ಪ್ರಗತಿಯ ಹಾದಿಯಲ್ಲಿ ಜಮ್ಮು-ಕಾಶ್ಮೀರ ಕ್ರಮಿಸಬೇಕಾದ ದಾರಿ ಇನ್ನೂ ಬಹಳಷ್ಟು
ಇದೀಗ ಆರ್ಟಿಕಲ್ ೩೭೦ ಕೊನೆಗೊಂಡು ರಾಜ್ಯದ ಪುನರ್ವಿಂಗಡನೆಯಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳ ರಚನೆಯಾಗಿ ಎರಡು ವರ್ಷಗಳು ಕಳೆದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ಗಳಲ್ಲಿ ಆದ ಬದಲಾವಣೆಗಳೇನು? ಬದಲಾದ ವ್ಯವಸ್ಥೆ ಈ ಪ್ರದೇಶದ ಪ್ರಗತಿ, ಸಾಮಾನ್ಯ ಜನಜೀವನಕ್ಕೆ ಅನುಕೂಲಕರವಾಗಿದೆಯೆ? – ಇತ್ಯಾದಿ ಪ್ರಶ್ನೆಗಳು ಏಳುತ್ತವೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂಬಂದಿಸಿದ ತಾತ್ಕಾಲಿಕ ನಿಬಂಧನೆಗಳು – ಇದು ಸಂವಿಧಾನ ಕರಡು ರಚನಾ ಸಮಿತಿಯ ಸದಸ್ಯರಾಗಿದ್ದ ಎನ್. ಗೋಪಾಲಸ್ವಾಮಿಯವರು ರಚಿಸಿ ಭಾರತದ ಸಂವಿಧಾನಕ್ಕೆ ಸೇರಿಸಲ್ಪಟ್ಟ ಆರ್ಟಿಕಲ್ ೩೭೦ರ ಮೊದಲ ಸಾಲು. ಸಂವಿಧಾನ ರಚನಾ ಶಾಸನಸಭೆಯ ಒಕ್ಕೊರಲಿನ ‘ಬೇಡ’ಎಂಬ ಆಗ್ರಹ, ಹಾಗೆಯೇ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಬಾಬಾಸಾಹೇಬ್ ಅಂಬೇಡ್ಕರರ ಅಸಮ್ಮತಿಯ ನಡುವೆಯೂ ಸ್ನೇಹಿತ ಶೇಖ್ ಅಬ್ದುಲ್ಲಾರ ಒತ್ತಾಯದಂತೆ ಪ್ರಧಾನಿ ಪಂಡಿತ್ ನೆಹರು ಅವರ ಒತ್ತಾಸೆಯಿಂದ ಸಂವಿಧಾನಕ್ಕೆ ಸೇರಿಸಲ್ಪಟ್ಟ ‘ತಾತ್ಕಾಲಿಕ’ ಆರ್ಟಿಕಲ್ ೩೭೦, ೨೦೧೯ರ ಆಗಸ್ಟ್ ೫ರಂದು ಶಕ್ತಿಹೀನವಾಗುವವರೆಗೆ – ಏಳು ದಶಕಗಳ ಕಾಲ ಬಾಳಿತು. ಜಮ್ಮು-ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಹೆಸರಿನಲ್ಲಿ ರಾಷ್ಟçದ ಏಕೀಕರಣ ಹಾಗೂ ಸಮಾನತೆಯ ಆಶಯಗಳಿಗೆ ಅಡ್ಡಿಯಾಗಿದ್ದು ಮಾತ್ರವಲ್ಲ, ಆರ್ಟಿಕಲ್ ೩೭೦ರ ನಿರಂತರ ದುರುಪಯೋಗ ಸ್ವಯಂ ಜಮ್ಮು-ಕಾಶ್ಮೀರ ಹಾಗೂ ಲಡಾಖಿನ ಪ್ರಗತಿಗೆ ಮಾರಕವಾಗಿತ್ತು; ಕಾಶ್ಮೀರ ಮತ್ತು ಜಮ್ಮು ಹಾಗೂ ಲಡಾಖ್ ಪ್ರಾಂತಗಳ ಪ್ರಾದೇಶಿಕ ಅಸಮಾನತೆಯ ಪ್ರತೀಕವಾಗಿತ್ತು, ಈ ಆರ್ಟಿಕಲ್ ೩೭೦. ರಾಜ್ಯದ ಜನರ ಮೇಲಿನ ದೌರ್ಜನ್ಯ, ಅಸಮಾನತೆ, ಅನ್ಯಾಯ, ಭ್ರಷ್ಟಾಚಾರಗಳ ಸಂಕೇತದಂತಿತ್ತು. ಹಾಗಾಗಿ ರಾಷ್ಟçಹಿತವನ್ನು ಬಯಸುವವರು ಆರ್ಟಿಕಲ್ ೩೭೦ ರದ್ದಾಗಬೇಕೆಂದು ಬಯಸಿದ್ದುದು ಸಹಜ. ಜಮ್ಮು-ಕಾಶ್ಮೀರದ ಸಂಪೂರ್ಣ ಏಕೀಕರಣಕ್ಕಾಗಿ ಬಲಿದಾನಗೈದ ಶ್ಯಾಮಾಪ್ರಸಾದ ಮುಖರ್ಜಿಯವರಿಂದ ಮೊದಲ್ಗೊಂಡು ನಿರಂತರವಾಗಿ ಪ್ರಯತ್ನಗಳು ನಡೆದುಬಂದವು. ಆದರೆ ಆಳುವ ವರ್ಗದ ಇಚ್ಛಾಶಕ್ತಿಯ ಕೊರತೆ ಮತ್ತು ರಾಜಕೀಯ ಲೆಕ್ಕಾಚಾರಗಳು ಸುದೀರ್ಘಕಾಲ ೩೭೦ರ ದುರುಪಯೋಗವನ್ನು ತಡೆಯುವಲ್ಲಿ ವಿಫಲಗೊಂಡವು. ಈ ಹಿನ್ನೆಲೆಯಲ್ಲಿ ೨೦೧೯ರಲ್ಲಿ ಆರ್ಟಿಕಲ್ ೩೭೦ನ್ನು ತಿದ್ದುಪಡಿಗೊಳಿಸಿ ಶಕ್ತಿಹೀನಗೊಳಿಸಿದ ಬೆಳವಣಿಗೆ ಅತ್ಯಂತ ಮಹತ್ತ್ವದ ಘಟನೆ.
ಇದೀಗ ಆರ್ಟಿಕಲ್ ೩೭೦ ಕೊನೆಗೊಂಡು ರಾಜ್ಯದ ಪುನರ್ವಿಂಗಡನೆಯಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳ ರಚನೆಯಾಗಿ ಎರಡು ವರ್ಷಗಳು ಕಳೆದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ಗಳಲ್ಲಿ ಆದ ಬದಲಾವಣೆಗಳೇನು? ಬದಲಾದ ವ್ಯವಸ್ಥೆ ಈ ಪ್ರದೇಶದ ಪ್ರಗತಿ, ಸಾಮಾನ್ಯ ಜನಜೀವನಕ್ಕೆ ಅನುಕೂಲಕರವಾಗಿದೆಯೆ? – ಇತ್ಯಾದಿ ಪ್ರಶ್ನೆಗಳು ಏಳುತ್ತವೆ.
