1908ರ ಉತ್ತರಾರ್ಧದಲ್ಲಿ ಬಾಲ ಗಂಗಾಧರ ತಿಲಕರು ಬರೆದ ‘ದೇಶದ ದೌರ್ಭಾಗ್ಯ’ಮತ್ತು ‘ಈ ಉಗುರುಬೆಚ್ಚಗಿನ ಕ್ರಮಗಳು ದೀರ್ಘಕಾಲೀನ ಪರಿಹಾರಗಳಾಗಲಾರವು’ – ಎಂಬ ಎರಡು ಲೇಖನಗಳನ್ನು ವ್ಯಾಜವಾಗಿಸಿಕೊಂಡು ‘ರಾಜದ್ರೋಹ’ದ ಆಪಾದನೆಗೊಳಪಡಿಸಿ ಬ್ರಿಟಿಷ್ ನ್ಯಾಯಾಲಯವು ತಿಲಕರಿಗೆ ಆರು ವರ್ಷಗಳ ಗಡೀಪಾರು ಶಿಕ್ಷೆ ವಿಧಿಸಿ ದೂರದ ಬರ್ಮದ (ಈಗಿನ ಮಯನ್ಮಾರ್) ಮಾಂಡಲೆ ಕಾರಾಗೃಹಕ್ಕೆ ಅವರನ್ನು ರವಾನಿಸಿತು. ಅವುಗಳಲ್ಲಿ ಮೊದಲನೆಯ ಲೇಖನ – ‘ದೇಶಾಚೇ ದುರ್ದೈವ!’ ತಿಲಕರ ಮರಾಠಿ ಪತ್ರಿಕೆ ‘ಕೇಸರಿ’ಯಲ್ಲಿ ಮೇ 12, 1908ರಂದು ಪ್ರಕಟವಾಯಿತು. (ಇದರ ಕನ್ನಡ ಅನುವಾದವನ್ನು ‘ಉತ್ಥಾನ’ದ ಆಗಸ್ಟ್ 2020ರ ಸಂಚಿಕೆಯಲ್ಲಿ ಪ್ರಕಟಿಸಿದೆ.) ಎರಡನೆಯ ಲೇಖನ – ‘ಹೇ ಉಪಾಯ ಟಿಕಾಊ ನಾಹೀತ’, ‘ಕೇಸರಿ’ಯಲ್ಲಿ 9 ಜೂನ್ 1908ರಲ್ಲಿ ಪ್ರಕಟವಾಯಿತು. ಆ ಸಂಪಾದಕೀಯ ಲೇಖನದ ಅನುವಾದ ಇಲ್ಲಿದೆ. ಇದನ್ನೂ ನ್ಯಾಯಾಲಯಕ್ಕಾಗಿ ಅಂದು ಇಂಗ್ಲಿಷಿಗೆ ಅನುವಾದಿಸಿದ್ದವರು – ಎನ್.ಎಲ್. ಮನ್ಕೇರ್.
ಈ ವಾರದಿಂದ (ಬ್ರಿಟಿಷ್) ಭಾರತ ಸರ್ಕಾರ ಹೊಸ ದಮನನೀತಿಯೊಂದನ್ನು ಆರಂಭಿಸಿದೆ. ಐದು ಅಥವಾ ಹತ್ತು ವರ್ಷಗಳ ಬಳಿಕ ದಮನದ ಸೈತಾನ ಭಾರತ ಸರ್ಕಾರದ ಶರೀರವನ್ನು ಆಕ್ರಮಿಸಿಕೊಂಡಂತಿದೆ. ಪ್ರಸ್ತುತ ಸಂದರ್ಭ ಕೂಡ ಅದೇ ರೀತಿಯಲ್ಲಿದೆ. ಲಾರ್ಡ್ ಮಾರ್ಲೆ ಭಾರತದ ರಾಜ್ಯಾಂಗ ಕಾರ್ಯದರ್ಶಿಯಾದ ಬಳಿಕ ಸಾರ್ವಜನಿಕ ಸಭೆಗಳ ತಡೆ ಕಾಯ್ದೆ ಅಂಗೀಕೃತವಾದದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ; ಈಗ ವರ್ತಮಾನ ಪತ್ರಿಕೆಗಳಿಗೆ ಸಂಬಂಧಿಸಿದ ಒಂದು ಕಾಯ್ದೆ ಜಾರಿಗೊಂಡಿದೆ. ಲಿಬರಲ್ (ಉದಾರವಾದಿ) ಪಕ್ಷವು ಅಧಿಕಾರದಲ್ಲಿದ್ದು, ಉದಾರವಾದಿ ಸಿದ್ಧಾಂತಗಳ ತತ್ತ್ವಶಾಸ್ತ್ರಜ್ಞ ಮತ್ತು ಪ್ರತಿಪಾದಕ ಮಾರ್ಲೆ ಅವರು ಆಡಳಿತದ ಅಧಿಕಾರಸೂತ್ರವನ್ನು ಹಿಡಿದಿರುವಾಗಲೇ ದಮನದ ಸೈತಾನರು ಎಲ್ಲೆಡೆ ವ್ಯಾಪಿಸುತ್ತಿರುವುದರಿಂದ ಈ ಮಾಂತ್ರಿಕರೇ ತಮ್ಮ ಆದರ್ಶಗಳಿಗೆ ತಿಲಾಂಜಲಿ ನೀಡಿದ್ದಾರೆ ಎಂಬುದು ಸಾಬೀತಾಗುತ್ತದೆ.
ದಮನದ ಕರಾಳ ರೂಪ
ದಮನದ ನೀತಿ ಎಂದರೇನು? ದಮನವೆಂದರೆ ಭವಿಷ್ಯದ ಬೆಳವಣಿಗೆಯನ್ನು ತಡೆಯುವುದಷ್ಟೇ ಅಲ್ಲ; ಹಿಂದಿನ ಬೆಳವಣಿಗೆಯನ್ನು ಕತ್ತರಿಸಿಹಾಕುವುದು ಕೂಡ ಆಗಿದೆ. ಭಾರತದಲ್ಲಿ ರಾಷ್ಟ್ರಕ್ಕೆ (ರಾಷ್ಟ್ರೀಯತೆ) ಜನ್ಮನೀಡಿದಂತಹ, ರಾಷ್ಟ್ರವನ್ನು (ರಾಷ್ಟ್ರೀಯತೆ) ಬೆಳೆಸಿದಂತಹ ಮತ್ತು ರಾಷ್ಟ್ರದ ಉದಯಕ್ಕೆ ಬೇಕಾದಂತಹ ಕಿಚ್ಚನ್ನು ಸೃಷ್ಟಿಸಿದಂತಹ ಆದರ್ಶಗಳ ಪ್ರಗತಿಗೆ ತಡೆಹಾಕುವುದೆಂದರೆ ಹಾಗೂ ಆ ಧ್ಯೇಯಗಳ ಕಾಲು ಹಿಡಿದು ಹಿಂದಕ್ಕೆ ಎಳೆಯುವುದೆಂದರೆ ಅದೇ ಹಿನ್ನಡೆ ಅಥವಾ ದಮನಕಾರಿ ನೀತಿ ಎನಿಸುತ್ತದೆ. ವಾಕ್ಸ್ವಾತಂತ್ರ್ಯ ಮತ್ತು ಪತ್ರಿಕಾಸ್ವಾತಂತ್ರ್ಯಗಳು ಒಂದು ರಾಷ್ಟ್ರಕ್ಕೆ ಜನ್ಮಕೊಟ್ಟು ಅದನ್ನು ಪೋಷಿಸುತ್ತವೆ. ಇವುಗಳಿಂದಾಗಿ ಭಾರತವು ಒಂದು ರಾಷ್ಟ್ರವಾಗಿ ಪರಿವರ್ತನೆಗೊಳ್ಳುತ್ತಿದೆ ಎಂಬುದನ್ನು ಗಮನಿಸಿದ ಅಧಿಕಾರಿವರ್ಗ ಸಾಕಷ್ಟು ಸಮಯದಿಂದ ಆ ಎರಡನ್ನೂ ಮಟ್ಟಹಾಕುವ ಯೋಚನೆ ಮಾಡುತ್ತಿದೆ. ಬಂಗಾಳದ ಬಾಂಬ್ಸ್ಫೋಟವನ್ನು ಅವರು ತಮ್ಮ ಆ ಉದ್ದೇಶದ ಈಡೇರಿಕೆಗೆ ಬಳಸಿಕೊಂಡರು.
ಈಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ ಪ್ರಸ್ತುತ ದಮನ ನೀತಿಯಿಂದ ಅಧಿಕಾರಿವರ್ಗದ ಮನೋರಥ ಫಲಿಸಬಹುದೆ? – ಎಂಬುದಾಗಿದೆ. ಭಾರತದಲ್ಲಿ ಬಾಂಬ್ಗಳು ಇರಲೇಬಾರದು; ಬಾಂಬ್ಗಳ ತಯಾರಿ ಅಥವಾ ಅವುಗಳನ್ನು ಎಸೆಯುವ ಯೋಚನೆ ಯಾರ ಮನಸ್ಸಿನಲ್ಲೂ ಬರಲೇಬಾರದು ಎಂಬುದು ಅಧಿಕಾರಿ ವರ್ಗದ ಮೊದಲ ಅಪೇಕ್ಷೆಯಾಗಿದೆ. ಅಧಿಕಾರಿವರ್ಗದವರ ಮನಸ್ಸಿನಲ್ಲಿ ಅಂತಹ ಅಪೇಕ್ಷೆ ಇರುವುದು ಸಹಜ ಮಾತ್ರವಲ್ಲ; ಶ್ಲಾಘನೀಯವೂ ಆಗಿದೆ. ಆದರೆ ಉತ್ತರಕ್ಕೆ ಹೋಗಬೇಕಾದವನು ದಕ್ಷಿಣಕ್ಕೆ ಹೋಗುವಂತೆ ಅಥವಾ ಪೂರ್ವಕ್ಕೆ ಹೋಗಬೇಕಾದವನು ಪಶ್ಚಿಮಕ್ಕೆ ಹೋಗುವಂತೆಯೇ ಅಧಿಕಾರಿವರ್ಗ (ತಮ್ಮ ಗುರಿಗೆ) ಪೂರ್ತಿ ವಿರುದ್ಧ ದಿಕ್ಕಿನಲ್ಲಿ ಹೊರಟಿದೆ. ಇದನ್ನೇ ತಿಳಿಗೇಡಿತನ ಎಂದು ಹೇಳುವುದು. ಚಿಂತನೆಯು ಈ ರೀತಿ ದಾರಿತಪ್ಪಿದ್ದನ್ನು ಗಮನಿಸುವಾಗ ಇದು ಮುಂಬರುವ ವಿನಾಶವನ್ನು ಸೂಚಿಸುತ್ತದೆ ಎನ್ನಬಹುದು. ಸರ್ಕಾರವು ಈ ರೀತಿ ದಮನಕಾರಿ ನೀತಿಯನ್ನು ಅನುಸರಿಸುವುದನ್ನು ನೋಡುವಾಗ ನಮಗೆ ತುಂಬ ದುಃಖವಾಗುತ್ತದೆ; ಮತ್ತು ದೇಶದ ಪ್ರಜೆಗಳು ಹಾಗೂ ಅಧಿಕಾರಿವರ್ಗಕ್ಕೆ ಮುಂದೆ ತುಂಬ ದುಃಖದ ದಿನಗಳಿವೆ ಅನ್ನಿಸುತ್ತದೆ.
ಬಾಂಬ್ಗೆ ಅಪಪ್ರಚಾರ
ಸರ್ಕಾರದ ತಿಳಿವಳಿಕೆ ಯಾವ ರೀತಿ ಹೆಡ್ಡತನ ಆಗುತ್ತಿದೆ ಎಂಬುದನ್ನು ಗಮನಿಸಿ ಬಂಗಾಳಿಗಳ ಬಾಂಬ್ಗಳು ಸಮಾಜದ ಬುಡಮೇಲು ಕೃತ್ಯಕ್ಕೆ ಸಮಾನವೆನ್ನುವ ಸುಳ್ಳು ವರದಿಯನ್ನು ಅಧಿಕಾರಿಗಳು ಹಬ್ಬಿಸಿದ್ದಾರೆ. ಸಮಾಜವನ್ನು ನಾಶಮಾಡುವ ಉದ್ದೇಶವನ್ನು ಹೊಂದಿರುವ ಯೂರೋಪಿನ ಬಾಂಬ್ ಮತ್ತು ಬಂಗಾಳದ ಬಾಂಬ್ಗಳ ನಡುವೆ ಭೂಮಿ ಹಾಗೂ ಸ್ವರ್ಗಗಳ ನಡುವೆ ಇರುವಂತಹ ಅಂತರವೇ ಇದೆ. ಬಂಗಾಳದ ಬಾಂಬ್ಗಳ ಮೂಲದಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದ ದೇಶಪ್ರೇಮ ಇರಬಹುದು; ಆದರೆ ಯೂರೋಪಿನ ಬಾಂಬ್ಗಳು ಸ್ವಾರ್ಥಿಗಳಾದ ಶ್ರೀಮಂತ ವರ್ಗದವರ ದ್ವೇಷದಿಂದ ಬಂದಂಥವಾಗಿವೆ. ಬಂಗಾಳಿಗಳು ಅರಾಜಕತಾವಾದಿಗಳಲ್ಲ; ಆದರೆ ಅವರು ಈಗ ಅರಾಜಕತಾವಾದಿಗಳ ಆಯುಧವನ್ನು ತಮ್ಮ ಕೈಗೆ ಎತ್ತಿಕೊಂಡಿದ್ದಾರೆ, ಅಷ್ಟೆ.
ಪ್ಯಾರಿಸ್ನಲ್ಲಿ ದೇಶದ ಅಧ್ಯಕ್ಷನನ್ನು ಕೇವಲ ಆತ ಅಧ್ಯಕ್ಷ ಎನ್ನುವ ಕಾರಣಕ್ಕಾಗಿ ಒಬ್ಬಾತ ಹತ್ಯೆಗೈದ; ಅದು ಅರಾಜಕತೆ. ಪೋರ್ಚುಗಲ್ನ ಒಬ್ಬ ದೇಶಭಕ್ತ ಹುಚ್ಚ ದೇಶದ ರಾಜನ ಮೇಲೆ ಬಾಂಬ್ ಎಸೆದ; ರಾಜ ಪಾರ್ಲಿಮೆಂಟನ್ನು ದಮನ ಮಾಡುತ್ತಿದ್ದಾನೆ ಎಂಬುದು ಅದಕ್ಕೆ ಕಾರಣ. ಅಮೆರಿಕದಲ್ಲಿ ಒಬ್ಬ ಅರಾಜಕತಾವಾದಿ ಒಬ್ಬ ಮಿಲಿಯಾಧಿಪತಿಯನ್ನು ಕೊಲೆ ಮಾಡುತ್ತಾನೆ; ಆತ ಮಿಲಿಯಾಧಿಪತಿ ಆಗಿರುವುದೇ ಅದಕ್ಕೆ ಕಾರಣ. ತೀವ್ರವಾಗಿ ಘಾಸಿಗೊಂಡ ರಷ್ಯಾದ ಓರ್ವ ದೇಶಪ್ರೇಮಿ ಹತಾಶೆಯಿಂದ ಒಂದು ಬಾಂಬ್ ಎಸೆಯುತ್ತಾನೆ; ಕಾರಣ ಅಲ್ಲಿನ ರಾಜ ಝಾರ್ನ ಅಧಿಕಾರಿಗಳು ಪ್ರಜೆಗಳಿಗೆ ‘ಡ್ಯೂಮಾ’ದ (ಶಾಸನಸಭೆ) ಹಕ್ಕುಗಳನ್ನು ನೀಡಲಿಲ್ಲ ಎನ್ನುವುದು. ಬಂಗಾಳದ ಬಾಂಬ್ಗಳು ಮೇಲೆ ಹೇಳಿದ ಒಂದನೇ ವರ್ಗಕ್ಕೆ (ಒಬ್ಬನಿಗಾಗಿ) ಸೇರುವುದಿಲ್ಲ; ಬದಲಾಗಿ ಎರಡನೇ ವರ್ಗಕ್ಕೆ (ಹಲವರಿಗಾಗಿ) ಸೇರುತ್ತವೆ ಎಂಬುದನ್ನು ಯಾರೂ ಮರೆಯಬಾರದು.
