ಫೆಬ್ರುವರಿ ಮೂರನೇ ವಾರದಿಂದ ಏಪ್ರಿಲ್ ಮಧ್ಯದ ವರೆಗೆ ಶುಕ್ರನಿಗೆ ಅಸ್ತ. ಈ ಸಂದರ್ಭದಲ್ಲಿ ಸೂರ್ಯನ ಸುತ್ತ ಭೂಮಿ ಮತ್ತು ಶುಕ್ರನ ಚಲನೆಯ ಬಗ್ಗೆ ವೈಜ್ಞಾನಿಕ ಮಾಹಿತಿ ಒದಗಿಸುವ ಲೇಖನ ಇದು.
2021ರ ಫೆಬ್ರುವರಿ ಮೂರನೆಯ ವಾರದಿಂದ ಏಪ್ರಿಲ್ ಮಧ್ಯದ ವರೆಗೆ ಶುಕ್ರನಿಗೆ ಅಸ್ತ ಅಥವಾ ಮೌಢ್ಯ. ಸನಾತನಧರ್ಮವನ್ನು ಪಾಲಿಸುವವರಿಗೆ ಈ ಅವಧಿಯಲ್ಲಿ ಮದುವೆ ಮುಂಜಿಗಳಂಥ ಶುಭಕಾರ್ಯಗಳಿಗೆ ನಿಷೇಧ. ಹಾಗಿದ್ದರೆ ಅಸ್ತ ಅಥವಾ ಮೌಢ್ಯ ಎಂದರೆ ಏನು ಎಂದು ನೋಡೋಣ.
ಆಕಾಶಕಾಯಗಳು ದಿನನಿತ್ಯ ಹಗಲು ಕಾಣಿಸಿ ರಾತ್ರಿ ಅಸ್ತವಾಗುವುದು ಅಥವಾ ರಾತ್ರಿ ಕಾಣಿಸಿ ಹಗಲು ಅಸ್ತವಾಗುವುದು ಸಹಜ ಪ್ರಕ್ರಿಯೆಯಾದ್ದರಿಂದ ಅವುಗಳಿಗೆ ಅಂತಹ ಮಹತ್ತ್ವವೇನಿಲ್ಲ. ಆದರೆ ದಿನವೂ ಕಾಣಿಸುವ ಆಕಾಶಕಾಯ ದೀರ್ಘಸಮಯದ ವರೆಗೆ ಆಕಾಶದಿಂದ ಮರೆಯಾದರೆ ಮಾನವನಿಗೆ ದಿಗಿಲಾಗುತ್ತದೆ. ಈ ರೀತಿ ತನ್ನ ಪಥದಲ್ಲಿ ಸುತ್ತುತ್ತ ಶುಕ್ರ ಭೂಮಿಯಿಂದ ನೋಡಿದಂತೆ ಈಗ ಸೂರ್ಯನ ಅತಿ ಸಮೀಪಕ್ಕೆ ಬಂದು ನಮ್ಮ ಕಣ್ಣೆದುರೇ ಇದ್ದರೂ ನಮ್ಮ ದೃಷ್ಟಿಯಿಂದ ಮರೆಯಾಗಿದ್ದಾನೆ. ಅದೇ ಅಸ್ತ ಅಥವಾ ಮೌಢ್ಯ. ಎಲ್ಲ ಆಕಾಶಕಾಯಗಳು ಈ ರೀತಿ ಕಣ್ಮರೆಯಾಗುತ್ತವಾದರೂ, ನವಗ್ರಹಗಳ ಪೈಕಿ ಶುಕ್ರ ಮತ್ತು ಗುರು ಗ್ರಹಗಳ ಅಸ್ತಕ್ಕೆ ಮಾತ್ರ ಧಾರ್ಮಿಕ ಮಹತ್ತ್ವವಿರುವುದು.
