ಪದವೇ ಆಗಲಿ, ಅಣುವೇ ಆಗಲಿ, ಅದನ್ನು ಒಡೆದಾಗ ಕಂಡುಬರುವ ವಿಸ್ತಾರ ಅನನ್ಯ. ಸೃಜನ ಮತ್ತು ಶೀಲಗಳನ್ನು ಪ್ರತ್ಯೇಕವಾಗಿಯೇ ಪರಿಶೀಲಿಸೋಣ. ‘ಶೀಲ’ ಪದವನ್ನೊಳಗೊಂಡ ಹಿಂದಿ ಹಾಡು ನನಗೆ ಬಹಳ ಗೊಂದಲವುಂಟಾಗಿಸಿದೆ. ‘ಮೈ ನೇಮ್ ಈಸ್ ಶೀಲಾ; ಶೀಲಾ ಕೀ ಜವಾನಿ’ ಎಂದು ಅವಳು ಹಾಡಿದಾಗ ಶೀಲಾಳ ಜವಾನಿಯ ಹೆಸರೂ ಶೀಲಾ ಎಂದೇನು? ಜವಾನಿ, ಮಾಲಿಕಳು ಇಬ್ಬರದೂ ಒಂದೇ ಹೆಸರೆ? ಅಥವಾ ಶೀಲಾ key ಜವಾನಿ ಎಂದರೆ ಯಾವುದಾದರೂ ಬೀಗದ ಕೈಗೆ ಅಡಿಯಾಳಾಗಿ ಶೀಲಾ ಇದ್ದಾಳೆಯೆ… ಎಂದೆಲ್ಲ ಗೊಂದಲಗಳೆದ್ದವು. ಹಿಂದಿಯೊಂದೇ ಭಾಷೆಯನ್ನು ಹಾಡಿನಲ್ಲಿ ಬಳಸಿದ್ದಿದ್ದರೆ ಇಂತಹ ಗೊಂದಲ ಆಗುತ್ತಿರಲಿಲ್ಲವೇನೋ.
ಏನ್ಬರಿಯೋದ್ಸಾರ್?’ ಎಂದೆ.
ಸೃಜನಶೀಲ ಅನ್ನೋ ಪದದಿಂದ ಆರಂಭಿಸಿ’ ನುಡಿದರು ಸಂಪಾದಕರು. ಯಾವುದೇ ಪದದಲ್ಲಿ she ಇದ್ದರೆ ಅಲ್ಲೊಂದು ಕೌತುಕ ಇದ್ದೇ ಇರುವುದರಿಂದ ಆ ಪದದ ಒಳಹೊರಗನ್ನು ನೋಡುತ್ತ ಮುಂದೆ ಸಾಗುವ ಆ ಪದವನ್ನು ಮೈಮೇಲೆ ಎಳೆದುಕೊಳ್ಳಲು ಸಮ್ಮತಿಸಿದೆ.
ಕನ್ನಡ ಭಾಷೆಯಲ್ಲಿ ಮೂರು ವಸ್ತುಗಳು ಹೇರಳವಾಗಿ ಕಂಡುಬರುತ್ತವೆ – ನಲ್ಲಿ, ಗಳು ಮತ್ತು ಕರು. ಮನೆಯ ಮಟ್ಟದಿಂದ ಆರಂಭಿಸಿದರೆ ಹಾಲ್ ನಲ್ಲಿ, ರೂಮ್ ನಲ್ಲಿ, ಕಿಚನ್ ನಲ್ಲಿ; ಹೊರಹೊರಡಬೇಕೆಂದರೆ ಸೈಕಲ್ ನಲ್ಲಿ, ರೈಲಿನಲ್ಲಿ, ಪ್ಲೇನಲ್ಲಿ ಮುಂತಾದ ನಲ್ಲಿಗಳು; ಸೇರುವ ಸ್ಥಳಗಳಲ್ಲೂ ಆಫೀಸ್ನಲ್ಲಿ, ಕ್ವಾರ್ಟರ್ಸ್ನಲ್ಲಿ, ಬಾರ್ನಲ್ಲಿ ಮುಂತಾದ ನಲ್ಲಿಗಳು ಭಾಷೆಯ ಗಲ್ಲಿಗಲ್ಲಿಯಲ್ಲಿಯೂ ಕಂಡುಬರುತ್ತವೆ. ಕರುನಾಡಿನ ನಲ್ಲಿಗಳಲ್ಲಿ ನೀರಿಲ್ಲದಿದ್ದರೇನು, ತಮಿಳ್ನಾಡಿ-ನಲ್ಲಿ ನೀರು ಬಂದೇ ಬರುತ್ತದೆ. ಇಲ್ಲಿ? ಕಣ್ಣಿ-ನಲ್ಲಿ!