ವಿದೇಶಗಳಲ್ಲಿ ಬಾಂಬ್
ಪೋರ್ಚುಗಲ್ನಲ್ಲಿ ಹಾಕಿದ ಬಾಂಬ್ನಿಂದ ಅಲ್ಲಿನ ಸರ್ಕಾರದ ವ್ಯವಸ್ಥೆಯಲ್ಲಿ ಬದಲಾವಣೆ ಉಂಟಾಯಿತು; ಮತ್ತು ಅಧಿಕಾರಕ್ಕೆ ಬಂದ ಬಾಲಕ-ದೊರೆ ಹಿಂದಿನ ದಮನಕಾರಿ ನೀತಿಯನ್ನು ಕೈಬಿಡಬೇಕಾಯಿತು. ಅತ್ಯಂತ ಶಕ್ತಿಶಾಲಿಯಾಗಿದ್ದ ರಷ್ಯಾದ ಝಾರ್ ದೊರೆ ಕೂಡ ಬಾಂಬ್ ಘಟನೆಯ ಬಳಿಕ ತನ್ನ ನಡತೆಯನ್ನು ತಿದ್ದಿಕೊಳ್ಳಬೇಕಾಯಿತು. ಡ್ಯೂಮಾವನ್ನು ದುರ್ಬಲಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದ್ದ ಆತ ಮುಂದೆ ಅದರ ಅಸ್ತಿತ್ವವನ್ನು ಒಪ್ಪಿಕೊಳ್ಳಬೇಕಾಯಿತು. ಮುಂದೆ ಪೋರ್ಚುಗಲ್ನಲ್ಲಿ ಬಾಂಬ್ಸ್ಫೋಟಗಳು ನಡೆಯಲಿಲ್ಲ; ಹಾಗೂ ರಷ್ಯಾದಲ್ಲಿ ಬಾಂಬ್ಗಳ ಸರಣಿ ಮುಂದುವರಿಯಲಿಲ್ಲ. ಆದರೆ ಅದು ಸಾಧ್ಯವಾದದ್ದು ದಮನ ನೀತಿಯಿಂದ ಎಂದು ಯಾರು ಕೂಡ ಹೇಳುವುದಿಲ್ಲ.
ಜನರ ನಡುವೆ ಹೊಸ ಬಯಕೆಗಳು ಮತ್ತು ಹೊಸ ಮಹತ್ತ್ವಾಕಾಂಕ್ಷೆಗಳು ಚಿಗುರೊಡೆಯುತ್ತಿದ್ದು ದಿನದಿನವೂ ಅವು ಪ್ರಬಲಗೊಳ್ಳುತ್ತಿವೆ; ಮೇಲೆ ಹೇಳಿದ ಎರಡೂ ದೇಶಗಳ ಮುತ್ಸದ್ದಿಗಳು ತಮ್ಮಲ್ಲಿ ನಡೆದ ಬಾಂಬ್ಸ್ಫೋಟಗಳಿಗೆ ಆ ಬಗೆಯ ವ್ಯಾಖ್ಯಾನವನ್ನು ನೀಡಿದ್ದರು; ಮತ್ತು ಅದಕ್ಕನುಗುಣವಾಗಿ ಅವರು ತಮ್ಮ ಆಡಳಿತದ ಸ್ವರೂಪವನ್ನು ಯಾವ ರೀತಿಯಲ್ಲಿ ಬದಲಾಯಿಸಿದರೆಂದರೆ ಅಲ್ಲಿ ತಮ್ಮ ಜನರ ಬಯಕೆಗಳು ಮತ್ತು ಮಹತ್ತ್ವಾಕಾಂಕ್ಷೆಗಳಿಗೆ ಭಾಗಶಃವಾಗಿಯಾದರೂ ಅವಕಾಶ ನೀಡಿದರು; ಮತ್ತು ಕನಿಷ್ಠಪಕ್ಷ ಜನ ಹತಾಶರಾಗದಂತೆ ಹಾಗೂ ಹಿಂಸೆಯ ಹಾದಿಯನ್ನು ತುಳಿಯದಂತೆ ನೋಡಿಕೊಂಡರು.
ಎರಡು ರೀತಿಯ ದಮನ
ಭಾರತ (ಬ್ರಿಟಿಷ್) ಸರ್ಕಾರದ ಇಂದಿನ ದಮನ ನೀತಿಯು ಎರಡು ರೀತಿಗಳಲ್ಲಿದೆ. ಮೊದಲನೆಯದಾಗಿ, ಬಾಂಬ್ಗಳ ಉತ್ಪಾದನೆ ಅಸಾಧ್ಯವಾಗಬೇಕು; ಮತ್ತು ಎರಡನೆಯದಾಗಿ, ಅಂತಹ ಕೆಲಸ ಮಾಡಿದವರ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದರೆ ಮುಂದೆ ಯಾರು ಕೂಡ ಬಾಂಬ್ ತಯಾರಿ ಹಾಗೂ ಅದನ್ನು ಎಸೆಯುವುದರತ್ತ ಮನಸ್ಸೇ ಮಾಡಬಾರದು; ಗಿಳಿಯನ್ನು ಪಂಜರದೊಳಗೆ ಸೇರಿಸಿ ಬಾಗಿಲು ಮುಚ್ಚಿದಂತೆ. ಅದೇ ಪ್ರಕಾರ ಸರ್ಕಾರ ಜನರನ್ನು ನಿರಾಯುಧರನ್ನಾಗಿ ಮಾಡಲು ಮುಂದಾಯಿತು. ಪಂಜರದ ಒಳಗಿರುವ ಗಿಳಿ ಅಲ್ಲೇ ಸಂತೋಷವನ್ನು ಕಾಣಬೇಕಾದರೆ ಅದಕ್ಕೆ ಅಲ್ಲಿ ಸಿಹಿಯಾದ ಹಣ್ಣು ಕಾಳು-ಕಡ್ಡಿ ಮತ್ತು ನೀರನ್ನು ಒದಗಿಸಬೇಕು; ಅದೇ ರೀತಿ ಜನರನ್ನು ಕೂಡ ಸಂತೋಷದಲ್ಲಿ ಇಡಬೇಕಾಗುತ್ತದೆ. ಆದರೆ (ಬ್ರಿಟಿಷ್) ಭಾರತ ಸರ್ಕಾರ ಪಂಜರದ ಬಾಗಿಲನ್ನು ಮುಚ್ಚಿದ ನಂತರ ಗಿಳಿಯ ರೆಕ್ಕೆ-ಪುಕ್ಕಗಳನ್ನು ಕೀಳುವ ಮತ್ತು ಕಾಲನ್ನು ಮುರಿಯುವ ಕೆಲಸವನ್ನು ಆರಂಭಿಸಿದೆ; ಗಿಳಿಯು ಪಂಜರದಿಂದ ಹೊರಗೆ ಹೋಗಬಾರದೆಂಬುದು ಇದರ ಉದ್ದೇಶ. ಯೂರೋಪಿನ ಕ್ರೂರಿಗಳಾದ ಆಳರಸರು ಕೂಡ ತಮ್ಮ ಪ್ರಜೆಗಳನ್ನು ನಿರಾಯುಧರನ್ನಾಗಿ ಮಾಡಲಿಲ್ಲ; ಮುಸಲ್ಮಾನರಂತಹ ಕ್ರೂರಿ ಜನಾಂಗದವರು ಕೂಡ ಭಾರತದಲ್ಲಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುವಾಗ ಪ್ರಜೆಗಳಾದ ಹಿಂದುಗಳ ಬಳಿ ಇದ್ದ ಆಯುಧಗಳನ್ನು ಕಿತ್ತುಕೊಳ್ಳಲಿಲ್ಲ.
