ದೇಶ ಕಂಡ ಓರ್ವ ಮಹಾನ್ ನಾಯಕ, ದಲಿತರ ಉದ್ಧಾರಕ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ದೇಶದ ಬಲಪಂಥೀಯರು (ಬಿಜೆಪಿ, ಆರ್.ಎಸ್.ಎಸ್. ಇತ್ಯಾದಿ) ‘ಕಿಡ್ನ್ಯಾಪ್ ಮಾಡುತ್ತಿದ್ದಾರೆ’ ಎನ್ನುವ ಒಂದು ಮಾತನ್ನು ನಾವು ಆಗೀಗ ಕೇಳುತ್ತಿರುತ್ತೇವೆ. ಈ ಮಾತನ್ನು ಹೇಳುತ್ತಿರುವವರು ಯಾರು ಎನ್ನುವುದು ತುಂಬ ಕುತೂಹಲಕರ. ಅಂಬೇಡ್ಕರ್ಗೆ ಯಾರು ಬಹಳಷ್ಟು ಅಡೆತಡೆಗಳನ್ನೊಡ್ಡಿ ಕಿರುಕುಳ ನೀಡಿದರೋ, ಅವರನ್ನು ರಾಜಕೀಯವಾಗಿ ಬದಿಗೊತ್ತಿದರೋ ಅಂತಹ ಕಾಂಗ್ರೆಸಿಗರು, ಯಾರಿಂದ ತಮ್ಮ (‘ಅಸ್ಪೃಶ್ಯ’) ಸಮುದಾಯಕ್ಕೆ ಅಪಾಯವಿದೆಯೆಂದು ಅಂಬೇಡ್ಕರ್ ಸದಾ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಬಂದರೋ ಅಂತಹ ಕಮ್ಯೂನಿಸ್ಟರು ಮತ್ತು ಚರ್ಚ್, ಯಾರ ವಿರುದ್ಧ ಸವರ್ಣೀಯರು ಮತ್ತು ಪರಿಶಿಷ್ಟ ಜಾತಿಯವರು ಇಬ್ಬರನ್ನೂ ಅಂಬೇಡ್ಕರ್ ಸದಾ ಎಚ್ಚರಿಸುತ್ತ ಬಂದರೋ ಅಂತಹ ಮುಸಲ್ಮಾನ ಮಾನಸಿಕತೆಯ ಜನ – ಇವರೆಲ್ಲ ಈಗ ಬಲಪಂಥೀಯರೆನ್ನುವವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅಂಬೇಡ್ಕರ್ ಜೀವನದ ಕೊನೆಯ ವರ್ಷಗಳನ್ನು ಗಮನಿಸಿದಾಗ ಯಾವ ಬಗೆಯ ಚಿಂತೆಗಳು ಅವರನ್ನು ಕಾಡುತ್ತಿದ್ದವು ಮತ್ತು ಏಕಾಗಿ ಅವರು ತಮ್ಮ ಸಮುದಾಯದೊಂದಿಗೆ ಬೌದ್ಧಧರ್ಮಕ್ಕೆ ಮತಾಂತರಗೊಂಡರು ಎಂಬುದು ಸ್ಪಷ್ಟವಾಗುತ್ತದೆ. ಅಂತಹ ಸುಮಾರು ನಾಲ್ಕು ವರ್ಷಗಳ ಕಾಲ ಅಂಬೇಡ್ಕರ್ ಅವರ ಜೊತೆಗಿದ್ದು, ಅವರ ಎಲ್ಲ ತೊಳಲಾಟಗಳಲ್ಲಿ ಭಾಗಿಯಾಗಿದ್ದವರು ಈಗ ನಾವು ಜನ್ಮಶತಮಾನೋತ್ಸವವನ್ನು ಆಚರಿಸುತ್ತಿರುವ ದತ್ತೋಪಂತ ಬಾಪುರಾವ್ ಠೇಂಗಡಿ ಅವರು.
ದೇಶದ ಕಾರ್ಮಿಕ ಸಂಘಟನೆಯ ಸದಸ್ಯಬಲದಲ್ಲಿ ಒಂದನೇ ಸ್ಥಾನದಲ್ಲಿರುವ ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಸ್ಥಾಪಕರು ಮತ್ತು ಅದನ್ನು ಆ ಮಟ್ಟಕ್ಕೆ ಬೆಳೆಸಿದವರು ಇದೇ ಠೇಂಗಡಿಜೀ ಅವರು ಎಂದರೆ ಅವರ ಬಗ್ಗೆ ಹೇಳಿದಂತಾಗುತ್ತದೆ.
ಅಂಬೇಡ್ಕರ್ ಆತ್ಮೀಯ
ಅಂಬೇಡ್ಕರ್ ಮತ್ತು ಠೇಂಗಡಿ ಅವರ ಸಂಬಂಧ ಕುತೂಹಲಕರವಾಗಿತ್ತು. ಅಂಬೇಡ್ಕರ್ ಇವರಿಗಿಂತ 31 ವರ್ಷ ಹಿರಿಯರಾದರೂ ಇವರನ್ನು ತುಂಬ ಆತ್ಮೀಯ ವಲಯಕ್ಕೆ ಸೇರಿಸಿಕೊಂಡಿದ್ದರು. ಚಿಂತಕ-ಲೇಖಕ ಎಸ್. ಗುರುಮೂರ್ತಿ ಅವರು ಒಮ್ಮೆ ಠೇಂಗಡಿ ಅವರೊಂದಿಗೆ ಮಾತನಾಡುವಾಗ ಅಂಬೇಡ್ಕರ್ ಅವರ ವಿಷಯ ಪ್ರಸ್ತಾಪವಾಯಿತಂತೆ. ಆಗ ಠೇಂಗಡಿ ಅವರು “ಅಂಬೇಡ್ಕರ್ ಬಗೆಗಿನ ಅರುಣ್ ಶೌರಿ ಅವರ ತೀರ್ಮಾನಗಳನ್ನು ನಾನು ಒಪ್ಪುವುದಿಲ್ಲ” ಎಂದು ಹೇಳಿದರು. ಅದಕ್ಕೆ ಗುರುಮೂರ್ತಿ ಅವರು “ಅರುಣ್ ಶೌರಿ ತಮ್ಮ ಪುಸ್ತಕದಲ್ಲಿ ದಾಖಲೆಗಳ ಸಹಿತ ಹೇಳಿದ್ದಾರಲ್ಲವೆ?” ಎಂದು ಕೇಳಿದರು. ಆಗ ದತ್ತೋಪಂತರು “ಜೀವನದಲ್ಲಿ ಭಾರೀ ಸವಾಲುಗಳನ್ನು ಎದುರಿಸಬೇಕಿರುವ ಜನರ ಜೀವನ ಎಲ್ಲವೂ ದಾಖಲೆಗೆ ಸಿಗಲು ಸಾಧ್ಯವೆ? ಅಂಬೇಡ್ಕರ್ ಅವರು ಎದುರಿಸಿದ ಸಂಕೀರ್ಣ ಕಾಲವನ್ನು ದಾಖಲೆಗಳಿಂದ ಓದಲು ಸಾಧ್ಯವಿಲ್ಲ. ಏಕೆಂದರೆ, ದಾಖಲೆಗಳು ಬಹಳ ಸಲ ನಿಜವನ್ನು ಮುಚ್ಚಿಡುತ್ತವೆ. ಆದ್ದರಿಂದ ದಾಖಲೆಗಳ ಮೂಲಕ ಅಂಬೇಡ್ಕರ್ ಜೀವನದ ಚಿತ್ರಣ ಅಸಾಧ್ಯ” ಎಂದು ಅಧಿಕಾರವಾಣಿಯಿಂದ ಹೇಳಿದರಂತೆ. ಈ ಅಧಿಕಾರವಾಣಿಯ ಹಿಂದೆ ಅಂಬೇಡ್ಕರ್ ಜೊತೆಗಿನ ಅಮೂಲ್ಯ ಸಾಹಚರ್ಯದ ಬಲ ಇತ್ತು.
ಬಿ.ಆರ್. ಅಂಬೇಡ್ಕರ್ ಅವರು ಕೂಡ ಠೇಂಗಡಿ ಅವರಲ್ಲಿ ಅಂಥದೇ ವಿಶ್ವಾಸವನ್ನು ಹೊಂದಿದ್ದರು. ತಮ್ಮ ಪರಿಶಿಷ್ಟ ಜಾತಿ ಫೆಡರೇಶನ್ನಿಗೆ ಅಂಬೇಡ್ಕರ್ (ಬ್ರಾಹ್ಮಣ) ಠೇಂಗಡಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಅದೇಕೆ – ಎಂದು ಅವರ ಸಮುದಾಯದ ಒಬ್ಬರು ಪ್ರಶ್ನಿಸಿದಾಗ ಅಂಬೇಡ್ಕರ್ “ಯಾವ ದಿನ ನೀವು ದತ್ತೋಪಂತರಿಗಿಂತ ಹೆಚ್ಚಿನ (ದೊಡ್ಡ) ದಲಿತರಾಗುತ್ತೀರೋ ಅಂದೇ ನಿಮ್ಮನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸುತ್ತೇನೆ” ಎಂದು ಉತ್ತರಿಸಿದರಂತೆ.
ಕೆಲವು ಪ್ರಮುಖ ವಿಷಯಗಳ ಕುರಿತು ಅಂಬೇಡ್ಕರ್ ಠೇಂಗಡಿ ಅವರೊಂದಿಗೆ ಗಂಭೀರ ಚರ್ಚೆ ನಡೆಸುತ್ತಿದ್ದರು. 1952ರ ಚುನಾವಣೆಯಲ್ಲಿ ಮಧ್ಯ ಪ್ರದೇಶದಲ್ಲಿ ಜನಸಂಘ, ಪರಿಶಿಷ್ಟ ಜಾತಿ ಫೆಡರೇಶನ್ ಮತ್ತು ಸೋಷಲಿಸ್ಟ್ ಪಾರ್ಟಿಗಳು ಸಂಯುಕ್ತರಂಗವನ್ನು ಮಾಡಿಕೊಂಡಿದ್ದವು. ವಿದರ್ಭದ ಕೆಲವು ಪಟ್ಟಣಗಳಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಯಿತು. ಆ ಹೋರಾಟದಲ್ಲಿ ಠೇಂಗಡಿ ಪರಿಶಿಷ್ಟ ಜಾತಿ ಫೆಡರೇಶನ್ನಿಗೆ ಸಮೀಪವಾದರು. ನಾಗಪುರಕ್ಕೆ ಹೋದಾಗ ಅಂಬೇಡ್ಕರ್ ಠೇಂಗಡಿ ಅವರನ್ನು ಭೇಟಿ ಮಾಡಿದರು. ಅವರ ಸಂಬಂಧ ನಿಕಟವಾಗುತ್ತ ಹೋಗಿ ಅಂಬೇಡ್ಕರ್ ಅವರ ಕೊನೆಯ ತನಕವೂ ಮುಂದುವರಿಯಿತು. ಠೇಂಗಡಿ ಅವರು ಆ ಬಗ್ಗೆ “ಆಗ ನಾನು ಚಿಕ್ಕವನಾಗಿದ್ದೆ; ಅವರು ನನ್ನನ್ನು ತಮ್ಮ ಕುಟುಂಬದವನಂತೆ ನೋಡಿದರು” ಎಂದು ಹೇಳಿದ್ದಾರೆ. ಇದು ಠೇಂಗಡಿ ಅವರ ಪುಸ್ತಕ ‘ಡಾ|| ಅಂಬೇಡ್ಕರ್ ಔರ್ ಸಾಮಾಜಿಕ್ ಕ್ರಾಂತಿ ಕೀ ಯಾತ್ರಾ’ದಲ್ಲಿ ದಾಖಲುಗೊಂಡಿದೆ. (ಚಂದ್ರಶೇಖರ ಭಂಡಾರಿ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದು ‘ರಾಷ್ಟ್ರೋತ್ಥಾನ ಸಾಹಿತ್ಯ’ದಿಂದ ಪ್ರಕಾಶನಗೊಂಡಿದೆ.)
