ಹೀಗೆ ದಕ್ಕಿಸಿಕೊಳ್ಳಬಹುದಾದ ಕರ್ನಾಟಕ ಸ್ವಾತಂತ್ರ್ಯಕಥನ
ಜನಪ್ರಿಯ ಹಿಂದಿ ಚಲನಚಿತ್ರ ‘ಲಗಾನ್’ ನೆನಪಿದೆಯಲ್ಲ? ಬ್ರಿಟಿಷರಿಗೆ ತೆರಿಗೆ ನೀಡಲಾಗದ ಹಳ್ಳಿಯೊಂದರ ಹೋರಾಟದ ಕಥೆ.
ಸೆಪ್ಟೆಂಬರ್ ೨೮, ೧೯೪೨
ಅವತ್ತು ಕರ್ನಾಟಕದ ಹಳ್ಳಿಯೊಂದರಲ್ಲಿ ‘ಲಗಾನ್’ದೃಶ್ಯಗಳು ಇನ್ನೂ ಗಂಭೀರವಾಗಿ ತೆರೆದುಕೊಂಡಿದ್ದವು. ಅಲ್ಲಿ ಬ್ರಿಟಿಷರೊಡನೆ ಚೆಂಡುದಾಂಡು ಆಡಿ ತೆರಿಗೆ ನಿಷ್ಕರ್ಷೆ ಮಾಡುವ ಪ್ರಸ್ತಾವವೇ ಇರಲಿಲ್ಲ. ನಾವು ಬ್ರಿಟಿಷರಿಗೆ ತೆರಿಗೆ ಕೊಡೊಲ್ಲ ಅಂದರೆ ಕೊಡೊಲ್ಲ ಅಷ್ಟೆ. ಹಾಗಂತ ಶಿಕಾರಿಪುರದ ಬಳಿಯಿರುವ ಈಸೂರು ಜನರೆಲ್ಲ ಒಂದುಗೂಡಿ ನಿರ್ಧರಿಸಿದರು. ಗ್ರಾಮದ ಎದುರು ಸ್ವರಾಜ್ಯ ಸರ್ಕಾರ ಎಂದು ಬೋರ್ಡು ಹಾಕಿ ಸ್ವಾತಂತ್ರ್ಯ ಘೋಷಿಸಿಕೊಂಡರು. ಬ್ರಿಟಿಷ್ ಅಧಿಕಾರಿಗಳ ಜತೆಗೂಡಿ ಅಮಲ್ದಾರನು ಕಂದಾಯ ಸಂಗ್ರಹಕ್ಕೆ ಬಂದಾಗ ಊರಲ್ಲಿ ಭಾರಿ ಪ್ರತಿರೋಧವೇ ಎದುರಾಗಿ ದಂಗೆಯೇ ಹೊತ್ತಿಕೊಂಡಿತು. ಆ ಘರ್ಷಣೆಯಲ್ಲಿ ಅಮಲ್ದಾರ ಹತನಾಗಿ ಹೋದ. ಇದರ ಪರಿಣಾಮವನ್ನು ಘೋರವಾಗಿಯೇ ಎದುರಿಸಬೇಕಾಯಿತು ಈಸೂರು. ಆ ಹಳ್ಳಿಯ ಮರುವಶಕ್ಕೆ ನುಗ್ಗಿದ ಪೊಲೀಸ್ ಪಡೆಗಳು ನೂರಾರು ಮಂದಿಯನ್ನು ಬಂಧಿಸಿ, ಐವರನ್ನು ಗಲ್ಲಿಗೇರಿಸಿದರು.
“ಏಸೂರು ಕೊಟ್ಟರೂ ಈಸೂರು ಕೊಡೆವು” (ಅವೆಷ್ಟೇ ಊರುಗಳು ಬ್ರಿಟಿಷರ ವಶವಾದರೂ ಈ ಊರನ್ನು ಮಾತ್ರ ಕೊಡೆವು ಎಂಬರ್ಥದಲ್ಲಿ) ಎಂಬ ಘೋಷಕ್ಕೆ ಪ್ರಖ್ಯಾತವಾಯಿತು ಆ ನೆಲ. ಬಂಧಿತರು ಬಿಡುಗಡೆಯಾಗಬೇಕಾದರೆ ಎರಡು ವರ್ಷ ಸವೆಸಬೇಕಾಯಿತು. ಹಲವರು ಭೂಗತರಾಗಿದ್ದುಕೊಂಡು ಹೋರಾಡಿದರು.