ಹಾಗಾದರೆ, ಇಂಗ್ಲಿಷರು ಹೀಗೇಕೆ ಮಾಡುತ್ತಿದ್ದಾರೆ? ಜನರ ಬಳಿ ಯಾವುದೋ ನಾಡಕೋವಿ ಹಾಗೂ ಮಾಮೂಲಿ ಖಡ್ಗ ಇದೆ ಎಂದ ಮಾತ್ರಕ್ಕೆ ಅವರು ಎಂದಿಗೂ ಸರ್ಕಾರದ ಸೇನಾಬಲಕ್ಕೆ ಸಮಾನರಾಗುವುದು ಅಸಂಭವ. ಜನರು ತಮ್ಮ ಬಳಿ ಕೆಲವು ಆಯುಧಗಳನ್ನು ಇರಿಸಿಕೊಳ್ಳಲು ಅನುಮತಿ ನೀಡಿದರೂ ಸೇನೆಯ ಬಲಕ್ಕೆ ಅದರಿಂದ ಯಾವುದೇ ಹಾನಿಯಿಲ್ಲ; ಆದರೂ ಜನರನ್ನು ಪೂರ್ತಿ ನಿರಾಯುಧರನ್ನಾಗಿ ಮಾಡುವ ಮೂಲಕ ಇಂಗ್ಲಿಷರು ದೇಶವನ್ನೇ ಹಿಜಡಾ ಮಾಡುವ ಮಹಾಪಾಪಕ್ಕೆ ಕೈಹಾಕುತ್ತಿದ್ದಾರಲ್ಲಾ; ಅದೇಕೆ?
ಶಸ್ತ್ರಾಸ್ತ್ರ ಕಾಯ್ದೆ ವಿಕೃತಿ
ಈ ಪ್ರಶ್ನೆಗೆ ಸಿಗುವ ಉತ್ತರವೆಂದರೆ, ಶಸ್ತ್ರಾಸ್ತ್ರ ಕಾಯ್ದೆಯ (Arms Act) ಮೂಲಕ ದೇಶದ ಪೌರುಷದ ಹತ್ಯೆ ಮಾಡಲಾಯಿತು; ಅದರಂತೆ ದೈನಂದಿನ ಆಡಳಿತ ನಡೆಸುವ ಚಿಲ್ಲರೆ ಅಧಿಕಾರಿಗಳು ಚಲಾಯಿಸಿದ ಅಧಿಕಾರವನ್ನು ಕೂಡ ಯಾರೂ ಪ್ರಶ್ನಿಸಬಾರದು; ಸ್ವಾರ್ಥಿ ಆಡಳಿತವು ಯಾವುದೇ ಅಡೆತಡೆಯಿಲ್ಲದೆ ಮುಂದೆ ಸಾಗಬೇಕು; ಮತ್ತು ಪ್ರಜೆಗಳಿಗೆ ‘ಸ್ವರಾಜ್ಯ’ದ ಯಾವುದೇ ಹಕ್ಕುಗಳನ್ನು ನೀಡಬಾರದು ಎಂಬುದು ಅವರ ಉದ್ದೇಶ!
ಮೊಘಲರಲ್ಲಿ ಇದ್ದಷ್ಟು ದಯೆ ಇಂಗ್ಲಿಷರಲ್ಲಿ ಇಲ್ಲ; ಮತ್ತು ಇವರಲ್ಲಿ ಮೊಘಲರಲ್ಲಿ ಇದ್ದಷ್ಟು ಸೇನಾಬಲ ಕೂಡ ಇಲ್ಲ. ಮೊಘಲ್ ಸಾಮ್ರಾಜ್ಯಕ್ಕೆ ಹೋಲಿಸಿದರೆ ಭಾರತದಲ್ಲಿರುವ ಬ್ರಿಟಿಷ್ ಸಾಮ್ರಾಜ್ಯ ಅತ್ಯಂತ ದುರ್ಬಲವಾದದ್ದು; ಮತ್ತು ಸೇನಾಬಲದ ವಿಷಯದಲ್ಲಿ ಇದರ ಶಕ್ತಿ ಏನೇನೂ ಇಲ್ಲ. ಮೊಘಲ್ ಚಕ್ರವರ್ತಿ ಔರಂಗಜೇಬ ಹಿಂದುಗಳ ಮೇಲೆ ವಿವಿಧ ರೀತಿಯ ದೌರ್ಜನ್ಯಗಳನ್ನು ನಡೆಸಿದ; ಅದು ಮತಕ್ಕೆ ಸಂಬಂಧಿಸಿದ್ದು, ಸಂಪತ್ತಿನ ಹಂಚಿಕೆಗೂ ಅದಕ್ಕೂ ಯಾವುದೇ ಸಂಬಂಧವಿರಲಿಲ್ಲ. ದಕ್ಖಣದ ಮೇಲೆ ಆತ ನಡೆಸಿದ ಹತ್ತಿಪ್ಪತ್ತು ವರ್ಷಗಳ ಯುದ್ಧದಿಂದ ಹತ್ತಿಪ್ಪತ್ತು ಲಕ್ಷದಷ್ಟಿದ್ದ ಆತನ ಸೇನೆ ಸಂಪೂರ್ಣ ನಾಶವಾಯಿತು. ಆದರೂ ಆತನ ಮರಣದ ಅನಂತರ ದೆಹಲಿ ಸಾಮ್ರಾಜ್ಯ ಕುಂಟುತ್ತಾ ಆದರೂ ಸುಮಾರು 150 ವರ್ಷ ಮುಂದುವರಿಯಿತು. ಭಾರತದಲ್ಲಿರುವ ಇಂಗ್ಲಿಷ್ ಸೇನೆಗೆ ಔರಂಗಜೇಬನ ಸೇನೆಗೆ ಎದುರಾದಂಥದೆ ಕಷ್ಟಗಳು ಎದುರಾಗಿದ್ದಲ್ಲಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯು ಕಾಲು ಶತಮಾನ ಕೂಡ ಮುಂದುವರಿಯುತ್ತಿರಲಿಲ್ಲ.
ವಲಸೆಹಕ್ಕಿ ಬ್ರಿಟಿಷರು
ಇದಕ್ಕೆ ಪ್ರಮುಖ ಕಾರಣವೆಂದರೆ, ಇಂಗ್ಲಿಷರು ಭಾರತದಲ್ಲಿ ಕೇವಲ ಹಂಗಾಮಿ ಬಾಡಿಗೆದಾರರು ಅಥವಾ ವಲಸೆಹಕ್ಕಿಗಳಂತೆ ಇದ್ದಾರೆ. ಇದೇ ಸಮಸ್ಯೆಯ ಮೂಲ. ಭಾರತದಲ್ಲಿ ಬ್ರಿಟಿಷರ ವಾಸ್ತವ್ಯವು ಶಾಶ್ವತವಲ್ಲವಾದ್ದರಿಂದ ಇಂಗ್ಲಿಷ್ ಅಧಿಕಾರಿಗಳು, ಇಂಗ್ಲಿಷ್ ವ್ಯಾಪಾರಿಗಳ ಗುರಿ ಇಂಗ್ಲೆಂಡನ್ನು ಶ್ರೀಮಂತಗೊಳಿಸುವುದಷ್ಟೇ ಆಗಿರುತ್ತದೆ. ಈ ವಂಚಕ ಗುರಿ ಅವರದಾಗಿರುವ ಕಾರಣ ಸಹಜವಾಗಿ ಅವರು ಆಳುವ ಅಧಿಕಾರವನ್ನು ಪ್ರತ್ಯೇಕವಾಗಿ ವಿಭಜಿಸಿ ಸ್ಥಳೀಯರಿಗೆ ಏನನ್ನೂ ನೀಡದಿರಲು ನಿರ್ಧರಿಸಿದ್ದಾರೆ. ಮೊಘಲರು ಕೂಡ ತಮ್ಮ ಮೂಲಸ್ಥಾನವು ಸಮೃದ್ಧವಾಗುವ ಸಲುವಾಗಿ ಭಾರತದಲ್ಲಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದರೆ, ಅದಕ್ಕಾಗಿ ಅಧಿಕಾರಿಗಳನ್ನು ಹಂಗಾಮಿ ಬಾಡಿಗೆದಾರರಂತೆ ಕಳುಹಿಸಿದ್ದರೆ, ಅವರು ಕೂಡ ಇಲ್ಲಿನ ರಾಜರು ಮುಖ್ಯಸ್ಥರು ಅಥವಾ ಗ್ರಾಮಮಟ್ಟದ ಸಂಸ್ಥೆಗಳೊಂದಿಗೆ ವ್ಯವಹರಿಸುವಲ್ಲಿ ಇಂಗ್ಲಿಷರಂತೆ ಬಿಗಿನೀತಿಯನ್ನೇ ಅನುಸರಿಸುತ್ತಿದ್ದರೇನೋ; ಬಹುಶಃ ಆಗ ಇಲ್ಲಿನ ಜನರನ್ನು ನಿಶ್ಶಸ್ತ್ರಗೊಳಿಸುವುದು ಅನಿವಾರ್ಯವಾಗುತ್ತಿತ್ತೇನೋ.
