ಈಗಿನ ಜಗತ್ತು ಇರುವುದು ತಮ್ಮದೇ ವಿಶಿಷ್ಟವಾದ ಏನನ್ನೋ ಸಾಧಿಸುತ್ತೇವೆ ಎಂಬವರಿಗಾಗಿ ಮಾತ್ರವೇ ಹೊರತು ‘ನಾವು ಯಾರನ್ನೋ ಅನುಕರಿಸುವವರು’ ಎನ್ನುವವರಿಗಾಗಿಯಲ್ಲ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮಹತ್ತರ ಸಾಧನೆ ಏನಾಗಿದೆ? ಹೇಳಿಕೊಳ್ಳುವಂಥದೇನೂ ಆಗಿಯೇ ಇಲ್ಲವೆಂದು ನನ್ನ ಭಾವನೆ. ಹಾಗೆಂದರೆ ಇಷ್ಟು ವರ್ಷಗಳು ವ್ಯರ್ಥವಾದವೆಂದು ನನ್ನ ಅಭಿಪ್ರಾಯವಲ್ಲ. ಜಗತ್ತಿನಲ್ಲಿ ಯಾವುದೂ ವ್ಯರ್ಥವಾಗದು. ಆದರೆ ಇಷ್ಟು ವರ್ಷಗಳ ಪ್ರಯಾಸದಿಂದ ಸಮಾಜಕ್ಕೆ ಲಾಭವೇನೂ ಆದಂತಿಲ್ಲ. ಇದುವರೆಗೆ ಆಗಿರುವುದೆಂದರೆ ನಾವು ಇಷ್ಟು ವರ್ಷಕಾಲ ಅಸ್ತಿತ್ವದಲ್ಲಿ ಇದ್ದೆವೆಂಬುದು ಮಾತ್ರ.
ನಾನು ಈ ಧಾಟಿಯಲ್ಲಿ ಮಾತನಾಡಿದರೆ ಜನ ಕೇಳುತ್ತಾರೆ: “ಹಾಗಾದರೆ ಕೇಂದ್ರಾಧಿಕಾರಕ್ಕೆ ಅರ್ಥವಿಲ್ಲವೆ? ಯಾವುದೇ ದೇಶ ಉಳಿಯಲು ಕೇಂದ್ರಾಧಿಕಾರ ಬೇಕಲ್ಲವೆ? ಅದನ್ನು ತ್ಯಜಿಸಬೇಕೆ?” ಆದರೆ ಇಲ್ಲಿ ನಾವು ಕೇಳಬೇಕಾದ ಪ್ರಶ್ನೆ: ಜಗತ್ತಿನ ಉಳಿದವರು ಹೇಗೆ ಭಾವಿಸುತ್ತಾರೆಂಬುದನ್ನು ಕಟ್ಟಿಕೊಂಡು ನಮಗೆ ಆಗಬೇಕಾದುದೇನು? ಒಂದು ವೇಳೆ ಈಗಿರುವಂಥ ಕೇಂದ್ರಾಧಿಕಾರ ನಮಗೆ ಹೊಂದಿಕೆಯಾಗದಿದ್ದರೆ, ನಮ್ಮ ಶಕ್ತಿಗೆ ಅದು ಮೀರಿದುದಾದರೆ, ಅದನ್ನು ಮುಂದುವರಿಸುವುದಾದರೂ ಹೇಗೆ? ಅದರಿಂದ ಆಗುವ ಲಾಭವಾದರೂ ಏನು? ಕೇವಲ ಬಂಗ್ಲಾದೇಶದಿಂದಲೋ ಪಾಕಿಸ್ತಾನದಿಂದಲೋ ರಕ್ಷಣೆ ಪಡೆಯುವುದಕ್ಕಾಗಿ ಕೇಂದ್ರಾಧಿಕಾರ ಬೇಕು – ಎಂಬುದಾದಲ್ಲಿ ಅದರಲ್ಲಿ ಹೆಚ್ಚಿನ ಸತ್ತ್ವವೇನೂ ಇರದು.