ಕದಡದ ಶಾಂತಿ
ಆರ್ಟಿಕಲ್ ೩೭೦ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಬೆಸೆದಿರುವ ಸೇತುವೆ ಎಂದೇ ಬಿಂಬಿಸಲಾಗಿತ್ತು. ವಿಶೇಷ ಸ್ಥಾನಮಾನ ರದ್ದುಪಡಿಸಿದರೆ ಕಾಶ್ಮೀರ ಭಾರತದಿಂದಲೇ ಪ್ರತ್ಯೇಕಗೊಳ್ಳುವುದು, ಜಮ್ಮು-ಕಾಶ್ಮೀರದಲ್ಲಿ ತಿರಂಗಾ ಧ್ವಜಕ್ಕೆ ಹೆಗಲು ಕೊಡಲೂ ಜನರು ಸಿಗುವುದಿಲ್ಲ – ಇತ್ಯಾದಿಯಾಗಿ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿಯಂತಹ ರಾಜಕಾರಣಿಗಳು ಸೆಟೆದಿದ್ದರು. ೨೦೧೯ರಲ್ಲಿ ಕೇಂದ್ರಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡ ನಂತರವೂ ಆರ್ಟಿಕಲ್ ೩೭೦ ಕೊನೆಗೊಂಡರೆ ಕಾಶ್ಮೀರದಲ್ಲಿ ರಕ್ತಪಾತವೇ ಆಗಿಬಿಡುವುದು ಎಂದು ಕಾಂಗ್ರೆಸ್ ನೇತಾರರೂ ಸೇರಿದಂತೆ ಅನೇಕ ವಿರೋಧಪಕ್ಷಗಳು ಹೆದರಿಸಿದ್ದವು. ಪಾಕಿಸ್ತಾನವಂತೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಕ್ರಮವನ್ನು ತೆಗಳುವ ಎಲ್ಲ ಪ್ರಯತ್ನಗಳನ್ನು ನಡೆಸಿತು. ಸ್ವಯಂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯ ಭಾಷಣದಲ್ಲಿ ಅಲವತ್ತುಕೊಂಡಿದ್ದರು. ಫಾರೂಕ್ ಅಬ್ದುಲ್ಲಾರಂತೂ ಒಂದು ಹೆಜ್ಜೆ ಮುಂದೆ ಹೋಗಿ ಚೀನಾದ ನೆರವು ಪಡೆದು ಆರ್ಟಿಕಲ್ ೩೭೦ನ್ನು ಮತ್ತೆ ಜಾರಿಗೊಳಿಸುವ ಮಾತನಾಡಿದ್ದರು.
ಆದರೆ ಇದಾವುದೂ ನಡೆದಿಲ್ಲ. ವಿಶೇಷವಾಗಿ ಜಮ್ಮು ಮತ್ತು ಲಡಾಖ್ನ ಜನತೆ ಆರ್ಟಿಕಲ್ ೩೭೦ ಕೊನೆಗೊಂಡಿದ್ದನ್ನು ಸಂಭ್ರಮಿಸಿದರು. ಕಾಶ್ಮೀರ ಕಣಿವೆಯಲ್ಲಿ ರಾಜಕೀಯ ಕಾರಣಗಳಿಂದ ಆರಂಭದಲ್ಲಿ ಅಸಮಾಧಾನ ತೋರಿದಂತೆ ಕಂಡುಬAದರೂ ಇಡೀ ರಾಜ್ಯದಲ್ಲಿ ಎಲ್ಲಿಯೂ ಪ್ರತಿಭಟನೆ, ವಿರೋಧ ಪ್ರದರ್ಶನಗಳು ನಡೆದಿಲ್ಲ. ಕಳೆದ ಎರಡು ವರ್ಷಗಳಲ್ಲಿ ಈ ವಿಷಯಕ್ಕೆ ಸಂಬAಧಿಸಿದAತೆ ಯಾವ ಜನಾಂದೋಲನವೂ ನಡೆದಿಲ್ಲ, ಚಳವಳಿಯೂ ನಡೆದಿಲ್ಲ. ಪ್ರತಿಭಟನೆಗಳ ನಿಯಂತ್ರಣಕ್ಕಾಗಿ ಲಾಠೀಚಾರ್ಜ್-ಟಿಯರ್ಗ್ಯಾಸ್-ಗೋಲಿಬಾರ್ ನಡೆಸಬೇಕಾದ ಪ್ರಮೇಯವೇ ಬರಲಿಲ್ಲ. ಇನ್ನು ಹಿಂಸಾಚಾರ ರಕ್ತಪಾತಗಳು ದೂರದ ಮಾತಾಯಿತು. ೨೦೧೯-೨೦ರ ಸಾಲಿನಲ್ಲಿ ರಾಜ್ಯದಲ್ಲಿ ನಡೆದ ಕ್ರೀಡಾಕೂಟ ಸ್ಪರ್ಧೆಗಳಲ್ಲಿ ಸುಮಾರು ೬ ಲಕ್ಷ ಜನರು ಪಾಲ್ಗೊಂಡರು. ಕಾನೂನು-ಸುವ್ಯವಸ್ಥೆ ಸಮರ್ಪಕವಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಸಾಕು. ಆರ್ಟಿಕಲ್ ೩೭೦ರ ರದ್ದಿನಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾರತದೊಂದಿಗೆ ಇನ್ನೂ ಗಟ್ಟಿಯಾಗಿ ಒಂದಾಯಿತೇ ವಿನಾ ಪ್ರತ್ಯೇಕತೆಯ ಧ್ವನಿ ಹೆಚ್ಚಲಿಲ್ಲ.
