ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

  • ಕನ್ನಡವು ಲೋಕಾನುಭವಗಳಿಗೆ ಮತ್ತು ಹೊಸ ಸಾಹಿತ್ಯ ಪ್ರಕಾರಗಳಿಗೆ ತೆರೆದುಕೊಂಡದ್ದು ಹತ್ತೊಂಬತ್ತನೆಯ ಶತಮಾನದಲ್ಲಿ. ಕಾವ್ಯಕ್ಕಿಂತ ಗದ್ಯವೇ ಹೊಸ ಅನುಭವಗಳ ದಾಖಲಾತಿಗೆ ಮತ್ತು ಅಭಿವ್ಯಕ್ತಿಗೆ ಹಿತವೆಂಬ ಅರಿವು ಮೂಡಿದ್ದು ಕೂಡ ಇದೇ ಶತಮಾನದಲ್ಲಿ. ಪರಿವರ್ತನೆ, ಹೊಸತನ ಕನ್ನಡದಲ್ಲಿ ಸಾಕಾರವಾದದ್ದು ಅನ್ಯಭಾಷೆಗಳ ಸಾಹಿತ್ಯದ ಪರಿಚಯ ಹಾಗೂ ಭಾಷಾಂತರಗಳ ಕಾರಣದಿಂದಾಗಿ. ಪ್ರಬಂಧದಲ್ಲಿ ಅನ್ಯಭಾಷೆಗಳಿಂದ ಕನ್ನಡ ಗದ್ಯಕ್ಕೆ ಭಾಷಾಂತರ ಮಾಡಿದ ವಿದ್ಯಮಾನಗಳನ್ನು ಕಾಲಘಟ್ಟಗಳಲ್ಲಿ ಪರಿಶೀಲಿಸಲಾಗಿದೆ. ಯಾವುದೇ ವಿದ್ಯಮಾನಕ್ಕೆ ಪ್ರಬಂಧದಲ್ಲಿ ಕೊಟ್ಟಿರುವ ಉದಾಹರಣೆಗಳು ಸಮಗ್ರವಲ್ಲಕನ್ನಡದಲ್ಲಿ ಅನ್ಯಭಾಷೆಗಳ ಸಾಹಿತ್ಯ ಕೃತಿಗಳು ಅನುವಾದಗೊಂಡ ವಿದ್ಯಮಾನಗಳನ್ನು ಗ್ರಹಿಸುವ ಕೆಲಸವೇ ಮುಖ್ಯ ಎನ್ನುವುದು ಇಲ್ಲಿನ ನೆಲೆಯಾಗಿದೆ.

    ಭಾಗ: ಒಂದು

    ಪ್ರಸ್ತಾವನೆ

    ಕನ್ನಡದ ಆಧುನಿಕ ಗದ್ಯವನ್ನು ರೂಪಿಸುವಲ್ಲಿ ೧೯ನೆಯ ಮತ್ತು ೨೦ನೆಯ ಶತಮಾನಗಳ ಗದ್ಯ-ಅನುವಾದಗಳ ಕೊಡುಗೆ ದೊಡ್ಡದು. ಅದರಲ್ಲಿಯೂ ಹತ್ತೊಂಬತ್ತನೆಯ ಶತಮಾನದಲ್ಲಿ ನಡೆದ ಅನುವಾದ ಪ್ರಕ್ರಿಯೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಿವೆ.

    ಕನ್ನಡದಲ್ಲಿ ಜನಪ್ರಿಯ ಆಧುನಿಕ ಗದ್ಯಪ್ರಕಾರಗಳೆಂದರೆ ಕಾದಂಬರಿ ಮತ್ತು ಸಣ್ಣಕತೆಗಳು. ಇವೆರಡೂ ೧೮೯೯-೧೯೦೦ರ ಆಸುಪಾಸಿನಲ್ಲಿ, ಅಂದರೆ ಇಪ್ಪತ್ತನೆಯ ಶತಮಾನದ ಹೊಸ್ತಿಲಲ್ಲಿ ಕನ್ನಡದಲ್ಲಿ ಮೊದಲು ಕಾಣಿಸಿಕೊಂಡವು ಎನ್ನುವುದನ್ನು ನಾವು ಸಾಹಿತ್ಯ ಚರಿತ್ರೆಯಲ್ಲಿ ನೋಡುತ್ತೇವೆ. ಮೊದಲನೆಯ ಸ್ವತಂತ್ರ ಸಾಮಾಜಿಕ ಕಾದಂಬರಿ ೧೮೯೯ರಲ್ಲಿ ಪ್ರಕಟವಾದ ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ’ ಎನ್ನುವ ಕಾದಂಬರಿ, ಮತ್ತು ಮೊದಲನೆಯ ಸಣ್ಣಕತೆ, ಮಂಗಳೂರಿನ ‘ಸುವಾಸಿನಿ’ ಪತ್ರಿಕೆಯಲ್ಲಿ ೧೯೦೦ರ ಆಗಸ್ಟ್ ಸಂಚಿಕೆಯಲ್ಲಿ ಪ್ರಕಟವಾದ ಪಂಜೆ ಮಂಗೇಶರಾಯರ ‘ನನ್ನ ಚಿಕ್ಕತಾಯಿ’ ಎಂಬ ಸಣ್ಣಕತೆ ಎನ್ನುವುದು ಸಾಹಿತ್ಯಚರಿತ್ರೆಯಲ್ಲಿ ದಾಖಲಾಗಿರುವ ಸಂಗತಿ. ಇವುಗಳ ಹಿಂದೆಮುಂದೆಯೂ ಕೆಲವು ಕೃತಿಗಳು ಪ್ರಕಟವಾಗಿರುವುದಿದೆ. ಈ ಪ್ರಬಂಧವು ಸೃಜನಶೀಲ ಗದ್ಯದ ಕುರಿತಾಗಿ ಅಲ್ಲವಾದುದರಿಂದ ಈ ಬಗ್ಗೆ ಚರ್ಚಿಸುವುದಕ್ಕೆ ಇದು ವೇದಿಕೆಯಲ್ಲ.

    ಆದರೆ ಇದನ್ನು ಯಾಕೆ ಉಲ್ಲೇಖಿಸಬೇಕಾಯಿತು ಎಂದರೆ ಹೀಗೆ ಸ್ವತಂತ್ರ ಕನ್ನಡ ಕತೆ, ಕಾದಂಬರಿಗಳನ್ನು ಬರೆಯಬೇಕಾದರೆ ಅದಕ್ಕೆ ಅನ್ಯಭಾಷೆಗಳಿಂದ ಅನುವಾದಗಳ ಮೂಲಕ ತಕ್ಕ ವೇದಿಕೆಯನ್ನು ನಿರ್ಮಿಸಿ, ಕನ್ನಡ ಗದ್ಯಕ್ಕೆ ಒಂದು ನುಡಿಗಟ್ಟನ್ನು ಸಿದ್ಧಮಾಡಿಕೊಟ್ಟ ಮತ್ತು ಸಣ್ಣಕತೆ ಹಾಗೂ ಕಾದಂಬರಿಗಳ ಪ್ರಕಾರವನ್ನು ಕನ್ನಡಕ್ಕೆ ಪರಿಚಯಿಸಿದ ವಿದ್ಯಮಾನಗಳನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸುವುದು ಸೂಕ್ತ ಎನ್ನುವ ಕಾರಣಕ್ಕಾಗಿ.

    ಆಧುನಿಕ ಕನ್ನಡ ಕಥನಗಳೆಂದರೆ ಹತ್ತೊಂಬತ್ತನೆಯ ಶತಮಾನದಲ್ಲಿ ಕಾಣಿಸಿಕೊಂಡ ಕಾವ್ಯ ಪುರಾಣಗಳ ಗದ್ಯಾನುವಾದಗಳು, ಸಂಸ್ಕೃತ ಮತ್ತು ಇಂಗ್ಲಿಷ್ ನಾಟಕಗಳ (ಕಾದಂಬರಿ ಗಾತ್ರದ) ಕಥನರೂಪಗಳು, ಸಣ್ಣಕತೆ, ಕಾದಂಬರಿ, ರಮ್ಯಕಥಾನಕ ಮತ್ತು ಸಂವಾದಗಳಂತಹ ಗದ್ಯಕಥನಗಳನ್ನೆಲ್ಲ ಪರಿಗಣಿಸಲಾಗಿದೆ. ಆಧುನಿಕ ಕನ್ನಡ ಸಾಹಿತ್ಯವು ಇಪ್ಪತ್ತನೆಯ ಶತಮಾನದಲ್ಲಿ ರಮ್ಯ ಕಥಾನಕ ಮತ್ತು ಸಂವಾದಗಳನ್ನು ಬಿಟ್ಟುಕೊಟ್ಟು ಸಣ್ಣಕತೆ ಮತ್ತು ಕಾದಂಬರಿಗಳೆಂಬ ಎರಡು ಸಾಹಿತ್ಯಪ್ರಕಾರಗಳಲ್ಲಿ ಬೆಳೆಯಿತು. ಕನ್ನಡದ ಆಧುನಿಕ ಕತೆ ಮತ್ತು ಕಾದಂಬರಿಗಳ ಮೇಲೆ ಪ್ರಭಾವ ಬೀರಿದ ಭಾಷಾಂತರಗಳನ್ನು ಇಲ್ಲಿ ಪ್ರಧಾನವಾಗಿ ಗಮನಿಸಲಾಗಿದೆ. ನಾಟಕ ಮತ್ತು ಕಾವ್ಯ ಪ್ರಕಾರಗಳನ್ನು ಗಮನಿಸಲಾಗಿಲ್ಲ.

    ಕನ್ನಡವು ಲೋಕಾನುಭವಗಳಿಗೆ ಮತ್ತು ಹೊಸ ಸಾಹಿತ್ಯ ಪ್ರಕಾರಗಳಿಗೆ ತೆರೆದುಕೊಂಡದ್ದು ಹತ್ತೊಂಬತ್ತನೆಯ ಶತಮಾನದಲ್ಲಿ. ಕಾವ್ಯಕ್ಕಿಂತ ಗದ್ಯವೇ ಹೊಸ ಅನುಭವಗಳ ದಾಖಲಾತಿಗೆ ಮತ್ತು ಅಭಿವ್ಯಕ್ತಿಗೆ ಹಿತವೆಂಬ ಅರಿವು ಮೂಡಿದ್ದು ಕೂಡ ಇದೇ ಶತಮಾನದಲ್ಲಿ. ಈ ಪರಿವರ್ತನೆ, ಈ ಹೊಸತನ ಕನ್ನಡದಲ್ಲಿ ಸಾಕಾರವಾದದ್ದು ಅನ್ಯಭಾಷೆಗಳ ಸಾಹಿತ್ಯದ ಪರಿಚಯ ಹಾಗೂ ಭಾಷಾಂತರಗಳ ಕಾರಣದಿಂದಾಗಿ. ಈ ಪ್ರಬಂಧದಲ್ಲಿ ಅನ್ಯಭಾಷೆಗಳಿಂದ ಕನ್ನಡ ಗದ್ಯಕ್ಕೆ ಭಾಷಾಂತರ ಮಾಡಿದ ವಿದ್ಯಮಾನಗಳನ್ನು ಕಾಲಘಟ್ಟಗಳಲ್ಲಿ ಪರಿಶೀಲಿಸಲಾಗಿದೆ. ಯಾವುದೇ ವಿದ್ಯಮಾನಕ್ಕೆ ಈ ಪ್ರಬಂಧದಲ್ಲಿ ಕೊಟ್ಟಿರುವ ಉದಾಹರಣೆಗಳು ಸಮಗ್ರವಲ್ಲ – ಕನ್ನಡದಲ್ಲಿ ಅನ್ಯಭಾಷೆಗಳ ಸಾಹಿತ್ಯಕೃತಿಗಳು ಅನುವಾದಗೊಂಡ ವಿದ್ಯಮಾನಗಳನ್ನು ಗ್ರಹಿಸುವ ಕೆಲಸವೇ ಮುಖ್ಯ ಎನ್ನುವುದು ಇಲ್ಲಿನ ನೆಲೆಯಾಗಿದೆ.

    ಅನುವಾದ ಅಥವಾ ಭಾಷಾಂತರ (ಇವೆರಡು ಶಬ್ದಗಳಿಗೆ ವ್ಯತ್ಯಾಸಗಳಿವೆಯಾದರೂ ಇಲ್ಲಿ ಸಮಾನಾರ್ಥಕಗಳೆಂಬಂತೆ ಬಳಸಲಾಗಿದೆ) ಎನ್ನುವುದು ಕೇವಲ ಒಂದು ಸೃಜನಶೀಲ ಕೃತಿಯನ್ನು ಅದೇ ಪ್ರಕಾರದ ಇನ್ನೊಂದು ಭಾಷೆಯ ಕೃತಿಯಾಗಿ ಪರಿವರ್ತಿಸುವುದಕ್ಕೆ ಸೀಮಿತವಲ್ಲ. ಭಾಷಾಂತರ ಎನ್ನುವುದು ಹಲವು ಆಯಾಮಗಳಿಗೆ ವಿಸ್ತರಿಸಿದೆ. ಶಾಲೆ, ಕೈಗಾರಿಕೆಗಳು, ಕೋರ್ಟು ಕಚೇರಿಗಳು, ಅಂಚೆವ್ಯವಸ್ಥೆ – ಹೀಗೆ ಪಾಶ್ಚಾತ್ಯ ನಾಗರಿಕ ವ್ಯವಸ್ಥೆಗಳನ್ನು ನಮ್ಮ ನಾಡಿನಲ್ಲಿ ಪ್ರಾರಂಭಿಸಿದಾಗ ಅದೂ ಒಂದು ಬಗೆಯ (ಭೌತಿಕ) ಅನುವಾದವೇ ಆಗುತ್ತದೆ. ಒಂದು ಯಕ್ಷಗಾನ ಪ್ರಸಂಗ ಕಾವ್ಯದಂತಹ ಸಾಹಿತ್ಯಕೃತಿಯನ್ನು ರಂಗದ ಮೇಲೆ ಅಭಿನಯಿಸಿದಾಗ ಇನ್ನೊಂದು ಬಗೆಯ (ಮಾಧ್ಯಮ) ಅನುವಾದವಾಗುತ್ತದೆ. ವೈಚಾರಿಕ ಸಾಹಿತ್ಯಕೃತಿಗಳನ್ನು ಸೃಜನಶೀಲ ಸಾಹಿತ್ಯದ ಮಾದರಿಯಲ್ಲಿ ಕೊಟ್ಟರೆ ಅದು ಕೂಡ ಒಂದು ಬಗೆಯ (ಪ್ರಕಾರ) ಅನುವಾದವೇ ಆಗುತ್ತದೆ. ಗುಲ್ವಾಡಿ ವೆಂಕಟರಾಯರು ಆ ಕಾಲದಲ್ಲಿ ನಡೆಯುತ್ತಿದ್ದ ವಿಧವಾವಿವಾಹ ಇತ್ಯಾದಿ ಸುಧಾರಣೆಗಳ ಪರವಾಗಿ ಚಿತ್ರಾಪುರ ಮಠದ ಸ್ವಾಮಿಜೀಯವರಾದ ಪಾಂಡುರಂಗಾಶ್ರಮ ಸ್ವಾಮಿಜೀಯವರ ತಂಡದ ಜತೆಗೆ ನಡೆಸುತ್ತಿದ್ದ ಧರ್ಮಜಿಜ್ಞಾಸೆ-ವಾಗ್ವಾದಗಳನ್ನು ಕಾದಂಬರಿ ರೂಪದಲ್ಲಿ ಮುಂದುವರಿಸಿದಾಗ ‘ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ’ ಎಂಬ ಸೃಜನಶೀಲ ಕೃತಿ ಹುಟ್ಟುತ್ತದೆ. ಇದು ವೈಚಾರಿಕತೆಯನ್ನು ಮತ್ತು ಸನ್ನಿವೇಶಗಳನ್ನು ಇನ್ನೊಂದು ಪ್ರಕಾರಕ್ಕೂ, ಇನ್ನೊಂದು ಮಾಧ್ಯಮಕ್ಕೂ ಅನುವಾದಿಸಿದ ಸಂಕೀರ್ಣ ಭಾಷಾಂತರವಾಗಿದೆ. ಈ ಕಾದಂಬರಿಗೆ ‘ಸದ್ಧರ್ಮ ವಿಜಯ’ ಎನ್ನುವ ಪರ್ಯಾಯ ನಾಮವನ್ನು ಅವರು ಕೊಡುವುದಕ್ಕೆ ಹಿನ್ನೆಲೆಯಾಗಿ ಗುಲ್ವಾಡಿಯವರು ಭಾಗವಹಿಸಿದ ವಾಗ್ವಾದಗಳನ್ನು ಮತ್ತು ಸುಧಾರಣಾಪರ ಕೆಲಸಗಳನ್ನು ಗಮನಿಸಬೇಕು. ಈ ಬಗೆಯ ಗ್ರಹಿಕೆಗಳು ಕೂಡ ಈ ಪ್ರಬಂಧದ ಹಿನ್ನೆಲೆಯಲ್ಲಿವೆ.

    ಕಾವ್ಯಕೃತಿಗಳನ್ನು ಅಥವಾ ನಾಟಕಕೃತಿಗಳನ್ನು ಗದ್ಯ ಕಥಾನಕಗಳಾಗಿ ಮರುನಿರೂಪಿಸಿದರೆ ಅದು ‘ರೂಪಾಂತರ’ ಎಂದು ಇಲ್ಲಿ ಪರಿಗಣಿಸಲಾಗಿದೆ.

    ಹತ್ತೊಂಬತ್ತನೆಯ ಶತಮಾನದಲ್ಲಿ ನಡೆದ ವಿಪುಲ ಭಾಷಾಂತರಗಳನ್ನು ನೋಡಿದರೆ ಇಪ್ಪತ್ತನೆಯ ಶತಮಾನದಲ್ಲಿ ನಡೆದ ಸ್ವತಂತ್ರ ಕತೆ ಕಾದಂಬರಿಗಳ ರಚನೆ ಅವುಗಳಿಂದ ಪ್ರೇರಣೆ ಪಡೆದು ಮುಂದುವರಿದ ಹಾಗೆ ಕಾಣಿಸುತ್ತದೆ; ರಿಲೇ ಓಟದಲ್ಲಿ ಒಬ್ಬ ಓಟಗಾರನಿಂದ ಇನ್ನೊಬ್ಬ ಓಟಗಾರ ದಂಡವನ್ನು ಪಡೆದು ಓಟವನ್ನು ಮುಂದುವರಿಸುವುದಕ್ಕೆ ಇದನ್ನು ಹೋಲಿಸಬಹುದು.

    ಆಧುನಿಕ ಗದ್ಯಕಥನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾಷಾಂತರದ ಮೂರು ಯುಗಗಳನ್ನು ಹೀಗೆ ಗುರುತಿಸಲಾಗಿದೆ: ೧. ಆರಂಭ ಕಾಲ (೧೮೧೦-೧೯೩೦), ೨. ನಿರ್ಮಾಣಶೀಲ ಯುಗ (೧೯೩೦-೧೯೪೭) ಮತ್ತು ೩. ಸ್ವಾತಂತ್ರ್ಯೋತ್ತರ ಕಾಲ (೧೯೪೭ರಿಂದ ಇದುವರೆಗೆ).

    ಭಾಗ: ಎರಡು

    . ಆರಂಭ ಕಾಲ

    ಆಧುನಿಕ ಭಾಷಾಂತರದ ಆರಂಭ ಕಾಲ ಎನ್ನುವುದು ೧೮೧೦ರಿಂದ ೧೯೩೦ರವರೆಗಿನ ಕಾಲ ಎಂದು ಗುರುತಿಸಬಹುದು. ಈ ಕಾಲದಲ್ಲಿ ಅನ್ಯಭಾಷೆಗಳಿಂದ ಕನ್ನಡಕ್ಕೆ ಆದ ಗದ್ಯ ಭಾಷಾಂತರಗಳನ್ನು ಇಲ್ಲಿ ಗಮನಿಸಲಾಗಿದೆ.

    ಭಾಷಾಂತರ ಅಥವಾ ರೂಪಾಂತರ ಮಾಡುವಾಗ ಸಂಸ್ಕೃತ ಕೃತಿಗಳ ಲೋಕದೃಷ್ಟಿ, ಸನ್ನಿವೇಶಗಳು ಮತ್ತು ಹೆಸರುಗಳು ಕನ್ನಡಕ್ಕೆ ಸಾಂಸ್ಕೃತಿಕವಾಗಿ ಅನ್ಯವೆನಿಸದ ಕಾರಣ ಆ ಭಾಷೆಯ ಕೃತಿಗಳು ಕಾವ್ಯಪ್ರಕಾರದಿಂದ ಗದ್ಯಕ್ಕೆ ರೂಪಾಂತರವಾದವೇ ಹೊರತು ಕೃತಿಯ ಹೂರಣವನ್ನು ಪರಿವರ್ತಿಸುವ ಅಗತ್ಯ ಅನುವಾದಕರಿಗೆ ಉಂಟಾಗಲಿಲ್ಲ. ಆದರೆ ಈ ಕಾಲಘಟ್ಟದಲ್ಲಿ ಅನುವಾದಕರು ಪಾಶ್ಚಾತ್ಯ ಕೃತಿಗಳ ರೂಪಾಂತರಗಳನ್ನೆ ಪ್ರಧಾನವಾಗಿ ಮಾಡುತ್ತಿದ್ದರು. ಉದಾಹರಣೆಗೆ, ‘ಶಾಕುಂತಲ’ ನಾಟಕದ ಯಾವ ಸನ್ನಿವೇಶವೂ ಕನ್ನಡಿಗರಿಗೆ ಅರಗಿಸಿಕೊಳ್ಳಲಾಗದಂತೆ ಇರಲಿಲ್ಲ. ಆದರೆ ಶೇಕ್ಸ್ಪಿಯರಿನ ‘ರೋಮಿಯೋ ಅಂಡ್ ಜೂಲಿಯೆಟ್’ ನಾಟಕವನ್ನು ‘ರಾಮವರ್ಮ ಲೀಲಾವತಿ’ ಎಂದು ಅನುವಾದಿಸುವಾಗ ಅನುವಾದಕರು ಅದರ ಕೊನೆಯ ದುರಂತವನ್ನು (ನಾಯಕ ನಾಯಕಿ ಇಬ್ಬರೂ ಸಾಯುವ ಅಂತ್ಯ) ಪರಿವರ್ತಿಸಿ ದೇವರು ಪ್ರತ್ಯಕ್ಷನಾಗಿ ಇಬ್ಬರನ್ನೂ ಬದುಕಿಸುವಂತೆ ಮಾಡುತ್ತಾರೆ. ಕಾದಂಬರಿ ಅನುವಾದದಲ್ಲಿ ಇದೇ ರೀತಿಯ ‘ಸಾಂಸ್ಕೃತಿಕ ಸಮಸ್ಯೆ’ಯನ್ನು ಎದುರಿಸಿದ ‘ಕೌಂಟ್ ಆಫ್ ಮಾಂಟೆಕ್ರಿಸ್ಟೋ’ ಕಾದಂಬರಿಯ ಅನುವಾದಕರು ಮಾಡಿದ ಬದಲಾವಣೆಗಳನ್ನು ಮುಂದೆ ಉದಾಹರಿಸಲಾಗಿದೆ. ವೆಂಕಟಾಚಾರ್ಯರು ಕೂಡ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿದ್ದಿದೆ. ಆದರೆ ಬಂಗಾಳಿ ಭಾಷೆಯಿಂದ ಅನುವಾದಿಸಿದ್ದರಿಂದ ಅವರಿಗೆ ಸಾಂಸ್ಕೃತಿಕ ಸಮಸ್ಯೆ ಇರಲಿಲ್ಲ.

    * * *

    ಭಾಷಾಂತರಗಳ ಮೂಲಕ ಹೊಸಗನ್ನಡ ಗದ್ಯಕ್ಕೆ ಸೂಕ್ತವಾದ ನುಡಿಗಟ್ಟುಗಳನ್ನು ರೂಪಿಸಿದ ಮತ್ತು ಸೃಜನಶೀಲ ಗದ್ಯ ಬರವಣಿಗೆಗೆ ಪ್ರೇರಣೆ ನೀಡಿದ ಐದು ವಿದ್ಯಮಾನಗಳ ಚೌಕಟ್ಟಿನಲ್ಲಿ ಇವುಗಳನ್ನು ಪರಿಶೀಲಿಸಿದರೆ ಪರಿಶೀಲನೆ ಹೆಚ್ಚು ಅರ್ಥಪೂರ್ಣವಾಗುವುದು.

    ಐದು ವಿದ್ಯಮಾನಗಳು ಹೀಗಿವೆ:

    . ಮುಮ್ಮಡಿ ಕೃಷ್ಣರಾಜ ಒಡೆಯರ ಕೊಡುಗೆ: ಹತ್ತೊಂಬತ್ತನೆಯ ಶತಮಾನದ ಎರಡನೆಯ ದಶಕದಿಂದಾರಭಿಸಿ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ ರಾಜಾಶ್ರಯದಲ್ಲಿ ನಡೆದ ಆಧುನಿಕ ಕನ್ನಡ ಗದ್ಯ ಕೃತಿಗಳ ದೊಡ್ಡ ವಾಙ್ಮಯ ಮತ್ತು ಗದ್ಯದ ನುಡಿಗಟ್ಟುಗಳ ನಿರ್ಮಾಣ. ಈ ಕಾಲದಲ್ಲಿ ಸಂಸ್ಕೃತ ಕಾವ್ಯಗಳ ಗದ್ಯ ರೂಪಾಂತರಗಳು ಸೃಷ್ಟಿಯಾದವು.

    . ಮಿಷನರಿಗಳ ಅನುವಾದಗಳು: ಮಂಗಳೂರು, ಬಳ್ಳಾರಿ, ಬೆಂಗಳೂರು ಮುಂತಾದ ಕೇಂದ್ರಗಳಲ್ಲಿ ಮಿಷನರಿಗಳು ಮಾಡಿದ ಬೈಬಲ್ ಭಾಷಾಂತರ ಮತ್ತು ಇತರ ಅನುವಾದಗಳು. ಮಿಷನರಿಗಳ ಪಠ್ಯಪುಸ್ತಕ ರಚನೆಯ ಸಂದರ್ಭದಲ್ಲಿ ಆದ ಕಿರುಗದ್ಯಗಳ ಅನುವಾದಗಳು. ಮಂಗಳೂರು ಕೇಂದ್ರದಲ್ಲಿ ರೆ| ಹರ್ಮನ್ ಮ್ಯೋಗ್ಲಿಂಗ್ ಅವರ (ಕೆಲವೊಮ್ಮೆ ರೆ| ವೈಗ್ಲೆಯವರ ಜತೆಗೆ ಮಾಡಿದ) ಕೆಲಸಗಳು – ಅನುವಾದ, ಸೃಜನಶೀಲ ಕೃತಿರಚನೆ ಮತ್ತು ‘ಮಂಗಳೂರ ಸಮಾಚಾರ’ ಪತ್ರಿಕೆಯ ಮೂಲಕ ರೂಪಿಸಿದ ಆಧುನಿಕ ಕನ್ನಡ ಗದ್ಯದ ಮಾದರಿ.

    . ‘ವೆಂಕಟಾಚಾರ್ಯರ ಅನುವಾದಗಳು: ಕನ್ನಡ ಕಾದಂಬರಿ ಪಿತಾಮಹ ಬಿ. ವೆಂಕಟಾಚಾರ್ಯರು ೧೮೭೬ರಿಂದ ಪ್ರಾರಂಭಿಸಿ ಬಂಗಾಳಿ ಕಾದಂಬರಿಗಳನ್ನು ಅನುವಾದಿಸುವ ಮೂಲಕ ಆಧುನಿಕ ಕಾದಂಬರಿ ಪ್ರಕಾರವನ್ನು ಕನ್ನಡಕ್ಕೆ ಪರಿಚಯಿಸಿದ್ದು.

    . ಪ್ರಾರಂಭಿಕ ಘಟ್ಟದ ಬಿಡಿ ರೂಪಾಂತರಗಳು: ಹತ್ತೊಂಬತ್ತನೆಯ ಶತಮಾನದಲ್ಲಿ ಸಾಹಿತ್ಯಕೃತಿಗಳನ್ನು ರಚಿಸಲು ಉತ್ಸಾಹ ತಾಳಿದ ಶಿಕ್ಷಕರು ಮತ್ತು ಸಾಹಿತ್ಯಾಸಕ್ತ ವಿದ್ಯಾವಂತರು ಬಗೆಬಗೆಯ ರೂಪಾಂತರ ಪ್ರಕ್ರಿಯೆಗಳಿಂದ ರಚಿಸಿದ ಕಾದಂಬರಿಯ ಗಾತ್ರದ ಕಥಾನಕಗಳು ಮತ್ತು ಕಾದಂಬರಿಗಳ ಅನುವಾದಗಳು.

    . ಗಳಗನಾಥರ ಅನುವಾದಗಳು: ಮರಾಠಿಯಿಂದ ರೂಪಾಂತರಿಸಿದ ಮತ್ತು ತಾವು ಸ್ವತಃ ರಚಿಸಿದ ಐತಿಹಾಸಿಕ ಕನ್ನಡ ಕಾದಂಬರಿಗಳನ್ನು ಮನೆಮನೆಗೆ ಒಯ್ದು ಮಾರಾಟ ಮಾಡಿ ಕನ್ನಡಿಗರಿಗೆ ಕಾದಂಬರಿ ಓದಿನ ರುಚಿ ಹಿಡಿಸಿದ ಗಳಗನಾಥರ ಏಕಾಂಗಿ ಪ್ರಯತ್ನ. ಗಳಗನಾಥರು ಇಪ್ಪತ್ತನೆಯ ಶತಮಾನದ ಪ್ರಾರಂಭದ ನಾಲ್ಕು ದಶಕಗಳಲ್ಲಿ ಕಾದಂಬರಿ ಸಾಮ್ರಾಟರಾಗಿ ಕಾದಂಬರಿ ಪ್ರಕಾರವನ್ನು ಜನಪ್ರಿಯಗೊಳಿಸಿದರು.

    ಈ ಐದು ವಿದ್ಯಮಾನಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿಕೊಳ್ಳೋಣ.

    * * *

    ) ಮುಮ್ಮಡಿ ಕೃಷ್ಣರಾಜ ಒಡೆಯರ ನೇತೃತ್ವದ ಗದ್ಯ ಕೃತಿಗಳ ರಚನಾಸತ್ರ:

    ಮೈಸೂರು ಸಂಸ್ಥಾನವನ್ನು ಟಿಪ್ಪು ಸುಲ್ತಾನನ ನಂತರ ಬ್ರಿಟಿಷರು ಮರಳಿ ಒಡೆಯರ್ ರಾಜವಂಶಕ್ಕೆ (ತಮ್ಮ ಹತೋಟಿಯನ್ನಿಟ್ಟುಕೊಂಡು) ನೀಡಿದಾಗ ಹಕ್ಕುದಾರರಾಗಿದ್ದವರು ಮುಮ್ಮಡಿ ಕೃಷ್ಣರಾಜ ಒಡೆಯರ್ (೧೭೯೪-೧೮೬೮) ಅವರು. ಅವರು ಸ್ವತಃ ಸಾಹಿತಿ, ಸಾಹಿತ್ಯಪೋಷಕರು. ಅವರ ಆಸ್ಥಾನದಲ್ಲಿ ಖ್ಯಾತ ವಿದ್ವಾಂಸರಿದ್ದರು. ಅವರೆಲ್ಲ ಸೇರಿ ಸಂಸ್ಕೃತ ಪುರಾಣ, ಕಾವ್ಯ ಮತ್ತು ನಾಟಕಗಳನ್ನು ಕಥನರೂಪಕ್ಕೆ ತಿರುಗಿಸಿ ಬರೆಯುತ್ತಿದ್ದರು. ಅವುಗಳೆಲ್ಲ ಹೆಚ್ಚಾಗಿ ಮುಮ್ಮಡಿಯವರ ಹೆಸರಿನಲ್ಲಿಯೇ ಇವೆ. (ಅರಮನೆಯ ವಿದ್ವಾಂಸರೇ ಬರೆದು ಮಹಾರಾಜರ ಹೆಸರನ್ನು ಹಾಕಿದರೆನ್ನುವ ಅಭಿಮತ ಡಾ. ಶ್ರೀನಿವಾಸ ಹಾವನೂರ್ ಮುಂತಾದ ವಿದ್ವಾಂಸರದು).

    ಆ ಕಾಲದಲ್ಲಿ ರಾಮಾಯಣ, ಮಹಾಭಾರತ ಮತ್ತು ಭಾಗವತ ಗ್ರಂಥಗಳನ್ನು ಕನ್ನಡ ಗದ್ಯದಲ್ಲಿ ಅನುವಾದ ಮಾಡಿಸಿದ್ದು ಮುಮ್ಮಡಿಯವರ ದೊಡ್ಡ ಕೊಡುಗೆಯೂ, ಯುಗಪ್ರವರ್ತಕ ಉಪಕ್ರಮವೂ ಆಯಿತು. ಅವು – ಶ್ರೀ ಕೃಷ್ಣರಾಜ ವಾಣೀವಿಲಾಸ ಭಾರತ, ಶ್ರೀ ಜಯಚಾಮರಾಜೋಕ್ತಿ ವಿಲಾಸವೆಂಬ ರಾಮಾಯಣ, ಶ್ರೀ ಕೃಷ್ಣರಾಜ ವಾಣೀವಿಲಾಸ ಭಾಗವತ.

    ಮೂಲದಲ್ಲಿ ಪದ್ಯರೂಪದಲ್ಲಿರುವ ಈ ಗ್ರಂಥಗಳನ್ನು ಗದ್ಯರೂಪದಲ್ಲಿ ಜನಸಾಮಾನ್ಯರು ಓದುವಂತೆ ಕೊಡಬೇಕೆನ್ನುವ ಕ್ರಾಂತಿಕಾರಕವಾದ ಆಲೋಚನೆ ಮುಮ್ಮಡಿಯವರಿಗೆ ಬಂದದ್ದು ಮಹತ್ತ್ವದ ಸಂಗತಿ. ಮಹಾರಾಜರು ಬರೆಯಿಸಿ, ಅರಮನೆಯ ಗ್ರಂಥಭಂಡಾರದಲ್ಲಿ ಇರಿಸಿದ್ದ ಈ ಮೂರು ಕೃತಿಗಳು ಮುದ್ರಣರೂಪದಲ್ಲಿ ಬಂದದ್ದು ೧೮೯೦ರ ದಶಕದಲ್ಲಿ, ಬೆಂಗಳೂರಿನ ಶ್ರೀ ಚಾಮುಂಡೇಶ್ವರಿ ಮುದ್ರಾಕ್ಷರ ಶಾಲೆಯಲ್ಲಿ. ಈ ಕಾರ್ಯಕ್ಕೆ ಆಗಿನ ಮೈಸೂರು ಮಹಾರಾಜ ಚಾಮರಾಜ ಒಡೆಯರ ಧನಸಹಾಯ ದೊರಕಿತ್ತು. ಆ ಗ್ರಂಥಗಳು ಕನ್ನಡ ನಾಡಿನಲ್ಲೆಲ್ಲ ಜನಪ್ರಿಯವಾದವು. ಅನಂತರ ೧೯೬೦ರ ದಶಕದಲ್ಲಿ ರಾಜ್ಯದ ಪ್ರಮುಖರು ಇದ್ದ ಸಮಿತಿಯು (ಜಯಚಾಮರಾಜ ಒಡೆಯರು ಮಹಾಪೋಷಕರು, ಮುಖ್ಯಮಂತ್ರಿ ನಿಜಲಿಂಗಪ್ಪನವರು ಪೋಷಕರು, ಡಿ.ವಿ.ಜಿ.ಯವರು ಸದಸ್ಯರಲ್ಲೊಬ್ಬರು, ವಿದ್ವಾನ್ ಎನ್. ರಂಗನಾಥ ಶರ್ಮರು ಪ್ರಧಾನ ಸಂಪಾದಕರು) ಅವುಗಳನ್ನು ಮರುಮುದ್ರಣ ಮಾಡಿತು. ಸಂಪಾದಕ ಮಂಡಳಿಯವರು ಇದರ ಗದ್ಯವನ್ನು ಆಧುನಿಕ ಕಾಲಕ್ಕೆ ಸರಿಯಾಗಿ ಪರಿಷ್ಕರಣೆಯನ್ನು ಮಾಡಿದರು.

    ಮುಮ್ಮಡಿಯವರ ಕಾಲದ ಇನ್ನುಳಿದ ಗದ್ಯ ನಿರೂಪಣೆಯ ಗ್ರಂಥಗಳಲ್ಲಿ ಮುಖ್ಯವಾದವುಗಳು: ಬತ್ತೀಸ ಪುತ್ತಳಿ ಕಥೆ, ಬೇತಾಳ ಪಂಚವಿಂಶತಿ ಕಥೆ, ಪಂಚತಂತ್ರ, ಶುಕಸಪ್ತತಿ, ಬಾಣನ ಕಾದಂಬರಿ, ದಶಕುಮಾರ ಕಥಾಕಾಲನಿಧಿ. ಅರಮನೆಯ ಸರಸ್ವತಿ ಗ್ರಂಥಭಂಡಾರದಲ್ಲಿದ್ದ ಈ ಗ್ರಂಥಗಳನ್ನು ಮುಮ್ಮಡಿಯವರ ಪುತ್ರ ಚಾಮರಾಜ ಒಡೆಯರು (೧೮೬೮- ೧೮೯೫) ಮುದ್ರಣ ಮಾಡಿಸಿ ಜನತೆಗೆ ಒದಗಿಸಿದರು. ಮುಮ್ಮಡಿಯವರ ಕಾಲದಲ್ಲಿ ಮುದ್ರಣಯಂತ್ರ ಇರದೆ, ಚಾಮರಾಜ ಒಡೆಯರ ಕಾಲದಲ್ಲಿ ಮುದ್ರಣಯಂತ್ರ ಬಂದದ್ದೇ ಇದಕ್ಕೆ ಕಾರಣ.

    ಮುಂದೆ ಜಯಚಾಮರಾಜ ಒಡೆಯರ ಕಾಲದಲ್ಲಿ (೧೯೪೦-೧೯೪೭) ಋಗ್ವೇದ ಮತ್ತು ಮಹಾ ಪುರಾಣಗಳ ಕನ್ನಡ ಅರ್ಥಾನುಸಂಧಾನ, ಗದ್ಯಾನುವಾದ, ವಿವರಣೆ ಇತ್ಯಾದಿಗಳನ್ನು ವಿದ್ವಾಂಸರಿಂದ ಮಾಡಿಸಿ ಪ್ರಕಟಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

    ಮುಮ್ಮಡಿ ಕೃಷ್ಣರಾಜ ಒಡೆಯರ ಹೆಸರಿನಲ್ಲಿರುವ ಕಾಳಿದಾಸ (ಶಾಕುಂತಲ ನಾಟಕದ ನವೀನ ಟೀಕೆ) ಮತ್ತು ಭವಭೂತಿಯ (ಉತ್ತರರಾಮ ಚರಿತ್ರ ಕಥೆ) ಸಂಸ್ಕೃತ ನಾಟಕಗಳ ಗದ್ಯಕಥನ ರೂಪಗಳು ಮುಂದೆ ಈ ಬಗೆಯ ರೂಪಾಂತರಗಳ ಒಂದು ಪರಂಪರೆಯನ್ನೇ ಸೃಷ್ಟಿಸಿದವು. (ಕೆಲವು ಉದಾಹರಣೆಗಳು ೪ನೆಯ ಉಪವಿಭಾಗ, ‘ವೈಯಕ್ತಿಕ ಪ್ರಯತ್ನಗಳು’ ಭಾಗದಲ್ಲಿವೆ).

    ಅದನ್ನು ಅನುಸರಿಸಿ ಶೇಕ್ಸ್ಪಿಯರ್ ನಾಟಕಗಳ ಕಥನರೂಪಗಳು ಕೂಡ ಬಂದವು. ಅವುಗಳ ಉದಾಹರಣೆಗಳನ್ನು ಮುಂದಿನ ಭಾಗದಲ್ಲಿ ನೋಡಬಹುದು. ಅಲ್ಲದೆ ಕನ್ನಡಕ್ಕೆ ಮೊದಲಾಗಿ ಅನುವಾದಗೊಂಡ ಕಾದಂಬರಿ, ಬಂಗಾಳದ ಈಶ್ವರಚಂದ್ರರ ‘ಭ್ರಾಂತಿ ವಿಲಾಸ’ವು ಶೇಕ್ಸ್ಪಿಯರಿನ ‘ಕಾಮೆಡಿ ಆಫ್ ಎರರ್ಸ್’ ನಾಟಕದ ಕಾದಂಬರಿರೂಪವೇ ಆಗಿರುವುದು ವಿಶೇಷವಾಗಿ ಗಮನಿಸಬೇಕಾದುದು. ಆಮಟ್ಟಿಗೆ ಕನ್ನಡದಲ್ಲಿ ಅಂತಹ ಪ್ರಯತ್ನಗಳು ಮೊದಲೇ ನಡೆದಿದ್ದವು ಎನ್ನುವುದೇ ವಿಶೇಷ. ಆದರೆ ಸಮಕಾಲೀನ ಸಮಾಜದ ಚಿತ್ರಣ ಮಾಡುವುದನ್ನು ಬಂಗಾಳಿ ಕಾದಂಬರಿಗಳು ಕಲಿಸಿಕೊಟ್ಟವು. ಅಲ್ಲಿಯೂ ಮೊದಲು ಸಂಸ್ಕೃತ ಮತ್ತು ಇಂಗ್ಲಿಷ್ ನಾಟಕಗಳ ಕಥನರೂಪಗಳು ಬಂದಿದ್ದವು. ಅನಂತರ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳೂ, ಪತ್ತೇದಾರಿ ಕಾದಂಬರಿಯೂ ಹುಟ್ಟಿಕೊಂಡಿತ್ತು. ವೆಂಕಟಾಚಾರ್ಯರ ಅನುವಾದಗಳ ಮೂಲಕ ಆ ಮಾದರಿಗಳೆಲ್ಲ ಕನ್ನಡಕ್ಕೆ ಅನುವಾದಗೊಂಡವು.

    ) ಮಿಷನರಿಗಳು ಮಾಡಿದ ಬರವಣಿಗೆಯ ಭಾಷಾಶೈಲಿಯ ಅನುವಾದ ಮತ್ತು ಗದ್ಯಾನುವಾದ:

    ಮಿಷನರಿಗಳು ನೇರವಾಗಿ ಗದ್ಯಾನುವಾದ ಮಾಡಿದ ಮತ್ತು ಮಾಡಿಸಿದ ಉದಾಹರಣೆಗಳಿಗಿಂತ ಮುಖ್ಯವಾದುದು ಅವರು ಕನ್ನಡದ ಬರವಣಿಗೆಯ ಗದ್ಯಕ್ಕೆ ಬಹಳ ಮುಖ್ಯವಾದ ಒಂದು ಧನಾತ್ಮಕ ತಿರುವನ್ನು ಕೊಟ್ಟದ್ದು. ಅದೇನೆಂದರೆ ಮುಮ್ಮಡಿಯವರ ಕಾಲದ ಗದ್ಯದಲ್ಲಿ ಪದಗಳು ಸಂಧಿಯಾಗಿ ಕೂಡುನುಡಿಗಳಂತೆ ಬಳಕೆಯಾಗುತ್ತಿದ್ದದ್ದನ್ನು ಕೈಬಿಟ್ಟು ಅನಗತ್ಯ ಸಂಧಿಗಳನ್ನು ಬಿಡಿಸಿ, ಬಿಡಿಬಿಡಿಯಾದ ಪದಗಳನ್ನು ಬರೆಯುವ ಪದ್ಧತಿಯನ್ನು ಬಳಕೆಗೆ ತಂದದ್ದು. ಎರಡನೆಯದು ಪುಟಗಟ್ಟಲೆ ಪೂರ್ಣವಿರಾಮವಿಲ್ಲದೆ ಸಾಗುತ್ತಿದ್ದ ವಾಕ್ಯಗಳನ್ನು ವಾಚನಯೋಗ್ಯವಾಗಿ ತುಂಡರಿಸಿ ಪೂರ್ಣವಿರಾಮ ಚಿಹ್ನೆಯನ್ನು ಬಳಕೆಗೆ ತಂದದ್ದು.

    ಇವುಗಳನ್ನು ಮಿಷನರಿಗಳು ಪ್ರಜ್ಞಾಪೂರ್ವಕವಾಗಿ ‘ಅನುವಾದ’ ಮಾಡಿಕೊಂಡರು. ಈ ಬದಲಾವಣೆ ಅರ್ಥವಾಗಬೇಕಾದರೆ ಮುಮ್ಮಡಿಯವರ ‘ಸೌಗಂಧಿಕಾ ಪರಿಣಯ’ (೧೮೨೧) ಕೃತಿಯ ಒಂದು ವಾಕ್ಯವನ್ನು ಕೊನೆಯಲ್ಲಿ ಕೊಟ್ಟಿರುವ ‘ಟಿಪ್ಪಣಿ – ೧’ರಲ್ಲಿ (ಅಲ್ಲಿ ಉದ್ಧರಿಸಿದಷ್ಟು ಭಾಗದಲ್ಲಿಯೂ ಅದು ಕೊನೆಗೊಳ್ಳದೆ ಅಪೂರ್ಣವಾಗಿದೆ) ನೋಡಬಹುದು. ‘ಮುದ್ರಾಮಂಜೂಷ’ (೧೯೨೩) ಗ್ರಂಥವನ್ನು ಸಂಪಾದಿಸುವಾಗ ಸಂಪಾದಕ ರೆ. ಸ್ಟೀವನ್ಸನ್ ಮಾಡಿರಬಹುದಾದ ಸುಧಾರಣೆಗಳನ್ನು ಗಮನಿಸಲು ಅದರ ಮಾದರಿಯನ್ನೂ ಕೊಡಲಾಗಿದೆ (ಟಿಪ್ಪಣಿ – ೨).

    ಮಿಷನರಿಗಳು ಪಠ್ಯಪುಸ್ತಕವಾಗಿ ಬಳಸಲು ೧೮೪೦ ರ ದಶಕದಲ್ಲಿ ರಚಿಸಿದ ಎಪ್ಪತ್ತು ಕಥೆಗಳುಳ್ಳ ‘ಕಥಾ ಸಪ್ತತಿ’ ಎಂಬ ಪುಸ್ತಕದಲ್ಲಿ ಮತ್ತು ಅಡಕ್ಕಿ ಸುಬ್ಬರಾಯ ಎಂಬವರಿಂದ ಬರೆಯಿಸಿದ ೧೮೪೬ ರ ‘ಅ ಸಿಲೆಕ್ಷನ್ ಆಫ್ ಸ್ಟೋರೀಸ್’ ಎಂಬ ಪುಸ್ತಕದಲ್ಲಿ ಕನ್ನಡ ಗದ್ಯಕ್ಕೆ ಅಲ್ಲಲ್ಲಿ ಪೂರ್ಣವಿರಾಮಗಳನ್ನೂ, ಉದ್ಧರಣ ಚಿಹ್ನೆಗಳನ್ನೂ, ಪದಗಳ ನಡುವೆ ಸ್ಥಳಗಳನ್ನೂ ಕೊಟ್ಟು ಇಂಗ್ಲಿಷ್, ಜರ್ಮನ್ ಮುಂತಾದ ಪಾಶ್ಚಾತ್ಯ ಭಾಷೆಗಳ ಗದ್ಯ ಬರವಣಿಗೆಯಂತೆ ಬರೆಯುವ ಕ್ರಮವನ್ನು ಜಾರಿಗೆ ತಂದರು. ಇದರಲ್ಲಿರುವ ಕಥೆಗಳ ಮಾದರಿಯನ್ನು ‘ಟಿಪ್ಪಣಿ – ೩’ರಲ್ಲಿ ನೋಡಬಹುದು. ೧೯೨೦ ರ ಬೈಬಲ್ ಅನುವಾದದಲ್ಲಿ ಕನ್ನಡದಲ್ಲಿ ಆಗ ಪ್ರಚಲಿತವಾಗಿದ್ದ ಶೈಲಿಯಲ್ಲಿ ಶಬ್ದಗಳನ್ನು ಬಿಡಿಸದೆ, ಪೂರ್ಣವಿರಾಮವನ್ನು ಕೊಡದೆ ಮುದ್ರಿಸಿದ್ದ ಮಿಷನರಿಗಳು ಮುಂದಿನ ಪರಿಷ್ಕರಣೆಗಳಲ್ಲಿ ಅವುಗಳನ್ನೆಲ್ಲ ಸರಿಪಡಿಸಿಕೊಂಡರು.

    ಬರವಣಿಗೆಯಲ್ಲಿ ಮತ್ತು ಮುದ್ರಣದಲ್ಲಿ ಮಾತಿನ ಲಯವನ್ನು ಹಿಡಿಯುವ ಕ್ರಮವನ್ನು ಪಾಶ್ಚಾತ್ಯ ಭಾಷೆಗಳಿಂದ ಕನ್ನಡಕ್ಕೆ ತಂದುಕೊಂಡದ್ದು ಕೂಡ ಒಂದು ‘ಅನುವಾದ’ ಅಥವಾ ‘ಭಾಷಾಂತರ’ ಪ್ರಕ್ರಿಯೆಯೇ ಆಗಿದೆ.

    ‘ಕಥಾ ಸಪ್ತತಿ’ ಪುಸ್ತಕದಲ್ಲಿ ಮಿಷನರಿಗಳು ಅಥವಾ ಅವರ ದೇಶೀಯ ಸಹಕಾರಿಗಳು ಎಪ್ಪತ್ತು ಕಥೆಗಳನ್ನು ಮತ್ತು ಸನ್ನಿವೇಶಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಈಸೋಪ, ಪಂಚತಂತ್ರ ಇತ್ಯಾದಿ ಕೃತಿಗಳಿಂದಲೂ, ಪಾಶ್ಚಾತ್ಯ ಪಠ್ಯ ಪುಸ್ತಕಗಳಿಂದಲೂ ಕಥೆಗಳನ್ನು ಅನುವಾದ ಮಾಡಿರುವಂತಿದೆ. ಶೀರ್ಷಿಕೆಗಳು ಮಿಷನರಿಗಳ ಶೈಲಿಗೆ ಮಾದರಿಯಾಗಿವೆ. ಉದಾಹರಣೆಗೆ – ‘ಇಂಗ್ಲಿಷ್ ದೊರೆಯನ್ನೂ ಅವನ ದ್ವಿಭಾಷಿಯನ್ನೂ ಕುರಿತದ್ದು.’

    ಈ ಪುಸ್ತಕದ ಭಾಷೆಯ ಮಾದರಿ ಹೀಗಿದೆ: “ಕಳವು ಮಾಡಲು ನನ್ನ ಮನೆಗೆ ಬರುವಾಗ ಮುಂಚಿತ ತಿಳಿಸಬಾರದಿತ್ತೆ? ಅಂದರೆ ಸಾಕ್ಷಿಗಳ ವ್ಯವಸ್ಥೆ ಮಾಡುತ್ತಿದ್ದೆ”. (ಕಥಾ ಸಪ್ತತಿ, ೧೮೪೦ರ ದಶಕದ ಪಠ್ಯ ಪುಸ್ತಕ).

    ಇದರ ಪ್ರಸ್ತಾವನೆಯಲ್ಲಿ ಕನ್ನಡ ಗದ್ಯದ ವಾಚನೀಯತೆಯನ್ನು ಕಠಿಣಗೊಳಿಸುತ್ತಿದ್ದ ಸಂಧಿಗಳನ್ನು ತಾವು ಬಿಟ್ಟುಕೊಟ್ಟು ಜಗತ್ತಿನ ಇತರ ನಾಗರಿಕ ಭಾಷೆಗಳಲ್ಲಿರುವಂತೆ ಪದಗಳನ್ನು ವಿಂಗಡಿಸಿ ಬರೆದಿರುವುದನ್ನು ಮಿಷನರಿ ವಿದ್ವಾಂಸರು (ಕಥಾಸಪ್ತತಿಯ ಸಂಪಾದಕರು) ಸ್ಪಷ್ಟವಾಗಿ ದಾಖಲಿಸಿದ್ದಾರೆ. “The publication of the Seventy Stories is designed to supply in some measure, the want of books written in an easy and familiar style and adopted to the use of beginners. As a further help Sandhi is almost wholly omitted and spaces introduced between the words as is usual in the writings of every civilized people.” (ಕಥಾ ಸಪ್ತತಿ. ಹೊಸಗನ್ನಡದ ಅರುಣೋದಯದಲ್ಲಿ ಉಲ್ಲೇಖಿಸಿದಂತೆ).

    ಮಂಗಳೂರಿನಲ್ಲಿಯೂ ಮ್ಯೋಗ್ಲಿಂಗ್, ವೈಗೆಲ್, ಕಿಟೆಲ್ ಮುಂತಾದವರೆಲ್ಲರೂ ಪಠ್ಯ ಪುಸ್ತಕಗಳಿಗಾಗಿ ಅನುವಾದಗಳನ್ನು ಮಾಡಬೇಕಿತ್ತು. ಅದು ಮಿಷನರಿಗಳ ಕರ್ತವ್ಯಗಳಲ್ಲಿ ಒಂದೆಂದು ಪರಿಗಣಿತವಾಗಿತ್ತು. ಹಾಗಾಗಿ ಈ ಪಠ್ಯಗಳನ್ನು ಸಿದ್ಧಪಡಿಸಿದವರ ಹೆಸರುಗಳು ದಾಖಲಾಗಿಲ್ಲ. ಆದರೂ ರೆ| ಗುಸ್ತಾವ್ ಕೀಸ್ ಎಂಬ ಮಂಗಳೂರಿನ ಮಿಷನರಿ (೧೮೪೦- ೧೮೬೬) ಈ ಭಾಗದಲ್ಲಿ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸಿದ ಆದ್ಯರೆಂದು ದಾಖಲಾಗಿದೆ. ಮಿಷನರಿಗಳಿಗೆ ದೇಶೀಯ ವಿದ್ವಾಂಸರ ಸಹಾಯ ಇದ್ದಿರುವುದು ಸಹಜವಾಗಿದೆ. ಈ ಸಮೂಹ ಪ್ರಯತ್ನವನ್ನು ಮುಮ್ಮಡಿಯವರ ಆಸ್ಥಾನದಲ್ಲಿ ನಡೆದ ಸಾಮೂಹಿಕ ವಿದ್ವತ್ ಕಾರ್ಯಕ್ಕೆ ಹೋಲಿಸಬಹುದು.

    ಮಂಗಳೂರಿನ ಬಾಸೆಲ್ ಮಿಷನಿನ ಮುಖ್ಯಸ್ಥ ರೆ| ಹರ್ಮನ್ ಮ್ಯೋಗ್ಲಿಂಗ್ ಅವರು ೧೮೪೪ರಲ್ಲಿ ಆನಂದರಾವ್ ಕೌಂಡಿಣ್ಯ ಎಂಬ ಸಾರಸ್ವತ ಬ್ರಾಹ್ಮಣ ಯುವಕನನ್ನು ಮತಾಂತರ ಮಾಡಿದ ಘಟನೆ ಮಂಗಳೂರಿನಲ್ಲಿ ಕೋಲಾಹಲ ಎಬ್ಬಿಸಿತ್ತು. ಮಿಷನರಿ ನಿಲುವು ಅಥವಾ ಕ್ರೈಸ್ತ ಮತೀಯ ನಿಲುವಿನಿಂದ ಈ ಇಡೀ ಘಟನೆಯನ್ನು ಮತ್ತು ಮತಾಂತರದ ತಾತ್ವಿಕ ಜಿಜ್ಞಾಸೆಯನ್ನು ಮ್ಯೋಗ್ಲಿಂಗ್ ಒಂದು ಸೃಜನಶೀಲ ಕಿರು ಕಾದಂಬರಿಯಾಗಿ ರಚಿಸಿದರು. ೧೮೪೮ರಲ್ಲಿ ಪ್ರಕಟವಾಗಿ ಹಲವು ಮುದ್ರಣಗಳನ್ನು ಕಂಡು ಜನಪ್ರಿಯವಾಗಿದ್ದ ಈ ಕೃತಿಯೇ ‘ಈರಾರು ಪತ್ರಿಕೆ’. ಈರಾರು ಅಂದರೆ ಎರಡು ಆರು (ಹನ್ನೆರಡು) ಪತ್ರಗಳ ಮೂಲಕ ಇಡೀ ಸನ್ನಿವೇಶವನ್ನು ದಾಖಲಿಸಿರುವ ಎಪಿಸ್ಟಲರಿ ತಂತ್ರ ಈ ಕಾದಂಬರಿಯಲ್ಲಿದೆ. ಇಲ್ಲಿ ಗಮನಿಸಬೇಕಾದುದು, ಅನುವಾದಗಳ ಮೂಲಕ ಮತ್ತು ಪ್ರಜ್ಞಾಪೂರ್ವಕವಾಗಿ ಆಧುನಿಕ ಕನ್ನಡ ಗದ್ಯದ ನುಡಿಗಟ್ಟುಗಳನ್ನು ಸಿದ್ಧಮಾಡಿಕೊಡುವ ಕಾರ್ಯದಲ್ಲಿ ತೊಡಗಿದ್ದ ಮ್ಯೋಗ್ಲಿಂಗರ ಸೃಜನಶೀಲ ಗದ್ಯ ಹೇಗಿತ್ತೆನ್ನುವುದನ್ನು ಮಾತ್ರ. ಮ್ಯೋಗ್ಲಿಂಗ್ ಅವರ ಭಾಷೆಗೆ ಉದಾಹರಣೆಯಾಗಿ ‘ಈರಾರು ಪತ್ರಿಕೆ’ಯ ಎರಡು ಪುಟಗಳನ್ನು ‘ಟಿಪ್ಪಣಿ – ೪’ರಲ್ಲಿ ಕೊಡಲಾಗಿದೆ.

    ಈ ಗದ್ಯ ಭಾಷೆ ನಾವು ಈಗ ಬಳಸುವ ಕನ್ನಡಕ್ಕೆ ಸಮೀಪವಾಗಿರುವುದನ್ನು ಗಮನಿಸಿದರೆ ಆಧುನಿಕ ಕನ್ನಡ ಗದ್ಯವನ್ನು ರೂಪಿಸುವುದರಲ್ಲಿ ಮಿಷನರಿಗಳ ಪಾತ್ರ ಮುಖ್ಯವಾಗಿತ್ತು ಎನ್ನುವುದನ್ನು ತಿಳಿಯಬಹುದು.

    ಮಂಗಳೂರಿನ ಬಾಸೆಲ್ ಮಿಷನರಿಗಳು ಮರಾಠಿಯಿಂದ ಬಾಬಾ ಪದಂಜೀ ಮುಳೆ ಅವರ (ಇವರು ಪ್ರೊಟೆಸ್ಟೆಂಟ್ ಕ್ರೈಸ್ತರು; ಮರಾಠಿಯಲ್ಲಿ ಕ್ರೈಸ್ತ ಸಾಹಿತ್ಯವನ್ನು ಬರೆದವರು) ‘ಯಮುನಾ ಪರ್ಯಟನ’ ಎಂಬ ಕಾದಂಬರಿಯನ್ನು ೧೮೬೮ರಲ್ಲಿ ‘ಯಮುನಾಬಾಯಿಯ ಸಂಚಾರ’ ಎಂದು (ಅನುವಾದ- ಸೊಲೊಮನ್ ಭಾಸ್ಕರ) ಮತ್ತು ಮಲಯಾಳಂ ಭಾಷೆಯ, ಜೋಸೆಫ್ ಮುಳಿಯಿಲ್ ಅವರ ‘ಸುಕುಮಾರಿ’ ಎಂಬ ಕಾದಂಬರಿಯನ್ನು (ಅನುವಾದ – ಎಚ್. ರಾಬರ್ಟ್) ೧೮೯೯ರಲ್ಲಿ ಕನ್ನಡಕ್ಕೆ ತಂದರು. ಮೊದಲನೆಯದು ಹಿಂದುಗಳ ವಿಧವಾ ಸಮಸ್ಯೆ ಮತ್ತು ಕ್ರೈಸ್ತ ಧರ್ಮದಲ್ಲಿ ಪರಿಹಾರ ತೋರಿಸುವ ‘ಕ್ರೈಸ್ತ ಕಾದಂಬರಿ’ಗಳಾಗಿದ್ದರೆ ‘ಸುಕುಮಾರಿ’ ಭಾರತೀಯ ಕ್ರೈಸ್ತ ಸಮಾಜದ ಚಿತ್ರಣವಾಗಿದೆ. ಈ ಪರಂಪರೆಗೆ ಸೇರಿದ ಕನ್ನಡದ ಸ್ವತಂತ್ರ ಕ್ರೈಸ್ತ ಕಾದಂಬರಿ ಗೋ. ನ. ಸವಣೂರ್ ಎಂಬವರಿಂದ ೧೯೦೪ರಲ್ಲಿ ರಚಿತವಾಯಿತು. ‘ಹೇಮಲತೆ ಪ್ರಭಾಕರ’ ಎಂಬ ಶೀರ್ಷಿಕೆಯ ಆ ಕಾದಂಬರಿಯನ್ನು ಬೆಂಗಳೂರಿನಲ್ಲಿ ಪ್ರಕಟಿಸಿದವರು ವೆಸ್ಲಿಯನ್ ಮಿಷನಿನವರು.

    ಮಿಷನರಿಗಳ ಬೈಬಲ್ ಭಾಷಾಂತರ ಸತ್ರಗಳು: ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಿಷನರಿಗಳು ಮಾಡಿದ ಮುಖ್ಯ ಭಾಷಾಂತರವೆಂದರೆ ಬೈಬಲಿನ ಕನ್ನಡ ಭಾಷಾಂತರ ಮತ್ತು ಪರಿಷ್ಕರಣೆಗಳು. ಬೈಬಲ್ ಅನುವಾದ ೧೮೧೧-೨೭ರ ಸಮಯದಲ್ಲಿ ನಡೆದರೆ, ೧೮೪೩-೫೯ರ ಅವಧಿಯಲ್ಲಿ ಒಮ್ಮೆ ಮತ್ತು ೧೮೯೩-೧೯೦೧ರ ಅವಧಿಯಲ್ಲಿ ಇನ್ನೊಮ್ಮೆ ಅದನ್ನು ಪರಿಷ್ಕರಿಸಲಾಯಿತು. ಈ ಅನುವಾದದಿಂದ ಕನ್ನಡ ಗದ್ಯಕ್ಕೆ ನೇರವಾಗಿ ಯಾವ ಪ್ರಯೋಜನವೂ ಆಗಲಿಲ್ಲ ಎನ್ನಲಾಗಿದೆ (‘ಟಿಪ್ಪಣಿ – ೫’ ನೋಡಿ). ಕನ್ನಡ ಬೈಬಲ್‌ಗಳನ್ನು ಉಚಿತವಾಗಿ ಹಂಚುತ್ತಿದ್ದುರಿಂದ ಮತ್ತು ಇವುಗಳನ್ನು ಕ್ರೈಸ್ತೇತರ ಜನರು ಮುಗಿಬಿದ್ದು ಪಡೆದುಕೊಂಡು ಹೋಗಿ ಓದುತ್ತಿದ್ದುದರಿಂದ ‘ಹೀಗೆಯೆ’ ಎಂದು ಹೇಳಲಾಗದು. ಅಲ್ಲದೆ, ಈ ಭಾಷಾಂತರ ಸತ್ರಗಳಲ್ಲಿ ಭಾಗವಹಿಸಿದ್ದ ಮಿಷನರಿ ವಿದ್ವಾಂಸರು ತಮ್ಮ ತಿಳಿವಳಿಕೆಗಳನ್ನು ತಮ್ಮ ‘ಸೆಕ್ಯೂಲರ್’ ಕೃತಿಗಳಲ್ಲಿ ಬಳಸಿಕೊಂಡದ್ದರಿಂದ ಪರೋಕ್ಷವಾಗಿ ಕನ್ನಡಕ್ಕೆ ಅದರಿಂದ ಪ್ರಯೋಜನವಾಯಿತು ಎಂದು ಊಹಿಸಬಹುದು. ಉದಾಹರಣೆಗೆ ರೆ. ಮ್ಯೋಗ್ಲಿಂಗ್ ಮತ್ತು ರೆ. ಕಿಟೆಲ್ ಹೀಗೆ ಬೈಬಲ್ ಭಾಷಾಂತರಗಳಲ್ಲಿ ಭಾಗವಹಿಸಿದ್ದ ಇಬ್ಬರು ವಿದ್ವಾಂಸರು. ಕನ್ನಡ ಸೃಜನಶೀಲ ಬರವಣಿಗೆಗೆ ಅವರ ಕೊಡುಗೆ ಪ್ರಸಿದ್ಧವಾದುದೇ ಆಗಿದೆ.

    ಬೈಬಲ್ ಭಾಷಾಂತರದಲ್ಲಿ ಭಾಷಾಂತರ ಅಧ್ಯಯನಕಾರರು ಗಮನಿಸಬೇಕಾದ ಕೆಲವು ಸಂಗತಿಗಳಿವೆ. ೧.ಕಾಲಕಾಲಕ್ಕೆ ಭಾಷೆಯನ್ನು ಸಮಕಾಲೀನಗೊಳಿಸಬೇಕು ಎನ್ನುವ ತಿಳಿವಳಿಕೆ. ೨. ಪ್ರಾದೇಶಿಕ ಭಾಷಾ ವೈವಿಧ್ಯಗಳನ್ನು ಗಮನಿಸಿ ಸೂಕ್ತವಾದ ಸಮನ್ವಯವನ್ನು ಸಾಧಿಸುವುದು. ೩. ಪ್ರತಿಯೊಂದು ಪದವನ್ನೂ ಮೂಲಕ್ಕೆ ಸರಿಯಾಗುವಂತೆ ವಿವೇಚಿಸಿ ಬಳಸುವುದು. (ಅನುವಾದದಲ್ಲಿ ಮೂಲನಿಷ್ಠತೆಗೆ ಪ್ರಾಮುಖ್ಯ ಬಂದದ್ದೇ ಬೈಬಲ್ ಭಾಷಾಂತರಗಳಿಂದಾಗಿ). ಮೂಲದಲ್ಲಿದ್ದುದನ್ನು ವಿಸ್ತರಿಸಲು ಹೋಗಬಾರದು. ಸ್ವೀಕಾರ ಭಾಷೆಯಲ್ಲಿ ಮೂಲಕ್ಕೆ ಸಂವಾದಿಯಾದ ಪದಗಳಿದ್ದರೆ ಮಾತ್ರ ಅನುವಾದಿಸಬೇಕು; ಇಲ್ಲದಿದ್ದರೆ ಆಕರ ಭಾಷೆಯ ಪದಗಳನ್ನೇ ಇಟ್ಟುಕೊಳ್ಳಬೇಕು (ಉದಾಹರಣೆಗೆ, ‘ಅಪೋಸ್ತಲರು’). ೪. ಭಾಷೆಗೂ ಸಂಸ್ಕೃತಿಗೂ ಇರುವ ಸಂಬಂಧವನ್ನು ತಿಳಿದು ಭಾಷಾಂತರಿಸುವುದು. (ಬೈಬಲ್ ಭಾಷಾಂತರದ ಸಂದರ್ಭದ ನಡಾವಳಿಗಳನ್ನು ಮಿಷನರಿಗಳು ಹಸ್ತಾಕ್ಷರದಲ್ಲಿರುವ ದಾಖಲೆಯೊಂದರಲ್ಲಿ ಬರೆದು ಇಟ್ಟಿದ್ದಾರೆ. ಡಾ. ಶ್ರೀನಿವಾಸ ಹಾವನೂರ್ ಇದನ್ನು ಪರಿಶೀಲಿಸಿ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ಮೇಲಿನ ಅಂಶಗಳನ್ನು ನಾನು ಗ್ರಹಿಸಿದ್ದೇನೆ).