ಅಂಬೇಡ್ಕರ್ ಮತಾಂತರ
ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಸೇರುವ ಮುನ್ನ ಠೇಂಗಡಿ ಅವರೊಂದಿಗೆ ಆ ಕುರಿತು ಸುದೀರ್ಘ ಸಂಭಾಷಣೆ ನಡೆಸಿದ್ದರು. 1935ರಲ್ಲೇ ಮತಾಂತರಗೊಳ್ಳುವ ಬಗ್ಗೆ ಹೇಳಿದ ಅವರು ಸುಮಾರು ಎರಡು ದಶಕಗಳ ಕಾಲ ಬಗೆಬಗೆಯ ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸಿದ್ದರು. ಒಮ್ಮೆ ಠೇಂಗಡಿ ಅವರು “ದಲಿತರ ಮೇಲೆ ದೌರ್ಜನ್ಯಗಳು ನಡೆದಿರುವುದು ನಿಜ. ಆದರೆ ಒಂದು ಯುವಕರ ತಂಡ ಅದನ್ನು ಸರಿಮಾಡಲು ಶ್ರಮಿಸುತ್ತ ಬಂದಿದೆ” ಎಂದು ಹೇಳಿದರಂತೆ. ಅದಕ್ಕೆ ಅಂಬೇಡ್ಕರ್ “ಆರ್.ಎಸ್.ಎಸ್. ಬಗ್ಗೆ ಹೇಳುತ್ತಿದ್ದೀರಾ?” ಎಂದು ಕೇಳಿದರು. ಇವರು ಮೌನವಿದ್ದಾಗ ಮುಂದುವರಿದು, “ನಾನು ಆ ಬಗ್ಗೆ ಯೋಚಿಸಿಲ್ಲವೆಂದು ತಿಳಿದಿರಾ?” ಎಂದು ಕೇಳಿದರು.
“ನೀವು ಆ ಬಗ್ಗೆ ಯೋಚಿಸಲೇಬೇಕು” ಎಂದು ಠೇಂಗಡಿ ಅವರು ಹೇಳಿದಾಗ, “ಆರ್.ಎಸ್.ಎಸ್. ಸ್ಥಾಪನೆಯಾದದ್ದು ಯಾವಾಗ? ಎಷ್ಟು ವರ್ಷವಾಯಿತು?” ಎಂದು ಕೇಳಿದರು. “1925ರಲ್ಲಿ ಸ್ಥಾಪನೆ ಆಗಿದ್ದು ಈಗ 27-28 ವರ್ಷ ಕಳೆದಿದೆ” ಎಂದು ಠೇಂಗಡಿ ಅವರು ಹೇಳುತ್ತಲೇ “ಅದು ಗೊತ್ತಿದೆ; ಈಗ ನಿಮ್ಮ ಸದಸ್ಯಬಲ ಎಷ್ಟು?” ಎಂದು ಕೇಳಿದರು. “ಕೂಡಲೇ ಹೇಳಲಾರೆ” ಎನ್ನುತ್ತಲೇ ಅಂಬೇಡ್ಕರ್ “ಪತ್ರಿಕಾಗೋಷ್ಠಿಯ ರೀತಿ ಮಾತಾಡಬೇಡಿ; ಕರೆಕ್ಟಾಗಿ ಹೇಳಬೇಕು” ಎಂದು ಪಟ್ಟುಹಿಡಿದರು. “ನಿಜವಾಗಿಯೂ ಗೊತ್ತಿಲ್ಲ” ಎನ್ನುತ್ತಲೆ “ನಿಮ್ಮ ಸಂಖ್ಯೆ 27-28 ಲಕ್ಷ ಇರಬಹುದು. 27-28 ವರ್ಷಗಳಲ್ಲಿ ಅಷ್ಟಾಗಿದೆ. ಹೀಗಿರುವಾಗ ಇಡೀ ಸಮಾಜವನ್ನು ನಿಮ್ಮ ಹತ್ತಿರ ತರಲು ಎಷ್ಟು ಸಮಯ ಬೇಕು?” ಎಂದು ಮತ್ತೆ ಕೇಳಿದರು.
ಠೇಂಗಡಿ ಅವರು ಏನೋ ಹೇಳಲು ಹೋದಾಗ “ಏನೂ ಹೇಳಬೇಡಿ. ನನಗೆ ಗೊತ್ತು. ಕಪ್ಪೆ ಎಷ್ಟು ದೊಡ್ಡದಾದರೂ ಎತ್ತು ಆಗುವುದಿಲ್ಲ. ನಿಮಗೆ ಬೆಳೆಯಲು ತುಂಬ ಕಾಲ ಬೇಕು. ಅಷ್ಟು ಸಮಯ ನಾನು ಕಾದು ಕೂರಲಾ? ನನ್ನ ಮುಂದಿರುವ ಪ್ರಶ್ನೆ ಎಂದರೆ ಸಾಯುವ ಮುನ್ನ ನಾನು ನನ್ನ ಸಮಾಜಕ್ಕೆ ದಿಕ್ಕು ತೋರಿಸಬೇಕು. ಇದು ತನಕ ಈ ಸಮಾಜ ಶೋಷಣೆಯಲ್ಲಿ ಮುಳುಗಿತ್ತು. ಈಗ ಈ ಜನರ ನಡುವೆ ತಿಳಿವಳಿಕೆ ಬರುತ್ತಿದೆ. ಅವರ ಮನಸ್ಸಿನಲ್ಲಿ ಕಳವಳ, ಕಿರಿಕಿರಿ ಉಂಟಾಗುತ್ತಿದೆ. ಇಂಥ ಜನರು ಸುಲಭದಲ್ಲಿ ಕಮ್ಯೂನಿಸಂ ಇತ್ಯಾದಿಗೆ ಮೇವು ಆಗುತ್ತಾರೆ. ಪರಿಶಿಷ್ಟ ಜಾತಿ ಸಮಾಜ ಹಾಗೆ ಆಗಬಾರದು. ಆದ್ದರಿಂದ ರಾಷ್ಟ್ರದ ಹಿತದೃಷ್ಟಿಯಿಂದ ನಾನು ಅವರಿಗೆ ದಿಕ್ಕು ತೋರಿಸಬೇಕಾಗಿದೆ. ದಿಕ್ಕು ತೋರಿಸದಿದ್ದರೆ ಸಮಾಜದ ದೊಡ್ಡ ಒಂದು ವರ್ಗ ಕಮ್ಯೂನಿಸಂ ಮುಂತಾದ ಕಡೆಗೆ ಹೋಗುತ್ತದೆ. ಹೋದರೆ ಅವರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರಲು ತುಂಬ ಕಷ್ಟ. ಅದಲ್ಲದೆ ನೀವೆಲ್ಲ ಮೇಲ್ಜಾತಿಯ ಜನ. ನಮ್ಮ ಸಮಾಜ ನಿಮ್ಮ ಮಾತನ್ನು ಕೇಳುವುದಿಲ್ಲ. ಆದ್ದರಿಂದ ನಾನು ಸಾಯುವ ಮುನ್ನ ಈ ಕ್ರಮವನ್ನು ಕೈಗೊಳ್ಳುತ್ತಿದ್ದೇನೆ” ಎಂದು ತಮ್ಮ ಮತಾಂತರದ ಚಿಂತನೆಯನ್ನು ಅಂಬೇಡ್ಕರ್ ಸಮರ್ಥಿಸಿಕೊಂಡಿದ್ದರು. 1953ರಲ್ಲಿ ತಮ್ಮನ್ನು ಭೇಟಿ ಮಾಡಿದ ಸಂಘದ ನಾಯಕರಲ್ಲೂ ಅವರು ಇದೇ ಮಾತನ್ನು ಹೇಳಿದ್ದರು.
ಅಂಬೇಡ್ಕರ್ ಮತ್ತು ಸಂಘ
ಸುಮಾರು ಎರಡು ದಶಕಗಳ ಅವಧಿಯಲ್ಲಿ ಅಂಬೇಡ್ಕರ್ ಸಂಘವನ್ನು ತಿಳಿದುಕೊಳ್ಳುವ ಬಗ್ಗೆ ಸಾಕಷ್ಟು ಪ್ರಯತ್ನ ಮಾಡಿದ್ದರು. 1935ರಲ್ಲಿ ಸಂಘದ ಶಾಖಾವರ್ಗಕ್ಕೆ ಭೇಟಿ ನೀಡಿ ಸ್ಥಾಪಕ ಡಾ|| ಹೆಡಗೆವಾರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. 1939ರಲ್ಲಿ ಕೂಡ ಶಾಖಾವರ್ಗಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಗಾಂಧಿ ಹತ್ಯೆ ಬಳಿಕ ಆರ್.ಎಸ್.ಎಸ್. ಮೇಲೆ ಹಾಕಿದ ನಿಷೇಧವನ್ನು ತೆರವುಗೊಳಿಸುವಲ್ಲಿ ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದ್ದರು. ಅದಕ್ಕಾಗಿ ಸರಸಂಘಚಾಲಕ ಶ್ರೀಗುರೂಜೀ ಅವರು ಔಪಚಾರಿಕವಾಗಿಯೇ ಕೃತಜ್ಞತೆ ಸಲ್ಲಿಸಿದ್ದರು.
ಅಸ್ಪೃಶ್ಯತೆಯ ನಿವಾರಣೆಯಿಂದ ಹಿಂದೂ ಸಮಾಜವು ಬಲಶಾಲಿಯಾಗುತ್ತದೆ. ಅಸ್ಪೃಶ್ಯರು ಹಿಂದೂ ಸಮಾಜದ ಅನಿವಾರ್ಯ ಅಂಗವಾಗಿದ್ದು, ಅಸ್ಪೃಶ್ಯತೆಯ ನಿವಾರಣೆಯು ರಾಷ್ಟ್ರೀಯ ಗುರಿಯಾಗಬೇಕೆಂದು ಠೇಂಗಡಿ ನಂಬಿದ್ದರು. “ಅಂಬೇಡ್ಕರ್ ಅವರ ಆತಂಕ ಮತ್ತು ಸಮಸ್ಯೆಗಳನ್ನು ನಾನು ಸ್ವತಃ ನೋಡಿದ್ದೇನೆ. ಹಿಂದೂ ಧರ್ಮಗ್ರಂಥಗಳಲ್ಲಿ ಅಸ್ಪೃಶ್ಯತೆಗೆ ಆಧಾರವಿಲ್ಲವೆಂದು ಸಂತರು, ಧಾರ್ಮಿಕ ನಾಯಕರು ಘೋಷಿಸಬೇಕೆಂದು ಅವರು ಬಯಸಿದ್ದರು. ಆರ್.ಎಸ್.ಎಸ್. ಆ ಬಗ್ಗೆ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. 1954ರಿಂದ ಅಂಬೇಡ್ಕರ್ ಅವರ ಆರೋಗ್ಯ ಕೆಡುತ್ತ ಹೋಯಿತು. ಠೇಂಗಡಿ ಅವರಲ್ಲಿ ಅಂಬೇಡ್ಕರ್ ಒಮ್ಮೆ “ಅಸ್ಪೃಶ್ಯತೆಯ ನಿವಾರಣೆ ಬಗೆಗಿನ ಆರ್.ಎಸ್.ಎಸ್. ಪ್ರಕ್ರಿಯೆಯಲ್ಲಿ ನನಗೆ ವಿಶ್ವಾಸವಿದೆ. ಆದರೆ ಅದು ತುಂಬ ನಿಧಾನವಾಯಿತು. ಈ ಅಸಹಾಯ ಸಮುದಾಯಕ್ಕೆ ನಾನು ದಾರಿ ತೋರಿಸದಿದ್ದರೆ ಚರ್ಚ್ ಮತ್ತು ಕಮ್ಯೂನಿಸ್ಟರು ಅವರನ್ನು ಬೇಟೆಯಾಡುತ್ತಾರೆ” ಎಂದಿದ್ದರು.