ಅಭಿವೃದ್ಧಿಯ ಹಾದಿ
ಹಾಗೆ ನೋಡಿದರೆ ಹಿಂದಿನ ಜಮ್ಮು-ಕಾಶ್ಮೀರ ರಾಜ್ಯ ಪಡೆದುಕೊಂಡಷ್ಟು ಕೇಂದ್ರಸರ್ಕಾರದ ಅನುದಾನ ಉಳಿದ ಯಾವ ರಾಜ್ಯಕ್ಕೂ ದೊರಕಿರಲಿಲ್ಲ. ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಪ್ರತಿ ಪ್ರಧಾನಮಂತ್ರಿಯೂ ಪ್ರತಿ ಬಾರಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದಾಗಲೂ ಒಂದಲ್ಲ ಒಂದು ಪ್ಯಾಕೇಜ್ ಘೋಷಿಸುತ್ತಲೇ ಬಂದಿದ್ದಾರೆ. ಇದೇ ಪದ್ಧತಿಯನ್ನೇ ಮುಂದುವರಿಸಿದ್ದ ಪ್ರಧಾನಿ ಮೋದಿಯವರೂ ಸಹ ೨೦೧೫ರ ರಾಜ್ಯ ಭೇಟಿಯಲ್ಲಿ ೮೦,೦೦೦ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದ್ದರು. ನಿರಂತರ ಹರಿದುಬಂದ ಕೇಂದ್ರದ ನೆರವಿನ ಸದ್ಬಳಕೆಯಾಗಿದ್ದಿದ್ದರೆ ಜಮ್ಮು-ಕಾಶ್ಮೀರ ಭಾರತದ ಅತ್ಯಂತ ಪ್ರಗತಿಹೊಂದಿದ ರಾಜ್ಯವಾಗಬೇಕಿತ್ತು. ಆದರೆ ಆರ್ಟಿಕಲ್ ೩೭೦ರ ವಿಶೇಷ ಸ್ಥಾನಮಾನದ ಪರದೆಯ ಹಿಂದೆ ಅಡಗಿದ್ದ ಕಾಶ್ಮೀರದ ಭ್ರಷ್ಟ ಆಡಳಿತ ಇವೆಲ್ಲವನ್ನು ತಿಂದು ತೇಗಿತು. ಮೂಲಸೌಕರ್ಯ ಅಭಿವೃದ್ಧಿಯೂ ಸೇರಿದಂತೆ ರಾಜ್ಯದ ಎಲ್ಲ ರಂಗಗಳ ಪ್ರಗತಿ ಮಾತ್ರ ಮರೀಚಿಕೆಯಾಗಿಯೇ ಉಳಿಯಿತು. ಇದೀಗ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು-ಕಾಶ್ಮೀರ ಮತ್ತು ಲಡಾಖ್ನ ಸಾಮಾನ್ಯ ಜನರು ಆರ್ಥಿಕ ಪ್ರಗತಿ ಮತ್ತು ಜೀವನಮಟ್ಟ ಸುಧಾರಣೆಯ ಬೆಳಕನ್ನು ಕಾಣುತ್ತಿದ್ದಾರೆ.