ಯಾವುದೇ ವ್ಯವಸ್ಥೆಯು ನಮಗೆ ಬೇಕಾದುದನ್ನು ನೀಡುವ ಸ್ಥಿತಿಯಲ್ಲಿ ಇರಬೇಕು, ಮತ್ತು ನಮಗೆ ಏನು ಬೇಕೆಂಬುದರ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ನಾವು ಬೇರಾವುದೋ ದೇಶದ ಅಧೀನಘಟಕವಾದೆವೆಂದು ಭಾವಿಸೋಣ. ಹಿಂದೆ ನಾವು ರಷ್ಯದ ಪ್ರಭಾವವಲಯಕ್ಕೆ ಸೇರಿದ್ದೆವು; ಇನ್ನು ಮುಂದೆ ಪಶ್ಚಿಮ ಯೂರೋಪಿನ ಅಥವಾ ಅಮೆರಿಕದ ವಸಾಹತಿನಂತೆ ಆದೇವು. ನಮ್ಮ ಗುರಿ ಇದೇ ಆಗಿದ್ದಲ್ಲಿ ಅದನ್ನು ಸ್ಪಷ್ಟವಾಗಿ ಏಕೆ ಹೇಳುತ್ತಿಲ್ಲ? ಹೀಗೆ ಸ್ಪಷ್ಟವಾಗಿ ಹೇಳುವುದನ್ನಾದರೂ ಕಲಿತಲ್ಲಿ ಮುಂದೆಂದಾದರೂ ಈ ಪರಾಧೀನತೆಯಿಂದ ಗೌರವಪೂರ್ವಕವಾಗಿ ಹೊರಬಂದೇವು.
ಯಾವುದೋ ಒಂದು ವ್ಯವಸ್ಥೆಯಿಂದಲೋ, ಹಿಂದಿನ ಅವಶೇಷದಿಂದಲೋ ತಮಗೆ ತೀವ್ರ ಅಗೌರವ ಉಂಟಾಗಿದೆ – ಎಂಬ ಭಾವನೆ ಜನತೆಯಲ್ಲಿ ಉಂಟಾದಾಗ ಅದನ್ನು ಅದುಮಿರಿಸಲು ಸಾಧ್ಯವಾಗದು. 1947ರಲ್ಲಿ ನಮಗೆ ಸ್ವಾತಂತ್ರ್ಯ ಪ್ರಾಪ್ತವಾಯಿತೆನ್ನಲು ಪುರಾವೆ ಏನು? ಗ್ರಾಮೀಣ ರೈತನೋ, ಕುಶಲಕರ್ಮಿಯೋ, ಚಮ್ಮಾರನೋ ಆದ ನಾನು ದಾಸ್ಯದಿಂದ ವಿಮುಕ್ತನಾಗಿದ್ದೇನೆ ಎನಿಸುವುದಕ್ಕೆ ಆಧಾರ ಏನು? ನನ್ನ ಮಾತನ್ನು ಯಾರಾದರೂ ಕೇಳಿಸಿಕೊಳ್ಳುತ್ತಿದ್ದಾರೆಯೆ – ಎಂಬುದೂ ಸ್ವಾತಂತ್ರ್ಯದ ಸಂಕೇತವಲ್ಲವೆ? ಕಲೆಕ್ಟರನು ನನಗೆ ಹಸ್ತಲಾಘವವಿತ್ತು ಮಾತನಾಡುತ್ತಾನೆಯೆ? ಯೋಜನಾ ಆಯೋಗದ ಸದಸ್ಯನೊಬ್ಬ ನನ್ನೊಡನೆ ಸಮಾನಸ್ಕಂಧನಾಗಿ ಮಾತನಾಡುತ್ತಾನೆಯೆ? ‘ಇಲ್ಲ’ ಎಂಬ ಉತ್ತರವೇ ಬರುತ್ತದೆ. ನನ್ನೊಡನೆ ಈಗ ಕಲೆಕ್ಟರನೂ ಮಾತನಾಡುವುದಿಲ್ಲ, ಯೋಜನಾ ಆಯೋಗದ ಸದಸ್ಯನೂ ನನ್ನನ್ನು ಗಮನಿಸುವುದಿಲ್ಲ. ನಾನು ಈಗಿನವರ ಬಗ್ಗೆ ಮಾತ್ರ ಹೇಳುತ್ತಿಲ್ಲ; ಮೊದಲನೆ ಯೋಜನಾ ಆಯೋಗದ ಸದಸ್ಯರೂ ಹೀಗೆಯೇ ಇದ್ದರು. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಪಡೆದಿದ್ದ ಅವರು ಈಗಿನವರಿಗಿಂತ ಹೆಚ್ಚಿನ ದೇಶಭಕ್ತಿ ತಳೆದಿದ್ದವರು ಎಂದು ಸಾಧಾರಣವಾಗಿ ಭಾವಿಸುತ್ತೇವಷ್ಟೆ. ಅವರೂ ಸಹ ಒಬ್ಬ ಸಾಮಾನ್ಯ ಭಾರತೀಯನೊಡನೆ ಸಮಾನರಂತೆ ವ್ಯವಹರಿಸಿದುದನ್ನು ನಾವು ಕಾಣಲಿಲ್ಲ. ಅವರು ಜನಸಾಮಾನ್ಯರ ಬಗ್ಗೆ ತಾತ್ಸಾರದಿಂದಲೇ ಇದ್ದರು.
ಬದಲಾದ ಚಿಂತನೆಯ ದಿಕ್ಕು
ಹೀಗಿರುವಾಗ ಸಾಮಾನ್ಯ ಪ್ರಜೆ ಏನು ಮಾಡಿಯಾನು? ನಾನು ಸ್ವತಂತ್ರ ದೇಶವೊಂದರ ಪ್ರಜೆ ಎಂದು ಅವನಿಗೆ ಅನಿಸುವುದು ಹೇಗೆ? ಇದಕ್ಕೆ ಏನಾದರೂ ಪರೀಕ್ಷೆ ಇರಲೇಬೇಕಲ್ಲವೆ? ನನಗೆ ಇವರು ಆಹಾರ ಒದಗಿಸಿಲ್ಲ, ಬಟ್ಟೆ ಒದಗಿಸಿಲ್ಲ, ವಸತಿ ಒದಗಿಸಿಲ್ಲ – ಎಂದೆಲ್ಲ ಅವನು ಹೇಳಿದರೂ ಹೇಳಬಹುದು. ಅದೆಲ್ಲ ಹೇಗೇ ಇದ್ದರೂ, ತನ್ನ ಆಂತರಿಕ ಸಂವೇದನೆಗಳಿಗೆ ಯಾವುದೋ ರೀತಿಯಲ್ಲಿ ಅಭಿವ್ಯಕ್ತಿ ಕೊಡಬೇಕೆಂದು ಅವನಿಗೆ ಅನಿಸೀತು. ನನ್ನ ಅಗತ್ಯಗಳ ಪೂರೈಕೆ ಆಗದಿರುವುದು ಹಾಗಿರಲಿ, ನನ್ನ ಭಾವನೆಗಳಿಗಾದರೂ ಪ್ರಕಟರೂಪ ಕೊಡಲಾರೆನೇ? – ಎಂದು ಅವನಿಗೆ ಅನಿಸೀತು.
ಯಾವ ನಾಯಕನೇ ಆಗಲಿ ಸಮಾಜದ ಮನಃಸ್ಥಿತಿಯಂತೆ ನಡೆದುಕೊಳ್ಳಬೇಕಾಗುತ್ತದೆ. ಅವನು ಮಾಡಬಹುದಾದ್ದಕ್ಕೆ ಮಿತಿಗಳು ಇರುತ್ತವೆ. ಸ್ಟಾಲಿನ್ ಕೂಡ ಅದಕ್ಕಿಂತ ಹೆಚ್ಚಿನದನ್ನು ಮಾಡಲಾರದಾದ. ಬಹುಶಃ ಸ್ಟಾಲಿನ್ ಮಾಡಿದಷ್ಟನ್ನು ಇಲ್ಲಿ ಯಾರು ಮಾಡಲಾರರು. ನಾವು ಐರೋಪ್ಯರಂತಲ್ಲ; ನಾವು ಭಾರತೀಯರು, ಮಿತವೇಗದಲ್ಲಿ ಮುಂದುವರಿಯುವವರು. ಸ್ವಲ್ಪ ದೂರ ಕ್ರಮಿಸಿ ನಿಂತು ಸುಧಾರಿಸಿಕೊಂಡು ಒಂದಷ್ಟು ಕಾಲದ ನಂತರ ಮತ್ತೆ ಮುಂದುವರಿಯುವುದೇ ನಮ್ಮ ರೀತಿ.
