ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಎಪ್ರಿಲ್ 2021 > ಜಗತ್ತಿನ ಕಳೆದೈದು ಶತಮಾನಗಳು ಒಂದು ಚಾರಿತ್ರಿಕ ಸಮೀಕ್ಷೆ

ಜಗತ್ತಿನ ಕಳೆದೈದು ಶತಮಾನಗಳು ಒಂದು ಚಾರಿತ್ರಿಕ ಸಮೀಕ್ಷೆ

ಕ್ರಿಸ್ಟೊಫರ್ ಕೊಲಂಬಸ್ ಅಮೆರಿಕವನ್ನು ‘ಕಂಡುಹಿಡಿದಿದ್ದರ’ 500ನೇ ವರ್ಷ ನಿಮಿತ್ತ ಲೇಖನ

ಇಂದು ಪ್ರಚಲಿತವಾಗಿರುವ ಅಭ್ಯುದಯ ಧೋರಣೆಗಳ ಹಾಗೂ ಇಂದಿನ ಮೂಲಭೂತ ಸಂಘರ್ಷಗಳ ಮೂಲವನ್ನು ಅರಿತುಕೊಳ್ಳಲು ಕಳೆದ ಐದುನೂರು ವರ್ಷಗಳ ಪ್ರಮುಖ ಘಟನೆಗಳನ್ನು ಸಮೀಕ್ಷಿಸುವುದು ಉಪಯುಕ್ತವಾದೀತು. 1492ರ ಸುಮಾರಿನಿಂದೀಚಿನ ಘಟನೆಗಳು ಮನುಷ್ಯನ ಚಿಂತನೆಯ ಮೇಲೂ ಜೀವನಕ್ರಮದ ಮೇಲೂ ಯಾವ ರೀತಿಯಲ್ಲಿ ಪ್ರಭಾವ ಬೀರಿವೆಯೆಂಬುದನ್ನು ಅರ್ಥಮಾಡಿಕೊಂಡಲ್ಲಿ ಇಂದಿನ ಸಮಸ್ಯೆಗಳಿಗೆ ಪರಿಹಾರಮಾರ್ಗಗಳು ತೋರಿಯಾವು.

ಯೂರೋಪಿನವರಿಗೆ ಹೊರಗಣ ಜಗತ್ತಿನ ಬಗೆಗೆ ಪರಿಜ್ಞಾನ ಮೂಡತೊಡಗಿದ್ದು 1492ರಲ್ಲೆನ್ನಬಹುದು – ಕ್ರಿಸ್ಟೊಫರ್ ಕೊಲಂಬಸನೂ ಅವನ ತಂಡದ ನಾವಿಕರೂ ಅಮೆರಿಕ ತಲಪಿದಾಗ. ಅವರು ಹುಡುಕಲು ಹೊರಟಿದ್ದದ್ದು ಭಾರತ ಹಾಗೂ ಆಗ್ನೇಯ ಏಷ್ಯದ ದೇಶಗಳನ್ನು. ಆಗಿನ ಐರೋಪ್ಯ ನಾವಿಕರೆಲ್ಲರ ಮುಖ್ಯ ಗುರಿ ಭಾರತಕ್ಕೆ ಸಮುದ್ರಮಾರ್ಗವನ್ನು ಕಂಡುಹಿಡಿಯುವುದು. ಆಗ್ಗೆ ಕೆಲ ವರ್ಷಗಳ ಹಿಂದೆ ಐರೋಪ್ಯ ವಿಜ್ಞಾನಿಗಳು ಭೂಮಿ ದುಂಡಗಿದೆಯೆಂಬ ತತ್ತ್ವವನ್ನು ಪ್ರತಿಪಾದಿಸಿದ್ದರು. ಅದರಿಂದ ಪ್ರೇರಿತನಾದ ಕೊಲಂಬಸ್ ಯೂರೋಪಿನಿಂದ ಪಶ್ಚಿಮಾಭಿಮುಖವಾಗಿ ಹೊರಟು ಭಾರತ ಮತ್ತದರ ನೆರೆಯ ದೇಶಗಳನ್ನು ತಲಪಲು ಬಯಸಿದ. ಹೆಚ್ಚುಕಡಮೆ ಉತ್ತರಧ್ರುವದಿಂದ ದಕ್ಷಿಣಧ್ರುವದವರೆಗಿನಷ್ಟು ದೊಡ್ಡದಾದ ಅಮೆರಿಕವೆಂಬ ಭೂಖಂಡವೊಂದು ಯೂರೋಪ್-ಆಫ್ರಿಕಾ ಮತ್ತು ಚೀಣಾ-ಇಂಡಿಯಾಗಳ ನಡುವೆ ಇದ್ದಿತೆಂಬ ಸಂಗತಿ ಪಶ್ಚಿಮ ಯೂರೋಪಿನವರಿಗೆ ತಿಳಿದಿರಲಿಲ್ಲ.

ಆದರೆ 15ನೇ ಶತಮಾನದ ಉತ್ತರಾರ್ಧದಲ್ಲಿ ಯೂರೋಪಿಯನರ ಸಾಹಸಪ್ರಿಯತೆ ಏಕಾಏಕಿ ಉದ್ರಿಕ್ತವಾಯಿತು. 14-15ನೇ ಶತಮಾನಗಳಲ್ಲಿ ಯೂರೋಪನ್ನೆಲ್ಲ ಆವರಿಸಿ ಹಾವಳಿ ಮಾಡಿದ ಪ್ಲೇಗ್ ಸಾಂಕ್ರಾಮಿಕವೂ ಇದಕ್ಕೆ ಸ್ವಲ್ಪಮಟ್ಟಿಗೆ ಕಾರಣವಿದ್ದೀತು. ಅದಾದ ಅಲ್ಪಕಾಲದಲ್ಲಿ – 1498ರಲ್ಲಿ -ಯೂರೋಪಿಯನರು ಆಫ್ರಿಕವನ್ನು ಬಳಸಿ ಭಾರತ ತಲಪಿದರು. ಕೇರಳ ತೀರವನ್ನು ತಲಪುವುದರಲ್ಲಿ

ವಾಸ್ಕೊಗಾಮನಿಗೆ ಏಷ್ಯಮೂಲದ ನಾವಿಕರ ನೆರವು

ದೊರೆತಿತ್ತು. ಮುಂದಿನ ನಲವತ್ತೈವತ್ತು ವರ್ಷಗಳಲ್ಲಿ ಯೂರೋಪ್ ಇಡೀ ಜಗತ್ತನ್ನೇ ವ್ಯಾಪಿಸಿತು. 1540ರ ವೇಳೆಗೇ ಜೆಸುಯಿಟರು ಜಪಾನಿನಷ್ಟು ದೂರಕ್ಕೂ ತಲಪಿದ್ದರು. ಕೇವಲ 60 ವರ್ಷಗಳಲ್ಲಿ – 17ನೇ ಶತಮಾನದ ಆರಂಭದ ವೇಳೆಗೆ – ನಾಲ್ಕು ಲಕ್ಷದಷ್ಟು ಜಪಾನೀಯರನ್ನು ಜೆಸುಯಿಟರು ಕ್ರೈಸ್ತಧರ್ಮಕ್ಕೆ ಮತಾಂತರ ಮಾಡಿದ್ದರು.

1492ಕ್ಕೆ ಬಹುಕಾಲ ಹಿಂದೆಯೇ ಪಶ್ಚಿಮ ಏಷ್ಯಾ, ಪರ್ಶಿಯಾ, ಉತ್ತರ ಆಫ್ರಿಕ, ಭಾರತದ ಗಡಿಗಳು – ಮೊದಲಾದ ಪ್ರದೇಶಗಳೊಡನೆ ಐರೋಪ್ಯರ ಸಂಪರ್ಕವಿತ್ತು. ಈಗ್ಗೆ 2,000 ವರ್ಷಗಳ ಹಿಂದೆಯೇ ತಮಿಳುನಾಡು-ರೋಮ್ ದೇಶಗಳ ನಡುವೆ ವಾಣಿಜ್ಯ ಸಂಬಂಧವಿತ್ತು. ಕ್ರಿ.ಶ. 7ನೇ ಶತಮಾನದಲ್ಲಿಯೇ ಯೂರೋಪಿಗೆ ಚೀಣಾದ ಪರಿಚಯವಾಗಿತ್ತೆನಿಸುತ್ತದೆ.

ಈ ಹಿನ್ನೆಲೆಯಲ್ಲಿ ಐರೋಪ್ಯ ಪರಾಕ್ರಮ 1492ರಲ್ಲಷ್ಟೇ ಆರಂಭಗೊಂಡಿತೆನ್ನಲು ಕಾರಣವಿಲ್ಲ. ಕ್ರಿ.ಪೂ. 326ರಷ್ಟು ಹಿಂದೆಯೇ ಅಲೆಕ್ಸಾಂಡರ್ ವಾಯವ್ಯಭಾರತವನ್ನು ಪ್ರವೇಶಿಸಿದ್ದ. ಆದರೆ ಗ್ರೀಕ್ ಪ್ರಭುತ್ವವನ್ನು ಸ್ಥಾಪಿಸಲು ಅವನಿಗೆ ಸಾಧ್ಯವಾಗಲಿಲ್ಲ. ಅದಾದ ಸಾವಿರ ವರ್ಷಗಳ ತರುವಾಯ – ಕ್ರಿ.ಶ. 7ನೇ ಶತಮಾನದಲ್ಲಿ – ಇಸ್ಲಾಮಿನ ಪತಾಕೆ ಹಿಡಿದು ಹೊರಟ ಅರಬರು ಪಶ್ಚಿಮಭಾರತದ ಸಿಂಧ್ ಪ್ರಾಂತವನ್ನೂ, ದಕ್ಷಿಣ ಯೂರೋಪಿನ ಕೆಲಭಾಗಗಳನ್ನೂ ಆಕ್ರಮಿಸಿದರು. ಇದಾದ ಮೂರು ಶತಮಾನಗಳ ತರುವಾಯ – 11ನೇ ಶತಮಾನದ ಅಂತ್ಯದಲ್ಲಿ, ಕ್ರೂಸೇಡ್ ಅವಧಿಯಲ್ಲಿ ರೋಮನ್ ಕ್ರೈಸ್ತ ಚರ್ಚಿನ ಮತ್ತು ಪಶ್ಚಿಮಯೂರೋಪಿನ ಜಮೀನುದಾರರ ಬೆಂಬಲ ಪಡೆದು ಯೂರೋಪಿಯನರು ಬೈಜಾಂಟಿಯಮ್, ಪಶ್ಚಿಮ ಏಷ್ಯಾ, ಟರ್ಕಿ ಮುಂತಾದ ಭಾಗಗಳನ್ನು ವಶಪಡಿಸಿಕೊಂಡು ಆಳತೊಡಗಿದರು.

* * * *

ಹೊಸ ವಿಸ್ತರಣತಂತ್ರ

ಒಂದು ಪ್ರಮುಖ ವ್ಯತ್ಯಾಸವನ್ನು ನಾವು ಗಮನಿಸಬೇಕು. 11-14ನೇ ಶತಮಾನಗಳ ಕ್ರೂಸೇಡ್ ಅವಧಿಯಲ್ಲಿ ರಾಜ್ಯ ವಿಸ್ತರಣೆಗೆ ಮಧ್ಯಯುಗದ ಕ್ರೈಸ್ತ ಅಧಿಕಾರಪೀಠಗಳ ಧಾರ್ಮಿಕಬಲ, ಬಾಹುಬಲಗಳನ್ನು ಮಾಧ್ಯಮವಾಗಿ ಬಳಸಲಾಗಿತ್ತು. ಆದರೆ  15ನೇ ಶತಮಾನದ ಮಧ್ಯಭಾಗದನಂತರ ವ್ಯಾಪಾರ ವಾಣಿಜ್ಯ ಸಂಸ್ಥೆಗಳು ಯೂರೋಪಿನ ಜಾಗತಿಕ ವಿಸ್ತರಣೆಯ ಮಾಧ್ಯಮವಾದವು.