ತಲೆಮಾರುಗಳಿಂದ ಅತಂತ್ರ ಬದುಕು ಬಾಳುತ್ತಿದ್ದ ರಾಜ್ಯದ ಲಕ್ಷಗಟ್ಟಲೆ ನಿರಾಶ್ರಿತ ಕುಟುಂಬಗಳವರು ಈಗ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಪಡೆದಿದ್ದಾರೆ. ಸಫಾಯಿ ಕರ್ಮಚಾರಿಗಳಾಗಿ ವಲಸೆ ಬಂದಿದ್ದ ವಾಲ್ಮೀಕಿ ಸಮುದಾಯ, ಪಶ್ಚಿಮ ಪಾಕಿಸ್ತಾನದಿಂದ ವಿಭಜನೆಯ ಸಮಯದಲ್ಲಿ ವಲಸೆ ಬಂದಿದ್ದ ನಿರಾಶ್ರಿತ ಹಿಂದೂ ಕುಟುಂಬಗಳು, ಲಕ್ಷಾಂತರ ಮಂದಿ ಪಾಕ್-ಆಕ್ರಮಿತ ಕಾಶ್ಮೀರದ ನಿರಾಶ್ರಿತರು, ಗೂರ್ಖಾ ಸಮುದಾಯದ ನಿರಾಶ್ರಿತರು ಮೊದಲಾದ ‘ಸ್ಟೇಟ್ ಸಬ್ಜೆಕ್ಟ್’ ಮಾನ್ಯತೆಯಿಂದ ವಂಚಿತ ಕುಟುಂಬಗಳು ಈಗ ಹೊಸ ಡಾಮಿಸೈಲ್ ನೀತಿಯಂತೆ ರಾಜ್ಯದ ಖಾಯಂ ನಿವಾಸಿಗಳ ಪ್ರಮಾಣಪತ್ರ ಪಡೆದು ಎಲ್ಲ ವಿಧದ ಸರ್ಕಾರೀ ಸೌಲಭ್ಯಗಳಲ್ಲಿ ಸಮಾನ ಪ್ರಾತಿನಿಧ್ಯ ಪಡೆಯುವಂತಾಗಿದೆ. ಪಾಕ್-ಆಕ್ರಮಿತ ಕಾಶ್ಮೀರದಿಂದ ನಿರಾಶ್ರಿತರಾಗಿ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ ೫೩೦೦ಕ್ಕೂ ಹೆಚ್ಚು ಕುಟುಂಬಗಳಿಗೂ ಕೂಡ ರಾಜ್ಯದ ಖಾಯಂ ನಿವಾಸಿ ಪ್ರಮಾಣಪತ್ರದ ಜೊತೆಗೆ ಪರಿಹಾರವನ್ನು ಒದಗಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ನಿರಾಶ್ರಿತ ಕಾಶ್ಮೀರಿ ಹಿಂದೂ ಸಮುದಾಯದವರಿಗೆ ಸುಮಾರು ೬ ಸಾವಿರ ಸರ್ಕಾರೀ ನೌಕರಿಗಳನ್ನು ನೀಡಲಾಗಿದೆ.
ಜಮ್ಮು-ಕಾಶ್ಮೀರದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ವೇಗ ಪಡೆದಿದ್ದು ೨೦೨೦-೨೧ರ ಸಾಲಿನಲ್ಲಿ ಜಮ್ಮು-ಕಾಶ್ಮೀರ ಇನ್ಫ್ರಾಸ್ಟçಕ್ಚರ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೋರೇಶನ್ ಸುಮಾರು ೧೩೦೦ ಕೋಟಿ ಹೆಚ್ಚು ವೆಚ್ಚದಲ್ಲಿ ರಸ್ತೆ, ಸೇತುವೆ, ಸರ್ಕಾರೀ ಕಟ್ಟಡ ಸೇರಿದಂತೆ ೫೯೩ ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದ್ದು ಆರೇ ತಿಂಗಳ ಅವಧಿಯಲ್ಲಿ ಇವುಗಳಲ್ಲಿ ಅನೇಕ ಯೋಜನೆಗಳು ಮುಕ್ತಾಯಗೊಂಡವು. ೬ ಸಾವಿರ ಕೋಟಿ ವೆಚ್ಚದ ಕಥುವಾ ಜಿಲ್ಲೆಯ ಜಲವಿದ್ಯುತ್ ಯೋಜನೆ, ೧೦ ಸಾವಿರ ಕೋಟಿ ವೆಚ್ಚದ ಇಡಿ ಪ್ರದೇಶಕ್ಕೆ ಸ್ವಚ್ಛ ಕುಡಿಯುವ ನೀರು ಪೂರೈಸುವ ಯೋಜನೆ, ಜಮ್ಮು ಮತ್ತು ಕಾಶ್ಮೀರಗಳ ನಗರಾಭಿವೃದ್ಧಿ ಯೋಜನೆಗಳು, ನೆನೆಗುದಿಗೆ ಬಿದ್ದಿದ್ದ ರೈಲು ಮಾರ್ಗಗಳು – ಹೀಗೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದಿವೆ.
