ಇದು ಐವತ್ತು ವರ್ಷಗಳ ಹಿಂದಿನ ಮಾತು. ಭೌಗೋಳಿಕ ದೃಷ್ಟಿಯಿಂದ ಅತ್ಯಂತ ದೊಡ್ಡ ದೇಶವಾಗಿದ್ದ ಸೋವಿಯತ್ ಒಕ್ಕೂಟ ಮತ್ತು ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಜನಸಂಖ್ಯೆಯಿದ್ದ ಚೀನಾ ಸೇರಿದಂತೆ, ಪ್ರಪಂಚದ ಮೂರನೇ ಒಂದಕ್ಕಿಂತಲೂ ಹೆಚ್ಚಿನ ಭೂಭಾಗದ ಮೇಲೆ ಕೆಂಪುಧ್ವಜ ಹಾರಾಡುತ್ತಿತ್ತು. ಇಡೀ ಸಾಂಸ್ಕೃತಿಕವಲಯ ಕೆಂಪುನೀರಿನಲ್ಲಿ ಅದ್ದಿಹೋಗಿತ್ತು. ಆದಿಶಂಕರರ ಜನ್ಮಭೂಮಿ ಕೇರಳದಲ್ಲಿ ಮತಪೆಟ್ಟಿಗೆಯ ಮೂಲಕ ಕಮ್ಯೂನಿಸ್ಟರು ಅಧಿಕಾರ ಸಾಧಿಸಿದ್ದರು.
ನಮ್ಮ ದೇಶದಲ್ಲಿ ಕಮ್ಯೂನಿಸ್ಟ್ ಪಕ್ಷ ಮುಖ್ಯ ವಿರೋಧಪಕ್ಷವಾಗಿತ್ತು ಎಂಬುದಕ್ಕಿಂತ ಹೆಚ್ಚಾಗಿ ಆಡಳಿತಾರೂಢ ಕಾಂಗ್ರೆಸಿನ ದೇಹದಲ್ಲಿ ಆತ್ಮದಂತೆ ಸೇರಿಹೋಗಿತ್ತು. ರೈತ, ಕಾರ್ಮಿಕ, ವಿದ್ಯಾರ್ಥಿ ಕ್ಷೇತ್ರಗಳಲ್ಲಿ ಕಮ್ಯೂನಿಸ್ಟರನ್ನು ಹೊರತುಪಡಿಸಿದರೆ ಬೇರೆ ಸಂಘಟನೆಗಳನ್ನು ಯಾರೂ ಸಂಘಟನೆಗಳೆಂದೇ ಪರಿಗಣಿಸುತ್ತಿರಲಿಲ್ಲ. ಕಾಂಗ್ರೆಸ್ ಸರಕಾರ ತಾನೇ ಮುಂದೆ ನಿಂತು ಸರಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಕಮ್ಯೂನಿಸ್ಟ್ ಸಂಘಟನೆಗಳನ್ನು ಬೆಳೆಸಲು ನೆರವಾಗುತ್ತಿತ್ತು. ಮುಂಬಯಿ ಮತ್ತು ಕೋಲ್ಕತಾ ಸೇರಿದಂತೆ ಅನೇಕ ಔದ್ಯೋಗಿಕ ನಗರಗಳಲ್ಲಿ ನಗರಸಭಾ ಸದಸ್ಯರಿಂದ ಮೊದಲ್ಗೊಂಡು ಸಂಸದರವರೆಗೂ ಕಮ್ಯೂನಿಸ್ಟ್ ಪ್ರತಿನಿಧಿಗಳೇ ವ್ಯಾಪಿಸಿದ್ದರು. ದೇಶದ ಕೈಗಾರಿಕಾವಲಯದ ನೀತಿ-ನಿರ್ಧಾರಣೆ ಕಮ್ಯೂನಿಸ್ಟ್ ಪಕ್ಷದ ಕಚೇರಿಯಲ್ಲಾಗುತ್ತಿತ್ತು. ದೇಶದ ಅನೇಕ ಪ್ರಖ್ಯಾತ ವಿಜ್ಞಾನಿಗಳು ಕಮ್ಯೂನಿಸ್ಟ್ ಪಕ್ಷದ ಸದಸ್ಯರಾಗಿದ್ದರು. ದೇಶದ ಪ್ರಮುಖ ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣಸಂಸ್ಥೆಗಳು ಕಮ್ಯೂನಿಸ್ಟರನ್ನು ತಯಾರಿಸುವ ಕಾರ್ಖಾನೆಗಳಾಗಿಬಿಟ್ಟಿದ್ದವು. ಇದಕ್ಕೆಲ್ಲ ಕಳಶಪ್ರಾಯವೆಂಬಂತೆ ದೇಶದ ರಾಜಧಾನಿಯಲ್ಲೇ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವನ್ನು ತೆರೆಯಲಾಗಿತ್ತು. ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರೇ ಇಲ್ಲಿ ಪ್ರಾಧ್ಯಾಪಕರು ಮತ್ತು ಅನೇಕ ವಿದ್ಯಾರ್ಥಿಗಳೂ ಸಹ.
ಇದನ್ನೆಲ್ಲ ಪ್ರಶ್ನಿಸುವವರೇ ಇರಲಿಲ್ಲ. ಪ್ರಶ್ನಿಸುವ ಸಾಧ್ಯತೆಗಳನ್ನೇ ಹಾಸ್ಯಾಸ್ಪದವೆಂದು ಭಾವಿಸಲಾಗುತ್ತಿತ್ತು. ಪ್ರಶ್ನಿಸುವ ಕಡೆಗಳಲ್ಲಿ ಉತ್ತರ ಹೇಳುವವರೂ ಕಮ್ಯೂನಿಸ್ಟರೇ ಆಗಿದ್ದರು. ನ್ಯಾಯಾಂಗದಲ್ಲೂ ಕಮ್ಯೂನಿಸ್ಟ್ ಚಿಂತನೆಯೇ ಹರಡಿತ್ತು. ಕೆಲವೇ ವರ್ಷಗಳ ಹಿಂದೆ ಕೇರಳದ ಕಮ್ಯೂನಿಸ್ಟ್ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದವರು ಕೇರಳದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡರು. ಆನಂತರದಲ್ಲಿ ಅವರೇ ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿಯೂ ನೇಮಕಗೊಂಡರು. ಪ್ರತಿಭೆ, ಸೇವಾಜ್ಯೇಷ್ಠತೆ ಇವೆಲ್ಲವನ್ನೂ ಗೌಣವಾಗಿಸಿ ಕಮ್ಯೂನಿಸ್ಟರನ್ನು ಆಯಕಟ್ಟಿನ ಸ್ಥಾನಗಳಲ್ಲಿ ನಿರ್ಭಿಡೆಯಿಂದ ನೇಮಿಸಲಾಗುತ್ತಿತ್ತು.
ಹೀಗೆ ಯತ್ರ-ತತ್ರ-ಸರ್ವತ್ರವೂ ಕಮ್ಯೂನಿಸ್ಟ್ ಚಿಂತನೆಯೇ ವ್ಯಾಪಿಸಿದ್ದ ಈ ಕಾಲಘಟ್ಟದಲ್ಲಿ ಏಕೀಕೃತ ಅಂಚೆ ಮತ್ತು ತಂತಿ ಇಲಾಖೆಯಲ್ಲಿನ ಒಂದು ಬೃಹತ್ ವಿಭಾಗ ರೈಲು ಅಂಚೆಸೇವೆಯ ಕಾರ್ಮಿಕ ಸಂಘಟನೆಯಲ್ಲಿ ಅಖಿಲ ಭಾರತೀಯ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ಘೋಷಿತವಾಯಿತು. ಸ್ವಾತಂತ್ರ್ಯಪೂರ್ವದಿಂದಲೂ ಅದು ಕಮ್ಯೂನಿಸ್ಟರ ಬಿಗಿಮುಷ್ಟಿಯಲ್ಲಿತ್ತು. ಮಾಕ್ರ್ಸವಾದಿ ಕಮ್ಯೂನಿಸ್ಟ್ ಪಕ್ಷದ ನೇತಾರ ಎನ್.ಜೆ. ಅಯ್ಯರ್ ಅಂಚೆ ಕಾರ್ಮಿಕರ ಸಂಘಟನೆಯ ಪ್ರಶ್ನಾತೀತ ನಾಯಕರಾಗಿದ್ದರು. ಚುನಾವಣೆ ಕೇವಲ ಔಪಚಾರಿಕತೆಯಾಗಿತ್ತು. ಕಾರ್ಮಿಕಸಂಘದ ನಿಯಮಾವಳಿಗಳನ್ನು ಪಾಲಿಸುವ ಕಾಟಾಚಾರಕ್ಕೆಂದು ಅಖಿಲಭಾರತ ಮಟ್ಟದಲ್ಲಿ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಸಬೇಕಿತ್ತು.
ಹೀಗೆ ಕಾಟಾಚಾರಕ್ಕೆಂದು ನಡೆದ ಚುನಾವಣೆಯೊಂದರಲ್ಲಿ ಅನಾಹುತವೇ ನಡೆದುಹೋಗಿತ್ತು! ಕಮ್ಯೂನಿಸ್ಟ್ ಪಕ್ಷದ ಸದಸ್ಯರೇ ಸಾವಿರಾರು ಸಂಖ್ಯೆಯಲ್ಲಿರುವ ಅಂಚೆ ಮತ್ತು ತಂತಿ ನೌಕರರ ಕಾರ್ಮಿಕ ಸಂಘಟನೆಯ ಕಮ್ಯೂನಿಸ್ಟ್ ಚಕ್ರವ್ಯೂಹವನ್ನು ಭೇದಿಸಿ ದತ್ತೋಪಂತ್ ಠೇಂಗಡಿ ಎಂಬ ಅನಾಮಧೇಯ ವ್ಯಕ್ತಿ ಅಖಿಲ ಭಾರತ ಅಧ್ಯಕ್ಷ ಸ್ಥಾನಕ್ಕೆ ಚುನಾಯಿಸಲ್ಪಟ್ಟಿದ್ದರು!
ಕಮ್ಯೂನಿಸ್ಟರಿಗೆ ಆಘಾತವಾಯಿತು. ಇದರಿಂದ ತೀವ್ರ ಮುಜುಗರಕ್ಕೊಳಗಾದ ಎನ್.ಜೆ. ಅಯ್ಯರ್ ತಮ್ಮ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆಯಿತ್ತರು. ವಾಡಿಕೆಯಂತೆ, ಸಂಘಟನೆ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಯೂ ಸೇರಿದಂತೆ ತಮ್ಮ ತಂಡದ ಪ್ರತಿಯೊಬ್ಬರನ್ನೂ ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೂತನ ಅಧ್ಯಕ್ಷರಾಗಿದ್ದ ಠೇಂಗಡಿಯವರಿಗೆ ನೀಡಲಾಯಿತು.
ಆಗ ಠೇಂಗಡಿಯವರು ಕೈಗೊಂಡ ನಿರ್ಧಾರ ಮತ್ತವರ ತಂಡದ ಆಯ್ಕೆಯಿಂದ ಕಮ್ಯೂನಿಸ್ಟರು ಇನ್ನಷ್ಟು ಆಘಾತಗೊಂಡರು! ಎನ್.ಜೆ. ಅಯ್ಯರ್ ಮತ್ತವರ ಬೆಂಬಲಿಗರು ತಮ್ಮ ಕಣ್ಣು-ಕಿವಿಗಳನ್ನೇ ನಂಬದಾದರು. ಠೇಂಗಡಿಯವರು ತಮ್ಮ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಎನ್.ಜೆ. ಅಯ್ಯರರನ್ನೇ ಆರಿಸಿಕೊಂಡಿದ್ದರು! ‘ತನಗೆ ಯಾರು ಹತ್ತಿರ, ಅಥವಾ ಹೆಚ್ಚು ಪ್ರಿಯ ಎಂಬುದಕ್ಕಿಂತ ಸಂಘಟನಾ ಕಾರ್ಯಕ್ಕೆ ಯಾರು ಅತ್ಯಂತ ಸೂಕ್ತ ಎಂಬುದೇ ಮುಖ್ಯವಾಗಬೇಕು.’ ಸಂಘಟನೆಯ ದೃಷ್ಟಿಯಿಂದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಲ್ಲರಿಗಿಂತಲೂ ಅಯ್ಯರ್ ಸೂಕ್ತ ಎಂಬ ಕಾರಣಕ್ಕೆ ಎಲ್ಲವನ್ನೂ ಬದಿಗಿಟ್ಟು ಮಾದರಿಯಾಗಿದ್ದರು ಠೇಂಗಡಿಯವರು. ಇದು ವಿನೂತನವೇನೂ ಅಲ್ಲ. ಇದನ್ನು ರಾ.ಸ್ವ. ಸಂಘದಲ್ಲಿ ಸರ್ವತ್ರವಾಗಿ ಅನುಸರಿಸಲಾಗುತ್ತದೆ. ಆದರೆ, ಸೈದ್ಧಾಂತಿಕ ವಿರೋಧಿಗಳ ವಿಚಾರದಲ್ಲೂ ಸಂಘದ ಕಾರ್ಯಪದ್ಧತಿಯನ್ನು ಅನುಸರಿಸಿದ್ದು ವಿರೋಧಿಗಳನ್ನೂ ಚಕಿತಗೊಳಿಸಿತ್ತು.