ಈಸೂರು ನಮ್ಮ ಕಣ್ಣೆದುರು ಆ ಕಾಲಘಟ್ಟವನ್ನು ತೆರೆದಿರಿಸಬಲ್ಲ ಒಂದು ಉದಾಹರಣೆ. ೧೯೪೨-೪೩ರ ಕ್ವಿಟ್ ಇಂಡಿಯಾ ಅಭಿಯಾನ ಕನ್ನಡದ ನೆಲದಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಉತ್ಕರ್ಷದಲ್ಲಿ ಹಳ್ಳಿ-ಪಟ್ಟಣಗಳನ್ನೆಲ್ಲ ಆವರಿಸಿತ್ತು. ಸುಮಾರು ೩೦,೦೦೦ ಕಾರ್ಮಿಕರು ಎರಡು ವಾರಗಳ ಅವಧಿಗೆ ಕೆಲಸವನ್ನೇ ನಿಲ್ಲಿಸಿದರು. ಇಂಥ ಕಾರ್ಮಿಕರ ಧರಣಿಯ ಮೇಲೆ ಪೊಲೀಸರಿಂದ ಗುಂಡು ಸಿಡಿದಾಗ ೫೦ ಮಂದಿ ಪ್ರಾಣ ತೆರಬೇಕಾಯಿತು. ಹಾವೇರಿಯಲ್ಲಿ ಮೈಲಾರ ಮಹಾದೇವಪ್ಪ ಮತ್ತವರ ಇಬ್ಬರು ಸಹವರ್ತಿಗಳು ಆಂದೋಲನ ಸಂದರ್ಭದಲ್ಲಿ ಗುಂಡೇಟು ತಿಂದು ಪ್ರಾಣಾರ್ಪಣೆ ಮಾಡಿದರು. ಮೈಸೂರು ಸಂಸ್ಥಾನದ ಪ್ರದೇಶದಿಂದಲೇ ಸುಮಾರು ೧೧,೦೦೦ ಮಂದಿ ಜೈಲುವಾಸ ಅನುಭವಿಸಿದರು.
ಇದಕ್ಕೂ ಪೂರ್ವದಲ್ಲೇ ೧೯೩೦ರಲ್ಲಿ ಗಾಂಧಿಯವರ ಅಸಹಕಾರ ಚಳವಳಿಯನ್ನು ಕನ್ನಡದ ಜನ ತಮ್ಮ ಎದೆಗಪ್ಪಿಕೊಂಡ ಬಗೆಯೂ ಅನನ್ಯವೇ. ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹ ಶುರುವಾಯಿತು. ಅನಂತರ ಕಾನೂನು ಭಂಗ ಅಭಿಯಾನಕ್ಕೆ ಜನ ಒತ್ತುಕೊಟ್ಟರು. ಸಾರಾಯಿ ಅಂಗಡಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ, ಕರ ನಿರಾಕರಣೆಗಳು ತೀವ್ರಗೊಂಡವು. ಕನ್ನಡ ಮಾತಾಡುವ ಬ್ರಿಟಿಷ್ ಜಿಲ್ಲೆಗಳಲ್ಲಿ ಸುಮಾರು ೨,೦೦೦ ಮಂದಿ ಬಂಧಿತರಾದರು. ಗಾಂಧಿ-ಇರ್ವಿನ್ ಒಪ್ಪಂದದ ಕಾರಣಕ್ಕೆ ಸ್ವಲ್ಪ ತಣ್ಣಗಾದ ಅಭಿಯಾನ ಅನಂತರ ೧೯೩೨ರಲ್ಲಿ ಮತ್ತೆ ತೀವ್ರವಾಯಿತು. ಸಿದ್ದಾಪುರ ಮತ್ತು ಅಂಕೋಲಾಗಳಲ್ಲಂತೂ ತೆರಿಗೆ ಕಟ್ಟುವುದಿಲ್ಲ ಎಂಬ ಅಸಹಕಾರ ತೀವ್ರಕ್ಕೆ ಹೋಯಿತು. ಸುಮಾರು ೮೦೦ ಕುಟುಂಬಗಳ ಜಮೀನು ಹರಾಜಾಯಿತು. ಉತ್ತರಕನ್ನಡ ಒಂದರಲ್ಲೇ ಸುಮಾರು ಸಾವಿರ ಮಂದಿ ಜೈಲು ಸೇರಿದರು. ಮಹಿಳೆಯರು ವಿಧವೆಯರೂ ಸೇರಿದಂತೆ ಆ ಜನರೆಲ್ಲ ತಮ್ಮ ಭೂಮಿಯನ್ನು ವಾಪಸು ಪಡೆಯಬೇಕಾದರೆ ಆರೇಳು ವರ್ಷಗಳೇ ಕಳೆದುಹೋದವು.