1482ರಲ್ಲಿ ಜಾನ್ ಕ್ಯಾಬಟ್ ಎಂಬಾತನಿಗೆ ಇಂಗ್ಲೆಂಡಿನ ಏಳನೇ ಹೆನ್ರಿ ನೀಡಿದ ಸನ್ನದು ಹೀಗಿತ್ತು: “ಈವರೆಗೆ ಕ್ರೈಸ್ತಧರ್ಮೀಯರಿಗೆ ಅಪರಿಚಿತರಾದ ಪಾಷಂಡಿಗಳು ಯೂರೋಪಿನ ಪೂರ್ವ, ಪಶ್ಚಿಮ, ಉತ್ತರ ದಿಕ್ಕುಗಳ ಸಮುದ್ರಗಳಲ್ಲಿ ಎಲ್ಲಿಯಾದರೂ ಇದ್ದರೆ ಆ ನಗರ, ದ್ವೀಪ, ಭೂಪ್ರದೇಶಗಳಲ್ಲೆಲ್ಲ ಇಂಗ್ಲೆಂಡಿನ ರಾಜನ ಹೆಸರಿನಲ್ಲಿ ನೆಲೆಗಳನ್ನು ಸ್ಥಾಪಿಸಲು ಜಾನ್ ಕ್ಯಾಬಟ್ ಮತ್ತು ಮಕ್ಕಳಿಗೆ ಪರವಾನಗಿ ನೀಡಲಾಗಿದೆ. ಅವರು ಪ್ರತಿಯೊಂದು ನೌಕಾಯಾನದಲ್ಲಿ ಗಳಿಸಿದ ಧನದ ಐದನೆ ಒಂದು ಭಾಗವನ್ನು ಇಂಗ್ಲೆಂಡಿನ ಸಮ್ರಾಟನಿಗೆ ಒಪ್ಪಿಸತಕ್ಕದ್ದು.” 1450ರಿಂದ ಇತ್ತೀಚಿನವರೆಗೆ ಯೂರೋಪಿನ ಬೇರೆಬೇರೆ ಸಮ್ರಾಟರು ಇಂಥ ಅಸಂಖ್ಯ ಸನ್ನದುಗಳನ್ನು ನೀಡಿದ್ದರು.

ಇದಾದನಂತರದ ದಶಕಗಳಲ್ಲಿ ಅನುಸರಣೆಗೆ ಬಂದ ಹೊಸ ವಿಸ್ತರಣತಂತ್ರದ ನಮೂನೆಯನ್ನು ನೋಡೋಣ. 17ನೇ ಶತಮಾನದ ಆರಂಭದಲ್ಲಿ ಇಂಗ್ಲೆಂಡಿನ ಅಟಾರ್ನಿ ಜನರಲ್ ಸರ್ ಜಾನ್ ಡೇವೀಸ್ ಐರ್ಲೆಂಡನ್ನು ವಶಪಡಿಸಿಕೊಳ್ಳುವುದರ ಬಗ್ಗೆ ಸರ್ಕಾರಕ್ಕೆ ನೀಡಿದ ಸಲಹೆ ಇದು:

“ಐರ್ಲೆಂಡ್ ವಶವಾಗದಿರುವುದಕ್ಕೆ ನಮ್ಮ ಎರಡು ದೋಷಗಳು ಕಾರಣ: ಮೊದಲನೆಯದಾಗಿ ನಾವು ಸಾಕಷ್ಟು ಪ್ರಬಲ ಯುದ್ಧ ನಡೆಸದಿರುವುದು; ಎರಡನೆಯದಾಗಿ ನಮ್ಮ ಆಡಳಿತದ ದುರ್ಬಲತೆ, ಒಳ್ಳೆಯ ಬೀಜ ಬಿತ್ತುವುದಕ್ಕೆ ಮೊದಲು ನೆಲವನ್ನು ಉತ್ತು ಹದಗೊಳಿಸಿ ಗೊಬ್ಬರ ಹರಡಬೇಕಷ್ಟೆ. ಉತ್ತ ಮೇಲೂ ಬೀಜ ಬಿತ್ತುವುದು ತಡವಾದರೆ ಮತ್ತೆ ಕಳೆ ಹರಡುತ್ತದೆ. ಬರ್ಬರ ದೇಶವೊಂದನ್ನು ಮೊದಲು ಯುದ್ಧದಿಂದ ಮಣಿಸಬೇಕು; ಆಮೇಲೆಯೇ ಉತ್ತಮ ಆಡಳಿತ ಸಾಧ್ಯವಾಗುವುದು. ಪೂರ್ತಿ ವಶಪಡಿಸಿಕೊಂಡ ತರುವಾಯ ಆಡಳಿತವನ್ನು ಉತ್ತಮಪಡಿಸಬೇಕು. ಇಲ್ಲವಾದಲ್ಲಿ ಹಳೆಯ ಬರ್ಬರತೆ ಮತ್ತೆ ಹಿಂದಿರುಗುತ್ತದೆ.”

ಈ ಹಿನ್ನೆಲೆಯಲ್ಲಿ ಕ್ರಿ.ಶ. 1500ರಿಂದ ಆಚೆಗೆ ಯೂರೋಪು ಪೂರ್ವ, ಪಶ್ಚಿಮ ಎರಡೂ ದಿಕ್ಕಿಗೆ ವಿಸ್ತರಿಸತೊಡಗಿತು. ಪಶ್ಚಿಮಾಭಿಮುಖ ವಿಸ್ತಾರಕರ ಕಣ್ಣು ಬಿದ್ದದ್ದು ಅಮೆರಿಕದ ಅತಿ ವಿಶಾಲಭೂಮಿ, ಅರಣ್ಯಸಂಪತ್ತು, ಖನಿಜರಾಶಿಗಳ ಮೇಲೆ. ಹೀಗೆ ಕ್ರಮೇಣ ಅಮೆರಿಕದ ಪೂರ್ವತೀರದ ಪ್ರದೇಶಗಳಲ್ಲಿಯೂ ಯೂರೋಪಿಯನರು ನೆಲೆಯೂರತೊಡಗಿದರು. 1492ರಲ್ಲಿ ಉತ್ತರ-ದಕ್ಷಿಣ ಅಮೆರಿಕಗಳ ಮೂಲವಾಸಿಗಳ ಸಂಖ್ಯೆ 9ರಿಂದ 11.2 ಕೋಟಿಯಷ್ಟಿತ್ತೆಂದು ಅಂದಾಜು. ಆಗ ಇಡೀ ಯೂರೋಪಿನ ಜನಸಂಖ್ಯೆ 6ರಿಂದ 7 ಕೋಟಿಯಷ್ಟು ಮಾತ್ರವಿತ್ತು.

ಮುಂದಿನ 400 ವರ್ಷಗಳಲ್ಲಿ ಅಮೆರಿಕದ ಮೂಲವಾಸಿಗಳ ಮೇಲೆ ಅಸಂಖ್ಯ ಸಮರಗಳನ್ನು ನಡೆಸಲಾಯಿತು. ಹೆಚ್ಚುಕಡಮೆ ಅವರೆಲ್ಲರನ್ನೂ ನಿರ್ಣಾಮ ಮಾಡಲಾಯಿತು. ಅವರನ್ನು ಗುಲಾಮರನ್ನಾಗಿಸಿ ಖನಿಜೋದ್ಯಮದಲ್ಲಿಯೂ, ಹೊಸ ನೆಡುತೋಪುಗಳ ಕೆಲಸದಲ್ಲಿಯೂ ತೊಡಗಿಸಲು ಯತ್ನಿಸಲಾಯಿತು. ಆದರೆ ಈ ಪ್ರಯತ್ನ ಸಫಲವಾದಂತಿಲ್ಲ. ಯೂರೋಪಿಯನರಿಗೆ ವಶವಾಗುವುದಕ್ಕಿಂತ ಸಾಯುವುದೇ ಮೇಲೆಂದು ಮೂಲನಿವಾಸಿಗಳಿಗೆ ಅನಿಸಿರಬೇಕು.

ಈ ಯುದ್ಧಗಳಿಗಿಂತ ಹೆಚ್ಚಿನ ಹಾನಿ ಮಾಡಿದವು – ಯೂರೋಪಿಯನರು ಅಮೆರಿಕಕ್ಕೆ ಕೊಂಡೊಯ್ದ ಕಾಯಿಲೆಗಳು. ಈ ಕಾಯಿಲೆಗಳೇ ಅಸಂಖ್ಯ ಪ್ರದೇಶಗಳ ಜನತೆಯನ್ನು ಇಡಿಯಾಗಿ ಬಲಿತೆಗೆದುಕೊಂಡವು. ಉತ್ತರ ಅಮೆರಿಕದ ನ್ಯೂಇಂಗ್ಲೆಂಡ್‍ನಲ್ಲಿ 1618ರಲ್ಲಿ ಹರಡಿದ ಪ್ಲೇಗ್ ಇಂಥದೊಂದು ನಿದರ್ಶನ. ದಡಾರ, ಕ್ಷಯ, ಮಲೇರಿಯಾ, ಟೈಫಾಯ್ಡ್, ಗುಹ್ಯರೋಗಗಳು ಮುಂತಾದ ಕಾಯಿಲೆಗಳ ಪರಿಚಯವಿರದಿದ್ದುದರಿಂದ ಅಮೆರಿಕದ ನಿವಾಸಿಗಳಿಗೆ ಈ ವ್ಯಾಧಿಗಳನ್ನು ಎದುರಿಸುವ  ಪ್ರತಿರೋಧಕ ಶಕ್ತಿ ಇರಲಿಲ್ಲ.

“ಹೀಗೆ ಇಡೀ ಜನತೆಯೇ ಕಾಯಿಲೆಗಳಿಗೆ ತುತ್ತಾಗಿ ಸತ್ತದ್ದು ಇಂಗ್ಲಿಷರು ನೆಲೆಸುವುದಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿಯೇ ಎನಿಸುತ್ತದೆ” – ಎಂದು 1625ರಲ್ಲಿ ನ್ಯೂಇಂಗ್ಲೆಂಡಿಗೆ ಕಾಲಿರಿಸಿದ ಒಬ್ಬ ಇಂಗ್ಲಿಷಿನವ ಬರೆದಿದ್ದಾನೆ. ಅದಾದ ಐವತ್ತು ವರ್ಷಗಳನಂತರ ನ್ಯೂಯಾರ್ಕಿಗೆ ಬಂದ ಇನ್ನೊಬ್ಬ ವಲಸೆಗಾರ “ಇಂಗ್ಲಿಷಿನವರು ಎಲ್ಲಿ ಹೋದರೂ ಯುದ್ಧಗಳೋ, ಮರಣಾಂತಕ ಕಾಯಿಲೆಗಳೋ ಸ್ಥಳೀಯರನ್ನು ನಾಮಾವಶೇಷಗೊಳಿಸಿ ಅವರಿಗೆ ದಾರಿಮಾಡಿಕೊಡುವುದು ಒಂದು ದೈವಿಕ ಘಟನೆ” –  ಎಂದಿದ್ದಾನೆ : “ಮೊದಲು ಅಲ್ಲಿ ಆರು ನಗರಗಳಿದ್ದವು; ಈಗ ಎರಡು ಹಳ್ಳಿಗಳು ಮಾತ್ರ ಇವೆ.”

18ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಸೇನಾನಾಯಕರು ಉದ್ದೇಶಪೂರ್ವಕವಾಗಿಯೇ ಅಮೆರಿಕನರಲ್ಲಿ ಕಾಯಿಲೆಗಳನ್ನು ಹರಡಿದರೆಂದೂ ದಾಖಲೆಗಳಿವೆ. ಆದ್ದರಿಂದ ‘ರಾಸಾಯನಿಕ ಯುದ್ಧ’ (ಬಯೊಲಾಜಿಕಲ್ ವಾರ್‍ಫೇರ್) 20ನೇ ಶತಮಾನದ ಕೊಡುಗೆಯೆಂದು ಭಾವಿಸಲು ಕಾರಣವಿಲ್ಲ!

****

ಗುಲಾಮರ ಸಾಗಾಣಿಕೆ

ಬ್ರಿಟಿಷರ ಕೈಕೆಳಗೆ ಕಾರ್ಮಿಕರಾಗಿ ದುಡಿಯಲು ಸ್ಥಳೀಯ ಅಮೆರಿಕನರು ನಿರಾಕರಿಸಿದರು. ಹೀಗೆ ಕಾರ್ಮಿಕರ ಕೊರತೆಯುಂಟಾಯಿತು. ಗಣಿಗಳಲ್ಲಿಯೂ ನೆಡುತೋಪುಗಳಲ್ಲಿಯೂ ಕೆಲಸ ಮಾಡಲು, ಕಾಡು ಕಡಿಯಲು ಯೂರೋಪಿಯನರು ಪಶ್ಚಿಮ ಮತ್ತು ಮಧ್ಯ ಆಫ್ರಿಕದಲ್ಲಿ ತರುಣರನ್ನು ಸೆರೆಹಿಡಿದು ಹಡಗುಗಳ ಮೂಲಕ ಅಮೆರಿಕಕ್ಕೆ ತಂದರು. ನೌಕಾಸಂಸ್ಥೆಗಳ ದಾಖಲೆಗಳು ತಿಳಿಸಿರುವಂತೆ ಹೀಗೆ 1500ರಿಂದ 1870ರ ಅವಧಿಯಲ್ಲಿ ಅಮೆರಿಕಕ್ಕೆ ಸಾಗಿಸಲಾದ ಆಫ್ರಿಕನರ ಸಂಖ್ಯೆ ಸುಮಾರು 1 ಕೋಟಿಯಷ್ಟು. ಆದರೆ ಅಮೆರಿಕ ತೀರವನ್ನು, ಅಟ್ಲಾಂಟಿಕ್ ದ್ವೀಪಗಳನ್ನು ತಲಪಿದವರ ಸಂಖ್ಯೆಯೇ 1 ಕೋಟಿ ಇದ್ದರೆ ಅದಕ್ಕಿಂತ ಹಲವುಪಟ್ಟು ಹೆಚ್ಚು ಜನ ಬಂಧನದಲ್ಲಿಯೂ ಯಾನದಲ್ಲಿಯೂ ಸತ್ತಿರಬೇಕೆಂಬ ಊಹೆ ನಿರಾಧಾರವಾಗದು. ಹೀಗೆ ಯೂರೋಪಿಯನರು ವಶಪಡಿಸಿಕೊಂಡ ಒಟ್ಟು ಆಫ್ರಿಕನರ ಸಂಖ್ಯೆ 5ರಿಂದ 10 ಕೋಟಿಯೇ ಆದೀತು. ಹೆಚ್ಚು ಸಂಖ್ಯೆಯ ದೃಢಕಾಯ ಯುವಕರನ್ನು ಆಫ್ರಿಕದಿಂದ ಹೊರಕ್ಕೆ ಸಾಗಿಸಿದ್ದರ ಹಾಗೂ ಯೂರೋಪಿಯನರ ಸಂಪರ್ಕದಿಂದ ಆಫ್ರಿಕದಲ್ಲಿ ಹರಡಿದ ಹೊಸ ಕಾಯಿಲೆಗಳ ಪರಿಣಾಮ ಆಫ್ರಿಕದ ಮೇಲೆ ಏನಾಯಿತೆಂದು ಊಹಿಸಬಹುದು.

1770ರ ವೇಳೆಗೆ ಬ್ರಿಟಿಷ್ ಮತ್ತು ಫ್ರೆಂಚ್ ಕೆರಿಬ್ಬಿಯನ್ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 91ರಷ್ಟು ಆಫ್ರಿಕದಿಂದ ಸೆಳೆದು ತಂದ ಗುಲಾಮರು; ಉತ್ತರ ಅಮೆರಿಕದಲ್ಲಿ ಶೇ. 22; ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣಭಾಗದಲ್ಲಿ ಶೇ. 40.

ಸಾಮಾಜಿಕವಾಗಿ ‘ಕೆಳ’ಸ್ತರದವರೆನಿಸಿದ ಯೂರೋಪಿಯನರನ್ನೂ ಗಣನೀಯ ಸಂಖ್ಯೆಯಲ್ಲಿ ಸೆರೆಹಿಡಿದು ಅಮೆರಿಕಕ್ಕೆ ಸಾಗಿಸಲಾಯಿತು. ಆದರೆ ಇವರ ಪರಿಸ್ಥಿತಿ ಆಫ್ರಿಕನರಿಗಿಂತ ಸ್ವಲ್ಪ ಮೇಲಿದ್ದೀತು. 1745ರಿಂದ 1775ರ ಅವಧಿಯಲ್ಲಿ ಇಂಗ್ಲೆಂಡಿನಿಂದ ಉತ್ತರ ಅಮೆರಿಕದ ಆ್ಯನಾಪೋಲಿಸ್ ತಲಪಿದ ‘ಬದ್ಧ ಕಾರ್ಮಿಕ’ರ (ಇನ್‍ಡೆನ್‍ಚರ್ಡ್) ಸಂಖ್ಯೆ 19,920.

ಕ್ರಿ.ಪೂ. 5ನೇ ಶತಮಾನದಷ್ಟು ಹಿಂದಿನಿಂದಲೇ ಯೂರೋಪಿನ ವಿವಿಧ ಭಾಗಗಳಲ್ಲಿ ಗುಲಾಮಗಿರಿ ಪದ್ಧತಿ ವ್ಯಾಪಕವಾಗಿ ರೂಢಿಯಲ್ಲಿತ್ತು. ಪ್ಲೇಟೋ ಕಾಲದಲ್ಲಿ (ಕ್ರಿ.ಪೂ. 371ರ ಸುಮಾರಿನಲ್ಲಿ) ಗ್ರೀಸ್‍ನ ಸ್ಪಾರ್ಟಾದಲ್ಲಿ ಹೆಲೆಟ್‍ರ (ಗುಲಾಮರ) ಸಂಖ್ಯೆ 1.4ರಿಂದ 2 ಲಕ್ಷದಷ್ಟು ಇದ್ದಿತು.

*****

ಭಾರತ ಪ್ರವೇಶ

ಅಮೆರಿಕ, ಆಫ್ರಿಕಗಳಲ್ಲಿ ಪ್ರಭಾವ ಬೆಳೆಸಿಕೊಳ್ಳತೊಡಗಿದ ಸಮಯದಲ್ಲಿಯೇ ಯೂರೋಪಿಯನರು ಏಷ್ಯ ಭೂಭಾಗದ ಕಡೆಗೂ ಕಣ್ಣುಹಾಯಿಸಿದರು. ಭಾರತದ ಸಮುದ್ರಮಾರ್ಗ ಪತ್ತೆಯಾದ 10-12 ವರ್ಷಗಳೊಳಗಾಗಿಯೆ ಯೂರೋಪಿಯನರು ಗೋವಾ ತೀರಪ್ರದೇಶವನ್ನು ವಶಪಡಿಸಿಕೊಂಡರು. 1550ರ ವೇಳೆಗೆ ಶ್ರೀಲಂಕಾ, ಮಲೇಸಿಯ, ಥಾೈಲ್ಯಾಂಡ್, ಇಂಡೊನೇಷಿಯಾ ದ್ವೀಪಗಳನ್ನೂ ತಲಪಿದರು.

16ನೇ ಶತಮಾನದ ಮಧ್ಯಭಾಗದಲ್ಲಿ ವಿಜಯನಗರ ದೊರೆಗಳಿಗೆ ಯುದ್ಧೋಪಕರಣಗಳನ್ನು ಸರಬರಾಜು ಮಾಡುತ್ತಿದ್ದವರು ಪೋರ್ಚುಗೀಸರು. 17ನೇ ಶತಮಾನದ ಆರಂಭದಲ್ಲಿ ಸಮುದ್ರಗಳ್ಳರಿಂದ ರಕ್ಷಣೆ ಬಯಸಿ ಮೊಗಲ ದೊರೆ ಜಹಾಂಗೀರ್ ಬ್ರಿಟಿಷರ ನೆರವನ್ನು ಬೇಡಿದ್ದ. ಹೀಗೆ ಪೂರ್ವ ದೇಶಗಳಲ್ಲಿ ಪಾಶ್ಚಾತ್ಯ ಪ್ರಭಾವ ಶರವೇಗದಿಂದ ಬೆಳೆಯಿತು. ಹಲವು ಈಸ್ಟ್ ಇಂಡಿಯಾ ಕಂಪೆನಿಗಳ ಮಾಧ್ಯಮದಿಂದ ಯೂರೋಪಿನ ರಾಷ್ಟ್ರಗಳು ದಕ್ಷಿಣ ಮತ್ತು ಪೂರ್ವ ಆಫ್ರಿಕ ತೀರಪ್ರದೇಶಗಳಲ್ಲಿಯೂ ಅರೇಬಿಯ, ಭಾರತಗಳಲ್ಲಿಯೂ – ಹೆಚ್ಚುಕಡಮೆ ಚೀಣಾದವರೆಗೆ – 17ನೇ ಶತಮಾನದಲ್ಲಿ ಪ್ರಭುತ್ವ ಸ್ಥಾಪಿಸತೊಡಗಿದವು. 19ನೇ ಶತಮಾನದ ಉತ್ತರಾರ್ಧದಲ್ಲಿ ಇಡೀ ಆಫ್ರಿಕವಷ್ಟನ್ನೂ ಐರೋಪ್ಯ ರಾಷ್ಟ್ರಗಳು ತಮ್ಮತಮ್ಮಲ್ಲಿ ಹಂಚಿಕೊಂಡವು. ಅಮೆರಿಕದಲ್ಲಿ ಗಳಿಸಿದ್ದ ಅನುಭವದ ಆಧಾರದ ಮೇಲೆ 18ನೇ ಶತಮಾನದ ಉತ್ತರಾರ್ಧದ ವೇಳೆಗೇ ಐರೋಪ್ಯ ಪ್ರಭಾವ ಆಸ್ಟ್ರಲೇಷಿಯಾ ಮತ್ತು ಅದರ ಸುತ್ತಲಿನ ದ್ವೀಪಗಳವರೆಗೆ ಹರಡಿತ್ತು.