ಒಮ್ಮೆ ಪೂರ್ವದಿಗಂತದಲ್ಲಿ ಕಾಣುತ್ತ, ಕೆಲಕಾಲ ಮರೆಯಾಗಿ ಮತ್ತೆ ಪಶ್ಚಿಮದಿಗಂತದಲ್ಲಿ ಕಾಣಿಸುತ್ತ ಆಕಾಶದಲ್ಲಿ ಆಟವಾಡುವ ಶುಕ್ರನನ್ನು ಹಿಂದಿನ ಕಾಲದಲ್ಲಿ ಪಾಶ್ಚಾತ್ಯರು ಎರಡು ಬೇರೆಬೇರೆ ನಕ್ಷತ್ರಗಳೆಂದು ಭಾವಿಸಿ Morning Star, Evening Star ಎಂದು ಗುರುತಿಸುತ್ತಿದ್ದರಂತೆ. ಈಗಲೂ ಹಾಗೆಯೇ ಕರೆಯುವ ಪದ್ಧತಿ ಇದ್ದು ನಾವು ಬೇಕಾದರೆ ಅದನ್ನು ಉಷಾನಕ್ಷತ್ರ, ಸಂಧ್ಯಾನಕ್ಷತ್ರ ಎನ್ನಬಹುದು. ವರ್ಷದ ಕೆಲವು ಕಾಲ ಪ್ರಖರ ಬೆಳಕಿನೊಂದಿಗೆ ಹೊಳೆಯುವ ಆತನನ್ನು ಕೆಲವರು ‘ಹಾರುವ ತಟ್ಟೆ’ ಎಂದು ತಪ್ಪಾಗಿ ತಿಳಿದದ್ದೂ ಉಂಟು.
ಯಾವುದೇ ಶಬ್ದಕೋಶದಲ್ಲಿ ಹಾಗೆಂದು ಉಲ್ಲೇಖ ಇಲ್ಲದಿದ್ದರೂ, ಶುಕ್ರನನ್ನು ಜಾನಪದರು ಕರೆಯುವುದು ‘ಬೆಳ್ಳಿ’ ಎಂದು. ಕೆಲವು ತಿಂಗಳು ಆತ ಸೂರ್ಯಾಸ್ತದ ನಂತರ ಪಶ್ಚಿಮದಿಗಂತದಲ್ಲಿ ಕಾಣಿಸುವುದಾದರೂ ‘ಬೆಳ್ಳಿ ಮೂಡಿತು ಕೋಳಿ ಕೂಗಿತು’ ಹಾಡಿನಲ್ಲಿರುವಂತೆ ‘ಬೆಳ್ಳಿ ಮೂಡಿತು’ ಎಂದರೆ ಇನ್ನೇನು ಬೆಳಗಾಗುತ್ತದೆ ಎಂದೇ ಅರ್ಥ. ತಮಿಳಿನಲ್ಲಿ ಶುಕ್ರವಾರದ ಅಧಿಕೃತ ಹೆಸರೇ ‘ವೆಳ್ಳಿಕಳಮೈ’.