ಈ ಭೂಮಿಕೆಯಲ್ಲಿಯೇ ನಾನು ಹೇಳುವುದು, ಅಯೋಧ್ಯೆಯ ಘಟನೆಯಿಂದ ದೇಶಕ್ಕೆ ಒಳ್ಳೆಯದೇ ಆಯಿತೆಂದು. ಆಮೇಲಿನ ಹಿಂಸಾಚರಣೆಗಳಲ್ಲಿ ಒಂದಷ್ಟು ಜನ ಸತ್ತದ್ದು ಚಿಂತಾಕರವೇ. ಆದರೆ ಕೊಲೆ, ಸಾವು ಯಾವಾಗಲೂ ಇರುವಂಥವೇ. ಇದೀಗ ಒಂದಲ್ಲ ಒಂದು ನೆಪದಲ್ಲಿ ನಡೆಯುತ್ತಿರುವ ಸಾವುಗಳು 1947ಕ್ಕೆ ಹಿಂದೆ ಇದ್ದುದಕ್ಕಿಂತ ಹೆಚ್ಚಿನ ಪ್ರಮಾಣದ್ದೇನಲ್ಲ. 19ನೇ ಶತಮಾನದಲ್ಲಂತೂ ಇದಕ್ಕಿಂತ ಬಹುಪಾಲು ಹೆಚ್ಚು ಕೊಲೆ, ಸಾವುಗಳು ನಡೆಯುತ್ತಿದ್ದವು. ಈಗಲೂ ನಮ್ಮಲ್ಲಿ ಆಹಾರಾಭಾವ ಮೊದಲಾದವು ಇದ್ದರೂ 19ನೇ ಶತಮಾನದಲ್ಲಿ ಕ್ಷಾಮದಿಂದ ಸತ್ತ ಜನರ ಪ್ರಮಾಣ ಈಗಿಗಿಂತ ಬಹುಪಾಲು ಹೆಚ್ಚಿತ್ತು.
ಅಯೋಧ್ಯೆಯ ಘಟನೆಗಳಿಂದಾಗಿ ಜನ ದೇಶವನ್ನು ಕುರಿತು ಯೋಚಿಸುವಂತಾಗಿದೆ. ವಿವಿಧ ವೇದಿಕೆಗಳಲ್ಲಿ ಭಾಷಣಗಳು, ಪತ್ರಿಕೆ-ಗ್ರಂಥಗಳಲ್ಲಿ ಬರಹಗಳು ವಿಪುಲವಾಗಿ ನಡೆದಿವೆ. ಜನ ಬಗೆಬಗೆಯ ನಿಲವುಗಳನ್ನು ತಳೆದಿದ್ದಾರೆ. ಕೆಲವರು ತಾವು ಹಿಂದೆ ಅಂಟಿಕೊಂಡಿದ್ದ ನಿಲವುಗಳಿಂದ ದೂರ ಸರಿದಿದ್ದಾರೆ.
ಪರಿವರ್ತನೆಗೆ ಹೆದರಬೇಕಾಗಿಲ್ಲ
ಪರಿವರ್ತನೆಯೋ ಗೊಂದಲಗಳೋ ಆಗುತ್ತವೆಂದು ನಾವು ಹೆದರಬೇಕೆ? ಜಗತ್ತು ಯಾವಾಗಲೂ ಇದ್ದದ್ದು ಹೀಗೆಯೇ. ಜಗತ್ತಿನಲ್ಲಿ ಹಿಂಸಾಚರಣೆಯೂ ಸದಾ ಇರುವಂಥದೇ. ವಿವಿಧ ಜನರ ಸ್ವಾರ್ಥದೃಷ್ಟಿಯೂ ಜಗತ್ತಿನಲ್ಲಿ ಸಹಜವೇ. ಯಾರಿಂದಲೂ ನಾವು ಉದಾರತೆಯನ್ನು ನಿರೀಕ್ಷಿಸುವ ಅಗತ್ಯವಿಲ್ಲ. ಜಗತ್ತನ್ನೆಲ್ಲ ‘ಸಭ್ಯ’ಗೊಳಿಸಹೊರಟ ಐರೋಪ್ಯರ ಅಭಿಯಾನಗಳನ್ನು ನಾವು ಅನುಭವಿಸಿದ್ದೇವೆ! ಇಡೀ ಜಗತ್ತನ್ನೆಲ್ಲ ವಶಪಡಿಸಿಕೊಳ್ಳಬೇಕು, ಇಡೀ ಮಾನವತೆಯನ್ನೆಲ್ಲ ಪರಿವರ್ತಿಸಬೇಕು – ಎಂಬ ಅಮೋಘ ಗುರಿ ಇರಿಸಿಕೊಂಡು ಆ ಐರೋಪ್ಯರು ಹೊರಟು ಮಾಡಬಾರದ್ದನ್ನೆಲ್ಲ ಮಾಡಿದರು. ಈ ಕ್ರಿಯೆ ಸದಾ ಮುಂದುವರಿಯುವುದೇ. ಇದು ಮತ್ತೆಮತ್ತೆ ಆಗುವಂಥದೇ. ಬಹುಶಃ ಮುಂದೆ ಅವರು ಇದೇ ಸಾಧನೆಯನ್ನು ಪರಿಸರಸ್ವಾಸ್ಥ್ಯದ ಹೆಸರಿನಲ್ಲಿಯೋ ಮಾನವೀಯ ಹಕ್ಕುಗಳ ಸ್ಥಾಪನೆಯ ಹೆಸರಿನಲ್ಲಿಯೋ ಬೇರಾವ ಸೋಗಿನಲ್ಲಿಯೋ ಮಾಡಿಯಾರು.