ಅಂಬೇಡ್ಕರ್ ಬಯಸಿದ್ದನ್ನು 1969ರಲ್ಲಿ ನೆರವೇರಿಸುವಲ್ಲಿ ಸಂಘ ಯಶಸ್ವಿಯಾಯಿತು. ಉಡುಪಿಯಲ್ಲಿ ನಡೆದ ವಿಶ್ವ ಹಿಂದು ಪರಿಷತ್ ಬೃಹತ್ ಸಮಾವೇಶದಲ್ಲಿ ಅಸ್ಪೃಶ್ಯತೆಯನ್ನು ತೊಡೆದುಹಾಕುವ ‘ನ ಹಿಂದುಃ ಪತಿತೋ ಭವೇತ್’ (ಯಾವನೇ ಹಿಂದು ಪತಿತನಲ್ಲ) ಎನ್ನುವ ಘೋಷಣೆ ಬಂತು. ಅಂಬೇಡ್ಕರರಂತಹ ಹಿರಿಯರ ಸಹವಾಸದಿಂದ ಠೇಂಗಡಿ ಅವರ ಜೀವನದಲ್ಲಿ ಪವಾಡ ಎನಿಸುವಂತಹ ಸಾಧನೆಗಳು ನಡೆದವು; ಹಲವು ಸಂಘ-ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಅವರಿಗೆ ಸಾಧ್ಯವಾಯಿತು. ಅವರು “ಸೊನ್ನೆಯಿಂದ ಆರಂಭಿಸಿ ಹಲವು ಹಿಮಾಲಯಗಳನ್ನೇ ಕಟ್ಟಿದರು”ಎಂದು ಒಬ್ಬ ಲೇಖಕ ಠೇಂಗಡಿ ಅವರ ಸಂಘಟನಾ ಕೌಶಲವನ್ನು ಬಣ್ಣಿಸಿದ್ದಿದೆ.
ಕಾರ್ಮಿಕ ಸಂಘಟನೆ
1950ರ ಹೊತ್ತಿಗೆ ದೇಶದ ಕಾರ್ಮಿಕ ಸಂಘಗಳಲ್ಲಿ ಕೇವಲ ಎರಡು ರೀತಿಯನ್ನು ಕಾಣಬಹುದಿತ್ತು: ಸರ್ಕಾರದ ಬೆಂಬಲಿಗರು ಅಥವಾ ತಮ್ಮ ಲಾಭವನ್ನು ಮಾತ್ರ ಚಿಂತಿಸುವವರು. ಕೈಗಾರಿಕೆ ಮತ್ತು ದೇಶದ ಸಮಗ್ರ ಹಿತದ ಬಗ್ಗೆ ಯಾರೂ ಚಿಂತಿಸುತ್ತಿರಲಿಲ್ಲ. 1920ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತರಾಯ್ ಅವರು ಸ್ಥಾಪಿಸಿದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಬಲಶಾಲಿಯಾಗಿ ಬೆಳೆದಿತ್ತು; ಆದರೆ ಅದು ಕಮ್ಯೂನಿಸ್ಟ್ ಬೆಂಬಲಿತವಾಗಿತ್ತು. ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಇಂಟಕ್) ಕಾಂಗ್ರೆಸ್ನ ಪ್ರಭಾವಕ್ಕೆ ಸಿಕ್ಕಿ ಸರ್ಕಾರವನ್ನು ಬೆಂಬಲಿಸುತ್ತಿತ್ತು. ಸಮಾಜವಾದಿಗಳ ಹಿಂದ್ ಮಜ್ದೂರ್ ಸಭಾವನ್ನು (ಎಚ್ಎಂಎಸ್) ಕಮ್ಯೂನಿಸ್ಟರು ಬಹುತೇಕ ಹೈಜಾಕ್ ಮಾಡಿದ್ದರು.
‘ಅಯೋಗ್ಯಃ ಪುರುಷೋ ನಾಸ್ತಿ ಯೋಜಕಃ ತತ್ರ ದುರ್ಲಭಃ’ ಎಂಬುದು ಸಂಸ್ಕೃತದ ಒಂದು ಅರ್ಥಪೂರ್ಣ ಮಾತು. (ಯಾರೂ ಅಯೋಗ್ಯರಿಲ್ಲ; ಅವರನ್ನು ಸರಿಯಾಗಿ ಬಳಸಿಕೊಳ್ಳುವ ಯೋಜಕರದ್ದೇ ಕೊರತೆ). ಆ ಕೊರತೆಯನ್ನು ಬಹಳಷ್ಟು ತುಂಬಿದವರು ಆರ್.ಎಸ್.ಎಸ್.ನ ಎರಡನೇ ಸರಸಂಘಚಾಲಕ ಗುರೂಜೀ ಅವರು. ದತ್ತೋಪಂತ ಠೇಂಗಡಿ ಅವರು ಎಂ.ಎ., ಎಲ್ಎಲ್.ಬಿ ಮುಗಿಸಿ ಕಾಲೇಜಿನಿಂದ ಹೊರಬಂದವರು ಆಗಲೇ ಪರಿಚಯವಾಗಿದ್ದ ಸಂಘಕ್ಕೆ ಸೇರಿಕೊಂಡರು. 1942ರಲ್ಲಿ ಅವರನ್ನು ಪ್ರಚಾರಕ್ ಆಗಿ ಕೇರಳಕ್ಕೆ ಕಳುಹಿಸಿಕೊಡಲಾಯಿತು. ಆಗ ಅವರಿಗೆ 21-22 ವರ್ಷ. ಮಲೆಯಾಳಿ ಭಾಷೆ ಗೊತ್ತಿಲ್ಲ. ಅದುವರೆಗೆ ಕೇರಳದಲ್ಲಿ ಸಂಘದ ಕೆಲಸ ಶುರುವಾಗಿರಲಿಲ್ಲ. ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷ ಬಿಟ್ಟರೆ ಅಲ್ಲಿ ಬೇರೆಯವರಿಗೆ ಅವಕಾಶ ಇಲ್ಲ ಎಂಬುದು ಜನಜನಿತವಾಗಿತ್ತು. ಕಲ್ಲಿಕೋಟೆಗೆ ಹೋದಾಗ ಒಬ್ಬ ವಕೀಲರು ಇವರಲ್ಲಿ “ಕೇರಳದಲ್ಲಿ ಸಂಘದ ಕೆಲಸ ಅಸಾಧ್ಯ; ಸಮಯ ವ್ಯರ್ಥ”ಎಂದು ಹೇಳಿದರಂತೆ. ಆದರೆ ಠೇಂಗಡಿಜೀ ಅಲ್ಲಿ ಸಂಘದ ಕೆಲಸವನ್ನು ಆರಂಭಿಸಿದ್ದಷ್ಟೇ ಅಲ್ಲ; ಅದಕ್ಕೆ ಗಟ್ಟಿ ತಳಪಾಯವನ್ನೇ ಹಾಕಿದರು. ಅನಂತರ ಅವರನ್ನು ಪ್ರಚಾರಕ್ ಆಗಿ ಬಂಗಾಳಕ್ಕೆ ಕಳುಹಿಸಿಕೊಡಲಾಯಿತು. ಅದು ಕೂಡ ಕಮ್ಯೂನಿಸ್ಟರ ಪ್ರಾಬಲ್ಯದ ಪ್ರದೇಶ; ಅಲ್ಲಿ ಕೂಡ ಠೇಂಗಡಿ ಅವರು ತಮ್ಮ ಕೆಲಸವನ್ನು ಸಾಕಷ್ಟು ಮುಂದುವರಿಸಿದರು. 1948ರ ಹೊತ್ತಿಗೆ ಅಸ್ಸಾಂನಲ್ಲಿ ಸಂಘದ ಕೆಲಸವನ್ನು ಮಾಡಿದರು.
ಗುರೂಜೀ ಪ್ರಯೋಗ
ಅಷ್ಟು ಹೊತ್ತಿಗೆ ಗುರೂಜೀ ಅವರಿಗೆ ಈತ ಯಾವುದಕ್ಕೆ ಅತ್ಯಂತ ಅರ್ಹ ಅಥವಾ ಯಾವುದಕ್ಕೆ ಈತನನ್ನು ಬಳಸಿಕೊಳ್ಳಬೇಕೆಂಬುದು ಖಚಿತವಾಗಿರಬೇಕು. ಭಾರತೀಯ ಮೌಲ್ಯ ಮತ್ತು ಪರಂಪರೆಯನ್ನು ಆಧರಿಸಿದ ಕಾರ್ಮಿಕ ಸಂಘಟನೆಯನ್ನು ಕಟ್ಟಬೇಕು ಎನ್ನುವುದು ಆಗ ಕಂಡುಬಂದ ಹೊಳಹು ಎನಿಸುತ್ತದೆ. ಅವರು ಅದನ್ನು ಕೂಡಲೆ ಮಾಡಲಿಲ್ಲ. ಬದಲಾಗಿ ಆ ಬಗ್ಗೆ ಆಳವಾದ ಅಧ್ಯಯನ ಮಾಡಲು ಬಯಸಿದರು. ಗುರೂಜೀ ಅವರ ಮಾರ್ಗದರ್ಶನದ ಮೇರೆಗೆ ಇಂಟಕ್ಗೆ ಸೇರಿದರು (1949). ಅಲ್ಲಿ ಬಹುಬೇಗ ಮೇಲಕ್ಕೇರಿ ಸುಮಾರು ಹತ್ತು ಸಂಘಟನೆಗಳ ಪದಾಧಿಕಾರಿಯಾದರು. ಇಂಟಕ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಮತ್ತು ಮಧ್ಯಪ್ರದೇಶ ರಾಜ್ಯ ಇಂಟಕ್ ಕಾರ್ಯದರ್ಶಿಯಾದರು. 1952-55ರಲ್ಲಿ ಕಮ್ಯೂನಿಸ್ಟ್ ಪಕ್ಷದ ಬ್ಯಾಂಕ್ ನೌಕರರ ಸಂಘ ಎಐಬಿಇಎ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1954-55ರಲ್ಲಿ ಆರ್.ಎಂ.ಎಸ್. (ಅಂಚೆ) ನೌಕರರ ಸಂಘದ ಕೇಂದ್ರ ವಲಯದ (ಮಧ್ಯಪ್ರದೇಶ, ವಿದರ್ಭ ಮತ್ತು ರಾಜಸ್ಥಾನ) ಅಧ್ಯಕ್ಷರಾದರು. ಇಂಟಕ್ಗೆ ಸೇರಿದ ಜೀವವಿಮೆ, ರೈಲ್ವೇ, ಜವಳಿ, ಕಲ್ಲಿದ್ದಲು ಯೂನಿಯನ್ಗಳ ಅಧ್ಯಕ್ಷರಾದರು. ಆ ಮೂಲಕ ಕಾರ್ಮಿಕ ಸಂಘಗಳ ಕಾರ್ಯವಿಧಾನ ಮತ್ತು ಚಳವಳಿಗಳ ನೇರ ಮಾಹಿತಿಯನ್ನು ಪಡೆದುಕೊಂಡರು. ಕಮ್ಯೂನಿಸಂ ಮತ್ತು ಅವರ ಕಾರ್ಮಿಕ ಸಂಘಗಳ ಕಾರ್ಯವಿಧಾನವನ್ನು ಕೂಡ ತಿಳಿದುಕೊಂಡರು. ಆಗ ಗುರೂಜೀ ಅವರೇ ಸ್ವತಃ “ಠೇಂಗಡಿಗೆ ವಹಿಸಿದ ಕೆಲಸವನ್ನು ಆತ ಏಕಾಕಿಯಾಗಿ ನಿರ್ವಹಿಸಿದ” ಎಂದು ಉದ್ಗರಿಸಿದರಂತೆ.