ಸ್ವಾತಂತ್ರ್ಯಾನಂತರ ಕರ್ನಾಟಕವೆಂದು ಹೆಸರಾದ ಕನ್ನಡ ನೆಲದ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಿಕೊಳ್ಳುತ್ತ, ಯಾವುದೇ ಮುಂಚೂಣಿ ಹೀರೋಗಳನ್ನು ಉಲ್ಲೇಖಿಸುವುದಕ್ಕೆ ಮೊದಲು ಇವುಗಳನ್ನು ಸ್ಮರಿಸುತ್ತಿರುವುದಕ್ಕೆ ಕಾರಣವಿಷ್ಟೆ. ಕನ್ನಡ ನೆಲದಲ್ಲಿ ಸ್ವಾತಂತ್ರ್ಯ ಆಂದೋಲನವೆಂಬುದು ಅವತ್ತಿನ ಪ್ರಮುಖ ಜಾಗಗಳಲ್ಲಿ ಮಾತ್ರವೇ ಮಾಡಿದ ಪ್ರದರ್ಶನದ ಜಾಥಾ ಆಗಿರಲಿಲ್ಲ, ಅದು ಮೂಲೆಮೂಲೆಗಳನ್ನೂ ಆವರಿಸಿತ್ತು ಹಾಗೂ ನಿಜಾರ್ಥದಲ್ಲಿ ಜನರ ನಡುವಿನ ಕಿಚ್ಚಾಗಿತ್ತು ಎಂಬುದನ್ನು ಮನನ ಮಾಡಿಕೊಳ್ಳುವುದಕ್ಕಾಗಿ.
ಸಂಘರ್ಷದ ಜತೆಯಲ್ಲೇ ಸುಧಾರಣೆ, ಸೃಜನಶೀಲತೆ
ಯಾವುದೇ ದೊಡ್ಡ ಹೋರಾಟವೊಂದಕ್ಕೆ ಎದುರಾಗುವ ದ್ವಂದ್ವದ ಸವಾಲು ಸ್ವಾತಂತ್ರ್ಯ ಹೋರಾಟಕ್ಕೂ ಇತ್ತು. ಏನು ಆ ಹೋರಾಟದ ದ್ವಂದ್ವ? ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವುದೇ ಮುಖ್ಯ ಗುರಿಯಾಗಿದ್ದರೂ ಅದರ ಜಾಯಮಾನ ಹೇಗಿರಬೇಕು? ಅಂದರೆ, ಕೇವಲ ಬ್ರಿಟಿಷರ ವಿರುದ್ಧ ಘೋಷಣೆ, ಸಂಘರ್ಷ ಇವುಗಳಲ್ಲಿ ಸರ್ವಶಕ್ತಿಯನ್ನೂ ವ್ಯಯಿಸಬೇಕೋ ಅಥವಾ ಕಾಲದ ಅಗತ್ಯಗಳಾದ ಇತರ ಸಮಸ್ಯೆ-ಸವಾಲುಗಳಿಗೂ ಶ್ರಮ ವ್ಯಯಿಸುತ್ತ ಸಾಗಬೇಕೋ?