ಪಾಶ್ಚಾತ್ಯ ವಿಜ್ಞಾನದಿಂದ ದೊರೆತ ಬಲ ಮತ್ತು ನಿಶ್ಶಸ್ತ್ರೀಕರಣದ ಫಲವಾಗಿ ಪ್ರಜಾಜನರಲ್ಲಿ ಉಂಟಾಗಿರುವ ಅಸಹಾಯಕತೆಯಿಂದಾಗಿ ಬ್ರಿಟಿಷರು ತಮ್ಮ ಆಡಳಿತವನ್ನು ಯಾವುದೇ ಅಡೆತಡೆಯಿಲ್ಲದೆ ತಮ್ಮ ಇಚ್ಛಾನುಸಾರ ನಡೆಸಬಹುದಾಗಿದೆ. ಜನತೆಯ ಬಯಕೆ ಮತ್ತು ಆಶೋತ್ತರಗಳಿಗೆ ಯಾವುದೇ ಗಮನ ಕೊಡಬೇಕಾಗಿಲ್ಲ.
ಬಾಂಬ್ನ ಘಟನೆಯಿಂದಾಗಿ ಈ ವಿದ್ಯಮಾನ ಶಾಶ್ವತವಲ್ಲ ಎಂದು ತಿಳಿಯುವಂತಾಗಿದೆ. ಪ್ರಜೆಗಳು ನಿರಾಯುಧರು; ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿ ಆಧುನಿಕ ವಿಜ್ಞಾನದಿಂದಾಗಿ ಸರ್ಕಾರವೇ ಬಲಶಾಲಿ ಎಂಬಂತಿತ್ತು. ಸರ್ಕಾರದ ಕೆಲವು ಕ್ರಮಗಳಿಂದಾಗಿ ಜನ ನಿರಾಶೆಗೊಳ್ಳಬಹುದು; ನಿರಾಶೆಗೊಂಡು ಕೆರಳಬಹುದು ಮತ್ತು ಸರ್ಕಾರದ ಎದುರು ನಿಲ್ಲಬಹುದು ಎಂದು ತಿಳಿಯುವುದಕ್ಕೆ ಇದುತನಕ ಸರ್ಕಾರಕ್ಕೆ ಅವಕಾಶವೇ ಇರಲಿಲ್ಲ. ತಾನು ನಡೆಸುವ ದೌರ್ಜನ್ಯವು ಪ್ರಜೆಗಳಿಗೆ ಅಸಹನೀಯವಾಗುತ್ತಿದೆ ಎಂದು ಸರ್ಕಾರಕ್ಕೆ ಗೊತ್ತಾಗಲು ಸಾಧ್ಯವೇ ಇರಲಿಲ್ಲ. ಸರ್ಕಾರ ಏನಾದರೂ ಮಾಡಿದರೆ ಮತ್ತು ಜನರಿಗೆ ಅದು ಇಷ್ಟವಾಗದಿದ್ದರೆ ಇದುವರೆಗೆ ಸಾಮಾನ್ಯವಾಗಿ ಏನಾಗುತ್ತಿತ್ತು?
ಮನವಿಗಳು ನಿಷ್ಫಲ
ಜನ ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಮನವಿಗಳನ್ನು ಸಲ್ಲಿಸುತ್ತಿದ್ದರು; ಮತ್ತು ಅಧಿಕಾರಿಗಳು, ಇದು ತಾತ್ಕಾಲಿಕವಾದ ನೀರ್ಗುಳ್ಳೆ; ಬಹುಬೇಗ ತಾನಾಗಿಯೇ ಕರಗಿಹೋಗುತ್ತದೆ ಎಂದು ಹೇಳುತ್ತಿದ್ದರು. ಜನ ನಿರಾಶರಾಗುತ್ತಿದ್ದರು. ತಾಳ್ಮೆ ಕಳೆದುಕೊಂಡವರು ಸಿಟ್ಟಾಗುತ್ತಿದ್ದರು; ಆಕ್ರೋಶಗೊಂಡು ತಮ್ಮೊಳಗೇ ಕುದಿಯುತ್ತಿದ್ದರು. ಕ್ರೋಧಾವೇಶದಿಂದ ತಮ್ಮದೇ ಹಿಂಸಾತ್ಮಕಮಾರ್ಗ ತುಳಿದು ತಾವೇ ಸುಟ್ಟುಹೋಗುತ್ತಿದ್ದರು; ಅಂತಹ ಸಿಟ್ಟಿನಿಂದ ಅವರು ಏಕಾಂಗಿಗಳಾಗುತ್ತಿದ್ದರು; ಆ ಬಗೆಗಿನ ಯಾವುದೇ ರೀತಿಯ ವರದಿ ಸರ್ಕಾರದ ಕಿವಿಗೆ ಬೀಳುತ್ತಲೂ ಇರಲಿಲ್ಲ; ಇದುವರೆಗಿನ ಪರಿಸ್ಥಿತಿ ಆ ರೀತಿಯಲ್ಲಿತ್ತು. ಬಾಂಬ್ಸ್ಫೋಟದ ಪರಿಣಾಮವಾಗಿ ನಿರಾಯುಧರೂ ‘ಅವಿವೇಕಿಗಳೂ’ ಆದ ಆ ಜನರ ಕೈಗೆ ಆಯುಧಗಳನ್ನು ಕೊಟ್ಟಂತಾಗಿದೆ; ಮತ್ತು ಸೇನಾಬಲದ ಮಹತ್ತ್ವವು ಒಮ್ಮೆಲೇ ಕೆಳಗೆ ಇಳಿದಿದೆ. ಮೊಘಲರು ತೋರಿಸಿದ್ದಕ್ಕಿಂತ ಹೆಚ್ಚಿನದಾದ ಉದಾರತೆಯೊಂದಿಗೆ ಸಂಪತ್ತು ಮತ್ತು ಅಧಿಕಾರವನ್ನು ಜನರೊಂದಿಗೆ ಹಂಚಿಕೊಳ್ಳದೆ ಹೋದಲ್ಲಿ ಇಂಗ್ಲೆಂಡಿಗೆ ಇನ್ನು ಮುಂದೆ ಸರಾಗವಾಗಿ ಆಡಳಿತವನ್ನು ನಡೆಸಿಕೊಂಡುಹೋಗಲು ಕಷ್ಟವಾಗಬಹುದು; ಅದರಲ್ಲೂ ಭಾರತದ ವಿಷಯದಲ್ಲಿ ಯಾವುದೇ ಆಸಕ್ತಿಯಿಲ್ಲದ ಆ ಹಂಗಾಮಿ ಅಧಿಕಾರಿಗಳಿಗೆ ಇದು ತೀರಾ ಕಷ್ಟ.