ಆದರೆ ಸುಮಾರು 1700ರ ವರೆಗೆ ಯಾವ ಯೂರೋಪಿಯನ್ ರಾಷ್ಟ್ರಕ್ಕೂ ಭಾರತದ ಮಧ್ಯಭಾಗವನ್ನಾಗಲಿ, ಚೀಣಾವನ್ನಾಗಲಿ ವಶಪಡಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಭಾರತದ ಅಗಾಧ ಗಾತ್ರವೂ ಇದಕ್ಕೆ ಕಾರಣ. ಇದರಿಂದಾಗಿ “ಮೊದಲು ಭಾರತದ ಸುತ್ತಲೂ ಇರುವ ದೇಶಗಳನ್ನು ವಶಪಡಿಸಿಕೊಂಡು ಭಾರತವನ್ನು ಪ್ರತ್ಯೇಕಗೊಳಿಸೋಣ, ಆಮೇಲೆ ಅವಕಾಶ ಒದಗಿದಾಗ ಭಾರತವನ್ನು ಮುಷ್ಟಿಯಲ್ಲಿ ತೆಗೆದುಕೊಳ್ಳೋಣ” – ಎಂದು ಐರೋಪ್ಯರು ನಿರ್ಧರಿಸಿದಂತೆ ಕಾಣುತ್ತದೆ. ಭಾರತದ ಮೇಲೆ ನೇರ ಆಕ್ರಮಣ ನಡೆಯತೊಡಗಿದ್ದು 1750ರ ತರುವಾಯವೇ: ಮೊದಲು ಮದರಾಸನ್ನೂ, ಹತ್ತು ವರ್ಷಗಳನಂತರ ಬಂಗಾಳವನ್ನೂ ಹಿಡಿತಕ್ಕೆ ತೆಗೆದುಕೊಂಡರು. ಅಲ್ಲಿಂದಾಚೆಗೆ ಮೂರು ವರ್ಷ ಸತತವಾಗಿ ವಿಸ್ತರಣೋದ್ಯಮ ನಡೆಯಿತು. 1850ರ ವೇಳೆಗೆ ಹೆಚ್ಚುಕಡಮೆ ಜಗತ್ತಿನ ಮೇಲೆಲ್ಲ ಯೂರೋಪಿನ ಪ್ರಭುತ್ವ ಸ್ಥಾಪಿತವಾಗಿತ್ತು.

*******

ಅಮೆರಿಕದಲ್ಲೂ, ಆಫ್ರಿಕದಲ್ಲೂ ಯೂರೋಪಿಯನರು ನಡೆಸಿದ ಅಗಾಧ ಪ್ರಮಾಣದ ನರಹತ್ಯೆಗೆ ಹೋಲಿಸಿದರೆ ಏಷ್ಯ ಭೂಖಂಡದಲ್ಲಿ ಅವರ ದಾಂಧಲೆಯನ್ನು ಸೌಮ್ಯವೆಂದು ಪರಿಗಣಿಸಬಹುದು. ಏಕೆಂದರೆ 1498ರಲ್ಲಿ ಯೂರೋಪಿನ ವಿಸ್ತರಣೋದ್ಯಮ ಆರಂಭಗೊಂಡು ನಾಲ್ಕು ನೂರು ವರ್ಷಗಳಾದ ಮೇಲೂ ಏಷ್ಯದ ಮೂಲವಾಸಿಗಳ ಸಂತತಿಯೇ ಬಹುಸಂಖ್ಯಾಕವಾಗಿ ಮುಂದುವರಿದಿತ್ತು. ಹೀಗೆ ಏಷ್ಯದ ರಾಷ್ಟ್ರಗಳ ಮೇಲೆ ಯೂರೋಪಿನ ಬಾಹ್ಯ ಪ್ರಭಾವ ಒಂದಿಷ್ಟಿದ್ದರೂ ಅದಕ್ಕಿಂತ ಬಹುಪಾಲು ಹೆಚ್ಚಿನದು ಪ್ರಾಚ್ಯ ಮಾನಸಿಕತೆಯ ಮೇಲೂ ಸಾಮಾಜಿಕ ವ್ಯವಸ್ಥೆಗಳ ಮೇಲೂ ಉಂಟಾದ ದಟ್ಟ ಪ್ರಭಾವ.

ಭಾರತದ ಸಾಮಾಜಿಕ ವ್ಯವಸ್ಥೆ

ಉದಾಹರಣೆಗೆ: ಭಾರತದ ಒಂದು ಲಕ್ಷಣವೆಂದರೆ ಪರಿಮಿತ ವ್ಯಾಪ್ತಿಯ ಸ್ವಾಯತ್ತ ಪ್ರದೇಶಗಳು ಮತ್ತು ಜಾತಿವ್ಯವಸ್ಥೆ. ಯೂರೋಪಿನ ಬಹುಭಾಗಗಳಲ್ಲಿ ಇಂಥ ಸಾಮೂಹಿಕ ಸಮುದಾಯಗಳು ಪ್ರಚಲಿತವಿರಲಿಲ್ಲ. 1947ರಲ್ಲಿ ಭಾರತದಲ್ಲಿದ್ದ ಜನಸಮುದಾಯಗಳು ಏಳು ಲಕ್ಷ. ನೂರಾರು ವರ್ಷಗಳ ಹಿಂದೆಯೂ ಈ ಸಮುದಾಯಗಳು ಇದೇ ಆಕಾರದಲ್ಲಿ ಅಸ್ತಿತ್ವದಲ್ಲಿದ್ದವು. ಭಾರತದಲ್ಲಿದ್ದ ಪ್ರಮುಖ ಜಾತಿಗಳು ಸುಮಾರು ಒಂದು ನೂರು. ಅವಕ್ಕೆ ಬೇರೆಬೇರೆ ಭಾಗಗಳಲ್ಲಿ ಬೇರೆಬೇರೆ ಹೆಸರುಗಳು ಇದ್ದವು. ಈ ಒಂದೊಂದು ಜಾತಿಯವರೂ ತಮ್ಮ ವಂಶಾನುಗತ ಉದ್ಯಮಗಳಿಗೆ ಬದ್ಧರಾಗಿದ್ದರು. ಅಲ್ಲದೆ ಈ ಜಾತಿಗಳೂ ಉದ್ಯಮಗಳೂ ಪರಸ್ಪರ ಪೂರಕಗಳಾಗಿದ್ದವು. ಈ ಸಾಮಾಜಿಕ ವ್ಯವಸ್ಥೆಯನ್ನು ದೇಶದ ಶೇ. 85ರಷ್ಟಿದ್ದ ಹಿಂದುಗಳಲ್ಲಿ ಮಾತ್ರವಲ್ಲದೆ ಕ್ರೈಸ್ತರಲ್ಲಿ, ಮುಸ್ಲಿಮರಲ್ಲಿಯೂ ಕಾಣಬಹುದಿತ್ತು.

ಜಾತಿವ್ಯವಸ್ಥೆಯ ಈ ಸ್ವರೂಪವನ್ನು ನೆನಪಿನಲ್ಲಿ ಇರಿಸಿಕೊಂಡಾಗ ಎರಡು ಸಾವಿರ ವರ್ಷಗಳುದ್ದಕ್ಕೂ ಭಾರತೀಯ ಸಮಾಜ ಒಪ್ಪಿಕೆ, ಒಡಂಬಡಿಕೆ, ಪೂರಕತೆಗಳನ್ನು ಆಧರಿಸಿದ ಸಮಾಜ (ಸೊಸೈಟಿ ಆಫ್ ಕಾನ್‍ಸೆನ್‍ಸಸ್) ಆಗಿತ್ತೆಂದು ಮನವರಿಕೆಯಾಗುತ್ತದೆ. ವಾಸ್ತವವಾಗಿ ಈ ಒಪ್ಪಿಕೆ ಪ್ರವೃತ್ತಿ, ಪರಸ್ಪರ ಪೂರಕತೆಗಳೇ ಧರ್ಮದ ವ್ಯಕ್ತ ರೂಪಗಳು. ಭಾರತದ್ದು ಧರ್ಮಾಧಾರಿತ ಸಮಾಜವಾಗಿತ್ತೆಂಬುದು ಈ ಅರ್ಥದಲ್ಲಿ. ಹಾಗೆಂದರೆ ಎರಡು ಪ್ರದೇಶಗಳ ನಡುವೆ ಭಿನ್ನತೆ ತೋರಿದ ಸಂದರ್ಭಗಳೂ ಧರ್ಮದ ಅರ್ಥಕಲ್ಪನೆಯ ಬಗ್ಗೆ ಭೇದಗಳೂ ಇರಲಿಲ್ಲವೆಂದಲ್ಲ. ಆದರೆ ಸರ್ವಸಮಾನ ಜೀವನದೃಷ್ಟಿ ಈ ಭಿನ್ನತೆಗಳನ್ನು ನಿಯಂತ್ರಣದಲ್ಲಿಡಲು ಸಮರ್ಥವಾಗಿತ್ತು.

ಈ ಕಾರಣದಿಂದಾಗಿಯೇ ಭಾರತೀಯ ಸಮಾಜ ಪಾಶ್ಚಾತ್ಯ ಸಮಾಜದಷ್ಟು ‘ಗತಿಶೀಲ’ವಾಗಿರಲಿಲ್ಲ ಎನ್ನಬಹುದು. ಯಾವುದೇ ಹೊಸ ಆವಿಷ್ಕಾರಕ್ಕಿಂತ ಲಬ್ಧ ಸಾಮಾಜಿಕ ಸಮತೋಲವನ್ನು ಉಳಿಸಿಕೊಳ್ಳುವುದು ಭಾರತೀಯರ ದೃಷ್ಟಿಯಲ್ಲಿ ಮಹತ್ತ್ವ ಪಡೆದಿತ್ತು. ಆದ್ದರಿಂದ ರಾಜ್ಯವ್ಯವಸ್ಥೆಯ ಕೆಲಸವು ಬಹುಮಟ್ಟಿಗೆ ರೂಢಿಗತ ವೈಶಿಷ್ಟ್ಯಗಳಿಗೆ ಬಾಧೆ ಬರದಂತೆ ನೋಡಿಕೊಳ್ಳುವುದೇ ಆಗಿತ್ತು. ಭಿನ್ನ ಸಮುದಾಯಗಳ ಸಹ-ಅಸ್ತಿತ್ವ, ಸೌಹಾರ್ದ, ಸೌಮನಸ್ಯಗಳ ಪ್ರತೀಕವೇ ಪ್ರಾಚೀನ ‘ಚಕ್ರವರ್ತಿ’ ಕಲ್ಪನೆ. ರಾಷ್ಟ್ರದೊಟ್ಟಿನ ದೃಢಿಷ್ಠತೆಯನ್ನು ಪ್ರತಿನಿಧಿಸುವುದಕ್ಕಾಗಿ ಚಕ್ರವರ್ತಿ.