ಸಂಘಕಾರ್ಯವನ್ನು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಿದ ದತ್ತೋಪಂತರಲ್ಲಿ ರಾ.ಸ್ವ. ಸಂಘದ ಸಂಸ್ಕಾರದ ಸಂಪೂರ್ಣ ಅಭಿವ್ಯಕ್ತಿ ಕಾಣಬಹುದಾಗಿತ್ತು. ಶಿಸ್ತಿಗೆ ಬಾಗದ ಬಂಡಾಯದ ಹುಮ್ಮಸ್ಸಿನ ವಿದ್ಯಾರ್ಥಿಗಳನ್ನು, ಸಂಘರ್ಷದ ಕುಲುಮೆಯಲ್ಲಿರುವ ಕಾರ್ಮಿಕರನ್ನು, ಹಸಿದ ಹೊಟ್ಟೆಯ ರೈತರನ್ನು, ಸಮಾಜದ ಕೊನೆಯಂಚಿನಲ್ಲಿ ಬದುಕುತ್ತಿರುವ ಪರಿಶಿಷ್ಟರನ್ನು, ಸತ್ಯದೊಂದಿಗೆ ಸಮಜಾಯಿಷಿ ಮಾಡಿಕೊಳ್ಳಬೇಕಾದ ವೃತ್ತಿಧರ್ಮದ ಅನಿವಾರ್ಯತೆಯಿರುವ ವಕೀಲರನ್ನು ಬಹು ಸುಲಭವಾಗಿ ಸಮಾಜದ ಮೇಲೆ ಎತ್ತಿಕಟ್ಟಬಹುದು. ಸಮಾಜದ ವೈವಿಧ್ಯವನ್ನು ವೈರತ್ವಕ್ಕೆ ತಿರುಗಿಸುವುದು ಅತಿ ಸುಲಭ. ಸಮಾಜದ ಓರೆಕೋರೆಗಳನ್ನು ಬಳಸಿಕೊಂಡು ಸಮಾಜದ ಸಾಮರಸ್ಯವನ್ನು ಕದಡಬಹುದು. ಆತ್ಮವಿಸ್ಮೃತಿಯಲ್ಲಿ ಬದುಕುತ್ತಿರುವ ಸಮಾಜದ ದಿಕ್ಕುತಪ್ಪಿಸುವುದು ಕಷ್ಟವಲ್ಲ. ಕಮ್ಯೂನಿಸ್ಟರು ಇದನ್ನೇ ಮಾಡುತ್ತ ಬಂದವರು.
ಅಗ್ರಗಣ್ಯ ಪ್ರಭೃತಿ
ಸಮಾಜ ನರನಾಡಿಗಳಲ್ಲಿ ಇಷ್ಟೊಂದು ವಿಷ ಬೆರೆತಿರುವಾಗಲೂ ಇಡೀ ಸಮಾಜವನ್ನೇ ಒಬ್ಬ ವ್ಯಕ್ತಿಯಂತೆ ಎದ್ದು ನಿಲ್ಲಿಸಲು, ಸಮಾಜದ ಒಳಗಡೆಯಲ್ಲ, ಸಮಾಜವನ್ನೇ ಸಂಘಟನೆ ಮಾಡಲು ಮುಂದಾದ ಸಂಘಕಾರ್ಯದ ಅಗ್ರಗಣ್ಯ ಕಾರ್ಯಕರ್ತರಲ್ಲೊಬ್ಬರು ದತ್ತೋಪಂತರು.
ಸಂಘದ ಸ್ಥಾಪನೆಯಲ್ಲಿ ಪೂಜ್ಯ ಡಾಕ್ಟರ್ಜೀಯವರ ಜೊತೆಗಿದ್ದದ್ದು ಅಕ್ಷರಶಃ ಬೆರಳೆಣಿಕೆಯಷ್ಟು ಜನ. ಆದರೆ, ಇಂದು ಸಂಘದ ಕಾರ್ಯ ದೇಶದ ಪ್ರತಿಯೊಂದು ತಾಲ್ಲೂಕು-ಹೋಬಳಿ ಮಟ್ಟಕ್ಕೂ ವ್ಯಾಪಿಸಿದೆ. ಸಂಘದ ಸಂಸ್ಕಾರ ಮತ್ತು ಪ್ರೇರಣೆ ಪಡೆದ ಸ್ವಯಂಸೇವಕರು ಸಮಾಜದ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸ ಕ್ಷೇತ್ರಗಳಲ್ಲಿ ಹೊಸ ಸಂಘಟನೆಗಳು ತಲೆಯೆತ್ತಿವೆ. ಹೊರನೋಟಕ್ಕೆ ಇದೆಲ್ಲವೂ ನವೀನವಾಗಿ ಕಾಣಿಸಬಹುದು. ಆದರೆ, ಆಳಕ್ಕಿಳಿದು ನೋಡಿದರೆ ಇದು ಸಂಘಕಾರ್ಯದ ಪ್ರಗತಿಶೀಲತೆಯ ಅನಾವರಣ ಮಾತ್ರವೇ. ಯಾವ ಪುಷ್ಪವೀಗ ಸಂಪೂರ್ಣವಾಗಿ ಅರಳಿ ನಿಂತಿದೆಯೋ, ಅದು ಮೊಗ್ಗಿನಿಂದ ಹೊರಗಿನದ್ದಲ್ಲ; ಹೂವೆಂಬುದು ಮೊಗ್ಗಿನ ಗತಿಶೀಲ ಅನಾವರಣವಷ್ಟೇ. ಪ್ರಕೃತಿಯಲ್ಲಿ ಅನಾವರಣವೆಂಬುದು ಸಹಜ ಪ್ರಕ್ರಿಯೆ. ಆದರೆ ನಿಸರ್ಗಕ್ಕೆ ಸದಾ ವಿರೋಧವಾಗಿಯೇ ನಿಲ್ಲುವ ಮಾನವನ ಸಮಾಜದಲ್ಲಿ ಪ್ರಗತಿಶೀಲ ಅನಾವರಣವನ್ನು ಸಾಧಿಸುವುದು ಸುಲಭವಲ್ಲ. ಇನ್ನು ವೈವಿಧ್ಯಪೂರ್ಣ ಮತ್ತು ಚಂಚಲಚಿತ್ತದ ಮನಃಸ್ಥಿತಿಯಲ್ಲಂತೂ ಇದು ಇನ್ನಷ್ಟು ಕಷ್ಟಸಾಧ್ಯ. ಸಂಘಶಕ್ತಿಯ ಸ್ಥಾಪನೆಯ ಮೂಲ ಚೈತನ್ಯಸ್ರೋತ ವಿವಿಧ ಕ್ಷೇತ್ರಗಳಲ್ಲಿ ವಿಕೃತಿಗೊಳ್ಳದೆ ಅನಾವರಣ ಹೊಂದಲು ಕಾರಣೀಭೂತರಾದವರಲ್ಲಿ ದತ್ತೋಪಂತರು ಅಗ್ರಮಾನ್ಯರು.
ರಾಷ್ಟ್ರೀಯ ಚಿಂತನೆಯಿಂದ ಪ್ರೇರಿತವಾದ ವಿದ್ಯಾರ್ಥಿ-ಕಾರ್ಮಿಕ-ರೈತ-ಸ್ವದೇಶೀ-ಗ್ರಾಹಕ-ವಕೀಲರ ಸಂಘಟನೆಗಳ ಅಧ್ವರ್ಯು, ಸಾಮಾಜಿಕ ಸಾಮರಸ್ಯಕ್ಕಾಗಿ ಅಪಾರವಾಗಿ ಶ್ರಮಿಸಿದ, ಸಮಾಜದ ಪ್ರಜ್ಞಾಪ್ರವಾಹವನ್ನು ನಿರ್ದೇಶಿಸಿದ ಉತ್ಕೃಷ್ಟ ಚಿಂತಕ, ಮಹೋನ್ನತ ಸಂಘಟಕ, ಸ್ವಭಾವತಃ ಅಧ್ಯಯನಶೀಲ, ಪ್ರಭಾವೀ ಲೇಖಕ, ಇನ್ನೂ ಸಾಕಷ್ಟು ರೀತಿಗಳಲ್ಲಿ ದತ್ತೋಪಂತ ಠೇಂಗಡಿಯವರ ವ್ಯಕ್ತಿತ್ವದ ವಿಸ್ತಾರವನ್ನು ಕುರಿತು ಹೇಳಲಾಗುತ್ತದೆ. ಅವರ ಕೃತಿಗಳು, ಕಟ್ಟಿದ ವಿವಿಧ ಸಾಮೂಹಿಕ ಸಂಘಟನೆಗಳನ್ನು ಆಧಾರವಾಗಿಟ್ಟುಕೊಂಡು ಠೇಂಗಡಿಯವರಂಥ ವ್ಯಕ್ತಿಗಳ ಸಾಧನೆ, ನಿರ್ದಿಷ್ಟ ವ್ಯಕ್ತಿಚಿತ್ರಣ ಮತ್ತು ವಸ್ತುನಿಷ್ಠ ವಿಶ್ಲೇಷಣೆ ನಿಜವಾಗಿಯೂ ದುಃಸಾಧ್ಯ. ನಮ್ಮ ನಿಲುಕಿಗೆ ಗೋಚರವಾದದ್ದೆಷ್ಟೋ, ಬೊಗಸೆಗೆ ದಕ್ಕಿದ್ದೆಷ್ಟೋ ಅದಷ್ಟನ್ನು ಹಿಡಿದಿಟ್ಟುಕೊಳ್ಳಬಹುದು, ಮತ್ತು ಇದಕ್ಕೂ ಕಡಮೆ ಪ್ರಮಾಣದಷ್ಟನ್ನು ಅಭಿವ್ಯಕ್ತಿಪಡಿಸಬಹುದು ಅಥವಾ ಅಕ್ಷರಕ್ಕಿಳಿಸಬಹುದು. ಠೇಂಗಡಿಯವರು ನಿಜವಾಗಲೂ ಏನಾಗಿದ್ದರು ಎಂಬುದನ್ನು ವಿಶ್ಲೇಷಿಸುವುದು ಅಸಾಧ್ಯ. ನಮ್ಮ ನಿಲುಕಿಗೆ ಹೀಗೆ ಗೋಚರಿಸುತ್ತಿದ್ದರು, ಅಥವಾ ಅವರ ವಿಚಾರಗಳನ್ನು ಓದಿದ ಮೇಲೆ, ಉಪನ್ಯಾಸ ಕೇಳಿದ ಮೇಲೆ, ನಮಗೆ ಅವರ ಬಗ್ಗೆ ಹೀಗೆನಿಸುತ್ತದೆ ಎಂಬುದನ್ನಷ್ಟೇ ಹೇಳಬಹುದು.
ಹಾಗೆ ನೋಡಿದರೆ ದತ್ತೋಪಂತರ ವಿಚಾರಗಳು ದಾಖಲಾಗಿದ್ದೇ ತೀರಾ ಇತ್ತೀಚಿಗೆ ಮತ್ತು ಅದೂ ವಿರಳವಾಗಿ. ಭಾರತೀಯ ಮಜ್ದೂರ್ ಸಂಘದ (BMS) ಅಮರನಾಥ ಡೋಗ್ರಾ ಮತ್ತಿತರ ಸಂಘಟಕರು 2015ರಲ್ಲಿ ಪ್ರಾರಂಭಿಸಿ, 2017ರವರೆಗೆ ಠೇಂಗಡಿಯವರ ಹಿಂದೀಭಾಷೆಯ ಆಯ್ದ ಬರಹ ಮತ್ತು ಉಪನ್ಯಾಸಗಳನ್ನು ‘ದತ್ತೋಪಂತ ಠೇಂಗಡಿ ಜೀವನದರ್ಶನ’ ಎಂಬ ಹೆಸರಿನಲ್ಲಿ ಒಂಬತ್ತು ಸಂಪುಟಗಳಲ್ಲಿ ಸಂಕಲಿಸಿದ್ದನ್ನು ದೆಹಲಿಯ ಸುರುಚಿ ಪ್ರಕಾಶನದವರು ಪ್ರಕಟಿಸಿದ್ದಾರೆ.
