ಭಾರತೀಯ ಜ್ಞಾನಕ್ಷೇತ್ರದ ಮಹಾನ್ ಸಾಧಕರನ್ನು, ಕವಿಗಳನ್ನು, ಅಮರಕೃತಿಗಳನ್ನು ಪ್ರಪಂಚಕ್ಕೆ ನೀಡಿದ ನಾಡು ಭಾರತದ ಮಕುಟಮಣಿಯಾದ ಕಾಶ್ಮೀರ. ಇಂತಹ ಕಾಶ್ಮೀರದಲ್ಲಿ ಬರೆಹವನ್ನು ಮಾಡಲು ಪ್ರಧಾನವಾಗಿ ಬಳಸುತ್ತಿದ್ದ ಲಿಪಿ ಶಾರದಾಲಿಪಿ. ಶಾರದಾ ಲಿಪಿಯು ಕಾಶ್ಮೀರ ಪ್ರದೇಶದಲ್ಲಿ ಬಳಕೆಯಲ್ಲಿರುವ/ಬಳಕೆಯಲ್ಲಿದ್ದ ಪ್ರಮುಖ ಲಿಪಿಯಾಗಿದ್ದು, ಕ್ರಿ.ಶ. 8ನೆಯ ಶತಮಾನದ ಸುಮಾರಿನಿಂದ ಅಸ್ತಿತ್ವದಲ್ಲಿತ್ತು. ಕಾಶ್ಮೀರಕ್ಕೆ ಶಾರದಾಪೀಠವೆಂಬ ಪ್ರಸಿದ್ಧಿಯುಂಟು (ನಮಸ್ತೇ ಶಾರದಾದೇವೀ ಕಾಶ್ಮೀರಪುರವಾಸಿನೀ). ಸರಸ್ವತೀ ದೇವಿಯ ಮತ್ತೊಂದು ಹೆಸರಾದ ಶಾರದಾ ಎಂಬುದನ್ನೇ ಈ ಲಿಪಿಗೆ ಇಟ್ಟಿರುವುದು ಕಂಡುಬರುತ್ತದೆ. ಈ ಲಿಪಿಯು ಕಾಶ್ಮೀರ, ಲಡಾಖ್, ಗಾಂಧಾರ (ಈಗಿನ ಆಫಘನಿಸ್ತಾನದ ಪ್ರದೇಶ) ಪ್ರದೇಶಗಳಲ್ಲಿ ಪ್ರಧಾನವಾಗಿ ಉಪಯೋಗಿಸಲ್ಪಡುತ್ತಿತ್ತು (ಪ್ರಾಚೀನ ಭಾರತದ ಭೂಭಾಗವಾಗಿದ್ದು, ಈಗ ಪಾಕಿಸ್ತಾನಕ್ಕೆ ಸೇರಿರುವ ಹಲವು ಪ್ರದೇಶಗಳಲ್ಲಿಯೂ ಇದರ ಬಳಕೆ ಇತ್ತು). ಕಾಶ್ಮೀರಿ ಪಂಡಿತರು ಜಾತಕಗಳು, ಜ್ಯೋತಿಷಗ್ರಂಥಗಳ ರಚನೆ, ತಂತ್ರಸಂಬಂಧೀ ಆಚರಣೆಗಳು, ಬೀಜಾಕ್ಷರಗಳ ರಚನೆ ಮತ್ತು ಕೆಲವೊಂದು ಪ್ರತ್ಯೇಕ ಸಂದರ್ಭಗಳಲ್ಲಿ ಈ ಲಿಪಿಯನ್ನು ಬಳಸುತ್ತಿದ್ದರು. ಕಾಶ್ಮೀರದ ಪ್ರತ್ಯಭಿಜ್ಞಾಶೈವದರ್ಶನದ ಬಹುತೇಕ ಹಸ್ತಪ್ರತಿಗಳು ಶಾರದಾ ಲಿಪಿಯಲ್ಲಿಯೇ ಇವೆ. ಇಂದಿನ ಪಾಕಿಸ್ತಾನದ ಪೆಶಾವರ್ ಪ್ರದೇಶದ ಬಕ್ಷಾಲಿ ಎಂಬಲ್ಲಿ ದೊರೆತು, ಅದೇ ಹೆಸರಿನಿಂದಲೇ ಖ್ಯಾತವಾಗಿರುವ ಗಣಿತಶಾಸ್ತ್ರದ ಹಸ್ತಪ್ರತಿಯೂ ಶಾರದಾ ಲಿಪಿಯಲ್ಲಿಯೇ ಇದೆ (ಚಿತ್ರ-1). ಇದರ ಕಾಲ ಕ್ರಿ.ಶ. ಸುಮಾರು 9ನೆಯ ಶತಮಾನವಿರಬಹುದೆಂದು ಸಂಶೋಧಕರ ಅಭಿಪ್ರಾಯ. ಇದರಲ್ಲಿ ಶೂನ್ಯ ಅಥವಾ ಸೊನ್ನೆಯ ಬಳಕೆಯಿರುವುದು ಬಹು ಗಮನಾರ್ಹವಾದುದು (ಚಿತ್ರ-2). ಕ್ರಿ.ಶ. ಸುಮಾರು 11-12ನೆಯ ಶತಮಾನಗಳಲ್ಲಿ ಪ್ರತಿಯಾಗಿರುವ ಅನೇಕ ಹಸ್ತಪ್ರತಿಗಳು ಈ ಲಿಪಿಯ ಇತಿಹಾಸವನ್ನು, ಬೆಳವಣಿಗೆಯನ್ನು ಅರಿಯಲು ನೆರವು ನೀಡುತ್ತವೆ. ಉದಾಹರಣೆಗೆ: ಬೌದ್ಧಮತದ ಅಭಿಧರ್ಮದೀಪ ಎಂಬ ಹಸ್ತಪ್ರತಿ ಕ್ರಿ.ಶ. ಸುಮಾರು 11ನೆಯ ಶತಮಾನದ್ದಾಗಿದೆ.
ಶಾರದಾ ಲಿಪಿಯಲ್ಲಿ ಬರೆಯಲಾದ ಸುಮಾರು 500ಕ್ಕೂ ಮೇಲ್ಪಟ್ಟ ಶಾಸನಗಳು ಕಾಶ್ಮೀರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊರೆತಿವೆ. ಪರಿಪೂರ್ಣ ಸ್ವರೂಪದಿಂದ ಕೂಡಿರುವ ಶಾರದಾ ಲಿಪಿಯಲ್ಲಿ ದೊರಕುವ ಅತ್ಯಂತ ಪ್ರಾಚೀನ ಶಾಸನಗಳೆಂದರೆ, ಈಗಿನ ಪಾಕಿಸ್ತಾನದ ಅತ್ತೋಕ್ ಜಿಲ್ಲೆಯ ಹುಂಡ್
(ಚಿತ್ರ-3) ಎಂಬಲ್ಲಿ ದೊರೆತಿರುವ ಕ್ರಿ.ಶ. 774ರ ಶಾಸನ (ಎಪಿಗ್ರಾಫಿಯಾ ಇಂಡಿಕಾ-22, ಪುಟ 97-98) ಮತ್ತು ಕ್ರಿ.ಶ. 804ರ ಕಾಂಗ್ರಾದ (ಹಿಮಾಚಲ ಪ್ರದೇಶ) ಭೈಜನಾಥ ಪ್ರಶಸ್ತಿಗಳೆಂದು ಹೇಳಬಹುದಾಗಿದೆ. ಶಾರದಾ ಲಿಪಿಯು ಕಂಡುಬರುವ ಇತರ ದಾಖಲೆಗಳೆಂದರೆ ಕಾಶ್ಮೀರವನ್ನು ಆಳಿದ ಉತ್ಪಲ ರಾಜವಂಶದ ನಾಣ್ಯಗಳು (ಕ್ರಿ.ಶ. ಸುಮಾರು 9ನೆಯ ಶತಮಾನ), ಕಾಶ್ಮೀರದ ಅವಂತಿಸ್ವಾಮಿ ದೇವಾಲಯದ ಆವರಣದಲ್ಲಿ ದೊರೆತ ಹಿಡಿಕೆಯಿಲ್ಲದ ಪಾತ್ರೆಯ ತುಣುಕಿನ ಮೇಲಿನ ಶಾಸನ ಇವುಗಳನ್ನು ಹೆಸರಿಸಬಹುದು. ಇವೆಲ್ಲವುಗಳ ಅನಂತರ ದೊರಕುವ ಇತರ ಕೆಲವು ದಾಖಲೆಗಳೆಂದರೆ ಶಾಹಿ ಮನೆತನದ ರಾಜ ಭೀಮದೇವನ (ಕ್ರಿ.ಶ. ಸುಮಾರು 10ನೆಯ ಶತಮಾನ) ದೇವಾಯಿ (North-West Frontier Province, Pakistan) ಶಾಸನ, ಲಾಹೋರ್ ವಸ್ತುಸಂಗ್ರಹಾಲಯ, ಶ್ರೀನಗರದ ಎಸ್.ಪಿ.ಎಸ್. ವಸ್ತುಸಂಗ್ರಹಾಲಯಗಳಲ್ಲಿ ಇರುವ ರಾಣಿ ದಿದ್ದಾಳ (ಕ್ರಿ.ಶ. 980 / 1000-1003) ಆಳಿಕೆಯ ಶಾಸನಗಳು, ಶ್ರೀನಗರ, ಬ್ರಹ್ಮೋರ್ ಮತ್ತು ಸುಂಗಲ್ (ಚಂಬಾ ಜಿಲ್ಲೆ, ಹಿಮಾಚಲ ಪ್ರದೇಶ) ಪ್ರದೇಶಗಳಲ್ಲಿ ದೊರೆತಿರುವ ರಾಜ ಯುಗಕರವರ್ಮನ್ ಮತ್ತು ಅವನ ಮಗ ವಿದಗ್ಧದೇವ ಇವರ ತಾಮ್ರಶಾಸನಗಳು ಪ್ರಮುಖವೆಂದು ಹೇಳಬಹುದು.
ಆಫಘನಿಸ್ತಾನದಲ್ಲಿ ಮಹಾರಾಜಾಧಿರಾಜ ಶ್ರೀಷಾಹಿಖಿಂಗಳ ಎಂಬ ದೊರೆ ಮಾಡಿಸಿರುವ ಗಣೇಶನ ವಿಗ್ರಹ ದೊರೆತಿದೆ (ಚಿತ್ರ-4). ಇದರ ಮೇಲೆ ಶಾರದಾ ಲಿಪಿಯ ಆರಂಭದ ಹಂತದ್ದೆಂದು ಹೇಳಲಾದ ಶಾಸನವಿದ್ದು, ಇದರ ಕಾಲವನ್ನು ಕ್ರಿ.ಶ. ಸುಮಾರು 8ನೆಯ ಶತಮಾನ ಎಂದು ತಿಳಿಯಲಾಗಿದೆ (ಇದರ ವಿಚಾರದಲ್ಲಿಯೂ ಅನೇಕ ಭಿನ್ನಾಭಿಪ್ರಾಯಗಳಿದ್ದು ಕ್ರಿ.ಶ. 7-10 ಶತಮಾನದ ನಡುವೆ ಎಂದು ಸಂಶೋಧಕರ ಅಭಿಪ್ರಾಯವಾಗಿದೆ). ಕಾಂಗ್ರಾದಲ್ಲಿ ದೊರೆತಿರುವ ಜೈನ ತೀರ್ಥಂಕರನ ವಿಗ್ರಹದ ಮೇಲಿರುವ ಶಾಸನವು ಕ್ರಿ.ಶ. ಸುಮಾರು 13ನೆಯ ಶತಮಾನದ್ದಾಗಿದ್ದು, ಸುಂದರವಾದ ಲಿಪಿಸ್ವರೂಪವನ್ನು ಹೊಂದಿದೆ. ಐತಿಹಾಸಿಕ ಮಿರ್ಕುಲಾ ದೇವಾಲಯದ (ಉದಯಪುರ, ಹಿಮಾಚಲ ಪ್ರದೇಶ) ಮಹಿಷಾಸುರಮರ್ದಿನಿ ವಿಗ್ರಹದ ಮೇಲೆ ದೊರಕುವ ಕ್ರಿ.ಶ. 1569ರ ಶಾರದಾ ಲಿಪಿಯ ಶಾಸನವೇ ಬಲುಮಟ್ಟಿಗೆ ಈ ಲಿಪಿಯ ಕೊನೆಕೊನೆಯ ಶಾಸನಗಳಲ್ಲಿ ಒಂದೆಂದು ತಿಳಿಯಲಾಗಿದ್ದರೂ, ಅಲ್ಲೊಂದು ಇಲ್ಲೊಂದು ಎಂಬಂತೆ ಸಣ್ಣಪುಟ್ಟ ಶಾಸನಗಳು ಸುಮಾರು 1800ರ ವರೆಗೂ ಕಂಡುಬರುತ್ತವೆ. ಉದಾಹರಣೆಗೆ: ದಕ್ಷಿಣ ಕಾಶ್ಮೀರದ ದಿಗೋಮ್ ಎಂಬಲ್ಲಿ ಕ್ರಿ.ಶ. 1789ರ ಶಾಸನ ದೊರೆತಿದೆ. ಕಾಶ್ಮೀರವನ್ನು ಆಳಿದ ವರ್ಮ ರಾಜವಂಶದವರ ರಾಜಮುದ್ರೆಗಳಲ್ಲಿ ಶಾರದಾ ಲಿಪಿಯ ಬಳಕೆ ಬಹುವಾಗಿ ಆಗಿದೆ. ಅನೇಕ ನಾಣ್ಯಗಳೂ ಶಾಸನ ಸಹಿತವಿರುವ ವಿಗ್ರಹಗಳೂ ಈ ಲಿಪಿಯಲ್ಲಿ ಬಹಳವಾಗಿ ದೊರಕಿವೆ.
ಇದು ಬ್ರಾಹ್ಮೀ ಲಿಪಿಯಿಂದಲೇ (ಭಾರತದ ಪಶ್ಚಿಮ ಭಾಗದಲ್ಲಿನ ಗುಪ್ತಕಾಲೀನ ಬ್ರಾಹ್ಮೀ) ರೂಪುಗೊಂಡಿರುವ ಲಿಪಿಯಾಗಿದ್ದು ಸಂಸ್ಕೃತ ಮತ್ತು ಕಾಶ್ಮೀರಿ ಭಾಷೆಗಳನ್ನು ಬರೆಯಲು ಬಳಕೆಯಾಗುತ್ತಿತ್ತು. ಈ ಲಿಪಿಯು ಸ್ತಂಭಾಕಾರ ಮತ್ತು ಸ್ಥೂಲವಾದ ರೇಖೆಗಳನ್ನು ಹೊಂದಿದೆ. ಈ ರೇಖೆಗಳು ಅಲ್ಲಲ್ಲಿ ಬಾಗಿರುವುದೂ ಉಂಟು. ಈ ರೀತಿ ಬಾಗಿರುವುದು ಬಲುಮಟ್ಟಿಗೆ ಪ್ರಾದೇಶಿಕ ಲಿಪಿಗಳ ಉಗಮಕ್ಕೆ ನಾಂದಿಯಾಗಿದೆ. ಇದರ ತಲೆಕಟ್ಟುಗಳು ನೇರವಾಗಿದ್ದು ಗುಂಡಗಿರುವುದು ಗಮನಿಸತಕ್ಕುದಾಗಿದೆ. ಅನುಸ್ವಾರ, ವಿಸರ್ಗಗಳು ದುಂಡಗಿದ್ದು, ಬಟ್ಟುಗಳಂತೆ ಕಾಣುತ್ತವೆ
(ಚಿತ್ರಗಳು 5,6). ಅಂಕಿಗಳು ಬಲುಮಟ್ಟಿಗೆ ಬ್ರಾಹ್ಮೀ ಲಿಪಿಯ ಸ್ವರೂಪವನ್ನೇ ಹೊಂದಿವೆ. ಸೊನ್ನೆಯನ್ನು ದುಂಡಗೆ ಬಟ್ಟಿನಂತೆ ಬರೆಯಲಾಗಿದೆ. ಒಟ್ಟು ಲಿಪಿಸ್ವರೂಪವು ಅತ್ಯಂತ ಸುಂದರವಾಗಿದೆ. ಅನಂತರದ ಕಾಲದಲ್ಲಿ ಈ ಅಂದವೆನ್ನುವುದು ಮರೆಯಾಗಿದೆ. ‘ಶಾರದಾ ಲಿಪಿಯೇ ಮುಂದೆ ಇದೇ ಕೆಲಮಟ್ಟಿಗೆ ಪರಿವರ್ತನಗೊಂಡು ನಾಗರೀ ಲಿಪಿಯಾಗಿ ರೂಪುಗೊಂಡಿದೆ. ನಾಗರೀ ಲಿಪಿ ಮತ್ತು ಶಾರದಾ ಲಿಪಿಗಳೆರಡೂ ಹೆಚ್ಚಿನ ಕಾಲದ ಅಂತರವಿಲ್ಲದೆ ಬಲುಮಟ್ಟಿಗೆ ಜೊತೆಯಾಗಿಯೇ ಬಳಕೆಯಾಗಿವೆ. ಶಾರದಾ ಲಿಪಿಯ ಸ್ವರೂಪವು 8ನೆಯ ಶತಮಾನದ ಸುಮಾರಿನಿಂದಲೇ ಗೋಚರವಾದರೂ (ಇದರ ಸ್ವರೂಪವಾದರೂ ಕೆಲಮಟ್ಟಿಗೆ ನಾಗರೀ ಲಿಪಿಯಂತೆಯೇ ಇದೆ. ಆದರೂ ಮತ್ತಷ್ಟು ಸ್ಪಷ್ಟವಾಗಿ ಇದರ ಬಗೆಗೆ ವಿಶ್ಲೇಷಣೆ ನಡೆಯಬೇಕಿದೆ.) 9ನೆಯ ಶತಮಾನದ ಆದಿಭಾಗದಿಂದ ಸಂಪೂರ್ಣ ಸ್ವರೂಪ ಕಾಣಸಿಗುತ್ತದೆ’ ಎಂಬುದು ಸಂಶೋಧಕರ ಅಭಿಪ್ರಾಯ. ಆದರೆ ದಾಕ್ಷಿಣಾತ್ಯ ಲಿಪಿಗಳನ್ನು ಗಮನಿಸದೆ ಸಂಶೋಧಕರು ಈ ನಿಲವುಗಳಿಗೆ ಬಂದಂತಿದೆ. ಶಾರದಾ ಲಿಪಿಯ ಶಾಸನಗಳಿಗೂ ಮೊದಲೇ ದಕ್ಷಿಣಭಾರತದಲ್ಲಿ ನಾಗರೀ ಲಿಪಿಯ ಶಾಸನಗಳು ದೊರಕುತ್ತವೆ. ದಾಕ್ಷಿಣಾತ್ಯ {=ದಕ್ಷಿಣಭಾರತ} ನಾಗರೀ ಲಿಪಿಯ ಶಾಸನಗಳಲ್ಲಿ ಬಾದಾಮಿ ಚಲುಕ್ಯರ ಎರಡನೆಯ ಕೀರ್ತಿವರ್ಮನ (ಕ್ರಿ.ಶ. 746-757) ಪಟ್ಟದಕಲ್ಲಿನ ಸ್ತಂಭಶಾಸನವೇ ಮೊದಲನೆಯದು (ಎಪಿಗ್ರಾಫಿಯಾ ಇಂಡಿಕಾ-3, ಸಂಖ್ಯೆ-1, ಪುಟ 1-7). ಅನಂತರ ರಾಷ್ಟ್ರಕೂಟರ ದಂತಿದುರ್ಗನ ಕ್ರಿ.ಶ. 754ರ ಸಾಮನಗಡ ತಾಮ್ರಶಾಸನ ದೊರಕುತ್ತದೆ (ಇಂಡಿಯನ್ ಆ್ಯಂಟಿಕ್ವೆರಿ-11, ಪುಟ 108-115). ಈ ಹಿನ್ನೆಲೆಯಲ್ಲಿ ಶಾರದಾ ಲಿಪಿಯಿಂದಲೇ ನಾಗರೀ ಲಿಪಿ ರೂಪುಗೊಂಡಿದೆಯೆಂಬ ಅಭಿಪ್ರಾಯವನ್ನು ಪುನಃಪರಿಶೀಲನೆ ಮಾಡಬೇಕಿದೆ. ಸದ್ಯದ ಮಟ್ಟಿಗೆ ನಾಗರೀ ಲಿಪಿಯು ಮೊತ್ತಮೊದಲು ದೊರಕುವ ಪ್ರದೇಶವೆಂದರೆ ಕರ್ನಾಟಕವೇ ಆಗಿದೆ ಎಂದು ಒತ್ತಿ ಹೇಳಬೇಕಿದೆ. ಅಹ್ಮದ್ ಹಸನ್ ದಾನಿ ಎಂಬ ವಿದ್ವಾಂಸರು ನಾಗರೀಲಿಪಿಯು ದಕ್ಷಿಣ ಭಾರತದಿಂದಲೇ ಉತ್ತರ ಭಾರತದ ಕಡೆಗೆ ಹರಡಿರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಈ ಹಿನ್ನೆಲೆಯಲ್ಲಿ ಗಮನಾರ್ಹ. 10-11ನೆಯ ಶತಮಾನದ ಅನಂತರ ಕಂಡುಬರುವ ಶಾರದಾ ಲಿಪಿಗೂ ಅದಕ್ಕೂ ಮೊದಲಿನ ಶಾರದಾ ಲಿಪಿಗೂ ಕೆಲಮಟ್ಟಿಗೆ ವ್ಯತ್ಯಾಸವಿದೆ. ಪಂಜಾಬ್, ಹಿಮಾಚಲ ಪ್ರದೇಶ ಮುಂತಾದೆಡೆ ದೊರೆತಿರುವ ಶಾರದಾ ಲಿಪಿಯ ಬರಹಗಳಲ್ಲಿ ಪ್ರಾದೇಶಿಕ ವೈವಿಧ್ಯ ಎದ್ದು ಕಾಣುತ್ತದೆ. ಈ ವ್ಯತ್ಯಾಸವು ಕಂಡುಬರುವುದು ಪ್ರಧಾನವಾಗಿ 14ನೆಯ ಶತಮಾನದ ಸುಮಾರಿಗೆ. ಗುರುಮುಖೀ ಲಿಪಿಗೆ ಮೂಲ ಶಾರದಾ ಲಿಪಿಯೇ ಆಗಿದೆ. ಶಾರದಾ ಲಿಪಿ, ಸಿದ್ಧಮಾತೃಕಾ ಲಿಪಿ ಮತ್ತು ನಾಗರೀ ಲಿಪಿ ಮೂರಕ್ಕೂ ಪರಸ್ಪರ ಸಂಬಂಧವಂತೂ ಇದೆ. ಪ್ರಾಚೀನ ಕನ್ನಡ ಲಿಪಿಗೂ ಶಾರದಾ ಲಿಪಿಗೂ ಕೆಲವೊಂದು ಅಕ್ಷರಗಳಲ್ಲಿ ಸ್ಥೂಲವಾಗಿ ಸಾಮ್ಯತೆ ಕಂಡುಬರುತ್ತದೆ. ಉದಾಹರಣೆಗೆ : ಕ, ಗ, ಶ ಅಕ್ಷರಗಳು. ಇದಕ್ಕೆ ಕಾರಣ ಇವೆರಡೂ ಲಿಪಿಗಳು ಮೂಲತಃ ಬ್ರಾಹ್ಮೀ ಲಿಪಿಯಿಂದಲೇ ಉಗಮಗೊಂಡಿರುವುದಾಗಿದೆ.
ಶಾರದಾ ಲಿಪಿಯಲ್ಲಿ ಸಾವಿರಾರು ಹಸ್ತಪ್ರತಿಗಳು (ಭೂರ್ಜಪತ್ರ, ಓಲೆಗರಿ, ಕಾಗದ) ದೊರಕುತ್ತವೆ. ಇವುಗಳ ಭಾಷೆ ಪ್ರಧಾನವಾಗಿ ಸಂಸ್ಕøತವೇ ಆಗಿದೆ (ಕಾಶ್ಮೀರಿ ಭಾಷೆಯವೂ ಕೂಡ ದೊರಕುತ್ತವೆ). ಈ ಹಸ್ತಪ್ರತಿಗಳು ಪ್ರತಿಯಾದ ಕಾಲ ಕ್ರಿ.ಶ. ಸುಮಾರು 12ನೆಯ ಶತಮಾನದಿಂದ 19 ಶತಮಾನದ ವರೆಗೆ ಎಂದು ಲಭ್ಯ ಆಧಾರಗಳು ಹೇಳುತ್ತವೆ. ಕ್ರಿ.ಶ. ಸು 1300ರಲ್ಲಿದ್ದ ಕಾಶ್ಮೀರದ ವಿದ್ವಾಂಸ ನರಹರಿ ಪಂಡಿತನು ಅಭಿಧಾನ ಚೂಡಾಮಣಿ ಅಥವಾ ರಾಜನಿಘಂಟನ್ನು ರಚಿಸಿದ್ದಾನೆ. ಇದರ ಕನ್ನಡ ಲಿಪಿಯ ಓಲೆಪ್ರತಿ ಕ್ರಿ.ಶ. 1379ರ ತೇದಿಯುಳ್ಳದ್ದು ಕರ್ನಾಟಕದಲ್ಲಿ ದೊರೆತಿದ್ದು, ಈಗ ಶ್ರವಣಬೆಳಗೊಳದ ಹಸ್ತಪ್ರತಿ ಭಂಡಾರದಲ್ಲಿದೆಯೆಂದು ತಿಳಿದುಬರುತ್ತದೆ. ನರಹರಿ ಪಂಡಿತನು ಕಾಶ್ಮೀರ ಪ್ರದೇಶದವನು. ಬಲುಮಟ್ಟಿಗೆ ತನ್ನ ಗ್ರಂಥವನ್ನು ಶಾರದಾ ಇಲ್ಲವೇ ನಾಗರೀ ಲಿಪಿಯಲ್ಲಿ ಬರೆದಿದ್ದಾನೆ ಎಂದು ತಿಳಿಯುವುದೇ ಸೂಕ್ತ. ಅದರ ಪ್ರತಿ 70-80 ವರ್ಷಗಳ ಅಂತರದಲ್ಲಿ ಕನ್ನಡ ಲಿಪಿಯಲ್ಲಿ ದೊರಕುತ್ತದೆ ಎಂದರೆ ಕರ್ನಾಟಕದಲ್ಲಿಯೂ ಕಾಶ್ಮೀರ ಪ್ರದೇಶದ ಲಿಪಿಗಳನ್ನು ಓದುವವರಿದ್ದರು ಎಂಬುದು ಖಚಿತವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಶಾಸನಗಳು ಮತ್ತು ಸಾಹಿತ್ಯಕೃತಿಗಳಲ್ಲಿ ನಾನಾ ‘ದೇಶಭಾಷಾವಿಶೇಷ ಲಿಪಿ ನಿರೂಪಣ ವಿಧ್ಯಾಧರರುಂ’ಎಂಬ ವಿಶೇಷಣ ಲಭ್ಯವಾಗುವುದು ಗಮನಾರ್ಹ {ಎಪಿಗ್ರಾಫಿಯಾ ಕರ್ಣಾಟಿಕಾ-5 (ರೈಸ್ ಆವೃತ್ತಿ), ಅರಸೀಕೆರೆ-130, ಕಾಲ-ಕ್ರಿ.ಶ. 1200}. ‘ಛಪ್ಪನ್ನದೇಶ ಚಿತ್ರಲಿಪಿಲೇಖ ಕೋವಿದಂ’ ಎಂದು ಮತ್ತೊಂದು ಶಾಸನದಲ್ಲಿದೆ {ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್-9, ಭಾಗ-2, ಸಂಖ್ಯೆ-507}. ಶಾರದಾ ಲಿಪಿಯ ಹಸ್ತಪ್ರತಿಗಳು ಕರ್ನಾಟಕದಲ್ಲಿಯೂ ದೊರಕುತ್ತವೆ. ಇವುಗಳನ್ನು ನಾಗರೀ ಲಿಪಿಯ ಹಸ್ತಪ್ರತಿಗಳೆಂದು ಕೆಲವೆಡೆ ದಾಖಲಿಸಿರುವುದರಿಂದ ಸ್ಪಷ್ಟ ಮಾಹಿತಿ ದೊರಕದಂತಾಗಿದೆ. ಮಹಾಭಾರತದ ಸಂಪಾದನೆಗೆ ವಿ.ಎಸ್. ಸುಕ್ತಂಕರ್ ಅವರು ಬಳಸಿರುವ ಹಸ್ತಪ್ರತಿಗಳಲ್ಲಿ ಶಾರದಾ ಲಿಪಿಯ ಹಸ್ತಪ್ರತಿಗಳು ವಿಶೇಷವಾಗಿ ನೆರವು ನೀಡಿವೆ. ಮ್ಯಾಕ್ಸ್ಮುಲ್ಲರ್ ತನ್ನ ಋಗ್ವೇದದ ಸಂಪಾದನೆಗೆ ಬಳಸಿಕೊಂಡಿರುವ ಹಸ್ತಪ್ರತಿಗಳಲ್ಲಿ ಶಾರದಾ ಲಿಪಿಯ ಪ್ರತಿಯೂ ಒಂದಾಗಿದ್ದು, ಇದು ಈಗ ಪುಣೆಯ ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿದೆ. ಇಡಿಯ ಭಾರತದ ಬಹುಪ್ರದೇಶಗಳಲ್ಲಿ ಶಾರದಾ ಲಿಪಿಯ ಹಸ್ತಪ್ರತಿಗಳು ಕಂಡುಬರುತ್ತವೆ. ಇದಕ್ಕೆ ಪ್ರಮುಖ ಕಾರಣ ವಿದ್ವಾಂಸರ ವಲಸೆ ಮತ್ತು ಅಧ್ಯಯನ, ಗ್ರಂಥಗಳ ಪ್ರಚಾರ. ಬೌದ್ಧ, ಜೈನ, ವೈದಿಕ ಪಂಥಗಳ ಸಾವಿರಾರು ಗ್ರಂಥಗಳು ಈ ಲಿಪಿಯಲ್ಲಿಯೇ ಪ್ರತಿಯಾಗಿವೆ.
ಈ ಲಿಪಿಯ ಉಗಮ ಮತ್ತು ಬೆಳವಣಿಗೆಯ ಬಗೆಗೆ ಸಂಶೋಧಕರಲ್ಲಿ ಹಲವು ವಿಧದ ಭಿನ್ನಾಭಿಪ್ರಾಯಗಳಿವೆ. ಲಭ್ಯ ಮಾಹಿತಿಗಳಲ್ಲಿಯೂ ಅನೇಕ ಗೊಂದಲಗಳಿರುವುದುಂಟು. ಶಾರದಾ ಲಿಪಿಯ ಲಭ್ಯ ಮೊದಲ ಶಾಸನ, ಹಸ್ತಪ್ರತಿ ಯಾವುದೆಂಬ ವಿಷಯದಲ್ಲಿಯೇ ಸಂಶೋಧಕರಲ್ಲಿ ಭಿನ್ನಾಭಿಪ್ರಾಯಗಳಿವೆ. ಲಿಪಿಯನ್ನು ಕುರಿತಾದ ಪುಸ್ತಕಗಳಲ್ಲಿಯೂ ದೊರಕುವ ವಿವರಗಳು ಅಷ್ಟು ತೃಪ್ತಿಕರವಾಗಿಲ್ಲ, ಲಿಪಿಯ ಸೂಕ್ಷ್ಮ ಅಧ್ಯಯನ ನಡೆದಿಲ್ಲ. ಶಾರದಾ ಎನ್ನುವ ಹೆಸರು ಯಾವಾಗ ಬಂತು, ಮೊದಲ ಉಲ್ಲೇಖ ಎಲ್ಲಿ ಎಂಬಂತಹ ವಿವರಗಳು ಲಭ್ಯವೇ ಇಲ್ಲವಾಗಿವೆ. ಈ ಲಿಪಿಯನ್ನುಳ್ಳ ಶಾಸನಗಳು ಇಂದಿನ ಭಾರತದ ಮೂರು, ನಾಲ್ಕು ಪ್ರಾಂತಗಳು, ಇಂದಿನ ಪಾಕಿಸ್ತಾನ ಮತ್ತು ಆಫಘನಿಸ್ತಾನದ ಭಾಗಗಳಲ್ಲಿ ಚದುರಿಹೋಗಿವೆ. ರಾಜಕೀಯ ಸ್ಥಿತ್ಯಂತರಗಳೂ ಇದಕ್ಕೆ ಕೆಲಮಟ್ಟಿಗೆ ಕಾರಣವಾಗಿವೆ. ಇದರಿಂದಾಗಿ ಲಭ್ಯ ಮಾಹಿತಿಗಳಲ್ಲಿ ಗೊಂದಲಗಳು, ದೋಷಗಳು ಸಂಭವಿಸುವಂತಾಗಿದೆ. ಇದೇನೇ ಇದ್ದರೂ ಈ ಲಿಪಿಯ ಶಾಸನಗಳನ್ನು, ಹಸ್ತಪ್ರತಿಗಳನ್ನು ಒಟ್ಟುಗೂಡಿಸಿ ಬೇರೆ ಬೇರೆ ಲಿಪಿಗಳೊಡನೆ ತೌಲನಿಕ ಅಧ್ಯಯನ ನಡೆಸಬೇಕಾದ ಅಗತ್ಯ ಬಹಳವಾಗಿದೆ. ಇದರಿಂದಾಗಿ ತೃಪ್ತಿಕರವಾದ, ಸಮರ್ಪಕವಾದ ವಿವರಗಳು ಲಭ್ಯವಾಗಲು ಸಾಧ್ಯವಾಗುತ್ತದೆ.
ಕಾಶ್ಮೀರಿ ಭಾಷೆಯನ್ನು ಮೊದಲು ಶಾರದಾ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಆದರೆ ಕಾಲ ಕಳೆದಂತೆ ಮುಸಲ್ಮಾನರ ಆಕ್ರಮಣದ ಕಾರಣದಿಂದಾಗಿ (ಇದಕ್ಕೆ ಅನೇಕ ಬಲವಾದ ಆಧಾರಗಳಿವೆ) ಅರಬ್ಬಿ ಲಿಪಿಯ ಬಳಕೆ ಹೆಚ್ಚುತ್ತಾ ಹೋಗಿ ಶಾರದಾ ಲಿಪಿಯು ಅಳಿವಿನತ್ತ ಸಾಗಿತು.
ಇಂದು ಈ ಲಿಪಿಯು ಅನಿವಾರ್ಯವಾಗಿ ಲಿಪಿತಜ್ಞರ ಬಳಕೆಗೆ ಮಾತ್ರ ಇರುವಂತಹುದಾಗಿದೆ (ಆದರೂ ಕಾಶ್ಮೀರಿ ಪಂಡಿತರಲ್ಲಿ ಅನೇಕರು ಇದನ್ನು ಇಂದಿಗೂ ತಮ್ಮ ಮನೆತನಗಳಲ್ಲಿ ಬಳಕೆಯಲ್ಲಿಟ್ಟುಕೊಂಡಿದ್ದಾರೆ). ಇದನ್ನು ಪುನರುಜ್ಜೀವಿಸುವಂತಾಗಬೇಕು. ಭಾರತದ ಅವಿಭಾಜ್ಯ ಅಂಗವಾಗಿ ರೂಪುಗೊಂಡು ತನ್ನ ಸ್ವಾತಂತ್ರ್ಯವನ್ನು, ಪರಂಪರೆಯನ್ನು ಮರಳಿ ಪಡೆದುಕೊಂಡಿರುವ/ ಪಡೆದುಕೊಳ್ಳುತ್ತಿರುವ, ಕೇಂದ್ರಾಡಳಿತ ಪ್ರದೇಶವಾಗಿರುವ ಕಾಶ್ಮೀರದಲ್ಲಿ ಈಗ ಇದು ನಡೆಯಬೇಕಾದ ಪ್ರಮುಖ ಕಾರ್ಯವಾಗಿದೆ ಎಂದು ಒತ್ತಿ ಹೇಳಬೇಕಾಗಿದೆ.
ಇದರಿಂದಾಗಿ ಅನೇಕ ಐತಿಹಾಸಿಕ ವಿವರಗಳು ಬೆಳಕಿಗೆ ಬರಲು ಸಾಧ್ಯವಾಗುತ್ತದೆ.
ಆಧಾರಸೂಚಿಗಳು :
1. A Recently Discovered Jaina Pedestal Inscription of Śarada Script from Kangra fort, Himachal Pradesh – Vivek Dangi, S. Krishnamurthy and Ritu Malkotia, Journal of Multidisciplinary Studies in Archaeology-6, (2018), pp 1080 – 1083
2. Critical Study Of The Bakhshali Manuscript – Sushma Zadoo, Ph.D.
Thesis, University of Kashmir, 1992
(Published or Unbublished ?)
3. Critical Studies in the Mahabharata – V.S. Sukthankar, V.S. Sukthankar
Memorial Edition Committee,
Poona-1944
4. Corpus of Śarada Inscriptions of Kashmir by B.K. Kaul Deambi, Agam Kala Prakashan, Delhi – 1982
5. Indian Palaeography – Ahmad Hasan Dani, Munshiram Manoharlal Publishers Pvt. Ltd., NewDelhi – 1985, 2nd Edition
6. On the Śarada Alphabet – George
Grierson, Journal of the Royal Asiatic
Society of Great Britain and Ireland, (October, 1916), pp 677-708
7. Observations on the Architecture and on a Carved Wooden Door of the Temple of Mirkulā Devī at Udaipur, Himachal Pradesh – Francesco Noci, East and West, Volume-44, No. 1 (March 1994), pp 99-114
8. Śarada and Takari Alphabets Origin and Development – B.K. Kaul Deambi, D.K. Print World Ltd., NewDelhi – 2008
9. The Bakshali Manuscript {3 Parts} – G.R. Kaye, Archaeological Survey of India, Delhi – 1933
10. The Bakhshali Manuscript: An Ancient Treatise of Indian Mathematics – (Ed) Svami Satya Prakash Sarasvati and Dr. Usha Jyotishmati, Dr. Ratna Kumari Svadhyaya Sansthan, Allahabad – 1979
11. The Bakhshali Manuscript: An Ancient Indian Mathematical Treatise- Takao Hayashi, Published by Egbert Forsten Publishing – 1995
12. The Critical Edition of The Mahābhārata: Ādiparvan – M. Winterinitz, Annals of the Bhandarkar Oriental Research Institute Vol. 15, No. 3-4 (1933-34), pp 159-175
13. ಅಂತರ್ಜಾಲದಲ್ಲಿನ ಲೇಖನಗಳು ಮತ್ತು ಪುಸ್ತಕಗಳು