ಈ ಪ್ರಕ್ರಿಯೆ ಸುಲಭವೇನೂ ಆಗಿರಲಿಲ್ಲ. ಕಮ್ಯೂನಿಸ್ಟ್ ಸಂಘಟನೆಗಳಲ್ಲಿ ಕೆಲಸ ಮಾಡುತ್ತಾರೆಂದು ಸಂಘದವರೇ ತಪ್ಪು ತಿಳಿದದ್ದೂ ಇದೆ. ಕೆಂಪು ಪತಾಕೆ ಹಿಡಿದು ಚಳವಳಿ ನಡೆಸಿ ಸಂಜೆ ನಾಗಪುರದ ಆರೆಸ್ಸೆಸ್ ಕಾರ್ಯಾಲಯಕ್ಕೆ ಹೋದಾಗ ಒಮ್ಮೆ ಕೆಲವು ಸ್ವಯಂಸೇವಕರು “ನೀವು ಮಲಗಲು ಇಲ್ಲಿಗೆ ಬರುವುದು ಸರಿಯಲ್ಲ”ಎಂದು ಹೇಳಿದರಂತೆ. ಗುರೂಜಿಗೆ ಅದು ಗೊತ್ತಾಗಿ ಕಾರ್ಯಾಲಯದಲ್ಲಿ ತಮ್ಮ ಸ್ಥಳಕ್ಕೇ ಬಂದು ಉಳಿಯುವಂತೆ ಸೂಚಿಸಿದರು. ಆಗ ಅಡ್ಡಿಪಡಿಸಿದ ಸ್ವಯಂಸೇವಕರಿಗೆ ತಮ್ಮ ತಪ್ಪಿನ ಅರಿವಾಯಿತು. ಅಲ್ಲಿ ಠೇಂಗಡಿ ಅವರಿಗೆ ಜನಸಂಘದ ಪ್ರಧಾನ ಕಾರ್ಯದರ್ಶಿ ದೀನದಯಾಳ್ ಉಪಾಧ್ಯಾಯರ ಭೇಟಿ ಆಗುತ್ತಿತ್ತು; ಮತ್ತು ದೀನದಯಾಳರಿಗೆ ಅವರ ಪ್ರಸಿದ್ಧ ಸಿದ್ಧಾಂತ ‘ಏಕಾತ್ಮ ಮಾನವತಾವಾದ’ವನ್ನು ರೂಪಿಸಲು ಠೇಂಗಡಿ ನೆರವಾದರು.
ಬಿಎಂಎಸ್ ಸ್ಥಾಪನೆ
ಬಿಎಂಎಸ್ (ಭಾರತೀಯ ಮಜ್ದೂರ್ ಸಂಘ) ಸ್ಥಾಪನೆಗೆ ಇಷ್ಟು ತಯಾರಿ ಸಾಕಾಯಿತು. ದೇಶದ ವಿವಿಧ ಭಾಗಗಳಿಂದ ಬಂದ 35 ಜನ ಹಿರಿಯರ ಸಮ್ಮುಖದಲ್ಲಿ ಈ ಮಹಾನ್ ಸಂಘಟನೆ ಅತ್ಯಂತ ವಿನೀತವಾಗಿ ಆರಂಭಗೊಂಡಿತು. ಆರಂಭದಿಂದಲೂ ಅದರಲ್ಲಿ ಪ್ರಜಾಪ್ರಭುತ್ವದ ಆದರ್ಶವು ಇರುವಂತೆ ಠೇಂಗಡಿ ನೋಡಿಕೊಂಡರು. ಸಂಸ್ಥೆಯನ್ನು ಆರಂಭಿಸಿದಾಗ ಕಮ್ಯೂನಿಸ್ಟರು “ಕಾರ್ಮಿಕ ಸಂಘದ ಕೆಲಸವೆಂದರೆ ಮೈದಾನದಲ್ಲಿ ಚೆಡ್ಡಿ ಹಾಕಿ ಆಡಿದಂತಲ್ಲ” ಎಂದು ತಮಾಷೆ ಮಾಡಿದರು; ಮತ್ತು “ಕೇವಲ ನಮ್ಮನ್ನು ವಿರೋಧಿಸುವುದಕ್ಕಾಗಿ ಬಿಎಂಎಸ್ ಸ್ಥಾಪಿಸಿದ್ದೀರಿ” ಎಂಬ ಆರೋಪವನ್ನು ಕೂಡ ಮಾಡಿದರು. ಅದಕ್ಕೆ ಠೇಂಗಡಿಜೀ
“ಬೆಡ್ಶೀಟ್ ಹಾಸಿ ಮಲಗಿ… ಎಂದು ನಾನು ನನ್ನ ಸ್ನೇಹಿತರನ್ನು ಕೇಳುತ್ತಿದ್ದೇನೆ. ಆಂತರಿಕ ವೈರುಧ್ಯವು ಅವರ ಚಿಂತನೆಯನ್ನು ಮುಗಿಸುತ್ತದೆ. 21ನೇ ಶತಮಾನದ ಹೊತ್ತಿಗೆ ಕಮ್ಯೂನಿಸಂ ತಾನಾಗಿಯೇ ಸಾಯುತ್ತದೆ” ಎನ್ನುವ ಪ್ರತಿಕ್ರಿಯೆಯನ್ನು ನೀಡಿದರು. ಈಗ ಬಹುತೇಕ ಅದೇ ಆಗಿದೆ; ಅಂತಹ ಅಭಿಪ್ರಾಯಗಳಿಗಾಗಿ ಅವರನ್ನು ಓರ್ವ ದ್ರಷ್ಟಾರ ಎಂದು ಕೂಡ ಗುರುತಿಸಲಾಗುತ್ತದೆ.
ಒಂದು ಸಂಸ್ಥೆಗೆ ಅದರ ನಿಯಮಾವಳಿಗಳು ಹಾಗೂ ವಿಧಿ-ನಿಷೇಧಗಳನ್ನು ರೂಪಿಸುವಲ್ಲಿ ಡಿ.ಬಿ. ಠೇಂಗಡಿ ಅಗ್ರಮಾನ್ಯರೆನಿಸುತ್ತಾರೆ. ಕಮ್ಯೂನಿಸ್ಟರು ‘ಇಂಕ್ವಿಲಾಬ್ ಜಿಂದಾಬಾದ್’ (ಕ್ರಾಂತಿ ಚಿರಾಯುವಾಗಲಿ) ಎನ್ನುವ ಘೋಷಣೆ ಕೂಗಿದರೆ ಬಿಎಂಎಸ್ನಲ್ಲಿ ‘ಭಾರತ್ ಮಾತಾ ಕೀ ಜೈ’, ‘ವಂದೇ ಮಾತರಮ್’ ಎನ್ನುತ್ತಾರೆ. ಕಮ್ಯೂನಿಸ್ಟರ ಧ್ವಜ ಕೆಂಪಾದರೆ, ಇವರದ್ದು ತ್ಯಾಗದ ಸಂಕೇತವಾದ ಕಾವಿಬಣ್ಣ. ಹೆಬ್ಬೆರಳು ಪ್ರಧಾನವಾದ ಬಿಗಿದ ಬಲಗೈ ಮುಷ್ಟಿ, ಗೋಧಿತೆನೆ ಮತ್ತು ಚಕ್ರಗಳಿರುವ ಚಿಹ್ನೆ. ಕೃಷಿ, ಕೈಗಾರಿಕೆ ಮತ್ತು ಮಾನವನ ಕಸುಬು, ಕರಕುಶಲ ಕಲೆಗಳನ್ನು ಇದು ಸೂಚಿಸುತ್ತದೆ. ಸಾಮಾನ್ಯವಾಗಿ ಮೇ ಒಂದು ಕಾರ್ಮಿಕ ದಿನವಾದರೆ ಬಿಎಂಎಸ್ನಲ್ಲಿ ಕನ್ಯಾ ಸಂಕ್ರಮಣದ ವಿಶ್ವಕರ್ಮ ಜಯಂತಿಯನ್ನು ಕಾರ್ಮಿಕ ದಿನವಾಗಿ ಆಚರಿಸಲಾಗುತ್ತದೆ. ಕಮ್ಯೂನಿಸ್ಟರ ಸಂಘಟನೆಗಳು ‘ವರ್ಕರ್ಸ್ ಆಫ್ ದಿ ವಲ್ರ್ಡ್ ಯುನೈಟ್’ (ಜಗತ್ತಿನ ಕಾರ್ಮಿಕರೇ ಒಂದಾಗಿ) ಮತ್ತು “ಹಮಾರೀ ಮಾಂಗೇ ಪೂರೀ ಹೋ, ಚಾಹೇ ಜೋ ಮಜಬೂರೀ ಹೋ’ (ನಿಮ್ಮ ತಾಪತ್ರಯ ಏನೇ ಇರಲಿ, ನಮ್ಮ ಬೇಡಿಕೆ ಪೂರೈಸಿ) ಎನ್ನುವ ಘೋಷಣೆಗಳನ್ನು ಹೊಂದಿದ್ದರೆ, ಬಿಎಂಎಸ್ನಲ್ಲಿ ‘ವರ್ಕರ್ಸ್ ಯುನೈಟ್ ದ ವಲ್ರ್ಡ್’ (ಕಾರ್ಮಿಕರಿಂದ ಜಗತ್ತಿನ ಒಗ್ಗಟ್ಟು) ಮತ್ತು ‘ದೇಶ್ ಕೇ ಹಿತ್ ಮೇ ಕರೇಂಗೇ ಕಾಮ್, ಕಾಮ್ ಕಾ ಲೇಂಗೇ ಪೂರಾ ದಾಮ್’ (ದೇಶದ ಹಿತಕ್ಕಾಗಿ ದುಡಿಯುತ್ತೇವೆ; ದುಡಿಮೆಯ ಪೂರ್ತಿ ಮೌಲ್ಯವನ್ನು ಪಡೆಯುತ್ತೇವೆ) ಎನ್ನುವ ಘೋಷಣೆಗಳನ್ನು ಆದರ್ಶವಾಗಿ ಇರಿಸಿಕೊಳ್ಳಲಾಗಿದೆ. ವ್ಯತ್ಯಾಸವೆಂದರೆ ಬಿಎಂಎಸ್ನ ಎಲ್ಲದರಲ್ಲೂ ಭಾರತೀಯತೆಯ ಮಿಂಚು ಕಾಣಿಸುತ್ತದೆ. ದೇಶದ ಹಿತವನ್ನು ಧ್ಯೇಯವಾಗಿ ಇರಿಸಿಕೊಳ್ಳಲಾಗಿದೆ; ಅಂದರೆ ಉತ್ಪಾದನೆಯ ಕಡೆಗೂ ಇವರ ಗಮನ ಇದೆ; ಮಾಲೀಕರು ಮತ್ತು ಕಾರ್ಮಿಕರು ಇಬ್ಬರೂ ಚೆನ್ನಾಗಿರಬೇಕೆಂಬ ಆದರ್ಶವಿದೆ.
‘ಬಡತನದ ಹಂಚಿಕೆ’
‘ಕಮ್ಯೂನಿಸಂ ಎಂದರೆ ಸಂಪತ್ತಿನ ಹಂಚಿಕೆಯಲ್ಲ, ಬಡತನದ ಹಂಚಿಕೆ’ ಎಂದು ಸಾಹಿತಿ ಶಿವರಾಮ ಕಾರಂತರು ಹೇಳುತ್ತಿದ್ದರು. ಅದರಂತೆ ಕಮ್ಯೂನಿಸ್ಟ್ ಕಾರ್ಮಿಕ ಸಂಘಗಳ ಎಡೆಬಿಡದ ಮುಷ್ಕರಗಳಿಂದ ಎಷ್ಟೋ ಕೈಗಾರಿಕೆಗಳು ನಾಶವಾದದ್ದಿದೆ. ಅದಕ್ಕೆ ಭಿನ್ನವಾಗಿ ಸಂಪತ್ತೂ ಸೃಷ್ಟಿಯಾಗಿ ಅದರ ಹಂಚಿಕೆಯಾಗಬೇಕು; ದೇಶಕ್ಕೆ ಲಾಭವಾಗಬೇಕು ಎಂಬುದು ಬಿಎಂಎಸ್ ಕಲ್ಪನೆ. ಅನಿವಾರ್ಯವಾದಾಗ ಅಂದರೆ ಬೇರೆ ಮಾರ್ಗ ಇಲ್ಲದಾಗ ಮಾತ್ರ ಮುಷ್ಕರ ಎಂಬುದು ಇವರ ಕಾರ್ಯವಿಧಾನ. ಆ ರೀತಿಯಲ್ಲಿ ಠೇಂಗಡಿ ಅವರು ತಮ್ಮ ಕನಸಿನ ಕೂಸನ್ನು ಬೆಳೆಸಿದರು.