ಸತ್ಯಾಗ್ರಹ

ಈ ರಾಜ್ಯವ್ಯವಸ್ಥೆ ಭಾರತದಲ್ಲಿ ಬಹು ದೀರ್ಘಕಾಲದವರೆಗೆ ಸಮರ್ಪಕವಾಗಿ ಕೆಲಸ ಮಾಡಿತು. ಜಗತ್ತಿನ ರಾಷ್ಟ್ರಗಳಲ್ಲಿ ಕಡಮೆ ಅನ್ಯಾಕ್ರಮಣಕ್ಕೀಡಾದದ್ದು ಭಾರತವರುಷ. ಹನ್ನೆರಡನೇ ಶತಮಾನದವರೆಗಂತೂ ಭಾರತ ಸಂಪೂರ್ಣವಾಗಿ ಭಾರತೀಯರ ನಿಯಂತ್ರಣದಲ್ಲೇ ಇತ್ತು. ಭಾರತದವರೆಲ್ಲ ಒಂದೇ ಬುಡಕಟ್ಟಿನವರೇನಲ್ಲ. ಅಲ್ಪಪ್ರಮಾಣದಲ್ಲಿ ಆಗಿಂದಾಗ ವಿದೇಶೀಯರೂ ಭಾರತದೊಳಹೊಕ್ಕು ನೆಲೆಸಿದ್ದಾರೆ. 13ನೇ ಶತಮಾನದಿಂದ 18ನೇ ಶತಮಾನದ ಆರಂಭದವರೆಗೆ ಭಾರತದ ಕೆಲ ಭಾಗಗಳಲ್ಲಿ ಇಸ್ಲಾಮೀ ಆಳ್ವಿಕೆ ನಡೆಯಿತಾದರೂ, ಅದೂ ಭಾರತೀಯ ಸಮಾಜದ ಮೂಲವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮವನ್ನೇನೂ ಬೀರಲಿಲ್ಲ. ಆದರೆ ವಿದೇಶೀ ಆಳ್ವಿಕೆ ಭಾರತೀಯ ಮಾನಸವನ್ನು ಸ್ವಲ್ಪಮಟ್ಟಿಗೆ ದುರ್ಬಲಗೊಳಿಸಿತೆಂಬುದು ದಿಟವೇ. ಬ್ರಿಟಿಷರ ಆಗಮನದ ಆರಂಭದ ಹಂತದಲ್ಲಿ ಭಾರತೀಯರು ಪ್ರತಿರೋಧ  ತೋರಿದ್ದು ಬ್ರಿಟಿಷರ ಅಧಾರ್ಮಿಕ ವರ್ತನೆಗೆ. ಈ ದೇಶದ ಎಲ್ಲರೂ ಸ್ವೀಕರಿಸಿದ್ದ ನೀತಿವಂತಿಕೆಯನ್ನು ಆಕ್ರಮಕರು ಉಲ್ಲಂಘಿಸಿದರೆಂಬುದು ಭಾರತೀಯರ ಆಕ್ರೋಶಕ್ಕೆ ಕಾರಣವಾಯಿತು. ಆ ಆಕ್ರೋಶ ಅಸಹಕಾರದ ರೂಪದಲ್ಲಿ ಪ್ರಕಟಗೊಂಡಿತು. ಮಹಾತ್ಮಗಾಂಧಿಯವರು ಸತ್ಯಾಗ್ರಹವೆಂದು ಹೆಸರಿಸಿದ್ದು ಇದನ್ನೇ.

ಒಂದು ನಿದರ್ಶನ: 1810-11ರಲ್ಲಿ ಪ್ರಾಚೀನ ವಾರಾಣಸಿ ಮತ್ತು ಉತ್ತರಪ್ರದೇಶ, ಬಿಹಾರ ಪ್ರಾಂತಗಳ ಇತರ ಊರುಗಳ ಮನೆಗಳ ಮೇಲೆ ಬ್ರಿಟಿಷರು ತೆರಿಗೆ ಹೇರಿದರು. ಇದು ಭಾರತೀಯರಿಗೆ ಅಪೂರ್ವ ಅನುಭವ. ತೆರಿಗೆಯನ್ನು ವಾರಾಣಸಿ ಪ್ರದೇಶದ ರೈತರು, ಕುಶಲಕರ್ಮಿಗಳು, ಲೋಹಕರ್ಮಿಗಳು ಮತ್ತಿತರರು ವಿರೋಧಿಸಿದರು. ಹಲವಾರು ದಿನಗಳವರೆಗೆ ವಾರಾಣಸಿಯಲ್ಲಿ ಇಪ್ಪತ್ತುಸಾವಿರ ಮಂದಿ ಧರಣಿ ನಡೆಸಿದರು. ಊರಿನ ಪಕ್ಕದ ಮೈದಾನದಲ್ಲಿ ಎರಡು ಲಕ್ಷದಷ್ಟು ಅಧಿಕ ಜನಸ್ತೋಮ ಸಭೆ ಸೇರಿತ್ತೆಂದು ದಾಖಲೆಗಳಿವೆ. ಶವಸಂಸ್ಕಾರ ಮಾಡುವುದಕ್ಕೂ ಜನ ನಿರಾಕರಿಸಿದರೆಂದೂ ದಿನಗಳಗಟ್ಟಲೆ ಹೆಣಗಳನ್ನು ಸಂಸ್ಕಾರ ಮಾಡದೆ ಬಿಟ್ಟಿದ್ದರೆಂದೂ ವರದಿಯಿದೆ.

ಭಾರತದ ಬೇರೆ ಪ್ರದೇಶಗಳಲ್ಲೂ ಇಂಥ ಪ್ರತಿಭಟನೆಗಳು ನಡೆದವು. 1843ರಷ್ಟು ಈಚೆಗೂ ಉಪ್ಪಿನ ಮೇಲೆ ಬ್ರಿಟಿಷರು ತೆರಿಗೆ ವಿಧಿಸಿದುದನ್ನು ಸೂರತ್ ನಗರದ ಜನ ಪ್ರತಿಭಟಿಸಿದರು.

17-18ನೇ ಶತಮಾನದ ದಾಖಲೆಗಳಂತೆ ಜನ ಆಕ್ರಮಕರಿಗೆ ಹೆದರಲಿಲ್ಲ. ಪ್ರತಿಯಾಗಿ ಜನರಿಂದ ಆಕ್ರಮಕರೇ ಗಾಬರಿಗೊಂಡಿದ್ದರು- ಎಂದು ದಾಖಲೆಗಳಿವೆ.

ಆಳ್ವಿಕೆ ನಡೆಸುವವನು ಧರ್ಮಕ್ಕೆ ವಿರುದ್ಧವಾಗಿ ನಡೆದರೆ  ಪದತ್ಯಾಗ ಮಾಡಬೇಕಾಗುತ್ತಿತ್ತು. ಅಂಥ ವಿರಳ ಸಂದರ್ಭಗಳಲ್ಲಿಯೂ ಪ್ರಭು-ಪ್ರಜೆಗಳ ನಡುವೆ ಸೌಹಾರ್ದವೇ ಇರುತ್ತಿತ್ತು. ಯಾವ ಪ್ರಜೆಯೂ ಅಧಿಕಾರಿಯನ್ನೋ, ರಾಜನನ್ನೋ ಕಾಣಲು ಹೋದಾಗ ಬರಿಗೈಯಲ್ಲಿ ಹೋಗುತ್ತಿರಲಿಲ್ಲ. ಅಂತೆಯೇ ಯಾವ ರಾಜನೂ ಬಂದವನನ್ನು ಬರಿಗೈಯಲ್ಲಿ ಕಳಿಸುತ್ತಿರಲಿಲ್ಲ. ಅಷ್ಟೇ ಏಕೆ, ನ್ಯಾಯವಿಚಾರಣೆಯ ಸಂದರ್ಭಗಳಲ್ಲಿಯೂ ಕಕ್ಷಿದಾರರಿಗೆ ನ್ಯಾಯಾಧೀಶ ತಾಂಬೂಲ ಕೊಟ್ಟೇ ಕಳಿಸುವುದು ವಿಹಿತ ಮರ್ಯಾದೆ ಎನಿಸಿತ್ತು.

******

ಆರ್ಥಿಕ ಸಂಪನ್ನತೆ

ಭಾರತ ಹೆಚ್ಚು ‘ಗತಿಶೀಲ’ವಾಗಿರಲಿಲ್ಲ ಎಂಬ ಮಾತನ್ನು ಮೇಲೆ ಹೇಳಿದೆವು. ಇದರ ತಾತ್ಪರ್ಯ ಇಲ್ಲಿ ಭೌತ ಸಂಪತ್ತಿನ, ವಿಜ್ಞಾನ-ತಂತ್ರಜ್ಞಾನಗಳ ಕೊರತೆ ಇತ್ತೆಂದಲ್ಲ. ಭಾರತೀಯರ ಚಿಂತನೆಯಲ್ಲಿ ದೃಢತೆಗೂ ಸುವ್ಯವಸ್ಥೆಗೂ ಮಹತ್ತ್ವವಿತ್ತೆಂಬ ಮುಖ್ಯ ಸಂಗತಿಗೆ ಗಮನ ಸೆಳೆಯುವುದು ನಮ್ಮ ಆಶಯ.

ಇಂದಿಗೂ ಉಳಿದಿರುವ ಅಸಂಖ್ಯ ದೇವಾಲಯಗಳಲ್ಲಿ ಕೆಲವು ಕ್ರಿ.ಶ. 6ನೇ ಶತಮಾನದಷ್ಟು ಹಳೆಯವು. 1800ರ ವೇಳೆಗೂ ಭಾರತದಲ್ಲಿದ್ದುದು ಸ್ವಾವಲಂಬಿ ಸಮೃದ್ಧ ಸಮಾಜವೆನ್ನಲು ವಿಪುಲ ಆಧಾರಗಳಿವೆ. ದೇಶದ ಹತ್ತಿರಹತ್ತಿರ 400 ಜಿಲ್ಲೆಗಳಲ್ಲಿಯೂ ನೇಯ್ಗೆ, ಬಟ್ಟೆ ತಯಾರಿಕೆ ಇತ್ತು. ದಕ್ಷಿಣಭಾರತದ ಒಂದೊಂದು ಜಿಲ್ಲೆಯಲ್ಲೂ 1810ರ ಸುಮಾರಿನಲ್ಲಿ 10,000ದಿಂದ 20,000ದಷ್ಟು ಕೈಮಗ್ಗಗಳು ಇದ್ದವೆಂದು ದಾಖಲೆಯಿದೆ. ಇಡೀ ಭಾರತದಲ್ಲಿ 10,000ಕ್ಕೂ ಹೆಚ್ಚು ಕಬ್ಬಿಣ, ಉಕ್ಕು ತಯಾರಿಸುವ ಕುಲುಮೆಗಳು ಇದ್ದವು. 19ನೇ ಶತಮಾನದ ಆರಂಭದ ದಶಕಗಳಲ್ಲಿ ಬ್ರಿಟಿಷರು ಶಸ್ತ್ರಚಿಕಿತ್ಸೆಯ ಉಪಕರಣಗಳನ್ನು ತಯಾರಿಸುವುದಕ್ಕೂ ಭಾರತದ ಉಕ್ಕನ್ನೇ ಬಳಸುತ್ತಿದ್ದರು. ವರ್ಷದಲ್ಲಿ ಸುಮಾರು 40 ವಾರಗಳ ಕಾಲ ಕೆಲಸ ಮಾಡುತ್ತಿದ್ದ ಈ ಒಂದೊಂದು ಕುಲುಮೆ ವರ್ಷಕ್ಕೆ ಸುಮಾರು 20 ಟನ್ ಉಕ್ಕನ್ನು ಉತ್ಪಾದಿಸುತ್ತಿತ್ತು.

ಅಕ್ಕಸಾಲಿಗಳು, ಗಣಿಗಳಿಂದ ಅದುರು ತೆಗೆಯುವವರು, ಶಿಲ್ಪಿಗಳು, ಮನೆ ಕಟ್ಟುವವರು, ಉಪ್ಪು ತಯಾರಿಸುವವರು, ಗಾಣಿಗರು (ಎಣ್ಣೆ ತೆಗೆಯುವವರು) – ಹೀಗೆ ವಿವಿಧ ಸಮಾಜೋಪಯೋಗಿ ತಂತ್ರಜ್ಞರ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ. 15-25ರಷ್ಟು ಇದ್ದಿತು – 1800ರಲ್ಲಿ.

ಕೈಮಗ್ಗಗಳು ಎಲ್ಲೆಡೆ ಇದ್ದವು. ಒಂದು ಮಗ್ಗ 8 ತಾಸು ಕೆಲಸಮಾಡಲು ಬೇಕಾದಷ್ಟು ದಾರ ಒದಗಿಸಲು ನೂಲು ತೆಗೆಯುವವರು 25 ತಾಸು ಕೆಲಸ ಮಾಡಬೇಕಾಗಿತ್ತು. ನೇಯ್ಗೆ ಮನೆತನಗಳು ಒಟ್ಟು ಜನಸಂಖ್ಯೆಯ ಶೇ. 5ರಷ್ಟು ಇದ್ದುದರಿಂದ ಬಟ್ಟೆ ಉದ್ಯಮವೊಂದೇ ಎಷ್ಟು ಅಧಿಕಸಂಖ್ಯೆಯವರಿಗೆ ಉದ್ಯೋಗ ದೊರಕಿಸಿತ್ತೆಂದು ಊಹಿಸಬಹುದು.