ಜಮ್ಮು ಹಾಗೂ ಕಾಶ್ಮೀರ ಪ್ರಾಂತಗಳಲ್ಲಿ ೨ ಏಮ್ಸ್ ಆಸ್ಪತ್ರೆಗಳು ತಲೆಯೆತ್ತಲಿವೆ. ಜೊತೆಗೆ ೭ ಹೊಸ ವೈದ್ಯಕೀಯ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳ ಸ್ಥಾಪನಾ ಕಾರ್ಯ ಪ್ರಗತಿಯಲ್ಲಿದೆ. ಐಐಎಂ ಹಾಗೂ ಐಐಟಿಯ ಆರಂಭ ಘೋಷಣೆಯಾಗಿದೆ. ಸುಮಾರು ನೂರಕ್ಕೂ ಹೆಚ್ಚು ಹೊಸ ಶೈಕ್ಷಣಿಕ ಸಂಸ್ಥೆಗಳು ಕಾರ್ಯಾರಂಭ ಮಾಡಿದ್ದು ಸುಮಾರು ೨೫ ಸಾವಿರ ಸೀಟ್ಗಳು ಲಭ್ಯವಾಗಿವೆ.
ರಾಜಕೀಯ ಪರಿವರ್ತನೆ – ಆಡಳಿತ ಸುಧಾರಣೆ
ಜಮ್ಮು-ಕಾಶ್ಮೀರದ ದುಃಸ್ಥಿತಿಗೆ ಕಾರಣವಾಗಿದ್ದು ಆರ್ಟಿಕಲ್ ೩೭೦ರ ಪರದೆಯ ಹಿಂದೆ ಆಶ್ರಯ ಪಡೆದಿದ್ದ ಭ್ರಷ್ಟ ಆಡಳಿತ ವ್ಯವಸ್ಥೆ. ಶೇಖ್ ಅಬ್ದುಲ್ಲಾರಿಂದ ಮೊದಲ್ಗೊಂಡು ರಾಜ್ಯದ ಕೊನೆಯ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರೆಗೆ ಇಡೀ ರಾಜ್ಯದ ಆಡಳಿತ ಕಾಶ್ಮೀರ ಕಣಿವೆಯ ಒಂದು ಸಮುದಾಯಕ್ಕೆ ಸೇರಿದ ಕೆಲವೇ ಕುಟುಂಬಗಳ ಕಪಿಮುಷ್ಟಿಯಲ್ಲಿ ಸಿಲುಕಿತ್ತು. ಆರ್ಟಿಕಲ್ ೩೭೦ ಕೊನೆಯಾಗಿ ರಾಜ್ಯದ ಪುನರ್ವಿಂಗಡನೆಯ ನಂತರ, ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸ್ಥಾಪನೆಯಾದ ನಂತರ ಈ ಪಟ್ಟಭದ್ರರ ಹಸ್ತಕ್ಷೇಪಕ್ಕೆ ಒಂದು ನಿಯಂತ್ರಣ ಬಂದಿದೆ. ದೇಶದೆಲ್ಲೆಡೆ ಪಂಚಾಯತ್ ರಾಜ್ ಜಾರಿಗೆ ಬಂದು ತಳಮಟ್ಟದವರೆಗೆ ಪ್ರಜಾಪ್ರಭುತ್ವ ತಲಪಿ ದಶಕಗಳೇ ಕಳೆದರೂ ಜಮ್ಮು-ಕಾಶ್ಮೀರದಲ್ಲಿ ಮಾತ್ರ ೨೦೨೦ರ ವರೆಗೆ ಕಾಯಬೇಕಾಯಿತು. ಪಂಚಾಯತ್ ರಾಜ್ ಅಡಿಯಲ್ಲಿ ಇಪ್ಪತ್ತು ಜಿಲ್ಲೆಗಳ ಜಿಲ್ಲಾ ಅಭಿವೃದ್ಧಿ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಶೇ. ೫೧.೭ರಷ್ಟು ಮತದಾನ ನಡೆದು ೨೮೦ ಮಂದಿ ಹೊಸ ಸದಸ್ಯರು ಚುನಾಯಿತರಾದರು. ಮೊದಲ ಬಾರಿಗೆ ಮಹಿಳಾ ಮೀಸಲಾತಿ ಜಾರಿಯಾಗಿ ೧೦೦ ಮಂದಿ ಮಹಿಳಾ ಸದಸ್ಯರು ಜನಪ್ರತಿನಿಧಿಗಳಾಗಿ ಚುನಾಯಿತರಾದರು. ೬ ಜಿಲ್ಲೆಗಳಲ್ಲಿ ಮಹಿಳೆಯರು, ತಲಾ ಎರಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ೨೦ ಜನ ಅಧ್ಯಕ್ಷರುಗಳ ನೇತೃತ್ವದಲ್ಲಿ ಚುನಾಯಿತ ಜಿಲ್ಲಾ ಅಭಿವೃದ್ಧಿ ಪರಿಷತ್ ಕೆಲಸ ಮಾಡುತ್ತಿದೆ.