ಇಸ್ಲಾಂ ಮಾಡಿದ್ದೂ ಅದನ್ನೇ. ಕ್ರಿ.ಶ. 7ನೇ ಶತಮಾನದಲ್ಲಿ ಮಹಮ್ಮದ್ ಸತ್ತೊಡನೆ ಇಸ್ಲಾಮಿನ ಅನ್ಯಾಕ್ರಮಣ ಶುರುವಾಯಿತು. ಐವತ್ತೇ ವರ್ಷಗಳಲ್ಲಿ ಇಸ್ಲಾಂ ಪಶ್ಚಿಮದ ಸ್ಪೇಯ್ನ್ ದೇಶದಿಂದ ಪೂರ್ವದ ಸಿಂಧ್‍ವರೆಗೆ ಹರಡಿತು. ಇದಕ್ಕಾಗಿ ಯಾವುದೇ ‘ಆಧುನಿಕ’ ಸಾಧನಗಳ ಬಳಕೆಯಾಗಲಿಲ್ಲ. ಪ್ರೌಢ ತಂತ್ರವಿಜ್ಞಾನಸಂಸ್ಥೆಗಳ ಸಂಶೋಧನೆ-ಆವಿಷ್ಕಾರಗಳ, ಆಧುನಿಕ ವಿಜ್ಞಾನದ ಅದ್ಭುತ ಶೋಧಗಳ ಬಳಕೆಯಿಂದ ಆದದ್ದಲ್ಲ ಆ ವಿಸ್ತರಣೆ. ಕೇವಲ ಛಲ, ಧೃತಿ, ಮನೋದಾಢ್ರ್ಯಗಳಿಂದ ಅದು ಸಾಧ್ಯವಾಯಿತು. ಇದೆಲ್ಲ ಹಿಂದೆ ನಡೆದಿದೆ; ಮತ್ತೆ ನಡೆದೀತು. ಈ ಸಾಧನೆ ಮಾಡಹೊರಟವರಲ್ಲಿ ವಿಶೇಷ ನೈಸರ್ಗಿಕ ಸೌಲಭ್ಯಗಳೇನೂ ಇರಲಿಲ್ಲ. ಐರೋಪ್ಯರು ವಶಪಡಿಸಿಕೊಂಡ ದೇಶಗಳಲ್ಲಿಯೇ ಅವರಿಗಿಂತ ಹೆಚ್ಚಿನ ಸಮೃದ್ಧಿ ಇತ್ತು. ಇಸ್ಲಾಂನದೂ ಅಷ್ಟೆ.
ಇದನ್ನು ನಾನು ಹೇಳಿದ ಉದ್ದೇಶ ಇದು: ಇದೀಗ ಜಗತ್ತಿನ ಕೆಲವು ದೇಶಗಳಲ್ಲಿ ತಂತ್ರಜ್ಞಾನಸಾಧನಗಳೂ ಐಶ್ವರ್ಯವೂ ಇರಬಹುದು. ಆರ್ಥಿಕವಾಗಿ ಅವರ ಮಟ್ಟ ಮೇಲ್ತರದ್ದು ಇರಬಹುದು. ಆದರೆ ವಾಸ್ತವವಾಗಿ ಅವೆಲ್ಲ ಗೌಣ ಸಂಗತಿಗಳೇ. ಒಂದು ಜನತೆಯ ಅಂತರ್ಭಾವವೂ ಗುರಿಯೂ ಏನೆಂಬುದೇ ಮಹತ್ತ್ವದ ಸಂಗತಿ.