ತಂತ್ರಜ್ಞಾನ

ವೈದ್ಯಶಾಸ್ತ್ರ ಭಾರತದಲ್ಲಿ ಮೇಲ್ಮಟ್ಟ ತಲಪಿತ್ತು. 1800ಕ್ಕೆ ಮುಂಚೆಯೇ ಅಂಗಜೋಡಣೆ (ಪ್ಲಾಸ್ಟಿಕ್ ಸರ್ಜರಿ), ಕಣ್ಣಿನ ಪೊರೆ ತೆಗೆಯುವುದು ಮೊದಲಾದವೂ ಭಾರತದ ವಿವಿಧೆಡೆಗಳಲ್ಲಿ ರೂಢಿಯಲ್ಲಿದ್ದವು. ಭಾರತದಲ್ಲಿ ರೂಢಿಯಲ್ಲಿದ್ದ ತಂತ್ರಗಳನ್ನು ನೋಡಿದ ಮೇಲೆಯೇ 1790ರಿಂದಾಚೆಗೆ ಅವನ್ನು ಇಂಗ್ಲೆಂಡಿನಲ್ಲಿ ಅಳವಡಿಸಿ ಬೆಳೆಸತೊಡಗಿದೆವೆಂದು ಅಲ್ಲಿನ ವಿಜ್ಞಾನಿಗಳ ಹೇಳಿಕೆಯೇ ಇದೆ. ಸಿಡುಬಿನ ವಿರುದ್ಧ ಚುಚ್ಚುಮದ್ದು ಹಾಕುವ ತಂತ್ರಗಳೂ ಭಾರತದಲ್ಲಿ ಇದ್ದವೆಂದು 18ನೇ ಶತಮಾನದ ಮಧ್ಯಭಾಗದಲ್ಲಿ ಭಾರತಕ್ಕೆ ಭೇಟಿ ಕೊಟ್ಟ ಆಂಗ್ಲ ವೈದ್ಯರು ವರ್ಣಿಸಿದ್ದಾರೆ.

ಇಂಥ ಮಾಹಿತಿಗಳನ್ನು ಇಂಗ್ಲೆಂಡಿಗೆ ಒದಗಿಸಿದಾಗಲೆಲ್ಲ ಆಂಗ್ಲ ಪ್ರವಾಸಿಗರೂ, ತಜ್ಞರೂ ಇಂಗ್ಲೆಂಡಿನಲ್ಲಿಯೂ ಇವನ್ನು ಅಳವಡಿಸಿಕೊಳ್ಳುವುದು ಲಾಭಕಾರಿ ಎಂದೇ ಹೇಳಿರುವುದನ್ನು ಗಮನಿಸಬಹುದು. 1770ರ ಸುಮಾರಿನಲ್ಲಿ ಕೃತಕ ವಿಧಾನದಿಂದ ಐಸ್ (ಬರ್ಫ್) ತಯಾರಿಸುವ ವಿಧಾನವು ಭಾರತದಲ್ಲಿ ರೂಢಿಯಲ್ಲಿದ್ದುದನ್ನು ಬಂಗಾಳದ ಆಂಗ್ಲ ಕಮಾಂಡರನೊಬ್ಬ ಬ್ರಿಟಿಷ್ ರಾಯಲ್ ಸೊಸೈಟಿಗೆ ತಿಳಿಸಿದ. ಭಾರತದಲ್ಲಿ ಬಳಕೆಯಲ್ಲಿದ್ದ ವೈವಿಧ್ಯಮಯ ಕೃಷಿ ಉಪಕರಣಗಳ ಬಗೆಗೂ ಭಾರತದಲ್ಲಿ ನಿಯುಕ್ತರಾಗಿದ್ದ ಆಂಗ್ಲಾಧಿಕಾರಿಗಳು 1795ರಲ್ಲಿ ಲಂಡನ್ನಿನ ಕೃಷಿ ಮಂಡಳಿಗೆ ತಿಳಿಸಿದರು; ಆ ನಮೂನೆಗಳನ್ನು ಕಳಿಸಿದರು. 1800ರ ಸುಮಾರಿನಲ್ಲಿ ಇಂಗ್ಲೆಂಡಿನಲ್ಲಿ ಸಾರ್ವಜನಿಕ ಶಿಕ್ಷಣ ಪದ್ಧತಿಯನ್ನು ಆರಂಭಿಸುವ ನಿರ್ಧಾರವಾದಾಗ ಭಾರತದಲ್ಲಿ ರೂಢಿಯಲ್ಲಿದ್ದ ಶಿಕ್ಷಣಕ್ರಮಗಳ ಬಗೆಗೆ 17-18ನೇ ಶತಮಾನದಲ್ಲಿ ಯೂರೋಪಿಯನ್ ಪ್ರವಾಸಿಗರು ನೀಡಿದ್ದ ವಿವರಗಳನ್ನು ಇಂಗ್ಲೆಂಡಿನಲ್ಲಿ ಅಭ್ಯಾಸ ಮಾಡಲಾಯಿತು.

18ನೇ ಶತಮಾನದ ಮಧ್ಯಭಾಗದಲ್ಲಿ ದಕ್ಷಿಣಭಾರತದಲ್ಲಿ ಜೀವನ ಎಷ್ಟು ಸಮೃದ್ಧವೂ ಸುವ್ಯವಸ್ಥಿತವೂ ಆಗಿತ್ತೆಂಬುದನ್ನು 1767-74ರಲ್ಲಿ ತಮಿಳುನಾಡಿನ ಚೆಂಗಲ್‍ಪಟ್ಟು ಜಿಲ್ಲೆಯಲ್ಲಿ ಬ್ರಿಟಿಷರೇ ನಡೆಸಿದ ವಿವರವಾದ ಸಮೀಕ್ಷೆ ಹೊರಗೆಡಹಿದೆ.

ಆಂಗ್ಲ ಧೋರಣೆ

ಭಾರತದಲ್ಲಿ ನೆಲೆಯೂರಿದ ಮೇಲೆ ಆಂಗ್ಲರು ಭಾರತದ ಸಾಮಾಜಿಕ ವ್ಯವಸ್ಥೆಗಳನ್ನೆಲ್ಲ ಒಂದೊಂದಾಗಿ ಹದಗೆಡಿಸತೊಡಗಿದರು; ಜೊತೆಗೆ ಇಲ್ಲಿಯ ಸಂಪನ್ಮೂಲಗಳನ್ನೂ ಕೊಳ್ಳೆಹೊಡೆಯತೊಡಗಿದರು. ಉದ್ಯಮವಿಸ್ತರಣೆಗಾಗಿ ರೈಲುಮಾರ್ಗಗಳನ್ನು ನಿರ್ಮಿಸತೊಡಗಿದ ಮೇಲೆ ಅರಣ್ಯನಾಶಕ್ಕೆ ಮತ್ತಷ್ಟು ವೇಗ ಬಂದಿತು.

ಭಾರತದ ಸಾಮಾಜಿಕ ವ್ಯವಸ್ಥೆ ಹಿಂದಿನಂತೆ ಸ್ವಾವಲಂಬಿಯಾಗಿ ಮುಂದುವರಿದರೆ ಆಂಗ್ಲ ಪ್ರಭುತ್ವದ ಪ್ರಭಾವ ಬೆಳೆಯಲಾಗದೆಂದು ಮೊದಮೊದಲೇ ಅವರಿಗೆ ಮನವರಿಕೆಯಾಗಿತ್ತು. ಆದ್ದರಿಂದ ನೇರವಾಗಿ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವುದರ ಜೊತೆಗೆ ಆಂಗ್ಲರು ರೈತವರ್ಗದ ಮೇಲೆ ಅತ್ಯಧಿಕ ತೆರಿಗೆಯನ್ನು ವಿಧಿಸಿದರು. ರೈತನ ದೈನಂದಿನ ಜೀವಿಕೆಗೆ ಅನಿವಾರ್ಯವಾದಷ್ಟನ್ನು ಮಾತ್ರ ಅವನಲ್ಲಿ ಉಳಿಸಬೇಕು – ಎಂಬುದು ಆಂಗ್ಲರ ಸೂತ್ರವಾಯಿತು.

ಇದರ ಒಂದು ಪರಿಣಾಮವೆಂದರೆ 1840ರ ವೇಳೆಗೆ ಭಾರತದಲ್ಲಿ ಹಿಂದಿನಿಂದ ರೂಢವಾಗಿದ್ದ ನೀರಾವರಿ ವ್ಯವಸ್ಥೆಗಳು, ಕೆರೆಕುಂಟೆಗಳು, ಸಾರ್ವಜನಿಕ ಜೀವನದ ಅವಿಭಾಜ್ಯ ಅಂಗಗಳಾಗಿದ್ದ ಮಠ, ಛತ್ರ, ದೇವಾಲಯಗಳು ಎಲ್ಲವೂ ಶಿಥಿಲಗೊಂಡಿದ್ದವು. 1880ರ ವೇಳೆಗೆ ಸಾರ್ವಜನಿಕ ಶಿಕ್ಷಣದ ಮಟ್ಟವೂ ಅಲ್ಲಿಗೆ 60 ವರ್ಷ ಹಿಂದಿದ್ದುದರ ಅರ್ಧದಷ್ಟು ಪ್ರಮಾಣಕ್ಕೆ ಇಳಿದಿತ್ತು.

********

ಭಾರತೀಯರಲ್ಲಿ ಕ್ರಮೇಣ ಕೀಳರಿಮೆ ಮೂಡಿದುದರ ಹಿನ್ನೆಲೆಯನ್ನು ಮೇಲೆ ಸಂಗ್ರಹವಾಗಿ ಪ್ರಸ್ತಾವಿಸಿದೆವು.

ಇದರಿಂದುಂಟಾದ ಆತ್ಮವಿಸ್ಮೃತಿಗೆ ಪಂ. ಜವಾಹರಲಾಲ್ ನೆಹರು ಒಂದು ನಿದರ್ಶನ. ನೂರೈವತ್ತು ವರ್ಷಗಳ ವಿಕೃತಿಗಳಿಗೆ ಗಮನಸೆಳೆದ ಜನರ ಸ್ವಾಭಿಮಾನವನ್ನು ಮತ್ತೆ ಜಾಗೃತಗೊಳಿಸಿದವರು ಮಹಾತ್ಮಗಾಂಧಿ. ಭಾರತದೇಶ ದಾಸ್ಯದಿಂದ ಮುಕ್ತಗೊಂಡರೆ ಉಳಿದ ಹಲವಾರು ವಸಾಹತು ರಾಷ್ಟ್ರಗಳಿಗೂ ಅದು ಮೇಲ್ಪಂಕ್ತಿಯಾಗುತ್ತದೆ – ಎಂಬ ಗಾಂಧಿಯವರ ನಿರೀಕ್ಷೆಯೂ ಹುಸಿಯಾಗಲಿಲ್ಲ. ಆದರೆ ಸ್ವಾತಂತ್ರ್ಯೋತ್ತರ ಭಾರತದ ನೇತೃತ್ವ ವಹಿಸಿದ ಪಂ. ನೆಹರು ಗಾಂಧಿಯವರ ಚಿಂತನೆಯಿಂದ ಪೂರ್ಣ ವಿಮುಖರಾಗಿದ್ದವರು; ಗಾಂಧಿಯವರ ಗ್ರಾಮಸ್ವರಾಜ್ಯ ಮೊದಲಾದ ಕಲ್ಪನೆಗಳನ್ನು ಅವರು ನಿರಾಕರಿಸಿದರು. ಪಂ. ನೆಹರು ಅನುಸರಿಸಿದ ಪಾಶ್ಚಾತ್ಯ ರೀತಿಯ ಔದ್ಯೋಗೀಕರಣ ಧೋರಣೆಯಿಂದಾಗಿ ಆರ್ಥಿಕ-ಮಾನಸಿಕ ಗುಲಾಮತನ ಮುಂದುವರಿಯಿತು.