ಬುಧನ ನಂತರದ ಎರಡನೇ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವ, ಸುಮಾರು ಭೂಮಿಯಷ್ಟೇ ಗಾತ್ರದ ಶುಕ್ರ ಸೂರ್ಯನ ದಿಶೆಯಲ್ಲಿ ನಮ್ಮ ನೆರೆಯವನು. ಸೂರ್ಯನ ಸುತ್ತ ಪರಿಭ್ರಮಿಸಲು 224.7 ಭೂಮಿಯ ದಿನಗಳನ್ನು ತೆಗೆದುಕೊಳ್ಳುವ ಆತನಿಗೆ ತನ್ನ ಅಕ್ಷದಲ್ಲಿ ಒಂದು ಸುತ್ತು ತಿರುಗಲು 243 ದಿನಗಳು ಬೇಕಾಗುತ್ತವೆ. ಅಂದರೆ ಆತನ ಒಂದು ದಿನ ಒಂದು ವರ್ಷಕ್ಕಿಂತ ದೊಡ್ಡದು! ಎಲ್ಲ ಗ್ರಹಗಳಿಗೆ ತಮ್ಮ ಅಕ್ಷದಲ್ಲಿ ಸುತ್ತುವ ಸ್ಪರ್ಧೆ ಏರ್ಪಡಿಸಿದರೆ ಶುಕ್ರನಿಗೆ ಸಿಗುವುದು ಕೊನೆಯ ಸ್ಥಾನ. ಆತ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುವುದು ಇತರ ಗ್ರಹಗಳಂತೆ ಅಪ್ರದಕ್ಷಿಣಾಕಾರದಲ್ಲೇ. ಆದರೆ ತನ್ನ ಅಕ್ಷದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ತಿರುಗುತ್ತಾನೆ. ಹೀಗಾಗಿ ಶುಕ್ರನಲ್ಲಿ ನಿಂತು ನೋಡಿದ್ದೇ ಆದರೆ ಸೂರ್ಯ ಸೇರಿದಂತೆ ಎಲ್ಲ ಆಕಾಶಕಾಯಗಳು ಪಶ್ಚಿಮದಲ್ಲಿ ಉದಯಿಸಿ ಪೂರ್ವದಲ್ಲಿ ಅಸ್ತಮಿಸಿದಂತೆ ಕಾಣಿಸುತ್ತವೆ. ಈ ರೀತಿ ಅಕ್ಷದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ತಿರುಗುವ ಇನ್ನೊಂದು ಗ್ರಹ ಪ್ಲೂಟೋ. ಶುಕ್ರ ಗ್ರಹದ ಸರಾಸರಿ ತಾಪಮಾನ ಸುಮಾರು 460 ಡಿಗ್ರಿ ಸೆಂಟಿಗ್ರೇಡ್. ಆತನ ಮೇಲ್ಮೈಯನ್ನು ಬಿಳಿಯ ಮೋಡಗಳು ಸುತ್ತುವರಿದಿರುವುದರಿಂದ ಹೆಚ್ಚು ಬೆಳಕು ಪ್ರತಿಫಲಿಸಲ್ಪಟ್ಟು ಆಕಾಶದಲ್ಲಿ ಆತ ಉಜ್ಜ್ವಲವಾಗಿ ಕಾಣಿಸುತ್ತಾನೆ.
