸಂಶೋಧನೆ ನಡೆಸಿ ಮಾಹಿತಿ ಸಂಗ್ರಹಿಸಲಿವೆ.
ಅಡ್ಡಿಯಾದ ರಾಜಕೀಯ
ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುವುದನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಯಾವ ರೀತಿ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿತ್ತು ಎನ್ನುವುದನ್ನು ಇಸ್ರೋದ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಅವರು “ಚಂದ್ರಯಾನ-2ನ್ನು ರಾಜಕೀಯ ಕಾರಣಗಳಿಗಾಗಿ ಮುಂದೂಡಲಾಗಿತ್ತು” ಎಂದು ಹೇಳುವ ಮೂಲಕ ಬಹಿರಂಗಪಡಿಸಿದ್ದಾರೆ. ಮುಂದುವರಿದು, “2014ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡ ‘ರಾಜಕೀಯ ನಿರ್ಧಾರ’ಗಳಿಂದಾಗಿ ಬಹಳ ಹಿಂದೆಯೇ ನಡೆಯಬೇಕಾಗಿದ್ದ ಚಂದ್ರಯಾನ-2ನ್ನು ಮುಂದೂಡಿ ‘ಮಂಗಳಯಾನ’ಕ್ಕೆ ಹೆಚ್ಚಿನ ಒತ್ತುಕೊಟ್ಟಿತು” – ಎಂದು ಅವರು ವಿವರಿಸಿದ್ದಾರೆ.
2008 ಅಕ್ಟೋಬರ್ನಲ್ಲಿ ಯಶಸ್ವಿಯಾಗಿ ನಡೆಸಿದ ಚಂದ್ರನೆಡೆಗಿನ ಭಾರತದ ಮೊದಲ ಮಾನವರಹಿತ ಬಾಹ್ಯಾಕಾಶ ಯೋಜನೆ ‘ಚಂದ್ರಯಾನ-1’ರ ಶಿಲ್ಪಿ ಎಂದೇ ಮಾಧವನ್ ನಾಯರ್ ಅವರನ್ನು ಗುರುತಿಸಲಾಗುತ್ತದೆ. ಇಸ್ರೋದ ಅಧ್ಯಕ್ಷ ಮತ್ತು ಬಾಹ್ಯಾಕಾಶ ವಿಭಾಗದ ಕಾರ್ಯದರ್ಶಿಯಾಗಿ ಅವರು 2003ರಿಂದ 2009ರ ತನಕ ಸೇವೆ ಸಲ್ಲಿಸಿದ್ದಾರೆ. 2012ರ ಕೊನೆಯಲ್ಲಿ ‘ಚಂದ್ರಯಾನ-2’ನ್ನು ನಡೆಸಬೇಕು ಎಂದು ಆಗಲೆ ನಿರ್ಧರಿಸಲಾಗಿತ್ತು ಎನ್ನುವುದನ್ನು ಮಾಧವನ್ ನಾಯರ್ ಬಹಿರಂಗಪಡಿಸಿದ್ದಾರೆ.
ನಾಯರ್ ಅವರ ಪ್ರಕಾರ, “2014ರ ಲೋಕಸಭಾ ಚುನಾವಣೆಯ ಮೊದಲು ಯುಪಿಎ ಸರ್ಕಾರವು ಕೆಲವು ‘ಪ್ರಮುಖ ಘಟನೆ’ಗಳು ನಡೆಯಬೇಕು ಎಂದು ಬಯಸಿತ್ತು. ಈ ಉದ್ದೇಶವನ್ನು ಇಟ್ಟುಕೊಂಡೇ ಯುಪಿಎ ಸರ್ಕಾರವು ಮಂಗಳಯಾನ ಯೋಜನೆಗೆ ಆದ್ಯತೆ ನೀಡಿತು. 2013 ನವೆಂಬರ್ನಲ್ಲಿ, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಮಂಗಳಯಾನ ಯೋಜನೆಯನ್ನು ನಡೆಸಲಾಯಿತು. 2014 ಸೆಪ್ಟೆಂಬರ್ನಲ್ಲಿ ಗಗನನೌಕೆಯು ಮಂಗಳಗ್ರಹವನ್ನು ತಲಪಿತು; ಆ ವೇಳೆಗೆಗಾಗಲೆ ಮೋದಿ ಸರ್ಕಾರ ಅಧಿಕಾರವನ್ನು ವಹಿಸಿಕೊಂಡಾಗಿತ್ತು. ಆದ್ದರಿಂದ, ಇದು ಯುಪಿಎಯ ಉದ್ದೇಶಕ್ಕೆ ಪೂರಕವಾಗಿರಲಿಲ್ಲ. ಯುಪಿಎ ಸರ್ಕಾರಕ್ಕೆ ತಂತ್ರಜ್ಞಾನ ಹೊಂದುವುದಕ್ಕಿಂತ ಹೆಚ್ಚಾಗಿ ಅದು – ಚಂದ್ರಯಾನ-2ಕ್ಕಿಂತ ಮೊದಲು ಮಂಗಳಯಾನವನ್ನು ನಡೆಸುವುದು – ರಾಜಕೀಯ ಪ್ರತಿಷ್ಠೆಯ ವಿಷಯವಾಗಿತ್ತು.” ನಾಯರ್ ಅವರ ಹೇಳಿಕೆಯಂತೆ, “ಚಂದ್ರಯಾನ-2ಕ್ಕೆ ಅದಾಗಲೇ ಅರ್ಧದಷ್ಟು ಕೆಲಸ ಮುಗಿದಿತ್ತು, ಆದರೆ ಎಲ್ಲ ಗಮನವನ್ನೂ ಮಂಗಳಯಾನ ಯೋಜನೆಯತ್ತ ತಿರುಗಿಸಲಾಯಿತು. ಆದ್ದರಿಂದ ನಾವು (ಇಸ್ರೋ) ಅನಂತರ ಮೊದಲಿನಿಂದ ಆರಂಭಿಸಬೇಕಾಯಿತು. 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವೇ ಚಂದ್ರಯಾನ-2ರ ಕಾರ್ಯವು ಮತ್ತೆ ಆರಂಭವಾಯಿತು.”
