ಪ್ರತಿ ಸಂಧಿಕಾಲದಲ್ಲಿಯೂ ಇರುವಂತೆ ಈ ಬಾರಿಯೂ ಊಹಾಪೋಹಗಳು ಧಾರಾಳವಾಗಿಯೆ ಇದ್ದವಾದರೂ ಚದುರಂಗದಾಟಗಳ ಫಲಸ್ವರೂಪವಾಗಿ ಅಂತಿಮವಾಗಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಮೂವತ್ತನೆಯ ಮುಖ್ಯಮಂತ್ರಿಯ ಸ್ಥಾನ ಒಲಿದುಬಂದು ಜುಲೈ ೨೮ರಂದು ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೇರೆಲ್ಲ ಕಾರಣಗಳಿಗಿಂತ ಮಿಗಿಲಾಗಿ ಅವರು ಎಲ್ಲ ಬಣಗಳಿಗೂ ಸಮ್ಮತರಾಗಿರುವುದೂ ಪ್ರತಿಪಕ್ಷಗಳನ್ನು ಅವರು ಸಮರ್ಥವಾಗಿ ಎದುರಿಸಬಲ್ಲರೆಂಬ ವ್ಯಾಪಕ ಭಾವನೆಯೂ ಅವರ ಆಯ್ಕೆಗೆ ದಾರಿಮಾಡಿದ್ದಿರಬೇಕು ಎಂಬುದು ಸ್ಪಷ್ಟವೇ ಆಗಿದೆ.
ರಾಜ್ಯವೊಂದರ ರಾಜಕೀಯ ಜೀವನದಲ್ಲಿ ಆಗಿಂದಾಗ ಪರಿವರ್ತನೆಯಾಗುವುದು ಒಂದು ಸಹಜ ಪ್ರಕ್ರಿಯೆ. ಯಾವುದೇ ವ್ಯವಸ್ಥೆ ನಿರಂತರವಾಗಿ ಏಕರೂಪದಲ್ಲಿ ಮುಂದುವರಿಯಲೆಂದು ನಿರೀಕ್ಷಿಸುವುದು ಅವ್ಯವಹಾರ್ಯ. ಹಾಗೆ ಕರ್ನಾಟಕದ ರಾಜಕೀಯ ರಂಗದಲ್ಲಿಯೂ ಇದೀಗ ಸ್ಥಿತ್ಯಂತರವಾಗಿದೆ. ಕಳೆದ ಹಲವು ತಿಂಗಳಿAದ ವಿವಿಧ ಕಾರಣಗಳಿಂದ ತಲೆದೋರಿದ್ದ ಅನಿಶ್ಚಿತತೆಗಳಿಗೆ ಜುಲೈ ೨೬ರಂದು ತೆರೆಬಿದ್ದಿದೆ. ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರಯಿಸಿದುದರ ಸಂಭ್ರಮಾಚರಣೆಯೊಡಗೂಡಿಯೆ ರಾಜೀನಾಮೆ ಸಲ್ಲಿಸಿ ಮುಂದಿನ ನಾಯಕತ್ವದ ಪಥವನ್ನು ಸುಗಮಗೊಳಿಸಿತು.