ಒಟ್ಟು ೩೩೯೫ ಪಂಚಾಯತ್ಗಳನ್ನು ರಚಿಸಲಾಗಿದ್ದು ಅವುಗಳಲ್ಲಿ ಮಹಿಳೆಯರು, ದಲಿತರು ಸೇರಿದಂತೆ ಚುನಾಯಿತ ಸರಪಂಚರು ಮತ್ತು ಸದಸ್ಯರು ಆಡಳಿತ ನಡೆಸುತ್ತಿದ್ದಾರೆ. ಸ್ಥಳೀಯರೇ ತಮ್ಮ ಪ್ರದೇಶಗಳ ಪ್ರಗತಿಯಲ್ಲಿ ಭಾಗವಹಿಸುತ್ತಿದ್ದಾರೆ. ಸುಮಾರು ೧೫೦೦ ಕೋಟಿ ರೂಪಾಯಿಗಳ ಅನುದಾನ ನೇರವಾಗಿ ಪಂಚಾಯತ್ಗಳ ಖಾತೆಗೆ ವರ್ಗಾವಣೆಗೊಂಡಿದೆ. ರಾಜ್ಯದಲ್ಲಿ ನಡೆದ ಚುನಾವಣೆಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ ಮೊದಲಾದ ಪ್ರಾದೇಶಿಕ ಪ್ರಭಾವಿಯಾಗಿದ್ದ ಪಕ್ಷಗಳು ಗಣನೀಯ ಸಾಧನೆ ಮಾಡುವಲ್ಲಿ ವಿಫಲವಾದಂತೆ, ಭಾಜಪ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.
ಜಮ್ಮು-ಕಾಶ್ಮೀರದ ೯೦ ವಿಧಾನಸಭಾ ಕ್ಷೇತ್ರಗಳಿಗೆ ಕ್ಷೇತ್ರ ಪುನರ್ವಿಂಗಡನಾ ಕಾರ್ಯ ಅನೇಕ ದಶಕಗಳ ನಂತರ ಆರಂಭವಾಗಿದ್ದು, ಮಾರ್ಚ್ ೨೦೨೨ರ ವೇಳೆಗೆ ಪೂರ್ಣಗೊಳ್ಳಲಿದೆ. ಆರಂಭದಿAದ ರಾಜಕೀಯ ಲಾಭಕ್ಕಾಗಿ ಕಾಶ್ಮೀರ ಕಣಿವೆ ಮತ್ತು ಇತರ ಭಾಗಗಳ ನಡುವೆ ಕ್ಷೇತ್ರ ವಿಂಗಡನೆಯಲ್ಲಿ ಆಗಿದ್ದ್ಲ ಅಸಮತೋಲ ಸರಿಗೊಳ್ಳುವ ಅಪೇಕ್ಷೆಯಿದೆ.
ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳಲ್ಲಿ ನಲುಗಿದ್ದ ಆಡಳಿತ ವ್ಯವಸ್ಥೆ ಇದೀಗ ಲೆಫ್ಟಿನೆಂಟ್-ಗವರ್ನರ್ ನೇತೃತ್ವದಲ್ಲಿ ಹೊಸ ಹುರುಪಿನಿಂದ ಕಾರ್ಯನಿರ್ವಹಿಸುತ್ತಿದೆ.