ಈ ಸಂಚಿಕೆಯ ಮೊದಲ ಸರಣಿಯ ಪುಸ್ತಕವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಪರಮಪೂಜ್ಯ ಸರಸಂಘಚಾಲಕರು ಠೇಂಗಡಿಯವರ ವ್ಯಕ್ತಿತ್ವದ ಬಗ್ಗೆ ಹೀಗೆ ಹೇಳಿದ್ದರು:
“ಮಹಾನ್ ವ್ಯಕ್ತಿಗಳಲ್ಲಿ ಮೂರು ಪ್ರಕಾರಗಳು. ಒಂದಷ್ಟು ವಿಭೂತಿ ಪುರುಷರು ಜನಸಂಪರ್ಕಕ್ಕೆ ಬರುವುದೇ ಇಲ್ಲ. ಎರಡನೇ ರೀತಿಯವರನ್ನು ನೋಡಿದರೇ ಸಾಕು ಈ ವ್ಯಕ್ತಿ ಸಾಮಾನ್ಯನಲ್ಲವೆಂದರಿತು ಜನ ಬೆಚ್ಚಿಬಿದ್ದುಹೋಗುತ್ತಾರೆ. ಹಾಗೂ ಹೀಗೂ ಸಾಮೀಪ್ಯ ಸಾಧ್ಯವಾದರೆ, ಪ್ರತಿ ಕ್ಷಣವೂ ಆ ವ್ಯಕ್ತಿಯ ಮಹತಿಯ ಪ್ರಭೆ ಎಂಥವರಿಗೂ ಗೋಚರಿಸಿ, ಬದುಕಿದ್ದಾಗಲೇ ಆ ವ್ಯಕ್ತಿಯನ್ನು ದೈವೀಕರಿಸಿಬಿಡುತ್ತಾರೆ; ನಮ್ಮಂಥ ಸಾಮಾನ್ಯರಿಗೆ ಇವರ ಆದರ್ಶಗಳನ್ನು ಆಚರಿಸಲು ಸಾಧ್ಯವೇ ಇಲ್ಲವೆಂದು ತೀರ್ಮಾನಿಸಿಬಿಡುತ್ತಾರೆ. ಮೂರನೇ ಮಾದರಿಯವರು ದತ್ತೋಪಂತರಂಥವರು. ಅಸಾಮಾನ್ಯರಾಗಿದ್ದರೂ, ಯಾರಿಗೂ ಅದರ ಸುಳಿವನ್ನೇ ಕೊಡದಿರುವವರು; ಹೇಗೆ ತಮ್ಮ ಮಹತಿಯನ್ನು ಮುಚ್ಚಿಕೊಳ್ಳಬೇಕೆಂಬ ಕಲೆಯನ್ನು ಸಿದ್ಧಿಸಿಕೊಂಡವರು. ಸಾಮಾನ್ಯರೊಂದಿಗೆ ಅವರಿಗಿಂತಲೂ ಹೆಚ್ಚು ಸಾಮಾನ್ಯರಾಗಿ ಬಾಳಿ ಬದುಕುವವರು. ಸಾಮಾನ್ಯರಿಗೂ ಎಳ್ಳಷ್ಟೂ ಅನುಮಾನ ಬಂದರೂ ಸಂಘಟನೆಯ ಕಾರ್ಯಕ್ಕೆ ಎಲ್ಲಿ ಚ್ಯುತಿಬರಬಹುದೋ ಎಂಬ ಜಾಗೃತಿಯಿಂದ ಸಾಮಾನ್ಯರಲ್ಲಿ ಇನ್ನಷ್ಟು ಸಾಮಾನ್ಯರಾಗಿ ಬದುಕಿದವರು ಠೇಂಗಡಿಯವರು.
“ನಾಗಪುರದಲ್ಲಿ ನಾನು ಎಷ್ಟೋ ಬಾರಿ ಅವರನ್ನು ನನ್ನ ಸ್ಕೂಟರ್ ಹಿಂದೆ ಕೂರಿಸಿಕೊಂಡು ರಾತ್ರಿ ಹನ್ನೆರಡು-ಒಂದು ಗಂಟೆಗೆಲ್ಲ ಕಾರ್ಯಕರ್ತರ ಮನೆಗಳಿಗೆ ಹೋಗಿದ್ದೇನೆ. ಇಷ್ಟು ಹೊತ್ತಿಗೆ ಯಾರನ್ನೂ ಎಬ್ಬಿಸಬಾರದು, ಮಲಗಿದವರಿಗೆ ತೊಂದರೆಯಾಗುವುದು ಖಚಿತ ಎಂದು ಬಿನ್ನವಿಸಿಕೊಂಡಾಗ, ನನ್ನ ಮಾತನ್ನು ಕಿವಿಗೇ ಹಾಕಿಕೊಳ್ಳದೆ, ಠೇಂಗಡಿಯವರು ಪುಟ್ಟ ಮಗುವಿನಂತೆ ಒಂದು ಚಿಕ್ಕ ಕಲ್ಲನ್ನೆತ್ತಿಕೊಂಡು ಮನೆಯ ಕಿಟಕಿಗೆ ಅಥವಾ ಬಾಗಿಲಿಗೆ ಮೆಲ್ಲನೆ ಎಸೆಯುತ್ತಿದ್ದರು. ಮನೆಯವರು ಬೈದುಕೊಂಡೇ ಬಾಗಿಲು ತೆರೆದು ಬಂದು ಠೇಂಗಡಿಯವರನ್ನು ನೋಡಿದಾಗ, ಅತ್ಯಂತ ಪ್ರಸನ್ನರಾಗಿ ನಮ್ಮನ್ನು ಒಳಗೆ ಕರೆಯುತ್ತಿದ್ದರು.
ಒಬ್ಬ ಮಹಾನ್ ವ್ಯಕ್ತಿ ಇಂತಹದ್ದನ್ನೆಲ್ಲ ಮಾಡಬಹುದೇ? ತಮ್ಮ ಮಹತಿ, ಮಹಾನತೆಗಳನ್ನು ತಮ್ಮ ಸದಾಕಾಲದ ಒಡನಾಡಿಗಳಿಗೂ ನಿಲುಕದಷ್ಟು ಸಹಜವಾಗಿ, ಅಪ್ರಯತ್ನವಾಗಿ ಮರೆಮಾಚಬಹುದೇ?
ಠೇಂಗಡಿಯವರು ನಮಗಿಂತಲೂ ಎಲ್ಲ ರೀತಿಯಿಂದಲೂ ದೊಡ್ಡವರು ಎಂದು ನಮಗೆ ಅಷ್ಟಿಷ್ಟು ಗೋಚರಿಸುತ್ತಿತ್ತು. ಆದರೆ, ನಿಜಕ್ಕೂ ನಾವು ಒಬ್ಬ ಅಲೌಕಿಕ ವ್ಯಕ್ತಿಯೊಂದಿಗೆ ಬದುಕುತ್ತಿದ್ದೇವೆ ಎಂಬುದನ್ನು ನಮ್ಮ ಗ್ರಹಿಕೆಗೇ ನಿಲುಕಲು ಬಿಡಲಿಲ್ಲ.”
*****
ದತ್ತೋಪಂತರೆಂದೇ ಪ್ರಖ್ಯಾತರಾಗಿದ್ದ ದತ್ತಾತ್ರಯ ಜನಿಸಿದ್ದು 10 ನವೆಂಬರ್ 1920ರ ದೀಪಾವಳಿಯ ಶುಭದಿನದಂದು, ಮಹಾರಾಷ್ಟದ ವಿದರ್ಭ ಭಾಗದ ವಾರ್ಧಾ ಜಿಲ್ಲೆಯ ಆರವಿಯಲ್ಲಿ. ಇವರ ತಾಯಿ ಜಾನಕೀಬಾಯಿ; ತಂದೆ ಬಾಪುರಾವ್ ದಾಜೀಬಾ ಠೇಂಗಡಿ. ದತ್ತೋಪಂತರನ್ನು ಬಾಲ್ಯದಲ್ಲಿ ದತ್ತಾ, ದತ್ತು, ಪಂತ್, ಬಾಬಾ ಮೊದಲಾದ ಮುದ್ದಿನ ಹೆಸರುಗಳಿಂದ ಕರೆಯುತ್ತಿದ್ದರು.
ತಾಯಿ ಜಾನಕೀಬಾಯಿ ಅತ್ಯಂತ ಸೌಮ್ಯ, ಶಾಂತಚಿತ್ತ, ವಾತ್ಸಲ್ಯಮೂರ್ತಿಯಾಗಿದ್ದರು. ಜಾನಕೀಬಾಯಿಯವರ ತಂದೆ ಪ್ರಾಧ್ಯಾಪಕರಾಗಿದ್ದರು. ಬಾಲ್ಯದಲ್ಲಿ ಪಡೆದ ಸಂಸ್ಕಾರಗಳಿಂದ ಸ್ವಭಾವತಃ ಜಾನಕಿ ಅತ್ಯಂತ ಭಕ್ತಿಭಾವದ ಮಹಿಳೆಯಾಗಿದ್ದರು. ಇವರು ಶ್ರೀದತ್ತಾತ್ರಯನ ಪರಮ ಭಕ್ತೆಯಾಗಿದ್ದರು. ಇವರ ಮನೆಯಲ್ಲಿ ಸಾಕಷ್ಟು ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತಿತ್ತು.
ತಂದೆ ಬಾಪುರಾವ್ ಠೇಂಗಡಿ ತಮ್ಮ ಕಾಲದ ಪ್ರಖ್ಯಾತ ವಕೀಲರಾಗಿದ್ದರು. ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ನಡೆಸುವುದರಲ್ಲಿ ಅವರು ಸಿದ್ಧಹಸ್ತರಾಗಿದ್ದರು. ಅವರ ವಾದಸರಣಿ ಅತ್ಯಂತ ಪ್ರಖರ ಮತ್ತು ತರ್ಕಬದ್ಧವಾಗಿರುತ್ತಿತ್ತು.
ಕುಟುಂಬದ ಆರ್ಥಿಕಸ್ಥಿತಿ ಮೊದಮೊದಲು ಡೋಲಾಯಮಾನವಾಗಿತ್ತು. ಆದರೆ, ಬಾಪೂರಾಯರು ತಮ್ಮ ಪ್ರತಿಭೆ ಮತ್ತು ಪರಿಶ್ರಮಗಳಿಂದ ಪರಿವಾರದ ಆರ್ಥಿಕಸ್ಥಿತಿಯನ್ನು ಉತ್ತಮಗೊಳಿಸಿದರು.
ಸಾಕಷ್ಟು ಸಂಪತ್ತು, ನೌಕರ-ಚಾಕರರಿದ್ದೂ, ಠೇಂಗಡಿ ಪರಿವಾರದಲ್ಲಿ ಏನೋ ಒಂದು ರೀತಿಯ ಶುಷ್ಕತೆ ಮತ್ತು ಏಕಾಕಿತನ ಕಾಡುತ್ತಿದ್ದವು. ಮನೆಯಲ್ಲಿ ಸಂತಾನಪ್ರಾಪ್ತಿಯಾಗದಿರುವುದೇ ಇದಕ್ಕೆ ಕಾರಣವಾಗಿತ್ತು. ದತ್ತೋಪಂತರ ಮೊದಲು ಜನಿಸಿದ ಎಲ್ಲ ಮಕ್ಕಳೂ ಅಕಾಲ ಮೃತ್ಯುವಿಗೀಡಾಗಿದ್ದರು. ಮಾತೆ ಜಾನಕೀಬಾಯಿ ಭಗವಾನ್ ಶ್ರೀದತ್ತಾತ್ರಯನ ಪರಮ ಭಕ್ತೆಯಾಗಿದ್ದು, ಆಕೆ ಒಂದು ದಿನ ಮನೆಯ ದೇವರಕೋಣೆಯಲ್ಲಿ ಸ್ಥಾಪಿತವಾಗಿದ್ದ ದತ್ತಮೂರ್ತಿಯ ಎದುರು ಭಕ್ತಿಭರಿತರಾಗಿ ಹೀಗೆ ಬೇಡಿಕೊಂಡರು:
“ಒಂದು ವೇಳೆ ನಮ್ಮ ಮುಂದಿನ ಸಂತಾನವೇನಾದರೂ ಜೀವಂತವಾಗುಳಿದರೆ, ಅದನ್ನು ನಿನ್ನದೇ ಕಾರ್ಯಕ್ಕೆ ಸಮರ್ಪಿಸುತ್ತೇನೆ.”
ಭಕ್ತಿಯಲ್ಲಿ ಎಲ್ಲಿಲ್ಲದ ಶಕ್ತಿಯಿರುತ್ತದೆ ಮತ್ತು ಪ್ರಾರ್ಥನೆಯಿಂದ ಅಸಾಧ್ಯವಾದದ್ದೂ ಎಟಕುತ್ತದೆ. ದತ್ತ ಭಗವಂತನಿಗೆ ತನ್ನ ಭಕ್ತೆಯ ಮೊರೆ ಕೇಳಿರಬೇಕು. ದತ್ತೋಪಂತರು ದೀರ್ಘಾಯುವಾಗಿ ಬಾಳಿದ್ದಲ್ಲದೆ, ಭಾರತದಲ್ಲಿ ವೈಚಾರಿಕ ಕ್ರಾಂತಿಯ ಹರಿಕಾರರಾದರು. ದತ್ತಭಗವಂತನ ಕೃಪೆಯಿಂದ ಪಡೆದ ತನ್ನ ಮಗುವಿಗೆ ತಾಯಿ ದತ್ತಾತ್ರಯನೆಂದೇ ನಾಮಕರಣ ಮಾಡಿದಳು.
