17ನೇ ಶತಮಾನದ ಆರಂಭಕಾಲದಿಂದ ಹಿಡಿದು 20ನೇ ಶತಮಾನದ ಮೊದಲ ಪಾದದ ವರೆಗೆ ಭಾರತದಲ್ಲಿ ಬ್ರಿಟಿಷ್ ಪ್ರಭುತ್ವವು ನಡೆಸಿದ ದಾಂಧಲೆಗಳನ್ನು ಕುರಿತು ಬ್ರಿಟಿಷ್ ಚರಿತ್ರಕಾರರೇ ರಚಿಸಿರುವ ಸಾವಿರಾರು ಪುಟಗಳ ಸಾಹಿತ್ಯ ಲಭ್ಯವಿದೆ. ಮೊದಲು ಈಸ್ಟ್ ಇಂಡಿಯ ಕಂಪೆನಿಯ ಮೂಲಕವೂ ಅನಂತರ ನೇರ ಬ್ರಿಟಿಷ್ ಆಳ್ವಿಕೆಯ ಮೂಲಕವೂ ನಡೆದ ಸಾಮ್ರಾಜ್ಯವಿಸ್ತರಣೋದ್ಯಮ ವಿಶೇಷವಾಗಿ ರಾಬರ್ಟ್ ಕ್ಲೈವನ ಪಾಳೆಗಾರಿಕೆಯ ಕಾಲದಿಂದಾಚೆಗೆ ಕ್ರಮಕ್ರಮವಾಗಿ (ಅಕ್ರಮ-ಅಕ್ರಮ ಸರಣಿಯಿಂದಾಗಿ ಎಂದೇ ಹೇಳುವುದು ಉಚಿತವಾದೀತು) ಭಾರತದ ಗಣನೀಯ ಭಾಗದ ಮೇಲೆ ರಾಜ್ಯಾಧಿಕಾರವನ್ನು ಸ್ಥಾಪಿಸಿದುದು, ಕೊಳ್ಳೆ-ಲೂಟಿಗಳಿಂದ ಭಾರತದ ಸಂಪತ್ತನ್ನು ದೋಚಿ ಒಯ್ದುದು, ಅದಕ್ಕಿಂತ ಮಿಗಿಲಾಗಿ ಭಾರತದಲ್ಲಿ ನಡೆದುಕೊಂಡುಬಂದಿದ್ದ ಸಾಮಾಜಿಕ-ಆರ್ಥಿಕ ವ್ಯವಸ್ಥೆಗಳನ್ನೇ ಹದಗೆಡಿಸಿದುದು – ಇವೆಲ್ಲ ಸಂದೇಹಾತೀತವಾಗಿ ದಾಖಲೆಗೊಂಡಿರುವ ಸಂಗತಿಗಳು. ಇವೆಲ್ಲ ಬ್ರಿಟಿಷರು ಮಾತ್ರವಲ್ಲದೆ ಸ್ಪಾನಿಷರು ಮೊದಲಾದವರು ಎಲ್ಲೆಡೆ ಅನುಸರಿಸಿದ ಮಾರ್ಗಗಳೇ. ಈ ದಮನವಿಧಾನಗಳನ್ನು ಕೂಟನೀತಿಯೆಂದಾಗಲಿ ಏನೋ ಜಾಣತನದ ತಂತ್ರಗಾರಿಕೆಯೆಂದಾಗಲಿ ಭಾವಿಸಲು ಕಾರಣವಿಲ್ಲ. ಸಾಮ್ರಾಜ್ಯಪೆÇೀಷಿತ ನೀತಿಹೀನ ತಂಡಗಳವರು ಈ ದಾಂಧಲೆಗಳನ್ನು ರಾಜಾರೋಷವಾಗಿಯೆ ಬೆಳ್ಳಂಬೆಳಗಿನಲ್ಲಿಯೆ ನಡೆಸಿದರು. ಹೀಗಾಗಿ ಅವನ್ನು ಬಲಿಷ್ಠರ ‘ಪಿತೂರಿ’ ಎನ್ನುವಂತಿಲ್ಲ. ಸ್ಥಳೀಯ ಜನಾಂಗಗಳ ಮೇಲೆ ಯಾವುದೇ ಗಣನೆಯಲ್ಲಿಯೂ ನೈತಿಕವೆಂದು ಪರಿಗಣಿಸಲಾಗದ ವಿಧಾನಗಳ ಮೂಲಕ ದಬ್ಬಾಳಿಕೆ ನಡೆಸಲಾಯಿತು. ಇತ್ತೀಚಿನ ಸಂಶೋಧಕ ನಿಕೋಲಾಸ್ ಬಿ. ಡಕ್ರ್ಸ್ ವ್ಯಾಖ್ಯೆ ಮಾಡಿರುವಂತೆ (‘The Scandal of Empire’, 2006) ಸಾಮ್ರಾಜ್ಯಾಧಿಪತ್ಯದಲ್ಲಿ ಭ್ರಷ್ಟತೆಗಳು ನಡೆದವು ಎನ್ನುವುದಕ್ಕಿಂತ ಇಡೀ ಸಾಮ್ರಾಜ್ಯಸ್ಥಾಪನೆಯೇ ಮೂಲದಲ್ಲಿಯೇ ಅತ್ಯಂತ ಭ್ರಷ್ಟವೂ ಅನೈತಿಕವೂ ಆಗಿದ್ದಿತು.
ಮುಂದುವರಿದ ಸಂಗತತೆ
ಈ ಸೂಕ್ಷ್ಮತೆಯನ್ನು ಈಗಿನ ಇತಿಹಾಸಾಭ್ಯಾಸಿಗಳು ಯಥಾರ್ಥವಾಗಿ ಅರಿತುಕೊಳ್ಳುವುದರ ಆವಶ್ಯಕತೆ ಇದೆ. ಏಕೆಂದರೆ ಜಗತ್ತಿನ ಪ್ರಮುಖ ಸಾಮ್ರಾಜ್ಯಗಳು ಅಸ್ತಂಗತವಾಗಿ ಮುಕ್ಕಾಲು ಶತಮಾನವೇ ಕಳೆದ ಮೇಲೂ ‘ಸಾಮ್ರಾಜ್ಯಾಧಿಪರು ಆ ಕಾಲಖಂಡದಲ್ಲಿ ಸಹಜವಾಗಿದ್ದಂತೆ ವರ್ತಿಸಿದರು’ ಎಂದೋ, ‘ಅನಾಗರಿಕತೆ ಇದ್ದೆಡೆ ಸಾಮ್ರಾಜ್ಯಾಧಿಕಾರಿಗಳು ಸಭ್ಯತೆಯನ್ನು ತಂದರು’ ಎಂದೋ, ‘ಗಾಢಾಂಧಕಾರದಲ್ಲಿದ್ದ ಉಳಿದ ಜಗತ್ತನ್ನು ಯೂರೋಪ್ ಮೂಲದ ಸಾಮ್ರಾಜ್ಯಗಳು ಆಧುನಿಕೀಕರಿಸಿದರು’ ಎಂದೋ ಇತಿಹಾಸದ ಸಾಮ್ರಾಜ್ಯಯುಗವನ್ನು ಪ್ರಶಂಸಿಸುವ ಧ್ವನಿಗಳು ಈಗಲೂ (ವಿರಳವಾಗಿದ್ದರೂ) ಇಲ್ಲದಿಲ್ಲ. ಸ್ವಲ್ಪ ಆಳಕ್ಕೆ ಹೊಕ್ಕು ವಿಶ್ಲೇಷಿಸಿದರೆ ಸ್ವತಂತ್ರ ನಿಷ್ಪಾಕ್ಷಿಕ ಚಿಂತನೆಯಿಂದ ನಿರಾಧಾರವೆಂದು ಸಿದ್ಧಪಡುವ ಮೇಲಣ ಅರ್ಧಸತ್ಯಗಳು ನಿರಸ್ತವಾಗಬೇಕಿತ್ತು. ಆದರೆ ಹಾಗೆ ಆಗಿಲ್ಲ. ಆ ಮಿಥ್ಯೆಗಳ ಉಪ-ಉತ್ಪನ್ನ ವಾದಸರಣಿಗಳು ಇಂದಿಗೂ ಮರೆಯಾಗಿಲ್ಲ; ಮಾತ್ರವಲ್ಲ, ಆ ಮಿಥ್ಯೆಗಳ ನೆಲಗಟ್ಟಿನ ಮೇಲೆ ರೂಪಗೊಂಡ ಶಿಕ್ಷಣಪದ್ಧತಿ, ಇತಿಹಾಸಾವಲೋಕನಪದ್ಧತಿ ಮೊದಲಾದ ದುಷ್ಪ್ರಭಾವಸರಣಿಗಳು ಸಮಾಜೋನ್ನತ ವಲಯಗಳಲ್ಲಿ ಈಗಲೂ ವಿಜೃಂಭಿಸಿವೆ. ಅಧೀನರಾಷ್ಟ್ರಮಾನಸಿಕತೆ ಎಂದು ಕರೆಯಬಹುದಾದ ಈ ಪರಿಸ್ಥಿತಿಯನ್ನು ನವಸ್ವತಂತ್ರ ದೇಶಗಳಲ್ಲೆಲ್ಲ ಸ್ಪಷ್ಟವಾಗಿ ಕಾಣಬಹುದು.
ಡಾಲ್ರಿಂಪಲ್
ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಬ್ರಿಟಿಷ್ ಪ್ರಭುತ್ವಾವಧಿಯ ಪರ್ವದ ಬಗೆಗೆ ವಿಪುಲ ಸಾಹಿತ್ಯ ಲಭ್ಯವಿದ್ದರೂ ಆ ವಿಷಯವನ್ನು ಇನ್ನಷ್ಟು ಮತ್ತಷ್ಟು ಬೆದಕಿ ನೋಡುವುದರ ಆವಶ್ಯಕತೆ ಈಗ ಗತಾರ್ಥವಾಗಿದೆ ಎಂದು ಭಾವಿಸಲು ಕಾರಣವಿಲ್ಲ. ಆದರೆ ಸಂಗತತೆ ಈಗಲೂ ಮುಂದುವರಿದಿದೆ ಎಂದು ಹೇಳಿದಲ್ಲಿ ಅದು ಅಲಂಕಾರೋಕ್ತಿಯಾಗದು. ಆ ಶತಕಗಳಲ್ಲಿ ಪ್ರಮುಖ ಪ್ರೇರಣೆಯಾಗಿದ್ದುದು ಆರ್ಥಿಕ ಸ್ವಾರ್ಥಾಕಾಂಕ್ಷೆಯ ಅನುಸಂಧಾನ. ಉತ್ತರೋತ್ತರ ಅದಕ್ಕೆ ರಾಜಕೀಯ ಅಧಿಕಾರಸ್ಥಾಪನೆಯೂ ಒದಗಿಬಂದಿತಷ್ಟೆ.
‘ರಾಜ್ಪರ್ವ’ಕ್ಕೆ ಸಂಬಂಧಿಸಿದಂತೆ ಈಚಿನ ವರ್ಷಗಳಲ್ಲಿ ಪ್ರಶಂಸನೀಯ ರೀತಿಯ ಶೋಧ ನಡೆಸಿ ಹೆಸರು ಮಾಡಿರುವವರು ವಿಲಿಯಂ ಡಾಲ್ರಿಂಪಲ್ (William Dalrymple). ಈ ಹಿಂದೆ ‘White Mughals’, ‘The Last Mughal’ ಮತ್ತಿತರ ಶೋಧಕೃತಿಗಳಿಂದ ಪ್ರಸಿದ್ಧರಾದವರು; ಹಲವು ಇತಿಹಾಸಾಧಾರಿತ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿರುವವರು; ಇಂಗ್ಲೆಂಡಿನ ‘ಶ್ರೇಷ್ಠ ಯುವಲೇಖಕ’, ಮಾಧ್ಯಮ ಪ್ರಶಸ್ತಿಗಳೂ ಸೇರಿದಂತೆ ಹಲವು ಸಂಮಾನಗಳಿಗೆ ಭಾಜನರಾದವರು; ‘ರಾಯಲ್ ಸೊಸೈಟಿ ಆಫ್ ಲಿಟರೇಚರ್’ ಮೊದಲಾದ ಪ್ರತಿಷ್ಠಿತ ವಿದ್ವತ್ಸಂಸ್ಥೆಗಳ ಸದಸ್ಯತ್ವದಿಂದ ಅಲಂಕೃತರಾದವರು; ಪ್ರಿನ್ಸ್ಟನ್ ಮೊದಲಾದ ಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದವರು; ಈಚಿನ ವರ್ಷಗಳಲ್ಲಿ ಗಮನ ಸೆಳೆದಿರುವ ‘ಜೈಪುರ್ ಲಿಟರೇಚರ್ ಫೆಸ್ಟಿವಲ್’ನ ಸ್ಥಾಪಕರಲ್ಲಿ ಒಬ್ಬರು. ಇದೀಗ ಅವರು ದೆಹಲಿಯ ಸಮೀಪದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ.