ಭೂಮಿಗಿಂತ ಒಳಗಿನ ಕಕ್ಷೆಯಲ್ಲಿರುವ ಶುಕ್ರ 224.7 ದಿನಗಳಲ್ಲಿ ಸೂರ್ಯನನ್ನು ಸುತ್ತು ಹಾಕುತ್ತಾ ತನಗಿಂತ ನಿಧಾನವಾಗಿ ಅಂದರೆ 365.26 ದಿನಗಳಲ್ಲಿ ಸೂರ್ಯನನ್ನು ಸುತ್ತುವ ಭೂಮಿಯನ್ನು 584 ದಿನಗಳಿಗೊಮ್ಮೆ ಹಿಂದಿಕ್ಕುತ್ತಾನೆ. ಹೀಗಾಗಿ ಭೂಮಿಯಿಂದ ನೋಡಿದಂತೆ ಆತ ಕೆಲವು ದಿನ ಸೂರ್ಯನ ಮುಂದೆ ಅಂದರೆ ಪಶ್ಚಿಮದ ಕಡೆಗೆ, ಕೆಲವು ದಿನ ಸೂರ್ಯನ ಹಿಂದೆ ಅಂದರೆ ಪೂರ್ವದ ಕಡೆಗೆ ಇರುವಂತೆ ಭಾಸವಾಗುತ್ತದೆ. ಸೂರ್ಯನ ಪಶ್ಚಿಮದಿಕ್ಕಿಗೆ ಇರುವಾಗ ಬೆಳಗಿನ ಜಾವ ಸೂರ್ಯೋದಯಕ್ಕಿಂತ ಮೊದಲು ಪೂರ್ವ ದಿಗಂತದಲ್ಲಿ, ಸೂರ್ಯನ ಪೂರ್ವ ದಿಕ್ಕಿಗೆ ಇರುವಾಗ ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದಲ್ಲಿ ಬರಿಗಣ್ಣಿಗೆ ಗೋಚರಿಸುತ್ತಾನೆ. ಆತ ಭೂಮಿಗಿಂತ ಒಳಗಿನ ಕಕ್ಷೆಯಲ್ಲಿರುವುದರಿಂದ ಮತ್ತು ಸೂರ್ಯನಿಗಿಂತ ಅತಿ ಹೆಚ್ಚು ಅಂದರೆ 47 ಡಿಗ್ರಿಯಷ್ಟು ಮಾತ್ರ ದೂರಕ್ಕೆ ಸರಿಯುವುದರಿಂದ ಏನಿದ್ದರೂ ಆತ ಹಗಲಿನ ತಾರೆ. ತಡ ರಾತ್ರಿ ಎಂದೂ ಕಾಣಿಸಲಾರ.
ಶುಕ್ರನು ಸೂರ್ಯನನ್ನು ಸುತ್ತುತ್ತ 584 ದಿನಗಳಿಗೊಮ್ಮೆ ಭೂಮಿಯನ್ನು ಹಿಂದಿಕ್ಕುತ್ತಾನೆ ಎಂದು ಈಗಾಗಲೇ ನೋಡಿದೆವಷ್ಟೇ. ಆ ಪಯಣದಲ್ಲಿ ಆತ ಸೂರ್ಯ ಮತ್ತು ಭೂಮಿಯ ನೇರ ನಡುವೆ ಬರುವುದನ್ನು ನಿಮ್ನತಮ ಸಂಯೋಗ (Inferior Conjunction) ಎನ್ನುತ್ತಾರೆ. ಆಗ ಆತ ಭೂಮಿಗೆ ಅತಿ ಸಮೀಪವಾಗಿದ್ದರೂ ಆತನ ಸೂರ್ಯನ ವಿರುದ್ಧ ದಿಕ್ಕಿನ ಅಂದರೆ ರಾತ್ರಿಯ ಮುಖ ನಮಗೆದುರಾಗಿರುವುದರಿಂದ ಅಂದು ನಮಗೆ ಶುಕ್ರನ ಅಮಾವಾಸ್ಯೆ. ಈ ಅಮಾವಾಸ್ಯೆಗಿಂತ 4 ದಿನ ಹಿಂದೆ ಮತ್ತು 4 ದಿನ ಮುಂದೆ ಒಟ್ಟು 8 ದಿನ ಆತ ನಮಗೆ ಕಾಣಿಸಲಾರ. ಭೂಮಿಯನ್ನು ಹಿಂದಿಕ್ಕಿದ ಆತ ತನ್ನ ಕಕ್ಷೆಯಲ್ಲಿ ಮತ್ತೂ ಮುಂದೆ ಮುಂದೆ ಹೋಗುತ್ತ elongation ಎನ್ನಲಾಗುವ ಭೂಮಿ, ಸೂರ್ಯ ಮತ್ತು ಶುಕ್ರನ ನಡುವಿನ ಕೋನವು ವೃದ್ಧಿಸುತ್ತಾ 47 ಡಿಗ್ರಿಯಷ್ಟು ಆಗಿ ಮತ್ತೆ ಕಮ್ಮಿಯಾಗುತ್ತಾ ಆತ ಸೂರ್ಯನ ಇನ್ನೊಂದು ಬದಿಯಲ್ಲಿ ಸರಿಯಾಗಿ ಭೂಮಿಯ ಎದುರು ಬರುವಾಗ ಶೂನ್ಯ ಡಿಗ್ರಿ ಆಗುತ್ತದೆ. ಈ ರೀತಿ ಆತ ಸೂರ್ಯನ ಇನ್ನೊಂದು ಬದಿಯಲ್ಲಿ ಭೂಮಿಯ ಎದುರು ಬರುವುದನ್ನು ಉಚ್ಚತಮ ಸಂಯೋಗ (Superior Conjunction) ಎನ್ನುತ್ತಾರೆ. ನಿಮ್ನತಮ ಸಂಯೋಗ ಸ್ಥಾನದಿಂದ ಹೊರಟು ಉಚ್ಚತಮ ಸಂಯೋಗ ಸ್ಥಾನದ ಶೂನ್ಯಕ್ಕೆ ತಲಪಲು ಇನ್ನೂ 8 ಡಿಗ್ರಿ ಇರುವಲ್ಲಿಯ ವರೆಗೆ ತಲಪಲು ಆತ ತೆಗೆದುಕೊಳ್ಳುವ 263 ದಿನ ಆತ ಸೂರ್ಯನ ಪಶ್ಚಿಮ ದಿಕ್ಕಿನಲ್ಲಿದ್ದು ಸೂರ್ಯೋದಯಕ್ಕಿಂತ ಸ್ವಲ್ಪ ಮೊದಲು ಪೂರ್ವದಿಗಂತದಲ್ಲಿ ಕಾಣಿಸಿಕೊಳ್ಳುತ್ತಾನೆ. ಸೂರ್ಯ ಮೇಲೆ ಬಂದಂತೆ ಆತನ ಪ್ರಭೆ ಮಂಕಾಗಿ ಆತ ನಮಗೆ ಕಾಣಿಸದಿದ್ದರೂ ದಿನವಿಡೀ ಸೂರ್ಯನ ಮುಂದುಗಡೆ ಪಶ್ಚಿಮದತ್ತ ಸಾಗುತ್ತಿರುತ್ತಾನೆ. ಈ ಭಾಗದ ಪಯಣದಲ್ಲಿ ಆತ ಸೂರ್ಯನ ಬೆಳಕನ್ನು ಪ್ರತಿಫಲಿಸುವ ಭಾಗ ಹೆಚ್ಚು ಹೆಚ್ಚು ಕಾಣಿಸುತ್ತ ಹೋಗುತ್ತದೆ. ಆದರೆ ಆತ ಭೂಮಿಯಿಂದ ದೂರ ದೂರ ಸಾಗುವುದರಿಂದ ಆತನ ಗಾತ್ರ ಚಿಕ್ಕದಾಗುತ್ತ ಹೋಗುತ್ತ, ಆತನ ಪ್ರತಿಫಲಿತ ಭಾಗ ಆಂಶಿಕವಾಗಿದ್ದರೂ ನಿಮ್ನತಮ ಸಂಯೋಗದಿಂದ 30ನೇ ದಿನ ಆತ ಭೂಮಿಗೆ ಇನ್ನೂ ಸಾಕಷ್ಟು ಸಮೀಪದಲ್ಲೇ ಇರುವುದರಿಂದ ಅತ್ಯಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತಾನೆ.