ನಾವು ಬಯಸುವುದು ಏನನ್ನು? ನಮ್ಮಲ್ಲಿ ಕೌಶಲ ಇದೆಯೆ? ನಮ್ಮ ನಿಲವನ್ನು ಜಗತ್ತಿಗೆ ಪ್ರಕಟಪಡಿಸಬಲ್ಲೆವೆ? ಮತ್ತು ಭಾರತೀಯರಾಗಿ ನಾವು ಒಂದು ಸ್ಫುಟವಾದ ನಿಲವನ್ನು ಪಡೆದಿದ್ದೇವೆಯೆ? – ಎಂಬುದು ಮುಖ್ಯ. ಭಾರತೀಯರಾಗಿ ನಾವು ಕೆಲವು ಖಚಿತ ನಿಲವುಗಳನ್ನು ತಳೆಯಲಾರೆವು – ಎಂದಾದರೆ, ನಿವೃತ್ತರಾಗಿಬಿಡುವುದೇ ಒಳ್ಳೆಯದು. ಈಗಿನ ಜಗತ್ತು ಇರುವುದು ತಮ್ಮದೇ ವಿಶಿಷ್ಟವಾದ ಏನನ್ನೋ ಸಾಧಿಸುತ್ತೇವೆ ಎಂಬವರಿಗಾಗಿ ಮಾತ್ರವೇ ಹೊರತು ‘ನಾವು ಯಾರನ್ನೋ ಅನುಕರಿಸುವವರು’ ಎನ್ನುವವರಿಗಾಗಿಯಲ್ಲ.
ಶುದ್ಧೀಕರಣ ಆಗಲಿ
ಎಲ್ಲ ಸಮಾಜಗಳಲ್ಲಿ ಬದಲಾವಣೆಯ ಪ್ರಕ್ರಿಯೆ ನಡೆಯುತ್ತದೆ. ನಮ್ಮ ಸಮಾಜದಲ್ಲಿಯೂ ಅಷ್ಟೆ. ಮತ್ತು ಹೊರಗಿನ ಗಲೀಜುಗಳೆಲ್ಲ ಮರೆಯಾದ ಹೊರತು ನಮ್ಮ ಒಳಗಡೆ ರಾಶಿಗಟ್ಟಿರುವ ಗಲೀಜುಗಳು ಹೋಗಲಾರವು. ಮುಸ್ಲಿಮರೋ ಕ್ರೈಸ್ತರೋ ಉಳಿಸಿಹೋಗಿರುವ ಗಲೀಜಿನ ಜೊತೆಗೆ ಒಂದಷ್ಟು ಹಿಂದುಗಳೇ ಉಳಿಸಿರುವ ಗಲೀಜೂ ಹೋಗಬೇಕಾದೀತು. ಬಹುಶಃ ಮಹಾಭಾರತಯುದ್ಧದ ಕಾಲದಿಂದಲೇ ಇಂಥ ಎಷ್ಟೋ ಗಲೀಜುಗಳು ಇಲ್ಲಿ ಸಂಚಿತವಾಗುತ್ತ ಬಂದಿವೆ.
ಈ ಶುದ್ಧೀಕರಣವಾದ ಹೊರತು ನಮ್ಮ ದೇಶ ಮುಂದುವರಿಯಲಾರದು. ಇನ್ನಷ್ಟು ಕಾಲ ಈಗಿನ ಸ್ಥಗಿತ ಸ್ಥಿತಿಯೇ ಮುಂದುವರಿದೀತು. ಕೋಟ್ಯಂತರ ಜನರ ಪೈಕಿ ಒಂದು ಹತ್ತು ಲಕ್ಷದಷ್ಟು ಜನ ಯೂರೋಪಿನ ಅಥವಾ ಅಮೆರಿಕದ ಮಟ್ಟದ ಜೀವನವನ್ನು ಮುಂದುವರಿಸಿಯಾರು; ಇವರಲ್ಲಿ ಒಂದು ಐವತ್ತು ಸಾವಿರ ಅಥವಾ ಹೆಚ್ಚೆಂದರೆ ಒಂದು ಲಕ್ಷದಷ್ಟು ಜನ ಅಧಿಕಾರದ ಮೇಲೆ ತಮ್ಮ ಮುಷ್ಟಿಯನ್ನು ಮುಂದುವರಿಸಬಹುದು. ಈ ಅಸಾಮಂಜಸ್ಯವನ್ನು ನಾವು ಅಲಕ್ಷಿಸಿದರೆ ಅದು ಮುಂದುವರಿದೀತು.