ಪ್ರಸ್ತುತ ಸನ್ನಿವೇಶದ ವಿಕಟತೆಯನ್ನೂ ಪರಿವರ್ತನೆಯ ಅನಿವಾರ್ಯತೆಯನ್ನೂ ಅಂಗೀಕರಿಸುವವರೂ ಮರೆಯಲಾಗದುದು ಕಳೆದ ನಾಲ್ಕು ದಶಕಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಸಾರಥ್ಯವನ್ನು ವಹಿಸಿ ತೀರಾ ಪ್ರತಿಕೂಲ ಸಂದರ್ಭಗಳ ನಡುವೆಯೂ ಪಕ್ಷವನ್ನು ಬೆಳೆಸುವುದರಲ್ಲಿ ಬಿ.ಎಸ್. ಯಡಿಯೂರಪ್ಪನವರು ಮೆರೆದ ದಾರ್ಢ್ಯ ಮತ್ತು ಪ್ರಯತ್ನಸಾತತ್ಯ. ೧೯೮೩ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗಿನಿಂದ ಅವರು – ಹಲವೊಮ್ಮೆ ಏಕಾಂಗವೀರರಾಗಿ – ತಮ್ಮ ಪಕ್ಷದ ಹೆಸರನ್ನೂ ಪ್ರತಿಷ್ಠೆಯನ್ನೂ ಉಳಿಸಿಕೊಂಡು ಬಂದದ್ದು ಒಂದು ದೀರ್ಘವೂ ರೋಮಾಂಚಕರವೂ ಆದ ಯಶೋಗಾಥೆ. ಇಡೀ ನಾಡಿನಲ್ಲಿಯೇ ಅದೊಂದು ಅತುಲ್ಯ ಸಾಧನೆಯೆಂದಲ್ಲಿ ಅದು ಅತ್ಯುಕ್ತಿಯಾಗದು. ದಕ್ಷಿಣಭಾರತದಲ್ಲಿ ಭಾಜಪಾಕ್ಕೆ ರಾಜ್ಯಾಧಿಕಾರದ್ವಾರವನ್ನು ತೆರೆಯಿಸಿದವರೇ ಯಡಿಯೂರಪ್ಪ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರೂ ಪ್ರತಿ ಬಾರಿಯೂ ಏನೇನೊ ಕಾರಣಗಳಿಂದ ಅವಧಿಪೂರ್ವದಲ್ಲಿಯೆ ಅವರು ಪದತ್ಯಾಗ ಮಾಡಬೇಕಾಗಿಬಂದದ್ದು ಒಂದು ವಿಧಿವೈಕಟ್ಯವೆಂದೇ ಹೇಳಬೇಕಾಗಿದೆ.
ಯಾವುದೇ ನಾಯಕರ ಬಗೆಗೆ ಮಾಡಬಹುದಾದ ಗತಾನುಗತಿಕ ಟೀಕೆಗಳು ಅವರಿಗೂ ಮೆತ್ತಿಕೊಂಡವಾದರೂ ಮತಾತೀತ ಉದಾರವಾದಿ ನೆಲೆಗಟ್ಟಿನಿಂದ ಅವರು ಪಕ್ಕಕ್ಕೆ ಸರಿದರೆಂಬ ಆಪಾದನೆಯನ್ನು ಯಾರೂ ಮಾಡಿಲ್ಲ. ಯಾವ ಜನವರ್ಗವೂ ಇದುವರೆಗೆ ಅವರನ್ನು ವಿರೋಧಿ ಎಂದು ಭಾವಿಸಿಲ್ಲ. ತಮ್ಮ ಬಗೆಗೆ ಅನುದಾರವಾಗಿ ವರ್ತಿಸಿದ್ದವರ ವಿಷಯದಲ್ಲಿಯೂ ಅವರೆಂದೂ ಪ್ರತೀಕಾರಭಾವನೆಗೆ ಒಳಗಾಗಲಿಲ್ಲ. ಈ ವ್ಯಕ್ತಿಗುಣಗಳು ಅವರ ಆಡಳಿತದ ಸಾಧನೆಗಳಿಗೆ ಹೆಚ್ಚಿನ ಮೆರುಗನ್ನು ತಂದಿತ್ತಿದ್ದವು.
ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರಿಲ್ಲದ ಕರ್ನಾಟಕದ ರಾಜಕೀಯವನ್ನು ಊಹಿಸುವುದೇ ಅಶಕ್ಯ ಎಂಬ ಭಾವನೆಯನ್ನು ನಿರಾಧಾರವೆನ್ನಲಾಗದು. ಅವರ ವ್ಯಕ್ತಿಗುಣಸಮೃದ್ಧಿಯನ್ನು ಗಮನಿಸಿಯೇ ಪ್ರಧಾನಿ ಅಟಲಬಿಹಾರಿ ವಾಜಪೇಯಿಯವರು ಅವರನ್ನು ಎನ್.ಡಿ.ಎ. ಸರ್ಕಾರದಲ್ಲಿ ಕೇಂದ್ರ ಸಚಿವರಾಗಲು ಆಮಂತ್ರಿಸಿದ್ದುದು ಮೊದಲಾದವೆಲ್ಲ ಈಗ ಇತಿಹಾಸ. ಹಗಲುರಾತ್ರಿ ಜನಸಂಪರ್ಕದಲ್ಲಿದ್ದು ಎಲ್ಲ ಜನಪರ ಹೋರಾಟಗಳ ಮುಂಚೂಣಿಯಲ್ಲಿ ನಿರಂತರ ಸಕ್ರಿಯರಾಗಿದ್ದ ಮುತ್ಸದ್ದಿ ಯಡಿಯೂರಪ್ಪ. ಸಾಲಮನ್ನಾ ಮತ್ತಿತರ ಸವಲತ್ತುಗಳಿಗಾಗಿ ರೈತ ಸಮುದಾಯದ ಪರವಾಗಿ ಆರೂಢ ಸರ್ಕಾರಗಳನ್ನು ಎಚ್ಚರಿಸುವ ಜಾಥಾಗಳು, ‘ಸಿ’ ಮತ್ತು ‘ಡಿ’ ವರ್ಗದ ಜಮೀನುಗಳ ರೈತರನ್ನು ಸರ್ಕಾರ ಒಕ್ಕಲೆಬ್ಬಿಸಹೊರಟಿದ್ದಾಗ ಅದರ ವಿರುದ್ಧ ಯಶಸ್ವಿ ಹೋರಾಟ, ಕೂಲಿಗಾಗಿ ಕಾಳು ಯೋಜನೆಯಡಿಯಲ್ಲಿ ನಡೆದಿದ್ದ ಅವ್ಯವಹಾರಗಳ ವಿರುದ್ಧ ದಿಟ್ಟ ಸೆಣಸಾಟ, ಬಗರ್ಹುಕುಂ ಸಾಗುವಳಿದಾರರ ಪರವಾದ ಹೋರಾಟಗಳು, ರೈತರ ಫಸಲಿಗೆ ಬೆಂಬಲ ಬೆಲೆ ದೊರಕಿಸಲು ಅಭಿಯಾನಗಳು – ಹೀಗೆ ಯಡಿಯೂರಪ್ಪನವರ ಹೋರಾಟದ ಬದುಕು ಅವರನ್ನು ರಾಜ್ಯದ ಜನತೆಗೆ ಆತ್ಮೀಯರನ್ನಾಗಿಸಿದೆ. ದೇಶದಲ್ಲಿಯೆ ಮೊದಲ ಬಾರಿಗೆ ‘ಕೃಷಿ ಬಜೆಟ್’ ಮಂಡನೆಯಿAದ ಹಿಡಿದು (೨೦೦೮) ಈಚಿನ ಕೊರೋನಾ ಪರ್ವದಲ್ಲಿ (೨೦೨೦-೨೧) ಸಂತ್ರಸ್ತರಿಗೆ ನೆರವನ್ನು ಸಂಘಟಿಸಿದುದರವರೆಗೆ ಯಡಿಯೂರಪ್ಪನವರು ಮೂಡಿಸಿದ ಪದಚಿಹ್ನೆಗಳು ಅಸಂಖ್ಯ. ಹೀಗೆ ಅವರದು ‘ಎದೆ ತುಂಬಿದ’ ಹಾಡಿಕೆ.
* * *
ಪ್ರತಿ ಸಂಧಿಕಾಲದಲ್ಲಿಯೂ ಇರುವಂತೆ ಈ ಬಾರಿಯೂ ಊಹಾಪೋಹಗಳು ಧಾರಾಳವಾಗಿಯೆ ಇದ್ದವಾದರೂ ಚದುರಂಗದಾಟಗಳ ಫಲಸ್ವರೂಪವಾಗಿ ಅಂತಿಮವಾಗಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಮೂವತ್ತನೆಯ ಮುಖ್ಯಮಂತ್ರಿಯ ಸ್ಥಾನ ಒಲಿದುಬಂದು ಜುಲೈ ೨೮ರಂದು ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೇರೆಲ್ಲ ಕಾರಣಗಳಿಗಿಂತ ಮಿಗಿಲಾಗಿ ಅವರು ಎಲ್ಲ ಬಣಗಳಿಗೂ ಸಮ್ಮತರಾಗಿರುವುದೂ ಪ್ರತಿಪಕ್ಷಗಳನ್ನು ಅವರು ಸಮರ್ಥವಾಗಿ ಎದುರಿಸಬಲ್ಲರೆಂಬ ವ್ಯಾಪಕ ಭಾವನೆಯೂ ಅವರ ಆಯ್ಕೆಗೆ ದಾರಿಮಾಡಿದ್ದಿರಬೇಕು ಎಂಬುದು ಸ್ಪಷ್ಟವೇ ಆಗಿದೆ. ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದು ಮೂರು ಬಾರಿ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿ ಭಾಜಪಾ-ನೇತೃತ್ವ ಸರ್ಕಾರಗಳಲ್ಲಿ ಐದು ವರ್ಷಗಳ ಕಾಲ ಜಲಸಂಪನ್ಮೂಲ ಸಚಿವರೂ ಆಗಿದ್ದ ಬಸವರಾಜ ಬೊಮ್ಮಾಯಿ ಅವರ ಅನುಭವಕ್ಕೆ ಗಣನೀಯ ಹಿನ್ನೆಲೆ ಇರುವುದೂ ಅವರ ಆಯ್ಕೆಯನ್ನು ಸುಗಮಗೊಳಿಸಿರಬಹುದು.