ಉಚ್ಚತಮ ಸಂಯೋಗದ 8 ಡಿಗ್ರಿ ಈಚೆಯಿಂದ 8 ಡಿಗ್ರಿ ಆಚೆ ವರೆಗೆ ಸಾಗಲು ಆತನಿಗೆ 50 ದಿನಗಳು ಬೇಕಾಗುತ್ತವೆ ಮತ್ತು ಆ ಸಮಯದಲ್ಲಿ ಸೂರ್ಯನ ಸಾಮೀಪ್ಯದ ಪ್ರಭೆಯ ಕಾರಣ ನಮಗೆ ಆತನನ್ನು ನೋಡಲು ಸಾಧ್ಯವಾಗುವುದಿಲ್ಲ. ಇದನ್ನೇ ಅಸ್ತ ಅಥವಾ ಮೌಢ್ಯ ಎನ್ನುವುದು. ಉಚ್ಚತಮ ಸಂಯೋಗದಂದು ಆತ ಸೂರ್ಯನ ಇನ್ನೊಂದು ಬದಿಯಲ್ಲಿ ಸರಿಯಾಗಿ ಭೂಮಿಯ ಎದುರು ಬರುವಾಗ ಗಾತ್ರದಲ್ಲಿ ಚಿಕ್ಕದಾಗುವ ಆತನ ಪೂರ್ಣ ಬೆಳಗಿದ ದುಂಡು ಮುಖ ಭೂಮಿಯ ಕಡೆ ಇದ್ದು ಅದು ಆತನ ಹುಣ್ಣಿಮೆ ಎನಿಸಿದರೂ ನಾವದನ್ನು ಕಾಣಲಾರೆವು. ನಿಮ್ನತಮ ಸಂಯೋಗದ 8 ಡಿಗ್ರಿ ಆಚೆಯಿಂದ 8 ಡಿಗ್ರಿ ಈಚೆಯ ವರೆಗೆ ಸಾಗಲು ಬರೇ 8 ದಿನ ಮತ್ತು ಉಚ್ಚತಮ ಸಂಯೋಗದ (Superior Conjunction) ಅಷ್ಟೇ ಕೋನಕ್ಕೆ 50 ದಿನ ಏಕೆ ಎಂಬ ಸಂದೇಹ ಮೂಡಬಹುದು. ಹತ್ತಿರದಲ್ಲಿರುವ ಬಸ್ಸು ವೇಗವಾಗಿ ಸಾಗಿದಂತೆ ಮತ್ತು ದೂರದ ವಿಮಾನ ನಿಧಾನವಾಗಿ ಚಲಿಸಿದಂತೆ ನಮಗೆ ಅನಿಸುವ ಹಾಗೆಯೇ ಇದು. ಎರಡು ಕಡೆಯೂ ಆತ ಚಲಿಸುವ ವೇಗ ಒಂದೇ. ನಮ್ಮ ಲೆಕ್ಕಾಚಾರ ಏನಿದ್ದರೂ ನಮ್ಮ ಕಣ್ಣಿಗೆ ಕಂಡಂತೆ.
ಉಚ್ಚತಮ ಸಂಯೋಗದ ನಂತರ ಆತ ಸೂರ್ಯನ ಪೂರ್ವ ಭಾಗಕ್ಕೆ ಚಲಿಸಿ ಮುಂದಿನ 63 ದಿನ ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದಲ್ಲಿ ಸಂಧ್ಯಾ ತಾರೆಯಾಗಿ ಸ್ವಲ್ಪ ಹೊತ್ತು ಕಾಣಿಸುತ್ತಿರುತ್ತಾನೆ. ಈ ಪಯಣದಲ್ಲೂ ಭೂಮಿ, ಸೂರ್ಯ, ಶುಕ್ರರ ನಡುವಿನ ಕೋನ ವೃದ್ಧಿಸುತ್ತಾ 47 ಡಿಗ್ರಿ ತಲಪಿ ಮತ್ತೆ ಕಡಮೆಯಾಗುತ್ತಾ ಶೂನ್ಯವಾಗುವಾಗ ಮತ್ತೆ ನಿಮ್ನತಮ ಸಂಯೋಗ ಸಂಭವಿಸಿ 263+50+263+8 = 584 ದಿನಗಳ ಚಕ್ರ ಪೂರ್ಣವಾಗುತ್ತದೆ. ಈ ಭಾಗದ ಪಯಣದಲ್ಲಿ ಆತ ಸೂರ್ಯನ ಬೆಳಕನ್ನು ಪ್ರತಿಫಲಿಸುವ ಭಾಗ ಕಡಮೆಯಾಗುತ್ತಾ ಹೋಗುತ್ತದೆ. ಇಲ್ಲೂ ನಿಮ್ನತಮ ಸಂಯೋಗಕ್ಕೆ 30 ದಿನ ಇರುವಂದು ಆತ ಆಂಶಿಕವಾಗಿ ಆದರೂ ಅತಿ ಉಜ್ಜ್ವಲನಾಗಿ ಗೋಚರಿಸುತ್ತಾನೆ.