ಇದೇ ಸ್ಥಿತಿ ಮುಂದುವರಿಯಲಿ, ಉಳಿದ ಎಂಬತ್ತು ಕೋಟಿ ಜನ ಹೇಗಾದರೂ ಸಾಯಲಿ – ಎಂಬುದು ನಮ್ಮ ಆಶಯವಿದ್ದಲ್ಲಿ ಅದನ್ನಾದರೂ ಪ್ರಕಟವಾಗಿ ಹೇಳೋಣ. ಐರೋಪ್ಯರಲ್ಲಿ ಈ ಗುಣ ಇತ್ತು. ಅವರು ತಮ್ಮ ಜನರನ್ನು ಉಳಿಸುವುದಕ್ಕೂ ಸಿದ್ಧರಾಗಿದ್ದರು, ಬೇಡವೆನಿಸಿದಾಗ ಮುಗಿಸಲೂ ಹೇಸುತ್ತಿರಲಿಲ್ಲ. ಎರಡನ್ನೂ ಅವರು ಮಾಡಿದ್ದಾರೆ; ಮತ್ತು ಇಂದಿಗೂ ಹಾಗೆ ಮಾಡುತ್ತಲಿದ್ದಾರೆ. ಯೂರೋಪಿನವರು ಹಿಂಸಾಚರಣೆಯನ್ನು ಮೊದಲು ಆರಂಭಿಸಿದ್ದು ತಮ್ಮ ನೆಲದಲ್ಲಿಯೇ. ಅನಂತರವೇ ಬೇರೆಡೆಗಳಿಗೆ ಆ ‘ಸಂಸ್ಕೃತಿ’ಯನ್ನು ವಿಸ್ತರಿಸಿದರು. ಪ್ಲೇಟೋವಿನ ಕಾಲದಿಂದಲೇ, ಅಥವಾ ಅದಕ್ಕೂ ಹಿಂದಿನಿಂದಲೇ ಯೂರೋಪಿನಲ್ಲಿ ಇದು ನಡೆದಿದೆ.
ಚಿಂತನ ಸ್ಪಷ್ಟತೆ ಆವಶ್ಯಕ
ಯೂರೋಪು ಬಹಳ ಸಭ್ಯ ನಾಡು ಎಂದು ನಮ್ಮಲ್ಲನೇಕರು ಭಾವಿಸಿರುವುದಕ್ಕೆ ಎಷ್ಟು ಮಾತ್ರದ ಆಧಾರವೂ ಇಲ್ಲ. ಬಹುಶಃ ಜವಾಹರಲಾಲ್ ನೆಹರು ಹಾಗೆ ನಂಬಿದ್ದರು. ಆದರೆ ಗಾಂಧಿಯವರು ಆ ಚಿತ್ರವನ್ನು ನಂಬಿರಲಿಲ್ಲ. ಗಾಂಧಿಯವರು ಬೇರೆ ಎಷ್ಟೋ ತಪ್ಪುಗಳನ್ನು ಮಾಡಿರಬಹುದು; ಆದರೆ ಯೂರೋಪಿನ ಯಥಾರ್ಥ ಇತಿಹಾಸವನ್ನು ಗ್ರಹಿಸುವಲ್ಲಿ ಅವರು ತಪ್ಪು ಮಾಡಲಿಲ್ಲ.
ನಮ್ಮ ಚಿಂತನೆಯನ್ನು ನಾವು ಸ್ಪಷ್ಟಪಡಿಸಿಕೊಳ್ಳೋಣ. ಯೂರೋಪಿನಲ್ಲಿ ಇರುವಂಥ ಸಮಾಜದ ನಿರ್ಮಾಣ ನಮ್ಮ ಗುರಿಯೆ? ಅದನ್ನು ನೆಲೆಗೊಳಿಸಿ ಮುಂದುವರಿಸುವ ಬಲ ನಮ್ಮಲ್ಲಿ ಇದೆಯೆ? ಇಲ್ಲವೆಂದೇ ನನ್ನ ಭಾವನೆ. ನಮ್ಮಲ್ಲಿ ಹೆಚ್ಚಿನವರು ಆಲಸಿಗಳು; ನಾವು ಬಯಸುವುದು ನೆಮ್ಮದಿಯನ್ನು. ಹೀಗಿರುವುದರಿಂದ ಯೂರೋಪಿನಂಥ ಸಮಾಜವನ್ನು ನಾವು ನಿರ್ಮಿಸಲಾರೆವು. ನಮ್ಮ ಜನ ಎಷ್ಟನ್ನು ಮಾಡಬಲ್ಲರೋ, ಏನನ್ನು ಮಾಡಬಲ್ಲರೋ ಅಷ್ಟನ್ನು ಮಾತ್ರ ಆಧರಿಸಿ ಭವಿಷ್ಯದ ಚಿತ್ರವನ್ನು ರೂಪಿಸಿಕೊಳ್ಳುವುದು ಸತರ್ಕವಾಗುತ್ತದೆ. ಜನರ ಸಾಮಥ್ರ್ಯಕ್ಕೆ ಮೀರಿದ ಹೊರೆಯನ್ನು ಅವರ ಮೇಲೆ ಹೊರಿಸಲಾಗದು.