ಎಲ್ಲ ಸಂಪುಟರಚನೆಗಳ ಸಂದರ್ಭಗಳಲ್ಲಿಯೂ ಇರುವಂತೆ ಈಗಲೂ ಒಂದಷ್ಟು ಅತೃಪ್ತ ಧ್ವನಿಗಳೂ ಖಾತೆಗಳಿಗಾಗಿ ಪೋಟಿಗಳೂ ಇದ್ದುದು ಸಹಜ. ಆದರೆ ಒಟ್ಟಾರೆ ಬೊಮ್ಮಾಯಿ ಅವರ ನಿರ್ಣಯಗಳಿಗೆ ಗಂಭೀರ ಸವಾಲು ಒದಗುವ ಸನ್ನಿವೇಶ ಕಾಣುತ್ತಿಲ್ಲ. ಜನಸಾಮಾನ್ಯರೂ ಬೊಮ್ಮಾಯಿ ಅವರ ಆಯ್ಕೆಯನ್ನು ಸ್ವಾಗತಿಸಿರುವುದರ ಸಂಕೇತಗಳು ಧಾರಾಳವಾಗಿಯೆ ಇವೆ. ಅಧಿಕ ಮಂದಿ ಹಳಬರ ಮುಂದುವರಿಕೆ, ಹಲವರು ಹಳಬರ ನಿರ್ಗಮನ ಹಾಗೂ ಹಲವರು ಹೊಸಬರ ಸೇರ್ಪಡೆಯೊಡಗೂಡಿದ ೨೯ ಮಂದಿ ಸಚಿವರ ಸಂಪುಟ ರಚನೆಗೂ ತೀಕ್ಷ್ಣ ಆಕ್ಷೇಪಗಳೇನೂ ಹೊಮ್ಮಿಲ್ಲ.
ಜಟಿಲತೆ ತುಂಬಿದ ಸನ್ನಿವೇಶದಲ್ಲಿ ಬಸವರಾಜ ಬೊಮ್ಮಾಯಿ ಅವರ ಕೈಗೆ ರಾಜ್ಯದ ಚುಕ್ಕಾಣಿ ಬಂದಿದೆ. ಕರಾವಳಿ, ಮಲೆನಾಡು, ಉತ್ತರಕರ್ನಾಟಕ ಭಾಗಗಳಲ್ಲಿನ ನೆರೆ ಹಾವಳಿ, ಕೋವಿಡ್ ಮೂರನೇ ಅಲೆಯ ಸಂಭವ, ಆರ್ಥಿಕ ವ್ಯವಸ್ಥೆಯ ಮೇಲೆ ಹೆಚ್ಚಿರುವ ಒತ್ತಡ ಮೊದಲಾದ ಎಲ್ಲ ಅಂಶಗಳೂ ಏಕಕಾಲಕ್ಕೆ ತುರ್ತು ಗಮನವನ್ನು ಬೇಡುತ್ತಿವೆ. ಈ ವಿವಿಧ ಸವಾಲುಗಳನ್ನೂ ಖಾತೆಗಳ ವಿತರಣೆಯ ಬಗೆಗೆ ಸಹಜವಾಗಿ ಉದಿಸಿರುವ ಹಲವು ಅಸಮಾಧಾನದ ಧ್ವನಿಗಳನ್ನೂ ಭಾಜಪಾ ನೇತೃತ್ವ ಜೀರ್ಣಿಸಿಕೊಳ್ಳುತ್ತದೆಂಬ ಭರವಸೆ ಎದ್ದುಕಾಣುತ್ತಿದೆ.