ನಿಮ್ನತಮ ಸಂಯೋಗದ 8 ದಿನಗಳಂದೂ ಆತ ಕಾಣಿಸದಿದ್ದರೂ ಉಚ್ಚತಮ ಸಂಯೋಗ ಸಮಯದ 50 ದಿನಗಳ ಅಗೋಚರತೆಯನ್ನು ಮಾತ್ರ ಅಸ್ತ ಅಥವಾ ಮೌಢ್ಯ ಎಂದು ಧಾರ್ಮಿಕವಾಗಿ ಪರಿಗಣಿಸುವುದು ವಾಡಿಕೆ. 584 ದಿನಗಳಿಗೊಮ್ಮೆ ಸಂಭವಿಸುವ ಶುಕ್ರಾಸ್ತದ ಚಕ್ರ 8 ವರ್ಷಗಳಿಗೊಮ್ಮೆ ಪುನರಾವರ್ತನೆಯಾಗುತ್ತದೆ. ಅಂದರೆ ಸುಮಾರು 8 ವರ್ಷಗಳಿಗೊಮ್ಮೆ ವರ್ಷದ ಅದೇ ಕಾಲದಲ್ಲಿ ಶುಕ್ರಾಸ್ತ ಸಂಭವಿಸುತ್ತದೆ. ಭೂಮಿಯ ವರ್ಷದ 365 ದಿನಗಳು ಮತ್ತು ಶುಕ್ರನ ವರ್ಷದ 584 ದಿನಗಳು 5:8ರ ದಾಮಾಷೆಯದಲ್ಲಿರುವುದು ಇದಕ್ಕೆ ಕಾರಣ.
ಅಗೋಚರತೆಯ ಈ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಂದು ಸೂರ್ಯೋದಯಕ್ಕಿಂತ ಮೊದಲು ಅಥವಾ ಸೂರ್ಯಾಸ್ತದ ನಂತರ ಕೊಂಚ ಹೊತ್ತು ಮಾತ್ರ ಆತ ಸ್ಪಷ್ಟವಾಗಿ ಗೋಚರಿಸುವುದು. ದಿನದ ಉಳಿದ ಸಮಯದಲ್ಲೂ ಸೂರ್ಯನ ಹಿಂದೆ ಅಥವಾ ಮುಂದೆ ಆತ ಆಗಸದಲ್ಲಿ ಸಾಗುತ್ತಿರುವುದರಿಂದ ದಿಟ್ಟಿಸಿ ನೋಡಿದರೆ ಹಗಲಿಡೀ ಆತನನ್ನು ಬರಿಗಣ್ಣಿನಲ್ಲಿ ವೀಕ್ಷಿಸಲು ಸಾಧ್ಯವಂತೆ.
ಪಾಶ್ಚಾತ್ಯರು ಶುಕ್ರನಿಗೆ ಪ್ರೇಮ ಮತ್ತು ಸೌಂದರ್ಯದ ಪ್ರತೀಕವಾದ ರೋಮನ್ ದೇವತೆ ವೀನಸ್ ಹೆಸರಿಟ್ಟಿದ್ದಾರೆ. ನಮ್ಮ ಬೆಳ್ಳಿ ಇದಕ್ಕೆ ಸಂವಾದಿಯಾಗಬಹುದೇನೋ.