ವಿಲಿಯಂ ಡಾಲ್ರಿಂಪಲ್ರವರ ಮುಖ್ಯ ಸಂಶೋಧನಕ್ಷೇತ್ರ ಹಿಂದಿನ ಸುಮಾರು ಮೂರು ಶತಮಾನಗಳ ಭಾರತದ ಇತಿಹಾಸ. ತಮ್ಮ ಶೋಧಕಾರ್ಯಕ್ಕಾಗಿ ಇಂಗ್ಲೆಂಡಿನ ಹಾಗೂ ಭಾರತದಲ್ಲಿನ ಲೇಖ್ಯಾಗಾರಗಳ ವಿರಳ ದಾಖಲೆಗಳ ಒಳಹೊಕ್ಕು ಅಪೂರ್ವ ಮಾಹಿತಿಗಳನ್ನು ಅವರು ಬೆಳಕಿಗೆ ತಂದಿದ್ದಾರೆ. ಅನೇಕ ಐತಿಹಾಸಿಕ ಆಕರಗಳು ಪರ್ಶಿಯನ್ ಭಾಷೆಯಲ್ಲಿ ಇದ್ದುದನ್ನು ಗಮನಿಸಿ ಪರ್ಶಿಯನ್ ಭಾಷೆಯನ್ನು ಕಲಿತು ಈ ಹಿಂದೆ ಅಲಕ್ಷಿತವಾಗಿದ್ದ ದಾಖಲೆಗಳ ರಾಶಿಯನ್ನು ಅವರು ಅವಲೋಕಿಸಿದ್ದಾರೆ. ಮಂಡನೆಯ ಸಮರ್ಥ ಶೈಲಿಯನ್ನು ಅವರು ರೂಢಿಸಿಕೊಂಡಿರುವುದರಿಂದ ಅವರು ನೀಡುವ ಅಪೂರ್ವ ಒಳನೋಟಗಳಷ್ಟೆ ಅವರ ಬರಹದ ರೀತಿಯೂ ವ್ಯಾಪಕ ಮೆಚ್ಚಿಕೆಯನ್ನು ಪಡೆದುಕೊಂಡಿದೆ.
ಸೂಕ್ಷ್ಮಗ್ರಹಿಕೆಯ ಆವಶ್ಯಕತೆ
ಇತಿಹಾಸವನ್ನು ಮರೆಯುವವರು ದುಷ್ಪರ್ವಗಳನ್ನು ಮತ್ತೆ ಅನುಭವಿಸಬೇಕಾಗುತ್ತದೆ – ಎಂಬ ಹೇಳಿಕೆ ಪ್ರಸಿದ್ಧವಾಗಿದೆ. ಹೀಗೆ ಗತಇತಿಹಾಸವನ್ನು ಮತ್ತೆಮತ್ತೆ ಅವಲೋಕಿಸಬೇಕಾದ ಆವಶ್ಯಕತೆ ಇದೆ. ಕಾಲದಿಂದ ಕಾಲಕ್ಕೆ ಭಾರತದ ಪ್ರಭುತ್ವವಿನ್ಯಾಸದಲ್ಲಿ ಇಂತಿಂತಹ ವ್ಯತ್ಯಾಸಗಳಾದವು ಎಂಬ ಮಗ್ಗಿಯಂತಹ ಕೋಷ್ಟಕ ರೀತಿಯ ದಾಖಲೀಕರಣವು ಪ್ರಾಥಮಿಕಹಂತದ ಗ್ರಹಿಕೆಗೆ ಸಾಕಾದೀತು. ಆದರೆ ವಸಾಹತುಶಾಹಿಯ ಅಂತರ್ಗತ ಗತಿಶೀಲತೆಯ ಮತ್ತು ವ್ಯಾಪಕತೆಯ ಅರಿವಿಗೆ ಅಂತಹ ಸ್ಥೂಲ ಗ್ರಹಿಕೆ ಸಾಕಾಗದು. ಆಯಾ ಕಾಲಖಂಡದ ಪರಿಸ್ಥಿತಿವೈಶಿಷ್ಟ್ಯವನ್ನೂ ಸುತ್ತಲ ವಿದ್ಯಮಾನಗಳನ್ನೂ ಕುರಿತ ಪರಿಜ್ಞಾನವು ಅವಶ್ಯವಾಗುತ್ತದೆ.
ಹೀಗೆ ಇತಿಹಾಸಕಥನವನ್ನು ಪರಿಷ್ಕಾರಗೊಳಿಸುತ್ತಹೋದಲ್ಲಿ ಮಾತ್ರ ಯಥಾರ್ಥಗ್ರಹಣಕ್ಕೂ ಹೊಸಹೊಸದಾಗಿ ಬೆಳಕಿಗೆ ಬಂದ ಸೂಕ್ಷ್ಮಾಂಶಗಳ ಪರಿಜ್ಞಾನಕ್ಕೂ ಆಸ್ಪದವಾಗುತ್ತದೆ. ಸುಮಾರು ಆರು ವರ್ಷಗಳ ಸತತ ಶೋಧಕಾರ್ಯದ ಫಲಿತವಾದ ‘THE ANARCHY – The East India Company, Corporate Violence, and the Pillage of an Empire’ ಗ್ರಂಥದಲ್ಲಿ ವಿಲಿಯಂ ಡಾಲ್ರಿಂಪಲ್ ಮಾಡಿರುವ ಕಾರ್ಯ ಇದೆ. ಮೇಲೆ ಸೂಚಿಸಿದಂತೆ ಶೋಧನೆಯ ಗಾಢತೆಯೂ ಹಲವಾರು ವರ್ಷಗಳಿಂದ ಅವರು ಪಕ್ವಗೊಳಿಸಿಕೊಂಡಿರುವ ಇತಿಹಾಸಾವಲೋಕನದೃಷ್ಟಿಯೂ ಈ ರೋಚಕವೂ ಪ್ರಬುದ್ಧವೂ ಅದ ಗ್ರಂಥದ ನಿರ್ಮಾಣವನ್ನು ಸಾಧ್ಯವಾಗಿಸಿದೆ.
ನಿದರ್ಶನಕ್ಕೆ: 18ನೇ ಶತಮಾನದ ಅಂತ್ಯಭಾಗದಲ್ಲಿ (1788) ಮೊಘಲ ದೊರೆ ಶಾ ಆಲಂ(II)ನ ಆಸ್ಥಾನದಲ್ಲಿಯೇ ಹಿಂದೆ ಇದ್ದ ಗುಲಾಂ ಖಾದಿರ್ ಎಂಬ ಪರಿಚಾರಕನೊಬ್ಬನು ಕ್ರಮೇಣ ದುಷ್ಪ್ರವೃತ್ತಿಗಳನ್ನು ಬೆಳೆಸಿಕೊಂಡು ಹಿಂಸಾ ಮನೋಭಾವಕ್ಕೆ ವಶನಾಗಿ ತನ್ನ ಹಿಂದಿನ ಆಶ್ರಯದಾತರ ವಿರುದ್ಧವೇ ಕೂಟ ಕಟ್ಟಿ ಅವರನ್ನು ಬಂಧನಕ್ಕೂ ಒಳಪಡಿಸಿ ಅರಮನೆಯ ಬೊಕ್ಕಸವನ್ನು ದೋಚಹೊರಡುತ್ತಾನೆ. ಇಂತಹ ಪ್ರಸಂಗಗಳು ಸಾಮಾನ್ಯವಾಗಿ ಚರಿತ್ರಗ್ರಂಥಗಳಲ್ಲಿ ಎಲ್ಲಿಯೊ ಮೂಲೆಯಲ್ಲಿ ಒಂದೆರಡು ವಾಕ್ಯಗಳಲ್ಲಷ್ಟೆ ಉಲ್ಲೇಖಗೊಂಡಿರುತ್ತವೆ. ಆದರೆ ಡಾಲ್ರಿಂಪಲ್ರ ಪ್ರಸ್ತುತ ಗ್ರಂಥದಲ್ಲಿ ಶಾ ಆಲಂ ವೃತ್ತಾಂತವು ವಿಸ್ತಾರವಾಗಿ ಚಿತ್ರಣಗೊಂಡು, ಮಾರ್ದವದಿಂದಲೋ ದೌರ್ಬಲ್ಯಗಳಿಂದಲೋ ಮೊಘಲ ಸುಲ್ತಾನರನೇಕರ ಸ್ವವಿನಾಶಕ್ಕೆ ತಾವೇ ಕಾರಣರಾದದ್ದನ್ನೂ ಹೀಗೆ ಪರಂಪರೆಯ ಬ್ರಿಟಿಷರ ಅಕ್ರಮಕತೆಗೆ ಗ್ರಾಸವಾದದ್ದನ್ನೂ ಸವಿವರವಾಗಿ ವಿಶ್ಲೇಷಿಸಿದ್ದಾರೆ. ಎಂತೆಂತಹ ಸನ್ನಿವೇಶಗಳ ಲಾಭವನ್ನು ನೀತಿಶೂನ್ಯ ಬ್ರಿಟಿಷ್ ಸಾಮ್ರಾಜ್ಯಶಾಹಿಯು ಪಡೆದುಕೊಂಡಿತು ಎಂಬುದನ್ನು ಅರಿಯಲು ಡಾಲ್ರಿಂಪಲ್ರವರ ಶೋಧಪೂರ್ವಕ ಕಥನರೀತಿಯು ನೆರವಾಗುತ್ತದೆ.
ತಥ್ಯದರ್ಶನ
‘The Anarchy’ ಗ್ರಂಥದಿಂದ ಬೋಧವಾಗುವ ಮೇಲಣ ಅಂಶಗಳಿಗಿಂತ ಮಹತ್ತ್ವದ ಮಂಡನೆಯೆಂದರೆ – ಭಾರತವನ್ನು ದಾಸ್ಯಕ್ಕೆ ತಳ್ಳಿದುದು ನೇರವಾಗಿ ಬ್ರಿಟಿಷ್ ಪ್ರಜಾಸತ್ತೆಯಲ್ಲ; ಪ್ರತಿಯಾಗಿ (ಒಂದಷ್ಟುಮಟ್ಟಿಗೆ ಸತ್ತಾಧಿಕಾರದ ಅನುಗ್ರಹಕ್ಕೂ ಪೆÇ್ರೀತ್ಸಾಹನಕ್ಕೂ ಪಾತ್ರವಾಗಿರಬಹುದಾಗಿದ್ದ) ಒಂದು ಪೂರ್ಣವಾಗಿ ಲಾಭಾರ್ಜನೆಯ ಉದ್ದೇಶದ್ದೇ ಆಗಿ ಲಾಭಾಸಕ್ತ ಶ್ರೀಮಂತರಿಂದಲೇ ಷೇರುಹಣ ಸಂಗ್ರಹಿಸಿಕೊಂಡು ದೇಶಾಂತರಗಳಲ್ಲಿ ಕಾರ್ಯಪ್ರವೃತ್ತವಾಗಿದ್ದ ಒಂದು ಶುದ್ಧಾಂಗವಾಗಿ ಖಾಸಗಿಯದಾದ ವರ್ತಕ ಸಂಸ್ಥೆ – ಎಂಬ ತಥ್ಯ. ಈ ಸೂಕ್ಷ್ಮತೆಯನ್ನು ಡಾಲ್ರಿಂಪಲ್ರ ಮಾತುಗಳಲ್ಲಿಯೆ ನೋಡುವುದು ಉಚಿತ:
“We still talk about the British conquering India, but that phrase disguises a more sinister reality. It was not the British government that began seizing great chunks of India in the mid-eighteenth century, but a dangerously unregulate private company headquartered in one small office, five windows wide, in London, and managed in India by a violent, utterly ruthless and intermittently mentally unstable corporate predtor- Clive. India’s transition to colonialism took place under a for-profit corporation, which existed entirely for the purpose of enriching its investors.” (Introduction, page xxv)
“ಬ್ರಿಟಿಷರು ಭಾರತದ ಮೇಲೆ ಪ್ರಭುತ್ವವನ್ನು ಸ್ಥಾಪಿಸಿದರು – ಎಂದು ಈಗಲೂ ನಾವು ಹೇಳುತ್ತಿರುವುದುಂಟು. ಆದರೆ ಸರಳವೆನಿಸುವ ಈ ಹೇಳಿಕೆಯ ಗರ್ಭದಲ್ಲಿ ಇದಕ್ಕಿಂತ ಭೀಕರ ವಾಸ್ತವ ಅಡಗಿಕೊಂಡಿದೆ. ಭಾರತದ ಬೇರೆಬೇರೆ ಭಾಗಗಳನ್ನು 18ನೇ ಶತಮಾನದ ನಡುಭಾಗದಲ್ಲಿ ವಶಪಡಿಸಿಕೊಂಡದ್ದು ಬ್ರಿಟಿಷ್ಸರ್ಕಾರವಲ್ಲ; ಪ್ರತಿಯಾಗಿ ಆ ದೌಷ್ಟ್ಯವನ್ನು ನಡೆಸಿದುದು ಲಂಡನ್ನಿನ ಮೂಲೆಯೊಂದರಲ್ಲಿದ್ದ, ಐದು ಕಿಟಕಿಗಳಷ್ಟು ಮಾತ್ರದ ಸಣ್ಣ ಕಛೇರಿಯನ್ನು ತನ್ನ ಕೇಂದ್ರವಾಗಿರಿಸಿಕೊಂಡಿದ್ದ, ಘಾತಕವೆನಿಸುವಷ್ಟು ಅನಿಯಂತ್ರಿತವಾಗಿದ್ದ ಒಂದು ಖಾಸಗಿ ಕಂಪೆನಿ. ಭಾರತದಲ್ಲಿನ ವಹಿವಾಟುಗಳನ್ನು ಅಲ್ಲಿಂದ ಸಂಚಾಲನೆ ಮಾಡುತ್ತಿದ್ದುದು ಹಿಂಸಾಪ್ರವಣವೂ ಕ್ರೂರವೂ ಹಲವೊಮ್ಮೆ ಮನೋರೋಗಪೀಡಿತವೇ ಎನಿಸುತ್ತಿದ್ದುದೂ ಆದ ಅಸ್ತವ್ಯಸ್ತವಾದ ಕಾರ್ಪೋರೇಟ್ ಸಂಸ್ಥೆ – (ರಾಬರ್ಟ್) ಕ್ಲೈವ್ ಎಂಬಾತನ ಸುಪರ್ದಿನಲ್ಲಿ. ಹೀಗೆ ಸ್ವತಂತ್ರವಾಗಿದ್ದ ಭಾರತವು ವಸಾಹತೀಕೃತವಾದದ್ದು ಒಂದು ಲಾಭಕೋರ ಕಂಪೆನಿಯಿಂದ. ತನ್ನ ಬಂಡವಾಳ ಹೂಡಿಕೆದಾರರಿಗೆ ಲಾಭ ಮಾಡಿಮಾಡಿಕೊಡಬೇಕೆಂಬುದು ಅದರ ಏಕೈಕ ಲಕ್ಷ್ಯವಾಗಿದ್ದಿತು.” (ಗ್ರಂಥದ ಪೀಠಿಕೆ, ಪುಟ xxv)
ಗಾಂಧಿಯವರಿಗೆ ರಷ್ಯನ್ ಚಿಂತಕ ಟಾಲ್ಸ್ಟಾಯ್ ಬರೆದ ಪ್ರಸಿದ್ಧ ಪತ್ರದಲ್ಲಿ “ಒಂದು ವ್ಯಾಪಾರೀ ಕಂಪೆನಿಯು 30 ಕೋಟಿ ಜನಸಂಖ್ಯೆ ಇದ್ದ ವಿಶಾಲ ದೇಶವನ್ನು ದಾಸ್ಯಕ್ಕೊಳಪಡಿಸಿತು – ಎಂದರೆ ಈಗಿನ ಪೀಳಿಗೆಯ ಪ್ರಜೆಯೊಬ್ಬ ಅದನ್ನು ಕಲ್ಪಿಸಿಕೊಳ್ಳಲೂ ಆಗದ ಕಟ್ಟುಕಥೆ ಎಂದುಕೊಳ್ಳಬಹುದು” ಎಂಬ ಹೇಳಿಕೆಗೆ ಯಥೇಷ್ಟ ಸವಿವರ ಪುರಾವೆಗಳನ್ನು ಡಾಲ್ರಿಂಪಲ್ರವರ ‘’The Anarchy’ ಕಥನವು ಒದಗಿಸಿದೆ.