ಇದು ಅವತ್ತಿನ ಕಾಲಘಟ್ಟದಲ್ಲಿ ತುಂಬ ಕಾಡಿದ ಪ್ರಶ್ನೆಯಾಗಿರಲಿಕ್ಕೆ ಸಾಕು. ‘ನಮ್ಮ ಸಮಸ್ಯೆ-
ಕುಂದುಕೊರತೆ ಅವುಗಳ ಬಗ್ಗೆ ಈಗ ವಿಮರ್ಶಿಸುವುದೇ ಬೇಡ, ಮೊದಲು ಬ್ರಿಟಿಷರನ್ನು ತೊಲಗಿಸೋಣ’ ಎಂಬುದೊಂದು ವಿಚಾರಧಾರೆ. ಆದರೆ ‘ನಾವು ಹೀಗೆ ಮಾಡಿದರೆ ಸಮಾಜ ರೂಪುಗೊಳ್ಳುವ ಹಂತದ ಎಲ್ಲ ಸಂವಾದಗಳಿಂದ ಹೊರಗಿದ್ದು, ವಿದೇಶಿಯರನ್ನು ಹೊರಗೋಡಿಸಿದ ನಂತರ ನಮ್ಮ ನೆಲವನ್ನು ಕಟ್ಟುವ ಕ್ರಿಯೆಯ ಬಗ್ಗೆ ಅರಿವು-ಸಾಮರ್ಥ್ಯಗಳಿಲ್ಲದವರಾಗಿ ಹೋಗುತ್ತೇವೆ’ ಎಂಬ ವಿಚಾರಧಾರೆ ಇನ್ನೊಂದು ಬಗೆಯದ್ದು. ಕರ್ನಾಟಕದ ಇತಿಹಾಸವನ್ನು ಗಮನಿಸಿದಾಗ, ಇದರ ಮುಂದಾಳುಗಳೆಲ್ಲ ಹೆಚ್ಚಿನದಾಗಿ ಎರಡನೇ ಮಾರ್ಗವನ್ನು ಆಯ್ದುಕೊಂಡಿದ್ದರಿಂದ ಸ್ವಾತಂತ್ರ್ಯಾನಂತರ ಉತ್ತರದ ಹಲವು ರಾಜ್ಯಗಳಿಗೆ ಹೋಲಿಸಿದರೆ ಕನ್ನಡ ನೆಲವನ್ನು ಸಂಪದ್ಭರಿತವಾಗಿ ಕಟ್ಟುವುದಕ್ಕೆ ಅವಕಾಶವಾಯಿತು ಎಂಬುದು ಅರಿವಾಗುತ್ತದೆ.
ಕರ್ನಾಟಕದಲ್ಲಿ ಸತ್ಯಾಗ್ರಹದ ಅಗ್ರಗಣ್ಯ ಸೇನಾನಿ ಕಾರ್ನಾಡ ಸದಾಶಿವರಾಯರ ಉದಾಹರಣೆಯನ್ನೇ ಗಮನಿಸೋಣ. ಬ್ರಿಟಿಷರಿಂದ ಮುಕ್ತಿ ಎಂಬುದು ಅವರ ಹೋರಾಟ ಜೀವನದ ಮುಖ್ಯ ಅಂಶ ಹೌದು. ಆದರೆ ಬ್ರಿಟಿಷರನ್ನು ಹೊರಗಟ್ಟಿದ ನಂತರವಷ್ಟೆ ನಮ್ಮ ಸುಧಾರಣೆಗಳ ಬಗ್ಗೆ ಮಾತಾಡೋಣ ಎಂಬ ನಡೆ ಅವರದ್ದಲ್ಲವಾಗಿತ್ತು. ವಿಧವೆಯರು ಮತ್ತು ಬಡ ಮಹಿಳೆಯರ ಉದ್ಧಾರಕ್ಕಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಅವರು ದೊಡ್ಡಮಟ್ಟದಲ್ಲಿ ತೊಡಗಿಸಿಕೊಂಡಿದ್ದರು.
ಬೆಳಗಾವಿಯ ಕೆ.ಜಿ. ಗೋಖಲೆ, ಶೌಚಾಲಯ ತೊಳೆಯುವ ಸಮುದಾಯದವರ ಮಧ್ಯೆ ನಿಂತು ಕೆಲಸ ಮಾಡಿದರು. ಚರ್ಮದ ಕೆಲಸ ಮಾಡುವವರಿಗೆಂದು ಶಾಲೆ ಸ್ಥಾಪಿಸಿದರು.