ವರ್ಗಸಂಘರ್ಷದಲ್ಲಿ ವಿಶ್ವಾಸವಿಲ್ಲದ ಆರ್.ಎಸ್.ಎಸ್. ಕಾರ್ಯಕರ್ತರಿಗೆ ಶ್ರಮಿಕರನ್ನು ಸಂಘಟಿಸಲು ಸಾಧ್ಯವೇ ಇಲ್ಲವೆಂದು ಕಮ್ಯೂನಿಸ್ಟರು ಹೀಯಾಳಿಸುತ್ತಲೇ ಇದ್ದರು. ಆದರೆ ಅವರನ್ನು ಹಿಂದಿಕ್ಕಿ ಬಿಎಂಎಸ್ ದೇಶದ ಅತಿದೊಡ್ಡ ಶ್ರಮಿಕ ಸಂಘಟನೆಯಾಗಿ ಬೆಳೆಯಿತು; ಕಮ್ಯೂನಿಸ್ಟರು ಬಿಎಂಎಸ್ ಜತೆಗೂಡಿ ಕೆಲಸ ಮಾಡಬೇಕಾದ ಪರಿಸ್ಥಿತಿ ಏರ್ಪಟ್ಟಿತು. ವರ್ಗಸಂಘರ್ಷಕ್ಕೆ ಬದಲಾಗಿ ವರ್ಗ-ಸಹಕಾರವು ಬರಬೇಕೆಂದು ಠೇಂಗಡಿಜೀ ಕಾರ್ಮಿಕರ ಬೃಹತ್ ಆಂದೋಲನಗಳನ್ನು ಸಂಘಟಿಸಿದರು. ಸಾಮೂಹಿಕ ನಾಯಕತ್ವದ ಚಿಂತನೆ, ನಿರ್ಧಾರಗಳಲ್ಲಿ ಅವರಿಗೆ ನಂಬಿಕೆ. ಅವರ ಎಲ್ಲ ಸಂಘಟನೆಗಳು ಅದೇ ರೀತಿಯಲ್ಲಿ ಬೆಳೆದವು. ಕಾರ್ಮಿಕ ಚಳವಳಿಯಲ್ಲಿ ಕೆಲಸ ಮಾಡಿದವರಾದರೂ ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಪುನರ್ನಿರ್ಮಾಣಗಳ ವಿಷಯದಲ್ಲಿ ಠೇಂಗಡಿಯವರು ರಾಜಿ ಮಾಡಿಕೊಳ್ಳಲಿಲ್ಲ. 2011ರಲ್ಲಿ ದೆಹಲಿಯಲ್ಲಿ ಶ್ರಮಿಕ ಸಂಘಗಳ ಬೃಹತ್ ರ್ಯಾಲಿ ನಡೆದಾಗ ಕಮ್ಯೂನಿಸ್ಟ್ ಸಂಘಟನೆಗಳ ಕಾರ್ಮಿಕರು ಬಿಎಂಎಸ್ನವರ ಜೊತೆಗೇ ‘ಭಾರತ್ ಮಾತಾ ಕೀ ಜೈ’, ‘ವಂದೇ ಮಾತರಂ’ ಘೋಷಣೆಗಳನ್ನು ಕೂಗಿದರು. ಅದರಲ್ಲಿ ಮಾಕ್ರ್ಸ್ವಾದಿ ನಾಯಕ ಗುರುದಾಸ್ ದಾಸಗುಪ್ತ ಕೂಡ ಭಾಗಿಯಾಗಿದ್ದರು.
ಸೊನ್ನೆಯಿಂದ ಆರಂಭ
ಬಿಎಂಎಸ್ಗೆ ಮೊದಲು ಸೇರಿದವರು ಸಾಮಾಜಿಕ ಹೋರಾಟಗಾರರು. ಅವರಿಗೆ ಕಾರ್ಮಿಕ ಸಂಘದ ಅನುಭವ ಇರಲಿಲ್ಲ. ಮೊದಲ ಹನ್ನೆರಡು ವರ್ಷ ಸಂಸ್ಥೆಗೆ ಅಧಿಕೃತ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯೂ ಇರಲಿಲ್ಲ. ಐವರ ಅನೌಪಚಾರಿಕ ಸಮಿತಿಯೇ ಆ ಕೆಲಸವನ್ನು ಮಾಡಿತು. ಠೇಂಗಡಿಯವರು ಪ್ರಧಾನಕಾರ್ಯದರ್ಶಿಯಾಗಿ ದೇಶಾದ್ಯಂತ ಸಂಚರಿಸಿ ಹಂತಹಂತವಾಗಿ ಇದನ್ನು ಕಟ್ಟಿದರು; ಮತ್ತು ಸಂಸ್ಥೆಗೆ ಸೈದ್ಧಾಂತಿಕ ತಳಹದಿಯನ್ನು ನೀಡಿದರು. ಆಗ ಗುರೂಜೀ ನಿರಂತರ ಸಂಪರ್ಕದಲ್ಲಿದ್ದರು; “ಕಾರ್ಮಿಕರನ್ನು ತಾಯಿ ಮಗುವನ್ನು ಪ್ರೀತಿಸುವಂತೆ ಪ್ರೀತಿಸು” ಎಂದು ಠೇಂಗಡಿ ಅವರಿಗೆ ಸಲಹೆ ನೀಡುತ್ತಿದ್ದರು.
ರಾಜಿ ಸಲ್ಲದು
“ಮೂಲ ಸಿದ್ಧಾಂತದ ವಿಷಯದಲ್ಲಿ ರಾಜಿ ಸಲ್ಲದು” ಎನ್ನುವ ಠೇಂಗಡಿ ಅವರ ಮಾತು ಬಿಎಂಎಸ್ ಕಾರ್ಯಕರ್ತರ ಕಿವಿಯಲ್ಲಿ ಈಗಲೂ ಗುನುಗುನಿಸುತ್ತದೆ ಎಂದು ಹೇಳಲಾಗುತ್ತದೆ. ತುರ್ತು ಪರಿಸ್ಥಿತಿಯ ವೇಳೆ ‘ಲೋಕಸಂಘರ್ಷ ಸಮಿತಿ’ಯ ಕಾರ್ಯದರ್ಶಿಯಾಗಿ ಅವರು ರಾಜಕೀಯ ಪಕ್ಷ ಮತ್ತು ನಾಯಕರ ಜೊತೆಯಲ್ಲಿ ಕೆಲಸ ಮಾಡಿದ್ದರು. ಆದರೂ ತುರ್ತುಪರಿಸ್ಥಿತಿಯ ಅನಂತರ ಸ್ಥಾಪನೆಗೊಂಡ ಜನತಾ ಪಕ್ಷದೊಂದಿಗೆ ಬಿಎಂಎಸ್ ಅನ್ನು ಸಂಯೋಜಿತ(ಅಫಿಲಿಯೇಸನ್)ಗೊಳಿಸಬೇಕೆಂಬ ಮನವಿ ಬಂದಾಗ ಅವರು ನಿರಾಕರಿಸಿದರು. ಕಾರ್ಮಿಕ ಸಂಘಗಳು ಸರ್ಕಾರದ ನೀತಿಗಳ ಬಗ್ಗೆ ಪ್ರತಿಕ್ರಿಯಿಸಬೇಕೇ ಹೊರತು ಅವುಗಳ ಬಣ್ಣದಿಂದ ಆಕರ್ಷಿತವಾಗಬಾರದು ಎಂದರು. ಅದನ್ನು ಅವರು ‘ಸ್ಪಂದನಶೀಲ ಸಹಕಾರ’ (ರೆಸ್ಪಾನ್ಸಿವ್ ಕೋ-ಆಪರೇಶನ್) ಎಂದು ಗುರುತಿಸಿದರು. ಕಾಂಗ್ರೆಸ್ ಸರ್ಕಾರವಿದ್ದಾಗ ಟೀಕಿಸುತ್ತಿದ್ದ ಕಮ್ಯೂನಿಸ್ಟ್ ಕಾರ್ಮಿಕ ಸಂಘಗಳು ಕಮ್ಯೂನಿಸ್ಟ್ ಬೆಂಬಲದೊಂದಿಗೆ ಜನತಾದಳ ಸರ್ಕಾರ ಬಂದಾಗ ಮೌನವಾದವು; ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಬಿಎಂಎಸ್ ಹಾಗೆಯೆ ಮಾಡುತ್ತದೆಂದು ಹಲವರು ಭಾವಿಸಿದ್ದರು. ಆದರೆ ಅದು ಸುಳ್ಳಾಯಿತು. 1999ರ ನಾಗಪುರ ಸಮಾವೇಶ, 2001ರ ಕಾರ್ಮಿಕ ರ್ಯಾಲಿ ಮುಂತಾದವುಗಳಲ್ಲಿ ಠೇಂಗಡಿ ಅವರು ಅಂದಿನ ಎನ್ಡಿಎ ಸರ್ಕಾರವನ್ನು ಕಟುವಾಗಿ ಟೀಕಿಸದಿರಲಿಲ್ಲ. ಕಾರ್ಮಿಕ ಸಂಘವನ್ನು ರಾಜಕೀಯದಿಂದ ದೂರ ಇಡುವುದು ಅದರ ಉದ್ದೇಶ. 1964 ರಿಂದ ಎರಡು ಅವಧಿಗೆ ಅವರು ರಾಜ್ಯಸಭಾ ಸದಸ್ಯರಾಗಿದ್ದರೂ ಕೂಡ ಪಕ್ಷರಾಜಕೀಯಕ್ಕೆ ಸಿಲುಕಲಿಲ್ಲ. 1970-76ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದಾಗ ಒಮ್ಮೆ ಪ್ರಧಾನಿ ಇಂದಿರಾಗಾಂಧಿಯವರ ಮನೆಯಲ್ಲಿ ಅವರನ್ನು ಚಹಾಗೋಷ್ಠಿಗೆ ಕರೆದಿದ್ದರು. ಆಗ “ಜನಸಂಘ ಮತ್ತು ಗೋಲ್ವಾಲ್ಕರ್ ನಡುವೆ ನೀವು ಯಾರನ್ನು ಪ್ರತಿನಿಧಿಸುತ್ತೀರಿ?” ಎಂದು ಅವರಲ್ಲಿ ಕೇಳಲಾಗಿತ್ತು. ತಡವಿಲ್ಲದೆ ಠೇಂಗಡಿಜೀ ‘ಗೋಲ್ವಾಲ್ಕರ್’ ಎಂದು ಉತ್ತರಿಸಿದ್ದರು.
ಸ್ವದೇಶೀ ಜಾಗರಣ ಮಂಚ್
ಭಾರತವು ಜಾಗತೀಕರಣವನ್ನು ಸ್ವೀಕರಿಸಿದ್ದು 1990ರ ದಶಕದ ಆರಂಭದಲ್ಲಾದರೂ ಅದರ ಆಗಮನದ ಕುರಿತ ಚರ್ಚೆ 1980ರ ದಶಕದ ಮಧ್ಯಭಾಗದಲ್ಲೇ ಆರಂಭವಾಗಿತ್ತು. ದೇಶದ ಕಾರ್ಮಿಕ ಸಂಘಟನೆಗಳಿಗೆ ಒಂದು ರೀತಿಯಲ್ಲಿ ಆಘಾತ ನೀಡುವಂತಹ ವಿಷಯವಾಗಿತ್ತು. ಕೆಲವು ಸಂಘಟನೆಗಳವರು ಅದನ್ನು ಅಸಹಾಯರಾಗಿ ವಿರೋಧಿಸಿದರೆ ಮತ್ತೆ ಕೆಲವರು ಸ್ವಾಗತಿಸಿದರು. ಆಗ ಠೇಂಗಡಿ ಅವರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಸ್ವಾತಂತ್ರ್ಯ ಹೋರಾಟ ಮತ್ತು ಸ್ವದೇಶೀ ಚಿಂತನೆಗಳನ್ನು ನೆನಪಿಸಿಕೊಂಡರು. ರಾಷ್ಟ್ರೀಯತೆಯೇ ಎಲ್ಲದರ ಕೇಂದ್ರವಾಗಿ ಅವರು ಸಮಗ್ರ ರಾಷ್ಟ್ರೀಯ ಹಿತಾಸಕ್ತಿಯ ಪರವಾಗಿ ಚಿಂತಿಸಿದರು.