*****
ಕಂಪೆನಿಯ ಭೂಮಿಕೆ
ಈಸ್ಟ್ ಇಂಡಿಯ ಕಂಪೆನಿಯ ಸ್ಥಾಪನೆಯ ಸಂದರ್ಭವೂ ಗಮನಿಸಬೇಕಾದದ್ದು. ಅದಕ್ಕೆ ಹಿಂದಿನ ಹತ್ತಿರ ಹತ್ತಿರ ಒಂದು ಶತಮಾನದ ಕಾಲದಲ್ಲಿ ಬೇರೆ ಬೇರೆ ಮತೀಯ ಯುದ್ಧಗಳು ಮತ್ತಿತರ ಭಾನಗಡಿಗಳಿಂದಾಗಿ ಇಂಗ್ಲೆಂಡ್ ದಿವಾಳಿಯೆದ್ದಿತ್ತು; ಅದು ಇಡೀ ಯೂರೋಪಿನಲ್ಲಿಯೆ ದಿಕ್ಕೆಟ್ಟ ದೇಶವಾಗಿತ್ತು. ತನಗಿಂತ ಹೆಚ್ಚು ಶ್ರೀಮಂತವಾಗಿದ್ದ ಸ್ಪೇಯ್ನ್ ದೇಶವು ರವಾನಿಸುತ್ತಿದ್ದ ಬೆಳ್ಳಿಯ ರಾಶಿ ಮತ್ತಿತರ ಸಂಪತ್ತನ್ನು ಮಾರ್ಗದಲ್ಲಿ ಕೊಳ್ಳೆಹೊಡೆದು ತನ್ನ ಬೊಕ್ಕಸವನ್ನು ಬೆಳೆಸಿಕೊಳ್ಳುವುದು ಎಲಿಜಬೆತ್ ಆಳ್ವಿಕೆಯ ಇಂಗ್ಲೆಂಡಿನ ಅಧಿಕೃತ ಧೋರಣೆಯೇ ಆಗಿತ್ತು: “A form of Elizabethan State-sanctioned organized crime” ಎಂದು ವರ್ಣಿಸಿದ್ದಾರೆ ಡಾಲ್ರಿಂಪಲ್.
ಹಾಗೆ ಧಾರಾಳವಾಗಿ ಸಮುದ್ರಗಳ್ಳತನ ಮಾಡುತ್ತ ಬ್ರಿಟಿಷರು ಭಾರತ ತಲಪಿದಾಗ ಇಲ್ಲಿನ ಸಂಪತ್ ಸಮೃದ್ಧಿಯನ್ನು ನೋಡಿ ನಿಬ್ಬೆರಗಾದರು. ಆ ದಿನಗಳಿಂದಲೇ ಭಾರತದಲ್ಲಿನ ಮೊಘಲ ಆಳ್ವಿಕೆಯನ್ನು ಉಧ್ವಸ್ತಗೊಳಿಸಿ ತಾವು ತಿಷ್ಠೆಯೂರುವ ಸಂಕಲ್ಪಕ್ಕೆ ಬೀಜಾರೋಪವಾಯಿತು.
ಹಾಗೆ ನೋಡಿದರೆ ಭಾರತ ಕೆಲಸಕ್ಕೆಬಾರದ ಸಣ್ಣ ದೇಶವೇನಾಗಿರಲಿಲ್ಲ; ಚೀಣಾವನ್ನು ಹೊರತುಪಡಿಸಿದರೆ ಭಾರತ ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ದೇಶವಾಗಿದ್ದಿತು. ಇಡೀ ಜಗತ್ತಿನ ಔದ್ಯಮಿಕ ಉತ್ಪಾದನೆಯಲ್ಲಿ ಕಾಲುಭಾಗದಷ್ಟನ್ನು ತಯಾರಿಸುತ್ತಿದ್ದುದು ಭಾರತವೇ. ಬ್ರಿಟಿಷರು ಗಿಡುಗದಂತೆ ಎರಗಿದುದು ಇಂತಹ ರಾಷ್ಟ್ರದ ಮೇಲೆ.
ಪ್ರವೇಶ
ಇಲ್ಲಿ ಗಮನಿಸಬೇಕಾದ ಸೂಕ್ಷ್ಮತೆಯೆಂದರೆ ಬ್ರಿಟನ್-ಭಾರತಗಳ ನಡುವೆ ಮೊದಲ ಸಂಪರ್ಕ ಏರ್ಪಟ್ಟದ್ದು ರಾಜದೂತರುಗಳ ಸಂಧಾನದ ಮಟ್ಟದಲ್ಲಿ ಅಲ್ಲ; ಪ್ರತಿಯಾಗಿ ವಿಲಿಯಂ ಹಾಕಿನ್ಸ್ ಎಂಬ ಕುಡುಕ ವ್ಯಾಪಾರಿಯು ಆಗ್ರಾಕ್ಕೆ ಬಂದು ಸುಲ್ತಾನನ ಮೇಜವಾನಿಗೆ ಪಾತ್ರನಾಗುವುದರೊಂದಿಗೆ.
ಈಸ್ಟ್ ಇಂಡಿಯ ಕಂಪೆನಿಯದು ಹೇಳಿಕೊಳ್ಳುವಂತಹ ದೊಡ್ಡ ವ್ಯವಸ್ಥೆಯೇನಾಗಿರಲಿಲ್ಲ. ಕಂಪೆನಿ ಆರಂಭವಾದ ನೂರು ವರ್ಷಗಳಾದ ಮೇಲೂ ಅದರ ಖಾಯಂ ಸಿಬ್ಬಂದಿ ಇದ್ದುದು ಸುಮಾರು 35 ಜನರಷ್ಟು ಮಾತ್ರ. ಇಷ್ಟು ಸಣ್ಣ ಅಸ್ಥಿಪಂಜರಸದೃಶ ಟೋಳಿಯು ಅಲ್ಪಕಾಲದಲ್ಲಿ ದಕ್ಷಿಣ ಏಷ್ಯಾದ ವಿಶಾಲ ಭಾಗಗಳನ್ನು ವಶಪಡಿಸಿಕೊಂಡು ನಿರ್ಭಿಡೆಯಾಗಿ ಲೂಟಿಯಲ್ಲಿ ತೊಡಗಿದುದಕ್ಕೆ ಹೋಲಿಸಬಹುದಾದ ‘ಸಾಹಸ’ ಜಗತ್ತಿನಲ್ಲಿಯೆ ಇರದು.
ಕಂಪೆನಿಯ ವಿವಿಧಮುಖ ದಾಂಧಲೆಗಳ ಪ್ರವಾಹದಲ್ಲಿ ಅವಧ (ಔಂಧ್) ನವಾಬನಿಂದ ದಕ್ಷಿಣದ ಟಿಪ್ಪು ವರೆಗಿನ ಹತ್ತಾರು ಸ್ಥಾನಿಕರು ಕೊಚ್ಚಿಹೋದರು.
ದೆಹಲಿಯ ಕೊನೆಯ ಮೊಘಲ್ ದೊರೆಯ ಅವನತಿ, 1857ರ ಮಹಾಸಂಗ್ರಾಮ ಆಫಘನ್ ಯುದ್ಧ – ಇವೇ ಮೊದಲಾದ ಘಟನಾವಳಿಗೆ ಪೂರಕವಾಗಿದ್ದುದು ಈಸ್ಟ್ ಇಂಡಿಯ ಕಂಪೆನಿಯ ದಂದಾದುಂದಿಗಳೇ.
ಈ ಭೂಮಿಕೆಯಲ್ಲಿಯೇ ಡಾಲ್ರಿಂಪಲ್ ಮಂಡಿಸಿರುವುದು ಭಾರತವನ್ನು ದರಿದ್ರಗೊಳಿಸಿದುದು ಕಂಪನಿಯೇ ವಿನಾ (ಅನಂತರ ಅನಿವಾರ್ಯವಾಗಿ ನೇರ ಆಳ್ವಿಕೆಯನ್ನು ಆರಂಭಿಸಿದ) ಬ್ರಿಟಿಷ್ ಪ್ರಭುತ್ವವಲ್ಲ – ಎಂದು.
*****
ಅವನತಿಯ ಬೀಜ
ಈ ದುರಂತ ಕಥೆಯ ಇನ್ನೊಂದು ಮುಖವೆಂದರೆ – ಆಗ ಜಗತ್ತಿನಲ್ಲಿಯೆ ಅತ್ಯಂತ ದೊಡ್ಡದು ಮತ್ತು ಪ್ರತಿಷ್ಠಿತವಾದ ರಾಷ್ಟ್ರೋತ್ತರ ಕಂಪೆನಿ ಎನಿಸಿದ್ದ ಈಸ್ಟ್ ಇಂಡಿಯ ಕಂಪೆನಿ ಅನಿಯಂತ್ರಣದಿಂದ ಮುಗಿಲೆತ್ತರದ ಭ್ರಷ್ಟಾಚಾರಗಳಿಂದ ಹತಪ್ರಭಗೊಂಡಿತು – ಎಂಬುದು. ಎಲ್ಲ ದುರ್ನೀತಿಗಳಿಂದಲೂ ನವಾಬರುಗಳೊಡನೆಯ ಸಂಧಾನಗಳಿಂದಲೂ ಅಗಾಧ ಪ್ರಮಾಣದ ಧನವನ್ನು ಶೇಖರಿಸಿಕೊಂಡಿದ್ದರೂ, ತನ್ನೊಳಗಿನ ವಿಷಬೀಜಗಳಿಂದಲೇ ಆ ವಾಣಿಜ್ಯಸಾಮ್ರಾಜ್ಯ ನೆಲಕಚ್ಚಿತು. ಹೊಸ ರಾಜ್ಯಾಂಗವಿನ್ಯಾಸವನ್ನು ಅದು ಅನಿವಾರ್ಯಗೊಳಿಸಿತು.