ಬ್ರಿಟಿಷರ ವಿರುದ್ಧ ಗುಟುರುಹಾಕುತ್ತಲೇ ಧಾರವಾಡದ ನಾ.ಸು. ಹರ್ಡೀಕರರು ಸೇವಾ ದಳವನ್ನು ಕಟ್ಟಿದರು. ಅಂಥ ಕಟ್ಟುವ ಕೆಲಸದ ತಾಲೀಮು ಇದ್ದಿದ್ದರಿಂದಲೇ ಸ್ವಾತಂತ್ರ್ಯಾನಂತರ ಆರೋಗ್ಯಸಂಸ್ಥೆಗಳನ್ನು ಕಟ್ಟುವುದಕ್ಕೆ ಅವರಿಗೆ ಸಹಾಯವಾಯಿತು.
ಇವತ್ತಿನ ಕಾಲಘಟ್ಟದಲ್ಲಿ ನಿಂತಿರುವ ನಾವೆಲ್ಲ, ಯಾರು ತಂತ್ರಜ್ಞಾನವನ್ನು ತಮ್ಮ ಗುರಿಗೆ ಪೂರಕವಾಗಿ ಬಳಸಿಕೊಳ್ಳುವುದಕ್ಕೆ ಬಲ್ಲರೋ ಅವರಿಗೆ ಭವಿಷ್ಯವಿದೆ ಎನ್ನುತ್ತೇವೆ. ಇದೇ ತರ್ಕವನ್ನು ಉಪಯೋಗಿಸಿ ಒಮ್ಮೆ ಆ ಕಾಲಘಟ್ಟದಲ್ಲಿ ನಿಂತು ಯೋಚಿಸಿದರೆ ತಿಳಿಯುತ್ತದೆ, ಅವತ್ತಿನ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಕನ್ನಡ ನೆಲದ ನಮ್ಮ ಹಿರಿಯರು ತುಂಬ ಮುಂದಿದ್ದರು. ಇವತ್ತಿಗೆ ಹಳೆಯದೆನಿಸಿಬಿಡಬಹುದಾದ ಮುದ್ರಣ ಅವತ್ತಿನ ಕಾಲಕ್ಕೆ ಹೊಚ್ಚ ಹೊಸ ಅನ್ವೇಷಣೆ. ಸ್ವಾತಂತ್ರ್ಯದ ಕಿಚ್ಚನ್ನು ಹಬ್ಬಿಸುವುದಕ್ಕೆ, ದೇಶವನ್ನು ಏಕಮುಖವಾಗಿ ಹೋರಾಟವೊಂದಕ್ಕೆ ಸಿದ್ಧಗೊಳಿಸುವುದಕ್ಕೆ ಪತ್ರಿಕೆಗಳು ವಹಿಸಿದ ಪಾತ್ರ ಬಹಳ ಮಹತ್ತ್ವದ್ದು. ಈ ಹಿನ್ನೆಲೆಯಲ್ಲಿ ಕನ್ನಡದ ನೆಲವನ್ನು ಆವರಿಸಿಕೊಂಡಿದ್ದ ಪತ್ರಿಕೆಗಳ ಮಾಹಿತಿ ನೋಡುತ್ತ ಹೋದರೆ ಆಶ್ಚರ್ಯವಾಗದೇ ಇರದು.
ಮೈಸೂರಿನಿಂದ ಪ್ರಕಟವಾಗುತ್ತಿದ್ದ ಎಂ. ವೆಂಕಟಕೃಷ್ಣಯ್ಯನವರ ವೃತ್ತಾಂತ ಚಿಂತಾಮಣಿ (೧೮೮೫), ಕರಾವಳಿ ಕರ್ನಾಟಕದ ಸುವಾಸಿನಿ (೧೯೦೦), ಸ್ವದೇಶಾಭಿಮಾನಿ (೧೯೦೫), ಹುಬ್ಬಳ್ಳಿ ಕೇಂದ್ರಿತ ಕನ್ನಡ ಕೇಸರಿ (೧೯೦೨), ವಿಜಯಪುರದ ಕರ್ನಾಟಕ ವೈಭವ (೧೮೯೭) – ಹೀಗೆ ಒಂದು ಮಾಧ್ಯಮ ಮೇಲ್ಪಂಕ್ತಿಯನ್ನೇ ಕನ್ನಡದ ನೆಲದಲ್ಲಿ ಕಾಣಬಹುದಾಗಿತ್ತು.