ಗಳುವಂತೂ ನಲ್ಲಿಗಿಂತಲೂ ಒಂದು ಕೈ ಹೆಚ್ಚು. ಬಸ್ಸುಗಳು, ರೈಲುಗಳು, ಮಂತ್ರಿಗಳು, ದರೋಡೆಗಳು, ಚುನಾವಣೆಗಳು, ಬಿಟ್ಟಿದೇವತೆಗಳು, ಪುಸಲಾವಣೆಗಳು ಎನ್ನುತ್ತ ಸಾಗಿ ಮತದಾರರನ್ನು ಗಳುವಿನ ಮೇಲೆ ಮಲಗಿಸುವ ತನಕ ಕಟ್ಟುಕಟ್ಟು ಗಳುಗಳು ಭಾಷೆಯಲ್ಲಿ ಈಡಾಡಿವೆ. ಗಳುಗಳಲ್ಲೇ ಅತ್ಯಂತ ಪ್ರಮಾದಕರ ಗಳುವೊಂದಿದೆ; ಅದೇ ಹೊ-ಗಳು!
ಕರುವಿನ ಬಾಬ್ತಂತೂ ಸರೇಸರೆ. ಸಾಧಕರು, ಯುವಕರು, ಮುದುಕರು, ಬಾಲಕರು… ಹೀಗೆ ಪಟ್ಟಿ ಬೆಳೆಸುತ್ತ ಪುಟವಷ್ಟೇ ಅಲ್ಲ, ಪುಸ್ತಕವನ್ನೇ ತುಂಬಬಹುದು. ಹಸುವೇ ಇಲ್ಲದೆ ಕರುಗಳನ್ನು ಕಾಣುವುದು ನಮ್ಮ ಭಾಷೆಯಲ್ಲಿ ಮಾತ್ರವೆನಿಸುತ್ತದೆ. ಇವೆಲ್ಲ ಕರುಗಳ ನಡುವೆ ಸ್ನೇಹಶೀಲರಾಗಿ, ಭಾಷಾಪ್ರೇಮಿಯಾಗಿ ಕಂಡುಬರುವ ಕರುವೇ ನಮ್ಮ ಸಂಪಾದ-ಕರು.
ಸಂಪಾದಕರು ಎನ್ನುವ ಪದವನ್ನು sump ಆದ ಕರು ಎಂದೂ ಕಾಣಬಹುದು. sump ಎನ್ನುವುದು ನೆಲಮಟ್ಟದ ತೊಟ್ಟಿ. ಅದರಲ್ಲಿ ತುಂಬಿದ ನೀರು ಕಟ್ಟಡದಲ್ಲಿರುವ ಇಡೀ ಜನತೆಯ ಬಾಯಾರಿಕೆಯನ್ನು ಹೋಗಲಾಡಿಸುತ್ತದೆ. ಅಂತೆಯೇ ಓದುಗರ ತೃಷೆಯನ್ನು ಹೋಗಲಾಡಿಸಲು ಲೇಖಕರೆಂಬ ನಲ್ಲಿಗಳಿಂದ ತಮ್ಮ ಸಾಹಿತ್ಯ ಜಲಾಶಯವನ್ನು ತುಂಬಿಕೊಳ್ಳುವವರೇ sump ಆದ ಕರು! ಕರು ಎಂದರೆ ಎತ್ತರದ ಜಾಗ; ಅಲ್ಲಿಂದ sump ಮಟ್ಟಕ್ಕೆ ಇಳಿಯುವುದನ್ನೇ ಬಸವಣ್ಣನವರು ‘ಎನಗಿಂತ ಕಿರಿಯರಿಲ್ಲ’ ಎಂದು ನುಡಿದದ್ದು.
ಸಂಪಾದ-ಕರು ಹೇಳಿದ ಮೇಲೆ ಈ ಲೇಖ-ಕರು ತಲೆಬಾಗಲೇಬೇಕಲ್ಲ! ‘ಸೃಜನಶೀಲ’ ಎಂಬ ಪದವನ್ನು ಹಿಡಿದು ಒಂದಿಷ್ಟು ಅಲುಗಾಡಿಸಿದೆ. ಅಲುಗಾಟದ ರಭಸಕ್ಕೆ ಸೃಜನ ಮತ್ತು ಶೀಲ ಎಂಬ ಪದಗಳು ಬೇರೆಯಾದವು. ಆವುದನೋ ಅದಾವುದಕೋ ತಳಕುಹಾಕುವ ಮನಸ್ಸು ಛಿಟಿವಿಯಲ್ಲಿನ ‘ಇಸೇಸ ಆಸ್ಯ’ ಕಾರ್ಯಕ್ರಮಕ್ಕೆ ಈ ವಿಚ್ಛೇದಿತ ಪದಗಳನ್ನು ತಳಕುಹಾಕಿತು. ಡೆಬೊನೈರ್, ಪೆಂಟ್ಹೌಸ್ಗಳಲ್ಲಿ ಕಂಡುಬರಬಹುದಾದ ಸಂಭಾಷಣೆಗಳನ್ನು ಎಗ್ಗಿಲ್ಲದೆ ನುಡಿದು ಹುಡಿ ಹಾರಿಸುವ ಅಲ್ಲಿನ ಪಾತ್ರಧಾರಿಗಳ ಬಗ್ಗೆ ಬಾಯಲ್ಲಿ ಕಿಡಿ ಕಾರುತ್ತ, ಕಣ್ಣಲ್ಲಿ ಅನುಸರಿಸುತ್ತ, ಮನೆಯ ಹಿರಿತಲೆಗಳು ಸೋಫಾಸೀನವಾಗಿದ್ದವು.
ಶೀಲವೆಂದರದೇನು ಯಮನಿಯಮ ಪಾಲನೆಯೆ
ಚೀಲ ಬರಿದಾಗಿಹುದು ಸರಿಸು ಶೀಲವನತ್ತ
ಪೋಲಿತನ ಇಲ್ಲದಿರೆ ಜಗಸೃಷ್ಟಿ ಎಂತಹುದು
ಜಾಲಿ ಡೈಲಾಗುಗಳ ಹೊಡೆ ಮಂಕುದಿಣ್ಣೆ
ಎಂಬುದು ಈ ಧಾರಾವಾಹಿಯ ಪ್ರಧಾನ ಉದ್ದೇಶವಿದ್ದಂತಿತ್ತು. “ಚಾನಲ್ ಬದಲಿಸಿ” ಎಂದೆ. ಆ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಕ್ಕೆ ಹೋಲಿಸಿದರೆ “ಇಸೇಸ ಆಸ್ಯ”ವು ದೇವದಾಸಿಯ ಮುಂದಿನ ಪತಿವ್ರತೆ!
ಅಸಲಿ ಪದಕ್ಕೆ ಮರಳೋಣ. ಸೃಜನಶೀಲ ಎಂದರೆ ಸಂಶೋಧನಾತ್ಮಕ ಎಂಬ ಅರ್ಥವಿದೆ. ಸಂಶೋಧನ ಎನ್ನುವುದು ‘ಅರ್ಥವತ್ತಾದ ಪದ’ ಎನ್ನುವುದಕ್ಕೆ ಅದರಲ್ಲಿರುವ ‘sum’ ಮತ್ತು ‘ಧನ’ಗಳೇ ಸಾಕ್ಷಿ. ಹಣದ ನಿರ್ದಿಷ್ಟ ಮೊತ್ತವನ್ನು show ಮಾಡದಿದ್ದರೆ ಸಂಶೋಧನೆ ನಡೆಯುವುದು ಅಸಂಭವ.
ಅಸಂಭವ ಎಂಬ ಪದವನ್ನು ಈಕ್ಷಿಸಿದಿರೆ? ಅಲ್ಲಿಯೂ ಅ sum ಮತ್ತು ಭವ ಗಳು (ಇಲ್ಲಿಯೂ ಗಳು ಬಂದಿತು ನೋಡಿ! sum ಇಲ್ಲದ ರಿಸರ್ಚು ಗಳುವಿನ ಮೇಲಿನ ಪ್ರಯಾಣಕ್ಕೆ ಸಜ್ಜಾಗುವುದು ವಿದಿತವೇ!) ಕಂಡುಬರುತ್ತವೆ. ಸಂಶೋಧನೆಯ ಪರಾಕಾಷ್ಠೆಯಲ್ಲಿ ‘ಅ sum ಭವ’ ಅರ್ಥಾತ್ ನಿರ್ಗತಿಕನಾಗು ಎಂಬ ಪರಿಸ್ಥಿತಿ ಉಂಟಾಗಬಲ್ಲದೆಂಬುದಕ್ಕೆ ಉಗಿಯಿಂದ ಹಡಗನ್ನು ಚಲಾಯಿಸುವುದನ್ನು ಕಂಡುಹಿಡಿದ ರಾಬರ್ಟ್ ಫುಲ್ಟನ್ನೇ ಸಾಕ್ಷಿ. ತನ್ನಲ್ಲಿದ್ದ ಕಡೆಯ ಕವಡೆಕಾಸನ್ನೂ ಸಂಶೋಧನೆಗೆಂದು ವ್ಯಯಿಸಿ, ಸ್ಟೀಮ್ ಬೋಟನ್ನು ಕಂಡುಹಿಡಿದ ಅವನ ಬಳಿ ಸಾರಿದ ಅಂದಿನ ವರ್ತಕನೊಬ್ಬ “ಇಲ್ಲಿಂದ ಮುಂದಿನ ಊರಿಗೆ ಸ್ಟೀಮ್ ಬೋಟಲ್ಲಿ ಹೋಗಲು ಚಾರ್ಜ್ ಎಷ್ಟು?’’ ಎಂದು ಕೇಳಿದ. ಫುಲ್ಟನ್ “ಆರು ಡಾಲರ್” ಎಂದ. ವರ್ತಕನು ಹಣ ನೀಡಿದಾಗ ತನ್ನ ಕೈಸೇರಿದ ಹಣದತ್ತಲೇ ದೃಷ್ಟಿ ನೆಟ್ಟಿದ್ದ ಫುಲ್ಟನ್ನನ್ನು ವರ್ತಕನು “ಸಾಲದಾಯಿತೆ? ಇನ್ನಷ್ಟು ಕೊಡಬೇಕೆ?’’ ಎಂದು ಕೇಳಿದಾಗ ಫುಲ್ಟನ್ “ನನ್ನ ಸಂಶೋಧನೆಯಲ್ಲಿ ನನಗೆ ದೊರೆತ ಮೊದಲ ಸಂಪಾದನೆ ಇದು. ಈ ಸಂತೋಷವನ್ನು ನಿನಗೆ ಡ್ರಿಂಕ್ಸ್ ಕೊಡಿಸಿ ಹಂಚಿಕೊಳ್ಳೋಣವೆಂದರೆ ನನ್ನಲ್ಲಿ ಹಣವಿಲ್ಲವಲ್ಲ ಎಂದು ಪರಿತಪಿಸುತ್ತಿದ್ದೆ” ಎಂದ. ಇಂತಹ ‘ಅ sum ಭವ’ ಸಂದರ್ಭಗಳು ಸಂಶೋಧನಾ ಕ್ಷೇತ್ರಗಳಲ್ಲಿ ಹಾಸುಹೊಕ್ಕಾಗಿವೆ.
ಪದವೇ ಆಗಲಿ, ಅಣುವೇ ಆಗಲಿ, ಅದನ್ನು ಒಡೆದಾಗ ಕಂಡುಬರುವ ವಿಸ್ತಾರ ಅನನ್ಯ. ಸೃಜನ ಮತ್ತು ಶೀಲಗಳನ್ನು ಪ್ರತ್ಯೇಕವಾಗಿಯೇ ಪರಿಶೀಲಿಸೋಣ. ‘ಶೀಲ’ ಪದವನ್ನೊಳಗೊಂಡ ಹಿಂದಿ ಹಾಡು ನನಗೆ ಬಹಳ ಗೊಂದಲವುಂಟಾಗಿಸಿದೆ. ‘ಮೈ ನೇಮ್ ಈಸ್ ಶೀಲಾ; ಶೀಲಾ ಕೀ ಜವಾನಿ’ ಎಂದು ಅವಳು ಹಾಡಿದಾಗ ಶೀಲಾಳ ಜವಾನಿಯ ಹೆಸರೂ ಶೀಲಾ ಎಂದೇನು? ಜವಾನಿ, ಮಾಲಿಕಳು ಇಬ್ಬರದೂ ಒಂದೇ ಹೆಸರೆ? ಅಥವಾ ಶೀಲಾ key ಜವಾನಿ ಎಂದರೆ ಯಾವುದಾದರೂ ಬೀಗದ ಕೈಗೆ ಅಡಿಯಾಳಾಗಿ ಶೀಲಾ ಇದ್ದಾಳೆಯೆ… ಎಂದೆಲ್ಲ ಗೊಂದಲಗಳೆದ್ದವು. ಹಿಂದಿಯೊಂದೇ ಭಾಷೆಯನ್ನು ಹಾಡಿನಲ್ಲಿ ಬಳಸಿದ್ದಿದ್ದರೆ ಇಂತಹ ಗೊಂದಲ ಆಗುತ್ತಿರಲಿಲ್ಲವೇನೋ.
‘ಶೀಲ’ ಪದವು ಕನ್ನಡದಲ್ಲಿ ಹ್ರಸ್ವಾಂತವಾದರೂ ಸಂಸ್ಕöÈತದಲ್ಲಿ ದೀರ್ಘಾಂತವಾಗಬೇಕೆಂದು ಪಾಣಿನಿ ನುಡಿದಿದ್ದಾನಂತೆ. ಆಕಾರಾಂತೋ ಸ್ತ್ರೀಲಿಂಗಃ (ಆ ಕಾರಿನ ತುದಿಯಲ್ಲಿ ಹೆಣ್ಣೊಬ್ಬಳು ನಿಂತಿದ್ದಾಳೆಂದು ಪೋಲಂಕಿ ರಾಮಮೂರ್ತಿಯಂತಹವರು ಅರ್ಥೈಸಿಯಾರು) ಆದ್ದರಿಂದ ಅದು ಶೀಲಾ ಎಂದಾಗುತ್ತದೆ. ‘She Law’ ಎಂದರೆ ‘Law pertaining to women’ ಎಂದಾಯಿತು. ಇದು ಯಹೂದಿಗಳಲ್ಲಿ ರೂಢಿಯಲ್ಲಿದ್ದ matriarchyಯನ್ನು ನೆನಪಿಗೆ ತರುತ್ತದೆ. ಯಹೂದಿಗಳನ್ನು ಜ್ಯೂಸ್ ಎಂದು ಕರೆಯುತ್ತಾರೆ. ಇಂತಹ ಕಾನೂನುಗಳು ಸ್ತ್ರೀಯರಿಗೆ ರಸಭರಿತ ಜ್ಯೂಸುಗಳೇ ಸೈ!
ಶೀಲ ಎನ್ನುವುದನ್ನು ಭಾರತೀಯ ಭಾಷೆಗಳಲ್ಲಲ್ಲದೆ ಆಂಗ್ಲದಲ್ಲಿ ಬರೆದು, ಸಂಸ್ಕöÈತದವರು ಓದಿದರೆ ಅದು ‘ಶಿಲಾ’ ಆಗಿ ಪರಿವರ್ತನೆಯಾಗಿಬಿಡುತ್ತದೆ. ಶಿಲಾ ಎಂದರೆ ಕಲ್ಲು. ಕಲ್ಲು ಎಂದರೆ ಸ್ಟೋನ್, ಸ್ಟೋನ್ ಎಂದರೆ ಇಪ್ಪತ್ತು ಕೆಜಿ. ಇಪ್ಪತ್ತು ಕಿಲೋ ಎಂದರೆ ಎಂಟು ಧಡಿಯ. ಎಂಟು ಧಡಿಯರೆಂದರೆ ಒಂದು ರೌಡಿಪಡೆ. ಒಂದು ರೌಡಿಪಡೆ ಎಂದರೆ ಭಾವರಹಿತರ ಗುಂಪು; ಭಾವರಹಿತತೆಯೆಂದರೆ ಕಲ್ಲೆದೆ. ಕಲ್ಲೆಂದರೆ ಶಿಲೆ ಉರುಫ್ ಶಿಲಾ. ಆಂಗ್ಲದಲ್ಲಿ ಶಿಲಾ ಎಂದದ್ದನ್ನೇ ಕನ್ನಡದಲ್ಲಿ ಓದಿದರೆ ಶೀಲ. ‘ಮೆಜೆಸ್ಟಿಕ್ ಟು ಮೆಜೆಸ್ಟಿಕ್’ ಎಂಬ ರೌಂಡ್ ಟ್ರಿಪ್ನಂತಾಯಿತಲ್ಲವೆ?
ಮುನಿ ಗೌತಮರ ಪತ್ನಿ ಅಹಲ್ಯೆಯನ್ನು ಕುರಿತು ಶಿಲಾ-ಶೀಲಗಳ ಜಿಜ್ಞಾಸೆಯೊಂದಿದೆಯಂತೆ. ‘ಹೆಂಡತಿಯನ್ನು ಕಲ್ಲಾಗು ಎಂದು ಶಪಿಸುವುದು ಲೋಕಹಿತವನ್ನು ಬಯಸುವ ಮುನಿಗಳಿಗೆ ತರವಲ್ಲ. ಹಾಗಾಗಿ ಮುನಿಗಳು ‘ತ್ವಂ ಶಿಲಾ ಇತಿ ಭವ’ ಎಂದು ಹೇಳಿರಲಾರರು, ‘ತ್ವಂ ಪುನಃ ಶೀಲವತೀ ಭವ’ ಎಂದು ಹೇಳಿದ್ದಾರು’ ಎಂದು ಮುನಿಜನಗುಣಾರಾಧನಾ ಸಂಸ್ಥೆಯ ಅಧ್ಯಕ್ಷರಾದ ಕೀರ್ಲುಗುಂಟೆ ಕಿರಿಕ್ ಕೀಟಪ್ಪಭಟ್ಟರು ನುಡಿದಿದ್ದಾರಂತೆ. ಅದರ ಸತ್ಯಶೀಲತೆಯ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆಗಳು ನಡೆಯುತ್ತವಂತೆ.
ಶೀಲವನ್ನು ಅತ್ತ ಬಿಟ್ಟು ಸೃಜನ ಪದದತ್ತ ಬರೋಣ. ಸೃಜನ ಎಂದರೆ ನಿರ್ಮಾಣ, ರಚನಾಕಾರ್ಯ, ನವಚಿಂತನ ಮುಂತಾದ ಅರ್ಥಗಳಿವೆ. ಆದರೆ ಇವೆಲ್ಲವೂ ಸರಿಯಲ್ಲವೆಂಬುದು ಚರಣಿನಿಯ ವಾದ. ಚರಣಿನಿ ಗೊತ್ತಲ್ಲವೇ ನಿಮಗೆ? ಪಾಣಿನಿಯ ಎಲ್ಲ ಸೂತ್ರಗಳಿಗೆ ವಿರುದ್ಧವಾದುದನ್ನು ನುಡಿಯುವವನೇ ಚರಣಿನಿ. ‘ಸಂಸ್ಕೃತ ನಿಘಂಟು ಸೃಜ ಎಂದರೆ ಜನ್ಮ ಕೊಡು; ತಯಾರಿಸು; ಮಾತನಾಡು; ದೃಷ್ಟಿ ಬೀರು; ತ್ಯಜಿಸು; ಬೀಳಿಸು ಎಂಬ ಅರ್ಥಗಳನ್ನು ಹೊಂದಿದೆ. ‘ನ’ ಎಂದರೆ ಇವೆಲ್ಲವನ್ನೂ ಮಾಡಕೂಡದೆಂದು ಅರ್ಥ. ಹಾಗಾಗಿ ಸೃಜ-ನ ಎಂದರೆ ಕ್ರಮವಾಗಿ ಅಬಾರ್ಷನ್ ಮಾಡಿಸು; ಪ್ರೊಡಕ್ಷನ್ ನಿಲ್ಲಿಸು (ಅಂತಹ ಸ್ಟ್ರೈಕ್ ಮಾಡಿಸು); ಮೌನಿಯಾಗು, ದೃಷ್ಟಿ ಬ್ರಾಂದಿ ಅರ್ಥಾತ್ ಕುಡಿನೋಟ (ಕ್ಷಮಿಸಿ. ಚರಣಿನಿಯ ವ್ಯಾಕರೀಕರಣದಲ್ಲಿ ಕುಡಿದವನ ನೋಟವೇ ಕುಡಿನೋಟವಂತೆ. ಅಸಲಿ ಕುಡಿನೋಟವೂ ನಶೆ ತುಂಬಿರುವುದೇ ಎಂದು ಅವನ ವಾದ. ‘ದೃಷ್ಟಿ ಬೀರು’ವಿಗೆ ‘ದೃಷ್ಟಿ ಬ್ರಾಂದಿ’ ಎನ್ನುವುದು ವಿರುದ್ಧಪದ ಹೇಗೆಂದರೆ ಬೀರು ಹಾಟ್ ಡ್ರಿಂಕ್ ಅಲ್ಲ; ಬ್ರಾಂದಿ ಹಾಟ್. ಆದ್ದರಿಂದ ಬ್ರಾಂದಿಗೆ ಬೀರು ವಿರುದ್ಧ ಪದ ಎಂಬುದು ಅವನ ಭ್ರಾಂತಿ), ಆಕ್ರಮಿಸು ಮತ್ತು ಎಬ್ಬಿಸಿ ನಿಲ್ಲಿಸು ಎಂಬ ಅರ್ಥಗಳನ್ನು ಹೊಂದಿರಬೇಕೆಂಬುದು ಅವನ ತೀವ್ರ ವಾದ. ಚರಣಿನಿಯ ಶತ್ರುಗಳು ಅವನನ್ನು ‘ಸೃಜ- ನಶೀಲ’ ಎನ್ನುವುದೇ ಅವನಲ್ಲಿ ಸೃಜನಶೀಲತೆಗೆ ಇರಬಾರದಾದಂತಹ ಶೀಲವಿರುವುದೆಂದಂತೆ.
ಅಸಲಿಗೆ ಸೃಜನಶೀಲ ಎಂಬ ಪದವೇ ತಪ್ಪು, ಅದು ಹಿಂದಿಗೆ ಸರಿ, ನಮ್ಮ ಮಂದಿಗೆ ಸರಿಯಿಲ್ಲವೆಂದು ಸುಸಂಸ್ಕೃತರು ನುಡಿದಿದ್ದಾರೆ. ‘ಸರ್ಜನಶೀಲ’ ಎಂಬುದು ಸರಿಯಾದ ಪದವೆಂಬುದು ಅವರ ಒಮ್ಮತದ ಅಭಿಪ್ರಾಯ. ಆದರೆ ಇದನ್ನು ಪ್ರೊಫೆಸರ್ ಅ.