1984ರಲ್ಲಿ ನಡೆದ ಬಿಎಂಎಸ್ನ ಹೈದರಾಬಾದ್ ಸಮಾವೇಶದಲ್ಲಿ ಅವರು ಹೀಗೆ ಹೇಳಿದರು: “ವಿದೇಶೀ ಕಾನೂನು ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ಆಗಮನದಿಂದಾಗಿ ಸ್ವದೇಶೀ ಕಂಪೆನಿಗಳು ಮತ್ತು ನಮ್ಮ ಗಣಿಗಳನ್ನು ವಿದೇಶೀಯರು ಹರಾಜು ಹಾಕುವ ಪರಿಸ್ಥಿತಿ ಬರಬಹುದು. ಆಗ ನಾವು ಅದರ ವಿರುದ್ಧ ಹೋರಾಡಬೇಕೇ ಹೊರತು ಮೂಕ ಪ್ರೇಕ್ಷಕರಾಗುವುದಲ್ಲ. ನಮ್ಮ ಸರ್ಕಾರ, ಬುದ್ಧಿಜೀವಿಗಳು ಮತ್ತು ಬಂಡವಾಳಶಾಹಿಗಳ ಅಪವಿತ್ರ ಮೈತ್ರಿ ವಿದೇಶೀ ಕಂಪೆನಿಗಳಿಗೆ ನೆರವು ಮಾಡಿಕೊಡುತ್ತದೆ. ಅಂತಹ ಪರಿಸ್ಥಿತಿ ಬಂದಾಗ ನಾವು ‘ಸೇಂದ್ರಾಯ ತಕ್ಷಕಾಯ ಸ್ವಾಹಾ’ (ತಕ್ಷಕನ ಸಹಿತ ಇಂದ್ರನೂ ಸ್ವಾಹಾ) ಎನ್ನುವ ತತ್ತ್ವವನ್ನು ಅನುಸರಿಸಬೇಕಾಗುತ್ತದೆ.”
1986ರಲ್ಲಿ ವ್ಯಾಪಾರೇತರ ವಸ್ತುಗಳನ್ನು ಗ್ಯಾಟ್ ಒಪ್ಪಂದದ ಕೆಳಗೆ ತರುವ ಬಗ್ಗೆ ಪರಿಶೀಲನೆ ನಡೆದಾಗ ದೇಶದಲ್ಲಿ ಮುಂದೆ ಬರುವ ಪರಿಸ್ಥಿತಿ ತಿಳಿಯತೊಡಗಿತು. ಆಗ ಠೇಂಗಡಿ ಅವರು ‘ಸ್ವದೇಶೀ ಜಾಗರಣ ಮಂಚ್’ಅನ್ನು (1991) ಸ್ಥಾಪಿಸಿದರು. ಅದು ಪರ್ಯಾಯ ಸ್ವದೇಶೀ ಆರ್ಥಿಕ ಮಾದರಿಯನ್ನು ದೇಶದ ಮುಂದಿಟ್ಟಿತು. ಅದು ಕೇವಲ ಜಾಗತೀಕರಣವಿರೋಧವಲ್ಲ; ಬದಲಾಗಿ ವಿವೇಚನೆಯಿಲ್ಲದ ಜಾಗತೀಕರಣದ ವಿರುದ್ಧ ಒಂದು ತಡೆ ಯತ್ನ; ಭಾರತವು ಜಾಗತಿಕ ಶಕ್ತಿ ಆಗುವ ಬಗ್ಗೆ ಒಂದು ದರ್ಶನ (ವಿಶನ್). ಮಂಚ್ (ವೇದಿಕೆ) ವತಿಯಿಂದ ಮಾತನಾಡಿದ ಅವರು, “ಶೋಷಣೆ-ಆಧಾರಿತ ಬಂಡವಾಳಶಾಹಿ ವ್ಯವಸ್ಥೆಯು ಛಿದ್ರವಾಗಲಿದೆ; 2020ರೊಳಗೆ ಅಮೆರಿಕ ಆರ್ಥಿಕ ಕುಸಿತವನ್ನು ಅನುಭವಿಸಲಿದೆ”ಎಂದು ಭವಿಷ್ಯ ನುಡಿದರು. ಆ ಮಾತು ಈಗ ನಿಧಾನವಾಗಿ ಸತ್ಯವಾಗುತ್ತಿದೆ.
ಕೊನೆಯ ಸಲ ಅಮೆರಿಕಕ್ಕೆ ಹೋದ ಠೇಂಗಡಿಜೀ ನೆರೆರಾಷ್ಟ್ರ ಮೆಕ್ಸಿಕೋಗೆ ಹೋಗಬೇಕೆಂದು ಹಟ ಹಿಡಿದು ಅಲ್ಲಿಗೆ ಭೇಟಿಕೊಟ್ಟರು. ಆ ನೆಲದಲ್ಲಿ ಇಳಿಯುತ್ತಲೇ “ಬಹುರಾಷ್ಟ್ರೀಯ ಕಂಪೆನಿಗಳು (ಎಂಎನ್ಸಿ) ಮತ್ತು ವಿದೇಶೀ ಸಾಲದಿಂದ ಅತ್ಯಂತ ಹಾನಿಗೀಡಾದ ಹಳ್ಳಿಯನ್ನು ನಾನು ಕಾಣಬೇಕು” ಎಂದು ಹೇಳಿ ಅಲ್ಲಿಗೆ ಹೋದರು. ಕಾರ್ಮಿಕರಷ್ಟೇ ಅಲ್ಲ; ಎಲ್ಲ ಬಡವರ ಉದ್ಧಾರಕ್ಕೆ ಅವರು ಯೋಚಿಸುತ್ತಿದ್ದರು. ತಮ್ಮ ಎಡೆಬಿಡದ ಚಟುವಟಿಕೆಗಳ ನಡುವೆ ತುಂಬ ಓದುತ್ತಿದ್ದವರು ಮತ್ತು ಬರೆಯುತ್ತಿದ್ದವರು ಅವರು. ಅವರ ಪ್ರಕಾರ ಪಾಶ್ಚಾತ್ಯೀಕರಣವೆಂದರೆ ಆಧುನೀಕರಣವಲ್ಲ. “ಮೆಕಾಲೆ ಶಿಕ್ಷಣದಿಂದಾಗಿ ಹೆಚ್ಚಿನ ಭಾರತೀಯರು ಪಾಶ್ಚಾತ್ಯವಾದದ್ದೆಲ್ಲ ಶ್ರೇಷ್ಠ ಎಂದು ತಿಳಿಯುತ್ತಾರೆ. ಆಧುನಿಕ ಎನಿಸಬೇಕಿದ್ದರೆ ನಮ್ಮ ಜೀವನಶೈಲಿ ಮತ್ತು ಚಿಂತನೆಗಳು ಪಾಶ್ಚಾತ್ಯವಾಗಬೇಕು ಎನ್ನುತ್ತಾರೆ. ಆದರೆ ಇದೊಂದು ಮಾನಸಿಕ ತಡೆ ಮಾತ್ರ. ಆದಷ್ಟು ಬೇಗ ನಾವು ಅದರಿಂದ ಹೊರಗೆ ಬಂದು ಪಾಶ್ಚಾತ್ಯ ಒಲವನ್ನು ತೊರೆದು ಚಿಂತಿಸಬೇಕು. ಆಧುನೀಕರಣವೆಂದರೆ ಪಾಶ್ಚಾತ್ಯೀಕರಣವಲ್ಲ; ಮತ್ತು ಪಾಶ್ಚಾತ್ಯೀಕರಣವೆಂದರೆ ಆಧುನೀಕರಣವಲ್ಲ ಎಂಬುದನ್ನು ಗಟ್ಟಿ ಮಾಡಿಕೊಳ್ಳಬೇಕು” ಎಂದು ಅವರು ಅಂದೇ ಹೇಳಿದ್ದರು. ಈ ಮಾತು ಈಗ ನಮಗೆ ಕ್ರಮೇಣ ಮನದಟ್ಟಾಗುತ್ತಿದೆ ಎನ್ನಬಹುದು. ಗುರೂಜೀ ಅವರೇ ಠೇಂಗಡಿಯವರನ್ನು ‘ಥಾಟ್ ಗಿವರ್’ ಎಂದು ಹೊಗಳಿದ್ದರು.
ಭಾರತೀಯ ಕಿಸಾನ್ ಸಂಘ
ಕೃಷಿಕ್ಷೇತ್ರದ ಅನುಭವವಿದ್ದ ಕಾರ್ಯಕರ್ತರು ದತ್ತೋಪಂತ ಠೇಂಗಡಿ ಅವರ ಮಾರ್ಗದರ್ಶನವನ್ನು ಬಯಸಿದ್ದು ಸಹಜವೇ ಆಗಿತ್ತು. ನೀರು, ವಿದ್ಯುತ್ಗಳ ಸಮಸ್ಯೆ ಮತ್ತು ಸರ್ಕಾರೀ ಅಧಿಕಾರಿಗಳ ಕಿರುಕುಳ ಇವು ದೇಶಾದ್ಯಂತ ಕೃಷಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳಾಗಿದ್ದು, ಅದರ ನಿವಾರಣೆಯ ಉದ್ದೇಶದಿಂದ 1979ರಲ್ಲಿ ಭಾರತೀಯ ಕಿಸಾನ್ ಸಂಘವನ್ನು (ಭಾಕಿಸಂ) ಸ್ಥಾಪಿಸಲಾಯಿತು. ಅಲ್ಲಿ ಕೂಡ ಠೇಂಗಡಿ ಅವರದ್ದು ಅದೇ ಧ್ಯೇಯವಾಕ್ಯ – ರಾಜಕೀಯದಿಂದ ದೂರ ಇರುವುದು. ಪೂರ್ತಿ ಅಸಂಘಟಿತರಾಗಿರುವ ನಮ್ಮ ಕೃಷಿಕರ ಸಂಘಟನೆ ಮತ್ತು ತರಬೇತಿಗಳ ಮೂಲಕ ಕೃಷಿಕರ ತಿಳಿವಳಿಕೆಯ ಮಟ್ಟವನ್ನು ಹೆಚ್ಚಿಸುವುದು ಅದರ ಗುರಿ. ಏಕಾಂಗಿ ಪ್ರಯತ್ನಕ್ಕೆ ಬದಲಾಗಿ ಸಂಘಟಿತ ರೂಪದಲ್ಲಿ ಕಾನೂನುಬದ್ಧವಾಗಿ, ಶಾಂತಿಯುತ ಮಾರ್ಗದಿಂದಲೇ ಪ್ರದರ್ಶನ, ಪ್ರತಿಭಟನೆ ಇತ್ಯಾದಿ. ಅನಿವಾರ್ಯವಾದರೆ ಹೋರಾಟಕ್ಕೂ ಸಿದ್ಧ – ಎನ್ನುವ ರೀತಿಯಲ್ಲಿ ಭಾಕಿಸಂ ಬಹುಬೇಗ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಪ್ರಭಾವವನ್ನು ತೋರಿಸಿತು.