ರಾಬರ್ಟ್ ಕ್ಲೈವ್ ಮಹಾಶಯ ತನ್ನ 14 ವರ್ಷಗಳ ‘ದೇಶಸೇವೆ’ಗೆ ಪ್ರತಿಫಲವಾಗಿ ತನ್ನ ಸ್ವಂತ ಖಜಾನೆಗೆ ತುಂಬಿಕೊಂಡಿದ್ದ ಹಣವೇ (ಈಗಿನ ಅಳತೆಯಲ್ಲಿ) ಇಪ್ಪತ್ತಾರೂಕಾಲು ಕೋಟಿ ಪೌಂಡುಗಳಷ್ಟು ಇದ್ದಿತು. ಕ್ಲೈವನ ಕೊಳ್ಳೆ ಎಷ್ಟು ದೊಡ್ಡ ಪ್ರಮಾಣದ್ದಿತ್ತೆಂದರೆ ರಾಜ್ಯದ ನಿತ್ಯದ ಸ್ಥಳೀಯ ಆಡಳಿತ ವಹಿವಾಟಿಗೆ ಬೇಕಾದ ಹಣಕ್ಕೇ ತತ್ವಾರ ಒದಗಿತ್ತು.
ವಾಸ್ತವದಲ್ಲಿ ಕಂಪೆನಿಯ ಕೈಸೇರುತ್ತಿದ್ದುದು ಭಾರತದ ಕೊಳ್ಳೆಯ ಒಂದು ಭಾಗವಷ್ಟೆ. ಗಣನೀಯ ಸಂಪತ್ತನ್ನು ಅಧಿಕಾರಿಗಳೇ ಲಪಟಾಯಿಸಿದ್ದರು – ಎಂಬುದು ಹಾಗಿರಲಿ, ನಿಯುಕ್ತ ಅಧಿಕಾರಿಗಳು ಭಾರತದಲ್ಲಿ ನಡೆಸುತ್ತಿದ್ದ ದುವ್ರ್ಯವಹಾರಗಳು ಎಷ್ಟು ಅಸಹ್ಯಕರವಾಗುತ್ತಹೋದವೆಂದರೆ ಬ್ರಿಟಿಷ್ ಸರ್ಕಾರಕ್ಕೆ ಇರುಸುಮುರುಸು ತರತೊಡಗಿದವು. ಸಂಸತ್ತಿನಲ್ಲೂ ಚರ್ಚೆಯಾಗತೊಡಗಿದವು. ಆ ಸಂಧಿಕಾಲದಲ್ಲಿ ಜಗತ್ತನ್ನು ಸವ್ಯವಾಗಿ ಮುನ್ನಡೆಸಬಹುದಾಗಿದ್ದುದು ಆರೋಗ್ಯಪೂರ್ಣ ರಾಜ್ಯಾಂಗವ್ಯವಸ್ಥೆಯೇ ಹೊರತು ಭ್ರಷ್ಟ ಲಾಭಬಡುಕ ಸಂಸ್ಥೆಗಳ ಪ್ರಸರಣವಲ್ಲ – ಎಂಬುದು ಬ್ರಿಟಿಷ್ ಸರ್ಕಾರದ ಸ್ವೀಕೃತ ನಿಲುಮೆಯಾಗಿದ್ದಿತು.
ಘೋಷಣೆ, ಶೋಷಣೆ
ವಿಸ್ತøತ ಸಾಮ್ರಾಜ್ಯವು ಆಧುನಿಕ ಜ್ಞಾನಪ್ರಸಾರದ ಮೂಲಕವೂ ಸದ್ಯೋಲಬ್ಧ ತಂತ್ರಜ್ಞಾನ ಅವಿಷ್ಕರಣಗಳ ಹಾಗೂ ವಿಜ್ಞಾನಾಂಗಗಳ ಪ್ರಸಾರದ ಮೂಲಕವೂ ವಿಶಾಲ ಜಗತ್ತನ್ನು ಉನ್ಮುಖಗೊಳಿಸಬೇಕಾದುದು ತಾವು ಮಾಡಬೇಕಾದ ಕಾರ್ಯವೆಂದು ಬ್ರಿಟಿಷ್ ಚಿಂತಕÀ ವರ್ಗಗಳು ನಂಬಿದ್ದವೆಂಬುದನ್ನು ಶಂಕಿಸಲು ಕಾರಣವಿಲ್ಲ. ಹೀಗಿದ್ದೂ 18ನೇ ಶತಮಾನದ ಉತ್ತರಾರ್ಧ ಮತ್ತು 19ನೇ ಶತಮಾನದ ಪೂರ್ವಾರ್ಧ ಕಾಲದಲ್ಲಿ ಬ್ರಿಟಿಷರ ಹೆಸರಿನಲ್ಲಿ ಅಧೀನ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ದಾಂಧಲೆಗಳ ಬಗೆಗೆ ಸುದೀರ್ಘ ಕಾಲ ಬ್ರಿಟಿಷ್ ಸರ್ಕಾರವು ಉಪೇಕ್ಷೆ ತೋರಿಸಿತೆಂದೂ ಹೇಳಲೇಬೇಕು. ಈ ದ್ವೈಧವನ್ನು ಸರಿಪಡಿಸಬೇಕೆಂದು ಬಹಳ ಕಾಲದವರೆಗೆ ಬ್ರಿಟಿಷ್ ಪ್ರಭುತ್ವಕ್ಕೆ ಅನ್ನಿಸಲೇ ಇಲ್ಲ.
*****
ಈಸ್ಟ್ ಇಂಡಿಯ ಕಂಪೆನಿಯ ಸ್ಥಾಪನೆಯಾದದ್ದು 1599ರಲ್ಲಿ – ಎಲಿಜಬೆತ್ (I) ರಾಣಿಯ ಆಳ್ವಿಕೆಯ ಕೊನೆಯ ಭಾಗದಲ್ಲಿ. ಅದಕ್ಕೆ ಪ್ರಚೋದಕವಾದದ್ದು ಪ್ರಾಚ್ಯದೇಶಗಳಲ್ಲಿ ವಾಣಿಜ್ಯದಲ್ಲಿ – ವಿಶೇಷವಾಗಿ ಸಾಂಬಾರ ಪದಾರ್ಥಗಳ ವ್ಯಾಪಾರದಲ್ಲಿ – ಡಚ್ಚರ ಪ್ರಾಬಲ್ಯ ಉತ್ತುಂಗದಲ್ಲಿ ಇದ್ದುದು. ಆ ದೇಶಗಳಲ್ಲಿ ಇದ್ದ ಅಪಾರ ಲಾಭಾವಕಾಶಗಳಿಂದ ಆಕರ್ಷಿತರಾಗಿ ಇಂಗ್ಲೆಂಡಿನ ಒಂದಷ್ಟು ಮಂದಿ ವರ್ತಕರೂ ಲಾಭಾನ್ವೇಷಿಗಳೂ ಲಂಡನ್ನಿನ ಮೇಯರ್ ಸೇರಿದಂತೆ ಹಲವರು ಸಮಜೋನ್ನತರೂ ಕೂಟ ಕಟ್ಟಿದರು. ಅವರೆಲ್ಲ ಬಂಡವಾಳ ಹೂಡಿ ವ್ಯಾಪಾರವನ್ನು ಉಪಕ್ರಮಿಸುವಂತೆ ಹಲವರನ್ನು ತೊಡಗಿಸಿ ಹಡಗುಗಳನ್ನು ಏರ್ಪಡಿಸಿ ಭಾರತಕ್ಕೆ ಕಳಿಸಿದರು. 17ನೇ ಶತಮಾನದಲ್ಲಿ ಭಾರತದಲ್ಲಿ ಇದ್ದವು ಹತ್ತಾರು ಸ್ವತಂತ್ರ ಸಂಸ್ಥಾನಗಳು. ಅವುಗಳ ಸಂಪರ್ಕ ಬೆಳೆಸಿಕೊಂಡು ಡಚ್ಚರು, ಫ್ರೆಂಚರು, ಹಲವರು ಡೇನಿಷರು ಕೂಡ ಭಾರತದ ಬೇರೆಬೇರೆಡೆಗಳಲ್ಲಿ ವಹಿವಾಟು ನಡೆಸುತ್ತಿದ್ದರು. ಅವರೊಡನೆ ಹೊಸದಾಗಿ ಹೆಜ್ಜೆಯಿರಿಸಿದ ಬ್ರಿಟಿಷರು ಸ್ಪರ್ಧಿಸಬೇಕಾಗಿತ್ತು. ತಂತ್ರಗಾರಿಕೆಯಲ್ಲಂತೂ ಬ್ರಿಟಿಷರು ನಿಸ್ಸೀಮರಾಗಿದ್ದರು. ಅವರು ಪ್ರತ್ಯೇಕ ಸಂಸ್ಥಾನಾಧಿಪರ ಒಡನಾಟ ಬೆಳೆಸಿಕೊಂಡು ಸಾಧ್ಯವಿದ್ದ ಕಡೆಗಳಲ್ಲಿ ನೆಲೆಯೂರತೊಡಗಿದರು.
ಮಸಕಾದ ‘ಲಕ್ಷ್ಮಣರೇಖೆ’
ಒಟ್ಟಾರೆ ಅಸ್ತವ್ಯಸ್ತವಾಗಿದ್ದ ಆಗಿನ ಸ್ಥಿತಿಯಲ್ಲಿ ಬ್ರಿಟಿಷರು ತಮ್ಮ ನೀತಿದೂರ ಮಾರ್ಗಗಳನ್ನು ಪೆÇೀಷಿಸಲು ಬಲ-ಸಂಚಯ ಮಾಡಿಕೊಳ್ಳತೊಡಗಿದರು. ಇದು ಬೆಳೆಯುತ್ತಲೇ ಹೋಯಿತು. 18ನೇ ಶತಮಾನದ ಕೊನೆಯ ವೇಳೆಗೆ ಈಸ್ಟ್ ಇಂಡಿಯ ಕಂಪೆನಿ ಸಂಘಟಿಸಿದ್ದ ಗಾತ್ರ ಇಂಗ್ಲೆಂಡಿನೊಳಗಿನ ಬ್ರಿಟಿಷ್ ಸೇನೆಯದಕ್ಕಿಂತ ಅಧಿಕವಾಗಿತ್ತು. ಭಾರತದಿಂದ ಇಂಗ್ಲೆಂಡಿಗೆ ಹರಿದುಹೋಗುತ್ತಿದ್ದ ಸಂಪತ್ತು ಬ್ರಿಟಿಷ್ ಸಾಮ್ರಾಜ್ಯದ ಒಟ್ಟು ವಾಣಿಜ್ಯ ಗಳಿಕೆಯ ಅರ್ಧದಷ್ಟು ಆಗಿತ್ತು. ಬೇರೆ ಬೇರೆ ಹಂತಗಳ ಅಧಿಕಾರಿಗಳು ಧಾರಾಳವಾಗಿ ತಮ್ಮ ಕಿಸೆ ತುಂಬಿಸಿಕೊಳ್ಳುತ್ತಿದ್ದರು. ಆದರೂ ಉಳಿಕೆಯ ಹಣವೂ ಅಪಾರವಾಗಿ ಇದ್ದುದರಿಂದ ಕಂಪೆನಿ ವ್ಯವಹಾರಗಳ ರೀತಿಯ ಬಗೆಗೆ ಬ್ರಿಟಿಷ್ ಸರ್ಕಾರವಾಗಲಿ ಸಂಸತ್ತಾಗಲಿ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಕಂಪೆನಿಯ ದುವ್ರ್ಯವಹಾರಗಳು ಮಿತಿಮೀರಿದ ಮೇಲಷ್ಟೆ ಅದರ ನಿಯಂತ್ರಣದ ಅನಿವಾರ್ಯತೆ ಬ್ರಿಟಿಷ್ ಪ್ರಭುತ್ವಕ್ಕೆ ಸರಿಯಾಗಿ ಮನವರಿಕೆಯಾದದ್ದು. ಆ ಸಂಧಿಯಲ್ಲಿ ಭಾರತದಲ್ಲಿ ಗವರ್ನರ್-ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸ್ ಅದಕ್ಕೆ ಬಲಿಪಶುವಾಗಬೇಕಾಯಿತು. ಕ್ಲೈವ್ ಮೊದಲಾದವರಿಗೆ ಹೋಲಿಸಿದರೆ ವಾರನ್ ಹೇಸ್ಟಿಂಗ್ಸ್ ದೊಡ್ಡ ರಕ್ಕಸನೇನಾಗಿರಲಿಲ್ಲ. ಆದರೂ ಅವನು ತಲೆದಂಡ ತೆರಬೇಕಾಯಿತು. ಖ್ಯಾತ ಸಾಂಸದ ಎಡ್ಮಂಡ್ ಬರ್ಕ್ ಹೇಸ್ಟಿಂಗ್ಸ್ನ ವಿರುದ್ಧ ಅಭಿಯೋಗವನ್ನು ಉಪಕ್ರಮಿಸಿದುದು ಪ್ರಸಿದ್ಧವೇ ಆಗಿದೆ.