ರಾ. ಮಿತ್ರರು ಒಪ್ಪುವುದು ಸಂದೇಹವೇ. ‘ಸರ್ಜನನಿಗೂ ಶೀಲಕ್ಕೂ ಏನಯ್ಯ ಸಂಬಂಧ? ಶೀಲ ಎಂದರೆ ರಾಗದ್ವೇಷಗಳನ್ನು ತ್ಯಜಿಸುವುದು ಎಂದರ್ಥ. ಈಗಿನ ನರಸಿಂಗ (ನರ-ಸಿಗಿವ) ಹೋಮಗಳನ್ನು ನಡೆಸುವ ಮಾಲಿಕರ ಅಡಿಯಾಳುಗಳಾಗಿರುವ ಸರ್ಜನರೇನಾದರೂ ‘ಕರ್ಮಣ್ಯೇವಾಧಿಕಾರಸ್ತೇ’ ಎಂದರೆ ‘ಹಿಡಿ ನಿನ್ನ ಮನೆಯ ರಸ್ತೆ’ ಎನ್ನುತ್ತಾರೆ. ತಮ್ಮ ಎಜುಕೇಷನಲ್ ಕ್ಯಾಪಿಟಲ್, ನರ್ಸಿಂಗ್ ಹೋಮಿನ ಕ್ಯಾಪಿಟಲ್, ಎಕ್ವಿಪ್ಮೆಂಟುಗಳ ಕ್ಯಾಪಿಟಲ್ ಮುಂತಾದವನ್ನು ಲೆಕ್ಕ ಹಾಕಿ, ಅದಕ್ಕೊಂದಿಷ್ಟು ಬಡ್ಡಿ, ಚಕ್ರಬಡ್ಡಿ ಕೂಡಿಸಿದರೆ ಸರ್ಜನರು ರೋಗಿಗಳಿಗೆ ‘ಕ್ಯಾಪಿಟಲ್ ಪನಿಷ್ಮೆಂಟ್’ ಕೊಡುವುದು ಅನಿವಾರ್ಯವಾಗುತ್ತದೆ ಎಂದು ನುಡಿದಾರು. “ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ; ಸರ್ಜನರ ಸಹವಾಸ ಹೆಜ್ಜೇನು ಕಡಿದಂತೆ” ಎನ್ನುವ ಅವರು “ಶೀಲ ಎಂದರೆ ಹೆಬ್ಬಾವು ಎಂದೂ ಅರ್ಥವಿದೆ. ಸರ್ಜನಶೀಲ ಎಂದರೆ ಸರ್ಜನ್ ಎಂಬ ಹೆಬ್ಬಾವು ಎಂದೂ ಅರ್ಥ ಮಾಡಿಕೊಳ್ಳಬಹುದು. ನಿಧಿ ಕಾಯುವುದು ಹೆಬ್ಬಾವಿನ ಗುಣಗಳಲ್ಲಿ ಒಂದು” ಎಂದೂ ನುಡಿದರೆ ಅಚ್ಚರಿಯೇನಿಲ್ಲ.
ಮೊದಲಿನಂತೆಯೇ ಸರ್ಜನಶೀಲರಲ್ಲಿಯೂ ಶೀಲವನ್ನು ಬದಿಗಿರಿಸಿ ಸರ್ಜನರನ್ನಷ್ಟೇ ಪರಿಗಣಿಸೋಣ. ಈಗ ಚಾಕು ಹಿಡಿದ ಸರ್ಜನರನ್ನತ್ತ ಬಿಟ್ಟು ಚಾಕ್ಪೀಸ್ ಹಿಡಿದ ಸರ್ಜನರನ್ನು ಪರಿಶೀಲಿಸೋಣ. ಗುಡ್ ಓಲ್ಡ್ ದಿನಗಳಲ್ಲಿ ಗುರುಗಳು ಎಂದು ಕರೆಯಿಸಿಕೊಳ್ಳುತ್ತಿದ್ದ ಉಪಾಧ್ಯಾಯರು ಈಗ ‘ಸರ್’ಗಳು. ಅಂತಹ ರ್ಗಳ ಪಡೆಯೇ ರ್ಜನ ಅರ್ಥಾತ್ ಟೀಚಿಂಗ್ ಸ್ಟ್ಯಾಫ್. ಇಂದಿನ ದಿನಗಳಿಗಿಂತಲೂ ಐದು ದಶಕಗಳ ಹಿಂದೆ ಈ ಗುರುಪಡೆಯನ್ನು ಟೀಚಿಂಗ್ ಸ್ಟ್ಯಾಫ್ ಎಂದು ಕರೆಯುವುದು ಸೂಕ್ತವಾಗಿತ್ತು. ಸ್ಟ್ಯಾಫ್ ಎಂದರೆ ಕಡ್ಡಿ, ಗಳು, ಬೆತ್ತ. ಬೆತ್ತವನ್ನು ಮುಂದಿರಿಸಿಕೊಂಡೇ ಟೀಚ್ ಮಾಡುತ್ತಿದ್ದ ಗುಂಪಿಗೆ ಟೀಚಿಂಗ್ ಸ್ಟ್ಯಾಫ್ ಎನ್ನುವುದು ಸರಿಯೇ ಅಲ್ಲವೇ!
ಗುರವಃ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ
ಗುರವಃ ವಿರಳಾಃ ಸಂತಿ ಶಿಷ್ಯಚಿತ್ತಾಪಹಾರಕಾಃ ||
ಎಂಬ ಸುಭಾಷಿತವು ‘ಸರ್-ಜನ’ರಲ್ಲಿಯೂ ಎರಡು ವಿಧವಿರುವುದನ್ನು ಬಿಂಬಿಸುತ್ತದೆ. ಮೊನ್ನೆ ಒಬ್ಬ ವಿತ್ತಾಪಹಾರಕನ ಮನೆಯ ಕಿಟಕಿಯ ಹೊರಗೆ ನಿಂತಿದ್ದೆ. ಒಳಗಿನಿಂದ ಸ್ವ-ನಿರ್ಮಿತ ಗೀತೆಯೊಂದು ತೇಲಿಬಂದಿತು.
ಮನೆಪಾಠದ ಈ ಬಂಧ ಹಣವಿದ್ಯೆಯ ಅನುಬಂಧ |
ನರ್ಸರಿಯಿಂದ ಡಿಗ್ರಿಗೂ ತೀರದ ಸಂಬಂಧ ||
ಹಣವಂತರಾದ ಬ್ರಿಲಿಯೆಂಟು ಸ್ಟೂಡೆಂಟ್ಸ್ ನನ್ನಲ್ಲೆ
ಟ್ಯೂಷನ್ಗೆ ಬರಲಿ |
ನಾ ಪ್ರಿಂಟಿಸಿರುವ ಗೈಡ್ಸ್ ಬುಕ್ಸಿನಿಂದ ಹಣದ್
ಹೊಳೆಯೆ ಹರಿದು ಬರಲಿ ||
ಸ್ಕೂಲಲ್ ಮಾಡಿದ್ಯಾವ ಪಾಠವೂನು ಸ್ಟೂಡೆಂಟ್ಸ್
ತಲೆಯೊಳಗೆ ಇಳಿಯದಿರಲಿ |
ಮನೆಪಾಠ ಮಾತ್ರ ಮನದಲ್ಲಿ ಉಳಿದು ಮಾರ್ಕ್ಸ್
ಕಾರ್ಡು ತುಂಬಿ ಬರಲಿ ||
ಎಂದು ಆ ಗುರು ಹಾಡುತ್ತಿದ್ದ. “ಇದಿ ನ್ಯಾಯಮಾ ಗುರುವರ್ಯಾ?’’ ಎಂದರೆ “ಅಪರಾಧಿ ನಾನಲ್ಲ; ಅಪರಾಧವೆನಗಿಲ್ಲ; ಟ್ಯೂಷನ್ ಪಾಠಕೆ ಸೂತ್ರಧಾರರ್ ಪೇರೆಂಟ್ಸ್…’ ಎಂದುಲಿದ. ನೂರು ಕ್ಯಾಂಡಲ್ ಬಲ್ಬಿಗೆ ಅವಶ್ಯಕ್ಕಿಂತಲೂ ಹೆಚ್ಚಿನ ವಿದ್ಯುತ್ತನ್ನು ಹರಿಸಿ ಬರ್ನೌಟ್ ಮಾಡಿಸುವ ಪ್ರಕ್ರಿಯೆ ಇರುವುದೂ ನಿಜವೇ.
ಸರ್ ಎನ್ನುವುದನ್ನು ಸರ ಎಂದು ಉಚ್ಚರಿಸಿದರೆ ಸರ್ಜನನು ಸರಜನನಾಗಿ ಬದಲಾಗುತ್ತಾನೆ. ‘ಸರ’ ಎಂದರೆ ಮಾಲೆ, ಧ್ವನಿ, ಕೊಳ, ಬಾಣ ಎಂಬ ಅರ್ಥಗಳನ್ನು ಅನ್ವಯಿಸಿದರೆ ಮಾಲೆಕಾರ ಅಥವಾ ಅಕ್ಕಸಾಲಿಗ; ನುಡಿಯುವ ಜನ/ಭಾಷಣಕಾರರು; ಕೊಳದ ಮಂದಿ/ಅಂಬಿಗ, ಬೆಸ್ತ, ಇತ್ಯಾದಿಗಳು; ಬಾಣದ ಜನ ಅರ್ಥಾತ್ ಆರ್ಚರಿಯವರು ಎಂದೆಲ್ಲ ಅರ್ಥಗಳು ಜನ್ಮಿಸುತ್ತವೆ. ಸರವನ್ನು ಅತ್ತ ಇರಿಸಿ ಜ ಎಂದರೆ ಹುಟ್ಟು, ನ ಎಂದರೆ ಇಲ್ಲವಾಗುವಿಕೆ ಎಂಬ ಅರ್ಥಗಳನ್ನು ತೆಗೆದುಕೊಂಡರೆ ಹುಟ್ಟುಸಾವುಗಳು ಎರಡೇ ಅಕ್ಷರಗಳಲ್ಲಿ ದೊರೆತಂತಾಗುತ್ತದೆ.
ಇನ್ನು ಲಂಬಿಸಿದರೆ ನನ್ನನ್ನು ಹುಟ್ಟಲಿಲ್ಲ ಅನ್ನಿಸಿಬಿಡುತ್ತೇನೆಂದು ಸಂಪಾದ-ಕರು ಧಮಕಿ ಹಾಕುವ ಮೊದಲು ಈ ಲೇಖನಕ್ಕೊಂದು ಫುಲ್ ಸ್ಟಾಪ್ ಇಡುತ್ತೇನೆ.