ಆಗಾಗ ತರಬೇತಿ ವರ್ಗಗಳನ್ನು ನಡೆಸಿ ನಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿಯ ಬಗ್ಗೆ ಶ್ರದ್ಧೆ, ವಿಶ್ವಾಸ ಮೂಡಿಸಲು ಮತ್ತು ಆಧುನಿಕ ಕೃಷಿಯ ಮಾಹಿತಿ ಮತ್ತು ತಂತ್ರಜ್ಞಾನಗಳನ್ನು ರೈತರಿಗೆ ಲಭ್ಯವಾಗಿಸಲು ಭಾಕಿಸಂ ಪ್ರಯತ್ನಿಸಿತು. ‘ಕೃಷಿಮಿತ್ ಕೃಷತ್ವ’ (ಕೃಷಿಯೇ ಸರ್ವೋತ್ಕೃಷ್ಟವಾದದ್ದು) ಎಂಬುದು ಭಾಕಿಸಂ ಧ್ಯೇಯವಾಕ್ಯವಾಗಿದೆ. ನೇಗಿಲುಧಾರಿಯಾದ ಬಲರಾಮ ಕೃಷಿಯ ಅಧಿದೇವತೆಯೆಂದು ನಂಬಲಾಗುತ್ತದೆ. ಬಲರಾಮನ ಜಯಂತಿ ದಿನವನ್ನು ಭಾಕಿಸಂ ‘ರಾಷ್ಟ್ರೀಯ ಕಿಸಾನ್ ದಿವಸ’ವಾಗಿ ಆಚರಿಸುತ್ತದೆ. ಕೃಷಿಗೆ ಎತ್ತುಗಳು ಅಗತ್ಯ; ದನ-ಎತ್ತುಗಳ ಸೆಗಣಿ, ಗಂಜಳ ಕೃಷಿಗೆ ಅಗತ್ಯ ಎನ್ನುವ ಹಿನ್ನೆಲೆಯಲ್ಲಿ ಭಾಕಿಸಂ ಗೋ-ಆಧಾರಿತ ಕೃಷಿಗೆ ಒತ್ತು ನೀಡುತ್ತದೆ.
ಇನ್ನಷ್ಟು ಸಂಸ್ಥೆಗಳು
ಕೇವಲ ಲಾಭವನ್ನೇ ಗುರಿಯಾಗಿಸಿಕೊಂಡು ಆಹಾರದ ಬೆಳೆಗಳನ್ನು ಕೈಬಿಟ್ಟು ಅಡಿಕೆ, ಹೊಗೆಸೊಪ್ಪು, ರಬ್ಬರ್, ಸೂರ್ಯಕಾಂತಿ, ನೀಲಗಿರಿ, ಹಿಪ್ಪುನೇರಳೆಯಂತಹ ವಾಣಿಜ್ಯ ಬೆಳೆಗಳನ್ನು ಆಶ್ರಯಿಸುವುದು ಸಲ್ಲದು; ಆಹಾರ ಬೆಳೆಗಳಿಗೆ ಆದ್ಯತೆ ಸಲ್ಲಬೇಕು ಎಂದು ಈ ಸಂಘಟನೆ ಮಾರ್ಗದರ್ಶನ ನೀಡುತ್ತದೆ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಹಿಂದೆ ಸರಿಯಬೇಕೆಂದು ಕೂಡ ಭಾಕಿಸಂ ಸಲಹೆ ನೀಡುತ್ತದೆ. ರಸಗೊಬ್ಬರಗಳಿಂದ ಆರಂಭದಲ್ಲಿ ಅಧಿಕ ಇಳುವರಿ ಕಂಡರೂ ಕ್ರಮೇಣ ಮಣ್ಣು ಬರಡಾಗಿ ಇಳುವರಿ ಕುಸಿಯುತ್ತದೆ. ಮಣ್ಣಿನಲ್ಲಿರುವ ಎರೆಹುಳ ಹಾಗೂ ಸೂಕ್ಷ್ಮಾಣುಜೀವಿಗಳು ಸತ್ತು, ರಸಗೊಬ್ಬರ, ಕೀಟನಾಶಕಗಳ ಬಳಕೆಯನ್ನು ಹೆಚ್ಚಿಸಬೇಕಾಗುತ್ತದೆ. ಕೃಷಿಯ ವೆಚ್ಚ ಅಧಿಕವಾಗಿ ರೈತ ಕಷ್ಟಕ್ಕೆ (ಸಾಲ) ಸಿಲುಕುತ್ತಾನೆ ಮುಂತಾಗಿ ಭಾಕಿಸಂ ರೈತರನ್ನು ಎಚ್ಚರಿಸುತ್ತ ಬಂದಿದೆ. ದತ್ತೋಪಂತರು ಹಾಕಿಕೊಟ್ಟ ತಳಹದಿಯ ಮೇಲೆ ಭಾಕಿಸಂ ದೇಶವ್ಯಾಪಿಯಾಗಿ ಬೆಳೆಯುತ್ತಿದೆ; ಈಚೆಗೆ ಹಲವಾರು ರೈತರು ಸಾವಯವ ಕೃಷಿಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ.
‘ಸಾಮಾಜಿಕ್ ಸಮರಸತಾ ಮಂಚ್’ ಮತ್ತು ‘ಪರ್ಯಾವರಣ ಮಂಚ್’(ಎರಡೂ 1991ರಲ್ಲಿ ಸ್ಥಾಪನೆ)ಗಳು ಠೇಂಗಡಿ ಅವರು ಸ್ಥಾಪಿಸಿದ ಇನ್ನೆರಡು ಸಂಸ್ಥೆಗಳು. ‘ಸರ್ವಪಂಥ್ ಸಮಭಾವ್’ ಎನ್ನುವ ಸಂಸ್ಥೆಯನ್ನು ಕೂಡ ಅವರು ಸ್ಥಾಪಿಸಿದ್ದರು. ಇನ್ನು ಕೆಲವು ಸಂಸ್ಥೆಗಳಿಗೆ ಅವರು ಸ್ಥಾಪಕರಲ್ಲದಿದ್ದರೂ ಅವುಗಳಿಗೆ ಅವರ ಯೋಗದಾನ ಸಂದಿತ್ತು. ಉದಾಹರಣೆಗೆ ದೇಶವ್ಯಾಪಿಯಾಗಿ ಬೆಳೆದ ‘ಸಂಸ್ಕಾರ ಭಾರತಿ’. “ಸಂಸ್ಕಾರ ಭಾರತಿಗೆ ದತ್ತೋಪಂತರು ನೀಡಿದ ಮಾರ್ಗದರ್ಶನ ಮರೆಯಲಾಗದ್ದು. ನಮಗೆ ಮಾರ್ಗದರ್ಶಕ ಆಗುವಂತಹ ಒಂದು ಪುಸ್ತಕವು (ಕೈಪಿಡಿ) ಬೇಕೆಂದು ಅನ್ನಿಸುತ್ತಲೇ ಇತ್ತು. ಅದನ್ನು ಬರೆಯಲು ಅವರೇ ಸೂಕ್ತ ಎಂದು ತೀರ್ಮಾನಿಸಿ ಅವರಲ್ಲಿ ಕೇಳಿಕೊಂಡೆ. ಪುಣೆಯಲ್ಲಿ ಕುಳಿತು ಬರೆದರೆ ಡೆಕ್ಕನ್ ವಿಶ್ವವಿದ್ಯಾಲಯದ ದೊಡ್ಡ ಗ್ರಂಥಾಲಯದ ನೆರವು ಆಗುತ್ತದೆಂದು ಅದರಲ್ಲಿ ಸೂಚಿಸಿದೆ. ಅದರಂತೆ ‘ಎ ಹಿಂದೂ ವ್ಯೂ ಆಫ್ ಆರ್ಟ್’ ಗ್ರಂಥವನ್ನು ಬರೆದುಕೊಟ್ಟರು” ಎಂದು (1990) ಸಂಸ್ಥೆಯ ಸ್ಥಾಪಕ ಶ್ರೀ ಯೋಗೇಂದ್ರಜೀ ಹೇಳಿದ್ದಾರೆ. ಈ ಗ್ರಂಥ ಹಿಂದಿ, ಗುಜರಾತಿ, ಮರಾಠಿ, ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿದೆ.
ಪ್ರಭಾವ ಬೀರಿದವರು
ದೇಶದ ಸಾಮಾಜಿಕ-ಆರ್ಥಿಕ ಜೀವನದ ಮೇಲೆ ಠೇಂಗಡಿಜೀ ಅಗಾಧ ಪ್ರಭಾವವನ್ನು ಬೀರಿದ್ದಾರೆ. ಸರಳ ಜೀವನ, ಆಳವಾದ ಅಧ್ಯಯನ ಮತ್ತು ಚಿಂತನೆ, ಚಿಂತನೆಯಲ್ಲಿ ಸ್ಪಷ್ಟತೆ, ಬದ್ಧತೆಯಲ್ಲಿ ಧೈರ್ಯ, ಗುರಿಯ ಕಡೆಗೆ ತೀವ್ರವಾದ ಆಸಕ್ತಿ (ಶ್ರದ್ಧೆ) ಮುಂತಾದವು ಠೇಂಗಡಿ ಅವರ ಹೆಗ್ಗುರುತುಗಳು. ಹಲವು ಕ್ಷೇತ್ರಗಳವರು ಅವರನ್ನು ತಮ್ಮಿಂದ ಒಂದು ಹೆಜ್ಜೆ ಮುಂದೆ ಎಂದು ಪರಿಗಣಿಸಿದ್ದರು. ಅದೇ ಅವರ ಯಶಸ್ಸಿನ ಗುಟ್ಟು ಎಂದು ಗುರುತಿಸಲಾಗಿದೆ. ಅಮೆರಿಕ, ಯುಗೋಸ್ಲಾವಿಯ, ಬ್ರಿಟನ್, ಚೀಣಾ ಮುಂತಾದ ದೇಶಗಳವರು ಇವರನ್ನು ಕರೆಸಿಕೊಂಡು, ಇವರ ಕಾರ್ಮಿಕ ಸಂಘಟನೆಯ ಕೌಶಲದ ಲಾಭವನ್ನು ಪಡೆಯಬಯಸಿದ್ದರು. ಚೀಣಾದಿಂದ ಮರಳುವಾಗ ಬೀಜಿಂಗ್ ರೇಡಿಯೋದವರು ಇವರ ಸಂದೇಶವನ್ನು ಕೇಳಿದರು; ಆಗ ಇವರು ಹೇಳಿದ್ದು: “ಪುಮಾನ್ ಪುಮಾಂಸಂ ಪರಿಪಾತು ವಿಶ್ವತಃ” (ಜಗತ್ತಿನಾದ್ಯಂತ ಮಾನವನು ಮಾನವನನ್ನು ರಕ್ಷಿಸಲಿ) ಎಂದು. ಚೀಣಾಕ್ಕೆ ಇದಕ್ಕಿಂತ ಉತ್ತಮ ಸಂದೇಶ ಸಾಧ್ಯವೆ?
ಇಷ್ಟೆಲ್ಲ ಇದ್ದರೂ ನಂಬಲು ಅಸಾಧ್ಯವಾಗುವಂತಹ ಸರಳತೆ ಠೇಂಗಡಿಜೀ ಅವರದಾಗಿತ್ತು. ಅವರ ಬಳಿ ಏನೂ ಇರಲಿಲ್ಲ. ಕಾರಿಲ್ಲ, ಮನೆ ಇಲ್ಲ. ದೆಹಲಿಯಲ್ಲಿ ಬಿಎಂಎಸ್ ನೀಡಿದ ಸಣ್ಣ ಕೊಠಡಿಯಲ್ಲಿ ವಾಸ. ಪ್ರವಾಸದಲ್ಲಿದ್ದಾಗ ಬೇರೆಯವರ ಮನೆಗಳಲ್ಲಿ ಉಳಿಯುತ್ತಿದ್ದರು. ಕೆಲವು ಕುರ್ತಾ ಮತ್ತು ಧೋತಿಗಳು ಅವರ ಸೊತ್ತು; ಅದಕ್ಕೆ ಒಂದು ಸೂಟ್ಕೇಸ್ ಸಾಕು. ರಾತ್ರಿ ಬಸ್ ಅಥವಾ ದ್ವಿತೀಯ ದರ್ಜೆ ರೈಲುಗಳಲ್ಲಿ ಪ್ರಯಾಣ. ಮದುವೆಯಾಗಲು ಅವರಿಗೆ ಸಮಯವೇ ಸಿಗಲಿಲ್ಲವಂತೆ (ವಾಜಪೇಯಿ ಕೂಡ ಒಮ್ಮೆ ಹಾಗೆ ಹೇಳಿದ ನೆನಪು). ಪ್ರಚಾರದಿಂದ ಸದಾ ದೂರ.