ಅರಾಜಕತೆಯ ಪರ್ವ
ಮೇಲಣ ಪ್ರಸಂಗದ ಬಾಹ್ಯರೇಖೆಗಳಿಗಿಂತ ಮಿಗಿಲಾಗಿ ಸೂಕ್ಷ್ಮವಾದ ಒಳಸುಳಿಗಳ ಬೆನ್ನುಹತ್ತಿದ್ದಾರೆ ವಿಲಿಯಂ ಡಾಲ್ರಿಂಪಲ್. ‘The Anarchy’ ಗ್ರಂಥದಲ್ಲಿ ಹಲವು ಶತಮಾನಗಳ ಕಾಲ ಭಾರತದಲ್ಲಿ ಸುಲ್ತಾನಿಕೆ ನಡೆಸಿದ ಮೊಘಲರ ಆಡಳಿತದ ಅವಧಿಯ ತರುವಾಯ ಕ್ರಮಕ್ರಮವಾಗಿ ವಿವಿಧ ರೀತಿಗಳಲ್ಲಿ ಬ್ರಿಟಿಷರು – ಎಂದರೆ ಈಸ್ಟ್ ಇಂಡಿಯ ಕಂಪೆನಿಯ ಪ್ರತಿನಿಧಿಗಳು – ನಡೆಸಿದ ಕೊಳ್ಳೆ-ಲೂಟಿಗಳ ಪ್ರಮಾಣ ಖಚಿತವಾಗಿ ಎಷ್ಟೆಂದು ನಿಶ್ಚಿತವಾಗಿ ತಿಳಿದಿಲ್ಲ; ಅಂದಾಜು ಮಾಡಬಹುದಷ್ಟೇ
ಧನದ ರೂಪದಲ್ಲಿ ಬ್ರಿಟಿಷರು ಹೊತ್ತೊಯ್ದ ಸಂಪತ್ತು ಹಾಗಿರಲಿ; ಆ ಅರಾಜಕತೆಯ ಪರ್ವದಲ್ಲಿ ಭಾರತದಿಂದ ಇಂಗ್ಲೆಂಡಿಗೆ ಸಾಗಿಸಲ್ಪಟ್ಟ ಭಾರತದ ಚಾರಿತ್ರಿಕ ಸಂಪತ್ತೂ ಗಣನೆಗೆಟಕುದುದು. ನಿದರ್ಶನಕ್ಕೆ – ವಿಲಿಯಂ ಡಾಲ್ರಿಂಪಲ್ ದಾಖಲಿಸಿರುವಂತೆ 18ನೇ ಶತಮಾನದಲ್ಲಿ – ಪ್ಲಾಸಿ ಕದನವಾದ ಮೇಲೆ – ಬ್ರಿಟಿಷರು ಹೊತ್ತೊಯ್ದ ಸಿರಾಜ್-ಉದ್-ದೌಲನ ಪಲ್ಲಕ್ಕಿ, ಟಿಪ್ಪುಸುಲ್ತಾನನ ಸಮರ ಪರಿಕರಗಳು ಮೊದಲಾದ ಹೇರಳ ಮಹತ್ತ್ವದ ಅವಶೇಷಗಳು ಈಗ ಇರುವುದು ವೇಲ್ಸ್ ಪ್ರಾಂತದ ‘ಪೊವಿಸ್ ಕ್ಯಾಸಲ್’ ಎಂಬ ಕೋಟೆಯಲ್ಲಿ.
ಈ ಹಿಂದೆಯೇ ‘ರಾಜ್ ಪರ್ವ’ ಕುರಿತು ವಿಪುಲ ಸಾಹಿತ್ಯ ಪ್ರಕಟಗೊಂಡಿದ್ದರೂ ಹೆಚ್ಚಿನ ಲೇಖಕರು ಅದನ್ನೆಲ್ಲ ಘಟನಾವಳಿಯಂತೆ ಹೇಳುತ್ತಾ ಹೋಗಿದ್ದಾರೆಯೇ ಹೊರತು ಆ ಇಡೀ ಕಾಲಖಂಡದ ಸ್ವರೂಪ ‘ಅರಾಜಕತೆ’ಯಾಗಿದ್ದಿತು ಎಂಬುದನ್ನು ಸ್ಫುಟೀಕರಿಸಿದಂತಿಲ್ಲ. ಆ ಕೊರತೆಯನ್ನು ಡಾಲ್ರಿಂಪಲ್ರವರ ಈ ಗ್ರಂಥವು ತುಂಬಿದೆ.
ಸಾಮಾನ್ಯವಾಗಿ ‘ಅರಾಜಕತೆ’ ಎಂಬ ಶಬ್ದವನ್ನು ಯಾವುದೊ ಯುದ್ಧದ ಅಥವಾ ವಿಪ್ಲವದ ತರುವಾಯ ಉಂಟಾದ ಅಸ್ತವ್ಯಸ್ತತೆ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಈಸ್ಟ್ ಇಂಡಿಯ ಕಂಪೆನಿಯ ಪ್ರಾದುರ್ಭಾವದೊಡಗೂಡಿಯೇ ಅರಾಜಕತೆಯ ತಾಂಡವನೃತ್ಯ ನಡೆಯಿತು – ಎಂಬ ತಮ್ಮ ವಿಶ್ಲೇಷಣೆಯ ಸಮರ್ಥನೆಗಾಗಿಯೆ ತಾವು ಈ ಗ್ರಂಥವನ್ನು ಕಂಪೆನಿ-ಕೇಂದ್ರಿತವಾಗಿ ಬರೆಯಬೇಕಾಯಿತು – ಎಂದಿದ್ದಾರೆ ಡಾಲ್ರಿಂಪಲ್. ಈ ಗ್ರಂಥದ ಸಿದ್ಧತೆಗಾಗಿ ತಾವು ಅವಲೋಕಿಸಿರುವಷ್ಟು ಆಕರಗಳನ್ನು ಬೇರೆ ಯಾರೂ ಬಳಸಿಕೊಂಡಿರಲಾರರು – ಎಂಬ ಡಾಲ್ರಿಂಪಲ್ ಉದ್ಘೋಷವನ್ನು ಒಪ್ಪಬೇಕಾಗುತ್ತದೆ.
ಹದ ತಪ್ಪಿದ ವಿಸ್ತರಣೋದ್ಯಮ
ಒಂದು ದೇಶ ಇನ್ನೊಂದು ದೇಶದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವುದು ಹೊಸದೇನಲ್ಲ. ಭಾರತದ ವರ್ತಕರು ಪೂರ್ವ ಆಫ್ರಿಕಾದಲ್ಲಿಯೂ ನೈಋತ್ಯ ಏಷ್ಯಾದ ತಟವರ್ತಿ ದೇಶಗಳಲ್ಲಿಯೂ ವ್ಯಾಪಾರ ನಡೆಸುತ್ತಿದ್ದರು. ಚೋಳ ದೊರೆಗಳೂ ದೊಡ್ಡಪ್ರಮಾಣದ ವ್ಯಾಪಾರವನ್ನು ದೇಶಾಂತರಗಳಲ್ಲಿ ನಡೆಸುತ್ತಿದ್ದರು, ಮಾತ್ರವಲ್ಲ ರಕ್ಷಣೆಗಾಗಿ ತಮ್ಮ ಒಂದಷ್ಟು ಸೇನೆಗಳನ್ನೂ ಇರಿಸಿರುತ್ತಿದ್ದರು.
ಆ ಕಾಲದಲ್ಲಿ ಸೇನೆಗಳ ಆವಶ್ಯಕತೆ ಬೀಳುತ್ತಿದ್ದುದು ಪ್ರಮುಖವಾಗಿ ಕಡಲ್ಗಳ್ಳರ ಹಾವಳಿಯಿಂದ ತಮ್ಮ ಸರಂಜಾಮುಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ. ಅದೇ ರೀತಿಯಲ್ಲಿ ಈಸ್ಟ್ ಇಂಡಿಯ ಕಂಪೆನಿಯು ಆರಂಭಕಾಲದಲ್ಲಿ ಒಂದಷ್ಟು ಸೇನೆಯನ್ನು ಸಜ್ಜುಗೊಳಿಸಿಕೊಂಡದ್ದು ಅಸಹಜವೇನಾಗಿರಲಿಲ್ಲ. ತೀವ್ರ ವ್ಯತ್ಯಾಸ ಗೋಚರಿಸತೊಡಗಿದುದು 18ನೇ ಶತಮಾನದ ಉತ್ತರಾರ್ಧದಲ್ಲಿ ಈಸ್ಟ್ ಇಂಡಿಯ ಕಂಪೆನಿಯು ತನ್ನ ಸೇನೆಯ ಗಾತ್ರವನ್ನು ಬಹುಪಟ್ಟು ಹೆಚ್ಚಿಸಿಕೊಳ್ಳುತ್ತಹೋದಾಗ. ಆರಂಭದಲ್ಲಿ ಕಂಪೆನಿ ಸಿಪಾಯಿಗಳ ಪ್ರಮಾಣ ಹಲವು ಸಾವಿರದಷ್ಟೇ ಇದ್ದದ್ದು. 1820ರ ದಶಕದ ವೇಳೆಗೆ 2.60 ಲಕ್ಷದಷ್ಟು ಬೆಳೆದಿತ್ತು. 1799ರ ವೇಳೆಗೆ ಕಂಪೆನಿ ಸೇನೆಯು ಗಾತ್ರದಲ್ಲಿ ಇಂಗ್ಲೆಂಡಿನೊಳಗಿನ ಸೇನೆಯ 2ರಷ್ಟು ಆಗಿತ್ತು.
18ನೇ ಶತಮಾನದಲ್ಲಿ ಮೊಘಲ ಸುಲ್ತಾನರ ಬಳಿ ನೌಕಾದಳ ಇರಲಿಲ್ಲ. ಆ ಸನ್ನಿವೇಶವನ್ನು ಬಳಸಿಕೊಂಡು ಕಂಪೆನಿ ಭಾರತದ ಜವಳಿ ಉತ್ಪನ್ನಗಳನ್ನು ದೂರದ ವಿವಿಧ ದೇಶಗಳಲ್ಲಿ ಮಾರಾಟ ಮಾಡಿ ಹೇರಳ ಧನವನ್ನು ಶೇಖರಿಸಿಕೊಳ್ಳತೊಡಗಿತು. ಭಾರತದ ಜವಳಿ ಉತ್ಪನ್ನಗಳು ಜಗತ್ತಿನಲ್ಲಿಯೆ ಶ್ರೇಷ್ಠ ಮಟ್ಟದವಾಗಿದ್ದವು. ಹೀಗೆ ಅವಕ್ಕೆ ಅಪಾರ ಬೇಡಿಕೆ ಎಲ್ಲೆಡೆ ಇದ್ದಿತು. ಇದರ ಫಲವಾಗಿ ಆ ಕಾಲಖಂಡದಲ್ಲಿ ಇಡೀ ಜಗತ್ತಿನ ಉತ್ಪಾದನೆಯಲ್ಲಿ ಭಾರತದ ಪಾಲೇ ಶೇ. 37ರಷ್ಟು ಇದ್ದಿತು.
ಡಾಲ್ರಿಂಪಲ್ ಹೇಳುವಂತೆ ಕಂಪೆನಿಯ ವ್ಯಾಪಾರ ವೃದ್ಧಿಗೆ ಪೋಷಕಗಳಾದ ಎರಡು ಸಂಗತಿಗಳು – ಆಗ ಲಭ್ಯವಾಗಿದ್ದ ಮಿಲಿಟರಿ ತಂತ್ರಜ್ಞಾನ ಮತ್ತು ಭಾರತದೊಳಗಿನ ಶ್ರೀಮಂತ ವರ್ಗಗಳ ಪಾಲುದಾರಿಕೆ.
ಮುಂದುವರಿದ ದರೋಡೆ, ಕ್ರೌರ್ಯ
ಕಂಪೆನಿ ಆಡಳಿತ, ಅನಂತರದ ಬ್ರಿಟಿಷ್ ಪ್ರಭುತ್ವದ ನೇರ ಆಡಳಿತ – ಎರಡೂ ಭೂ-ಕಂದಾಯವನ್ನು ಬಹುಪಾಲು ಹೆಚ್ಚಿಸುವುದರ ಜೊತೆಗೆ ನಿರ್ಭಿಡೆಯಾಗಿ ಕೊಳ್ಳೆ ಲೂಟಿ ದರೋಡೆಗಳಲ್ಲಿಯೂ ತೊಡಗಿದವು. ಇದನ್ನೆಲ್ಲ ಭಾರತದ ಉದ್ಧಾರಕ್ಕಾಗಿ ಮಾಡುತ್ತಿರುವೆವೆಂಬ ಬ್ರಿಟಿಷರ ಕಥನವೂ ನೆಲೆಗೊಂಡಿತ್ತು. ಕಂಪೆನಿಯು ನೇರವಾಗಿಯೇ ನಡೆಸುತ್ತಿದ್ದ ಲೂಟಿಯನ್ನು ಅನಂತರದ ಬ್ರಿಟಿಷ್ ಸರ್ಕಾರವು ನಾಜೂಕು ಘೋಷಣೆಗಳಡಿಯಲ್ಲಿ ಮುಂದುವರಿಸಿತು. ಭಾರತದ ಪಾಲಿಗೆ ‘ಊದುವುದನ್ನು ಬಿಟ್ಟು ಬಾರಿಸುವುದನ್ನು’ ಪಡೆದುಕೊಂಡಂತೆ ಆಯಿತು.
1770ರಲ್ಲಿ ದೇಶೀಯರ ಬದುಕಿನ ಬಗೆಗೆ ಕಂಪೆನಿ ನಿರ್ಲಕ್ಷ್ಯ ತಳೆದದ್ದು ಪೂರ್ವಭಾರತದ ಮಹಾಕ್ಷಾಮವನ್ನು ದುರ್ಬರಗೊಳಿಸಿದ್ದಂತೆಯೇ ವಿನ್ಸ್ಟನ್ ಚರ್ಚಿಲ್ ಮಹಾಶಯನ ಧೋರಣೆ 1943ರ ಬಂಗಾಳ ಕ್ಷಾಮವನ್ನು ದುರ್ಬರಗೊಳಿಸಿ ಲಕ್ಷಾಂತರ ಜನರನ್ನು ಆಹುತಿ ತೆಗೆದುಕೊಂಡಿತು. ಗಂಜಿಕೇಂದ್ರಗಳನ್ನು ಏರ್ಪಡಿಸುವುದು, ಜನರಿಗೆ ಅಲ್ಪ ಮಾತ್ರದ ಉದ್ಯೋಗಗಳನ್ನಾದರೂ ಒದಗಿಸುವುದು – ಈ ದಿಕ್ಕುಗಳಲ್ಲಿ ಬ್ರಿಟಿಷ್ ಅಧಿಕಾರಿಗಳು ಕಿರುಬೆರಳನ್ನೂ ಎತ್ತಲಿಲ್ಲ. 1943ರಲ್ಲಿ ಮಹಾಯುದ್ಧ ಸನ್ನಿವೇಶವೂ ಇದ್ದದ್ದು ಹೆಚ್ಚು ಪ್ರಮಾಣದ ಸ್ಥಳೀಯ ಜನತೆಯ ಪ್ರಾಣಹಾನಿಗೆ ಕಾರಣವಾಯಿತು. ಸ್ಥಳೀಯರಿಗೆ ಅವಶ್ಯವಿದ್ದ ಧಾನ್ಯಗಳು ತಲಪದಿರಲೆಂದು ಯೋಚಿಸಿ ಧಾನ್ಯ ಹೊತ್ತ ಹಡಗುಗಳನ್ನು ಮಾರ್ಗದಲ್ಲಿಯೆ ಧ್ವಂಸ ಮಾಡಲಾಯಿತು. ಹೀಗೆ ಪ್ರಕೃತಿವಿಕೋಪದ ದಾಂಧಲೆಯ ಜೊತೆಗೆ ಮನುಷ್ಯರ ಉದ್ದೇಶಪೂರ್ವಕ ಕ್ರೌರ್ಯವೂ ಸೇರಿಕೊಂಡಿತು.
ಡಾಲ್ರಿಂಪಲ್ರವರ ಗ್ರಂಥದ ಉದ್ದಕ್ಕೂ ಕಥನವೂ ವಿಶ್ಲೇಷಣೆಯೂ ಜೊತೆಜೊತೆಗೇ ಸಾಗಿವೆ.
*****
ಅಂದಿನಂತೆ ಇಂದೂ
“ಜಗತ್ತಿನ ಮೊತ್ತಮೊದಲ ರಾಷ್ಟ್ರೋತ್ತರ ಎಂದರೆ ಮಲ್ಟಿನ್ಯಾಷನಲ್ ಎಂದು ಈಸ್ಟ್ ಇಂಡಿಯ ಕಂಪೆನಿಯನ್ನು ಕರೆಯಬಹುದು. ವ್ಯಾಪಾರ ಕುತಂತ್ರಗಳೇನು (Shenanigans), ಶಾಸಕರಿಗೆ ಲಂಚ ನೀಡಿಕೆಗಳೇನು, ಸಂಸತ್ ಸದಸ್ಯರೂ ಆಗಿದ್ದ ಶೇರ್ಹೋಲ್ಡರ್ಗಳ ಬೆಂಬಲದಿಂದ ಏಕಸ್ವಾಮ್ಯವನ್ನು ಉಳಿಸಿಕೊಳ್ಳುವುದೇನು – ಇಂತಹ [ಇಂದು ಸಾಮಾನ್ಯವಾಗಿರುವ] ಯಾವ ತಂತ್ರಗಳನ್ನೂ ಈಸ್ಟ್ ಇಂಡಿಯ ಕಂಪೆನಿ ಬಳಸದಿರಲಿಲ್ಲ. ಈಚಿನ ವರ್ಷಗಳಲ್ಲಿ ಆಂಗ್ಲೋ-ಪರ್ಷಿಯನ್ ಆಯಿಲ್ ಕಂಪೆನಿ ಮೊಸಾದೆಕ್ ಪ್ರಭುತ್ವವನ್ನು ಇಳಿಸಿದುದು (1953), ಅಮೆರಿಕದ ಸಿ.ಐ.ಎ. ಗ್ವಾಟೆಮಾಲಾ ಸರ್ಕಾರವನ್ನು ‘ಯುನೈಟೆಡ್ ಫ್ರೂಟ್’ ಮಾಧ್ಯಮದ ಮೂಲಕ ಉಧ್ವಸ್ತಗೊಳಿಸಿದುದು, ಇರಾಕ್ನಲ್ಲಿ ಎಕ್ಸಾನ್ ಮೊಬೈಲ್ ಮೊದಲಾದ ಲಾಭಕೋರ ಸಂಸ್ಥೆಗಳು ಬುಷ್ ಸರ್ಕಾರವನ್ನು ಬಳಸಿ ತಮ್ಮ ಆರ್ಥಿಕ ಸಾಮ್ರಾಜ್ಯವನ್ನು ಬೆಳೆಸಿಕೊಂಡದ್ದು, ಈಗಿನ ಡೊನಾಲ್ಡ್ ಟ್ರಂಪ್ ಸರ್ಕಾರದ ನಡವಳಿಗಳು – ಇಂತಹ ಅಸಂಖ್ಯ ಬೆಳವಣಿಗೆಗಳಲ್ಲಿ ನಾವು ಕಾಣುವುದು ಈಸ್ಟ್ ಇಂಡಿಯ ಕಂಪೆನಿ ವಿಧಾನಗಳ ಪ್ರತಿಬಿಂಬವನ್ನೇ” – ಎಂದಿದ್ದಾರೆ ಡಾಲ್ರಿಂಪಲ್ (ಗ್ರಂಥ ಬಿಡುಗಡೆಯ ಸಂದರ್ಭದ ಸಂದರ್ಶನದಲ್ಲಿ).
ಪ್ರಾಕೃತಿಕ ಕ್ಷಾಮ; ಮಾನವೀಯತೆಗೂ ಕ್ಷಾಮ
ಈಸ್ಟ್ ಇಂಡಿಯ ಕಂಪೆನಿಯ ಉದ್ಗಮ ಮತ್ತು ಕಾರ್ಯವಿಸ್ತಾರದ ವಿವಿಧ ಹಂತಗಳನ್ನು ಡಾಲ್ರಿಂಪಲ್ ಆಧಾರಸಹಿತವಾಗಿಯೂ ರೋಚಕವಾಗಿಯೂ ಚಿತ್ರಿಸಿದ್ದಾರೆ.
1770 ದಶಕದ ಆರಂಭದ ಕಾಲದಲ್ಲಿ ಪೂರ್ವಭಾರತವು ಅನಾವೃಷ್ಟಿ, ಕ್ಷಾಮಗಳಿಂದ ತತ್ತರಿಸುತ್ತಿತ್ತು. ಕಂಪೆನಿಯ ಅಧಿಕಾರಿಗಳಿಗಾದರೋ ಸ್ಥಳೀಯ ಜನರ ಅವರ್ಣನೀಯ ಬವಣೆಗಳಿಗಿಂತ ತಮ್ಮ ಆದಾಯ ಕುಸಿದೀತೆಂಬುದರ ಬಗೆಗೇ ಹೆಚ್ಚಿನ ಚಿಂತೆ ಇದ್ದಿತು. ಹಸಿವೆಯನ್ನು ಸಹಿಸಲಾಗದ ಅಸಂಖ್ಯ ಜನರು ಹೋಲಿಕೆಯಲ್ಲಿ ಸ್ವಲ್ಪ ಹೆಚ್ಚಿನ ಸುಭಿಕ್ಷ ಇದ್ದ ಮುರ್ಶಿದಾಬಾದ್ ಮೊದಲಾದೆಡೆಗೆ ಗುಳೆಹೋಗುವುದು ದಿನನಿತ್ಯದ ಸಂಗತಿಯಾಗಿತ್ತು. ಸತ್ತವರು ಎಷ್ಟೆಂದು ಲೆಕ್ಕವಿಲ್ಲ. ತಮ್ಮಲ್ಲಿದ್ದ ಒಂದೆರಡು ದನಗಳನ್ನೂ ಸಾಕಲಾರದೆ ಅವನ್ನು ರೈತರು ಮಾರುತ್ತಿದ್ದರು. ಮುರ್ಶಿದಾಬಾದ್ ಆಸುಪಾಸಿನಲ್ಲಿಯೇ ಪ್ರತಿದಿನ ಐದುನೂರಕ್ಕೆ ಕಡಮೆಯಿಲ್ಲದೆ ಜನರು ಸಾಯುತ್ತಿದ್ದರು. ಕೊಲ್ಕತಾದಲ್ಲಿ ಮೂರೇ ತಿಂಗಳ ಅವಧಿಯಲ್ಲಿ ಸತ್ತವರ ಸಂಖ್ಯೆ 76,000ದಷ್ಟು ಇದ್ದಿತು.
ಭಾರತದ ಹಲವಾರು ಭಾಗಗಳ ಜನರಿಗೆ ಕ್ಷಾಮವೇನೂ ಹೊಸದಾಗಿರಲಿಲ್ಲ. ಅದಕ್ಕೆ ಉಪಶಮನಕಾರಿಯಾದ ಧಾನ್ಯರಕ್ಷಣೆ ಮೊದಲಾದ ಮಾರ್ಗಗಳ ಮೂಲಕ ಸಾಧ್ಯವಿದ್ದಷ್ಟು ಕಾಲ ನಿರ್ವಾಹ ಮಾಡುತ್ತಿದ್ದರು. ಆದರೆ ಧನಶೇಖರಣೆಯ ಏಕೈಕ ಲಕ್ಷವಿದ್ದ ಈಸ್ಟ್ ಇಂಡಿಯ ಕಂಪೆನಿಯ ಅಧಿಕಾರಿಗಳು ಸ್ಥಳೀಯ ವ್ಯವಸ್ಥೆಗಳನ್ನು ಉಧ್ವಸ್ತಗೊಳಿಸಿದುದಷ್ಟೇ ಅಲ್ಲದೆ ನಿರ್ದಯವಾಗಿ ಕಂದಾಯ ವಸೂಲು ಮಾಡಿ ಲಂಡನ್ನಿಗೆ ರವಾನಿಸುತ್ತಿದ್ದರು. ಹೀಗಾಗಿ ಭಾರತದ ವಾಸ್ತವ ಸ್ಥಿತಿ ಇಂಗ್ಲೆಂಡಿನಲ್ಲಿದ್ದವರಿಗೆ ತಿಳಿಯುವುದಕ್ಕೇ ಬಹಳ ಸಮಯ ಹಿಡಿಯಿತು.
ಅದೊಂದು ವಿಪರ್ಯಾಸದ ಸ್ಥಿತಿಯಾಗಿತ್ತು. ಭಾರತದಲ್ಲಿ ಹಸಿವಿನಿಂದ ಸಾವಿರಗಟ್ಟಲೆ ಜನ ಸಾಯುತ್ತಿದ್ದರೆ ಇಂಗ್ಲೆಂಡಿನಲ್ಲಿ ಕಂಪೆನಿಯ ಬೊಕ್ಕಸ ಬೆಳೆಯುತ್ತಿತ್ತು. ಇದು ಸಾಲದೆಂಬಂತೆ ಕಂಪೆನಿ ಅಧಿಕಾರಿಗಳ ಭ್ರಷ್ಟಾಚಾರವೂ ಮುಗಿಲು ಮುಟ್ಟಿತ್ತು. ಅದರ ಅಗಾಧ ಪ್ರಮಾಣವನ್ನೂ ಕಂಪೆನಿಯ ಅಧಿಕಾರಿಗಳು ಭಾರತದಲ್ಲಿ ಸ್ಥಳೀಯರ ಮೇಲೆ ನಡೆಸುತ್ತಿದ್ದ ದೌರ್ಜನ್ಯಸರಣಿಗಳನ್ನೂ ಕಡೆಗೆ ಇಂಗ್ಲೆಂಡಿನಲ್ಲಿದ್ದ ವರಿಷ್ಠರು ಲಕ್ಷ್ಯಕ್ಕೆ ತೆಗೆದುಕೊಳ್ಳಲೇಬೇಕಾದ ಸ್ಥಿತಿಯುಂಟಾಯಿತು. ಒಟ್ಟು ಸುಮಾರು 30 ಲಕ್ಷದಷ್ಟು ಜನ ಸ್ಥಳೀಯರು ಕಂಪೆನಿ ಧೋರಣೆಗಳ ಫಲಿತವಾಗಿ ಮೃತವಾದದ್ದನ್ನು ಗುಟ್ಟಾಗಿ ಮುಚ್ಚಿಡುವುದು ಸಾಧ್ಯವೆ?
ಅಧಃಪಾತ
ಕ್ಲೈವ್ ಮೊದಲಾದವರ ರಾಕ್ಷಸವರ್ತನೆ ಚರ್ಚಿತವಾಗತೊಡಗಿದುದು ಹೀಗೆ. ಈ ಚರ್ಚೆಯ ಇನ್ನೊಂದು ಮುಖವೆಂದರೆ ಭ್ರಷ್ಟಾಚಾರದ ಕಾರಣದಿಂದಾಗಿ ಕಂಪೆನಿ ತಾನೇ ದಿವಾಳಿಯಾಗತೊಡಗಿದುದು. ಕಂಪೆನಿಯನ್ನು ಹೇಗಾದರೂ ಉಳಿಸಲು ಬ್ಯಾಂಕ್ ಆಫ್ ಇಂಗ್ಲೆಂಡ್ ಕೋಟ್ಯಂತರ ಪೌಂಡ್ ನೆರವನ್ನು ನೀಡಬೇಕಾಯಿತು.
ಮೇಲಣ ವಿದ್ಯಮಾನಗಳನ್ನು ಶಬ್ದಾಂತರಗಳಲ್ಲಿ ಹೇಳುವುದಾದರೆ: ಇಂಗ್ಲೆಂಡಿನ ಆರ್ಥಿಕತೆಯನ್ನು ಸಾಕುತ್ತಿದ್ದುದು ಭಾರತ!
ಭಾರತವನ್ನು ಮನಬಂದಂತೆ ದೋಚಿದ್ದುದು ಮಾತ್ರವಲ್ಲದೆ ತನ್ನ ಅಸೀಮ ಭ್ರಷ್ಟಾಚಾರವನ್ನು ಕ್ಲೈವನು ಸಮರ್ಥಿಸಿಕೊಂಡದ್ದೂ ಅದನ್ನು ಲಾಭಕೋರ ಹೂಡಿಕೆದಾರರೂ ರಾಜಕಾರಣಿಗಳೂ ಬೆಂಬಲಿಸಿದುದೂ ಒಂದು ಲಜ್ಜಾಸ್ಪದ ಇತಿಹಾಸ.
ತನ್ನ ಪಾಪದ ಕುಂಭ ತುಂಬಿದಾಗ ಕ್ಲೈವನು ತನ್ನ ರಂಢೋಲುಗಳಿಗೆ ಮುಕ್ತಾಯ ಹಾಡಿ ಆತ್ಮಹತ್ಯೆಗೆ ಶರಣಾದ (22, ನವೆಂಬರ್ 1774). ಕ್ಲೈವನು ಸತ್ತಾಗ ಅವನಿಗಾಗಿ ಶೋಕಪಟ್ಟವರು ವಿರಳ. ಅನಾಮಧೇಯನಂತೆಯೇ ಅವನ ಅಂತ್ಯಕ್ರಿಯೆ ಮುಗಿಯಿತು. ಅವನ ಬಗೆಗೆ ಸ್ಯಾಮುಯೆಲ್ ಜಾನ್ಸನ್ ಮಾಡಿದ ವ್ಯಾಖ್ಯೆ ಹೀಗಿದ್ದಿತು:”[Clive] had acquired his fortune by such crimes that his consciousness of them impelled him to cut his own throat.”
ಆ ಸನ್ನಿವೇಶದಲ್ಲಿ ಜಾರಿಗೆ ಬಂದದ್ದು Regulating Act.
ಹೇಸ್ಟಿಂಗ್ಸ್ ತಲೆದಂಡ
ಅವಧ ಪ್ರಾಂತದ ನವಾಬನಿಗೆ ದೇಶರಕ್ಷಣೆಗಾಗೆಂದು ಕಂಪೆನಿ ಸೇನೆಯನ್ನು ಕಳಿಸಿದುದಕ್ಕಾಗಿ ಹೇಸ್ಟಿಂಗ್ಸ್ನು ವಿಚಾರಣೆಗೆ ಒಳಪಡಬೇಕಾಯಿತು. ಕ್ಲೈವನು ನಡೆಸಿದ್ದ ದೌಷ್ಟ್ಯಗಳ ದುರ್ವಾಸನೆ ಹೇಸ್ಟಿಂಗ್ಸ್ನಿಗೂ ಮೆತ್ತಿಕೊಂಡಿತು. ವಾಸ್ತವವಾಗಿ ಹೇಸ್ಟಿಂಗ್ಸ್ನು ಬ್ರಿಟಿಷ್ ಅಧಿಕಾರಿಗಳ ಆಡಳಿತವನ್ನು ಹೆಚ್ಚು ಸಭ್ಯಗೊಳಿಸುವ ಆಶಯ ಇದ್ದವನು. ಆದರೆ ಕಾಲಗತಿ ಅವನಿಗೆ ಸಾಕಷ್ಟು ಅನುಕೂಲಕರವಾಗಿರಲಿಲ್ಲ. ಆದರೂ ಕಾನೂನು ಕಟ್ಟಳೆಗಳ ಸ್ಥಿರೀಕರಣ, ಕಂದಾಯ ಪದ್ಧತಿಗಳ ಸುಧಾರಣೆ, ಲಾಭಕೋರ ಖಾಸಗಿ ವರ್ತಕರ ಮೇಲೆ ಕಡಿವಾಣ – ಈ ಹಲವು ದಿಶೆಗಳಲ್ಲಿ ಹೇಸ್ಟಿಂಗ್ಸ್ ಒಂದಷ್ಟು ಸಫಲತೆ ಸಾಧಿಸಿದ. ಸ್ವಭಾವತಃ ಹೇಸ್ಟಿಂಗ್ಸ್ ಭಾರತದ ಪರಂಪರೆಯ ಮತ್ತು ಸಂಸ್ಕೃತಿಯ ಪ್ರಶಂಸಕನಾಗಿದ್ದ.
ಬಂಗಾಲಿ, ಪರ್ಶಿಯನ್ ಭಾಷೆಗಳನ್ನು ಸ್ವಾಧೀನಪಡಿಸಿಕೊಂಡಿದ್ದ. ಸಂಸ್ಕೃತನಿಷ್ಠ ಭಾರತೀಯ ವಾಙ್ಮಯದ ವ್ಯವಸ್ಥಿತ ಅಧ್ಯಯನಕ್ಕೆ ನಾಂದಿಹಾಡಿದವನೆಂದು ಈಗಲೂ ಗೌರವಿಸಲ್ಪಡುವ ವಿಲಿಯಂ ಜೋನ್ಸ್ನನ್ನು ಪೆÇ್ರೀತ್ಸಾಹಿಸಿದವನು ಹೇಸ್ಟಿಂಗ್ಸ್. ಈ ಇಬ್ಬರ ಸಾಹಚರ್ಯದ ಫಲವಾಗಿಯೇ ಏಶಿಯಾಟಿಕ್ ಸೊಸೈಟಿ ರಚನೆಯಾದದ್ದು. ಹೇಸ್ಟಿಂಗ್ಸ್ನು ಭಗವದ್ಗೀತೆಯ ಗಾಢ ಆರಾಧಕನಾಗಿದ್ದುದು ಸುವಿದಿತವೇ ಆಗಿದೆ.
ಇದಕ್ಕೆ ವಿರುದ್ಧವೆನಿಸುವ ರೀತಿಯಲ್ಲಿ ಫಿಲಿಪ್ ಫ್ರಾನ್ಸಿಸ್, ಮೆಕಾಲೇ ಮೊದಲಾದ ಪ್ರಭಾವೀ ವ್ಯಕ್ತಿಗಳು ಭಾರತೀಯ ಸಂಸ್ಕೃತಿಯ ಬಗೆಗೆ ಪೂರ್ಣ ಅವಹೇಳನಕರ ನಿಲುಮೆಗಳನ್ನೇ ತಳೆದಿದ್ದುದರಿಂದಾಗಿ ಭಾರತದಲ್ಲಿನ ಶಿಕ್ಷಣಪದ್ಧತಿ, ಇತಿಹಾಸಕಥನ ಮೊದಲಾದವು ದಾರಿತಪ್ಪಿದುದು ದಾಖಲೆಗೊಂಡಿರುವ ಸಂಗತಿ.
*****
ಪ್ಲಾಸಿ ಯುದ್ಧದ ಕಾಲದಲ್ಲಿ – ಬಹುಶಃ ಬ್ರಿಟಿಷ್ ರೀತಿನೀತಿಗಳÀ ಅಪರಿಚಯದ ಕಾರಣದಿಂದ – ಭಾರತ ಹಿನ್ನಡೆಯನ್ನು ಅನುಭವಿಸಬೇಕಾಯಿತು. ಆದರೆ ಅಲ್ಪಕಾಲದಲ್ಲಿ ಭಾರತದ ಶೌರ್ಯವಂತಿಕೆ ಗರಿಗೆದರಿತು. ಹೈದರಾಲಿಯ ಸಮರಶಕ್ತಿಯನ್ನು ಕಂಡು ಬ್ರಿಟಿಷರು ದಿಗ್ಭ್ರಾಂತರೇ ಆದರು. ಬ್ರಿಟಿಷರಿಗಿಂತ ಮುಂಚೆಯೇ ರಾಕೆಟ್ ತಂತ್ರಜ್ಞಾನ ಭಾರತೀಯರಿಗೆ ವಶವಾಗಿತ್ತು. ಕಂಪೆನಿಯು ಹೈದರನೊಡನೆ ಒಂದು ಬಗೆಯ ಒಪ್ಪಂದ ಮಾಡಿಕೊಳ್ಳಬೇಕಾಯಿತು.
ಅನಂತರದ ದಿನಗಳಲ್ಲಿ ಹೈದರ್, ಟಿಪ್ಪು, ಹೈದರಾಬಾದಿನ ನಿಜಾಮ – ಇವರ ಒಕ್ಕೂಟ ಏರ್ಪಟ್ಟು ಕಂಪೆನಿ ಸೇನೆಯನ್ನು ದಕ್ಷಿಣದಿಂದ ಹಿಮ್ಮೆಟ್ಟಿಸಿದರು. ಈ ತುಮುಲಗಳ ಪರಿಣಾಮವಾಗಿ ಶಾ ಆಲಂನಿಗೂ ಒಂದಷ್ಟು ಪುನಶ್ಚೇತನ ಬಂದದ್ದು ಕಂಪೆನಿಯ ನಿದ್ದೆಗೆಡಿಸಿತು. ಆದರೆ ಶಾ ಆಲಂ ದರ್ಬಾರಿನಲ್ಲಿ ಹಿಂದಿನ ಶ್ರೀಮಂತಿಕೆಯಾಗಲಿ ಪ್ರತಿಷ್ಠೆಯಾಗಲಿ ಉಳಿದಿರಲಿಲ್ಲ.
1780ರ ದಶಕದಲ್ಲಿ ನಡೆದವು – ಎಡ್ಮಂಡ್ ಬರ್ಕ್ ನೇತೃತ್ವದಲ್ಲಿ ವಾರನ್ ಹೇಸ್ಟಿಂಗ್ಸ್ನ ವಿರುದ್ಧ ಮಹಾಭಿಯೋಗ, ಹೇಸ್ಟಿಂಗ್ ಸ್ಥಾನದಲ್ಲಿ ಕಾರ್ನವಾಲಿಸನ ನಿಯುಕ್ತಿ, ಮೈಸೂರು ಯುದ್ಧಗಳು, ಇತ್ಯಾದಿ. ಅನಂತರ ಗಾದಿಗೇರಿದ ವೆಲ್ಲೆಸ್ಲಿ ಆರಂಭದಿಂದ ಸಂಸ್ಥಾನಿಕ ಭಾರತವನ್ನು ಹತಪ್ರಭಗೊಳಿಸುವುದರಲ್ಲಿ ಲಕ್ಷ್ಯವನ್ನು ನೆಟ್ಟಿದ್ದ; ಒಂದಷ್ಟು ಸಫಲನೂ ಆದ. ತಾನು ಶೇಖರಿಸಿಕೊಂಡಿದ್ದ ಸೇನಾಪ್ರಾಬಲ್ಯದಿಂದಾಗಿ ಟಿಪ್ಪುವನ್ನು ಸುಲಭವಾಗಿಯೇ ಪರಾಭವಗೊಳಿಸಿದ. ವೆಲ್ಲೆಸ್ಲಿಯ ಸಾಹಸಗಳ ಫಲವಾಗಿ ಕಂಪೆನಿಸಾಮ್ರಾಜ್ಯವೇನೋ ಬೆಳೆದಿತ್ತು; ಆದರೆ ಅದರ ಬೊಕ್ಕಸ ಖಾಲಿಯಾಗಿತ್ತು. ಭಾರತದಿಂದ ಇಂಗ್ಲೆಂಡಿಗೆ ಸಂಪತ್ತು ಹರಿಯುತ್ತಿದ್ದುದು ಮುಗಿದು ಈಗ ಕಂಪೆನಿಯ ಪೆÇೀಷಣೆಗೇ ಇಂಗ್ಲೆಂಡಿನಿಂದ ಹಣ ಕಳಿಸಬೇಕಾದ ಸ್ಥಿತಿ ಉಂಟಾಗಿತ್ತು.