ಇಸ್ರೋದ ಮಾಜಿ ಅಧ್ಯಕ್ಷರು ಯುಪಿಎ ಸರ್ಕಾರವು ಯಾವ ರೀತಿಯಾಗಿ ಭಾರತದ ಬಾಹ್ಯಾಕಾಶ ಯೊಜನೆಗಳಿಗೆ ಅಡ್ಡಿಯಾಗಿತ್ತು ಎಂದು ತಿಳಿಸುತ್ತಿರುವುದು ಇದೇ ಮೊದಲಲ್ಲ. 2019ರ ಆರಂಭದಲ್ಲಿ ಭಾರತವು ‘ಎ-ಸ್ಯಾಟ್’ನ್ನು (ಉಪಗ್ರಹವನ್ನು ಹೊಡೆದುರುಳಿಸುವ ತಂತ್ರಜ್ಞಾನ) ಯಶಸ್ವಿಯಾಗಿ ಪರೀಕ್ಷಿಸಿದಾಗ “ಭಾರತಕ್ಕೆ 2007ರಲ್ಲೇ ಎ-ಸ್ಯಾಟ್ ತಂತ್ರಜ್ಞಾನ ಹೊಂದಿರುವ ರಾಷ್ಟ್ರಗಳ ಗುಂಪಿಗೆ ಸೇರುವ ಸಾಮಥ್ರ್ಯ ಇತ್ತು; ಆದರೆ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ” ಎಂದಿದ್ದರು ನಾಯರ್. ಈ ವಿಚಾರವು ಡಿಆರ್ಡಿಒದ ಮಾಜಿ ಮುಖ್ಯಸ್ಥ ವಿ.ಕೆ. ಸಾರಸ್ವತ್ ಅವರಿಂದಲೂ ದೃಢೀಕರಿಸಲ್ಪಟ್ಟಿತು.
‘ಅಧಿಕಾರಕ್ಕೆ ಬಂದಾಗಿನಿಂದ ರಾಷ್ಟ್ರೀಯ ಸಾಧನೆಗಳನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ’ – ಎಂದು ಮೋದಿ ಸರ್ಕಾರವನ್ನು ಆರೋಪಿಸುತ್ತಿರುವ ಕಾಂಗ್ರೆಸ್, ಭಾರತ ಬಾಹ್ಯಾಕಾಶ ಸಂಶೋಧನೆಗಳಲ್ಲಿ ಮುಂಚೂಣಿಗೆ ಬರುವುದನ್ನು ಎಂದೂ ಬಯಸಲಿಲ್ಲ. ಚಂದ್ರಯಾನ-2 ಯೋಜನೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಳಂಬಗೊಳಿಸಿತು ಎನ್ನುವ ಆರೋಪ ಈ ರೀತಿ ಬಾಹ್ಯಾಕಾಶ ವಿಭಾಗದಲ್ಲೇ ಅತ್ಯುನ್ನತ ಸ್ಥಾನದಲ್ಲಿದ್ದವರಿಂದಲೇ ಬಂದಿರುವುದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ರಾಷ್ಟ್ರಕ್ಕೆ ಈ ಸನ್ನಿವೇಶದಲ್ಲಿ ಕಾಂಗ್ರೆಸ್ ನೀಡಬೇಕಾಗಿರುವ ಸ್ಪಷ್ಟನೆ ಬಹಳಷ್ಟಿದೆ.