ದತ್ತೋಪಂತರು ವಾಸ್ತವದಲ್ಲಿ ತಮ್ಮ ಹೆಸರನ್ನು ಸಾರ್ಥಕಗೊಳಿಸಿದರು. ಸಮಾಜಸೇವೆಯ ಸಂಕಲ್ಪ ಸ್ವೀಕರಿಸಿದ ದತ್ತೋಪಂತರು ಕೌಟುಂಬಿಕ ಸುಖ-ಸಮೃದ್ಧಿಯನ್ನು ತ್ಯಜಿಸಿ ಆಜನ್ಮ ಅವಿವಾಹಿತರಾಗುಳಿದು, ತಮ್ಮ ಶಿಕ್ಷಣದ ನಂತರದಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ತಮ್ಮ ಸಂಪೂರ್ಣ ಜೀವನವನ್ನು ದೀನ-ಹೀನ, ಶೋಷಿತ-ಪೀಡಿತ ಮತ್ತು ನಿರ್ಲಕ್ಷಿತ ಸಮುದಾಯಗಳ ಉತ್ಥಾನ ಮತ್ತು ರಾಷ್ಟ್ರಸೇವೆಗಾಗಿ ಸಮರ್ಪಿಸಿದರು.
ಬಾಲ್ಯ ಮತ್ತು ವಿದ್ಯಾರ್ಥಿ ಜೀವನ
ದತ್ತೋಪಂತರ ಆರಂಭಿಕ ಶಿಕ್ಷಣ ಆರ್ವಿ ಪುರಸಭೆಯ ಶಾಲೆಯಲ್ಲೇ ನಡೆಯಿತು. ಇವರು ಅತ್ಯಂತ ಕುಶಾಗ್ರಮತಿ ಮತ್ತು ಮೇಧಾವಿ ವಿದ್ಯಾರ್ಥಿಯಾಗಿದ್ದರು. ಪರೀಕ್ಷೆಯಲ್ಲಿ ಎಲ್ಲರಿಗಿಂತ ಹೆಚ್ಚಿನ ಅಂಕಗಳನ್ನು ಪಡೆದು ತಮ್ಮ ತರಗತಿಯಲ್ಲಿ ಯಾವಾಗಲೂ ಪ್ರಥಮರಾಗಿಯೇ ಉತ್ತೀರ್ಣರಾಗುತ್ತಿದ್ದರು. ಏನನ್ನಾದರೂ ಒಮ್ಮೆ ಓದಿದರೆ ಸಾಕು ಅವರಿಗದು ಬಾಯಿಪಾಠವಾಗಿಹೋಗುತ್ತಿತ್ತು.
ಪರೀಕ್ಷೆಯಲ್ಲಿ ಪ್ರಥಮರಾಗಿದ್ದರೂ ಅವರು ಪುಸ್ತಕದ ಹುಳುವಾಗಿರಲಿಲ್ಲ. ಅವರ ಸ್ಮರಣಶಕ್ತಿ ಅಸಾಧಾರಣವಾಗಿತ್ತು. ಪಾಠ್ಯಕ್ರಮದ ಪುಸ್ತಕಗಳಾಚೆ ಸಾಕಷ್ಟು ಪುಸ್ತಕಗಳನ್ನು ಓದುವ ಹವ್ಯಾಸವಿತ್ತು. ಶಾಲೆಯ ಗ್ರಂಥಾಲಯದ ಪುಸ್ತಕಗಳನ್ನಲ್ಲದೆ, ಆರ್ವಿಯ ಪ್ರಖ್ಯಾತ ಲೋಕಮಾನ್ಯ ತಿಲಕ ಗ್ರಂಥಾಲಯದ ಅದೆಷ್ಟೋ ಪುಸ್ತಕಗಳನ್ನು ಒಂದೇ ದಿನದಲ್ಲಿ ಓದಿ ಮುಗಿಸಿ ಅವುಗಳಲ್ಲಿನ ಪ್ರಮುಖ ಅಂಶಗಳನ್ನು ಗುರುತುಹಾಕಿಕೊಂಡಿರುತ್ತಿದ್ದರು.
ಆ ದಿನಗಳಲ್ಲಿ ನಾಗಪುರದಲ್ಲಿ ಭಾಷಣ ಸ್ಪರ್ಧೆಗಳೇರ್ಪಡುತ್ತಿದ್ದವು. ದತ್ತೋಪಂತರು ತಮ್ಮ ಶಾಲೆಯನ್ನು ಪ್ರತಿನಿಧಿಸಿ ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಸ್ಪರ್ಧೆಗಳಲ್ಲಿ ವಿಷಯವೇನೇ ಇರಲಿ, ಸದಾ ದತ್ತೋಪಂತರೇ ಪ್ರಥಮಸ್ಥಾನ ಪಡೆಯುತ್ತಿದ್ದರು. ಒಂದು ಬಾರಿ ಭಾಷಣ ಸ್ಪರ್ಧೆಯ ವಿಷಯ ‘ತಾಯಿ ಹೆಚ್ಚೋ ತಂದೆ ಹೆಚ್ಚೋ.’ ದತ್ತೋಪಂತರಿಗೆ ಆಗ ಸುಮಾರು ಹನ್ನೊಂದು-ಹನ್ನೆರಡು ವರ್ಷದ ಪ್ರಾಯವಿರಬಹುದು. ಅಂದು ತಾಯಿಯ ವಿಚಾರದಲ್ಲಿ ಅತ್ಯದ್ಭುತವಾಗಿ ಮಾತನಾಡಿದ ದತ್ತೋಪಂತರನ್ನು ಕುರಿತು ಈ ಸ್ಪರ್ಧೆಯ ಆಯೋಜಕರು “ಈ ವ್ಯಕ್ತಿ ದೊಡ್ಡವನಾದ ಮೇಲೆ ಖಂಡಿತ ಓರ್ವ ಮಹಾನ್ ವ್ಯಕ್ತಿಯಾಗುತ್ತಾನೆ” ಎಂದು ಉದ್ಗರಿಸಿದ್ದರು!
ಸ್ವಾತಂತ್ಯಸಂಗ್ರಾಮದಲ್ಲಿ ಧುಮುಕಿದ್ದು
1931-32ರ ವೇಳೆಗೆ ಗಾಂಧಿಯವರ ನೇತೃತ್ವದಲ್ಲಿ ದೇಶದಾದ್ಯಂತ ಸ್ವಾತಂತ್ರ್ಯಸಂಗ್ರಾಮ ಗರಿಗೆದರಿತ್ತು. ಆಗ ದತ್ತೋಪಂತರು ಆರನೇ-ಏಳನೇ ತರಗತಿಯ ವಿದ್ಯಾರ್ಥಿ ಆಗಿದ್ದರು. ಆಗಲೇ ಅವರಲ್ಲಿ ನುರಿತ ಸಂಘಟಕನೊಬ್ಬ ಜಾಗೃತಗೊಳ್ಳುತ್ತಿದ್ದ. ಹಾಗಾಗಿಯೇ ಅವರು ಗುಡಿಸಲು, ಮಂಡಳ, ಸಮಿತಿ, ಆರ್ವಿ ವಿದ್ಯಾರ್ಥಿಸಂಘ ಮುಂತಾದ ಸಂಘಟನೆಗಳನ್ನು ಸ್ಥಾಪಿಸಿ ಸ್ವಾತಂತ್ರ್ಯ ಆಂದೋಲನದಲ್ಲಿ ತಮ್ಮನ್ನು ಮತ್ತು ತಮ್ಮ ಸಂಗಾತಿಗಳನ್ನು ತೊಡಗಿಸತೊಡಗಿದ್ದರು.
ದತ್ತೋಪಂತರು ಉರಿಬಿಸಿಲನ್ನು ಲೆಕ್ಕಿಸದೆ ಚಳವಳಿಕಾರರೊಂದಿಗೆ ದಿನವಿಡೀ ಕ್ರಿಯಾಶೀಲರಾಗಿರುತ್ತಿದ್ದರು. ತಂದೆ ವಕೀಲರಾಗಿದ್ದರಿಂದ ಆಂದೋಲನದ ಉದ್ವಿಗ್ನ ಪರಿಸ್ಥಿತಿಯಿಂದ ಪರಿಚಿತರಾಗಿದ್ದರು. ಆದ್ದರಿಂದಲೇ, ತಮ್ಮ ಮಗನಿಗೆ ಈ ಆಂದೋಲನದಿಂದ ದೂರವಿರುವಂತೆ ಉಪದೇಶಿಸುತ್ತಿದ್ದರೂ, ಮಗ ದತ್ತೋಪಂತ ತಂದೆಯ ಮಾತನ್ನು ಕೇಳುತ್ತಿರಲಿಲ್ಲ.
ಒಂದು ದಿನ ಬೀದಿಯಲ್ಲಿ ಆಂದೋಲನನಿರತ ಪುತ್ರನನ್ನು ರಟ್ಟೆಹಿಡಿದು ಎಳೆತಂದ ತಂದೆ, ನಾಳೆಯಿಂದ ಇದೆಲ್ಲಾ ಕೊನೆಗೊಳ್ಳಬೇಕೆಂದು ಗದರಿದರು. ತನ್ನ ಕೈ ಬಿಡಿಸಿಕೊಂಡ ದತ್ತೋಪಂತ ಮತ್ತೆ ರಸ್ತೆಗೆ ಓಡಿಹೋದ. ಆತಂಕಿತರಾದ ತಂದೆ, ಪತ್ನಿ ಜಾನಕೀದೇವಿಗೆ ಅಂದು ಮಗನಿಗೆ ಊಟ ನೀಡದಂತೆ ತಾಕೀತುಮಾಡಿ ಹೋದರು.
ಬೇಸಿಗೆಯ ಹೊತ್ತಿನಲ್ಲಿ ಆಟವಾಡಿಕೊಂಡಿರುವ ಬಾಲಕ ದತ್ತು ಹಸಿದುಕೊಂಡಿರುವುದು ಸಾಧ್ಯವೇ ಇರಲಿಲ್ಲ. ತಾಯಿಯ ಮಮತಾಮಯಿ ಹೃದಯ ತತ್ತರಿಸಿಹೋಯಿತು. ತನ್ನ ಬಳಿ ಕರೆದು ಹಠತೊರೆದು ತಂದೆಯ ಮಾತನ್ನು ಪಾಲಿಸುವಂತೆ ತಾಯಿ ಬುದ್ಧಿ ಹೇಳಿದರು. “ನನ್ನ ದೇಶವನ್ನು ಸ್ವತಂತ್ರಗೊಳಿಸಬೇಕಿದೆ” ಬಾಲಕ ದತ್ತು ಉತ್ತರಿಸಿದ, “ನಾನು ಉಪವಾಸವಿದ್ದರೂ ಸರಿಯೇ, ಆಂದೋಲನವನ್ನು ತೊರೆಯುವ ಪ್ರಶ್ನೆಯೇ ಇಲ್ಲ.” ದತ್ತೋಪಂತ ಇಡೀ ದಿನ ಉಪವಾಸವಿದ್ದ. ಮಗನು ಹಸಿದ ಅವಸ್ಥೆಯಲ್ಲಿರುವಾಗ ಯಾವ ತಾಯಿಗೆ ಊಟ ಮಾಡುವ ಮನಸ್ಸಾದೀತು?
ಸ್ನೇಹಸ್ವಭಾವ
ದತ್ತೋಪಂತನಲ್ಲಿ ಜನ್ಮಜಾತವಾಗಿಯೇ ಸ್ನೇಹಮಯಿ ವ್ಯಕ್ತಿತ್ವ ಮನೆಮಾಡಿತ್ತು. ದಿನವೂ ಹೊಸ ಸ್ನೇಹಿತರನ್ನು ಸಂಪಾದಿಸುವುದು ಆತನಿಗೆ ಅತ್ಯಂತ ಪ್ರಿಯವಾಗಿತ್ತು. ಅವನ ಮಿತ್ರಮಂಡಳಿಯಲ್ಲಿದ್ದ ಹೆಚ್ಚಿನವರು ಸಮಾಜದ ಬಡ, ಹಿಂದುಳಿದ, ನಿರ್ಲಕ್ಷಿತ ಸಮುದಾಯದ ಕಿಶೋರರು. ದತ್ತೋಪಂತರು ಸ್ವತಃ ಶ್ರೀಮಂತ ಮತ್ತು ಮುಂದುವರಿದ ಕುಟುಂಬಕ್ಕೆ ಸೇರಿದವರಾಗಿದ್ದರೂ, ಈ ಕುರಿತ ಯಾವ ಲಕ್ಷಣವೂ ಅವರ ಸ್ವಭಾವದಲ್ಲಿರಲಿಲ್ಲ. ಅವರು ಸದಾ ಹಿಂದುಳಿದ ಸಮುದಾಯಗಳ ವಸತಿಗಳಿಗೆ ಮತ್ತು ಸೇವಾಬಸ್ತಿಗಳಿಗೆ ಭೇಟಿ ನೀಡುತ್ತಿದ್ದರು; ಅಷ್ಟೇ ಅಲ್ಲ, ಈ ಸಮುದಾಯದ ಕಿಶೋರರೊಂದಿಗೆ ಅತ್ಯಂತ ಸ್ನೇಹದಿಂದ ಸೇರಿಹೋಗುತ್ತಿದ್ದರು.
ವಿದ್ಯಾರ್ಥಿ ಜೀವನ ಮತ್ತು ಅಜ್ಞಾತವಾಸ
ದತ್ತೋಪಂತರ ಸಹಪಾಠಿಗಳು ಹೇಳುವಂತೆ, ಅವರಿಗೆ ವ್ಯಾಯಾಮ ಮಾಡುವುದು, ಅಖಾಡಕ್ಕಿಳಿದು ಕುಸ್ತಿಯಾಡುವುದು ಅತ್ಯಂತ ಪ್ರಿಯವಾಗಿತ್ತು. ಅವರು ದಿನವೂ ದೂರ ದೂರದವರೆಗೂ ಓಡುತ್ತಿದ್ದರು. ಸಾಯಂಕಾಲ ಸಂಘಸ್ಥಾನದಲ್ಲಿ ಕಬಡ್ಡಿ ಮತ್ತು ಖೋಖೋ ಆಡುತ್ತಿದ್ದರು.