ಸುಲಭವಾದ ಬಾಂಬ್
ಬಾಂಬ್ ಎಂದರೆ ನಾಡಪಿಸ್ತೂಲು ಅಥವಾ ನಾಡಕೋವಿಯಂತಲ್ಲ. ಶಸ್ತ್ರಾಸ್ತ್ರ ಕಾಯ್ದೆಯ ಮೂಲಕ ನಾಡಪಿಸ್ತೂಲು ಮತ್ತು ನಾಡಕೋವಿಗಳನ್ನು ಪ್ರಜೆಗಳಿಂದ ದೂರವಿರಿಸಬಹುದು; ಸರ್ಕಾರದ ಅನುಮತಿಯಿಲ್ಲದೆ ಅವುಗಳನ್ನು ಉತ್ಪಾದಿಸುವುದನ್ನು ಕೂಡ ತಡೆಯಬಹುದು. ಆದರೆ, ಕಾನೂನು, ಅಧಿಕಾರಿಗಳ ನಿಗಾ ಅಥವಾ ಪತ್ತೇದಾರಿ ಪೊಲೀಸರ ನಿರಂತರ ಶೋಧದ ಮೂಲಕ ಬಾಂಬ್ಗಳನ್ನು ತಡೆಯಲು ಅಥವಾ ದೂರಮಾಡಲು ಸಾಧ್ಯವೆ? ಬಾಂಬಿಗೆ ಹೆಚ್ಚಾಗಿ ಜ್ಞಾನದ ಸ್ವರೂಪವಿದ್ದು, ಅದೊಂದು ಮಾಟಗಾರಿಕೆ, ಒಂದು ಆಕರ್ಷಣೆ ಅಥವಾ ಒಂದು ತಾಯಿತ (ರಕ್ಷೆ).
ಅದಕ್ಕೆ ಬಹುತೇಕ ಒಂದು ಕಾರ್ಖಾನೆಯಲ್ಲಿ ಉತ್ಪಾದಿಸಿದ ಒಂದು ಮೂರ್ತ ವಸ್ತುವಿನ ಲಕ್ಷಣಗಳಿಲ್ಲ. ಸರ್ಕಾರದ ಸೇನಾಪಡೆಗಳಿಗೆ ಬೇಕಾದ ಬಾಂಬ್ಗಳನ್ನು ತಯಾರಿಸಲು ಬೃಹತ್ ಕಾರ್ಖಾನೆಗಳು ಅಗತ್ಯ. ಆದರೆ ಹಿಂಸೆಯ ಹಾದಿ ಹಿಡಿದ ವಿಭಿನ್ನ ಚಿಂತನೆಯ (ಕ್ರಾಂತಿಕಾರಿ?)
ವ್ಯಕ್ತಿಗಳಿಗೆ ಬೇಕಾದ ಐದು ಅಥವಾ ಹತ್ತು ಬಾಂಬ್ಗಳನ್ನು ತಯಾರಿಸಲು ಹೆಚ್ಚೇನೂ ಸರಕುಗಳು ಬೇಡ. ವೀರೇಂದ್ರನ ‘ದೊಡ್ಡ ಬಾಂಬ್ ಕಾರ್ಖಾನೆ’ಯಲ್ಲಿ ಒಂದೆರಡು ಪಾತ್ರೆಗಳು ಮತ್ತು ಐದು-ಹತ್ತು ಬಾಟಲಿಗಳನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಆದರೆ ಸರ್ಕಾರಿ ರಾಸಾಯನಿಕ ತಜ್ಞರು ಈಗ ಹೇಳುವುದೆಂದರೆ, ವೈಜ್ಞಾನಿಕ ದೃಷ್ಟಿಯಿಂದ ಆ ಕಾರ್ಖಾನೆಯು ಸರ್ಕಾರಿ ಬಾಂಬ್ ಕಾರ್ಖಾನೆಯಂತೆಯೇ ದೋಷರಹಿತವಾಗಿತ್ತು. ವೀರೇಂದ್ರನ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿ, ಪ್ರಕಟಗೊಂಡ ವಿವರಗಳ ನಿಜವಾದ ಅರ್ಥದ ಕಡೆಗೆ ಸರ್ಕಾರ ಗಮನಹರಿಸಬಾರದೆ?
ರಹಸ್ಯ ಅಸಾಧ್ಯ
ಪ್ರಕರಣಕ್ಕೆ ಸಂಬಂಧಿಸಿ ಪ್ರಕಟವಾದ ವಿವರಗಳನ್ನು ಗಮನಿಸಿ ಹೇಳುವುದಾದರೆ, ಈ ಬಾಂಬಿನ ಸೂತ್ರ (ಫಾರ್ಮುಲಾ) ಖಂಡಿತವಾಗಿಯೂ ದೀರ್ಘವಾಗಿರುವಂತೆ ಕಾಣಿಸುವುದಿಲ್ಲ; ಮತ್ತು ಅದರ ಪ್ರಕ್ರಿಯೆ ಕೂಡ ತುಂಬ ಗಿಡ್ಡವಾಗಿಯೇ ಇದೆ. ಈ ಸೂತ್ರದ ಜ್ಞಾನವನ್ನು ವಿಭಿನ್ನ ಚಿಂತನೆಯ ವ್ಯಕ್ತಿಗಳಿಂದ ರಹಸ್ಯವಾಗಿಡುವುದು ಈಗ ಸರ್ಕಾರದ ಕಾನೂನಿನ ವ್ಯಾಪ್ತಿಯಲ್ಲಂತೂ ಬರುವುದಿಲ್ಲ. ಈ ಜ್ಞಾನವು ಯೂರೋಪ್, ಅಮೆರಿಕ, ಜಪಾನ್ ಮತ್ತಿತರ ದೇಶಗಳಲ್ಲಿ ಒಂದು ರಹಸ್ಯವಲ್ಲ. ಭಾರತದಲ್ಲಿ ಈಗ ಕೂಡ ಅದೊಂದು ರಹಸ್ಯ ಜ್ಞಾನ ಎನಿಸಿದೆ. ಆದರೆ ಸರ್ಕಾರದ ದಮನ ನೀತಿಯ ಬಿಗಿಯಾದ ಅನುಷ್ಠಾನ ಮುಂದುವರಿದಲ್ಲಿ ಬಂಗಾಳದ ಈ ಮ್ಯಾಜಿಕ್ನ ತಂತ್ರ ಮತ್ತು ಗಾಥೆ ಇಡೀ ಭಾರತಕ್ಕೆ ಹಬ್ಬಲು ಹೆಚ್ಚೇನೂ ಸಮಯ ಬೇಕಾಗಲಾರದು. ಏಕೆಂದರೆ ಸರ್ಕಾರದ ಬಿಗಿಯಾದ ನೀತಿಯ ಫಲವಾಗಿ ‘ಕ್ರಾಂತಿಕಾರಿಗಳ’ ಸಂಖ್ಯೆ ಹೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈ ವಿಭಿನ್ನ ಚಿಂತನೆಯ ವ್ಯಕ್ತಿಗಳ ಮಿದುಳನ್ನು ಮಾಮೂಲು ಸ್ಥಿತಿಗೆ ತರುವುದಕ್ಕೆ ಎಷ್ಟು ಪರಿಶ್ರಮ ಬೇಕೋ ಅಷ್ಟು ಪರಿಶ್ರಮವು ಈ ಜ್ಞಾನದ (ಬಾಂಬ್ ತಯಾರಿ) ಗಳಿಕೆಗೆ ಖಂಡಿತವಾಗಿಯೂ ಬೇಕಾಗಲಾರದು. ಈ ಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳುವ ಹಂತಕ್ಕೆ ಮುಟ್ಟಿದಾಗ ಅಂತಹ ಆಕ್ರೋಶವನ್ನು ಶಮನ ಮಾಡುವುದಕ್ಕೆ ಒಬ್ಬ ಮ್ಯಾಜಿಸ್ಟ್ರೇಟ್ಗೂ ಸಾಧ್ಯವಾಗಲಾರದು; ಏಕೆಂದರೆ ಪತ್ತೇದಾರಿ ಪೊಲೀಸರ ಕೌಶಲ ಮತ್ತು ಜಾಗೃತವ್ಯವಸ್ಥೆಯಿಂದಾಗಿ ಅಷ್ಟೊಂದು ಹತಾಶೆ ನಿರ್ಮಾಣವಾಗಿರುತ್ತದೆ. ಸ್ವಲ್ಪ ಉತ್ಪ್ರೇಕ್ಷೆಯ ಭಾಷೆಯಲ್ಲಿ ಹೇಳುವುದಾದರೆ ಒಂದು ಕ್ಷಣದಲ್ಲಿ ಈ ಕಾರ್ಖಾನೆಯನ್ನು ಅಸ್ತಿತ್ವಕ್ಕೆ ತರಬಹುದು, ಮತ್ತು ಒಂದು ಕ್ಷಣದಲ್ಲಿ ನಾಶಪಡಿಸಬಹುದು. ಹೀಗಿರುವಾಗ ಬಾಂಬ್ ತಯಾರಿಸುವ ಈ ಅವಿವೇಕಿ ಮಾಂತ್ರಿಕರ ವಾಸನೆಯನ್ನು ಕಾನೂನು ವ್ಯವಸ್ಥೆಯ ಮೂಗು ಗ್ರಹಿಸುವುದು ಕಷ್ಟವೇ.