[ಉದ್ಧೃತ: ಧರ್ಮಪಾಲ್ ಅವರ ‘ಭಾರತೀಯ ಚಿತ್ತ, ಮಾನಸಿಕತೆ, ಕಾಲ’ ಗ್ರಂಥದಿಂದ (2019ರ ಮುದ್ರಣ). ಪ್ರಕಟನೆ: ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು]
ಭಾರತೀಯ ಚಿತ್ತ, ಮಾನಸಿಕತೆ, ಕಾಲ
ನಮ್ಮ ಸಮಾಜ ಈಗ ಒಂದು ವಿಶಿಷ್ಟ ರೀತಿಯಲ್ಲಿ ದ್ರುವೀಕರಣಗೊಂಡಿದೆ: ಒಂದುಕಡೆ ಧ್ವನಿ ಎತ್ತರಿಸದ, ಸೌಮ್ಯಸ್ವಭಾವದ ಅಧಿಕಸಂಖ್ಯೆಯ ಜನಸಾಮಾನ್ಯರು; ಇನ್ನೊಂದುಕಡೆ ಅತ್ಯಲ್ಪ ಸಂಖ್ಯೆಯಲ್ಲಿದ್ದರೂ ಉಚ್ಛಸ್ವರದಲ್ಲಿ ಮಾತನಾಡುವ ‘ಬುದ್ಧಿಜೀವಿಗಳು’ ಎನಿಸಿಕೊಂಡವರು, ಅಧಿಕಾರಸ್ಥಾನಗಳಲ್ಲಿಯೂ ಕೆಲವು ವಿಶ್ವವಿದ್ಯಾಲಯಗಳಲ್ಲಿಯೂ ಇರುವವರು, ಆಂಗ್ಲಪತ್ರಿಕೆಗಳಲ್ಲಿ ಸ್ಥಾನ ಪಡೆದುಕೊಂಡವರು. ಈ ಎರಡು ಬಣಗಳು ದೀರ್ಘಕಾಲ ಪರಸ್ಪರ ಉದಾಸೀನತೆಯಿಂದ ಇದ್ದವು. ಆದರೆ ಈಗ ಆ ತಾಟಸ್ಥ್ಯ ಮರೆಯಾಗಿ ಒಂದು ಬಗೆಯ ಅಸಹನೆಗೆ ಎಡೆಗೊಟ್ಟಿದೆ – ಮೇಲಣ ಎರಡನೇ ಬಣ ರೂಢಿಸಿಕೊಂಡಿರುವ ಕೆಲವು ವಿಚಿತ್ರ ನಿಲವುಗಳಿಂದಾಗಿ.
ಈ ಬಿರುಕು ಹ್ರಸ್ವಗೊಂಡ ಹೊರತು ದೇಶದ ನಿಜವಾದ ಪ್ರಗತಿ ಸಾಧ್ಯವಾಗದು; ನೆಮ್ಮದಿಯೂ ನೆಲೆಸದು. ಚಿಂತನಜಡತೆಯಿಂದಲೂ ನಿಷೇಧಾತ್ಮಕ ಪ್ರವೃತ್ತಿಯಿಂದಲೂ ಮನಸ್ಸು ಈಗ ಮುಕ್ತಗೊಳ್ಳಬೇಕಾಗಿದೆ. ಆ ಪ್ರಯಾಸ ಉಪಕ್ರಮವಾಗಬೇಕಾದರೆ ನಮ್ಮ ಮನಸಿಕತೆಯನ್ನು ರೂಪಿಸಿರುವ ಅಂತರ್ನಿಹಿತ ಧಾರೆಗಳನ್ನು ಅರಿತುಕೊಳ್ಳುವುದು ಅನಿವಾರ್ಯ.