ಒಂಬತ್ತು-ಹತ್ತು-ಹನ್ನೊಂದನೇ ತರಗತಿಯ ವಿದ್ಯಾರ್ಥಿಗಳ ಸಂಘದ ಚುನಾವಣೆಗಳಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಆದರೆ, ವ್ಯಾಯಾಮಶಾಲೆಗೆ ಹೋಗುತ್ತಿದ್ದ ಪ್ರತಿಪಕ್ಷದ ಕೆಲವು ವಿದ್ಯಾರ್ಥಿಗಳಿಗೆ ಇದು ಪಚನವಾಗಲಿಲ್ಲ. ಒಂದು ಬಾರಿ ಸಹಭೋಜನದ ವೇಳೆ, ದತ್ತೋಪಂತರ ಸಮರ್ಥಕ ವಿದ್ಯಾರ್ಥಿಗಳೊಂದಿಗೆ ಕಾಲುಕೆರೆದು ಜಗಳವಾಡಿ ಅವರನ್ನು ಥಳಿಸತೊಡಗಿದರು. ದತ್ತು ಆ ವೇಳೆ ಅಲ್ಲಿ ಹಾಜರಿರಲಿಲ್ಲ. ವಿಷಯ ತಿಳಿಯುತ್ತಲೆ, ದತ್ತು ಆ ವಿದ್ಯಾರ್ಥಿಗಳಿಗೆ ಚೆನ್ನಾಗಿ ಧರ್ಮದೇಟು ಕೊಟ್ಟು ಲೆಕ್ಕ ಚುಕ್ತಾ ಮಾಡಿದರು.
ಆದರೆ, ವಿಷಯ ಅಲ್ಲಿಗೇ ನಿಲ್ಲಲಿಲ್ಲ, ಮತ್ತಷ್ಟು ಮುಂದುವರಿಯಿತು. ಆ ವಿದ್ಯಾರ್ಥಿಗಳ ಪಾಲಕರು ದತ್ತುವಿನ ವಿರುದ್ಧ ಪೊಲೀಸರಲ್ಲಿ ದೂರನ್ನು ದಾಖಲಿಸಿ ಜಾಮೀನುರಹಿತ ವಾರಂಟ್ ಜಾರಿಯಾಗುವಂತೆ ನೋಡಿಕೊಂಡರು. ದತ್ತುವನ್ನು ಹುಡುಕಿಕೊಂಡು ಪೊಲೀಸರು ಮನೆಯ ತನಕ ಬಂದಾಗ, ಸ್ವತಃ ಕ್ರಿಮಿನಲ್ ವಕೀಲರಾಗಿದ್ದ ತಂದೆ, ದತ್ತೋ ಮನೆಯಲ್ಲಿಲ್ಲವೆಂದು ಹೇಳಿ ಪೊಲೀಸರನ್ನು ಸಾಗಹಾಕಿದರು. ವಾರಂಟ್ ಜಾರಿಯಲ್ಲಿರುವ ಮೂರು ತಿಂಗಳ ಅವಧಿಯವರೆಗೆ ದತ್ತೋ ಅಜ್ಞಾತವಾಸದಲ್ಲಿರುವಂತೆ ಸೂಚಿಸಿದರು. ಹೀಗೆ ದತ್ತೋ ಪೊಲೀಸರ ವಶವಾಗಲಿಲ್ಲ. ಮುಂದೆ ಈ ಮೊಕದ್ದಮೆ ವಜಾಗೊಂಡು ದತ್ತೋವಿನ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗಿತು.
ಇದು ದತ್ತೋಪಂತರ ಜೀವನದ ಮೊದಲ ಅಜ್ಞಾತವಾಸವಾಗಿತ್ತು. ಈ ಅನಿರೀಕ್ಷಿತ ಪರಿಸ್ಥಿತಿಗಳನ್ನೆದುರಿಸಿ ನಿಲ್ಲುವ, ಸಂಕಟಗಳನ್ನು ಸಹಿಸುವ, ಹಸಿವು ನೀರಡಿಕೆಯನ್ನು ಮೆಟ್ಟಿನಿಲ್ಲುವ, ಧೈರ್ಯಗುಂದದಿರುವುದಕ್ಕೆ, ಸಂಘಟನಾ ಕೌಶಲವೃದ್ಧಿಗೆ, ನಿಸರ್ಗವೇ ಈ ಪರೀಕ್ಷೆಯನ್ನೊಡ್ಡಿತೇನೋ ಎನ್ನಬಹುದು. ಈ ಪರೀಕ್ಷೆಯಲ್ಲಿ ದತ್ತೋಪಂತರು ಉತ್ತೀರ್ಣರಾದರು.
ವಿದ್ಯಾರ್ಥಿಜೀವನದಲ್ಲಿ ಪ್ರಾಪ್ತವಾದ ಈ ಅನುಭವಗಳು, ಸಂಘದ ಮೇಲೆ ಸರ್ಕಾರ ಮೊದಲ ಬಾರಿಗೆ ನಿಷೇಧ ಹೇರಿದಾಗ ಮತ್ತು ಆನಂತರದಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಾಕಷ್ಟು ಪ್ರಯೋಜನಕಾರಿಯಾಗಿರಬಹುದು. ಹಾಗಾಗಿಯೇ, 1948ರಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಮೇಲೆ ಪ್ರಥಮ ನಿಷೇಧ ಮತ್ತು 1975ರ ತುರ್ತುಪರಿಸ್ಥಿತಿಯ ಸಂದರ್ಭಗಳಲ್ಲಿ ಭೂಗತರಾಗಿ ಜನಾಂದೋಲನದ ಸಮನ್ವಯದ ಕುರಿತು ಜವಾಬ್ದಾರಿ ನೀಡಲಾಯಿತು. ಜವಾಬ್ದಾರಿಯನ್ನು ದತ್ತೋಪಂತರು ನಿಷ್ಠೆಯಿಂದ ನಿಭಾಯಿಸಿ ಯಶಸ್ವಿಯಾದರು. ವಿಶೇಷವೆಂದರೆ ತುರ್ತುಪರಿಸ್ಥಿತಿ ಹೇರಿದಾಕ್ಷಣದಿಂದ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗುವವರೆಗೂ, ಇಂದಿರಾಗಾಂಧಿಯವರ ಪೊಲೀಸರಿಗೆ ದತ್ತೋಪಂತರನ್ನು ಬಂಧಿಸಲು ಸಾಧ್ಯವಾಗಲೇ ಇಲ್ಲ.
ಸ್ನಾತಕ ವ್ಯಾಸಂಗ
ಆರ್ವಿಯ ವಿದ್ಯಾಲಯದಿಂದ ತೇರ್ಗಡೆಗೊಂಡ ದತ್ತೋಪಂತರು ನಾಗಪುರದ ಪ್ರಸಿದ್ಧ ಮೋರಿಸ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ಈ ಕಾಲೇಜು ಆಧುನಿಕತೆಗಾಗಿ ವಿಖ್ಯಾತವಾಗಿತ್ತು. ಆದರೆ, ದತ್ತೋಪಂತರು ಇಲ್ಲಿಯೂ ಆರ್ವಿ ವಿದ್ಯಾಲಯದ ತಮ್ಮ ಸಂಘಟನೆಯ ಕೆಲಸವನ್ನು ಜಾರಿಯಲ್ಲಿಟ್ಟರು.
ಹೊಸ ಹೊಸ ಮಿತ್ರರನ್ನು ಸಂಪಾದಿಸುವ ಕಲೆ, ಹಿಂದುಳಿದ ವರ್ಗದ ವಿದ್ಯಾರ್ಥಿಗಳೊಂದಿಗಿನ ಮೈತ್ರಿ ಸಂಬಂಧ ಮತ್ತು ಸಂಪರ್ಕ ಹಾಗೆಯೇ ಮುಂದುವರಿದವು. ದತ್ತೋಪಂತರ ವೇಷಭೂಷಣ ಬೈರಾಗಿಗಳನ್ನು ಹೋಲುವಂತಿತ್ತು. ಆದರೆ, ದತ್ತೋಪಂತರು ಇದಾವುದನ್ನೂ ಲೆಕ್ಕಿಸದೆ, ತಮ್ಮ ಧ್ಯೇಯಸಾಧನೆಯತ್ತ ಕಾರ್ಯೋನ್ಮುಖರಾಗುತ್ತಿದ್ದರು. ತಮ್ಮ ಕುಶಾಗ್ರಮತಿ, ಚಿಂತನೆಯ ಗಹನತೆ, ಓದಿನ ಹರವು ಮತ್ತು ಅದ್ಭುತ ಭಾಷಣಕಲೆಗಳಿಂದ ಕಾಲೇಜಿನ ವಿದ್ಯಾರ್ಥಿಗಳ ಮಧ್ಯೆ ವಿಶೇಷ ಛಾಪನ್ನು ಮೂಡಿಸಿದ್ದರು. ಸ್ನಾತಕ ವ್ಯಾಸಂಗದ ತರುವಾಯ ಕಾನೂನು ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದರು.
ಶ್ರೀಗುರೂಜಿಯವರ ಸಾನ್ನಿಧ್ಯ
ಪರಮ ಸೌಭಾಗ್ಯವೆನ್ನಿ ಅಥವಾ ವಿಧಿಯೇ ರಚಿಸಿದ ಸಂಯೋಗವೆಂದಾದರೂ ಹೇಳಿ, ದತ್ತೋಪಂತರು ವ್ಯಾಸಂಗಕ್ಕಾಗಿ ನಾಗಪುರಕ್ಕೆ ಬಂದಾಗ ರಾಷ್ಟೀಯ ಸ್ವಯಂಸೇವಕ ಸಂಘದ ದ್ವಿತೀಯ ಸರಸಂಘಚಾಲಕರಾದ ಶ್ರೀಗುರೂಜೀಯವರ (ಮಾಧವ ಸದಾಶಿವ ಗೋಳವಲ್ಕರ್) ನಿವಾಸಸ್ಥಾನದಲ್ಲೇ ಅವರ ವಸತಿ ವ್ಯವಸ್ಥೆ ಮಾಡಲಾಯಿತು. ಈ ಕಾರಣದಿಂದಲೇ, ದತ್ತೋಪಂತರ ಶಾಲಾದಿನಗಳ ಸಂಘ-ಶಾಖೆಗಳ ಪ್ರಭಾವ ಇನ್ನಷ್ಟು ಗಾಢವಾಯಿತಲ್ಲದೆ, ಅವರಲ್ಲಿನ ರಾಷ್ಟ್ರಭಕ್ತಿ ದ್ವಿಗುಣವಾಗಿ, ರಾಷ್ಟ್ರಭಕ್ತಿಯ ಪ್ರಬಲ ಭಾವ, ಧ್ಯೇಯಸಾಧನೆಗಾಗಿ ಸಮರ್ಪಣೆ, ಅತ್ಯುನ್ನತ ಆದರ್ಶವಾದೀ ವಿಚಾರಧಾರೆ ಮತ್ತು ಭಾರತೀಯ ಸಂಸ್ಕೃತಿಯ ಶ್ರೇಷ್ಠ ತತ್ತ್ವ ಮತ್ತು ಸಿದ್ಧಾಂತಗಳಿಂದ ದತ್ತೋಪಂತರು ಆಕರ್ಷಿತರಾದರು.
ತಂದೆಯವರ ಅಸಂತುಷ್ಟಿ
ಕಾನೂನು ವ್ಯಾಸಂಗದ ತರುವಾಯ ದತ್ತೋಪಂತರು ರಾಷ್ಟೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗುವ ತೀರ್ಮಾನ ಮಾಡಿದರು. ಸಂಘದ ಪ್ರಚಾರಕನಾಗುವುದೆಂದರೆ, ಪರಿವಾರ ಮತ್ತು ಕೌಟುಂಬಿಕ ವ್ಯವಹಾರಗಳಿಂದ ಮುಕ್ತನಾಗುಳಿಯುವುದು. ಆಜೀವ ಅವಿವಾಹಿತನಾಗಿದ್ದುಕೊಂಡು, ಬ್ರಹ್ಮಚರ್ಯದ ಪಾಲನೆ ಮಾಡಿ, ಪೂರ್ಣತಃ ರಾಷ್ಟ್ರನಿರ್ಮಾಣ ಮತ್ತು ಸಮಾಜಸೇವಾ ಕಾರ್ಯಗಳಲ್ಲಿ ನಿರತರಾಗಿರುವುದು. ಯಾರ ರೋಮರೋಮಗಳಲ್ಲಿ ರಾಷ್ಟ್ರಭಕ್ತಿ ನೆಲಸಿದೆಯೋ ಮತ್ತು ಹೃದಯದಲ್ಲಿ ತಾಯಿ ಭಾರತಿಗಾಗಿ ಸಮಸ್ತವನ್ನೂ ಅರ್ಪಿಸುವ ಬಲಿದಾನಭಾವವಿದೆಯೋ ಅಂಥವರು ಮಾತ್ರವೇ ಈ ರೀತಿಯ ಭೀಷ್ಮ ಪ್ರತಿಜ್ಞೆಯನ್ನು ಕೈಗೊಳ್ಳಬಲ್ಲರು.