ಇಂಗ್ಲೆಂಡಿನಲ್ಲಿ ಹತ್ತು ಅಥವಾ ಹದಿನೈದು ವರ್ಷಗಳ ಹಿಂದೆ ಸ್ಫೋಟಕಗಳ ಕಾಯ್ದೆ ಜಾರಿಗೆ ಬಂದಾಗ ಬಾಂಬ್ ತಯಾರಿಕೆಯ ಜ್ಞಾನ ಈಗಿನಷ್ಟು ಸ್ಪಷ್ಟವಾಗಿರಲಿಲ್ಲ. ಆಗ ಪಾಶ್ಚಾತ್ಯ ವಿಜ್ಞಾನಗಳಿಗೆ ಬಾಂಬ್ ಕೇವಲ ಒಂದು ಆಟದ ಗೊಂಬೆಯಾಗಿರಲಿಲ್ಲ. ಆಗ ಇದಕ್ಕೆ (ಬಾಂಬ್ ತಯಾರಿ) ತುಂಬ ಸಾಮಗ್ರಿಗಳು ಬೇಕಾಗುತ್ತಿದ್ದವು. ವಿಶೇಷ ವಸ್ತುಗಳು ಅಗತ್ಯವಾಗಿದ್ದವು; ಮತ್ತು ಇದರ ಕಾರ್ಖಾನೆ ಸಾಕಷ್ಟು ದೊಡ್ಡದಿರುತ್ತಿತ್ತು. ಅಷ್ಟೊಂದು ಪರಿಕರಗಳಿದ್ದರೆ ಅದನ್ನು ಕಾನೂನಿನ ಮೂಲಕ ತಡೆಯಬಹುದು; ಆದರೆ ವಿಜ್ಞಾನದಿಂದ ಪವಾಡಗಳೇ ಸಂಭವಿಸಿ, ಬಾಂಬ್ ಕೇವಲ ಆಟದ ವಸ್ತುವಿನಂತಾದಾಗ ಮತ್ತು ನಡಿಗೆ, ಮಾತುಕತೆ ಹಾಗೂ ನಿದ್ರೆ – ಹೀಗೆ ಯಾವಾಗ ಬೇಕೆಂದರೆ ಆವಾಗ ಸ್ಫೋಟಗೊಳ್ಳಲು ತೊಡಗಿದರೆ, ವಿಜ್ಞಾನದ ಈ ಆಟವನ್ನು ತಡೆಯುವುದಾದರೂ ಹೇಗೆ?
ವಿಜ್ಞಾನದ ಕೊಡುಗೆ
ಪಾಶ್ಚಾತ್ಯ ಜಗತ್ತಿನ ಜನ ವಾಣಿಜ್ಯ ಪ್ರಗತಿ ಮತ್ತು ಸೇನೆಯ ಬಲಕ್ಕಾಗಿ ವಿಜ್ಞಾನವೆಂಬ ದೇವತೆಯನ್ನು ಆಹ್ವಾನಿಸಿದರು. ಹಾಗಿರುವಾಗ ಆ ದೇವತೆಯಿಂದ ಕೇವಲ ಒಳ್ಳೆಯ ವಿಷಯಗಳನ್ನು ಮಾತ್ರ ನಾವು ಸ್ವೀಕರಿಸುತ್ತೇವೆ; ಯಾವುದೋ ಆಟದ ಉದ್ದೇಶದಿಂದ ಆಕೆ ಹೊರಗೆ ಬಿಡುವ ಇತರ ಕೆಲವು ವಸ್ತುಗಳನ್ನು ತಿರಸ್ಕರಿಸುತ್ತೇವೆ – ಎಂದು ಹೇಳಲು ಸಾಧ್ಯವೆ? ಆಕೆಯ ಆಶೀರ್ವಾದದಿಂದ ಯಾರಿಗೂ ಅಮಲು ಏರಬಾರದು ಎನ್ನಬಹುದೆ? ವಿಜ್ಞಾನದ ತಿಳಿವಳಿಕೆ ಪಾಶ್ಚಾತ್ಯರಿಗೆ ಪ್ರತಿದಿನವೂ ಅಷ್ಟೊಂದು ಸುಲಭದಲ್ಲಿ ಸಿಗುತ್ತಿರುವಾಗ, ಅದ್ಭುತ ಶಕ್ತಿಯನ್ನು ನೀಡುವಂತಹ ಹೊಸ ಸಂಶೋಧನೆಗಳು ಪ್ರತಿದಿನವೂ ನಡೆಯುತ್ತಿರುವಾಗ, ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಯಾವಾಗಲೂ ಬೇಕಾಗುವ ಸಾಮಾನ್ಯ ರಾಸಾಯನಿಕ ವಸ್ತುಗಳಿಂದ ಸರಳ ಪ್ರಕ್ರಿಯೆಗಳ ಮೂಲಕ ಬಾಂಬ್ ತಯಾರಿ ಸಾಧ್ಯವಿರುವಾಗ, ಸರ್ಕಾರವು ಕಾನೂನು ನಿರ್ಬಂಧ ಇತ್ಯಾದಿಗಳ ಮೂಲಕ ಎಷ್ಟು ಕಾಲ ಇದನ್ನು ತಡೆಯಲು ಸಾಧ್ಯ? ವಿಜ್ಞಾನದ ಈ ಆಟವನ್ನು ತಡೆಯಲು ಅಸಾಧ್ಯ.
