ಈ ರಸ್ತೆಯ ನಿರ್ಮಾಣಕ್ಕೆ ಬಿ.ವಿ.ಕೆ. ಅಯ್ಯಂಗಾರ್ ಮುಖ್ಯ ಕಾರಣರಾದರೆ ಮತ್ತೊಬ್ಬರು ವೈ. ರಾಮಚಂದ್ರ ಅವರು. ಇವರ ನೆನಪಿಗಾಗಿ ಗಾಂಧಿನಗರದಲ್ಲಿ ಇವರು ವಾಸಿಸುತ್ತಿದ್ದ ರಸ್ತೆಗೆ (ಜೈಲ್ ಹಿಂಭಾಗ) ನಗರಪಾಲಿಕೆಯವರು ‘ವೈ. ರಾಮಚಂದ್ರ ರಸ್ತೆ’ ಎಂದು ಹೆಸರಿಟ್ಟಿದ್ದಾರೆ.
ಬಿ.ವಿ.ಕೆ. ಅಯ್ಯಂಗಾರ್ ಅವರು ಪ್ರಸಿದ್ಧ ಪರಮಾಣು ವಿಜ್ಞಾನಿಯಾಗಿದ್ದ ಡಾ|| ರಾಜಾ ರಾಮಣ್ಣ (೧೯೨೫-೨೦೦೪) ಅವರ ತಾತ; ಅಂದರೆ ಅವರ ತಾಯಿಯ ತಂದೆ. ತಾಯಿ ರುಕ್ಮಿಣಿಯಮ್ಮ (೧೮೯೩-೧೯೮೦); ತಂದೆ ಬಿ. ರಾಮಣ್ಣ (೧೮೯೦-೧೯೫೫). ಇವರ ಮೂಲ ಸ್ಥಳ ಮಂಡ್ಯ ಜಿಲ್ಲೆಯ ಬಿಂಡಗನವಿಲೆ. ಇವರು ಕೆಂಪೇಗೌಡ ರಸ್ತೆಯಲಿದ್ದ (ಈ ಹಿಂದೆ ಕೆಂಪೇಗೌಡ ಥಿಯೇಟರ್ ಇದ್ದ ಸ್ಥಳದಲ್ಲಿ) ಆಕರ್ಷಕವಾದ ಕಲ್ಲಿನ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಮನೋಹರವಾಗಿದ್ದ ಆ ಕಟ್ಟಡಕ್ಕೆ ‘ಮನೋರಮಾ’ ಎಂದು ಹೆಸರಿತ್ತು.
ಬಿ. ಕೃಷ್ಣಯ್ಯಂಗಾರ್
ಕೆAಪುಬಣ್ಣದ ವಿಶಾಲವಾಗಿದ್ದ ಆ ಸುಂದರ ಬಂಗಲೆಯನ್ನು ನಿರ್ಮಿಸಿದ್ದವರು ಇವರ ತಾತ ಬಿ. ಕೃಷ್ಣಯ್ಯಂಗಾರ್ (೧೮೨೫-೧೮೮೨). ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್ ಮತ್ತು ಮಾರ್ಕ್ ಕಬ್ಬನ್ ಅವರಿಗೆ ಬಹು ಆಪ್ತರಾಗಿದ್ದ ಬಿ. ಕೃಷ್ಣಯ್ಯಂಗಾರ್ ಅವರು ಪ್ರಾರಂಭದಿಂದಲೂ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದು ೧೮೬೪ರಲ್ಲಿ ಕಮಿಷನರ್ ಆಗಿದ್ದ ಬೆಂಥಾಮ್ ಬೌರಿಂಗ್ ಅವರು ಕೋಲಾರ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಹುದ್ದೆಗೆ ನೇಮಿಸಿದರು. ಅದುವರೆಗೂ ಬ್ರಿಟಿಷರು ಮಾತ್ರ ಆ ಹುದ್ದೆಯಲ್ಲಿರುತ್ತಿದ್ದರು. ಅಷ್ಟೇ ಅಲ್ಲ, ಇಡೀ ದಕ್ಷಿಣಭಾರತದಲ್ಲೇ ಕೃಷ್ಣಯ್ಯಂಗಾರ್ ಆ ಸ್ಥಾನಕ್ಕೆ ನೇಮಕಗೊಂಡ ಪ್ರಥಮ ಭಾರತೀಯ ಅಧಿಕಾರಿಯಾಗಿದ್ದರು; ಮತ್ತು ಡಿ.ಸಿ. ಆಗಿ ಕಾರ್ಯನಿರ್ವಹಿಸಿದ ಪ್ರಥಮ ಕನ್ನಡಿಗರು. ಆ ಸಮಯದಲ್ಲಿ, ೧೮೬೯ರಲ್ಲಿ ಅವರು ಕೋಲಾರ ಜಿಲ್ಲೆಗೆ ಸಂಬAಧಿಸಿದAತೆ ಪ್ರಪ್ರಥಮ ಗ್ಯಾಸೆಟಿಯರ್ (೭೯ ಪುಟಗಳು) ಹೊರತಂದರು.
ವಿಕ್ಟೋರಿಯಾ ಮಹಾರಾಣಿಯವರ ಆಡಳಿತದ ೪೦ನೇ ವರ್ಷದ ಮಹೋತ್ಸವವನ್ನು ೧೮೭೭ರಲ್ಲಿ ದೆಹಲಿಯಲ್ಲಿ ಬಹಳ ವಿಜೃಂಭಣೆಯಿAದ ಆಚರಿಸಲಾಯಿತು. ಭಾರತದ ಇತಿಹಾಸದಲ್ಲಿ ಅದೊಂದು ವಿಶೇಷ ಸಂದರ್ಭ. ಬ್ರಿಟಿಷ್ ಸರಕಾರವು ಈ ನಾಡಿಗೆ ಅನುಪಮ ಸೇವೆ ಸಲ್ಲಿಸಿದ ಹಾಗೂ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಗೊಳಿಸಲು ಕಾರಣರಾದ ಕೆಲವು ಪ್ರಮುಖ ವ್ಯಕ್ತಿಗಳಿಗೆ ‘ಸಿ.ಎಸ್.ಐ’ (Companion, Order of the Star of India) ಎಂಬ ಅತ್ಯಂತ ಪ್ರತಿಷ್ಠಿತ ಬಿರುದನ್ನಿತ್ತು ಸತ್ಕರಿಸಿತು. ಆ ಪ್ರತಿಷ್ಠಿತ ಬಿರುದು ಪಡೆದವರಲ್ಲಿ ಕೃಷ್ಣಯ್ಯಂಗಾರರೂ ಒಬ್ಬರು. ಅವರು ಆ ಬಿರುದು ಪಡೆದ ಪ್ರಪ್ರಥಮ ಮೈಸೂರಿನವರಾಗಿದ್ದರು. ಇದರಿಂದ ಅವರಿಗೆ ನಮ್ಮ ರಾಜ್ಯದಲ್ಲಷ್ಟೇ ಅಲ್ಲದೆ ಇಡೀ ಭಾರತದಲ್ಲಿ ಗೌರವ ದೊರೆಯಿತು.
ಹೀಗೆ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಕೃಷ್ಣಯ್ಯಂಗಾರರು ತಮ್ಮ ಮಗನ ಅಕಾಲಿಕ ನಿಧನದ ನೋವಿನಿಂದ ಚೇತರಿಸಿಕೊಳ್ಳಲಾಗದೆ ಕೇವಲ ೫೬ನೇ ವಯಸ್ಸಿನಲ್ಲಿ ಅಂದರೆ ೧೮೮೨ರ ಮಾರ್ಚ್ ೨೭ರಂದು ನಿಧನ ಹೊಂದಿದರು.
ಬಿ.ವಿ.ಕೆ. ಅಯ್ಯಂಗಾರ್
ಬಿ. ಕೃಷ್ಣಯ್ಯಂಗಾರ್ ಅವರ ಮೊಮ್ಮಗನೇ ಬಿ.ವಿ.ಕೆ. ಅಯ್ಯಂಗಾರ್ (ಬಿ.ವಿ. ಕೃಷ್ಣಯ್ಯಂಗಾರ್). ಸುಸಂಸ್ಕೃತ ಕುಟುಂಬದವರಾಗಿದ್ದ ಇವರು ಶ್ರೀಮಂತರೂ, ಅಷ್ಟೇ ಉದಾರಿಗಳೂ, ದಾನಿಗಳೂ ಆಗಿದ್ದರು. ಕಳೆದ ಶತಮಾನದಲ್ಲಿ ಬೆಂಗಳೂರಿನ ಬಹು ಪ್ರಸಿದ್ಧ ವ್ಯಕ್ತಿಯಾಗಿದ್ದರು. ಇವರ ಹೆಸರೂ ಸಹ ತಾತನ ಹೆಸರೇ ಇರಬೇಕಿತ್ತು. ಆದರೆ ಇವರ ಹೆಸರಿಗೆ ‘ವಿ’ ತಪ್ಪಾಗಿ ಸೇರಿದೆ ಎಂದು ರಾಜಾರಾಮಣ್ಣ ಅವರು ಹೇಳಿದ್ದಾರೆ. ಬಿಂಡಿಗನ+ವಿಲೆ ಬಿ.ವಿ. ಆಗಿ ಬಿ.ವಿ.ಕೆ. ಅಯ್ಯಂಗಾರ್ ಆಗಿರಬಹುದು ಎಂದು ನನ್ನ ಅನಿಸಿಕೆ.
ಬಿ.ವಿ.ಕೆ. ಅಯ್ಯಂಗಾರ್ ರಸ್ತೆ
ಸುಮಾರು ೧೯೩೫ರ ಸಮಯದಲ್ಲಿ ಚಿಕ್ಕಪೇಟೆಯಲ್ಲಿ ಜನ ಹಾಗೂ ವಾಹನ ಸಂಚಾರ ದಟ್ಟವಾಗಿತ್ತು. ಕೆಂಪೇಗೌಡ ರಸ್ತೆ ಕಡೆಯಿಂದ ಮಾರ್ಕೆಟ್ ವರೆಗೆ ಜನ, ವಾಹನಾದಿಗಳ ಸಂಚಾರಕ್ಕೆ ಅರಳೇಪೇಟೆ ಮುಖ್ಯ ರಸ್ತೆ ಮತ್ತು ಬಳೇಪೇಟೆ ಮುಖ್ಯರಸ್ತೆಗಳಿದ್ದು, ಇವೆರಡೂ ಚಿಕ್ಕಪೇಟೆ ಪ್ರದೇಶದ ಜನ-ವಾಹನಗಳ ಸಂಚಾರಕ್ಕೆ ಇಕ್ಕಟ್ಟಾಗಿಯೂ ನಾನಾ ಅಪಾಯಗಳಿಗೆ ಆಸ್ಪದವಾಗಿತ್ತು. ಆ ಸಮಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೩೫ರ ಮಾರ್ಚ್ನಲ್ಲಿ ಕಾರಣಾಂತರಗಳಿAದ ಚಿಕ್ಕಪೇಟೆಗೆ ಭೇಟಿ ಕೊಟ್ಟಿದ್ದಾಗ ಈ ಅನನುಕೂಲಗಳು ಅವರ ಅರಿವಿಗೆ ಬಂತು. ಅದೇ ಸಮಯದಲ್ಲಿ ಸೆಂಟ್ರಲ್ ಜೈಲ್ ಪಕ್ಕದಲ್ಲಿ ಗಾಂಧಿನಗರ ಬಡಾವಣೆ ರಚನೆಯಾಗುತ್ತಿದ್ದು ಶೇಷಾದ್ರಿ ರಸ್ತೆಯಿಂದ ನೇರವಾಗಿ ಜೈಲ್ ಪಕ್ಕದ ರಸ್ತೆಯ ಮೂಲಕ ನೂತನ ರಸ್ತೆಯನ್ನು ಆರ್ಕಾಟ್ ಶ್ರೀನಿವಾಸಾಚಾರ್ ರಸ್ತೆಗೆ ಸೇರಿಸಿ ಸಿಟಿ ಮಾರ್ಕೆಟ್ಗೆ (ಮೈಸೂರು ರಸ್ತೆಯವರೆಗೂ) ಅನುಕೂಲವಾಗುವಂತೆ ಹೊಸ ನೇರರಸ್ತೆಯನ್ನು ನಿರ್ಮಿಸಲು ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರಿಗೆ ನಾಲ್ವಡಿಯವರು ಅಪ್ಪಣೆ ಕೊಡಿಸಿದರು. ಈ ಬಗ್ಗೆ ಮಿರ್ಜಾ ಅವರು ಆಗ್ಗೆ ಬೆಂಗಳೂರು ಮುನಿಸಿಪಾಲಿಟಿಯಲ್ಲಿ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎ. ನರಸಿಂಗರಾಯರೊಡನೆ (ಅ.ನ. ಕೃಷ್ಣರಾಯರ ತಂದೆ) ಚರ್ಚಿಸಿದರು. ಇದರ ಪ್ರಾಮುಖ್ಯವನ್ನು ತಿಳಿದ ನರಸಿಂಗರಾಯರು ಈ ನೂತನ ರಸ್ತೆ ನಿರ್ಮಿಸಲು ಬಿ.ವಿ. ಕೃಷ್ಣಯ್ಯಂಗಾರ್ ವಾಸಿಸುತ್ತಿರುವ ಮನೆಯ ಸ್ಥಳವನ್ನು ಉಚಿತವಾಗಿ ಸರ್ಕಾರಕ್ಕೆ ದಾನವಾಗಿ ನೀಡಲು ಬಿ.ವಿ. ಕೃಷ್ಣಯ್ಯಂಗಾರ್ ಅವರ ಮನವೊಲಿಸಿದರು.
ಇಲ್ಲಿ ಹಿಂದೆ ಇದ್ದ ಕಿರಿದಾದ ರಸ್ತೆಯನ್ನು ವಿಸ್ತರಿಸುವ ಉದ್ದೇಶದಿಂದ ಈ ಸ್ಥಳದಲ್ಲಿ ಇದ್ದ ಮನೆಗಳನ್ನು ಸ್ವಾಧೀನಪಡಿಸಿಕೊಂಡು ೩೦ ಅಡಿಗಳ ಜೋಡಿ ರಸ್ತೆ ಹಾಗೂ ಎರಡೂ ಕಡೆ ೧೦ ಅಡಿಗಳ ಫುಟ್ಪಾತ್ ರಸ್ತೆಯನ್ನು, ಉಳಿದ ಎರಡೂ ಕಡೆಯ ೪೦+೪೦=೮೦ ಅಡಿ ಖಾಲಿ ಜಾಗವನ್ನು ಬಿಕರಿ ಮಾಡಿ ಬಂದ ಹಣವನ್ನು ಈ ರಸ್ತೆಯ ನಿರ್ಮಾಣಕ್ಕೆ ಉಪಯೋಗಿಸಬೇಕೆಂದು ತೀರ್ಮಾನಿಸಲಾಯಿತು. ಒಟ್ಟು ೧೬೦ ಅಡಿ. (ಹಿಂದಿನಿAದಲೂ ಇಲ್ಲಿ ಕಿರಿದಾದ ರಸ್ತೆ ಇದ್ದು ಈ ರಸ್ತೆಗೆ ‘ಮನೋರಮಾ ರಸ್ತೆ’ ಅಥವಾ ‘ಮನೋರಮಾ ಬಂಗಲೆ ರಸ್ತೆ’ ಎಂದು ಹೆಸರಿತ್ತು ಎಂದು ಕೆ.ವಿ. ಅಯ್ಯರ್ ಅವರು ೧೯೬೮ರಲ್ಲಿ ಬರೆದಿರುವ ‘ಸಮುದ್ಯತಾ’ ಪುಸ್ತಕದಲ್ಲಿ (ಪುಟ ೧೨, ೧೩ರಿಂದ) ತಿಳಿದುಬರುತ್ತದೆ ಮತ್ತು ಬಿವಿ.ಕೆ. ಅಯ್ಯಂಗಾರ್ ಅವರ ಬಂಗಲೆಗೆ ‘ಮನೋರಮಾ’ ಎಂದು ಹೆಸರಿತ್ತು ಎಂದು ಅವರ ಲೆಟರ್ಹೆಡ್ ಪೇಪರ್ನಿಂದ ತಿಳಿದುಬರುತ್ತದೆ.
ಆದರೆ ಕಿರುರಸ್ತೆಯಲ್ಲಿದ್ದ ನಿವಾಸಿಗಳು ೧೬೦ ಅಡಿ ಜಾಗ ಬಿಟ್ಟುಕೊಡಲು ಒಪ್ಪದೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಈ ಕಾರಣದಿಂದ ಸುಮಾರು ೨೦ ವರ್ಷ ನಿಂತುಹೋಗಿದ್ದ ಈ ಕಾರ್ಯಕ್ಕೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪನವರು (೧೯೫೬-೫೮) ತಮ್ಮ ಸಂಪುಟದಲ್ಲಿ ನಗರಾಭಿವೃದ್ಧಿ ಉಪಸಚಿವರಾಗಿದ್ದ ವೈ. ರಾಮಚಂದ್ರ ಅವರ ಕಾರ್ಯದಕ್ಷತೆಯನ್ನು ಗುರುತಿಸಿ ಬೆಂಗಳೂರಿನ ಹೃದಯಭಾಗದಲ್ಲಿರುವ ಈ ರಸ್ತೆಯನ್ನು ಅಗಲೀಕರಿಸುವ ಮಹತ್ತರವಾದ ಜವಾಬ್ದಾರಿಯನ್ನು ಶ್ರೀಯುತರಿಗೆ ವಹಿಸಿದರು. (ಸ್ಥಳೀಯರೇ ಆಗಿದ್ದ ವೈ. ರಾಮಚಂದ್ರ ಅವರು ೧೯೫೮ರಲ್ಲಿ ತಮ್ಮ ೩೩ನೇ ವಯಸ್ಸಿನಲ್ಲೇ ಚಿಕ್ಕಪೇಟೆ ಕ್ಷೇತ್ರದಿಂದ ಬೆಂಗಳೂರು ನಗರಸಭೆಗೆ ಪುರಸಭಾ ಚುನಾವಣೆಯಲ್ಲಿ ಆರಿಸಿಬಂದು ೧೦ನೇ ಮೇಯರ್ ಆಗಿ ಆಯ್ಕೆಗೊಂಡು ಅತ್ಯಂತ ಉತ್ಸಾಹದಿಂದ ಸಾರ್ವಜನಿಕ ಕಾರ್ಯಗಳನ್ನು ಮಾಡಿದ್ದರು). ಆದ್ದರಿಂದ ಅವರು ಸ್ಥಳೀಯ ಜನರ ಕಷ್ಟಸುಖಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ೧೬೦ ಅಡಿ ಅಗಲದ ಬದಲು ೮೦ ಅಡಿ ಜಾಗವನ್ನು ಮಾತ್ರ ಬಿಟ್ಟಕೊಡುವಂತೆ ನಾಗರಿಕರಲ್ಲಿ ಮೇಯರ್ ರಾಮಚಂದ್ರ ಅವರು ಮನವಿ ಮಾಡಿಕೊಂಡರು. ಅವರ ಮನವಿಯನ್ನು ಪುರಸ್ಕರಿಸಿದ ಸಾರ್ವಜನಿಕರು ೮೦ ಅಡಿಯಷ್ಟು ಮನೆಯ ಜಾಗವನ್ನು ಬಿಟ್ಟಕೊಡಲು ಒಪ್ಪಿ ನ್ಯಾಯಾಲಯದಲ್ಲಿ ಹೂಡಿದ್ದ ದಾವೆಗಳನ್ನು ವಾಪಸ್ಸು ಪಡೆದು ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿದರು.
ಈ ನೂತನ ರಸ್ತೆಗಾಗಿ ಹಾಸ್ಪಿಟಲ್ ರಸ್ತೆಯಲ್ಲಿದ್ದ ಹುಚ್ಚಾಸ್ಪತ್ರೆಯನ್ನು ನೆಲಸಮ ಮಾಡಲಾಯಿತು. ಈ ರಸ್ತೆಯಲ್ಲಿ ಹೆಚ್ಚು ಪ್ರಸಿದ್ಧರಾಗಿದ್ದ ಬಿ.ವಿ.ಕೆ. ಅಯ್ಯಂಗಾರ್ ಅವರು ತಾತ ಕಟ್ಟಿಸಿದ್ದ ‘ಮನೋರಮಾ’ ಎಂದು ಹೆಸರಿದ್ದ (ಮೂಲೆಬಂಗಲೆ) ಆಕರ್ಷಕ ಕಲ್ಲಿನಬಂಗಲೆಯ ಮುಕ್ಕಾಲು ಭಾಗವನ್ನು ರಸ್ತೆ ಅಗಲೀಕರಣಕ್ಕೆ ಮುಫತ್ತಾಗಿ ಬಿಟ್ಟುಕೊಟ್ಟರು. ಅದರಂತೆ ೩೦ ಅಡಿ ಅಗಲದ ಜೋಡಿ ರಸ್ತೆ ಎರಡು ಕಡೆ ೧೦ ಅಡಿ ಅಗಲದ ಪಾದಚಾರಿ ರಸ್ತೆ (ಒಟ್ಟು ೮೦ ಅಡಿ) ನಿರ್ಮಾಣಮಾಡಲಾಯಿತು.
ಮನೆ ಕಳೆದುಕೊಂಡವರಿಗೂ ಮತ್ತು ಅಲ್ಲಿನ ಬಾಡಿಗೆದಾರರಿಗೂ ಬೆಂಗಳೂರು ಸಿಟಿ ಇಂಪ್ರೂವ್ಮೆAಟ್ ಟ್ರಸ್ಟ್ಬೋರ್ಡ್ (ಈಗಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ)ನಿಂದ ನಿವೇಶನಗಳನ್ನು ಹಾಗೂ ಟ್ರಸ್ಟ್ ಬೋರ್ಡಿನವರು ನಿರ್ಮಿಸಿದ್ದ ಮನೆಗಳನ್ನು ಕೊಡಿಸಿದರು. ಇನ್ನೂ ಕೆಲವರಿಗೆ ಕರ್ನಾಟಕ ಗೃಹ ಮಂಡಳಿಯವರು ನಿರ್ಮಿಸಿದ್ದ ವಸತಿ ಗೃಹಗಳನ್ನು ಸುಲಭ ಕಂತುಗಳಲ್ಲಿ ಕೊಡಿಸಿದರು.
ಸುಮಾರು ೧೯೬೦-೬೧ರಲ್ಲಿ ಸಾರ್ವಜನಿಕರ ಸಂಚಾರಕ್ಕೆ ಪ್ರಾರಂಭವಾದ ಈ ರಸ್ತೆಗೆ ‘ಬಿ.ವಿ.ಕೆ. ಅಯ್ಯಂಗಾರ್ ರಸ್ತೆ’ ಎಂದು ಹೆಸರಿಡಲಾಯಿತು.
ಉದಾರಮನಸ್ಸಿನವರಾದ ಬಿ.ವಿ.ಕೆ. ಅಯ್ಯಂಗಾರ್ ಅವರು ೧೯೨೪ರ ಫೆಬ್ರುವರಿಯಲ್ಲಿ ಮಿಂಟೋ ಕಣ್ಣಾಸ್ಪತ್ರೆ ಸಂಬಂಧವಾಗಿ ಒಂದು ಕಟ್ಟಡದ ನಿರ್ಮಾಣಕ್ಕಾಗಿ ೮.೩೭೫ ರೂ.ಗಳನ್ನು ದಾನವಾಗಿ ಕೊಟ್ಟಿರುವುದು ಮೈಸೂರ್ ಸ್ಟಾರ್, ೧೭-೨-೧೯೨೪, ಪುಟ-೨ರಿಂದ ತಿಳಿದುಬರುತ್ತದೆ. (ಇವರು ಮಹಾರಾಜರಿಂದ ‘ಧರ್ಮಪ್ರಕಾಶ’ ಎಂಬ ಬಿರುದು ಪಡೆದಿದ್ದರು). ಇಂತಹ ದಾನಿಗಳಾದ ಬಿ.ವಿ.ಕೆ. ಅಯ್ಯಂಗಾರ್ ಅವರು ತಾವು ವಾಸಿಸುತ್ತಿದ್ದ ವಿಶಾಲವಾದ ಸುಂದರ ಬಂಗಲೆಯ ಸ್ಥಳವನ್ನು ರಸ್ತೆಗೆ ಮುಫತ್ತಾಗಿ ಬಿಟ್ಟುಕೊಟ್ಟ ನಂತರ ಉಳಿದ ಭಾಗವನ್ನು ವಿಶ್ವೇಶ್ವರಪುರದ (ಸಜ್ಜನರಾವ್ ಸರ್ಕಲ್) ಸರ್ಕಲ್ನಿಂದ ಆರ್.ವಿ. ರಸ್ತೆ ಕಡೆಗೆ ಹೋಗುವ ಈಸ್ಟ್ ಸರ್ಕಲ್ ರಸ್ತೆಯಲ್ಲಿದ್ದ ಶ್ರೀಮಂತ ಎಸ್. ವೆಂಕಟಪ್ಪನವರಿಗೆ ಮಾರಾಟ ಮಾಡಿದರು. ಆ ಸ್ಥಳದಲ್ಲಿ ವೆಂಕಟಪ್ಪನವರು ೧೯೪೭-೪೮ರಲ್ಲಿ ನಿರ್ಮಿಸಿದ ಕೆಂಪೇಗೌಡ ಚಿತ್ರಮಂದಿರವು ೧೨-೯-೧೯೪೮ರಂದು ಪ್ರಾರಂಭವಾಯಿತು. (ಈಗಿನ ಕೆಂಪೇಗೌಡ ರಸ್ತೆಗೆ ಮೊದಲಿಗೆ ಕಿಚ್ಚಯ್ಯ ಚೆಟ್ಟಿ ರಸ್ತೆ ಎಂದು ಹೆಸರಿತ್ತು. ಅನಂತರದಲ್ಲಿ ರೈಲ್ವೆ ರಸ್ತೆ ಎಂದು ಹೆಸರು ಪಡೆದು ಸುಮಾರು ೧೯೫೦ರ ನಂತರ ಕೆಂಪೇಗೌಡ ರಸ್ತೆ ಎಂದು ಹೆಸರು ಪಡೆದಿರುವುದು ಇತಿಹಾಸದಿಂದ ತಿಳಿದುಬರುತ್ತದೆ. – The Mysore State Handbook & Directory, 1951, Page No-527.)
ಈ ರಸ್ತೆಯ ನಿರ್ಮಾಣಕ್ಕೆ ಬಿ.ವಿ.ಕೆ. ಅಯ್ಯಂಗಾರ್ ಮುಖ್ಯ ಕಾರಣರಾದರೆ ಮತ್ತೊಬ್ಬರು ವೈ. ರಾಮಚಂದ್ರ ಅವರು. ಇವರ ನೆನಪಿಗಾಗಿ ಗಾಂಧಿನಗರದಲ್ಲಿ ಇವರು ವಾಸಿಸುತ್ತಿದ್ದ ರಸ್ತೆಗೆ (ಜೈಲ್ ಹಿಂಭಾಗ) ನಗರಪಾಲಿಕೆಯವರು ‘ವೈ. ರಾಮಚಂದ್ರ ರಸ್ತೆ’ ಎಂದು ಹೆಸರಿಟ್ಟಿದ್ದಾರೆ.
ಆಧಾರ
೧.‘ಬೆಂಗಳೂರು ನಗರ ನಿರ್ಮಾಪಕರು’, ಭಾಗ-೨, ಸುರೇಶ್ ಮೂನ, ಸಮೃದ್ಧ ಸಾಹಿತ್ಯ, ವಿಠಲನಗರ, ಬೆಂಗಳೂರು, ೨೦೧೨., ಪುಟ-೨೯೫, ೩೧೦, ೩೧೧. ಮತ್ತು ಅದೇ ಭಾಗ-೩, ಪುಟ-೧೬೨.
೨.‘ಪರಮಾಣು ವಿಜ್ಞಾನಿ ಡಾ|| ರಾಜಾ ರಾಮಣ್ಣ’, (ಸಂಕ್ಷಿಪ್ತ ಪರಿಚಯ) ಬಿ.ಎಸ್. ಗುಂಡೂರಾವ್, ಭಾರತೀಯ ವಿದ್ಯಾ ಭವನ, ಬೆಂಗಳೂರು-೧, ೨೦೧೧. ಪುಟ-೯,೧೧.
೩.‘ಅಮರ ರಂಗ-ರಾಜಾ’, ದ್ವಿದಶಮಾನೋತ್ಸವ ಸಂಸ್ಮರಣ ಸಂಚಿಕೆ, ಭಾರತೀಯ ವಿದ್ಯಾ ಭವನ, ಬೆಂಗಳೂರು-೧, ೨೦೧೧, ಪುಟ- ೭೧
೪. ‘ಜೀವನ್ಮುಖಿ’, ವೈ.ರಾಮಚಂದ್ರ ಸಂಸ್ಮರಣ ಸಂಪುಟ, ಸಂ: ಕೆ.ಚಂದ್ರಮ್ಮ, ೨೦೦೮, ಪುಟ-೩೬,೩೭.
೫. Campbell’s Directory for Mysore & Bangalore, 1920. Page No-549
೬. ‘ವೃತ್ತಾಂತ ಪತ್ರಿಕೆ’, ೭-೩-೧೯೩೫ ಮಾರ್ಚ್, ಪುಟ-೬.