ದತ್ತೋಪಂತರೇನೊ ಪ್ರಚಾರಕರಾಗುವ ನಿರ್ಧಾರ ಕೈಗೊಂಡಿದ್ದರು. ಆದರೆ, ಇವರ ತಂದೆಯವರಿಗೆ ಯಾವಾಗ ಈ ವಿಷಯ ತಿಳಿಯಿತೊ, ಅವರು ಕೆಂಡಾಮಂಡಲವಾದರು. ತಾವು ತಮ್ಮ ಯೋಗ್ಯ ಪುತ್ರನ ಜೀವನಕ್ಕಾಗಿ ಯಾವ ಕನಸುಗಳನ್ನು ಕಂಡಿದ್ದರೋ, ಆ ಎಲ್ಲ ಕನಸುಗಳೂ ನುಚ್ಚುನೂರಾಗಿದ್ದವು. ಅವರು ಯೋಚಿಸಿದ್ದರು, ತಮ್ಮ ಮಗ ಯಶಸ್ವಿ ವಕೀಲನಾಗಿ ಸಂಸಾರವನ್ನು ಮುನ್ನಡೆಸುತ್ತಾನೆಂದು. ಇಲ್ಲಿ ನೋಡಿದರೆ, ಮನೆಮಠಗಳನ್ನು ತೊರೆಯುವ ಪರಿಸ್ಥಿತಿ ಎದುರಾಗಿತ್ತು.
ತಂದೆಯ ಕೋಪಕ್ಕೆ ಮೊದಲು ಗುರಿಯಾಗಿದ್ದು ಮಾತೆ ಜಾನಕೀಬಾಯಿ. ‘ನಿನ್ನ ಅಕ್ಕರೆ ಮತ್ತು ಪುತ್ರಮೋಹದಿಂದಲೇ ದತ್ತು ಕೆಟ್ಟುಹೋಗಿದ್ದಾನೆ. ತಂದೆಯ ಯಾವ ಮಾತನ್ನೂ ಕೇಳಿಸಿಕೊಳ್ಳುವುದಿಲ್ಲ. ಅವನ ನೇತಾರ ನಾಗಪುರದಲ್ಲಿರಬಹುದು. ಆದರೆ, ನಾನು ಮಾತ್ರ ಅವನು ಪ್ರಚಾರಕನಾಗಲು ಅನುಮತಿ ನೀಡಲಾರೆ’ ಎಂದು ತಂದೆ ಘೋಷಿಸಿದರು.
ಮಾತೆ ಜಾನಕೀಬಾಯಿ ವಿನಮ್ರಭಾವದಿಂದ ಹೇಳಿದರು: “ನಮ್ಮ ದತ್ತು ಭಗವಾನ್ ದತ್ತಾತ್ರಯನ ಕೃಪಾಶೀರ್ವಾದದಿಂದ ಜನಿಸಿದವನು. ಆದ್ದರಿಂದ ಆತ ಜೀವನದಲ್ಲಿ ದತ್ತಾತ್ರಯನ ಕಾರ್ಯವನ್ನೇ ಮಾಡುತ್ತಾನೆ. ನಾಗಪುರದ ಶ್ರೀಗುರೂಜಿಯುವರು ನಮ್ಮ ಮಗನ ಪ್ರತಿಭೆಯನ್ನು ಗುರುತಿಸಿದ್ದರಿಂದಲೇ, ರಾಷ್ಟ್ರಕಾರ್ಯಕ್ಕಾಗಿ ಕೇರಳಕ್ಕೆ ಕಳುಹಿಸಿಕೊಡುತ್ತಿದ್ದಾರೆ. ಆದ್ದರಿಂದ ದಯಮಾಡಿ ಇವನನ್ನು ಕಳುಹಿಸಿಕೊಡಿ.”
ಆದರೆ, ತಂದೆ ಒಪ್ಪಲಿಲ್ಲ. ತದನಂತರದಲ್ಲಿ, ಶ್ರೀಗುರೂಜಿಯವರು ದತ್ತೋಪಂತರ ತಂದೆಯವರನ್ನೊಪ್ಪಿಸಲು ನಾಗಪುರ ಕಾರ್ಯಾಲಯದಿಂದ ವರಿಷ್ಠ ಪ್ರಚಾರಕರಾದ ಕೃಷ್ಣರಾವ್ ಮೊಹರೀರನ್ನು ಆರ್ವಿಗೆ ಕಳುಹಿಸಿಕೊಟ್ಟರು. ಆರ್ವಿಯ ಅಂದಿನ ಸಂಘಚಾಲಕರಾಗಿದ್ದ ಅಣ್ಣಾಸಾಹೇಬ್ ದೇಶಪಾಂಡೆಯವರನ್ನು ಜೊತೆಗೂಡಿಸಿಕೊಂಡು ಕೃಷ್ಣರಾಯರು, ಬಾಪುರಾಯರನ್ನು ಸಂಧಿಸಲು ಅವರ ನಿವಾಸಕ್ಕೆ ಬಂದರು. ಅವರನ್ನು ನೋಡುತ್ತಲೇ, ಬಾಪುರಾಯರು ಉಚ್ಚ ಸ್ವರದಲ್ಲಿ ಹೇಳಿದರು, “ನಾನು ದತ್ತುವನ್ನು ಪ್ರಚಾರಕನನ್ನಾಗಿ ಕಳುಹಿಸಲಾರೆ. ವಿಷಯ ಇಲ್ಲಿಗೆ ಮುಗಿಯಿತು…”
ಆದರೆ, ಕೃಷ್ಣರಾಯರು ಕೇಳುವ ಪ್ರಶ್ನೆಯೇ ಇರಲಿಲ್ಲ. ಅವರು ಬಾಪೂರಾಯರ ಗರ್ಜನೆಯನ್ನು ಸಂಯಮದಿಂದ ಕೇಳಿಸಿಕೊಂಡು ಕೊನೆಗೆ ನಿವೇದಿಸಿದರು, “ಬಾಪೂಜಿ, ನೀವು ನಮ್ಮ ಪಿತೃಸಮಾನರು. ನಿಮ್ಮ ಮಗ ಸ್ವತಃ ಭಗವಾನ್ ದತ್ತಾತ್ರಯನ ಪ್ರತಿರೂಪ. ಆದ್ದರಿಂದಲೇ, ನೀವು ಅವನ ಹೆಸರನ್ನು ದತ್ತಾತ್ರಯನೆಂದೇ ಇಟ್ಟಿದ್ದೀರಿ. ದತ್ತು, ದತ್ತಾತ್ರಯನ ಕಾರ್ಯವನ್ನೇ ನೆರೆವೇರಿಸುತ್ತಾನೆ ಮತ್ತು ನಿಮ್ಮ ಹೆಸರನ್ನು ವಿಶ್ವದೆಲ್ಲೆಡೆ ಪಸರಿಸುತ್ತಾನೆ. ಹಾಗೆ ನೋಡಿದರೆ ಈಗ ಆತ ಪ್ರಾಪ್ತವಯಸ್ಕ, ಪ್ರತಿಭಾವಂತ; ತನ್ನ ಒಳಿತು ಕೆಡಕುಗಳ ಬಗ್ಗೆ ಯೋಚಿಸಬಲ್ಲ. ತನ್ನ ಜೀವನದ ನಿರ್ಧಾರಗಳನ್ನು ಕೈಗೊಳ್ಳಲು ಆತ ಸಶಕ್ತ ಮತ್ತು ಸ್ವತಂತ್ರ. ಆದರೂ, ತಾವು ಸಂತೋಷದಿಂದ ಪ್ರಚಾರಕನಾಗಿ ಹೊರಡಲು ಅನುಮತಿಸಿ. ಇದರಲ್ಲೇ ನಿಮ್ಮ ಮಾನ-ಸಮ್ಮಾನವಿದೆ.” ಆಗ, ಬಾಪೂರಾಯರ ಕ್ರೋಧ ಶಾಂತವಾಯಿತು ಮತ್ತು ದಿನಾಂಕ 22 ಮಾರ್ಚ್ 1942ರಂದು ದತ್ತೋಪಂತರು ಪ್ರಚಾರಕರಾಗಿ ಸಂಘಕಾರ್ಯಕ್ಕಾಗಿ ಕೇರಳಕ್ಕೆ ಹೊರಟರು. ಈ ಪ್ರಕಾರ ಆ ದಿವಸ ರಾಷ್ಟ್ರಕ್ಕೊಬ್ಬ ಶ್ರೇಷ್ಠ ಪ್ರಚಾರಕ ದೊರೆತ.
ಹದಿನೈದು ದಿನಗಳ ತರುವಾಯ ಬಾಪೂರಾಯರು ಮತ್ತು ತಾಯಿ ಜಾನಕೀಬಾಯಿ ನಾಗಪುರದ ಸಂಘ ಕಾರ್ಯಾಲಯಕ್ಕೆ ಬಂದಿಳಿದರು. ಬಾಪೂರಾಯರು ಶ್ರೀಗುರೂಜಿಯವರಿಗೆ ಪುಷ್ಪಮಾಲೆಯನ್ನು ಮತ್ತು ತೆಂಗಿನಕಾಯಿಯನ್ನು ಸಮರ್ಪಿಸುತ್ತ ಹೇಳಿದರು, “ನನಗೆ ಭಗವಂತನ ಸಾಕ್ಷಾತ್ಕಾರವಾಗಿದೆ. ನಮ್ಮ ಮಗನೀಗ ನಿಮ್ಮ ಅಧೀನ. ಆತ ಸಂಘಕಾರ್ಯ ಮಾಡುತ್ತಾನೆ; ಆದರೆ, ನನ್ನ ಇಚ್ಛೆಯೆಂದರೆ ಆತ ಮನೆಗೂ ಬರುತ್ತಿರಲಿ. ಇದರಿಂದ ನಮಗೂ ಸಂತೋಷವಾಗುತ್ತದೆ.”
ಆ ವೇಳೆಗೆ ಬಾಪೂರಾಯರ ಹೃದಯ ಪರಿವರ್ತನೆಯಾಗಿತ್ತು ಮತ್ತು ತದನಂತರದಲ್ಲಿ ಅವರೂ ಸಹ ಒಬ್ಬ ಶ್ರೇಷ್ಠ ಸ್ವಯಂಸೇವಕರಾದರು.
ಸಂಘಟನೆಗಳ ಸ್ಥಾಪನೆ
1942ರಿಂದ 1944ರವರೆಗೆ ಕೇರಳದಲ್ಲಿ ಮತ್ತು 1948ರ ವರೆಗೆ ಬಂಗಾಳದಲ್ಲಿ ಪ್ರಚಾರಕರಾಗಿ ಸೇವೆ ಸಲ್ಲಿಸಿದ ನಂತರ ದತ್ತೋಪಂತರನ್ನು ನಾಗಪುರಕ್ಕೆ ವಾಪಸು ಕರೆಯಿಸಲಾಯಿತು. ಅಲ್ಲಿ ಅವರು 1949ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದರು. 1951-53ರಲ್ಲಿ ಅವರು ಮಧ್ಯಪ್ರದೇಶ ಮತ್ತು 1956-1957ರ ವರೆಗೆ ದಕ್ಷಿಣಾಂಚಲದ ಭಾರತೀಯ ಜನಸಂಘದ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಈ ನಡುವೆ 1950-51ರಲ್ಲಿ ಕಾರ್ಮಿಕ ಕ್ಷೇತ್ರದ ಬಗ್ಗೆ ಅನುಭವ ಪಡೆಯಲು ಕಾರ್ಮಿಕ ಸಂಘಟನೆ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸಿನ (INTUC) ಸಂಘಟನಾ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದರು.
ಭಾರತೀಯ ಮಜ್ದೂರ್ ಸಂಘದ ಸ್ಥಾಪನೆ
ಭಾರತೀಯ ಮಜ್ದೂರ್ ಸಂಘದ ಸ್ಥಾಪನೆ ಶೂನ್ಯದಿಂದ ಸಮಷ್ಠಿಯನ್ನು ಸೃಷ್ಟಿಸುವ ಸಂಕಲ್ಪದ್ದಾಗಿತ್ತು. ಮಜ್ದೂರ್ ಸಂಘದ ಸ್ಥಾಪನೆಯ ಮೂಲ ಉದ್ದೇಶವೆಂದರೆ, ಕಾರ್ಮಿಕಕ್ಷೇತ್ರದಲ್ಲಿ ಕಾರ್ಮಿಕರೇ, ಕಾರ್ಮಿಕರಿಗಾಗಿ, ಕಾರ್ಮಿಕರನ್ನು ಸಂಘಟಿಸುವ ಸಿದ್ಧಾಂತವನ್ನು ಹೊಂದಿದ ರಾಷ್ಟ್ರ, ಉದ್ದಿಮೆ ಮತ್ತು ಕಾರ್ಮಿಕರ ಒಟ್ಟಾರೆ ಹಿತಚಿಂತನೆಯನ್ನು ಮಾಡುವ ಸಂಘಟನೆಯನ್ನು ಹುಟ್ಟುಹಾಕುವುದಾಗಿತ್ತು.
ಯಾವುದೇ ರೀತಿಯ ಸರಕಾರದ ಪ್ರಭಾವ, ರಾಜಕೀಯ ಪಕ್ಷ ಅಥವಾ ಮುಖಂಡರ ಪ್ರಭಾವ ಅಥವಾ ಹಸ್ತಕ್ಷೇಪ, ಉದ್ದಿಮೆಯ ಮಾಲೀಕರ ಪ್ರಭಾವ, ವೈಯಕ್ತಿಕ ಪ್ರತಿಷ್ಠೆ ಮತ್ತು ಹಿತಾಸಕ್ತಿ ಮೀರಿ, ವಿದೇಶೀ ವಿಚಾರಧಾರೆಯಿಂದ ಸಂಪೂರ್ಣವಾಗಿ ಮುಕ್ತವಾದ ಕೇವಲ ರಾಷ್ಟ್ರಹಿತವನ್ನೇ ಚಿಂತಿಸುವ ಸ್ವಾಯತ್ತವಾಗಿ ಕಾರ್ಯನಿರ್ವಹಿಸುತ್ತಾ, ಸಂಘಟನೆ ಮತ್ತು ಚಳವಳಿಗಳನ್ನು ಸಂಘಟಿಸುವ ಕಾರ್ಮಿಕ ಸಂಘಟನೆಯಾಗಿ ರೂಪುಗೊಳಿಸುವುದೇ ಭಾರತೀಯ ಮಜ್ದೂರ್ ಸಂಘದ ಸ್ಥಾಪನೆಯ ಹಿಂದಿನ ಧ್ಯೇಯೋದ್ದೇಶವಾಗಿತ್ತು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳಿಂದ ಪ್ರೇರಣೆಗೊಂಡು, ಭಾರತೀಯ ಆರ್ಥಿಕಚಿಂತನೆಯನ್ನು ಮೈಗೂಡಿಸಿಕೊಳ್ಳುವ ಸಂಘಟನೆಯೊಂದರ ಅಗತ್ಯತೆಯನ್ನು ಮನಗಂಡೇ ಭಾರತೀಯ ಮಜ್ಜೂರ್ ಸಂಘ ಸ್ಥಾಪನೆಯಾಗಿತ್ತು.
‘ರಾಷ್ಟ್ರದ ಔದ್ಯೋಗೀಕರಣ – ಉದ್ದಿಮೆಗಳ ಶ್ರಮಿಕೀಕರಣ – ಶ್ರಮಿಕರ ರಾಷ್ಟ್ರೀಯಕರಣ’ ಈ ತ್ರಿವಳಿ ಸೂತ್ರವನ್ನು ದೇಶದ ಕಾರ್ಮಿಕ ಚಳವಳಿಗೆ ನೀಡಿದವರು ದತ್ತೋಪಂತರು. ‘ಜಗತ್ತಿನ ಕಾರ್ಮಿಕರೇ, ಒಂದಾಗಿ’ ಎಂಬ ಕಮ್ಯೂನಿಸ್ಟರ ಘೋಷಣೆಗೆ ಪರ್ಯಾಯವಾಗಿ ‘ಕಾರ್ಮಿಕರೇ, ಜಗತ್ತನ್ನು ಒಂದಾಗಿಸಿ’ ಎಂಬ ನೈಜ ಭ್ರಾತೃತ್ವದ ಘೋಷವಾಕ್ಯವನ್ನು ನೀಡಿದರು. ಹಾಗೆಯೇ, ‘ಕೆಂಪು ಗುಲಾಮಗಿರಿ ತೊರೆದು ಹೇಳಿ – ವಂದೇ ಮಾತರಂ’ ಮುಂತಾದ ಹೊಸ ಹೊಳಹಿನ ಘೋಷಣೆಗಳನ್ನು ಕೇಳಿ ಭಾರತದ ಕಾರ್ಮಿಕರು ಪುಳಕಿತರಾದರು.
ಕೆಂಪುಧ್ವಜದ ಬದಲಿಗೆ ಮಜ್ದೂರ್ ಸಂಘವು ಭಗವಾಧ್ವಜವನ್ನು ತನ್ನ ಪ್ರೇರಣಾ ಸ್ರೋತವಾಗಿ ಸ್ವೀಕರಿಸಿತು; ಹಾಗೆಯೇ ಕುಡುಗೋಲು ಸುತ್ತಿಗೆಯ ಬದಲಿಗೆ ಮಾನವನ ಮುಷ್ಟಿ ಮತ್ತು ಔದ್ಯೋಗಿಕ ಚಕ್ರವನ್ನು ತನ್ನ ಲಾಂಛನವಾಗಿಸಿಕೊಂಡಿತು. ಕಮ್ಯೂನಿಸ್ಟರ ಮೇ ದಿನಾಚರಣೆಯ ಬದಲಿಗೆ 17 ಸೆಪ್ಟೆಂಬರಿನಂದು ‘ವಿಶ್ವಕರ್ಮ ದಿನಾಚರಣೆ’ಯನ್ನು ಆಚರಿಸುವ ಸತ್ಸಂಪ್ರದಾಯವನ್ನು ಹುಟ್ಟುಹಾಕಲಾಯಿತು.
ಈ ರೀತಿ ಪುಟ್ಟ-ದಿಟ್ಟ ಹೆಜ್ಜೆಗಳೊಂದಿಗೆ ಮುನ್ನಡೆದ ಭಾರತೀಯ ಮಜ್ದೂರ್ ಸಂಘ, ಕೆಂಪುಕೋಟೆಯ ಮೇಲೆ ಕೆಂಪುಧ್ವಜವನ್ನು ಹಾರಿಸುವ ಕಮ್ಯೂನಿಸ್ಟರ ಕನಸನ್ನು ನುಚ್ಚುನೂರು ಮಾಡಿತು. ಸ್ಥಾಪನೆಯ ಸಮಯದಲ್ಲಿ ಯಾವ ಸಂಘಟನೆಯ ಸದಸ್ಯತ್ವವು ಶೂನ್ಯದಲ್ಲಿತ್ತೋ, ಅದೇ ಸಂಘಟನೆ ಇಂದು ಎರಡು ಕೋಟಿಗೂ ಮಿಗಿಲಾದ ಸದಸ್ಯತ್ವ ಹೊಂದಿ, ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಅತ್ಯಂತ ದೊಡ್ಡ ಸ್ವಾಯತ್ತ ಕಾರ್ಮಿಕ ಸಂಘಟನೆಯಾಗಿ ಬೆಳೆದಿದೆ.
ಠೇಂಗಡಿ ಅಪ್ರತಿಮ ಚಿಂತಕರಾಗಿದ್ದರು. ಇದೆಲ್ಲದರ ಜೊತೆಗೆ ಅವರಲ್ಲೊಬ್ಬ ಅದ್ಭುತ ಸಿದ್ಧಹಸ್ತ ಸಾಹಿತಿ ಮತ್ತು ಲೇಖಕನಿದ್ದ. ಇವರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಮತ್ತು ಪುಸ್ತಕಗಳಿಗೆ ಮುನ್ನುಡಿಗಳನ್ನೂ ಬರೆದಿದ್ದಾರೆ. ಇವರು ಬರೆದ ‘ಸಂಕೇತ ರೇಖಾ’ ಮತ್ತು ‘ಥರ್ಡ್ ವೇ’ಎಂಬ ಪುಸ್ತಕಗಳು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿವೆ. ಅವರೊಬ್ಬ ಅದ್ಭುತ ಮತ್ತು ಓಜಸ್ವೀ ವಾಗ್ಮಿಯಾಗಿದ್ದರು; ಅಲ್ಲದೆ, ಅವರಲ್ಲೊಬ್ಬ ಅಪ್ರತಿಮ ದಾರ್ಶನಿಕನಿದ್ದ. ಭಾರತದಲ್ಲೂ ಸೇರಿದಂತೆ ಇಡೀ ವಿಶ್ವದಲ್ಲಿ 1989ರಷ್ಟರಲ್ಲಿ ಕಮ್ಯೂನಿಸಂ ಅವಸಾನಗೊಳ್ಳುತ್ತದೆಯೆಂಬುದಾಗಿ ಅವರು 1970ರಲ್ಲೇ ನುಡಿದಿದ್ದರು. ಅಷ್ಟೇ ಅಲ್ಲ, 2010ರಷ್ಟರಲ್ಲಿ ಬಂಡವಾಳಶಾಹಿಯೂ ಮರಣಶಯ್ಯೆ ಸೇರುತ್ತದೆ ಎಂಬುದನ್ನೂ ಠೇಂಗಡಿಯವರು ಹೇಳಿದ್ದರು. ಅವರ ಅಧ್ಯಯನಕ್ಕೆ ಯಾವುದೇ ಸೀಮೆಗಳಿರಲಿಲ್ಲ.
ಬಂಡವಾಳಶಾಹಿ ಮತ್ತು ಕಮ್ಯೂನಿಸಂ ಪರ್ಯವಸಾನವಾಗಿ ನಿರ್ಮಾಣವಾಗಿರುವ ಈ ನಿರ್ವಾತದಲ್ಲಿ ಇಡೀ ವೈಚಾರಿಕ ಜಗತ್ತು ಇಂದು ದೀನದಯಾಳ್ ಉಪಾಧ್ಯಾಯರ ‘ಏಕಾತ್ಮಮಾನವದರ್ಶನ’ಮತ್ತು ಠೇಂಗಡಿಯವರ ‘ತೃತೀಯ ಪರ್ಯಾಯ’ಗಳನ್ನು ಅರ್ಥೈಸಿಕೊಳ್ಳುವತ್ತ ಹೊರಳುತ್ತಿದೆ.
ಭಾರತೀಯ ಕಿಸಾನ್ ಸಂಘ
1960ರ ದಶಕದಲ್ಲಿ ಆಹಾರಧಾನ್ಯಗಳ ವಿಚಾರದಲ್ಲಿ ನಮ್ಮ ದೇಶ ಸಂಪೂರ್ಣವಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿತ್ತು. ಅಂದಿನ ಪ್ರಧಾನಮಂತ್ರಿಯಾಗಿದ್ದ ಲಾಲ್ ಬಹಾದುರ್ ಶಾಸ್ತ್ರಿಯವರು ಒಂದು ಹೊತ್ತಿನ ಊಟವನ್ನು ತೊರೆಯುವಂತೆ ದೇಶವಾಸಿಗಳನ್ನು ಕೋರಿಕೊಂಡಿದ್ದರು. ಇದರಿಂದ ದೇಶ ಎಂತಹ ಗಂಭೀರ ಪರಿಸ್ಥಿತಿಯನ್ನೆದುರಿಸುತ್ತಿತ್ತು ಎಂಬುದನ್ನು ಊಹಿಸಬಹುದು. 1952ರ ನಂತರ ಸೋವಿಯೆತ್ ಮಾದರಿಯ ಪಂಚವಾರ್ಷಿಕ ಯೋಜನೆಗಳನ್ನು ನಾವು ಕುರುಡಾಗಿ ಅನುಸರಿಸಿದ್ದರ ಪರಿಣಾಮ ಇದಾಗಿತ್ತು.
ನಾವು ಕೃಷಿ-ರೈತ ಮತ್ತು ಗ್ರಾಮಗಳನ್ನು ಬರಿ ಕಚ್ಚಾಸರಕನ್ನು ಸರಬರಾಜು ಮಾಡುವ ಸಾಧನಗಳನ್ನಾಗಿ ಮಾತ್ರವೇ ಪರಿಗಣಿಸಿದ್ದೆವು; ಅದೇ ರೀತಿಯ ನೀತಿಗಳನ್ನೇ ಅನುಸರಿಸುತ್ತ ಸಾಗಿದ್ದೆವು. ಪರಿಣಾಮಸ್ವರೂಪ, ಕೃಷಿ ಮತ್ತು ಕೃಷಿಕರ ಪರಿಸ್ಥಿತಿ ಬಿಗಡಾಯಿಸುತ್ತ ಸಾಗಿದ್ದಲ್ಲದೆ, ಗ್ರಾಮಗಳೂ ವಿನಾಶದ ಅಂಚಿಗೆ ಸಾಗಿದ್ದವು. ಇಂತಹ ಸಂದರ್ಭದಲ್ಲಿ ಅನೇಕ ರೈತಚಳವಳಿಗಳು ನಡೆಯುತ್ತಿದ್ದವು; ನಾನಾ ವಿಚಾರಧಾರೆಯ ಜನರು ರೈತರಿಗೆ ನೇತೃತ್ವ ನೀಡುತ್ತಿದ್ದರು. ಇವೆಲ್ಲವುಗಳ ಉದ್ದೇಶ ತುಂಬಾ ಸೀಮಿತವಾಗಿತ್ತು ಅಥವಾ ರಾಜಕೀಯಪ್ರೇರಿತವಾಗಿತ್ತು.