ಪಾಶ್ಚಾತ್ಯರ ಜಗದ್‍ದೃಷ್ಟಿಯೇ ಭಾರತೀಯ ದೃಷ್ಟಿಯಿಂದ ಪೂರ್ಣ ಭಿನ್ನವಾದ್ದು. ಪಾಶ್ಚಾತ್ಯ ವಿಜ್ಞಾನಗಳೂ ಅಲ್ಲಿಯ ರಾಷ್ಟ್ರಗಳು ಎಲ್ಲೆಡೆ ನಡೆಸಿದ್ದ ಕೊಳ್ಳೆ ದರೋಡೆ ಹತ್ಯಾಕಾಂಡಗಳ ವಾರಸಿಕೆಯಿಂದ ಮುಕ್ತವಾಗಿಲ್ಲ. ಭಾರತೀಯ ಜಗದ್‍ದೃಷ್ಟಿಯಾದರೋ ಸರ್ವಸಮಾನತೆ, ಪ್ರಕೃತಿಯ ಬಗೆಗೆ ಗೌರವಬುದ್ಧಿ ಮೊದಲಾದ ಆಧಾರ ನಂಬಿಕೆಗಳಿಂದ ಉದಿಸಿದ್ದು.

“ಮೂಢನಂಬಿಕೆಗಳ ಪಳೆಯುಳಿಕೆಗಳ ಆಗರಗಳಾದ ಪ್ರಾಚೀನ ಸಂಸ್ಕೃತಿಗಳನ್ನು ಗುರುತಿಸಿ ವಿನಾಶಮಾಡುವುದಕ್ಕೆ ಆದ್ಯತೆ ಸಲ್ಲಬೇಕು” – ಎಂದೇ 19ನೇ ಶತಮಾನದ ಅಂತ್ಯದಲ್ಲಿ ಇಂದಿನ ಮಾನವಶಾಸ್ತ್ರದ (ಆ್ಯಂಥ್ರೊಪಾಲಜಿ) ಜನಕನೆನಿಸಿದ ಎಡ್ವರ್ಡ್ ಬರ್ನೆಟ್ ಟೈಲರ್ ಹೇಳಿದ್ದ.

ಭಿನ್ನ ಜಗದ್ದೃಷ್ಟಿಗಳು

ಗೋಷ್ವಾರೆಯಾಗಿ ನೋಡಿದಾಗ ಭಾರತ, ಆಗ್ನೇಯ ಏಷ್ಯ, ಆಫ್ರಿಕ, ದಕ್ಷಿಣ ಅಮೆರಿಕ ಮುಂತಾದೆಡೆಗಳ ಸಮಾಜಗಳೆಲ್ಲ ಶತಮಾನಗಳುದ್ದಕ್ಕೂ ಆಂತರಿಕ ಸಮತೋಲವನ್ನೂ ಪ್ರಕೃತಿ ಪರಿಸರಾನುಗುಣ ಜೀವನಕ್ರಮವನ್ನೂ ರೂಢಿಸಿಕೊಂಡಿದ್ದುದು ಕಂಡುಬರುತ್ತದೆ. ಈ ಸಮಾಜಗಳದು ನಿಧಾನಗತಿ ಎನಿಸಿದರೂ ಅದು ನಿಂತ ನೀರಾಗಿರಲಿಲ್ಲ. ತಮ್ಮ ಆವಶ್ಯಕತೆಗಳ ಪೂರೈಕೆಗಾಗಿ ಅವು ಸಾಮ್ರಾಜ್ಯ ವಿಸ್ತರಣೆಗೆ ತೊಡಗಬೇಕಾದ ಪ್ರಸಂಗ ಬರಲಿಲ್ಲ. ಇದಕ್ಕೆ ಹೋಲಿಸಿದರೆ ಐರೋಪ್ಯ ರಾಷ್ಟ್ರಗಳು ಶತಮಾನಗಳುದ್ದಕ್ಕೂ ಒಂದು ಅಸಮತೋಲದಿಂದ ಇನ್ನೊಂದು ಅಸಮತೋಲಕ್ಕೆ ಕ್ರಮಿಸುತ್ತ ಅನ್ಯರ ಶೋಷಣೆಯನ್ನೆ ಜೀವನಸೂತ್ರವಾಗಿಸಿಕೊಂಡದ್ದು ಕಂಡುಬರುತ್ತದೆ. ಯೂರೋಪಿಯನರ ಆಂಶಿಕ ಜೀವನದೃಷ್ಟಿಯೇ ಅವರ ಶೋಷಕಪ್ರವೃತ್ತಿಯ ಮೂಲ.

1492ರಿಂದೀಚಿನ 500 ವರ್ಷಗಳ ಅನುಭವ ಈಗ ಮಾನವತೆಯ ಕಣ್ಣಮುಂದಿದೆ. ಈ ಅನುಭವದ ಆಧಾರದ ಮೇಲೆ ಹೊಸದೊಂದು ಜೀವನದೃಷ್ಟಿ ಮೂಡಬೇಕಾಗಿದೆ. ಪಾಶ್ಚಾತ್ಯ ಸಮಾಜ ತನ್ನ ಪಾಪಗಳಿಗಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಎಷ್ಟು ಅವಶ್ಯವೋ ಅದನ್ನು ಅನುಕರಿಸಲು ಯತ್ನಿಸಿರುವ ಇತರ ಸಮಾಜಗಳು ತಮ್ಮ ಮರೆತುಹೋದ ಸಮಗ್ರದೃಷ್ಟಿಯನ್ನೂ ಮಾನಸಿಕ ಔನ್ನತ್ಯವನ್ನೂ ಮರಳಿ ಪಡೆಯುವುದೂ ಅಷ್ಟೇ ಅವಶ್ಯವಿದೆ.

ಮೂಲನಿವಾಸಿಗಳ ಮೇಲ್ಪಂಕ್ತಿ

ಅಮೆರಿಕದ ಮೂಲನಿವಾಸಿ ಬುಡಕಟ್ಟುಗಳ ರಾಜಕೀಯ-ಸಾಮಾಜಿಕ ವ್ಯವಸ್ಥೆಗಳೂ ಯೂರೋಪಿಯನರಿಗೆ ಅಚ್ಚರಿ ತಂದವು. ಯೂರೋಪಿನಲ್ಲಿ ರೂಢವಾಗಿದ್ದವು ರಾಜಸ್ವಗಳು, ಸಾಮಾಜಿಕ ಸ್ತರಭೇದಗಳು. ಆದರೆ ಅಮೆರಿಕದ ಬುಡಕಟ್ಟುಗಳಲ್ಲಿ ಸಾಮೂಹಿಕ ಪ್ರಭುತ್ವ ಇತ್ತು; ಐಶ್ವರ್ಯಕ್ಕಿಂತ ಸತ್ಕಾರ್ಯಗಳಿಗೆ ಹೆಚ್ಚಿನ ಗೌರವವಿತ್ತು. ಸಂಪ್ರದಾಯಾಚರಣೆ, ಪರಂಪರೆ, ಜಾತಿಬಾಂಧವ್ಯಗಳಿಗೆ ಮಹತ್ತ್ವವಿತ್ತು.

ಮೂಲವಾಸಿಗಳ ಸಾಮಾಜಿಕ ವ್ಯವಸ್ಥೆಗಳೇ ಅಮೆರಿಕ ಸಂಯುಕ್ತ ಸಂಸ್ಥಾನಗಳ ಮತ್ತು ಸಂವಿಧಾನದ ಆದ್ಯ ಪ್ರವರ್ತಕರಾದ ಟಾಂ ಪೇಯ್ನ್, ಬೆನ್ ಫ್ರಾಂಕ್ಲಿನ್ ಮುಂತಾದವರಿಗೆ ಮಾರ್ಗದರ್ಶಕವಾದವು.

ಇನ್ಕಾ ರೈತರ ಕೃಷಿ

ಅಮೆರಿಕದ ಇಂಡಿಯನರು ತಲತಲಾಂತರದಿಂದ ವಿವಿಧ ಬೆಳೆಗಳ ಮಿಶ್ರಣವನ್ನು ಬೆಳೆಯುತ್ತಿದ್ದರು. ಅಲ್ಲದೆ ಪೆಸಿಫಿಕ್ ತೀರದಲ್ಲಿ ಸಮುದ್ರಗಾಮಿ ಪಕ್ಷಿಗಳು ಹಾಕುತ್ತಿದ್ದ ಹಿಕ್ಕೆಯನ್ನು ಪೆರುವಿನ ಇನ್ಕಾ ರೈತರು ಗೊಬ್ಬರವಾಗಿ ಬಳಸುತ್ತಿದ್ದರು. ಇದರಿಂದ ಭೂಮಿ ಎಷ್ಟು ಫಲವತ್ತಾಗುತ್ತದೆಂಬುದನ್ನು ಮನಗಂಡಿದ್ದ ಅವರು ಪಕ್ಷಿಗಳ ಬೇಟೆಯನ್ನು ಕಾನೂನಿನಂತೆ ನಿಷೇಧಿಸಿದ್ದರು.

19ನೇ ಶತಮಾನದಲ್ಲಿ ಯೂರೋಪಿಯನರು ಲಕ್ಷಾಂತರ ಟನ್ ಹಿಕ್ಕೆಯನ್ನು (Guano) ಯೂರೋಪಿಗೆ ಒಯ್ದು ಅಲ್ಲಿಯ ಜಮೀನಿನ ಸಾರವತ್ತತೆಯನ್ನು ಹೆಚ್ಚಿಸಿಕೊಂಡರು. ಹೀಗೆ 1840-1880ರ ಅವಧಿಯಲ್ಲಿ ಪೆರುವಿನಿಂದ ಯೂರೋಪಿಗೆ ಸಾಗಿಸಲಾದ ಹಿಕ್ಕೆ 1.1 ಕೋಟಿ ಟನ್.

ಈ ಹಿಕ್ಕೆಯ ಆಯಾತವೇ ಯೂರೋಪಿನಲ್ಲಿ ರಸಗೊಬ್ಬರ ವಿಜ್ಞಾನದ ಆವಿಷ್ಕರಣಕ್ಕೆ ದಾರಿ ಮಾಡಿತು.

ಅಮೆರಿಕದ 500 ವರ್ಷ

1492ರ ಅಕ್ಟೋಬರ್ 12ರಂದು ಬಹಾಮಾಸ್ ದ್ವೀಪಗಳ ಪೈಕಿ ಒಂದರಲ್ಲಿ ಇಟಲಿ-ಮೂಲದ ನಾವಿಕ ಕ್ರಿಸ್ಟೊಫರ್ ಕೊಲಂಬಸ್ ಕಾಲಿರಿಸಿದಾಗ ಅಮೆರಿಕ ‘ಕಂಡುಹಿಡಿಯಲ್ಪಟ್ಟಿತು’.

