ಚುನಾವಣೆಗಳು ಪಾಠ ಕಲಿಸುತ್ತವೆ ಎಂಬುದು ದಿಟವೇ. ಆದರೆ ಪ್ರತಿ ಸಾರಿ ಬೇರೆಯವೇ ಪಾಠಗಳನ್ನು ಕಲಿಸುತ್ತವೆಂಬುದೂ ದಿಟವೇ. ಯಾವುದೇ ತಂತ್ರಗಾರಿಕೆಗಳ ವಿನ್ಯಾಸವು ಸದಾಕಾಲ ನಿರೀಕ್ಷಿತ ಪರಿಣಾಮಗಳನ್ನು ನೀಡಲಾರದೆಂಬುದು ಹಲವು ಬಾರಿ ಪುರಾವೆಗೊಂಡಿದೆ. ಯಾವುದೊ ‘ಅಲೆ’ಗಳು ಪವಾಡವನ್ನೆಸಗಿಬಿಡುತ್ತದೆಂಬುದನ್ನು ಪೂರ್ಣ ನೆಚ್ಚುವಂತಿಲ್ಲವೆಂಬುದೂ ಹಲವು ಬಾರಿ ಸಾಬೀತಾಗಿದೆ.
ಹಲವು ತಿಂಗಳುಗಳಿಂದ ದೇಶಾದ್ಯಂತ ತೀವ್ರ ಕುತೂಹಲವನ್ನು ಕೆರಳಿಸಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಮೇ 2ರಂದು ಹೊರಬಿದ್ದಿದೆ. ಅಸ್ಸಾಮಿನಲ್ಲಿ ಭಾಜಪ, ಪುದುಚೇರಿಯಲ್ಲಿ ಎನ್.ಡಿ.ಎ. ಮೈತ್ರಿಕೂಟ ಜಯ ಗಳಿಸಿವೆ. ಕೇರಳದಲ್ಲಿ ಎಲ್.ಡಿ.ಎಫ್., ತಮಿಳುನಾಡಿನಲ್ಲಿ ಡಿ.ಎಂ.ಕೆ., ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಇವು ಶಂಕಾತೀತ ಬಹುಮತ ಸ್ಥಾಪಿಸಿವೆ. ವಿಶೇಷವೆಂದರೆ ಈ ಮೂರು ರಾಜ್ಯಗಳಲ್ಲಿ ಸಂಖ್ಯಾತ್ಮಕವಾಗಿ ಗೆಲವನ್ನು ಸಾಧಿಸಿರುವ ಪಕ್ಷಗಳು ಸಂತೃಪ್ತಭಾವದಿಂದ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಗೆದ್ದಿದ್ದರೂ ಮಮತಾ ಬ್ಯಾನರ್ಜಿಯವರು ತಾವು ಸ್ಪರ್ಧಿಸಿದ್ದ ನಂದಿಗ್ರಾಮದಲ್ಲಿಯೆ ಪರಾಭವಗೊಂಡಿದ್ದಾರೆ. ಭಾಜಪ ಸಂಖ್ಯಾತ್ಮಕವಾಗಿ ಬಹುಮತ ಸಾಧಿಸದಿದ್ದರೂ 77ರಷ್ಟು ಅಧಿಕ ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಂಡಿರುವುದು ತೃಣಮೂಲ ಕಾಂಗ್ರೆಸ್ ಗೆಲವನ್ನು ಮುಕ್ಕಾಗಿಸಿದೆ. ಕೇರಳದಲ್ಲಿ ತಮ್ಮ ಮೇಲುಗೈಯನ್ನು ರಕ್ಷಿಸಿಕೊಳ್ಳಲು ಪಿಣರಾಯಿ ವಿಜಯನ್ ಶಬರಿಮಲೆ ವಿವಾದ ಮೊದಲಾದ ಜ್ವಲಂತ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಹಿಂದಿನ ಗಡಸು ನಿಲವುಗಳನ್ನು ಕೈಬಿಡಬೇಕಾಯಿತು. ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿ.ಎಂ.ಕೆ. ಪಕ್ಷದ ಮುನ್ನಡೆಯಾಗಿರುವುದು ಹೌದು. ಆದರೆ ಅನೇಕ ಪ್ರಮುಖರ ಮೇಲೆ ತೆರಿಗೆ ವಂಚನೆ ಇತ್ಯಾದಿ ಆರೋಪಗಳ ತೂಗುಗತ್ತಿ ಜೀವಂತವಿರುವುದು ಮೊದಲಾದ ಇರುಸುಮುರುಸುಗಳು ಇಲ್ಲದಿಲ್ಲ.
ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ತಾಂತ್ರಿಕವಾಗಿ ಗೆಲವನ್ನು ಪಡೆದಿದ್ದರೂ ಮೊದಲ ಬಾರಿಗೆ ಭಾಜಪ 77ರಷ್ಟು ಅಧಿಕ ಸ್ಥಾನಗಳನ್ನು ಗಳಿಸಿರುವುದು ಒಂದು ಐತಿಹಾಸಿಕ ಸಾಧನೆಯೆಂದು ಒಪ್ಪಬೇಕಾಗಿದೆ. 2016ರಲ್ಲಿ ಭಾಜಪ ಗಳಿಸಲಾಗಿದ್ದುದು ಮೂರೇ ಮೂರು ಸ್ಥಾನಗಳು. ರಾಜ್ಯಮಟ್ಟದಲ್ಲಿ ಭಾಜಪಕ್ಕೆ ಹೇಳಿಕೊಳ್ಳುವಂತಹ ಸ್ಥಳೀಯ ನಾಯಕತ್ವ ಇರದಿದ್ದರೂ 77ರಷ್ಟು ಸ್ಥಾನಗಳನ್ನು ಅದು ಪಡೆದುಕೊಂಡದ್ದು ಕಡಮೆಯ ಸಾಧನೆಯಲ್ಲ.
ಚುನಾವಣೆಗಳು ಪಾಠ ಕಲಿಸುತ್ತವೆ ಎಂಬುದು ದಿಟವೇ. ಆದರೆ ಪ್ರತಿ ಸಾರಿ ಬೇರೆಯವೇ ಪಾಠಗಳನ್ನು ಕಲಿಸುತ್ತವೆಂಬುದೂ ದಿಟವೇ. ಯಾವುದೇ ತಂತ್ರಗಾರಿಕೆಗಳ ವಿನ್ಯಾಸವು ಸದಾಕಾಲ ನಿರೀಕ್ಷಿತ ಪರಿಣಾಮಗಳನ್ನು ನೀಡಲಾರದೆಂಬುದು ಹಲವು ಬಾರಿ ಪುರಾವೆಗೊಂಡಿದೆ. ಯಾವುದೊ ‘ಅಲೆ’ಗಳು ಪವಾಡವನ್ನೆಸಗಿಬಿಡುತ್ತವೆಂಬುದನ್ನು ಪೂರ್ಣ ನೆಚ್ಚುವಂತಿಲ್ಲವೆಂಬುದೂ ಹಲವು ಬಾರಿ ಸಾಬೀತಾಗಿದೆ. ಯಾವುದೇ ಚುನಾವಣೆಯಲ್ಲಿ ಸ್ಥಳೀಯ ಸನ್ನಿವೇಶಗಳದೂ ಸ್ಥಳೀಯ ನಾಯಕತ್ವದ್ದೂ ಗಣನೀಯ ಪಾತ್ರವಿರುತ್ತದೆಂಬುದಂತೂ ಇದೀಗ ಚುನಾವಣೆಗಳು ನಡೆದ ಸಂದರ್ಭದಲ್ಲಿಯೂ ಸ್ಫುಟಗೊಂಡಿದೆ.
ಬಂಗಾಳದ ರಾಜಕೀಯ ವಿನ್ಯಾಸ ಬದಲಾಗಬೇಕಾದುದರ ಆವಶ್ಯಕತೆಯಂತೂ ದೀರ್ಘಕಾಲದಿಂದ ಅನುಭವಕ್ಕೆ ಬಂದಿತ್ತು. ಭ್ರಷ್ಟಾಚಾರ ಪ್ರಕರಣಗಳ ವಿಷಯ ಒತ್ತಟ್ಟಿಗಿರಲಿ (ಈಗಿನ ಟಿ.ಎಂ.ಸಿ. ಸಚಿವಸಂಪುಟದಲ್ಲಿ ಶೇ. 28ರಷ್ಟು ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ.) ಆರೂಢ ಸರ್ಕಾರದ ಮೃದುಧೋರಣೆಯ ಫಲಿತವಾಗಿ ಈಚಿನ ವರ್ಷಗಳಲ್ಲಿ ಬಂಗಾಳ ಪ್ರಾಂತವು ಇಸ್ಲಾಮೀ ಆತಂಕವಾದಿ ಶಕ್ತಿಗಳ ಆಡುಂಬೊಲವಾಗಿದ್ದುದು ಅಸಂದಿಗ್ಧವಾಗಿ ಸಿದ್ಧಪಟ್ಟಿದೆ. ಅಲ್ಖೈದಾ ನಂಟಸ್ತಿಕೆಯಲ್ಲಿದ್ದ ಹಲವು ಸಂಘಟನೆಗಳನ್ನು ಎನ್.ಐ.ಎ. – ನ್ಯಾಶನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಬಯಲುಗೊಳಿಸಿದ್ದೂ ಇದೆ. ಆದರೂ ಆಳುವ ಪಕ್ಷವೇ ಮತಬ್ಯಾಂಕ್ ಪರಿಗಣನೆಗಳಿಂದ ರಾಷ್ಟ್ರವಿರೋಧಿ ಶಕ್ತಿಗಳ ಸಾಹಚರ್ಯವನ್ನು ಬೆಳೆಸಿಕೊಂಡಿರುವಾಗ ನಿಯಂತ್ರಣ ಎಷ್ಟುಮಟ್ಟಿಗೆ ಶಕ್ಯವಾದೀತು? ವಿರೋಧಪಕ್ಷಗಳಾದ ಕಾಂಗ್ರೆಸ್ ಮತ್ತು ಸಿ.ಪಿ.ಐ.(ಎಂ)ಗಳೂ ಬೆಂಬಲಕ್ಕಾಗಿ ಆಶ್ರಯಿಸಿರುವುದು ಇಸ್ಲಾಮೀ ವಲಯವನ್ನೇ. ಈ ಹಿನ್ನೆಲೆಯಲ್ಲಿ ವಾಮಪಕ್ಷಗಳು ತೃಣಮೂಲ ಕಾಂಗ್ರೆಸ್ಸಿನಿಂದ ಉಚ್ಚಾಟನೆಗೊಂಡ ಮೇಲೂ ಬಂಗಾಳದಲ್ಲಿ ರಾಷ್ಟ್ರೀಯತೆಯ ವ್ಯತಿರೇಕವೇ ಮುಂದುವರಿದಿದೆ. ಇಸ್ಲಾಂ ಎಂಬುದು ಬಡವರ, ಸಂತ್ರಸ್ತರ, ಅಧಿಕಾರವಂಚಿತರ ಪರವಾದ ಮತ – ಎಂಬ ಜಾಡಿನ ‘ಸೈದ್ಧಾಂತಿಕ’ ಮಂಡನೆಗಳೂ 1977ರ ದಶಕದಷ್ಟು ಹಿಂದಿನಿಂದಲೇ ಅವ್ಯಾಹತವಾಗಿ ಮೆರೆದಿರುವುದು ಮಾತ್ರವಲ್ಲದೆ ಇವೇ ಸೆಕ್ಯುಲರಿಸಮ್ ಎಂದು ಬಿಂಬಿಸಲಾಗಿದೆ. ರಾಜಕೀಯ ಪೆÇೀಷಣೆ ಪಡೆದ ಈ ವಿಕೃತಿಗಳು ಪ್ರಾಂತದ ಬಹುಸಂಖ್ಯಾತರ ಧ್ವನಿಯು ಹೊರಹೊಮ್ಮಲು ಅವಕಾಶವನ್ನೇ ನೀಡಿಲ್ಲ. ವಾಮಪಕ್ಷಗಳ ಆಸರೆ ತಪ್ಪಿದ್ದರಿಂದ ಲೇಖಕ-ಕಲಾವಿದ-ಬೋಧಕವರ್ಗಗಳ ಅನೇಕರು ತೃಣಮೂಲ ಕಾಂಗ್ರೆಸ್ ಬಣದ ತೆಕ್ಕೆಗೆ ಬಿದ್ದಿದ್ದಾರೆ. ಈ ಪರಿಸರದಲ್ಲಿ ಪ್ರಚ್ಛನ್ನ ಇಸ್ಲಾಮೀಕರಣ, ಸರ್ಕಾರೀ ನೌಕರಿಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡಿಕೆ, ಶಿಕ್ಷಣಕ್ಷೇತ್ರದ ವಿಕೃತೀಕರಣ ಮೊದಲಾದವೆಲ್ಲ ಧಾರಾಳವಾಗಿಯೇ ನಡೆದಿವೆ.
ಈ ಅರಾಜಕ ಪ್ರವೃತ್ತಿಗಳಿಗೆ ಚಿಕಿತ್ಸೆ ನಡೆಯಬೇಕೆಂಬ ಆಶಯದಿಂದಲೇ ಪಶ್ಚಿಮಬಂಗಾಳದ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಭಾಜಪ ಮಹತ್ತ್ವದ್ದಾಗಿ ಭಾವಿಸಿದ್ದುದು. ಗಣನೀಯ ಪ್ರಮಾಣದಲ್ಲಾದರೂ ಚಿಕಿತ್ಸಕ ಪ್ರಕ್ರಿಯೆ ಉಪಕ್ರಮಗೊಂಡಿರುವುದು ರಾಷ್ಟ್ರಸ್ವಾಸ್ಥ್ಯದ ದೃಷ್ಟಿಯಿಂದ ದಾಖಲೆಗೆ ಅರ್ಹವಾದ ಸಂಗತಿಯಾಗಿದೆ.