    ಮೊದಲನೆಯ ಅಂಶಕ್ಕೆ ಮಿಷನರಿಗಳು ಬೈಬಲಿನ ಮೊದಲನೆಯ ಕನ್ನಡ ಅನುವಾದದ ಭಾಷೆ ಜನರು ಆಡುವ ಮಾತಿಗಿಂತ ದೂರವಾಗಿದೆ ಎಂದು ತಿಳಿದು ಪರಿಷ್ಕರಣೆಗೆ ತೊಡಗಿದ್ದೇ ಉದಾಹರಣೆಯಾಗಿದೆ. ಎರಡನೆಯದಕ್ಕೆ ಉದಾಹರಣೆಯೆಂದರೆ ಉತ್ತರ ಕರ್ನಾಟಕಕ್ಕೆ ಮತ್ತು ದಕ್ಷಿಣ ಕರ್ನಾಟಕಕ್ಕೆ ಎರಡು ಪ್ರತ್ಯೇಕ ಭಾಷಾಂತರಗಳು ಬೇಕೆಂದು ಬೋಧಕರು ಬೇಡಿಕೆ ಸಲ್ಲಿಸಿದಾಗ ಪರಿಷ್ಕರಣ ಸಮಿತಿಯು ಅದನ್ನು ಚರ್ಚಿಸಿ, ಹಾಗೆ ಮಾಡುವುದಕ್ಕಿಂತ ಸಮನ್ವಯದ ಭಾಷೆಯೊಂದನ್ನು ಬಳಸಲು ನಿರ್ಧರಿಸಿದ್ದು. ಮೂರನೆಯ ಅಂಶಕ್ಕೆ ಉದಾಹರಣೆಯೆಂದರೆ, ಪರಿಷ್ಕರಣೆ ಮಾಡುವಾಗ ಸಮಿತಿಯು ಸಾಕಷ್ಟು ಚರ್ಚಿಸಿ ಅವುಗಳನ್ನು ದಾಖಲಿಸಿದ್ದು. ಉದಾಹರಣೆಗೆ, ‘ಆದಿಯಲ್ಲಿ ವಾಕ್ಯವಿತ್ತು’ (ಇನ್ ದ ಬಿಗಿನಿಂಗ್ ವಾಸ್ ದ ವರ್ಡ್) ಎನ್ನುವ ವಾಕ್ಯದಲ್ಲಿರುವ ‘ವರ್ಡ್’ ಪದಕ್ಕೆ ‘ವಾಕ್ಯ’ ಎನ್ನುವ ಅನುವಾದವು ಸೂಕ್ತವಲ್ಲ; ಅದನ್ನು ‘ವಾಕ್ಕು’ ಎಂದು ಪರಿಷ್ಕರಿಸಬೇಕು, ವೇದಗಳಲ್ಲಿಯೂ ‘ವಾಕ್ಕು’ ಎನ್ನುವ ಪದ ಇದಕ್ಕೆ ಸಂವಾದಿಯಾದ ಅರ್ಥವನ್ನು ಕೊಡುತ್ತದೆ ಎಂದು ಕಿಟೆಲ್ ವಾದಿಸಿದ್ದರಂತೆ. ಆದರೆ ಇಲ್ಲಿ ‘ವಾಕ್ಯ’ ಎನ್ನುವುದನ್ನೇ ಉಳಿಸಿಕೊಳ್ಳಲಾಯಿತು. ‘ದ ವರ್ಡ್ ವಾಸ್ ಮೇಡ್ ಫ್ಲೆಶ್’ ಎನ್ನುವ ವಾಕ್ಯದಲ್ಲಿರುವ ‘ಫ್ಲೆಶ್’ – ಗ್ರೀಕ್ ಪದ ‘ಸಾರ್ಕ್್ಸ’ – ಎನ್ನುವುದಕ್ಕೆ, ಕನ್ನಡದಲ್ಲಿ ಮೊದಲು ಬೈಬಲ್ ಅನುವಾದವನ್ನು ಸಿದ್ಧಪಡಿಸಿದ ಲಂಡನ್ ಮಿಷನಿನ ರೆ. ಜಾನ್ ಹ್ಯಾಂಡ್ಸ್ ‘ಮನುಷ್ಯತ್ವವನ್ನು ಧರಿಸಿಕೊಂಡು’ ಎಂದು ಅನುವಾದಿಸಿದ್ದ. ನಂತರ ಪರಿಷ್ಕರಣೆ ಮಾಡುವಾಗ ಅದನ್ನು ‘ಮಾಂಸ’ ಎಂದು ತಿದ್ದಲಾಯಿತು. ಇದನ್ನು ಅಂತಿಮಗೊಳಿಸುವ ಮುನ್ನ ಮಿಷನರಿ ವಿದ್ವಾಂಸರು ಸೂಚಿಸಿದ ಪರ್ಯಾಯ ಪದಗಳು – ಶರೀರ, ನರ ಭಾವ, ದೇಹ, ವಿಷಯ ಲಂಪಟತ್ವ, ಪ್ರಪಂಚ ಜಡಭಾವ -ಇವುಗಳು.

    ನಾಲ್ಕನೆಯ ಅಂಶ – ಅನುವಾದದ ಭಾಷೆಯ ಪದಗಳು ತಮ್ಮದೇ ಆದ ಸಾಂಸ್ಕೃತಿಕ ಅರ್ಥಭಾರವನ್ನು ಹೊತ್ತುಕೊಂಡಿರುತ್ತವೆ ಎನ್ನುವ ಅರಿವು ಮಿಷನರಿಗಳಿಗೆ ಇತ್ತು. ಅದಕ್ಕಾಗಿ ಅವರು ಸಂಸ್ಕೃತ ಪದಗಳನ್ನು ಆದಷ್ಟು ಕಡಿಮೆ ಬಳಸಬೇಕು ಎಂದು ನಿರ್ಧರಿಸಿಕೊಂಡಿದ್ದರು. ಅವರು ಕೆಲವು ಪದಗಳಿಗೆ ಹೊಸ ಅರ್ಥಗಳನ್ನು ನೀಡಿದರು – ಉದಾಹರಣೆಗೆ, ‘ಪ್ರಸಂಗ’, ‘ಒಡಂಬಡಿಕೆ’ ಇತ್ಯಾದಿ ಪದಗಳು. ‘ವೇದ’ ‘ಕ್ರೈಸ್ತ ವೇದ’ ಇತ್ಯಾದಿ ಪದಗಳನ್ನು ಬಳಸುವುದರಿಂದ ಕ್ರೈಸ್ತ ಮತದ ಶ್ರೇಷ್ಠತೆಯನ್ನು ಸಾಧಿಸಲು ಕಷ್ಟವಾಗಬಹುದು ಎನ್ನುವ ಅರಿವು ಪರಿಷ್ಕರಣೆಗಳ ಕಾಲಕ್ಕೆ ಮಿಷನರಿ ವಿದ್ವಾಂಸರಿಗೆ ಉಂಟಾಗಿತ್ತು.

           (ಸಶೇಷ)

    ಟಿಪ್ಪಣಿ – ೧

    ಸೌಗಂಧಿಕಾ ಪರಿಣಯದ ಗದ್ಯಕ್ಕೆ ಉದಾಹರಣೆ:

    ಸೌಗಂಧಿಕಾ ಪರಿಣಯ ಎಂಟನೆಯ ಆಶ್ವಾಸ ಪ್ರಾರಂಭ

    ಅನಂತರದಲ್ಲಿ ಸುಗಂಧರಾಜಕುಮಾರನ ಯುವರಾಜ್ಯಾಭಿಷೇಕವಂ ನೋಡಬೇಕೆಂದು ಕುತೂಹಲದಿಂದ ಬರುವನೋ ಎಂಬಂತೆ ಸೂರ್ಯನು ಉದಯಿಸಲು ಸುಚರಿತ್ರರಾಯನು ನಿರೂಪಿಸಿದ ಪರಿಯಾಗಿ ಮಂತ್ರಿಯಾದ ಸುಬುದ್ಧಿಯು ಸುಗಂಧರಾಜಕುಮಾರನ ಯುವ ರಾಜ್ಯಾಭಿಷೇಕಕ್ಕೆ ಉಪಯುಕ್ತಂಗಳಾದ ಸಮಸ್ತ ವಸ್ತು ಮುಸ್ತೈದುಗಳಂ ಸನ್ನದುಗಳಂ ಸನ್ನಹಿಸಿಕೊಂಡು ಅಂತಃಪುರದ ಬಾಗಿಲೊಳ್ ಬಂದು ನಿಂತು ಮಂಜುವಾಣಿಯ ಮುಖದಿಂದ ರಾಯಂಗೆ ತಾನು ಬಂದಿರುವ ಅವಶ್ಯ ಕಾರ್ಯವಂ ಬಿನ್ನೈಸಲು ರಾಯನು ಮಣಿಮಂಚದಿಂದ ಯೆದ್ದು ಶುಭವಸ್ತುಗಳಂ ನೋಡುತ ಬರುತ್ತಿರಲಾಗ ಸುಬುದ್ಧಿಯು ಸಾಷ್ಟಾಂಗ ಪ್ರಣಾಮವಂಗೈದು ಬಿನ್ನೈಸಿದ ಪರಿಯೆಂತೆಂದರೆ ಎಲೈ ಮಹಾರಾಜನೆ ನಿನ್ನ ಅಪ್ಪಣೆ ಮೇರೆಗೆ ಸುಗಂಧರಾಜಕುಮಾರಂಗೆ ಚಿಕ್ಕರಾಯಪಟ್ಟವಂ ಕಟ್ಟುವದಕ್ಕೆ ಸಕಲ ವಸ್ತು ಮುಸ್ತೈದುಗಳಂ ಸನ್ನಹಿಸಿ ಪುರೋಹಿತ ಮೊದಲಾದ ಸಕಲ ವಿದ್ವಜ್ಜನಂಗಳಂ ಸಾಮಾಜಿಕರಂ ಸಹ ಕಾದುಯಿರುವಂತೆ ನಿಯಮಿಸಿ ಇದೇನೆಂದು ಬಿನ್ನೈಸಲಾ ಮಾತಂ ಕೇಳಿ ರಾಯನು ಸ್ನಾನಾಹ್ನಿಕಗಳನ್ನೆರವೇರಿಸಿ ಅತಿ ಸಂಭ್ರಮದಿಂದ ಸುಗಂಧರಾಜಕುಮಾರಂಗೆ ಮಂಗಳ ಸ್ನಾನವಂಗೈಯಿಸಿ ಅಪರಿಮಿತಂಗಳಾದ ಅಮೂಲ್ಯ ವಸ್ತ್ರಾಭರಣಂಗಳಿಂದ ಅಲಂಕರಿಸಿ ಪಣೆಯೊಳ್ ಕಸ್ತೂರಿ ತಿಲಕವನ್ನಿಟ್ಟು ಮುತ್ತಿನ ಹಸೆಯೊಳ್ ಕುಳ್ಳಿರಿಸಿ ಆರತಿಯಂ ಬೆಳಗಿಸಿ ನವರತ್ನದ ಸೇಸೆಯನ್ನಿಟ್ಟು ಸಮಸ್ತ ಮಂತ್ರಿಗಳಿಂದಲೂ ಸೇನಾಪತಿಗಳಿಂದಲೂ ಸಕಲ ಸಾಮಂತರಾಜ ಮಂಡಲಿಗಳಿಂದಲೂ ಸಾಮಾಜಿಕರಿಂದಲೂ ಮತ್ತೂ ಸಮಸ್ತ ವಿದ್ಯಾವಿಶಾರದರಾದ ವಿದ್ವಜ್ಜನಗಳಿಂದಲೂ ಕೇಳುವರ ಕಿವಿಗಿಂಪಾಗಿ ಕೊರಳು ಬೆರಳುಗಳು ಒಂದಾಗಿ ಕಾಲಂಗಳು ತಿಳಿದು ಶ್ರುತಿಗಳಂ ಬಿಡದೆ ಘನನಯ ದೇಶೀಯ ರಾಗಂಗಳವರ್ಜ್ಯಾವರ್ಜ್ಯಂಗಳಂ

    ಅರಿತು ರಂಜನೆಯಾಗಿ ವೀಣಾವಾದನೆಯಂಗೈಯುವ ವೈಣಿಕ ಶಿರೋಮಣಿಗಳಿಂದಲೂ ಮತ್ತಂ ವಾರೆನೋಟದ ವೈಯ್ಯಾರಗಳಿಂದ ವಿಟರಂ ಒಲಿಸಿ ವಸ್ತç ಮೊದಲಾದ ಓಡವೆಗಳಂಗೊಂಡು ಮತ್ತೂ ಕಂಡೂ ಕಾಣದಂತಿರುವ ಕುಚಂಗಳಿಂದ ತಮ್ಮ ಹೃದಯ ಕಾಠಿನ್ಯವಂ ಮುಂಗುರುಳುಗಳಿಂದ ಕೌಟಿಲ್ಯವಂ ನೇತ್ರಂಗಳಿಂ ಚಾಂಚಲ್ಯವಂ ಕೂಡಾ ಅಭಿನಯವಂಗೈಯುತಲಿರುವ ವಾರನಾರಿಯರಿಂದಲೂ ರಮಣೀಯಂಗಳಾದ ಬಿರುದು ಗದ್ಯಪದ್ಯಗಳಂ ಪೇಳಿ ಕೈವಾರಿಸುವ ವಂದಿಮಾಗಧರಿಂದಲೂ ಒಡಗೂಡಿ ಕುಮಾರನ ಕೈಪಿಡಿದು ಕರೆತಂದು ಅನೇಕ ವಾದ್ಯಧ್ವನಿಗಳಿಂದ ಪರಿಶೋಭಿತಮಾದ ನವರತ್ನಮಯವಾದ ಆಸ್ಥಾನಮಂಟಪದೊಳ್ ದೇದೀಪ್ಯಮಾನವಾದ ಮಾಣಿಕ್ಯಮಯವಾದ ಸಿಂಹಾಸನವನ್ನೇರಿ ಬಲಭಾಗದೊಳ್ ಸಿದ್ದವಿಟ್ಟಿರುವ ಮಣಿಮಯಪೀಠದಲ್ಲಿ ಸುಗಂಧರಾಜಕುಮಾರನಂ ಕುಳ್ಳಿರಿಸಿ ಶಿರಸ್ಸಿನಲ್ಲಿ ನವರತ್ನಮಯವಾದ ಕಿರೀಟವನ್ನಿಟ್ಟು ಯೌವರಾಜ್ಯಾಭಿಷೇಕವಂ ಗೈದು ಚಿಕ್ಕರಾಜ ಪಟ್ಟಕ್ಕೆ ಯೋಗ್ಯವಾದ ಮುದ್ರೆಯುಂಗುರವಂ ಕೊಟ್ಟು ಸಮಸ್ತ ಶತ್ರುರಾಯರಂ ಜಯಿಸಿ ದಿಗ್ವಿಜಯವಂ ಪಡೆಯೆಂದು ಹರಸಿ ಹಸ್ತದೊಳ್ ವೀರಕಂಕಣವಂ ಕಟ್ಟಿ, ಸುಬುದ್ದಿಯ ಮಗನಾದ ಸುಮತಿಗೆ ಯೌವರಾಜ್ಯದ ಮಂತ್ರಿತನವಂ ನಿಯಮಿಸಿ ಸೇನಾಪತಿಯಾದ ವೀರಸೇನನಂ ಕರದು ಎಲೆ ವೀರಸೇನನೆ ಈ ಶುಭ ದಿವಸದೊಳ್ ಸುಗಂಧರಾಜಕುಮಾರನು ದಿಗ್ವಿಜಯಾರ್ಥವಾಗಿ ತೆರಳುವದರಿಂದ ಈತನ ಛಾಯಾನುಗುಣ್ಯವಾಗಿ ನಡೆದುಕೊಂಡು ಸಂಗಡಲೇ ಇರುವದೆಂದು ಆಜ್ಞಾಪಿಸಿ ಕುಮಾರನೊಡಗೂಡಿ ಗಜಾರೋಹಣವಂಗೈದು ಸೇನಾಸಮೇತನಾಗಿ ಸುಬುದ್ದಿ ವೀರಸೇನರರ‍್ವರೂ ಹಿಂಭಾಗದೊಳ್ ಕುಳಿತು ಚಾಮರವಂ ಬೀಸುತ್ತಿರಲು ಮಹಾರಾಜ ವೈಭವದಿಂದ ಪಟ್ಟದರಸಿ ಮೊದಲಾದ ಕಾಂತೆಯರ ಸಮೂಹವು ಸಕಲ ವೈಭವದಿಂದ ಪಟ್ಟಣದ ಪುರೋಭಾಗದಲ್ಲಿರುವ ಕಟಕವಂ ಕುರಿತು ಬರಲೀ ಎಂದು ನಿರೂಪಿಸಿ ಪುರದ ರಾಜಬೀದಿಗಳಲ್ಲಿ ಪ್ರದಕ್ಷಿಣಾಕಾರವಾಗಿ ಬಂದು ಕಟಕವ ಪ್ರವೇಶಿಸಿ ಉಪರ‍್ವತಗಳಿಂದ ಪರಿವೃತಮಾದಹಿಮವತ್ಪರ್ವತದಂತೆ ಶುಭ್ರಮಾದ ಉನ್ನತಮಾದ ಸೈನಿಕರ ಗುಡಾರದ ಮಧ್ಯದೊಳ್ ಪೊಳೆವ ಬಿಡಾರವಂನೈದಿ ಪತ್ನಿಪುತ್ರಾದಿ ಆಪ್ತ ಬಂಧು ಜನಸಮೇತನಾಗಿ ಮಧುರಮಾದ ಮೃಷ್ಟಾನ್ನ ಭೋಜನಂಗೈದು ಮುತ್ತಿನ ಬಲೆಗಳಿಂದಯುಕ್ತವಾದ ರತ್ನಸ್ತಂಭದಿಂದ ವಿರಾಜಿತಮಾದ ಪೀತಾಂಬರಮಯವಾದ ಗುಡಾರದ ಮುಂಭಾಗದ ಚಪ್ಪರದೊಳ್…….

           (ಸೌಗಂಧಿಕಾ ಪರಿಣಯ)

    ಟಿಪ್ಪಣಿ

    ಮುದ್ರಾಮಂಜೂಷ (೧೮೨೩) ಗದ್ಯ ಭಾಷೆ:

    ದ್ವಿತೀಯಾಶಯ ಪ್ರಾರಂಭವು.

    ಚಂದ್ರಗುಪ್ತ ಬಂಧವಿಮೋಚನೆ.

    ಅನಂತರದೊಳ್ ರ‍್ವಾರ‍್ಥಸಿದ್ಧಿರಾಜಂ ಕೆಲವು ಕಾಲದ ಮೇಲೆ ಪ್ರವರ‍್ಧಮಾನನೂ ಪ್ರಿಯಪತ್ನೀಪುತ್ರನೂ ಆದ ಮರ‍್ಯನಿಗೆ ಸಕಲ ವಿದ್ಯಾಭ್ಯಾಸಮಂ ಮಾಡಿಸಿದ ಮೇಲೆ ಪ್ರಬುದ್ಧನಾಗಿ ವಿನಯಾದಿಗುಣಸಂಪನ್ನನಾದಾತಂಗೆ ಅನೇಕ ಕನ್ಯಾರತ್ನಗಳಂ ಮದುವೆಯಂ ಮಾಡಿಸಿ ಸಿಂಹಾಸನಾರೋಹಣವೊಂದನ್ನುಳಿದು ಇತರ ರ‍್ವಾಧಿಕಾರಂಗಳ ವಿಚಾರಮಂ ಮಾಡುವಂತೆ ನೇಮಿಸಲು ಆ ಮರ‍್ಯನು ಪ್ರಜಾನಿಕರಕ್ಕೆ ಸಮ್ಮತವಾಗಿ ವೃದ್ಧ ಮಂತ್ರಿಗಳ ಪುತ್ರರಿಗೆ ಬುದ್ಧಿಯಂ ಪೇಳುತ್ತ ಸರ್ವರಿಗೂ ಯಥಾಯೋಗ್ಯಮಾದ ಅಧಿಕಾರಂಗಳಂ ನೇಮಿಸಿ ಅವರಿಂದ ಆಗುವ ಕರ‍್ಯನರ‍್ವಾಹಮಂ ಸಮಯಾನುಸಾರವಾಗಿ ತಿಳಿಯುತ್ತ ಪರಂಪರೆಯಿಂದ ಶೂರರಾಗಿ ಬಂದವರೂ ತನಗೆ ಸಮಾನ ವಯಸ್ಕರೂ ಆದ ಸಿಂಹಬಲ, ಬಾಗುರಾಯಣ, ಭದ್ರಭಟ, ಡಿಂಗಿರಾತ, ಬಲಗುಪ್ತ, ವಿಜಯರ‍್ಮ, ಲೋಹಿತಾಕ್ಷ, ಪುರುಷದತ್ತರೆಂಬ ಜನಗಳಿಗೆ ಸೇನಾಧಿಪತ್ಯವಂ ನೇಮಿಸಿ ಅವರನ್ನು ಹಗೆಗಳ ಪಾಳೆಯದ ಮೇಲೆ ಕಳುಹಿಸುತ್ತ ಪರ‍್ವ್ವ ಸಂಚಿತ ಧನವನ್ನಪೇಕ್ಷಿಸದೆ ಪುಷ್ಟರಾದ ಪ್ರಜೆಗಳಿಂದ ಬಹು ಧನಗಳನ್ನರ‍್ಜಿಸಿ ಅವುಗಳನ್ನು ರಾಜ್ಯ ತಂತ್ರದ ವೆಚ್ಚಕ್ಕೆ ಒದಗಿಸುತ್ತ ತಂದೆಗೆ ಆಯಾಸವಿಲ್ಲದಂತೆ ರಾಜ್ಯವಿಚಾರವಂ ಮಾಡುತ್ತ ನಂದರಂ ಕಂಡರೆ ಸ್ವಾಮಿ ಭಕ್ತಿಯಿಂದ ನಡೆಯುತ್ತ ರಾಕ್ಷಸನಿಗೂ ಸಮ್ಮತನಾಗಿ ಇರಲು ಆ ರಾಯಂ ಕೆಲವು ಕಾಲದ ಮೇಲೆ ಪಟ್ಟಮಹಿಷೀ ಪುತ್ರರಾದ ನವನಂದರು ಪ್ರರ‍್ಧಮಾನರಾದುದಂ ನೋಡಿ ಅವರನ್ನಮಾತ್ಯರಾಕ್ಷಸನ ವಶವಂ ಮಾಡಲು ಆತನು ಆ ನಂದರಿಗೆ ಸಕಲ ವಿದ್ಯಾಭ್ಯಾಸವಂ ಮಾಡಿಸಿ ವಿವಾಹಕ್ಕೆ ಯೋಗ್ಯವಯಸ್ಕರಾದುದಂ ನೋಡಿ ಅವರವರ ಇಚ್ಛಾನುಸಾರವಾಗಿ ಯಥೋಚಿತ ರಾಜಕುಲ ಕನ್ಯಾರತ್ನಗಳನ್ನು ಮದುವೇ ಮಾಡಿಸಿದನು.

    ಆ ಬಳಿಕ ಪ್ರಿಯಪತ್ನಿಪುತ್ರನಾದ ಮರ‍್ಯನಿಗೆ ತನ್ನ ಬಹು ಪತ್ನಿಯರಲ್ಲಿ ಚಂದ್ರಗುಪ್ತ ಮೊದಲಾದ ನೂರು ಮಂದಿ ಮಕ್ಕಳು ಹುಟ್ಟಿದರು”. (ಮುದ್ರಾಮಂಜೂಷ. ಬರೆದುದು ೧೮೨೩. ಮುದ್ರಣ: ೧೮೭೧. ಸಂಪಾದಕ: ೧೮೭೧ರಲ್ಲಿ ರೆ. ಫಾ. ಜೆ. ಸ್ಟೀವನ್ಸನ್).

    ಈ ಕೃತಿಯನ್ನು ವೆಸ್ಲಿಯನ್ ಮಿಷನರಿ ಅರ್ಧ ಶತಮಾನದ ನಂತರ, ಕನ್ನಡ ಗದ್ಯದಲ್ಲಿ ಕೊಮ, ಪೂರ್ಣವಿರಾಮಗಳನ್ನು ಮತ್ತು ಪಾರ ವಿಂಗಡಣೆಗಳನ್ನು ಮಾಡುವ ಪರಿಪಾಠ ಪ್ರಾರಂಭವಾದ ನಂತರ ಸಂಪಾದಿಸಿ – ಬಹುಶಃ ಈ ಕೃತಿಗೂ ಅವುಗಳನ್ನೆಲ್ಲ ಅಳವಡಿಸಿ ವಾಚನೀಯತೆಯನ್ನು ಹೆಚ್ಚಿಸಿ – ಮುದ್ರಿಸಿದ್ದಾನೆ. ಆದುದರಿಂದ ಮೂಲದಲ್ಲಿ ಹೇಗಿತ್ತು ಎನ್ನುವುದನ್ನು ಹಸ್ತಪ್ರತಿ ಪರಿಶೀಲನೆಯ ನಂತರವಷ್ಟೇ ತಿಳಿಯಬಹುದು. ಇಲ್ಲಿ ಪಾರ ವಿಂಗಡಣೆ, ಹಲವು ಹೆಸರುಗಳು ಬಂದಾಗ ಪ್ರತಿಯೊಂದು ಹೆಸರಿನ ನಂತರ ಕೊಮ ಹಾಕುವ ಪದ್ಧತಿ ಕನ್ನಡದಲ್ಲಿ ಇರಲಿಲ್ಲ ಎನ್ನುವುದಕ್ಕೆ ಎರಡೇ ವರ್ಷಗಳ ಹಿಂದೆ ಅದೇ ಆಸ್ಥಾನದಲ್ಲಿ ರಚಿತವಾದ ‘ಸೌಗಂಧಿಕಾ ಪರಿಣಯ’ ಕೃತಿಯೇ ಸಾಕ್ಷಿಯಾಗಿದೆ.

    ಟಿಪ್ಪಣಿ

    ಮಿಷನರಿ ಪಠ್ಯ ಪುಸ್ತಕಗಳಲ್ಲಿ ಕೊಮ, ಉದ್ಧರಣ

    ಚಿಹ್ನೆಗಳು ಮತ್ತು ಪೂರ್ಣ ವಿರಾಮಗಳ ಬಳಕೆಗೆ ಒಂದು ಉದಾಹರಣೆ:

    ಅಡಕ್ಕಿ ಸುಬ್ಬರಾಯ ಎಂಬವರಿಂದ ಮಿಷನರಿ ಶಿಕ್ಷಣತಜ್ಞರು ‘Selection of Stories’ (೧೮೪೬) ಎಂಬ ಪುಸ್ತಕವನ್ನು ಪೂರಕ ಪಠ್ಯವಾಗಿ ಬರೆಯಿಸಿದರು. ಕನ್ನಡ ವಾಕ್ಯರಚನೆ ಮತ್ತು ಮಾತಿನ ಸರಣಿಗಳನ್ನು ರೂಢಿಸಿ ಕೊಳ್ಳುವ ದೃಷ್ಟಿಯಿಂದ ಪೋರ್ಟ್ ಸೇಂಟ್ ಜಾರ್ಜ್ ಕಾಲೇಜಿನವರಿಗಾಗಿ ಈ ಗ್ರಂಥವನ್ನು ರಚಿಸಿದ್ದಾಗಿತ್ತು. ಇದನ್ನು ಮಿಷನರಿ ವಿದ್ವಾಂಸ ಎಲಿಯಟ್ ಎಂಬವರು ಪರಿಷ್ಕರಿಸಿದ್ದಾರೆ. ಹಾವನೂರರು ಕೊಟ್ಟಿರುವ ಈ ಪುಸ್ತಕದ ಕತೆಗಳಲ್ಲಿರುವ ಗದ್ಯದ ಮಾದರಿ ಹೀಗಿದೆ: “ಒಬ್ಬ ಅರಸು ಒಬ್ಬ ಋಷಿಯನ್ನು ಕಂಡು, “ನೀನು ಯಾವಾಗಾದರೂ ಅ ನನ್ನ ನೆನಸುವದು ಉಂಟೊ” ಎಂತ ಕೇಳಿದನು. “ಹವುದಪ್ಪ, ನಾನು ದೇವರನ್ನು ಮರೆತಾಗ ನಿನ್ನ ನೆನಸುತ್ತೇನೆ” ಎಂತ ಋಷಿ ಉತ್ತರ ಕೊಟ್ಟನು.

    ೨. ಒಂದು ಹದ್ದೂ ಒಂದು ಕಾಗಿಯೂ ಸುಡುಗಾಡಿನಲ್ಲಿ ವೊಂದು ಮರದ ಮೇಲೆ ಕೂತುಕೊಂಡು ಮಾತನಾಡುತ್ತಾ ಯಿರುವಾಗ ಆ ಹದ್ದು ಕಾಗಿಯಂನು ನೋಡಿ ಇಲ್ಲಿಗೆ ಮನುಷ್ಯರ ಹೆಣಗಳು ಆ ವೂರಿಂದ ಮುಂಚಿನ ಹಾಂಗೆ ಹೇರಾಳವಾಗಿ ಯಾತಕ್ಕೆ ಬರುವುದಿಲ್ಲ” ಎಂದು ಕೇಳಿತು. “ಈ ವೂರಲ್ಲಿ ಇದ್ದ ವೈದ್ಯನು ಕೆಲವು ದಿವಸಕ್ಕೆ ಮುಂಚೆ ದೂರ ದೇಶಕ್ಕೆ ಹೊರಟುಹೋದನು. ಆ ಅವನು ತಿರಿಗೀ ಬಂದರೆ ಹೆಣಗಳಿಗೆ ಕಡಮೆಯಿರದು” ಯೆಂಬುದಾಗಿ ಕಾಗಿ ಉತ್ತರಾ ಕೊಟ್ಟಿತು.

    ಟಿಪ್ಪಣಿ

    ಈರಾರು ಪತ್ರಿಕೆಯ ಗದ್ಯ ಶೈಲಿಗೆ ಉದಾಹರಣೆ:

    ಪತ್ರಿಕೆ: ಶ್ರೀ ರಾಜಮಾನ್ಯರಾಜಶ್ರೀ ದೇವಪುರದಲ್ಲಿರುವ ಭಾವ ಆನಂದಯ್ಯನವರ ಪಾದಕ್ಕೆ

    ಕೃಷ್ಣಾಪುರದ ನಿಮ್ಮ ರಾಮಚಂದ್ರಯ್ಯನು ಮಾಡುವ ಸಾಷ್ಟಾಂಗ ಬಿನ್ನಹ. ಅದಾಗಿ, ಈ ಸಾಧಾರಣ ಸಂವತ್ಸರದ ಶ್ರಾವಣ ಶುದ್ಧ ೧೪ ಆದಿತ್ಯವಾರ ರಾತ್ರಿ ನಾಲ್ಕುಗಳಿಗೆವರೆಗೆ ಇಲ್ಲಿ ಎಲ್ಲರೂ ಜೀವಂತರಾಗಿದ್ದಾರೆ. ನಿಮ್ಮ ಯೋಗಕ್ಷೇಮವನ್ನು ಆಗಾಗ್ಗೆ ಬರದು ಕಳುಹಿಸುವಂತೆ ಮಾಡಿಸಬೇಕು. ಸಾಂಪ್ರತ,

    ಈ ದಿವಸದ ಬೆಳಿಗ್ಯೆ ನಾನು ಬರದ ಕಾಗದವನ್ನು ಟಪ್ಪಾಲಿಗೆ ಕೊಟ್ಟ ಮೇಲೆ, ನೀವು ಗುರುವಾರ ದಿವಸ ಬರದ ಕಾಗದ ಬಂದು ಮುಟ್ಟಿತು. ಆ ಕಾಗದದ ಅಭಿಪ್ರಾಯಕ್ಕೆ ಉತ್ತರವಾಗಿ ಬಹಳ ವಿವರಿಸುವದಕ್ಕೆ ಕಾರಣವಿಲ್ಲ. ಈಗ ನಿಮಗೆ ಮನಸ್ಸು ಬಂದ ಹಾಗೆ ಅತ್ಯಾಸಕ್ತಿಯಿಂದ ಬರಿಯುತ್ತೀರಿ. ಇದರ ವಿಷಯ ನಾನು ತರ್ಕಿಸಿದರೆ, ಒಂದಕ್ಕೊಂದು ಹೆಚ್ಚುವದೇ ಹೊರ್ತು ಕಡಿಮೆಯಾಗದು. ನಾವಿಬ್ಬರೂ ಬಾಲ್ಯದಲ್ಲಿ ಕೃಷ್ಣನನ್ನು ನಂಬಿ, ದೇವಸ್ಥಾನದಲ್ಲಿರುವ ಕರಿ ಶಿಲೆಯಲ್ಲಿ ಜೀವ ಉಂಟೆಂದು ವಿಶ್ವಾಸಿಸಿ, ಕೃಷ್ಣನ ಕಥೆಗಳೆಲ್ಲಾ ಸತ್ಯವೆಂದು ನಿಶ್ಚಯಿಸಿ, ಬಣಜಿಗ ಹುಡುಗರ ಸಂಗಡ ಜಗಳವಾಡಿದೆವಲ್ಲ? ಮತ್ತೆ ಬುದ್ಧಿ ಬಂದ ಮೇಲೆ, ಅದೆಲ್ಲಾ ಸುಳ್ಳೆಂದು ತಿಳಿದುಕೊಂಡೆವಲ್ಲ? ಅದೇ ಪ್ರಕಾರ ಈಗ ನಿಮಗೆ ಹೊಸ ಬಾಲ್ಯವು ಬಂದದೆ. ಅದರಿಂದ ಕೃಷ್ಣನನ್ನು ಬಿಟ್ಟು, ಕ್ರಿಸ್ತನನ್ನು ನಂಬುತ್ತೀರಿ. ಈ ವಿಷಯವಾದ ತರ್ಕಕ್ಕೋಸ್ಕರ ಈ ಕಾಗದವನ್ನು ನಾನು ಬರೆಯುವವನಲ್ಲ. ಈ ಸಾಯಂಕಾಲದಲ್ಲಿ ಇಲ್ಲಿ ನಡದ ವರ್ತಮಾನವನ್ನು ತಿಳಿಸುವದಕ್ಕೆ ಬರೆಯುತ್ತೇನೆ.

    ನಾನು ಈ ದಿವಸ ೪ ಗಂಟೆ ವೇಳೆಯಲ್ಲಿ ವಿದ್ವಾಂಸ ವೆಂಕಟಾಚಾರ್ಯರ ಮನೆಗೆ ಈ ಸಂಗತಿಯ ವಿಷಯ ಮಾತಾಡುವದಕ್ಕಾಗಿ ಹೋಗಿ, ಮಾತನಾಡಿ ಮನಹ ಮನೆಗೆ ಬರುತ್ತಾ ಇರುವಲ್ಲಿ, ಇಸ್ಕೂಲ್ ಮೇಸ್ತ್ರೀರು ನನ್ನನ್ನು ಮನೆಗೆ ಕರದರು. ನಾನು ಮನೆಯೊಳಗೆ ಹೋದಾಗ, ಅವರು ಸ್ವಲ್ಪ ಸಾರಾಯ ಉಳಿದಿರುವ ಸೀಸೆ ಇಟ್ಟು ಇದ್ದ ಮೇಜಿನ ಬಳಿಯ ಕುಳಿತುಕೊಂಡಿದ್ದರು. ಅವರ ಮುಖವು ಒಂದು ಪ್ರಕಾರ ಕಾಣಿಸುತ್ತಾ ಇತ್ತು. ನನ್ನನ್ನು ಕೂತುಕೋ ಎಂದು ಹೇಳಿ – ಆನಂದಯ್ಯನ ವರ್ತಮಾನವು ನನಗೆ ತಿಳಿದದೆ. ನಿಮಗೆ ಬಂದ ದುಃಖದ ಸಲವಾಗಿ ನನಗೂ ವ್ಯಸನ ಅದೆ. ಅವನಿಗೆ ಈ ಭ್ರಮೆ ಹಿಡಿದದ್ದಕ್ಕೆ ನಾನು ಬಹಳ ಆಶ್ಚರ್ಯವಾಗುತ್ತೇನೆಂದು ತೇಕುತ್ತಾ ಹೇಳಿದರು. ನಾನು ಹೌದು, ನಮಗೆ ಬಹಳ ಚಿಂತೆ ಬಂತೆಂದು ಹೇಳಲು, ಅವರು – ನಿಮ್ಮ ಭಾವನು ದುಷ್ಟನೆಂದು ಬಹಳ ದಿವಸದಿಂದ ನಾನು ತಿಳಿದಿದ್ದೇನೆ. ೧ ಅವನು ಬಹಳ ಗರ್ವಿಷ್ಠನು; ಸಾಲೆಯಲ್ಲಿ ತರ್ಕಿಸುತ್ತಿದ್ದನು. ನಾನು ಹೇಳಿದ ಜ್ಞಾನೋಪದೇಶದಲ್ಲಿ ಅವನಿಗೆ ರುಚಿ ಹುಟ್ಟಲಿಲ್ಲ; ಹುಟ್ಟಿದರೆ ಇಂಥಾ ಮೂರ್ಖ ಕೆಲಸ ಮಾಡುತ್ತಿದ್ದಿಲ್ಲ. ಜ್ಞಾನವಿಲ್ಲದವರಲ್ಲಿ ನಂಬಿಕೆ ಹುಟ್ಟುವುದು ವಾಡಿಕೆ; ಜ್ಞಾನವಂತನಿಗೆ ತಿಳುವಿಕೆಯೇ ಮುಖ್ಯ. ನಾನು ಕ್ರೈಸ್ತಮತದವನಲ್ಲವೋ? ವಿದ್ವಾಂಸರು ಬರದ ಪುಸ್ತಕಗಳನ್ನೆಲ್ಲ ನಾನು ಓದಿರಲಿಲ್ಲವೋ? ಬೈಬಲಿನಲ್ಲಿರುವ ಜ್ಞಾನದ ಮಾತುಗಳೆಲ್ಲಾ ಒಳ್ಳೇದು; ಉಳಿದ ಆಶ್ಚರ್ಯವೆಲ್ಲಾ ಬರೀ ಸಿಪ್ಪೆ. ದೇವರಿಗೆ ಪಕ್ಷ ಪರಪಕ್ಷಗಳಿಲ್ಲ. ಹಿಂದೂ ಮನುಷ್ಯನಾಗಲಿ, ಮುಸಲ್ಮಾನನಾಗಲಿ, ಕ್ರೈಸ್ತನಾಗಲಿ, ನೀತಿವಂತನೇ ದೇವರಿಗೆ ಹಿತನು. ಎಲ್ಲಾ ಮತಗಳಲ್ಲಿಯೂ ಬಹಿರಂಗದ ಆಚರಣೆಗಳೂ ಸುಳ್ಳು ನಂಬಿಕೆಗಳೂ ಪ್ರಬಲವಾಗಿವೆ. ಸಜ್ಜನರಾದ ಜ್ಞಾನಿಗಳಿಗೆಲ್ಲಾ ಒಂದೇ ಮಾರ್ಗವು. ಒಂದು ಮತವನ್ನು ಬಿಟ್ಟು ಮತ್ತೊಂದು ಮತದಲ್ಲಿ ಸೇರುವುದು ಯಾಕೆ? ಹನಿಗೆ ಹೆದರಿ ಹೊಳೆಯಲ್ಲಿ, ಚಳಿ ತಾಳಲಾರದೆ ಉರಿಯಲ್ಲಿ ಬೀಳಬೇಕೋ? ‘ನಿಮ್ಮ ಆನಂದಯ್ಯನಿಗೆ – ನನ್ನ ಹತ್ತರ ಬಂದು, ನನ್ನಿಂದ ಉಪದೇಶ ತೆಗದುಕೊಳ್ಳಬೇಕೆಂದು ಹೇಳಿರಿ’ ಎಂದು ಸೀಸೆಯಲ್ಲಿ ಉಳಿದಿದ್ದ ಸಾರಾಯವನ್ನು ಪಾನಪಾತ್ರದಲ್ಲಿ ಹೊಯಿದು ಒಂದೇ ಗುಟುಕಾಗಿ ಕುಡಿದುಬಿಟ್ಟರು. ಅಷ್ಟರಲ್ಲಿ ನಮ್ಮ ಮನೇ ಆಳು ತಿಪ್ಪನು ಬಂದು ನಿಮ್ಮನ್ನು – ಕರೆಯಲಿಕ್ಕೆ ದೊರೆಯವರ ಕಡೆಯಿಂದ ಪ್ಯಾದೆ ಬಂದಿದ್ದಾನೆಂದು ಹೇಳಿದನು. ಆಗ ನಾನು ಅಲ್ಲಿಂದ ಹೊರಟು ದೊರೆಯವರ ಬಳಿಗೆ ಹೋದೆನು. ಅವರು ಅಸ್ತಮಾನಕಾಲದಲ್ಲಿ ಕೈಸಾಲೆಯಲ್ಲಿ ನಡೆದಾಡುತ್ತಿದ್ದರು. ನಾನು ಸಲಾಂ ಮಾಡಿದಾಗ, ಹತ್ತಿರ ಇದ್ದ ಚಾಕರರನ್ನು ದೂರ ಹೋಗಿರಿ ಎಂದು ಇಷಾರೆ ಮಾಡಿ, ನನ್ನನ್ನು ಹತ್ತಿರ ಕರೆದು – ಈ ವರ್ತಮಾನವೇನು? ಆನಂದಯ್ಯನ ವಿದ್ಯಮಾನ ಏನು? ನಿಜವಾಗಿ ಎಲ್ಲಾ ಹೇಳೆಂದು ಅಪ್ಪಣೆ ಕೊಟ್ಟರು….” (ಈರಾರು ಪತ್ರಿಕೆ, ೧೮೪೮)

    ಟಿಪ್ಪಣಿ

    ೧. “ಬೈಬಲಿನ ಕನ್ನಡ ಗದ್ಯರೂಪವು ಕನ್ನಡ ಭಾಷಾ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆಯೆನ್ನುವುದರಲ್ಲಿ ಸಂದೇಹವಿಲ್ಲ. ಮುಂದಿನ ಗದ್ಯ ರಚನೆಯ ಮೇಲೆ ಪ್ರಭಾವವನ್ನು ಬೀರುವ ಒಂದು ಅವಕಾಶವೂ ಒದಗಿ ಬಂದಿದ್ದಿತು. ಆದರೆ ಅದರ ಜೊತೆಗೇ, ಕನ್ನಡ ಪುರಾಣ ಕಥನಗಳ ಗದ್ಯವು ಕಳೆದ ಶತಮಾನದಲ್ಲಿ ಬೆಳೆದು ಬಂದಿತು. ಮತ್ತು ದೇಶೀಯರ ಸಾಹಿತ್ಯಿಕ ಕಾರ್ಯವು ಮುಂದುವರಿದು ಸಂಸ್ಕೃತದ ಹೆಚ್ಚಳವಿರುವ ಗದ್ಯ ಶೈಲಿಯು ರೂಪುಗೊಂಡು ಅದರದೇ ಮೇಲುಗೈಯಾಯಿತು. ಆ ವಿಕಾಸ ಕ್ರಮದಲ್ಲಿ ಬೈಬಲ್ ಗದ್ಯದ ಪ್ರಭಾವವು ಕನ್ನಡ ಗದ್ಯದ ಮೇಲೆ ಸ್ವಲ್ಪ ಮಟ್ಟಿಗೆ ಮಾತ್ರವೆ ತೋರಿಬಂದಿತು” – ಡಾ. ಶ್ರೀನಿವಾಸ ಹಾವನೂರ, ೧೯೭೪.

    ೨.“ಆದರೆ ಹತ್ತೊಂಬತ್ತನೆಯ ಶತಮಾನದಲ್ಲಿ ರೂಪುಗೊಂಡ ಪುರಾಣ ಪುರಾಣಕಥನ ರೂಪದ ಆಲಂಕಾರಿಕ ಕನ್ನಡ ಗದ್ಯದ ಮೇಲೆ ಬೈಬಲ್ ಗದ್ಯ ಅಷ್ಟಾದ ಪರಿಣಾಮ ಬೀರಲಿಲ್ಲ.” – ಎ.ವಿ. ನಾವಡ, ೨೦೧೭).

    ಕನ್ನಡದಲ್ಲಿ ಅನ್ಯ ಭಾಷೆಗಳ ಕಥನ ಸಾಹಿತ್ಯ

  • ಬೇಲಿಹಾಕಿದ ಜಾಗದೊಳಗೆ ಎಎಸ್ ತಂಡವು ವೈಜ್ಞಾನಿಕ ಸರ್ವೆಯನ್ನು ಆರಂಭಿಸಿತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಉತ್ಖನನ ಮಾಡುವಂತಿರಲಿಲ್ಲ. ಪ್ರಕರಣದ ಎರಡೂ ಪಕ್ಷದವರ ಎದುರು ಸರ್ವೆ ನಡೆಯಿತು. ಜಿಲ್ಲಾಡಳಿತವು ತಂಡಕ್ಕೆ ಹೆಚ್ಚುವರಿ ರಕ್ಷಣೆಯನ್ನು ನೀಡಿತು. ಪ್ರಕರಣವು ಸೂಕ್ಷ್ಮವಾದ ಕಾರಣ ಎಎಸ್ ಸಮೀಕ್ಷೆಗೆ ವ್ಯಾಪಕ ಪ್ರಚಾರ ಲಭಿಸಿತು. ತಂಡಕ್ಕೆ ಅದರ ಒತ್ತಡ ಇತ್ತು. ಆಗ ನ್ಯಾಯಾಲಯ ತಂಡದ ದೈನಂದಿನ ಕೆಲಸದ ಬಗ್ಗೆ ಯಾವುದೇ ವರದಿ ಬೇಡವೆಂದು ಮಾಧ್ಯಮಗಳಿಗೆ ಸೂಚನೆ ನೀಡಿತು. ಉತ್ಖನನ ಬೇಡ; ಮೇಲಿನ ಸಮೀಕ್ಷೆ ಸಾಕೆಂದು ನ್ಯಾಯಾಲಯ ಹೇಳಿದ ಕಾರಣ ಕೆಲಸ ವಿಳಂಬವಾಯಿತು. ಎಲ್ಲ ಕಡೆ ಕಸ ಮತ್ತು ಕಟ್ಟಡದ ಅವಶೇಷಗಳು ತುಂಬಿದ್ದವು. ಅದರಿಂದಾಗಿ ಸರಿಯಾಗಿ ಪರಿಶೀಲಿಸಿ ಉತ್ತಮ ಫಲಿತಾಂಶ ಪಡೆಯಲು ಕಷ್ಟವಾಯಿತು. ಜಿಲ್ಲಾಡಳಿತದ ಸಹಕಾರದೊಂದಿಗೆ ಕಸಗಳನ್ನು ಬದಿಗೆ ಸರಿಸುವ ಕಾರ್ಯ ನಡೆಯಿತು. ಕಸದ ವಿಲೇವಾರಿ ಕೂಡ ಸಮಸ್ಯೆಯೇ ಆಯಿತು.

    ಅಯೋಧ್ಯೆಯಲ್ಲಿ ಭಾರತ ಸರ್ಕಾರ, ಉತ್ತರಪ್ರದೇಶ ಸರ್ಕಾರ ಮತ್ತು ದೇಶದ ಜನತೆಯದ್ದು ಬಹುದೊಡ್ಡ ಸಾಧನೆ. ಜನರ ಭಾವುಕತೆಗೆ ಗುರಿಯಾಗಿ ಆಕ್ರೋಶ, ಅಶಾಂತಿಗಳಿಗೆ ಕಾರಣವಾಗಬಹುದಾದ ಧಾರ್ಮಿಕ ವಿವಾದವನ್ನು ನ್ಯಾಯಾಲಯದ ಮೂಲಕವೇ ಪರಿಹರಿಸಿ, ಆ ಸ್ಥಳದಲ್ಲಿ ಭವ್ಯಮಂದಿರವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿರುವುದು ಯಾವ ಕಾರಣಕ್ಕೂ ಸಣ್ಣ ವಿಷಯವಲ್ಲ. ಅದರೊಂದಿಗೇ ನಡೆದದ್ದು ಹಿಂದುಗಳ ಪವಿತ್ರ ಸ್ಥಳ ವಾರಾಣಸಿ ಅಥವಾ ಕಾಶಿಯ ಶ್ರೀ ವಿಶ್ವನಾಥಮಂದಿರ ಮತ್ತು ಅಲ್ಲಿಯ ಕಾರಿಡಾರ್‌ಗಳ ಪುನರ್ನಿರ್ಮಾಣ. ಇಷ್ಟಾಗುವಾಗ ವಿಶ್ವನಾಥಮಂದಿರಕ್ಕೆ ತಾಗಿಕೊಂಡಿರುವ ಗ್ಯಾನವಾಪಿ(ಜ್ಞಾನವಾಪಿ) ಮಸೀದಿಯು ಹಿಂದೂ ಭಕ್ತರನ್ನು ಇನ್ನಷ್ಟು ಕೆಣಕಿತೆಂದರೆ ತಪ್ಪಲ್ಲ. ಆ ಸಂಬಂಧವಾಗಿ ವಾದ-ವಿವಾದಗಳು, ನ್ಯಾಯಾಲಯದಲ್ಲಿ ದಾವೆಗಳು ನಡೆಯುತ್ತಲೇ ಇವೆ.

    ಅಂತಹ ಒಂದು ದಾವೆಗೆ ಸಂಬಂಧಿಸಿ ವಾರಾಣಸಿ ಜಿಲ್ಲಾ ನ್ಯಾಯಾಲಯವು ಜುಲೈ ೨೧, ೨೦೨೩ರಂದು ಪುರಾತತ್ತ್ವ ಇಲಾಖೆಗೆ (ಪ್ರಾಚ್ಯವಸ್ತು ಸಂಶೋಧನ ಸಂಸ್ಥೆ) ಒಂದು ಆದೇಶವನ್ನು ನೀಡಿತು. ಇದು ಅಂಜುಮಾನ್ ಇಂತೆ ಜಾಮಿಯಾ ಮಸೀದಿ, ವಾರಾಣಸಿ ಮತ್ತು ರಾಖಿಸಿಂಗ್ ಹಾಗೂ ಇತರರ ದಾವೆ. ತನ್ನ ತೀರ್ಪಿನಲ್ಲಿ ನ್ಯಾಯಾಲಯ ವಿವಾದಿತ ಸ್ಥಳ(ಪ್ಲಾಟ್ ನಂಬರ್ ೯೧೩೦)ದಲ್ಲಿ ವೈಜ್ಞಾನಿಕ ಶೋಧ/ಸರ್ವೆ/ಉತ್ಖನನ ನಡೆಸಲು ಆದೇಶ ನೀಡಿತು. ಜೊತೆಗೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಈ ಬೀಗಮುದ್ರೆ (ಸೀಲ್) ಹಾಕಿದ ಜಾಗವನ್ನು ಈ ಸರ್ವೆಯಿಂದ ಹೊರತುಪಡಿಸಬೇಕು ಎಂದು ಸೂಚಿಸಿತು.

    ಸರ್ವೆ ಆರಂಭ

    ಮರುದಿನವೇ ಪುರಾತತ್ತ್ವ ಇಲಾಖೆಯ (ಆರ್ಕಿಯೊಲಾಜಿಕಲ್ ಸರ್ವೆ ಆಫ್ ಇಂಡಿಯ-ಎಎಸ್‌ಐ) ವೈಜ್ಞಾನಿಕ ಸರ್ವೆ ಆರಂಭವಾಯಿತು. ಅಂಜುಮಾನ್ ಇಂತೆ ಜಾಮಿಯಾ ಮಸೀದಿ ಆಡಳಿತ ಸಮಿತಿಯು ಅದರ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿತು. ಅದೇ ದಿನ ಆದೇಶ ನೀಡಿದ ನ್ಯಾಯಾಲಯ ಎರಡು ದಿನ ಯಥಾಸ್ಥಿತಿಯನ್ನು ಕಾಪಾಡಬೇಕು; ಸ್ಥಳದಲ್ಲಿ ಏನನ್ನೂ ಮಾಡಬಾರದೆಂದು ಸೂಚಿಸಿತು. ಸುಪ್ರೀಂಕೋರ್ಟ್ ಸೂಚನೆಯಂತೆ ಮಸೀದಿ ಸಮಿತಿ ಸಂವಿಧಾನದ ೨೨೭ನೇ ವಿಧಿಯ ಪ್ರಕಾರ ಅಲಹಾಬಾದ್ ಹೈಕೋರ್ಟಿನಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿತು; ಆದರೆ ಹೈಕೋರ್ಟ್ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು; ಆಗಸ್ಟ್ ೪ರಂದು ಸರ್ವೆ ಆರಂಭವಾಯಿತು.

    ಆಗ ಮಸೀದಿ ಸಮಿತಿಯು ಮತ್ತೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ ವಿಶೇಷ ಮೇಲ್ಮನವಿ ಅರ್ಜಿಯ ಮೂಲಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿತು. ಆಗ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯಿತು. ಆದರೆ ವಿವಾದಿತ ಸ್ಥಳದಲ್ಲಿ ಯಾವುದೇ ಉತ್ಖನನ ನಡೆಸಬಾರದು; ಕಟ್ಟಡಕ್ಕೆ ಯಾವುದೇ ಹಾನಿಯಾಗಬಾರದು; ಆ ಬಗ್ಗೆ ಎಎಸ್‌ಐ ಅಫಿದವಿತ್ ಸಲ್ಲಿಸಬೇಕು ಎಂದು ಸೂಚಿಸಿತು.

    ಸರ್ವೆಗೆ ಎಎಸ್‌ಐ ನಾಲ್ಕು ವಾರ ಕೇಳಿದಾಗ ನ್ಯಾಯಾಲಯ ಸೆಪ್ಟೆಂಬರ್ ೨, ೨೦೨೩ರ ವರೆಗೆ ಸಮಯ ನೀಡಿತು. ಎಎಸ್‌ಐ ಮತ್ತೆ ಎಂಟು ವಾರ ಕಾಲಾವಕಾಶ ಕೇಳಿತು; ಮತ್ತು ನ್ಯಾಯಾಲಯ ನಾಲ್ಕು ವಾರ ನೀಡಿತು. ನಡುವೆ ಮಳೆ ಸುರಿದ ಕಾರಣ ಕೆಲಸಕ್ಕೆ ತೊಂದರೆಯಾಗಿ ಮತ್ತೆ ನಾಲ್ಕು ವಾರ ಕೇಳಲಾಯಿತು. ನ್ಯಾಯಾಲಯ ಅದಕ್ಕೊಪ್ಪಿ ನವೆಂಬರ್ ೩ರವರೆಗೆ ಸಮಯ ನೀಡಿತು.

    ಮಾಧ್ಯಮಗಳಲ್ಲಿ ಕೆಲವು ಊಹಾಪೋಹ, ತಪ್ಪು ವರದಿಗಳು ಪ್ರಕಟವಾಗಿ ವಿವಾದ ಉಂಟಾದಾಗ ನ್ಯಾಯಾಲಯ ಸರ್ವೆ ಬಗ್ಗೆ ಎಎಸ್‌ಐ ಅಧಿಕಾರಿಗಳು ಯಾವುದೇ ಮಾಹಿತಿ ನೀಡಬಾರದೆಂದು ಸೂಚಿಸಿತು. ಮಾಧ್ಯಮಗಳಿಗೆ ಕೂಡ ಅನಧಿಕೃತ ಸುದ್ದಿ ಪ್ರಕಟಿಸಬಾರದೆಂದು ಸೂಚಿಸಿತು. ಶೋಧದ ವೇಳೆ ಸಿಕ್ಕಿದ ವಿವಿಧ ವಸ್ತು, ಉಪಕರಣಗಳನ್ನು ಸುರಕ್ಷಿತವಾಗಿ ಇಡಬೇಕೆಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದಾಗ ಆ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿ ವ್ಯವಸ್ಥಿತವಾಗಿ ಇಡುವಂತೆ ಸೂಚಿಸಲಾಯಿತು.

    ಅಡಚಣೆಗಳು

    ಬೇಲಿಹಾಕಿದ ಜಾಗದೊಳಗೆ ಎಎಸ್‌ಐ ತಂಡವು ವೈಜ್ಞಾನಿಕ ಸರ್ವೆಯನ್ನು ಆರಂಭಿಸಿತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಉತ್ಖನನ ಮಾಡುವಂತಿರಲಿಲ್ಲ. ಪ್ರಕರಣದ ಎರಡೂ ಪಕ್ಷದವರ ಎದುರು ಸರ್ವೆ ನಡೆಯಿತು. ಜಿಲ್ಲಾಡಳಿತವು ತಂಡಕ್ಕೆ ಹೆಚ್ಚುವರಿ ರಕ್ಷಣೆಯನ್ನು ನೀಡಿತು. ಪ್ರಕರಣವು ಸೂಕ್ಷö್ಮವಾದ ಕಾರಣ ಎಎಸ್‌ಐ ಸಮೀಕ್ಷೆಗೆ ವ್ಯಾಪಕ ಪ್ರಚಾರ ಲಭಿಸಿತು. ತಂಡಕ್ಕೆ ಅದರ ಒತ್ತಡ ಇತ್ತು. ಆಗ ತಂಡದ ದೈನಂದಿನ ಕೆಲಸದ ಬಗ್ಗೆ ಯಾವುದೇ ವರದಿ ಬೇಡವೆಂದು ಮಾಧ್ಯಮಗಳಿಗೆ ನ್ಯಾಯಾಲಯ ಸೂಚನೆ ನೀಡಿತು. ಉತ್ಖನನ ಬೇಡ; ಮೇಲಿನ ಸಮೀಕ್ಷೆ ಸಾಕೆಂದು ನ್ಯಾಯಾಲಯ ಹೇಳಿದ ಕಾರಣ ಕೆಲಸ ವಿಳಂಬವಾಯಿತು. ಎಲ್ಲ ಕಡೆ ಕಸ ಮತ್ತು ಕಟ್ಟಡದ ಅವಶೇಷಗಳು ತುಂಬಿದ್ದವು. ಅದರಿಂದಾಗಿ ಸರಿಯಾಗಿ ಪರಿಶೀಲಿಸಿ ಉತ್ತಮ ಫಲಿತಾಂಶ ಪಡೆಯಲು ಕಷ್ಟವಾಯಿತು. ಜಿಲ್ಲಾಡಳಿತದ ಸಹಕಾರದೊಂದಿಗೆ ಆ ಕಸಗಳನ್ನು ಬದಿಗೆ ಸರಿಸುವ ಕಾರ್ಯ ನಡೆಯಿತು. ಆ ಕಸದ ವಿಲೇವಾರಿ ಕೂಡ ಸಮಸ್ಯೆಯಾಯಿತು. ಬೇಲಿಯೊಳಗಿನ ತೆರೆದ ಜಾಗ ತುಂಬ ಕಡಮೆಯಿದ್ದ ಕಾರಣ ಕಸವನ್ನು ವಿಲೇವಾರಿ ಮಾಡುವುದು ಅಗತ್ಯವಿತ್ತು. ಬೇಲಿಯ ಪೂರ್ವ ಮತ್ತು ಪಶ್ಚಿಮದಲ್ಲಿ ಕಸದ ರಾಶಿಯನ್ನು ಹಾಕುವ ಬಗ್ಗೆ ಜಿಲ್ಲಾಡಳಿತವನ್ನು ಕೇಳಿದಾಗ ಅದರಂತೆ ಜಾಗವನ್ನು ಗುರುತಿಸಿದರು. ಅದರಂತೆ ಕಸ ಹಾಕಿ ಸೆಕ್ಯುರಿಟಿ ವ್ಯವಸ್ಥೆ ಮಾಡಿದರು. ಸೆಕ್ಯುರಿಟಿ ಚೆಕ್‌ಪೋಸ್ಟ್ಗಳನ್ನು ಹಾಕಿದ ಕಾರಣ ಆಚೀಚೆ ಹೋಗಲು ಕಷ್ಟವಾಯಿತು. ವಿವಿಧ ವಸ್ತುಗಳನ್ನು ಸಾಗಿಸುವ ಹೊರೆಯಾಳುಗಳಿಗೂ ಕಿರಿಕಿರಿ ಉಂಟಾಯಿತು. ಎಎಸ್‌ಐ ತಂಡಕ್ಕೆ ಹವಾಮಾನ ತುಂಬ ಪ್ರತಿಕೂಲವಾಗಿತ್ತು. ಹೊರಗೆ ಬಿಸಿಲಾದರೆ, ಒಳಗೆ ತೇವದ (ಆರ್ದ್ರ) ವಾತಾವರಣ. ಅದಕ್ಕೆ ಬೆಳಕು ಬಿಡುವುದು ಇತ್ಯಾದಿ ವ್ಯವಸ್ಥೆ ಮಾಡಿದರು. ಮಂಗಗಳ ಕಿರುಕುಳವಿತ್ತು; ಆಚೀಚೆ ಹೋಗಲು ಅಡ್ಡಿಪಡಿಸುತ್ತಿದ್ದವು. ಕೆಲಸ ಮುಗಿಸಿ ಹೋದ ಕಡೆ ವಸ್ತುಗಳನ್ನು ಹರಡಿ ಚೆಲ್ಲಾಪಿಲ್ಲಿ ಮಾಡಿ ಹೋಗುತ್ತಿದ್ದವು. ಇಷ್ಟೆಲ್ಲ ಇದ್ದರೂ ಎಎಸ್‌ಐ ತಂಡ ಮತ್ತು ತಜ್ಞರು ಅರ್ಪಣಾ ಮನೋಭಾವದಿಂದ ಕೆಲಸ ಮಾಡಿದರು. ವ್ಯವಸ್ಥಿತ ವೈಜ್ಞಾನಿಕ ಸರ್ವೆ ನಡೆಸಿ ಎಲ್ಲವನ್ನೂ ದಾಖಲಿಸಿದ್ದಾಯಿತು.

    ಅಧ್ಯಯನದ ಸ್ಥಳ

    “ವಾರಾಣಸಿ ಗ್ಯಾನವಾಪಿ (ಜ್ಞಾನವಾಪಿ) ಮಸೀದಿಯ ಕಟ್ಟಡವನ್ನು ಹಿಂದೂ ದೇವಾಲಯದ ಮೇಲೆ ಕಟ್ಟಲಾಗಿದೆಯೇ ಎಂದು ಪರಿಶೀಲಿಸಲು ನ್ಯಾಯಾಲಯ ಸೂಚಿಸಿದೆ. ಆದ್ದರಿಂದ ಇಲ್ಲಿ ಹಿಂದಿನ ಕಟ್ಟಡ (pre-existing structure) ಮತ್ತು ಹಾಲಿ ಕಟ್ಟಡ (existing structure) ಎನ್ನುವ ಪದಗಳನ್ನು ಬಳಸಲಾಗಿದೆ” ಎಂದು ಎಎಸ್‌ಐ ವರದಿ ಹೇಳುತ್ತದೆ. “ಬೇಲಿ ಹಾಕಿದ ಸ್ಥಳಕ್ಕೆ ಇಕ್ಕಟ್ಟಾದ ಮತ್ತು ಬ್ಯಾರಿಕೇಡ್ ಇರುವ ಓಣಿಯ ಮೂಲಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ (ಗೇಟ್ ನಂಬರ್ ೪). ಇಡೀ ಪ್ರದೇಶದಲ್ಲಿ ತುಂಬ ಭದ್ರತಾ ಸಿಬ್ಬಂದಿ ಇದ್ದಾರೆ. ಬೇಲಿಯ ಒಳಗಿನ ಜಾಗಕ್ಕೆ ಉತ್ತರದ ಚಿಕ್ಕ ಗೇಟಿನ ಮೂಲಕ ಪ್ರವೇಶವನ್ನು ಕಲ್ಪಿಸಲಾಗಿದೆ. ಸುತ್ತಲಿನ ಸ್ಥಳ ಒಳಗಿನ ಸ್ಥಳಕ್ಕಿಂತ ಸ್ವಲ್ಪ ಎತ್ತರವಿದೆ. ಆದ್ದರಿಂದ ಎರಡು ಮೆಟ್ಟಿಲು ಕೆಳಗಿಳಿಯಬೇಕು. ಕೆಳಗೆ ಇಳಿದಾಗ ಚಿಕ್ಕ ತೆರೆದ (open) ಸ್ಥಳವಿದೆ. ಅಲ್ಲಿ ಉತ್ತರಭಾಗ (north area) ಎನ್ನುವ ಜಾಗವಿದೆ. ಅದರಾಚೆಗೆ ಗುಮ್ಮಟ-೩ ಇದೆ.

    ಈ ಪ್ಲಾಟ್‌ಫಾರ್ಮ್(ಸಮತಟ್ಟಾದ ಜಾಗ)ನ ಆಚೆಗೆ ಇನ್ನೊಂದು ಕಟ್ಟಡವಿದೆ. ಪಶ್ಚಿಮ ಗೋಡೆ ಮತ್ತು ಸ್ಟೀಲ್‌ನ ತಡೆ(steel fence)ಯ ನಡುವೆ ಪಶ್ಚಿಮ ಭಾಗವಿದೆ. ಅಧ್ಯಯನದ ಉದ್ದೇಶದಿಂದ ನಾವು ಅದನ್ನು ಮೂರು ಭಾಗ ಮಾಡಿದೆವು. ಅದರ ಮಧ್ಯದ ಸ್ಥಳ ಪಶ್ಚಿಮ ಚೇಂಬರ್ (ಕೋಣೆ). ತೆರೆದ ಜಾಗದ ಪಶ್ಚಿಮದಲ್ಲಿ ಮೂರು ಗುಮ್ಮಟಗಳಿರುವ ಒಂದು ಕಟ್ಟಡವಿದೆ. ಅದನ್ನು ಶಾಹಿ ಮಸೀದಿ ಎನ್ನುತ್ತಾರೆ. ಇದರ ಉತ್ತರ, ದಕ್ಷಿಣಗಳಲ್ಲಿ ಕಂಬಗಳಿರುವ ವರಾಂಡವಿದೆ. ಇದು ಪೂರ್ವ ಕಾರಿಡಾರ್. ಈ ಕಾರಿಡಾರ್‌ಗಳ ನಡುವೆ ಮೂರು ದೊಡ್ಡ ಹಾಲ್‌ಗಳಿವೆ. ಮಧ್ಯದ ದೊಡ್ಡ ಹಾಲನ್ನು ಸೆಂಟ್ರಲ್ ಹಾಲ್ (ಮಧ್ಯದ ಹಾಲ್) ಎಂದು ಕರೆಯುತ್ತಾರೆ. ಅದರ ಆಚೀಚೆ ಉತ್ತರ ಮತ್ತು ದಕ್ಷಿಣ ಹಾಲ್‌ಗಳು.”

    ಸೆಂಟ್ರಲ್ ಹಾಲ್ ಯಥಾಸ್ಥಿತಿ

    ಸೆಂಟ್ರಲ್ ಹಾಲ್‌ನ ಮೂಲರೂಪವನ್ನು ಉಳಿಸಿಕೊಳ್ಳಲಾಗಿದೆ; ಕೆಲವು ಸಣ್ಣ ಬದಲಾವಣೆಗಳನ್ನು ಮಾತ್ರ ಮಾಡಿಕೊಳ್ಳಲಾಗಿದೆ. ನಾರ್ತ್ಹಾಲ್ ಮತ್ತು ಸೌತ್‌ಹಾಲ್‌ಗಳು ಹಿಂದಿನ ಕಟ್ಟಡದ ವಸ್ತುಗಳಿಂದಲೇ ನಿರ್ಮಾಣಗೊಂಡಿವೆ. ಅದರಿಂದಾಗಿ ಗಾರೆಕೆಲಸ (masonry) ಅಷ್ಟೇನೂ ಚೆನ್ನಾಗಿಲ್ಲ; ನೆಲದ ಮೇಲ್ಮೈಯಲ್ಲಿ ಏರುತಗ್ಗುಗಳಿವೆ. ಎರಡು ಹಾಲ್‌ಗಳ ಒಳಭಾಗವನ್ನು ತೆಳುಪದರದ ಪ್ಲಾಸ್ಟರ್ ಮತ್ತು ಎನಾಮಲ್ ಪೇಂಟ್‌ನ ದಪ್ಪ ಪದರಗಳಿಂದ ಮುಚ್ಚಿದೆ. ಆ ಮೂಲಕ ಈ ಕಲ್ಲುಗಳ (ನಿರ್ಮಾಣಕ್ಕಾಗಿ ಮರುಬಳಕೆ ಮಾಡಿದಂಥವು) ಸುಂದರ ವಿವರ (ಕೆತ್ತನೆ)ಗಳನ್ನು ಮುಚ್ಚಿಹಾಕಲಾಗಿದೆ.

    ಸೆಂಟ್ರಲ್‌ಹಾಲ್‌ನ ಒಳಭಾಗ ಬಹುತೇಕ ಹಿಂದಿನಂತೆಯೇ ಇದೆ. ಅಲಂಕಾರದ ಆರ್ಚ್(ಕಮಾನು)ಗಳ ಕೆಳಭಾಗದ ಆನೆಯ ಕೆತ್ತನೆಗಳನ್ನು ನಾಶ ಮಾಡಲಾಗಿದೆ. ಪಶ್ಚಿಮ ಪ್ರವೇಶದ ಎರಡೂ ಕಡೆಯ ಪ್ಲಾಸ್ಟರ್‌ಗಳನ್ನು ಕ್ವಿಬ್ಲಾ (quibla) ಆಗಿ ಬದಲಿಸಲಾಗಿದೆ; ಮತ್ತು ಯದ್ವಾತದ್ವಾ (ಬೇಕಾಬಿಟ್ಟಿ) ಕತ್ತರಿಸಲಾಗಿದೆ. ಹಿಂದಿನ ಕಟ್ಟಡದ ಉತ್ತರ ಕೋಣೆಯ (ಚೇಂಬರ್) ಪಶ್ಚಿಮದ ಪ್ರವೇಶವನ್ನು ಮುಚ್ಚಲಾಗಿದೆ; ಮತ್ತು ಅದನ್ನು ಮೇಲ್ಮಹಡಿಗೆ (roof) ಹತ್ತುವ ಇಕ್ಕಟ್ಟಾದ ಮೆಟ್ಟಿಲಾಗಿ ಪರಿವರ್ತಿಸಲಾಗಿದೆ – ಎಂದು ವರದಿ ವಿವರಿಸಿದೆ.

    ಹಿಂದಿನ ಕಟ್ಟಡದ ದಕ್ಷಿಣ ಚೇಂಬರ್‌ನ ಪಶ್ಚಿಮ ಪ್ರವೇಶ(ಬಾಗಿಲು)ವನ್ನು ಕೂಡ ಮುಚ್ಚಲಾಗಿದೆ; ಮತ್ತು ಮೇಲ್ಮಹಡಿಗೆ ಹೋಗುವ ಇಕ್ಕಟ್ಟಾದ ಮೆಟ್ಟಿಲಾಗಿ ಬದಲಿಸಲಾಗಿದೆ. ಎಲ್ಲ ಮೂರೂ ಹಾಲ್‌ಗಳಿಗೆ ಗುಮ್ಮಟಗಳಿವೆ. ಅದರಲ್ಲಿ ಮಧ್ಯದ ಗುಮ್ಮಟ ದೊಡ್ಡದು; ಅದರ ಎತ್ತರ ಜಾಸ್ತಿ. ಸೆಂಟ್ರಲ್‌ಹಾಲ್‌ನ ಒಳಗಿನ ಗುಮ್ಮಟ ಮೂಲದಲ್ಲಿ ಇದ್ದುದು (ಒರಿಜಿನಲ್) ಎನಿಸುತ್ತದೆ. ಸೀಲಿಂಗ್‌ನ ಒಳಬದಿಯಲ್ಲಿ ರೇಖಾಗಣಿತದ ವಿನ್ಯಾಸ ಮಾತ್ರ ಮಾಡಿದೆ; ಮಸೀದಿಯ ಮೇಲ್ಭಾಗದಲ್ಲಿ ಎರಡು ಮಿನಾರ್‌ಗಳಿವೆ.

    ಸೆಲ್ಲಾರ್ಗಳು

    ಪ್ರಸ್ತುತ ಜಾಗದ ಪೂರ್ವಭಾಗದಲ್ಲಿ ಇಳಿಜಾರಿದೆ. ಹಿಂದಿನ ಕಟ್ಟಡವನ್ನು ನಿವೇಶನದ ಪಶ್ಚಿಮಭಾಗದಲ್ಲಿ ಕಟ್ಟಲಾಗಿತ್ತು. ಅದನ್ನು ಬದಲಿಸಿ ದೊಡ್ಡ ಪ್ಲಾಟ್‌ಫಾರ್ಮ್ ನಿರ್ಮಿಸುವ ಮೂಲಕ ಪೂರ್ವಭಾಗದಲ್ಲಿ ವಿಸ್ತರಿಸಿದಾಗ ಅದರ ಕೆಳಗೆ ನೆಲಮಾಳಿಗೆ (ಸೆಲ್ಲಾರ್)ಯಲ್ಲಿ ಹಲವು ಕೋಣೆಗಳನ್ನು ಕಟ್ಟಿಸಲಾಯಿತು. ಇದು ಪ್ರಧಾನ ಕಟ್ಟಡದ ನೆಲಮಟ್ಟದಿಂದ ಕೆಳಗಿದೆ (ಲೆವೆಲ್-೧). ಈ ಲೆವೆಲ್‌ನಲ್ಲಿ ನಿರ್ಮಿಸಿದ ಕೋಣೆಗಳು ಪ್ರಧಾನ ಕಟ್ಟಡದ (ಲೆವೆಲ್-೨) ಕೆಳಗೆ ವಿವಿಧ ಕಡೆಗಳಲ್ಲಿವೆ. ಅವುಗಳ ಪ್ರವೇಶದ್ವಾರದ ಪ್ರಕಾರ (ಉತ್ತರ ಮತ್ತು ದಕ್ಷಿಣ) ಅವುಗಳನ್ನು ಎರಡು ದೊಡ್ಡ ಗುಂಪುಗಳಾಗಿ ವಿಭಜಿಸಲಾಗಿದೆ. ಉತ್ತರದ ಎರಡು ಘಟಕ (ಯುನಿಟ್) ಮತ್ತು ದಕ್ಷಿಣದ ಒಂದು ಘಟಕವನ್ನು ತೆರೆದು ಜನ ವಿವಿಧ ಉದ್ದೇಶಗಳಿಗೆ ಬಳಸಿದ್ದಾರೆ. ಉತ್ತರದ ಮೊದಲ ಘಟಕದ ಪ್ರವೇಶವು (ಎಂಟ್ರೆನ್ಸ್) ಈಶಾನ್ಯ ಮೂಲೆಗೆ ಸಮೀಪದಲ್ಲಿದೆ.

    ಕಟ್ಟಡದ ಮೂರು ಹಾಲ್‌ಗಳು ಪರಸ್ಪರ ತಾಗಿಕೊಂಡಿವೆ. ಅವುಗಳನ್ನು ಪೂರ್ವದಿಂದ ಪಶ್ಚಿಮಕ್ಕೆ ಎನ್(ನಾರ್ತ್)-೧, ಎನ್-೨ ಮತ್ತು ಎನ್-೩ ಎಂದು ಕ್ರಮಸಂಖ್ಯೆ ಹಾಕಲಾಗಿದೆ. ಮುಂದಿನ ಸೆಲ್ಲಾರ್‌ಗಳ ಘಟಕ (ಎರಡು ಸೆಲ್ಲಾರ್‌ಗಳು) ಈಗಿನ ಕಟ್ಟಡದ ಕೆಳಗೆ ವಾಯವ್ಯ ಭಾಗದಲ್ಲಿದೆ (ಎನ್-೪, ಎನ್-೫). ಇವು ಈಗಿನ ಸೆಕ್ಯುರಿಟಿ ಠಾಣೆಯ ಹಿಂಭಾಗದಲ್ಲಿವೆ. ದಕ್ಷಿಣದ ಮೂರು ಸೆಲ್ಲಾರ್ (ಕೋಣೆ)ಗಳು ಉತ್ತರದ ಸೆಲ್ಲಾರ್‌ಗಳಿಗೆ ಎದುರುಬದುರಾಗಿವೆ.

    ಉತ್ತರಭಾಗದ ಸೆಲ್ಲಾರ್‌ಗಳಿಗೆ ಸಂಬಂಧಿಸಿದ ಪೂರ್ವಭಾಗದ ನಾಲ್ಕು ಪ್ರವೇಶಗಳನ್ನು ಆಧುನಿಕ ಇಟ್ಟಿಗೆಯಿಂದ ಮುಚ್ಚಲಾಗಿದೆ. ಈ ತಡೆಯು ಎಲ್ಲ ಸೆಲ್ಲಾರ್‌ಗಳ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿದೆ. ಈ ತಡೆಯು ಹೊರಗಿನ ಗೋಡೆಸಾಲಿನಿಂದ ಸ್ವಲ್ಪ ಹಿಂದಕ್ಕಿದೆ. ಅದರಿಂದ ಈ ರಚನೆಯು ನಕಲಿ ರಚನೆಯಂತೆ ತೋರುತ್ತದೆ. ಪಶ್ಚಿಮದ ಗೋಡೆಬದಿಯಲ್ಲಿ ಎನ್-೩ಕ್ಕೆ ಪ್ರವೇಶ ನೀಡುವ ಎಲ್ಲ ನಾಲ್ಕು ದ್ವಾರಗಳು ತೆರೆದಿವೆ. ಎಸ್-೨ರ ಕಡೆಗೆ ಹೋಗುವ ಗೋಡೆಯ ಉದ್ದಕ್ಕೆ ಐದು ಪ್ರವೇಶಗಳಿದ್ದು ಎಲ್ಲವನ್ನೂ ಮುಚ್ಚಲಾಗಿದೆ.

    ಮಾನವನಿರ್ಮಿತ ವಸ್ತುಗಳು

    ಪುರಾತತ್ತ್ವ ಇಲಾಖೆಯು ಜ್ಞಾನವಾಪಿ ಮಸೀದಿ ನಿವೇಶನದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುವಾಗ ಎನ್-೨ರಲ್ಲಿ ಹುಡಿಮಣ್ಣಿನ ರಾಶಿ ಕಾಣಿಸಿತು; ಅದು ಪೂರ್ವದ ಗೋಡೆಯ ಎದುರು ಒಂದನೇ ಮತ್ತು ಎರಡನೇ ದ್ವಾರದ ಬಳಿ ಇತ್ತು. ಆ ಮಣ್ಣನ್ನು ಎತ್ತಿದಾಗ ಬೇರೆಬೇರೆ ಗಾತ್ರದ ಗೋಡೆಗಂಬಗಳು (pilaster) ಕಾಣಿಸಿದವು. ಅವು ನೆಲದ ಮೇಲಿದ್ದ ಅವಶೇಷಗಳ (debris) ಮೇಲಿದ್ದವು. ಈ ಪಿಲಾಸ್ಟರ್‌ಗಳು ಮಧ್ಯಯುಗದ ಕೊನೆಯ ಭಾಗದ್ದಿರಬಹುದು; ಮತ್ತು ಮರಾಠರ ಪೋಷಕತ್ವದಿಂದ ದೇವಾಲಯಗಳ ನಿರ್ಮಾಣ ಚಟುವಟಿಕೆ ಹೆಚ್ಚಾದ ಕಾಲದ್ದಿರಬಹುದು ಎಂದು ಅಂದಾಜಿಸಲಾಗಿದೆ. ಅದಲ್ಲದೆ ಅಲ್ಲಿ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಕೆಲವು ವಸ್ತುಗಳು ಕೂಡ ಕಂಡವು.

    ಶಾಸನಗಳು

    ಉತ್ತರದ ಯುನಿಟ್‌ಗಳಲ್ಲಿ ಹಲವು ಶಾಸನಗಳು (ಕೆತ್ತನೆ) ಕೂಡ ಕಂಡುಬಂದವು. ಪೂರ್ವಸಾಲಿನ ಗಂಟೆಯಾಕಾರದ ಕಂಬದಲ್ಲಿ ದಿನಾಂಕವಿರುವ ಕೆತ್ತನೆಯಿತ್ತು. ಸೀಲಿಂಗ್ ಸ್ಲ್ಯಾಬ್‌ನಲ್ಲಿ ಮತ್ತೆ ಕೆಲವು ಕೆತ್ತನೆಗಳು ಕಾಣಿಸಿದವು. ಪಶ್ಚಿಮ ಗೋಡೆಯ ಎರಡನೇ ಪ್ರವೇಶದ ಲಿಂಟಲ್‌ನಲ್ಲಿ ಇನ್ನೊಂದು ಕೆತ್ತನೆ (ಶಾಸನ) ಕಾಣಿಸಿತು. ಉತ್ತರದ ಗೋಡೆಯ ಬಳಿ ಪ್ರವೇಶದ ಮೇಲ್ಭಾಗದಲ್ಲಿರುವ ಕಲ್ಲಿನ ಚಪ್ಪಡಿಯ ಕೆಳಭಾಗದಲ್ಲಿ ಮತ್ತೊಂದು ಕೆತ್ತನೆ ಕಾಣಿಸಿತು.

    ವಿವಿಧ ಭಾಗದ ಗೋಡೆಗಳಲ್ಲಿ ಅಲಂಕೃತ ವಾಸ್ತುಶಿಲ್ಪದ ಕೆಲವು ತುಂಡುಗಳು ಕಾಣಿಸಿದವು. ಚೈತ್ಯಾಲಯದ ಕಮಾನಿನಂತಹ ಒಂದು ತುಂಡು ಎನ್೩ರ ದಕ್ಷಿಣ ಗೋಡೆಯಲ್ಲಿತ್ತು. ಪ್ರಾಚೀನ ಕಾಲದ ಒಂದು ಅಲಂಕೃತ ಇಟ್ಟಿಗೆ (ವಜ್ರಾಕಾರದ ವಿನ್ಯಾಸದ್ದು) ಪೂರ್ವದ ಗೋಡೆಯ ಒಳಮೈಯಲ್ಲಿತ್ತು.

    ಪ್ರಶ್ನೆಉತ್ತರ

    ವಾರಾಣಸಿ ಜಿಲ್ಲಾ ನ್ಯಾಯಾಲಯದ ಆದೇಶದ ಪ್ರಕಾರ ನಡೆಸಿದ ವೈಜ್ಞಾನಿಕ ಸಮೀಕ್ಷೆಯನ್ನು ಎಎಸ್‌ಐ ಮುಖ್ಯವಾಗಿ ಪ್ರಶ್ನೋತ್ತರ ರೂಪದಲ್ಲಿ ದಾಖಲಿಸಿದೆ. ಅದು ಹೀಗಿದೆ:

    ಎ) ನಿವೇಶನ ಸಂಖ್ಯೆ ೯೧೩೦ರಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಬೀಗಮುದ್ರೆ ಹಾಕಿದ ಸ್ಥಳಕ್ಕೆ ಹೊರತಾದ ಜಾಗದಲ್ಲಿ ವೈಜ್ಞಾನಿಕ ತನಿಖೆ/ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ತ್ವ ಇಲಾಖೆಗೆ (ಎಎಸ್‌ಐ) ಆದೇಶ ನೀಡಲಾಗಿದೆ; ಅಂಜುಮಾನ್ ಇಂತೆ ಜಾಮಿಯಾ ಮಸೀದಿ, ವಾರಾಣಸಿ ಅದರ ಆಡಳಿತ ಸಮಿತಿ ಮತ್ತು ರಾಕೇಶ್‌ಸಿಂಗ್ ಹಾಗೂ ಇತರರ ನಡುವಣ ದಾವೆಯ ಸಂದರ್ಭದಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.

    ಎಎಸ್‌ಐ ಉತ್ತರ: ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಎಎಸ್‌ಐ ಆ ನಿವೇಶನದಲ್ಲಿ ವೈಜ್ಞಾನಿಕ ಸರ್ವೆ ನಡೆಸಿತು. ಸುಪ್ರೀಂಕೋರ್ಟ್ ಆದೇಶದಂತೆ ಬೀಗಮುದ್ರೆ ಹಾಕಿದ ಜಾಗವನ್ನು ಸಮೀಕ್ಷೆಯಿಂದ ಕೈಬಿಡಲಾಗಿತ್ತು. ಅಧ್ಯಯನದ ತಂಡದಲ್ಲಿ ಪುರಾತತ್ತ್ವ ವಿಷಯತಜ್ಞರು, ಶಾಸನತಜ್ಞರು, ರಸಾಯನಶಾಸ್ತ್ರಜ್ಞರು, ಇಂಜಿನಿಯರ್‌ಗಳು, ಸರ್ವೇಯರ್‌ಗಳು, ಛಾಯಾಗ್ರಾಹಕರು, ಎಎಸ್‌ಐ ಅಧಿಕಾರಿಗಳು ಮತ್ತು ಹೈದರಾಬಾದ್‌ನ ರಾಷ್ಟ್ರೀಯ ಭೂಭೌತಿಕ ಸಂಶೋಧನ ಸಂಸ್ಥೆಯ (ಎನ್‌ಜಿಆರ್‌ಐ) ತಜ್ಞರು ಭಾಗವಹಿಸಿದ್ದರು. ಸ್ಥಳದಲ್ಲಿ ಅಂಕಿಅಂಶಗಳನ್ನು ಸಂಗ್ರಹಿಸಿ ಕ್ರಮಬದ್ಧವಾಗಿ ವಿಶ್ಲೇಷಿಸಲಾಯಿತು. ೨೧೫೦ ಚದರ ಮೀಟರ್ ಜಾಗದಲ್ಲಿ ಪ್ರಸ್ತುತ ವೈಜ್ಞಾನಿಕ ಅಧ್ಯಯನವು ನಡೆಯಿತು. ಈಗಿನ ಕಟ್ಟಡದ ಸುತ್ತ ಸ್ಟೀಲ್ ಗ್ರಿಲ್ ಹಾಕಿದ್ದರು. ಬೇಲಿಯ ಕಾರಿಡಾರ್‌ನ ಹೊರಗಿನ ಜಾಗಕ್ಕೆ ಶ್ರೀ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಪ್ರಕಾರ ಬೇಲಿ ಹಾಕಿದ್ದರು. ಆದ್ದರಿಂದ ಮೇಲ್ಮೈ ಅಧ್ಯಯನದ (surface study) ಮೂಲಕ ಏನೂ ತಿಳಿಯುತ್ತಿರಲಿಲ್ಲ.

    ಕೋರ್ಟ್ ಮಾತು ಅಂತಿಮ

    ಸಮೀಕ್ಷಾ ತಂಡವು ರೆಫರೆನ್ಸ್ ಪಾಯಿಂಟ್‌ಗಳನ್ನು ಗುರುತಿಸಿ ಇಡೀ (ಕಟ್ಟಡ) ಸಂಕೀರ್ಣದ ಬಗ್ಗೆ ಒಂದು ಯೋಜನೆಯನ್ನು(plan) ರೂಪಿಸಲಾಯಿತು. ತಜ್ಞರ ವಿವಿಧ ಗುಂಪುಗಳು ನ್ಯಾಯಾಲಯದ ಆದೇಶವನ್ನು ಚಾಚೂ ತಪ್ಪದೆ ವೈಜ್ಞಾನಿಕ ಸಂಶೋಧನೆ ನಡೆಸಿದವು. ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣದ ತೆರೆದ ಜಾಗದಲ್ಲಿ (open area), ಪ್ಲಾಟ್‌ಫಾರ್ಮ್ ಕೆಳಗಿನ ಸೆಲ್ಲಾರ್‌ಗಳಲ್ಲಿ ಮಧ್ಯ(ಸೆಂಟ್ರಲ್), ಉತ್ತರ, ದಕ್ಷಿಣದ ಹಾಲ್‌ಗಳಲ್ಲಿ, ಕಾರಿಡಾರ್‌ಗಳಲ್ಲಿ, ರೂಫ್‌ನಲ್ಲಿ ಗುಮ್ಮಟಗಳ ಕೆಳಗೆ (ಸೀಲಾದ ಜಾಗ ಹೊರತುಪಡಿಸಿ) ಸರ್ವೆ ನಡೆಸಲಾಯಿತು. ಕಾರ್ಯಾಚರಣೆಯ ವೇಳೆ ಕಟ್ಟಡಕ್ಕೆ ಯಾವುದೇ ಹಾನಿ ಆಗದಂತೆ ಎಚ್ಚರವಹಿಸಲಾಯಿತು. ಎರಡೂ ಕಡೆಯ ಪ್ರತಿನಿಧಿಗಳು ಜಿಲ್ಲಾಡಳಿತದವರು, ಭದ್ರತಾ ಸಿಬ್ಬಂದಿ ಮುಂತಾಗಿ ಎಲ್ಲರೂ ಹಾಜರಿದ್ದು, ಉತ್ತಮ ಸಹಕಾರ ನೀಡಿದರು.

    ಬೃಹತ್ ಹಿಂದೂ ದೇವಾಲಯ

    ಬಿ) ಜಿಪಿಆರ್ ಸರ್ವೆ ಮೂಲಕ ಸವಿವರ ವೈಜ್ಞಾನಿಕ ಸಮೀಕ್ಷೆ ನಡೆಸಬೇಕೆಂದು ಎಎಸ್‌ಐಗೆ ಸೂಚಿಸಲಾಗಿದೆ. ವೈಜ್ಞಾನಿಕ ಸಮೀಕ್ಷೆ, ಡೇಟಿಂಗ್ ಮೊದಲಾದ ಆಧುನಿಕ ತಂತ್ರಗಳನ್ನು ಬಳಸಿ, ಈಗ ನಮ್ಮ ಮುಂದಿರುವ ಕಟ್ಟಡವನ್ನು ಹಿಂದೆ ಇದ್ದ ಒಂದು ಹಿಂದೂ ದೇವಾಲಯದ ಕಟ್ಟಡದ ಮೇಲೆ ಕಟ್ಟಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.

    ಉತ್ತರ: ನ್ಯಾಯಾಲಯದ ಸೂಚನೆಯ ಮೇರೆಗೆ ಕಟ್ಟಡವನ್ನು ಯಾವೆಲ್ಲ ಹಂತಗಳಲ್ಲಿ ನಿರ್ಮಿಸಲಾಯಿತೆಂದು ಪರಿಶೀಲಿಸಲಾಯಿತು. ಈಗ ಇರುವ ಕಟ್ಟಡಗಳು, ಅಲ್ಲಿ ದೊರೆತ ಮಾನವನಿರ್ಮಿತ ವಸ್ತುಗಳ ಬಗ್ಗೆ ಅಧ್ಯಯನ ನಡೆಸಲಾಯಿತು. ಅದರ ಆಧಾರದಲ್ಲಿ ತಿಳಿಯುವ ಅಂಶವೆಂದರೆ, ಹಾಲಿ ಕಟ್ಟಡದ ನಿರ್ಮಾಣಕ್ಕೆ ಮುನ್ನ ಅಲ್ಲೊಂದು ಬೃಹತ್ ಹಿಂದೂ ದೇವಾಲಯವಿತ್ತು. ಆ ದೇವಳದ ಮಧ್ಯಭಾಗದಲ್ಲಿ ಒಂದು ದೊಡ್ಡ ಕೊಠಡಿ (ಚೇಂಬರ್) ಇತ್ತು. ಅದರ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮಗಳಲ್ಲಿ ಕನಿಷ್ಠ ಒಂದೊಂದು ಕೊಠಡಿಗಳು ಇದ್ದವೆಂದು ಲಭ್ಯ ಸಾಕ್ಷö್ಯಗಳು ಹೇಳುತ್ತವೆ. ಉತ್ತರ, ದಕ್ಷಿಣ ಮತ್ತು ಪಶ್ಚಿಮದ ಚೇಂಬರ್‌ಗಳ ಅವಶೇಷಗಳನ್ನು ಈಗಲೂ ಕಾಣಬಹುದು. ಆದರೆ ಪೂರ್ವ ಚೇಂಬರ್‌ನ ಅವಶೇಷ ಮತ್ತದರ ವಿಸ್ತರಣೆಯನ್ನು ಭೌತಿಕವಾಗಿ ಖಚಿತಪಡಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಪೂರ್ವದ ಜಾಗದ ಮೇಲೆ ಕಲ್ಲಿನ ನೆಲ (ಫ್ಲೋರಿಂಗ್) ಇರುವ ಗಟ್ಟಿಯಾದ ಪ್ಲಾಟ್‌ಫಾರ್ಮ್ ನಿರ್ಮಿಸಲಾಗಿದೆ.

    ದೇವಾಲಯದ ಮಧ್ಯದ ಕೊಠಡಿಗೆ ಪ್ರವೇಶವು ಪಶ್ಚಿಮದಿಂದ ಇತ್ತು. ಅದನ್ನು ಕಲ್ಲು ಸಹಿತವಾದ ಗಾರೆಕೆಲಸದ ಮೂಲಕ ಮುಚ್ಚಲಾಗಿದೆ. ಪಶ್ಚಿಮದ ಚೇಂಬರ್ ಉತ್ತರದ ಚೇಂಬರ್ ಮತ್ತು ದಕ್ಷಿಣದ ಚೇಂಬರ್ ಜೊತೆ ಸಂಪರ್ಕವನ್ನು ಹೊಂದಿತ್ತು. ಅನುಕ್ರಮವಾಗಿ ಉತ್ತರದಿಂದ ಮತ್ತು ದಕ್ಷಿಣದಿಂದ ಬರುವ ಕಾರಿಡಾರ್ ಮೂಲಕ ಅದು ಸಂಪರ್ಕವನ್ನು ಹೊಂದಿತ್ತು. ಮಧ್ಯದ ಚೇಂಬರ್‌ನ ಮುಖ್ಯಪ್ರವೇಶವು (ದ್ವಾರ) ಪ್ರಾಣಿ-ಪಕ್ಷಿಗಳ ಕೆತ್ತನೆಯ ಮೂಲಕ ಸದಭಿರುಚಿಯಿಂದ ಅಲಂಕೃತವಾಗಿತ್ತು; ಮತ್ತು ಅಲ್ಲಿ ಆಭರಣದಂತಹ ತೋರಣ ಕೂಡ ಇತ್ತು. ಲಲತ್‌ಬಿಂಬದ ಮೇಲೆ ಕೆತ್ತಿದ ಈ ಆಕೃತಿಯನ್ನು ಕತ್ತರಿಸಿ ಹಾಕಿದ್ದಾರೆ. ಅದರ ಹೆಚ್ಚಿನ ಭಾಗವನ್ನು ಕಲ್ಲು, ಇಟ್ಟಿಗೆ, ಹಲಗೆ (ಮಾರ್ಟರ್)ಗಳಿಂದ ಮುಚ್ಚಲಾಗಿದೆ; ಆ ಮೂಲಕ ಪ್ರವೇಶವನ್ನೇ ಮುಚ್ಚಿದಂತಾಗಿದೆ.

    ಔರಂಗಜೇಬನ ಕೃತ್ಯ

    ಬಾಗಿಲಿನ ಅಂಚಿನಲ್ಲಿ ಕೆತ್ತಿದ ಒಂದು ಹಕ್ಕಿಯ ಆಕೃತಿಯ ಅವಶೇಷದ ಒಂದು ಭಾಗವು ಉತ್ತರದಲ್ಲಿ ಉಳಿದುಕೊಂಡಿದ್ದು, ಅದು ಕೋಳಿಯಂತೆ ಕಾಣಿಸುತ್ತದೆ. ಹಾಲಿ ಕಟ್ಟಡದ ದಕ್ಷಿಣದಲ್ಲಿ ನಿರ್ಮಿಸಿದ ನೆಲಮಾಳಿಗೆಯ ಒಂದು ಕೋಣೆಯಲ್ಲಿ ಇರಿಸಿದ ಶಾಸನವು ಮೊಘಲ್ ಚಕ್ರವರ್ತಿ ಔರಂಗಜೇಬ ೧೬೭೬-೭೭ರಲ್ಲಿ ಈ ಮಸೀದಿಯನ್ನು ಕಟ್ಟಿಸಿದನೆಂದು ಹೇಳುತ್ತದೆ. ೧೭೯೨-೯೩ರಲ್ಲಿ ಮಸೀದಿಯ ರಿಪೇರಿ ಮಾಡಲಾಯಿತೆಂದು ಅದೇ ಶಾಸನವು ಹೇಳುತ್ತದೆ. ಇಂದಿನ ಕಟ್ಟಡದ ನೆಲಮಾಳಿಗೆಯ ಕೋಣೆಯಲ್ಲಿ ಇರಿಸಿದ ಶಾಸನದೊಂದಿಗೆ ಎಎಸ್‌ಐ ೧೯೬೫-೬೬ರಲ್ಲಿ ತೆಗೆದ ಪ್ರತಿಯನ್ನು ಹೋಲಿಸಿದಾಗ ಶಾಸನದ ಕೊನೆಯ ಎರಡು ಸಾಲುಗಳನ್ನು ಅಳಿಸಲು ಪ್ರಯತ್ನಿಸಿದ್ದು ಕಂಡುಬರುತ್ತದೆ; ಅದರಲ್ಲಿ ಮಸೀದಿಯ ನಿರ್ಮಾಣ ಮತ್ತು ವಿಸ್ತರಣೆಗಳನ್ನು ಕುರಿತು ಹೇಳಲಾಗಿದೆ.

    ೧೭ನೇ ಶತಮಾನದಲ್ಲಿ ಹಿಂದೆ ಇದ್ದ (ದೇವಾಲಯದ) ಕಟ್ಟಡದಲ್ಲಿ ಬದಲಾವಣೆಗಳನ್ನು ಮಾಡಿ, ಅದರ ಹಲವು ಭಾಗಗಳನ್ನು ಈಗಿನ ಕಟ್ಟಡದಲ್ಲಿ ಬಳಸಿಕೊಳ್ಳಲಾಯಿತು. ಹಿಂದಿನ ಕಟ್ಟಡದಲ್ಲಿ ಕೆತ್ತಿದ್ದ ಪ್ರಾಣಿ-ಪಕ್ಷಿಗಳ ಚಿತ್ರಗಳು ಇವರ ಉದ್ದೇಶಕ್ಕೆ ಹೊಂದಿಕೊಳ್ಳದ ಕಾರಣ ಅವುಗಳನ್ನು ತೆಗೆದುಹಾಕಿದರು (ಅಥವಾ ನಾಶಪಡಿಸಿದರು). ಹಿಂದಿನ ಕಟ್ಟಡದ ಒಂದು ದೊಡ್ಡ ಭಾಗವನ್ನು ಹಾಲಿ ಕಟ್ಟಡದ ಪ್ರಮುಖ ಭಾಗವಾಗಿ ಬಳಸಿಕೊಂಡರು.

    ಮಸೀದಿಯನ್ನು ದೊಡ್ಡದು ಮಾಡುವ ಸಲುವಾಗಿ ಸಹನ್(ಅಂಗಳ) ಮತ್ತು ಕಂಬವಿರುವ ವರಾಂಡ ನಿರ್ಮಿಸಬೇಕಿತ್ತು. ಅದಕ್ಕೆ ಹಿಂದಿನ ದೇವಾಲಯ ಕಂಬ, ಕಿರುಕಂಬ ಮೊದಲಾದ ರಚನೆಗಳನ್ನು ಬೇಕಾದಂತೆ ಬಳಸಿಕೊಂಡರು. ಬದಲಾದ ಬಳಕೆಗೆ ಅನುಗುಣವಾಗಿ ಹಿಂದಿನ ಕಂಬ ಇತ್ಯಾದಿ ರಚನೆಗಳಲ್ಲಿ ಬೇಕಾದ ಬದಲಾವಣೆ ಮಾಡಿಕೊಂಡರು.

    ಮಸೀದಿಗಾಗಿ ಹಿಂದಿನ ಕಟ್ಟಡವನ್ನು ವಿಸ್ತರಿಸುವಾಗ ಪೂರ್ವ, ದಕ್ಷಿಣ ಮತ್ತು ಉತ್ತರಗಳಲ್ಲಿ ನೆಲಮಾಳಿಗೆಯಲ್ಲಿ ಹಲವು ಕೋಣೆಗಳನ್ನು ಕಟ್ಟಿಸಿದರು. ಆ ಮೂಲಕ ಹೆಚ್ಚು ಸ್ಥಳಾವಕಾಶವನ್ನು ಮಾಡಿಕೊಂಡರು. ಮಸೀದಿಯ ಎದುರುಗಡೆ ದೊಡ್ಡ ಪ್ಲಾಟ್‌ಫಾರ್ಮ್ ನಿರ್ಮಿಸಿದರು. ಪ್ರಾರ್ಥನೆಗೆ (ನಮಾಜ್) ಸೇರುವ ದೊಡ್ಡ ಸಂಖ್ಯೆಯ ಜನರಿಗೆ ಜಾಗ ಒದಗಿಸುವುದು ಅದರ ಉದ್ದೇಶವಾಗಿತ್ತು. ಆಗ ಪೂರ್ವಭಾಗದ ಕೋಣೆ(ಚೇಂಬರ್)ಗಳ ಸಾಲನ್ನು ಪ್ಲಾಟ್‌ಫಾರ್ಮ್ಗೆ ಸೇರಿಸಿಕೊಂಡರು. ಉತ್ತರ ಮತ್ತು ದಕ್ಷಿಣದಲ್ಲಿ ಪ್ರವೇಶವಿದ್ದ ಸೆಲ್ಲಾರ್(ಕೋಣೆ)ಗಳ ತೆರೆದ ಕಾರಿಡಾರನ್ನು ಸೇರಿಸಿಕೊಂಡರು; ಅಥವಾ ಬದಲಾಯಿಸಿದರು. ಒಟ್ಟಿನಲ್ಲಿ ವೈಜ್ಞಾನಿಕ ಅಧ್ಯಯನ, ಸಮೀಕ್ಷೆ, ವಾಸ್ತುಶಿಲ್ಪದ ಅವಶೇಷದ ಅಧ್ಯಯನ, ಸಿಕ್ಕಿದ ವಸ್ತುಗಳು, ಶಾಸನ, ಕಲೆ ಮತ್ತು ಶಿಲ್ಪಗಳಿಂದ ತಿಳಿದುಬರುವ ಅಂಶವೆಂದರೆ, ಹಿಂದೆ ಅಲ್ಲೊಂದು ದೊಡ್ಡ ಹಿಂದೂ ದೇವಾಲಯವಿತ್ತೆಂದು.

    ಸಿ) ಕೋರ್ಟ್: ವಾದಿ-ಪ್ರತಿವಾದಿಗಳ ಅಭಿಪ್ರಾಯ ಏನೆಂದು ತಿಳಿದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಇಡೀ ಅಧ್ಯಯನ ಸರ್ವೆಗಳ ಫೋಟೋ, ವಿಡಿಯೋ ತೆಗೆಯಬೇಕು.

    ಉತ್ತರ: ವಾದಿ-ಪ್ರತಿವಾದಿಗಳು, ಅವರ ವಕೀಲರೆಲ್ಲ ಎಎಸ್‌ಐ ನಡೆಸಿದ ವೈಜ್ಞಾನಿಕ ಸಮೀಕ್ಷೆಯ ಚಟುವಟಿಕೆಗಳನ್ನು ಸ್ವತಃ ನೋಡಿದ್ದಾರೆ. ನವೆಂಬರ್ ೨, ೨೦೨೩ರಂದು ಸಮೀಕ್ಷೆಯನ್ನು ಮುಗಿಸಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಲಾಯಿತು. ಈ ಚಟುವಟಿಕೆಗಳ ಫೋಟೋ, ವಿಡಿಯೋಗಳನ್ನು ತೆಗೆಯಲಾಗಿದೆ.

    ಪಶ್ಚಿಮದ ಗೋಡೆ

    ಡಿ) ಈಗ ಇರುವ ಕಟ್ಟಡದ ಪಶ್ಚಿಮದ ಗೋಡೆಯನ್ನು ಯಾವಾಗ ಕಟ್ಟಿಸಲಾಯಿತು, ಯಾವ ರೀತಿಯಲ್ಲಿ ಕಟ್ಟಿಸಿದರು ಎನ್ನುವ ಕುರಿತು ವೈಜ್ಞಾನಿಕ ವಿಧಾನದಿಂದ ಶೋಧಕಾರ್ಯವನ್ನು ನಡೆಸಬೇಕು.

    ಉತ್ತರ: ಪಶ್ಚಿಮದ ಗೋಡೆಯನ್ನು ಕಲ್ಲು ಮತ್ತು ಮೌಲ್ಡಿಂಗ್ (ಗಾರೆ ನಿರ್ಮಾಣ)ನಿಂದ ನಿರ್ಮಿಸಲಾಗಿದೆ; ಅದು ಅಲಂಕೃತ (decorated) ಮೌಲ್ಡಿಂಗ್‌ನಂತೆ ಕಂಡುಬರುತ್ತದೆ. ಅಂದರೆ ಅದು ಹಿಂದೆ ಅಲ್ಲಿದ್ದ ದೇವಾಲಯದ ಒಂದು ಭಾಗವಾಗಿದೆ. ದೇವಾಲಯದ ಮಧ್ಯದ ಹಾಲ್‌ನ ಪಶ್ಚಿಮ ಗೋಡೆ, ಅದರ ಉತ್ತರ-ದಕ್ಷಿಣದ ಎರಡು ಹಾಲ್‌ಗಳ ಭಾಗದಿಂದ ಹಾಲಿ ಕಟ್ಟಡದ ಪಶ್ಚಿಮದ ಗೋಡೆಯು ನಿರ್ಮಾಣಗೊಂಡಿದೆ. ಗೋಡೆಗೆ ತಾಗಿರುವ ಮಧ್ಯದ ಚೇಂಬರನ್ನು ಯಾವುದೇ ಬದಲಾವಣೆಯಿಲ್ಲದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದರೆ ಬದಿಯ ಎರಡು ಚೇಂಬರ್(ಕೋಣೆ)ಗಳಲ್ಲಿ ಹೆಚ್ಚು ಬದಲಾವಣೆಗಳನ್ನು ಮಾಡಲಾಗಿದೆ. ಪಶ್ಚಿಮದಲ್ಲಿದ್ದ ಇನ್ನೊಂದು ಚೇಂಬರ್‌ನ ಅವಶೇಷಗಳು ಈಗಲೂ ಅದಕ್ಕೆ ತಾಗಿಕೊಂಡು ಅಲ್ಲೇ ಇವೆ. ಅದರ ಪ್ರಮುಖ ಭಾಗಗಳನ್ನು ಉಳಿಸಿಕೊಳ್ಳಲಾಗಿದೆ.

    ಎಲ್ಲ ಮೂರು ಹಾಲ್‌ಗಳು ಅಲಂಕೃತ ಕಮಾನಿನ ಪ್ರವೇಶದ್ವಾರದ ಮೂಲಕ ಪಶ್ಚಿಮದ ಕಡೆಗೆ ತೆರೆದುಕೊಂಡಿವೆ (ಓಪನಿಂಗ್ ಇದೆ). ಉತ್ತರ ಮತ್ತು ದಕ್ಷಿಣದ ಹಾಲ್‌ಗಳ ಕಮಾನುಸಹಿತ ದ್ವಾರಗಳನ್ನು ಮುಚ್ಚಿ ಮೇಲ್ಮಹಡಿಗೆ (ರೂಫ್) ಹೋಗುವ ಮೆಟ್ಟಿಲಾಗಿ ಪರಿವರ್ತಿಸಲಾಗಿದೆ. ಉತ್ತರಭಾಗದ ಪ್ರವೇಶದ ಮೆಟ್ಟಿಲುಗಳನ್ನು ಕಲ್ಲಿನ ಗಾರೆ ಬಳಸಿ ಶಾಶ್ವತವಾಗಿ ಮುಚ್ಚಲಾಗಿದೆ; ಆದರೆ ರೂಫ್‌ನಿಂದ ಅಲ್ಲಿಗೆ ಬರಲು ಅವಕಾಶವಿದೆ. ಪಶ್ಚಿಮದ ಚೇಂಬರ್ ಮೂಲಕ ಮಧ್ಯದ ಚೇಂಬರ್‌ಗೆ ಹೋಗುವ ದೊಡ್ಡ ಅಲಂಕೃತ ಪ್ರವೇಶದ್ವಾರವನ್ನು ಕಲ್ಲುಗಾರೆಯಿಂದ ಮುಚ್ಚಲಾಗಿದೆ. ಒಟ್ಟಿನಲ್ಲಿ ಹಿಂದಿನ ಕಟ್ಟಡದ ಬಹಳಷ್ಟು ಭಾಗಗಳನ್ನು ಸೇರಿಸಿ ಪಶ್ಚಿಮಗೋಡೆಯನ್ನು ಕಟ್ಟಲಾಗಿದೆ.

    ಗೋಡೆಯ ಕಾಲ

    ಪಶ್ಚಿಮಗೋಡೆ ಯಾವ ಕಾಲದ್ದೆಂದು ತಿಳಿಯುವ ಸಲುವಾಗಿ ಇಡೀ ಕಟ್ಟಡ ಮತ್ತು ಅದಕ್ಕೆ ತಾಗಿಕೊಂಡಿರುವ ತೆರೆದ (open) ಜಾಗಗಳನ್ನು ವಿವರವಾಗಿ ಪರೀಕ್ಷಿಸಲಾಯಿತು. ನಾವು ಕಟ್ಟಡ ಸಂಕೀರ್ಣಕ್ಕೆ ಹೋಗುತ್ತಲೇ ಪಶ್ಚಿಮಗೋಡೆಯ ಬಹುಭಾಗವನ್ನು ಕಸದ ರಾಶಿ, ಮಣ್ಣು, ಕಟ್ಟಡದ ಅವಶೇಷ(debris) ಮುಂತಾದವುಗಳಿಂದ ಮುಚ್ಚಿದ್ದು ಗಮನಕ್ಕೆ ಬಂತು. ಗೋಡೆಯ ಸ್ವರೂಪವನ್ನು ತಿಳಿಯುವ ಬಗ್ಗೆ ಮತ್ತು ನ್ಯಾಯಾಲಯದ ಆದೇಶವನ್ನು ಪಾಲಿಸುವ ಸಲುವಾಗಿ ಅಲ್ಲಿ ಬಿದ್ದಿದ್ದ ಕಸ ಮಣ್ಣು ಅವಶೇಷಗಳನ್ನು ತೆಗೆಯಬೇಕಾಗಿತ್ತು. ಹೈಕೋರ್ಟ್ ಅಲ್ಲಿ ಉತ್ಖನನ ಮಾಡುವುದು ಬೇಡವೆಂದು ಸೂಚಿಸಿದ್ದ ಕಾರಣ ಏನು ಮಾಡುವುದೆಂದು ಸಹಾಯಕ ಸಾಲಿಸಿಟರ್ ಜನರಲ್ ಅವರಿಂದ ಕಾನೂನು ಸಲಹೆ ಕೇಳಿದೆವು. ನೆಲದ ಮೇಲಿದ್ದ ಕಸ ಮಣ್ಣು ಅವಶೇಷಗಳನ್ನು ತೆಗೆಯಬಹುದೆ ಎಂಬುದು ನಮ್ಮ ಪ್ರಶ್ನೆಯಾಗಿತ್ತು.

    ಅವರ ಸಲಹೆಯ ಮೇರೆಗೆ ಎರಡೂ ಕಡೆಯಿಂದ ವಾದಿ-ಪ್ರತಿವಾದಿಗಳ ಪ್ರತಿನಿಧಿಗಳ ಸಭೆಯನ್ನು ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಯಿತು. ಕಸ ಮಣ್ಣು ತೆಗೆಸಲು ಎಲ್ಲರೂ ಒಪ್ಪಿದರು; ಅದಕ್ಕೆ ಮನೆ ಮತ್ತು ಉದ್ಯಾನಗಳಲ್ಲಿ ಬಳಸುವ ಉಪಕರಣಗಳನ್ನು ಮಾತ್ರ ಬಳಸಿ ತುಂಬ ಎಚ್ಚರಿಕೆಯಿಂದ ಎಲ್ಲವನ್ನೂ ತೆಗೆಯಲಾಯಿತು. ಈಗಿನ ನೆಲದ ಮಟ್ಟದವರೆಗೆ ಜಾಗ ಚೊಕ್ಕವಾಯಿತು; ಅದಕ್ಕೆ ತುಂಬ ಸಮಯ ಹಿಡಿಯಿತು. ಅದನ್ನು ನ್ಯಾಯಾಲಯಕ್ಕೆ ತಿಳಿಸಿ ಸಮಯದ ವಿಸ್ತರಣೆಯನ್ನು ಪಡೆದೆವು.

    ಕಸ-ಕಡ್ಡಿ ಮಣ್ಣು ಅವಶೇಷಗಳನ್ನು ಎತ್ತಿದಾಗ ಪಶ್ಚಿಮ ಗೋಡೆ ಮತ್ತು ಅದಕ್ಕೆ ತಾಗಿದ ಕಟ್ಟಡದ ಭಾಗ ಸರಿಯಾಗಿ ಕಾಣಿಸಿತು. ಅದರ ಬಗ್ಗೆ ಅಧ್ಯಯನ ನಡೆಸಿ ವ್ಯವಸ್ಥಿತವಾಗಿ ದಾಖಲಿಸಲಾಯಿತು. ಗುಂಡಿ ತೋಡಬಾರದೆಂದು ಹೈಕೋರ್ಟ್ ಆದೇಶವಿದ್ದ ಕಾರಣ ನೆಲದ ಮಟ್ಟದಿಂದ ಕೆಳಗೆ ಏನನ್ನೂ ಮಾಡಲಿಲ್ಲ.  ಇಂದಿನ ನೆಲಮಟ್ಟದವರೆಗೆ ಅಧ್ಯಯನವನ್ನು ಸೀಮಿತಗೊಳಿಸಲಾಗಿತ್ತು.

    ಶಿಲಾಶಾಸನಗಳ ಅಪೂರ್ವ ದಾಖಲೆ

    ಕಟ್ಟಡದ ಕಲೆ, ವಾಸ್ತುಶಿಲ್ಪ

    ಯಾವುದೇ ಕಟ್ಟಡದ ಕಲೆ ಮತ್ತು ವಾಸ್ತುಶಿಲ್ಪಗಳು ಅದರ ಕಾಲವನ್ನಷ್ಟೇ ತಿಳಿಸುವುದಿಲ್ಲ. ಬದಲಾಗಿ ಅದರ ಸ್ವರೂಪ(‍feature)ವನ್ನು ಕೂಡ ತಿಳಿಸುತ್ತವೆ. ಪಶ್ಚಿಮ ಚೇಂಬರ್‌ನ ಎರಡೂ ಕಡೆ ಸೆಂಟ್ರಲ್ ಚೇಂಬರ್‌ನ ಕಾಮರಥ ಮತ್ತು ಪ್ರತಿರಥಗಳು ಕಾಣಿಸುತ್ತವೆ. ಪಶ್ಚಿಮ ಚೇಂಬರ್‌ನ ಪೂರ್ವಗೋಡೆಯಲ್ಲಿ ಒಂದು ದೊಡ್ಡ ಸಾಲಂಕೃತ ಪ್ರವೇಶದ್ವಾರ, ಲಲತ್‌ಬಿಂಬ, ಅಲಂಕಾರಕ್ಕೆ ಕೆತ್ತಿದಂತಹ ಪಕ್ಷಿಗಳು ಮತ್ತು ಪ್ರಾಣಿಗಳ ಶಿಲ್ಪ ಹಾಳುಮಾಡಿದ ಆಕೃತಿಗಳು (images), ಅವುಗಳನ್ನು ಒಳಗೊಂಡ ಸಣ್ಣ ಪ್ರವೇಶದ್ವಾರ – ಎಲ್ಲ ಇವೆ. ಇವುಗಳಿಂದ ತಿಳಿಯುವ ಅಂಶವೆಂದರೆ, ಮಸೀದಿಯ ಪಶ್ಚಿಮಗೋಡೆಯು ಹಿಂದಿನ ಹಿಂದೂ ದೇವಾಲಯದ ಭಾಗವಾಗಿತ್ತು.

    ಇ) ಕೋರ್ಟ್: ಮಸೀದಿಯ ಮೂರು ಗುಮ್ಮಟಗಳ ಕೆಳಗೆ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಸರ್ವೆ ನಡೆಸಬೇಕು.

    ಉತ್ತರ: ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಹೈದರಾಬಾದ್‌ನ ರಾಷ್ಟ್ರೀಯ ಭೂಭೌತಿಕ ಸಂಶೋಧನ ಸಂಸ್ಥೆಯ (ಎನ್‌ಜಿಆರ್‌ಐ) ತಜ್ಞರು ಇಂದಿನ ಮಸೀದಿಯ ಕಟ್ಟಡದ ಮೂರು ಗುಮ್ಮಟಗಳ ಕೆಳಗೆ ಜಿಪಿಆರ್ ಸರ್ವೆ ನಡೆಸಿದರು. ಅದರಲ್ಲಿ ಕಟ್ಟಡದ ಹಾಲ್‌ನ ಪ್ರದೇಶದ ದಕ್ಷಿಣ ಕಾರಿಡಾರ್, ದಕ್ಷಿಣದ ಹಾಲ್, ಸೆಂಟ್ರಲ್ ಹಾಲ್, ಪೂರ್ವ ಕಾರಿಡಾರ್, ಉತ್ತರದ ಹಾಲ್ ಮತ್ತು ಉತ್ತರ ಕಾರಿಡಾರ್‌ಗಳು ಸೇರಿವೆ. ಸಂಗ್ರಹಿಸಿದ ಮಾಹಿತಿಗಳ ವಿಶ್ಲೇಷಣೆ ನಡೆಸಿದಾಗ ತಿಳಿದುಬಂದ ಅಂಶವೆಂದರೆ, ಉತ್ತರದ ಹಾಲ್ ಮತ್ತು ಉತ್ತರದ ಕಾರಿಡಾರ್‌ನಲ್ಲಿ ಮೂರು ಪದರ(ಲೇಯರ್)ದ ರಚನೆಗಳಿದ್ದವು. ಅದರಲ್ಲಿ ಒಂದು ಮೀ. ದಪ್ಪದ ಒಂದು ಪದರವಿದ್ದು, ಅದು ಮಧ್ಯ ಮತ್ತು ದಕ್ಷಿಣದ ಹಾಲ್‌ಗಳಲ್ಲಿ ಅರ್ಧ ಮೀಟರ್ ದಪ್ಪವಿದೆ. ೩-ಡಿಪ್ರೊಫೈಲ್ ಮಾಡಿದಾಗ ಲೇಯರ್-೧ರ ದಪ್ಪ ಗೋಡೆಯ ಕಡೆಗೆ ಹೆಚ್ಚಾಗಿರುವುದು ತಿಳಿದುಬಂತು. ಎರಡನೇ ಲೇಯರ್ ಮಧ್ಯದಲ್ಲಿ ಎತ್ತರವಾಗಿದ್ದು ಗುಮ್ಮಟದ ಆಕಾರವನ್ನು ಹೊಂದಿದೆ. ಮತ್ತು ಅದು ಅಂಚಿನ ಕಡೆಗೆ ಸಫೂರ(ತೆಳ್ಳಗೆ)ವಾಗುತ್ತ ಹೋಗಿದೆ; ಅದು ರೇಖಾಗಣಿತದ ಫಿಲ್ ಮೆಟೀರಿಯಲ್‌ನಂತಿದೆ. ಲೇಯರ್-೩ ಸಾಮಾನ್ಯವಾಗಿ ಫೌಂಡೇಶನ್ ಬೆಡ್ (ತಳಪಾಯ) ಆಗಿದೆ. ಮಿನಾರ್‌ಗಳು ಮತ್ತು ಫೌಂಡೇಶನ್ ಗೋಡೆಗಳು ಲೇಯರ್-೩ರ ಮೇಲೆ ನಿಂತಿವೆ.

    ತಳಹಂತದ (ನೆಲಮಾಳಿಗೆ) ಪ್ಲಾಟ್‌ಫಾರ್ಮ್ ಮುಖ್ಯವಾಗಿ ೪, ೫ ಮೀ. ಆಳದಲ್ಲಿದೆ. (ದಕ್ಷಿಣ ಮತ್ತು ಮಧ್ಯದ ಹಾಲ್‌ಗಳ ಕೆಳಗೆ) ಮತ್ತು ಉತ್ತರ ಹಾಲ್‌ನ ಕೆಳಗೆ ಲೇಯರ್‌ನ ತೆಳ್ಳಗಿನ ಭಾಗವಿದೆ. ಉತ್ತರದ ಹಾಲ್‌ನಲ್ಲಿ ಲೇಯರ್-೧ ಮತ್ತು ೨ರ ನಡುವಣ ಸಂಪರ್ಕವು ಅಲ್ಲಲ್ಲಿ ತುಂಡಾಗಿದೆ. ನೆಲವನ್ನು ಆಗಾಗ ರಿಪೇರಿ ಮಾಡಲಾಗಿದೆ. ಅದರಿಂದಾಗಿ ಮೋರ್ಟಾರ್ ಬೆಡ್ ದಪ್ಪವಾಗಿ ಸಂಗ್ರಹವಾಗಿದೆ. ಉತ್ತರದ ಹಾಲ್‌ನ ನೆಲದಲ್ಲಿ ೧-೨ ಮೀ. ಆಳದಲ್ಲಿ ಸಿಂಕ್‌ಹೋಲ್‌ನಂತಹ ಟೊಳ್ಳು ಭಾಗ ಕಾಣಿಸಿತು; ಅದು ಉತ್ತರದ ಬಾಗಿಲಿನ ಬಳಿ ಇತ್ತು. ಮಧ್ಯದ ಹಾಲ್‌ನ ಪ್ಯಾಸೇಜಿಗೆ ತಾಗಿದ ಉತ್ತರದ ಹಾಲ್‌ನಲ್ಲಿ ಒಂದು ಆಳವಾದ ಇಕ್ಕಟ್ಟಾದ ಟೊಳ್ಳು ಕಾಣಿಸಿತು. ದಕ್ಷಿಣ ಭಾಗದ ಬಾಗಿಲಿನ ಬದಿಗೆ ತಾಗಿದಂತೆ ೪-೬ ಮೀ. ಆಳದಲ್ಲಿ ಆಯತಾಕಾರದ ಪ್ಯಾಸೇಜ್ ಇದೆ. ಅದು ಬೇಸ್‌ಮೆಂಟ್ (ತಳಹಂತ) ಮಟ್ಟದಲ್ಲಿದೆ. ಉತ್ತರ ಕಾರಿಡಾರ್‌ನಲ್ಲಿ, ಉತ್ತರ ಹಾಲ್‌ನ ಉತ್ತರದಲ್ಲಿ ಮತ್ತು ಸೆಲ್ಲಾರ್ ಎನ್-೫ರ ಪಶ್ಚಿಮದಲ್ಲಿ ೩ ಮೀ. ಆಳದಲ್ಲಿ ಅಂಥದೇ ಓಪನಿಂಗ್ ಇದೆ.

    ಮತ್ತೆ ಪಶ್ಚಿಮಗೋಡೆ

    ಎಫ್) ಕೋರ್ಟ್: ಪಶ್ಚಿಮಗೋಡೆಯ ಕೆಳಭಾಗದಲ್ಲಿ ಜಿಪಿಆರ್ ಸರ್ವೆ ನಡೆಸಬೇಕು.

    ಉತ್ತರ: ಹಾಲಿ ಕಟ್ಟಡದ ಪಶ್ಚಿಮಗೋಡೆಯ ಉದ್ದಕ್ಕೂ ಹೈದರಾಬಾದ್‌ನ ಎನ್‌ಜಿಆರ್‌ಐ ತಜ್ಞರು ಜಿಪಿಆರ್ ಸರ್ವೆ ನಡೆಸಿದರು. ಪ್ರತಿಯೊಂದು ಹಾಲ್‌ಗೆ ತಾಗಿದಂತೆ ಪಶ್ಚಿಮಗೋಡೆಯ ಪ್ರದೇಶದಲ್ಲಿ ಮೂರು ಪ್ಲಾಟ್‌ಫಾರ್ಮ್ಗಳಿವೆ. ಉತ್ತರದ ಪ್ಲಾಟ್‌ಫಾರ್ಮ್ನಲ್ಲಿ ಎರಡು ಮೀಟರ್ ದಪ್ಪಕ್ಕೆ ಕಸ ಸೇರಿಕೊಂಡಿತ್ತು. ಎರಡನೇ ಸಲ ಜಿಪಿಆರ್ ಮಾಹಿತಿ ಪಡೆಯುವ ಸಲುವಾಗಿ ಅದನ್ನು ಮತ್ತೆ ತೆಗೆಸಲಾಯಿತು. ಅದಲ್ಲದೆ ಪಶ್ಚಿಮ ಗೋಡೆ ಕಡೆಯ ಪ್ಲಾಟ್‌ಫಾರ್ಮ್ಗಳಲ್ಲಿ ಗೋಡೆಗಳ ಅವಶೇಷ ತುಂಬಿತ್ತು. ಅದರ ಚಿತ್ರ (ಇಮೇಜ್) ತೆಗೆಯಲಾಗಿದೆ. ಅದು ಸಬ್‌ಸರ್ಫೇಸ್ ವಿಸ್ತರಣೆಗೆ ಸಂಬಂಧಿಸಿದ್ದು.

    ಪಶ್ಚಿಮಗೋಡೆಯನ್ನು ಆಧರಿಸಿ ಮೂರು ಸ್ತರದ ನಿರ್ಮಾಣವಿದೆ. ಲೇಯರ್-೧ ತುಂಬ ತೆಳುವಾಗಿದೆ; ಮತ್ತು ಕೆಲವೆಡೆ ಇಲ್ಲ. ಲೇಯರ್-೨ ಕೆಳಗೆ ಸುಮಾರು ಎರಡೂವರೆ ಮೀಟರ್‌ವರೆಗೆ ವಿಸ್ತರಿಸಿದೆ. ಅದರ ಕೆಳಗೆ ಬಹುತೇಕ ಸರಿಯಾದ ಆಕಾರವಿಲ್ಲದ ಲೇಯರ್-೩ ಇದೆ. ಎರಡು ಕಮಾನಿನ ಪ್ರವೇಶದ್ವಾರ ಸೇರಿದಂತೆ ಹಿಂದಿನ ಕಟ್ಟಡದ (ದೇವಾಲಯ) ಗೋಡೆಗಳು ೪ ಮೀ. ಆಳದವರೆಗೆ ವಿಸ್ತರಿಸಿದ್ದು ಲೇಯರ್-೩ರಲ್ಲಿ ತಳವೂರಿವೆ.

    ಇತರ ಅಂಚಿನ ಗೋಡೆಗಳು ಕೆಳಗೆ ೪ ಮೀ. ಆಳದವರೆಗೆ ವಿಸ್ತರಿಸಿದ್ದು, ಲೇಯರ್-೩ರಲ್ಲಿ ತಳವೂರಿವೆ. ಮಧ್ಯದ ಕಮಾನಿನ ಮಧ್ಯದ ಗುಮ್ಮಟದಂತಹ ಪ್ಲಾಟ್‌ಫಾರ್ಮ್ ಮಣ್ಣಿನ ಕೆಳಗೆ (ಸಬ್‌ಸಾಯಿಲ್) ಕೇವಲ ಅರ್ಧ ಮೀಟರ್‌ವರೆಗಿದೆ. ಮೂರನೇ ಲೇಯರ್‌ನ ಪ್ರತಿಬಿಂಬಗಳನ್ನು ಪ್ರೊಫೈಲ್‌ನಲ್ಲಿ ಮಾತ್ರ ಕಾಣಬಹುದು.

    ಜಿ) ಕೋರ್ಟ್: ಎಲ್ಲ ಸೆಲ್ಲಾರ್‌ಗಳ ನೆಲದ ಕೆಳಗೆ ಜಿಪಿಆರ್ ಸರ್ವೆ ನಡೆಸಬೇಕು; ಅಗತ್ಯವಾದರೆ ಉತ್ಖನನ ನಡೆಸಬೇಕು. (ಹಲವು ಕಡೆ ಉತ್ಖನನಕ್ಕೆ ಸೂಚಿಸಿದ್ದು, ಮೇಲಿನ ನ್ಯಾಯಾಲಯ ಎಲ್ಲದಕ್ಕೂ ತಡೆಹಾಕಿತು).

    ಉತ್ತರ: ಎಲ್ಲ ಸೆಲ್ಲಾರ್‌ಗಳ (ಎಸ್-೨, ೩, ಎನ್-೨, ೩, ೪, ೫) ಕೆಳಗೆ ಜಿಪಿಆರ್ ಸಮೀಕ್ಷೆ ನಡೆಸಲಾಯಿತು. ಅದರಿಂದ ತಿಳಿದುಬಂದ ಅಂಶವೆಂದರೆ, ಪ್ಲಾಟ್‌ಫಾರ್ಮ್ ಪ್ರದೇಶವು ಸೆಲ್ಲಾರ್‌ಗಳ ಮೇಲ್ಮಹಡಿ (ರೂಫ್) ಆಗಿದೆ. ಅದರಲ್ಲಿ ಲೇಯರ್-೨ರ ಭಗ್ನಾವಶೇಷಗಳ (ಡೆಬ್ರಿ) ರಾಶಿ ಹಾಕಲಾಗಿದೆ. ಲೇಯರ್-೨ರ ಅವಶೇಷಗಳನ್ನು ಕಾಲಾನಂತರದಲಿ ತುಂಬಿದ್ದು ಎನ್ನುವ ಅಂಶ ಕೂಡ ತಿಳಿದುಬಂತು.

    ಅಡಗಿಸಿಟ್ಟ ಬಾವಿ

    ಇಲ್ಲಿಯ ಸೆಲ್ಲಾರ್‌ಗಳು ಎರಡು ಪ್ರಧಾನ ಆಯಾಮವನ್ನು ಹೊಂದಿವೆ.  ದಕ್ಷಿಣದ ಸೆಲ್ಲಾರ್ ಎಸ್-೧ರ ಪೂರ್ವಭಾಗವು ೪ ಮೀ. ನಷ್ಟು ದಪ್ಪವಿದೆ. ಅಲ್ಲಿ ೨ ಮೀ. ಅಗಲದ ಕಾರಿಡಾರ್ ಇದೆ; ಮತ್ತು ಅಲ್ಲೊಂದು ಬಾವಿಯನ್ನು ಬಚ್ಚಿಡಲಾಗಿದೆ. ಸೆಲ್ಲಾರ್-೧ರ ಒಳಗಿನ ಅಡಗಿಸಿಟ್ಟ ಈ ಬಾವಿ ೨ ಮೀ. ಅಗಲವಿದೆ. ದಕ್ಷಿಣ ಭಾಗದ ಕಡೆಗೆ ಅದಕ್ಕೆ ಹೆಚ್ಚುವರಿಯಾಗಿ ಒಂದು ಮೀಟರ್ ಅಗಲದ ಲಂಬಾಕಾರದ ಓಪನಿಂಗ್ ಇದೆ. ಸೆಲ್ಲಾರ್ ಎಸ್-೨ರ ಗೋಡೆಗಳನ್ನು ಒಳಗೆ ಮತ್ತು ಹೊರಗಿನಿಂದ ಜಿಪಿಆರ್ ಸ್ಕ್ಯಾನಿಂಗ್ ಮಾಡಿದಾಗ ಅಲ್ಲಿ ಅಡಗಿಸಿಟ್ಟ ಬಾವಿ ಇದ್ದುದು ತಿಳಿಯಿತು. ಅಡಗಿಸಿಟ್ಟ ಬಾವಿಗೆ ತಾಗಿರುವ ಎಸ್-೨ರ ನೆಲಮಟ್ಟದಲ್ಲಿ (base) ಏರು ತಗ್ಗಿದೆ; ಅಲ್ಲಿ ಮಗುಚಿಹಾಕಿದ ಏರುಪೇರಾದ ಮಣ್ಣು ಕಾಣಿಸುತ್ತದೆ. ಅದು ಮೂರರಿಂದ ೫ ಮೀ. ಆಳದವರೆಗೂ ಇದೆ. (ಲೇಯರ್-೩ ಮಟ್ಟದವರೆಗೂ). ಅದು ತಳಮಟ್ಟದ ಕೆಳಗೆ ನೀರು ಹರಿಯುವ ಜಾಗವಾಗಿತ್ತು ಎನ್ನಬಹುದು. ಇದರಿಂದ ತಿಳಿಯುವ ಅಂಶವೆಂದರೆ, ಬಚ್ಚಿಟ್ಟ ಈ ಬಾವಿ ಹಿಂದೆ ಬಳಕೆ ಆಗುತ್ತಿತ್ತು.

    ಎಚ್) ಕೋರ್ಟ್: ಕಟ್ಟಡದಲ್ಲಿ ಸಿಕ್ಕಿದ ಮಾನವನಿರ್ಮಿತ ವಸ್ತುಗಳನ್ನು ಅವು ಒಳಗೊಂಡಿರುವ ಅಂಶಗಳ ಸಹಿತ ಪಟ್ಟಿ ಮಾಡಬೇಕು. ಅವುಗಳ ಬಗ್ಗೆ ವೈಜ್ಞಾನಿಕ ಶೋಧ ನಡೆಸಬೇಕು. ಆ ವಸ್ತುಗಳ ಕಾಲ ಮತ್ತು ಸ್ವರೂಪವನ್ನು ತಿಳಿಯಲು ಡೇಟಿಂಗ್ ನಡೆಸಬೇಕು.

    ಉತ್ತರ: ನ್ಯಾಯಾಲಯದ ಆದೇಶದಂತೆ ಪುರಾತತ್ತ್ವ ಇಲಾಖೆಯು ಇಡೀ ಕಟ್ಟಡ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿತು. ಆಗ ಸಿಕ್ಕಿದ ಎಲ್ಲ ವಸ್ತುಗಳನ್ನು ಸಂಗ್ರಹಿಸಿ ಪಟ್ಟಿ ಮಾಡಿ ದಾಖಲಿಸಲಾಯಿತು. ಅಲ್ಲಿ ಸಿಕ್ಕಿದ ವಸ್ತುಗಳಲ್ಲಿ ಶಾಸನಗಳು, ಶಿಲ್ಪಗಳು, ನಾಣ್ಯಗಳು, ಮಡಕೆ ಚೂರುಗಳು, ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ತುಂಡುಗಳು, ಟರ‍್ರಾಕೋಟಾ, ಲೋಹ ಮತ್ತು ಗ್ಲಾಸ್‌ನ ವಸ್ತುಗಳೆಲ್ಲ ಇವೆ. ಅವುಗಳಿಗೆ ಪ್ರಾಥಮಿಕ ಉಪಚಾರ ನೀಡಿ ದಾಖಲಿಸಲಾಯಿತು. ನ್ಯಾಯಾಲಯದ ಆದೇಶದಂತೆ ಅವುಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಲಾಗಿದೆ.

    ) ಕೋರ್ಟ್: ಕಟ್ಟಡದ ಕಂಬಗಳು ಮತ್ತು ಕಂಬದ ಸುತ್ತಲಿನ (ಪ್ಲಿಂತ್) ಸ್ಥಳದ ಡೇಟಿಂಗ್ (ಕಾಲಪರೀಕ್ಷೆ) ನಡೆಸಿ ಈಗ ಇರುವ ಕಟ್ಟಡದ ಕಾಲ ಮತ್ತು ಸ್ವರೂಪಗಳನ್ನು ತಿಳಿಯಬೇಕು.

    ಕಮಲದ ಕೆತ್ತನೆ

    ಉತ್ತರ: ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಹಾಲಿ ಕಟ್ಟಡದ ಕಂಬಗಳ ಬಗ್ಗೆ ವೈಜ್ಞಾನಿಕವಾಗಿ ವ್ಯವಸ್ಥಿತ ಅಧ್ಯಯನ ನಡೆಸಲಾಯಿತು. ಕಂಬಗಳ ಸೂಕ್ಷ್ಮ ಅಧ್ಯಯನವನ್ನು ನಡೆಸಿದಾಗ ಕಂಬಗಳಲ್ಲಿ ಚೌಕಾಕಾರದ ಭಾಗವಿದ್ದು, ಅಲ್ಲಿ ಮಧ್ಯಭಾಗದಲ್ಲಿ ಕಮಲದ ಕೆತ್ತನೆ ಕಂಡುಬಂತು. ಅಂತಹ ಕೆತ್ತನೆಗಳು ಹಿಂದಿನ ದೇವಾಲಯಕ್ಕೆ ಸೇರಿದಂಥವು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಗಟ್ಟಿಯಾಗಿದ್ದ ಆ ಕಂಬಗಳನ್ನು ಹಾಲಿ (ಮಸೀದಿ) ಕಟ್ಟಡದಲ್ಲಿ ಬಳಸಿದರು. ಅದಕ್ಕೆ ಮುನ್ನ ಹೂವಿನ ವಿನ್ಯಾಸದ ಬಳಿಯಿದ್ದ ವ್ಯಾಲವನ್ನು ತೆಗೆದುಹಾಕಲಾಯಿತು. ಈ ಅಭಿಪ್ರಾಯವನ್ನು ಅಂಥದೇ ಬೇರೆ ಎರಡು ಗೋಡೆಗಂಬಗಳು (pilaster) ಕೂಡ ಬೆಂಬಲಿಸಿವೆ. ಅವು ಪಶ್ಚಿಮ ಚೇಂಬರ್‌ನ ಉತ್ತರ ಮತ್ತು ದಕ್ಷಿಣದ ಗೋಡೆಯಲ್ಲಿ ಇದ್ದಂಥವು.

    ಕಂಬದ ಬುಡದ ಜಾಗದ (plinth) ಮೇಲೆ ದಪ್ಪದ ಪ್ಲಾಸ್ಟರ್, ಕಸ-ಕಡ್ಡಿ, ಮಣ್ಣು, ವಿವಿಧ ವಸ್ತುಗಳ ಅವಶೇಷಗಳು, ಅನಂತರದ ಪ್ಲಾಟ್‌ಫಾರ್ಮ್ನ ಕಸ ಎಲ್ಲವೂ ಇದ್ದವು. ಪಶ್ಚಿಮ ಭಾಗದಿಂದ ಅದನ್ನೆಲ್ಲ ತೆಗೆದ ಮೇಲೆ ಒಂದು ಸಣ್ಣ ಪ್ಲಿಂತ್‌ನ ಭಾಗ ಕಾಣಿಸಿತು. ಆ ಜಾಗ ಏರುತಗ್ಗಾಗಿದೆ. ಪ್ಲಿಂತ್‌ನ ಎತ್ತರ ಬೇರೆಬೇರೆ ಕಡೆ ಬೇರೆಬೇರೆ ಇದೆ.

    ಜೆ) ಕೋರ್ಟ್: ವೈಜ್ಞಾನಿಕ ವಿಧಾನವನ್ನು ಅನುಸರಿಸುವ ಮೂಲಕ ಹಾಲಿ ಕಟ್ಟಡದ ಕಾಲ ಮತ್ತದರ ಸ್ವರೂಪವನ್ನು ತಿಳಿಸಬೇಕು. ಅದಕ್ಕೆ ಡೇಟಿಂಗ್ ಮತ್ತಿತರ ವೈಜ್ಞಾನಿಕ ವಿಧಾನವನ್ನು ಅನುಸರಿಸಬಹುದು; ಅಗತ್ಯವಾದಲ್ಲಿ ಜಿಪಿಆರ್ ಸಮೀಕ್ಷೆ ನಡೆಸಬಹುದು.

    ಉತ್ತರ: ನ್ಯಾಯಾಲಯದ ಆದೇಶದಂತೆ ಎಎಸ್‌ಐ ಕಟ್ಟಡದ ನಿರ್ಮಾಣ ಯಾವಾಗ ಆಯಿತೆಂಬ ಬಗ್ಗೆ ಅಧ್ಯಯನ ನಡೆಸಿತು. ನಡೆಸಿದ ಅಧ್ಯಯನದ ಆಧಾರದಲ್ಲಿ ಹಾಲಿ ಕಟ್ಟಡದ ಬಗ್ಗೆ ಅಭಿಪ್ರಾಯ ನೀಡಲಾಯಿತು. ಹೊರಗೆ ಕಾಣುವ ಆಕಾರಗಳು, ಕಟ್ಟಡದಲ್ಲಿ ಸಿಕ್ಕಿದ ವಸ್ತುಗಳ ಆಧಾರದಿಂದ ಯಾವ ತೀರ್ಮಾನಕ್ಕೆ ಬರಬಹುದೆಂದರೆ, ಈಗಿನ ಕಟ್ಟಡವನ್ನು ನಿರ್ಮಿಸುವ ಮೊದಲು ಅಲ್ಲೊಂದು ಬೃಹತ್ ಹಿಂದೂ ದೇವಾಲಯವಿತ್ತು. ಆ ದೇವಾಲಯದ ಮಧ್ಯಭಾಗದಲ್ಲಿ ಒಂದು ದೊಡ್ಡ ಚೇಂಬರ್ ಇತ್ತು. ಈಗಿನ ಕಟ್ಟಡ ಮತ್ತು ಲಭ್ಯ ಸಾಕ್ಷ್ಯಗಳಿಂದ ಹೇಳಬಹುದಾದ ಅಂಶವೆಂದರೆ ಆ ಕಟ್ಟಡದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮಗಳಲ್ಲಿ ಚೇಂಬರ್‌ಗಳಿದ್ದವು. ಉತ್ತರ, ದಕ್ಷಿಣ ಮತ್ತು ಪಶ್ಚಿಮದ ಚೇಂಬರ್‌ಗಳ ಅವಶೇಷಗಳನ್ನು ಈಗ ಕೂಡ ನೋಡಬಹುದು. ಆದರೆ ಪೂರ್ವದ ಚೇಂಬರ್‌ನ ಅವಶೇಷ ಕಾಣಿಸುತ್ತಿಲ್ಲ. ಅದರಲ್ಲಿ ಮಾಡಿರಬಹುದಾದ ಬದಲಾವಣೆಯನ್ನು ಕೂಡ ಭೌತಿಕವಾಗಿ ಖಚಿತಪಡಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಈಗ ಪೂರ್ವದಲ್ಲಿ ಕಲ್ಲಿನ ಫ್ಲೋರಿಂಗ್ ಇರುವ ದೊಡ್ಡದಾದ ಪ್ಲಾಟ್‌ಫಾರ್ಮ್ ಇದೆ.

    ಮುಚ್ಚಿದ ದ್ವಾರ

    ದೇವಾಲಯದ ಮಧ್ಯಭಾಗದ ಚೇಂಬರ್‌ಗೆ ಪ್ರವೇಶವು ಪಶ್ಚಿಮದ ಕಡೆಯಿಂದ ಇತ್ತು. ಅದನ್ನು ಕಲ್ಲುಸಹಿತವಾದ ಗಾರೆಕೆಲಸದಿಂದ ಮುಚ್ಚಲಾಗಿದೆ. ಪಶ್ಚಿಮದ ಚೇಂಬರ್ ಉತ್ತರ ಮತ್ತು ದಕ್ಷಿಣದ ಚೇಂಬರ್‌ಗಳ ಸಂಪರ್ಕವನ್ನು ಹೊಂದಿತ್ತು.

    ಮಧ್ಯ ಚೇಂಬರ್‌ನ ಮುಖ್ಯ ಪ್ರವೇಶದ್ವಾರವು ಪ್ರಾಣಿ ಪಕ್ಷಿಗಳ ಕೆತ್ತನೆ ಮತ್ತು ಆಭರಣದ ವಿನ್ಯಾಸವಿರುವ ತೋರಣದಿಂದ ಅಲಂಕೃತವಾಗಿತ್ತು. ಲಲಿತ್ ಬಿಂಬದ ಮೇಲೆ ಕೆತ್ತಿದ್ದ ಆಕೃತಿಯನ್ನು ತುಂಡರಿಸಲಾಗಿದೆ. ಅದರ ಒಂದು ಭಾಗವನ್ನು ಕಲ್ಲು, ಇಟ್ಟಿಗೆ, ಮೋರ್ಟಾರ್‌ಗಳಿಂದ ಮುಚ್ಚಲಾಗಿದೆ. ೧೭ನೇ ಶತಮಾನದಲ್ಲಿ ಔರಂಗಜೇಬ (೧೬೭೬-೭೭) ಈಗಿನ ಕಟ್ಟಡವನ್ನು ಕಟ್ಟಿಸುವಾಗ ಹಿಂದಿನ ಕಟ್ಟಡದ ಬಹಳಷ್ಟು ಭಾಗಗಳನ್ನು, ಕಂಬಗಳನ್ನು, ಗೋಡೆಗಂಬಗಳನ್ನು ಬಳಸಿಕೊಂಡರು. ಬದಲಾದ ಬಳಕೆಗೆ ತಕ್ಕಂತೆ ಅವುಗಳನ್ನು ಬದಲಿಸಿದರು.

    ಕಟ್ಟಡದ ವಿಸ್ತರಣೆ ಮಾಡುವಾಗ ಪೂರ್ವ, ದಕ್ಷಿಣ ಮತ್ತು ಉತ್ತರಗಳಲ್ಲಿ ಹಲವು ಸೆಲ್ಲಾರ್‌ಗಳನ್ನು ಕಟ್ಟಿಸಿದರು. ಅದಲ್ಲದೆ ನಮಾಜಿಗೆ ಸೇರುವ ಜನರಿಗಾಗಿ ಹಳೆ ಕಟ್ಟಡದ ಮುಂಭಾಗದಲ್ಲಿ ದೊಡ್ಡ ಪ್ಲಾಟ್‌ಫಾರ್ಮ್ ಬೇಕಿತ್ತು. ಅದನ್ನು ನಿರ್ಮಿಸುವಾಗ ಪೂರ್ವದ ಚೇಂಬರ್‌ಗಳ ಸಾಲನ್ನು ಪ್ಲಾಟ್‌ಫಾರ್ಮ್ನಲ್ಲಿ ಸೇರಿಸಿಕೊಂಡರು. ಈ ಜಾಗವನ್ನು ಬದಲಿಸುವುದರೊಂದಿಗೆ ಕಾರಿಡಾರನ್ನು ಕೂಡ ಬದಲಿಸಿದರು. ಸೆಲ್ಲಾರ್‌ನ ಆ ಜಾಗಕ್ಕೆ ಉತ್ತರ ಮತ್ತು ದಕ್ಷಿಣದಿಂದ ಹೋಗಬಹುದು. ವೈಜ್ಞಾನಿಕ ಅಧ್ಯಯನ, ವಾಸ್ತುವಿನ ಅವಶೇಷಗಳು, ಅಲ್ಲಿ ದೊರೆತ ವಸ್ತುಗಳು, ಶಾಸನಗಳು, ಶಿಲ್ಪ, ಕಲೆ ಮುಂತಾಗಿ ಎಲ್ಲವೂ ಹೇಳುವುದು ಒಂದೇ – ಅಲ್ಲಿ ಹಿಂದೆ ದೊಡ್ಡ ದೇವಾಲಯವಿತ್ತು.

    ಕೆ) ಕೋರ್ಟ್: ಕಟ್ಟಡದ ವಿವಿಧ ಭಾಗಗಳಲ್ಲಿ ಕಂಡುಬಂದ ವಿವಿಧ ವಸ್ತುಗಳ ಐತಿಹಾಸಿಕ ಮತ್ತು ಮತೀಯ ಮಹತ್ತ್ವದ ಬಗ್ಗೆ ಅಧ್ಯಯನ ನಡೆಸಬೇಕು; ಮತ್ತು ಸಮೀಕ್ಷೆಯನ್ನು ಕೂಡ ನಡೆಸಬೇಕು.

    ಉತ್ತರ: ನ್ಯಾಯಾಲಯದ ಆದೇಶದ ಪ್ರಕಾರ ಭಾರತ ಪುರಾತತ್ತ್ವ ಇಲಾಖೆಯು ಇಡೀ ಕಟ್ಟಡ ಸಂಕೀರ್ಣ ಮತ್ತು ಸಮೀಕ್ಷೆಯ ವೇಳೆ ಅಲ್ಲಿ ಕಂಡುಬಂದ ವಿವಿಧ ವಸ್ತುಗಳ ಬಗ್ಗೆ ವೈಜ್ಞಾನಿಕ ಶೋಧ ನಡೆಸಿತು. ಹಾಳಾದ ಅಥವಾ ಸವೆದುಹೋದ ವಸ್ತುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಉಪಚಾರ ನೀಡಿ, ವ್ಯವಸ್ಥಿತವಾಗಿ ಪಟ್ಟಿ ಮಾಡಿ ಸುರಕ್ಷಿತವಾಗಿ ಇಡುವ ಬಗ್ಗೆ ಜಿಲ್ಲಾಡಳಿತಕ್ಕೆ ಒಪ್ಪಿಸಲಾಯಿತು.

    ಎಲ್) ಕೋರ್ಟ್: ವಿವಾದಿತ ಸ್ಥಳದಲ್ಲಿರುವ ಕಟ್ಟಡಕ್ಕೆ ಯಾವುದೇ ರೀತಿಯಲ್ಲಿ ಹಾನಿ ಎಸಗಬಾರದು.

    ಉತ್ತರ: ನ್ಯಾಯಾಲಯದ ಸೂಚನೆಗೆ ಅನುಗುಣವಾಗಿ ವಿವಾದಿತ ಸ್ಥಳದಲ್ಲಿರುವ ಕಟ್ಟಡಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಎಎಸ್‌ಐ ಎಚ್ಚರ ವಹಿಸಿತು. ಕಟ್ಟಡವು ಹಾನಿಗೊಳಗಾದ ಅಥವಾ ದುರ್ಬಲವಾಗಿದ್ದ ಕಡೆ ಸಮೀಕ್ಷಾಕಾರ್ಯವನ್ನು ನಡೆಸುವಾಗ ತಂಡವು ವಿಶೇಷ ಎಚ್ಚರ ವಹಿಸಿತು. ಕಟ್ಟಡದ ಕೆಲವು ಕಡೆ ರಾಶಿ ಬಿದ್ದಿದ್ದ ಕಸ, ಮಣ್ಣು, ಅವಶೇಷ ಮುಂತಾದವನ್ನು ಅಧ್ಯಯನದ ಸಲುವಾಗಿ ಎತ್ತುವಾಗ ಗೃಹಬಳಕೆಯ ಮತ್ತು ಉದ್ಯಾನದಲ್ಲಿ ಬಳಸುವ ಸಣ್ಣ ಉಪಕರಣಗಳನ್ನು ಮಾತ್ರ ಬಳಸಿದರು. ಒಟ್ಟಿನಲ್ಲಿ ಕಟ್ಟಡಕ್ಕೆ ಹಾನಿಯಾಗದಂತೆ ತುಂಬ ಎಚ್ಚರ ವಹಿಸಲಾಯಿತು.

    * * *

    ಸಮಾನಕಾಲದ ನಿರ್ಮಾಣ

    ವಾರಾಣಸಿಯ ಗ್ಯಾನವಾಪಿ ಮಸೀದಿಯ ಆವರಣದಲ್ಲಿ ಕೈಗೊಂಡ ವೈಜ್ಞಾನಿಕ ಶೋಧಕಾರ್ಯದ ಸಂಬಂಧವಾಗಿ ಎಎಸ್‌ಐ ಕೆಲವು ಅಮೂಲ್ಯ ಅಭಿಪ್ರಾಯಗಳನ್ನು ನೀಡಿದೆ. ಅದರಲ್ಲಿ ಒಂದು ವಿವಾದಿತ ಕಟ್ಟಡದ ನಿರ್ಮಾಣದ ಅನುಕ್ರಮಣಿಕೆಯ ಕುರಿತಾಗಿದೆ. ಎನ್೩, ಎನ್೪, ಎನ್೫ ಮತ್ತು ಎಸ್೩ ಈ ಎಲ್ಲ ಸೆಲ್ಲಾರ್‌ಗಳು ಒಂದೇ ಕಾಲಕ್ಕೆ ಸೇರುತ್ತವೆ; ಮತ್ತು ಅವು ಒಂದೇ ಬಗೆಯ ವಾಸ್ತುಶಿಲ್ಪದ ಲಕ್ಷಣಗಳನ್ನು ಹೊಂದಿರುವ ಕಾರಣ ಅವುಗಳನ್ನು ಏಕಕಾಲದಲ್ಲಿ ನಿರ್ಮಿಸಿರಬಹುದು ಎಂದು ಎಎಸ್‌ಐ ವರದಿಯಲ್ಲಿ ಹೇಳಿದೆ.

    ಅದೇ ರೀತಿ ಎನ್೧ ಮತ್ತು ಎಸ್೧ ಒಂದೇ ಕಾಲದವು ಎನಿಸುತ್ತದೆ; ಏಕೆಂದರೆ ಅವುಗಳನ್ನು ಕಟ್ಟಿಸಲು ವಿಶೇಷವಾದ ಲಖೌರಿ ಇಟ್ಟಿಗೆಗಳನ್ನು ಬಳಸಲಾಗಿದೆ. ಸೆಲ್ಲಾರ್‌ಗಳ ಎರಡು ಸಾಲು ಮಧ್ಯದಲ್ಲಿರುವ ತೆರೆದ ಜಾಗಕ್ಕೆ ತೆರೆದುಕೊಂಡಿವೆ. ಪಶ್ಚಿಮ ಮತ್ತು ಪೂರ್ವದಲ್ಲಿ ಎರಡು ಸಮಾನಾಂತರ ಸಾಲುಗಳಲ್ಲಿ ಸೆಲ್ಲಾರ್‌ಗಳಿವೆ.

    ಮೇಲಿನ ನಿರ್ಮಾಣದ ಅನಂತರ ಸೆಂಟ್ರಲ್ ಹಾಲ್‌ಗಳು, ಎನ್೨ ಮತ್ತು ಎಸ್೨ ಸೆಲ್ಲಾರ್‌ಗಳನ್ನು ತೆರೆದ ಜಾಗದಲ್ಲಿ ನಿರ್ಮಿಸುವ ಮೂಲಕ ಸೆಲ್ಲಾರ್‌ಗಳ ಎರಡು ಸಾಲುಗಳಿಗೆ ಒಂದು ಘಟಕದ ರೂಪ ಕೊಡಲಾಯಿತು. ಎನ್೨ ಮತ್ತು ಎಸ್೨ ಸೆಲ್ಲಾರ್‌ಗಳನ್ನು ಕಟ್ಟಿಸಲು ಹಿಂದಿನ ಕಟ್ಟಡದ (ದೇವಾಲಯ) ವಸ್ತುಗಳನ್ನು ಧಾರಾಳವಾಗಿ ಬಳಸಿಕೊಳ್ಳಲಾಯಿತು. ಈ ಸೆಲ್ಲಾರ್‌ಗಳ ನಿರ್ಮಾಣದ ಬಗ್ಗೆ ಅನಂತರದ ಕಾಲದಲ್ಲಿ ಯೋಚಿಸಿದ ಕಾರಣ ಅವುಗಳ ನಿರ್ಮಾಣದಲ್ಲಿ ವಿವಿಧ ವಸ್ತುಗಳನ್ನು ತೇಪೆ ಹಾಕಿದಂತೆ ತೋರುತ್ತದೆ. ಪರಿಣಾಮವಾಗಿ ಕಟ್ಟಡದ ಭದ್ರತೆಯ ವಿಷಯವು ಮುಂದೆ ಬಂದು ಅದನ್ನು ಬಲಪಡಿಸುವ ಬಗ್ಗೆ, ಮುಖ್ಯವಾಗಿ ಚಾವಣಿಯನ್ನು ಸರಿಪಡಿಸುವ ಬಗ್ಗೆ ಕ್ರಮಕೈಗೊಳ್ಳಲಾಯಿತು – ಎಂದು ಎಎಸ್‌ಐ ಹೇಳಿದೆ.

    ಹಂತಗಳಲ್ಲಿ ನಿರ್ಮಾಣ

    ಮಸೀದಿಯ ಹಾಲಿ ಕಟ್ಟಡವನ್ನು ಪಶ್ಚಿಮ ಗೋಡೆಯ ಪೂರ್ವದ ಮುಖಕ್ಕೆ ಎದುರಾಗಿ ಕಟ್ಟಿಸಲಾಯಿತು. ಶಾಸನದ ಪ್ರಕಾರ ಮೊಘಲರ ದೊರೆ ಔರಂಗಜೇಬ ೧೬೭೬-೭೭ರಲ್ಲಿ ಈ ಮಸೀದಿಯನ್ನು ಕಟ್ಟಿಸಿದ. ಎರಡನೇ ಹಂತದ ನಿರ್ಮಾಣ-ರಿಪೇರಿ ಕಾರ್ಯವು ೧೭೯೨-೯೩ರಲ್ಲಿ ನಡೆದಿರಬೇಕು. ಆಗ ಕಾರಿಡಾರ್ ಮತ್ತಿತರ ಭಾಗಗಳನ್ನು ಕಟ್ಟಿಸಲಾಯಿತು.

    ಅಂಗಳ(ಸಹನ್)ದ ನಿರ್ಮಾಣವು ಎರಡನೇ ಹಂತದಲ್ಲಿ ನಡೆಯಿತು. ಅದಕ್ಕೆ ತಳಪಾಯವನ್ನು ಸೆಲ್ಲಾರ್‌ಗಳಾದ ಎನ್೪ ಮತ್ತು ಎನ್೫ರ ಮೂಲಕ ಕೆಳಭಾಗದಲ್ಲಿ ಒದಗಿಸಲಾಯಿತು. ದಕ್ಷಿಣ ಭಾಗದಲ್ಲೂ ಅಂತಹ ಸೆಲ್ಲಾರ್‌ಗಳು ಇದ್ದವೆಂದು ಜಿಪಿಆರ್ ಸರ್ವೆಯಿಂದ ತಿಳಿದುಬಂದಿದೆ.

    ಪೂರ್ವಭಾಗದ ತೆರೆದ ಪ್ಲಾಟ್‌ಫಾರ್ಮ್ನ ವಿಸ್ತರಣೆ ಕೂಡ ಸಾಕಷ್ಟು ಕಾಲಾವಧಿಯಲ್ಲಿ ಹಂತಗಳಲ್ಲಿ ನಡೆಯಿತು. ಉತ್ತರ-ದಕ್ಷಿಣವಾಗಿ ನಿರ್ಮಾಣಗೊಂಡ ಎನ್೩ ಮತ್ತು ಎಸ್೩, ಎನ್೪ ಮತ್ತು ಎನ್೫ಕ್ಕೆ ಸಮಕಾಲೀನವಾಗಿವೆ. ಅವುಗಳ ನಿರ್ಮಾಣಶೈಲಿ ಒಂದೇ ರೀತಿ ಇದೆ. ಇದರಿಂದ ತಿಳಿಯುವ ಅಂಶವೆಂದರೆ, ಪೂರ್ವಭಾಗದ ಪ್ಲಾಟ್‌ಫಾರ್ಮ್, ಸೆಲ್ಲಾರ್ ಎನ್೩ ಮತ್ತು ಎಸ್೩ ಅವುಗಳ ಅಂಚಿನವರೆಗೂ ವಿಸ್ತರಿಸಿದೆ. ಈ ಸೆಲ್ಲಾರ್‌ಗಳು ಪೂರ್ವದಲ್ಲಿ ನೆಲಮಟ್ಟದಲ್ಲಿ ತೆರೆದುಕೊಂಡಿವೆ.

    ಮುAದಿನ ಕಾಲಘಟ್ಟದಲ್ಲಿ ಪೂರ್ವದ ಪ್ಲಾಟ್‌ಫಾರ್ಮ್ ಮತ್ತಷ್ಟು ವಿಸ್ತರಣೆಗೊಂಡಿತು. ಸೆಲ್ಲಾರ್೧, ೩ ಮತ್ತು ಎಸ್ ೧, ೩ – ಅವುಗಳ ತೆರೆದ ಜಾಗವನ್ನು ಬಳಸಿಕೊಳ್ಳಲಾಯಿತು. ಈ ಕಾರಣದಿಂದ ಮಧ್ಯದ ಸೆಲ್ಲಾರ್‌ಗಳಾದ ಎನ್೨ ಮತ್ತು ಎಸ್೨ ಅವುಗಳ ಚಾವಣಿಯನ್ನು ಕಂಬ ಹಾಕಿ ಮೇಲಕ್ಕೆತ್ತಲಾಯಿತು. ಹೀಗೆ ಮಸೀದಿಯ ಅಗತ್ಯಕ್ಕೆ ಬೇಕಾದಂತೆ ವಿಸ್ತರಣೆ, ರಿಪೇರಿಗಳು ನಡೆಯುತ್ತ ಹೋದವು.

     (ಸಶೇಷ)

    ಶಿಲಾಶಾಸನಗಳ ಅಪೂರ್ವ ದಾಖಲೆ

    ಗ್ಯಾನವಾಪಿ ಮಸೀದಿಯ ಆವರಣದಲ್ಲಿ ವೈಜ್ಞಾನಿಕ ಶೋಧ ನಡೆಸಿದ ಪುರಾತತ್ತ÷್ವ ಇಲಾಖೆಗೆ (ಎಎಸ್‌ಐ) ಬಹಳಷ್ಟು ಶಾಸನಗಳು ಗಮನಕ್ಕೆ ಬಂದವು. ದೇವನಾಗರಿ ಲಿಪಿಯಲ್ಲಿದ್ದ ಸಂಸ್ಕೃತ ಮತ್ತು ಉತ್ತರಭಾರತದ ಸ್ಥಳೀಯ ಶಾಸನಗಳಲ್ಲದೆ ತೆಲುಗು, ಕನ್ನಡ ಮೊದಲಾದ ದಕ್ಷಿಣಭಾರತದ ಭಾಷೆ-ಲಿಪಿಗಳ ಶಾಸನಗಳು ಕೂಡ ಕಂಡುಬAದವು. ಈ ಶಾಸನಗಳು ೧೨ರಿಂದ ೧೭ನೇ ಶತಮಾನದವರೆಗಿನ ಕಾಲಘಟ್ಟದವಾಗಿವೆ. ಹಳೆಯ ಶಾಸನಗಳನ್ನು ಹೊಸ ಕಟ್ಟಡದಲ್ಲಿ ಉಳಿಸಿಕೊಳ್ಳಲಾಗಿದೆ. ಅದರಿಂದ ಹಿಂದೆ ಇದ್ದ (ದೇವಾಲಯದ) ಕಟ್ಟಡವನ್ನು ನಾಶಪಡಿಸಿ ಅಥವಾ ಬದಲಾಯಿಸಿ ಬಳಸಿಕೊಂಡದ್ದು ಸ್ಪಷ್ಟವಾಗುತ್ತದೆ.

    ಶೋಧಕಾರ್ಯಕ್ಕೆ ಒಳಪಡಿಸಿದ ಕಟ್ಟಡದ ವಿವಿಧ ಭಾಗಗಳಲ್ಲಿ ೩೨ ಶಿಲಾಶಾಸನಗಳು ಎಎಸ್‌ಐಗೆ ದೊರೆತವು. ಇವುಗಳನ್ನು ಓದಲು ಸಾಧ್ಯವಾಯಿತು. ಇನ್ನೆರಡು ಶಿಲಾಶಾಸನಗಳು ಕಂಡುಬಂದವಾದರೂ ಅವು ಇದ್ದ ಜಾಗಕ್ಕೆ ತಲಪಲು ಸಾಧ್ಯವಾಗದ ಕಾರಣ ಅವುಗಳನ್ನು ಓದಲು ಆಗಲಿಲ್ಲ. ಅದರಲ್ಲಿ ಒಂದು ಶಾಸನವು ಮೆಟ್ಟಿಲಿನ ಕೆಳಗೆ ಸಿಕ್ಕಿಬಿದ್ದಂತಿದ್ದು, ಅದರ ಪ್ರತಿ ತೆಗೆಯಲು ಸಾಧ್ಯವಾಗಲಿಲ್ಲ. ಆದರೆ ಅದರ ವಿವರಗಳು ಓದಿದ ಇನ್ನೊಂದು ಶಾಸನದಂತೆಯೇ ಇವೆ. ಇನ್ನೊಂದು ಶಾಸನವು ಪ್ರವೇಶದ್ವಾರದ ರೂಫ್‌ನ ಕಲ್ಲು ಚಪ್ಪಡಿಯಲ್ಲಿ ಕಂಡುಬಂದಿದೆ. ಸ್ಲ್ಯಾಬ್‌ಗಳ ನಡುವಣ ಚಿಕ್ಕ ಅಂತರದಿಂದ ಅದರ ಕೆಲವು ಅಕ್ಷರಗಳನ್ನು ಮಾತ್ರ ಓದಲು ಸಾಧ್ಯವಾಗಿದೆ. ಅದರ ಪ್ರತಿ ತೆಗೆಯುವುದಕ್ಕಾಗಿ ಒಂದು ರಬ್ಬರ್ ಅಚ್ಚು (cast) ತಯಾರಿಸಲಾಯಿತು. ಅದರ ಅಕ್ಷರಗಳು ಗಢವಾಲ್ ಕಾಲಘಟ್ಟದ ಅಕ್ಷರಗಳನ್ನು ಹೋಲುತ್ತವೆಂದು ಎಎಸ್‌ಐ ಹೇಳಿದೆ.

    ಪ್ರತಿ ತೆಗೆದ ೩೨ ಶಾಸನಗಳಲ್ಲಿ ಒಂದರ ಕಾಲ ಕ್ರಿ.ಶ. ೧೬೧೩ ಎಂದು ತಿಳಿದುಬಂದಿದೆ. ಇತರ ಎಲ್ಲ ಶಾಸನಗಳ ಕಾಲವನ್ನು ಅವುಗಳ ಲಿಪಿಯ ಆಧಾರದಲ್ಲಿ ಕಂಡುಹಿಡಿಯಲಾಗಿದೆ. ಒಂದು ಶಾಸನವು ೧೨ನೇ ಶತಮಾನದ್ದಾದರೆ, ಇನ್ನೊಂದು ೧೫ನೇ ಶತಮಾನದ್ದು. ಎರಡು ಶಾಸನಗಳು ೧೬ನೇ ಶತಮಾನಕ್ಕೆ ಸೇರಿದ್ದರೆ, ಉಳಿದ ೩೦ ಶಾಸನಗಳು ೧೭ನೇ ಶತಮಾನದ್ದಾಗಿವೆ.

    ಹೆಚ್ಚಿನ ಶಾಸನಗಳು ಹಾನಿಗೊಂಡಿವೆ; ತುಂಡಾಗಿವೆ; ಅಕ್ಷರಗಳು ಸವೆದಿವೆ; ಅಥವಾ ಅವುಗಳಿಗೆ ಬಣ್ಣ ಬಳಿಯಲಾಗಿದೆ. ಅವುಗಳನ್ನು ಓದಲು ಕಷ್ಟವಾಗಿದೆ. ೩೪ರಲ್ಲಿ ಚೆನ್ನಾಗಿರುವುದು ಮೂರು ಮಾತ್ರ. ಅಲ್ಲಿ ಸಂಗ್ರಹಿಸಿದ ಮಾಹಿತಿಯ ಸಮಗ್ರ ವಿಶ್ಲೇಷಣೆಯಿಂದ ತಿಳಿದುಬರುವ ಅಂಶವೆಂದರೆ, ಮುಖ್ಯವಾಗಿ ಆ ಪವಿತ್ರ ಕ್ಷೇತ್ರಕ್ಕೆ ಆಗಮಿಸಿದ ಯಾತ್ರಿಕರು ಅಲ್ಲಿ ಶಾಸನವನ್ನು ಹಾಕಿಸಿರಬೇಕೆಂದು ನಂಬಲಾಗಿದೆ. ೧೫ರಿಂದ ೧೭ನೇ ಶತಮಾನದ ಅವಧಿಯ ಮೂರು ಶತಮಾನಗಳಲ್ಲಿ ಅಂತಹ ಶಾಸನಗಳನ್ನು ಹಾಕಿಸಲಾಯಿತು. ಶಾಸನದಲ್ಲಿ ಕಂಡುಬರುವ ಮಾಹಿತಿಗಳಿಂದ ಯಾತ್ರಿಕರ ನಾಲ್ಕು ಬಗೆಯ ಚಟುವಟಿಕೆಗಳು ವ್ಯಕ್ತವಾಗುತ್ತವೆ:

    ೧. ಕ್ಷೇತ್ರದ ಅಧಿದೇವತೆಗೆ ಶರಣಾಗುವುದು (ಐದು ಶಾಸನಗಳು)

    ೨. ದೈವಭಕ್ತಿಯ ಯಾವುದೋ ಕಾರ್ಯ ನಡೆಸುವುದು (ಮೂರು ಶಾಸನಗಳು)

    ೩. ನಂದಾದೀಪ ಬೆಳಗಿಸುವುದಕ್ಕೆ ವ್ಯವಸ್ಥೆ (ಒಂದು ಶಾಸನ)

    ೪. ವಿಶೇಷ ದೀಪ ಬೆಳಗಿಸುವುದು.

    ಹೆಚ್ಚಿನ ಶಾಸನಗಳು ನಾಗರಿ ಲಿಪಿಯಲ್ಲಿದ್ದು, ಅಲ್ಲಿಯ ಸ್ಥಳೀಯ ಭಾಷೆ ಮತ್ತು ಸಂಸ್ಕೃತದಲ್ಲಿವೆ. ದಕ್ಷಿಣಭಾರತದ ತೆಲುಗು, ಕನ್ನಡ, ತಮಿಳು ಭಾಷೆಗಳಲ್ಲಿ ಇನ್ನು ಕೆಲವಿವೆ. ಕನ್ನಡ ಶಾಸನದಲ್ಲಿ ‘ದೊಡ್ಡರಸಯ್ಯನ, ನರಸಂಣನ ಬಿಂನಹ’ ಎನ್ನುವ ಪದಗಳಿವೆ. ಒಂದು ಅರೇಬಿಕ್-ಪರ್ಶಿಯನ್ ಶಾಸನ ಕೂಡ ಇದ್ದು, ಅದು ೧೭೯೨ರಲ್ಲಿ ನಡೆದ ಮಸೀದಿಯ ರಿಪೇರಿ, ವಿಸ್ತರಣೆಯ ಬಗ್ಗೆ ಹೇಳುತ್ತದೆ; ವ್ಯಕ್ತಿಗಳ ಹೆಸರುಗಳು ಮಾಹಿತಿಗಳು ತುಂಬ ದೊರೆಯುತ್ತವೆ.

    ಶಾಸನಗಳಲ್ಲಿ ಜನಾರ್ದನ, ರುದ್ರ ಮತ್ತು ಉಮೇಶ್ವರ ಎನ್ನುವ ದೇವರ ಹೆಸರುಗಳು ಕಂಡುಬಂದಿವೆ. ಮೂರು ಶಾಸನಗಳಲ್ಲಿ ಮಹಾಮುಕ್ತಿ ಮಂಟಪ ಎನ್ನುವ ಪದವಿದ್ದು, ಪ್ರಾಚೀನ ಗ್ರಂಥಗಳ ಪ್ರಕಾರ ಇದು ಶಿವಕ್ಷೇತ್ರ ಎಂಬುದನ್ನು ಅದು ತಿಳಿಸುತ್ತದೆಂದು ಅಭಿಪ್ರಾಯಪಡಲಾಗಿದೆ. ಶಿವ ದೇವಾಲಯವನ್ನು ಸಂಕೇತಿಸುವ ಇತರ ಪದಗಳು ಕೂಡ ಕಂಡುಬಂದಿವೆ.

    ವಾರಾಣಸಿ: ಮಸೀದಿಯ ಒಳಗೆ ಎದ್ದುಕಾಣುವ ದೇವಾಲಯ

  • ಪುರಾತನ ಕ್ಷೇತ್ರ ಕಾಶಿಗೆ ನಿರಂತರವಾಗಿ ಹೇಗೆ ಹಿಂದು ಶ್ರದ್ಧಾಳುಗಳು ಹರಿದುಬರುತ್ತಿದ್ದರೋ, ಅದೇ ರೀತಿ ಇದರ ರಕ್ಷಣೆಗಾಗಿ ತಮ್ಮ ರಕ್ತವನ್ನು ಗಂಗಾನದಿಯಂತೆಯೇ ಹರಿಸಬೇಕಾದದ್ದು ಭಾರತದ ಇತಿಹಾಸದ ದುರಂತ ಅಧ್ಯಾಯಗಳಲ್ಲೊಂದು. ಮತಾಂಧ ಮುಸ್ಲಿಂದಾಳಿಕೋರರು ತಮ್ಮ ರೂಢಿಯಂತೆ ಹನ್ನೆರಡನೆ ಮತ್ತು ಹದಿನೈದನೆ ಶತಮಾನದಲ್ಲಿ ಈ ಪ್ರಾಚೀನ ಶಿವಮಂದಿರವನ್ನು ನಾಶಗೊಳಿಸಿದರು. ಆದರೆ ಹಿಂದೂಗಳ ಸ್ವಾಭಿಮಾನದಿಂದ ಕೆಲವರ್ಷಗಳಲ್ಲೇ ಕಾಶಿ ಮತ್ತೆ ತಲೆಯೆತ್ತಿ ನಿಂತಿತು. ೧೧೯೪ ಮಹಮ್ಮದ್ ಘೋರಿಯ ಸೇನಾಧಿಪತಿ ಕುತ್ಬುದ್ದೀನ್ ಐಬಕ್ ಇದನ್ನು ನಾಶಗೊಳಿಸಿದ. ಸಾವಿರ ಮಂದಿರಗಳು ಆಗ ಧ್ವಂಸಗೊಂಡವೆಂದು ಹೇಳಲಾಗುತ್ತದೆ. ಈ ಸುದ್ದಿ ತಿಳಿದ ಹಿಂದುಗಳು ಹಳ್ಳಿಹಳ್ಳಿಗಳಿಂದ ಕಾಶಿಗೆ ಧಾವಿಸಿದರು. ಕಾಶಿಯಲ್ಲಿ ಮುಂದಿನ ದಿನಗಳು ನಿತ್ಯ ಸಂಘರ್ಷ. ಸಾಧುಗಳು, ಮಹಂತರು, ಸ್ಥಳೀಯ ನಾಯಕರುಗಳ ನೇತೃತ್ವದಲ್ಲಿ ಗುಂಪುಗೂಡುವುದು ಮುಸಲ್ಮಾನ ಸಿಪಾಯಿ ತುಕಡಿಗಳೊಂದಿಗೆ ಕಾದಾಟ. ಕಡೆಗೂ ಹಿಂದೂ ಶಕ್ತಿ ಗೆದ್ದಿತು. ದೇವಾಲಯ ಧ್ವಂಸಗೊಂಡ ಇಪ್ಪತ್ತು ವರ್ಷದೊಳಗೆ ಅದೇ ಸ್ಥಳದಲ್ಲಿ ಮರುನಿರ್ಮಾಣವಾಯಿತು.

    ಕಾಶಿ ಜಗತ್ತಿನ ಮಹಾದ್ಭುತ ನಗರ. ಎಣಿಕೆಗೆ ಸಿಗದ ಪ್ರಾಚೀನತೆ ಇದರದು. ಆಧುನಿಕರು ಮೂರು ಸಾವಿರ ವರ್ಷದ ಲೆಕ್ಕ ಹಿಡಿದಿದ್ದಾರೆ; ಆದರೆ ಯುಗಾಂತರಗಳ ಲೆಕ್ಕ ಆ ಶಿವನೇ ಬಲ್ಲ. ವೇದೋಪನಿಷತ್ತುಗಳು, ವಿಷ್ಣು-ಶಿವ-ಸ್ಕಾಂದ-ಗರುಡ ಇತ್ಯಾದಿ ಪುರಾಣಗಳು, ರಾಮಾಯಣ-ಮಹಾಭಾರತಾದಿ ಇತಿಹಾಸಗಳು, ಚಾರಿತ್ರಿಕ ದಾಖಲೆಗಳಲ್ಲಿಯೂ ಉಲ್ಲೇಖಿತವಾದ ಪುರಾತನ ಪಟ್ಟಣವಿದು. ಇಹಪರಗಳನ್ನು ಒಂದರೊಳಗೊAದು ಬೆಸೆದ ಮಾಯೆಯ ಅರಿವನ್ನು ನೀಡುವ ಜ್ಞಾನಕ್ಷೇತ್ರ. ಯಾತ್ರಿಯೋರ್ವ ತನ್ನ ಒಳಹೊರಗಿನ ಅಂತರ ಕಳಚಿ ಜನ್ಮಮೃತ್ಯುಗಳ ಸಂಕೋಲೆ ಮುರಿದು ಸಮಯಾತೀತನಾಗಬಲ್ಲ ಮಹೋನ್ನತ ಯಾನದ ಪಯಣಿಗನೆಂದು ಅರಿತು ದಿಗ್ಮೂಢನಾಗುವ ಸ್ಥಳ.

    ಕಾಶಿಯೆಂದರೆ ಬೆಳಕು. ಪವಿತ್ರ ಗಂಗೆಯು ಹರಿಯುವ ಕಾರಣದಿಂದ ಅಲ್ಲಿ ಆ ಬೆಳಕಿನ ನಗರ ನಿರ್ಮಾಣವಾಯಿತೋ, ಅಥವಾ ಆ ಮಹಾದೇವನು ನೆಲೆಸಿರುವುದರಿಂದ ಗಂಗೆ ಅಲ್ಲಿ ಹರಿದಳೋ – ಒಟ್ಟಿನಲ್ಲಿ ಶಿವ, ಗಂಗೆ, ಕಾಶಿ ಮೂರೂ ಸೇರಿ ಆಸ್ತಿಕನಿಗೆ ಮಹಾಸೆಳೆತ. ಜೀವನಕಾಲದಲ್ಲಿ ಒಮ್ಮೆಯಾದರೂ ಆ ದಿವ್ಯ ಪಟ್ಟಣದಲ್ಲಿ ಕಾಲಿರಿಸಬೇಕು, ಗಂಗೆಯಲ್ಲಿ ಮಿಂದೇಳಬೇಕು, ಜ್ಯೋತಿರ್ಲಿಂಗಸ್ವರೂಪಿ ಶಿವನನ್ನು ಸ್ಪರ್ಶಿಸಬೇಕು, ಆ ಮಹಾಕಾಲಭೈರವನಿಗೆ ಅಡ್ಡಬಿದ್ದು ಪಾಪಗಳನ್ನು ಪರಿಹರಿಸೆಂದು ಕೇಳಿಕೊಳ್ಳಬೇಕು. ಅದೆಷ್ಟೋ ಪ್ರಾಚೀನಕಾಲದಿಂದ ಋಷಿಮುನಿಗಳ ತಪದಿಂದ ಪವಿತ್ರವಾದ ಆ ಪುಣ್ಯ ತೀರ್ಥಕ್ಷೇತ್ರದಲ್ಲಿ ಕೆಲಕಾಲವಾದರೂ ನೆಲೆಸಿ ಪಾವನರಾಗಬೇಕು ಎಂಬುದು ಎಲ್ಲರ ಮಹದಾಸೆ.

    ಶಿವನಗರಿ ಕಾಶಿ

    ಕಾಶಿ ಶಿವನ ಸ್ವಂತ ನೆಲ. ಅದು ಅನಾದಿ-ಅನಂತ. ಇಡೀ ಭೂಮಂಡಲವೇ ಪ್ರಳಯದಲ್ಲಿ ಲಯವಾದರೂ ಕಾಶಿಯನ್ನು ಆ ಶಿವನು ತ್ರಿಶೂಲದಲ್ಲಿ ಹಿಡಿದು ಮೇಲೆತ್ತಿ ನಿಲ್ಲುತ್ತಾನೆ. ಪ್ರಳಯ ನಿಂತ ನಂತರ ಮತ್ತೊಮ್ಮೆ ಅದೇ ಪ್ರಾಚೀನ ಕಾಶಿ ಭೂಮಿಯ ಮೇಲೆ ಪ್ರತಿಷ್ಠಾಪಿಸಲ್ಪಡುತ್ತದೆ. ಹೀಗಾಗಿ ಕಾಶಿ ಯುಗಯುಗಗಳ ನೆನಪನ್ನು, ಪವಿತ್ರತೆಯನ್ನು, ಮಹಾಶಕ್ತಿಯ ಕಂಪನಗಳನ್ನು ತನ್ನೊಳಗೆ ಹಿಡಿದಿಟ್ಟುಕೊಂಡಿದೆ. ಹಾಗೆಯೇ ಪ್ರತಿ ಹಿಂದುವೂ ಕಾಶಿಯಿಂದ ಆಕರ್ಷಿಸಲ್ಪಟ್ಟಿದ್ದಾನೆ. ಭಾರತದ ಪ್ರತಿ ಊರಿಗೂ ಕಾಶಿಯ ನಂಟಿದೆ. ಅನೇಕ ದೇವಾಲಯಗಳಲ್ಲಿರುವ ಗುಪ್ತ ಸುರಂಗಮಾರ್ಗಗಳು ಕಾಶಿಯನ್ನು ತಲಪುತ್ತಿತ್ತು ಎಂಬುದನ್ನು ಆಯಾ ದೇವಾಲಯಗಳ ಐತಿಹ್ಯಗಳು ಹೇಳುತ್ತವೆ. ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡಿದವರು ಪುಣ್ಯವಂತರು. ಯಾತ್ರೆ ಮುಗಿಸಿ ಅಲ್ಲಿಂದ ಸುರಕ್ಷಿತವಾಗಿ ಹಿಂತಿರುಗಿದವರು ಪೂಜ್ಯರು ಎಂದು ಪ್ರಯಾಣ ಸೌಕರ್ಯಗಳು ಕಡಮೆಯಿದ್ದ ಕಾಲದಲ್ಲಿ ಜನರು ಭಾವಿಸುತ್ತಿದ್ದರು. ದಕ್ಷಿಣದ ಅನೇಕ ಪ್ರಮುಖ ಶಿವ ದೇವಾಲಯಗಳು ‘ದಕ್ಷಿಣ ಕಾಶಿ’ ಎಂದು ಗುರುತಿಸಲ್ಪಟ್ಟರೆ, ಅಲ್ಲಿನ ಕಲ್ಯಾಣಿ ನದಿತಟಗಳು ಗಂಗೆಯ ಸ್ವರೂಪವೆಂದು ಹೇಳಲಾಗುತ್ತದೆ.

    ಶಿವಪುರಾಣದ ಉಕ್ತಿಯಂತೆ ವಿಷ್ಣು-ಬ್ರಹ್ಮರಲ್ಲಿ ಉಂಟಾದ ತಾನು ಮೇಲೆಂಬ ಜಗಳವನ್ನು ಪರಿಹರಿಸಲು ತನ್ನ ಮೂಲವನ್ನು ಹುಡುಕುವಂತೆ ಸವಾಲು ಹಾಕಿ ಬೃಹತ್ ಬೆಳಕಿನ ಕಂಬವಾಗಿ ಶಿವ ಬೆಳೆದು ನಿಂತನಂತೆ. ಬ್ರಹ್ಮನು ಹಂಸವಾಗಿ ಮೇಲೆ ಹಾರಿದರೆ ವಿಷ್ಣು ವರಾಹವಾಗಿ ಕೆಳಗಿಳಿದ. ಆದರೆ ಈ ಬೃಹತ್ ಸ್ತಂಭದ ತುದಿ ತಲಪಲು ಇಬ್ಬರಿಗೂ ಸಾಧ್ಯವಿಲ್ಲದಂತಾಯಿತು. ಶಿವ ತೋರಿದ ಆ ಬೃಹತ್ ಬೆಳಕಿನ ಸ್ತಂಭವೇ ಭೂಮಿಯ ಮೇಲೆ ಪ್ರಕಟಗೊಂಡ ಆದಿ ಜ್ಯೋತಿರ್ಲಿಂಗವಾಗಿ ಕಾಶಿಯಲ್ಲಿದೆ.

    ವಿಷ್ಣು ಪಂದ್ಯದಲ್ಲಿ ಸೋತುಹೋದೆ ಎಂದು ಒಪ್ಪಿ ನಿಂತರೆ, ಬ್ರಹ್ಮ ತಾನು ತುದಿ ಮುಟ್ಟಿದೆನೆಂದು ಸುಳ್ಳು ಹೇಳಿದನಂತೆ. ಕ್ರೋಧಗೊಂಡ ಶಿವ ಮಹಾಭೈರವನಾಗಿ ಪಂಚಮುಖಿಯಾಗಿದ್ದ ಬ್ರಹ್ಮನ ಶಿರವೊಂದನ್ನು ಕಿತ್ತೆಸೆದು ಚತುರ್ಮುಖನನ್ನಾಗಿಸಿದ. ಆದರೆ ಕತ್ತರಿಸಲ್ಪಟ್ಟ ಆ ರುಂಡ ಆ ಮಹಾದೇವನ ಹಸ್ತಬಿಟ್ಟು ಬೀಳಲೇ ಇಲ್ಲ, ಎಲ್ಲಿ ಸುತ್ತಿದರೂ, ಏನು ಮಾಡಿದರೂ ಶಿವನನ್ನು ಬಿಡದ ಆ ದೋಷ ಪರಿಹಾರಕ್ಕೆಂದು ಕಾಶಿಗೆ ಬರಬೇಕಾಯಿತು. ಆ ಶಿವನು ಬ್ರಹ್ಮನ ರುಂಡದಿಂದ, ಬ್ರಹ್ಮಹತ್ಯಾದೋಷದಿಂದ ಬಿಡುಗಡೆಗೊಂಡದ್ದು ತನ್ನದೇ ನೆಲ ಕಾಶಿಯಲ್ಲಿ.

    ಅಮರ ಕಾಶಿಪ್ರಾಚೀನ ಕಾಶಿ

    ಕಾಲಚಕ್ರದ ಆಟದಲ್ಲಿ ಕಾಶಿ ಅದೆಷ್ಟು ಬಾರಿ ಪುನರ್ನಿರ್ಮಾಣವಾಗಿದೆಯೋ, ಅದೆಷ್ಟು ಬಾರಿ ಪುನಃ ಪ್ರತಿಷ್ಠಾಪನೆಗಳಾಗಿವೆಯೋ, ಅದೆಷ್ಟು ನರೇಶರನ್ನು, ಸಾಮ್ರಾಜ್ಯಾಧಿಪತಿಗಳನ್ನು ಅರಗಿಸಿಕೊಂಡಿದೆಯೋ ನಿಜಕ್ಕೂ ಬಲ್ಲವರಿಲ್ಲ. ಜಗತ್ತಿನ ಪ್ರಸಿದ್ಧ ಪುರಾತನ ನಗರಗಳೆನಿಸಲ್ಪಟ್ಟ ರೋಮ್, ಈಜಿಪ್ಟ್, ಗ್ರೀಸ್‌ನ ಅಥೆನ್ಸ್ಗಳು ಕಣ್ಬಿಡುವುದಕ್ಕೂ ಮೊದಲೇ ಕಾಶಿ ನಗರ ಜನರಿಂದ ತುಂಬಿ ತುಳುಕುತ್ತಿತ್ತು. ಇತ್ತೀಚೆಗೆ ಆಧುನಿಕ ಉಪಕರಣಗಳ ಸಹಾಯದಿಂದ ನಡೆದ ಉತ್ಖನನಗಳು ಸಹ ಈಗಿನ ಕಾಶಿಯ ಕೆಳಭಾಗದಲ್ಲಿ ಮರ‍್ನಾಲ್ಕು ಪದರಗಳಲ್ಲಿದ್ದ ಪಟ್ಟಣಗಳ ಅವಶೇಷಗಳನ್ನು ಪತ್ತೆಹಚ್ಚಿವೆ. ಒಂದೊಂದು ಬಾರಿ ನೈಸರ್ಗಿಕ ಕಾರಣಗಳಿಂದ ಭೂಪ್ರದೇಶಗಳು ಮುಚ್ಚಿಹೋಗುವುದಕ್ಕೂ ಸಾವಿರಾರು ವರ್ಷಗಳು ಸಂದುಹೋಗಬೇಕು. ಅಂದಮೇಲೆ ಕಾಶಿಯ ಪುರಾತನತೆ ಎಷ್ಟಿರಬೇಕು?

    ಭಾರತದ ಪ್ರಾಚೀನ ನಗರಗಳಲ್ಲಿಯೂ ಅತಿ ಪ್ರಾಚೀನ ಈ ಕಾಶಿ. ಇತಿಹಾಸಪ್ರಸಿದ್ಧ ನಾಲಂದಾದAತಹ ಬೃಹತ್ ವಿಶ್ವವಿದ್ಯಾಲಯಗಳು ಸಹ ಸಣ್ಣದೆನಿಸುವಷ್ಟು ಮಹಾನ್ ವಿದ್ಯಾಕೇಂದ್ರವಾಗಿದ್ದದ್ದು ಕಾಶಿ. ಜ್ಞಾನಪಿಪಾಸುಗಳನ್ನು, ಪಂಡಿತೋತ್ತಮರನ್ನು, ರಾಜಮಹಾರಾಜರುಗಳನ್ನು, ವ್ಯಾಪಾರೋದ್ಯಮಿಗಳನ್ನು, ಪಾಮರರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ, ಸೆಳೆಯುತ್ತಿರುವ ಚುಂಬಕ ನಗರ. ಜನರನ್ನು ಬಿಡಿ, ದೇವಾನುದೇವತೆಗಳನ್ನೇ ತನ್ನ ಆಕರ್ಷಣೆಯ ಸೂಜಿಗಲ್ಲಿನಿಂದ ಸೆಳೆದು ಬಂಧಿಸಿಟ್ಟಿರುವುದು ಕಾಶಿ. ಅದರ ಸಂಪತ್ತು ಅನಾದಿಕಾಲದಿಂದ ಅಗಣಿತ. ತಾನು ವಿಶ್ವಾಮಿತ್ರನಿಗೆ ಕೊಡಬೇಕಿದ್ದ ಅಪಾರ ಪ್ರಮಾಣದ ಹೊನ್ನನ್ನು ಹೊಂದಿಸಲು ಹರಿಶ್ಚಂದ್ರ ಅಡಿಯಿಟ್ಟದ್ದು ಕಾಶಿಗೆ.

    ಕಾಶಿಯ ಸಾರನಾಥದಲ್ಲಿ ಬುದ್ಧನ ಮೊದಲ ಬೋಧನೆ ಆದದ್ದು. ಬುದ್ಧನ ಜಾತಕಕಥೆಗಳಲ್ಲಿ ಕಾಶಿಯ ಉಲ್ಲೇಖ ಬಹಳಷ್ಟು ಬಾರಿ ಕಾಣಿಸಿಕೊಂಡಿದೆ. ಹಲವಾರು ಜೈನಮುನಿಗಳ ಸಾಧನಾ ಕ್ಷೇತ್ರವೂ ಕಾಶಿ. ಜೈನಮಂದಿರಗಳೂ ಇಲ್ಲಿವೆ. ಜೈನ್ ಘಾಟ್ ಎಂದೇ ಕರೆಯಲ್ಪಡುವ ಸ್ನಾನಘಟ್ಟವೂ ಇಲ್ಲಿದೆ. ಆದಿಶಂಕರಾಚಾರ್ಯರಂತಹ ಅನೇಕಾನೇಕ ತಪೋಮಹಿಮರು ದರ್ಶಿಸಿದ, ಧ್ಯಾನಿಸಿದ ಕ್ಷೇತ್ರ ಕಾಶಿ ನಗರ.

    ದೇವಾನುದೇವತೆಗಳ ಬಿಡದ ಕಾಶಿಯ ಮೋಹ

    ಆ ಕೈಲಾಸದಂತೆ ಕಾಶಿಯೂ ಶಿವನ ಆವಾಸಸ್ಥಾನ. ಬ್ರಹ್ಮನೊಂದಿಗೆ ಒಪ್ಪಂದ ಮಾಡಿಕೊಂಡು ಇಲ್ಲಿನ ಸಾಮ್ರಾಜ್ಯವನ್ನು ಆಳುವುದಕ್ಕಾಗಿ ನೇಮಕಗೊಂಡ ದಿವೋದಾಸನೆಂಬ ರಾಜ. ದೇವಾನುದೇವತೆಗಳು ಕಾಶಿಯಲ್ಲಿದ್ದಲ್ಲಿ ಆಡಳಿತ ಕಷ್ಟವೆಂದು ಅವರೆಲ್ಲ ಅಲ್ಲಿಂದ ಬೇರೆ ಸ್ಥಳಗಳಿಗೆ ಹೊರಡಬೇಕೆಂದು ಪೂರ್ವಷರತ್ತನ್ನಿಟ್ಟಿದ್ದ. ಅದರಂತೆ ಕಾಶಿಯನ್ನು ತ್ಯಜಿಸಿದ ಶಿವ ನೀರಿನಿಂದ ಹೊರಬಂದ ಮೀನಿನಂತಾದ. ಹೇಗಾದರೂ ಮಾಡಿ ಆ ರಾಜನನ್ನು ಪದಚ್ಯುತಗೊಳಿಸಿದರೆ ಮಾತ್ರ ತಾನು ಪುನಃ ಕಾಶಿಪುರ ಪ್ರವೇಶಿಸಲು ಸಾಧ್ಯ ಎಂದು ಯೋಚಿಸಿ, ಅದನ್ನು ಕಾರ್ಯಗತಗೊಳಿಸಲು ಅರವತ್ನಾಲ್ಕು ಯೋಗಿನಿಯರನ್ನು, ಆದಿತ್ಯರನ್ನು, ತನ್ನ ಗಣದ ಅಧಿಪತಿಗಳನ್ನು ಒಬ್ಬೊಬ್ಬರನ್ನಾಗಿ ಕಾಶಿಗೆ ಕಳುಹಿಸಿದ. ಆದರೆ ಕಾಶಿಗೆ ಮನಸೋತ ಅವರಾರೂ ಮತ್ತೆ ಹಿಂತಿರುಗಲೇ ಇಲ್ಲ. ಅಲ್ಲಿಯೇ ನೆಲೆಸಿಬಿಟ್ಟರು. ಕಡೆಗೆ ಗಣಪತಿ ಉಪಾಯ ಮಾಡಿ ಜ್ಯೌತಿಷಿಯಂತೆ ನಟಿಸಿ ಆ ರಾಜನ ಮನವೊಲಿಸಿ ಮೋಕ್ಷಕ್ಕಾಗಿ ಎಲ್ಲವನ್ನೂ ಬಿಡುವಂತೆ ತಿಳಿಸಿ ಶಿವ ಮತ್ತೊಮ್ಮೆ ಕಾಶಿಗೆ ಬರಲು ನೆರವಾದನೆಂಬ ಕಥೆ ಪ್ರಚಲಿತವಿದೆ.

    ಶಿವಾಲಯಗಳ ಮಹಾಕೇಂದ್ರ ಕಾಶಿ

    ಇಲ್ಲಿ ಬ್ರಹ್ಮ, ವಿಷ್ಣು, ದೇವಿ, ಇಂದ್ರ, ನವಗ್ರಹಗಳು, ದೇವ-ಕಿನ್ನರ-ಯಕ್ಷ-ರಾಕ್ಷಸರಿಂದ ಹಿಡಿದು ನೂರಾರು ಮಹರ್ಷಿಗಳು ಸ್ಥಾಪಿಸಿದ, ಪೂಜಿಸಿದ ಶಿವಲಿಂಗಗಳಿವೆ. ಅವೆಲ್ಲಕ್ಕೂ ಮಂದಿರಗಳಿವೆ, ವಿಶಿಷ್ಟ ಪೂಜಾ ಕೈಂಕರ್ಯಗಳಿವೆ. ಸ್ವಯಂ ಕಾಲಭೈರವನೇ ಇಲ್ಲಿನ ಕ್ಷೇತ್ರ ರಕ್ಷಕ. ಇವನ ಸನ್ನಿಧಾನದಲ್ಲಿ ಕಾಣುವುದಂತೂ ಭಕ್ತಿಯ ಪರಾಕಾಷ್ಠೆ. ನವಗ್ರಹಗಳ ಪ್ರಭಾವವನ್ನು ಮಾತ್ರವಲ್ಲ ಯಮರಾಜನನ್ನೂ ನಿರ್ಬಂಧಿಸಿ ಜನರ ಪಾಪಗಳನ್ನು ಶೂನ್ಯಮಾಡುವ ಅಧಿಕಾರ ಇವನದೇ.

    ಹೆಜ್ಜೆಗೊಂದರಂತೆ ದೇವಾಲಯಗಳು, ಋಷಿಮುನಿಗಳಿಂದ ಸ್ಥಾಪಿಸಲ್ಪಟ್ಟ ಮಂದಿರಗಳು ಮತ್ತು ವಿಭಿನ್ನ ಕಾಲಘಟ್ಟಗಳಲ್ಲಿ ತಮ್ಮ ಕಾಶಿಯಾತ್ರೆಯ ಸಂದರ್ಭದಲ್ಲಿ ನೆನಪಿಗಾಗಿ ರಾಜಮಹಾರಾಜರುಗಳು ನಿರ್ಮಿಸಿದ ಅಥವಾ ದುರಸ್ತಿಗೊಳಿಸಿದ ದೇವಾಲಯಗಳು. ಸಾಧುಸಂತರ ಅನೇಕಾನೇಕ ಅಖಾಡಾಗಳು, ಮಹಂತರ ಪೀಠಗಳು, ವಿವಿಧ ಮತಪಂಥಗಳ ಆಚಾರ್ಯರುಗಳು ನೆಲೆನಿಂತು ನಡೆಸಿದ ಯಜ್ಞಯಾಗ ಕ್ಷೇತ್ರಗಳು, ಋಷಿ ಆಶ್ರಮಗಳು, ಹೀಗೆ ಅಗಣಿತ ಸ್ಮೃತಿಗಳನ್ನು ಹೊತ್ತು ಕಾಶಿಯು ಕಂಗೊಳಿಸುತ್ತಿದೆ. ಪರಕೀಯ ದಾಳಿಗೊಳಪಟ್ಟು ನೆಲಸಮಗೊಂಡರೂ ಹಿಂದೂಗಳ ಅಂತಃಶಕ್ತಿಯ ಸಂಕೇತವಾಗಿ ಪುನರ್ನಿರ್ಮಾಣಗೊಂಡು ಮತ್ತೆ ಮತ್ತೆ ತಲೆಯೆತ್ತಿ ನಿಲ್ಲುತ್ತಿದ್ದ ಕಾಶಿಯು ಈಗಲೂ ಮೂರುಸಾವಿರ ಮಂದಿರಗಳ ನೆಲೆಯಾಗಿದೆಯೆಂದರೆ ಇನ್ನು ಸನಾತನವೇ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಇನ್ನೆಷ್ಟು ಗುಡಿಗೋಪುರಗಳ ನೆಲೆಯಾಗಿದ್ದಿರಬಹುದು?

    ಕಾಶಿಶಾಶ್ವತ ಶ್ರದ್ಧಾಕೇಂದ್ರ

    ಕಾಶಿ ಪೀಳಿಗೆಯಿಂದ ಪೀಳಿಗೆಗೆ ಅನಂತಕಾಲದಿಂದ ಶ್ರದ್ಧೆಯನ್ನೂ ಆಚರಣೆಗಳನ್ನೂ ದಾಟಿಸಿಕೊಂಡು ಬಂದ ಅಪೂರ್ವ ಸ್ಥಳ. ಸಾಕ್ಷಾತ್ ಶಿವನೇ ಸಪ್ತರ್ಷಿಗಳಿಗೆ ತಿಳಿಸಿದ ಪೂಜಾವಿಧಾನ ಇಂದಿಗೂ ಕಾಶಿಯಲ್ಲಿ ಅನುಸರಿಸಲ್ಪಡುತ್ತಿದೆ. ಭಕ್ತಾದಿಗಳು ಸ್ವತಃ ಜ್ಯೋತಿರ್ಲಿಂಗಕ್ಕೆ ಜಲಾಭಿಷೇಕ ಮಾಡುವ, ಸ್ಪರ್ಶಿಸುವ ಅವಕಾಶವೂ ಇದೆ. ಗಂಗಾ ಆರತಿಯೂ ಅನಾದಿಕಾಲದಿಂದ ಅನೂಚಾನವಾಗಿ ನಡೆದು ಬಂದ ಪದ್ಧತಿ. ಪ್ರತಿನಿತ್ಯವೂ ಸೂರ್ಯಾಸ್ತದ ನಂತರ ನಡೆಯುವ ಈ ಪೂಜೆ ದೈವಿಕ ವಾತಾವರಣದಲ್ಲಿರುವಂತೆ ಮಾಡುತ್ತದೆ. ಪಂಚಭೂತಗಳೆಡೆಗಿನ ನಮ್ಮ ಆರಾಧನಾಭಾವಕ್ಕೆ ಇದು ಸಾಕ್ಷಿಯಾಗಿದೆ.

    ಪಂಚಕ್ರೋಸಿ ಪರಿಕ್ರಮವೂ ಪುರಾಣ ಉಲ್ಲೇಖಿತ ಸಾಧುಸಂತರ ಕಾಲದಿಂದ ಈಗಲೂ ಅದೇ ಪ್ರಾಚೀನ ಮಾರ್ಗದಲ್ಲಿಯೇ ನಡೆಯುತ್ತದೆ. ಪ್ರತಿವರ್ಷ ಸಾವಿರಾರು ಭಕ್ತರು ಆ ಹಾದಿಯಲ್ಲಿ ಕ್ರಮಿಸಿ ವಿಶ್ವನಾಥನಿಗೆ ಬೃಹತ್ ಪ್ರದಕ್ಷಿಣೆಯನ್ನು ಹಾಕುತ್ತಾರೆ. ದಾರಿಯುದ್ದಕ್ಕೂ ಇರುವ ೧೦೮ ಶಿವ ದೇವಾಲಯಗಳ ದರ್ಶನ, ಪೂಜೆಗಳನ್ನು ಕೈಗೊಳ್ಳುತ್ತಾರೆ. ಈ ಯಾತ್ರಿಕರು ರಾತ್ರಿ ತಂಗುವ ಧರ್ಮಛತ್ರಗಳು ಶತಮಾನಗಳಿಂದ ಇರುವಂತಹವುಗಳು. ಬಾಬಾ ವಿಶ್ವನಾಥನ ಜಯಕಾರ, ಮಂತ್ರಘೋಷ, ದೇವಾಲಯಗಳ ಘಂಟಾನಾದ ಬಾಹ್ಯ ಜಗತ್ತಿನ ಪರಿವೆಯನ್ನೇ ಇಲ್ಲವಾಗಿಸುತ್ತದೆ.

    ಗಂಗೆಯ ಪವಿತ್ರ ಸ್ನಾನಘಟ್ಟಗಳು

    ಗಂಗೆಯ ಎರಡು ಧಾರೆಗಳಾದ ವರುಣ ಮತ್ತು ಅಸ್ಸಿಗಳ ನಡುವೆ ಇರುವುದರಿಂದ ವಾರಣಾಸಿಯಾಗಿಯೂ, ಬನಾರಸ್ ಆಗಿಯೂ ಕರೆಸಿಕೊಳ್ಳುವ ಕಾಶಿಯಲ್ಲಿ ಗಂಗೆಯಂಚಿನ ತುಂಬಾ ಸ್ನಾನಘಟ್ಟಗಳ ಸಾಲು. ಹೀಗೆ ಇರುವುದು ೮೪ಕ್ಕೂ ಹೆಚ್ಚು ಸ್ನಾನಘಟ್ಟಗಳು. ಪ್ರವಾಹಕಾಲದಲ್ಲಿ ಉಕ್ಕಿ ಭೋರ್ಗರೆಯುವ, ಇನ್ನಿತರ ಸಮಯದಲ್ಲಿ ಶಾಂತವಾಗಿ ವಿಶಾಲವಾಗಿ ಹರಿಯುವ ಗಂಗೆಯ ತಟದ ಈ ಘಾಟ್ ಅಥವಾ ಸ್ನಾನಘಟ್ಟಗಳದ್ದೇ ಮತ್ತೊಂದು ಮಹಿಮಾನ್ವಿತ ಹಿನ್ನೆಲೆ. ಈ ಸ್ನಾನಘಟ್ಟಗಳ ಸೋಪಾನಗಳ ಮೇಲೆ ಕುಳಿತು ಅಥವಾ ಮಂದಗಮನ ದೋಣಿಯಲ್ಲಿ ಸಾಗುತ್ತ, ಗಂಗೆಯ ಅದ್ಭುತ ಪ್ರಾಕೃತಿಕ ಸೌಂದರ್ಯ ಮತ್ತು ಆಕೆಯ ಒಡಲಿನಲ್ಲಿ ಬಚ್ಚಿಟ್ಟುಕೊಂಡಿರುವ ಅಲೌಕಿಕ ಆಧ್ಯಾತ್ಮಿಕ ಸತ್ಯಗಳ ನಿಗೂಢತೆಯನ್ನು ಅಲ್ಲಿಯೇ ಇದ್ದು ಅನುಭವಿಸಬೇಕು.