ಸ್ವಾತಂತ್ರ್ಯ ಸಂಘರ್ಷ ಚಾಲ್ತಿಯಲ್ಲಿದ್ದ ಕಾಲಕ್ಕೇ ಕನ್ನಡದ ನೆಲದಲ್ಲಿ ಸುಧಾರಣೆ, ಅನ್ವೇಷಣೆ, ಸಾಂಸ್ಥಿಕ ಅಡಿಪಾಯಗಳ ನಿರ್ಮಾಣ ಇವೆಲ್ಲವೂ ಸಾಗುತ್ತಲೇ ಇದ್ದಿದ್ದಕ್ಕೆ ಮೈಸೂರು ಮಹಾರಾಜರ ಕೊಡುಗೆಯೂ ಬಹಳ ದೊಡ್ಡದಿತ್ತು. ವಿಶ್ವೇಶ್ವರಯ್ಯನವರ ಎಂಜಿನಿಯರಿಂಗ್ ಅದ್ಭುತಗಳು ಎಲ್ಲರಿಗೂ ತಿಳಿದಿರುವಂಥವೇ. ೧೯೧೧ರಲ್ಲಿ ಟಾಟಾ ಸಮೂಹದ ಧನಸಹಾಯದಲ್ಲಿ, ಮಹಾರಾಜರು ನೀಡಿದ ಭೂಮಿಯಲ್ಲಿ ಇಂಡಿಯನ್ ಇನ್ಸ್ಟ್ಟಿಟ್ಯೂಟ್ ಆಫ್ ಸಯನ್ಸ್ ಅಡಿಗಲ್ಲು ಕಂಡಿತು.
ರಾಷ್ಟ್ರೀಯತೆಯ ಧಾರೆ
ಹೀಗೆ ಹೋರಾಟದ ನಡುವೆಯೇ ತನ್ನನ್ನು ಕಾಲದ ಅಗತ್ಯಗಳಿಗೂ ಒಗ್ಗಿಸಿಕೊಳ್ಳುತ್ತ ಹೋದ ಕನ್ನಡನಾಡು, ಸ್ವಾತಂತ್ರ್ಯ ಹೋರಾಟದ ಮಹತ್ತಾದ ಆಶಯದಲ್ಲಿ ರಾಷ್ಟ್ರೀಯಧಾರೆಯ ವಿಚಾರದೊಂದಿಗೆ ತನ್ನನ್ನು ತೊಡಗಿಸಿಕೊಳ್ಳುವಲ್ಲಿ, ಗುರುತಿಸಿಕೊಳ್ಳುವಲ್ಲಿ ವಿಳಂಬ ಮಾಡಲಿಲ್ಲ.
ದಕ್ಷಿಣ ಆಫ್ರಿಕಾದಿಂದ ಹಿಂದಕ್ಕೆ ಬಂದು ೧೯೧೫ರಲ್ಲಿ ಗಾಂಧಿಯವರು ಮದ್ರಾಸಿಗೆ ಭೇಟಿ ನೀಡಿದಾಗ, ಡಿ.ವಿ. ಗುಂಡಪ್ಪನವರ ಒತ್ತಾಸೆಯ ಮೇರೆಗೆ ಬೆಂಗಳೂರಿಗೆ ಚುಟುಕು ಭೇಟಿ ನೀಡಿ ಗೋಪಾಲಕೃಷ್ಣ ಗೋಖಲೆಯವರ ಭಾವಚಿತ್ರದ ಅನಾವರಣ ಮಾಡಿ ಹೋಗಿದ್ದರು ಎನ್ನುತ್ತದೆ ಚರಿತ್ರೆ. ಆನಂತರ ಕನ್ನಡ ನಾಡು ಗಾಂಧಿಯವರ ಹಲವು ಭೇಟಿಗಳನ್ನು ಕಂಡಿತು.
೧೯೨೦ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಕರ್ನಾಟಕದಿಂದ ೮೦೦ ಮಂದಿ ಹೋಗಿ ಪಾಲ್ಗೊಂಡಿದ್ದರು.