ಪದ್ಮಭೂಷಣ ಬೇಡ
ಹೀಗೆ ತಮ್ಮಷ್ಟಕ್ಕೆ ಇದ್ದ ಅವರನ್ನು ಸರ್ಕಾರ 2003ರಲ್ಲಿ ಕರೆದು ‘ಪದ್ಮಭೂಷಣ’ ಪ್ರಶಸ್ತಿಯನ್ನು ಕೊಡುವುದಾಗಿ ಹೇಳಿತು. ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ಪತ್ರ ಬಂದಿತ್ತು. ಅದನ್ನು ನಯವಾಗಿ ನಿರಾಕರಿಸುತ್ತ “ಆಯ್ಕೆ ಮಾಡಿದ್ದಕ್ಕೆ ತುಂಬಾ ಕೃತಜ್ಞತೆಗಳು. ಅದಕ್ಕೆ ನಾನು ಅರ್ಹನೇ ಎಂದು ಸಂಶಯವಾಗುತ್ತದೆ. ನಿಮ್ಮ ಬಗ್ಗೆ ತುಂಬಾ ಗೌರವ ಇದೆ; ನಿಮ್ಮ ಇಂದಿನ ಹುದ್ದೆಗಿಂತ ನಿಮ್ಮ ವೈಯಕ್ತಿಕ ಮಹಾನತೆಗಾಗಿ (ಗ್ರೇಟ್ನೆಸ್). ಆದರೆ ಡಾ|| ಹೆಡಗೆವಾರ್ ಮತ್ತು ಗುರೂಜೀ ಅವರಿಗೆ ‘ಭಾರತರತ್ನ’ವನ್ನು ಕೊಡುವ ತನಕ ನಾನು ಈ ಗೌರವವನ್ನು ಸ್ವೀಕರಿಸುವುದು ಸರಿಯಾಗುವುದಿಲ್ಲ” ಎಂದು ರಾಷ್ಟ್ರಪತಿಗೆ ಪತ್ರ ಬರೆದರು.
ರಾಜಕೀಯದಲ್ಲಿ ಸಕ್ರಿಯವಾಗಿದ್ದಾಗಲೂ ಕಾರ್ಮಿಕರ ವಿಷಯಗಳ ಮೇಲೆ ರಾಜಕೀಯವು ಪ್ರಾಬಲ್ಯ ಸ್ಥಾಪಿಸಲು ಅವರು ಬಿಡಲಿಲ್ಲ; ಮತ್ತು ಅವರು ಎಲ್ಲೇ ಕೆಲಸ ಮಾಡಲಿ, ಆ ಸಂಸ್ಥೆ ಅಥವಾ ಚಟುವಟಿಕೆಗೆ ಅವರು ಹೊಸ ಆಯಾಮವನ್ನು ನೀಡುತ್ತಿದ್ದರು; ಹಾಗೂ ದೀರ್ಘಕಾಲೀನ ಪ್ರಭಾವ ಬೀರುತ್ತಿದ್ದರು. 84ರ ವಯಸ್ಸಿನಲ್ಲಿ ಠೇಂಗಡಿ ಅವರು ನಿಧನ ಹೊಂದಿದಾಗ ವಾಜಪೇಯಿ ಹೀಗೆ ಹೇಳಿದರು: “ನನಗೆ ಅವರೊಂದಿಗೆ 50 ವರ್ಷಗಳ ನಿಕಟ ಸಂಬಂಧವಿತ್ತು. ಅವರ ವ್ಯಕ್ತಿತ್ವವನ್ನು ಒಂದು ವಾಕ್ಯದಲ್ಲಿ ಹೇಳಬೇಕೆಂದರೆ ಅವರೊಬ್ಬ ‘ಸಮರ್ಪಿತ ರಾಷ್ಟ್ರಸೇವಕ’ ಎನ್ನಬಹುದು. ಆರ್.ಎಸ್.ಎಸ್. ಸರಸಂಘಚಾಲಕ ಮೋಹನ್ಜೀ ಭಾಗವತ್ ಅವರು “ಠೇಂಗಡಿಜೀ ಅವರು ಸ್ವದೇಶೀಯನ್ನು ದೈನಂದಿನ ಜೀವನದಲ್ಲಿ ದೇಶಪ್ರೇಮದ ಅಭಿವ್ಯಕ್ತಿ ಎಂದು ಭಾವಿಸಿದ್ದರು” ಎಂದು ಗೌರವ ಸೂಚಿಸಿದ್ದಾರೆ.
ತಮ್ಮ ಕಾಲದ ಓರ್ವ ಅದ್ಭುತ ಚಿಂತಕರಾಗಿದ್ದ ಠೇಂಗಡಿ ಅವರು ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಎಲ್ಲವನ್ನೂ ಬಲ್ಲವರಾಗಿದ್ದರು. ಆದರೂ ಸಾರ್ವಜನಿಕವಾಗಿ ಮುಂದೆ ಬರುವುದಕ್ಕೆ ಅವರು ಇಚ್ಛಿಸುತ್ತಿರಲಿಲ್ಲ. ಸಮೂಹಮಾಧ್ಯಮಗಳಿಗಾಗಿ ಅವರಲ್ಲಿ ಫೋಟೋ ತೆಗೆಯುವುದು, ಮಾಧ್ಯಮಗಳಿಗೆ ಸಂದರ್ಶನ ಕೊಡುವುದು ಅವರಿಗೆ ಇಷ್ಟವಿಲ್ಲದ ಸಂಗತಿಗಳು. ರಾಷ್ಟ್ರ ಕಟ್ಟಲು ಕೆಮರಾ ಮುಂದೆ ನಿಲ್ಲಬೇಕಿಲ್ಲ ಎಂಬುದು ಅವರ ನಿಲವು. ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದು ಸಕ್ರಿಯ ರಾಜಕೀಯದಲ್ಲಿದ್ದಾಗಲೂ ಅವರು ಬದಲಾಗಲಿಲ್ಲ. ಅವರು ಅವರೇ ಆಗಿದ್ದರು. ವಿಪರೀತ ಕೆಲಸಗಳ ನಡುವೆಯೂ ಓದುತ್ತಿದ್ದರು; ಬರೆಯುತ್ತಿದ್ದರು. ಅವರ ಪುಸ್ತಕಗಳಲ್ಲಿ ಸ್ವೋಪಜ್ಞ ಚಿಂತನೆಯಿದೆ; ಕೈಪಿಡಿಯಾಗುವ ಅರ್ಹತೆಯಿದೆ. ಸುಮಾರು 50 ಪುಸ್ತಕಗಳನ್ನು ಠೇಂಗಡಿ ಅವರು ಬರೆದಿದ್ದು, 28 ಹಿಂದಿ, 12 ಇಂಗ್ಲಿಷ್ ಮತ್ತು ಹತ್ತು ಮರಾಠಿಯಲ್ಲಿವೆ. ವಿದೇಶಗಳಲ್ಲಿ ಸೇರಿದಂತೆ ಹಲವು ಸಮಾವೇಶಗಳಲ್ಲಿ ಪ್ರಬಂಧ ಮಂಡಿಸಿದ್ದರು. ಒಟ್ಟಿನಲ್ಲಿ ಒಂದೊಂದು ಕ್ಷೇತ್ರ, ಒಂದೊಂದು ಸಂಸ್ಥೆಯಲ್ಲೂ ಅವರು ಒಬ್ಬ ವ್ಯಕ್ತಿ ಮಾಡುವಷ್ಟು ಕೆಲಸಗಳನ್ನು ಮಾಡಿಸಿದ್ದಾರೆ; ಮಹಾನ್ ಸಾಧಕ ಎನಿಸಿದ್ದಾರೆ. ವರ್ಷಗಳು ಕಳೆದಂತೆ ಒಬ್ಬನೇ ವ್ಯಕ್ತಿ ಅಷ್ಟೆಲ್ಲ ಮಾಡಿದನೇ ಎಂದು ನಂಬುವುದಕ್ಕೆ ಕಷ್ಟವಾಗಬಹುದು.
ಸ್ವಾಗತಭಾಷಣ ಮಾಡಿ ನಿರ್ಗಮನ
ಕಾರ್ಮಿಕ ಚಳವಳಿಯಲ್ಲಿ ದತ್ತೋಪಂತ ಠೇಂಗಡಿ ಅವರು ಹಲವು ಕಷ್ಟಗಳನ್ನು ಎದುರಿಸಿದರು. ಒಮ್ಮೆ ಕಾರ್ಮಿಕ ಸಂಘಗಳ ಸಂಯುಕ್ತ ರ್ಯಾಲಿಯಲ್ಲಿ ಅವರಿಗೆ ಸ್ವಾಗತ ಭಾಷಣ ಮಾಡುವಂತೆ ಸೂಚಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎಚ್ಎಂಎಸ್ನ ಹಿರಿಯ ನಾಯಕ ಎನ್.ಜಿ. ಗೋರೆ ಅವರು ಭಾಗವಹಿಸುವವರಿದ್ದರು. ಕೊನೆಯ ಕ್ಷಣದಲ್ಲಿ ಆತ ಆರ್.ಎಸ್.ಎಸ್. ಪ್ರಚಾರಕ್ ಇರುವ ವೇದಿಕೆಯಲ್ಲಿ ತಾವು ಇರುವುದಿಲ್ಲ ಎಂದು ಹೇಳಿದರು. ಅದಕ್ಕೆ ಠೇಂಗಡಿ ಅವರು ಏನು ಮಾಡಿದರೆಂದರೆ, ಸ್ವಾಗತ ಭಾಷಣ ಮಾಡಿದವರು ವೇದಿಕೆಯಿಂದ ಇಳಿದು ಹೊರಟೇಹೋದರು. ತುರ್ತುಪರಿಸ್ಥಿತಿಯ ವೇಳೆ ಒಮ್ಮೆ ಠೇಂಗಡಿಯವರು ಗೋರೆ ಅವರನ್ನು ಸುರಕ್ಷಿತ ಸ್ಥಳಕ್ಕೆ ಬಿಡಬೇಕಿತ್ತು. ಆಗ ಗೋರೆ ಹಿಂದೆ ನಡೆದ ಅಚಾತುರ್ಯಕ್ಕೆ ವಿಷಾದ ವ್ಯಕ್ತಪಡಿಸಿದರಂತೆ. ಸಂಘಟನೆ ಮತ್ತು ರಾಜಕೀಯ ಲೆಕ್ಕಾಚಾರಗಳಿಂದ ಆಚೆಗೆ ಗೆಳೆತನಕ್ಕೆ ಠೇಂಗಡಿಯವರು ಸದಾ ಪ್ರಯತ್ನಿಸುತ್ತಿದ್ದರು. ಇತರ ಕಾರ್ಮಿಕ ಸಂಘಟನೆಗಳ ಜೊತೆಗೆ ಅವರು ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಕೇರಳದಲ್ಲಿ ಒಮ್ಮೆ ಆರ್.ಎಸ್.ಎಸ್. ಮತ್ತು ಸಿಪಿಎಂ ಕಾರ್ಯಕರ್ತರ ಘರ್ಷಣೆ ಜೋರಾಗಿ, ಕೊಲೆಗಳು ಸೇರಿದಂತೆ ಹಿಂಸಾತ್ಮಕ ಘಟನೆಗಳು ನಡೆದಾಗ ಅವರು ಸಿಐಟಿಯು ನಾಯಕ ಪಿ. ರಾಮಮೂರ್ತಿ ಅವರ ಜೊತೆಯಲ್ಲಿ ಕೇರಳಕ್ಕೆ ಹೋಗಿ ಘರ್ಷಣೆಗಳನ್ನು ನಿಲ್ಲಿಸಲು ಶ್ರಮಿಸಿದ್ದರು.