ಅಸಾಧ್ಯವಾದುದನ್ನು ಸಾಧ್ಯವಾಗಿಸಲು ಪ್ರಯತ್ನಿಸುವ ಮೂಲಕ ಸರ್ಕಾರ ಅಕಾರಣವಾಗಿ ಜನರನ್ನು ತೊಂದರೆಗೀಡು ಮಾಡುತ್ತಿದೆ; ಮತ್ತು ತನ್ನನ್ನು ಕೂಡ ಬೇಸರಕ್ಕೆ ತಳ್ಳುತ್ತಿದೆ. ವೈಜ್ಞಾನಿಕ ಜ್ಞಾನವು ಪರಿಪೂರ್ಣತೆಯ ಹಂತವನ್ನು ತಲಪಿರುವ ಯೂರೋಪ್ ಮತ್ತು ಅಮೆರಿಕಗಳನ್ನು ಗಮನಿಸಿ ಹೇಳುವುದಾದರೆ, ಸರ್ಕಾರವು ಅಸಾಧ್ಯವಾದುದನ್ನು ಸಾಧ್ಯವಾಗಿಸಲು ಪ್ರಯತ್ನಿಸುವ ಮೂಲಕ ಒಂದು ನಿಷ್ಪ್ರಯೋಜಕ ಪ್ರಯತ್ನದಲ್ಲಿ ತೊಡಗಿದೆ. ಇಂತಹ ಸನ್ನಿವೇಶದಲ್ಲಿ ರಾಸಾಯನಿಕ ತಜ್ಞರು, ಕೈಗಾರಿಕೆಯೆಲ್ಲಿ ತೊಡಗಿದವರು ಮತ್ತು ಸಣ್ಣ ಉತ್ಪಾದಕರು ಅಕಾರಣವಾಗಿ ಅನ್ಯಾಯದ ನಿರ್ಬಂಧಗಳಿಗೆ ಗುರಿಯಾಗುತ್ತಾರೆ. ಸರ್ಕಾರವು ಉದ್ದೇಶಿಸಿದ ಗುರಿಯನ್ನು ಸ್ಫೋಟಕಗಳ ಕಾಯ್ದೆಯ ಮೂಲಕ ಸಾಧಿಸಲು ಸಾಧ್ಯವಿಲ್ಲ; ಬದಲಾಗಿ ಈ ಕಾಯ್ದೆಯು ಪೊಲೀಸರು ಮತ್ತು ಸಣ್ಣ ಅಧಿಕಾರಿಗಳಿಗೆ ಸಜ್ಜನ ನಾಗರಿಕರನ್ನು ಹಿಂಸಿಸುವ ಒಂದು ಸಲಕರಣೆಯಾಗುತ್ತದೆ. ಬಾಂಬ್ ಮತ್ತು ಅದರ ತಯಾರಿಗೆ ಬಳಸುವ ವಸ್ತುಗಳ ಮೇಲೆ ಹೇರುವ ನಿಷೇಧವು ನಿಷ್ಪ್ರಯೋಜಕವೇ ಸರಿ. ಬಾಂಬ್ಗಳ ತಡೆಗೆ ಅದು ಸೂಕ್ತ ಮಾರ್ಗವಲ್ಲ.
ಸರ್ಕಾರ ಈಗ ಏನು ಮಾಡಬೇಕೆಂದರೆ, ವಿಭಿನ್ನ ಚಿಂತನೆಯ ಜನರಿಗೆ ಬಾಂಬ್ ಎಸೆಯಬೇಕೆಂದು ಅನ್ನಿಸಲೇಬಾರದು – ಆ ರೀತಿಯಲ್ಲಿ ತಾನು ನಡೆದುಕೊಳ್ಳಬೇಕು. ರಾಜಕೀಯ ಚಳವಳಿಯಲ್ಲಿ ತೊಡಗಿರುವ ಜನ ಯಾವಾಗ ವಿಭಿನ್ನ ಚಿಂತನೆ(ಕ್ರಾಂತಿಕಾರಿ)ಯವರಾಗುತ್ತಾರೆ? ತಮ್ಮ ಚಿಂತನೆ, ದೇಹಬಲ ಮತ್ತು ತ್ಯಾಗಗಳಿಂದ ತಮ್ಮ ದೇಶಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ತಮ್ಮಿಂದ ಯಾವ ಕಲ್ಯಾಣವನ್ನೂ ಸಾಧಿಸಲಾಗುವುದಿಲ್ಲ ಎಂಬ ರೀತಿಯ ನಿರಾಶೆ-ಹತಾಶೆಗಳು ಯುವ (ರಾಜಕೀಯ) ಹೋರಾಟಗಾರರ ಮನಸ್ಸಿನಲ್ಲಿ ಉಂಟಾದಾಗ ಅವರು ವಿಭಿನ್ನವಾಗಿ ಚಿಂತಿಸತೊಡಗುತ್ತಾರೆ. ಈ ಧೀಮಂತ ವ್ಯಕ್ತಿಗಳ ಮನಸ್ಸಿನಲ್ಲಿ ಯಾವುದೇ ಕಾಲಕ್ಕೂ ನಿರಾಶೆ-ಹತಾಶೆಗಳು ಉಂಟಾಗದಂತೆ ಸರ್ಕಾರ ನೋಡಿಕೊಳ್ಳಬೇಕು; ಈ ಯುವ ಹೋರಾಟಗಾರರು ಸ್ವರಾಜ್ಯದ ಹಕ್ಕುಗಳು ತಮ್ಮದಾಗಬೇಕೆಂದು ಜಾಗೃತಗೊಂಡವರು ಎಂಬುದು ಸರ್ಕಾರದ ಮನಸ್ಸಿನಲ್ಲಿರಬೇಕು.
ಪತ್ರಿಕಾ ಕಾಯ್ದೆ
ಇಂತಹ ಸಮಯದಲ್ಲಿ ಜಾಗೃತಿಯ ಪ್ರಕ್ರಿಯೆಗೆ ತಡೆಹಾಕಿದಲ್ಲಿ ನಿರಾಶೆಯು ಕಡಮೆಯಾಗುವ ಬದಲು ತೀವ್ರಗೊಳ್ಳುತ್ತದೆ; ಜಾಗೃತ ಧೀಮಂತ ಜನತೆಯ ಆಶೆಗಳು ಮತ್ತು ಆಶೋತ್ತರಗಳು ದೇಶಾದ್ಯಂತ ಹಬ್ಬುತ್ತಿರುವಾಗ ಮತ್ತು ಅವು ಇಡೀ ದೇಶವನ್ನು ಎಚ್ಚರಿಸುತ್ತಿರುವಾಗ ನಿರಾಶೆ-ಹತಾಶೆಗಳಿಗೆ ಅವಕಾಶ ಸಲ್ಲದು ಎಂಬುದನ್ನು ಸರ್ಕಾರ ನೆನಪಿನಲ್ಲಿಡಬೇಕು.
ಈ ಜಾಗೃತಿಯ ಪ್ರಕ್ರಿಯೆಗೆ ತಡೆಹಾಕಬೇಕೆನ್ನುವ ಉದ್ದೇಶದಿಂದ ಸರ್ಕಾರ ವರ್ತಮಾನಪತ್ರಿಕೆಗಳ ಕಾಯ್ದೆಯನ್ನು ಜಾರಿಗೆ ತಂದಂತೆ ತೋರುತ್ತದೆ. ಅದೇ ಕಾರಣದಿಂದ ಜನರ ಹತಾಶೆಯು ಘೋರ ಸ್ವರೂಪವನ್ನು ತಾಳುವ ಸಾಧ್ಯತೆಯು ಕಾಣಿಸುತ್ತಿದೆ. ಸಮಚಿತ್ತ ಮತ್ತು ಶಾಂತಸ್ವಭಾವದ ಜನರ ನಡುವೆಯೂ ಈಗ ಕೆಲವರು ವಿಭಿನ್ನವಾಗಿ ಚಿಂತಿಸಲು ಆರಂಭಿಸಿದ್ದಾರೆ. ಈ ಸನ್ನಿವೇಶದಲ್ಲಿ ಬಾಂಬ್ಗಳಿಗೆ ತಡೆಹಾಕುವ ನೈಜ ಮತ್ತು ಶಾಶ್ವತ ಮಾರ್ಗವೆಂದರೆ, ‘ಸ್ವರಾಜ್ಯ’ದ ಮಹತ್ತ್ವಪೂರ್ಣ ಹಕ್ಕುಗಳನ್ನು ಜನತೆಗೆ ನೀಡುವುದೇ ಆಗಿದೆ. ಪಾಶ್ಚಾತ್ಯ ವಿಜ್ಞಾನ ಮತ್ತು ಭಾರತದ ಜನತೆಯ ಸದ್ಯದ ಸ್ಥಿತಿಯನ್ನು ಗಮನಿಸಿದರೆ, ದಮನಕಾರಿ ಕ್ರಮಗಳಿಂದ ಇಲ್ಲಿ ಶಾಶ್ವತ ಪರಿಣಾಮ ಬೀರುವುದು ಅಸಾಧ್ಯವೆಂದೇ ತೋರುತ್ತಿದೆ.
ಅನು: ಎಚ್.ಮಂಜುನಾಥ ಭಟ್