ಸ್ವದೇಶೀ ಎಂಬುದು ದೇಶದ ಮಟ್ಟದಲ್ಲಿ ಆಗುತ್ತಿದ್ದ ಆಂದೋಲನವಾದರೆ ಅದನ್ನು ಕರ್ನಾಟಕದ ಮಟ್ಟದಲ್ಲಿ ಸಶಕ್ತವಾಗಿ ಅನುಷ್ಠಾನಗೊಳಿಸುವಲ್ಲಿ ಹರ್ಡೇಕರ ಮಂಜಪ್ಪ ಅವರಂಥ ಸೇನಾನಿಗಳು ಬದುಕನ್ನೇ ಮುಡಿಪಿಟ್ಟರು.
ಬ್ರಿಟಿಷರ ಬಂಗಾಳ ವಿಭಜನೆ ವಿರುದ್ಧದ ಚಳವಳಿಯಲ್ಲೂ ಕನ್ನಡದ ನೆಲ ತನ್ನ ಪ್ರತಿರೋಧದ ಕಾವನ್ನು ಚೆನ್ನಾಗಿಯೇ ತೋರಿಸಿತು.
ಕನ್ನಡ ನೆಲದ ಸಂಘರ್ಷ ದೀವಿಗೆ
ಯಾವುದೇ ಹೋರಾಟ ಇಲ್ಲವೇ ಸಂಘರ್ಷಕ್ಕೆ ಮೂಲತಃ ಒಂದು ಕಿಚ್ಚು, ಭಾವೋತ್ಕರ್ಷ ಬೇಕಷ್ಟೆ. ಈ ಲೇಖನದ ಪ್ರಾರಂಭದಲ್ಲಿ ಸೂಚಿಸಿದಂತೆ ಕನ್ನಡದ ನೆಲದಲ್ಲಿ ಅಂಥ ಸ್ವಾತಂತ್ರ್ಯದ ಕಿಚ್ಚು ಸರ್ವವ್ಯಾಪಕತೆ ಹೊಂದಿತ್ತು. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಭೂಗತರಾಗಿ ಹೋರಾಡುತ್ತಿದ್ದವರಿಗೆ ಮನೆಯಲ್ಲಿ ಆಹಾರ ನೀಡಿ, ಹಣಕಾಸು ಪೂರೈಕೆಗಳ ಹೊಣೆಯನ್ನೂ ನಿರ್ವಹಿಸಿದ ಉಮಾಬಾಯಿ ಕುಂದಾಪುರ ಅಂಥವರು ಸ್ವಾತಂತ್ರ್ಯೋತ್ತರ ಅರಸಿಬಂದ ತಾಮ್ರಪತ್ರ ಪಿಂಚಣಿಗಳನ್ನೆಲ್ಲ ನಿರಾಕರಿಸಿ ನೇಪಥ್ಯದಲ್ಲುಳಿದ ಅನನ್ಯತೆಯನ್ನೂ ಈ ನೆಲ ಕಂಡಿದೆ.
ಅಂಥ ಎಲ್ಲ ಉತ್ಕರ್ಷಗಳ ನಡುವೆ ನಿಂತೂ, ಕೇವಲ ಭಾವೋತ್ಕರ್ಷದ ಹಂತದಲ್ಲಿ ಉಳಿಯದೆ, ಸಂಘರ್ಷದಾಚೆಯ ಸೃಜನಶೀಲ ದೃಷ್ಟಿಯೊಂದನ್ನು ದಕ್ಕಿಸಿಕೊಂಡ, ನಮಗೆ ಸಲ್ಲದ ವ್ಯವಸ್ಥೆಯೊಂದನ್ನು ಕಿತ್ತುಹಾಕುತ್ತಲೇ ಪರ್ಯಾಯ ವ್ಯವಸ್ಥೆಯೊಂದನ್ನು ಸೃಜಿಸುವತ್ತಲೂ ಗಮನ ಕೊಡುವ ಮಾದರಿಯೊಂದನ್ನು ನಾವು ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಪುಟಗಳಿಂದ ದಕ್ಕಿಸಿಕೊಳ್ಳಬಹುದೇನೋ. ಅಂಥ ದರ್ಶನ ನಮ್ಮ ಮುಂದಿನ ಸವಾಲು-ಸಂಘರ್ಷಗಳ ಹಾದಿಯಲ್ಲಿ ದೀವಿಗೆಯಾದೀತು.
ಮುಖ್ಯ ಆಕರ: ಗ್ಯಾಜಟಿಯರ್ ಕರ್ನಾಟಕ