    ಇಲ್ಲಿನ ಸ್ನಾನಘಟ್ಟಗಳ ನಿರ್ಮಿತಿಗೆ ಮಹಾರಾಜರುಗಳ ಕೊಡುಗೆಯೂ ಸಾಕಷ್ಟು. ವಿಜಯನಗರದ ದೊರೆಗಳು ಕೇದಾರಘಾಟ್ ಅನ್ನು ನಿರ್ಮಿಸಿದರೆ, ಮಹಾರಾಜ ಚೇತ್‌ಸಿಂಗ್ ನಿರ್ಮಿಸಿದ್ದು ಚೇತ್‌ಸಿಂಗ್‌ಘಾಟ್. ನಾಗಪುರದ ಮರಾಠ ಬೋಂಸ್ಲೆ ಮಹಾರಾಜರದು ಬೋಂಸ್ಲೆ ಘಾಟ್, ಜೊತೆಗೆ ಯಮನಿಗೆಂದು ಯಮುನೇಶ್ವರ ದೇವಸ್ಥಾನ. ಹಿಂದಿನ ಕೇವಲಗಿರಿಘಾಟ್ ರಾಣಿ ಅಹಲ್ಯಾಬಾಯಿಯ ಗೌರವಾರ್ಥ ಅಹಲ್ಯಾಘಾಟ್ ಆಗಿದೆ. ದೇಶದ ಪ್ರತಿ ರಾಜಮಹಾರಾಜರೂ ತನ್ನ ಭೇಟಿಯ ನೆನಪಿಗಾಗಿ ಸ್ನಾನಘಟ್ಟಗಳ ನಿರ್ಮಾಣವೋ, ದುರಸ್ತಿಯನ್ನೋ ಮಾಡಿಸಿದ್ದು, ಪ್ರತಿ ಸ್ನಾನಘಟ್ಟಕ್ಕೂ ಮಹತ್ತರ ಹಿನ್ನೆಲೆಗಳಿವೆ.

    ಬ್ರಹ್ಮದೇವನು ರಾಜ ದಿವೋದಾಸನಿಂದ ಹತ್ತು ಅಶ್ವಮೇಧಯಾಗಗಳನ್ನು ಮಾಡಿಸಿದ ಸ್ಥಳಕ್ಕೆ ದಶಾಶ್ವಮೇಧಘಾಟ್ ಎಂಬ ಹೆಸರು. ವಿಶ್ವನಾಥ ದೇವಳಕ್ಕೆ ಅತಿ ಸಮೀಪದಲ್ಲಿರುವ ಇದರ ಮೆಟ್ಟಿಲುಗಳ ಮೇಲೆ ನಡೆಯುವ ಗಂಗಾ ಆರತಿ ವಿಶ್ವ ಪ್ರಸಿದ್ಧ.

    ರಾಮಾಯಣವನ್ನು ಉತ್ತರಭಾರತದಲ್ಲಿ ಮನೆಮನೆಗೆ ತಲಪಿಸಿದ ರಾಮಚರಿತ ಮಾನಸವನ್ನು ಅವಧಿ ಭಾಷೆಯಲ್ಲಿ ತುಳಸಿದಾಸರು ರಚಿಸಿದ್ದು ಇದೇ ಗಂಗಾತಟದಲ್ಲಿಯೇ. ಅಷ್ಟೇಕೆ, ಹನುಮಾನ ಚಾಲೀಸಾ ಬರೆದದ್ದೂ ಸಹ ಇಲ್ಲಿಯೇ. ಅದಕ್ಕೆ ತುಳಸಿಘಾಟ್ ಎಂದೇ ಹೆಸರಾಗಿದೆ. ಮಾತೆ ಗಂಗೆ ತನ್ನೊಡಲಿಗೆ ಆಕಸ್ಮಿಕವಾಗಿ ಬಿದ್ದ ರಾಮಚರಿತ ಮಾನಸದ ಹಸ್ತಪ್ರತಿಯನ್ನು ಮುಳುಗಿಸದೆ, ಚೆಲ್ಲಾಪಿಲ್ಲಿಯಾಗಿಸದೆ ಸುರಕ್ಷಿತವಾಗಿ ದಡಕ್ಕೆ ತಲಪಿಸಿದಳೆಂಬ ಘಟನೆ ಇಲ್ಲಿ ಕೇಳಿಬರುತ್ತದೆ.

    ಶುಂಭನಿಶುಂಭರನ್ನು ಸಂಹರಿಸಿದ ದುರ್ಗಾಮಾತೆಯ ಖಡ್ಗ ಬಿದ್ದ ಜಾಗ ಅಸ್ಸಿಘಾಟ್. ಇನ್ನು ಪ್ರಸಿದ್ಧ ಹರಿಶ್ಚಂದ್ರಘಾಟ್‌ನ ಬಗ್ಗೆ ಯಾರಿಗೆ ಗೊತ್ತಿಲ್ಲ! ಹೀಗೆ ಪ್ರತಿ ಸ್ನಾನಘಟ್ಟಕ್ಕೂ, ಪ್ರತಿ ಸೋಪಾನಕ್ಕೂ ಇತಿಹಾಸವಿರುವ, ಪೌರಾಣಿಕತೆ ಇರುವ ನಗರ ಕಾಶಿ.

    ಪ್ರತಿ ಮನುಷ್ಯನೂ ಜೀವಿತಕಾಲದಲ್ಲಿ ಒಮ್ಮೆ ಭೇಟಿ ನೀಡಲೇಬೇಕಾದ ಸ್ಥಳ ಮಣಿಕರ್ಣಿಕಾಘಾಟ್. ಸ್ವಯಂ ವಿಷ್ಣುವಿನ ಚಕ್ರದಿಂದ ನಿರ್ಮಿತವಾದ ತೀರ್ಥವಿದು. ಇಲ್ಲಿ ಒಂದಲ್ಲ ಒಂದು ಚಿತೆಯಲ್ಲಿ ಸದಾ ಅಗ್ನಿ ಉರಿಯುತ್ತಲೇ ಇರುತ್ತದೆ. ಯಾತ್ರಿಕರು ಕೆಲದಿನಗಳು ಅಥವಾ ಕೆಲ ಗಂಟೆಗಳು ಇಲ್ಲಿ ಕಳೆದರೆ ಸ್ಮಶಾನವಾಸಿ ರುದ್ರನ ಲೀಲೆ ತುಸುವಾದರೂ ಅರಿವಾದೀತು. ಕಣ್ಣ ಮುಂದೆ ಉರಿಯುತ್ತಿರುವ ಹಲವಾರು ಚಿತೆಗಳಲ್ಲಿ ದಿಗ್ಗನೇ ನಮ್ಮ ಪಾರ್ಥಿವವೇ ಕಂಡು ಮನಸು ದಿಙ್ಮೂಢತೆಗೆ ದೂಡಲ್ಪಟ್ಟೀತು. ಮಣಿಕರ್ಣಿಕಾಘಾಟ್‌ನಲ್ಲಿ ಶವ ದಹನಗೊಂಡರೆ ಜನ್ಮ-ಮೃತ್ಯು ಚಕ್ರದಿಂದ ಮನುಷ್ಯನಿಗೆ ಬಿಡುಗಡೆ, ಮೋಕ್ಷಪ್ರಾಪ್ತಿ ಎಂಬ ನಂಬಿಕೆಯಿಂದ ಇಲ್ಲಿ ಅಗ್ನಿದೇವನಿಗೆ ಬಿಡುವೇ ಇಲ್ಲ. ಮಣಿಕರ್ಣಿಕಾಘಾಟ್ ಮತ್ತು ಹರಿಶ್ಚಂದ್ರಘಾಟ್‌ಗಳಲ್ಲಿ ವಿಭಿನ್ನ ಸಾಧನಾ ಪಥದಲ್ಲಿರುವ ಅಘೋರಿಗಳನ್ನೂ ಕಾಣಬಹುದು.

    ಅವಿನಾಶಿ ಕಾಶಿ

    ಈ ಪುರಾತನ ಕ್ಷೇತ್ರಕ್ಕೆ ನಿರಂತರವಾಗಿ ಹೇಗೆ ಹಿಂದು ಶ್ರದ್ಧಾಳುಗಳು ಹರಿದುಬರುತ್ತಿದ್ದರೋ, ಅದೇ ರೀತಿ ಇದರ ರಕ್ಷಣೆಗಾಗಿ ತಮ್ಮ ರಕ್ತವನ್ನು ಗಂಗಾನದಿಯಂತೆಯೇ ಹರಿಸಬೇಕಾದಂತೆ ಆದದ್ದು ಭಾರತದ ಇತಿಹಾಸದ ದುರಂತ ಅಧ್ಯಾಯಗಳಲ್ಲೊಂದು. ಮತಾಂಧ ಮುಸ್ಲಿಂ ದಾಳಿಕೋರರು ತಮ್ಮ ಚಾಳಿಯಂತೆ ಹನ್ನೆರಡನೆ ಮತ್ತು ಹದಿನೈದನೆ ಶತಮಾನದಲ್ಲಿ ಈ ಪ್ರಾಚೀನ ಶಿವಮಂದಿರವನ್ನು ನಾಶಗೊಳಿಸಿದರು. ಆದರೆ ಹಿಂದೂಗಳ ಸ್ವಾಭಿಮಾನದಿಂದ ಕೆಲವರ್ಷಗಳಲ್ಲೇ ಕಾಶಿ ಮತ್ತೆ ತಲೆಯೆತ್ತಿ ನಿಂತಿತು. ೧೧೯೪-ಮಹಮ್ಮದ್ ಘೋರಿಯ ಸೇನಾಧಿಪತಿ ಕುತ್ಬುದ್ದೀನ್ ಐಬಕ್ ಇದನ್ನು ನಾಶಗೊಳಿಸಿದ. ಸಾವಿರ ಮಂದಿರಗಳು ಆಗ ಧ್ವಂಸಗೊಂಡವೆಂದು ಹೇಳಲಾಗುತ್ತದೆ. ಈ ಸುದ್ದಿ ತಿಳಿದ ಹಿಂದುಗಳು ಹಳ್ಳಿಹಳ್ಳಿಗಳಿಂದ ಕಾಶಿಗೆ ಧಾವಿಸಿದರು. ಕಾಶಿಯಲ್ಲಿ ಮುಂದಿನ ದಿನಗಳು ನಿತ್ಯಸಂಘರ್ಷ. ಸಾಧುಗಳು, ಮಹಂತರು, ಸ್ಥಳೀಯ ನಾಯಕರುಗಳ ನೇತೃತ್ವದಲ್ಲಿ ಗುಂಪುಗೂಡುವುದು, ಮುಸಲ್ಮಾನ ಸಿಪಾಯಿ ತುಕಡಿಗಳೊಂದಿಗೆ ಕಾದಾಟ. ಕಡೆಗೂ ಹಿಂದೂ ಶಕ್ತಿ ಗೆದ್ದಿತು. ದೇವಾಲಯ ಧ್ವಂಸಗೊಂಡ ಇಪ್ಪತ್ತು ವರ್ಷದೊಳಗೆ ಅದೇ ಸ್ಥಳದಲ್ಲಿ ಮರುನಿರ್ಮಾಣವಾಯಿತು. ಇದನ್ನು ಕಾರ್ಯಗತಗೊಳಿಸಿದ್ದು ಶ್ರೀಮಂತ ಗುಜರಾತಿ ವ್ಯಾಪಾರಿ ಸಮೂಹ ೧೨೧೧ರಲ್ಲಿ.

    ಕನ್ನಡ ದೊರೆಯ ಕೊಡುಗೆ

    ಸಿಕಂದರ್ ಲೋಧಿಯ ಆಕ್ರಮಣದಿಂದ ದೇವಾಲಯ ನೆಲಕಚ್ಚಿ ೧೪೪೮ರಿಂದಲೇ ನಿಂತುಹೋಗಿದ್ದ ಪೂಜಾಕಾರ್ಯಗಳನ್ನು ಮರುಸ್ಥಾಪಿಸಲು ಕೆಳದಿಯ ದೊರೆ ದೊಡ್ಡ ಸಂಕಣ್ಣನಾಯಕ ಸಹ ಪ್ರಯತ್ನಿಸಿದ್ದು ದಾಖಲಾಗಿದೆ. ಅಕ್ಬರನ ಆಸ್ಥಾನ ತಲಪಿದ ನಾಯಕ, ಅವನ ಮನವೊಲಿಸಿ ವಿಶ್ವನಾಥನಿಗೆ ಪೂಜೆ ಆರಂಭಿಸಿದ್ದರ ಜೊತೆಗೆ ಮುಸಲ್ಮಾನರ ವಶದಲ್ಲಿದ್ದ ಮಠವನ್ನು ಬಿಡಿಸಿಕೊಂಡು ಜೀರ್ಣೋದ್ಧಾರ ಮಾಡಿ ಜಂಗಮವಾಟಿ ಎಂದು ಹೆಸರಿಸಿದ. ಕಾಶಿಯ ವೃಷಭಧ್ವಜೇಶ್ವರ ಸೇರಿದಂತೆ ಕೆಲ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ. ಅನೇಕ ಸ್ನಾನಘಟ್ಟಗಳಿಗೆ ಸೋಪಾನಗಳನ್ನು ನಿರ್ಮಿಸಿದ. ಇಂದಿಗೂ ಕಾಶಿಯ ಕಪಿಲಧಾರಾ ತೀರ್ಥದ ಮೆಟ್ಟಿಲುಗಳ ಮೇಲಿನ ಪರ್ಷಿಯನ್ ಶಾಸನಗಳಲ್ಲಿ ಈ ವಿವರಗಳು ದಾಖಲಾಗಿವೆ.

    ಪುನರ್ನಿರ್ಮಾಣದ ಪ್ರಯತ್ನಗಳು

    ವಿಶ್ವನಾಥನ ದೇವಾಲಯವನ್ನು ರಾಜಾ ತೋಡರಮಲ್ಲನ ಸಹಾಯದೊಂದಿಗೆ ಮರಾಠ ಪಂಡಿತರಾದ ನಾರಾಯಣಭಟ್ಟರ ನೇತೃತ್ವದಲ್ಲಿ ೧೫೯೫ರಲ್ಲಿ ಪುನರ್ನಿರ್ಮಿಸಲಾಯಿತು. ಇದಕ್ಕೂ ಮೊದಲು ರಾಜಾ ಮಾನ್‌ಸಿಂಗನು ದೇವಾಲಯ ನಿರ್ಮಿಸಿದನೆಂದು ಹೇಳಲಾಗುತ್ತಿದ್ದರೂ, ಆತ ತನ್ನ ಮನೆಯ ಹೆಣ್ಣುಮಕ್ಕಳನ್ನು ಅಕ್ಬರನ ಅಂತಃಪುರಕ್ಕೆ ಕಳಿಸಿದ್ದ ಎಂಬ ಹಿನ್ನೆಲೆಯಲ್ಲಿ ಹಿಂದುಗಳು ಅದನ್ನು ಬಹಿಷ್ಕರಿಸಿದ್ದರು. ತೀರ್ಥಯಾತ್ರಿಗಳ ನಿರಂತರ ಪ್ರವಾಹವನ್ನು ತಡೆಯುವುದಕ್ಕಾಗಿ, ಕಾಶಿಯ ಮಹಿಮೆಯನ್ನು ಕುಗ್ಗಿಸುವುದಕ್ಕಾಗಿ ಮೊಘಲ್ ದೊರೆಗಳು ಪ್ರಯತ್ನಿಸುತ್ತಲೇ ಇದ್ದರು. ಹಿಂದೂ ಯಾತ್ರಿಕರಿಗೆ ಕಾಶಿ ಪ್ರವೇಶಿಸಲು ದುಬಾರಿ ಸುಂಕವನ್ನು ವಿಧಿಸಿದರು. ಅಕ್ಬರ್, ಷಜಹಾನರೂ ಇದಕ್ಕೆ ಹೊರತಲ್ಲ. ಆದರೂ ಯಾತ್ರಿಕರ ಭೇಟಿ ನಿಲ್ಲಲೇ ಇಲ್ಲ. ಕರ್ನಾಟಕದ ಹೊಯ್ಸಳ ದೊರೆಗಳು ಅನೇಕ ಪ್ರದೇಶಗಳ ಉತ್ಪತ್ತಿಯನ್ನು ಹೀಗೆ ಕಾಶಿಗೆ ಹೋಗುವ ತೀರ್ಥಯಾತ್ರಿಕರ ಪರವಾಗಿ ತೆರಿಗೆ ಕಟ್ಟಲೆಂದೇ ನಿಗದಿ ಮಾಡಿದ್ದರು.

    ‘ಅಮರಪ್ರೇಮಿ’ ಷಹಜಹಾನ್ ೧೬೩೨ರಲ್ಲಿ ತನ್ನ ಸಂಬಂಧಿ ಬೈಜಾದ್ ಎನ್ನುವವನನ್ನು ಕಾಶಿಯ ನಾಶಕ್ಕೆ ದೊಡ್ಡ ಸೈನ್ಯದೊಂದಿಗೆ ಕಳುಹಿಸಿದ. ಆತ ಕಾಶಿಯಲ್ಲಿ ೭೬ ಮಂದಿರಗಳನ್ನು ಧ್ವಂಸಗೊಳಿಸಿದನಾದರೂ, ಜನಸಾಮಾನ್ಯ ಹಿಂದುಗಳ ಭಾರಿ ಪ್ರತಿರೋಧ ಮತ್ತು ಪ್ರಾಣಾರ್ಪಣೆಯಿಂದ ವಿಶ್ವನಾಥಮಂದಿರವನ್ನು ಧ್ವಂಸಗೊಳಿಸದೆ ಹಿಮ್ಮೆಟ್ಟಬೇಕಾಯಿತು.

    ಔರಂಗಜೇಬನಿಂದ ಕುಠಾರಾಘಾತ

    ಮೊಘಲರ ಅತಿ ಮತಾಂಧ ಸುಲ್ತಾನ ಔರಂಗಜೇಬ ೧೬೬೯ರಲ್ಲಿ ಮತ್ತೆಂದೂ ದೇವಾಲಯ ತಲೆಯೆತ್ತಬಾರದೆಂಬ ದುಷ್ಟತನದಿಂದ ಕಾಶಿಯ ವಿಶ್ವನಾಥನ ದೇವಸ್ಥಾನವನ್ನು ಧ್ವಂಸಗೊಳಿಸಿ ಅದರ ಅವಶೇಷಗಳ ಮೇಲೆಯೇ ಮಸೀದಿಯನ್ನು ನಿರ್ಮಿಸಿದ. ಪ್ರಬಲನಾಗಿದ್ದ ಮಿರ್ಜಾ ರಾಜಾ ಜೈಸಿಂಗ್ ವಿಧಿವಶನಾದದ್ದು ಔರಂಗಜೇಬನ ನಿರ್ಧಾರಗಳಿಗೆ ತಡೆಯಿಲ್ಲದಂತಾಯಿತು. ಆ ಹೋರಾಟದಲ್ಲಿ ದೇವಾಲಯದ ಪೂಜಾರಿಗಳೂ ಸೇರಿದಂತೆ ಅಸಂಖ್ಯ ಹಿಂದೂಗಳ ಬಲಿದಾನವಾಯಿತು. ಅಲ್ಲಿದ್ದ ಜ್ಞಾನವಾಪಿ ಹೆಸರಿನ ಬಾವಿಯ ಕಾರಣದಿಂದ ಈ ಮಸೀದಿಯೂ ಸಹ ಜ್ಞಾನವಾಪಿ ಮಸೀದಿಯೆಂದೇ ಕರೆಯಲ್ಪಟ್ಟಿತು. ದೇವಾಲಯದ ಪ್ರಮುಖ ಪುರೋಹಿತ ಪ್ರಧಾನ ಶಿವಲಿಂಗವನ್ನು ಹೊತ್ತು ಜ್ಞಾನವಾಪಿ ಬಾವಿಗೆ ಧುಮುಕಿ ಆತ್ಮಾರ್ಪಣೆ ಮಾಡಿಕೊಂಡ ಎಂದೂ ಹೇಳಲಾಗುತ್ತದೆ. ಫಿರಂಗಿಗಳನ್ನು ಬಳಸಿ ದೇವಾಲಯವನ್ನು ಧ್ವಂಸಗೊಳಿಸಿದ ಔರಂಗಜೇಬ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಹಿಂದೂ ಸ್ವಾಭಿಮಾನಕ್ಕೆ ಸತತ ಪೆಟ್ಟು ಬೀಳುತ್ತಲೇ ಇರಲೆಂಬ ಕಾರಣದಿಂದ ದೇವಾಲಯದ ಪ್ರಾಕಾರದ ಅರೆಬರೆ ಧ್ವಂಸಗೊಳಿಸಿದ ಗೋಡೆಯನ್ನೇ ಉಳಿಸಿಕೊಂಡು ಅದರ ಮೇಲೆಯೇ ಮಸೀದಿಯ ಗುಮ್ಮಟ ನಿರ್ಮಿಸುವಂತೆ ಆಜ್ಞಾಪಿಸಿದ. ಈ ಕಟ್ಟಡವನ್ನು ನೋಡಿದಾಗಲೆಲ್ಲ ಹಿಂದುಗಳ ಮನದಲ್ಲಿ ದುಃಖ, ರೋಷ ಇಮ್ಮಡಿಸುತ್ತಿತ್ತು.

    ಮಂದಿರ ಸ್ಥಾಪನೆಗೆ ನಿಲ್ಲದ ಪ್ರಯತ್ನಗಳು

    ದೇವಾಲಯ ಧ್ವಂಸದಿಂದ ಹಿಂದುಗಳ ಮನಸ್ಸಿಗೆ ಘಾಸಿಯಾದರೂ, ಮಹದೇವನನ್ನು ಮರೆಯಲು ಆಗಲಿಲ್ಲ. ಔರಂಗಜೇಬನ ನಂತರ ಮಹಾರಾಷ್ಟ್ರದ ಮರಾಠರ ಶಕ್ತಿಯೇ ಅಧಿಕವಾಗಿ ಭಾರತದ ಬಹು ಪ್ರದೇಶ ಅವರ ಆಳ್ವಿಕೆಗೆ ಬಂದಿತು. ೧೭೦೦ರಿಂದ ೧೭೫೦ರವರೆಗೆ ಕಾಶಿಯು ಮರಾಠರ ಆಳ್ವಿಕೆಯಲ್ಲಿಯೇ ಇತ್ತು. ಆದರೂ ವಿಶ್ವನಾಥಮಂದಿರವಿದ್ದ ಪುರಾತನ ಸ್ಥಳದಲ್ಲಿಯೇ ಪುನಃ ದೇವಾಲಯವನ್ನು ಏಕೆ ನಿರ್ಮಿಸಲಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ೧೭೪೨ರ ಸುಮಾರಿಗೆ ಇಂದೋರ್‌ನ ದೊರೆ ಮಲ್ಹಾರರಾವ್ ಹೋಳ್ಕರ್ ಜ್ಞಾನವಾಪಿ ಮಸೀದಿಯನ್ನು ಕೆಡವಲು ಯೋಜನೆ ರೂಪಿಸಿದನಾದರೂ, ಅವಧ್‌ನ ನವಾಬನ ಮಧ್ಯಪ್ರವೇಶದಿಂದ ಅದು ಕಾರ್ಯಸಾಧ್ಯವಾಗಲಿಲ್ಲ. ನವಾಬನು ಮರಾಠರ ಅಧೀನದಲ್ಲೇ ಇದ್ದರೂ ನಯವಂಚಕತನದಿಂದ ಹೋಳ್ಕರ್‌ನ ಯೋಜನೆಯನ್ನು ಕಾರ್ಯಗತವಾಗದಂತೆ ನೋಡಿಕೊಂಡ.

    ಸರಿಸುಮಾರು ೧೭೫೦ರ ಹೊತ್ತಿಗೆ ಜೈಪುರದ ಮಹಾರಾಜ ಆ ಇಡೀ ಪ್ರದೇಶದ ಸರ್ವೆಯನ್ನೂ ಮಾಡಿಸಿದ್ದ. ಆ ಸಂಪೂರ್ಣ ಪ್ರದೇಶವನ್ನು ಹಣ ನೀಡಿ ಖರೀದಿಸಿ, ಮತ್ತೆ ಕಾಶಿ ವಿಶ್ವನಾಥಮಂದಿರವನ್ನು ಭವ್ಯವಾಗಿ ನಿರ್ಮಿಸುವುದು ಅವನ ಉದ್ದೇಶವಾಗಿತ್ತು. ಆ ಸಮೀಕ್ಷೆಯಲ್ಲಿ ಜ್ಞಾನವಾಪಿ ಮಸೀದಿಯ ಗೋಡೆಗೆ ಹೊಂದಿಕೊಂಡಂತೆ ಇದ್ದ ಪುರೋಹಿತರ ಮನೆಗಳನ್ನೂ ಗುರುತಿಸಲಾಗಿತ್ತು. ಆದರೂ ಅದು ಕಾರ್ಯಗತವಾಗಲಿಲ್ಲ. ಒಟ್ಟಿನಲ್ಲಿ ವಿಶ್ವನಾಥನ ಮಂದಿರ ಪುನರ್ನಿರ್ಮಿಸುವ ಪ್ರಯತ್ನಗಳು ನಿರಂತರ ನಡೆಯುತ್ತಲೇ ಇದ್ದವು.

    ೧೮೨೪ರಲ್ಲಿ ಬ್ರಿಟಿಷ್ ಯಾತ್ರಿಕ ರೆಜಿನಾಲ್ದ್ ಹೆಬರ್ ತನ್ನ ಪ್ರವಾಸಿ ದಿನಚರಿಯಲ್ಲಿ ‘ಔರಂಗಜೇಬ ಹಿಂದುಗಳ ಪವಿತ್ರ ಸ್ಥಳವನ್ನು ನಾಶಗೊಳಿಸಿ ಮಸೀದಿ ನಿರ್ಮಿಸಿದ. ಶತಮಾನಗಳಾದರೂ ಹಿಂದೂಗಳು ತಮ್ಮ ಪವಿತ್ರ ಕಾಶಿ ವಿಶ್ವನಾಥಮಂದಿರ ಧ್ವಂಸವಾದುದರ ಬಗೆಗೆ ತೀವ್ರವಾಗಿ ದುಃಖಿತರಾಗಿದ್ದರು. ಈಗಲೂ ಸಹ ಹಿಂದೆ ದೇವಸ್ಥಾನವಿದ್ದ ಸ್ಥಳವೇ ಪ್ರಸ್ತುತ ದೇವಾಲಯಕ್ಕಿಂತ ಹೆಚ್ಚು ಪವಿತ್ರವೆಂದು ಪರಿಗಣಿಸಲ್ಪಡುತ್ತಿದೆ’ ಎಂದು ದಾಖಲಿಸಿದ್ದಾನೆ.

    ಮಹಾರಾಣಿಯ ಮಹಾನ್ ಪ್ರಯತ್ನ

    ಈಗಿರುವ ದೇವಾಲಯ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ೧೭೮೦ರಲ್ಲಿ ನಿರ್ಮಿಸಿದ್ದು. ಕಾಶಿಯಲ್ಲಿ ಶಿವನಿಗೆ ವೈಭವಯುತ ದೇವಾಲಯ ನಿರ್ಮಿಸಬೇಕೆಂಬ ಆಕೆಯ ತಂದೆ ಮಲ್ಹಾರರಾವ್ ಹೋಳ್ಕರ್‌ರ ಆಸೆಯೆ ಆಕೆಯ ಇಚ್ಛೆಯೂ ಆಗಿತ್ತು. ಆದರೆ ಹೊಸ ದೇವಾಲಯ ನಿರ್ಮಾಣಗೊಂಡಿದ್ದು ಮೂಲಸ್ಥಳದಲ್ಲಿ ಅಲ್ಲ; ಬದಲಾಗಿ ಹಿಂದಿದ್ದ ದೇವಾಲಯದಿಂದ ಕೆಲವೇ ಅಡಿಗಳ ದೂರದಲ್ಲಿ. ಈಗಲೂ ಹಳೆಯ ದೇಗುಲದ ಮುಂದಿದ್ದ ಶಿವನ ವಾಹನ ನಂದಿ ಮುಖಮಾಡಿರುವುದು ಜ್ಞಾನವಾಪಿ ಮಸೀದಿಯ ಕಡೆಗೆ. ಈ ದೇವಾಲಯ ನಿರ್ಮಾಣ ಹಿಂದುಗಳಲ್ಲಿ ಸ್ವಲ್ಪ ಸಮಾಧಾನವನ್ನು ತಂದಿತು. ಸಿಕ್ಖರ ಪ್ರಬಲ ದೊರೆ ಮಹಾರಾಜ ರಣಜಿತ್‌ಸಿಂಹ ೧೮೩೯ರಲ್ಲಿ ೮೦೦ ಕೆ.ಜಿ.ಗೂ ಹೆಚ್ಚು ತೂಕದ ಚಿನ್ನದಲ್ಲಿ ಈ ದೇವಾಲಯಕ್ಕೆ ಕಳಸ ಮತ್ತು ಮೇಲ್ಚಾವಣಿಗೆ ಹೊದಿಕೆ ಮಾಡಿಸಿದ.

    ನಾಶಗೊಂಡಿದ್ದ ವಿಶಾಲಾಕ್ಷಿಯ ದೇವಾಲಯವನ್ನು ೧೮೯೩ರಲ್ಲಿ ಮತ್ತೆ ನಿರ್ಮಿಸಿದ್ದು ತಮಿಳುನಾಡಿನ ಚೆಟ್ಟಿಯಾರ್‌ಗಳು. ಈಗಲೂ ಅಲ್ಲಿ ಪೂಜೆಯ ನೇತೃತ್ವವನ್ನು ತಮಿಳುನಾಡಿನ ಪುರೋಹಿತರೇ ವಹಿಸಿಕೊಂಡಿದ್ದಾರೆ.

    ಮೋಕ್ಷದಾಯಿನಿ ಕಾಶಿ

    ಇಲ್ಲಿನ ಸಣ್ಣಸಣ್ಣ ಗಲ್ಲಿಗಳಲ್ಲಿ ಯಾತ್ರಿಕರು ಕಳೆದುಹೋಗುವ ಸಾಧ್ಯತೆ ಎಷ್ಟಿದೆಯೋ, ಇಲ್ಲಿನ ಪುರಾತನ ಜೀವಂತ ನೆಲದಲ್ಲಿ ನಿಶ್ಚಿಂತೆಯಿಂದ ಕೆಲದಿನ ತಂಗುವ ತೀರ್ಥಯಾತ್ರಿ ತನ್ನನ್ನು ತಾನು ಅರಿತುಕೊಳ್ಳುವ ಸಾಧ್ಯತೆಗಳೂ ಅಷ್ಟೇ ಇವೆ. ಒಂದು ದಿನದ ಪ್ರವಾಸಕ್ಕೆಂದು ಹೋದವರು ದಿನಗಟ್ಟಲೆ ಉಳಿದ ಅಥವಾ ಮತ್ತೆ ಮತ್ತೆ ದರ್ಶಿಸುವ ಅಭ್ಯಾಸ ಮಾಡಿಕೊಂಡ ಉದಾಹರಣೆಗಳು ಅಸಂಖ್ಯ. ಕಾಶಿಯೆಂಬ ಮಾಯೆ ಆಸ್ತಿಕನನ್ನು ಸದಾ ಸೆಳೆಯುತ್ತದೆ, ಹಾಗೆಯೆ ಮಾಯೆಯನ್ನು ಮೀರುವ ವಿದ್ಯೆಯನ್ನೂ ಒದಗಿಸುತ್ತದೆ.

    ಸಾಯುವುದಾದರೆ ಕಾಶಿಯಲ್ಲಿ ಸಾಯಬೇಕು, ಇಲ್ಲಿ ಯಮದೂತರ ಪ್ರವೇಶವಿಲ್ಲ. ಶಿವದೂತರೇ ಕೈಲಾಸಕ್ಕೆ ಮೃತ ಜೀವಿಯನ್ನು ಒಯ್ಯುವವರು. ಗತಿಸಿದ ಮನೆಯ ಹಿರಿಯರ ಅಸ್ತಿಯನ್ನು ಗಂಗೆಯಲ್ಲಿ ವಿಸರ್ಜಿಸಬೇಕು. ಇಲ್ಲಿನ ತಟದಲ್ಲಿ ಪಿಂಡಪ್ರದಾನ ಮಾಡಬೇಕು ಎಂಬುದು ಹಿಂದುಗಳ ಮನದಲ್ಲಿ ಹುದುಗಿರುವ ಇಚ್ಛೆ. ಅದಕ್ಕೆ ವಿಶ್ವದಾದ್ಯಂತ ಇರುವ ಹಿಂದುಗಳು ಪಿತೃಕಾರ್ಯಕ್ಕಾಗಿ ಕಾಶಿಗೆ ಬರುತ್ತಾರೆ. ಈ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆಯೇ ಹೊರತು ಕುಸಿಯುವ ಪ್ರಮೇಯವೇ ಬರುತ್ತಿಲ್ಲ.

    ಕಾಲದೇಶ ಮೀರಿದ ಕಾಶಿಯ ಸೆಳೆತ

    ಆಧುನಿಕ ಕಾಲದಲ್ಲಿಯೂ ಕಾಶಿಯು ಜ್ಞಾನದ ಕಣಜ ಮತ್ತು ಕ್ರಾಂತಿಯ ಕಣವಾಗಿ ಹೆಸರಾಗಿದೆ. ಸಣ್ಣಪುಟ್ಟ ಗುರುಕುಲಗಳಿಂದ ಹಿಡಿದು ಬೃಹತ್ ವೇದಶಿಕ್ಷಣ ಮಹಾವಿದ್ಯಾಲಯಗಳವರೆಗೆ ಎಲ್ಲಕ್ಕೂ ಆಶ್ರಯ ನೀಡಿದ್ದು ಕಾಶಿ. ಮದನಮೋಹನ ಮಾಲವೀಯರು ಹಿಂದೂ ವಿಶ್ವವಿದ್ಯಾಲಯಕ್ಕೆ ಕಾಶಿಯನ್ನು ಆಯ್ಕೆ ಮಾಡಿಕೊಳ್ಳಲು ಇದೂ ಪ್ರಮುಖ ಕಾರಣ. ಚಂದ್ರಶೇಖರ್ ಆಜಾದ್, ಭಗವಾನ್‌ದಾಸ್‌ರಂತಹ ನೂರಾರು ಕ್ರಾಂತಿಕಾರಿಗಳ ಕರ್ಮಕ್ಷೇತ್ರವೂ ಕಾಶಿಯೇ. ಕಾಶಿಯಲ್ಲಿ ಪ್ರಧಾನಿ ಮೋದಿಯವರು ಸಂಸದರಾದ ಮೇಲೆ ೨೦೧೯ರಲ್ಲಿ ನಿರ್ಮಾಣವಾದ ಕಾರಿಡಾರ್ ಅದರ ಭವ್ಯತೆಗೊಂದು ಇಂಬನ್ನು ನೀಡಿದೆ.

    ಕಾಶಿಯು ತನ್ನ ಪವಿತ್ರತೆ, ಪ್ರಾಚೀನತೆಗಳಿಂದ ಪ್ರಪಂಚದಾದ್ಯಂತ ಹಿಂದೂಗಳ ಹೃದಯದಲ್ಲಿ ಸದಾಕಾಲಕ್ಕೂ ಪೂಜನೀಯ ಸ್ಥಳವಾಗಿ ಪರಿಗಣಿಸಲ್ಪಟ್ಟಿದೆ. ಇದು ಕೇವಲ ನಗರವಲ್ಲ – ಆತ್ಮಾನುಸಂಧಾನದ ಭೂಮಿ. ಭಕ್ತಿಯು ಪರಾಕಾಷ್ಠೆ ಕಾಣುವ ದಿವ್ಯ ನೆಲೆ. ಸಹಸ್ರಾರು ಮಂದಿರಗಳ ಅಭಯಧಾಮ. ಕಾಶಿಯಲ್ಲಿ ಭಕ್ತರು ತಮ್ಮ ಆರಾಧ್ಯ ದೇವನ ದೈವಿಕ ಸಾನ್ನಿಧ್ಯದಲ್ಲಿ ತಮ್ಮನ್ನೇ ತಾವು ಮರೆಯುತ್ತಾರೆ. ಜನ್ಮಮೃತ್ಯು ಚಕ್ರದಿಂದ ಬಿಡಿಸುವ ಮಹಾದೇವನ ಆಶ್ರಯದಲ್ಲಿ ಜೀವನ ಸಾರ್ಥಕಪಡಿಸಿಕೊಳ್ಳುತ್ತಾರೆ.

    ಇಲ್ಲಿ ದೇವಗಂಗೆಯು ನಿರಂತರವಾಗಿ ಹರಿಯುತ್ತ ಮಾತೆಯ ಕಾರುಣ್ಯವನ್ನು ಹರಿಸುತ್ತಿರುತ್ತಾಳೆ. ಕಾಶಿಯು ಆಸ್ತಿಕರ ಜೀವಕ್ಕೆ ಭರವಸೆ ನೀಡಿದೆ, ಭಕ್ತಿಮಾರ್ಗದ ದಾರಿದೀಪವಾಗಿ ಉಳಿದಿದೆ. ಯಾತ್ರಿಕರು ಮತ್ತು ಅಧ್ಯಾತ್ಮದ ಅನ್ವೇಷಕರನ್ನು ಮಹಾಚುಂಬಕದಂತೆ ತನ್ನತ್ತ ಸೆಳೆಯುತ್ತಲೇ ಇದೆ. ಕಾಶಿಯನ್ನು ರಕ್ಷಿಸಲು ಹಿಂದೂಗಳು ಮಾಡಿದ ತ್ಯಾಗಬಲಿದಾನಗಳು ಅವರ ಅಚಲ ಭಕ್ತಿ ಮತ್ತು ಕಾಲದೇಶದ ಗಡಿಗಳನ್ನು ಮೀರಿದ ಪ್ರಾಚೀನ ನಗರದ ಕುರಿತ ನಿರಂತರ ಪ್ರವಹಿಸುತ್ತಿರುವ ಶ್ರದ್ಧಾ ಪರಂಪರೆಗೆ ಸಾಕ್ಷಿಯಾಗಿದೆ.

    ಅಮರ ಅವಿನಾಶಿ ಶಿವನಗರ – ಕಾಶಿ

  • ಹಿಂದಿನ ಎಲ್ಲ ಪ್ರಧಾನಿಗಳಿಗಿಂತ ಮೋದಿ ಅವರು ಭಿನ್ನವಾಗಿದ್ದಾರೆ. ಮುಂದೆ ಬಂದ ಪ್ರತಿಯೊಂದು ಪ್ರಸ್ತಾವವನ್ನು ಅವರು ಸವಿವರವಾಗಿ ಪರಿಶೀಲಿಸುತ್ತಾರೆ. ವಿವಿಧ ಹಂತದ ಅಧಿಕಾರಿಗಳಿಂದ, ಪಕ್ಷ ಮತ್ತು ಸಂಪುಟದ ಹಿರಿಯರಿಂದ ಹೆಚ್ಚಿನ ಮಾಹಿತಿಗಳನ್ನು ಕ್ರೋಡೀಕರಿಸುತ್ತಾರೆ. ಇಂತಹ ಆಯ್ಕೆ ವಿಚಾರದಲ್ಲಿ ವಾಜಪೇಯಿ ಅವರು ತಮ್ಮ ಪ್ರಧಾನ ಕಾರ್ಯದರ್ಶಿ ಮತ್ತು ಓರ್ವ ಹಿರಿಯ ಐಎಎಸ್ ಅಧಿಕಾರಿಯನ್ನು ಅವಲಂಬಿಸುತ್ತಿದ್ದರು. ಎಲ್.ಕೆ. ಆಡ್ವಾಣಿ, ಜಾರ್ಜ್ ಫೆರ್ನಾಂಡಿಸ್ ಮುಂತಾದ ಕೆಲವು ಸಹೋದ್ಯೋಗಿಗಳಲ್ಲಿ ಚರ್ಚಿಸುತ್ತಿದ್ದರು. ಆದರೆ ಮೋದಿ ನೇಮಕದ ನಿರ್ಧಾರಗಳಿಗೆ ರೀತಿ ಯಾರನ್ನೂ ಅವಲಂಬಿಸುವುದಿಲ್ಲ ಅಥವಾ ಪಕ್ಷದ ಒಳಗಿನ ಮತ್ತು ಹೊರಗಿನ ಯಾವುದೇ ಬಗೆಯ ಒತ್ತಡಗಳಿಗೆ ಒಳಗಾಗುವುದಿಲ್ಲ. ಅವರಿಗೆ ಬೇಕಿರುವುದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳು. ಒಮ್ಮೆ ಅಂತಹ ವ್ಯಕ್ತಿಯನ್ನು ಆಯ್ಕೆ ಮಾಡಿದರೆಂದರೆ ಮತ್ತೆ ಅವರನ್ನು ಸಾಧ್ಯವಾದಷ್ಟು ತಮ್ಮೊಂದಿಗೆ ಉಳಿಸಿಕೊಳ್ಳಲು ಯತ್ನಿಸುತ್ತಾರೆ.

    ಪ್ರತಿಭಾ ಪಲಾಯನವು ಸುದೀರ್ಘ ಕಾಲದಿಂದ ಭಾರತದ ಒಂದು ಸಮಸ್ಯೆಯಾಗಿ ಬೆಳೆದುಬಂದಿದೆ. ದೇಶದ ಅತ್ಯಂತ ಅಮೂಲ್ಯ ಮತ್ತು ಸೀಮಿತ ಸಂಪನ್ಮೂಲದಿಂದ ಕಲಿತು ಉನ್ನತ ವಿದ್ಯಾಭ್ಯಾಸವನ್ನು ಪೂರೈಸಿದ ಯುವಜನರು ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ ಮುಂತಾಗಿ ವಿದೇಶಗಳಲ್ಲಿ ಹೋಗಿ ನೆಲೆಸುವುದು. ಇದರಿಂದ ದೇಶಕ್ಕೆ ಎಷ್ಟು ನಷ್ಟ! ದೇಶದ ಅಭಿವೃದ್ಧಿ, ಸಮೃದ್ಧಿಗಳಿಗೆ ತಮ್ಮ ಕೊಡುಗೆಯನ್ನು ನೀಡಿ ತಾವು ಕೂಡ ಬೆಳೆಯಬೇಕಾದವರು ಹುಟ್ಟಿದ ದೇಶದ ಪಾಲಿಗೆ ಶಾಶ್ವತವಾಗಿ ಇಲ್ಲವಾಗುವುದೆಂದರೇನು? ಆ ರೀತಿಯಲ್ಲಿ ತಾಯ್ನಾಡಿಗೆ ಬಹುತೇಕ ಪೂರ್ತಿಯಾಗಿ ಗೈರಾಗುತ್ತಿದ್ದವರಲ್ಲಿ ದೇಶದ ಐಐಟಿ ಪದವೀಧರರು ಮುಂಚೂಣಿಯಲ್ಲಿದ್ದರು. ಈಗ, ಅಂದರೆ ಮುಖ್ಯವಾಗಿ ಕಳೆದ ಸುಮಾರು ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ ಎಂದು ಐಐಟಿ ಕಾನ್ಪುರದ ನಿರ್ದೇಶಕ ಅಭಯ್ ಕರಂದೀಕರ್ ಅವರು ಈಚಿನ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

    “ಜನ ಕಲಿಯಲು ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿರುತ್ತಾರೆ. ಹಾಗಾಗಿ ನಾವು ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಉತ್ತಮ ಶಿಕ್ಷಣವ್ಯವಸ್ಥೆಯನ್ನು ರೂಪಿಸಬೇಕು. ನೂತನ ಶಿಕ್ಷಣ ನೀತಿಯು (ಎನ್‌ಇಪಿ) ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಉತ್ತಮ ವಿಶ್ವವಿದ್ಯಾಲಯಗಳ ಸ್ಥಾಪನೆ ಇದರ ಗುರಿ. ಶಿಕ್ಷಕರ ಮಟ್ಟದಲ್ಲೂ ಇದನ್ನು ಮಾಡಲಾಗುತ್ತಿದೆ. ಶಿಕ್ಷಕರ ಗುಣಮಟ್ಟವು ಉತ್ತಮವಾದರೆ ನಮ್ಮ ವಿದ್ಯಾರ್ಥಿಗಳು ಇಲ್ಲೇ ದೇಶದಲ್ಲೇ ವಿದ್ಯಾಭ್ಯಾಸವನ್ನು ಕೈಗೊಳ್ಳುತ್ತಾರೆ. ಈಗ ದೇಶದಲ್ಲಿ ತುಂಬ ಉದ್ಯೋಗಾವಕಾಶಗಳಿವೆ. ಹತ್ತು ವರ್ಷಗಳ ಹಿಂದೆ ಶೇ. ೯೦ರಷ್ಟು ಐಐಟಿ ಪದವೀಧರರು ವಿದೇಶಗಳಿಗೆ ಹೋಗುತ್ತಿದ್ದರು. ಈಗ ಶೇ. ೧೦ರಷ್ಟು ಜನ ಮಾತ್ರ ಹೊರಗೆ ಹೋಗುತ್ತಾರೆ” ಎಂದು ಏಷ್ಯಾನೆಟ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

    ಮುಂದುವರಿದು, “ದೇಶದಲ್ಲಿ ನಿಂತ ಹಲವರು ಸ್ವಂತ ಸ್ಟಾರ್ಟಪ್‌ಗಳನ್ನು ಹೊಂದಿದ್ದಾರೆ. ಅದರಿಂದ ಉದ್ಯೋಗಾವಕಾಶ ಹೆಚ್ಚುತ್ತಿದೆ. ಇದರಿಂದ ದೇಶ ಬೆಳೆಯುತ್ತದೆ. ಈಗ ನಾವು ದೇಶೀಯವಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಭಾರತವು ತಂತ್ರಜ್ಞಾನದ ಬಹುದೊಡ್ಡ ಮಾರುಕಟ್ಟೆಯಾಗಿದೆ. ಇದನ್ನು ನಾವು ದೇಶೀಯವಾಗಿ ಸಿದ್ಧಪಡಿಸುತ್ತೇವೆ; ಮತ್ತು ಹಲವು ದೇಶಗಳಿಗೆ ರಫ್ತು ಮಾಡುತ್ತೇವೆ. ಕೋವಿಡ್ ಲಸಿಕೆ ಇದಕ್ಕೊಂದು ಉತ್ತಮ ಉದಾಹರಣೆ. ೫ಜಿ, ೬ಜಿ ತಂತ್ರಜ್ಞಾನಗಳ ಅಭಿವೃದ್ಧಿ, ವೈದ್ಯಕೀಯ ಉಪಕರಣಗಳು ಮತ್ತು ಕೃತಕ ಅಂಗಾಂಗಗಳ ಅಭಿವೃದ್ಧಿ ನಮ್ಮಲ್ಲೇ ನಡೆದಿದ್ದು, ಕೃತಕ ಹೃದಯವನ್ನು ತಯಾರಿಸುವತ್ತ ಪ್ರಯತ್ನ ಸಾಗಿದೆ. ಇವು ದೇಶದಲ್ಲಿ ಸದ್ಯ ಉಪಯೋಗಕ್ಕೆ ಬಾರದಿರಬಹುದು. ಆದರೆ ಅವುಗಳ ರಫ್ತು ಸಾಧ್ಯ. ಕೇಂದ್ರಸರ್ಕಾರವೀಗ ಸೆಮಿಕಂಡಕ್ಟರ್ ಕಮಿಷನ್ ಆರಂಭಿಸಿದೆ. ಇದು ಭವಿಷ್ಯದಲ್ಲಿ ದೇಶದ ಉತ್ಪಾದನಾ ವಲಯದಲ್ಲಿ ಕ್ರಾಂತಿಯನ್ನೇ ಮಾಡಲಿದೆ” ಎಂದು ಅಭಯ್ ಕರಂದೀಕರ್ ವಿವರಿಸಿದರು.

    ಪ್ರತಿಭಾ ಪಲಾಯನವನ್ನು ತಡೆಯುವುದು ಸೇರಿದಂತೆ ಕೇಂದ್ರಸರ್ಕಾರದ ಹೊಸ ಶಿಕ್ಷಣ ನೀತಿಯಿಂದ ಬಹಳಷ್ಟು ಪ್ರಗತಿಯನ್ನು ಸಾಧಿಸಬಹುದು. ಆದರೆ ಅದರ ನಡುವೆ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಎನ್‌ಇಪಿಗೆ ಅವಕಾಶ ನೀಡದಿರುವಂತಹ ವಿದ್ಯಮಾನಗಳು ಕೂಡ ನಮ್ಮ ಮುಂದಿವೆ.

    ಗುಣಮಟ್ಟರಫ್ತು ಏರಿಕೆ

    ದೇಶದಲ್ಲಿ ಇದೇ ರೀತಿ ಪೂರ್ತಿ ಬದಲಾವಣೆಯನ್ನು ತಂದ ಇನ್ನೊಂದು ಕ್ಷೇತ್ರ ಉತ್ಪಾದನಾರಂಗ ಎನ್ನಬಹುದು. ಹಿಂದೆ ದೊಡ್ಡ ರೀತಿಯ ಉತ್ಪಾದನೆಗೆ ಅಂಜುತ್ತಿದ್ದ ಅಥವಾ ಹಿಂಜರಿಯುತ್ತಿದ್ದ ಹಲವು ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಸರ್ಕಾರವೀಗ ದೊಡ್ಡ ಹೆಜ್ಜೆಗಳನ್ನೇ ಇಡುತ್ತಿದೆ; ಯಶಸ್ವೀ ಉತ್ಪಾದನೆಯೊಂದಿಗೆ ರಫ್ತು ಮಾರುಕಟ್ಟೆಗೂ ಪ್ರವೇಶಿಸಿ ಪ್ರಮುಖ ಸ್ಪರ್ಧಿ ಎನಿಸುತ್ತಿದೆ. ಆ ಹಿನ್ನೆಲೆಯನ್ನು ಕೇಂದ್ರ ವಾಣಿಜ್ಯ ಕೈಗಾರಿಕೆ ಮತ್ತು ಗ್ರಾಹಕ ವ್ಯವಹಾರಗಳ ಪ್ರಭಾವೀ ಸಚಿವರಾದ ಪೀಯೂಷ್ ಗೋಯಲ್ ವಿವರಿಸಿ, ಗುಣಮಟ್ಟದಲ್ಲಿ ಭಾರತವೀಗ ವಿಶ್ವ ನಾಯಕ ಆಗುತ್ತಿದೆ ಎಂದಿದ್ದಾರೆ. “ಉತ್ಪಾದನೆಯಲ್ಲಿ ‘ಶೂನ್ಯ ದೋಷ ಮತ್ತು ಶೂನ್ಯ ದುಷ್ಪರಿಣಾಮ’ ಎನ್ನುವ ಪ್ರಧಾನಿ ಮೋದಿ ಅವರ ಕರೆಗೆ ಅನುಗುಣವಾಗಿ ಭಾರತವು ಅತ್ಯುನ್ನತ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಅತ್ಯುನ್ನತ ಉತ್ಪನ್ನಗಳನ್ನು ಪೂರೈಸಿ ವಿಶ್ವನಾಯಕನಾಗಲು ಉದ್ದೇಶಿಸಿದೆ. ೨೦೪೭ರ ಹೊತ್ತಿಗೆ ಭಾರತವು ಮುಂದುವರಿದ (ಅಭಿವೃದ್ಧಿ ಹೊಂದಿದ) ದೇಶವಾಗುವ ಗುರಿಯಲ್ಲಿ ಪ್ರಮುಖ ಭಾಗವೆಂದರೆ ಸ್ಪರ್ಧಾತ್ಮಕ ದರಗಳಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸುವುದಾಗಿದೆ. ‘ಮೇಕ್ ಇನ್ ಇಂಡಿಯಾ’ ಬ್ರಾಂಡ್ ದೇಶದ ಮತ್ತು ವಿದೇಶೀ ಗ್ರಾಹಕರನ್ನು ತೃಪ್ತಿಪಡಿಸುವ ಗುಣಮಟ್ಟದ ಮುದ್ರೆಯಾಗಿದೆ. ಆ ಬಗ್ಗೆ ದಿಟ್ಟಕ್ರಮ ಕೈಗೊಳ್ಳಲಾಗುತ್ತಿದೆ. ಉತ್ಪಾದಕರು ಮತ್ತು ಗ್ರಾಹಕರ ಹಿತಾಸಕ್ತಿಗಳಲ್ಲಿ ಸಮತೋಲನ ಕಾಯ್ದುಕೊಂಡಾಗ ಲಾಭದಾಯಕ ಮಾರುಕಟ್ಟೆಯನ್ನು ಉಳಿಸಿಕೊಳ್ಳಬಹುದೆಂದು ಮೋದಿ ಹೇಳುತ್ತಾರೆ. ಆ ಕಾರ್ಯತಂತ್ರದ ಪ್ರಮುಖ ಆದ್ಯತೆ ಗುಣಮಟ್ಟದ ವರ್ಧನೆಯಾಗಿದೆ” ಎಂದವರು ತಿಳಿಸಿದ್ದಾರೆ.

    ಆ ಸಂಬಂಧವಾಗಿ ಆದೇಶಗಳನ್ನು ಹೊರಡಿಸಲಾಗಿದ್ದು, ನಮ್ಮ ಉತ್ಪನ್ನಗಳು ಭಾರತೀಯ ಮಾನಕ ಬ್ಯೂರೋದ (ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್) ಮಾನದಂಡಗಳಿಗೆ ಅನುಗುಣವಾಗಿರಬೇಕು. ಇದು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಬಯಸುವ ಗ್ರಾಹಕರಿಗೆ ವರದಾನವಾಗಿದೆ. ಮೋದಿ ಅವರ ಡಿಜಿಟಲ್ ಇಂಡಿಯಾ ಜಗತ್ತಿನ ಜೊತೆ ಸಂಪರ್ಕ ಹೊಂದಲು ಮತ್ತು ಉತ್ತಮ ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲಕರವಾಗಿದೆ. ಯಾವ ಉತ್ಪನ್ನದ ಬಗ್ಗೆ ಅಸಮಾಧಾನ ಉಂಟಾಗಿದೆಯೋ ಅದನ್ನು ಸಾರ್ವಜನಿಕವಾಗಿ ತಿಳಿಸಲಾಗುತ್ತದೆ. ಅದರಿಂದ ಉತ್ಪನ್ನಗಳ ಗುಣಮಟ್ಟ, ಬೆಲೆ ಮತ್ತು ನಾವೀನ್ಯಗಳಲ್ಲಿ ಸಮತೋಲನ ಬರುತ್ತದೆ. ಈಗ ಸರ್ಕಾರ ರಫ್ತು ಹೆಚ್ಚಿಸುವ ಉದ್ದೇಶದಿಂದ ಗುಣಮಟ್ಟದ ಉತ್ಪನ್ನ ಪೂರೈಸಲು ಆದ್ಯತೆ ನೀಡುತ್ತಿದೆ.

    ಆಟಿಕೆ ಸುಧಾರಣೆ

    ೨೦೧೪ರ ಮುನ್ನ ಒಟ್ಟು ೧೦೬ ಉತ್ಪನ್ನಗಳಿಗೆ ಕೇವಲ ೧೪ ಗುಣಮಟ್ಟ ನಿಯಂತ್ರಣ ಕಚೇರಿ (ಕ್ಯೂಸಿಐ)ಗಳಿದ್ದವು. ಈಗ ೬೫೩ ಉತ್ಪನ್ನಗಳಿಗೆ ೧೪೮ ಕಚೇರಿಗಳಿವೆ. ಇದರಲ್ಲಿ ಆಟಿಕೆ, ಪಾದರಕ್ಷೆ, ಗೃಹಬಳಕೆ ವಸ್ತು, ಏರ್‌ಕಂಡೀಷನ್‌ಗಳೆಲ್ಲ ಸೇರಿವೆ. ಈ ಕ್ಯೂಸಿಐಗಳು ‘ಜಗತ್ತಿಗಾಗಿ ಮೇಕ್ ಇನ್ ಇಂಡಿಯಾ’ ಧ್ಯೇಯವನ್ನು ವೇಗಗೊಳಿಸುತ್ತಿವೆ. ಅದರ ಅಡಿಯಲ್ಲಿ ಅನೇಕ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಹಲವು ಗುಣಮಟ್ಟ- ನಿಯಂತ್ರಿತ ವಸ್ತುಗಳು ಕೂಡ ರಫ್ತು ಆಗುತ್ತಿವೆ. ಎರಕ ಹೊಯ್ದ ಕಬ್ಬಿಣದ ಉತ್ಪನ್ನವು ಕಳೆದ ವರ್ಷ ೫೩೫ ಮಿಲಿಯನ್ ಡಾಲರ್‌ನಷ್ಟು ರಫ್ತಾಗಿತ್ತು; ಅದೇ ವೇಳೆ ಅದರ ಆಮದಿನ ಮೌಲ್ಯ ಕೇವಲ ೬೮ ಮಿಲಿಯನ್ ಡಾಲರ್‌ನಷ್ಟು. ಸುಮಾರು ೨೫ ಕ್ಯೂಸಿಐಗಳು ಆಮದನ್ನು ಮೀರಿದ ರಫ್ತು ಹೊಂದಿವೆ. ಅಂದರೆ ದೇಶದಲ್ಲೀಗ ಕ್ಯೂಸಿಐಗಳು ವಸ್ತುಗಳ ಗುಣಮಟ್ಟದ ಬಗ್ಗೆ ಪ್ರಜ್ಞೆಯನ್ನು ಬೆಳೆಸುತ್ತಿವೆ. ಕಳಪೆ ವಸ್ತುಗಳು ದೇಶಕ್ಕೆ ಆಮದಾಗಿ ಬಂದು ರಾಶಿ ಬೀಳುವುದು ತಪ್ಪುತ್ತಿದೆ. ಜನರ ಆರೋಗ್ಯ, ಸುರಕ್ಷತೆಯ ದೃಷ್ಟಿಯಿಂದಲೂ ಕ್ಯೂಸಿಐಗಳು ಮಹತ್ತ್ವದ್ದನ್ನು ಸಾಧಿಸುತ್ತಿವೆ. ವಿದೇಶದಿಂದ (ಮುಖ್ಯವಾಗಿ ಚೀನಾದಿಂದ) ಬರುವ ಆಟಿಕೆಗಳ ವಿಷಕಾರಿ ವಸ್ತು, ಕಳಪೆ ಪ್ಲಾಸ್ಟಿಕ್, ಬೆಂಕಿಯ ಅಪಾಯಗಳನ್ನು ತಡೆಯಲು ಸಾಧ್ಯವಾಗಿದೆ; ಆಟಿಕೆಗಳ ವಿಷಯದಲ್ಲಿ ಗ್ರಾಹಕರು ಉತ್ತಮ ಉತ್ಪಾದಕರಿಬ್ಬರಿಗೂ ಅನುಕೂಲವಾಗಿದೆ. ಕ್ಯೂಸಿಐ ಜಾರಿಗೆ ಮುನ್ನ ದೇಶದ ಮಾರುಕಟ್ಟೆಯಲ್ಲಿ ಅಗ್ಗದ ಮತ್ತು ಕಳಪೆ ಗುಣಮಟ್ಟದ ವಸ್ತುಗಳು ತುಂಬಿದ್ದವು. ೨೦೧೯ರಲ್ಲಿ ಕ್ಯೂಸಿಐ ಒಂದು ಸಮೀಕ್ಷೆ ನಡೆಸಿದಾಗ ಶೇ. ೩೩ರಷ್ಟು ಆಟಿಕೆಗಳು ಮಾತ್ರ ಸಂಬಂಧಪಟ್ಟ ಮಾನದಂಡಗಳಿಗೆ ಅನುಗುಣವಾಗಿದ್ದವು; ಉಳಿದವು ಮಕ್ಕಳಿಗೆ ಅಪಾಯಕಾರಿಯಾಗಿದ್ದವು. ೨೦೨೧ರ ಜನವರಿಯಿಂದ ಕ್ಯೂಸಿಐ ಮೂಲಕ ಸೂಕ್ತವಾಗಿ ಸ್ಪಂದಿಸಿದ ಮೋದಿ ಸರ್ಕಾರ ಅದು ಸ್ವೀಕಾರಾರ್ಹವಲ್ಲ ಎಂದು ನಿರ್ಬಂಧಿಸಿತು.

    ಈಗ ದೇಶದ ಆಟಿಕೆಗಳ ಗುಣಮಟ್ಟ ತುಂಬ ಸುಧಾರಿಸಿದೆ. ಶೇ. ೮೪ರಷ್ಟು ಆಟಿಕೆಗಳು ಬಿಐಎಸ್ ಮಾನದಂಡಕ್ಕೆ ಬದ್ಧವಾಗಿವೆ ಎಂದು ಈಚಿನ ಒಂದು ಸಮೀಕ್ಷೆ ತಿಳಿಸಿದೆ. ಕ್ಯೂಸಿಐಗಳು ದೇಶದ ಮಕ್ಕಳ ಹಿತವನ್ನು ಕಾಪಾಡಿವೆ. ೨೦೧೮-೧೯ಕ್ಕೆ ಹೋಲಿಸಿದರೆ, ೨೦೨೨-೨೩ರಲ್ಲಿ ದೇಶದ ಆಟಿಕೆಗಳ ರಫ್ತು ಶೇ. ೬೦ರಷ್ಟು ಅಧಿಕವಾಗಿದೆ. ಗುಣಮಟ್ಟವನ್ನು ಉತ್ತಮಪಡಿಸುವ ಉತ್ಪಾದಕರನ್ನು ಸರ್ಕಾರ ಯಾವಾಗಲೂ ಬೆಂಬಲಿಸುತ್ತದೆ. ಅನ್ನ-ಬಟ್ಟೆ-ವಸತಿಗಳ ಜೊತೆಗೆ ಆರೋಗ್ಯರಕ್ಷಣೆ ಮತ್ತು ಉತ್ತಮ ಮೂಲಸವಲತ್ತು ಒದಗಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.

    ಡಿಜಿಟಲ್ ಇಂಡಿಯಾ

    ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾವನ್ನು ಯಾವ ರೀತಿಯಲ್ಲಿ ರೂಪಿಸಿ ಬೆಳೆಸಿದ್ದಾರೆಂದರೆ ಹತ್ತು ವರ್ಷಗಳ ಹಿಂದೆ ತಂತ್ರಜ್ಞಾನ ಅಳವಡಿಕೆಯಲ್ಲಿ ಹಿಂದುಗಡೆ ಎಲ್ಲೋ ಇದ್ದ ಭಾರತ ಒಮ್ಮೆಲೇ ಮೊದಲ ಸ್ಥಾನಕ್ಕೆ ಬಂದು ನಿಂತಿದೆ. ಈಗ ದೇಶದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸವಲತ್ತನ್ನು ಬಹುತೇಕ ಎಲ್ಲರೂ ಬಳಸುತ್ತಿದ್ದಾರೆ. ಮೋದಿ ಏನು ಮಾಡಿದ್ದಾರೆ ಎಂದು ಕೇಳುವವರಿಗೆ “೫೦ ವರ್ಷಗಳಲ್ಲಿ ಮಾಡಬಹುದಾಗಿದ್ದುದನ್ನು ಮೋದಿ ಐದು ವರ್ಷಗಳಲ್ಲಿ ಮಾಡಿ ಮುಗಿಸಿದ್ದಾರೆ” ಎಂದು ಹೇಳಬಹುದು. ಡಿಜಿಟಲೀಕರಣದಿಂದ ಏಳೆಂಟು ವರ್ಷಗಳಲ್ಲಿ ನಮ್ಮ ಜೀವನದಲ್ಲಿ ಭಾರೀ ಬದಲಾವಣೆಯಾಗಿದೆ. ಜೀವನವು ಹೆಚ್ಚು ಅನುಕೂಲಕರವಾಗಿದೆ. ಅದಕ್ಕೆ ಮುಖ್ಯ ಕಾರಣ ಮೊಬೈಲ್ ಫೋನ್. ಅದರೊಂದಿಗೆ ಸೂಕ್ತ ಆ್ಯಪ್‌ಗಳು, ಇಂಟರ್‌ನೆಟ್ ಸೌಕರ್ಯ, ನೆಟ್ವರ್ಕಿಂಗ್, ಸರ್ಕಾರದ ಪ್ರೋತ್ಸಾಹ ಎಲ್ಲವೂ ಇದೆ.

    ದೇಶದ ಜನ ಈಗ ಯುಪಿಐ (ಯುನಿಪೈಡ್ ಪೇಮೆಂಟ್ ಇಂಟರ್‌ಫೇಸ್) ಬಳಸುತ್ತಿದ್ದಾರೆ. ಡಿಜಿ ಲಾಕರ್ ಹೊಂದಿದ್ದಾರೆ. ಕೋವಿಡ್ ಆ್ಯಪ್ ಬಳಸಿ ವ್ಯಾಕ್ಸಿನ್ ಪಡೆಯಲಾಗಿದೆ. ಆಧಾರ್‌ಕಾರ್ಡ್ ಎಲ್ಲರ ಬಳಿ ಇದೆ. ಕೇಂದ್ರಸರ್ಕಾರದ ಅನೇಕ ಸೇವೆಗಳನ್ನು ಜನ ಡಿಜಿಟಲ್ ವ್ಯವಸ್ಥೆಯ ಮೂಲಕವೇ ಪಡೆಯುತ್ತಿದ್ದಾರೆ. ಗ್ಯಾಸ್ ಬುಕ್ ಮಾಡುವುದರಿಂದ ಹಿಡಿದು ಪಾಸ್‌ಪೋರ್ಟ್ ಪಡೆಯವವರೆಗೆ ಎಲ್ಲ ಡಿಜಿಟಲ್ ಆಗಿದೆ. ರೈತರಿಗೆ ಹವಾಮಾನದ ಮಾಹಿತಿ, ಬೆಳೆಯ ಸಬ್ಸಿಡಿ, ಜಮೀನಿನ ನಕ್ಷೆ – ಇವೆಲ್ಲ ಈಗ ಮೊಬೈಲ್‌ನಲ್ಲೇ ಸಿಗುತ್ತವೆ. ಅನಕ್ಷರಸ್ಥ ಹೂ ಮಾರುವವರು ಕೂಡ ಡಿಜಿಟಲ್ ಸೇವೆ ಬಳಸುತ್ತಿದ್ದಾರೆ. ಇದನ್ನು ಗುರುತಿಸಿದ ವಿಶ್ವಬ್ಯಾಂಕ್ ೫೦ ವರ್ಷಗಳಲ್ಲಿ ಒಂದು ದೇಶ ಸಾಧಿಸಬಹುದಾದುದನ್ನು ಮೋದಿ ಸರ್ಕಾರ ಕೇವಲ ಆರು ವರ್ಷಗಳಲ್ಲಿ ಮಾಡಿದೆ ಎಂದು ಹೇಳಿತು.

    ದೇಶದಲ್ಲಿ ಡಿಜಿಟಲ್ ತಂತ್ರಜ್ಞಾನದ ಮೇಲಿನ ಅವಲಂಬನೆಯು ದಿನೇದಿನೇ ಹೆಚ್ಚಾಗುತ್ತಿದೆ. ಇದರಿಂದ ಭ್ರಷ್ಟಾಚಾರವು ನಿಯಂತ್ರಣಕ್ಕೆ ಬರುತ್ತಿದೆ. ಕಾಗದದ ಬಳಕೆ ಕಡಮೆಯಾಗುತ್ತಿದೆ. ಸಮಯದ ಉಳಿತಾಯವಾಗುತ್ತಿದೆ. ‘ಪವರ್ ಟು ಎಂಪವರ್’ ಎನ್ನುವ ಗುರಿಯೊಂದಿಗೆ ೨೦೧೫ರಲ್ಲಿ ಡಿಜಿಟಲ್ ಇಂಡಿಯಾ ಶುರುವಾಯಿತು. ಇಂಟರ್ನೆಟ್ ಬಳಕೆ ಆರಂಭವಾಯಿತು. ಆನ್‌ಲೈನ್ ವ್ಯವಹಾರವು ವ್ಯಾಪಕವಾಗಿ ಬೆಳೆದ ಪರಿಣಾಮವಾಗಿ ಇ-ಕಾಮರ್ಸ್ ತುಂಬ ಅಭಿವೃದ್ಧಿ ಹೊಂದಿತು. ಇ-ಕಾಮರ್ಸ್ನಲ್ಲೀಗ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಅಮೆಜಾನ್, ಫ್ಲಿಪ್‌ಕಾರ್ಟ್ನಂತಹ ಕಂಪೆನಿಗಳು ಸ್ಪರ್ಧೆಗೆ ಇಳಿದಿದ್ದು, ಬಟ್ಟೆ, ದಿನಬಳಕೆ ವಸ್ತುಗಳು, ಪುಸ್ತಕ ಮುಂತಾಗಿ ಎಲ್ಲವನ್ನೂ ಮನೆಬಾಗಿಲಿಗೆ ತಲಪಿಸುತ್ತಿವೆ. ಯುಪಿಐ (ಯುನಿಪೈಡ್ ಪೇಮೆಂಟ್ ಇಂಟರ್‌ಫೇಸ್)ನಲ್ಲಿ ಭಾರತ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಅನಂತರದ ನಾಲ್ಕು ದೇಶಗಳಲ್ಲಿ ಒಟ್ಟು ನಡೆಯುವಷ್ಟು ಯುಪಿಐ ವ್ಯವಹಾರ ಭಾರತ ಒಂದರಲ್ಲೇ ಆಗುತ್ತಿದೆ. ಈಗ ಇತರ ದೇಶಗಳು ಭಾರತವನ್ನು ಅನುಕರಿಸುತ್ತಿವೆ. ಸಿಂಗಾಪುರ, ಫ್ರಾನ್ಸ್, ಜರ್ಮನಿ ಮೊದಲಾದ ದೇಶಗಳು ನಮ್ಮ ಗೂಗಲ್ ಪೇ, ಪೇಟಿಎಂಗಳಲ್ಲಿ ಪಾವತಿ ಮಾಡುತ್ತಿವೆ ಮುಂತಾದ ವಿವರಗಳನ್ನು ಗೀರ್ವಾಣಿ ಎಂ.ಎಚ್. ಅವರು ಲೇಖನವೊಂದರಲ್ಲಿ ನೀಡಿದ್ದಾರೆ.

    ಮಧ್ಯವರ್ತಿಗಳಿಲ್ಲ

    ಮೋದಿ ಸರ್ಕಾರವು ೨೦೧೪ರಲ್ಲಿ ಅಧಿಕಾರಕ್ಕೆ ಬಂದೊಡನೆ ಸಾಮಾನ್ಯ ಜನರಿಗಾಗಿ ಜನಧನ್ (ಬ್ಯಾಂಕ್) ಖಾತೆ ಯೋಜನೆಯನ್ನು ಜಾರಿಗೆ ತಂದಿತು. ಆಗ ಕೆಲವರು ಇದರಿಂದೇನು ಪ್ರಯೋಜನ ಎಂದು ತಕರಾರು ತೆಗೆದಿದ್ದರು. ಕೊರೋನಾದಿಂದಾಗಿ ಜನ ಮನೆಯಿಂದ ಹೊರಗೆ ಬರಲಾರದ ಪರಿಸ್ಥಿತಿ ಉಂಟಾದಾಗ ಸರ್ಕಾರ ನೇರವಾಗಿ ಜನರ ಖಾತೆಗಳಿಗೆ ಹಣ ರವಾನಿಸಿತು. ರೈತರಿಗೆ ಪ್ರತಿವರ್ಷ ೬,೦೦೦ ರೂ. ಗಳನ್ನು (ಕಿಸಾನ್ ಸಮ್ಮಾನ್ ಯೋಜನೆ) ಈಗಲೂ ಜನಧನ್ ಖಾತೆ ಮೂಲಕವೇ ನೀಡಲಾಗುತ್ತಿದೆ. ಬಡವರು, ರೈತರು ಮುಂತಾದವರು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಸರ್ಕಾರದಿಂದ ನೇರವಾಗಿ ಹಣ, ನೆರವುಗಳನ್ನು ಪಡೆಯುತ್ತಿದ್ದಾರೆ. ಕೋವಿಡ್ ವೇಳೆ ಆನ್‌ಲೈನ್ ಸೇವೆ ಇದ್ದ ಕಾರಣ (ಬಾಗಿಲುಹಾಕಿ ಕುಳಿತ ಕಾರಣ) ‘ಮನೆಯಿಂದಲೇ ಕೆಲಸ’ (work from home) ವ್ಯವಸ್ಥಿತವಾಗಿ ನಡೆಯಿತು. ಮಕ್ಕಳು ಆನ್‌ಲೈನ್ ಮೂಲಕ ಶಿಕ್ಷಣ ಪಡೆದರು. ಕೋವಿಡ್ ಆ್ಯಪ್‌ನಲ್ಲಿ ನೋಂದಣಿ ಮಾಡಿ ಜನ ಲಸಿಕೆ ಪಡೆದರು. ವೇಗದ ಇಂಟರ್ನೆಟ್ ಇಲ್ಲದಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ. ಜನ ನಡೆಸಿದ ಒಂದು ರೂ. ವ್ಯವಹಾರ ಕೂಡ ಈಗ ಲೆಕ್ಕಕ್ಕೆ ಸಿಗುತ್ತಿದೆ. ಭಾರತ ಸರ್ಕಾರ ೩೧೨ ವಿವಿಧ ಸ್ಕೀಮ್‌ಗಳಿಂದ ಬಡವರ ಖಾತೆಗೆ ಒಟ್ಟು ೩೬,೧೦೦ ಕೋಟಿ ಡಾಲರಿನಷ್ಟು ಹಣ ವರ್ಗಾವಣೆ ಮಾಡಿದೆ ಎಂಬುದನ್ನು ಸ್ವತಃ ವಿಶ್ವಬ್ಯಾಂಕ್ ಗುರುತಿಸಿದೆ.

    ಡಿಜಿಟಲ್ ಹಣ ಪಾವತಿಯಿಂದ ಐಟಿ ಕ್ಷೇತ್ರ, ಹಣಕಾಸು ವ್ಯವಹಾರ, ಆನ್‌ಲೈನ್ ಶಿಕ್ಷಣ, ಇ-ಕಾಮರ್ಸ್, ಪ್ರವಾಸೋದ್ಯಮ ಎಲ್ಲ ಕ್ಷೇತ್ರಗಳಿಗೂ ಲಾಭವಾಗಿದೆ. ಹಳ್ಳಿಗಳು ನಗರಗಳೊಂದಿಗೆ ಸುಲಭವಾಗಿ ಸಂಪರ್ಕ ಹೊಂದಲು ಸಾಧ್ಯವಾಗಿದೆ. ಐಟಿ ಉದ್ಯೋಗಿಗಳು ಹಳ್ಳಿಗಳಲ್ಲಿ ಕುಳಿತು ಕೆಲಸ ಮಾಡಿದ್ದಾರೆ; ಹಳ್ಳಿಯಿಂದಲೇ ಅವರು ಹೊರದೇಶಗಳನ್ನು ಕೂಡ ಸಂಪರ್ಕಿಸುತ್ತಾರೆ. ಭಾರತದ ಡಿಜಿಟಲ್ ವ್ಯವಸ್ಥೆಯನ್ನು ಜಗತ್ತು ಆಶ್ಚರ್ಯದಿಂದ ನೋಡುತ್ತಿದೆ. ಭಾರತವನ್ನು ‘ಹಾವಾಡಿಗರ ದೇಶ’ ಎನ್ನುತ್ತಿದ್ದವರು ಕಣ್ಣು ಬಿಟ್ಟು ನೋಡುವಂತಾಗಿದೆ. ಜರ್ಮನಿಯ ಮಂತ್ರಿಯೊಬ್ಬರು ಈಚೆಗೆ ಬೆಂಗಳೂರಿನಲ್ಲಿ ಗೂಗಲ್ ಪೇ ಮೂಲಕ ಮೆಣಸು ಖರೀದಿಸಿದರು; ಗಣರಾಜ್ಯೋತ್ಸವಕ್ಕೆ ಬಂದಿದ್ದ ಫ್ರಾನ್ಸ್ ಅಧ್ಯಕ್ಷರಿಗೂ ಅಂತಹ ಅನುಭವವಾಯಿತು. ಇದಕ್ಕೆಲ್ಲ ಮೋದಿ ಅವರಂಥ ಸಮರ್ಥ ನಾಯಕ ಕಾರಣ ಎಂದು ಎಲ್ಲರೂ ಉದ್ಗರಿಸುತ್ತಿದ್ದಾರೆ.

    ವ್ಯಕ್ತಿಗಳ ಆಯ್ಕೆ ಕ್ರಮ

    ಹಾಗಾದರೆ ಪ್ರಧಾನಿ ಮೋದಿಯವರ ಯಾವ ಗುಣಲಕ್ಷಣ-ಸ್ವಭಾವ-ಸಾಮರ್ಥ್ಯಗಳು ಇದಕ್ಕೆಲ್ಲ ಕಾರಣವಾಗುತ್ತಿವೆ ಎನ್ನುವ ಒಂದು ಆಸಕ್ತಿ ಮೂಡುವುದು ಸಹಜ. ಜೊತೆಗೆ ಅವರ ಕಾರ್ಯಶೈಲಿ ಹೇಗಿರುತ್ತದೆ ಎಂಬುದು ಕೂಡ ಕುತೂಹಲ ಸೃಷ್ಟಿಸಬಹುದು. ರಾಜ್ಯದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾದ ಬಳಿಕ ವಿಧಾನಸಭೆಯ ಪ್ರತಿಪಕ್ಷ ನಾಯಕ ಮತ್ತು ಪಕ್ಷದ ರಾಜ್ಯ ಅಧ್ಯಕ್ಷರ ನೇಮಕದಲ್ಲಿ ವಿಳಂಬವಾಯಿತು. ಪಕ್ಷದ ರಾಜ್ಯ ನಾಯಕರಿಗೆ ಸ್ವಲ್ಪ ಮುಜುಗರವೂ ಆಯಿತು; ಮಾಧ್ಯಮಗಳು ಕೂಡ ಅದನ್ನು ಕೆದಕಿದವು. ಆದರೂ ಪಕ್ಷದ ಹೈಕಮಾಂಡ್ ದೃಢವಾಗಿದ್ದು ಏನನ್ನೋ ಸೂಚಿಸುವಂತಿತ್ತು. ಆ ಕುರಿತು ಪ್ರಸ್ತಾವಿಸಿದ ಖ್ಯಾತ ಪ್ರತಕರ್ತ ದಿ|| ಕೆ.ಎಸ್. ಸಚ್ಚಿದಾನಂದಮೂರ್ತಿ ಅವರು, “ಮೋದಿ ಕೈಗೊಳ್ಳುವ ನಿರ್ಧಾರಗಳೇ ಹಾಗೆ. ದಿಢೀರಾಗಿ ಆಗುವಂಥದ್ದಲ್ಲ. ಅದೆಷ್ಟೋ ಕಡತಗಳು ಪ್ರತಿನಿತ್ಯ ಅವರ ಮುಂದೆ ಬಂದು ಹೋಗಬಹುದು. ಆದರೆ ಯಾವುದೇ ನೇಮಕಕ್ಕೆ ಮೋದಿ ಆತುರ ತೋರುವುದಿಲ್ಲ. ಸೂಕ್ತ ವ್ಯಕ್ತಿಗಾಗಿ ಅವರು ಸೂಕ್ಷ್ಮ ಹುಡುಕಾಟವನ್ನು ಸಾಕಷ್ಟು ಸಮಯ ನಡೆಸುತ್ತಾರೆ” ಎಂದರು.

    “ಹಿಂದಿನ ಎಲ್ಲ ಪ್ರಧಾನಿಗಳಿಗಿಂತ ಮೋದಿ ಅವರು ಭಿನ್ನವಾಗಿದ್ದಾರೆ. ಮುಂದೆ ಬಂದ ಪ್ರತಿಯೊಂದು ಪ್ರಸ್ತಾವವನ್ನು ಅವರು ಸವಿವರವಾಗಿ ಪರಿಶೀಲಿಸುತ್ತಾರೆ. ವಿವಿಧ ಹಂತದ ಅಧಿಕಾರಿಗಳಿಂದ, ಪಕ್ಷ ಮತ್ತು ಸಂಪುಟದ ಹಿರಿಯರಿಂದ ಹೆಚ್ಚಿನ ಮಾಹಿತಿಗಳನ್ನು ಕ್ರೋಡೀಕರಿಸುತ್ತಾರೆ. ಇಂತಹ ಆಯ್ಕೆ ವಿಚಾರದಲ್ಲಿ ವಾಜಪೇಯಿ ಅವರು ತಮ್ಮ ಪ್ರಧಾನ ಕಾರ್ಯದರ್ಶಿ ಮತ್ತು ಓರ್ವ ಹಿರಿಯ ಐಎಎಸ್ ಅಧಿಕಾರಿಯನ್ನು ಅವಲಂಬಿಸುತ್ತಿದ್ದರು. ಎಲ್.ಕೆ. ಆಡ್ವಾಣಿ, ಜಾರ್ಜ್ ಫೆರ್ನಾಂಡಿಸ್ ಮುಂತಾದ ಕೆಲವು ಸಹೋದ್ಯೋಗಿಗಳಲ್ಲಿ ಚರ್ಚಿಸುತ್ತಿದ್ದರು. ಆದರೆ ಮೋದಿ ನೇಮಕದ ನಿರ್ಧಾರಗಳಿಗೆ ಈ ರೀತಿ ಯಾರನ್ನೂ ಅವಲಂಬಿಸುವುದಿಲ್ಲ ಅಥವಾ ಪಕ್ಷದ ಒಳಗಿನ ಮತ್ತು ಹೊರಗಿನ ಯಾವುದೇ ಬಗೆಯ ಒತ್ತಡಗಳಿಗೆ ಒಳಗಾಗುವುದಿಲ್ಲ. ಅವರಿಗೆ ಬೇಕಿರುವುದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳು. ಒಮ್ಮೆ ಅಂತಹ ವ್ಯಕ್ತಿಯನ್ನು ಆಯ್ಕೆ ಮಾಡಿದರೆಂದರೆ ಮತ್ತೆ ಅವರನ್ನು ಸಾಧ್ಯವಾದಷ್ಟು ತಮ್ಮೊಂದಿಗೆ ಉಳಿಸಿಕೊಳ್ಳಲು ಯತ್ನಿಸುತ್ತಾರೆ. ಜಾರಿ ನಿರ್ದೇಶನಾಲಯದ (ಇ.ಡಿ.) ನಿರ್ದೇಶಕ ಎಸ್.ಕೆ. ಮಿಶ್ರಾ ಅವರದ್ದು ಅದಕ್ಕೊಂದು ಉದಾಹರಣೆ. ಅವರನ್ನು ಮುಂದುವರಿಸಬಾರದೆಂದು ವ್ಯಾಪಕ ಒತ್ತಾಯ ಬಂದರೂ ಕೂಡ ಮೋದಿ ಬಿಡಲು ಒಪ್ಪಲಿಲ್ಲ. ನ್ಯಾಯಾಲಯದಲ್ಲೇ ವಾದ ಮಾಡಿ ಗೆದ್ದರು” ಎಂದು ಸಚ್ಚಿದಾನಂದ ಮೂರ್ತಿ ವಿವರಿಸಿದ್ದಾರೆ.

    ರೈಲ್ವೇ ಮಂತ್ರಿಯ ಆಯ್ಕೆಯನ್ನು ಇನ್ನೊಂದು ಉದಾಹರಣೆಯಾಗಿ ಅವರು ಉಲ್ಲೇಖಿಸಿದ್ದಾರೆ. ರೈಲ್ವೆ ಮಂತ್ರಿಯಾಗಿ ಅವರಿಗೆ ಬೃಹತ್ ಯೋಜನೆಗಳನ್ನು ಜಾರಿ ಮಾಡಬಲ್ಲ ಸಮರ್ಥರು ಬೇಕಿತ್ತು. ಡಿ.ವಿ. ಸದಾನಂದಗೌಡ ಮತ್ತು ಸುರೇಶ್ ಪ್ರಭು ಅವರಿಂದ ಸ್ವಲ್ಪಮಟ್ಟಿನ ನಿರಾಸೆ ಅನುಭವಿಸಿದ ಬಳಿಕ ಪೀಯೂಷ್ ಗೋಯಲ್ ಅವರಿಗೆ ಅದರ ಹೆಚ್ಚುವರಿ ಹೊಣೆಯನ್ನು ನೀಡಿದ್ದರು. ಹುಡುಕಾಟ ಮುಂದುವರಿದಿತ್ತು. ಇದೀಗ ಎರಡು ವರ್ಷಗಳ ಹಿಂದೆ ರೈಲ್ವೆ, ಸಂವಹನ (ಕಮ್ಯುನಿಕೇಶನ್) ಮತ್ತು ಮಾಹಿತಿ ತಂತ್ರಜ್ಞಾನದ (ಐ.ಟಿ.) ಮಹತ್ತ್ವದ ಖಾತೆಗಳನ್ನು ಮಾಜಿ ಐಎಎಸ್ ಅಧಿಕಾರಿ ಅಶ್ವಿನಿ ವೈಷ್ಣವ್ ಅವರಿಗೆ ನೀಡಿದರು. ಕೊನೆಗೂ ಅವರ ಈ ಪ್ರಯೋಗ ಫಲ ನೀಡಿತು. ಇಂದು ‘ವಂದೇ ಭಾರತ್’ನಂತಹ ಅಪೂರ್ವ ರೈಲ್ವೆ ಜಾಲವು ದೇಶದಲ್ಲಿ ಹಬ್ಬುತ್ತಿದೆ.

    ಕರ್ನಾಟಕದಲ್ಲಿ ಮೋದಿ ಅವರು ಶಿವರಾಜಸಿಂಗ್ ಚೌಹಾಣ್, ದೇವೆಂದ್ರ ಫಡ್ನವೀಸ್, ಯೋಗಿ ಆದಿತ್ಯನಾಥರಂತಹ ಪ್ರಬಲ ನಾಯಕರಿಗಾಗಿ ಹುಡುಕುತ್ತಿದ್ದಾರೆ ಎಂಬುದು ಪತ್ರಕರ್ತ ಸಚ್ಚಿದಾನಂದ ಮೂರ್ತಿ ಅವರ ಅಭಿಪ್ರಾಯ.

    ಮೋದಿ ಅಲಿಪ್ತ ನೀತಿ

    ವಿದೇಶಾಂಗ ವ್ಯವಹಾರವು ಪ್ರಧಾನಿ ಮೋದಿ ಅವರಿಗೆ ತುಂಬ ಪ್ರಿಯವಾದ ವಿಷಯ ಎಂಬುದು ಈ ನಿಟ್ಟಿನ ಅವರ ಸಾಧನೆಯಿಂದ ವ್ಯಕ್ತವಾಗುತ್ತದೆ. ಅಲಿಪ್ತ ನೀತಿಯು ದೇಶದ ಪ್ರಥಮ ಪ್ರಧಾನಿ ನೆಹರು ಅವರ ಕೈಯಲ್ಲಿ ಹಾಸ್ಯಾಸ್ಪದ ವಸ್ತುವಾಯಿತು. ಅದನ್ನೇ ಮೋದಿ ರೂಪಾಂತರಗೊಳಿಸಿ ಹೇಗೆ ಬಳಸುತ್ತಿದ್ದಾರೆನ್ನುವುದು ಅಧ್ಯಯನಯೋಗ್ಯ ವಿಷಯವಾಗಿದೆ. ಅಂಕಣಕಾರ ಶಿಶಿರ ಹೆಗಡೆ ಆ ಕುರಿತು ಹೀಗೆ ಹೇಳುತ್ತಾರೆ: “ಇಂದಿಗೂ ಭಾರತವು ಇತರರಿಗೆ ಹೋಲಿಸಿದರೆ ಅಲಿಪ್ತವೇ. ಆದರೆ ನಮ್ಮ ಹಿತಾಸಕ್ತಿಗೆ ಮೊದಲ ಮಣೆ. ಅಲಿಪ್ತವಾಗುವ ಮೊದಲು ಬೇಕಾದ್ದು ತಾಕತ್ತು; ಅದು ಕನಿಷ್ಠ ಅರ್ಹತೆ (ನೆಹರು ಇದನ್ನು ಮರೆತರು). ಸುಮ್ಮನೆ ದುರ್ಬಲವಾಗಿದ್ದು ನಾನು ಅಲಿಪ್ತನೆಂದರೆ ಆಪತ್ಕಾಲದಲ್ಲಿ ಯಾರೂ ಸಹಾಯಕ್ಕೆ ಬರುವುದಿಲ್ಲ. ಇಂದು ಭಾರತದ ನಿಲವುಗಳು ಪ್ರಾಯೋಗಿಕ ಮತ್ತು ವ್ಯಾವಹಾರಿಕವಾಗಿದೆ. ಉಕ್ರೇನ್-ರಷ್ಯಾ ಯುದ್ಧದ ವೇಳೆ ರಷ್ಯಾದಿಂದ ಕಚ್ಚಾತೈಲ ಖರೀದಿಸಿದ್ದನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಅದನ್ನು ಪಾಶ್ಚಾತ್ಯ ದೇಶಗಳು ಖಂಡಿಸಿದರೂ ಕೂಡ ಭಾರತ ಅದನ್ನು ಸಮರ್ಥಿಸಿಕೊಂಡು ಜೀರ್ಣಿಸಿಕೊಂಡಿತು. ತೈಲ ಇಲ್ಲಿ ಕಡಮೆ ದರಕ್ಕೂ ಸಿಕ್ಕಿತ್ತು. ಇಲ್ಲಿ ದೇಶದ ಹಿತವೇ ಮುಖ್ಯ. ಇಂದು ಮೋದಿ ಸರ್ಕಾರ ಇಸ್ರೇಲ್ ಅಥವಾ ಶ್ರೀಲಂಕಾವನ್ನು ಬೆಂಬಲಿಸಬೇಕಾದಲ್ಲಿ ಮಿತ್ರಪಕ್ಷಗಳ ಅನುಮತಿ ಕೇಳಬೇಕಿಲ್ಲ. ಪುಲ್ವಾಮಾ ಘಟನೆಗೆ ಪ್ರತಿಕ್ರಿಯೆ, ಉರಿ ಘಟನೆ, ಬಾಲಾಕೋಟ್ ವೈಮಾನಿಕ ದಾಳಿ, ಅಭಿನಂದನ್ ವರ್ಧಮಾನ್ ಬಿಡುಗಡೆ, ೩೭೦ನೇ ವಿಧಿ ರದ್ದತಿ ಮುಂತಾದವುಗಳಲ್ಲಿ ಭಾರತಕ್ಕೆ ಜಗತ್ತಿನಾದ್ಯಂತ ವ್ಯಾಪಕ ಬೆಂಬಲ ಸಿಕ್ಕಿತು. ಅಮೆರಿಕ ಅಧ್ಯಕ್ಷ ಟ್ರಂಪ್ ಪಾಕಿಸ್ತಾನಕ್ಕೆ ಕೊಡುತ್ತಿದ್ದ ನೆರವನ್ನು ನಿಲ್ಲಿಸಿದ್ದರ ಹಿಂದೆ ಅದೊಂದು ಭಯೋತ್ಪಾದಕ ರಾಷ್ಟ್ರವೆಂದು ಭಾರತವು ಚಿತ್ರಿಸಿದ್ದರ ಪಾತ್ರವಿದೆ.

    ಭಾರತಕ್ಕಿಂದು ಯಾರ ಬೆನ್ನಿನಾಸರೆಯೂ ಬೇಕಿಲ್ಲ. ನಮ್ಮ ಸ್ವತಂತ್ರ ನಿಲವು ಸಾಧ್ಯವಾಗಿದೆ. ಅಲಿಪ್ತ ತೃತೀಯರಂಗವನ್ನು ಮುನ್ನಡೆಸುತ್ತಿರುವುದೇ ಭಾರತ ಎಂಬಂತಿದೆ. ಆಫ್ರಿಕದ ಅಲಿಪ್ತ ದೇಶಗಳಲ್ಲಿ ಭಾರತ ಐಟಿ ಸೆಂಟರ್‌ಗಳನ್ನು ತೆರೆಯುತ್ತಿದೆ; ಕಟ್ಟಡ, ರೈಲ್ವೆ, ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ. ಹಲವು ದೇಶಗಳಿಗೆ ಕೋವಿಡ್ ಲಸಿಕೆ ನೀಡಿದೆ. ಎಲ್ಲಾದರೂ ಪ್ರಕೃತಿವಿಕೋಪವಾದರೆ ಆಹಾರ, ಔಷಧಿ ಮುಂತಾಗಿ ಆ ರಾಷ್ಟ್ರಕ್ಕೆ ಮೊದಲ ನೆರವು ಹೋಗುವುದೇ ಭಾರತದ್ದು.

    ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮಾಡುವ ಕೆಲಸಕ್ಕಿಂತ ತೆಗೆದುಕೊಳ್ಳುವ ನಿಲವೂ ಮುಖ್ಯ. ನಿಲವು ಮುಖ್ಯವಾಗುವುದು ಆ ರಾಷ್ಟ್ರ ಎಷ್ಟು ಬಲಶಾಲಿಯಾಗಿದೆ ಎಂಬುದರ ಮೇಲೆ ಅವಲಂಬಿಸಿದೆ ಎನ್ನುವ ಶಿಶಿರ ಹೆಗಡೆ, ನಮ್ಮ ನಿಲವನ್ನು ಸ್ಪಷ್ಟವಾಗಿ ಹೇಳುವುದು ಮುಖ್ಯ; ಮೋದಿ ಹಿಂದೊಮ್ಮೆ ‘ನಾವು ನಮ್ಮ ಅಣ್ವಸ್ತ್ರಗಳನ್ನು ದೀಪಾವಳಿ ಹಬ್ಬಕ್ಕೆ ಇಟ್ಟುಕೊಂಡದ್ದಲ್ಲ’ ಎಂದಿದ್ದನ್ನು ಉಲ್ಲೇಖಿಸಿದ್ದಾರೆ. ಯೋಧ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆ ಇನ್ನು ಒಂದೆರಡು ತಾಸು ತಡವಾಗಿದ್ದರೂ ಭಾರತದ ಕ್ಷಿಪಣಿಗಳು ಪಾಕಿಸ್ತಾನದ ಹಲವು ನಗರಗಳನ್ನು ಉಡಾಯಿಸುತ್ತಿದ್ದವಂತೆ. ಮೋದಿ ಅವರ ಮಾತಿನ ಸ್ಪಷ್ಟ ಸಂದೇಶವು ಪಾಕಿಸ್ತಾನಕ್ಕೆ ಮುಟ್ಟಿತ್ತು; ಅಂದಿನ ಪಾಕ್ ಪ್ರಧಾನಿ ಹೆದರಿದ್ದರು. ೧೯೯೮ರಲ್ಲೇ ದೇಶದ ಅಣ್ವಸ್ತ್ರ ಪರೀಕ್ಷೆ ನಡೆದಿದ್ದರೂ ಆ ತನಕ ನಮ್ಮ ಯಾವುದೇ ಪ್ರಧಾನಿ ಅಂತಹ ಮಾತು ಆಡಿರಲಿಲ್ಲ. ಈ ಒಂದು ಮಾತು ಪಾಕಿಸ್ತಾನದ ಮುಂದಿನ ಅದೆಷ್ಟೋ ಕೃತ್ಯಗಳಿಗೆ ತಡೆಹಾಕಿತು. ಅದರ ನಿರಂತರ ಕದನವಿರಾಮ ಉಲ್ಲಂಘನೆ, ಭಾರತದ ಬಗೆಗಿನ ಬ್ಲಾಕ್‌ಮೇಲ್ ತಂತ್ರಗಳು (ಅಣ್ವಸ್ತ್ರದ ಬೆದರಿಕೆ) ಈಗ ಎಲ್ಲಿವೆ?

    ಗಟ್ಟಿ ಮಾತು ಅಗತ್ಯ

    ಜಾಗತಿಕ ರಾಜಕಾರಣದಲ್ಲಿ ಈ ರೀತಿ ಗಟ್ಟಿಯಾಗಿ ಮಾತನಾಡಬೇಕು. ಮಿತ್ರದೇಶಗಳ ಬೆನ್ನಿಗೆ ಬೇಕಾದಾಗ ಎಷ್ಟು ಬೇಕೋ ಅಷ್ಟು ನಿಲ್ಲಬೇಕು. ಮೊದಲಿಗೆ ನಮ್ಮ ದೇಶ ಬಲಶಾಲಿಯಾಗಬೇಕು. ಅದು ಕೇವಲ ಅಂಕಿ-ಅಂಶಗಳಲ್ಲಲ್ಲ. ಮಾತನಾಡುವ ಸಮಯ ಬಂದರೆ ತನ್ನ ಬಲವನ್ನು ತೋರಿಸಬಲ್ಲ ದೇಶ ಎಂಬ ಭಯ ಇತರ ದೇಶಗಳಿಗಿರಬೇಕು. ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕ ಭೇಟಿಯಲ್ಲಿದ್ದಾಗ ಯುದ್ಧ ನಡೆಸುತ್ತಿರುವ ರಷ್ಯಾದಿಂದ ತೈಲ ಖರೀದಿಸುವುದು ಸರಿಯೆ ಎಂಬ ಪ್ರಶ್ನೆ ಮುಂದೆ ಬಂತು. ಆಗ ಅವರು “ನೀವು ಈ ಪ್ರಶ್ನೆಯನ್ನು ಯೂರೋಪಿಗೆ ಕೇಳಬೇಕು. ಅದಕ್ಕಿಂತ ಮೊದಲು ಯೂರೋಪ್ ತನ್ನ ಬಣ್ಣದ ಕನ್ನಡಕದಿಂದ ಜಗತ್ತನ್ನು ನೋಡುವುದನ್ನು ನಿಲ್ಲಿಸಬೇಕು” ಎಂದು ಖಡಕ್ಕಾಗಿ ಹೇಳಿದರು. ಇದು ನಿಲವಿನ ಸ್ಪಷ್ಟತೆ ಮತ್ತು ಅಂತಾರಾಷ್ಟ್ರೀಯವಾಗಿ ಸಮರ್ಥಿಸಿಕೊಳ್ಳುವ ಕ್ರಮ. ಆ ಚರ್ಚೆ ಅಲ್ಲಿಗೇ ನಿಂತುಹೋಯಿತು.

    “ಅಲಿಪ್ತವಾಗಿರುವುದೆಂದರೆ ಹೀಗೆ: ಶಕ್ತಿ ಇರಬೇಕು, ಮತ್ತು ಜಾಗತಿಕವಾಗಿ ಅದರ ಪ್ರದರ್ಶನ ಆಗಾಗ ಆಗಲೂಬೇಕು. ಸ್ವಂತ ರಕ್ಷಣೆಯ ವಿಷಯದಲ್ಲಿ ಕೋಡಂಗಿಯ ಹಾಗೆ ನಡೆದುಕೊಳ್ಳಬಾರದು. ದೇಶದ ನಿಲವಿನ ಜೊತೆ ಆಡುವವರ ಮಾತಿನ ನಿಲವು ಇರಬೇಕು. ಮೋದಿ, ಜೈಶಂಕರ್, ರಾಜನಾಥಸಿಂಗ್, ಅಜಿತ್ ಧೋವಲ್ ಅವರ ಮಾತುಗಳು ಹಾಗೆ ಇರುತ್ತವೆ. ಹಿಂದಿನ ನಾಯಕರಲ್ಲಿ (ಮುಖ್ಯವಾಗಿ ಕಾಂಗ್ರೆಸ್ ನಾಯಕರಲ್ಲಿ) ಇಂತಹ ನೇರಮಾತು ಅಪರೂಪವಾಗಿತ್ತು ಎನ್ನುವ ಲೇಖಕ ಹೆಗಡೆ, ಯುದ್ಧ ಮಾಡಿ ನಮ್ಮ ಬಲವನ್ನು ತೋರಿಸುವುದಲ್ಲ; ಶತ್ರುದೇಶವು ಹೆದರಿ ಸುಮ್ಮನಿರಬೇಕು. ಸ್ವಹಿತಾಸಕ್ತಿಯನ್ನು ಕಡೆಗಣಿಸುವ ಅಲಿಪ್ತನೀತಿ ಸಲ್ಲದು ಎಂದು ವಿಶ್ಲೇಷಿಸುತ್ತಾರೆ.

    ಪಾಕಿಸ್ತಾನವನ್ನು ಹೆದರಿಸಿ ಇಟ್ಟಿರುವ ಪ್ರಧಾನಿ ಮೋದಿ ಸಂದರ್ಭ ಬಂದಾಗ ಚೀನಾದ ಬಗ್ಗೆಯೂ ಮಾತಿನ ಚಾಟಿ ಬೀಸಲು ಅನುಮಾನಿಸುವುದಿಲ್ಲ. ಕೆಲವು ಶಕ್ತಿಗಳು ಆರ್ಥಿಕ ಬಿಕ್ಕಟ್ಟಿನಲ್ಲಿರುವ ದೇಶಗಳನ್ನು ದುರ್ಬಳಕೆ ಮಾಡಿಕೊಂಡು ಆ ರಾಷ್ಟ್ರಗಳನ್ನು ಸಾಲದ ಸುಳಿಗೆ ಸಿಲುಕಿಸುತ್ತಿವೆ. ಇಂತಹ ಜಾಲಕ್ಕೆ ಬೀಳಬಾರದು. ಎಲ್ಲ ದೇಶಗಳು ಹಣಕಾಸು ಅಶಿಸ್ತಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದ ಮೋದಿ, ನೇರ ಮಾತಿಗೇ ಇಳಿದರು: “ಚೀನಾ ಈಗಾಗಲೆ ಬಿಲಿಯನ್‌ಗಟ್ಟಲೆ ಡಾಲರ್ ಸಾಲ ನೀಡಿ ೧೨ಕ್ಕೂ ಅಧಿಕ ದೇಶಗಳನ್ನು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಸಿದೆ. ಕೀನ್ಯಾ, ಜಾಂಬಿಯಾ, ಲಾವೋಸ್, ಮಂಗೋಲಿಯ, ಶ್ರೀಲಂಕಾ, ಪಾಕಿಸ್ತಾನ ಸೇರಿ ಹಲವು ದೇಶಗಳು ಚೀನಾದ ಮೋಸದ ಬಲೆಗೆ ಬಿದ್ದಿವೆ. ಆ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು” ಎಂದು ಕಿವಿಮಾತು ಹೇಳಿದರು.

    ಆತ್ಮವಿಶ್ವಾಸದ ಮಾತು

    ಆ ಬಗೆಗಿನ ಅರ್ಹತೆಯಿಂದಲೇ ಮೋದಿ ಈ ಮಾತುಗಳನ್ನು ಹೇಳುತ್ತಾರೆ. ದುರ್ಬಲರಿಗೆ ನೆರವು ಮತ್ತು ‘ವಸುಧೈವ ಕುಟುಂಬಕಮ್’ ತತ್ತ್ವಗಳು ಅವರ ವಿದೇಶಾಂಗ ನೀತಿಯ ಆಧಾರಸ್ತಂಭಗಳಾಗಿವೆ. ಒಂದು ವರ್ಷದ ಜಿ-೨೦ ಗುಂಪಿನ ಅಧ್ಯಕ್ಷತೆಯ ಸಂದರ್ಭವನ್ನು ಅವರು ಅದಕ್ಕೆ ಬಳಸಿಕೊಂಡರು. ದೇಶದ ಜನರಲ್ಲಿ ಮತ್ತು ದೇಶವನ್ನು ಕಾಯುವ ಸೈನಿಕರಲ್ಲಿ ವಿಶ್ವಾಸ ತುಂಬುವ ಮಾತುಗಳನ್ನು ಪ್ರಧಾನಿ ಮೋದಿ ಆಗಾಗ ಆಡುತ್ತಾರೆ. “ಭಾರತವು ಮುಂದೆ ವಿಶ್ವದ ಟಾಪ್-೩ ದೇಶಗಳಲ್ಲಿ ಸ್ಥಾನ ಪಡೆಯಲಿದೆ. ೨೦೪೭ರಲ್ಲಿ ಮುಂದುವರಿದ

    (ಅಭಿವೃದ್ಧಿ ಹೊಂದಿದ) ದೇಶಗಳ ಸಾಲಿಗೆ ಸೇರುತ್ತದೆ. ಈ ಬಗ್ಗೆ ನನಗೆ ಪೂರ್ಣ ಖಾತ್ರಿ ಇದೆ. ಈ ಆರ್ಥಿಕ ಬೆಳವಣಿಗೆಗೆ ಕಳೆದ ಒಂಬತ್ತು ವರ್ಷಗಳಲ್ಲಿ ದೇಶದಲ್ಲಿ ನೆಲೆಯೂರಿದ ಆರ್ಥಿಕ ಸ್ಥಿರತೆಯೇ ಕಾರಣ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ, ಜಾತೀಯತೆ ಮತ್ತು ಕೋಮುವಾದಗಳಿಗೆ ಯಾವುದೇ ಸ್ಥಾನ ಇಲ್ಲ. ಹೆಚ್ಚಿನ ಮುಂದುವರಿದ ದೇಶಗಳು ಆರ್ಥಿಕ ಕುಸಿತ, ದೀರ್ಘಕಾಲ ಅಗತ್ಯ ವಸ್ತುಗಳ ಕೊರತೆ, ಹಣದುಬ್ಬರ, ವಯಸ್ಸಾದವರ ಸಂಖ್ಯೆ ಹೆಚ್ಚಳದಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ ಭಾರತ ಅತಿ ಹೆಚ್ಚು ಯುವಜನರ ಸಂಖ್ಯೆಯೊಂದಿಗೆ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ” ಎಂದವರು ವಿವರಿಸಿದರು. ದೇಶದ ಆಡಳಿತದ ಮೇಲೆ ಭದ್ರವಾದ ಹಿಡಿತವಿರುವ ಮೋದಿ ಅವರ ಮಾತುಗಳಿಗೆ ಅದರದ್ದಾದ ತೂಕ ಇದ್ದೇ ಇದೆ.

    ಇನ್ನೊಂದು ಸಂದರ್ಭದಲ್ಲಿ ಅವರು “ರಕ್ಷಣಾ ವಲಯದಲ್ಲಿ ಭಾರತ ಜಾಗತಿಕ ಬಲಿಷ್ಠ ರಾಷ್ಟ್ರವಾಗಿ ವೇಗವಾಗಿ ಹೊರಹೊಮ್ಮಿದೆ. ದೇಶದ ಭದ್ರತಾಪಡೆಗಳ ಸಾಮರ್ಥ್ಯವು ನಿರಂತರವಾಗಿ ಏರುತ್ತಿದೆ. ಒಂದು ಕಾಲದಲ್ಲಿ ನಾವು ಸಣ್ಣ ವಿಷಯಗಳಿಗೂ ಇತರರ ಮೇಲೆ ಅವಲಂಬಿತರಾಗಿದ್ದೆವು. ಈಗ ನಮ್ಮ ಮಿತ್ರರಾಷ್ಟ್ರಗಳ ಅಗತ್ಯವನ್ನು ಪೂರೈಸುವ ಮಟ್ಟಕ್ಕೆ ಬೆಳೆದಿದ್ದೇವೆ” ಎಂದರು. ಆಗ ಅವರು ದೇಶದ ಗಡಿಭಾಗದಲ್ಲಿ ಐಟಿಬಿಪಿ ಯೋಧರ ಜೊತೆ ದೀಪಾವಳಿಯನ್ನು ಆಚರಿಸುತ್ತಿದ್ದರು. ದೇಶದಲ್ಲಿಂದು ಶಾಂತಿ ಇದೆ. ಅದಕ್ಕೆ ಕಾರಣ ನಮ್ಮ ಯೋಧರು ಎಂದು ಅವರು ಶ್ಲಾಘಿಸಿದರು.

    ಜಿ೨೦ ಶೃಂಗಸಭೆ

    ದೆಹಲಿಯಲ್ಲಿ ನಡೆದ ಜಿ-೨೦ ಶೃಂಗಸಭೆಯು ಅಪ್ಪಟ ರಾಜತಾಂತ್ರಿಕ ಕ್ರಾಂತಿಯಂತಿತ್ತು ಎಂದು ವಿಶ್ಲೇಷಿಸಿದವರು ಖ್ಯಾತ ಪತ್ರಕರ್ತ ಹಾಗೂ ರಾಜಕೀಯ ಮುಂದಾಳು ಎಂ.ಜೆ. ಅಕ್ಬರ್ ಅವರು. ಜಿ-೨೦ ಶೃಂಗಸಭೆಯಲ್ಲಿ ಮೋದಿ ಮೂರು ಮುಖ್ಯ ಯಶಸ್ಸುಗಳಿಗೆ ಪಾತ್ರರಾದರು ಎಂದವರು ವಿಶ್ಲೇಷಿಸಿದ್ದಾರೆ.

    ಅವುಗಳೆಂದರೆ –

    ೧. ಜಗತ್ತಿನಲ್ಲಿ ಈಗ ನಡೆಯುತ್ತಿರುವ ಯುದ್ಧಗಳಿಗೆ ಕದನವಿರಾಮದ ನಿರೀಕ್ಷೆ.

    ೨.  ಆಫ್ರಿಕ ಒಕ್ಕೂಟವನ್ನು ಜಿ-೨೦ ಗುಂಪಿಗೆ ಸೇರಿಸುವ ಮೂಲಕ ಅವು ಆರ್ಥಿಕವಾಗಿ ಬಲ ಸಂಪಾದಿಸಲು ಅವಕಾಶ ಕಲ್ಪಿಸಿದ್ದು.

    ೩. ಭಾರತ-ಮಧ್ಯಪ್ರಾಚ್ಯ-ಯೂರೋಪ್ ಆರ್ಥಿಕ ಕಾರಿಡಾರನ್ನು (ಐಎಂಇಇಸಿ) ಸಾಧಿಸಿದ್ದು.

    ಮೋದಿ ಅವರ ಕಲ್ಪನೆಯ ಭಾರತ-ಮಧ್ಯಪ್ರಾಚ್ಯ- ಯೂರೋಪ್ ಆರ್ಥಿಕ ಕಾರಿಡಾರ್ ಭಾರತವನ್ನು ಯುಎಇ, ಸೌದಿ ಅರೇಬಿಯ, ಇಸ್ರೇಲ್‌ಗಳ ಮೂಲಕ ಇಟಲಿ, ಸ್ಪೇನ್, ಯೂರೋಪಿಗೆ ಸಂಪರ್ಕಿಸುವ ಮಹತ್ತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ಸಾಕಾರಗೊಂಡರೆ ಜಾಗತಿಕ ಮತ್ತು ವ್ಯೂಹಾತ್ಮಕ ವ್ಯವಹಾರಗಳಲ್ಲಿ ಹೊಸತಿರುವು ತರಲಿದೆ (ಗೇಮ್‌ಚೇಂಜರ್). ಸೌದಿ ಅರೇಬಿಯ ಮತ್ತು ಹೈಫಾ (ಇಸ್ರೇಲ್) ಸಂಪರ್ಕದಿಂದ ಆ ಭಾಗದ ವ್ಯಾಪಾರದಲ್ಲಿ ಕ್ರಾಂತಿಕಾರಕ ಬದಲಾವಣೆ ಬರಬಹುದು. ಇದು ಪ್ರಾಚೀನ ಕಾಲದ ಸಂಬಾರ ಮಾರ್ಗವನ್ನು (ಸ್ಪೈಸ್‍ ರೂಟ್‍) ಹೋಲುವಂತಿದೆ. ಇದು ಕಾರ್ಯಗತವಾದಲ್ಲಿ ವಾಣಿಜ್ಯ ಹಡಗುಗಳು ಯುಎಇ, ಸೌದಿ ಅರೇಬಿಯ ಮಾರ್ಗವಾಗಿ ಹೈಫಾಕ್ಕೆ ಹೋಗಿ, ಅಲ್ಲಿಂದ ಯೂರೋಪಿಗೆ ತೆರಳುತ್ತವೆ. ದಕ್ಷಿಣ ಏಷ್ಯಾ ಮತ್ತು ಯೂರೋಪಿಗೆ ಕೊಲ್ಲಿ ರಾಷ್ಟ್ರಗಳು ಸೇತುವೆ ಆಗುತ್ತವೆ. ಇದರಿಂದ ಬೆಳೆಯುವ ಕೆಂಪುಸಮುದ್ರ ಪ್ರದೇಶದ ಆರ್ಥಿಕತೆಯು ಜಗತ್ತಿಗೇ ದೊಡ್ಡ ಆಸ್ತಿಯಾಗುತ್ತದೆಂದು ನಿರೀಕ್ಷೆ.

    ಇದು ಇಸ್ರೇಲ್, ಯುಎಇ ಮತ್ತು ಬಹ್ರೇನ್‌ಗಳ ನಡುವೆ ಮಾಡಿಕೊಂಡ ಅಬ್ರಹಾಂ ಅಕಾರ್ಡ್ (ಸೆಪ್ಟೆಂಬರ್ ೧೫, ೨೦೨೦) ಎಂಬ ಒಪ್ಪಂದವನ್ನು ನೆನಪಿಸುವಂತಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅಧ್ಯಕ್ಷತೆಯಲ್ಲಿ ನಡೆದ ಅದು ಮೂರು ದೇಶಗಳಿಗೆ ಸೀಮಿತವಾದದ್ದು. ಹಾಗೆ ಸೀಮಿತವಾಗಬಾರದು; ಅದನ್ನು ವಿಸ್ತರಿಸಬೇಕೆಂಬುದು ಮೋದಿ ಅವರ ಕಲ್ಪನೆ. ಸಂಕೀರ್ಣವಾಗಿರುವ ಒಂದು ಸಮಸ್ಯೆಯನ್ನು ಪರಿಹರಿಸಬೇಕೆನ್ನುವ ಒಂದು ಉದಾತ್ತ ಉದ್ದೇಶ ಕೂಡ ಅವರಿಗಿದೆ. ಬಹಳ ನಾಜೂಕಾಗಿ ಅವರು ಸಹಕಾರದ ವರ್ತುಲವನ್ನು ವಿಸ್ತರಿಸಿ, ಅಪಾಯಕಾರಿ ಅಥವಾ ಸ್ಫೋಟಕ ಪರಿಸ್ಥಿತಿಯನ್ನು ತಿಳಿಗೊಳಿಸುವ ಉದ್ದೇಶವನ್ನು ಹೊಂದಿದ್ದಾರೆ. ಈ ದೇಶಗಳ ನಡುವೆ ಭೂ, ರಾಜಕೀಯ ಹಾಗೂ ಐತಿಹಾಸಿಕ ದ್ವೇಷಗಳೇನೇ ಇರಲಿ; ವ್ಯಾಪಾರಕ್ಕೆ ಸಂಬಂಧಿಸಿ ಸೌದಿ ಅರೇಬಿಯ ಮತ್ತು ಇಸ್ರೇಲ್ ನಮಗೆ ಸಹಕಾರ ನೀಡಿದರೆ ಸಾಕೆಂಬುದು ಮೋದಿ ಅವರ ಚಾಣಾಕ್ಷ ನಿಲವು. ಈ ರೀತಿಯಲ್ಲಿ ಭಾರತ-ಯೂರೋಪ್ ಕಾರಿಡಾರ್ ಒಪ್ಪಂದದಲ್ಲಿ ಮಧ್ಯಪ್ರಾಚ್ಯವನ್ನು (ಕೊಲ್ಲಿ ರಾಷ್ಟ್ರಗಳು) ಸೇರಿಸಲು ಸಾಧ್ಯವಾಗಿದೆ. ಈ ಒಪ್ಪಂದದ ಗುಣಾತ್ಮಕ ಅಂಶವೆಂದರೆ ಇದು ಮೋದಿ ಅವರ ವಿದೇಶಾಂಗ ನೀತಿಯ ಮೂಲತತ್ತ್ವಕ್ಕೆ ಪೂರಕವಾಗಿದೆ. ದೆಹಲಿಯ ಜಿ-೨೦ ಶೃಂಗಸಭೆಯ ಘೋಷವಾಕ್ಯ “ವಸುಧೈವ ಕುಟುಂಬಕಮ್’ ಆಗಿತ್ತೆಂಬುದು ಇಲ್ಲಿ ಉಲ್ಲೇಖಾರ್ಹ.

    ಯಾವುದು ನೆರೆರಾಷ್ಟ್ರ?

    ನರೇಂದ್ರ ಮೋದಿ ಅವರ ಇನ್ನೊಂದು ಸಿದ್ಧಾಂತ ಕೂಡ ಅವರ ಜಿ-೨೦ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ನೆರೆರಾಷ್ಟ್ರ ಯಾವುದೆಂದು ಎರಡು ದೇಶಗಳ ನಡುವಣ ಅಂತರದಿಂದಲೇ ನಿರ್ಧರಿಸಬಾರದು; ಬದಲಾಗಿ ಎಷ್ಟು ಸುಲಭವಾಗಿ ಅವು ಪರಸ್ಪರ ಸಂಪರ್ಕಿಸಬಹುದು ಎಂಬುದರಿಂದ ಆಗಬೇಕು ಎಂಬುದೇ ಆ ಸಿದ್ಧಾಂತ. ೨೦೧೪-೧೫ರಲ್ಲಿ ಪ್ರಧಾನಿ ಮೋದಿ ಬಂಗ್ಲಾದೇಶ ಮತ್ತು ಪಾಕಿಸ್ತಾನ ಎರಡೂ ದೇಶಗಳತ್ತ ಸ್ನೇಹಹಸ್ತವನ್ನು ಚಾಚಿದರು. ಆದರೆ ಅದಕ್ಕೆ ಸ್ಪಂದಿಸಿದ್ದು ಬಂಗ್ಲಾದೇಶ ಮಾತ್ರ. ಭಾರತ-ಬಂಗ್ಲಾ ಸಂಬಂಧವು ಮುಂದೆ ಕ್ರಮೇಣ ಬೆಳೆಯುತ್ತ ಬಂತು. ಇನ್ನೊಂದೆಡೆ ಪಾಕಿಸ್ತಾನ ಈಗಲೂ ಭಾರತದಿಂದ ದೂರವಿದೆ; ದೂರದೃಷ್ಟಿಯ ಕೊರತೆ, ದುರಹಂಕಾರ, ಮತ್ತು ದ್ವೇಷ – ಇವೇ ಅದಕ್ಕೆ ಕಾರಣ. ಆ ದೇಶವನ್ನೀಗ ಎಲ್ಲರೂ ಕಡೆಗಣಿಸುತ್ತಾರೆ. ಮೋದಿ ನಾಯಕತ್ವದಲ್ಲಿ ಭಾರತ ಹೇಗೆ ಅಭಿವೃದ್ಧಿ ಹೊಂದಿತು; ಮತ್ತು ಪಾಕಿಸ್ತಾನ ಅವಸಾನದತ್ತ ಹೋಯಿತು ಎಂಬುದನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರೇ ಬಣ್ಣಿಸಿದ್ದಾರೆ.

    ಅದೇ ವೇಳೆ ಭಾರತ-ಬಂಗ್ಲಾ ಗಡಿಯ ಸಂಚಾರಕೇಂದ್ರಗಳು, ವಿಮಾನನಿಲ್ದಾಣಗಳು ಸೌಹಾರ್ದದ ತಾಣಗಳಾಗಿವೆ. ಈ ರೀತಿ ನೋಡಿದರೆ ಕೊಲ್ಲಿ ರಾಷ್ಟ್ರಗಳು ಭಾರತಕ್ಕೆ ನಿಜವಾದ ನೆರೆರಾಷ್ಟ್ರಗಳಾಗಿವೆ. ಭಾರತ ಮತ್ತು ಇವುಗಳ ನಡುವೆ ವಾರಕ್ಕೆ ಕನಿಷ್ಠ ಸಾವಿರ ವಿಮಾನಗಳು ಹಾರುತ್ತವೆ. ಈ ದೇಶಗಳೊಂದಿಗೆ ನಮ್ಮ ಜನಕ್ಕೆ ಬಹುಮುಖೀ ಸಹಕಾರವಿದೆ. ಈ ಸ್ನೇಹಕ್ಕೆ ಮೋದಿ ಸಾಕಷ್ಟು ಬಂಡವಾಳ ಹೂಡಿದ್ದಾರೆ. ಯುಎಇಗೆ ೩೬ ವರ್ಷಗಳಲ್ಲಿ ಭೇಟಿ ನೀಡಿದ ನಮ್ಮ ಮೊದಲ ಪ್ರಧಾನಿ ಅವರಾಗಿದ್ದರು. ಅವರ ಪ್ರವಾಸ ಫಲ ನೀಡಿತು. ಉತ್ಪಾದನಾ ಕೇಂದ್ರ ಮತ್ತು ಹೂಡಿಕೆ ತಾಣವಾಗಿ ಭಾರತ ಬೆಳೆಯುತ್ತಿದೆ; ಎರಡು ಖಂಡಗಳ ನಡುವಣ ಸಮೃದ್ಧಿಯ ಪೂರ್ವ ಕಾರಿಡಾರ್ ಆಗಿದೆ. ಈ ದೇಶಗಳ ಜೊತೆಗಿನ ಸಂಬAಧ ಉತ್ತಮವಾಗಿದೆ. ದ್ವೇಷ, ಘರ್ಷಣೆಗಳನ್ನು ಬದಿಗಿಟ್ಟು ಆರ್ಥಿಕ ಬೆಳವಣಿಗೆಗೆ ಹಂಬಲಿಸಿದ್ದರ ಫಲವಿದು. ಇದು ಐತಿಹಾಸಿಕ ಸಂಗತಿ. ಇದರಿಂದ ಮೋದಿ ಅವರ ಜಾಗತಿಕ ಬಳಗ ವಿಸ್ತಾರವಾಗುತ್ತಿದೆ.

    ಗೆಲವು ನಿರಂತರ

    ಚುನಾವಣೆಗಳಲ್ಲಿ ಮೋದಿ ಏಕೆ ಗೆಲ್ಲುತ್ತ ಹೋಗುತ್ತಾರೆ ಎನ್ನುವುದು ಹಲವರಿಗೆ ಬಿಡಿಸಲಾಗದ ಪ್ರಶ್ನೆ; ಇನ್ನು ಕೆಲವರಿಗೆ ಅದು ನುಂಗಲಾರದ ತುತ್ತು. ಈ ಪ್ರಶ್ನೆಗೆ ಉತ್ತರ ಹುಡುಕುವ ಎಂ.ಜೆ. ಅಕ್ಬರ್, ಭಾರತಕ್ಕೆ ಮೋದಿಯವರು ಒಂದು ಆಧುನಿಕ ಆಡಳಿತ ವ್ಯವಸ್ಥೆಯನ್ನು ರಚಿಸಿಕೊಟ್ಟಿದ್ದಾರೆ. ಅದರಲ್ಲಿ ಜಾತೀಯತೆ, ಮತಾಂಧತೆಗಳನ್ನು ತನ್ನಿಂತಾನೇ ನಿರ್ಮೂಲಗೊಳಿಸುವ ಮಂತ್ರದಂಡವನ್ನು ಅಳವಡಿಸಿದ್ದಾರೆ. ಯಾವುದೇ ವ್ಯಕ್ತಿಯ ಗುರುತು ಆತನ ಹುಟ್ಟು ಅಥವಾ ಮತಧರ್ಮದಿಂದ ನಿರ್ಧಾರವಾಗಬಾರದು; ಆರ್ಥಿಕತೆಯಿಂದ ನಿರ್ಧಾರವಾಗಬೇಕೆಂಬುದು ಮೋದಿ ಅವರ ಸಿದ್ಧಾಂತ. ಹಾಗಿದ್ದರೆ ಮಹಿಳೆಯರೇಕೆ ಮೋದಿ ಅವರಿಗೆ ಮತ ಹಾಕುತ್ತಾರೆ ಎನ್ನುವ ಒಂದು ಉಪಪ್ರಶ್ನೆ ಇಲ್ಲಿ ಏಳುತ್ತದೆ. ಅದಕ್ಕೆ ಉತ್ತರ ಹೇಳಲು ಕಷ್ಟವಿಲ್ಲ. ರಾಜಕೀಯದ ಈ ಮಹತ್ತ್ವದ ಬೆಳವಣಿಗೆಯ ಸಾರಾಂಶ ಇಷ್ಟೆ. ಇಷ್ಟು ಕಾಲ ಹಿಂದುಳಿದಿದ್ದ ನಿರ್ಲಕ್ಷಿತ ಸಮುದಾಯಗಳ ಮಹಿಳೆಯರಲ್ಲೀಗ ರಾಜಕೀಯ ಪ್ರಜ್ಞೆ ಜಾಗೃತವಾಗುತ್ತಿದೆ. ಮತದಾನದ ವಿಷಯದಲ್ಲಿ ಅವರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಮೋದಿ ಆಡಳಿತದ ದಶಕದಲ್ಲಿ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲೀಕರಣಗೊಳ್ಳುತ್ತಿದ್ದಾರೆ. ಅವರ ಪ್ರಗತಿ ಕೇವಲ ಅಂಕಿ-ಅಂಶಗಳಲ್ಲಿಲ್ಲ. ವಾಸ್ತವದಲ್ಲೂ ಸಾಕಾರವಾಗುತ್ತಿದೆ. ದೇಶಾದ್ಯಂತ ಇರುವ ಬಡವರಿಗೆ ಅವರ ನಾಯಕ ಲಭಿಸಿದ್ದಾರೆ. ಇಷ್ಟು ವರ್ಷ ಕೇವಲ ಭರವಸೆಗಳನ್ನು ಕೇಳಿದ್ದು ಈಗ ನಿಜವಾಗಿ ಸಿಗುತ್ತಿದೆ.

    ದೇಶದಲ್ಲಿ ಬಡ, ಮಧ್ಯಮವರ್ಗದ ಮನೆಗಳ ಚಿತ್ರಣ ನಿಧಾನವಾಗಿ ಬದಲಾಗುತ್ತಿದೆ; ದೊಡ್ಡ ಬದಲಾವಣೆ ಆಗಬೇಕಷ್ಟೆ. ಬೇರೆ ಬೇರೆ ರಾಜ್ಯದ ಮಹಿಳೆಯರು ಆಗಾಗ ಮದ್ಯನಿಷೇಧದ ಬಗ್ಗೆ ಹೋರಾಡುತ್ತಿದ್ದಾರೆ. ಏಕೆಂದರೆ ಗಂಡಸರ ಹಣ ಕುಡಿತಕ್ಕೆ ಹೋಗಿ ಮಕ್ಕಳು ಉಪವಾಸ ಬೀಳುತ್ತಾರೆಂಬುದು ಅವರಿಗೆ ಮನವರಿಕೆಯಾಗಿದೆ; ಹೋರಾಟದ ಕೆಚ್ಚು ಈಗಷ್ಟೆ ಬರುತ್ತಿದೆ. ಹೆಂಗಸರ ದುಡಿಮೆ (ಹಣ) ಸುರಕ್ಷಿತವಾಗಿ ಇರುತ್ತದೆ. ಪ್ರಧಾನಿ ಮೋದಿ ಇದನ್ನು ಚೆನ್ನಾಗಿ ಬಲ್ಲರು. ಅದರಿಂದಾಗಿ ಅವರು ‘ಸ್ವಚ್ಛ ಭಾರತ’ದಿಂದ ಆರಂಭಿಸಿ ಜನಧನ್ ಬ್ಯಾಂಕ್ ಖಾತೆ, ಉಚಿತ ಅಡುಗೆ ಅನಿಲ ಸಿಲಿಂಡರ್, ಮುದ್ರಾ ಬ್ಯಾಂಕ್ ಸಾಲ, ಗರೀಬ್ ಕಲ್ಯಾಣ್ ಯೋಜನೆ (ಕೋವಿಡ್ ವೇಳೆ ಆರಂಭಿಸಿದ ಉಚಿತ ಅಕ್ಕಿ ನೀಡಿಕೆ) ಮುಂತಾದವುಗಳ ಮೂಲಕ ಹೆಂಗಸರ ಮನಸ್ಸು ತಟ್ಟಿದರು. ಕೊರೋನಾ ವೇಳೆ ಜನ ಉಪವಾಸದ ಭಯದಲ್ಲಿದ್ದಾಗ ಅಕ್ಕಿ ಅಥವಾ ಗೋಧಿ, ಬೇಳೆ ಮನೆಗೇ ಬಂತು. ಮನೆಯವರ ಜಾತಿ-ಧರ್ಮಗಳನ್ನು ಯಾರೂ ಕೇಳಲಿಲ್ಲ. ಈ ಯೋಜನೆ ದೇಶದ ಸುಮಾರು ೮೦ ಕೋಟಿ ಜನರನ್ನು ಕಾಪಾಡಿತು; ಅವರಿಗೆ ಆಹಾರದ ಭದ್ರತೆ ನೀಡಿತು. ಇದನ್ನೀಗ ಮೋದಿ ೨೦೨೮ರ ವರೆಗೆ ವಿಸ್ತರಿಸಿದ್ದಾರೆ (೫ ಕೆಜಿ ಅಕ್ಕಿ). ಇದು ಅತಿದೊಡ್ಡ ಸಾಮಾಜಿಕ ಕಲ್ಯಾಣ ಯೋಜನೆಯಾಗಿದ್ದು, ಇಂತಹ ಅನ್ನದಾತ ನಾಯಕನನ್ನು ಮಹಿಳೆಯರು ಏಕೆ ಅಲಕ್ಷಿಸುತ್ತಾರೆ?

    ಆಹಾರ, ವಿದ್ಯುತ್, ಸೂರು (ಮನೆ), ಗ್ಯಾಸ್, ನೀರು, ನೈರ್ಮಲ್ಯ, ಆರೋಗ್ಯ, ಶಿಕ್ಷಣ – ಇದನ್ನೆಲ್ಲ ದೇಶದ ಎಲ್ಲ ಮನೆಗಳಿಗೆ ಜಾತಿ-ಮತಗಳನ್ನು ಕೇಳದೆ ಮೋದಿ ಸರ್ಕಾರ ನೀಡುತ್ತಿದೆ. ಹೀಗೆ ಮೋದಿ ವರ್ಣಾಶ್ರಮ ವ್ಯವಸ್ಥೆಯ ಮರುವಿನ್ಯಾಸವನ್ನು ಮಾಡಿದ್ದಾರೆ. ಇದರಲ್ಲಿ ಮಹಿಳೆಯರದ್ದು ‘ಪ್ರಧಾನ ಜಾತಿ’. ಎಲ್ಲ ಮಹಿಳೆಯರು ಒಂದು ಜಾತಿ ಎಂದು ಈಚೆಗೆ ಒಂದು ಚುನಾವಣಾ ರ‍್ಯಾಲಿಯಲ್ಲಿ ಅವರು ಹೇಳಿದ್ದರು; ತಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ಮಹಿಳೆಯರು ಒಗ್ಗಟ್ಟಾಗಬೇಕು ಎಂದು ಮೋದಿ ಸಲಹೆ ನೀಡಿದರು. ಅವರು ಪಟ್ಟಿ ಮಾಡಿದ ಹೊಸ ‘ಜಾತಿ’ಗಳೆಂದರೆ ಬಡವರು, ಯುವಕರು, ಮಹಿಳೆಯರು ಮತ್ತು ಕೃಷಿಕರು. “ನಮ್ಮ ಅನುಭವದ ಮೂಲಕ ಬಡತನವನ್ನು ನಿರ್ಮೂಲನಗೊಳಿಸಬೇಕು. ಯುವಕರು ದೇಶದ ಭವಿಷ್ಯ; ಮಹಿಳೆಯರು ದೇಶದ ಸಂರಕ್ಷಕರು; ಮತ್ತು ರೈತರು ಅನ್ನ ಕೊಡುವ ಪುಣ್ಯಾತ್ಮರು” ಎಂದವರು ಬಣ್ಣಿಸಿದರು.

    ಮಹಿಳಾ ಮೀಸಲಾತಿ

    ಈ ನಿಲವಿಗೆ ಪೂರಕವೆಂಬಂತೆ ಮೋದಿ ಸರ್ಕಾರ ಈಚೆಗೆ ಬಹುಕಾಲದ ಬೇಡಿಕೆಯಾಗಿದ್ದ ಮಹಿಳೆಯರ ರಾಜಕೀಯ ಮೀಸಲಾತಿಯನ್ನೂ ಜಾರಿಗೆ ತಂದಿತು. ಇದು ಮಹಿಳಾ ಸಬಲೀಕರಣದ ಮಹತ್ತ್ವದ ಸಾಧನವಾಗಿದೆ. ಆ ಸಂಬಂಧವಾದ ನಾರೀಶಕ್ತಿ ವಂದನ ಅಧಿನಿಯಮ ಅಥವಾ ಮಹಿಳಾ ಮೀಸಲಾತಿ ಮಸೂದೆ (ವಿಧೇಯಕ)ಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಈಚೆಗೆ ಸಂಸತ್ತಿನಲ್ಲಿ ಮಂಡಿಸಿದರು. “ಈ ಸಂವಿಧಾನ ತಿದ್ದುಪಡಿಯು ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ.೩೩ ಸ್ಥಾನಗಳ ಮೀಸಲಾತಿಯನ್ನು ನೀಡುತ್ತದೆ. ಇದು ರಾಜಕೀಯದಲ್ಲಿ ಮಹಿಳೆಯರ ಸಬಲೀಕರಣದ ದೊಡ್ಡ ಹೆಜ್ಜೆ” ಎಂದವರು ಹೇಳಿದರು.

    ಹಿಂದೆ ೧೯೭೧ರಲ್ಲಿ ದೇಶದ ಮಹಿಳೆಯರ ಸ್ಥಿತಿಯ ಕುರಿತು ವರದಿ ನೀಡಲು ಒಂದು ಸಮಿತಿಯನ್ನು ರಚಿಸಲಾಗಿತ್ತು. ಅದು ೧೯೭೪ರಲ್ಲಿ ವರದಿ ನೀಡಿತು. ವರದಿಯ ಏಳನೇ ಅಧ್ಯಾಯದಲ್ಲಿ, ಮಹಿಳೆಯರಿಗೆ ಸಾಂವಿಧಾನಿಕ ಖಾತರಿಯನ್ನು ನೀಡಬೇಕೆಂದು ಅಂದಿನ ಭಾರತೀಯ ಜನಸಂಘವು ಸೂಚಿಸಿತ್ತು; ಆ ಮೂಲಕ ಮಹಿಳಾ ಮೀಸಲಾತಿಯನ್ನು ಪ್ರತಿಪಾದಿಸಿತ್ತು. ಬಿಜೆಪಿ ತನ್ನ ಸಂಘಟನೆಯಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ನೀಡಿದ ಮೊದಲ ಪಕ್ಷವಾಗಿದೆ ಎಂದು ಸಚಿವೆ ತಿಳಿಸಿದರು. ವಿಧೇಯಕವು ಬಂದಾಗ ಕೆಲವರು ‘ಇದು ನಮ್ಮ ವಿಧೇಯಕ’ ಎಂದರು; ಮತ್ತೆ ಕೆಲವರು ಅದರ ಬಗ್ಗೆ ಪತ್ರ ಬರೆದಿದ್ದೇವೆ ಎಂದರು.  ಇನ್ನು ಕೆಲವರು ‘ಅದರ ಸಂಪೂರ್ಣ ಸಾಂವಿಧಾನಿಕ ಚೌಕಟ್ಟನ್ನು ನಾವೇ ಹಾಕಿದ್ದು’ ಎಂದು ಹೇಳಿಕೊಂಡರು! ಏನಿದ್ದರೂ ಲೋಕಸಭೆ, ವಿಧಾನಸಭೆಗಳಲ್ಲಿನ ಮಹಿಳಾ ಮೀಸಲಾತಿ ವಿಳಂಬವಾದುದರಲ್ಲಿ ಬಹುತೇಕ ಎಲ್ಲ ಪಕ್ಷಗಳ ಪಾಲೂ ಇದೆ.

    ಈ ಮೀಸಲಾತಿಯು ೧೫ ವರ್ಷಗಳವರೆಗೆ ಮುಂದುವರಿಯುತ್ತದೆ; ಮತ್ತು ಪ್ರತಿಯೊಂದು ಪುನರ್ವಿಂಗಡಣೆಯ ಅನಂತರ ಮಹಿಳೆಯರಿಗೆ ಮೀಸಲಾದ ಸ್ಥಾನಗಳನ್ನು ಆವರ್ತನಗೊಳಿಸಲಾಗುವುದು. ಇದು ದೀರ್ಘಾವಧಿ ಪರಿಣಾಮವನ್ನು ಖಾತ್ರಿಪಡಿಸುತ್ತದೆ. ಕಾಂಗ್ರೆಸ್ ಕೇವಲ ಹತ್ತು ವರ್ಷಗಳ ಮಹಿಳಾ ಮೀಸಲಾತಿಯನ್ನು ಪ್ರಸ್ತಾವಿಸಿತ್ತು ಎಂದು ಸರ್ಕಾರ ತಿಳಿಸಿದೆ. ಕೆಲವರು ಓಬಿಸಿ ಮತ್ತು ಅಲ್ಪಸಂಖ್ಯಾತರನ್ನು ಕೂಡ ಈ ಮೀಸಲಾತಿಯು ಒಳಗೊಳ್ಳಬೇಕೆಂದು ಸಲಹೆ ನೀಡಿದರು. ಆದರೆ ಧರ್ಮದ ಆಧಾರದ ಮೀಸಲಾತಿಯನ್ನು ಸಂವಿಧಾನವು ನಿಷೇಧಿಸಿದೆ ಎಂದು ಸರ್ಕಾರ ಸ್ಪಷ್ಟಪಡಿಸಿತು.

    “ರಾಜಕೀಯ ಪ್ರಾತಿನಿಧ್ಯವು ಮಹಿಳಾ ಸಬಲೀಕರಣದ ಮೂಲಭೂತ ಅಂಶವಾಗಿದ್ದು, ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಮೋದಿ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ. ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಪರಿವರ್ತನಾ ಯಾತ್ರೆಯನ್ನು ಆರಂಭಿಸಿದೆ. ಇದರೊಂದಿಗೆ ಶಿಕ್ಷಣ, ಆರೋಗ್ಯರಕ್ಷಣೆ, ರಾಜಕೀಯ ಪ್ರಾತಿನಿಧ್ಯ, ಆರ್ಥಿಕ ಸಬಲೀಕರಣ, ಲಿಂಗಸಮಾನತೆಗಳನ್ನು ಸಾಧಿಸಲು ಉದ್ದೇಶಿಸಿದೆ. ಈಗ ಶಾಲೆ ಬಿಡುವ (ಡ್ರಾಪ್‌ಔಟ್) ಹುಡುಗಿಯರ ಸಂಖ್ಯೆ ಕಡಮೆಯಾಗುತ್ತಿದೆ. ಮಹಿಳೆಯರಿಗೆ ಆರ್ಥಿಕ ಅವಕಾಶಗಳು ಹೆಚ್ಚುತ್ತಿವೆ. ಕೇಂದ್ರಸರ್ಕಾರ ಮುಂಗಡಪತ್ರದಲ್ಲಿ ಮಹಿಳಾ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಇರಿಸುತ್ತಿದೆ. ಸವಾಲುಗಳು ಇದ್ದರೂ ಲಿಂಗಸಮಾನತೆ ಮತ್ತು ಮಹಿಳಾ ಸಬಲೀಕರಣದ ಬಗೆಗಿನ ಸರ್ಕಾರದ ಬದ್ಧತೆಯು ಕೋಟ್ಯಂತರ ಮಹಿಳೆಯರಿಗೆ ಭರವಸೆಯ ದಾರಿದೀಪವಾಗಿದೆ; ಶಿಕ್ಷಣ, ಆರೋಗ್ಯ, ರಾಜಕೀಯ-ಆರ್ಥಿಕ ಅವಕಾಶಗಳ ಮೂಲಕ ದೇಶದ ಮಹಿಳೆಯರು ಹೊಸ ರೀತಿಯ ಸಬಲೀಕರಣವನ್ನು ಕಾಣುತ್ತಿದ್ದಾರೆ; ರಾಷ್ಟ್ರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ರಾಜಕೀಯ ಮೀಸಲಾತಿಯು ಆರ್ಥಿಕ ಸಬಲೀಕರಣವನ್ನು ಸಂಕೇತಿಸುತ್ತದೆ. ಇದು ಸ್ವಾವಲಂಬನೆ, ಸ್ವಯಂನಿರ್ಣಯದತ್ತ ಪ್ರಮುಖ ಹೆಜ್ಜೆಯಾಗಿದೆ. ಇದು ದೇಶದ ಉಜ್ಜ್ವಲ ಭವಿಷ್ಯಕ್ಕೆ ದೊರೆತ ಅವಕಾಶವಾಗಿದೆ” ಎಂದು ಸ್ಮೃತಿ ಇರಾನಿ ತಮ್ಮ ಭಾಷಣದಲ್ಲಿ ಹೇಳಿದರು.

    ರೈತರ ಯೋಜನೆಗಳು

    ಪ್ರಧಾನಿ ಮೋದಿ ಅವರು ಸದಾ ರೈತರ ಹಿತಚಿಂತನೆ ಮಾಡುತ್ತ ಅವರ ಆದಾಯವನ್ನು ದೊಡ್ಡ ರೀತಿಯಲ್ಲಿ (ಇಮ್ಮಡಿ) ಹೆಚ್ಚಿಸುವ ಪ್ರಯತ್ನವನ್ನು ನಡೆಸುತ್ತಿದ್ದರೂ ಕೂಡ ಅವರನ್ನು ರೈತವಿರೋಧಿ ಎಂದು ಬಿಂಬಿಸುವ ಪ್ರಯತ್ನ ಒಂದು ವರ್ಗದಿಂದ ನಡೆಯುತ್ತಬಂದಿದೆ. ರೈತರ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಲಾಭದಾಯಕ ಬೆಲೆ ಸಿಗುವುದು ಸೇರಿದಂತೆ ಕೆಲವು ಉತ್ತಮ ಅಂಶಗಳಿರುವ ಕಾಯ್ದೆಯನ್ನು ತಂದರೆ ಅದರ ವಿರುದ್ಧ ತಿಂಗಳುಗಟ್ಟಲೆ ಹೋರಾಟ ನಡೆಸಿ ವಾಪಸು ಪಡೆಯುವಂತೆ ಮಾಡಲಾಯಿತು. ಅದರ ಹಿಂದೆ ಎಪಿಎಂಸಿ ಹಿತಾಸಕ್ತಿಯ ಲಾಬಿ ಇದ್ದುದು ಸ್ಪಷ್ಟ. ಅಷ್ಟು ಮಾತ್ರವಲ್ಲದೆ, ದೇಶದ್ರೋಹಿ ಖಲಿಸ್ತಾನಿಗಳು ಕೂಡ ಇದ್ದರೆನ್ನುವುದು ಮತ್ತೆ ಬೆಳಕಿಗೆ ಬಂತು. ಕಳೆದ ೯ ವರ್ಷಗಳಲ್ಲಿ ಮೋದಿ ಅವರು ತಂದ ಗ್ಯಾರಂಟಿ ಯೋಜನೆಗಳಿಂದ ದೇಶದ ಕೋಟ್ಯಂತರ ರೈತರು ಪ್ರಯೋಜನ ಪಡೆದಿದ್ದಾರೆ; ಪಡೆಯುತ್ತಿದ್ದಾರೆ. ರೈತರ ಮಾರುಕಟ್ಟೆ ಸುಧಾರಣೆಗೆ ಮೋದಿ ಸರ್ಕಾರ ನೆರವಾದರೆ ರೈತರು ಜಿಡಿಪಿ ಹೆಚ್ಚಳದ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.

    ೨೦೧೫ರಲ್ಲಿ ಕೇಂದ್ರಸರ್ಕಾರವು ಜಾರಿಗೆ ತಂದ ಕೃಷಿ ಸಿಂಚಯ ಯೋಜನೆಯು ಸುಸ್ಥಿರ ನೀರಾವರಿ ಕಾರ್ಯಯೋಜನೆಯಾಗಿದೆ. ಇದು ಪ್ರತಿ ಕೃಷಿ ಭೂಮಿಗೂ ಎಂಬ ಗುರಿಯನ್ನು ಹೊಂದಿದ್ದು, ಹೊಸ ಜಲಮೂಲ ಸೃಷ್ಟಿ, ನೀರಿನ ಸಂಗ್ರಹ-ವಿತರಣೆಗಳ ಮೂಲಸೌಕರ್ಯ, ಸಣ್ಣ ನೀರಾವರಿ ತಂತ್ರ ಮುಂತಾದವು ಅದರಲ್ಲಿ ಸೇರಿವೆ. ಅದೇ ವರ್ಷ ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯನ್ನು ಕೂಡ ಜಾರಿಗೊಳಿಸಿದರು. ಅದು ರೈತರಿಗೆ ಅವರ ಭೂಮಿಯ ಮಣ್ಣಿನ ಬಗ್ಗೆ ವರದಿಯನ್ನು ಒದಗಿಸುತ್ತದೆ.

    ೨೦೧೫ರಲ್ಲಿಯೆ ಆರಂಭಿಸಿದ ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆಯು ರೈತರಿಗೆ ಮತ್ತು ಗ್ರಾಮೀಣ ಯುವಜನರಿಗೆ ಕೌಶಲ ತರಬೇತಿ ನೀಡುತ್ತದೆ. ಯೋಜನೆಯ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮವು ೪ ಕೋಟಿ ಜನರಿಗೆ ತರಬೇತಿ ನೀಡಿದೆ. ರೈತರ ಉತ್ಪಾದಕತೆ ವೃದ್ಧಿ ಮತ್ತು ಉದ್ಯೋಗಾವಕಾಶ ಸೃಷ್ಟಿಗಳು ಅದರಲ್ಲಿ ಸೇರಿವೆ. ಪರಂಪರಾಗತ ಕೃಷಿ ವಿಕಾಸ ಯೋಜನೆ-೨೦೧೫ ಸಾವಯವ ಮತ್ತು ಸಾಂಪ್ರದಾಯಿಕ ಕೃಷಿಗೆ ಪೂರಕವಾಗಿದೆ. ೨೦೧೬ರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯು ಬೆಳೆಗೆ ರಕ್ಷಣೆ ಮತ್ತು ಪರಿಹಾರಗಳನ್ನು ಒದಗಿಸಿದರೆ, ಅದೇ ವರ್ಷ ಆರಂಭಿಸಿದ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆಯು ಎಲೆಕ್ಟ್ರಾನಿಕ್ ಟ್ರೇಡಿಂಗ್ ಪೋರ್ಟಲ್ ಆಗಿದೆ. ಇದರಿಂದ ಕ್ರಾಂತಿಯೇ ಉಂಟಾಗಿ ಕೃಷಿಕರಿಗೆ ಮಧ್ಯವರ್ತಿಗಳ ಶೋಷಣೆ ತಪ್ಪಿತು. ಮಾರಾಟದಲ್ಲಿ ಪಾರದರ್ಶಕತೆ ಬಂದು ರೈತರಿಗೆ ನ್ಯಾಯಸಮ್ಮತ ಬೆಲೆಗಳು ದೊರೆತವು. ೨೦೧೭ರ ಪ್ರಧಾನಮಂತ್ರಿ ಕೃಷಿಸಂಪದ ಯೋಜನೆಯಿಂದ ಆಹಾರ ಸಂಸ್ಕರಣೆ ವಲಯದ ಆಧುನಿಕೀಕರಣವಾಗಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಉದ್ಯೋಗಾವಕಾಶಗಳಿಗೆ ದಾರಿಯಾಯಿತು.

    ಕೃಷಿ ಸಮ್ಮಾನ್ ನಿಧಿ

    ಪ್ರಧಾನಿ ಮೋದಿ ಅವರು ೨೦೧೮ರಲ್ಲಿ ಕೃಷಿ ಸಮ್ಮಾನ್ ನಿಧಿಯನ್ನು ಜಾರಿಗೆ ತಂದು, ಸಣ್ಣ ಮತ್ತು ಅತಿಸಣ್ಣ ರೈತರಿಗೆ ವಾರ್ಷಿಕ ೬,೦೦೦ರೂ. ನೀಡಲು ಆರಂಭಿಸಿದರು. ದೇಶದ ೧೨ ಕೋಟಿ ರೈತರಿಗೆ ಅದರಿಂದ ಪ್ರಯೋಜನವಾಗುತ್ತಿದೆ. ಪ್ರಧಾನಮಂತ್ರಿ ಆತ್ಮನಿರ್ಭರ್ ಭಾರತ್ ಅಭಿಯಾನವು ೨೦೨೦ರಲ್ಲಿ ಆರಂಭಗೊಂಡಿದ್ದು, ಆಹಾರ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಅದರ ಉದ್ದೇಶವಾಗಿದೆ. ರೈತರ ಆದಾಯವನ್ನು ಇಮ್ಮಡಿಗೊಳಿಸುವ ಉದ್ದೇಶ ಕೂಡ ಅದರಲ್ಲಿದ್ದು, ಬಹುಬೆಳೆ (ಮಿಶ್ರ ಬೆಳೆ) ಮತ್ತು ಸುಸ್ಥಿರ ಕೃಷಿಗಳಿಗೆ ಅದು ಪೂರಕವಾಗಿದೆ. ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸಲು ಮೋದಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ; ಕೃಷಿ ಸಂಶೋಧನೆಯನ್ನು ಪ್ರೋತ್ಸಾಹಿಸುತ್ತಿದೆ. ಅಗ್ಗದ ದರದಲ್ಲಿ ರಸಗೊಬ್ಬರ ಪೂರೈಕೆ, ಸಬ್ಸಿಡಿ ನೀಡಿಕೆ, ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ಮುಂತಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ೯ ವರ್ಷಗಳಲ್ಲಿ ಕೇಂದ್ರಸರ್ಕಾರವು ರಸಗೊಬ್ಬರ ಸಬ್ಸಿಡಿಗೆ ಸುಮಾರು ೧೦ ಲಕ್ಷ ಕೋಟಿ ರೂ. ವೆಚ್ಚ ಮಾಡಿದ್ದು, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಯೂರಿಯಾ ಅಗ್ಗವಾಗಿದೆ ಎಂದು ವಿಶ್ವನಾಥ ಸುಂಕನಾಳ ಅವರು ಲೇಖನವೊಂದರಲ್ಲಿ ತಿಳಿಸಿದ್ದಾರೆ.

    ಸ್ವಚ್ಛಭಾರತ್ ಅಭಿಯಾನ

    “ಮೋದಿ ನೇತೃತ್ವದ ಪ್ರಮುಖ ಉಪಕ್ರಮವಾದ ಸ್ವಚ್ಛ ಭಾರತ್ ಅಭಿಯಾನವು ನಮ್ಮ ದೇಶದಲ್ಲಿ ಸಾಮೂಹಿಕ ಇಚ್ಛಾಶಕ್ತಿಯಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಉಜ್ಜ್ವಲ ಉದಾಹರಣೆಯಾಗಿದೆ” ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಅವರು ಹೇಳಿದ್ದಾರೆ. ಸ್ವಚ್ಛಭಾರತ್ ಮಿಷನ್ ಸ್ವಚ್ಛ, ಆರೋಗ್ಯಕರ, ಸುಸ್ಥಿರ ಭಾರತಕ್ಕಾಗಿ ನಡೆಸಿದ ಜನಾಂದೋಲನವಾಗಿದೆ. ಇದರ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯನಿರ್ವಹಣೆಯನ್ನು ಕ್ರಮಬದ್ಧಗೊಳಿಸಲಾಯಿತು. ಸರ್ಕಾರದ ವಿವಿಧ ಇಲಾಖೆಗಳ ಜಂಟಿ ಕ್ರಮದಿಂದ ಇದು ಸಾಧ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ.

    ಅದರಂತೆ ವಿವಿಧ ರಾಜ್ಯಗಳ ಭೇಟಿ, ಪರಿಶೀಲನೆಗಳನ್ನು ನಡೆಸಲಾಗುತ್ತಿದೆ. ಈಗ ಎರಡನೇ ಹಂತದ ಕೆಲಸ ನಡೆಯುತ್ತಿದ್ದು, ಒಟ್ಟು ೧೧.೨೫ ಕೋಟಿಗೂ ಅಧಿಕ ಗೃಹ ಶೌಚಾಲಯಗಳು ಮತ್ತು ೨.೩೬ ಲಕ್ಷ ಸಮುದಾಯ ನೈರ್ಮಲ್ಯ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ೨೦೨೨ರಲ್ಲಿ ಅಭಿಯಾನವು ಆಳವಾದ ಪರಿಣಾಮವನ್ನು ಬೀರಿತು. ಸುಮಾರು ೧೦ ಕೋಟಿ ಜನ ಅದರ ಶ್ರಮದಾನದಲ್ಲಿ ಭಾಗಿಯಾದರು. ೨೦೨೩ರಲ್ಲಿ ೧೨ ದಿನ ೨೦ ಕೋಟಿಗೂ ಅಧಿಕ ಜನ ವಿವಿಧ ಚಟುವಟಿಕೆಗಳನ್ನು ಕೈಗೊಂಡರು. ಬಯಲುಶೌಚಮುಕ್ತ ಗ್ರಾಮಗಳ ಸಂಖ್ಯೆ ಶೇ.೭೫ಕ್ಕೇರಿದೆ.

    ಈ ವರ್ಷ ‘ಕಸಮುಕ್ತ ಭಾರತ’ ಎಂಬ ಬ್ಯಾನರ್‌ನ ಅಡಿಯಲ್ಲಿ ನೈರ್ಮಲ್ಯವು ಸಾಮೂಹಿಕ ಕರ್ತವ್ಯ; ಸ್ವಚ್ಛತೆಯು ಜೀವನದ ಆಂತರಿಕ ಭಾಗ ಎನ್ನುವ ಪ್ರಚಾರ ನಡೆಯಿತು. ಸಾರ್ವಜನಿಕರ ಸ್ವಚ್ಛತೆಗೆ ಒತ್ತು ನೀಡಿ, ತೆರೆಮರೆಯ ಹೀರೋಗಳಾದ ಸಫಾಯಿ ಕರ್ಮಚಾರಿಗಳ ಕಲ್ಯಾಣ ವಿಸ್ತರಣೆ ನಡೆಯಿತು. ನದಿ ದಡ, ಜಲಮೂಲ, ಪ್ರವಾಸಿತಾಣ, ಐತಿಹಾಸಿಕ ಸ್ಮಾರಕಗಳ ಸ್ವಚ್ಛತೆ ನಡೆಸಲಾಯಿತು. ಸಮುದಾಯಗಳ ಅಭೂತಪೂರ್ವ ಭಾಗವಹಿಸುವಿಕೆಯು ಅತ್ಯಂತ ಮಹತ್ತ್ವದ ಸಾಧನೆಯಾಗಿತ್ತು ಎಂದು ಸರ್ಕಾರ ತಿಳಿಸಿದೆ.

    ರಾಷ್ಟ್ರೀಯ ಹೆದ್ದಾರಿ ಕ್ರಾಂತಿ

    ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್ಪ್ರೆಸ್ ವೇಗಳ ನಿರ್ಮಾಣವು ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ ಎನ್ನಬಹುದು. ಇದರಲ್ಲಿ ಹಿಂದಿನ ಸರ್ಕಾರದ ಸಾಧನೆಗೆ ಹೋಲಿಸಿದರೆ ಈಗ ನಡೆಯುತ್ತಿರುವ ಅದ್ಭುತವು ಮನದಟ್ಟಾಗಲು ಸಾಧ್ಯ. ೨೦೦೪-೧೪ರಲ್ಲಿ ಅಂದಿನ ಯುಪಿಎ ಸರ್ಕಾರವು ಕೇವಲ ೧೬ ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿತ್ತು. ಬಿಜೆಪಿಯೇತರ ಸರ್ಕಾರಗಳ ೬೦ ವರ್ಷಗಳ ಅವಧಿಯಲ್ಲಿ ಆದ ಒಟ್ಟು ರಾಷ್ಟ್ರೀಯ ಹೆದ್ದಾರಿ ೭೦ ಸಾವಿರ ಕಿ.ಮೀ. ಮಾತ್ರ.  ಬಿಜೆಪಿ ೧೫ ವರ್ಷಗಳಲ್ಲಿ ನಿರ್ಮಿಸಿದ್ದು ಸುಮಾರು ೭೫ ಸಾವಿರ ಕಿ.ಮೀ. ದೇಶದಲ್ಲಿ ದೊಡ್ಡ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವನ್ನು ಆರಂಭಿಸಿದವರು ಅಟಲ್ ಬಿಹಾರಿ ವಾಜಪೇಯಿ ಅವರು. ೧೯೯೯ರಲ್ಲಿ ಅವರು ಸುವರ್ಣ ಚತುಷ್ಪಥ ಹೆದ್ದಾರಿ ಎಂದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಹೊಸ ಆಯಾಮ ನೀಡಿದರು. ಆ ಮೂಲಕ ದೇಶದಲ್ಲಿ ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾದವು. ಮೊದಲಿಗೆ ದೆಹಲಿ-ಮುಂಬಯಿ-ಚೆನ್ನೈ-ಕೋಲ್ಕತಾಗಳನ್ನು ಜೋಡಿಸುವ ೫,೮೪೬ ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣವಾಯಿತು. ಅನಂತರ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆ ಪ್ರಕಾರ ಕಾಶ್ಮೀರ-ಕನ್ಯಾಕುಮಾರಿ ಆರು ಪಥಗಳ ರಸ್ತೆಯನ್ನು ಕೈಗೊಂಡರು. ೨೦೦೬ರಲ್ಲಿ ಅದು ಮುಗಿಯಬೇಕಿತ್ತು. ಕಾಂಗ್ರೆಸ್ ಸರ್ಕಾರದ ವಿಳಂಬನೀತಿಯಿಂದಾಗಿ ಅದು ೨೦೧೨ರಲ್ಲಿ ಮುಗಿಯಿತು; ಅವರು ಕೇವಲ ೧೬ ಸಾವಿರ ಕಿ.ಮೀ. ನಿರ್ಮಿಸಿದರು.

    ಈಗ ದೇಶದ ಹೆದ್ದಾರಿ ನಿರ್ಮಾಣದ ವೇಗ ಹೇಗಿದೆಯೆಂದರೆ, ೨೦೧೪-೧೫ರಲ್ಲಿ ದಿನಕ್ಕೆ ೧೨.೧ ಕಿ.ಮೀ. ರಸ್ತೆ ಆಗುತ್ತಿದ್ದರೆ ಈಗ ಅದು ೨೮.೮ ಕಿ.ಮೀ.ಗೆ ಏರಿದೆ. ಒಟ್ಟು ರಸ್ತೆ ನಿರ್ಮಾಣದಲ್ಲಿ ಈಗ ದೇಶ ಚೀನಾವನ್ನು ಹಿಂದಿಕ್ಕಿ ಜಗತ್ತಿನ ಎರಡನೇ ಸ್ಥಾನಕ್ಕೇರಿದೆ.

    ನರೇಂದ್ರ ಮೋದಿಯವರ ಕಾರ್ಯಶೈಲಿಗೆ ಒಂದು ಉದಾಹರಣೆಯಾಗಿ ಮಾಲ್ಡೀವ್ಸ್ ಬಗೆಗೆ ಅವರು ಕೈಗೊಂಡ ಕ್ರಮವನ್ನು ಉದಾಹರಿಸಬಹುದು. ಲಕ್ಷದ್ವೀಪದ ಕಡಲತೀರದಲ್ಲಿ ಮೋದಿ ಪ್ರವಾಸದಲ್ಲಿದ್ದಾರೆ ಎನ್ನುವ ಸುದ್ದಿ ಪತ್ರಿಕೆಗಳಲ್ಲಿ ಚಿತ್ರಸಹಿತ ಪ್ರಕಟವಾಯಿತು. ಇದೇನಪ್ಪಾ, ಎಂದೂ ರಜೆ ತೆಗೆದುಕೊಳ್ಳದ ಪ್ರಧಾನಿ ರಜೆ ಮಾಡುವುದಕ್ಕೆ ಆರಂಭಿಸಿದರೇ ಎಂದು ಅಚ್ಚರಿಗೊಳ್ಳುವಂತಾಯಿತು. ತಡವಾಗದೆ ಅದರ ಹಿನ್ನೆಲೆಯೂ ತಿಳಿಯಿತು. ನೆರೆಯ ಮಾಲ್ಡೀವ್ಸ್ನಲ್ಲಿ ಚೀನಾ ಪರ ವ್ಯಕ್ತಿ ಈಚೆಗೆ ಅಧಿಕಾರಕ್ಕೆ ಬಂದು ಬಹುಬೇಗ ಭಾರತವಿರೋಧಿ ಧೋರಣೆಯನ್ನು ಪ್ರಕಟಪಡಿಸಿದರು. ಆ ಪುಟ್ಟ ದೇಶಕ್ಕೆ ಪ್ರವಾಸೋದ್ಯಮವೇ ಆಧಾರ. ನಮ್ಮ ದ್ವೀಪದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದರೆ ಮಾಲ್ಡೀವ್ಸ್ ಕುಸಿಯುವುದು ನಿಶ್ಚಿತ. ಅದಕ್ಕಾಗಿಯೆ ಮೋದಿ ಲಕ್ಷದ್ವೀಪಕ್ಕೆ ಹೋಗಿದ್ದರು. ಅದರ ಪರಿಣಾಮ ಈಗಾಗಲೇ ಕಾಣಲು ಆರಂಭವಾಗಿದೆ. ಇದಲ್ಲವೆ ಮುತ್ಸದ್ದಿತನ!

    ಮೋದಿ ನಾಯಕತ್ವ, ಈಗ ಬಹು ಎತ್ತರ

  • ೨೦೨೪ರ ವಿಶೇಷತೆ ಏನೆಂದು ನೋಡಿದರೆ, ಇದು ಅಧಿಕ ವರ್ಷ ಎನ್ನುವುದು ಖರೆ. ಜೊತೆಗೆ ಸರ್ವಾಧಿಕಾರಿ ದೇಶಗಳನ್ನು ಹೊರತುಪಡಿಸಿ ವಿಶ್ವದ ಸುಮಾರು ೬೦ಕ್ಕೂ ಅಧಿಕ ದೇಶಗಳಲ್ಲಿ ಈ ವರ್ಷ ಚುನಾವಣೆಗಳು ನಡೆಯಲಿರುವುದು ಒಂದು ಕಾಕತಾಳೀಯ – ಯೂರೋಪಿನ ೨೨ ದೇಶಗಳು, ಭಾರತ ಸೇರಿದಂತೆ ಏಷ್ಯಾದ ೧೧ ದೇಶಗಳು, ೧೫ ಆಫ್ರಿಕಾ ಖಂಡ ದೇಶಗಳು, ೯ ಅಮೆರಿಕಾ ಖಂಡ ದೇಶಗಳು, ಆಸ್ಟ್ರೇಲಿಯ ಖಂಡದಲ್ಲಿ ೪ ದೇಶಗಳು. ಒಟ್ಟು ೨ ಶತಕೋಟಿ ಮತದಾರರು ಮತಚಲಾಯಿಸಲಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೂ ಈ ವರ್ಷವೇ ಚುನಾವಣೆ ನಡೆಯಲಿದೆ.

    ಪ್ರಜಾಸ್ವಾಮ್ಯ ದೇಶಗಳಲ್ಲಿ ಚುನಾವಣೆ ನಾಲ್ಕೋ ಐದೋ ಆರೋ ವರ್ಷಗಳಿಗೊಮ್ಮೆ ನಡೆಯುವುದು ನಿಯತಿಯಾಗಿದ್ದರೂ ಇಷ್ಟು ದೊಡ್ಡ ಸಂಖ್ಯೆಯ ದೇಶಗಳಲ್ಲಿ ಒಂದೇ ವರ್ಷದಲ್ಲಿ ಚುನಾವಣೆಗಳು ನಡೆಯುತ್ತಿರುವುದು ವಿಶೇಷ. ಮತ್ತು ಇದರ ಪರಿಣಾಮ ಅಂತಾರಾಷ್ಟ್ರೀಯ ರಾಜಕೀಯ-ಆರ್ಥಿಕ ಸಂಬಂಧಗಳ ಮೇಲೂ ಆಗುತ್ತದೆ.

    ವಸುಧೈವ ಕುಟುಂಬಕಂ’ ಎಂಬುದು ಭಾರತ ಜಗತ್ತಿಗೆ ಕೊಟ್ಟ ಆದರ್ಶ. ನಾವು ಗಡಿಗಳನ್ನು ಗುರುತಿಸಿಕೊಂಡು ಒಂದೊಂದು ದೇಶವಾಗಿ ಹೊರಹೊಮ್ಮಿರಬಹುದು, ಪ್ರಪಂಚದ ವಿವಿಧ ಭಾಗದ ಜನರ ಆಹಾರ, ಭಾಷೆ, ಮತ-ಸಂಪ್ರದಾಯಗಳು, ಉಡುಗೆ-ತೊಡುಗೆ, ಪ್ರಾಕೃತಿಕ ವಾತಾವರಣ, ವ್ಯಾವಹಾರಿಕ ನೀತಿ ಬೇರೆ ಬೇರೆ ಇರಬಹುದು. ಆದರೆ ನಾವು ದ್ವೀಪಗಳಾಗಿ ನಮ್ಮಷ್ಟಕ್ಕೆ ಬದುಕಲು ಸಾಧ್ಯವಿಲ್ಲ. ಈ ಎಲ್ಲ ಭಿನ್ನತೆಗಳನ್ನು ಇಟ್ಟುಕೊಂಡೂ ಒಂದು ಕುಟುಂಬವಾಗಿ, ಕೊಡುಕೊಳ್ಳುವಿಕೆ ಹಾಗೂ ಪರಸ್ಪರ ಸಹಕಾರದಿಂದ ಹೆಜ್ಜೆಯಿಟ್ಟರಷ್ಟೇ ಅದು ವಿಶ್ವಕ್ಕೆ ಮಂಗಳಕರ ಎನ್ನುವುದನ್ನು ಭಾರತ ಬಹಳ ಹಿಂದೆಯೇ ಜಗತ್ತಿಗೆ ಸಾರಿ ಹೇಳಿತು.

    ಜಾಗತೀಕರಣೋತ್ತರ ಯುಗದಲ್ಲಿ ಇದು ಜಗತ್ತಿಗೆ ಹೆಚ್ಚು ಮನವರಿಕೆಯಾಯಿತು. ಪರಸ್ಪರ ಅವಲಂಬನೆ ಅನಿವಾರ್ಯ ಎನಿಸತೊಡಗಿತು. ಎರಡನೇ ಪ್ರಪಂಚಯುದ್ಧದ ಭಯಾನಕತೆ, ಮುಂದೆ ಅಂತಹ ಅವಘಡವನ್ನು ಆಗಗೊಡಬಾರದು ಎಂಬ ಸಂಕಲ್ಪಕ್ಕೆ ಪ್ರೇರಣೆಯಾಯಿತು. ಹಲವು ದೇಶಗಳು ಒಟ್ಟಾಗಿ ವಿಶ್ವಸಂಸ್ಥೆ ರೂಪಗೊಂಡು ಜಾಗತಿಕ ಸಮಸ್ಯೆಗಳನ್ನು ಚರ್ಚಿಸುವ ವೇದಿಕೆ ಸಿದ್ಧವಾಯಿತು.

    ಏಳಿಗೆ ಸಾಧಿಸಬಯಸುವ ಯಾವುದೇ ರಾಷ್ಟ್ರ, ಕೇವಲ ತನ್ನ ನೆರೆಹೊರೆ ರಾಷ್ಟ್ರಗಳೊಂದಿಗೆ ಸಂಬಂಧ ಕಾಯ್ದುಕೊಂಡರೆ ಸಾಲದು, ತನ್ನ ವ್ಯಾವಹಾರಿಕ, ಆರ್ಥಿಕ ಮತ್ತು ಭದ್ರತೆಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ದ್ವಿಪಕ್ಷೀಯ ಸಂಬಂಧವನ್ನು ನೆರೆಹೊರೆಯ ರಾಷ್ಟ್ರಗಳಾಚೆಗೂ ವಿಸ್ತರಿಸಿಕೊಳ್ಳಬೇಕು ಎಂಬುದು ಮನವರಿಕೆಯಾಯಿತು. ಪೂರೈಕೆ ಜಾಲದಲ್ಲಿ ಮುಖ್ಯ ಪಾತ್ರಧಾರಿಯಾದರೆ ಮಾತ್ರ ಜಾಗತಿಕ ವೇದಿಕೆಗಳಲ್ಲಿ ಮನ್ನಣೆ ಎಂಬುದು ಸಿದ್ಧವಾಯಿತು. ಈ ಎಲ್ಲ ಅಂಶಗಳ ಮೇಲೆ ನಮ್ಮ ದೇಶದ ವಿದೇಶಾಂಗ ನೀತಿ ರೂಪಗೊಂಡಿತು. ದೇಶೀಯ ಉತ್ಪನ್ನಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು, ಆ ಮೂಲಕ ಆರ್ಥಿಕ ಸಬಲತೆಯನ್ನು ಸಾಧಿಸಬೇಕು ಎಂಬುದು ಗುರಿಯಾಯಿತು.

    ೨೦೨೪ರ ವಿಶೇಷತೆ ಏನೆಂದು ನೋಡಿದರೆ, ಇದು ಅಧಿಕ ವರ್ಷ ಎನ್ನುವುದು ಖರೆ. ಜೊತೆಗೆ ಸರ್ವಾಧಿಕಾರಿ ದೇಶಗಳನ್ನು ಹೊರತುಪಡಿಸಿ ವಿಶ್ವದ ಸುಮಾರು ೬೦ಕ್ಕೂ ಅಧಿಕ ದೇಶಗಳಲ್ಲಿ ಈ ವರ್ಷ ಚುನಾವಣೆಗಳು ನಡೆಯಲಿರುವುದು ಒಂದು ಕಾಕತಾಳೀಯ – ಯೂರೋಪಿನ ೨೨ ದೇಶಗಳು, ಭಾರತ ಸೇರಿದಂತೆ ಏಷ್ಯಾದ ೧೧ ದೇಶಗಳು, ೧೫ ಆಫ್ರಿಕಾ ಖಂಡ ದೇಶಗಳು, ೯ ಅಮೆರಿಕಾ ಖಂಡ ದೇಶಗಳು, ಆಸ್ಟ್ರೇಲಿಯ ಖಂಡದಲ್ಲಿ ೪ ದೇಶಗಳು. ಒಟ್ಟು ೨ ಶತಕೋಟಿ ಮತದಾರರು ಮತಚಲಾಯಿಸಲಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೂ ಈ ವರ್ಷವೇ ಚುನಾವಣೆ ನಡೆಯಲಿದೆ.

    ಪ್ರಜಾಸ್ವಾಮ್ಯ ದೇಶಗಳಲ್ಲಿ ಚುನಾವಣೆ ನಾಲ್ಕೋ ಐದೋ ಆರೋ ವರ್ಷಗಳಿಗೊಮ್ಮೆ ನಡೆಯುವುದು ನಿಯತಿಯಾಗಿದ್ದರೂ ಇಷ್ಟು ದೊಡ್ಡ ಸಂಖ್ಯೆಯ ದೇಶಗಳಲ್ಲಿ ಒಂದೇ ವರ್ಷದಲ್ಲಿ ಚುನಾವಣೆಗಳು ನಡೆಯುತ್ತಿರುವುದು ವಿಶೇಷ. ಮತ್ತು ಇದರ ಪರಿಣಾಮ ಅಂತಾರಾಷ್ಟ್ರೀಯ ರಾಜಕೀಯ-ಆರ್ಥಿಕ ಸಂಬಂಧಗಳ ಮೇಲೂ ಆಗುತ್ತದೆ.

    ಸ್ವತಂತ್ರ ಭಾರತದ ವಿದೇಶಾಂಗ ನೀತಿ, ಆದರ್ಶಗಳ ಮೂಸೆಯಲ್ಲಿ ಅರಳಿತ್ತು. ಅಲಿಪ್ತ ನೀತಿ ಆ ಕಾಲಘಟ್ಟದ ಅನಿವಾರ್ಯತೆ ಇದ್ದಿರಬಹುದು. ಆದರೆ ಅನಂತರ ಆದ ಅನುಭವಗಳು ನಮ್ಮ ವಿದೇಶಾಂಗ ನೀತಿಗೆ ಪಕ್ವತೆಯನ್ನು ಜೋಡಿಸಿತು. ಪಾಕಿಸ್ತಾನ ಗಡಿಯಲ್ಲಿ ತಂಟೆ ತೆಗೆದು ಭಾರತದ ಮೇಲೆರಗಿದಾಗ, ‘ಹಿಂದಿ-ಚೀನೀ ಭಾಯಿ ಭಾಯಿ’ ಎಂಬ ಭ್ರಾತೃತ್ವದ ಆಶಯಕ್ಕೆ ಚೀನಾ ಸ್ಪಂದಿಸದೆ ನಂಬಿಕೆದ್ರೋಹ ಎಸಗಿದಾಗ, ವಿದೇಶಾಂಗ ನೀತಿಯನ್ನು ಆದರ್ಶದ ನೆಲೆಯಲ್ಲಿ ರೂಪಿಸಿದರೆ ಸಾಲದು ಅದಕ್ಕೆ ವಾಸ್ತವದ ತಳಹದಿ ಇರಬೇಕು ಎಂಬ ಪಾಠ ನಮ್ಮ ನಾಯಕರಿಗೆ ಅರ್ಥವಾಯಿತು. ಆಗಲೇ ನಾವು ಸೋವಿಯತ್ ರಷ್ಯಾದೊಂದಿಗೆ ಸಖ್ಯ ಗಟ್ಟಿಮಾಡಿಕೊಂಡದ್ದು. ರಷ್ಯಾದೊಂದಿಗಿನ ಗೆಳೆತನ, ಸಂಕಷ್ಟದ ಸಂದರ್ಭಗಳಲ್ಲಿ ನಮ್ಮ ನೆರವಿಗೆ ಬಂತು. ಸೋವಿಯತ್ ವಿಘಟನೆ ಹೊಸ ವಾಸ್ತವಕ್ಕೆ ತೆರೆದುಕೊಳ್ಳುವಂತೆ ಮಾಡಿತು.

    ಪಿ.ವಿ. ನರಸಿಂಹ ರಾವ್ ಅವರ ಅವಧಿಯಲ್ಲಿ ‘ಲುಕ್ ಈಸ್ಟ್’ನೀತಿಯ ಮೂಲಕ ಹೊಸ ಹೆಜ್ಜೆಯನ್ನು ಭಾರತ ಇಟ್ಟಿತು. ವಾಜಪೇಯಿ, ಮನಮೋಹನ್‌ಸಿಂಗ್ ಅವರ ಅವಧಿಯಲ್ಲಿ ಇತರ ದೇಶಗಳೊಂದಿಗಿನ ಭಾರತದ ಬಾಂಧವ್ಯ ಇನ್ನಷ್ಟು ಗಟ್ಟಿಯಾಗತೊಡಗಿತು. ೨೦೧೪ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ, ಭಾರತ ಹೆಚ್ಚಿನ ಆತ್ಮವಿಶ್ವಾಸದಿಂದ ಜಾಗತಿಕ ಆಗುಹೋಗುಗಳಿಗೆ ಪ್ರತಿಕ್ರಿಯಿಸತೊಡಗಿತು. ಸಬಲಗೊಂಡ ಆರ್ಥಿಕತೆ, ಮಾನವಸಂಪನ್ಮೂಲ, ವಿಜ್ಞಾನ ಮತ್ತು ತಂತ್ರಜ್ಞಾನದ ಕೌಶಲ – ಇವೆಲ್ಲ ಭಾರತದ ವರ್ಚಸ್ಸನ್ನು ಹೆಚ್ಚಿಸಿದವು. ಭಾರತದ ವಿದೇಶಾಂಗ ನೀತಿಗೆ ಹೊಸ ಆಯಾಮಗಳು ಜೋಡಣೆಯಾದವು.

    ಈ ಪೂರ್ವಪೀಠಿಕೆಯೊಂದಿಗೆ ನಾವು ೨೦೨೪ನ್ನು ನೋಡಬೇಕು. ೨೦೨೪ರ ವಿಶೇಷತೆ ಏನೆಂದು ನೋಡಿದರೆ, ಇದು ಅಧಿಕ ವರ್ಷ ಎನ್ನುವುದು ಖರೆ. ಜೊತೆಗೆ ಈ ವರ್ಷ, ಜಗತ್ತಿನ ಹಲವು ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಚುನಾವಣೆ ನಡೆಯಲಿದೆ. ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವ ಇರುವ ಅಮೆರಿಕದಂತಹ ದೇಶದ ಜನ ತಮ್ಮ ನೂತನ ಅಧ್ಯಕ್ಷರನ್ನು ಈ ವರ್ಷ ಆರಿಸಲಿದ್ದಾರೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾದಂತಹ ಸಂಸದೀಯ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳಲ್ಲಿ ಹೊಸ ಸರ್ಕಾರಗಳು ಅಸ್ತಿತ್ವಕ್ಕೆ ಬರಲಿವೆ. ಯಾವುದೇ ದೇಶದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಹೊಸ ನಾಯಕ ದೇಶದ ಚುಕ್ಕಾಣಿ ಹಿಡಿದರೆ ಆ ದೇಶದ ಆದ್ಯತೆ, ಒಲವು-ನಿಲವುಗಳು, ಆರ್ಥಿಕ ಮತ್ತು ವಿದೇಶಾಂಗ ನೀತಿ ಬದಲಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದು ಜಾಗತಿಕ ಸ್ಥಿತ್ಯಂತರಗಳನ್ನು ಕುತೂಹಲದಿಂದ ಗಮನಿಸಬೇಕಾದ, ಈ ಬದಲಾವಣೆಗಳಿಂದ ಭಾರತದ ಮೇಲಾಗುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಅಂದಾಜಿಸಬೇಕಾದ ವರ್ಷವೂ ಹೌದು.

    ಬಾಂಗ್ಲಾದೇಶ

    ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶ ಮೊದಲಿಗೆ ಚುನಾವಣೆ ಎದುರಿಸಿತು. ಜನವರಿ ೭ರಂದು ನಡೆದ ಚುನಾವಣೆಯನ್ನು ಖಲೀದ್ ಜಿಯಾ ನೇತೃತ್ವದ ಬಾಂಗ್ಲಾದೇಶ್ ನ್ಯಾಶನಲಿಸ್ಟ್ ಪಕ್ಷ ಬಹಿಷ್ಕರಿಸಿದ್ದರಿಂದ, ಶೇಕ್ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಪ್ರಬಲ ವಿರೋಧವೇ ಇರಲಿಲ್ಲ. ಅಂದುಕೊಂಡಂತೆಯೇ ಶೇಕ್ ಹಸೀನಾ ಅವರು ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದರು.

    ಹಸೀನಾ ಅವರು ‘ಬಂಗಬಂಧು’ ಶೇಕ್ ಮುಜೀಬುರ್ ರೆಹಮಾನ್ ಅವರ ಮಗಳು. ಬಾಂಗ್ಲಾದೇಶ ರೂಪಗೊಂಡ ಬಗೆಯನ್ನು, ಆ ಸಂದರ್ಭದಲ್ಲಿ ಭಾರತ ನೀಡಿದ ನೆರವು ಮತ್ತು ಸಹಕಾರವನ್ನು ಚೆನ್ನಾಗಿ ಬಲ್ಲವರು. ಆ ಕಾರಣದಿಂದಲೇ ರಾಜಕೀಯವಾಗಿ ತಾವು ಬೆಳೆದು ಅಧಿಕಾರ ಹಿಡಿದ ಮೇಲೆ ಭಾರತದೊಂದಿಗೆ ಅವರು ನಿಕಟ ಸಂಬಂಧ ಇರಿಸಿಕೊಳ್ಳಲು ಪ್ರಯತ್ನಿಸಿದರು.

    ಬಾಂಗ್ಲಾದೇಶದ ರಚನೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದ್ದರಿಂದ ಎರಡು ದೇಶಗಳ ನಡುವಿನ ಆರಂಭಿಕ ಸಂಬಂಧ ಉತ್ತಮವಾಗಿತ್ತಾದರೂ, ಬಾಂಗ್ಲಾದೇಶದಲ್ಲಿ ಸೇನಾ ಆಡಳಿತ ಜಾರಿಗೆ ಬಂದಾಗ ಅದು ಭಾರತದತ್ತ ವಕ್ರದೃಷ್ಟಿಯಿಂದಲೇ ನೋಡಿತು. ಗಡಿವಿವಾದ, ನದಿನೀರು ಹಂಚಿಕೆ ಕುರಿತ ವೈಮನಸ್ಯ ಎರಡು ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ತಂದಿತು. ಬಾಂಗ್ಲಾದಲ್ಲಿ ಭಾರತವಿರೋಧಿ ಭಾವನೆ ಬೆಳೆಯಲು ಆಸ್ಪದವಾಯಿತು. ತೊಂಬತ್ತರ ದಶಕದ ಮಧ್ಯಭಾಗದವರೆಗೂ ದ್ವಿಪಕ್ಷೀಯ ಸಂಬಂಧದಲ್ಲಿ ಒಂದು ಬಗೆಯ ಅಸ್ಥಿರತೆ ಇತ್ತು. ಶೇಕ್ ಹಸೀನಾ ಅವರು ಆಡಳಿತದ ಚುಕ್ಕಾಣಿ ಹಿಡಿದ ಬಳಿಕ, ಎರಡು ದೇಶಗಳ ನಡುವೆ ಮಾತುಕತೆಗಳು ನಡೆದು, ನೀರುಹಂಚಿಕೆಯ ಒಪ್ಪಂದವಾಗಿ, ಸಂಬಂಧ ನಿಕಟವಾಯಿತು.

    ನಾಲ್ಕನೆಯ ಅವಧಿಗೆ ರಾಷ್ಟ್ರವನ್ನು ಮುನ್ನಡೆಸುವ ಅವಕಾಶ ಪಡೆದುಕೊಂಡಿರುವ ಶೇಕ್ ಹಸೀನಾ ಅವರು ಅಧಿಕಾರ ವಹಿಸಿಕೊಂಡ ಮರುದಿನವೇ ಭಾರತದ ಕುರಿತು ಆಪ್ತವಾಗಿ ಮಾತನಾಡಿದರು. ಹಲವು ಸಮಸ್ಯೆಗಳು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಇವೆಯಾದರೂ ‘ಭಾರತವು ಬಾಂಗ್ಲಾದೇಶದ ಮಹಾನ್ ಸ್ನೇಹಿತ’ ಎಂಬುದನ್ನು ಪುನರುಚ್ಚರಿಸಿದರು. ೧೯೭೧ ಮತ್ತು ೧೯೭೫ರಲ್ಲಿ ಬಾಂಗ್ಲಾದೇಶದ ಪರ ಭಾರತ ಬಲವಾಗಿ ನಿಂತಿತ್ತು. ‘ನನಗೆ, ನನ್ನ ಸಹೋದರಿಯರು ಮತ್ತು ಕುಟುಂಬಸ್ಥರಿಗೆ ಸಂಕಷ್ಟದ ಸಮಯದಲ್ಲಿ ಭಾರತ ಆಶ್ರಯ ನೀಡಿತು’ ಎಂಬ ಮಾತನ್ನು ಹಸೀನಾ ಅವರು ತಾವು ಆರು ವರ್ಷ ಭಾರತದಲ್ಲಿ ಕಳೆಯಬೇಕಾಗಿ ಬಂದ ದಿನಗಳನ್ನು ನೆನಪು ಮಾಡಿಕೊಳ್ಳುತ್ತ ಆಡಿದ್ದಿರಬೇಕು.

    ಹೌದು. ಅದು ನಿಜಕ್ಕೂ ಶೇಕ್ ಹಸೀನಾ ಅವರ ಬದುಕಿನ ಸಂಕಷ್ಟದ ದಿನಗಳು. ೧೯೭೫ರ ಆಗಸ್ಟ್ ತಿಂಗಳಿನಲ್ಲಿ ಶೇಕ್ ಮುಜೀಬುರ್ ರೆಹಮಾನ್ ಅವರ ಕುಟುಂಬದ ಮೇಲೆ ಬಾಂಗ್ಲಾದ ಸೇನೆ ದಾಳಿ ಮಾಡಿತು. ಶೇಕ್ ಮುಜೀಬುರ್ ರೆಹಮಾನ್, ಅವರ ಪತ್ನಿ, ಮೂವರು ಗಂಡುಮಕ್ಕಳು, ಸೊಸೆಯಂದಿರು ಹಾಗೂ ಅವರ ಸಿಬ್ಬಂದಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು. ಅದೃಷ್ಟವಶಾತ್ ಪುತ್ರಿಯರಾದ ಹಸೀನಾ ಮತ್ತು ರೆಹಾನಾ ಅವರು ಆ ಸಂದರ್ಭದಲ್ಲಿ ಅಲ್ಲಿ ಇರದ ಕಾರಣ ಪ್ರಾಣಾಪಾಯದಿಂದ ಪಾರಾದರು. ಭಾರತ ಹಸೀನಾ ಮತ್ತು ಸಹೋದರಿಗೆ ಆಶ್ರಯ ನೀಡಿತ್ತು.

    ಅದನ್ನು ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿಯಾದಾಗ ಮರೆಯಲಿಲ್ಲ. ಭಾರತದೊಂದಿಗಿನ ಉತ್ತಮ ಸಂಬಂಧ ಬಾಂಗ್ಲಾದ ಏಳಿಗೆಯ ದೃಷ್ಟಿಯಿಂದ ಮುಖ್ಯ ಎಂಬುದನ್ನು ಹಸೀನಾ ಮನಗಂಡರು. ಹಾಗಾಗಿ ಹಸೀನಾ ಅವರ ಅವಧಿಯಲ್ಲಿ ಬಾಂಗ್ಲಾದೇಶದ ವಿದೇಶಾಂಗ ನೀತಿ ಭಾರತಕೇಂದ್ರಿತವಾಗಿ ರೂಪಗೊಂಡಿತು.

    ಈ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಹಸೀನಾ ಅವರು ತಮ್ಮ ಸರ್ಕಾರದ ಆದ್ಯತೆಯ ಬಗ್ಗೆ ಮಾತನಾಡಿದರು. ಮುಂದಿನ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಆರ್ಥಿಕತೆಗೆ ಶಕ್ತಿ ತುಂಬುವತ್ತ ಗಮನಹರಿಸಲಿದೆ, ೨೦೩೧ರ ಹೊತ್ತಿಗೆ ಉನ್ನತ ಮಧ್ಯಮ ಆದಾಯ ಸ್ಥಿತಿಯನ್ನು ಸಾಧಿಸುವ ಗುರಿಯನ್ನು ಬಾಂಗ್ಲಾ ಹೊಂದಿದೆ ಎಂದು ಹಸೀನಾ ಹೇಳಿದರು. ಮೂರನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪಗೊಳ್ಳುತ್ತಿರುವ ಭಾರತದ ಜೊತೆಜೊತೆಗೆ ತಾನು ಹೆಜ್ಜೆ ಹಾಕಿದರೆ ತನ್ನ ಗುರಿಯನ್ನು ತಲಪುವುದು ಸಾಧ್ಯ ಎಂದು ಅವರು ಭಾವಿಸಿರಲಿಕ್ಕೆ ಸಾಕು. ಬಾಂಗ್ಲಾದೇಶದ ಬಗಲಿಗೆ ನಾವು ನಿಲ್ಲುವುದು ಭಾರತದ ಹಿತಾಸಕ್ತಿಯ ದೃಷ್ಟಿಯಿಂದಲೂ ಮುಖ್ಯವೇ.

    ಇಂಡೋ ಪೆಸಿಫಿಕ್ ಪ್ರಾಂತದಲ್ಲಿ ಚೀನಾ ತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳುವತ್ತ ಗಮನಹರಿಸಿರುವುದು ಗುಟ್ಟಾಗಿ ಉಳಿದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶದ ಮೂಲಸೌಕರ್ಯ ಯೋಜನೆಗಳಲ್ಲಿ ಚೀನಾ ಹಣಹೂಡಿಕೆ ಮಾಡಿದೆ. ೧೨ ಹೆದ್ದಾರಿಗಳು, ೨೧ ಸೇತುವೆಗಳು ಹಾಗೂ ೨೭ ವಿದ್ಯುತ್ ಮತ್ತು ಇಂಧನ ಯೋಜನೆಗಳು ಚೀನಾದ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿವೆ. ಹಣವನ್ನು ಸಾಲದ ರೂಪದಲ್ಲಿ ನೀಡಿ, ಅಗತ್ಯವೋ ಅನಗತ್ಯವೋ ರಸ್ತೆ, ಬಂದರು, ವಿಮಾನನಿಲ್ದಾಣ, ಕ್ರೀಡಾಂಗಣಗಳನ್ನು ನಿರ್ಮಿಸಿ ಸಾಲದ ಪ್ರಪಾತಕ್ಕೆ ಕೆಡವಿ ತನ್ನ ಪರ ಹಿಡಿದಿಟ್ಟುಕೊಳ್ಳುವುದು ಚೀನಾ ಹಲವು ದೇಶಗಳ ವಿಷಯದಲ್ಲಿ ಪ್ರಯೋಗಿಸಿರುವ ತಂತ್ರ.

    ಬಾಂಗ್ಲಾದೇಶವನ್ನು ಭಾರತದ ಪರವಾಗಿಯೇ ಉಳಿಸಿಕೊಳ್ಳುವ ಪ್ರಯತ್ನವನ್ನು ಭಾರತ ಕೂಡ ಬಿಟ್ಟಿಲ್ಲ. ಕಳೆದ ವರ್ಷ ಜಿ-೨೦ರ ಶೃಂಗಸಭೆ ದೆಹಲಿಯಲ್ಲಿ ನಡೆದಾಗ, ಆ ಶೃಂಗಸಭೆಗೆ ಬಾಂಗ್ಲಾದೇಶವನ್ನು ವಿಶೇಷ ಆಹ್ವಾನಿತ ರಾಷ್ಟ್ರವನ್ನಾಗಿ ಭಾರತ ಬರಮಾಡಿಕೊಂಡಿತ್ತು. ವ್ಯಾಪಾರ, ಇಂಧನ, ಮೂಲಸೌಕರ್ಯ, ಸಂಪರ್ಕ, ರಕ್ಷಣೆ, ಭದ್ರತೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜೊತೆಯಾಗಿ ಮುಂದಡಿಯಿಡುವ ಕುರಿತು ಈಗಾಗಾಲೇ ಎರಡೂ ದೇಶಗಳ ನಡುವೆ ಸಹಕಾರ ಒಪ್ಪಂದಗಳು ಆಗಿವೆ. ಅಭಿವೃದ್ಧಿಯ ಕನಸನ್ನು ನನಸು ಮಾಡಿಕೊಳ್ಳಲು ಚೀನಾಕ್ಕಿಂತ ಭಾರತದ ಜೊತೆಗೆ ದೃಢವಾಗಿ ನಿಲ್ಲುವುದು ಅಗತ್ಯ ಎನ್ನುವುದನ್ನು ಬಾಂಗ್ಲಾದೇಶ ಅರಿಯಬೇಕಿದೆ. ಹಸೀನಾ ಅವರ ಪುನರಾಯ್ಕೆ ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದರೆ ಅಚ್ಚರಿಯಿಲ್ಲ.

    ಭೂತಾನ್

    ಬಾಂಗ್ಲಾದೇಶದ ಚುನಾವಣೆಯ ಬೆನ್ನಲ್ಲೇ ಭೂತಾನ್ ಕೂಡ ಜನಮತಗಣನೆಗೆ ತೆರೆದುಕೊಂಡಿತು. ಚೀನಾ ಮತ್ತು ಭಾರತ ಎಂಬ ಪ್ರಬಲ ರಾಷ್ಟ್ರಗಳ ನಡುವಿನಲ್ಲಿರುವ ಈ ಪುಟ್ಟ ರಾಷ್ಟ್ರ, ರಾಜತಾಂತ್ರಿಕ ಮಹತ್ತ್ವವನ್ನು ಹೊಂದಿದೆ. ಭೂತಾನ್‌ಗೆ ಸೇರಿದ ಗಡಿಭಾಗದಲ್ಲಿ ಯಥಾಪ್ರಕಾರ ತನ್ನ ಗಡಿ ವಿಸ್ತರಣಾ ಕಾರ್ಯ ನಡೆಸಿರುವ ಚೀನಾ, ಅಲ್ಲಿ ರಸ್ತೆಗಳನ್ನು ನಿರ್ಮಿಸುತ್ತಿದೆ.

    ಭೂತಾನ್ ಮತ್ತು ಭಾರತದ ನಡುವಿನ ಸಂಬಂಧ ಬಹಳ ಹಳೆಯದು. ಭೂತಾನ್ ಮತ್ತು ಚೀನಾದ ನಡುವೆ ಮಾತುಕತೆ ಆರಂಭವಾದದ್ದು ಬಹಳ ಇತ್ತೀಚೆಗೆ. ೧೯೭೦ರವರೆಗೂ ಭೂತಾನ್‌ನ ಎಲ್ಲ ಕಳವಳ ಮತ್ತು ಆಕ್ಷೇಪಗಳನ್ನು ಚೀನಾಕ್ಕೆ ಮುಟ್ಟಿಸುವ ಕೆಲಸವನ್ನು ಭಾರತ ಮಾಡುತ್ತಿತ್ತು. ೧೯೭೧ರಲ್ಲಿ ವಿಶ್ವಸಂಸ್ಥೆಯ ಸದಸ್ಯತ್ವ ಪಡೆದ ಭೂತಾನ್ ಸ್ವತಂತ್ರ ವಿದೇಶಾಂಗ ನೀತಿಯನ್ನು ರೂಪಿಸಿಕೊಂಡಿತು.

    ಭೂತಾನ್ ಈ ಮಧ್ಯೆ ಕೊಂಚ ಚೀನಾದ ಕಡೆಗೆ ವಾಲಿತ್ತು. ೨೦೧೮ ರಿಂದ ೨೦೨೩ರವರೆಗೆ ಅಧಿಕಾರದಲ್ಲಿದ್ದ ಲೋಟೇ ಶೇರಿಂಗ್ ಅವರನ್ನು ‘ಚೀನಾದ ಪರ’ ಎಂದು ಕರೆಯಲಾಗಿತ್ತು. ಅವರು ತೆಗೆದುಕೊಂಡ ಕೆಲವು ನಿರ್ಣಯಗಳು ಹಾಗಿದ್ದವು. ಭೂತಾನ್ ಪರ ಭಾರತದ ಸೇನೆ ಡೋಕ್ಲಾಮ್‌ನಲ್ಲಿ ಚೀನಾಕ್ಕೆ ಎದೆಯೊಡ್ಡಿ ನಿಂತು ಗಡಿಯನ್ನು ರಕ್ಷಿಸಿದ್ದರೂ, ಲೋಟೇ ಚೀನಾದ ಜೊತೆ ಮಾತುಕತೆಗೆ ಮುಂದಾಗಿದ್ದು ಮತ್ತು ಗಡಿವಿಷಯವನ್ನು ಬಗೆಹರಿಸಿಕೊಳ್ಳುವ ಒಪ್ಪಂದ ಮಾಡಿಕೊಂಡದ್ದು ಭಾರತಕ್ಕೆ ಮುಜುಗರ ಉಂಟುಮಾಡಿತ್ತು.

    ಈ ಚುನಾವಣೆಯಲ್ಲಿ ಷೆರಿಂಗ್ ಟೊಬ್ಗೇ ಗೆದ್ದಿದ್ದಾರೆ. ಈ ಹಿಂದೆ ೨೦೧೩-೧೮ರ ಅವಧಿಯಲ್ಲಿ ಟೊಬ್ಗೇ ಭೂತಾನ್ ಸರ್ಕಾರದ ಚುಕ್ಕಾಣಿ ಹಿಡಿದಿದ್ದರು. ಈಗ ಮತ್ತೊಮ್ಮೆ ಅವರಿಗೆ ಪ್ರಧಾನಿಯಾಗುವ ಅವಕಾಶ ಲಭಿಸಿದೆ. ಈ ಹಿಂದೆ ಅವರು ಭೂತಾನ್ ಪ್ರಧಾನಿಯಾಗಿದ್ದಾಗ ೨೦೧೫ರಲ್ಲಿ ‘ವೈಬ್ರಂಟ್ ಗುಜರಾತ್’ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಟೋಬ್ಗೆ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಕಲಿತವರು ಮತ್ತು ಅನಂತರ ಹಾರ್ವರ್ಡ್ ಕೆನೆಡಿ ಶಾಲೆಯಲ್ಲಿ ಸಾರ್ವಜನಿಕ ನೀತಿಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ನಾಗರಿಕ ಸೇವೆಯ ಮೂಲಕ ವೃತ್ತಿ ಆರಂಭಿಸಿದವರು. ಭೂತಾನ್ ರಾಜಪ್ರಭುತ್ವದಿಂದ ಸಂಸದೀಯ ಪ್ರಜಾಪ್ರಭುತ್ವಕ್ಕೆ ಪರಿವರ್ತನೆಗೊಂಡ ಬಳಿಕ ರಾಜಕೀಯದಲ್ಲಿ ನೆಲೆ ಕಂಡುಕೊಂಡರು.

    ಈ ಬಾರಿಯ ಭೂತಾನ್ ಚುನಾವಣೆಯಲ್ಲಿ ಆರ್ಥಿಕತೆ ಪ್ರಮುಖ ವಿಷಯವಾಗಿತ್ತು. ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿರುವ ಭೂತಾನ್ ಆರ್ಥಿಕತೆ, ಕೊರೋನಾ ಕಾರಣದಿಂದ ಹೊಡೆತ ತಿಂದಿತ್ತು. ಈಗ ಅದು ಚೇತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಭೂತಾನ್‌ನ ಶಕ್ತಿ ಎಂದರೆ, ಅಲ್ಲಿನ ಜನಸಂಖ್ಯೆಯ ಅರ್ಧದಷ್ಟು ಜನ ೩೦ರ ವಯೋಮಾನದ ಕೆಳಗಿದ್ದಾರೆ. ಹಾಗಾಗಿ ಭೂತಾನ್ ಯುವರಾಷ್ಟ್ರ ಎಂದು ಕರೆಸಿಕೊಂಡಿದೆ. ಆದರೆ ನಿರುದ್ಯೋಗ ಪ್ರಮಾಣ ಶೇಕಡ ೨೯ರಷ್ಟಿದೆ. ಆರ್ಥಿಕತೆಯನ್ನು ಮೇಲೆತ್ತುವ, ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿಸುವ ಜವಾಬ್ದಾರಿ ಟೋಬ್ಗೆ ಅವರ ಮೇಲಿದೆ.

    ಟೋಬ್ಗೆ ಭಾರತ ಸರ್ಕಾರ ಮತ್ತು ಭಾರತದ ಉದ್ಯಮಿಗಳೊಂದಿಗೆ ಉತ್ತಮ ಸ್ನೇಹ ಹೊಂದಿರುವ ನಾಯಕ. ಭಾರತದ ಉದ್ಯಮಿಗಳು ಭೂತಾನ್‌ನಲ್ಲಿ ಹೂಡಿಕೆ ಮಾಡಬೇಕು ಎಂದು ಅವರು ಎದುರುನೋಡುತ್ತಿದ್ದಾರೆ. ಅದು ಭಾರತದ ಹಿತಾಸಕ್ತಿಗೆ ಪೂರಕವಾಗಿದೆ. ಭೂತಾನ್‌ನ ಹಲವು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರತ ಈಗಾಗಲೇ ಹಣ ಹೂಡಿಕೆ ಮಾಡಿದೆ. ಭೂತಾನ್ ಜಲವಿದ್ಯುತ್ ಉತ್ಪಾದಕ ರಾಷ್ಟ್ರ ಮತ್ತು ಭಾರತವನ್ನು ಅದು ಗ್ರಾಹಕ ದೇಶವನ್ನಾಗಿ ನೋಡುತ್ತಿದೆ. ಈ ನಿಟ್ಟಿನಲ್ಲೂ ಭಾರತ-ಭೂತಾನ್ ಸಖ್ಯ ಗಟ್ಟಿಗೊಳ್ಳುವ ಸಾಧ್ಯತೆ ಇದೆ.

    ೨೦೧೭ರಲ್ಲಿ ಚೀನಾದ ಎದುರು ಭಾರತದ ಸೇನೆ ಎದೆಸೆಟೆಸಿ ನಿಂತು ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ನಿಮಗೆ ನೆನಪಿರಬಹುದು. ೨೦೨೦ರಲ್ಲಿ ಲಡಾಖ್‌ನಲ್ಲಿ ಉಭಯ ದೇಶಗಳ ಸೈನಿಕರು ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಭಾರತದ ಈಶಾನ್ಯ ರಾಜ್ಯಗಳನ್ನು ಮುಖ್ಯ ಭೂಪ್ರದೇಶದೊಂದಿಗೆ ಜೋಡಿಸಿರುವ ಸಿಲಿಗುರಿ ಕಾರಿಡಾರ್ (ಚಿಕನ್ ನೆಕ್) ಮೇಲೆ ಚೀನಾ ಕಣ್ಣಿಟ್ಟಿದೆ. ಭೂತಾನ್ ತನ್ನ ಪರವಾದರೆ ಅಲ್ಲಿ ಸೇನಾ ನೆಲೆ ಸ್ಥಾಪಿಸಿ ಭಾರತದ ಮೇಲೆ ಒತ್ತಡ ಹೇರಬಹುದು ಎಂಬ ಯೋಚನೆ ಚೀನಾದ್ದು. ಹೀಗಾಗಿಯೇ ಅದು ಭೂತಾನ್ ಗಡಿಪ್ರದೇಶಗಳ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ. ಸದ್ಯದಮಟ್ಟಿಗೆ ಭೂತಾನ್ ದೊರೆ ಭಾರತದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ನೂತನ ಪ್ರಧಾನಿಯ ಆದ್ಯತೆಯೂ ಭಾರತವೇ ಆಗಿರುವುದರಿಂದ ಚೀನಾ ನಿರಾಶೆಗೊಂಡಿರಲಿಕ್ಕೆ ಸಾಕು.

    ತೈವಾನ್

    ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವ ಮತ್ತೊಂದು ದೊಡ್ಡ ಪ್ರಮಾಣದ ಯುದ್ಧಕ್ಕೆ ಕಾರಣವಾಗಬಹುದೇ ಎಂಬ ಪ್ರಶ್ನೆಗೆ ಕಾರಣವಾಗಿರುವ ದೇಶ ಎಂದರೆ ಅದು ತೈವಾನ್. ಈ ವರ್ಷದ ಆರಂಭದಲ್ಲಿ ತೈವಾನ್‌ನಲ್ಲಿ ಚುನಾವಣೆ ನಡೆಯಿತು ಮತ್ತು ಭಾವೀ ಅಧ್ಯಕ್ಷರನ್ನು ಅಲ್ಲಿನ ಜನ ಆರಿಸಿದರು.

    ತೈವಾನ್ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಬಂಧ ಏರ್ಪಟ್ಟಿಲ್ಲ. ಕಾರಣ ತೈವಾನ್ ಅನ್ನು ಒಂದು ದೇಶವಾಗಿ ಭಾರತ ಗುರುತಿಸುವುದಿಲ್ಲ. ಭೂತಾನ್ ಮತ್ತು ಬಾಂಗ್ಲಾದೇಶದಲ್ಲಿ ಚುನಾವಣೆಯನ್ನು ಗೆದ್ದ ನಾಯಕರನ್ನು ಭಾರತ ಅಭಿನಂದಿಸಿತಾದರೂ ತೈವಾನ್ ಚುನಾವಣೆಯ ವಿಷಯದಲ್ಲಿ ಬೇರೆಯದೇ ರೀತಿ ಪ್ರತಿಕ್ರಿಯಿಸಿತು. ‘ತೈವಾನ್‌ನ ಇತ್ತೀಚಿನ ಬೆಳವಣಿಗೆಯನ್ನು ಭಾರತ ಗಮನಿಸಿದೆ. ತೈವಾನ್ ಮತ್ತು ಭಾರತದ ಜನರ ನಡುವೆ ಉತ್ತಮ ಸಂಬಂಧವಿದೆ. ಸಾಂಸ್ಕೃತಿಕ, ಶೈಕ್ಷಣಿಕ, ವ್ಯಾಪಾರ ಸೇರಿದಂತೆ ಹಲವು ಸ್ತರದಲ್ಲಿ ನಮ್ಮ ಸಂಬಂಧ ಬೆಳೆದಿದೆ ಮತ್ತು ಅದು ಮುಂದುವರಿಯಲಿದೆ’ ಎಂದು ವಿದೇಶಾಂಗ ಇಲಾಖೆ ಪ್ರಕಟಣೆ ಹೊರಡಿಸಿತು.

    ಇತ್ತೀಚಿನ ವರ್ಷಗಳಲ್ಲಿ ನಾವು ‘ಒಂದು ಚೀನಾ’ ಧೋರಣೆಯ ಬಗ್ಗೆ ಬಹಿರಂಗವಾಗಿ ಏನೂ ಹೇಳಿಲ್ಲವಾದರೂ, ಈ ಹಿಂದೆ ಭಾರತ ‘ಒಂದು ಚೀನಾ’ ನೀತಿಯನ್ನು ಅನುಮೋದಿಸಿತ್ತು ಮತ್ತು ತೈವಾನ್ ಚೀನಾದ ಭಾಗ ಎಂದು ಒಪ್ಪಿಕೊಂಡಿತ್ತು. ಆದರೆ ಬದಲಾದ ಸಂದರ್ಭದಲ್ಲಿ ಚೀನಾ ಭಾರತದ ಕಾಶ್ಮೀರದ ಕುರಿತು ಮಾತನಾಡಬಹುದಾದರೆ, ಗಡಿತಂಟೆಯ ಮೂಲಕ ಭಾರತವನ್ನು ಕೆಣಕಬಹುದಾದರೆ, ಭಾರತ ‘ಒಂದು ಚೀನಾ’ ಧೋರಣೆಯಿಂದ ಹಿಂದೆಸರಿದು ತೈವಾನ್‌ಅನ್ನು ಗುರುತಿಸಬಾರದೇಕೆ ಎಂಬ ಅನಿಸಿಕೆಗಳೂ ಚಿಂತಕರ ಚಾವಡಿಯಲ್ಲಿ ಕೇಳಿಬರುತ್ತಿವೆ.

    ಈಗಾಗಲೇ ತೈವಾನ್ ವಿಷಯವಾಗಿ ಚೀನಾ ಮತ್ತು ಅಮೆರಿಕದ ನಡುವೆ ಸಂಬಂಧ ಹಳಸಿದೆ. ಈ ಹಿಂದೆ ಅಮೆರಿಕದ ಸಂಸತ್ತಿನ ಸಭಾಪತಿ ನ್ಯಾನ್ಸಿ ಫೆಲೋಸಿ ಅವರು ಸಂಸದೀಯ ನಿಯೋಗದೊಂದಿಗೆ ತೈವಾನಿಗೆ ಭೇಟಿಯಿತ್ತಾಗ ಚೀನಾ ವ್ಯಗ್ರಗೊಂಡಿತ್ತು. ಆ ಬಳಿಕ ತೈವಾನ್ ದೇಶವನ್ನು ಸುತ್ತುವರಿದು ಸಮರಾಭ್ಯಾಸ ನಡೆಸಿ ಅಮೆರಿಕಕ್ಕೆ ಸಂದೇಶ ರವಾನಿಸುವ ಕೆಲಸ ಮಾಡಿತ್ತು.

    ಇದೀಗ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಲಾಯ್ ಚಿಂಗ್ ದು, ತೈವಾನ್ ಸಾರ್ವಭೌಮತ್ವದ ಪ್ರತಿಪಾದಕರಾಗಿರುವುದರಿಂದ ಚೀನಾ ಮತ್ತು ತೈವಾನ್ ನಡುವಿನ ತಿಕ್ಕಾಟ ಹೆಚ್ಚಬಹುದು ಎನ್ನಲಾಗುತ್ತಿದೆ. ೨೦೨೪ರಲ್ಲಿ ತೈವಾನ್ ವಶಪಡಿಸಿಕೊಳ್ಳುವ ಸಾಹಸವನ್ನು ಚೀನಾ ಮಾಡಲಾರದು. ಆದರೆ ತೈವಾನ್ ಚೀನಾದ ಆಡಳಿತಕ್ಕೆ ಒಳಪಡುವಂತೆ ಮಾಡುವುದು ಅದರ ಮುಖ್ಯ ಗುರಿಗಳಲ್ಲಿ ಒಂದಾಗಿದೆ. ತೈವಾನ್ ಮೇಲೆ ಆಕ್ರಮಣಕ್ಕೆ ಚೀನಾ ಮುಂದಾದರೆ ಅದು ಮತ್ತೊಂದು ಸಂಘರ್ಷಕ್ಕೆ ಕಾರಣವಾಗಬಹುದು. ಅಮೆರಿಕ ತೈವಾನ್ ಬೆಂಬಲಕ್ಕೆ ನಿಂತರೆ ಆ ಸಂಘರ್ಷ ಯುದ್ಧದ ಸ್ವರೂಪ ಪಡೆದುಕೊಳ್ಳಬಹುದು. ಪ್ರಾದೇಶಿಕ ಅಸ್ಥಿರತೆಗೆ ನಾಂದಿ ಹಾಡಬಹುದು. ಆಗ ‘ಒಂದು ಚೀನಾ’ ನೀತಿಯ ಕುರಿತು ಭಾರತ ಮರುಯೋಚಿಸುವ ಸಂದರ್ಭ ಬರಬಹುದು.

    ಮಾಲ್ಡೀವ್ಸ್

    ಒಂದು ದೇಶದ ಆಡಳಿತದ ಚುಕ್ಕಾಣಿ ಕೈ ಬದಲಾದರೆ, ಶೀಘ್ರವೇ ಏನೆಲ್ಲ ಬದಲಾವಣೆಗಳು ಆಗಬಹುದು ಎಂಬುದಕ್ಕೆ ತಾಜಾ ಉದಾಹರಣೆ ಎಂದರೆ ಅದು ಮಾಲ್ಡೀವ್ಸ್. ಕಳೆದ ವರ್ಷ ಮಾಲ್ಡೀವ್ಸ್ ನೂತನ ಅಧ್ಯಕ್ಷರನ್ನು ಆರಿಸಿಕೊಂಡಿತು. ಸಾಮಾನ್ಯವಾಗಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮೊದಲಿಗೆ ಭಾರತಕ್ಕೆ ಭೇಟಿ ನೀಡುವ ಅಲಿಖಿತ ಸಂಪ್ರದಾಯ ಜಾರಿಯಲ್ಲಿತ್ತು. ಆದರೆ ಮೊಹಮ್ಮದ್ ಮುಯಿಝ್ ಭಾರತಕ್ಕೆ ಭೇಟಿ ನೀಡಲಿಲ್ಲ. ಬದಲಾಗಿ ಟರ್ಕಿಗೆ ಮೊದಲು ಭೇಟಿಯಿತ್ತರು. ಅನಂತರ ಯುಎಇಗೆ ಹೋಗಿ ಬಂದರು. ಚೀನಾಕ್ಕೂ ಐದು ದಿನಗಳ ಭೇಟಿಯಿತ್ತರು. ವ್ಯಾಪಾರ, ಅಭಿವೃದ್ಧಿ ಮತ್ತು ಸಾಮಾಜಿಕ ಆರ್ಥಿಕ ಸಹಕಾರಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಮಾಲ್ಡೀವ್ಸ್ ನಡುವೆ ಒಪ್ಪಂದಗಳು ಆದವು.

    ಬಹಳ ಇತ್ತೀಚಿನವರೆಗೆ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಸೌಹಾರ್ದಯುತ ಸಂಬಂಧವಿತ್ತು. ೨೦೧೩ರಿಂದ ೨೦೧೮ರ ವರೆಗಿನ ಅಬ್ದುಲ್ಲಾ ಯಮೀನ್ ಅವರ ಅವಧಿಯಲ್ಲಿ ಚೀನಾದ ಜೊತೆ ನಿಕಟವಾಗಿ ಗುರುತಿಸಿಕೊಳ್ಳುವ ಹೆಜ್ಜೆಯನ್ನು ಮಾಲ್ಡೀವ್ಸ್ ಆಡಳಿತ ಇಟ್ಟಿತು. ಈ ಅವಧಿಯಲ್ಲಿ ಮಾಲ್ಡೀವ್ಸ್ ಚೀನಾದ ‘ಬೆಲ್ಟ್ ಅಂಡ್ ರೋಡ್’ ಯೋಜನೆಯ ಭಾಗವಾಯಿತು.

    ೨೦೧೮ರಿಂದ ೨೦೨೩ರ ವರೆಗೆ ಮಾಲ್ಡೀವ್ಸ್ ನೇತೃತ್ವ ವಹಿಸಿದ ಇಬ್ರಾಹಿಂ ಮೊಹಮದ್ ಸೋಲಿಹ್ ಅವರ ಅವಧಿಯಲ್ಲಿ ಭಾರತದೊಂದಿಗೆ ಮಾಲ್ಡೀವ್ಸ್ ಸಖ್ಯ ಮತ್ತೊಮ್ಮೆ ಕುದುರಿತು. ಆರ್ಥಿಕ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಮಾಲ್ಡೀವ್ಸ್ ಮತ್ತೊಮ್ಮೆ ‘ಭಾರತ ಮೊದಲು’ ಎಂದಿತು. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸೇನೆಯ ಹಂತದ ಸಾಮೀಪ್ಯ ಚೀನಾವನ್ನು ಕಳವಳಕ್ಕೆ ಈಡುಮಾಡಿತು. ಚೀನಾದ ಪೋಷಣೆಯಿಂದ ಮಾಲ್ಡೀವ್ಸ್ ಪ್ರತಿಪಕ್ಷಗಳು ‘ಇಂಡಿಯಾ ಔಟ್’ ಅಭಿಯಾನ ರೂಪಿಸಿದವು. ಮಾಲ್ಡೀವ್ಸ್ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದವು. ೨೦೨೧ರಲ್ಲಿ ರಾಷ್ಟ್ರೀಯ ರಕ್ಷಣಾ ದಳದ ಕೋಸ್ಟ್ ಗಾರ್ಡ್ ಬಂದರನ್ನು ಭಾರತ ಮತ್ತು ಮಾಲ್ಡೀವ್ಸ್ ಜಂಟಿಯಾಗಿ ಅಭಿವೃದ್ಧಿಪಡಿಸುವ ಕುರಿತು ಯುಟಿಎಫ್ ಒಪ್ಪಂದ ಏರ್ಪಟ್ಟಾಗ ಈ ಅಭಿಯಾನ ತಾರಕಕ್ಕೇರಿತು. ೨೦೨೩ರ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ವಿಷಯ ಮುಖ್ಯ ಚುನಾವಣಾ ವಿಷಯವಾಗಿ ಮಾರ್ಪಟ್ಟಿತು.

    ಇದೀಗ ಮಾಲ್ಡೀವ್ಸ್ ಅಧ್ಯಕ್ಷರು, ಭಾರತೀಯ ಪಡೆಗಳನ್ನು ಮಾಲ್ಡೀವ್ಸ್ನಿಂದ ಹೊರಹಾಕಲು ದಿನಾಂಕ ನಿಗದಿಮಾಡಿದ್ದಾರೆ. ಪ್ರವಾಸೋದ್ಯಮವನ್ನೇ ಬಹುವಾಗಿ ನೆಚ್ಚಿಕೊಂಡಿರುವ ಮಾಲ್ಡೀವ್ಸ್ಗೆ ಆಘಾತ ನೀಡಲು ಭಾರತವೂ ತಂತ್ರಗಾರಿಕೆ ರೂಪಿಸಿ ಹೆಜ್ಜೆಯಿಟ್ಟಿದೆ. ಸದ್ಯದಮಟ್ಟಿಗೆ ಭಾರತ-ಮಾಲ್ಡೀವ್ಸ್ ಸಂಬಂಧ ಹದಗೆಟ್ಟಿರುವುದು ಚೀನಾಕ್ಕೆ ಖುಷಿತಂದಿದೆ. ಚೀನಾವನ್ನು ಅತಿಯಾಗಿ ನೆಚ್ಚಿಕೊಂಡರೆ ಏನಾದೀತು ಎಂದು ಮಾಲ್ಡೀವ್ಸ್ ಪಾಠ ಕಲಿಯುವುದು ಬಾಕಿಯಿದೆ.

    ಶ್ರೀಲಂಕಾ

    ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿಕ್ಕಿದೆ. ಪ್ರಸ್ತುತ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ನಾಯಕತ್ವದಲ್ಲಿ ಶ್ರೀಲಂಕಾ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಪ್ರವಾಸೋದ್ಯಮವನ್ನೇ ಅತಿಯಾಗಿ ನೆಚ್ಚಿಕೊಂಡಿದ್ದ ಶ್ರೀಲಂಕಾಕ್ಕೆ ಕೊರೋನಾ ಬಹಳ ಪ್ರಬಲ ಹೊಡೆತವನ್ನೇ ನೀಡಿತ್ತು.

    ರಾಜಪಕ್ಸೆ ಸಹೋದರರು ಅಧ್ಯಕ್ಷ ಮತ್ತು ಪ್ರಧಾನಿ ಸ್ಥಾನದಲ್ಲಿ ಕೂತು ಶೀಲಂಕಾದ ಆಡಳಿತವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿದರು. ಜನಪ್ರಿಯ ಯೋಜನೆಗಳನ್ನು ಘೋಷಿಸಿ, ಅದಕ್ಕೆ ಚೀನಾದಿಂದ ಹಣ ತಂದರು. ಸಾಲದ ಮರುಪಾವತಿ ಸಾಧ್ಯವಾಗದಿದ್ದಾಗ ಚೀನಾ ಆಯಕಟ್ಟಿನ ಜಾಗಗಳನ್ನು ಕ್ರಯಕ್ಕೆ ಪಡೆದು ತನ್ನ ಸೇನಾ ನೆಲೆ ಸ್ಥಾಪಿಸಲು ಮುಂದಾಯಿತು. ದಕ್ಷಿಣ ಶ್ರೀಲಂಕಾದ ಹಂಬನತೋಟ ಬಂದರನ್ನು ಅಭಿವೃದ್ಧಿಪಡಿಸಲು ಹಣಹೂಡಿ, ೯೯ ವರ್ಷಗಳ ಕ್ರಯಕ್ಕೆ ಪಡೆದುಕೊಳ್ಳುವ ಒಪ್ಪಂದ ಮಾಡಿಕೊಂಡಿತು. ಕೊಲಂಬೋ ಬಂದರಿನ ಮೇಲೂ ಚೀನಾ ಕಣ್ಣಿಟ್ಟಿತು. ಚೀನಾದ ಯುದ್ಧನೌಕೆಗಳು ಕೊಲಂಬೋ ಬಂದರನ್ನು ತಂಗುದಾಣ ಮಾಡಿಕೊಂಡವು. ಭಾರತದ ಎಚ್ಚರಿಕೆಗೆ ಶ್ರೀಲಂಕಾ ಕಿವಿಗೊಡಲಿಲ್ಲ.

    ಚೀನಾದ ಸಖ್ಯದಲ್ಲಿ ಶ್ರೀಲಂಕಾ ಮೈಮರೆಯಿತು. ರಾಜಪಕ್ಸೆ ಸಹೋದರರು ಮುಂಗಾಣ್ಕೆ ಇಲ್ಲದೆ ಯೋಜನೆಗಳನ್ನು ರೂಪಿಸಿದರು. ಹಲವು ವಿಮಾನನಿಲ್ದಾಣಗಳನ್ನು ನಿರ್ಮಿಸಲಾಯಿತಾದರೂ, ವಿಮಾನಗಳು ಬಂದಿಳಿಯಲಿಲ್ಲ. ಜನಪ್ರಿಯ ಯೋಜನೆಗಳಿಂದ ಸಂತಸಪಟ್ಟಿದ್ದ ಜನ, ಕೆಲವು ದಿನಗಳಲ್ಲೇ ಹಣದುಬ್ಬರದಿಂದ ಕಂಗಾಲಾದರು. ಪೆಟ್ರೋಲ್, ಡೀಸೆಲ್ ದುಬಾರಿಯಾಯಿತು. ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳುವುದೂ ಕಠಿಣವಾಯಿತು. ವಿದೇಶಿ ವಿನಿಮಯ ದಾಸ್ತಾನನ್ನು ಕರಗಿಸಿದ್ದ ಆಡಳಿತ, ಅಗತ್ಯವಸ್ತುಗಳನ್ನು ಆಮದು ಮಾಡಿಕೊಳ್ಳಲೂ ಆಗದೆ ಕೈಚೆಲ್ಲಿತು. ಜನರು ರಸ್ತೆಗೆ ಇಳಿದರು. ಅಧ್ಯಕ್ಷರ ಮನೆಗೆ ಮುತ್ತಿಗೆ ಹಾಕಿದರು. ಗೋಟಬಯ ರಾಜಪಕ್ಷೆ ದೇಶದಿಂದ ಪಲಾಯನ ಮಾಡಬೇಕಾಗಿ ಬಂತು.

    ಕೊನೆಗೆ ಸಂಕಷ್ಟದ ಸಮಯದಲ್ಲಿ ಭಾರತ ಶ್ರೀಲಂಕಾದ ಸಹಾಯಕ್ಕೆ ನಿಂತಿತು. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ನೆರವೂ, ಕೆಲವು ನಿಬಂಧನೆಗಳ ಜೊತೆಗೆ ಬಂತು. ಆಡಳಿತವು ಅನುಭವಿ ವಿಕ್ರಮಸಿಂಘೆ ಅವರ ಕೈಗೆ ಬಂತು ಜನಜೀವನ ನಿಟ್ಟುಸಿರುಬಿಟ್ಟು ಸಹಜಸ್ಥಿತಿಗೆ ಮರಳುವುದು ಸಾಧ್ಯವಾಯಿತು. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಗೆದ್ದು ಯಾರು ಶ್ರೀಲಂಕಾದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಕುತೂಹಲವಂತೂ ಜಗತ್ತಿಗಿದೆ.

    ಐರೋಪ್ಯ ಒಕ್ಕೂಟ

    ಮಾರುಕಟ್ಟೆಯ ದೃಷ್ಟಿಯಿಂದ, ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ದೃಷ್ಟಿಯಿಂದ ಭಾರತ ಮತ್ತು ಚೀನಾದ ಗಮನ ನೆಟ್ಟಿರುವುದು ಐರೋಪ್ಯ ರಾಷ್ಟ್ರಗಳ ಕಡೆಗೆ. ಉಕ್ರೇನ್ ಯುದ್ಧದ ವಿಷಯದಲ್ಲಿ ಪರೋಕ್ಷವಾಗಿ ರಷ್ಯಾವನ್ನು ಚೀನಾ ಬೆಂಬಲಿಸುತ್ತಿದ್ದರೂ, ಅದು ನೇರವಾಗಿ ರಷ್ಯಾದ ಜೊತೆಗೆ ಗುರುತಿಸಿಕೊಂಡಿಲ್ಲ. ಹಾಗೆ ರಷ್ಯಾದ ಜೊತೆಗೆ ನೇರವಾಗಿ ಗುರುತಿಸಿಕೊಂಡರೆ ಐರೋಪ್ಯ ರಾಷ್ಟ್ರಗಳ ಬಾಗಿಲು ತನಗೆ ಮುಚ್ಚಿಹೋಗಬಹುದು, ದಿಗ್ಬಂಧನದ ಕ್ರಮಕ್ಕೆ ತುತ್ತಾಗಬೇಕಾದೀತು ಎಂಬ ಆತಂಕ ಚೀನಾಕ್ಕೆ ಇದೆ.

    ವಾಣಿಜ್ಯಿಕ ವ್ಯವಹಾರಗಳನ್ನು ಐರೋಪ್ಯ ರಾಷ್ಟ್ರಗಳಲ್ಲಿ ಇನ್ನಷ್ಟು ವಿಸ್ತರಿಸಬೇಕು ಎಂಬ ಮಹತ್ತ್ವಾಕಾಂಕ್ಷೆ ಭಾರತಕ್ಕೂ ಇದೆ. ಜಿ-೨೦ ಶೃಂಗಸಭೆಯ ವೇಳೆ ಭಾರತ-ಮಧ್ಯಪ್ರಾಚ್ಯ ಮತ್ತು ಯೂರೋಪ್ ಕಾರಿಡಾರ್ ಯೋಜನೆಗೆ ಚಾಲನೆ ನೀಡಿದ್ದನ್ನು ನೆನಪು ಮಾಡಿಕೊಳ್ಳಬಹುದು. ಭಾರತ, ಅಮೆರಿಕ, ಯುಎಇ, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಐರೋಪ್ಯ ಒಕ್ಕೂಟದ ನಾಯಕರು ಈ ಯೋಜನೆಗೆ ಅಂಕಿತ ಹಾಕಿದರು. ರೈಲ್ವೇ ಮತ್ತು ಸಮುದ್ರ ಮಾರ್ಗಗಳ ಮೂಲಕ ಯೂರೋಪ್ ಮತ್ತು ಏಷ್ಯಾದ ರಾಷ್ಟ್ರಗಳಿಗೆ ಸಂಪರ್ಕ ಸುಲಭವಾಗಿಸುವುದು ಈ ಯೋಜನೆಯ ಉದ್ದೇಶ. ಇದು ಚೀನಾದ ‘ಬೆಲ್ಟ್ ಅಂಡ್ ರೋಡ್’ ಯೋಜನೆಗೆ ಪರ್ಯಾಯವಾಗಿ ರೂಪಗೊಂಡಿರುವ ಯೋಜನೆ.

    ಈ ಯೋಜನೆ ತ್ವರಿತವಾಗಿ ಅನುಷ್ಠಾನಕ್ಕೆ ಬರಬೇಕಾದರೆ ಐರೋಪ್ಯ ಒಕ್ಕೂಟದ ಚುಕ್ಕಾಣಿ ಯಾರ ಕೈಯಲ್ಲಿ ಇರುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಹಾಗಾಗಿ ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ನಡೆಯುವ ಐರೋಪ್ಯ ಒಕ್ಕೂಟದ ಚುನಾವಣೆ ಮಹತ್ತ್ವ ಪಡೆದುಕೊಂಡಿದೆ.

    ಅಷ್ಟಲ್ಲದೇ ಬ್ರೆಕ್ಸಿಟ್ ಮೂಲಕ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಹೋದಮೇಲೆ, ಫ್ರಾನ್ಸ್ ಮತ್ತು ಇತರ ರಾಷ್ಟ್ರಗಳಲ್ಲೂ ಒಕ್ಕೂಟ ತೊರೆಯೋಣ ಎಂಬ ಕೂಗು ಗಟ್ಟಿಯಾಗುತ್ತಿದೆ. ಮುಕ್ತ ಮಾರುಕಟ್ಟೆ, ಹಾಗೂ ವಲಸೆ ನೀತಿಯಲ್ಲಿ ಐರೋಪ್ಯ ಒಕ್ಕೂಟ ಸುಧಾರಣೆ ತರದಿದ್ದರೆ ಸದಸ್ಯ ರಾಷ್ಟ್ರಗಳನ್ನು ಒಕ್ಕೂಟದ ಒಳಗೆ ಹಿಡಿದಿಟ್ಟುಕೊಳ್ಳುವುದು ಕಷ್ಟ, ಆ ದೃಷ್ಟಿಯಿಂದಲೂ ಐರೋಪ್ಯ ಒಕ್ಕೂಟದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂದು ಜಗತ್ತು ಕುತೂಹಲದಿಂದ ನೋಡುತ್ತಿದೆ.

    ರಷ್ಯಾ

    ಸೋವಿಯತ್ ಪತನದ ಬಳಿಕ ಅಮೆರಿಕ ಮತ್ತು ಸೋವಿಯತ್ ರಷ್ಯಾದ ನಡುವಿನ ಶೀತಲ ಸಮರ ಮುಕ್ತಾಯಗೊಂಡಿತಾದರೂ, ಪುಟಿನ್ ಅವರು ರಷ್ಯಾದ ಪ್ರಬಲ ನಾಯಕನಾಗಿ ಹೊರಹೊಮ್ಮಿದ ಮೇಲೆ ಅಮೆರಿಕ ಮತ್ತು ರಷ್ಯಾ ನಡುವೆ ತೆರೆಮರೆಯ ಕದನ ಪುನಃ ಆರಂಭಗೊಂಡಿತು.

    ೨೦೧೬ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಚುನಾವಣಾ ಹಸ್ತಕ್ಷೇಪದ ಕುರಿತು ಹೆಚ್ಚು ಚರ್ಚೆಯಾಯಿತು. ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಲು ಅವರ ವಿರುದ್ಧ ಅಭಿಪ್ರಾಯ ರೂಪಿಸುವ ಕೆಲಸದಲ್ಲಿ ರಷ್ಯಾ ತೊಡಗಿದೆ ಎನ್ನಲಾಯಿತು. ಡೊನಾಲ್ಡ್ ಟ್ರಂಪ್ ಮತ್ತು ಪುಟಿನ್ ನಡುವಿನ ಗೆಳೆತನದ ವಿಷಯ ಚರ್ಚೆಗೆ ಬಂದಿತು. ೨೦೨೦ರಲ್ಲಿ ಟ್ರಂಪ್ ಸೋತು ಬೈಡೆನ್ ಅಧ್ಯಕ್ಷರಾದ ಬಳಿಕ ಉಕ್ರೇನನ್ನು ನ್ಯಾಟೋದ ಭಾಗವಾಗಿಸಿಕೊಂಡು ರಷ್ಯಾದ ಗಡಿಯವರೆಗೆ ಪ್ರಭಾವ ವಿಸ್ತರಿಸಿಕೊಳ್ಳುವ ಅಮೆರಿಕದ ಪ್ರಯತ್ನ ಉಕ್ರೇನ್ ಯುದ್ಧಕ್ಕೆ ಕಾರಣವಾಯಿತು.

    ಉಕ್ರೇನ್ ಯುದ್ಧ ಚಾಲ್ತಿಯಲ್ಲಿರುವಾಗಲೇ, ರಷ್ಯಾದ ಅಧ್ಯಕ್ಷೀಯ ಚುನಾವಣೆ ನಡೆಯಲಿರುವುದು ಆ ಕುರಿತ ಕುತೂಹಲವನ್ನು ಹೆಚ್ಚಿಸಿದೆ. ಸದ್ಯದ ಮಟ್ಟಿಗೆ ಪುಟಿನ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿ ಇದ್ದಂತೆ ಕಾಣುತ್ತಿಲ್ಲ. ವ್ಯಾಗ್ನರ್ ಪಡೆಯ ದಂಗೆ ಪುಟಿನ್ ಅವರಲ್ಲಿ ಸಣ್ಣ ಆತಂಕ ಸೃಷ್ಟಿಸಿದ್ದಿರಬಹುದು. ಆದರೆ ಪುಟಿನ್ ಆ ದಂಗೆಯನ್ನು ತಮ್ಮದೇ ಶೈಲಿಯಲ್ಲಿ ನಿರ್ವಹಿಸಿ, ವ್ಯಾಗ್ನರ್ ಪಡೆಯ ಮುಖ್ಯಸ್ಥನನ್ನು ಮಟ್ಟಹಾಕುವಲ್ಲಿ ಯಶಸ್ವಿಯಾದರು.

    ಉಕ್ರೇನ್ ಯುದ್ಧ ಹೇಗೆ ಅಂತ್ಯವಾದೀತು ಎಂಬ ಚರ್ಚೆ ನಡೆದಾಗ, ಒಂದೊಮ್ಮೆ ರಷ್ಯಾದ ಜನರೇ ಪುಟಿನ್ ವಿರುದ್ಧ ತಿರುಗಿಬಿದ್ದರೆ, ಆಂತರಿಕ ಬಿಕ್ಕಟ್ಟು ಉಂಟಾದರೆ ರಷ್ಯಾ ಮಣಿಯಬಹುದು ಎಂಬ ಸಾಧ್ಯತೆಯನ್ನು ಚರ್ಚಿಸಲಾಗಿತ್ತು. ಆದರೆ ಯುದ್ಧ ಆರಂಭವಾಗಿ ಎರಡು ವರ್ಷ ಆಗುತ್ತಿರುವ ಈ ಸಂದರ್ಭದಲ್ಲಿ ಅಂತಹ ಯಾವುದೇ ಸಾಧ್ಯತೆ ಕಾಣುತ್ತಿಲ್ಲ. ಹಾಗಾಗಿ ಪುಟಿನ್ ಅವರು ರಷ್ಯಾದ ಸರ್ವೋಚ್ಚ ನಾಯಕನಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚು.

    ಇನ್ನು ಭಾರತದ ದೃಷ್ಟಿಯಿಂದ ನೋಡಿದರೆ, ರಷ್ಯಾ ಮತ್ತು ಭಾರತದ ಸಖ್ಯ ಕಾಲದ ಪರೀಕ್ಷೆಗೆ ಒಳಪಟ್ಟಿರುವಂತಹದು. ಏಷ್ಯಾದಲ್ಲಿ ಅಮೆರಿಕ ಮತ್ತು ಚೀನಾದ ಪ್ರಾಬಲ್ಯವನ್ನು ಸರಿದೂಗಿಸಲು ಭಾರತದೊಂದಿಗೆ ಮೈತ್ರಿ ಬೆಳೆಸಲು ಮಾಸ್ಕೋ ಮುಂದಾಯಿತು. ಭಾರತಕ್ಕೂ ಈ ಸ್ನೇಹದ ಅಗತ್ಯವಿತ್ತು. ಸ್ವಾತಂತ್ರ್ಯ ಪಡೆದ ಬಳಿಕ ಅಭಿವೃದ್ಧಿಕೇಂದ್ರಿತ ನವಭಾರತವನ್ನು ಕಟ್ಟಲು ರಷ್ಯಾದ ಸಹಕಾರ ಒದಗಿತ್ತು. ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಗಳು, ಅಣೆಕಟ್ಟುಗಳು, ಜಲವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ರಷ್ಯಾದ ಸಲಹೆ ಮತ್ತು ಸಹಭಾಗಿತ್ವ ಇತ್ತು. ರಕ್ಷಣಾ ಉಪಕರಣಗಳ ಸರಬರಾಜು ಕೂಡ ರಷ್ಯಾದಿಂದಲೇ ದೊಡ್ಡಮಟ್ಟದಲ್ಲಿ ಆಯಿತು.

    ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾಗಿ ರಷ್ಯಾ, ಕಾಶ್ಮೀರದ ವಿಷಯದಲ್ಲಿ ಭಾರತದ ಹಿತಾಸಕ್ತಿಗೆ ಹಾನಿಯಾಗದಂತೆ ನೋಡಿಕೊಂಡಿತು. ೧೯೭೧ರಲ್ಲಿ ಭಾರತ ಮತ್ತು ರಷ್ಯಾದ ನಡುವೆ ಏರ್ಪಟ್ಟ ‘ಶಾಂತಿ, ಸ್ನೇಹ ಮತ್ತು ಸಹಕಾರ ಒಪ್ಪಂದ’ ಭಾರತಕ್ಕೆ ಹೆಚ್ಚಿನ ಬಲತುಂಬಿತು. ೧೯೫೫ರಲ್ಲಿ ಕಾಶ್ಮೀರದ ಮೇಲಿನ ಭಾರತದ ಹಕ್ಕನ್ನು ಪುನರುಚ್ಚರಿಸುತ್ತಾ ಅಂದಿನ ರಷ್ಯಾ ಅಧ್ಯಕ್ಷ ನಿಖಿತ್ ಕ್ರುಶ್ಚೇವ್ “ನಾವು ಎಷ್ಟು ಹತ್ತಿರದಲ್ಲಿ ಇದ್ದೇವೆ ಎಂದರೆ, ನೀವು ಪರ್ವತದ ತುದಿಗೆ ಏರಿ ಅಲ್ಲಿಂದ ಕೂಗು ಹಾಕಿದರೆ ಸಾಕು, ನಾವು ನಿಮ್ಮ ಬಗಲಿನಲ್ಲಿ ಇರುತ್ತೇವೆ” ಎಂದಿದ್ದರು. ಆ ಮಾತು ರಷ್ಯಾ ಭಾರತದ ಸಹಾಯಕ್ಕೆ ಧಾವಿಸಲಿದೆ ಎಂಬುದರ ದ್ಯೋತಕವಾಗಿತ್ತು.

    ೧೯೫೭, ೬೨ ಮತ್ತು ೭೧ರಲ್ಲಿ ಕಾಶ್ಮೀರದ ವಿಷಯ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚರ್ಚೆಗೆ ಬಂದು, ಅಂತರರಾಷ್ಟ್ರೀಯ ಹಸ್ತಕ್ಷೇಪ ಅನಿವಾರ್ಯ ಎಂಬ ನಿರ್ಣಯ ಕೈಗೊಂಡಾಗ ರಷ್ಯಾ ತನ್ನ ವೀಟೋ ಅಧಿಕಾರ ಬಳಸಿ ಆ ನಿರ್ಣಯವನ್ನು ಅನೂರ್ಜಿತಗೊಳಿಸಿತು ಮತ್ತು ಇದು ಭಾರತ ಮತ್ತು ಪಾಕಿಸ್ತಾನ ನಡುವಿನ ವಿಷಯ, ಆ ಎರಡು ದೇಶಗಳು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿತು. ಅದು ಭಾರತದ ವಾದವೂ ಆಗಿತ್ತು.

    ೨೦೧೯ರಲ್ಲಿ ಕಾಶ್ಮೀರಕ್ಕೆ ಅನ್ವಯವಾಗುತ್ತಿದ್ದ ೩೭೦ನೆಯ ವಿಧಿಯನ್ನು ರದ್ದುಗೊಳಿಸಿದಾಗ, ಕೆಲವು ದೇಶಗಳು ಭಾರತದ ಕ್ರಮವನ್ನು ಟೀಕಿಸಿದ್ದವು. ಆದರೆ ರಷ್ಯಾ ‘ಇದು ಭಾರತದ ಆಂತರಿಕ ವಿಷಯ’ ಎಂದು ಪ್ರತಿಕ್ರಿಯಿಸಿ ಭಾರತದ ನಿರ್ಣಯವನ್ನು ಪರೋಕ್ಷವಾಗಿ ಬೆಂಬಲಿಸಿತು. ಉಕ್ರೇನ್ ಯುದ್ಧದ ವಿಷಯದಲ್ಲಿ, ಅಮೆರಿಕ ರಷ್ಯಾದ ಮೇಲೆ ಹೇರಿದ ದಿಗ್ಬಂಧನದ ವಿಷಯದಲ್ಲಿ ಭಾರತ ರಷ್ಯಾವನ್ನು ಬಿಟ್ಟುಕೊಡಲಿಲ್ಲ. ಭಾರತದ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ರಷ್ಯಾದ ಜೊತೆ ವಾಣಿಜ್ಯಿಕ ವ್ಯವಹಾರವನ್ನು ಮುಂದುವರಿಸಿತು. ‘ಇದು ಯುದ್ಧದ ಕಾಲವಲ್ಲ’ ಎಂದು ರಷ್ಯಾಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿ ನೈತಿಕತೆಯನ್ನು ಮೆರೆಯಿತು.

    ಪ್ರಸ್ತುತ ರಷ್ಯಾದ ಅಗ್ರನಾಯಕನಾಗಿರುವ ಪುಟಿನ್ ಕೂಡ ಭಾರತದ ಬಗ್ಗೆ ಒಳ್ಳೆಯ ಭಾವನೆಯನ್ನು ಹೊಂದಿದ್ದಾರೆ ಎಂಬುದು ಅವರ ಇತ್ತೀಚಿನ ಮಾತುಗಳಲ್ಲಿ ವ್ಯಕ್ತವಾಗಿದೆ. ‘ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ. ಹಾಲಿ ಪ್ರಧಾನಿಯ ನಾಯಕತ್ವ ಗುಣ ಅದಕ್ಕೆ ಒಂದು ಕಾರಣ’ ಎಂದಿದ್ದಾರೆ. ಹಾಗಾಗಿ ರಷ್ಯಾ ಮತ್ತು ಭಾರತದ ನಡುವಿನ ಸ್ನೇಹ ಮತ್ತು ಸಂಬಂಧದ ಮೇಲೆ ರಷ್ಯಾದ ಅಧ್ಯಕ್ಷೀಯ ಚುನಾವಣೆ ಹೆಚ್ಚಿನ ಪರಿಣಾಮವನ್ನು ಬೀರಲಾರದು.

    ಅಮೆರಿಕ

    ಕೊನೆಯದಾಗಿ, ಜಗತ್ತಿನ ಆಗುಹೋಗುಗಳನ್ನು ಪ್ರಭಾವಿಸುವ ಶಕ್ತಿ ಇರುವುದು, ಸದ್ಯದಮಟ್ಟಿಗೆ ಏಕೈಕ ಸೂಪರ್-ಪವರ್ ರಾಷ್ಟ್ರ ಎನಿಸಿಕೊಂಡಿರುವ ಅಮೆರಿಕಕ್ಕೆ. ಈ ವರ್ಷದ ನವೆಂಬರಿನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗೆ ಈಗಾಗಲೇ ಪೂರ್ವತಯಾರಿ ಆರಂಭವಾಗಿದೆ. ರಿಪಬ್ಲಿಕನ್ ಮತ್ತು ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂದು ಆರಿಸಲು ಪ್ರಾಥಮಿಕ ಹಂತದ ಚುನಾವಣೆಗಳು ನಡೆಯುತ್ತಿವೆ.

    ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಟ್ರಂಪ್, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಹೊರಹೊಮ್ಮುವ ಸೂಚನೆ ಕಾಣುತ್ತಿದೆ. ಆದರೆ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ೨೦೨೦ರ ಚುನಾವಣೆಯ ಬಳಿಕ ನಡೆದ ಗಲಭೆಗಳ ಸಂಬಂಧ ಟ್ರಂಪ್ ಅವರ ವಿರುದ್ಧ ದಾವೆ ಹೂಡಲಾಗಿದೆ ಮತ್ತು ಆ ಪ್ರಕರಣಗಳು ಈಗ ಅಮೆರಿಕದ ಸರ್ವೋಚ್ಚ ನ್ಯಾಯಾಲಯ ತಲಪಿವೆ. ಟ್ರಂಪ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಯುತ್ತಾರೆಯೇ ಕಾದುನೋಡಬೇಕು.

    ಅಮೆರಿಕದ ಅಧ್ಯಕ್ಷರು ಯಾರಾಗುತ್ತಾರೆ ಎಂಬುದರ ಮೇಲೆ ಹಲವು ಬದಲಾವಣೆ ಆಗುವ ನಿರೀಕ್ಷೆ ಇದೆ. ಪ್ರಸ್ತುತ ಅಧ್ಯಕ್ಷ ಬೈಡೆನ್ ಉಕ್ರೇನ್ ಬೆನ್ನಿಗೆ ಬಲವಾಗಿ ನಿಂತಿದ್ದಾರೆ. ಅಮೆರಿಕದ ಶಸ್ತ್ರಾಸ್ತ್ರಗಳು ಉಕ್ರೇನ್ ಬತ್ತಳಿಕೆ ಬರಿದಾಗದಂತೆ ನೋಡಿಕೊಳ್ಳುತ್ತಿವೆ. ತಾನು ಅಧ್ಯಕ್ಷನಾದರೆ ಒಂದು ದಿನದಲ್ಲಿ ಉಕ್ರೇನ್ ಯುದ್ಧಕ್ಕೆ ಕೊನೆ ಹಾಡುತ್ತೇನೆ ಎಂದು ಟ್ರಂಪ್ ಅವರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಯುದ್ಧದ ಮುಂದಿನ ಸ್ವರೂಪ ರಷ್ಯಾ ಮತ್ತು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಬಳಿಕ ತೀರ್ಮಾನವಾಗಬಹುದು.

    ಅದಲ್ಲದೆ ಇಸ್ರೇಲ್ ಮತ್ತು ಹಾಮಾಸ್ ನಡುವಿನ ಕದನ, ಚೀನಾ-ತೈವಾನ್ ವಿಷಯಗಳು ಕೂಡ ಅಮೆರಿಕದ ಮುಂದಿನ ಅಧ್ಯಕ್ಷರು ಯಾರಾಗಬಹುದು ಎಂಬುದರ ಮೇಲೆ ಹೊಸ ತಿರುವನ್ನು ಪಡೆದುಕೊಳ್ಳಬಹುದು. ಇತಿಹಾಸವನ್ನು ಗಮನಿಸಿದರೆ, ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷರು ಇದ್ದ ಸಂದರ್ಭಗಳಲ್ಲಿ ಅಮೆರಿಕ ಹೆಚ್ಚಿನ ಯುದ್ಧಗಳಲ್ಲಿ ತೊಡಗಿದೆ ಎಂಬುದು ಕಾಣುತ್ತದೆ. ಟ್ರಂಪ್ ಅವರ ಅವಧಿಯಲ್ಲಿ ಯಾವುದೇ ಯುದ್ಧದಲ್ಲಿ ಅಮೆರಿಕ ನೇರವಾಗಿ ತೊಡಗಿಕೊಳ್ಳಲಿಲ್ಲ. ಆಫ್ಘಾನಿಸ್ತಾನದಿಂದ ಕಾಲುತೆಗೆಯುವ ನಿರ್ಧಾರವನ್ನೂ ಕೈಗೊಂಡಿತ್ತು. ಈ ಚುನಾವಣೆಯಲ್ಲಿ ‘ನ್ಯಾಟೋದ ಪ್ರಸ್ತುತತೆ ಏನು, ಜಗತ್ತಿನ ಉಸಾಬರಿ ನಮಗೆ ಬೇಡ, ನಮ್ಮ ಭದ್ರತೆಯನ್ನು ನಾವು ನೋಡಿಕೊಳ್ಳೋಣ’ ಎಂಬ ಅರ್ಥದಲ್ಲಿ ಟ್ರಂಪ್ ಮಾತನಾಡುತ್ತಿದ್ದಾರೆ. ಈ ನಿಲವಿಗೆ ಅವರು ಅಂಟಿಕೊಂಡರೆ ರಷ್ಯಾಕ್ಕೆ ಅಭದ್ರತೆ ಇಲ್ಲವಾಗಬಹುದು, ಉಕ್ರೇನ್ ಯುದ್ಧ ನಿರ್ಣಾಯಕ ಘಟ್ಟ ತಲಪಬಹುದು.

    ಭಾರತ ಮತ್ತು ಅಮೆರಿಕದ ಸಂಬಂಧ ನೋಡುವುದಾದರೆ, ಟ್ರಂಪ್ ಮತ್ತು ಮೋದಿ ಅವರ ನಡುವಿನ ಸ್ನೇಹ ಹಲವು ಸಂದರ್ಭಗಳಲ್ಲಿ ಜಾಹೀರುಗೊಂಡಿತ್ತು. ಟ್ರಂಪ್ ಅವರು ಚುನಾವಣೆಯಲ್ಲಿ ಸೋತಾಗ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧದ ಮೇಲೆ ಪರಿಣಾಮವಾಗಬಹುದು ಎನ್ನಲಾಗಿತ್ತು. ಆದರೆ ಹಾಗಾಗಲಿಲ್ಲ. ಅಧ್ಯಕ್ಷ ಬೈಡೆನ್, ಭಾರತದ ಪ್ರಧಾನಿಗೆ ಕೆಂಪು ಹಾಸಿನ ಗೌರವ ನೀಡಿ ಶ್ವೇತಭವನದ ಅತಿಥಿಯನ್ನಾಗಿ ಬರಮಾಡಿಕೊಂಡರು.

    ‘ಇದು ಭಾರತದ ಕಾಲ’ ಎಂದು ಪ್ರಧಾನಿ ಮೋದಿ ಆಗಾಗ ಹೇಳುತ್ತಿರುತ್ತಾರೆ. ಅದು ನಿಜ. ಭಾರತೀಯರ ಕೌಶಲ, ಮಾನವ ಸಂಪನ್ಮೂಲ, ಮೂರನೇ ಸ್ಥಾನಕ್ಕೆ ಜಿಗಿಯುವ ಉಮೇದಿನಲ್ಲಿರುವ ಆರ್ಥಿಕತೆ, ಸೇನಾ ಸಾಮರ್ಥ್ಯ ಎಲ್ಲವೂ ಭಾರತದ ಶಕ್ತಿಯನ್ನು ಜಾಗತಿಕ ವೇದಿಕೆಯಲ್ಲಿ ಹೆಚ್ಚಿಸಿದೆ. ಭಾರತವನ್ನು ಅಮೆರಿಕ ಚೀನಾಕ್ಕೆ ಪರ್ಯಾಯವಾಗಿ ನೋಡುತ್ತಿದೆ. ಭಾರತದೊಂದಿಗೆ ವಾಣಿಜ್ಯಿಕ ವ್ಯವಹಾರದಲ್ಲಿ ತೊಡಗಿಕೊಳ್ಳಬೇಕು ಎಂಬ ಉತ್ಸಾಹ ಐರೋಪ್ಯ ರಾಷ್ಟ್ರಗಳಲ್ಲಿದೆ. ಜಪಾನ್, ಆಸ್ಟ್ರೇಲಿಯಾ ಕ್ವಾಡ್ ಮೂಲಕ ಭಾರತದ ಜೊತೆ ಗುರುತಿಸಿಕೊಂಡಿವೆ. ದಕ್ಷಿಣ ಜಗತ್ತಿನ ರಾಷ್ಟ್ರಗಳು (ಗ್ಲೋಬಲ್ ಸೌತ್) ನಾಯಕನ ಸ್ಥಾನದಲ್ಲಿ ಭಾರತವನ್ನು ನೋಡುತ್ತಿವೆ. ಈ ಎಲ್ಲ ದೃಷ್ಟಿಯಿಂದಲೂ ‘ಇದು ಭಾರತದ ಕಾಲ’.

    ಸ್ಥಿರ ಮತ್ತು ಸ್ನೇಹಪರ ನೆರೆಹೊರೆಯನ್ನು ಹೊಂದುವುದು, ಜಗತ್ತಿನ ಎಲ್ಲ ರಾಷ್ಟ್ರಗಳೊಂದಿಗೆ ಬೆರೆತು ಬಾಳುವುದು, ಯಾರ ಮೇಲೂ ಆಕ್ರಮಣಶೀಲತೆ ತೋರದಿರುವುದು ಭಾರತದ ಗುಣ. ಇದರ ಜೊತೆಗೆ ಜಗತ್ತಿನ ಆಗುಹೋಗುಗಳನ್ನು ಭಾರತದ ಹಿತಾಸಕ್ತಿಯ ದೃಷ್ಟಿಯಿಂದ, ವಾಸ್ತವದ ನೆಲೆಗಟ್ಟಿನಲ್ಲಿ ನೋಡಬೇಕು ಎಂಬುದೂ ನಮಗೆ ಅರಿವಾಗಿದೆ. ಹಾಗಾಗಿ ೨೦೨೪ರ ಬೆಳವಣಿಗೆಗಳನ್ನೂ ನಾವು ಅದೇ ಸಮಚಿತ್ತದಿಂದ ನೋಡಬೇಕಿದೆ.

    ೨೦೨೪ರ ವಿಶೇಷತೆ ಏನೆಂದು ನೋಡಿದರೆ, ಇದು ಅಧಿಕ ವರ್ಷ ಎನ್ನುವುದು ಖರೆ. ಜೊತೆಗೆ ಸರ್ವಾಧಿಕಾರಿ ದೇಶಗಳನ್ನು ಹೊರತುಪಡಿಸಿ ವಿಶ್ವದ ಸುಮಾರು ೬೦ಕ್ಕೂ ಅಧಿಕ ದೇಶಗಳಲ್ಲಿ ಈ ವರ್ಷ ಚುನಾವಣೆಗಳು ನಡೆಯಲಿರುವುದು ಒಂದು ಕಾಕತಾಳೀಯ – ಯೂರೋಪಿನ ೨೨ ದೇಶಗಳು, ಭಾರತ ಸೇರಿದಂತೆ ಏಷ್ಯಾದ ೧೧ ದೇಶಗಳು, ೧೫ ಆಫ್ರಿಕಾ ಖಂಡ ದೇಶಗಳು, ೯ ಅಮೆರಿಕಾ ಖಂಡ ದೇಶಗಳು, ಆಸ್ಟ್ರೇಲಿಯ ಖಂಡದಲ್ಲಿ ೪ ದೇಶಗಳು. ಒಟ್ಟು ೨ ಶತಕೋಟಿ ಮತದಾರರು ಮತಚಲಾಯಿಸಲಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೂ ಈ ವರ್ಷವೇ ಚುನಾವಣೆ ನಡೆಯಲಿದೆ.

    ಪ್ರಜಾಸ್ವಾಮ್ಯ ದೇಶಗಳಲ್ಲಿ ಚುನಾವಣೆ ನಾಲ್ಕೋ ಐದೋ ಆರೋ ವರ್ಷಗಳಿಗೊಮ್ಮೆ ನಡೆಯುವುದು ನಿಯತಿಯಾಗಿದ್ದರೂ ಇಷ್ಟು ದೊಡ್ಡ ಸಂಖ್ಯೆಯ ದೇಶಗಳಲ್ಲಿ ಒಂದೇ ವರ್ಷದಲ್ಲಿ ಚುನಾವಣೆಗಳು ನಡೆಯುತ್ತಿರುವುದು ವಿಶೇಷ. ಮತ್ತು ಇದರ ಪರಿಣಾಮ ಅಂತಾರಾಷ್ಟ್ರೀಯ ರಾಜಕೀಯ-ಆರ್ಥಿಕ ಸಂಬಂಧಗಳ ಮೇಲೂ ಆಗುತ್ತದೆ.

    ಜಗತ್ತಿನ ಚುನಾವಣಾ ಕಣ, ಬದಲಾದೀತೆ ಸಮೀಕರಣ?

ಕನ್ನಡದಲ್ಲಿ ಅನ್ಯ ಭಾಷೆಗಳ ಕಥನ ಸಾಹಿತ್ಯ
ಕನ್ನಡದಲ್ಲಿ ಅನ್ಯ ಭಾಷೆಗಳ ಕಥನ ಸಾಹಿತ್ಯ

ಕನ್ನಡವು ಲೋಕಾನುಭವಗಳಿಗೆ ಮತ್ತು ಹೊಸ ಸಾಹಿತ್ಯ ಪ್ರಕಾರಗಳಿಗೆ ತೆರೆದುಕೊಂಡದ್ದು ಹತ್ತೊಂಬತ್ತನೆಯ ಶತಮಾನದಲ್ಲಿ. ಕಾವ್ಯಕ್ಕಿಂತ ಗದ್ಯವೇ ಹೊಸ ಅನುಭವಗಳ ದಾಖಲಾತಿಗೆ ಮತ್ತು ಅಭಿವ್ಯಕ್ತಿಗೆ ಹಿತವೆಂಬ ಅರಿವು ಮೂಡಿದ್ದು ಕೂಡ ಇದೇ ಶತಮಾನದಲ್ಲಿ. ಈ ಪರಿವರ್ತನೆ, ಈ ಹೊಸತನ ಕನ್ನಡದಲ್ಲಿ ಸಾಕಾರವಾದದ್ದು ಅನ್ಯಭಾಷೆಗಳ ಸಾಹಿತ್ಯದ...

ವಾರಾಣಸಿ: ಮಸೀದಿಯ ಒಳಗೆ ಎದ್ದುಕಾಣುವ ದೇವಾಲಯ
ವಾರಾಣಸಿ: ಮಸೀದಿಯ ಒಳಗೆ ಎದ್ದುಕಾಣುವ ದೇವಾಲಯ

ಬೇಲಿಹಾಕಿದ ಜಾಗದೊಳಗೆ ಎಎಸ್‌ಐ ತಂಡವು ವೈಜ್ಞಾನಿಕ ಸರ್ವೆಯನ್ನು ಆರಂಭಿಸಿತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಉತ್ಖನನ ಮಾಡುವಂತಿರಲಿಲ್ಲ. ಪ್ರಕರಣದ ಎರಡೂ ಪಕ್ಷದವರ ಎದುರು ಸರ್ವೆ ನಡೆಯಿತು. ಜಿಲ್ಲಾಡಳಿತವು ತಂಡಕ್ಕೆ ಹೆಚ್ಚುವರಿ ರಕ್ಷಣೆಯನ್ನು ನೀಡಿತು. ಪ್ರಕರಣವು ಸೂಕ್ಷ್ಮವಾದ ಕಾರಣ ಎಎಸ್‌ಐ ಸಮೀಕ್ಷೆಗೆ ವ್ಯಾಪಕ ಪ್ರಚಾರ...

ಅಮರ ಅವಿನಾಶಿ ಶಿವನಗರ - ಕಾಶಿ
ಅಮರ ಅವಿನಾಶಿ ಶಿವನಗರ – ಕಾಶಿ

ಪುರಾತನ ಕ್ಷೇತ್ರ ಕಾಶಿಗೆ ನಿರಂತರವಾಗಿ ಹೇಗೆ ಹಿಂದು ಶ್ರದ್ಧಾಳುಗಳು ಹರಿದುಬರುತ್ತಿದ್ದರೋ, ಅದೇ ರೀತಿ ಇದರ ರಕ್ಷಣೆಗಾಗಿ ತಮ್ಮ ರಕ್ತವನ್ನು ಗಂಗಾನದಿಯಂತೆಯೇ ಹರಿಸಬೇಕಾದದ್ದು ಭಾರತದ ಇತಿಹಾಸದ ದುರಂತ ಅಧ್ಯಾಯಗಳಲ್ಲೊಂದು. ಮತಾಂಧ ಮುಸ್ಲಿಂದಾಳಿಕೋರರು ತಮ್ಮ ರೂಢಿಯಂತೆ ಹನ್ನೆರಡನೆ ಮತ್ತು ಹದಿನೈದನೆ ಶತಮಾನದಲ್ಲಿ ಈ ಪ್ರಾಚೀನ...

ಮೋದಿ ನಾಯಕತ್ವ, ಈಗ ಬಹು ಎತ್ತರ
ಮೋದಿ ನಾಯಕತ್ವ, ಈಗ ಬಹು ಎತ್ತರ

“ಹಿಂದಿನ ಎಲ್ಲ ಪ್ರಧಾನಿಗಳಿಗಿಂತ ಮೋದಿ ಅವರು ಭಿನ್ನವಾಗಿದ್ದಾರೆ. ಮುಂದೆ ಬಂದ ಪ್ರತಿಯೊಂದು ಪ್ರಸ್ತಾವವನ್ನು ಅವರು ಸವಿವರವಾಗಿ ಪರಿಶೀಲಿಸುತ್ತಾರೆ. ವಿವಿಧ ಹಂತದ ಅಧಿಕಾರಿಗಳಿಂದ, ಪಕ್ಷ ಮತ್ತು ಸಂಪುಟದ ಹಿರಿಯರಿಂದ ಹೆಚ್ಚಿನ ಮಾಹಿತಿಗಳನ್ನು ಕ್ರೋಡೀಕರಿಸುತ್ತಾರೆ. ಇಂತಹ ಆಯ್ಕೆ ವಿಚಾರದಲ್ಲಿ ವಾಜಪೇಯಿ ಅವರು ತಮ್ಮ ಪ್ರಧಾನ...

ಜಗತ್ತಿನ ಚುನಾವಣಾ ಕಣ, ಬದಲಾದೀತೆ ಸಮೀಕರಣ?
ಜಗತ್ತಿನ ಚುನಾವಣಾ ಕಣ, ಬದಲಾದೀತೆ ಸಮೀಕರಣ?

೨೦೨೪ರ ವಿಶೇಷತೆ ಏನೆಂದು ನೋಡಿದರೆ, ಇದು ಅಧಿಕ ವರ್ಷ ಎನ್ನುವುದು ಖರೆ. ಜೊತೆಗೆ ಸರ್ವಾಧಿಕಾರಿ ದೇಶಗಳನ್ನು ಹೊರತುಪಡಿಸಿ ವಿಶ್ವದ ಸುಮಾರು ೬೦ಕ್ಕೂ ಅಧಿಕ ದೇಶಗಳಲ್ಲಿ ಈ ವರ್ಷ ಚುನಾವಣೆಗಳು ನಡೆಯಲಿರುವುದು ಒಂದು ಕಾಕತಾಳೀಯ – ಯೂರೋಪಿನ ೨೨ ದೇಶಗಳು, ಭಾರತ ಸೇರಿದಂತೆ...

ಕನ್ನಡದಲ್ಲಿ ಅನ್ಯ ಭಾಷೆಗಳ ಕಥನ ಸಾಹಿತ್ಯ
ಕನ್ನಡದಲ್ಲಿ ಅನ್ಯ ಭಾಷೆಗಳ ಕಥನ ಸಾಹಿತ್ಯ

ಕನ್ನಡವು ಲೋಕಾನುಭವಗಳಿಗೆ ಮತ್ತು ಹೊಸ ಸಾಹಿತ್ಯ ಪ್ರಕಾರಗಳಿಗೆ ತೆರೆದುಕೊಂಡದ್ದು ಹತ್ತೊಂಬತ್ತನೆಯ ಶತಮಾನದಲ್ಲಿ. ಕಾವ್ಯಕ್ಕಿಂತ ಗದ್ಯವೇ ಹೊಸ ಅನುಭವಗಳ ದಾಖಲಾತಿಗೆ ಮತ್ತು ಅಭಿವ್ಯಕ್ತಿಗೆ ಹಿತವೆಂಬ ಅರಿವು ಮೂಡಿದ್ದು ಕೂಡ ಇದೇ ಶತಮಾನದಲ್ಲಿ. ಈ ಪರಿವರ್ತನೆ, ಈ ಹೊಸತನ ಕನ್ನಡದಲ್ಲಿ ಸಾಕಾರವಾದದ್ದು ಅನ್ಯಭಾಷೆಗಳ ಸಾಹಿತ್ಯದ...

ವಾರಾಣಸಿ: ಮಸೀದಿಯ ಒಳಗೆ ಎದ್ದುಕಾಣುವ ದೇವಾಲಯ
ವಾರಾಣಸಿ: ಮಸೀದಿಯ ಒಳಗೆ ಎದ್ದುಕಾಣುವ ದೇವಾಲಯ

ಬೇಲಿಹಾಕಿದ ಜಾಗದೊಳಗೆ ಎಎಸ್‌ಐ ತಂಡವು ವೈಜ್ಞಾನಿಕ ಸರ್ವೆಯನ್ನು ಆರಂಭಿಸಿತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಉತ್ಖನನ ಮಾಡುವಂತಿರಲಿಲ್ಲ. ಪ್ರಕರಣದ ಎರಡೂ ಪಕ್ಷದವರ ಎದುರು ಸರ್ವೆ ನಡೆಯಿತು. ಜಿಲ್ಲಾಡಳಿತವು ತಂಡಕ್ಕೆ ಹೆಚ್ಚುವರಿ ರಕ್ಷಣೆಯನ್ನು ನೀಡಿತು. ಪ್ರಕರಣವು ಸೂಕ್ಷ್ಮವಾದ ಕಾರಣ ಎಎಸ್‌ಐ ಸಮೀಕ್ಷೆಗೆ ವ್ಯಾಪಕ ಪ್ರಚಾರ...

ಅಮರ ಅವಿನಾಶಿ ಶಿವನಗರ - ಕಾಶಿ
ಅಮರ ಅವಿನಾಶಿ ಶಿವನಗರ – ಕಾಶಿ

ಪುರಾತನ ಕ್ಷೇತ್ರ ಕಾಶಿಗೆ ನಿರಂತರವಾಗಿ ಹೇಗೆ ಹಿಂದು ಶ್ರದ್ಧಾಳುಗಳು ಹರಿದುಬರುತ್ತಿದ್ದರೋ, ಅದೇ ರೀತಿ ಇದರ ರಕ್ಷಣೆಗಾಗಿ ತಮ್ಮ ರಕ್ತವನ್ನು ಗಂಗಾನದಿಯಂತೆಯೇ ಹರಿಸಬೇಕಾದದ್ದು ಭಾರತದ ಇತಿಹಾಸದ ದುರಂತ ಅಧ್ಯಾಯಗಳಲ್ಲೊಂದು. ಮತಾಂಧ ಮುಸ್ಲಿಂದಾಳಿಕೋರರು ತಮ್ಮ ರೂಢಿಯಂತೆ ಹನ್ನೆರಡನೆ ಮತ್ತು ಹದಿನೈದನೆ ಶತಮಾನದಲ್ಲಿ ಈ ಪ್ರಾಚೀನ...

ಮೋದಿ ನಾಯಕತ್ವ, ಈಗ ಬಹು ಎತ್ತರ
ಮೋದಿ ನಾಯಕತ್ವ, ಈಗ ಬಹು ಎತ್ತರ

“ಹಿಂದಿನ ಎಲ್ಲ ಪ್ರಧಾನಿಗಳಿಗಿಂತ ಮೋದಿ ಅವರು ಭಿನ್ನವಾಗಿದ್ದಾರೆ. ಮುಂದೆ ಬಂದ ಪ್ರತಿಯೊಂದು ಪ್ರಸ್ತಾವವನ್ನು ಅವರು ಸವಿವರವಾಗಿ ಪರಿಶೀಲಿಸುತ್ತಾರೆ. ವಿವಿಧ ಹಂತದ ಅಧಿಕಾರಿಗಳಿಂದ, ಪಕ್ಷ ಮತ್ತು ಸಂಪುಟದ ಹಿರಿಯರಿಂದ ಹೆಚ್ಚಿನ ಮಾಹಿತಿಗಳನ್ನು ಕ್ರೋಡೀಕರಿಸುತ್ತಾರೆ. ಇಂತಹ ಆಯ್ಕೆ ವಿಚಾರದಲ್ಲಿ ವಾಜಪೇಯಿ ಅವರು ತಮ್ಮ ಪ್ರಧಾನ...

ಜಗತ್ತಿನ ಚುನಾವಣಾ ಕಣ, ಬದಲಾದೀತೆ ಸಮೀಕರಣ?
ಜಗತ್ತಿನ ಚುನಾವಣಾ ಕಣ, ಬದಲಾದೀತೆ ಸಮೀಕರಣ?

೨೦೨೪ರ ವಿಶೇಷತೆ ಏನೆಂದು ನೋಡಿದರೆ, ಇದು ಅಧಿಕ ವರ್ಷ ಎನ್ನುವುದು ಖರೆ. ಜೊತೆಗೆ ಸರ್ವಾಧಿಕಾರಿ ದೇಶಗಳನ್ನು ಹೊರತುಪಡಿಸಿ ವಿಶ್ವದ ಸುಮಾರು ೬೦ಕ್ಕೂ ಅಧಿಕ ದೇಶಗಳಲ್ಲಿ ಈ ವರ್ಷ ಚುನಾವಣೆಗಳು ನಡೆಯಲಿರುವುದು ಒಂದು ಕಾಕತಾಳೀಯ – ಯೂರೋಪಿನ ೨೨ ದೇಶಗಳು, ಭಾರತ ಸೇರಿದಂತೆ...

ಅಮ್ಮನ ಬ್ಯಾಂಕು
ಅಮ್ಮನ ಬ್ಯಾಂಕು

ಕಳೆದ ತಿಂಗಳು ನಮ್ಮಮ್ಮನ ವರ್ಷಾಬ್ದಿಕಕ್ಕೆ ನನ್ನ ಸಹೋದರ ಬಂದಾಗ ಅಮ್ಮನ ಕಾಗದ ಪತ್ರಗಳನ್ನು ಪರಿಶೀಲಿಸಲು ಆಲ್ಮೆರಾ ತೆಗೆದೆವು. ಕಾಗದ ಪತ್ರಗಳ ತಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದ ಗಂಟು ಅಡಗಿಕೊಂಡಿತ್ತು. ಗಂಟು ಬಿಚ್ಚಿದೆ. ಒಳಗೆ ಇನ್ನೊಂದು ಗಂಟಿತ್ತು. ಅದರಲ್ಲಿ ಮತ್ತೊಂದು, ಅದರಲ್ಲಿ ಮಗದೊಂದು!...

ಶಿವರಾತ್ರಿ-ಯುಗಾದಿ
ಶಿವರಾತ್ರಿ-ಯುಗಾದಿ

ಬಂತು ಬಂತು ಶಿವರಾತ್ರಿ ಅರಿಯದಿರೆ ನವೆ ಖಾತ್ರಿ ಜಾತ್ರೆ ಭಜನೆ ಚೌಕಿ ಗಣಪ ಸ್ಕಂದರ ವೃತ್ತ ನರ್ತನ ವೃತ್ತದಲಿ ಚೌಕವೊ ಚೌಕದಲಿ ವೃತ್ತವೊ? ಹಳೆಪ್ರಶ್ನೆಯ ಸಮಾಧಿ ಬರಲಿದೆ ಯುಗಾದಿ ವೃತ್ತದಲಿ ಚೌಕ ಸುತ್ತುತಿದೆ ಅನಂತ ನಾಗನೆ ಸರಿಯುತಿದೆ ಎರಡರ ಕೇಂದ್ರ ಒಂದೆ...

“ಕರ್ಮಣ್ಯೇವಾಧಿಕಾರಸ್ತೇ”
“ಕರ್ಮಣ್ಯೇವಾಧಿಕಾರಸ್ತೇ”

‘ಕೃಷ್ಣ ಹೇಳುತ್ತಾನೆ : ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ || – ಅಂತ. ಅದರ ಅರ್ಥವನ್ನು ಹೀಗೆ ಕೊಟ್ಟಿದ್ದಾರೆ – ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ. ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ...

ಗುಟ್ಟರಿತು ಗುರಿಯೆಡೆಗೆ ನಡೆಯಬೇಕು
ಗುಟ್ಟರಿತು ಗುರಿಯೆಡೆಗೆ ನಡೆಯಬೇಕು

ಭತ್ತ ಕುಟ್ಟಿದ ಮೇಲೆ ಹೊಟ್ಟಿಗೇನಿದೆ ಬೆಲೆಯು ಅತ್ತ ದೂಡುವರದನು ಮೂಲೆಯೆಡೆಗೆ ಹೊತ್ತಿ ಉರಿಸಿದರದನು ಬರಿ ಬೂದಿ ಕರಿಬಣ್ಣ ಹತ್ತಿರಕೂ ಸುಳಿಯರದರ ಕಡೆಗೆ ಅಕ್ಕಿಯಿಂದಲೆ ಅನ್ನವೆಂಬುದೇನೋ ದಿಟವು ಸಿಕ್ಕಿದರೆ ಸಾಕೆಂಬ ಮೌಢ್ಯ ನಮಗೆ ಸೊಕ್ಕಿನಲಿ ಘನವಾದ ವಿಷಯವನೆ ಮರೆತಿಹೆವು ಚಿಕ್ಕದೆನ್ನುವ ತಾತ್ಸಾರ ಭಾವವೆಮಗೆ...

ಮತ್ತೆ ಅಯೋಧ್ಯೆಗೆ ಶ್ರೀರಾಮ
ಮತ್ತೆ ಅಯೋಧ್ಯೆಗೆ ಶ್ರೀರಾಮ

ಪ್ರಭೂ, ಏಕಿಷ್ಟು ತಡಮಾಡಿದಿರಿ ಆಗಮಿಸಲು ಅಯೋಧ್ಯೆಗೆ?, ತೆರಳಿದಿರಾ ಮತ್ತೆ ವನವಾಸಕ್ಕೆ, ಎಲ್ಲವನೂ ತೊರೆದು ಕಾಡಿಗೆ, ಕಾಯುತ್ತಿತ್ತು ಅಯೋಧ್ಯೆ ಮತ್ತೆ ನಿಮ್ಮ ಅರಸೊತ್ತಿಗೆಗೆ, ಬಂದಿರಲ್ಲ ಕಡೆಗೂ ನಮ್ಮೆಲ್ಲರ ನಾಡಿಗೆ, ಹೃದಯದ ಬಾಗಿಲಿಗೆ. ಎಲ್ಲರಲ್ಲಿತ್ತು ಅಚಲ ವಿಶ್ವಾಸ, ನಂಬಿಕೆ, ಅನ್ಯಾಯಕ್ಕೆ ವಿದಾಯ, ಕೋರ್ಟು, ಕಚೇರಿ,...

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