ಕಾಂಗ್ರೆಸ್ ಅಧಿಕಾರದಲ್ಲಿದ್ದ ಕಾರಣ ಇವರು ರೈತರ ಮಧ್ಯೆ ಸಂಘಟನೆಗಳನ್ನು ನಡೆಸುತ್ತಿರಲಿಲ್ಲ. ಚುನಾವಣೆಗಳು ಸಮೀಪಿಸಿದಾಗಲೆಲ್ಲ ಒಂದಷ್ಟು ಲಾಲಿಪಾಪ್ ನೀಡಿ ರೈತರನ್ನು ಸಂತೈಸಲಾಗುತ್ತಿತ್ತು. ಇನ್ನುಳಿದಂತೆ ಸರಕಾರದ ರೈತವಿರೋಧಿ ಮತ್ತು ಶೋಷಕ ನೀತಿಗಳು ಅಬಾಧಿತವಾಗಿ ಸಾಗುತ್ತಿದ್ದವು.
ಕಮ್ಯೂನಿಸ್ಟ್ ವಿಚಾರಧಾರೆಯ ಸಂಘಟನೆಗಳು ವರ್ಗಸಂಘರ್ಷವನ್ನು ನಿರ್ಮಿಸಿ, ಅಧಿಕಾರವನ್ನು ಹಿಡಿಯಲು ಮೆಟ್ಟಿಲಾಗಿ ರೈತ ಮತ್ತು ಕೃಷಿಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದವು. ನೀತಿ ನಿರೂಪಣೆ ಮತ್ತು ವಿಕಾಸದ ಮಾದರಿಗಳನ್ನು ರೂಪಿಸುವ ಸರಕಾರಿಯಂತ್ರದಲ್ಲೂ ಕಮ್ಯೂನಿಸ್ಟ್ ಪ್ರಭಾವಳಿಯ ಜನರೇ ಕುಳಿತಿದ್ದರು. ಇವರಲ್ಲದೆ, ಇನ್ನೂ ಅನೇಕರು ರೈತರ ಸಮಸ್ಯೆಗಳನ್ನು ನೀಗಿಸಲು ತಮಗೆ ತಿಳಿದ ದಾರಿಗಳಲ್ಲಿ ಸಾಗಿ ಪ್ರಯತ್ನ ನಡೆಸಿದ್ದರು. ಆದರೆ, ಇವೆಲ್ಲ ಪ್ರಯಾಸಗಳು ಸೀಮಿತ ದೃಷ್ಟಿಕೋನ ಮತ್ತು ಪ್ರಭಾವ ಹೊಂದಿದ್ದವು. ಇವೆಲ್ಲವುಗಳ ಹಿಂದಿನ ಚಿಂತನೆಯೂ ಸಂಕುಚಿತವೂ ರಾಜಕೀಯ ಪ್ರೇರಿತವೂ ಆಗಿತ್ತು. ಈ ಕಾರಣದಿಂದಾಗಿ, ರೈತರ ಸಮಸ್ಯೆಗಳು ಪರಿಹಾರವಾಗುವುದಿರಲಿ, ಇನ್ನಷ್ಟು ಜಟಿಲಗೊಳ್ಳುತ್ತ ಸಾಗಿದ್ದವು.
ರಾಷ್ಟ್ರಹಿತವನ್ನು ಸಾಧಿಸುತ್ತಲೇ, ರೈತರ ಸಮಸ್ಯೆಗಳನ್ನೂ ನೀಗಿಸುವತ್ತ ಮಾರ್ಗೋಪಾಯಗಳನ್ನು ಹುಡುಕುವ ಚಿಂತನೆ ರಾಷ್ಟ್ರಹಿತವನ್ನು ಕುರಿತು ಚಿಂತಿಸುತ್ತಿದ್ದ ಪ್ರತಿಯೊಬ್ಬರಲ್ಲೂ ಸಾಗಿತ್ತು. ಉತ್ತರಪ್ರದೇಶ, ವಿದರ್ಭ ಸೇರಿದಂತೆ ದೇಶದಾದ್ಯಂತ ಹಲವೆಡೆ ಒಂದಾಗಿ ರೈತರು ಸಂಘಟನೆಯನ್ನು ಸ್ಥಾಪಿಸುವ ಪ್ರಯತ್ನದಲ್ಲಿದ್ದರು. ಇವರಲ್ಲಿ ಸಂಘದ ಸ್ವಯಂಸೇವಕರೂ ಹಲವರಿದ್ದರು. ವಿದರ್ಭದಂಥ ಪ್ರದೇಶಗಳಲ್ಲಂತೂ ಸ್ವತಃ ಪ್ರಗತಿಪರ ರೈತರಾಗಿದ್ದ ಸಂಘಚಾಲಕರೊಬ್ಬರು ರೈತರ ಸಂಘಟನೆಯನ್ನು ಹುಟ್ಟುಹಾಕುವಲ್ಲಿ ಮುಂಚೂಣಿಯಲ್ಲಿದ್ದರು.
1968ರಲ್ಲಿ ವಾರ್ಧಾದಲ್ಲಿ ನಡೆದ ಸಭೆಯಲ್ಲಿ ರೈತರ ಕೃಷಿಸಂಬಂಧಿ ಸಮಸ್ಯೆಗಳ ಬಗ್ಗೆ ಗಹನ ಚಿಂತನೆ ನಡೆದು ರೈತರ ಸಂಘಟನೆಯೊಂದನ್ನು ಹುಟ್ಟುಹಾಕುವ ಬಗ್ಗೆ ಚಿಂತನೆ ಮಾತ್ರವಲ್ಲ, ನಿಶ್ಚಯವೂ ಆಯಿತು. ಇದರಲ್ಲಿ ಶ್ರೀಗುರೂಜಿ ಮತ್ತು ಬಾಳಾಸಾಹೇಬ್ ದೇವರಸರ ಜೊತೆಯಲ್ಲಿ ಠೇಂಗಡಿಯವರೂ ಪ್ರಮುಖವಾಗಿ ಉಪಸ್ಥಿತರಿದ್ದರು.
ತುರ್ತುಪರಿಸ್ಥಿತಿ ಹೇರಲ್ಪಟ್ಟಿದ್ದರಿಂದ ಈ ಕಾರ್ಯ ಕುಂಠಿತಗೊಂಡಿತು. ತುರ್ತುಪರಿಸ್ಥಿತಿಯ ನಂತರದಲ್ಲಿ ಮತ್ತೆ ಈ ಪ್ರಯತ್ನಕ್ಕೆ ಮರುಚಾಲನೆ ದೊರೆಯಿತು.
4 ಮಾರ್ಚ್ 1979ರಂದು ರಾಜಸ್ಥಾನದ ಕೋಟಾದಲ್ಲಿ ಠೇಂಗಡಿಯವರ ಪ್ರಯಾಸದಿಂದ ಭಾರತೀಯ ಕಿಸಾನ್ ಸಂಘದ ಸ್ಥಾಪನೆಯಾಯಿತು. ಈವತ್ತಿಗೆ, 40 ವರ್ಷಗಳನಂತರ, ಅವರ ಜನ್ಮಶತಮಾನದ ಸಂದರ್ಭದಲ್ಲಿ ಈ ಸಂಘಟನೆ 534ಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ 30 ಲಕ್ಷದಷ್ಟು ಸದಸ್ಯರನ್ನು ಹೊಂದಿದ ದೇಶದ ಬಹುದೊಡ್ಡ ರೈತರ ಸಂಘಟನೆಯ ರೂಪದಲ್ಲಿ ನಿಂತಿದೆ.
ಮತ್ತಿತರ ಸಂಘಟನೆಗಳ ಸ್ಥಾಪನೆ
22 ನವೆಂಬರ್ 1991ರಂದು ವೈಚಾರಿಕ ಕ್ಷೇತ್ರದಲ್ಲಿ ‘ಸ್ವದೇಶೀ ಜಾಗರಣ ಮಂಚ್’ ಪ್ರಮುಖ ಸಂಘಟನೆಯನ್ನು ಠೇಂಗಡಿಯವವರು ಹುಟ್ಟುಹಾಕಿದರು. ‘ಸಾಮಾಜಿಕ ಸಮರಸತಾ ಮಂಚ್’ ಮತ್ತು ‘ಸರ್ವ ಪಂಥ ಸಮಾದರ್ ಮಂಚ್’ ಎಂಬ ಎರಡು ಸಂಘಟನೆಗಳು, ಕ್ರಮವಾಗಿ 14 ಏಪ್ರಿಲ್ 1983 ಮತ್ತು 14 ಏಪ್ರಿಲ್ 1991ರಂದು ದತ್ತೋಪಂತರಿಂದ ಸ್ಥಾಪಿತಗೊಂಡವು. ‘ಪರ್ಯಾವರಣ್ ಮಂಚ್’ ಮತ್ತು ‘ಅಖಿಲ ಭಾರತೀಯ ಅಧಿವಕ್ತಾ ಪರಿಷತ್’ ಇವರ ಮಾರ್ಗದರ್ಶನದಲ್ಲೇ ಸ್ಥಾಪಿತಗೊಂಡ ಸಂಘಟನೆಗಳು. ‘ಸಹಕಾರ ಭಾರತಿ’ಯನ್ನೂ ಸಹ ಸ್ಥಾಪಿಸಲಾಯಿತು. ‘ಪ್ರಜ್ಞಾ ಭಾರತಿ’ (ಈಗ ಪ್ರಜ್ಞಾಪ್ರವಾಹ) ಮತ್ತು ‘ಅಖಿಲ ಭಾರತೀಯ ಗ್ರಾಹಕ ಪಂಚಾಯತ್’ ಸಂಘಟನೆಗಳ ಸ್ಥಾಪನೆಯಲ್ಲಿ ಠೇಂಗಡಿಯವರ ಕೊಡುಗೆ ಮತ್ತು ಮಾರ್ಗದರ್ಶನ ಅಪಾರವಾದದ್ದು. ತತ್ತ್ವಜ್ಞಾನಿ ಮತ್ತು ದಾರ್ಶನಿಕರಾಗಿದ್ದ ಠೇಂಗಡಿಯವವರು ಅಸಾಮಾನ್ಯ ದೂರದರ್ಶಿತ್ವ ಹೊಂದಿದ್ದರು. ಇವರು ತಮ್ಮ ದ್ರಷ್ಟಾರಸದೃಶ ಚಿಂತನೆ ಮತ್ತು ಸಂಘಟನಾ ಕೌಶಲಗಳೆರಡನ್ನೂ ರಾಷ್ಟ್ರನಿರ್ಮಾಣ ಮತ್ತು ಸಮಾಜದಲ್ಲಿ ಸಮರಸತೆಯನ್ನು ಪಸರಿಸುವಲ್ಲಿ ವಿನಿಯೋಗಿಸಿದರು. ಠೇಂಗಡಿಯವರು ಸ್ಥಾಪಿಸಿದ ಮತ್ತು ಮಾರ್ಗದರ್ಶನ ನೀಡಿದ ಪ್ರತಿಯೊಂದು ಸಂಘಟನೆಯೂ ಇಂದು ದೇಶದಾದ್ಯಂತ ಸಕ್ರಿಯವಾಗಿದೆ. ಹಾಗೆಯೇ ರಾಷ್ಟ್ರಹಿತ ಮತ್ತು ಸಂಪೂರ್ಣ ಮಾನವತೆಯ ಕಲ್ಯಾಣಕ್ಕಾಗಿ ಕಟಿಬದ್ಧವಾಗಿದೆ. ದತ್ತೋಪಂತರ ಸಾಧನೆ ಅತ್ಯಂತ ಮಹತ್ತ್ವದ್ದೆನಿಸಲು ಒಂದು ಮಹತ್ತರವಾದ ಕಾರಣವಿದೆ. ಯಾವ ಕ್ಷೇತ್ರಗಳಲ್ಲಿ ಕೇವಲ ಶ್ರದ್ಧೆ ಅಥವಾ ರಾಷ್ಟ್ರಭಕ್ತಿ ಕೆಲಸ ಮಾಡದೋ, ಸಂಘರ್ಷವೇ ಪ್ರಧಾನವಾದ ಆ ಕ್ಷೇತ್ರಗಳಲ್ಲಿ ಠೇಂಗಡಿಯವರ ಪ್ರಯಾಸದಿಂದ ಸಂಘದ ಸಂಸ್ಕಾರ ಪಡೆದ ಸಂಘಟನೆಗಳು ಹುಟ್ಟಿಕೊಂಡಿವೆ. ವಾಕ್ಚಾತುರ್ಯ ಮತ್ತು ಬುದ್ಧಿಮತ್ತೆಯನ್ನು ದೇಶವನ್ನು ಒಡೆಯಲು ಬಳಸಿಕೊಳ್ಳುತ್ತಿದ್ದ ಎಡಪಂಥೀಯರ ಬಿಲಗಳು ಒಂದೊಂದಾಗಿ ಖಾಲಿಯಾಗಿವೆ. ಬಂಡವಾಳಶಾಹಿ ಮತ್ತು ಕಮ್ಯೂನಿಸ್ಟ್ ಸರ್ವಾಧಿಕಾರದ ನಿರರ್ಥಕತೆಯನ್ನು ಕೇವಲ ಭಾಷಣಗಳಿಂದ ಮಾತ್ರವಲ್ಲ, ತಮ್ಮ ಕಾರ್ಯಶಕ್ತಿಯಿಂದ ಸಾಬೀತುಪಡಿಸಿದ ಸಮಾಜವಿಜ್ಞಾನಿ ದತ್ತೋಪಂತ್ ಠೇಂಗಡಿ.