ಅಮೆರಿಕದ ಸಾಂಪ್ರದಾಯಿಕರು ಆ ಘಟನೆಯ 500ನೇ ವಾರ್ಷಿಕವನ್ನು ಆಚರಿಸಹೊರಟಿದ್ದಾರೆ. ಆದರೆ ವಾಸ್ತವವಾಗಿ ಕೊಲಂಬಸನ ಯಾತ್ರೆಯಿಂದ ಉಪಕ್ರಮವಾದದ್ದು ಆಧುನಿಕ ಇತಿಹಾಸದ ಅತಿ ಬೃಹತ್‍ಪ್ರಮಾಣದ ಡಕಾಯಿತಿ, ನರಹತ್ಯೆ, ಸುಲಿಗೆ, ಪ್ರಕೃತಿವಿಧ್ವಂಸ. ಈ ಹಿನ್ನೆಲೆಯಲ್ಲಿ ‘ಕೊಲಂಬಸ್ – 500’ ಆಚರಣೆಯನ್ನು ವಿರೋಧಿಸುವುದಕ್ಕಾಗಿಯೇ ಅಮೆರಿಕ, ಕೆನಡಾಗಳಲ್ಲಿ ಹತ್ತಾರು ಜನಪರ ಸಂಘಟನೆಗಳು ತಲೆಯೆತ್ತಿವೆ; ಮೂಲನಿವಾಸಿಗಳ ಹಕ್ಕುಗಳನ್ನು ಸ್ಥಾಪಿಸಲು ಯತ್ನಿಸುತ್ತಿವೆ.

ಮನುಷ್ಯರೂ ಮಾರಾಟದ ಸರಕು!

ಕೊಲಂಬಸನು ಎರಡನೇ ಬಾರಿಗೆ ಅಮೆರಿಕಕ್ಕೆ ಹೋಗಿ ಸ್ಪೇಯ್ನ್‍ಗೆ ಮರಳುವಾಗ ಒಂದು ಹಡಗಿನಲ್ಲಿ 500 ಮಂದಿ ‘ಟೈನೋ’ ಬುಡಕಟ್ಟಿನವರನ್ನು ಬಂಧಿಸಿ ತಂದು ಸ್ಪೇಯ್ನ್ ರಾಣಿಗೆ ಒಪ್ಪಿಸಿದ: “ಇವರನ್ನು ಇಲ್ಲಿಯ ವರ್ತಕರಿಗೆ ಮಾರಿ ಅದಕ್ಕೆ ಬದಲಾಗಿ ದನ-ಕುರಿಗಳನ್ನು ಪಡೆಯಬಹುದು.”

ಪೋಪ್ ಆದೇಶ

ಕೊಲಂಬಸನು ಅಮೆರಿಕಕ್ಕೆ ಕಾಲಿರಿಸಿದ ಹಲವೇ ತಿಂಗಳೊಳಗೆ ಆರನೆ ಪೋಪ್ ಅಲೆಕ್ಸಾಂಡರ್ ಹೊರಡಿಸಿದ ನಿರ್ದೇಶ ಇದು:

“ಜಗತ್ತಿನ ಪ್ರತಿಯೊಂದು ಭಾಗದಲ್ಲಿಯೂ ಕ್ಯಾಥೊಲಿಕ್ ಪಂಥವನ್ನೂ ಕ್ರೈಸ್ತಧರ್ಮವನ್ನೂ ವಿಸ್ತರಿಸಬೇಕು; ಎಲ್ಲರಿಗೂ ಮುಕ್ತಿಮಾರ್ಗ ತೋರಿಸಬೇಕು; ‘ಅನಾಗರಿಕ’ ರಾಷ್ಟ್ರಗಳನ್ನು ವಶಪಡಿಸಿಕೊಂಡು ನಮ್ಮ ಮತಕ್ಕೆ ಕರೆತರಬೇಕು.”

ವಿಸ್ತಾರಕರ ತಂತ್ರ: ಒಂದು ನಮೂನೆ

ಕೊಲಂಬಸನ ತರುವಾಯ ಹೊರಟ ವಿಸ್ತಾರಕರು ಅನುಸರಿಸಿದ ತಂತ್ರಗಳಿಗೆ ಒಂದು ಉದಾಹರಣೆ:

1519ರಲ್ಲಿ ಹೆರ್ನಾಂಡೊ ಕೋರ್ಟೆಸನು ಮಾಂಟೆಜೂಮಾದ ಅಜ್‍ಟೆಕ್ ಪ್ರತಿನಿಧಿಗಳನ್ನು ಕಂಡಾಗ ಅವರ ಮೈಮೇಲಿದ್ದ ಬಂಗಾರದ ಆಭರಣರಾಶಿಯನ್ನು ಕಂಡು ದಿಗ್‍ಭ್ರಮೆಗೊಂಡ. ಆ ರಾಯಭಾರಿಗಳಿಗೆ ಕೋರ್ಟೆಸ್ ಹೇಳಿದ: “ನೀವು ನನಗೆ ಒಂದಷ್ಟು ಬಂಗಾರದ ಒಡವೆಗಳನ್ನು ಕಳಿಸಿರಿ. ನನ್ನ ಜೊತೆಗಾರರಿಗೂ ನನಗೂ ಬಂದಿರುವ ಒಂದು ಹೃದಯದ ಕಾಯಿಲೆಯ ಚಿಕಿತ್ಸೆಗಾಗಿ ಬಂಗಾರ ಬೇಕಾಗಿದೆ.”

ಅದಾದ ಕೆಲವು ತಿಂಗಳ ನಂತರ ಅಜ್‍ಟೆಕ್ ರಾಜಧಾನಿ ಸ್ಪ್ಯಾನಿಷ್ ಜನರ ವಶವಾಯಿತು. ಆಗ ಸತ್ತ ಅಜ್‍ಟೆಕ್ ಮೂಲವಾಸಿಗಳ ಸಂಖ್ಯೆ ಸಹಸ್ರಾರು.

ಕೊಳ್ಳೆ, ಸುಲಿಗೆ

ಅಮೆರಿಕದ ಮೂಲವಾಸಿಗಳ ಸಾಂಸ್ಕೃತಿಕ ಸಂಪನ್ನತೆಯನ್ನು ಕಂಡು ಆಕ್ರಮಕರು ಗಾಬರಿಯಾದರು. ಆದ್ದರಿಂದ ಆರಂಭದ ದಿನಗಳಿಂದಲೇ ಅವರ ಸೂತ್ರ – ಈ ಹೊಸಹೊಸ ಸಮೃದ್ಧ ಪ್ರದೇಶಗಳನ್ನು ನಾವು ವಶಪಡಿಸಿಕೊಳ್ಳಬೇಕು; ಆದರೆ ಇಲ್ಲಿಯ ಜನರ ಆಧ್ಯಾತ್ಮಿಕ ಪ್ರಭಾವ ನಮ್ಮ ಮೇಲೆ ಬೀಳದಂತೆ ಎಚ್ಚರ ವಹಿಸಬೇಕು.

ಕಳೆದ ಐನೂರು ವರ್ಷಗಳಿಂದ ಯೂರೋಪಿಯನರು ಅಮೆರಿಕದ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆಹೊಡೆದಿದ್ದಾರೆ; ವನ್ಯಜೀವಿಗಳನ್ನು ನಿರ್ಣಾಮ ಮಾಡಿದ್ದಾರೆ; ನೀರು-ನೆಲ-ಗಾಳಿಗಳನ್ನು ವಿಷಮಯಗೊಳಿಸಿದ್ದಾರೆ; 140ಕ್ಕೂ ಹೆಚ್ಚು ಪ್ರಾಣಿ-ಪಕ್ಷಿ ಜಾತಿಗಳನ್ನು ನಾಮಾವಶೇಷಗೊಳಿಸಿದ್ದಾರೆ.

ಅಂದು ಯೂರೋಪಿನ ಡಕಾಯಿತರು ಅಮೆರಿಕದಲ್ಲಿ ಮಾಡಿದ ಕೆಲಸವನ್ನೇ ಇಂದು, ಬಹುರಾಷ್ಟ್ರೀಯ ಕಾ ರ್ಪೋರೇಷನ್ ಗಳು  ಜಗತ್ತಿನಲ್ಲೆಲ್ಲ ಮಾಡುತ್ತಿವೆ.

ಇಂದಿಗೂ ಉತ್ತರ-ದಕ್ಷಿಣ ಅಮೆರಿಕಗಳ ಮೂಲನಿವಾಸಿಗಳ ಹಕ್ಕುಗಳನ್ನು ಅಮೆರಿಕ ಖಂಡದ ಯಾವ ಒಂದು ರಾಜ್ಯವೂ ಮಾನ್ಯಮಾಡಿಲ್ಲ.

ಕೊಲಂಬಸನ ಯುಗದ ಜನಾಂಗದ್ವೇಷವೂ ಇಂದಿಗೂ ಮುಂದುವರಿದಿರುವುದನ್ನು ಇತ್ತೀಚಿನ ವರ್ಷಗಳ ಹಲವಾರು ಘಟನೆಗಳು ಸಾಕ್ಷ್ಯಪಡಿಸಿವೆ.

ಕೊಲಂಬಸನ ಹಗಲುದರೋಡೆ

1495ರಲ್ಲಿ ಕೊಲಂಬಸನು ‘ಹಿಸ್ಪಾನಿಯೋಲಾ’ ದ್ವೀಪವನ್ನು (ಈಗಿನ ಹೈಟಿ ಮತ್ತು ಡಾಮಿನಿಕನ್ ರಿಪಬ್ಲಿಕ್) ಆಕ್ರಮಿಸಿದ. ಅಲ್ಲಿಯ ‘ಟೈನೋ’ ಬುಡಕಟ್ಟಿನವರಿಗೆ ಆಜ್ಞೆಮಾಡಿದ – ಮೂರು ತಿಂಗಳಿಗೊಮ್ಮೆ ಅವರಲ್ಲಿ ಪ್ರತಿಯೊಬ್ಬರೂ ತನಗೆ ಒಂದು ಔನ್ಸ್ ಚಿನ್ನವನ್ನು ಅಥವಾ ಒಂದು ಗೋಣಿಚೀಲ ಚಿನ್ನದ ಅದಿರನ್ನು ತಂದು ಒಪ್ಪಿಸಬೇಕೆಂದು. ಹೀಗೆ ಬಂಗಾರ ಒಪ್ಪಿಸಿದ್ದರ ಕುರುಹಾಗಿ ಆ ಪ್ರಜೆಗಳ ಕುತ್ತಿಗೆಗೆ ಒಂದು ತಾಮ್ರದ ಬಿಲ್ಲೆಯನ್ನು ನೇತುಹಾಕಲಾಗುತ್ತಿತ್ತು. ಈ ಬಿಲ್ಲೆ ಯಾರ ಕತ್ತಿನಲ್ಲಾದರೂ ಇರದಿದ್ದಲ್ಲಿ ಅವರನ್ನು ಕೂಡಲೆ ಕೊಲ್ಲಲಾಗುತ್ತಿತ್ತು, ಇಲ್ಲವೆ ಎರಡೂ ತೋಳುಗಳನ್ನು ಛೇದ ಮಾಡಲಾಗುತ್ತಿತ್ತು.

1500-1650ರ ಅವಧಿಯಲ್ಲಿ ಅಮೆರಿಕದಿಂದ ಯೂರೋಪಿಯನರು ಹೊರಕ್ಕೆ ಸಾಗಿಸಿದ ಬಂಗಾರ 180-200 ಟನ್. ಇಂದಿನ ಬೆಲೆಯಲ್ಲಿ ಅದು ಸುಮಾರು 2.8 ಬಿಲಿಯನ್ ಡಾಲರ್.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat