‘ರಾಜತರಂಗಿಣಿ ಕಥಾವಳಿ’
ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅನನ್ಯವಾದ ಕಾವ್ಯ ಕಶ್ಮೀರದ ಕಲ್ಹಣನು ಕ್ರಿ.ಶ. ೧೨ನೇ ಶತಮಾನದ ಮಧ್ಯಭಾಗದಲ್ಲಿ ರಚಿಸಿದ ‘ರಾಜತರಂಗಿಣಿ’. ಸಂಸ್ಕೃತಕವಿಗಳು ಇತಿಹಾಸಕ್ಕೂ ಮಹತ್ತ್ವ ನೀಡಿರುವುದಕ್ಕೆ ಒಂದು ಉಜ್ಜ್ವಲ ನಿದರ್ಶನ, ಎಂಟು ‘ತರಂಗ’ಗಳಲ್ಲಿ ಹತ್ತಿರಹತ್ತಿರ ಎಂಟು ಸಾವಿರ ಪದ್ಯಗಳಲ್ಲಿ ಹರಡಿಕೊಂಡಿರುವ ಈ ಕಾವ್ಯ. ಪ್ರಾಚೀನಕಾಲದ ಘಟನೆಗಳನ್ನು ಇತಿಹಾಸಮರ್ಯಾದೆಯಿಂದ ದಾಖಲೆ ಮಾಡಿರುವ ಅಪೂರ್ವಗ್ರಂಥ ಇದು.
ಅನೇಕ ವಿರಳ ಮಾಹಿತಿಗಳನ್ನೊಳಗೊಂಡಿರುವುದಲ್ಲದೆ ಕ್ರಿ.ಶ. ೧೧ನೇ ಶತಮಾನಕ್ಕೆ ಹಿಂದೆ ಕಶ್ಮೀರವನ್ನು ಆಳಿದ ಎಲ್ಲ ಮಹಾರಾಜರ ವೃತ್ತಾಂತಗಳಿಗೆ ನಮಗೆ ಇರುವ ಏಕೈಕ ಆಕರ ಈ ಕಾವ್ಯ. ಪ್ರಭುತ್ವಕೇಂದ್ರಿತ ಮತ್ತು ರಾಜಕೀಯ ಘಟನಾವಳಿಗಳಲ್ಲದೆ ಸಂಗತ ಸ್ಥಲಪುರಾಣ ಜಾನಪದೀಯಾದಿ ಮೂಲಗಳ ಕಥನಗಳನ್ನೂ ಕಲ್ಹಣನು ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾನೆ. ಕೃತಿಯ ಕಾವ್ಯಗುಣವೂ ಮೇಲ್ಮಟ್ಟದ್ದಾಗಿದೆ. ಈಗ್ಗೆ ಮೂರುಸಾವಿರ ವರ್ಷಗಳಿಗೂ ಹಿಂದಿನ ಸಾಮಾಜಿಕಜೀವನದ ಸೀಳುನೋಟವೂ ನಮಗೆ ಇಲ್ಲಿ ಲಭ್ಯವಿದೆ. ಜನಜನಿತವಾದ ಅಲೌಕಿಕವೆನಿಸಿದ ಘಟನೆಗಳೂ ಇಲ್ಲಿ ದಾಖಲೆಗೊಂಡಿವೆ. ಅವುಗಳ ಮೌಲ್ಯಮಾಪನ ಪ್ರತ್ಯೇಕ ವಿಷಯ. ಆದರೆ ಯುದ್ಧಗಳಿಂದ ಹಿಡಿದು ಪುರಾಣಪ್ರಸಂಗಗಳವರೆಗೆ ಪ್ರಾಚೀನರ ದೃಷ್ಟಿಯಲ್ಲಿ ಮುಖ್ಯವೆನಿಸಿದ್ದ ಸಂಗತಿಗಳು ಮೊದಲು ದಾಖಲೆಯಾಗಬೇಕಷ್ಟೆ. ಆ ಕೆಲಸವನ್ನು ಸಮರ್ಥವಾಗಿಯೂ ಸಮಗ್ರವಾಗಿಯೂ ‘ರಾಜತರಂಗಿಣಿ’ ಮಾಡಿದೆ. ಬೌದ್ಧಮತಪ್ರವರ್ತಕರಿಗೂ ಸನಾತನಧರ್ಮಾನುಯಾಯಿಗಳಿಗೂ ನಡುವಣ ಮುಖಾಮುಖಿಯ ಅನೇಕ ದುಷ್ಪ್ರಾಪ್ಯ ವಿವರಗಳು ನಮಗೆ ಇಲ್ಲಿ ಮಾತ್ರ ಲಭ್ಯ. ಹೀಗೆ ಎಲ್ಲ ದೃಷ್ಟಿಗಳಿಂದಲೂ ಸ್ವಾರಸ್ಯಗಳ ಗಣಿಯಾಗಿದೆ ಈ ಕಾವ್ಯ. ಇತಿಹಾಸಕಥನಕ್ಕೆ ಕಲ್ಹಣನು ನಿರ್ಮಿಸಿದ ಮಾದರಿಯು ಎಷ್ಟು ಸಮರ್ಪಕವಾಗಿತ್ತೆಂದರೆ ಅದೇ ಮಾದರಿಯಲ್ಲಿ ಆಮೇಲಿನ ಕಾಲದಲ್ಲಿ ಜೋನರಾಜ, ಶ್ರೀವರ ಮೊದಲಾದವರು ಕಶ್ಮೀರೇತಿಹಾಸಕಥನವನ್ನು (‘ರಾಜತರಂಗಿಣಿ’ ಎಂಬ ಹೆಸರಿನಲ್ಲಿಯೆ) ಮುಂದುವರಿಸಿದರು.
ಕಲ್ಹಣನ ‘ರಾಜತರಂಗಿಣಿ’ಯಲ್ಲಿ ಅಲ್ಲಲ್ಲಿ ಬರುವ ಅತಿ ಸಂಕ್ಷಿಪ್ತ ಪ್ರಸ್ತಾವಗಳನ್ನು ಆಧಾರವಾಗಿರಿಸಿಕೊಂಡು ಅವಕ್ಕೆ ವಿಸ್ತೃತ ಕಥಾರೂಪವನ್ನು ಕೊಟ್ಟು ಪ್ರಕೃತ ಮಾಲಿಕೆಯನ್ನು ಕಸ್ತೂರಿ ಮುರಳೀಕೃಷ್ಣ ಸಿದ್ಧಪಡಿಸಿದ್ದಾರೆ. (ಈ ಹಿಂದೆ ಕಸ್ತೂರಿ ಮುರಳೀಕೃಷ್ಣ ಅವರ ‘ಅಸಿಧಾರಾ’ ಧಾರಾವಾಹಿ ಕಾದಂಬರಿಯೂ ‘ಜೀವಿತ ಜಾತಕ’ ಕಥಾಮಾಲೆಯೂ ‘ಉತ್ಥಾನ’ದಲ್ಲಿ ಪ್ರಕಟವಾಗಿವೆ.) ಹಲವೊಮ್ಮೆ ಮೂಲದಲ್ಲಿ ನಾಲ್ಕೋ ಆರೋ ಸಾಲುಗಳಷ್ಟೇ ಇರುವ ಸಾಮಗ್ರಿಯು ಈ ಮಾಲಿಕೆಯಲ್ಲಿ ಇಡೀ ಪೂರ್ಣಪ್ರಮಾಣದ ಸ್ವತಂತ್ರ ಕಥೆಯಾಗಿ ವಿಸ್ತಾರಗೊಂಡಿದೆ. ಹೀಗೆ ಈ ಮಾಲಿಕೆಯಲ್ಲಿ ಇರುವವು ‘ರಾಜತರಂಗಿಣಿ’ – ಆಧಾರಿತ ಸ್ವತಂತ್ರ ಕಥಾನಕಗಳು.
– ಸಂಪಾದಕ
ಕಶ್ಮೀರವೆಂದರೆ ಪಾರ್ವತಿ
ತಾನು ಮಾಡಹೊರಟಿದ್ದುದು ಧರ್ಮವೆ? ಅ ಕಾರಣವಾಗಿ ದ್ವೇಷ ಬೆಳೆಸಿಕೊಂಡ ತುಚ್ಛಮಾರ್ಗ ತನ್ನದು.
ನಾಳೆ ಸ್ವಯಂವರಕ್ಕೆ ಶ್ರೀಕೃಷ್ಣನು ಬರುತ್ತಾನಂತೆ!
ಈ ನಿರೀಕ್ಷೆಗೆ ಆಧಾರವೇನಿತ್ತೋ ತಿಳಿಯದು. ಅಂತೂ ಈ ಸುದ್ದಿಯಂತೂ ಕಾಳ್ಗಿಚ್ಚಿನಂತೆ ಹರಡಿ ಸ್ವಯಂವರಕ್ಕೆಂದು ಬಂದಿದ್ದ ರಾಜಕುಮಾರರ ನಡುವೆಯೂ ಸೈನಿಕ ಶಿಬಿರಗಳಲ್ಲಿಯೂ ಸಂಚಲನೆಯನ್ನು ಸೃಷ್ಟಿಸಿತ್ತು.
ದಾಮೋದರ ಮಹಾರಾಜರ ದೀರ್ಘಕಾಲದ ಆಕಾಂಕ್ಷೆ ಈಡೇರುವ ದಿವಸ ಹತ್ತಿರ ಬಂದಿರುವಂತಿದೆ. ಮಹಾರಾಜರ ಶಿಬಿರದಲ್ಲಿ ಎಲ್ಲ ಸೈನಿಕರ ಅನಿಸಿಕೆಯೂ ಹೀಗಿಯೇ ಇದ್ದಿತು.
ನಾಳೆಗೆ ನಾನು ಮಾಡುತ್ತಿರುವ ಯಜ್ಞದ ಮೊದಲಭಾಗ ಪೂರ್ಣಗೊಳ್ಳುತ್ತದೆ ಎಂದುಕೊಂಡ, ಎಲ್ಲರಿಗೂ ದೂರದಲ್ಲಿ ಕುಳಿತಿದ್ದ ರತ್ನಗಿರಿ. ಸ್ವಲ್ಪ ದೂರದಲ್ಲಿದ್ದರೂ ರತ್ನಗಿರಿಗೆ ಶಿಬಿರಗಳಲ್ಲಿ ನಡೆಯುತ್ತಿದ್ದ ಮಾತುಕತೆಗಳು ಕೇಳಿಸುತ್ತಿದ್ದವು. ಮುಖ್ಯವಾಗಿ ಕಶ್ಮೀರ ಸೈನಿಕಶಿಬಿರದಲ್ಲಿ ತನ್ನ ಅನುಯಾಯಿಗಳು ಮುಂದುವರಿಸಿದ್ದ ಶ್ರೀಕೃಷ್ಣದೂಷಣೆ ಸ್ಪಷ್ಟವಾಗಿಯೇ ಕೇಳಿಬರುತ್ತಿತ್ತು.
ಆ ಕೃಷ್ಣನು ಬರಿಯ ಮಾಯಗಾರ. ಸ್ವಂತ ಸೋದರಮಾವನನ್ನೇ ವಧೆ ಮಾಡಿದ ಧೂರ್ತ. ಅವನಿಗೆ ನೀತಿ-ಜಾತಿಗಳೇನೂ ಇಲ್ಲ. ಅದು ಹೇಗೋ ಜನರ ಮೌಢ್ಯದ ಕಾರಣದಿಂದ ತಾನೊಬ್ಬ ದೊಡ್ಡಮನುಷ್ಯನಂತೆ ಚಲಾವಣೆಯಾಗುತ್ತಿದ್ದಾನೆ. ಇದುವರೆಗೆ ಪ್ರತಾಪವಂತ ರಾಜರುಗಳಾರೂ ಅವನಿಗೆ ಎದುರಾಗಿಲ್ಲ. ಹಾಗಾಗಿ ಇನ್ನೂ ಬದುಕಿದ್ದಾನೆ.
ಹೌದು, ಜರಾಸಂಧನು ಯುದ್ಧಕ್ಕೆ ಬಂದೊಡನೆ ಇವನು ಓಡಿಹೋದನಲ್ಲ!
ತನ್ನ ಕೈಯಲ್ಲಾಗದೆ ಭೀಮಸೇನನನ್ನು ಮುಂದಕ್ಕೆ ಕಳಿಸಿ ಜರಾಸಂಧನನ್ನು ಕೊಲ್ಲಿಸಿದ.
ಆ ಕೃಷ್ಣನಿಗೆ ಕೀರ್ತಿಕಾಮನೆ. ಬೇರೆಯವರು ಕಷ್ಟಪಟ್ಟು ಸಾಧಿಸಿದುದನ್ನು ತಾನೇ ಮಾಡಿದುದಾಗಿ ಹೇಳಿಕೊಂಡು ತಿರುಗುತ್ತಾನೆ.
ಆ ಕೃಷ್ಣನ ಮಾತುಗಳಿಗನಾದರೂ ಅರ್ಥವಿದೆಯೆ? ಎಲ್ಲರೂ ತಾವು ಮಾಡಿದ ಕರ್ಮದ ಫಲವನ್ನು ಅನುಭವಿಸಬೇಕಂತೆ. ಹಾಗಿದ್ದರೆ ಇಷ್ಟೊಂದು ದೇವರ ಪೂಜೆಗಳೂ ಮಂತ್ರಗಳೂ ಏಕೆ? ಯಜ್ಞಗಳಾದರೂ ಏಕೆ? ಯಾವುದೋ ಕರ್ಮದ ಫಲವನ್ನು ಅನುಭವಿಸುತ್ತ ತೆಪ್ಪಗಿರುವುದನ್ನು ಬಿಟ್ಟು ಈ ಗೊಡವೆಗಳೆಲ್ಲ ಏಕೆ ಬೇಕಾಗಿತ್ತು?
ಇನ್ನು ಕೆಲವರು “ಇಷ್ಟಾಗಿ ಇವರೆಲ್ಲ ಹೇಳುವ ವೈದಿಕಧರ್ಮವೂ ಒಂದು ಧರ್ಮವೆ? ಮನುಷ್ಯನೇ ಭಗವಂತನಂತೆ! ಪ್ರತಿಯೊಬ್ಬರೂ ಭಗವಂತನಂತೆ! ಇದೆಲ್ಲ ಏನು ಮೂರ್ಖತೆ? ಆದ್ದರಿಂದಲೇ ಜನರು ಕಲ್ಲುಬಂಡೆಗಳಿಗೂ ಮರ-ಹುತ್ತಗಳಿಗೂ ಕೈಮುಗಿಯುವುದು! ಎಂದು ಗಟ್ಟಿಯಾಗಿ ನಕ್ಕರು.
ಆ ಕೃಷ್ಣನು ಮನುಷ್ಯ ಮಾತ್ರನಲ್ಲವಂತೆ, ಸ್ವಯಂ ಭಗವಂತನಂತೆ! ಎಂದು ಬಾಯಿಬಿರಿಯುವಂತೆ ನಕ್ಕರು ಮತ್ತೆ ಕೆಲವರು.
ಇದನ್ನೇ ಮೋಸವೆನ್ನುವುದು. ಅದರ ಬಲೆಯೊಳಕ್ಕೆ ಬೀಳಬಾರದೆನ್ನುತ್ತೇನೆ. ಭಗವಂತನು ಎಲ್ಲಾದರೂ ಹೀಗಿರುವುದುಂಟೆ? ಆ ಹದಿನಾರು ಸಾವಿರ ಮಂದಿಯೊಡನೆ ಅದೆಂತಹ ರಾಸಲೀಲೆ? ಅದು ಸಾಲದೆಂಬಂತೆ ಆ ರಾಧೆಯೊಡನೆಯೂ ಸರಸಾಟ!
ಈ ಮಾತುಗಳನ್ನೆಲ್ಲ ಕೇಳಿಸಿಕೊಂಡು ಮುಸಿಮುಸಿ ನಗುತ್ತಿದ್ದ ರತ್ನಗಿರಿ. ಈ ಮಾತುಗಳನ್ನೆಲ್ಲ ಆಡುತ್ತಿದ್ದವರು ಅವನ ಅನುಚರರೇ.
ನಾಳೆ ದಾಮೋದರ ಮಹಾರಾಜರು ಶ್ರೀಕೃಷ್ಣನೊಡನೆ ಯುದ್ಧ ಮಾಡುವುದು ತಪ್ಪಲಾರದೆ? ಎಂದು ಅವರಲ್ಲೊಬ್ಬ ಕೇಳಿದ. ಅವನ ಕಡೆಗೆ ನೆಟ್ಟನೋಟ ಬೀರಿದ, ರತ್ನಗಿರಿ. ತಾನು ಈ ಹಿಂದೆ ಸಾಧಿಸಿದ್ದುದೆಲ್ಲ ನೆನಪಾಗಿ ಗರ್ವದಿಂದ ಬೀಗಿದ. ನಾಳೆ ಇಷ್ಟು ಹೊತ್ತಿಗೆ ಏನು ಪರಿಸ್ಥಿತಿ ಏರ್ಪಟ್ಟೀತೋ – ಎಂದು ಯೋಚಿಸತೊಡಗಿದ.
‘ಆ ದಾಮೋದರನ ತಲೆ ನೆಲಕ್ಕುರುಳಿದೊಡನೆ ನನ್ನ ಅದೃಷ್ಟ ಆಕಾಶಕ್ಕೇರುತ್ತದೆ!’ ಎಂದುಕೊಂಡ ರತ್ನಗಿರಿ, ಸಂತೃಪ್ತಿಯಿಂದ. ‘ನನ್ನ ಅದೃಷ್ಟ ಮೇಲೇರುವುದು ಮಾತ್ರವಲ್ಲ. ಸನಾತನ ಧರ್ಮದ ಮೇಲೆ ನನ್ನ ಮ್ಲೇಚ್ಛಧರ್ಮ ವಿಜಯವನ್ನು ಸಾಧಿಸುತ್ತದೆ.’
ದಾಮೋದರ ಮಹಾರಾಜನ ಸೈನ್ಯದ ಪದಾತಿದಳದಲ್ಲಿ ಒಬ್ಬ ಸಾಮಾನ್ಯ ಸೈನಿಕ, ರತ್ನಗಿರಿ. ರತ್ನಗಿರಿಯ ತಂದೆ ಮೋಹನಗಿರಿ. ಮೊದಲ ಗೋನಂದನಿಗೆ ಅಂಗರಕ್ಷಕನಾಗಿದ್ದವನು ಮೋಹನಗಿರಿ. ಅವನಿಗೆ ಗೋನಂದನೆಂದರೆ ಸಾಕ್ಷಾತ್ ಭಗವಂತನಿಗೆ ಸಮಾನ.
ಕಶ್ಮೀರದಲ್ಲಿ ಮೊದಲ ಗೋನಂದನ ಪ್ರಭುತ್ವವಿದ್ದಾಗ ಮಧುರೆಯಲ್ಲಿ ಕಂಸನೂ ಗಿರಿವ್ರಜಪುರದಲ್ಲಿ ಜರಾಸಂಧನೂ ರಾಜ್ಯಭಾರ ಮಾಡುತ್ತಿದ್ದರು. ಗೋನಂದನೂ ಜರಾಸಂಧನೂ ದೂರದ ನೆಂಟರು. ಜರಾಸಂಧನು ಕಂಸನ ಪಕ್ಷಕ್ಕೆ ಸೇರಿದ್ದವನು.
ಶ್ರೀಕೃಷ್ಣನು ಕಂಸನನ್ನು ಸಂಹರಿಸಿ ಮಧುರೆಯನ್ನು ಉಗ್ರಸೇನ ಮಹಾರಾಜನಿಗೆ ವಹಿಸಿಕೊಟ್ಟನಷ್ಟೆ. ಮಿತ್ರನ ಶತ್ರುವು ತನಗೂ ಶತ್ರು ಎಂಬ ನ್ಯಾಯದಂತೆ ಜರಾಸಂಧನು ಕೃಷ್ಣನ ಬಗೆಗೆ ವೈರ ಬೆಳೆಸಿಕೊಂಡಿದ್ದ. ಕೃಷ್ಣನೊಡನೆ ಯುದ್ಧ ಮಾಡುವುದರಲ್ಲಿ ತನಗೆ ಸಹಾಯ ನೀಡುವಂತೆ ಜರಾಸಂಧನು ಕೋರಿದೊಡನೆ ಗೋನಂದನು – ತನ್ನ ಅಂತರಂಗದಲ್ಲಿ ಕೃಷ್ಣಭಕ್ತಿ ಇದ್ದರೂ – ಸ್ನೇಹಧರ್ಮಕ್ಕೆ ಕಟ್ಟುಬಿದ್ದು ತನ್ನ ಸೈನ್ಯವನ್ನೊಯ್ದು ಮಧುರಾನಗರಕ್ಕೆ ಮುತ್ತಿಗೆ ಹಾಕಿದ. ಆಗ ತನ್ನ ಸೈನ್ಯದ ಉಳಿವಿನ ದೃಷ್ಟಿಯಿಂದ ಬಲರಾಮನು ಕಶ್ಮೀರ ಸೈನ್ಯವನ್ನು ವಿರೋಧಿಸಿದ. ಯುದ್ಧದಲ್ಲಿ ಗೋನಂದನು ಮರಣಹೊಂದಿದ.
ಗಾಯಗೊಂಡಿದ್ದ ಗೋನಂದನನ್ನು ಅವನ ಅಂಗರಕ್ಷಕ ಮೋಹನಗಿರಿ ಯುದ್ಧರಂಗದಿಂದ ದೂರಕ್ಕೆ ಒಯ್ದು ಚಿಕಿತ್ಸೆ ಮಾಡಿಸಿದ. ಗೋನಂದನನ್ನು ಜೀವಂತ ಉಳಿಸಿಕೊಳ್ಳುವ ಯತ್ನ ಸಫಲಗೊಳ್ಳಲಿಲ್ಲ. ಗೋನಂದನು ಮೋಹನಗಿರಿಯ ಮಡಿಲಲ್ಲಿ ಕೊನೆಯುಸಿರೆಳೆದ. ಕೊನೆಯ ಉಸಿರಿನೊಡನೆ ಗೋನಂದನು ‘ಕೃಷ್ಣಾ!’ ಎಂದು ಉದ್ಗರಿಸಿದ. ಆ ಘಳಿಗೆಯಿಂದ ಮೋಹನಗಿರಿ ಶ್ರೀಕೃಷ್ಣನ ದ್ವೇಷಿಯಾದ.
ತರುವಾಯ ಪಟ್ಟಾಭಿಷಿಕ್ತನಾದ ದಾಮೋದರನಿಗೆ ಎಲ್ಲ ರಾಜಭೋಗಗಳಿದ್ದರೂ ತಂದೆಯ ಸ್ಮರಣೆ ಮಾತ್ರ ಅವನನ್ನು ನಿರಂತರ ಕಾಡುತ್ತಿತ್ತು. ಹೀಗೆ ಅವನು ಅಶಾಂತನಾಗಿದ್ದ. ಇಂತಹ ಅವಕಾಶಕ್ಕಾಗಿ ಕಾಯುತ್ತಿದ್ದ ಮ್ಲೇಚ್ಛಗಣಗಳು ಈಗ ಚಿಗಿತುಗೊಳ್ಳತೊಡಗಿದವು. ಆ ಕಾಲದಲ್ಲಿ ವೈದಿಕಧಾರೆಯಿಂದ ಹೊರಗಿದ್ದವರನ್ನು ‘ಮ್ಲೇಚ್ಛ’ರೆನ್ನುತ್ತಿದ್ದರು. ವೈದಿಕಧರ್ಮವನ್ನು ವಿರೋಧಿಸಿ ಕೆಲವರು ಭಾರತದೇಶದಿಂದಲೇ ಬಹಿಷ್ಕೃತರಾಗಿ ಪರ್ಶಿಯಾ ಮೊದಲಾದೆಡೆ ಹೋಗಿ ಸ್ಥಿರಗೊಂಡರು. ಹೀಗೆ ಬಹಿಷ್ಕೃತರಾಗಿದ್ದವರು ಹೇಗಾದರೂ ವೈದಿಕಧರ್ಮವನ್ನು ನಾಶಪಡಿಸಬಯಸಿ ಅವಕಾಶಕ್ಕಾಗಿ ಕಾಯುತ್ತಿದ್ದರು. ಅವರಿಗೆ ಇಂತಹ ಒಂದು ಅವಕಾಶ ದಾಮೋದರನ ಕೃಷ್ಣದ್ವೇಷ ಕಲ್ಪಿಸಿಕೊಟ್ಟಿತು. ಅವರೆಲ್ಲ ಶ್ರೀಕೃಷ್ಣನನ್ನು ವೈದಿಕಧರ್ಮದ ಪ್ರತೀಕವಾಗಿ ಭಾವಿಸಿ ಶ್ರೀಕೃಷ್ಣನನ್ನು ಪ್ರತಿರೋಧಿಸಲು ಹವಣಿಸಿದರು.
ಸಾಮಾನ್ಯವಾಗಿ ಪ್ರಜೆಗಳು ಆಳುವವನ ಇಂಗಿತವನ್ನನುಸರಿಸಿ ನಡೆದುಕೊಳ್ಳುತ್ತಾರಷ್ಟೆ. ದಾಮೋದರನು ತನ್ನ ತಂದೆಯ ಮರಣದ ಸ್ಮರಣೆಯಿಂದ ಹೊರಬರಲಾಗದುದು ಒಂದು ಕಡೆಯಾದರೆ ಇನ್ನೊಂದುಕಡೆ ವೈದಿಕಧರ್ಮದ ಪ್ರತೀಕವೆಂದು ಶ್ರೀಕೃಷ್ಣನ ಪ್ರಶಂಸೆ ಹರಡಿತ್ತು. ಈ ಹಿನ್ನೆಲೆಯಲ್ಲಿ ದಾಮೋದರ ಮಹಾರಾಜನ ಎದುರಿಗೆ ವೈದಿಕಧರ್ಮವನ್ನು ಪ್ರಸ್ತಾಪಿಸಲೂ ಜನರು ಹಿಂದೆಗೆಯುತ್ತಿದ್ದರು. ವೈದಿಕಧರ್ಮವನ್ನು ಬಹಿರಂಗವಾಗಿ ಆಚರಿಸಲೂ ಜನ ಹೆದರುತ್ತಿದ್ದರು. ಈ ಸನ್ನಿವೇಶದಲ್ಲಿ ಮ್ಲೇಚ್ಛರು ಹೆಚ್ಚು ಸತ್ತ್ವಗೊಂಡು ತಮ್ಮ ಅಭಿಪ್ರಾಯಗಳನ್ನು ಜನರ ಮನಸ್ಸುಗಳಲ್ಲಿ ಗಿಡಿದು ಅವರನ್ನು ವೈದಿಕಧರ್ಮಚ್ಯುತರನ್ನಾಗಿಸಿ ತಮ್ಮ ಮತಕ್ಕೆ ಸೇರಿಸಿಕೊಳ್ಳತೊಡಗಿದರು.
ಈ ಪ್ರಚಾರಕಾರ್ಯಸರಣಿಯ ಮುಖವಾಡವಾದವನು ರತ್ನಗಿರಿಯ ತಂದೆ ಮೋಹನಗಿರಿ. ಅವನು ತಾನು ವೈದಿಕಧರ್ಮವನ್ನು ತ್ಯಜಿಸಿ ಮ್ಲೇಚ್ಛಮತವನ್ನು ಸ್ವೀಕರಿಸಿದುದು ಮಾತ್ರವಲ್ಲದೆ ತನ್ನ ಕುಟುಂಬ ಸದಸ್ಯರನ್ನೂ ಬಂಧುವರ್ಗದವರನ್ನೂ ಕೂಡ ತನ್ನ ಬಣಕ್ಕೆ ಸೇರ್ಪಡೆಗೊಳಿಸಿದನು.
ತಂದೆಯನ್ನೇ ಶ್ರೇಷ್ಠ ಆದರ್ಶವಾಗಿ ಪರಿಗಣಿಸಿದ್ದ ರತ್ನಗಿರಿಯೂ ಪ್ರಖರ ಮ್ಲೇಚ್ಛಮತೀಯನಾಗಿ ರೂಪುಗೊಂಡ. ಹಿಂದಿನಿಂದ ಬಂದಿದ್ದ ಬಂಧುತ್ವ-ಆಚರಣೆಗಳನ್ನೆಲ್ಲ ತಿರಸ್ಕರಿಸಿ ಮ್ಲೇಚ್ಛರಲ್ಲಿ ಅಗ್ರಗಣ್ಯನೆನಿಸಿದ.
ಅದೊಂದು ದಿವಸ ತನ್ನ ತಾಯಿಯು ತಂದೆಗೆ ತಿಳಿಯದಂತೆ ರಹಸ್ಯದಲ್ಲಿ ವೈದಿಕಧರ್ಮ ಕಲಾಪದ ಆಚರಣೆಯಲ್ಲಿ ತೊಡಗಿದ್ದುದನ್ನು ರತ್ನಗಿರಿ ಗಮನಿಸಿದ. ನಿಷ್ಠುರವಾಗಿ ತಾಯಿಯನ್ನು ಪ್ರಶ್ನಿಸಿದ: ನೀವೇಕೆ ಈ ಧರ್ಮವನ್ನು ಅನುಸರಿಸುತ್ತಿರುವೆ? ಅದು ನೀಚಧರ್ಮವೆಂದು ತಂದೆ ಹೇಳಿಲ್ಲವೆ?
ಅದಕ್ಕೆ ತಾಯಿಯು ನಿಟ್ಟುಸಿರಿಟ್ಟು ಉತ್ತರಿಸಿದಳು: ಮಗು! ತಾತ್ಕಾಲಿಕ ಉದ್ರೇಕಗಳಿಗೊಳಗಾಗಿ ಅಶಾಶ್ವತ ವಿಧಾನಗಳ ಹಿಂದೆಬೀಳುವುದು ಸರಿಯಲ್ಲ. ಹೇಗೋ ಹುಟ್ಟಿ ಅಲ್ಪಕಾಲದಲ್ಲಿ ಮರೆಯಾಗುವ ನಾಯಿಕೊಡೆಗಳಂತಹ ಮತಗಳನ್ನು ನಂಬಿ ಏನೂ ಸಾಧಿಸಲಾಗುವುದಿಲ್ಲ. ಆದಿ-ಅನಂತಗಳಿಲ್ಲದ ಶಾಶ್ವತವಾದ ಸನಾತನಧರ್ಮವನ್ನು ಅರಿತುಕೋ. ನೀನಾದರೂ ನಿನ್ನ ಜೀವನವನ್ನು ಸಕ್ರಮ ಮಾರ್ಗದಲ್ಲಿ ನಡೆಸು.
ಎಲ್ಲ ಬಂಧುತ್ವಗಳೂ ನಿಸ್ಸಾರವೆಂದು ನಂಬಿದ್ದ ರತ್ನಗಿರಿಗೆ ತಾಯಿಯ ಮಾತುಗಳು ರುಚಿಸಲಿಲ್ಲ. ತಾಯಿಯ ಹೆರಳನ್ನು ಹಿಡಿದು ಎಳೆದುಕೊಂಡು ಹೋಗಿ ತಂದೆಯ ಮುಂದೆ ಬೀಳಿಸಿದ. ಅನಂತರ ರತ್ನಗಿರಿಯೂ ಇನ್ನು ಕೆಲವರು ಮ್ಲೇಚ್ಛ ಅನುಯಾಯಿಗಳೂ ಆಕೆಯನ್ನು ನಿಂದಿಸುತ್ತ ಊರಾಚೆಗೆ ಒಯ್ದು ಕಲ್ಲಗಳಿಂದ ಹೊಡೆದು ಅವಳನ್ನು ಸಾಯಿಸಿದರು.
ರತ್ನಗಿರಿ ಒಪ್ಪಿದ ಮತದಂತೆ ನಾಮರೂಪರಹಿತವಾದ ಸ್ವರೂಪಸ್ಮರಣೆಯ ಎದುರಿನಲ್ಲಿ ಗತಾನುಗತಿಕ ಕಲ್ಪನೆಗಳೆಲ್ಲ ತುಚ್ಛವಾದವು. ಇಡೀ ಸಾಮ್ರಾಜ್ಯವನ್ನು ಮ್ಲೇಚ್ಛಮಯಗೊಳಿಸಬೇಕೆಂಬ ಹೆಗ್ಗುರಿಯ ಮುಂದೆ ಎಲ್ಲ ಬಂಧ-ಸಂಬಂಧಗಳೂ ನಿಸ್ಸಾರವಾದವು.
ಹದಿವಯಸ್ಸಿನಲ್ಲಿಯೆ ತಾಯಿಯ ದೋಷವನ್ನು ಪ್ರಕಟಿಸಿದ ರತ್ನಗಿರಿಯ ಬಗೆಗೆ ಮ್ಲೇಚ್ಛಮತ ಗುರುಗಳಲ್ಲಿ ಅತಿಶಯ ಅಭಿಮಾನ ಏರ್ಪಟ್ಟಿತು; ಅವನ ವಿಷಯದಲ್ಲಿ ಹೆಚ್ಚಿನ ಶ್ರದ್ಧೆಯನ್ನು ತೋರತೊಡಗಿದರು. ಹೀಗೆ ಅನತಿಕಾಲದಲ್ಲಿ ರತ್ನಗಿರಿ ಮ್ಲೇಚ್ಛಮತೀಯರಲ್ಲಿ ಅಗ್ರಪಂಕ್ತಿಯವನೆನಿಸಿದ. ಅವನು ಕಶ್ಮೀರದುದ್ದಗಲಕ್ಕೂ ಸಂಚರಿಸುತ್ತಾ ಉಪಾಯದಿಂದಲೋ ಭಯವನ್ನೊಡ್ಡಿಯೋ ಅನೇಕ ಜನರನ್ನು ಮ್ಲೇಚ್ಛಮತಕ್ಕೆ ಸೇರ್ಪಡೆಗೊಳಿಸಿದ.
ರತ್ನಗಿರಿಗೆ ರಾಜನ ಭಯವಿಲ್ಲ. ಏಕೆಂದರೆ ಸ್ವಯಂ ರಾಜನೇ ಕೃಷ್ಣದ್ವೇಷಿ. ರಾಜನ ನಂಬಿಕೆಯ ಮಂತ್ರಿಯೂ ಮ್ಲೇಚ್ಛಮತಾನುಯಾಯಿಯಾದುದರಿಂದ ರತ್ನಗಿರಿಯನ್ನು ಬೆಂಬಲಿಸುತ್ತಿದ್ದ.
ಹೀಗೆ ಮ್ಲೇಚ್ಛಮತಪ್ರವರ್ತಕನಾಗಿ ರತ್ನಗಿರಿ ಮುಖಂಡನೆನಿಸಿದ. ಹೀಗಿರುವಾಗ ಅವನ ಸುಪರ್ದಿಗೆ ಒಳಪಟ್ಟಿದ್ದ ತುರುಷ್ಕದೇಶದಿಂದ ಒಂದು ರಹಸ್ಯ ಸಮಾವೇಶಕ್ಕಾಗಿ ಅವನಿಗೆ ಆಮಂತ್ರಣ ಬಂದಿತು.
(ಇಲ್ಲಿ ‘ತುರುಷ್ಕ’ ಎಂದರೆ ಮಹಮ್ಮದೀಯ ಮತಕ್ಕೆ ಒಳಪಟ್ಟದ್ದಲ್ಲ. ಇಲ್ಲಿ ನಿರೂಪಿತವಾಗುತ್ತಿರುವ ಕಥೆ ನಡೆದದ್ದು ಕಲಿಯುಗದ ಆರಂಭಕ್ಕೂ ಹಿಂದೆ. ಅದಾದ ಎಷ್ಟೋ ಸಾವಿರ ವರ್ಷಗಳಾದ ಮೇಲೆಯೆ ಮಹಮ್ಮದೀಯ ಮತ ಹುಟ್ಟಿದುದು.)
ಈ ವೇಳೆಗೆ ದಾಮೋದರ ಮಹಾರಾಜನು ಪಟ್ಟಕ್ಕೆ ಬಂದು ಹತ್ತಿರಹತ್ತಿರ ಮೂರು ವರ್ಷಗಳು ಆಗಿದ್ದವು.
ರತ್ನಗಿರಿ ರಹಸ್ಯವಾಗಿ ತುರುಷ್ಕದೇಶಕ್ಕೆ ಹೋಗಿ ಹಿಂದಿರುಗಿದ. ಅಲ್ಲಿ ನಡೆದ ಸಮಾವೇಶದಲ್ಲಿ ಒಂದು ನಿರ್ಣಯ ಆಗಿತ್ತು.
ಹೇಗೂ ದಾಮೋದರನು ಕೃಷ್ಣದ್ವೇಷಿ. ಎಂದೋ ಒಂದು ದಿನ ಅವನು ಕೃಷ್ಣನನ್ನೆದುರಿಸಿ ಯುದ್ಧ ಮಾಡಬೇಕಾಗುತ್ತದೆ. ಚಾಣಾಕ್ಷ ಕೃಷ್ಣನು ಹೇಗೋ ತನ್ನ ಮಾಯಾಜಾಲದಿಂದ ದಾಮೋದರನನ್ನು ಸೋಲಿಸುವುದು ನಿಶ್ಚಿತ. ದಾಮೋದರನಿಗೆ ಸಂತಾನವಿಲ್ಲ. ಅವನ ಭಾರ್ಯೆ ಯಶೋಮತಿ ಕೃಷ್ಣನ ಭಕ್ತೆ. ಇದೀಗ ಕಶ್ಮೀರ ರಾಜ್ಯದಲ್ಲಿ ಅರ್ಧಕ್ಕೂ ಹೆಚ್ಚು ಜನ ಮ್ಲೇಚ್ಛ ಮತಾನುಯಾಯಿಗಳಾಗಿದ್ದಾರೆ. ದಾಮೋದರನು ಕೃಷ್ಣನ ಕೈಯಲ್ಲಿ ಹತನಾದಾಗ ಆ ಸಂದರ್ಭವನ್ನು ಬಳಸಿಕೊಂಡು ಕೂಡಲೆ ಮ್ಲೇಚ್ಛಮತೀಯರೆಲ್ಲ ಒಟ್ಟುಗೂಡಿ ದೊಡ್ಡದಾದ ಬಂಡಾಯ ನಡೆಸಿ ರಾಜ್ಯವನ್ನು ವಶಕ್ಕೆ ತೆಗೆದುಕೊಳ್ಳಬೇಕು. ಇದನ್ನು ಕಾರ್ಯಗತಗೊಳಿಸಿ ರಾಜ್ಯವಷ್ಟನ್ನೂ ಮ್ಲೇಚ್ಛಮತಪರವಾಗಿಸಬೇಕಾದವನು ರತ್ನಗಿರಿ.
ಕಶ್ಮೀರ ರಾಜ್ಯ ಇಡೀ ಭಾರತದೇಶಕ್ಕೇ ಕಿರೀಟಪ್ರಾಯವಾದುದು. ಆ ಕಿರೀಟ ತಮ್ಮ ವಶವಾದರೆ ದೇಶವಷ್ಟು ತಮ್ಮ ವಶಕ್ಕೆ ಒಳಪಡಲು ಹೆಚ್ಚು ಸಮಯ ಬೇಕಾಗದು. ಇದು ಆ ಸಮಾವೇಶದಲ್ಲಿ ರತ್ನಗಿರಿಗೆ ವಹಿಸಿದ್ದ ಹೊಣೆಗಾರಿಕೆ.
ಅಷ್ಟು ದೊಡ್ಡ ಕಾರ್ಯವನ್ನು ತನಗೆ ವಹಿಸಿದುದಕ್ಕೆ ರತ್ನಗಿರಿ ಪುಲಕಗೊಂಡಿದ್ದ. ಹಿಂದಿರುಗಿದೊಡನೆ ಕಾರ್ಯತತ್ಪರನಾದ.
ತಾನು ಯೋಜಿಸಿದಂತೆ ಅನೇಕ ಮ್ಲೇಚ್ಛಮತಾನುಯಾಯಿಗಳನ್ನು ಸೈನ್ಯದೊಳಕ್ಕೆ ಸೇರ್ಪಡೆಗೊಳಿಸಿದ. ಮಂತ್ರಿಯ ಮನವೊಲಿಸಿ ಸೈನ್ಯದಲ್ಲಿ ಮುಖ್ಯ ಪದವಿಗಳಿಗೆ ತನ್ನ ಅನುಚರರು ನಿಯುಕ್ತರಾಗುವಂತೆ ನೋಡಿಕೊಂಡ.
ಆದರೆ ತಾನು ಮಾತ್ರ ಯಾರಿಗೂ ಸಂಶಯ ಉಂಟಾಗದಂತೆ ಮುಕ್ತವಾಗಿ ಸಂಚರಿಸುತ್ತಿದ್ದು ಒಬ್ಬ ಸಾಮಾನ್ಯ ಸೈನಿಕನಂತೆ ಕಾಣಿಸಿಕೊಳ್ಳುತ್ತಿದ್ದ.
ಒಮ್ಮೆ ಛದ್ಮವೇಷದಲ್ಲಿ ದ್ವಾರಕೆಗೂ ಹೋಗಿಬಂದ. ಅಲ್ಲಿ ಕೆಲವರನ್ನು ತನ್ನ ಪಾಳಯಕ್ಕೆ ತಿರುಗಿಸಿಕೊಂಡ. ಶ್ರೀಕೃಷ್ಣನ ಮಂತ್ರಿ ಸುಬುದ್ಧಿಯ ಹೆಸರು ಕೇಳಿಯೇ ರತ್ನಗಿರಿಗೆ ನಡುಕ ಹುಟ್ಟುತ್ತಿತ್ತು. ಆದರೂ ಗಾಢ ಪ್ರಯತ್ನದಿಂದ ಮಂತ್ರಿಯನ್ನು ಸಂಪರ್ಕಿಸಿ ಏನೇನೋ ಆಮಿಷಗಳನ್ನೊಡ್ಡಿ ಅವನನ್ನು ಸೆಳೆದುಕೊಂಡ.
ಇನ್ನು ಶ್ರೀಕೃಷ್ಣ-ದಾಮೋದರರ ನಡುವೆ ಯುದ್ಧ ಶುರುವಾಗುವುದಷ್ಟೆ ಬಾಕಿ.
ಆದರೆ ಇದೇ ಸಮಯಕ್ಕೆ ಬಂದ ವಾರ್ತೆ ರತ್ನಗಿರಿಯನ್ನು ತಳಮಳಗೊಳಿಸಿತು. ಅದೆಂದರೆ – ದಾಮೋದರನ ಪತ್ನಿ ಯಶೋವತಿ ಗರ್ಭವತಿಯಾಗಿದ್ದಾಳೆಂಬುದು. ಎಷ್ಟೋ ನೂತನ ಮತಪ್ರಚಾರ ಮಾಡಿದರೂ ಪ್ರಜೆಗಳಲ್ಲಿ ಕೆಲವು ಹಳೆಯ ವಿಶ್ವಾಸಗಳು ಪೂರ್ತಿಯಾಗಿ ನಶಿಸಿಲ್ಲ. ರಾಜನಿಗೆ ವಾರಸುದಾರರು ಇಲ್ಲದಿರುವವರೆಗೆ ಪರವಾಗಿಲ್ಲ. ಆದರೆ ನೈಜ ವಾರಸುದಾರನಿದ್ದಲ್ಲಿ ರಾಜನು ಮೃತನಾದೊಡನೆ ಅಪ್ರಾಪ್ತ ವಯಸ್ಕನಾಗಿದ್ದರೂ ಪುತ್ರನನ್ನೇ ತಮ್ಮ ಪ್ರಭುವನ್ನಾಗಿ ಜನರು ಭಾವಿಸುತ್ತಾರೆ.
ಈಗ ಏನು ಮಾಡಬೇಕು?
ಇಷ್ಟರಲ್ಲಿ ಇನ್ನೊಂದು ವಾರ್ತೆ.
ಈವೇಳೆಗೆ ದ್ವಾಪರಯುಗದಲ್ಲಿ ಇನ್ನೂ ಮೂವತ್ತೆಂಟು ವರ್ಷ ಉಳಿದಿತ್ತು (ಎಂದರೆ ಈಗಿನ ಲೆಕ್ಕದಂತೆ ಕ್ರಿ.ಪೂ. ಮೂರುಸಾವಿರದ ನೂರನಲವತ್ತಾರನೇ ವರ್ಷ ಎಂದುಕೊಳ್ಳಿ).
ಗಾಂಧಾರ ರಾಜನು ತನ್ನ ಮಗಳ ಸ್ವಯಂವರನನ್ನು ಏರ್ಪಡಿಸಿದುದು ಈ ಸಮಯದಲ್ಲಿ. ಎಲ್ಲ ರಾಜರುಗಳಿಗೂ ವರ್ತಮಾನ ಹೋಯಿತು. ದಾಮೋದರನು ಕೃಷ್ಣನಿಗೆ ಮಾತ್ರ ಸ್ವಯಂವರದ ವರ್ತಮಾನವನ್ನು ಕಳಿಸಲಿಲ್ಲ. ಆದರೆ ಗಾಂಧಾರರಾಜಕುಮಾರಿ ಪ್ರಭಾವತಿ ಶ್ರೀಕೃಷ್ಣನ ಭಕ್ತೆ.
ಹೀಗಿದ್ದುದರಿಂದ, ಕರೆಯಲಿ, ಕರೆಯದಿರಲಿ, ಕೃಷ್ಣನು ಸ್ವಯಂವರಕ್ಕೆ ಬಂದೇ ತೀರುತ್ತಾನೆ, ದಾಮೋದರ ಅವನನ್ನು ಎದುರಿಸಿಯೇ ಎದುರಿಸುತ್ತಾನೆ – ಎಂಬ ಸನ್ನಿವೇಶ.
ರತ್ನಗಿರಿ ಆನಂದಗೊಂಡ. ಆಗಬೇಕಾದ ಕಾರ್ಯಕ್ಕೆ ಗಂಧರ್ವರೇ ಏರ್ಪಾಟು ಮಾಡಿದ್ದಾರೆ – ಎಂದುಕೊಂಡ. ತನ್ನ ಪ್ರಯತ್ನಗಳನ್ನು ಕ್ಷಿಪ್ರಗೊಳಿಸಿದ. ಶ್ರೀಕೃಷ್ಣನ ಮಂತ್ರಿಗೆ ಸಂದೇಶ ಕಳಿಸಿದ. ಶ್ರೀಕೃಷ್ಣನ ಕೈಯಿಂದ ದಾಮೋದರನು ಮೃತಿಹೊಂದಿದೊಡನೆ ಕಶ್ಮೀರದ ಮೇಲೆ ಆಕ್ರಮಣ ನಡೆಸುವಂತೆ ಶ್ರೀಕೃಷ್ಣನನ್ನು ಪ್ರೇರೇಪಿಸಬೇಕು ಎಂಬುದು ಅವನ ಇಂಗಿತ. ಹಾಗೆ ಆದಲ್ಲಿ ಕಶ್ಮೀರ ಸೈನ್ಯದಲ್ಲಿ ಶ್ರೀಕೃಷ್ಣನ ವಿಷಯದಲ್ಲಿ ಇನ್ನಷ್ಟು ದ್ವೇಷ ಬೆಳೆಯುತ್ತದೆ. ಅದು ತನಗೆ ಅನುಕೂಲವಾಗುತ್ತದೆ ಎಂಬುದು ಅವನ ಲೆಕ್ಕಾಚಾರ.
ಆದರೆ ದಾಮೋದರನ ಪತ್ನಿ ಯಶೋವತಿ ಕೃಷ್ಣನ ಭಕ್ತೆಯಾಗಿದ್ದುದರಿಂದ ಅವಳು ಕೃಷ್ಣನಿಗೆ ಶರಣಾಗಬಹುದು. ಹಾಗೆ ಆದಲ್ಲಿ ಪ್ರಜೆಗಳಲ್ಲಿ ಯಶೋವತಿಯ ಬಗೆಗೆ ಕೂಡ ದ್ವೇಷಭಾವನೆ ಮೊಳೆಯುತ್ತದೆ; ಶ್ರೀಕೃಷ್ಣನಲ್ಲಿಗೆ ಹೋಗಿ ಯಶೋವತಿ ಪ್ರಾಣಭಿಕ್ಷೆ ಬೇಡಿದಲ್ಲಿ ಅವಳ ಬಗೆಗೆ ಜನರಲ್ಲಿ ಅಸಹ್ಯ ಹುಟ್ಟುತ್ತದೆ. ಇದಕ್ಕೆ ಜನರಲ್ಲಿ ಹೆಚ್ಚಿನ ಪ್ರಚಾರ ದೊರೆತಲ್ಲಿ ಅವರ ಬಂಡಾಯದ ಉದ್ದೇಶಕ್ಕೆ ಪೋಷಣೆ ಸಿಕ್ಕಿದಂತೆ ಆಗುತ್ತದೆ. ಹೇಗೂ ತನ್ನ ಅನುಯಾಯಿಗಳೆಲ್ಲ ಈ ಬೆಳವಣಿಗೆಗಳನ್ನೆಲ್ಲ ಆಸಕ್ತಿಯಿಂದ ಎದುರುನೋಡುತ್ತಿರುತ್ತಾರೆ. ದಾಮೋದರನ ಮರಣವಾದ ನಂತರ ರತ್ನಗಿರಿ ಆದೇಶ ದೊರೆತೊಡನೆ ಅವರು ಕೋಟೆಯಲ್ಲಿ ಯಶೋವತಿಯು ಶ್ರೀಕೃಷ್ಣನ ಆಶ್ರಯ ಕೋರಲು ಹೋದುದು ಸ್ವದೇಶಕ್ಕೆ ದ್ರೋಹ ಬಗೆದಂತೆ ಎಂಬ ಕಾರಣವನ್ನು ನೀಡಿ ಅವಳ ಹತ್ಯೆಯನ್ನು ಸಮರ್ಥಿಸಿಕೊಳ್ಳಬಹುದು.
ಅನಂತರ ಸೈನಿಕರೆಲ್ಲ ಬಂಡೆದ್ದು ರಾಜ್ಯವನ್ನು ವಶಪಡಿಸಿಕೊಳ್ಳಲು ತಡವಾಗದು. ಅವರ ನಾಯಕನಾದ ರತ್ನಗಿರಿ ರಾಜಪದಾಧಿಷ್ಠಿತನಾಗುತ್ತಾನೆ. ಇಡೀ ಕಶ್ಮೀರದಲ್ಲಿ ಸನಾತನಧರ್ಮದ ಪ್ರಾಬಲ್ಯ ಅಸ್ತಮಿಸಿ ಮ್ಲೇಚ್ಛಪ್ರಾಬಲ್ಯವು ರತ್ನಗಿರಿಯ ನಾಯಕತ್ವದಲ್ಲಿ ಆರಂಭಗೊಳ್ಳುತ್ತದೆ.
ರತ್ನಗಿರಿಯ ಚಿಂತನಲಹರಿ ಹೀಗೆ ಸಾಗಿರಲು ಶ್ರೀಕೃಷ್ಣನ ಮಂತ್ರಿಯಿಂದಲೂ ಸಂದೇಶ ಕೈಸೇರಿತು – ಎಲ್ಲ ಸಿದ್ಧತೆಗಳೂ ಆಗಿವೆಯೆಂದು.
ಬೆಳಕು ಹರಿಯಿತು.
ಎದುರಿಗೆ ಶ್ರೀಕೃಷ್ಣ ಸೈನ್ಯ!
ರತ್ನಗಿರಿಯ ಹೃದಯ ಸಂತೋಷದಿಂದ ಬಿರಿಯುವುದೊಂದು ಬಾಕಿ. ಇಷ್ಟು ದಿವಸಗಳ ಮೇಲೆ ತನ್ನ ಆಶಯ ಈಡೇರತೊಡಗಿದೆ. ಸನ್ನಿವೇಶಗಳನ್ನು ದಕ್ಷವಾಗಿ ತಾಳ್ಮೆಯಿಂದ ನಿರ್ವಹಿಸುವಂತೆ ಅನುಚರರಿಗೆ ಮತ್ತೊಮ್ಮೆ ಸೂಚನೆ ಕಳಿಸಿದ.
ಸೈನಿಕರೆಲ್ಲ ತಮ್ಮ ತಮ್ಮ ಆಯುಧಗಳನ್ನು ಸಜ್ಜುಗೊಳಿಸಿಕೊಂಡರು.
ಆಗ – ಯಾರ ಗಮನಕ್ಕೂ ಬಾರದೆ – ರತ್ನಗಿರಿಯು ಶಾಂತವಾಗಿ ಶ್ರೀಕೃಷ್ಣನ ಪಾಳೆಯದ ಕಡೆಗೆ ಹೆಜ್ಜೆ ಹಾಕಿದ.
ಅವನ ಎದೆಯಲ್ಲಿ ಆವೇಶದೊಂದಿಗೆ ಅದೊಂದು ಮಾತಿಗೆಟುಕದ ಆವೇದನೆ ಏರ್ಪಟ್ಟಿತ್ತು. ಕಾರಣವೇನು? ತಾನು ಮಾಡಹೊರಟಿರುವುದು ಸರಿಯೆ?
ಈಗ ಅದೇಕೋ ಅವನ ಮನಸ್ಸಿನಲ್ಲಿ ದ್ವೈಧ ತಲೆದೋರಿತು. ಇಷ್ಟಕ್ಕೂ ಸನಾತನ ಧರ್ಮದ ಬಗೆಗೇ ಆಗಲಿ ಶ್ರೀಕೃಷ್ಣನ ಬಗೆಗೇ ಆಗಲಿ ತನಗೆ ಏಕೆ ದ್ವೇಷ ಉಂಟಾಗಬೇಕು?
ತನ್ನ ತಂದೆಯು ಶ್ರೀಕೃಷ್ಣನನ್ನು ದ್ವೇಷಿಸಿದನೆಂಬ ಕಾರಣಕ್ಕಾಗಿ.
ತಾನು ಭಗವಂತನೆಂದೇ ಭಾವಿಸಿದ್ದ ಗೋನಂದನು ಶ್ರೀಕೃಷ್ಣನ ಕಾರಣದಿಂದ ಮೃತಿಹೊಂದಿದ್ದನೆಂಬ ಕಾರಣಕ್ಕಾಗಿ.
ಆದರೆ ಗೋನಂದನನ್ನು ಕೊಂದಿದ್ದವನು ಬಲರಾಮ. ಅದೂ ಅವನ ರಾಜ್ಯದ ಮೇಲೆ ಗೋನಂದನು ಆಕ್ರಮಣ ನಡೆಸಿದಾಗ.
ಇಷ್ಟಾಗಿ ಗೋನಂದ ಏಕಾದರೂ ಯುದ್ಧಕ್ಕೆ ಹೊರಡಬೇಕಾಗಿತ್ತು ?
ಜರಾಸಂಧನು ಕರೆ ಕಳುಹಿಸಿದ್ದನೆಂಬ ಕಾರಣಕ್ಕಾಗಿ.
ಅವನಿಗೂ ಕಂಸನಿಗೂ ಸ್ನೇಹವಿದ್ದ ಕಾರಣಕ್ಕಾಗಿ; ಕೃಷ್ಣನು ಕಂಸನನ್ನು ಕೊಂದಿದ್ದನೆಂಬ ಕಾರಣಕ್ಕಾಗಿ.
ಕೃಷ್ಣನು ಕಂಸನನ್ನು ಕೊಂದದ್ದು ಏಕೆ?
ತನ್ನ ತಂದೆ-ತಾಯಿಯರನ್ನು ಸೆರೆಯಲ್ಲಿ ಇರಿಸಿದ್ದನೆಂಬ ಕಾರಣಕ್ಕಾಗಿ; ಮತ್ತು ಕಂಸನು ಅತ್ಯಂತ ಕ್ರೂರಿಯಾಗಿ ಪ್ರಜೆಗಳನ್ನು ಬಗೆಬಗೆಂii ಹಿಂಸೆಗಳಿಗೆ ಒಳಪಡಿಸುತ್ತಿದ್ದ ಕಾರಣಕ್ಕಾಗಿ.
ಹೀಗಿದ್ದಾಗ ಕೃಷ್ಣನು ಮಾಡಿದ್ದುದು ನ್ಯಾಯ ತಾನೆ? ತಾನು ಏಕೆ ಕೃಷ್ಣನನ್ನು ದ್ವೇಷಿಸಬೇಕು?
ರತ್ನಗಿರಿ ಹೀಗೆ ಚಿಂತೆಗೊಳಗಾದ.
ಎಂದರೆ ನಾನು ಕೃಷ್ಣನಲ್ಲಿ ದ್ವೇಷ ಬೆಳೆಸಿಕೊಂಡು ಸನಾತನಧರ್ಮವನ್ನು ನಾಶಮಾಡಬೇಕು ಎಂದಕೊಂಡದ್ದು ನಿಷ್ಕಾರಣವೆ, ಮೂರ್ಖತನವೆ? ವ್ಯಕ್ತಿಗತ ಸ್ವಾರ್ಥಕ್ಕೆ ಪಾರಮಾರ್ಥಿಕ ಅರ್ಥವನ್ನು ಕಲ್ಪಿಸಿ ನನಗೆ ನಾನೇ ವಂಚನೆ ಮಾಡಿಕೊಂಡು ಸತ್ಯದಿಂದ ದೂರ ಹೋದೆನೆ?
ಸಂಗಡವೇ ಇನ್ನೊಂದು ಯೋಚನೆಯೂ ಹೊಳೆಯಿತು.
ತನ್ನ ತಾಯಿ-ತಂದೆಯರನ್ನು ಬಂಧನದಲ್ಲಿ ಇಟ್ಟಿದ್ದುದಕ್ಕಾಗಿ ಕೃಷ್ಣನು ಕಂಸನನ್ನು ವಧೆ ಮಾಡಿದ. ತನ್ನ ತಾಯಿ-ತಂದೆಯರ ಬಗೆಗೆ ಕೃಷ್ಣನಿಗೆ ಗೌರವವಿರುವುದು ಸಹಜ ತಾನೆ?
ಅದಕ್ಕೆ ಪ್ರತಿಕ್ರಿಯೆ ತೋರುವುದು ಕೃಷ್ಣನಿಗೆ ಧರ್ಮವಾಗಿತ್ತು. ಆದರೆ ನನಗೆ?
ನಾನು ಹೆತ್ತ ತಾಯಿಯನ್ನೇ ಅವಮಾನಿಸಿ ಹೆರಳನ್ನು ಹಿಡಿದೆಳೆದು ಕಲ್ಲುಗಳಿಂದ ಪ್ರಹಾರ ಮಾಡಿಸಿದೆನಲ್ಲ?
ಈಗ ರತ್ನಗಿರಿಗೆ ತನ್ನ ತಾಯಿ ಅಂತ್ಯಕಾಲದಲ್ಲಿ ಹೇಳಿದ್ದ ಮಾತು ನೆನಪಾಯಿತು. ತಾಯಿ ಯಶೋವತಿ ಶ್ರೀಕೃಷ್ಣನಲ್ಲಿ ಮೊರೆಯಿಟ್ಟಿದ್ದಳು. ಕೃಷ್ಣಾ! ಇವರೆಲ್ಲ ತಾವು ಹಿಡಿದ ತಪ್ಪು ಮಾರ್ಗವನ್ನು ತ್ಯಜಿಸಿ ಸರಿದಾರಿಗೆ ಮರಳುವಂತೆ ಅನುಗ್ರಹಿಸು! ಇವರ ಕಣ್ಣಿಗೆ ಕವಿದಿರುವ ಪೊರೆಯು ಕಳಚಿ ಇವರ ದ್ವೇಷಭಾವನೆ ಅಡಗಿ ಪ್ರೇಮವು ಜಾಗೃತಗೊಳ್ಳಲಿ!” ಹೀಗೆ ಕೊನೆಯುಸಿರಿನವರೆಗೂ ಆಕೆ ಭಗವಂತನನ್ನು ಪ್ರಾರ್ಥಿಸುತ್ತಲೆ ಇದ್ದಳು. ಆದರೂ ನಾವು ಅವಳ ಮೇಲೆ ಕಲ್ಲಿನ ಮಳೆ ಸುರಿಸುವುದನ್ನು ಬಿಡಲಿಲ್ಲ.
ರತ್ನಗಿರಿಯ ಹೃದಯ ತಳಮಳಿಸಿತು. ತನ್ನ ತಾಯಿ ಎಂದೂ ತನ್ನನ್ನು ದ್ವೇಷಿಸಲೇ ಇಲ್ಲ.
ರತ್ನಗಿರಿಗೆ ಅಳು ಬಂದಿತು.
ತನ್ನ ಕರ್ತವ್ಯ ಏನೆಂಬುದು ಹೊಳೆಯಿತು.
ಇದೇನಾಗಿದೆ? ಇಷ್ಟು ಕಾಲ ಕಳೆದಮೇಲೆ ನಾನು ನನ್ನ ತಾಯಿಯನ್ನು ನೆನೆದು ಶೋಕಪಡುತ್ತಿದ್ದೇನಲ್ಲ? – ಅದೂ ನಾನು ಬಯಸಿದ್ದ ಗುರಿ ಸಾಧ್ಯವಾಗುವ ಹಂತದಲ್ಲಿ ಇರುವಾಗ? ಇದೇ ‘ಕೃಷ್ಣಮಾಯೆ’ ಇರಬಹುದೆ?
ಹೀಗೆ ಸಾಲುಸಾಲು ಯೋಚನೆಗಳ ನಡುವೆಯೇ ಯುದ್ಧರಂಗವನ್ನು ಪ್ರವೇಶಿಸಿದಾಗ ರತ್ನಗಿರಿಗೆ ತನ್ನ ತಂದೆ ದಾಮೋದರನು ಕೃಷ್ಣನ ಮೇಲೆ ಏರಿ ಹೋಗುತ್ತಿದ್ದುದು ಕಾಣಿಸಿತು.
ಕಣ್ಣುಮುಚ್ಚಿ ತೆರೆಯುವುದರೊಳಗೆ ದಾಮೋದರನ ತಲೆ ಶರೀರದಿಂದ ಬೇರೆಯಾಗಿತ್ತು.
ಶ್ರೀಕೃಷ್ಣನು ಮುಗುಳ್ನಗುತ್ತ ನಿಂತಿದ್ದ.
ಸೈನಿಕ ಸಮೂಹದಲ್ಲಿ ಅಲ್ಲೋಲಕಲ್ಲೋಲ. ಎಲ್ಲರೂ ಸಿಕ್ಕಸಿಕ್ಕ ಕಡೆಗೆ ಓಡತೊಡಗಿದ್ದರು.
ಶ್ರೀಕೃಷ್ಣನ ದರ್ಶನವಾದೊಡನೆ ರತ್ನಗಿರಿಯ ಶರೀರದಲ್ಲಿ ಅಡಿಯಿಂದ ಮುಡಿಯವರೆಗೆ ವಿಚಿತ್ರ ಬದಲಾವಣೆ ಆಗತೊಡಗಿತ್ತು. ರಕ್ತಸಂಚಾರ ತೀವ್ರಗೊಂಡಿತ್ತು. ಎಲ್ಲ ಇಂದ್ರಿಯಗಳೂ ಹಿಂದಿಗಿಂತ ಚುರುಕುಗೊಂಡಿದ್ದವು. ತನ್ನ ಕಣ್ಣಮುಂದಿದ್ದ ಯಾವುದೋ ಪರದೆ ಸರಿದಂತೆ ಅನಿಸಿತು.
ಕೃಷ್ಣನಿಗೆ ಅವನ ಮಂತ್ರಿ ಸುಬುದ್ಧಿ ಏನೋ ಹೇಳುತ್ತಿದ್ದುದು ಕೇಳಿಸಿತು. ರತ್ನಗಿರಿ ಸಮೀಪಿಸಿದ.
‘ನಾವು ಹೇಳುತ್ತಿದ್ದುದು ಇವನನ್ನು ಕುರಿತೇ…. ಈಗ ಕಶ್ಮೀರಕ್ಕೆ ಸರಿಯಾದ ದೊರೆ ಇಲ್ಲ. ಮ್ಲೇಚ್ಛಮತಾನುಯಾಯಿಗಳು ಗಂದರಗೋಳ ಸೃಷ್ಟಿಸುತ್ತಿದ್ದಾರೆ. ನಾವು ಕಶ್ಮೀರವನ್ನು ವಶಪಡಿಸಿಕೊಳ್ಳಲು ಇದೇ ಸರಿಯಾದ ಸಮಯ.’
ಇಷ್ಟು ಹೊತ್ತಿಗೆ ರತ್ನಗಿರಿ ಶ್ರೀಕೃಷ್ಣನ ಹತ್ತಿರಕ್ಕೇ ಬಂದಿದ್ದ.
ಮಂತ್ರಿ ಸುಬುದ್ಧಿಯ ಮಾತನ್ನು ಕೇಳಿ ಶ್ರೀಕೃಷ್ಣನು ಕಿರುನಗೆ ನಕ್ಕ. ದಾಮೋದರನನ್ನು ಸಂಹಾರ ಮಾಡಿದ್ದುದಾಗಲಿ ಬೇರಾವ ಉದ್ರೇಕವಾಗಲಿ ಅಲ್ಲಿ ಕಾಣಲಿಲ್ಲ. ಈ ವ್ಯಕ್ತಿಗೆ ದ್ವೇಷ, ಉದ್ವೇಗ, ಪ್ರೇಮ ಮೊದಲಾದ ಭಾವನೆಗಳೇ ಇಲ್ಲವೆ?
ಮುಗುಳ್ನಗುತ್ತಲೇ ಶ್ರೀಕೃಷ್ಣ ಹೇಳಿದ:
ಕಶ್ಮೀರಾಃ ಪಾರ್ವತೀ ತತ್ರ
ರಾಜಾ ಜ್ಞೇಯೋ ಹರಾಂಶಜಃ |
ನಾವಜ್ಞೇಯಸ್ಸ ದುಷ್ಟೋsಪಿ
ವಿದುಷಾ ಭೂತಿಮಿಚ್ಚತಾ ||
ಕಶ್ಮೀರ ಭೂಭಾಗವು ಪಾರ್ವತಿ ಮಾತೆ. ಇಲ್ಲಿಯ ರಾಜನು ಶಿವಾಂಶಸಂಭೂತ. ಅವನು ಒಂದು ವೇಳೆ ದುಷ್ಟನೇ ಆಗಿದ್ದರೂ ಕಶ್ಮೀರಾಧಿಪನನ್ನು ಅವಮಾನಿಸುವುದು ಶ್ರೇಯಸ್ಕರವಾಗದು.
ರತ್ನಗಿರಿ ವಿಸ್ಮಿತನಾದ.
ಧರ್ಮವೆಂದರೆ ಇದಲ್ಲವೆ?
ತಾನು ಮಾಡಹೊರಟಿದ್ದುದು ಧರ್ಮವೆ? ಅಕಾರಣವಾಗಿ ದ್ವೇಷ ಬೆಳೆಸಿಕೊಂಡ ತುಚ್ಛಮಾರ್ಗ ತನ್ನದು.
ದ್ವೇಷಭಾವನೆಯಿಂದ ಮುಕ್ತವಾಗಿ ಎಲ್ಲರಲ್ಲಿಯೂ ಭಗವಂತನನ್ನು ಕಂಡು ಪ್ರೀತಿಸುವ ಉತ್ತಮಧರ್ಮ ಇದು. ಶ್ರೀಕೃಷ್ಣ ಇದರ ಪ್ರತೀಕ.
ಇಂತಹ ಧರ್ಮವನ್ನು ನಾನು ನಾಶಮಾಡ ಹೊರಟೆನಲ್ಲ!
ರತ್ನಗಿರಿಯ ಮನಃಪಟಲದ ಮೇಲೆ ಅವನ ಹಿಂದಿನ ದುಷ್ಕೃತ್ಯಗಳೆಲ್ಲ ಹಾದುಹೋದವು. ತನ್ನ ಬಗೆಗೇ ಅವನಿಗೆ ಜುಗುಪ್ಸೆಯುಂಟಾಯಿತು.
ತಾನಿನ್ನು ಜೀವಿಸಬಾರದು.
ಹೀಗೆನಿಸಿದೊಡನೆ ಕೈಯಲ್ಲಿ ಕತ್ತಿಯನ್ನು ಹಿರಿದು ಕೃಷ್ಣನತ್ತ ಸಾಗಿದ. ಆದರೆ ಅಷ್ಟರಲ್ಲಿ ಹೆಜ್ಜೆತಪ್ಪಿ ಮುಗ್ಗರಿಸಿದ. ಕತ್ತಿ ಎತ್ತಲೋ ಹಾರಿಹೋಗಿತ್ತು. ಅವನು ಕೃಷ್ಣನ ಪಾದದ ಮೇಲೆ ಬಿದ್ದಿದ್ದ.
ಶ್ರೀಕೃಷ್ಣನ ಪಾದದ ಸ್ಪರ್ಶವಾದೊಡನೆ ರತ್ನಗಿರಿಯ ಶರೀರ ಕಂಪಿಸಿತು. ಅವನ ದುಷ್ಕೃತ್ಯಗಳೆಲ್ಲ ನಶಿಸಿದವು. ಎಲ್ಲ ಪಾಪಭಾವನೆಗಳೂ ಮ್ಲೇಚ್ಛವಾಸನೆಗಳೂ ಅಸ್ತಂಗತವಾದವು. ಅವನಿಗೆ ಜ್ಞಾನೋದಯವಾಯಿತು. ತಾನು ಮಾಡಿದ್ದ ಪಾಪಗಳಿಗೆ ಪರಿಹಾರವು ಮರಣವಲ್ಲ. ತಾನು ಬೆಳೆಸಿದ್ದ ವಿಷವೃಕ್ಷವನ್ನು ತಾನೇ ಸಮೂಲವಾಗಿ ಛೇದನ ಮಾಡಬೇಕು. ಯಾವ ಶಕ್ತಿಯುಕ್ತಿಗಳಿಂದ ಮ್ಲೇಚ್ಛಮತವನ್ನು ಬೆಳೆಸಿದೆನೋ ಅವುಗಳದ್ದೇ ಆಧಾರದಿಂದ ಆ ಮ್ಲೇಚ್ಛಮತವನ್ನು ಬೇರುಸಹಿತ ನಿರ್ನಾಮ ಮಾಡಿ ಸನಾತನ ಧರ್ಮವನ್ನು ದೃಢವಾಗಿ ನಿಲ್ಲಿಸಬೇಕು. ತಾನು ಮಾಡಿದ್ದ ದುಷ್ಕೃತ್ಯಗಳನ್ನು ಈಗಿನ ಪ್ರೇಮಪೂರ್ಣ ಸತ್ಕಾರ್ಯಗಳಾಗಿ ಮಾರ್ಪಡಿಸಬೇಕು.
‘ಅವತು ಮಾಮ್ ಅವತು ವಕ್ತಾರಮ್| ಓಂ ಶಾಂತಿಃ ಶಾಂತಿಃ ಶಾಂತಿಃ|’ – ಎನ್ನುತ್ತ ಸ್ವಸ್ಥಾನದತ್ತ ಹೆಜ್ಜೆಹಾಕಿದ, ರತ್ನಗಿರಿ. (ಓ ದೇವರೆ! ನನ್ನನ್ನು ರಕ್ಷಿಸು. ಬೋಧಕ ಆಚಾರ್ಯನನ್ನೂ ಸನಾತನಧರ್ಮವನ್ನು ರಕ್ಷಿಸು. ತ್ರಿವಿಧ ತಾಪಗಳನ್ನು ಶಮನ ಮಾಡು).
ಹಾಗೆ ಚಲಿಸತೊಡಗಿದ ರತ್ನಗಿರಿಯ ಕಡೆಗೆ ಎಲ್ಲರೂ ಆಶ್ಚರ್ಯದಿಂದ ನೋಡತೊಡಗಿದರು.
ರತ್ನಗಿರಿಯತ್ತ ಶ್ರೀಕೃಷ್ಣನು ವಾತ್ಸಲ್ಯದ ನೋಟಬೀರಿದ.?