ಕೊನೆಗೂ ಎಚ್ಚೆತ್ತ ಬ್ರಿಟಿಷ್ ಸಂಸತ್ತು
1803ರ ಅಂತ್ಯದ ವೇಳೆಗೆ ಬ್ರಿಟಿಷ್ ಪ್ರಭುತ್ವವು ಭಾರತದಿಂದ ವೆಲ್ಲೆಸ್ಲಿಯನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿತು. ಅದೇ ಕಾಲದಲ್ಲಿ ಕಂಪೆನಿಯ ವ್ಯವಹಾರಗಳಿಗೆ ಬ್ರಿಟಿಷ್ ಸಂಸತ್ತಿನಲ್ಲಿ ತೀಕ್ಷ್ಣ ವಿರೋಧ ವ್ಯಕ್ತವಾಗುತ್ತ ಹೋಗಿತ್ತು. ಈ ವಿರೋಧವು ಉತ್ತುಂಗಕ್ಕೇರಿದಾಗ ಬ್ರಿಟಿಷ್ ಸಂಸತ್ತು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಲೇಬೇಕಾಯಿತು. ಕಂಪೆನಿಗೆ ನೀಡಿದ್ದ ಅಧಿಕಾರಗಳನ್ನು ರದ್ದುಪಡಿಸುವ ‘ಚಾರ್ಟರ್ಡ್ ಬಿಲ್’ 1833ರಲ್ಲಿ ಬ್ರಿಟಿಷ್ ಸಂಸತ್ತಿನಲ್ಲಿ ಅಂಗೀಕಾರ ಪಡೆಯಿತು.
1857ರ ನಡುಭಾಗದಲ್ಲಿ ಕಂಪೆನಿಯ ಖಾಸಗಿ ಸೇನೆಯೇ ಕಂಪೆನಿಯ ವಿರುದ್ಧ ಬಂಡೆದ್ದುದು, ಕಂಪೆನಿ ಸೇನೆಯು ಸಾವಿರಾರು ಸ್ಥಳೀಯರ ಮಾರಣಹೋಮ ನಡೆಸಿದುದು, ಅದರ ಹಿಂದುಗೂಡಿ ಕಂಪೆನಿಯ ಸಮಸ್ತ ಅಧಿಕಾರಗಳನ್ನು ಬ್ರಿಟಿಷ್ ಸಂಸತ್ತು ರದ್ದುಗೊಳಿಸಿದುದು, ಭಾರತದ ವ್ಯವಹಾರಗಳ ಉಸ್ತುವಾರಿಯನ್ನು ಬ್ರಿಟಿಷ್ ಪ್ರಭುತ್ವವೇ ವಹಿಸಿಕೊಂಡದ್ದು – ಈ ಬೆಳವಣಿಗೆಗಳು ಸರ್ವವಿದಿತ.
*****
ಮೇಲೆ ಸಂಕ್ಷಿಪ್ತವಾಗಿ ರೇಖಿಸಿದ ಕಾಲಖಂಡದ ಇತಿಹಾಸದ ಬಾಹ್ಯ ಹಂತಗಳು ಜನಜನಿತವೇ. ವಿಲಿಯಂ ಡಾಲ್ರಿಂಪಲ್ ಅವರ ‘ದಿ ಅನಾರ್ಕಿ’ ಗ್ರಂಥವು ಶೋಧಪೂರ್ವಕ ವಿಶ್ಲೇಷಿಸಿರುವುದು ಆ ಪರ್ವವನ್ನೇ. ವ್ಯತ್ಯಾಸವಿರುವುದು ಆ ದಶಕಗಳ ಬೆಳವಣಿಗೆಗಳ ಒಳಸುಳಿಗಳನ್ನು ಶೋಧಿಸಿ ತೆಗೆದು ಅವರು ಪ್ರಕಟಿಸಿರುವುದು.
ಮಿಥ್ಯಾಜ್ಞಾನ ನೀಗಬೇಕು
ಈ ಇತಿಹಾಸದ ಸ್ಥೂಲಪರಿಚಯ ಅಭ್ಯಾಸಿಗಳಿಗೆ ಇದ್ದರೂ ವಿವರಗಳ ಬಗೆಗೆ ಕರಾರುವಾಕ್ಕಾದ ಗ್ರಹಿಕೆ ಇದೆಯೆನ್ನುವಂತಿಲ್ಲ. ಬ್ರಿಟಿಷ್ ಪ್ರಭುತ್ವ ಮತ್ತು ಈಸ್ಟ್ ಇಂಡಿಯ ಕಂಪೆನಿಯ ನಡುವಣ ನಂಟಸ್ತಿಕೆಯ ಬಗೆಗೆ ವ್ಯಾಪಕ ಮಿಥ್ಯಾಜ್ಞಾನ ಹರಡಿದೆ. ಅದಕ್ಕೆ ಚಿಕಿತ್ಸಕವಾಗಲೆಂಬ ಆಶಯದಿಂದಲೇ ಡಾಲ್ರಿಂಪಲ್ ಈ ಶೋಧಕೃತಿಯ ರಚನೆಗೆ ಕೈಹಾಕಬೇಕಾಗಿ ಬಂದುದು.
ಹೀಗೆಂದಿದ್ದಾರೆ ಡಾಲ್ರಿಂಪಲ್:
“ಭಾರತವನ್ನು (ಈಸ್ಟ್ ಇಂಡಿಯ ಕಂಪೆನಿ ಕ್ರಮಕ್ರಮವಾಗಿ ವಶಪಡಿಸಿಕೊಂಡದ್ದು ಜಗತ್ತಿನ ಇತಿಹಾಸದಲ್ಲಿಯೇ ಹೋಲಿಕೆಯಿಲ್ಲದ ಕಾರ್ಪೋರೇಟ್ ಹಿಂಸಾಪರ್ವವಾಗಿದೆ… ತನ್ನದೇ ಸೇನೆ ಕಟ್ಟಿಕೊಂಡು ಕಂಪೆನಿ ನಡೆಸಿದ ದಾಳಿಗಳಿಗೂ ಕೊಳ್ಳೆ-ಲೂಟಿಗಳಿಗೂ ಹೋಲಿಸಿದರೆ ಈಗಿನ ಎಕ್ಸಾನ್-ಮೊಬಿಲ್, ವಾಲ್ಮಾರ್ಟ್, ಗೂಗಲ್ ಮೊದಲಾದವುಗಳ ಏಕಸ್ವಾಮ್ಯಸ್ಥಾಪನೆಯ ರೀತಿಯು ಲೆಕ್ಕಕ್ಕೇ ಸಿಗದಷ್ಟು ಶೈಶವ ಮಟ್ಟದ್ದು… ಅಧಿಕೃತ ಪ್ರಭುತ್ವಕ್ಕೂ ಕಂಪೆನಿ-ಕಾಪೆರ್Çರೇಷನ್ಗಳಿಗೂ ನಡುವಣ ಘರ್ಷಣೆ ಈಗಲೂ ನಡೆದಿದೆಯಷ್ಟೆ. ಅಧಿಕೃತ ಸರ್ಕಾರದ ನಿಯಂತ್ರಣವನ್ನು ಬಗೆಬಗೆಯಾಗಿ ನಿರೋಧಿಸುವುದು ಕಂಪೆನಿ- ಕಾರ್ಪೋರೇಷನ್ಗಳ ನಿತ್ಯ ಜಾಯಮಾನವೇ ಆಗಿದೆ.” (ಪುಟ 394)
ಇತ್ತೀಚಿನ ವಿಖ್ಯಾತ ಧೀಮಂತರೊಬ್ಬರು ನೀಡಿರುವ ವಿಶ್ಲೇಷಣೆಯನ್ನು ಡಾಲ್ರಿಂಪಲ್ ಉದ್ಧರಿಸಿದ್ದಾರೆ: “ಒಂದೊಮ್ಮೆ ಸಮಾಜದ ಅಧಿನಿರೀಕ್ಷಕರಾಗಿ ರಾಜ್ಯಕರ್ತರಿಗೂ ರಾಜ್ಯಾಂಗಕ್ಕೂ ಇದ್ದ ಸ್ಥಾನವನ್ನು ಈಗ ಕಾರ್ಪೋರೇಟ್ ಸಂಸ್ಥೆಗಳು ಆಕ್ರಮಿಸಿವೆ. ಅಧಿಕಾರ, ಹಣ, ಅನಿಯಂತ್ರಣಗಳ ಸಂಮ್ಮಿಶ್ರಣ ದುಷ್ಫಲಾನುಭವಿಗಳಾಗುವವು ವಿಶೇಷವಾಗಿ ದುರ್ಬಲ ರಾಷ್ಟ್ರಗಳು… ಇದಕ್ಕೆ ಈಚಿನ ನಿದರ್ಶನವೆಂದರೆ ಭಾರತದಲ್ಲಿ 2009-2014ರ ವರ್ಷಗಳ ಕಾಂಗ್ರೆಸ್ ಆಡಳಿತದಡಿಯಲ್ಲಿ ತಲೆದೋರಿದ ಭ್ರಷ್ಟಾಚಾರಸರಣಿಗಳು: ಭೂ-ಸಂಬಂಧಿತ ಘೋಟಾಳಗಳು, ಗಣಿಸಂಪತ್ತಿನ ಪರಭಾರೆ, ಮೊಬೈಲ್ ಫೆÇೀನ್ ಸ್ಪೆಕ್ಟ್ರಂ ಗುತ್ತಿಗೆಯ ಅಗ್ಗದ ಮಾರಾಟದ ದುವ್ರ್ಯವಹಾರ….. ಒಂದೇ ಎರಡೇ!”
2015ರ ಸೆಪ್ಟೆಂಬರಿನಷ್ಟು ಈಚೆಗೆ ಆಗಿನ ರಿಜರ್ವ್ ಬ್ಯಾಂಕಿನ ಗವರ್ನರ್ ರಘುರಾಂ ರಾಜನ್ ಮುಂಬಯಿಯಲ್ಲಿ ಮಾಡಿದ ಭಾಷಣವನ್ನು ಡಾಲ್ರಿಂಪಲ್ ಉದ್ಧರಿಸಿದ್ದಾರೆ: “ಈಚಿನ ವಿದ್ಯಮಾನಗಳನ್ನು ನೋಡುವಾಗ ಹಿಂದೆ ಇದ್ದ ‘ಕ್ರೋನಿ ಸೋಶಿಯಲಿಸ್ಮ್’ನ ಸ್ಥಾನದಲ್ಲಿ ಈಚಿನ ವರ್ಷಗಳಲ್ಲಿ ‘ಕ್ರೋನಿ ಕ್ಯಾಪಿಟಲಿಸ್ಮ್’ ಅಧಿಷ್ಠಿತವಾಗಿದೆಯೆನಿಸುತ್ತದೆ. ಜಮೀನು, ಪ್ರಾಕೃತಿಕ ಸಂಪನ್ಮೂಲಗಳು, ಸ್ಪೆಕ್ಟ್ರಮ್ – ಎಲ್ಲವೂ ಭ್ರಷ್ಟರಾಜಕಾರಣಿಗಳ ಕೈಸೇರಿದ ರಿಷ್ವತ್ತುಗಳಿಗೆ ಪ್ರತಿಯಾಗಿ ವಿಲೇವಾರಿಯಾಗಿವೆ ಎನಿಸುತ್ತದೆ. ಪಾರದರ್ಶಕತೆಯ ಮತ್ತು ಮುಕ್ತಸ್ಪರ್ಧೆಯ ಅಭಾವವಿದ್ದಲ್ಲಿ ಬೆಳೆಯುವ ‘ಕ್ರೋನಿ ಕ್ಯಾಪಿಟಲಿಸ್ಮ್’ ದೇಶದ ಆರ್ಥಿಕತೆಯ ಮೂಲಕ್ಕೆ ಕುಟಾರಪ್ರಾಯವಾಗುತ್ತದೆ. ಅದು ಪ್ರಜಾಪ್ರಭುತ್ವಾನುಗುಣ ವ್ಯವಸ್ಥೆಯನ್ನು ಕೊಲ್ಲುತ್ತದೆ.”
ಈ ಮಾತುಗಳಾದರೂ ಮುನ್ನೂರು ವರ್ಷ ಹಿಂದೆ ಈಸ್ಟ್ ಇಂಡಿಯ ಕಂಪೆನಿಯ ಸಂದರ್ಭದಲ್ಲಿ ಹಾರೇಸ್ ವಾಲ್ಪೆÇೀಲ್ ಮತ್ತಿರರರು ಆಡಿದ್ದ ಮಾತುಗಳ ಪ್ರತಿಧ್ವನಿಯಂತೆಯೇ ಇವೆ.
ಇತಿಹಾಸಾಸಕ್ತರು ಅವಶ್ಯ ಓದಬೇಕಾದ ಶೋಧಕೃತಿ ವಿಲಿಯಂ ಡಾಲ್ರಿಂಪಲ್ರ ‘ದ ಅನಾರ್ಕಿ’.